ಶನಿವಾರ, ಜನವರಿ 02, 2010

ನಿಗೂಢ ನಿಯಾಂಡರ್ತಲ್ ಮಾನವ

2009 ಡಿಸೆಂಬರ್ 31ರ 'ಸುಧಾ' ವಾರಪತ್ರಿಕೆಯಲ್ಲಿ ನನ್ನ 'ನಿಗೂಢ ನಿಯಾಂಡರ್ತಲ್ ಮಾನವ' ಮುಖಪುಟ ಲೇಖನ ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ.



ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ' ಎನ್ನುವುದು ಆತನ ದೈಹಿಕ ಶಕ್ತಿಯ ಸೂಚಕವಲ್ಲ, ಬದಲಿಗೆ ಆತನ ಮಾನಸಿಕ ಶಕ್ತಿಯ ಸೂಚಕ. ಇರುವ ಜೀವಿಗಳಲ್ಲೆಲ್ಲಾ ಆಲೋಚಿಸುವ ಶಕ್ತಿ ಹೊಂದಿರುವ, ಭೂತ, ವರ್ತಮಾನ ಮತ್ತು ಭವಿಷ್ಯಗಳ ಬಗೆಗಿನ ಕಲ್ಪನೆ ಹೊಂದಿರುವ ಜೀವಿ ಎಂದರೆ ಮಾನವನೊಬ್ಬನೇ ಇರಬಹುದು. ತನ್ನ ಇರುವಿಕೆಯಿಂದಾಗಿ ಹಾಗೂ ತನ್ನ ಕೃತ್ಯಗಳಿಂದಾಗಿ ಇಡೀ ಭೂಮಿಯ ಮೇಲಿನ ಭೌತಿಕ ಹಾಗೂ ಜೈವಿಕ ನಿಯಮಗಳನ್ನು ಬದಲಿಸಲು ಸಾಧ್ಯವಾಗದೇ ಇದ್ದರೂ ಆತ ಅವುಗಳ ಮೇಲೆ ಪ್ರಜ್ಞಾಪೂರ್ವಕವಾಗಿ ಮಹತ್ತರ ಪರಿಣಾಮ ಬೀರಬಲ್ಲ. ಈ ರೀತಿಯ ಕಾರ್ಯ ಬಹುಶಃ ಮತ್ತಾವ ಜೀವಿಯಿಂದಲೂ ಸಾಧ್ಯವಿಲ್ಲ. ತನ್ನ ಬುದ್ಧಿಮತ್ತೆ ಮತ್ತು ಸಂಸ್ಕೃತಿಯಿಂದ ಹಾಗೂ ತನ್ಮೂಲಕ ನಾಗರಿಕತೆಯಿಂದ ಮಾನವ ಇಂದು ಭೂಮಿಯ ಮೇಲಿನ ಏಕೈಕ 'ಅದ್ವಿತೀಯ' ಜೀವಿಯಾಗಿದ್ದಾನೆ. ಮಾನವಕೇಂದ್ರಿತ ಪರಿಕಲ್ಪನೆಯಿಂದ ಇಂದು ಮಾನವನೇ ಅತ್ಯಂತ ಶ್ರೇಷ್ಠ ಎನ್ನುವುದಾದಲ್ಲಿ ಜೈವಿಕವಾಗಿ ಮತ್ತು ಆನುವಂಶಿಕವಾಗಿ ಮಾನವನಿಗೆ ಸರಿದೂಗಬಲ್ಲ ಜೀವಿ ಮತ್ತೊಂದಿಲ್ಲ. ಆದರೆ ಇಂದು ಬದುಕಿರುವ ಜೀವಿಗಳಲ್ಲಿ ಮಾನವನಿಗೆ ಅತ್ಯಂತ ಹತ್ತಿರ ಬರಬಲ್ಲ ಜೀವಿ ಎಂದರೆ ವಾನರ ಚಿಂಪಾಂಜಿ. ಆನುವಂಶಿಕವಾಗಿ ಚಿಂಪಾಂಜಿ ಶೇ.98ರಷ್ಟು ಮಾನವನನ್ನು ಹೋಲುತ್ತದೆ. ಇತರ ವಾನರಗಳಾದ ಗೊರಿಲ್ಲಾ, ಒರಂಗುಟಾನ್ ಮುಂತಾದುವು ಮನುಷ್ಯನಿಂದ ಬಹಳಷ್ಟು ದೂರದಲ್ಲಿವೆ. ಆದರೆ ಮಾನವನಿಗೆ ಬಹುಪಾಲು ಸರಿಸಮನಾಗಿದ್ದ, ಮಾನವನ ಜೀವವಿಕಾಸದ ಹಾದಿಯಲ್ಲಿ ಜೊತೆಜೊತೆಯಲ್ಲೇ ನಡೆದುಬಂದ ಮತ್ತೊಬ್ಬ ಮಾನವನಿದ್ದ. ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನಿಂದ ಇಪ್ಪತ್ತೆಂಟು ಸಾವಿರ ವರ್ಷಗಳವರೆಗೂ ಇಡೀ ಯೂರೋಪ್ ಅವನ 'ಸಾಮ್ರಾಜ್ಯ'ವಾಗಿತ್ತು. ಇಲ್ಲಿ ಸಾಮ್ರಾಜ್ಯ ಎಂದಾಕ್ಷಣ ಆತನನ್ನು ಒಬ್ಬ ರಾಜನಂತೆ ಅಥವಾ ಸಾಮ್ರಾಟನಂತೆ ಕಲ್ಪಿಸಿಕೊಳ್ಳುವುದು ಬೇಡ. ಅವನೂ ಸಹ ನಮ್ಮಂತಹ ಆಧುನಿಕ ಮಾನವರ ಪೂರ್ವಜರಂತೆ ಕಲ್ಲಿನ ಆಯುಧಗಳಿಂದ ಭೇಟೆಯಾಡಿ, ಗೆಡ್ಡೆ ಗೆಣಸು ಆಯ್ದುಕೊಂಡು ಬದುಕುತ್ತಿದ್ದ. ಅತ್ಯಂತ ಕಠಿಣ ಪರಿಸರದ ಪರಿಸ್ಥಿತಿಗಳಾದಂತಹ ಹಿಮಯುಗಗಳಲ್ಲೂ ಆತ ಯಶಸ್ವಿಯಾಗಿ ಬದುಕಿದ್ದ. ಆತನನ್ನು ನಿಯಾಂಡರ್ತಲ್ ಮಾನವನೆಂದು ವಿಜ್ಞಾನಿಗಳು ಕರೆಯುತ್ತಾರೆ. ಸುಮಾರು 1,20,000ದಿಂದ 1,50,000 ವರ್ಷಗಳ ಹಿಂದೆ ಆಪ್ರಿಕಾದಲ್ಲಿ ವಿಕಾಸ ಹೊಂದಿದ ಆಧುನಿಕ ಮಾನವ ಸುಮಾರು ಮುವ್ವತ್ತೈದು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದ. ಅಲ್ಲಿ ಆತ ಈ ನಿಯಾಂಡರ್ತಲ್ ಮಾನವನನ್ನು ಭೇಟಿಯಾಗಿಯೇ ಇರುತ್ತಾನೆ.


ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವ ಇಬ್ಬರೂ ಯೂರೋಪ್‌ನಲ್ಲಿ ಬದುಕಿದ್ದರು. ಆಧುನಿಕ ಮಾನವ ಯೂರೋಪ್ ಪ್ರವೇಶಿಸಿದ ಹತ್ತು ಹದಿನೈದು ಸಾವಿರ ವರ್ಷಗಳ ನಂತರ ನಿಯಾಂಡರ್ತಲ್ ಮಾನವ ನಿಗೂಢವಾಗಿ ನಿರ್ನಾಮವಾಗಿ ಹೋದ.

ಪರಿಸರಕ್ಕೆ ಯಶಸ್ವಿಯಾಗಿ ಹೊಂದಿಕೊಂಡಿದ್ದ ಅವನ ನಿರ್ನಾಮಕ್ಕೆ ಕಾರಣಗಳೇನು? ಆಧುನಿಕ ಮಾನವನೊಂದಿಗಿನ ಸಂಪನ್ಮೂಲಗಳನ್ನು ಪಡೆಯುವ ಸ್ಪರ್ಧೆಯಲ್ಲಿ ಆತ ನಿರ್ನಾಮವಾದನೆ? ಅಥವಾ ಆಧುನಿಕ ಮಾನವನೊಂದಿಗಿನ ಸಂಘರ್ಷದಿಂದಾಗಿ ಆತ ನಿರ್ನಾಮ ಹೊಂದಿದನೆ? ಆತನಲ್ಲಿ 'ಸಂಸ್ಕೃತಿ' ಎಂಬುದಿತ್ತೆ? ಆತನಿಗೆ ಕುಟುಂಬ ಮತ್ತು ಸಮಾಜ ಎಂಬುದರ ಪರಿಕಲ್ಪನೆಗಳಿತ್ತೆ? ಆತನ ಹಾಗೂ ಆಧುನಿಕ ಮಾನವನ ನಡುವೆ 'ಸಾಂಸ್ಕೃತಿಕ' ವಿನಿಮಯ ನಡೆದಿತ್ತೆ? ಅಥವಾ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ವಿನಿಮಯವಾದರೂ ನಡೆದಿತ್ತೆ? ಆತ ಒಂದು ಪ್ರತ್ಯೇಕ ಪ್ರಭೇದವಾಗಿ ಇಂದಿಗೂ ಉಳಿದುಕೊಂಡುಬಂದಿದ್ದಲ್ಲಿ ಇಂದಿನ ಸಮಾಜ ಹೇಗಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದುವರೆಗೂ ದೊರಕಿರುವ ನಿಯಾಂಡರ್ತಲ್ ಮಾನವನ ಅಸ್ಥಿಯ ಪಳೆಯುಳಿಕೆಗಳಿಂದ ಇಂದು ವಿಜ್ಞಾನಿಗಳು ಆತನ ಬಹುಪಾಲು ಡಿ.ಎನ್.ಎ. ಅನ್ನು ಸಂಶ್ಲೇಷಿಸಿ ಪ್ರತ್ಯೇಕಿಸಿದ್ದಾರೆ. ನಮ್ಮಲ್ಲಿನ ಇಂದಿನ ತಂತ್ರಜ್ಞಾನದಿಂದ ಆ ಡಿ.ಎನ್.ಎ. ಬಳಸಿ ನಿಯಾಂಡರ್ತಲ್ ಮಾನವನನ್ನು ಇಂದು ಮರುಸೃಷ್ಟಿಸಬಹುದು. ಅಕಸ್ಮಾತ್ ವಿಜ್ಞಾನಿಗಳು ಆ ರೀತಿ ಸೃಷ್ಟಿಸಿದಲ್ಲಿ ಇಂದಿನ ಸಮಾಜದಲ್ಲಿ ಆತನ ಸ್ಥಾನಮಾನಗಳೇನು? ಆತ ಬರೇ ಪ್ರಯೋಗ ಪಶುವಾಗಷ್ಟೇ ಇರಬೇಕೆ? ಈ ರೀತಿಯ ಹತ್ತು ಹಲವಾರು ಜಿಜ್ಞಾಸೆಗಳು ವಿಜ್ಞಾನಿಗಳನ್ನು ಕಾಡುತ್ತಿವೆ. ನಿಯಾಂಡರ್ತಲ್ ಮಾನವನ ಮೂಲದ ಶೋಧನೆ ನಮ್ಮ
ಜೈವಿಕ ಮತ್ತು ಸಾಂಸ್ಕೃತಿಕ ಮೂಲದ ಶೋಧನೆಯೇ ಆಗಿದೆ.

1826ರಲ್ಲಿ ಬೆಲ್ಜಿಯಂನ ಎಂಜಿಸ್ ಎಂಬಲ್ಲಿ ಮಾನವನ ತಲೆಬುರುಡೆಯ ಪಳೆಯುಳಿಕೆಯೊಂದು ದೊರಕಿತು. ಆಧುನಿಕ ಮಾನವನ ತಲೆಬುರುಡೆಗಿಂತ ತುಸುದೊಡ್ಡದಾಗಿದ್ದರಿಂದ ಅದನ್ನು ಯಾವುದೋ ಕಾಯಿಲೆಯುಳ್ಳ ವ್ಯಕ್ತಿಯ ತಲೆಬುರುಡೆಯಿರಬಹುದೆಂದು ಭಾವಿಸಲಾಯಿತು. ಅದೇ ರೀತಿ ಮತ್ತೊಂದು 1848ರಲ್ಲಿ ಜಿಬ್ರಾಲ್ಟರ್‌ನ ಫೋರ್ಬ್ಸ್ ಕ್ವಾರಿಯೊಂದರಲ್ಲಿ ದೊರಕಿತು. ನಿಯಾಂಡರ್ತಲ್ ಮಾನವನಿಗೆ ಆ ಹೆಸರು ಬಂದದ್ದು ಜರ್ಮನಿಯಲ್ಲಿನ ಡಸೆಲ್‌ಡಾರ್ಫ್ ಬಳಿಯ ನಿಯಾಂಡರ್ ಕಣಿವೆಯಿಂದ. ಜರ್ಮನಿಯಲ್ಲಿ `ತಲ್' ಎಂದರೆ ಕಣಿವೆ ಎಂದರ್ಥ. 1856ರಲ್ಲಿ ನಿಯಾಂಡರ್ ಕಣಿವೆಯಲ್ಲಿನ ಗುಹೆಯೊಂದರಲ್ಲಿ ಕೆಲವು ಮಾನವ ಪಳೆಯುಳಿಕೆಗಳು ಸಿಕ್ಕವು. ಅವು ಅಲ್ಲಿನ ಸ್ಥಳೀಯ ವಿಜ್ಞಾನದ ಅಧ್ಯಾಪಕರ ಕೈ ಸೇರಿದವು. ಆ ಸಮಯದಲ್ಲಿ ಯಾರಿಗೂ ಮಾನವ ವಿಕಾಸದ ದೀರ್ಘ ಇತಿಹಾಸದ ಅಥವಾ ಭೂಮಿಯ ಸುದೀರ್ಘ ಇತಿಹಾಸದ ಕಲ್ಪನೆಯೂ ಇರಲಿಲ್ಲ. ಮಾನವರು ಈಗಿರುವಂತೆಯೇ ಮೊದಲಿನಿಂದಲೂ ಇದ್ದಾರೆ ಎನ್ನುವುದು ಎಲ್ಲರ ನಂಬಿಕೆಯಾಗಿತ್ತು. ಹಾಗಾಗಿ ಆ ವಿಜ್ಞಾನದ ಅಧ್ಯಾಪಕ ಆ ಮೂಳೆಯ ಪಳೆಯುಳಿಕೆಗಳನ್ನು ಬೈಬಲ್ಲಿನ ಕತೆಯಲ್ಲಿನ ನೋವಾನ ಪ್ರವಾಹದಲ್ಲಿ ಸಿಲುಕಿದ ನಿರಾಶ್ರಿತನೊಬ್ಬನವು ಇರಬಹುದೆಂದು ಊಹಿಸಿದ. ಅದನ್ನು ನೋಡಿದ ಕೆಲವರು ಅವು ರಿಕೆಟ್ಸ್ ಕಾಯಿಲೆಯಿಂದ ನರಳುತ್ತಿದ್ದ ಯಾವನೋ ದಡ್ಡ ಸನ್ಯಾಸಿಯ ಮೂಳೆಗಳಿರಬಹುದೆಂದರು. ಇನ್ನು ಕೆಲವರು ಅವು ನೆಪೋಲಿಯನ್ ಯುದ್ಧಗಳ ಸಮಯದಲ್ಲಿ ಆ ಕಣಿವೆಯಲ್ಲಿ ಅವಿತುಕೊಂಡಿದ್ದ ಕೊಸಾಕ್ ಸೈನಿಕನದು ಇರಬಹುದೆಂದರು. ಆ ಪಳೆಯುಳಿಕೆಗಳನ್ನು ಅಭ್ಯಸಿಸಿದ ಜೋಹಾನ್ ಕಾರ್ಲ್ ಪುಲ್ರೋಟ್ ಆ ಪ್ರಾಗೈತಿಹಾಸಿಕ ಮಾನವನನ್ನು ನಿಯಾಂಡರ್ತಲ್ ಮಾನವನೆಂದು ಕರೆದರು. ಆ ನಿಯಾಂಡರ್ತಲ್ ಮಾನವನನ್ನು 1857ರ ಫೆಬ್ರವರಿಯಲ್ಲಿ ಜರ್ಮನಿಯ ಬಾನ್‌ನಲ್ಲಿನ ಲೋಯರ್ ರೈನ್ ಮೆಡಿಕಲ್ ಅಂಡ್ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿ ವಿಜ್ಞಾನ ಜಗತ್ತಿಗೆ ಆ ಪಳೆಯುಳಿಕೆಗಳನ್ನು ಪರಿಚಯಿಸಿದ ವಿಲಿಯಂ ಕಿಂಗ್‌ರವರು ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಒಂದು ಹೊಸ ಪ್ರಭೇದವನ್ನು ಹೆಸರಿಸಿದರು. ನಮಗೆ ಸಿಕ್ಕಿರುವ ಪ್ರಾಗೈತಿಹಾಸಿಕ `ನರವಾನರ' ಪಳೆಯುಳಿಕೆಗಳಲ್ಲಿ ಅತಿ ಹೆಚ್ಚು ನಿಯಾಂಡರ್ತಲ್ ಮಾನವನದೇ ಆಗಿದೆ ಹಾಗೂ ನಮ್ಮ ಪ್ರಾಗೈತಿಹಾಸಿಕ ಪೂರ್ವಜ ಸಂಬಂಧಿಗಳಲ್ಲಿ ನಮಗೆ ಅತಿ ಹೆಚ್ಚು ತಿಳಿದಿರುವುದು ಅವನ ಬಗ್ಗೆಯೇ ಆಗಿದೆ.

ಸುಮಾರು 2,00,000 ವರ್ಷಗಳಿಂದ 28,000 ವರ್ಷಗಳ ಹಿಂದೆ ಈಗಿನ ಯೂರೋಪ್, ಮಧ್ಯ ಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಾಳಲ್ಲಿ ಬದುಕಿದ್ದ ಪ್ರಾಗೈತಿಹಾಸಿಕ ಮಾನವ ನಿಯಾಂಡರ್ತಲ್ ಮಾನವ. ಕೆಲವು ವಿಜ್ಞಾನಿಗಳು ಹೇಳುವಂತೆ ಭೂಮಿಯ ಮೇಲಿನ ಆ ಮಾನವನ ಒಟ್ಟು ಸಂಖ್ಯೆ ಹದಿನೈದು ಸಾವಿರವನ್ನೂ ಮೀರಿರಲಿಲ್ಲ. ಅವನು ವೈಜ್ಞಾನಿಕವಾಗಿ ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಪ್ರತ್ಯೇಕ ಪ್ರಭೇದದಡಿ ವರ್ಗೀಕರಿಸಲಾಗಿದೆ. ಆಧುನಿಕ ಮಾನವ ಹೋಮೋ ಸೇಪಿಯೆನ್ಸ್ ಸೇಪಿಯೆನ್ಸ್ ಪ್ರಭೇದಕ್ಕೆ ಸೇರುತ್ತಾನೆ. ಹೋಮೋ ಸೇಪಿಯೆನ್ಸ್ ಎಂದರೆ 'ವಿವೇಕಿ ಮಾನವ' ಎಂದು. ಆಧುನಿಕ ಮಾನವನಿಗೆ ಆ ಮಾನವರು ಅತ್ಯಂತ ನಿಕಟ ಸಂಬಂಧಿಗಳಾಗಿದ್ದರೂ ಅವರು ಭೌತಿಕವಾಗಿ ಮತ್ತು ಆನುವಂಶಿಕವಾಗಿ ವಿಭಿನ್ನರಾಗಿದ್ದರು. ಮಧ್ಯಮ ಎತ್ತರದ ಅವರು ದೃಢಕಾಯರಾಗಿದ್ದರು, ದೊಡ್ಡ ಹಾಗೂ ಮುಂಚಾಚಿದ ಮುಖ, ದೊಡ್ಡ ಮೂಗು, ದಪ್ಪನೆ ಹುಬ್ಬುಗಳು, ತಗ್ಗಾದ ಇಳಿಜಾರಿನ ಹಣೆಯನ್ನು ಅವರು ಹೊಂದಿದ್ದರು. ಅವರ ಮಿದುಳು ನಮ್ಮಂತಹ ಆಧುನಿಕ ಮಾನವರಷ್ಟೇ ದಪ್ಪವಿತ್ತು. ನಿಯಾಂಡರ್ತಲ್ ಮಾನವನ ಮೊದಲು ದೊರೆತ ಪಳೆಯುಳಿಕೆಗಳಿಂದ ಅವನನ್ನು ದಡ್ಡ ಹಾಗೂ ಮೃಗೀಯ ಜೀವಿಯಂತೆ ಚಿತ್ರಿಸಲಾಗಿತ್ತು. ಆದರೆ ಈಗ ಅವನೂ ಸಹ ನೇರ ಎರಡು ಕಾಲುಗಳಿಂದ ನಡೆದಾಡುತ್ತಿದ್ದ, ಧಿರಿಸು ಧರಿಸುರಿತ್ತಿದ್ದ, ಬೆಂಕಿಯನ್ನು ಬಳಸುತ್ತಿದ್ದ, ಕಲ್ಲಿನ ಸಲಕರಣೆ ಅಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದ, ತನ್ನದೇ 'ಸಂಸ್ಕೃತಿ'ಯನ್ನು ಹೊಂದಿದ್ದ ಹಾಗೂ ಸತ್ತವರನ್ನು ಹೂಳುತ್ತಿದ್ದ ಮಾನವನೆಂದು ತಿಳಿದುಬಂದಿದೆ. ಅವನು ಹಿಮಯುಗದ ಅತಿ ಕಠೋರ ಪರಿಸ್ಥಿತಿಗಳಿಗೂ ಯಶಸ್ವಿಯಾಗಿ ಹೊಂದಿಕೊಂಡು ಬದುಕಿದ್ದ ಹಾಗೂ ಒಂದು ಪ್ರತ್ಯೇಕ ಪ್ರಭೇದವಾಗಿ 1,50,000 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ್ದ.

ಮಾನವನ ವಿಕಾಸ ಒಂದು ಅತ್ಯಂತ ದೀರ್ಘ ಚರಿತ್ರೆ. ಅದರಲ್ಲಿ ಸಾವಿರ, ಲಕ್ಷ ಅಥವಾ ಹತ್ತು ಲಕ್ಷ ವರ್ಷಗಳೆನ್ನುವುದು ಲೆಕ್ಕಕ್ಕೇ ಇಲ್ಲ. ಮಂಗನಂತಿದ್ದ ಪೂರ್ವಜರಿಂದ ಆಧುನಿಕ ಮಾನವನ ಭೌತಿಕ ರೂಪ ಮತ್ತು ನಡವಳಿಕೆಗಳ ವಿಕಾಸವಾಗಲು ಕನಿಷ್ಠ ಅರವತ್ತು ಲಕ್ಷ ವರ್ಷಗಳ ಸಮಯ ತೆಗೆದುಕೊಂಡಿದೆ. ಅತ್ಯಂತ ಮೊದಲ ಮಾನವನ ನಡವಳಿಕೆ ಎನ್ನಬಹುದಾದ 'ದ್ವಿಪಾದಿ' ನಡಿಗೆ ಸುಮಾರು ನಲವತ್ತು ಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡಿತು. ಇತರ ಬಹುಮುಖ್ಯ ಮಾನವ ಲಕ್ಷಣಗಳಾದ ದೊಡ್ಡ ಮತ್ತು ಸಂಕೀರ್ಣ ಮಿದುಳು, ಆಯುಧ ಅಥವಾ ಸಲಕರಣೆಗಳನ್ನು ತಯಾರಿಸಿ ಬಳಸುವುದು ಮತ್ತು ಭಾಷೆಯ ಸಾಧ್ಯತೆ ಆಮೇಲೆ ಕಾಣಿಸಿಕೊಂಡಿದೆ. ಇನ್ನೂ ಮುಂಬರಿದ ಲಕ್ಷಣಗಳಾದ ಸಂಕೀರ್ಣ ಸಾಂಕೇತಿಕ ಅಭಿವ್ಯಕ್ತಿ ಎನ್ನಬಹುದಾದ ಕಲೆ, ಸಾಂಸ್ಕೃತಿಕ ವೈವಿಧ್ಯತೆ ತೀರಾ ಇತ್ತೀಚೆಗೆ, ಅಂದರೆ ಸುಮಾರು ಕಳೆದ ಒಂದು ಲಕ್ಷ ವರ್ಷಗಳಿಂದೀಚೆಗೆ ಕಾಣಿಸಿಕೊಂಡಿದೆ.

ಮನುಷ್ಯರೂ ಸಹ 'ನರವಾನರರು'. ಆಧುನಿಕ ಮಾನವ, ಚಿಂಪಾಂಜಿ ಮತ್ತು ಗೊರಿಲ್ಲಾ ಸುಮಾರು ಎಂಟರಿಂದ ಆರು ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ಒಂದೇ ಗುಂಪಿನ ಪೂರ್ವಜರನ್ನು ಹಂಚಿಕೊಂಡಿದ್ದಾರೆ. ಆಧುನಿಕ ಮಾನವ ಮತ್ತು ಚಿಂಪಾಂಜಿ ಶೇ.98ರಷ್ಟು ಆನುವಂಶಿಕವಾಗಿ ಒಂದೇ ಆಗಿದ್ದಾರೆ. ಸುಮಾರು 22 ರಿಂದ 5.5 ದಶಲಕ್ಷ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ನೂರಕ್ಕೂ ಹೆಚ್ಚು ವಾನರ ಪ್ರಭೇದಗಳು ಬದುಕಿದ್ದವು. ಇಂದು ಐದು ಪ್ರಮುಖ ವಾನರ ಗುಂಪುಗಳ ಮಾತ್ರ ಭೂಮಿಯ ಮೇಲಿವೆ. ಆಧುನಿಕ ಮಾನವ ಮತ್ತು ಚಿಂಪಾಂಜಿಗಳ ಪೂರ್ವಜರು ವಿಕಾಸ ಹೊಂದಿದ್ದು ಆಫ್ರಿಕಾದಲ್ಲಿ ಹಾಗೂ ಬಹಳಷ್ಟು ಆಧುನಿಕ ಮಾನವನ ವಿಕಾಸ ಅದೇ ಖಂಡದಲ್ಲಿಯೇ ನಡೆದಿದೆ. ಆರರಿಂದ ಎರಡು ದಶಲಕ್ಷ ವರ್ಷಗಳ ಹಿಂದಿನ ಮೊದಲ ಮಾನವರ ಪಳೆಯುಳಿಕೆಗಳೆಲ್ಲಾ ಆಫ್ರಿಕಾದಲ್ಲೇ ಸಿಕ್ಕಿವೆ. ನಮ್ಮ ಪೂರ್ವಜರ ಪೂರ್ವಜರ ವಿಕಾಸವೂ ಆಫ್ರಿಕಾದಲ್ಲಿಯೇ ನಡೆದಿದೆಯೆಂದು ನಂಬಲಾಗಿದ್ದು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಬಹುಶಃ ಅವರ ವಿಕಾಸ ಯುರೇಶಿಯಾದಲ್ಲಿ ನಡೆದಿದೆ.

ಮೊಟ್ಟಮೊದಲ ನರವಾನರರು ಏಷಿಯಾದಿಂದ ಆಫ್ರಿಕಾ ಪ್ರವೇಶಿಸಿದ್ದು ಸುಮಾರು 2ರಿಂದ 1.7 ದಶಲಕ್ಷ ವರ್ಷಗಳ ಹಿಂದೆ. ಆದರೆ ಅವರು ಯೂರೋಪ್ ಪ್ರವೇಶಿಸಿದ್ದು ಇನ್ನೂ ತಡವಾಗಿ- ಸುಮಾರು ಒಂದು ದಶಲಕ್ಷ ವರ್ಷದಿಂದೀಚೆಗೆ. ಆಧುನಿಕ ಮಾನವ ಭೂಮಿಯ ಎಲ್ಲೆಡೆಗೆ ಪಸರಿಸಿದ್ದು ತೀರಾ ಇತ್ತೀಚೆಗೆ- ಆಸ್ಟ್ರೇಲಿಯಾ ಖಂಡಕ್ಕೆ ಸುಮಾರು ಅರವತ್ತು ಸಾವಿರ ವರ್ಷಗಳಿಂದೀಚೆಗೆ ಹಾಗೂ ಅಮೆರಿಕಾ ಖಂಡಕ್ಕೆ ಸುಮಾರು ಮುವ್ವತ್ತೈದು ಸಾವಿರ ವರ್ಷಗಳಿಂದೀಚೆಗೆ. ಕೃಷಿಯ ಪ್ರಾರಂಭ ಮತ್ತು ಮೊದಲ ನಾಗರಿಕತೆಗಳ ಪ್ರಾರಂಭ ಹತ್ತು ಸಾವಿರ ವರ್ಷಗಳಿಂದೀಚೆಗೆ ಪ್ರಾರಂಭವಾಗಿವೆ.

ಆನುವಂಶಿಕ ವಿಜ್ಞಾನಿಗಳ ಪ್ರಕಾರ ಮಾನವ ಆಫ್ರಿಕಾದ ವಾನರಗಳಿಂದ ಎಂಟರಿಂದ ಐದು ದಶಲಕ್ಷ ವರ್ಷಗಳ ಹಿಂದೆ ಪ್ರತ್ಯೇಕವಾಗಿ ವಿಕಾಸಹೊಂದಲಾರಂಭಿಸಿದ. ಇದುವರೆಗೆ ದೊರಕಿರುವ ಅತ್ಯಂತ ಪ್ರಾಚೀನ ಮಾನವ ಪಳೆಯುಳಿಕೆ ಸುಮಾರು ಆರು ದಶಲಕ್ಷ ವರ್ಷಗಳಷ್ಟು ಹಿಂದಿನದೆಂದು ಹೇಳಲಾಗಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಈಗ ಭೂಮಿಯ ಮೇಲಿರುವ ಎಲ್ಲ ಮನುಷ್ಯರೂ 2,29,000ದಿಂದ 1,30,000 ವರ್ಷಗಳ ಹಿಂದಿದ್ದ ಆನುವಂಶಿಕ ಪೂರ್ವಜರ ಸಂತತಿಯವರಾಗಿದ್ದಾರೆ.
ನಿಯಾಂಡರ್ತಲ್ ಮಾನವನ ಪಳೆಯುಳಿಕೆಗಳಿಂದ ಪಡೆದ ಡಿ.ಎನ್.ಎ. ಅಧ್ಯಯನದಿಂದ ನಿಯಾಂಡರ್ತಲ್ ಮತ್ತು ಆಧುನಿಕ ಮಾನವರಿಬ್ಬರೂ ಒಬ್ಬನೇ ಪೂರ್ವಿಕನನ್ನು ಹೊಂದಿದ್ದು ಅವರಿಂದ ಎಂಟರಿಂದ ಐದು ಲಕ್ಷ ವರ್ಷಗಳ ಹಿಂದೆ ಕವಲೊಡೆದು ಪ್ರತ್ಯೇಕವಾಗಿದ್ದಾರೆ ಹಾಗೂ ನಿಯಾಂಡರ್ತಲ್ ಮಾನವ ಸುಮಾರು ಐದು ಲಕ್ಷ ವರ್ಷಗಳ ಕಾಲ ಪ್ರತ್ಯೇಕವಾಗಿ ವಿಕಾಸಹೊಂದಿದ್ದಾನೆ.

ಆಧುನಿಕ ಮಾನವನ ವಿಕಾಸವಾದದ್ದು ಆಫ್ರಿಕಾದಲ್ಲಿ. ಅಲ್ಲಿಂದ ಹೊರ ಹೊರಟ ಆಧುನಿಕ ಮಾನವ ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದಾಗ ಅಲ್ಲಿ ಆಗಲೇ ನಿಯಾಂಡರ್ತಲ್ ಮಾನವ ಲಕ್ಷಾಂತರ ವರ್ಷಗಳಿಂದ ಬದುಕಿ ಬಾಳುತ್ತಿದ್ದ. ಆಧುನಿಕ `ವಿವೇಕಿ' ಮಾನವ ಅಲ್ಲಿಗೆ ಪ್ರವೇಶಿಸಿದ ೧೦,೦೦೦ ವರ್ಷಗಳಲ್ಲೇ ನಿಯಾಂಡರ್ತಲ್ ಮಾನವ ಸಂಪೂರ್ಣವಾಗಿ ನಿರ್ನಾಮ ಹೊಂದಿದ. ಹಲವಾರು ವಿಜ್ಞಾನಿಗಳ ಪ್ರಕಾರ ಆ ಎರಡೂ ಮಾನವ ಪ್ರಭೇದಗಳ ನಡುವಿನ ಸಂಘರ್ಷ ಅಥವಾ ಸ್ಪರ್ಧೆ ನಿಯಾಂಡರ್ತಲ್ ಮಾನವನ ನಿರ್ನಾಮಕ್ಕೆ ಕಾರಣವಾಗಿರಬಹುದು. ಆದರೂ ಅವರ ನಿರ್ನಾಮ ಇಂದಿಗೂ ವಿಜ್ಞಾನಿಗಳು ಅರಸುತ್ತಿರುವ ನಿಗೂಢವಾಗಿದೆ.

ನಿಯಾಂಡರ್ತಲ್ ಮಾನವನ ದೇಹ ರಚನೆ ಆಧುನಿಕ ಮಾನವರಂತೆಯೇ ಇದ್ದರೂ ಅವನ ತಡೆಬುರುಡೆ ಮತ್ತು ಇತರ ಅಸ್ಥಿಗಳಲ್ಲಿ ಗಮನಾರ್ಹ ಬದಲಾವಣೆಗಳಿತ್ತು. ಅವರ ತಲೆಬುರುಡೆ ಆಧುನಿಕ ಮಾನವನಿಗೆ ಹೋಲಿಸಿದಲ್ಲಿ ತುಸು ಹೆಚ್ಚು ಉದ್ದವಿತ್ತು (ಹಿಂದಿನಿಂದ ಮುಂಭಾಗಕ್ಕೆ), ತಗ್ಗಾದ ಹಣೆ ಹಾಗೂ ಹುಬ್ಬುಗಳ ಮೂಳೆಗಳು ಉಬ್ಬಿದ್ದವು. ಸ್ವಲ್ಪ ಚಪ್ಪಟೆಯೆನ್ನಿಸುವ ಆಧುನಿಕ ಮಾನವನ ಮುಖಕ್ಕೆ ಹೋಲಿಸಿದಲ್ಲಿ ನಿಯಾಂಡರ್ತಲ್ ಮಾನವನ ಮುಖ ಮುಂಚಾಚಿತ್ತು. ಅವರ ಕೆನ್ನೆಯ ಮೂಳೆಗಳು ಹಿಂದಕ್ಕೆ ಚಾಚಿದ್ದರಿಂದ ಮೂಗು ಹಾಗೂ ಹೊಳ್ಳೆಗಳು ದೊಡ್ಡದಾಗಿ ಕಾಣುತ್ತಿದ್ದವು. ಅವರ ದವಡೆಗಳು ಉದ್ದವಿದ್ದು ಬಲಿಷ್ಠವಾಗಿದ್ದವು. ನಿಯಾಂಡರ್ತಲ್‌ಗಳ ಸರಾಸರಿ ಎತ್ತರ 5 ಅಡಿ 3 ಅಂಗುಲ. ಹಿಮಯುಗದ ತೀವ್ರ ಚಳಿಗೆ ಹೊಂದಿಕೊಳ್ಳಲೋ ಏನೋ ದೇಹದಿಂದ ಶಾಖದ ನಷ್ಟವನ್ನು ತಡೆಯುವಂತೆ ಅವರ ದೇಹ ಹಾಗೂ ಕೈಕಾಲುಗಳು ಕುಳ್ಳಾಗಿದ್ದವು. ಆಧುನಿಕ ಮಾನವನ ದೇಹ ರಚನೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿರುವಂತೆ ನಿಯಾಂಡರ್ತಲ್ ಮಾನವನಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದವು.

ಅವನ ಆನುವಂಶಿಕ ಅಂಶಗಳ ವಿಶ್ಲೇಷಣೆಯಿಂದ ಅವನು ಕೆಂಪು ಕೂದಲು ಹೊಂದಿದ್ದ ಹಾಗೂ ಅವನ ಸರಾಸರಿ ಆಯಸ್ಸು ಕೇವಲ ಮುವ್ವತ್ತೈದು ವರ್ಷಗಳಷ್ಟೇ ಇತ್ತು. ಹದಿನೈದು ವರ್ಷ ವಯಸ್ಸಿಗೇ ಅವರು ವಯಸ್ಕರಾಗಿರುತ್ತಿದ್ದರು. ಸುಮಾರು 75,000 ವರ್ಷಗಳ ಹಿಂದೆ ತನ್ನ ನಿಯಾಂಡರ್ತಲ್ ಮಾನವನ ಸಾಮ್ರಾಜ್ಯ ಇಡೀ ಯೂರೋಪ್‌ನಿಂದ ನೈ‌ಋತ್ಯ ಏಷಿಯಾದವರೆಗೆ ಮತ್ತು ಅಟ್ಲಾಂಟಿಕ್ ಕರಾವಳಿಯಿಂದ ಪಶ್ಚಿಮ ಏಷಿಯಾದವರೆಗೆ ಹಾಗೂ ಪೂರ್ವ  ಮೆಡಿಟರೇನಿಯನ್‌ವರೆಗೂ ಹಬ್ಬಿತ್ತು. ಸುಮಾರು 34,000 ವರ್ಷಗಳಷ್ಟು ಹಳೆಯದಾದ ನಿಯಾಂಡರ್ತಲ್ ಮಾನವನ ಮೂಳೆಗಳ ಚೂರುಗಳು ದಕ್ಷಿಣ ಸೈಬೀರಿಯಾದಲ್ಲೂ ದೊರೆತಿವೆ. ಹಿಮಯುಗದ ತೀವ್ರ ಚಳಿಗೆ ಆತ ಯಶಸ್ವಿಯಾಗಿ ಹೊಂದುಕೊಂಡಿದ್ದ. ಹಿಮಯುಗದ ಅವಧಿಯಲ್ಲಿ ಇಡೀ ಯೂರೋಪ್ ಹಿಮದಿಂದ ಆವೃತವಾಗಿದ್ದಾಗ ಆತ ಚಳಿಯನ್ನಲ್ಲದೆ ತೀವ್ರ ಆಹಾರದ ಕೊರತೆಯನ್ನೂ ಸಹ ಎದುರಿಸಿದ್ದ. ಅಂತಹ ಚಳಿಯ ಸಮಯಗಳಲ್ಲಿ ಅವನು ಉತ್ತರದ ಸ್ಪೇನ್, ನೈ‌ಋತ್ಯ ಫ್ರಾನ್ಸ್ ಹಾಗೂ ದಕ್ಷಿಣದ ಯೂರೋಪ್‌ನಲ್ಲಿನ ಗುಹೆಗಳಲ್ಲಿ ರಕ್ಷಣೆ ಪಡೆದಿದ್ದ. ನೈ‌ಋತ್ಯ ಏಷಿಯಾದಲ್ಲಿನ ನಿಯಾಂಡರ್ತಲ್ ಮಾನವ ಶುಷ್ಕ ಮತ್ತು ಶೀತಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಾಗೂ ಅವನ ದೇಹ ರಚನೆ ಯೂರೋಪ್‌ನ ನಿಯಾಂಡರ್ತಲ್ ಮಾನವನಿಗಿಂತ ಹಗುರವಾಗಿ ನಿರ್ಮಿಸಲ್ಪಟ್ಟಿತ್ತು.

ಇದುವರೆಗೆ ದೊರೆತಿರುವ ಬಹುಪಾಲು ನಿಯಾಂಡರ್ತಲ್ ಮಾನವನ ಮೂಳೆಯ ಪಳೆಯುಳಿಕೆಗಳು ಗುಹೆಗಳಲ್ಲೇ ದೊರೆತಿವೆ. ಅಂದರೆ ಅವನು ಗುಹೆಗಳಲ್ಲಿ ಮಾತ್ರ ವಾಸಿಸುತ್ತಿದ್ದ ಎಂದಲ್ಲ, ಬಯಲುಗಳಲ್ಲಿನ ಮೂಳೆಗಳಿಗೆ ವಾತಾವರಣದಿಂದ ರಕ್ಷಣೆ ದೊರಕದೆ ಅವುಗಳ ಕುರುಹು ಅಳಿಸಿಹೋಗಿರಬಹುದು. ಅವನು ಕೃತಕ ಆಸರೆಗಳನ್ನು ನಿರ್ಮಿಸಿರುವು ಕುರುಹುಗಳೂ ದೊರೆತಿವೆ. ತಮಗಿಂತಲೂ ಹಿಂದಿದ್ದ ಮಾನವ ಪ್ರಭೇದಗಳ ಹಾಗೆ ನಿಯಾಂಡರ್ತಲ್ ಮಾನವರೂ ಸಹ ಬೇಟೆಗಾರರು ಹಾಗೂ ಕಾಡಿನಲ್ಲಿ ಆಹಾರ ಸಂಗ್ರಹಿಸುವವರಾಗಿದ್ದರು. ಅವರು ಸಣ್ಣ ಗುಂಪುಗಳ ಅಲೆಮಾರಿಗಳಾಗಿದ್ದು ಅವರು 5ರಿಂದ 25 ಜನರಿರುವ ಗುಂಪುಗಳಲ್ಲಿ ಇರುತ್ತಿದ್ದರು. ಬಹಳಷ್ಟು ಸಾರಿ ಒಂದು ಗುಂಪಿನ ನಿಯಾಂಡರ್ತಲ್ ಮಾನವರು ಮತ್ತೊಂದು ಗುಂಪಿನವರನ್ನು ತಮ್ಮ ಜೀವಿತಾವಧಿಯಲ್ಲಿ ಭೇಟಿಯಾಗುತ್ತಲೇ ಇರಲಿಲ್ಲ. ಅವರು ಎಲ್ಲ ರೀತಿಯ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡುವುದರಲ್ಲಿ ನುರಿತವರಾಗಿದ್ದರೆನ್ನುವ ಸೂಚನೆಗಳಿವೆ. ನಿಯಾಂಡರ್ತಲ್ ಸ್ಥಳಗಳಲ್ಲಿ ದೊರೆತಿರುವ ಮೂಳೆಗಳಿಂದ ಅವರು ಕಾಡು ದನಗಳು, ಜಿಂಕೆಗಳು, ಕುದುರೆಗಳು, ಹಿಮಜಿಂಕೆಗಳು, ಮೀನು ಹಾಗೂ ಇತರ ಜಲಚರಗಳನ್ನು ಬೇಟೆಯಾಡುತ್ತಿದ್ದರೆಂದು ತಿಳಿದುಬಂದಿದೆ.

ಅಷ್ಟಲ್ಲದೆ ಅವರು ದೊಡ್ಡ ಗಾತ್ರದ ಪ್ರಾಣಿಗಳಾದ ವೂಲಿ ಮ್ಯಾಮತ್ ಮತ್ತು ವೂಲಿ ಘೇಂಡಾಮೃಗಗಳನ್ನೂ ಸಹ ಬೇಟೆಯಾಡುತ್ತಿದ್ದರು. ಅವರ ಮೂಳೆಗಳ ವಿಶ್ಲೇಷಣೆಯಿಂದ ಬಹುಪಾಲು ಅವರ ಆಹಾರ ಮಾಂಸವೇ ಆಗಿತ್ತೆಂಬುದು ತಿಳಿದುಬರುತ್ತದೆ. ಬೇಟೆಯ ಜೊತೆಗೆ ಸತ್ತ ಪ್ರಾಣಿಗಳ ಮಾಂಸವನ್ನು ಸಹ ಅವರು ತಿನ್ನುತ್ತಿದ್ದರು. ನಿಯಾಂಡರ್ತಲ್ ವಾಸಸ್ಥಳಗಳಲ್ಲಿ ದೊರೆತಿರುವ ಬೀಜ ಹಾಗೂ ಸಸ್ಯದ ಉಳಿಕೆಗಳಿಂದ ಅವರು ಹಲವಾರು ಕಾಡು ಸಸ್ಯಗಳ ಉತ್ಪನ್ನಗಳನ್ನು ಸಹ ಸೇವಿಸುತ್ತಿದ್ದರೆಂದು ತಿಳಿದುಬಂದಿದೆ.

ನೈ‌ಋತ್ಯ ಫ್ರಾನ್ಸ್‌ನ ಗುಹೆಯೊಂದರಲ್ಲಿ ದೊರೆತ ಕೆಲವು ಮೂಳೆಗಳಿಂದ ಕೆಲವು ಪ್ರದೇಶಗಳ ನಿಯಾಂಡರ್ತಲ್ ಮಾನವ ನರಭಕ್ಷಕನಾಗಿರಬಹುದಾದ ಸಾಧ್ಯತೆಗಳಿವೆ. ಅಲ್ಲಿ ದೊರೆತ ಮಾನವರ ಮೂಳೆಗಳ ಮೇಲೆ ಮಾಂಸಕ್ಕಾಗಿ ಕಲ್ಲಿನ ಚಾಕುಗಳಿಂದ ಕೆರೆದ ಗುರುತುಗಳು ಕಂಡುಬಂದಿವೆ. ಕೆಲ ವಿಜ್ಞಾನಿಗಳು ಇದನ್ನು ಅಲ್ಲಗಳೆಯುತ್ತಾರೆ. ಇರಾಕ್ ಬಳಿಯ ಶಾನಿದಾರ್ ಗುಹೆಯಲ್ಲಿ ದೊರೆತ ಅಸ್ಥಿಪಂಜರಗಳಲ್ಲಿ ಕೆಲವುದರ ಮೂಳೆಗಳು ಮುರಿದಿದ್ದು, ತಲೆಬುರುಡೆಗೆ ಏಟಾಗಿದ್ದು ಆ ಗಾಯಗಳು ವಾಸಿಯಾಗಿರುವುದರ ಚಿಹ್ನೆಗಳು ಕಂಡುಬಂದಿವೆ. ಒಂದರ ಬಲಗೈ ಸಂಪೂರ್ಣ ಕತ್ತರಿಸಿ ಹೋಗಿದ್ದು ಆ ಮೊಂಡು ಕೈನಲ್ಲಿಯೇ ಆತ ಬದುಕಿದ್ದುದು ಕಂಡುಬರುತ್ತದೆ. ಅಂದರೆ ಆ ವ್ಯಕ್ತಿಗಳು ಗಾಯಗೊಂಡಿದ್ದಾಗ ಅವರಿಗೆ ಯಾರಾದರೂ ಆರೈಕೆ ಮಾಡಿರಲೇಬೇಕು. ಲಾ ಶಾಪೆಲ್ ಆಕ್ಸ್ ಸೇಂಟ್ಸ್ ಎಂಬಲ್ಲಿ ಸಿಕ್ಕ ಮುದುಕನ ಪಳೆಯುಳಿಕೆಗಳನ್ನು ಗಮನಿಸಿದಾಗ ಆತನಿಗೆ ಎದೆಗೂಡಿನ ಮೂಳೆ ಮುರಿದಿತ್ತು ಹಾಗೂ ಆತನಿಗೆ ಸೊಂಟದ ತೀವ್ರ ಕೀಲು ನೋವು ಮತ್ತು ಬೆನ್ನು ಹುರಿಯ ರೋಗ ಕಾಡಿತ್ತು. ಅಷ್ಟಲ್ಲದೆ ವಸಡಿನ ರೋಗದಿಂದಾಗಿ ಆತ ತನ್ನ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡಿದ್ದ. ಹಾಗಾಗಿ ಆತ ಬೇಟೆಯಾಡುವಂತಿರಲಿಲ್ಲ, ಸರಿಯಾಗಿ ಆಹಾರವನ್ನೂ ಅಗಿಯುವಂತಿರಲಿಲ್ಲ. ಅಷ್ಟಾದರೂ ಆತ ತನ್ನ ನಲವತ್ತನೇ ವಯಸ್ಸಿನವರೆಗೆ ಬದುಕಿದ್ದ. ಅಂತಹ ನಿಶ್ಶಕ್ತ ವ್ಯಕ್ತಿ ಇತರರ ಆರೈಕೆಯಿಲ್ಲದೆ, ಪೋಷಣೆಯಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನಿಯಾಂಡರ್ತಲ್ ಮಾನವ ನರಭಕ್ಷಕನಲ್ಲ ಅವನು ಅನುಕಂಪದ ಭಾವನೆಯ, ಇತರರಿಗೆ ಸಹಾಯ ಮಾಡಬೇಕೆನ್ನುವ ಹಾಗೂ ಸಾಮಾಜಿಕ ಅಂತಸ್ಸಾಕ್ಷಿಯ ಸಾಧ್ಯತೆಯುಳ್ಳ ವ್ಯಕ್ತಿ ಎನ್ನುತ್ತಾರೆ. ಅಲ್ಲದೆ ಅವರಿಗೆ ಕೆಲವು ಸಸ್ಯಗಳ ಔಷಧೀಯ ಗುಣಗಳೂ ಸಹ ತಿಳಿದಿದ್ದಿರಬಹುದು.

ನಿಯಾಂಡರ್ತಲ್ ಮಾನವ ಹೆಚ್ಚು ಕ್ರೂರಿ ಹಾಗೂ ಮೃಗೀಯ ವರ್ತನೆಯನ್ನು ಹೊಂದಿದ್ದ  ಎನ್ನುವ ತಪ್ಪು ಕಲ್ಪನೆಯಿಂದಲೇ ಅವನನ್ನು ಅದೇ ರೀತಿ ಚಿತ್ರಿಸಿರುವ ಚಲನಚಿತ್ರಗಳು ಸಹ ಬಂದಿವೆ. ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ಪರಸ್ಪರ ಕಾದಾಡುತ್ತಿರುವ 'ಆಧುನಿಕ ಹಾಗೂ ವಿವೇಕಿ ಮಾನವ'ರಾಗಿರುವ ನಮ್ಮ ನಡತೆಯನ್ನು ನಿಯಾಂಡರ್ತಲ್ ಮಾನವನಿಗೆ ಹೋಲಿಸಿಕೊಂಡಲ್ಲಿ ಯಾರು ಅತಿ ಹೆಚ್ಚು ಕ್ರೂರಿಗಳು ಹಾಗೂ ಮೃಗೀಯ ವರ್ತನೆಯುಳ್ಳವರು ಎನ್ನುವುದು ನಮಗೇ ತಿಳಿಯುತ್ತದೆ.

ನಿಯಾಂಡರ್ತಲ್ ಮಾನವ ಕಲ್ಲಿನ ಆಯುಧಗಳನ್ನು ತಯಾರಿಸುವುದರಲ್ಲಿ ನಿಪುಣನಾಗಿದ್ದ. ಅವುಗಳನ್ನು ತನ್ನ ಅಸ್ತಿತ್ವಕ್ಕಾಗಿ ಅತ್ಯಂತ ಕುಶಲತೆಯಿಂದ ಬಳಸುತ್ತಿದ್ದ. ತ್ರಿಕೋನಾಕಾರದ ಆಯುಧಗಳನ್ನು ಕೋಲಿನ ಒಂದು ಕೊನೆಗೆ ಕಟ್ಟಿ ಅದನ್ನು ಭೇಟೆಯ ಭರ್ಜಿಯಂತೆ ಬಳಸುತ್ತಿದ್ದ. ಪ್ರಾಣಿಗಳ ಮಾಂಸವನ್ನು ಕತ್ತರಿಸಿ ತೆಗೆಯಲು ಹಾಗೂ ಅವುಗಳ ಚರ್ಮವನ್ನು ಶುಚಿಗೊಳಿಸಿ ಧಿರಿಸಿನಂತೆ ಬಳಸಲು ಒಂದು ಕೊನೆ ಚೂಪಾಗಿರುವ ಹಾಗೂ ಮತ್ತೊಂದೆಡೆ ಕೈನಿಂದ ಹಿಡಿದುಕೊಳ್ಳಲು ಮೊಂಡಾಗಿರುವ ಆಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದ. ಅತ್ಯಂತ ಚೂಪಾದ ಅಂಚಿನ ಮಚ್ಚುಕತ್ತಿಯಂತಹ ಕಲ್ಲಿನ ಆಯುಧಗಳನ್ನು ಮೂಳೆಯನ್ನು ಒಡೆದು ಅದರೊಳಗಿನ ಮಜ್ಜೆಯನ್ನು ತೆಗೆಯಲು ಬಳಸುತ್ತಿದ್ದ. ಚೂಪಾದ ಕಲ್ಲಿನ ಆಯುಧಗಳನ್ನು ಬಳಸಿ ಕೋಲಿನ ಒಂದು ಕೊನೆಯನ್ನು ಚೂಪಾಗಿಸಿ ಅದನ್ನೂ ಸಹ ಭೇಟೆಗೆ ಭರ್ಜಿಯಂತೆ ಬಳಸುತ್ತಿದ್ದ. ಆದರೆ ನಿಯಾಂಡರ್ತಲ್ ಮಾನವ ಬಿಲ್ಲು ಮತ್ತು ಬಾಣಗಳನ್ನು ಅಭಿವೃದ್ಧಿಪಡಿಸಿಕೊಳ್ಳಲೇ ಇಲ್ಲ.

ನಿಯಾಂಡರ್ತಲ್ ಮಾನವ ಆಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದ ತಂತ್ರಜ್ಞಾನವನ್ನು ಪ್ರಾಕ್ತನಶಾಸ್ತ್ರಜ್ಞರು 'ಮೌಸ್‌ಟೆರಿಯನ್' ಎಂದು ಕರೆಯುತ್ತಾರೆ. ಅವರು ಕ್ರಮೇಣ ತೆಳುವಾದ, ಉದ್ದನೆ ಕಲ್ಲಿನ ಅಲಗುಗಳುಳ್ಳ ಆಯುಧಗಳನ್ನು ಹಾಗೂ ಜಿಂಕೆಯ ಕೊಂಬು ಹಾಗೂ ಪ್ರಾಣಿಗಳ ಮೂಳೆಗಳನ್ನೂ ಸಹ ಬಳಸಿ ಆಯುಧಗಳನ್ನು ತಯಾರಿಸುವ ಇನ್ನೂ ಹೆಚ್ಚಿನ ಮುಂಬರಿದ 'ಚಾಟೆಲ್‌ಪೆರ್ರೋನಿಯನ್' ತಂತ್ರಜ್ಞಾನವನ್ನೂ ಸಹ ಅಳವಡಿಸಿಕೊಂಡರೆಂದು ವಿಜ್ಞಾನಿಗಳು ಹೇಳುತ್ತಾರೆ. ಚಾಟೆಲ್‌ಪೆರ್ರೋನಿಯನ್ ತಂತ್ರಜ್ಞಾನ ಕಂಡುಬಂದಿರುವುದು 35,000 ವರ್ಷಗಳ ಹಿಂದಿನ ಪ್ರಾಕ್ತನ ಕುರುಹುಗಳಲ್ಲಿ. ಅಂದರೆ ನಿಯಾಂಡರ್ತಲ್ ಮಾನವ ಅದನ್ನು ಆಧುನಿಕ ಮಾನವನಿಂದ ಕಲಿತನೆ? ಆಧುನಿಕ ಮಾನವ ಯೂರೋಪ್ ಪ್ರವೇಶಿಸಿದ್ದು ಸಹ ಸುಮಾರು ಅದೇ ಸಮಯದಲ್ಲೇ ಹಾಗೂ ಅವರಲ್ಲಿ ಆಯುಧ ತಯಾರಿಕೆಯ ಆ ತಂತ್ರಜ್ಞಾನ ಆಗಲೇ ಅವರಲ್ಲಿತ್ತು. ಕೆಲವು ವಿಜ್ಞಾನಿಗಳು ಹೇಳುವಂತೆ ಆಧುನಿಕ ಮಾನವನ ಯೂರೋಪ್ ಪ್ರವೇಶದ ಸಾವಿರಾರು ವರ್ಷಗಳ ಮೊದಲೇ ನಿಯಾಂಡರ್ತಲ್ ಮಾನವ ಆ ತಂತ್ರಜ್ಞಾನವನ್ನು ಸ್ವಯಂ ತಾನೇ ಅಭಿವೃದ್ಧಿಪಡಿಸಿಕೊಂಡಿದ್ದ.

ಯೂರೋಪಿನಲ್ಲಿ ಕೆಲಸಮಯ ಇರುತ್ತಿದ್ದ ತೀವ್ರ ಚಳಿಯನ್ನು ತಡೆಯಲು ನಿಯಾಂಡರ್ತಲ್ ಮಾನವ ಬೆಚ್ಚನೆ ಹೊದಿಕೆಯ ಧಿರಿಸನ್ನು ಧರಿಸಿರಬೇಕಾಗಿತ್ತು. ಆದರೆ ಯಾವ ರೀತಿಯ ಧಿರಿಸು ಧರಿಸಿರುತ್ತಿದ್ದ ಎನ್ನುವುದರ ಬಗ್ಗೆ ತಿಳಿದುಬಂದಿಲ್ಲ. ಬಹುಪಾಲು ಆತ ತಾನು ಭೇಟೆಯಾಡಿದ ಪ್ರಾಣಿಗಳ ಚರ್ಮದಲ್ಲಿನ ಮಾಂಸವನ್ನು ಕಲ್ಲಿನ ಆಯುಧಗಳಿಂದ ಕೆರೆದು ತೆಗೆದು ಅದನ್ನು ಹೊದಿಕೆಯಂತೆ ಬಳಸುತ್ತಿರಬಹುದು ಹಾಗೂ ಅದನ್ನು ಮೈಮೇಲಿರುವಂತೆ ಮಾಡಲು ಮೂಳೆಯ ಮುಳ್ಳುಗಳನ್ನು ಬಳಸುತ್ತಿದ್ದ. ಇದುವರೆಗೆ ಸಿಕ್ಕಿರುವ ಕುರುಹುಗಳಿಂದ ಆತ ರಂಧ್ರವಿರುವ ಮೂಳೆಯ ಸೂಜಿಗಳನ್ನು ತಯಾರಿಸಿಲ್ಲ. ನಿಯಾಂಡರ್ತಲ್ ಮಾನವನಿಗೆ ಬೆಂಕಿಯನ್ನು ತಯಾರಿಸುವುದು ಹಾಗೂ ಅದನ್ನು ನಿಯಂತ್ರಿಸುವುದರ ಬಗ್ಗೆ ತಿಳಿದಿತ್ತು. ಹಲವಾರು ನಿಯಾಂಡರ್ತಲ್ ಸ್ಥಳಗಳಲ್ಲಿ ಬೂದಿಯ ಗುಡ್ಡೆಗಳು ಕಂಡುಬಂದಿವೆ.

ಸತ್ತವರನ್ನು ಹೂಳಲು ಪ್ರಾರಂಭಿಸಿದ ಮೊಟ್ಟಮೊದಲ ಮಾನವ ನಿಯಾಂಡರ್ತಲ್ ಮಾನವ. ಹಲವಾರು ಗುಹೆಯ ತಳಗಳಲ್ಲಿ, ಕಲ್ಲ ಆಸರೆಗಳಲ್ಲಿ ಮಣ್ಣಿನಲ್ಲಿ ಹೂತಿರುವ ಅಸ್ಥಿಗಳು ದೊರೆತಿವೆ. ಅವುಗಳ ಜೊತೆಯಲ್ಲಿ ಕಲ್ಲಿನ ಆಯುಧಗಳು ಹಾಗೂ ಕೆಲವು ಪ್ರಾಣಿಗಳ ಮೂಳೆಗಳು ಸಹ ದೊರೆತಿವೆ. ಇರಾಕ್‌ನಲ್ಲಿನ ಶಾನಿದಾರ್ ಗುಹೆಯಲ್ಲಿನ ಅಂತಹ ಗುಂಡಿಯೊಂದರಲ್ಲಿ ಅಧಿಕ ಪ್ರಮಾಣದಲ್ಲಿ ಪರಾಗ ಕಂಡುಬಂದಿದ್ದು ಸತ್ತವರನ್ನು ಹೂಳುವ ಸಮಯದಲ್ಲಿ ಹೂಗಳನ್ನು ಬಳಸಿರುವುದು ಕಂಡುಬರುತ್ತದೆ.

ಹಿಮಾಲಯಾದ ಪಶ್ಚಿಮ ತಪ್ಪಲಿನಲ್ಲಿ ದೊರೆತಿರುವ ಒಂದು ನಿಯಾಂಡರ್ತಲ್ ಶಿಶುವಿನ 'ಸಮಾಧಿ'ಯಲ್ಲಿ ಮಗುವಿನ ಸುತ್ತಲೂ ಆರು ಜೋಡಿ ಪರ್ವತ ಮೇಕೆಯ ಕೊಂಬುಗಳನ್ನು ಇರಿಸಲಾಗಿದೆ. ಹಲವಾರು ನಿಯಾಂಡರ್ತಲ್ 'ಸಮಾಧಿ'ಗಳಲ್ಲಿ ದೊರೆತಿರುವ ಅಸ್ಥಿಗಳನ್ನು ಗರ್ಭದಲ್ಲಿನ ಶಿಶುವಿನ ರೀತಿ ಕೈ ಮತ್ತು ಮೊಣಕಾಲುಗಳನ್ನು ಮಡಚಿರುವುದು ಕಂಡುಬಂದಿದೆ. ಅಂದರೆ ಅವನಿಗೆ ಸಾವಿನ ಬಗ್ಗೆ ಅರಿವಿತ್ತು ಎಂಬುದು ಇದರ ಅರ್ಥವೆ? ಕೆಲ ವಿಜ್ಞಾನಿಗಳು ಈ ರೀತಿಯ ಹೂಳುವಿಕೆಯನ್ನು 'ಅಂತ್ಯ ಸಂಸ್ಕಾರದ ಸಂಪ್ರದಾಯಗಳು' ಹಾಗೂ ಅವರಿಗೆ ಪುನರ್ಜನ್ಮದಲ್ಲಿ ನಂಬಿಕೆಯಿತ್ತು ಮತ್ತು ಅವರಿಗೆ ಸಾಂಕೇತಿಕ ರೂಪದಲ್ಲಿ ಆಲೋಚಿಸುವ ಸಾಮರ್ಥ್ಯವಿತ್ತು ಎನ್ನುತ್ತಾರೆ. ಆದರೆ ಇತರರು ಈ ರೀತಿ ಹೂತಿರುವುದು ಕೇವಲ ಸಾಂದರ್ಭಿಕ ಅಷ್ಟೆ. ಬಹುಶಃ ಅವರು ಸತ್ತವರು ಕೊಳೆತು ಇತರ ಮಾಂಸಾಹಾರಿ ಪ್ರಾಣಿಗಳನ್ನು ಆಕರ್ಷಿಸದಿರಲಿ ಎಂದು ಹೂತಿರಬಹುದಷ್ಟೇ ಹೊರತು ಅವು ಯಾವುದರ ಸಂಕೇತವೂ ಅಲ್ಲ ಎನ್ನುತ್ತಾರೆ. ದೊರೆತಿರುವ ಹೂಗಳ ಪರಾಗ ಬಹುಶಃ ಯಾವುದಾದರೂ ಇಲಿ ಹೆಗ್ಗಣಗಳಂತಹ ಪ್ರಾಣಿಗಳು ಮಣ್ಣನ್ನು ಕೊರೆದು ಸಂಗ್ರಹಿಸಿರಬಹುದು.

ನಿಯಾಂಡರ್ತಲ್ ಮಾನವನ ಬಗ್ಗೆ ಸಂಶೋಧನೆ ಪ್ರಾರಂಭವಾದಾಗಿನಿಂದಲೂ ವಿಜ್ಞಾನಿಗಳನ್ನು ಕಾಡುತ್ತಿರುವ ಜಿಜ್ಞಾಸೆ ಆತ ಭಾಷೆಯೊಂದನ್ನು ಹೊಂದಿದ್ದನೆ ಎಂಬುದು. ಭಾಷೆ ಆಲೋಚನೆಗಳನ್ನು ಸಾಂಕೇತಿಕವಾಗಿ ಸಂವಹಿಸುತ್ತದೆ. ನಿಯಾಂಡರ್ತಲ್ ಮಾನವ ಆ ರೀತಿಯ ಯಾವುದೇ ಚಿಹ್ನೆ, ಸಂಕೇತಗಳನ್ನು ಉಳಿಸಿಲ್ಲ. ಪ್ರಾಚೀನ ಆಧುನಿಕ ಮಾನವರಾದ ಕ್ರೋ ಮ್ಯಾಗ್ನನ್‌ಗಳ ಹಾಗೆ ಯಾವುದೇ ಗುಹಾ ಚಿತ್ರಗಳನ್ನು, ಆಕೃತಿಗಳನ್ನು ರಚಿಸಿಲ್ಲ. ಇಸ್ರೇಲ್‌ನ ಕೆಬಾರಾದಲ್ಲಿ ದೊರಕಿರುವ ಒಂದು ನಿಯಾಂಡರ್ತಲ್ ಮಾನವನ ಅಸ್ಥಿಪಂಜರದ ತಲೆಬುರುಡೆಯಲ್ಲಿ ಹೈಯಾಯ್ಡ್ ಮೂಳೆ ಇರುವುದು ಕಂಡುಬಂದಿದೆ. ಈ ಮೂಳೆ ನಾಲಿಗೆಯ ತಳದಲ್ಲಿ ಇರುತ್ತದೆ ಹಾಗೂ ಧ್ವನಿಪೆಟ್ಟಿಗೆಯ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಗಮನಿಸಿರುವ ವಿಜ್ಞಾನಿಗಳು ನಿಯಾಂಡರ್ತಲ್ ಮಾನವನಿಗೆ ಮಾತನಾಡಬಲ್ಲ ಸಾಮರ್ಥ್ಯವಿತ್ತು ಎನ್ನುತ್ತಾರೆ. ಅವರು ಮಾತನಾಡಬಲ್ಲವರಾಗಿದ್ದರು ಎನ್ನುವುದಕ್ಕೆ ಸಿಕ್ಕಿರುವ ಮತ್ತೊಂದು ಪುರಾವೆ ಎಂದರೆ ಡಿ.ಎನ್.ಎ.ನಲ್ಲಿನ ಫಾಕ್ಸ್‌ಪಿ2 ಎನ್ನುವ ವಂಶವಾಹಿ. ಮಾನವ ಮಾತನಾಡಲು ಈ ವಂಶವಾಹಿ ಅತ್ಯವಶ್ಯಕ ಎನ್ನುವ ವಿಜ್ಞಾನಿಗಳಿಗೆ ಇದು ನಿಯಾಂಡರ್ತಲ್ ಮಾನವನ ವಂಶವಾಹಿಯಲ್ಲಿ ಕಂಡುಬಂದಿದೆ. ಇದು ನಿಯಾಂಡರ್ತಲ್ ಮತ್ತು ಆಧುನಿಕ ಮಾನವ ಈ ಎರಡೂ ಪ್ರಭೇದಗಳ ಪೂರ್ವಜನಲ್ಲಿಯೇ ಇದು ರೂಪುಗೊಂಡಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಆದರೆ ನಿಯಾಂಡರ್ತಲ್ ಮಾನವನಲ್ಲಿ ನಾವು ಸಂಸ್ಕೃತಿ ಎಂದು ಕರೆಯಬಹುದಾದ ಯಾವುದೇ 'ಸಂಸ್ಕೃತಿ'ಯ ಕುರುಹುಗಳು ಅಥವಾ ಸಾಂಕೇತಿಕ ಅರ್ಥ ಕೊಡುವ ಯಾವುದೇ ವಸ್ತುಗಳು ಕಂಡುಬಂದಿಲ್ಲ. ನಿಯಾಂಡರ್ತಲ್ ಸ್ಥಳಗಳಲ್ಲಿ ಇದುವರೆಗೆ ದೊರಕಿರುವುದೆಂದರೆ ಅವನ ಕಲ್ಲಿನ ಆಯುಧಗಳ ಜೊತೆಗೆ ತೂತನ್ನು ಕೊರೆದಿರುವ ಪ್ರಾಣಿಗಳ ಹಲ್ಲು ಹಾಗೂ ಮೂಳೆಯ ಚೂರುಗಳು ಮತ್ತು ನಯವಾಗಿ ಪಾಲಿಶ್ ಮಾಡಿರುವ ಮ್ಯಾಮತ್‌ನ ದಂತದ ಚೂರು. ಬಹುಶಃ ಆತ ಅವುಗಳನ್ನು ಬಿಲ್ಲೆಗಳ ಹಾಗೆ ಕುತ್ತಿಗೆಗೆ ತೂಗುಹಾಕಿಕೊಂಡಿರಬಹುದು. ಅವನ ನಂತರದ ಯೂರೋಪ್‌ನ 'ವಾರಸುದಾರ'ರಾದ ಕ್ರೋ-ಮ್ಯಾಗ್ನನ್‌ಗಳೆಂದು ಕರೆಯಲ್ಪಡುವ ಆಧುನಿಕ ಮಾನವರು ಹುಲುಸಾಗಿ ಬಿಟ್ಟುಹೋಗಿರುವ ಗುಹಾ ಚಿತ್ರಗಳು, ಮನುಷ್ಯಾಕೃತಿಗಾಳು, ಕೆತ್ತನೆಗಳು, ಮಣಿ ಮುಂತಾದುವುಗಳ್ಯಾವುವೂ ನಿಯಾಂಡರ್ತಲ್ ಮಾನವನ ಕುರುಹುಗಳಲ್ಲಿ ಕಂಡುಬಂದಿಲ್ಲ. ಹಾಗಾಗಿ ಆತನಲ್ಲಿ ಅಂತರ್ಗತ ಬುದ್ಧಿಮತ್ತೆಯಿದ್ದರೂ ನಾವು ಇಂದು ಕರೆಯಲ್ಪಡುವ ಯಾವುದೇ ಸಾಂಕೇತಿಕ ಆಲೋಚನೆಗಳಾಗಲೀ ಅಥವಾ ಭಾಷೆಯಾಗಲೀ ಹೊಂದಿರಲಿಲ್ಲ.

ಕೆಲವು ವಿಜ್ಞಾನಿಗಳ ಪ್ರಕಾರ ನಿಯಾಂಡರ್ತಲ್ ಮಾನವನ ದೇಹ ಆಧುನಿಕ ಮಾನವನ ದೇಹದಂತೆ ನೀಳವಾಗಿರಲಿಲ್ಲ ಅಲ್ಲದೆ ಆತ ಬಳಸುತ್ತಿದ್ದ ಭೇಟೆಯ ಭರ್ಜಿಗಳು ದಪ್ಪವಾಗಿದ್ದು ದೂರದಿಂದ ಎಸೆಯಲು ಸಾಧ್ಯವಾಗದ ಕಾರಣ ಆತ ಭೇಟೆಯಾಡುವಾಗ ಪ್ರಾಣಿಗಳ ತೀರಾ ಹತ್ತಿರಕ್ಕೆ ಹೋಗುತ್ತಿದ್ದ ಅಲ್ಲದೇ ಇಡೀ ಗುಂಪು ಭೇಟೆಯಲ್ಲಿ ಸಮನ್ವಯತೆಯಿಂದ ತೊಡಗಬೇಕಾಗಿದ್ದುದರಿಂದ ಆತ ಪರಸ್ಪರ ಸಂವಹಿಸಿಕೊಳ್ಳಲೇ ಬೇಕಾಗಿತ್ತು. ಹಾಗಾಗಿ ಆತ ಭಾಷೆ ಅಥವಾ ಸಂಕೇತಗಳನ್ನು ಬಳಸುತ್ತಿದ್ದ. ಬಹುಶಃ ಆತನ ಭಾಷೆ ಪ್ರಾರಂಭಾವಸ್ಥೆಯ ಗುಟುರುಗಳನ್ನೊಳಗೊಂಡಿತ್ತು ಎನ್ನುತ್ತಾರೆ ಕೆಲವು ವಿಜ್ಞಾನಿಗಳು.
ಆಧುನಿಕ ಮಾನವನ 'ಸಾಂಸ್ಕೃತಿಕ ಸಾರ್ವಭೌಮತ್ವ'ವೇ ನಿಯಾಂಡರ್ತಲ್ ಮಾನವನ ಅವನತಿಗೆ ಕಾರಣವಾಗಿರಬಹುದೆಂದು ವಿಜ್ಞಾನಿ ವೀವರ್ ತಿಳಿಸುತ್ತಾನೆ. ಆಧುನಿಕ ಮಾನವ ಹೊಸ ಸಾಂಸ್ಕೃತಿಕ ಸಾಧ್ಯತೆಗಳನ್ನು ಪಡೆದುಕೊಂಡಂತೆ ಆತ ತನ್ನ ಸುತ್ತಲಿನ ಪರಿಸರವನ್ನು ತನಗಾಗಿ ಸಶಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಯಿತು ಎನ್ನುತ್ತಾನೆ ಆತ. ಐವತ್ತು ಸಾವಿರ ವರ್ಷದ ಹಿಂದಿನಿಂದಲೂ ನಿಯಾಂಡರ್ತಲ್ ಮಾನವ ಕಣ್ಮರೆಯಾಗಲು ಪ್ರಾರಂಭವಾದಂತೆ ಆಧುನಿಕ ಮಾನವನ 'ಕಲೆ ಮತ್ತು ಸಂಸ್ಕೃತಿ' ಸಮೃದ್ಧವಾಗುತ್ತಾ ಬಂದಿತು. ಅದೇ ಸಮಯದಿಂದಲೇ ನಮಗೆ ಗುಹಾ ಚಿತ್ರಗಳು, ಕಲ್ಲಿನ ಮೂರ್ತಿಗಳು, ಮಣಿ ಮುಂತಾದ ವಸ್ತುಗಳು ಕಾಣಸಿಗುತ್ತವೆ. ವೀವರ್ ಹೇಳುವಂತೆ, 'ಕಲೆ ಮಾನವನ ಅನ್ವೇಷಣೆಯ ಸಾಧ್ಯತೆಯ ಸೂಚಕ. ಇತರರ ಅನ್ವೇಷಣೆಯ ಆಧಾರದ ಮೇಲೆ ನೀವು ಹೊಸತನ್ನು ನಿರ್ಮಿಸುತ್ತಾ ಹೋದಲ್ಲಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಇದೇ ಆಧುನಿಕ ಮಾನವನು ಅತ್ಯಂತ ಯಶಸ್ವಿಯಾಗಲು ಹಾಗೂ ಆತ ಭೂಮಿಯಲ್ಲೆಡೆ ಪಸರಿಸಲು ಸಾಧ್ಯವಾಯಿತು'.
ಟ್ರಿಂಕಾಸ್ ಮುಂತಾದ ವಿಜ್ಞಾನಿಗಳು ಈ ವಾದವನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಾರೆ. ಅವರ ಪ್ರಕಾರ ನಿಯಾಂಡರ್ತಲ್ ಮತ್ತು ಆಧುನಿಕ ಮಾನವನ ನಡುವೆ ಯಾವುದೇ ರೀತಿಯ ಜೈವಿಕ ಅಥವಾ ಸಾಮಾಜಿಕ ವ್ಯತ್ಯಾಸಗಳಿರಲಿಲ್ಲ. 'ಅವರೂ ಕಲ್ಲಿನ ಆಯುಧ ಸಲಕರಣೆಗಳನ್ನು ಬಳಸುತ್ತಿದ್ದರು, ಆಧುನಿಕ ಮಾನವನೂ ಸಹ ಅವುಗಳನ್ನೇ ಬಳಸುತ್ತಿದ್ದ. ಅವರೂ ಸತ್ತವರನ್ನು ಹೂಳುತ್ತಿದ್ದರು, ಇವರೂ ಹೂಳುತ್ತಿದ್ದರು. ಅವರೂ ಯಶಸ್ವಿಯಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಇವರೂ ಆಡುತ್ತಿದ್ದರು. ಐವತ್ತು ಸಾವಿರದಿಂದ ಒಂದು ಲಕ್ಷ ವರ್ಷದ ಹಿಂದೆ ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇರಲಿಲ್ಲ. ಇದೊಂದು ರೀತಿಯ ಕಾಲ್ಚೆಂಡಿನಾಟವಿದ್ದಂತೆ. ಯಾರಾದರೊಬ್ಬರು ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಪಂದ್ಯದಲ್ಲಿ ಆಧುನಿಕ ಮಾನವ ಗೆದ್ದಿದ್ದಾನಷ್ಟೆ' ಎನ್ನುತ್ತಾರೆ ಟ್ರಿಂಕಾಸ್.

ನಿಯಾಂಡರ್ತಲ್ ಮಾನವನ ಮೂಲ
ನಿಯಾಂಡರ್ತಲ್ ಮಾನವನ ಬಗೆಗಿನ ಬಹುಪಾಲು ಎಲ್ಲಾ ಅಧ್ಯಯನಗಳು ಅವನು ಆಧುನಿಕ ಮಾನವನೊಂದಿಗಿನ ಸಂಬಂಧವನ್ನು ಶೋಧಿಸಲು ಪ್ರಯತ್ನಿಸುತ್ತಿವೆ. ಅವುಗಳಲ್ಲಿನ ಮೂರು ಸಿದ್ಧಾಂತಗಳು ಮುಖ್ಯವಾದುವು. ಮೊದಲನೆಯ ಸಿದ್ಧಾಂತ, ನಿಯಾಂಡರ್ತಲ್ ಮಾನವ ಮೊದಲು ವಿಕಾಸ ಹೊಂದಿದ ಹಾಗೂ ಆಧುನಿಕ ಮಾನವನಾದ ಹೋಮೋ ಸೇಪಿಯೆನ್ಸ್‌ನ ಅವನಿಂದ ವಿಕಾಸ ಹೊಂದಿದ್ದಾನೆ ಎನ್ನುವುದು. ಎರಡನೆಯದು, ನಿಯಾಂಡರ್ತಲ್ ಮಾನವ ಪ್ರಭೇದ ಆಧುನಿಕ ಮಾನವನಾದ ಹೋಮೋ ಸೇಪಿಯೆನ್ಸ್‌ನ ಉಪಪ್ರಭೇದವೆನ್ನುವುದು. ಅದನ್ನು ಹೋಮೋ ಸೇಪಿಯೆನ್ಸ್ ನಿಯಾಂಡರ್ತಲೆನ್ಸಿಸ್ ಎಂದೂ ಕರೆದರು. ಈ ಸಿದ್ಧಾಂತವನ್ನು ಬೆಂಬಲಿಸುವ ವಿಜ್ಞಾನಿಗಳ ಪ್ರಕಾರ ಈ ಎರಡೂ ಪ್ರಭೇದಗಳ ನಡುವೆ ಆನುವಂಶಿಕ ವಿನಿಮಯ ಸಾಧ್ಯವಾಗುತ್ತದೆ ಹಾಗೂ ಆ ರೀತಿಯ ಆನುವಂಶಿಕ ವಿನಿಮಯ ನಡೆದಿದೆ ಎನ್ನುವುದನ್ನು ಪಳೆಯುಳಿಕೆಗಳಲ್ಲಿ ಕಾಣಬಹುದು ಎನ್ನುತ್ತಾರೆ. ಮೂರನೆಯ ಸಿದ್ಧಾಂತದ ಪ್ರಕಾರ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವ ಇಬ್ಬರೂ ಎರಡು ಪ್ರತ್ಯೇಕ ಪ್ರಭೇದಗಳಿಗೆ ಸೇರಿದವರು ಹಾಗೂ ಇಬ್ಬರೂ ವಿಭಿನ್ನ ಪೂರ್ವಜರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಆಧುನಿಕ ಮಾನವ ನಿಯಾಂಡರ್ತಲ್ ಮಾನವನಿಗಿಂತ ಇನ್ನೂ ಹಿಂದೆಯೇ ವಿಕಾಸ ಹೊಂದಿದವನು ಮತ್ತು ಕ್ರಮೇಣ ಎರಡೂ ಪ್ರಭೇದಗಳು ಒಂದು ಪ್ರದೇಶದಲ್ಲಿ ಸೇರಿದಂತೆ ಆಧುನಿಕ ಮಾನವನ ಕೈ ಮೇಲಾಗಿ ಅವನು ನಿಯಾಂಡರ್ತಲ್ ಮಾನವನ ಸಂಪೂರ್ಣ ಅವನತಿಗೆ ಕಾರಣನಾದ.

ಒಟ್ಟಾರೆಯಾಗಿ ನಿಯಾಂಡರ್ತಲ್ ಮಾನವನ ಪ್ರಶ್ನೆಯನ್ನು ಈ ಕೆಳಗಿನ ಎರಡು ದೃಷ್ಟಿಕೋನಗಳಲ್ಲಿ ಯಾವುದಾದರೊಂದನ್ನು ಸದ್ಯಕ್ಕೆ ಒಪ್ಪಿಕೊಳ್ಳುವುದರ ಮೂಲಕ ಬಗೆಹರಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಮೊದಲನೆಯದು, ನಿಯಾಂಡರ್ತಲ್ ಮಾನವನನ್ನು ದೈಹಿಕವಾಗಿ ಆಧುನಿಕವಾಗಿರುವ ಮಾನವರು ಕ್ಷಿಪ್ರವಾಗಿ ಅವರ ಸ್ಥಾನ ಆಕ್ರಮಿಸಿ ಸಂಪೂರ್ಣವಾಗಿ ಅವರನ್ನು ನಿರ್ನಾಮ ಮಾಡಿ ಅವರ ಸ್ಥಾನ ಆಕ್ರಮಿಸಿದರು (ಇದನ್ನು ಪ್ರತಿಪಾದಿಸುವವರು ಆಧುನಿಕ ಮಾನವನ 'ಆಫ್ರಿಕಾದಿಂದ ಹೊರನಡೆದ' ಮಾನವನ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದವರು). ಇದು 'ಬದಲಿ' ಸಿದ್ಧಾಂತ. ಎರಡನೆಯದು, ಹಲವಾರು ಸ್ಥಳಗಳಲ್ಲಿ ನಿಯಾಂಡರ್ತಲ್ ಮಾನವ ಕ್ರಮೇಣ ಆಧುನಿಕ ಮಾನವನಾಗಿ ಸ್ವತಃ ರೂಪಾಂತರ ಹೊಂದಿದ. ಅಂದರೆ, ನಿಯಾಂಡರ್ತಲ್ ಮಾನವ ಆಧುನಿಕ ಮಾನವನೊಂದಿಗೆ ಆನುವಂಶಿಕವಾಗಿ 'ಸಮ್ಮಿಶ್ರ'ಗೊಂಡಿರುವವನು. ಮೊದಲನೆಯ ದೃಷ್ಟಿಕೋನದಲ್ಲಿ ನಿಯಾಂಡರ್ತಲ್ ಮಾನವನನ್ನು ಪ್ರತ್ಯೇಕ ಪ್ರಭೇದವೆಂದು ಪರಿಗಣಿಸಲಾಗಿದೆ. ಅಂದರೆ, ಆತ ಆಧುನಿಕ ಮಾನವನೊಂದಿಗೆ ಲೈಂಗಿಕ ವಿಧಾನಗಳ ಮೂಲಕ ಬೆರೆಯಲು ಸಾಧ್ಯವಿಲ್ಲ. ಆದರೆ ಎರಡನೆಯ ದೃಷ್ಟಿಕೋನದಲ್ಲಿ ನಿಯಾಂಡರ್ತಲ್ ಮಾನವನನ್ನು ಆಧುನಿಕ ಮಾನವ ಸೇರಿರುವ ಹೋಮೋ ಸೇಪಿಯೆನ್ಸ್ ಪ್ರಭೇದಕ್ಕೇ ಸೇರಿದವನು, ಆದರೆ ಅವನ ದೈಹಿಕ ಆಕಾರ ಇತ್ಯಾದಿಗಳು ಈಗಿನ ಮಾನವರಂತೆ ಪ್ರಾದೇಶಿಕ ವ್ಯತ್ಯಾಸಗಳನ್ನು ಹೊಂದಿವೆ ಅಥವಾ ಅತಿ ಹೆಚ್ಚೆಂದರೆ ಆತ ಹೋಮೋ ಸೇಪಿಯೆನ್ಸ್‌ನ ಉಪಪ್ರಭೇದವಾಗಿರಬಹುದು. ಆದರೆ ದೈಹಿಕ ವ್ಯತ್ಯಾಸಗಳ ಪರಿಗಣನೆಯಿಂದ ಈ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ.

ಯೂರೋಪ್‌ನಲ್ಲಿ ದೊರಕಿರುವ ಮಾನವನ ಅತ್ಯಂತ ಪ್ರಾಚೀನ ಕುರುಹು ಸಿಕ್ಕಿರುವುದು ಉತ್ತರ ಸ್ಪೇನ್‌ನಲ್ಲಿನ ಅಟಪುರ್ಕಾ ಬೆಟ್ಟಗಳಲ್ಲಿ ದೊರಕಿರುವ ಸುಮಾರು 12 ಲಕ್ಷ ವರ್ಷಗಳಷ್ಟು ಹಳೆಯದಾದ ಒಂದು ದವಡೆ ಮತ್ತು ಹಲ್ಲಿನ ಪಳೆಯುಳಿಕೆ. ಇಟಲಿಯ ಸೆಪ್ರಾನೊದಲ್ಲಿ ದೊರಕಿರುವ ತಲೆಬುರುಡೆಯ ಚಿಪ್ಪಿನ ಪಳೆಯುಳಿಕೆ ಸುಮಾರು 9 ಲಕ್ಷ ವರ್ಷಗಳಷ್ಟು ಹಳೆಯದು. ಅದೇ ಉತ್ತರ ಸ್ಪೇನ್‌ನಲ್ಲಿನ ಅಟಪುರ್ಕಾ ಬೆಟ್ಟಗಳಲ್ಲಿ ದೊರಕಿರುವ ಮತ್ತೊಂದು ಮಾನವ ಪಳೆಯುಳಿಕೆ ಸುಮಾರು 7.8 ಲಕ್ಷ ವರ್ಷಗಳಷ್ಟು ಹಳೆಯದು. ಈ ಎಲ್ಲಾ ಪಳೆಯುಳಿಕೆಗಳು ಮಾನವನ ವಿವಿಧ ಪ್ರಭೇದಗಳಿಗೆ ಸೇರಿರುವುದಾಗಿವೆ. ನಿಯಾಂಡರ್ತಲ್ ಮಾನವನಿಗೆ ಸೇರಿರಬಹುದೆನ್ನಲಾದ ಕುರುಹು ನಾಲ್ಕು ಲಕ್ಷದಿಂದ ಎರಡು ಲಕ್ಷ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಗಳಲ್ಲಿ ಕಂಡುಬಂದಿವೆ.

ಅವುಗಳಲ್ಲಿ ಹೋಮೋ ಹೀಡೆಲ್‌ಬರ್ಗೆನ್‌ಸಿಸ್ ಪ್ರಭೇದಕ್ಕೆ ಸೇರಿರಬಹುದಾದ ಪಳೆಯುಳಿಕೆಗಳೂ ಇವೆ. ಬಹುಪಾಲು ಪ್ರಾಗೈತಿಹಾಸಿಕ ಮಾನವಶಾಸ್ತ್ರಜ್ಞರ ಪ್ರಕಾರ ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವನ ಪೂರ್ವಜ ಹೋಮೋ ಹೀಡೆಲ್‌ಬರ್ಗೆನ್ಸಿಸ್. ಆ ಪೂರ್ವಜನಿಂದ ಆಧುನಿಕ ಮಾನವ ಆಫ್ರಿಕಾದಲ್ಲಿ ಮತ್ತು ನಿಯಾಂಡರ್ತಲ್ ಮಾನವ ಯೂರೋಪ್‌ನಲ್ಲಿ ವಿಕಾಸ ಹೊಂದಿರುವರು. ಹೋಮೋ ಸೇಪಿಯೆನ್ ಪ್ರಭೇದದ ಮೊದಲ ಆಧುನಿಕ ಮಾನವರನ್ನು ಕ್ರೋ-ಮ್ಯಾಗ್ನನ್‌ಗಳೆಂದು ಕರೆಯಲಾಗುತ್ತದೆ. ಅವರು ಸುಮಾರು ನಲವತ್ತು ಸಾವಿರ ವರ್ಷಗಳ ಹಿಂದೆ ಯೂರೋಪ್ ಪ್ರವೇಶಿಸಿದಾಗ ಆ ಪ್ರದೇಶದ ಏಕೈಕ ಮಾನವ ವಾಸಿಗಳಾಗಿದ್ದವರು ನಿಯಾಂಡರ್ತಲ್ ಮಾನವರು. ಅಲ್ಲಿ ಅವರಿಬ್ಬರೂ ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಆ ಪ್ರದೇಶವನ್ನು ಹಂಚಿಕೊಂಡು ಬದುಕಿದರು. ಅವರಿಬ್ಬರ ನಡುವೆ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ಅಂಶಗಳ ಹಂಚಿಕೆ ನಡೆಯಿತೆ? ಕೆಲ ವಿಜ್ಞಾನಿಗಳು ಹೇಳುವಂತೆ ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವ- ಮಾನವ ವಂಶವೃಕ್ಷದ ಎರಡು ಕೊಂಬೆಗಳಷ್ಟೆ ಹಾಗೂ ಮುಖ್ಯವಾಗಿ ದೈಹಿಕ ಚಹರೆಗಳಲ್ಲಿ ವಿಭಿನ್ನತೆಯನ್ನು ಹೊಂದಿರುವವರು, ಹಾಗಾಗಿ ಅವರಿಬ್ಬರ ನಡುವೆ ಲೈಂಗಿಕ ಕ್ರಿಯೆಯ ಮೂಲಕ ಸಂತಾನಾಭಿವೃದ್ಧಿ ಸಾಧ್ಯವಾಗುತ್ತದೆ. ಬಹುಶಃ ಇಂದಿನ ಯೂರೋಪಿಯನ್ ಮೂಲದ ಜನರಲ್ಲಿ ನಿಯಾಂಡರ್ತಲ್ ಮಾನವರ ವಂಶವಾಹಿಗಳಿರಬಹುದು. ಉದಾಹರಣೆಗೆ, ಅವರ ಕೆಂಪು ತಲೆಗೂದಲು ನಿಯಾಂಡರ್ತಲ್ ಮಾನವರ ಬಳುವಳಿಯೆ?

ಲೀಪ್‌ಜಿಗ್‌ನಲ್ಲಿನ ಮ್ಯಾಕ್ಸ್‌ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಎವೊಲ್ಯೂಶನರಿ ಆಂಥ್ರೊಪಾಲಜಿಯ ವಿಜ್ಞಾನಿ ಸ್ವಾಂಟೆ ಪಾಬೋರವರು 454 ಜೀವವಿಜ್ಞಾನಿಗಳ ಜೊತೆಗೂಡಿ ಪಳೆಯುಳಿಕೆಗಳ ತುಣುಕುಗಳಿಂದ ನಿಯಾಂಡರ್ತಲ್ ಮಾನವನ ಡಿ.ಎನ್.ಎ. ಅನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವ ಸುಮಾರು 6,90,000 ದಿಂದ 5,50,000ದಿಂದ ವರ್ಷಗಳ ಹಿಂದೆ ಒಂದೇ ಪೂರ್ವಜನಿಂದ ಕವಲೊಡೆದು ಪ್ರತ್ಯೇಕವಾಗಿ ವಿಕಾಸಹೊಂದಲು ಆರಂಭಿಸಿದರು. ತೀರಾ ಹಳೆಯದಾದ ಪಳೆಯುಳಿಕೆಗಳಲ್ಲಿನ ಡಿ.ಎನ್.ಎ. ವಿಶ್ಲೇಷಣೆ ಕೊಂಚ ಏರುಪೇರಾದ ಫಲಿತಾಂಶಗಳನ್ನು ಕೊಡಬಹುದಾದರೂ ಸಿಕ್ಕಿರುವ ಪಳೆಯುಳಿಕೆಗಳ ಅಧ್ಯಯನವೂ ಅವರ ಫಲಿತಾಂಶ ನಿಖರವಾಗಿದೆಯೆನ್ನುವಂತಿವೆ.

ಆಧುನಿಕ ಮಾನವನ, ನಿಯಾಂಡರ್ತಲ್ ಮಾನವನ ಚಿಂಪಾಂಜಿಗಳ ಆನುವಂಶಿಕ ಮಾಹಿತಿ ಭಂಡಾರವನ್ನು ತುಲನೆ ಮಾಡಿನೋಡಲಾಗಿದೆ. ನಿಯಾಂಡರ್ತಲ್ ಮಾನವನ ಬಹುಪಾಲು ಆನುವಂಶಿಕ ಮಾಹಿತಿ ಆಧುನಿಕ ಮಾನವನ ಆನುವಂಶಿಕ ಮಾಹಿತಿಯಂತೆಯೇ ಇದ್ದರೂ ಸಹ ಅದು ಕೆಲಭಾಗಗಳಲ್ಲಿ ಅದು ಚಿಂಪಾಂಜಿಗಳದನ್ನು ಹೋಲುತ್ತದೆ. ಬಹುಶಃ ಆ ಭಾಗಗಳಲ್ಲಿ ವಿಕಾಸದ ಹಾದಿಯಲ್ಲಿ ಆಧುನಿಕ ಮಾನವ 'ಮಾನವ'ನಾಗುವಂತಹ ಬದಲಾವಣೆಗಳನ್ನು ಪಡೆದುಕೊಂಡಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವನ ನಡುವಿನ ಸಂಬಂಧ ಅತ್ಯಂತ ಮುಖ್ಯವಾದುದು. ಏಕೆಂದರೆ ಈ ಸಂಬಂಧದ ಅಧ್ಯಯನದಲ್ಲಿಯೇ ನಿಯಾಂಡರ್ತಲ್ ಮಾನವನ ನಿರ್ನಾಮಕ್ಕೆ ಉತ್ತರವೂ ಸಿಗಬಹುದು. ಆಧುನಿಕ ಮಾನವನಲ್ಲಿನ ಆನುವಂಶಿಕ ಲಕ್ಷಣಗಳಿಗೆ ನಿಯಾಂಡರ್ತಲ್ ಮಾನವನ ಕೊಡುಗೆ ಏನಾದರೂ ಇದ್ದಲ್ಲಿ ಯೂರೋಪ್‌ನ ಜನಗಳಲ್ಲಿ ಆ ಲಕ್ಷಣಗಳು ಇರಬಹುದೆಂದು ವಿಜ್ಞಾನಿ ಸ್ವಾಂಟೆ ಪಾಬೊ ಮತ್ತು ಆತನ ಸಹ ವಿಜ್ಞಾನಿಗಳು ಯೂರೋಪ್‌ನಲ್ಲಿನ ಹಾಗೂ ಇತರ ವಿವಿಧ ಐದು ಗುಂಪುಗಳ ಜನರ ಡಿ.ಎನ್.ಎ.ನೊಂದಿಗೆ ಹೋಲಿಸಿ ನೋಡಿದರು. ಆದರೆ ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವನ ನಡುವೆ ಆನುವಂಶಿಕ ವಿನಿಮಯ ನಡೆದಿದ್ದರೂ ಆನುವಂಶಿಕ ಲಕ್ಷಣಗಳಿಗೆ ನಿಯಾಂಡರ್ತಲ್ ಮಾನವನ ಕೊಡುಗೆ ತೀರಾ ಗೌಣ ಎನ್ನುವ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಆಧುನಿಕ ಮಾನವ ಮತ್ತು ನಿಯಾಂಡರ್ತಲ್ ಮಾನವರ ನಡುವೆ ಲೈಂಗಿಕ ಕ್ರಿಯೆಯ ಮೂಲಕ ಆನುವಂಶಿಕ ಅಂಶಗಳ ಹಂಚಿಕೆ ನಡೆದಿರಬಹುದಾದ ಸಾಧ್ಯತೆಯನ್ನು ಬೆಂಬಲಿಸುವ ವಿಜ್ಞಾನಿಗಳು ತಮ್ಮ ವಾದವನ್ನು ಸಮರ್ಥಿಸಲು ಪಳೆಯುಳಿಕೆಗಳ ಮೊರೆ ಹೋಗುತ್ತಾರೆ.

ಅವರ ಪ್ರಕಾರ ತೀರಾ ಇತ್ತೀಚಿನ ನಿಯಾಂಡರ್ತಲ್ ಮಾನವನ ಪಳೆಯುಳಿಕೆಗಳು 'ಆಧುನಿಕ'ವೆನ್ನುವಂತೆ ತೋರುತ್ತವೆ ಹಾಗೂ ಆಧುನಿಕ ಮಾನವನ ಮೊದಲ ಪಳೆಯುಳಿಕೆಗಳಲ್ಲಿ 'ನಿಯಾಂಡರ್ತಲ್' ರೀತಿಯ ಅಂಶಗಳು ಕಂಡುಬರುತ್ತವೆ. ಆದರೆ ಈ ಆಧಾರವಷ್ಟೇ ಅವರಿಬ್ಬರ ನಡುವೆ ಆನುವಂಶಿಕ ಸಮ್ಮಿಶ್ರತೆ ನಡೆದಿದೆ ಎಂದು ಸಾಬೀತುಗೊಳಿಸುವುದಿಲ್ಲ.

ನಿಯಾಂಡರ್ತಲ್ ಮಾನವನ ಬಗ್ಗೆ ಹೆಚ್ಚು ಹೆಚ್ಚು ಅರಿತಷ್ಟು ಆತ ಹೋಮೋ ನಿಯಾಂಡರ್ತಲೆನ್ಸಿಸ್ ಎಂಬ ಪ್ರತ್ಯೇಕ ಪ್ರಭೇದವಾಗಿದ್ದ ಎನ್ನುವುದರ ಕುರುಹುಗಳೇ ಹೆಚ್ಚು ಹೆಚ್ಚು ದೊರಕುತ್ತಾ ಹೋಗುತ್ತವೆ. 1990ರ ದಶಕದಲ್ಲಿ ನಿಯಾಂಡರ್ತಲ್ ಮಾನವನ ಪಳೆಯುಳಿಕೆಗಳಿಂದ ಪಡೆದ ಡಿ.ಎನ್.ಎ. ಅನ್ನು ಪ್ರತ್ಯೇಕಿಸಿ ಅದನ್ನು ಆಧುನಿಕ ಮಾನವರ ಡಿ.ಎನ್.ಎ.ನೊಂದಿಗೆ ಹೋಲಿಸಿ ನೋಡಲಾಗಿದೆ. ಇದರ ಮೊದಲ ಫಲಿತಾಂಶಗಳಿಂದ ಅವರು ಆಧುನಿಕ ಮಾನವನಿಗಿಂತ ಆನುವಂಶಿಕವಾಗಿ ದೂರದವರೆಂದು ತಿಳಿದುಬಂದಿದೆ.

2005ರಲ್ಲಿ ವಿಜ್ಞಾನಿಗಳು ನಿಯಾಂಡರ್ತಲ್ ಮಾನವನ ಇಡೀ ಪೂರಕ ಆನುವಂಶಿಕ ಮಾಹಿತಿಯನ್ನು (ಜೀನೋಮ್) ಸರಣಿ ಮಾಡುವ ಪ್ರಾಯೋಜನೆಯನ್ನು ಕೈಗೆತ್ತಿಕೊಂಡರು. 2009ರಲ್ಲಿ ನಿಯಾಂಡರ್ತಲ್ ಮಾನವನ ಸಂಪೂರ್ಣ ಪೂರಕ ಆನುವಂಶಿಕ ಮಾಹಿತಿಯ ಮೊದಲ ಕರಡನ್ನು ಸಿದ್ಧಪಡಿಸಲಾಗಿದೆ. ಇದರ ಫಲಿತಾಂಶಗಳು ಸಹ ಈ ಎರಡು ಮಾನವ ಪ್ರಭೇದಗಳು ಆನುವಂಶಿಕ ಮಾಹಿತಿಯನ್ನು ಹಂಚಿಕೊಂಡಿವೆ ಎನ್ನುವುದನ್ನು ಸಮರ್ಥಿಸುವುದಿಲ್ಲ. ಅಲ್ಲದೆ ಈ ಎರಡು ಪ್ರಭೇದಗಳ ನಡುವಿನ ವಿಸ್ತಾರ ಆನುವಂಶಿಕ ವ್ಯತ್ಯಾಸ ನಿಯಾಂಡರ್ತಲ್ ಮಾನವ ಆಧುನಿಕ ಮಾನವನ ಪೂರ್ವಜನಾಗಿರಬಹುದು ಎನ್ನುವುದನ್ನೂ ಸಹ ಸೂಚಿಸುವುದಿಲ್ಲ ಹಾಗೂ ಅವನು ಒಂದು ಪ್ರತ್ಯೇಕ ಪ್ರಭೇದವಾಗಿದ್ದ ಎಂಬುದನ್ನೇ ಸಮರ್ಥಿಸುತ್ತವೆ. ಆದರೂ ಆಧುನಿಕ ಮಾನವನಲ್ಲಿ ಕಂಡು ಬಂದಿರುವ ಕನಿಷ್ಠ ಎರಡು ವಂಶವಾಹಿಗಳ ಮೂಲ ನಿಯಾಂಡರ್ತಲ್ ಮಾನವನೇ ಆಗಿರಬಹುದೆನ್ನುತ್ತಾರೆ ವಿಜ್ಞಾನಿಗಳು. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಲೇ ಇದೆ.

ನಿಯಾಂಡರ್ತಲ್ ಮಾನವ ಮತ್ತು ಆಧುನಿಕ ಮಾನವರಿಬ್ಬರೂ ಪ್ರತ್ಯೇಕ ಪ್ರಭೇದಗಳೆಂದಲ್ಲಿ ಈ  ಎರಡೂ ಪ್ರಭೇದಗಳು ಒಂದೇ ಪ್ರದೇಶದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಸ್ಪರ್ಧೆ ನಡೆಸಿದ್ದಾರೆ. ಈ ಸ್ಪರ್ಧೆ ಎಲ್ಲಿಗೆ ಮುಟ್ಟಿತೆನ್ನುವುದನ್ನು ಹೇಳುವುದು ಅಸಾಧ್ಯ. ಆದರೆ ಕ್ರಮೇಣ ಎಲ್ಲೆಲ್ಲಿ ಆಧುನಿಕ ಮಾನವ ಕಾಲಿಟ್ಟನೋ ಅಲ್ಲಲ್ಲಿಂದ ನಿಯಾಂಡರ್ತಲ್ ಮಾನವ ಕಣ್ಮರೆಯಾಗುತ್ತಾ ಹೋಗಿದ್ದಾನೆ. ಕೊನೆಗೆ ಆತ ಸಂಪೂರ್ಣವಾಗಿ ಕಣ್ಮರೆಯಾದನೆ? ಅಥವಾ ಆತ ಇನ್ನೂ ನಮ್ಮ ವಂಶವಾಹಿಗಳಲ್ಲಿ ನಮ್ಮೊಂದಿಗೆ ಜೀವಿಸಿದ್ದಾನೆಯೆ?

4 ಕಾಮೆಂಟ್‌ಗಳು:

Unknown ಹೇಳಿದರು...

The article on Neanderthal man has been well delivered. The topic is made interesting and make the readers wait for more discoveries.
Thank you Balakrishna for sending the same.
The 3rd sex in Thailand is another issue which you raked with curiosity to readers.
Keep writing.

Ananda Padebettu, Mumbai ಹೇಳಿದರು...

Balakrishna, thank you for a wonderful article on Neanderthal man. I liked it so much and it generated more curiosity in me to know about the end of another breed like us (Modern Human being). It is still a question mark about the extinction of one of the rare breeds among Humans. However your article has put lot of light on the fact in very useful way. Keep writing.

My sincere thanks to DP as well, for forwarding an enlightening article on my favourite issue.

Regards,
Ananda Padebettu,
Mumbai

Unknown ಹೇಳಿದರು...

ಆಂಥ್ರೂಪಾಲಜಿ ಸಂಶೋಧನಾ ನೆಲೆಯಲ್ಲಿ ಬರೆದಿರುವ ಲೇಖನ, ಸಮಾಜವಿಜ್ಞಾನಿಗಳಿಗೆ, ಒಂದು ಉತ್ತಮ ಆಕರವಾಗಿದೆ. ಅಭಿನಂದನೆಗಳು ಸರ್

A S Prabhakar ಹೇಳಿದರು...

Nice write up sir