ಶನಿವಾರ, ಫೆಬ್ರವರಿ 23, 2008

ಕತೆ- ಡೆತ್ ಸರ್ಟಿಫಿಕೇಟ್

ಮಾರ್ಚ್ ತಿಂಗಳ 'ಮಯೂರ'ದಲ್ಲಿ ಪ್ರಕಟವಾದ ನನ್ನ ಕತೆ- ಡೆತ್ ಸರ್ಟಿಫಿಕೇಟ್. ಓದಿ ಅಭಿಪ್ರಾಯ ತಿಳಿಸಿ

ನಾಗಪ್ಪ ಮೇಷ್ಟ್ರು ಟ್ರೈನಿನಲ್ಲಿ ಪ್ರಯಾಣ ಮಾಡಿ ವರುಷಗಳೇ ಕಳೆದಿದ್ದುವು. ವೇಗವಾಗಿ ಚಲಿಸುತ್ತಿದ್ದ ಟ್ರೈನಿನ ಕಿಟಕಿಯಲ್ಲಿ ಸರಸರಕ್ಕನೆ ಹಾದುಹೋಗುತ್ತಿದ್ದ ದೃಶ್ಯಗಳು ಯಾವುವೂ ಮನಃಪಟಲದ ಮೇಲೆ ಮೂಡುತ್ತಿರಲಿಲ್ಲ; ಅವುಗಳನ್ನು ಮೂಡಿಸಿಕೊಳ್ಳುವ ಮನಃಸ್ಥಿತಿಯಲ್ಲಿಯೂ ಅವರಿರಲಿಲ್ಲ. ಟ್ರೈನಿನ ಪ್ರಯಾಣ ಅವರಿಗಿಷ್ಟವೇ ಆದರೂ ಅವರ ಬದುಕಿನಲ್ಲಿ ಹೆಚ್ಚು ಪ್ರಯಾಣ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಸಾವಿರಾರು ಜನರನ್ನು ಹೊತ್ತ ಕಬ್ಬಿಣದ ದೈತ್ಯ ವಾಹನ ಎರಡೇ ಹಳಿಗಳ ಮೇಲೆ ಅತ್ಯಂತ ವೇಗವಾಗಿ ಚಲಿಸುವುದು ಅವರಿಗೆ ಅದ್ಭುತವೆನ್ನಿಸುತ್ತಿತ್ತು. ರೈಲ್ವೇ ನಿಲ್ದಾಣ ಹಾಗೂ ಟ್ರೈನುಗಳದು ಒಂದು ಪ್ರತ್ಯೇಕ ಜಗತ್ತು. ಯಾವುದಾದರೂ ಒಂದು ಟ್ರೈನು ನಿಲ್ದಾಣಕ್ಕೆ ಬಂದಾಗ ಇಡೀ ನಿಲ್ದಾಣವೇ ಗೂಡಿನಿಂದ ಹೊರಬರುವ ಜೇನುಹುಳುಗಳ ಹಾಗೆ ಗಿಜಿಗಿಜಿಗುಟ್ಟತೊಡಗುತ್ತದೆ.

ಟ್ರೈನಿನಲ್ಲಿ ಒಬ್ಬರೇ ಪ್ರಯಾಣ ಮಾಡುವುದು ಅತ್ಯಂತ ಬೇಸರದ ಸಂಗತಿ. ಒಂದೂವರೆ ದಿನದ ಪ್ರಯಾಣವೆಂದರೆ ಅಕ್ಕಪಕ್ಕದ ಪ್ರಯಾಣಿಕರು ನಿಧನಿಧಾನವಾಗಿ ಪರಿಚಯವಾಗುತ್ತಾರೆ, ತಿಂಡಿತಿನಿಸು ವಿನಿಮಯ ಮಾಡಿಕೊಳ್ಳುತ್ತಾರೆ, ಅದೂ ಇದೂ ಮಾತನಾಡಿಕೊಳ್ಳುತ್ತಾರೆ. ಆದರೆ ನಾಗಪ್ಪನವರಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಇವರ ಪಕ್ಕದಲ್ಲಿ ಕೂತು ಪ್ರಯಾಣಿಸುತ್ತಿದ್ದ ಕುಟುಂಬವೊಂದು ಆಗಾಗ ಇವರನ್ನು ಮಾತನಾಡಿಸಲು ಪ್ರಯತ್ನಿಸುತ್ತಿತ್ತು. ಆದರೆ ಇವರ ನಿರಾಸಕ್ತಿ ಕಂಡು ಈ ಮುದುಕನಿಗೆ ಮಾತನಾಡಲು ಇಷ್ಟವಿಲ್ಲವೇನೋ ಎಂದು ಸುಮ್ಮನಾಗಿದ್ದರು. ಆ ಗಂಡ ಹೆಂಡಿರು ತಮ್ಮ ಸುಮಾರು ಐದು ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಆ ಮಗು ಅದೂ ಇದೂ ಮಾತನಾಡುತ್ತಿತ್ತು, ಹತ್ತು ಹಲವಾರು ಪ್ರಶ್ನೆಗಳನ್ನು ಕೇಳುತ್ತಿತ್ತು. ಒಮ್ಮೆ ಆ ಮಗು ಜೋರಾಗಿ ಮಾತನಾಡುತ್ತಿದ್ದಾಗ ನಾಗಪ್ಪನವರು ಕುತೂಹಲದಿಂದ ಆ ಮಗುವಿನೆಡೆಗೆ ನೋಡಿದಾಗ ಮಗುವಿನ ಮಾತಿನಿಂದ ಅವರಿಗೆಲ್ಲೋ ತೊಂದರೆಯಾಗುತ್ತಿದೆ ಎನ್ನಿಸಿ ಮಗುವನ್ನು ಗದರಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರು. ನಾಗಪ್ಪನವರು ಮುಗುಳ್ನಗುತ್ತಾ `ಇಲ್ಲ, ತೊಂದರೆಯಾಗುತ್ತಿಲ್ಲ, ಮಗು ಬಹಳ ಮುದ್ದಾಗಿ ಮಾತನಾಡುತ್ತಿದೆ' ಎಂದು ಹೇಳಿ ಆ ಮಗುವನ್ನು ಹತ್ತಿರ ಕರೆದು ಅದರ ಹೆಸರು ಕೇಳಿದರು. ಆ ಮಗು ಮಾತನಾಡಲೇ ಇಲ್ಲ. ಅದರ ತಂದೆಯೇ, `ಆ ಮಗುವಿನ ಹೆಸರು ಸಂತೋಷ್' ಎಂದರು.

ತಾವು ದೆಹಲಿಗೆ ಎಲ್.ಟಿ.ಸಿ. ಹೊರಟಾಗ ತಮ್ಮ ಮಗ ಕಿರಣನಿಗೂ ಸುಮಾರು ಅಷ್ಟೇ ವಯಸ್ಸಾಗಿತ್ತು ಎನ್ನುವುದು ನೆನಪಾಯಿತು. ತಾವು ಕುಟುಂಬವೆಲ್ಲಾ ಟ್ರೈನಿನಲ್ಲಿ ಪ್ರಯಾಣಿಸಿದ್ದು ಅದೇ ಮೊದಲ ಬಾರಿ ಹಾಗೂ ಬಹುಶಃ ಅದೇ ಕೊನೆಯ ಬಾರಿ. ಕಿರಣನ ನೆನಪಾಗಿ ದುಃಖ ಉಮ್ಮಳಿಸಿ ಬಂತು. ಕಣ್ಣು ಹನಿಗೂಡಿದವು. ಇದ್ದವನು ಒಬ್ಬನೇ ಮಗನಲ್ಲವೆ? ಕಣ್ಣು ಹನಿಗೂಡಿದ್ದು ಯಾರಿಗೂ ಕಾಣಬಾರದೆಂದು ಕಿಟಕಿಯೆಡೆಗೆ ಸಂಪೂರ್ಣ ತಿರುಗಿ ಕಣ್ಣುಮುಚ್ಚಿ ಬೀಸುತ್ತಿದ್ದ ರಭಸದ ಗಾಳಿಗೆ ಮುಖವೊಡ್ಡಿ ಕೂತರು. ಕಣ್ಣೀರ ಹನಿಯನ್ನು ಗಾಳಿ ಹಾರಿಸಿಕೊಂಡುಹೋಯಿತು. ಹಾಗೆಯೇ ಕಣ್ಣುಮುಚ್ಚಿದ್ದರೋ ಅಥವಾ ಅವರಿಗರಿವಿಲ್ಲದೆ ನಿದ್ರೆ ಸೆಳೆದು ಬಂದಿತ್ತೋ ಏನೋ, ಟ್ರೈನು ಗಕ್ಕನೆ ಬ್ರೇಕ್ ಹಾಕಿ ಲೋಹದ ಕಿರುಗುಟ್ಟವ ಶಬ್ದ ಕೇಳಿದಾಗ ಅವರಿಗೆ ಎಚ್ಚರವಾಯಿತು. ಯಾವುದೋ ನಿಲ್ದಾಣವಿರಬಹುದು. ಪಕ್ಕದಲ್ಲಿದ್ದ ದಂಪತಿಗಳು ಇಳಿದುಹೋಗಿದ್ದರು. ಆ ಸಣ್ಣಮಗುವಿಗೆ `ಟಾಟಾ' ಹೇಳಲಿಲ್ಲವೆಂಬ ಬೇಸರವಾಯಿತು.

ಮತ್ತ್ಯಾರೋ ಪ್ರಯಾಣಿಕರು ಬಂದು ಕೂತರು. ನವದಂಪತಿಗಳು ಇರಬಹುದೆನ್ನಿಸಿತು. ಬದುಕಿನ ಎಲ್ಲ ಜೀವಂತಿಕೆಯೂ ಅವರಲ್ಲೇ ತುಂಬಿಕೊಂಡಂತೆ ಕಾಣುತ್ತಿತ್ತು; ಅತ್ಯಂತ ಲವಲವಿಕೆಯಿಂದಿದ್ದರು. ತಮ್ಮನ್ನು ಬೀಳ್ಕೊಡಲು ಬಂದಿದ್ದ ಹತ್ತಾರು ಜನರಿಗೆ ಕಿಟಕಿಯಿಂದ ಮಾತನಾಡಿಸಿ ವಿದಾಯ ಹೇಳುತ್ತಿದ್ದರು. ಒಬ್ಬ ಹೆಂಗಸು ಟ್ರೈನಿನಲ್ಲಿನ ತರುಣಿಯ ಕೈಯನ್ನು ಹಿಡಿದುಕೊಂಡು ಏನೇನೋ ಹೇಳುತ್ತಿದ್ದಳು, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಆಕೆ ಬಹುಶಃ ಹುಡುಗಿಯ ತಾಯಿಯಿರಬಹುದು ಎಂದುಕೊಂಡರು ನಾಗಪ್ಪನವರು.

ಕಿರಣನೂ ತನ್ನ ಹೆಂಡತಿಯನ್ನು ಮುಂಬಯಿಗೆ ಕರೆದುಕೊಂಡು ಹೊರಟಾಗ ಇದೇ ಟ್ರೈನಿನಲ್ಲಿ ಹೊರಟಿರಬಹುದು ಎನ್ನಿಸಿತು ನಾಗಪ್ಪನವರಿಗೆ. ಅವನಿಗೆ ವಿದಾಯ ಹೇಳಲು ಯಾರೂ ಬಂದಿರುವುದಿಲ್ಲ. ಮದುವೆಯಾಗಿ ಸಂಭ್ರಮದಿಂದ ಹೊರಡಬೇಕಾದ ಕಿರಣ ಮತ್ತು ತನ್ನ ಸೊಸೆ ಎಲ್ಲರನ್ನೂ ತೊರೆದು, ಯಾರಿಗೂ ಹೇಳದೆ ಕೇಳದೆ ಅನಾಥರಂತೆ ಹೊರಟಾಗ ಅವರಿಗೆ ಎಷ್ಟು ಹಿಂಸೆಯಾಗಿರಬಹುದು ಎನ್ನಿಸಿತು.

ಕಿರಣ ಹೋಗಿ ಹತ್ತು ವರ್ಷಗಳೇ ಕಳೆದುಹೋಗಿದೆ. ಎಲ್ಲರೂ ಹೇಳುತ್ತಾರೆ ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ ಎಂದು. ಆದರೆ ಕಿರಣ ಮನೆ ಬಿಟ್ಟು ಹೋದಾಗಿನಿಂದ ಸಮಯ ಹಾಳಾದ್ದು ಹೋಗಲೇ ಇಲ್ಲ. ಕ್ಷಣ ಕ್ಷಣ ಸವೆಸುವುದೂ ಕಷ್ಟವಾಗಿ ಹೋಗಿದೆ. `ಮಗನಾದ ಅವನು ಕಟುಕನೋ ಅಥವಾ ಅಪ್ಪ ಅಮ್ಮಂದಿರಾದ ನಾವು ಕಟುಕರೋ ತಿಳಿಯುವುದಿಲ್ಲ' ಎಂದು ನಿಟ್ಟುಸಿರು ಬಿಟ್ಟರು ನಾಗಪ್ಪ. ಶಾರದಾಳಂತೂ ಈಗೀಗ ಮಗನ ಬಗ್ಗೆ ಮಾತನಾಡುವುದೇ ಇಲ್ಲ. ಅವಳ ಆಸ್ತಮಾದಲ್ಲಿ ಅವಳು ಮೊದಲೇ ಮಾತನಾಡುವುದು ಕಡಿಮೆ. ಮಗ ಹೋದ ಹತ್ತು ವರ್ಷಗಳಿಂದೀಚೆಗೆ ಅವಳ ವಯಸ್ಸು ಐವತ್ತು ವರ್ಷ ಹೆಚ್ಚಾದಂತೆ ತೋರುತ್ತದೆ. ರಾತ್ರಿಯೆಲ್ಲಾ ಅಳುತ್ತಿರುತ್ತಾಳೆ. ಅವಳ ಗೂರಲು ಶಬ್ದವೇ ಅಳುವಿನ ಹಾಗೆ ಕೇಳಿಸುತ್ತದೋ ಅಥವ ಅವಳು ನಿಜವಾಗಿಯೇ ಅಳುತ್ತಿರುತ್ತಾಳೋ ಒಂದೂ ತಿಳಿಯುವುದಿಲ್ಲ. ಅಥವ ಅವಳು ಅಳುತ್ತಿರಲೇಬೇಕೆಂಬ ನಾಗಪ್ಪನವರ ತಾರ್ಕಿಕ ಊಹೆಯ ಪರಿಣಾಮವಾಗಿ ಅವಳ ಅಳುವಿನ ಶಬ್ದ ಅವರಿಗೆ ಕೇಳಿಸುತ್ತದೇನೋ, ಯಾರು ಬಲ್ಲರು?

`ಆದರೆ ಆ ಸ್ಥಿತಿಗೆ ಅವಳೇ ಕಾರಣಳಲ್ಲವೆ? ಮಗ ತನಗೆ ಮೆಚ್ಚಿದವಳನ್ನು ಮದುವೆಯಾಗುತ್ತೇನೆಂದಾಗ ಅದೆಷ್ಟು ರಂಪಾಟ ಮಾಡಿದಳು! ಅದೆಷ್ಟು ಪಟ್ಟು ಹಿಡಿದಳು! ನಾನು ಇಬ್ಬರಿಗೂ ಹೇಳಲು ಪ್ರಯತ್ನಿಸಿದೆ. `ಕಿರಣಾ, ಮೊದಲು ನಿನ್ನ ಓದು ಮುಗಿಯಲಿ, ಮದುವೆಯ ಬಗ್ಗೆ ಆಮೇಲೆ ಮಾತನಾಡೋಣ' ಎಂದು.

ಅವನೂ ಹಿಡಿದ ಪಟ್ಟು ಬಿಡಲಿಲ್ಲ. `ಅವಳಿಗೆ ಮದುವೆ ಮಾಡಿಬಿಡುತ್ತಾರೆ, ನಾನೀಗಲೇ ಮದುವೆಯಾಗಬೇಕು' ಎಂದ. ಅಂದಹಾಗೆ, ಅವಳ ಹೆಸರೇನು?....... ಮಾನಸಿ, ಹ್ಹಾಂ ಮಾನಸಿ ಅಲ್ಲವೆ. ಹುಡುಗಿ ಚೆನ್ನಾಗಿದ್ದಳು. ಶಾರದಾಳಿಗೂ ಹೇಳಿದೆ, `ಹೋಗಲಿ ಬಿಡು, ಅವರಿಬ್ಬರೂ ಇಷ್ಟಪಟ್ಟಿದ್ದಾರೆ, ಮದುವೆ ಮಾಡೋಣ' ಎಂದು. ಅವಳದು ಎಂಥ ಹಠಮಾರಿತನ! ಕಿರಣನೇನಾದರೂ ಅವಳನ್ನು ಮನೆಗೆ ಕರೆದುತಂದರೆ ತಾನು ಸತ್ತೇಹೋಗುವುದಾಗಿ ಶಾರದಾ ಹೆದರಿಸಿದ್ದಳಲ್ಲ!

`ಬಹುಶಃ ಅಮ್ಮ ಇಷ್ಟೊಂದು ಹಠಮಾಡುವರೆಂದು ಕಿರಣನೂ ಊಹಿಸಿರಲಿಕ್ಕಿಲ್ಲ. ತಾನು ಬೇರೆ ಜಾತಿಯವಳನ್ನು ಮದುವೆಯಾಗುತ್ತೇನೆ ಎನ್ನುವ ಸುದ್ದಿ ತಿಳಿದು ತನ್ನ ಅಮ್ಮನಿಗೆ ಎಷ್ಟು ಆಘಾತವಾಗಿತ್ತೋ ಅದಕ್ಕಿಂತ ಇನ್ನೂ ಹೆಚ್ಚಿನ ಆಘಾತ ಕಿರಣನಿಗೆ ಆಗಿತ್ತೆನ್ನಿಸುತ್ತದೆ. ಆ ಹುಡುಗಿಯ ಮನೆಯವರೂ ಒಪ್ಪಿರಲಿಲ್ಲ. ಅಪ್ಪ ಅಮ್ಮಂದಿರಾದ ನಾವು ಅವನ ಬೆಂಬಲಕ್ಕೆ ನಿಲ್ಲುತ್ತೇವೆಂದೇ ಭಾವಿಸಿದ್ದ. ಶಾರದಾಳ ಮತ್ತು ಕಿರಣನ ಹಠದ ಮುಂದೆ ನಾನೇನೂ ಮಾಡುವಂತಿರಲಿಲ್ಲ. ಶಾರದಾ ನನ್ನನ್ನೆಷ್ಟು ದಬಾಯಿಸಿದಳು. `ಮಗನಿಗೆ ಕಪಾಳಕ್ಕೆ ಬಾರಿಸಿ ಬುದ್ದಿ ಹೇಳಿ' ಎಂದಳು. `ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿ' ಎಂದಳು. `ಮಗ ಯಾವಳನ್ನೋ ಮದುವೆಯಾಗುತ್ತೇನೆ ಎಂದರೆ ಸುಮ್ಮನೆ ಬೊಂಬೆಯ ಥರ ನಿಂತಿದ್ದೀರಲ್ಲ, ನೀವೆಂಥ ಅಪ್ಪ ಎಂದು ಮೂದಲಿಸಿದಳು...'

`ಸರ್ ಸ್ವೀಟ್ ಲೀಜಿಯೇ..' ಎಂದು ಎದುರು ಕೂತಿದ್ದ ಹೊಸಮದುವೆ ಗಂಡು ಹೇಳಿದಾಗಲೇ ನಾಗಪ್ಪ ತಮ್ಮ ಆಲೋಚನಾ ಪ್ರಪಂಚದಿಂದ ಹೊರಗೆ ಬಂದಿದ್ದು. ತಕ್ಷಣ ಅವರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವರು ಆಲೋಚಿಸುವ ಮುನ್ನವೇ ತಮ್ಮ ಕೈ ಯಾಂತ್ರಿಕವಾಗಿ ಒಂದು ಪೇಡಾವನ್ನು ಎತ್ತಿಕೊಂಡಿತ್ತು. ಕಿಟಕಿಯೆಡೆ ನೋಡಿದರು. ಟ್ರೈನು ವೇಗವಾಗಿ ಹೋಗುತ್ತಿತ್ತು. ದೂರದ ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದ. ಮುಸ್ಸಂಜೆಯ ತಂಗಾಳಿ ಜೋರಾಗಿ ಬೀಸುತ್ತಿತ್ತು. `ನಾನು ಡಯಾಬಿಟಿಕ್, ಸ್ವೀಟ್ ತಿನ್ನುವುದಿಲ್ಲ' ಎಂದು ಹೇಳಿ ಸ್ವೀಟ್ ವಾಪಸ್ಸು ಕೊಟ್ಟುಬಿಡಲೇ ಎಂದುಕೊಂಡರು. ಅದು ಸೌಜನ್ಯವಲ್ಲ ಅನ್ನಿಸಿತು. `ಮತ್ತೆ ತಿನ್ನುವುದಾದರೂ ಹೇಗೆ, ದೂರದ ಊರಿಗೆ ಹೋಗುತ್ತಿದ್ದೇನೆ, ಶುಗರ್ ಹೆಚ್ಚಾದರೆ ಏನು ಮಾಡುವುದು?' ಎಂದು ಆಲೋಚಿಸಿ ಸಿಹಿ ಹಂಚಿದವರಿಗೆ ಕಾಣದಂತೆ ಕಾಗದವೊಂದರಲ್ಲಿ ಆ ಪೇಡವನ್ನು ಸುತ್ತಿ ತಮ್ಮ ಚೀಲದೊಳಕ್ಕೆ ಹಾಕಿಕೊಂಡರು.

ಕಿರಣನಿಗೂ ಈಗ ಮಕ್ಕಳಾಗಿರಬಹುದು. ಅವನು ಮದುವೆಯಾಗಿ ಮನೆಯಲ್ಲೇ ಇದ್ದಿದ್ದರೆ ಆ ಮೊಮ್ಮಕ್ಕಳು ಅಜ್ಜಿ, ತಾತಾ ಎಂದು ದುಂಬಾಲು ಬೀಳುತ್ತಿದ್ದವು. ಇನ್ನು ಆ ಅದೃಷ್ಟ ಈ ಜನ್ಮದಲ್ಲೇ ಇಲ್ಲ, ನಾಗಪ್ಪನವರು ಮತ್ತೆ ತಮ್ಮ ಆಲೋಚನಾ ಲೋಕಕ್ಕೆ ಹಿಂದಿರುಗಿದರು.

ಅವನೂ ಎಂಥ ಹಠಮಾರಿ. ಮನೆಬಿಟ್ಟು ಹತ್ತು ವರ್ಷಗಳಾದರೂ ಅಪ್ಪ ಅಮ್ಮ ಬದುಕಿದ್ದಾರೆಯೋ ಇಲ್ಲವೋ ಎಂದು ಒಮ್ಮೆಯಾದರೂ ಬಂದು ನೋಡಲಿಲ್ಲ. ಇನ್ನೆಲ್ಲಿ ಬಂದು ನೋಡುತ್ತಾನೆ! ಅವನನ್ನು ಹುಡುಕಲು ಪಟ್ಟ ಪಡಿಪಾಟಲೆಷ್ಟು! ಶಾರದಾಳದಂತೂ ಒಂದೇ ಹಠ, ಅವನನ್ನು ಹುಡುಕಬೇಡಿ ಎಂದು. ಶಾರದಾ ಹೆತ್ತ ಮಗನ ಬಗ್ಗೆ ಏಕೆ ಅಷ್ಟು ಕಠೋರಳಾದಳು? ಇದ್ದ ಒಬ್ಬನೇ ಮಗನ ಬಗೆಗಿನ ಅಟ್ಯಾಚ್‌ಮೆಂಟ್ ಮತ್ತೊಬ್ಬ ಹೆಣ್ಣಿನೊಂದಿಗೆ ಹಂಚಿಕೊಳ್ಳಲು ಆಕೆ ತಯಾರಿರಲಿಲ್ಲವೋ ಏನೋ. ಅವಳದೂ ಎಂಥ ಹಠಮಾರಿತನ. ಅವನು ಬಿಟ್ಟು ಹೋದಾಗಿನಿಂದ ಅವನ ಬಗ್ಗೆ ಮನೆಯಲ್ಲಿ ಮಾತನಾಡಬಾರದೆಂಬ ಷರತ್ತು! ಮನೆಯಲ್ಲಿ ಯಾವಾಗಲೂ ಸ್ಮಶಾನ ಮೌನ, ಇಲ್ಲವೇ ಅವಳ ಗೂರಲು ಶಬ್ದ. ನಿಶ್ಶಬ್ದದಲ್ಲೇ ಪ್ರಪಂಚದ ಎಲ್ಲ ಶಬ್ದಗಳೂ ಅಡಗಿವೆ. ಎಲ್ಲ ರೂಪ, ಆಕಾರಗಳೂ ಅಡಗಿವೆ. ಎಲ್ಲವೂ ನಿಶ್ಶಬ್ದವಾಗಿರುವಾಗ ಕಿರಣನ ಕೂಗು ಕೇಳಿಸಬಹುದು, ಅವನ ನಗು ಕೇಳಿಸಬಹುದು ಎನ್ನಿಸುತ್ತಿತ್ತು. ರಾತ್ರಿ ನಿದ್ರೆ ಬಾರದೆ ಚಡಪಡಿಸುವಾಗ ಮೆಟ್ಟಲು ಹತ್ತಿದ ಶಬ್ದವಾಗುತ್ತಿತ್ತು. ಎಷ್ಟೋ ಸಾರಿ ರಾತ್ರಿ ಕಿರಣ ಲೇಟಾಗಿ ಬರುವಾಗ ಸದ್ದಾಗದಂತೆ ಮೆಟ್ಟಲು ಹತ್ತಿ ಬರಲು ಪ್ರಯತ್ನಿಸುತ್ತಿದ್ದನಲ್ಲ. ರಾತ್ರಿ ಬಾಗಿಲು ಕಿರಗುಟ್ಟಿದರೆ ಕಳ್ಳನಿರಬಹುದೆಂಬ ಭಯವೇ ಆಗುವುದಿಲ್ಲ, ಅದು ಕಿರಣನಿರಬಹುದೇ ಎನ್ನಿಸುತ್ತದೆ. ಮಗನೇನಾದರೂ ಫೋನು ಮಾಡಿಬಿಟ್ಟಾನೆಂದು ಶಾರದಾ ಅದನ್ನೂ ಕಿತ್ತುಹಾಕಿಸಿದಳು. ಫೋನಾದರೂ ಇದ್ದಿದ್ದರೆ ಅದು ರಿಂಗ್ ಆದಾಗಲೆಲ್ಲಾ ಅದು ಕಿರಣನದು ಇರಬಹುದೇ ಎನ್ನಿಸುತ್ತಿತ್ತು. ಈಗ ಆ ನಿರೀಕ್ಷೆಯೂ ಇಲ್ಲ.

ಹೊರಗಡೆ ಸಂಪೂರ್ಣ ಕತ್ತಲಾಗಿತ್ತು. ಬೋಗಿಯೊಳಗಿನ ಮಂದ ಬೆಳಕು ಕಣ್ಣಿಗೆ ತ್ರಾಸ ಮಾಡುತ್ತಿತ್ತು. ಫ್ಯಾನುಗಳ ಏಕತಾನದ ಗಿರಗಿರ ಸದ್ದು ಬದುಕಿನ ಒಂದು ಅವಿಭಾಜ್ಯ ಭಾಗವಾಗಿರುವಂತೆ ತೋರುತ್ತಿತ್ತು. `ನಾನು ಈ ಅನುವಾದದ ಕೆಲಸವನ್ನು ಒಪ್ಪಿಕೊಳ್ಳಲೇ ಬಾರದಿತ್ತು. ಎಲ್ಲೋ ಇರುವ ಕಿರಣ ಬದುಕಿದ್ದಾನೆಂದುಕೊಂಡು ನಾವು ಕೊನೆಯುಸಿರು ಎಳೆಯಬಹುದಿತ್ತು. ಎಂಥ ವಿಪರ್ಯಾಸ! ಅವನ ಶವದ ಮಹಜರ್ ರಿಪೋರ್ಟ್ ಹಾಗೂ ಎಫ್.ಐ.ಆರ್. ಅನುವಾದ ಮಾಡುವ ಕೆಲಸ ನನಗೇ ಬರಬೇಕಿತ್ತೆ! ಯಾವ ತಂದೆಗೂ ಇಂಥ ದುರಂತ ಬರಬಾರದು' ಎಂದು ಮರುಗಿದರು. ಅವರ ದುಃಖ, ದುಮ್ಮಾನ ಟ್ರೈನಿನೊಳಗಿನ ಮಂದಬೆಳಕಿನಲ್ಲಿ ಯಾರಿಗೂ ಕಾಣುತ್ತಿರಲಿಲ್ಲ.

ಮೇಷ್ಟರಾಗಿದ್ದಾಗ ಹೇಗೋ ಕಷ್ಟದಲ್ಲಿ ಕಾಲಕಳೆಯುತ್ತಿದ್ದರು. ರಿಟೈರ್ ಆದ ಮೇಲೆ ಏನು ಮಾಡಬೇಕೆಂದು ಅವರಿಗೇ ತೋಚಲಿಲ್ಲ. ಬೆಳಿಗ್ಗೆ ಶಾರದಾಳಿಗೆ ಅಡುಗೆ ಮನೆಯಲ್ಲಿ ಕೊಂಚ ಸಹಾಯಮಾಡಿ, ಪೇಪರ್ ಓದಿ ಹೊರಗಡೆ ಸುತ್ತಾಡಲು ಹೋಗಿಬಿಡುತ್ತಿದ್ದರು. ಮನೆಯಲ್ಲಿದ್ದರೂ ಶಾರದಾ ಏನೂ ಮಾತನಾಡುವುದಿಲ್ಲ. ಮನೆಯಲ್ಲಿ ಕೂತು ಏನನ್ನೂ ಓದುವಂಥ ಮನಃಸ್ಥಿತಿಯೇ ಇಲ್ಲ. ಕಿರಣ ಹೋದನಂತರ ಯಾವುದಕ್ಕೂ ಮನಸ್ಸಿರುತ್ತಿರಲಿಲ್ಲ. ಓದುವುದು ನಿಲ್ಲಿಸಿ ವರ್ಷಗಳೇ ಆಗಿಹೋಗಿವೆ. ಇಂಥ ದಿನಗಳಲ್ಲೇ ಒಮ್ಮೆ ಕಿರಣನ ಗೆಳೆಯ ಅಶೋಕ ಮನೆಗೆ ಬಂದದ್ದು. ಕಿರಣ ಹೋದಾಗ ಅವನನ್ನು ಹುಡುಕಲು ಅವನೂ ಸಹ ಬಹಳಷ್ಟು ಪ್ರಯತ್ನಿಸಿದ್ದ. ಆಗಾಗ ಮನೆಗೆ ಬಂದು ನಾಗಪ್ಪನವರ ಮತ್ತು ಶಾರದಮ್ಮನವರ ಆರೋಗ್ಯ ವಿಚಾರಿಸುತ್ತಿದ್ದ, ಹಣ್ಣುಹಂಪಲು ತಂದುಕೊಡುತ್ತಿದ್ದ. ಶಾರದಾಳಿಗೆ ಉಬ್ಬಸ ಹೆಚ್ಚಾದಾಗ ಆಸ್ಪತ್ರೆಗೆ ಸೇರಿಸಲು ಸಹಾಯಮಾಡುತ್ತಿದ್ದ. ಈಗ ನಾಗಪ್ಪನವರು ಮುಂಬಯಿಗೆ ಹೊರಟಿರುವ ಸಮಯದಲ್ಲಿ ಶಾರದಾಳ ಜವಾಬ್ದಾರಿಯನ್ನು ಅಶೋಕನಿಗೇ ವಹಿಸಿಬಂದಿದ್ದರು.

ಆ ದಿನ ಅಶೋಕ ಮನೆಗೆ ಬಂದಾಗ,
`ಮೇಷ್ಟ್ರೇ ಹೇಗೂ ರಿಟೈರ್ ಆಗಿದ್ದೀರ. ನನ್ನ ಕಮ್ಯುನಿಕೇಶನ್ ಕಂಪೆನಿಯಲ್ಲಿ ಆಗಾಗ ಅನುವಾದದ ಕೆಲಸಗಳು ಇರುತ್ತವೆ. ಅವುಗಳನ್ನು ನೀವು ಸಮಯವಿದ್ದಾಗ ಮಾಡಿಕೊಡಿ. ನಿಮಗೆ ಸಮಯವೂ ಹೋಗುತ್ತದೆ, ಸ್ವಲ್ಪ ಹಣವೂ ಸಿಗುತ್ತದೆ' ಎಂದ.

ಅದಕ್ಕೆ ನಾಗಪ್ಪನವರು ಆಲೋಚಿಸಿ, `ನನಗೇನೂ ಹಣ ಬೇಡ. ಹಣ ತಗೊಂಡು ನಾನೇನು ಮಾಡಲಿ? ಅನುವಾದ ಮಾಡಿಕೊಡುತ್ತೇನೆ. ಆದರೂ ಅದೆಂಥ ಅನುವಾದವೋ ನನಗೆ ತಿಳಿಸಿ ಹೇಳಬೇಕು' ಎಂದರು.

`ಇಲ್ಲಿ ಹಣ ಬೇಡವೆನ್ನುವ ಪ್ರಶ್ನೆ ಅಲ್ಲ. ಆ ಅನುವಾದ ಮಾಡಿಸಿಕೊಳ್ಳಲು ನನಗೆ ಕೊಡುವ ಕಂಪೆನಿಯವರು ನನಗೆ ಹಣಕೊಡುತ್ತಾರೆ. ಬೇರೆ ಯಾರೇ ಅನುವಾದ ಮಾಡಿಕೊಟ್ಟರೂ ಅವರಿಗೆ ಪದಗಳ ಲೆಕ್ಕದಲ್ಲಿ ಹಣಕೊಡುತ್ತೇವೆ. ನೀವು ಬೇಡವೆಂದರೂ ನನಗೆ ಬರುವ ಹಣ ಬಂದೇ ಬರುತ್ತದೆ. ನಿಮಗೆ ಹಣಕ್ಕಾಗಿ ಕೆಲಸ ಮಾಡಿ ಎನ್ನುತ್ತಿಲ್ಲ. ಬೇರೆ ಯಾರನ್ನೋ ಕೇಳುವ ಬದಲು ನಿಮ್ಮನ್ನು ಕೇಳುತ್ತಿದ್ದೇನೆ' ಎಂದ ಅಶೋಕ.

ಹೌದು, ಈಗ ನಾಗಪ್ಪನವರಿಗೆ ಹೆಚ್ಚಿನ ಹಣದ ಅವಶ್ಯಕತೆ ಇರಲಿಲ್ಲ. ಬರುವ ಪೆನ್ಶನ್, ರಿಟೈರ್ ಆದಾಗ ಬಂದ ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿ ಎಲ್ಲಾ ಬ್ಯಾಂಕಿನಲ್ಲಿತ್ತು. ಆ ಹಣಕ್ಕೆ ನಾಮಿನಿಗಳು ಶಾರದ ಮತ್ತು ಕಿರಣನೇ ಆಗಿದ್ದರು. ಅವನು ಎಂದಾದರೂ ಬಂದೇ ಬರುವನೆಂಬ ಭರವಸೆ ನಾಗಪ್ಪನವರು ಹೊಂದಿದ್ದರು.

`ಇದು ಒಂದು ಇನ್ಶೂರೆನ್ಸ್ ಕಂಪೆನಿಯ ಅನುವಾದದ ಕೆಲಸ. ಅದರ ಹೆಡ್ ಆಫೀಸ್ ಮುಂಬಯಿನಲ್ಲಿದೆ. ಕರ್ನಾಟಕದಿಂದ ಬರುವ ಡೆತ್ ಕ್ಲೈಮ್‌ಗಳ ಪತ್ರಗಳೆಲ್ಲ ಕನ್ನಡದಲ್ಲಿರುತ್ತವೆ. ಅವರಿಗೆ ಆ ಪತ್ರಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಕೊಡಬೇಕು. ಆಗಾಗ ಬರುವ ಅಂಥ ಪತ್ರಗಳನ್ನು ನಿಮಗೆ ಕಳುಹಿಸಿಕೊಡುತ್ತೇನೆ. ನೀವು ಮನೆಯಲ್ಲಾದರೂ ಸರಿ ಅಥವಾ ನಮ್ಮ ಕಚೇರಿಗೇ ಬಂದು ಅಲ್ಲೇ ಕೂತು ಅನುವಾದ ಮಾಡಿಕೊಟ್ಟರೂ ಸರಿ. ನಿಮಗೆ ಅನುಕೂಲವಿದ್ದಂತೆ ಮಾಡಿ' ಎಂದು ಹೇಳಿ ಅನುವಾದಕ್ಕೆಂದು ಕೆಲವು ಪತ್ರಗಳನ್ನು ಕೊಟ್ಟುಹೋಗಿದ್ದ.

ಹೊಸ ಥರದ ಕೆಲಸವಾದರೂ ಒಂದಷ್ಟು ಸಮಯಹೋಗುತ್ತದೆ ಎಂದು ಆ ಅನುವಾದದ ಕೆಲಸ ಆರಂಭಿಸಿದ್ದರು. ಆ ಕೆಲಸ ಕೆಲವೊಮ್ಮೆ ಬೇಸರವೂ ತರುತ್ತಿತ್ತು. ಯಾರದೋ ಡೆತ್ ಕ್ಲೈಮ್‌ಗಳು, ಎಲ್ಲಿಯೋ ಅಪಘಾತದಲ್ಲಿ ಸತ್ತವರು, ಹಾವು ಕಚ್ಚಿ ಸತ್ತವರು, ಅವರ ಶವದ ಮಹಜರ್ ರಿಪೋರ್ಟ್‌ಗಳು, ಪೋಲೀಸ್ ಎಫ್.ಐ.ಆರ್.ಗಳು, ಸಾಕ್ಷಿಗಳ ಹೇಳಿಕೆಗಳು ಇತ್ಯಾದಿ ಇತ್ಯಾದಿಗಳ ಅನುವಾದ ಬಹಳಷ್ಟು ಅವರ ಮನಸ್ಸನ್ನು ದುಗುಡಕ್ಕೀಡುಮಾಡುತ್ತಿತ್ತು. ಆದರೆ ಇಂಥ ಅನುವಾದದ ಸಮಯದಲ್ಲೇ ತಮ್ಮ ಮಗನ ಡೆತ್ ಸರ್ಟಿಫಿಕೇಟ್, ಶವದ ಮಹಜರ್ ರಿಪೋರ್ಟ್‌ಗಳ ಅನುವಾದ ತನಗೇ ಬರುತ್ತದೆಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ!

ಆ ದಿನ ಅಶೋಕ ಅನುವಾದಕ್ಕೆಂದು ಪತ್ರಗಳನ್ನು ಕಳುಹಿಸಿಕೊಟ್ಟಾಗ ಎಂದಿನಂತೆ ರೂಮಿನಲ್ಲಿ ಕೂತು ಅನುವಾದ ಪ್ರಾರಂಭಿಸಿದರು. ಔಷಧ ಕೊಟ್ಟಿದ್ದರೂ ಶಾರದಾಳ ಗೂರಲು ಕಡಿಮೆಯಾಗಿರಲಿಲ್ಲ. ಬೆಕ್ಕುಗಳು ಕಾದಾಡುತ್ತಿರುವಂತಿದ್ದ ಅವಳ ಉಬ್ಬಸದ ಶಬ್ದಕ್ಕೆ ನಾಗಪ್ಪ ಒಗ್ಗಿಕೊಂಡುಬಿಟ್ಟಿದ್ದರು. ಯಾಂತ್ರಿಕವಾಗಿ ಅನುವಾದ ಆರಂಭಿಸಿದರು.

`ಶವದ ಮಹಜರು ವರದಿ
ಬೆಳಗಾವಿ ಸಾದರಗಲ್ಲಿ ಪೋಲೀಸ್ ಠಾಣೆ, ಬೆಳಗಾವಿ ನಗರ, ಯು.ಡಿ.ಆರ್. ಸಂ. ೮೨/೦೬ ಅಂಡರ್ ಸೆಕ್ಷನ್ ೧೭೪ ಸಿ.ಆರ್.ಪಿ.ಸಿ.
ದಿನಾಂಕ ೩೧-೭-೦೬ರಂದು ಬೆಳಗಾವಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವ ಮೃತ ಶ್ರೀ ಕಿರಣ್ ಕುಮಾರ್ ಸನ್ ಆಫ್ ಶ್ರೀ ನಾಗಪ್ಪ, ೩೪ ವರ್ಷ, ಉದ್ಯೋಗ: ಲಾರಿ ಚಾಲಕ, ಇವರ ಮೃತದೇಹದ ಮೇಲೆ ಈ ಕೆಳಕಂಡ ಪಂಚರ ಸಮಕ್ಷಮದಲ್ಲಿ ೧೭೪ ಸಿ.ಆರ್.ಪಿ.ಸಿ ಪ್ರಕಾರ ಕೈಗೊಂಡ ಶವ ತನಿಖಾ ವರದಿ.'

ಹಲವಾರು ಅನುವಾದಗಳನ್ನು ಮಾಡಿದಂತೆ ಯಾಂತ್ರಿಕವಾಗಿಯೇ ಇದನ್ನೂ ಮಾಡಿದರು. ಅಷ್ಟರಲ್ಲಿ ಶಾರದಾ ಕರೆದಂತಾಗಿ ಎದ್ದು ಅವಳ ಕೋಣೆಗೆ ಹೋದರು. ಆಕೆ ಸ್ವಲ್ಪ ನೀರು ಕೇಳಿದಳು. ಅಡುಗೆ ಮನೆಯಲ್ಲಿ ಚೊಂಬಿಗೆ ನೀರು ತುಂಬಿಸುತ್ತಿದ್ದಾಗ ಥಟ್ಟನೆ ಆ ಅನುವಾದ ನೆನಪಾಯಿತು- `ಕಿರಣ್ ಕುಮಾರ್ ಸನ್ ಆಫ್ ನಾಗಪ್ಪ'. ನಾಗಪ್ಪನವರ ಕೈನಿಂದ ಚೊಂಬು ಕೆಳಗೆ ಬಿತ್ತು, ಕೈಕಾಲು ನಡುಗತೊಡಗಿತು, ಮೈ ಬೆವರತೊಡಗಿತು, ತಲೆ ಗಿರಗಿರನೆ ತಿರುಗತೊಡಗಿತು. ಅಲ್ಲೇ ಡೈನಿಂಗ್ ಚೇರಿನ ಮೇಲೆ ಕೂತು ತಲೆಯನ್ನು ಬಿಗಿಯಾಗಿ ಹಿಡಿದು ಕೂತರು. ಚೊಂಬು ಬಿದ್ದ ಶಬ್ದ ಕೇಳಿ ಶಾರದಾ `ಏನಾಯಿತು?' ಎಂದು ಕೂಗಿದಳು. ಸಾವರಿಸಿಕೊಂಡು ಎದ್ದ ನಾಗಪ್ಪ ಶಾರದಾಳಿಗೆ ತಿಳಿಯಬಾರದೆಂದು `ಏನಿಲ್ಲ' ಎನ್ನುತ್ತ ಚೊಂಬಿನಲ್ಲಿ ನೀರು ತುಂಬಿಸಿ ಅವಳಿಗೆ ಕೊಟ್ಟರು. ಅವರ ಮುಖದಲ್ಲಿನ ಗಾಭರಿ ನೋಡಿ ಆಕೆ, ಪುನಃ `ಏಕೆ ಏನಾಯಿತು?' ಎಂದಳು. `ಏನಿಲ್ಲಾ ಶುಗರ್ ಸ್ವಲ್ಪ ಕಡಿಮೆಯಾಗಿರಬೇಕೆನ್ನಿಸುತ್ತದೆ. ಎಲ್ಲಾ ಸರಿಹೋಗುತ್ತದೆ' ಎಂದು ಹೇಳಿ ರೂಮಿಗೆ ಹೋಗಿ ಶಾರದಾ ಎದ್ದು ಬರುವುದಿಲ್ಲವೆಂದು ತಿಳಿದಿದ್ದರೂ ಅಳುಕಿನಿಂದ ಬಾಗಿಲು ಹಾಕಿಕೊಂಡು ಆ ಪತ್ರಗಳನ್ನು ಮತ್ತೊಮ್ಮೆ ಓದಿದರು.

ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯೊಂದು ಬೆಳಗಾಂನಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಕಿರಣ್ ಕುಮಾರ್ ಎನ್ನುವ ಚಾಲಕ ಮತ್ತು ಅದರ ಕ್ಲೀನರ್ ಹುಡುಗ ಸ್ಥಳದಲ್ಲೇ ಮೃತಪಟ್ಟಿದ್ದರು.

`ಈ ಕಿರಣ್ ಕುಮಾರ್ ಬೇರೆ ಇರಬಹುದು. ನನ್ನ ಮಗ ಡಿಗ್ರಿ ಓದುತ್ತಿದ್ದ. ಅವನೇಕೆ ಲಾರಿ ಡ್ರೈವರ್ ಆಗುತ್ತಾನೆ? ಯಾವುದಾದರೂ ಆಫೀಸಿನಲ್ಲಿ ಗುಮಾಸ್ತನೋ ಏನೋ ಆಗಿರುತ್ತಾನೆ. ಕಿರಣ ಹುಟ್ಟಿದ ದಿನಾಂಕ ಬರೆದು ಅವನ ವಯಸ್ಸು ಲೆಕ್ಕ ಹಾಕಿದರು. ಅವನಿಗೂ ಈಗ ಮುವ್ವತ್ತೆರಡು ವರ್ಷ ವಯಸ್ಸು' ಅಂದುಕೊಂಡರು. ಹಾಗೇ ಮುಂದೆ ಆ ತನಿಖಾ ವರದಿಯನ್ನು ಓದಿದಂತೆ,
`ಎತ್ತರ ೫ ಅಡಿ ೧೦ ಅಂಗುಲ, ಸಾಧಾರಣ ಮೈಕಟ್ಟು, ಮುಖ ನಸುಗೆಂಪು ಬಣ್ಣ, ಹೊಟ್ಟೆಯ ಮೇಲೆ ಹೊಕ್ಕಳಿನ ಬಲಭಾಗದಲ್ಲಿ ಕಾಸಿನಗಲ ಕಪ್ಪನೆ ಹುಟ್ಟುಮಚ್ಚೆ........'

`ಕಿರಣನಿಗೆ ಹುಟ್ಟುಮಚ್ಚೆಯಿತ್ತೆ? ನನಗಂತೂ ಮಚ್ಚೆಯ ಬಗ್ಗೆ ಅಷ್ಟು ನೆನಪಿಲ್ಲ. ಶಾರದಾಳನ್ನು ಹೇಗೆ ಕೇಳುವುದು? ಹೌದು, ಇತ್ತು ಇಂದು ಅವಳೆಂದುಬಿಟ್ಟರೆ?' ನಾಗಪ್ಪನವರಿಗೆ ಅತೀವ ಸಂಕಟವಾಗತೊಡಗಿತು. ಹತ್ತು ನಿಮಿಷ ಸಾವರಿಸಿಕೊಂಡು ಕೂತರು. ಕೊನೆಗೆ ಧೈರ್ಯಮಾಡಿ ಶಾರದಾಳ ರೂಮಿಗೆ ಹೋದರು. ಆಕೆಯ ಉಬ್ಬಸದ ಶಬ್ದ ಹೆಚ್ಚು ಕರ್ಕಶವೆನ್ನಿಸತೊಡಗಿತು. `ಅವಳ ಜೀವನವೆಲ್ಲಾ ಹಿಂಸೆಯೇ ಆಗಿಹೋಗಿದೆ. ಮನುಷ್ಯ ಏನೂ ಕಷ್ಟವಿಲ್ಲದೆ ಸುಲಭವಾಗಿ ಮಾಡಬಹುದಾದಂತಹ ಉಸಿರಾಟವೇ ಅವಳಿಗೆ ಕಷ್ಟದ ಕೆಲಸವಾಗಿಬಿಟ್ಟಿದೆ. ಅವಳನ್ನು ಹೇಗೆ ಕೇಳುವುದು?' ಆಲೋಚಿಸುತ್ತಾ ಅಲ್ಲೇ ನಿಂತರು. ನಾಗಪ್ಪ ಬಂದ ಶಬ್ದಕ್ಕೆ ಕಣ್ತೆರೆದು ನೋಡಿದ ಶಾರದಮ್ಮ, `ಏನು?' ಎಂದರು.

`ಏನಿಲ್ಲಾ, ಮತ್ತೆ ನೀರೇನಾದರೂ ಬೇಕಿತ್ತಾ?' ಕೇಳಿದರು ನಾಗಪ್ಪ, ಅಲ್ಲೇ ಅವಳ ಮಂಚದ ಮೇಲೆ ಅವಳ ಕಾಲ ಬಳಿ ಕೂಡುತ್ತ.
`ಬೇಡ, ಏನೂ ಬೇಡ. ಏಕೆ ಇವತ್ತೆಲ್ಲಿ ಹೊರಗೆ ಹೋಗಲಿಲ್ಲವೆ?'
`ಹಾ, ಹೋಗಬೇಕು. ಅಶೋಕನ ಆಫೀಸಿಗೆ ಹೋಗಬೇಕು. ಅಂದ ಹಾಗೆ ಏನೋ ನೆನಪಾಯ್ತು. ನಮ್ಮ ಕಿರಣನಿಗೆ ಹೊಟ್ಟೆಯ ಮೇಲೆ ಮಚ್ಚೆಯಿತ್ತೆ?' ಟವಲ್ಲಿನಿಂದ ಹಣೆಯೊರೆಸಿಕೊಳ್ಳುತ್ತ ಕೇಳಿದರು.
`ಅವನ್ಯಾವ ನಮ್ಮ ಕಿರಣ? ಯಾರಿಗೆ ಗೊತ್ತು?' ಎಂದು ಮಗ್ಗುಲು ಬದಲಿಸಿದರು. ಅವರ ಉಬ್ಬಸ ಮತ್ತಷ್ಟು ಹೆಚ್ಚಾಯಿತು.
ಮತ್ತೆ ಅವರೆಡೆಗೆ ತಿರುಗಿ, `ಈಗ ಅದ್ಯಾಕೆ?' ಎಂದರು.
`ಇಲ್ಲ, ಸುಮ್ಮನೆ ಕೇಳಿದೆ. ಅವನ ನೆನಪಾಯಿತು ಅದಕ್ಕೆ' ಎಂದರು, ಆಕೆಯನ್ನು ಒತ್ತಾಯಮಾಡುವುದು ಹೇಗೆ ಎಂದು ಆಲೋಚಿಸುತ್ತ.
`ಅವನ ನೆನಪು ಯಾಕಾಗಬೇಕು?' ಆಕೆಯ ಮಾತಿನಲ್ಲಿ ಹತ್ತು ವರ್ಷಗಳಾದರೂ ಸಿಟ್ಟು ಕಡಿಮೆಯಾಗಿರಲಿಲ್ಲ.
`ನೆನಪುಗಳು ನಮ್ಮವಲ್ಲವಲ್ಲ. ಅವು ನಾವು ಹೇಳಿದಂತೆ ಕೇಳುವುದಿಲ್ಲ. ಮನಸ್ಸಿಗೆ ಎಂಥದೇ ಭದ್ರ ಬೀಗ ಹಾಕಿಟ್ಟರೂ ಅವು ತಮಗಿಷ್ಟಬಂದಾಗ ಬರುತ್ತವೆ, ತಮಗಿಷ್ಟಬಂದಾಗ ಹೋಗುತ್ತವೆ. ನಮ್ಮ ಕಿರಣನೂ ಮೊದಲು ಹಾಗೆಯೇ ಇದ್ದನಲ್ಲ- ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಿದ್ದ, ಹೊತ್ತಲ್ಲದ ಹೊತ್ತಿನಲ್ಲಿ ಹೋಗುತ್ತಿದ್ದ. ಇನ್ನು ಅವನ ನೆನಪುಗಳೂ ಅಷ್ಟೇ, ಅವನ ಹಾಗೆಯೇ' ಎಂದರು ಅವಳ ಭುಜದ ಮೇಲೆ ಕೈಯಿಡುತ್ತ.

ಆ ಉಬ್ಬಸದಲ್ಲಿಯೂ ನಿಟ್ಟುಸಿರುಬಿಟ್ಟರು ಶಾರದಮ್ಮ. ಆಕೆ ಮತ್ತೊಂದೆಡೆಗೆ ತಿರುಗಿದ್ದುದರಿಂದ ಆಕೆಯ ಮುಖ ಕಾಣದಿದ್ದರೂ ಆಕೆಯ ಕಣ್ಣು ಆರ್ದ್ರಗೊಂಡಿದ್ದು ನಾಗಪ್ಪನವರಿಗೆ ತಿಳಿದಿತ್ತು.
ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಹಾಗೆಯೇ ಕೂತಿದ್ದರು. ಅವರ ಆಲೋಚನೆಯೆಲ್ಲ ಆ ಪತ್ರಗಳಲ್ಲಿಯೇ ಇತ್ತು.
`ಹೌದು, ಅವನ ಹೊಕ್ಕುಳ ಬಲಭಾಗದಲ್ಲಿ ಹುಟ್ಟುಮಚ್ಚೆಯಿತ್ತು' ಎಂದು ಶಾರದಮ್ಮ ಹೇಳಿದ್ದು ಎಲ್ಲೋ ದೂರದಲ್ಲಿ ಕೂಗಿ ಹೇಳಿದಂತಾಯಿತು.
ನಾಗಪ್ಪ ನಿಂತಿದ್ದರೆ ಬಿದ್ದೇಬಿಡುತ್ತಿದ್ದರು. ಮೊಣಕಾಲುಗಳು ತರತರಗುಟ್ಟತೊಡಗಿದವು. ಅವರ ಮೈನಡುಕ ಶಾರದಾಳಿಗೆ ತಿಳಿದುಬಿಡುತ್ತದೆಂದು ಅವಳ ಭುಜದ ಮೇಲಿಂದ ಕೈ ತೆಗೆದರು. ಎಷ್ಟು ಹೊತ್ತು ಕೂತಿದ್ದರೋ ಅವರಿಗೇ ತಿಳಿಯಲಿಲ್ಲ.

ಸತ್ತುಹೋಗಿರುವ ಕಿರಣ ತಮ್ಮ ಮಗನೇ ಎಂಬುದು ಅವರಿಗೆ ಬಹುಪಾಲು ಖಾತ್ರಿಯಾಗಿತ್ತು. ನಿಧಾನವಾಗಿ ಎದ್ದು `ಅಶೋಕನ ಆಫೀಸಿಗೆ ಹೋಗಿಬರುತ್ತೇನೆ' ಎಂದರು. ಶಾರದಮ್ಮ ನಿದ್ರಿಸುತ್ತಿದ್ದರು.

ಸದ್ದು ಮಾಡದೆ ಎದ್ದುಬಂದು, ಆ ಪತ್ರಗಳನ್ನು ತೆಗೆದುಕೊಂಡು ಎಂದೂ ನಡೆದೇ ಹೋಗುತ್ತಿದ್ದವರು ಆ ದಿನ ಸಿಕ್ಕ ಆಟೋದಲ್ಲಿ ಅಶೋಕನ ಆಫೀಸಿಗೆ ಹೊರಟರು. ಅಶೋಕನ ಕೋಣೆಯಲ್ಲಿ ಆತ ಒಬ್ಬನೇ ಇದ್ದ. ಅವನ ಎದುರಿಗೆ ಆ ಪತ್ರಗಳನ್ನು ಇಟ್ಟಾಕ್ಷಣ ಅವರ ಸಂಯಮದ ಕಟ್ಟೆಯೊಡೆದು ಗೊಳೋ ಎಂದು ಅಳತೊಡಗಿದರು. ನಾಗಪ್ಪ ಮೇಷ್ಟ್ರು ಅತ್ತದ್ದನ್ನು ಅಶೋಕ ಎಂದೂ ಕಂಡವನಲ್ಲ. ಅವರ ನಡತೆಯಿಂದ ಅವನಿಗೆ ಗಾಭರಿಯಾಯ್ತು. ಶಾರದಮ್ಮನವರಿಗೆ ಏನಾದರೂ ಆಯಿತೇನೋ ಎಂದುಕೊಂಡು ಅವರನ್ನು ಮಾತನಾಡಿಸಲು ಯತ್ನಿಸಿದ, ಏನಾಯಿತು ಎಂದು ಕೇಳಿದ. ನಾಗಪ್ಪನವರು ಆ ಪತ್ರಗಳನ್ನು ತೋರಿಸಿ, `ನಮ್ಮ ಕಿರಣ........' ಎಂದರು. ಅಶೋಕನಿಗೆ ಏನೊಂದೂ ಅರ್ಥವಾಗಲಿಲ್ಲ. ಆ ಪತ್ರಗಳನ್ನು ಅವನೇ ಅವರಿಗೆ ಅನುವಾದಕ್ಕೆಂದು ಕಳುಹಿಸಿದ್ದ. ಆದರೆ ಅವುಗಳನ್ನು ಅವನು ಗಮನಿಸಿರಲಿಲ್ಲ. ಅವರು ಹೇಳಿದ ನಂತರ ಅವನು ಅವುಗಳನ್ನು ಎತ್ತಿಕೊಂಡು ಓದಿದ. ಅವನಿಗೆ ಎಲ್ಲಾ ಅರ್ಥವಾಯಿತು. ಆದರೂ,
`ಇಲ್ಲ ಬಿಡಿ ಮೇಷ್ಟ್ರೆ, ಇವನು ಬೇರೆಯಿರಬಹುದು. ಇವನ್ಯಾರೋ ಲಾರಿ ಡ್ರೈವರ್. ಕಿರಣ ಯಾಕೆ ಲಾರಿ ಡ್ರೈವರ್ ಆಗಿರ್‍ತಾನೆ? ತಂದೆ ಹೆಸರು ಎಲ್ಲಾ ಕೋ‌ಇನ್ಸಿಡೆನ್ಸ್ ಇರಬಹುದು' ಎಂದ ಅಶೋಕ ಧೈರ್ಯ ತುಂಬಲೆಂದು.

`ಇಲ್ಲ, ನೋಡು ಅವನ ಹೊಕ್ಕುಳ ಬಲಭಾಗದಲ್ಲೂ ಹುಟ್ಟುಮಚ್ಚೆಯಿದೆ. ಕಿರಣನಿಗೂ ಇತ್ತು' ಎಂದರು.

`ನೀವು ಸುಧಾರಿಸಿಕೊಳ್ಳಿ. ನಾವು ಅದನ್ನು ಕನ್ಫರ್ಮ್ ಮಾಡಿಕೊಳ್ಳೋಣ' ಎಂದು ಹೇಳಿ ಆ ಪತ್ರಗಳನ್ನು ಮತ್ತೊಮ್ಮೆ ಅಶೋಕ ಓದಿದ. ಬೆಳಗಾವಿಯ ಆ ಪೋಲೀಸ್ ಠಾಣೆಗೆ ಫೋನ್ ಮಾಡಿ, ಆ ಕೇಸಿನ ನಂಬರ್ ಹೇಳಿ, ಅಪಘಾತಕ್ಕೊಳಗಾದ ಡ್ರೈವರ್ ಫೋಟೋ ಸಿಗುವುದಾ ಎಂದು ಕೇಳಿದ. `ಫೋಟೋ ಇದೆ, ಬೇಕಾದಲ್ಲಿ ನೀವೇ ಇಲ್ಲಿ ಬಂದು ನೋಡಬಹುದು' ಎಂದರು ಪೋಲೀಸಿನವರು. ಅವರಿಂದ ಆ ಫೋಟೋಗಳನ್ನು ತೆಗೆದ ಫೋಟೋಗ್ರಾಫರಿನ ಫೋನ್ ನಂಬರ್ ತೆಗೆದುಕೊಂಡು ಅವನಿಗೆ ಆಕ್ಸಿಡೆಂಟ್‌ನ ವಿವರಗಳನ್ನು ತಿಳಿಸಿ ಆ ಫೋಟೋಗಳನ್ನು ಹತ್ತಿರದ ಸೈಬರ್ ಸೆಂಟರ್‌ಗೆ ಹೋಗಿ ಸ್ಕ್ಯಾನ್ ಮಾಡಿಸಿ ತನ್ನ ಇ-ಮೇಲ್‌ಗೆ ಕಳುಹಿಸುವಂತೆ ಕೋರಿದ. ವಿಷಯ ತುಂಬಾ ಅರ್ಜೆಂಟಾಗಿರುವುದರಿಂದ ಹಣ ಎಷ್ಟೇ ಖರ್ಚಾದರೂ ಕೊಡುವುದಾಗಿ ತಿಳಿಸಿದ.

ನಾಗಪ್ಪನವರನ್ನು ಪಕ್ಕದ ಸೋಫಾ ಮೇಲೆ ಕೂಡ್ರಿಸಿ ನೀರು ಕೊಟ್ಟ. ಶುಗರ್‌ಲೆಸ್ ಕಾಫಿ ತರಿಸಿಕೊಟ್ಟ. `ಏನಾದರೂ ತಿನ್ನಿ' ಎಂದ. ನಾಗಪ್ಪನವರು ಬೇಡವೆಂದರು. ಅವರಿಗೆ ಏಕಾಂತ ಬೇಕಿತ್ತು. ಅವರಿಗೆ ಫೋಟೋದಿಂದ ಖಾತ್ರಿಪಡಿಸಿಕೊಳ್ಳುವುದೇನೂ ಬೇಕಿರಲಿಲ್ಲ. ಸತ್ತು ಹೆಣವಾಗಿರುವ ಮಗನ ಫೋಟೋ ನೋಡುವ ಧೈರ್ಯವೂ ಅವರಿಗಿರಲಿಲ್ಲ. `ಅಪಘಾತದಲ್ಲಿ ಕಿರಣನ ಮುಖ ಅದೆಷ್ಟು ನುಜ್ಜುಗುಜ್ಜಾಗಿದೆಯೋ! ಅಯ್ಯೋ ದೇವರೇ! ವಯಸ್ಸಾದ, ರೋಗಿಷ್ಠ ತಂದೆ ತಾಯಿಗಳಿಗೇಕೆ ಇಂಥ ನರಕ!' ಜೋರಾಗಿ ಅಳಬೇಕಿತ್ತು.

ಹೊರಗಡೆ ಎದ್ದು ಹೋದ ಅಶೋಕ ಆ ಫೋಟೋಗ್ರಾಫರಿನವನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಲೇ ಇದ್ದ. ಅರ್ಧಗಂಟೆಯ ನಂತರ ಒಳಗಡೆ ಬಂದ ಅಶೋಕ ಕಂಪ್ಯೂಟರಿನಲ್ಲಿ ಇ-ಮೇಲ್ ತೆರೆಯಲು ಹೋದ. ನಾಗಪ್ಪ ಮೇಷ್ಟರು, `ದಯವಿಟ್ಟು ನನಗೆ ಆ ಫೋಟೋಗಳನ್ನು ತೋರಿಸಬೇಡ. ಅವು ಹೇಗಿವೆಯೆಂದು ನನಗೆ ಹೇಳಲೂ ಬೇಡ. ನನಗೇನೋ ಅವನು ನನ್ನ ಮಗನೇ ಎನ್ನಿಸುತ್ತಿದೆ. ನಿನಗೆ ಬೇಕಾದಲ್ಲಿ ಖಾತ್ರಿ ಪಡಿಸಿಕೋ' ಎಂದರು. ಅಶೋಕ ಕಂಪ್ಯೂಟರಿನ ಕೀಲಿಗಳನ್ನು ಒಂದ್ಹತ್ತು ನಿಮಿಷ ಟಕಟಕ ಎನ್ನಿಸುತ್ತಿದ್ದ. ತಲೆಬಗ್ಗಿಸಿದ್ದ ನಾಗಪ್ಪನವರು ತಲೆ ಎತ್ತಿ ನೋಡಲೇ ಇಲ್ಲ. ಅಶೋಕ ಮಾತನಾಡಲೇ ಇಲ್ಲ. ಅವನಿಗೂ ಖಾತ್ರಿಯಾಗಿತ್ತು, ಅಪಘಾತದಲ್ಲಿ ಸತ್ತುಹೋಗಿರುವ ಕಿರಣ ತನ್ನ ಗೆಳೆಯನೆಂದು. ಆ ಪತ್ರಗಳನ್ನು ಮತ್ತೊಮ್ಮೆ ನೋಡಿ ವಿಳಾಸ ಬರೆದುಕೊಂಡ. ಮುಂಬಯಿಯ ಧರಾವಿ ಸ್ಲಂನ ವಿಳಾಸ. ಅಪಘಾತ ನಡೆದು ಎರಡು ತಿಂಗಳೇ ಆಗಿದೆ.

ನಾಗಪ್ಪನವರ ಬಳಿಬಂದು ಪಕ್ಕದಲ್ಲಿ ಕೂತು ಅವರ ಹೆಗಲ ಮೇಲೆ ಕೈಹಾಕಿದ. ಅವನ ಭುಜಕ್ಕೆ ಒರಗಿದ ನಾಗಪ್ಪ ಗೊಳೋ ಎಂದು ಅಳತೊಡಗಿದರು. ಅಶೋಕನಿಗೆ ಏನು ಹೇಳಬೇಕೋ ತೋಚಲಿಲ್ಲ. ಎಷ್ಟು ಬೇಕೋ ಅಷ್ಟೂ ಅತ್ತುಬಿಡಲಿ ಎಂದು ಸುಮ್ಮನಿದ್ದ.

`ಮೇಷ್ಟ್ರೇ, ಕಿರಣನ ವಿಳಾಸ ಇಲ್ಲಿದೆ. ನಾನು ಮುಂಬಯಿಗೆ ಹೋಗಿ ಬರುತ್ತೇನೆ' ಎಂದ ಅಶೋಕ.
`ಬೇಡ ನೀನು ಹೋಗಿ ಏನು ಮಾಡುತ್ತೀಯ? ನಾನೇ ಹೋಗಿ ಬರುತ್ತೇನೆ' ಎಂದರು. `ನಾನೂ ನಿಮ್ಮ ಜೊತೆಗೆ ಬರುತ್ತೇನೆ' ಎಂದ ಅಶೋಕ.
`ನೋಡೋಣ, ನಾನೀಗ ಮನೆಗೆ ಹೋಗುತ್ತೇನೆ. ದಯವಿಟ್ಟು ಶಾರದಾಳಿಗೆ ಈ ವಿಷಯ ತಿಳಿಸಬೇಡ' ಎಂದರು ನಾಗಪ್ಪ ಕೈ ಮುಗಿಯುತ್ತ. ಅಶೋಕ ಆ ಕೈಗಳನ್ನು ಹಿಡಿದುಕೊಂಡ, ಅವನ ಕಣ್ಣಲ್ಲೂ ನೀರಿತ್ತು. ಅವನಿಗೆ ಸ್ನೇಹಿತನನ್ನು ಕಳೆದುಕೊಂಡ ದುಃಖಕ್ಕಿಂತ ಆ ವೃದ್ಧ ದಂಪತಿಗಳ ಸ್ಥಿತಿ ಅವನನ್ನು ಮಮ್ಮಲ ಮರುಗಿಸಿತ್ತು. ಅವರು ಬೇಡವೆಂದರೂ ಅಶೋಕನೇ ಅವರನ್ನು ಕಾರಿನಲ್ಲಿ ಮನೆಯವರೆಗೂ ಬಿಟ್ಟ. ಮನೆಯಮುಂದೆ ಇಳಿದು, `ಬೇಡ, ಈಗ ನೀನು ಒಳಗೆ ಬರಬೇಡ ಹೋಗು' ಎಂದು ಅವನನ್ನು ವಾಪಸ್ಸು ಕಳುಹಿಸಿದರು.

ಶಾರದಾ ಎದ್ದು ಕೂತಿದ್ದಳು. ಅವಳಿಗೆ ಏನೂ ತೋರಗೊಡಬಾರದೆಂಬಂತೆ ಇರಲು ಬಹಳಷ್ಟು ಪ್ರಯತ್ನಿಸಿದರು. ಆ ದಿನ ರಾತ್ರಿಯೆಲ್ಲಾ ಚಡಪಡಿಸಿದರು. ಅವರು ಅಳುವುದು ಇನ್ನೂ ಬಾಕಿಯಿತ್ತು. ಕಿರಣ ಕೊಡುವುದಿಲ್ಲವೆಂದರೂ ಆ ಪತ್ರಗಳ ಪ್ರತಿಯೊಂದನ್ನು ಪಡೆದು ಬಂದಿದ್ದರು. ರಾತ್ರಿ ಅವುಗಳನ್ನು ಮತ್ತೊಮ್ಮೆ ಓದಿದರು, ಬಹಳ ವರ್ಷಗಳ ನಂತರ ಮಗನು ಬರೆದ ಪತ್ರದಂತೆ.

`ಮೃತನು ವಿವಾಹಿತ, ಒಬ್ಬಳು ಪತ್ನಿ ಹಾಗೂ ಒಬ್ಬಳು ಮಗಳಿದ್ದಾಳೆ'
ಮಹಜರ್ ನಡೆಸಿದ ಸಾಕ್ಷಿಗಳಲ್ಲಿ ರಕ್ತಬಂಧುಗಳು ಎಂಬ ಅಂಕಣದಲ್ಲಿ
`ಶ್ರೀಮತಿ ಮಾನಸಿ ವೈಫ್ ಆಫ್ ಕಿರಣ್ ಕುಮಾರ್, ವಯಸ್ಸು ೨೮, ಮೃತನ ಪತ್ನಿ' ಎಂದಿತ್ತು.

ಮರುದಿನ ಬೆಳಿಗ್ಗೆ ನಾಗಪ್ಪನವರು ಎದ್ದು ವಾಕ್ ಹೊರಟಂತೆ ಹೊರಟು ಅಶೋಕನಿಗೆ ಫೋನ್ ಮಾಡಿ ತನಗೆ ಮುಂಬಯಿಗೆ ಟ್ರೈನ್‌ಗೆ ಒಂದು ಟಿಕೆಟ್ ಬುಕ್ ಮಾಡಿಕೊಡುವಂತೆ ಕೇಳಿಕೊಂಡರು. ಅಶೋಕ ತಾನೂ ಬರುತ್ತೇನೆಂದು ಎಷ್ಟು ಹೇಳಿದರೂ ನಾಗಪ್ಪನವರು ಖಡಾಖಂಡಿತವಾಗಿ ಬೇಡವೆಂದರು. ತಾನು ಇಲ್ಲದಿರುವಾಗ ಆಗಾಗ ಶಾರದಾಳನ್ನು ನೋಡಿಕೊಳ್ಳಬೇಕಾಗುತ್ತದೆ, ನೀನು ಬರಬೇಡ ಎಂದರು. ಈಗ ಶಾರದಾಳಿಗೆ ಏನೆಂದು ಹೇಳಿ ಹೊರಡುವುದು ಎಂದು ಆಲೋಚಿಸತೊಡಗಿದರು. ಅವಳನ್ನು ಎಂದೂ ಬಿಟ್ಟು ಹೊರಟವರಲ್ಲ. ಈಗ ಕನಿಷ್ಠ ಮೂರ್‍ನಾಲ್ಕು ದಿನವಾದರೂ ಹೋಗಬೇಕಾಗುತ್ತದೆ.

ಟ್ರೈನಿನಲ್ಲಿ ರಾತ್ರಿಯೆಲ್ಲಾ ನಾಗಪ್ಪನವರಿಗೆ ನಿದ್ರೆಯೇ ಬಂದಿರಲಿಲ್ಲ. ಮುಂಬಯಿ ಹತ್ತಿರ ಹತ್ತಿರ ಬಂದಂತೆ ಅವರ ಆತಂಕ, ಎದೆಬಡಿತ ಹೆಚ್ಚಾಗುತ್ತಿತ್ತು. ಇನ್ನು ಒಂದೆರಡು ಗಂಟೆಗಳಲ್ಲಿ ಮುಂಬಯಿ ಬರುವುದಾಗಿ ಟಿ.ಸಿ. ತಿಳಿಸಿದ್ದ. ಕಿರಣ ಲಾರಿ ಡ್ರೈವರ್ ಕೆಲಸಕ್ಕೆ ಏಕೆ ತೊಡಗಿದನೆಂಬುದು ಅವರಿಗೆ ಅರ್ಥವಾಗಲೇ ಇಲ್ಲ. ಓದು ಬರಹ ಕಲಿತಿದ್ದವನು ಅವನಿಗೆ ಬೇರೇನೂ ಕೆಲಸ ಸಿಗಲಿಲ್ಲವೆ? ಸಾವು ತಂದುಕೊಳ್ಳುವಂತಹ ಆ ಕೆಲಸ ಏಕೆ ಬೇಕಿತ್ತು?

ಶಾರದಮ್ಮನವರ ಬಳಿ ಅಶೋಕ ಮಾತನಾಡಿದ್ದ. ತನ್ನ ಕಚೇರಿಯ ಕೆಲಸಕ್ಕೆ ತಾನೇ ನಾಗಪ್ಪನವರನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದೇನೆಂದೂ, ಏನೇ ಸಹಾಯ ಬೇಕಾದರೂ ತನಗೇ ಹೇಳಿ ಎಂದು ತಿಳಿಸಿದ್ದ. ತಮ್ಮ ಕಚೇರಿಯ ಒಬ್ಬ ಕೆಲಸದಾಕೆಯನ್ನು ಶಾರದಮ್ಮನವರ ಸಹಾಯಕ್ಕೆ ಕಳುಹಿಸಿದ್ದ. ಟ್ರೈನು ಹೊರಟ ದಿನ ಅಶೋಕನೇ ಬಂದು ಟ್ರೈನು ಹತ್ತಿಸಿ, ಹಣ ಕೊಡಲೇ ಎಂದು ಕೇಳಿದ್ದ. ನಾಗಪ್ಪನವರು ಬೇಡ ಎಂದಿದ್ದರು. ಅವರೇ ಬೇಕಾಗುತ್ತದೆಂದು ಬ್ಯಾಂಕಿನಿಂದ ಐವತ್ತು ಸಾವಿರ ಡ್ರಾ ಮಾಡಿ ಇಟ್ಟುಕೊಂಡಿದ್ದರು.

ನಾಗಪ್ಪ ಈ ಮೊದಲೆಂದೂ ಮುಂಬಯಿಗೆ ಬಂದವರಲ್ಲ. ಬಾಂಬೆ ಸೆಂಟ್ರಲ್‌ನಲ್ಲಿ ಇಳಿದಾಗ ಬೆಳಿಗ್ಗೆ ೮ ಗಂಟೆ. ಧರಾವಿಯಲ್ಲಿನ ಕಿರಣನ ಮನೆಯ ವಿಳಾಸದ ಚೀಟಿ ಹಿಡಿದು ಪ್ರಿಪೇಯ್ಡ್ ಟ್ಯಾಕ್ಸಿಯ ಬಳಿ ಹೋಗಿ ಚೀಟಿ ತೋರಿಸಿ ಹಣ ಪಾವತಿಸಿ ಟಿಕೆಟ್ ಕೊಂಡರು. ಟ್ಯಾಕ್ಸಿಯಲ್ಲಿ ಕೂತು ಡ್ರೈವರ್‌ಗೆ ವಿಳಾಸದ ಚೀಟಿ ತೋರಿಸಿ ಅದು ತನ್ನ ಮಗನ ಮನೆಯೆಂದೂ, ತಾನು ಮುಂಬಯಿಗೆ ಹೊಸಬನೆಂದೂ, ಮನೆಯ ಬಳಿಯೇ ಕರೆದುಕೊಂಡು ಹೋಗಿ ಬಿಟ್ಟಲ್ಲಿ ಇನ್ನಷ್ಟು ದುಡ್ಡು ಕೊಡುವುದಾಗಿ ಅರೆಬರೆ ಹಿಂದಿಯಲ್ಲಿ ತಿಳಿಸಿದರು.

ಟ್ಯಾಕ್ಸಿ ಡ್ರೈವರ್ ಯಾವುದೋ ಗಲ್ಲಿಯಲ್ಲಿ ನಿಲ್ಲಿಸಿ, ಇಲ್ಲಿಂದ ಒಳಕ್ಕೆ ಟ್ಯಾಕ್ಸಿ ಹೋಗುವುದಿಲ್ಲವೆಂದು ತಿಳಿಸಿದ. ಎದುರು ಗಲ್ಲಿಯೊಳಕ್ಕೆ ಹೋಗಿ ಯಾರನ್ನಾದರೂ ಕೇಳಿ ಮನೆ ತೋರಿಸುತ್ತಾರೆ ಎಂದು ಹೇಳಿ, ಐವತ್ತು ರೂ ಭಕ್ಷೀಸು ಪಡೆದು ಹೊರಟ.

ತನ್ನ ಮಗ ಇಂತಹ ಕೊಳಗೇರಿಯಲ್ಲಿ ಬದುಕುತ್ತಿದ್ದನೆಂದು ತಿಳಿದು ನಾಗಪ್ಪನವರಿಗೆ ಅತೀವ ಹಿಂಸೆಯಾಯಿತು. ರಸ್ತೆಯಲ್ಲೇ ಹರಿಯುತ್ತಿದ್ದ ಕೊಳಚೆ ನೀರು, ಅದರ ಪಕ್ಕದಲ್ಲೇ ಕೊಳಾಯಿಯ ನೀರು, ಅದರ ಬಳಿ ಹೆಂಗಸರ ಕಿತ್ತಾಟ. ನಾಗಪ್ಪನವರಿಗೆ ಹೇಗೆ ಹೆಜ್ಜೆ ಮುಂದೆ ಇಡಬೇಕೆನ್ನುವುದೇ ತಿಳಿಯಲಿಲ್ಲ. ಅಲ್ಲೇ ಕಾಣುತ್ತಿದ್ದ ಅಂಗಡಿಗೆ ಹೋಗಿ ಕಿರಣನ ಮಗಳಿಗೆಂದು ಒಂದಷ್ಟು ಚಾಕಲೇಟ್, ಬಿಸ್ಕಿಟ್ ಕೊಂಡರು. ವಿಳಾಸದ ಚೀಟಿ ಅಂಗಡಿಯವನಿಗೆ ತೋರಿಸಿದರು. ಆತ ಅದರಲ್ಲಿನ ವಿಳಾಸ ನೋಡಿ, ಅಂಗಡಿಯ ಬಳಿ ಇದ್ದ ಕೆಲವರ ಬಳಿ ಮರಾಠಿಯಲ್ಲಿ ಏನೋ ಮಾತನಾಡಿದ. ನಂತರ ಅಲ್ಲೇ ಆಡುತ್ತಿದ್ದ ಹುಡುಗನೊಬ್ಬನನ್ನು ಕರೆದು ಅವನಿಗೆ ಮರಾಠಿಯಲ್ಲಿ ಏನೋ ಹೇಳಿದ. ಆ ಮಾತುಗಳ ಮಧ್ಯೆ `ಕಿರಣ್ ಕುಮಾರ್' ಎನ್ನುವುದು ಮಾತ್ರ ಅವರಿಗೆ ಅರ್ಥವಾಯಿತು. `ಆ ಹುಡುಗ ಮನೆ ತೋರಿಸುತ್ತಾನೆ' ಎಂದು ಅಂಗಡಿಯವ ನಾಗಪ್ಪನವರಿಗೆ ತಿಳಿಸಿದ. ನಾಗಪ್ಪ ಆ ಹುಡುಗನಿಗೊಂದು ಚಾಕಲೇಟ್ ಕೊಟ್ಟರು. ಅವನ ಹಿಂದೆಯೇ ಹೊರಟರು.

`ಮಾನಸಿ ಏನನ್ನಬಹುದು? ಮೊಮ್ಮಗಳು ನನ್ನನ್ನು ಅಜ್ಜಾ ಎನ್ನುತ್ತಾಳೆಯೆ? ನಾವವರನ್ನು ಮನೆಗೆ ಸೇರಿಸಿಲ್ಲ. ಆಕೆಯೀಗ ನನ್ನನ್ನು ಮನೆಯೊಳಕ್ಕೆ ಸೇರಿಸದಿದ್ದರೆ?' ಎಂಬ ಆಲೋಚನೆಗಳಲ್ಲಿಯೇ ಮನೆಯ ಮುಂದೆ ಬಂದು ನಿಂತಿದ್ದರು. ಆ ಹುಡುಗ ಮನೆಯ ಬಾಗಿಲು ತೋರಿಸಿ, ಮರಾಠಿಯಲ್ಲಿ ಏನೋ ಹೇಳಿ ಮೊದಲು ಆಟವಾಡುತ್ತಿದ್ದೆಡೆಗೆ ಓಡಿದ. ನಾಗಪ್ಪನವರು ಅಳುಕಿನಿಂದಲೇ ಬಾಗಿಲು ತಟ್ಟಿದರು. ಬಾಗಿಲು ತೆರೆಯಿತು. ಆರು ವರ್ಷದ ಪುಟ್ಟ ಹುಡುಗಿಯೊಬ್ಬಳು ಬಾಗಿಲು ಅರ್ಧ ತೆರೆದು ಇಣುಕಿ ನೋಡಿದಳು. `ಯಾರು' ಎಂಬರ್ಥ ಬರುವ ಧ್ವನಿಯಲ್ಲಿ ಮರಾಠಿಯಲ್ಲೇನೋ ಕೇಳಿದಳು. ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. `ನಿನ್ನ ಅಜ್ಜ ಎನ್ನಲೇ? ನಿನ್ನ ಅಪ್ಪ ಎನ್ನಲೇ? ನಿನ್ನ ಅಪ್ಪನನ್ನು ಮನೆಗೆ ಸೇರಿಸದ ಕಟುಕ ಎನ್ನಲೇ?' ಎಂದು ಯೋಚಿಸುತ್ತ ಆ ಹುಡುಗಿಯ ಮುಖ ನೋಡುತ್ತಿರುವಾಗ ಒಳಗಿನಿಂದ ಹೆಂಗಸೊಬ್ಬಳು ಬಂದು ಮಗು ಕೇಳಿದ ಮರಾಠಿ ಪ್ರಶ್ನೆಯನ್ನೇ ಮತ್ತೆ ಕೇಳಿದಳು. ನಾಗಪ್ಪನವರು ಮಾನಸಿಯನ್ನು ನೋಡಿರಲೇ ಇಲ್ಲ.

ಧೈರ್ಯಮಾಡಿಕೊಂಡು `ನಾನು, ಕಿರಣನ ಅಪ್ಪ' ಎಂದರು ಕನ್ನಡದಲ್ಲಿ. ಆಕೆ ಅರೆ ಕ್ಷಣ ಚಕಿತಳಾಗಿ ಏನೂ ಮಾತನಾಡದೇ ಒಳಗೆ ಹೊರಟುಹೋದಳು. ಆ ಪುಟ್ಟ ಹುಡುಗಿಗೆ ಏನೊಂದೂ ಅರ್ಥವಾಗದೆ ಅಮ್ಮನ ಹಿಂದೆ ಓಡಿದಳು. ನಾಗಪ್ಪನವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತೆರೆದ ಬಾಗಿಲು ತೆರೆದೇ ಇತ್ತು. ತಾನು ಬಂದಿರುವುದು ವಾಪಸ್ಸು ಹೋಗಲಲ್ಲ ಎಂಬುದನ್ನು ನೆನಪಿಸಿಕೊಂಡರು. ಆಕೆ ಮತ್ತೆ ಬಾಗಿಲ ಬಳಿ ಬಂದು, `ಬನ್ನಿ ಒಳಕ್ಕೆ' ಎಂದಳು.

ನಾಗಪ್ಪನವರು ಬಾಗಿಲ ಹೊರಗೆ ಚಪ್ಪಲಿ ಬಿಟ್ಟು ಒಳಗೆ ಹೋದರು. ಎರಡೇ ಕೋಣೆಗಳ ಸಣ್ಣ ಮನೆ. ಒಂದು ಕೋಣೆ ಅಡುಗೆ ಮನೆಯಾದರೆ, ಮತ್ತೊಂದು ಎಲ್ಲವೂ ಆಗಿತ್ತು. ಅಲ್ಲೇ ಇದ್ದ ಕಬ್ಬಿಣದ ಖುರ್ಚಿಯ ಮೇಲೆ ಕೂತರು. ಬಿಸಿಲಿನಿಂದ ಒಳಗೆ ಬಂದಾಗ ಎಲ್ಲವೂ ಮಬ್ಬುಮಬ್ಬಾಗಿತ್ತು. ದೃಷ್ಟಿ ಸ್ಫುಟವಾದಂತೆ, ಗೋಡೆಯ ಮೇಲೆ ಕಿರಣನ ಫೋಟೋ ಕಂಡಿತು. ಅದಕ್ಕೆ ಹೂವಿನ ಹಾರ ಹಾಕಿತ್ತು. ಆ ಹೆಣ್ಣು ಅಡುಗೆ ಮನೆಯ ಬಾಗಿಲನ್ನು ಆಸರೆಯಾಗಿ ಹಿಡಿದು ನೋಡುತ್ತಿತ್ತು. ಪುಟ್ಟ ಮಗು ಆಕೆಯ ಸೀರೆಯನ್ನು ಆಸರೆಯಾಗಿ ಹಿಡಿದಿತ್ತು.

`ನಿನ್ನ ಹೆಸರು ಮಾನಸಿ ಅಲ್ಲವೇನಮ್ಮಾ?' ಎಂದರು.
ಆಕೆ ಮಾತನಾಡಲಿಲ್ಲ.
`ನಿನ್ನ ಹೆಸರೇನು? ನಿನಗೆ ಕನ್ನಡ ಬರುತ್ತಾ?' ಎಂದು ಪುಟ್ಟ ಮಗುವನ್ನು ಕೇಳಿದರು.
ಮಗುವೂ ಮಾತನಾಡಲಿಲ್ಲ.
`ನಮ್ಮಿಂದ ಬಹಳ ತಪ್ಪಾಗಿ ಬಿಡ್ತಮ್ಮ. ದಯವಿಟ್ಟು ಕ್ಷಮಿಸಿ ಬಿಡು' ಎಂದರು ನಾಗಪ್ಪ ಕೈ ಮುಗಿಯುತ್ತ. ಅವರು ಹೇಳಬೇಕೆಂದು ಹೊರಟಿದ್ದ ಮಾತೇ ಬೇರೆ, ಆದರೆ ಅವರಿಗರಿವಿಲ್ಲದಂತೆ ಈ ಮಾತು ಹೊರಬಂದಿತ್ತು.
`ಎಲ್ಲಾ ಮುಗಿದ ಮೇಲೆ ಬಂದು ಏನು ಮಾಡ್ತೀರಿ?' ಮಾನಸಿ ಕೇಳಿದಳು.
ನಾಗಪ್ಪನವರು ಏನೂ ಮಾತನಾಡಲಿಲ್ಲ. ಐದು ನಿಮಿಷದ ಮೌನದ ನಂತರ
`ಬನ್ನಿ ಕೈ ಕಾಲು ಮುಖ ತೊಳೆದುಕೊಳ್ಳಿ' ಎಂದು ಅಡುಗೇ ಮನೆಯಲ್ಲೇ ಇದ್ದ ಬಚ್ಚಲಿನ ಕಡೆ ಕೈ ತೋರಿದಳು.
ನಾಗಪ್ಪ ಕೈ ಕಾಲು ಮುಖ ತೊಳೆದು ಬಂದು ಅದೇ ಕುರ್ಚಿಯ ಮೇಲೆ ಕೂತರು. ಮಾನಸಿ ಪ್ಲೇಟಿನಲ್ಲಿ ಉಪ್ಪಿಟ್ಟು ತಂದು ಕೊಟ್ಟಳು. ಪುಟ್ಟ ಮಗು ತಾಯಿಯ ಸೆರಗು ಬಿಡುತ್ತಲೇ ಇರಲಿಲ್ಲ. ತಮ್ಮ ಚೀಲದಿಂದ ಚಾಕಲೇಟ್, ಬಿಸ್ಕತ್ ತೆಗೆದು ಕೊಟ್ಟರು. ಆಗ ಮಗು ಹತ್ತಿರ ಬಂತು. ನಿನಗೆ ಕನ್ನಡ ಬರುತ್ತಾ ಎಂದದ್ದಕ್ಕೆ `ಹ್ಹೂಂ' ಎಂದು ತಲೆಯಾಡಿಸಿತು. ನಿನ್ನ ಹೆಸರೇನು ಎಂದದ್ದಕ್ಕೆ `ಶಾರದಾ' ಎಂದಿತು. ನಾಗಪ್ಪನವರಿಗೆ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತಾಗಿ ಉಪ್ಪಿಟ್ಟು ತಿನ್ನಲಾಗಲಿಲ್ಲ.

ನಾಗಪ್ಪನವರೂ ಮಾತನಾಡಲಿಲ್ಲ, ಮಾನಸಿಯೂ ಮಾತನಾಡಲಿಲ್ಲ. ಮಗುವಿಗೆ `ನಾನು ನಿಮ್ಮ ಅಜ್ಜ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ' ಎಂದರು. ಮಗುವಿಗೆ ಏನೂ ಅರ್ಥವಾಗಲಿಲ್ಲ.

ಕೊನೆಗೆ ನಾಗಪ್ಪನವರೇ ಮಾತು ಪ್ರಾರಂಭಿಸಿ, `ನಡೆಯಿರಿ ಊರಿಗೆ ಹೋಗೋಣ' ಎಂದರು.
`ನಮ್ಮದು ಇದೇ ಊರು' ಥಟ್ಟನೆ ಮಾನಸಿ ಹೇಳಿದಳು, `ನಮಗ್ಯಾರೂ ಇಲ್ಲ' ಎಂದೂ ಸೇರಿಸಿದಳು.
`ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಮ್ಮ' ಎಂದರು.
`ಯಾರನ್ನು ಯಾರು ಕ್ಷಮಿಸಬೇಕೋ ಗೊತ್ತಿಲ್ಲ' ಎಂದಳಾಕೆ.
`ನಮಗೂ ಯಾರೂ ಇಲ್ಲ......'
`ಅಂದರೆ, ನಿಮಗೆ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳಲು ಯಾರಾದರೂ ಬೇಕೇನೋ?' ಎಂದಳಾಕೆ ಒರಟಾಗಿ.

ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಸ್ವಲ್ಪ ಸಮಯ ಕಳೆದು ಮತ್ತೆ ಹೇಳಿದರು,
`ಮಗುವಿನ ಬಗ್ಗೆ ಯೋಚಿಸಮ್ಮ. ಆಕೆಯ ದೃಷ್ಟಿಯಿಂದಲಾದರೂ ನಮ್ಮೊಡನೆ ಬಾ. ಈಗ ನಮಗೆ ಉಳಿದಿರುವುದು ನೀವಿಬ್ಬರೇ. ನಿಮಗಾಗಿ ನಾನು ಎಷ್ಟು ಹುಡುಕಾಟ ನಡೆಸಿದ್ದೇನೆ. ನಿಮ್ಮಿಂದ ಸುದ್ದಿಯೇ ಇಲ್ಲ. ನಾವು ಎಲ್ಲೆಂದು ಹುಡುಕುವುದು?' ಎಂದರು ನಾಗಪ್ಪ.
`ಎಲ್ಲವೂ ಸುಳ್ಳು' ಎಂದಳಾಕೆ.
ಮತ್ತೆ ಇಬ್ಬರ ನಡುವೆ ಮೌನ. ಮಗು ಇಬ್ಬರನ್ನೂ ನೋಡುತ್ತ ಚಾಕಲೇಟ್ ತಿನ್ನುತ್ತಿತ್ತು.
`ಕಿರಣ ಬೇರೆ ಯಾವ ಕೆಲಸಕ್ಕೂ ಸೇರಿರಲಿಲ್ಲವೆ?' ತಮ್ಮ ಸಂಶಯದ ನಿವಾರಣೆಗೆ ನಾಗಪ್ಪ ಕೇಳಿದರು.
`ಸಿಗಬೇಕಲ್ಲಾ?' ಅಷ್ಟೇ ಮೊಟಕಾಗಿ ಮಾನಸಿ ಉತ್ತರಿಸಿದಳು.

ತಾನು ಬಂದಿರುವುದು ಆಕೆಗೆ ಎಲ್ಲೋ ಆಳದೊಳಗೆ ಸಂತೋಷವಾಗಿರಬಹುದು, ಒಂದು ರೀತಿಯ ಸುರಕ್ಷಿತ ಭಾವನೆ ಬಂದಿರಬಹುದು, ತನ್ನೊಟ್ಟಿಗೆ ಆಕೆ ವಾಪಸ್ಸು ಬರಬಹುದು ಎಂದು ನಾಗಪ್ಪನವರು ಆಲೋಚಿಸುತ್ತಿದ್ದರು.

`ನಿಮ್ಮ ಮನೆಯವರಿಗೆ ಹೇಳಲಿಲ್ಲವೇನಮ್ಮಾ?' ಎಂದು ಕೇಳಿದರು.
ಇಲ್ಲವೆಂದು ತಲೆಯಾಡಿಸಿ, ಅಲ್ಲೇ ಕುಸಿದು ಅಳಲು ಶುರುಮಾಡಿದಳು. ಮಗುವು ಅದನ್ನು ನೋಡಿ, ತಾನೂ ಅಳುತ್ತ ಅಮ್ಮನ ಬಳಿ ಹೋಗಿ ನಿಂತಳು. ಏನು ಮಾಡಬೇಕೆಂದು ನಾಗಪ್ಪನವರಿಗೆ ತೋಚಲಿಲ್ಲ. ಅವಳನ್ನು ತಬ್ಬಿ ಸಂತೈಸಬೇಕೆನ್ನಿಸಿತು. ಅವರ ಕಣ್ಣಲ್ಲೂ ನೀರು ಸುರಿಯುತ್ತಿತ್ತು. ಕರವಸ್ತ್ರವನ್ನು ಕಣ್ಣಿಗೆ ಒತ್ತಿಹಿಡಿದರು.

`ಹೆದರಿಕೋ ಬೇಡಮ್ಮಾ. ನಾನಿದ್ದೇನೆ. ದಯವಿಟ್ಟು ಇಲ್ಲವೆನ್ನಬೇಡ. ನೀನೇ ನನ್ನ ಮಗಳು, ನೀನೇ ನನ್ನ ಮಗ. ನಡಿ ನಮ್ಮೂರಿಗೆ ಹೋಗೋಣ. ನಾವು, ನೀವು ಎಲ್ಲಾ ಈ ಬದುಕಲ್ಲಿ ಬಹಳಷ್ಟು ನೋವು ತಿಂದಿದ್ದೇವೆ. ನಡೆದದ್ದೆಲ್ಲಾ ನಡೆದುಹೋಯಿತು. ಇನ್ನೂ ಈ ಮಗುವಿನ ಭವಿಷ್ಯದ ಬಗ್ಗೆ ಆಲೋಚಿಸೋಣ.' ಎಂದರು ನಾಗಪ್ಪ.

`ಯೋಚಿಸುತ್ತೇನೆ' ಎಂದಳು ಮಾನಸಿ, ಕಣ್ಣೊರೆಸಿಕೊಳ್ಳುತ್ತ.
`ಯೋಚಿಸು. ನಮ್ಮೆಲ್ಲರ ಒಳಿತಿಗೇ ನಾನು ಹೇಳುತ್ತಿರುವುದು. ನೀನು ಎಂದು ಬರಲು ಸಿದ್ಧವಿರುತ್ತೀಯೋ ತಿಳಿಸು. ನಾನು ಬಂದು ಕರೆದುಕೊಂಡುಹೋಗುತ್ತೇನೆ. ಈ ನಂಬರಿಗೆ ಫೋನ್ ಮಾಡು, ಇದು ಕಿರಣನ ಗೆಳೆಯ ಅಶೋಕನದು. ಬೇಡವೆನ್ನಬೇಡ ಈ ಹಣ ತೆಗೆದುಕೋ' ಎಂದು ಹೇಳಿ ತಾವು ತಂದಿದ್ದ ಐವತ್ತು ಸಾವಿರ ಆಕೆಯ ಬಳಿ ಇಟ್ಟರು.
ಆಕೆ ಬೇಡವೆಂದು ಅದನ್ನು ದೂರ ತಳ್ಳಿದರೂ ಅವರು, `ಇಲ್ಲ, ಬೇಕಾಗುತ್ತೆ. ಇಲ್ಲಿ ಏನಾದರೂ ಜವಾಬ್ದಾರಿಗಳಿದ್ದರೆ ಅವುಗಳನ್ನು ಪೂರೈಸಿಕೊ. ಇನ್ನೂ ಹಣ ಬೇಕಾದರೆ ಹೇಳು ಕಳುಹಿಸಿಕೊಡುತ್ತೇನೆ' ಎಂದು ಹೇಳಿ ಹಣವನ್ನು ಆಕೆಯ ಕೈಗಿಟ್ಟು ಮೇಲೆದ್ದು ಕಿರಣನ ಫೋಟೋದ ಬಳಿ ಹೋಗಿ ನಿಂತರು. ಕರವಸ್ತ್ರದಿಂದ ಮತ್ತೆ ಕಣ್ಣು ಒರೆಸಿಕೊಂಡರು.

* * * *

ಟ್ರೈನಿನ ವಾಪಸ್ ಪ್ರಯಾಣ ನಾಗಪ್ಪನವರಿಗೆ ಅಷ್ಟೊಂದು ಹಿಂಸೆಯಾಗಲಿಲ್ಲ. `ಶಾರದಾಳಿಗೆ ಹೇಗಾದರೂ ಹೇಳಿ ಒಪ್ಪಿಸುತ್ತೇನೆ. ಅವಳು ಒಪ್ಪಲೇಬೇಕು' ಎಂದು ಮನಸ್ಸಿನಲ್ಲೇ ಅಂದುಕೊಂಡರು. ಆಕೆಗೆ ಮಗನ ಸಾವಿನ ವಿಷಯ ತಿಳಿಸುವುದೇ ಕಷ್ಟದ ಕೆಲಸ ಅಂದುಕೊಂಡರು. `ಕಿರಣ ಬದುಕಿದ್ದಾಗಲೂ ಅವಳದು ದಿನನಿತ್ಯದ ರೋಧನ. ಈಗ ಅವನು ಸತ್ತುಹೋಗಿರುವ ವಿಷಯ ಅವಳಿಗೇನಾದರೂ ತಿಳಿದರೆ ಅವಳು ಎದೆಯೊಡೆದು ಸತ್ತುಹೋಗಬಹುದು ಅಥವಾ ಅವನು ನನ್ನ ಪಾಲಿಗೆ ಎಂದೋ ಸತ್ತುಹೋಗಿದ್ದ ಎನ್ನಲೂಬಹುದು. ಅವನ ಈಗಿನ ಸಾವಿಗೆ ಅವಳು ಅವನ ಸಾವಿನ ಮುನ್ನವೇ ತನ್ನ ಎಲ್ಲಾ ದುಃಖದ ಕೋಟಾವನ್ನು ಮುಗಿಸಿಬಿಟ್ಟಿದ್ದಾಳೆ. ಕಿರಣನ ಈಗಿನ ಸಾವು ಅವಳಿಗೆ ಏನೇನೂ ಅನ್ನಿಸದಿರಬಹುದು' ನಾಗಪ್ಪನವರು ಶಾರದಮ್ಮನ ಬಗ್ಗೆ ಆಲೋಚಿಸುತ್ತಿದ್ದರು. ಬರುವಾಗ ಮಾನಸಿ ಕೊಟ್ಟಿದ್ದ ಕಿರಣನ ಅಸ್ಥಿಯಿದ್ದ ತಾಮ್ರದ ಕರಡಿಗೆಯನ್ನು ಚೀಲದ ಸಮೇತ ಕೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದರು. ಕಿಟಕಿಯಿಂದ ಬೀಸುತ್ತಿದ್ದ ಬಿರುಸಾದ ಗಾಳಿಗೆ ಮುಖವೊಡ್ಡಿದ್ದ ನಾಗಪ್ಪನವರಿಗೆ ಅದ್ಯಾಕೊ ವಾಪಸ್ ಪ್ರಯಾಣ ಅತ್ಯಂತ ದೀರ್ಘವಾಗುತ್ತಿದೆ ಎನ್ನಿಸುತ್ತಿತ್ತು.

ಡಾ|| ಜೆ.ಬಾಲಕೃಷ್ಣ
balukolar@gmail.com

5 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಪ್ರಿಯ ಡಾ| ಬಾಲಕೃಷ್ಣ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಅನಾಮಧೇಯ ಹೇಳಿದರು...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the SBTVD, I hope you enjoy. The address is http://sbtvd.blogspot.com. A hug.

Kannada Sahithya ಹೇಳಿದರು...

Dear Balakrishna,

On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Girish Babu ಹೇಳಿದರು...

ಬಾಲು
ಡೆತ್-ಸರ್ಟಿಫಿಕೇಟ್‌ ಕಥೆ ನನಗೆ ಬಹಳ ಅದ್ಭುತವಾಗಿ ಕಂಡಿತು. ಪ್ರೀತಿ-ಪ್ರೇಮಗಳು ಹೆತ್ತವರನ್ನು ಹೇಗೆ ದೂರ ಮಾಡುತ್ತವೆ ಎನ್ನುವ ಅನೇಕ ಅನೇಕ ಪ್ರಸಂಗಗಳನ್ನು ಕೇಳಿದ್ದೇನೆ, ನೋಡಿದ್ದೇನೆ. ಇಲ್ಲಿ ಗಹನವಾಗಿ ಕಥೆ ಬೆಳೆಸಿರುವ ರೀತಿ ಚೆನ್ನಾಗಿದೆ. ಈ ಕಥೆ ದಿಢೀರ್‌ ಸೃಷ್ಟಿ ಅಲ್ಲವೆಂದು ನನ್ನ ನಂಬಿಕೆ. ಹಾಗೆ ಅದೇ ನನ್ನನ್ನು ಓದಿಸಿಕೊಂಡು ಹೋಯಿತು ಕೂಡ.
ಗಿರೀಶ ಬಾಬು ಎನ್

ಅನಾಮಧೇಯ ಹೇಳಿದರು...

ಕಥೆ ತುಂಬಾ ಚೆನ್ನಾಗಿದೆ.ಬದುಕಿನಲ್ಲಿ ಬರುವ ಸಂಕಷ್ಟಗಳು ಎದುರಿಸಬೇಕಾದ ಅನಿವಾರ್ಯತೆ.
ಪ್ರೀತಿ-ಪ್ರೇಮಗಳು ತರುವ ಸವಾಲುಗಳು.
ಪ್ರೀತಿಗಾಗಿ ಬೆಳೆದ ಪರಿಸರದ ಬೇರುಗಳು ಕಿತ್ತುಕೋಂಡು ಹೋಗಿ ಅನಾಥವಾಗಿ ಬದುಕುವ ನಿಸ್ಸಾಯಕತೆಗಳು ಯಾರಿಗೂ ಬರಬಾರದು.