ಬುಧವಾರ, ಏಪ್ರಿಲ್ 15, 2015

`ಸಂವಾದ' ಪತ್ರಿಕೆಯ ಫೆಬ್ರವರಿ 2015ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 37ನೇ ಕಂತು




ಘರ್ ವಾಪಸಿ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಒಂದು ದಿನ ವಾಯು ವಿಹಾರಕ್ಕೆಂದು ಹೊರಟಿದ್ದಾಗ ಬೌದ್ಧರ ಆಶ್ರಮದ ಮುಂದೆ ಹಾದು ಹೋಗಬೇಕಾಯ್ತು. ಆಶ್ರಮದ ಮುಂದೆ ಫಲಕವೊಂದರ ಮೇಲೆ `ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವವರಿಗೆ ರೂ.25000/- ನೀಡಲಾಗುವುದು’ ಎಂದು ಬರೆದಿತ್ತು. ನಸ್ರುದ್ದೀನನನಿಗೆ ಹಣ ಸಿಗುವುದಾದರೆ ಏಕೆ ಮತಾಂತರ ಹೊಂದಬಾರದು ಎನ್ನಿಸಿತು. ನಸ್ರುದ್ದೀನ್ ಆಶ್ರಮದ ಒಳಕ್ಕೆ ಹೋದ. ಅಬ್ದುಲ್ಲಾ ಹೊರಗೆ ಕಾಯುತ್ತಿದ್ದ. ಸ್ವಲ್ಪ ಸಮಯ ಕಳೆದ ನಂತರ ನಸ್ರುದ್ದೀನ್ ಹೊರಬಂದ.
`ಏನು ನಸ್ರುದ್ದೀನ್? ಮತಾಂತರ ಆಗಿಬಿಟ್ಟೆಯಾ?’ ಕೇಳಿದ ಅಬ್ದುಲ್ಲಾ.
‘ಹೌದು’ ಎಂದ ನಸ್ರುದ್ದೀನ್.
`ಇಪ್ಪತ್ತೈದು ಸಾವಿರ ಹಣ ಕೊಟ್ಟರೆ?’ 
`ಹಣ? ಹಣ ಏಕೆ ಬೇಕು? ಆಸೆಯೇ ದುಃಖಕ್ಕೆ ಕಾರಣವಲ್ಲವೆ?’ ಕೇಳಿದ ನಸ್ರುದ್ದೀನ್.

ಹಂದಿ
ನಸ್ರುದ್ದೀನನ ಪಕ್ಕದ ಮನೆಯಲ್ಲಿ ಸಲೀಂ ಒಬ್ಬ ಅತ್ಯಂತ ಜಗಳಗಂಟ ವ್ಯಕ್ತಿಯಿದ್ದ. ಆತ ಮತ್ತು ನಸ್ರುದ್ದೀನ್ ಒಂದು ದಿನ ಯಾವುದೋ ವಿಷಯಕ್ಕೆ ವಿಪರೀತ ಜಗಳವಾಡಿದರು. ನಸ್ರುದ್ದೀನ್ ತನ್ನನ್ನು ಹಂದಿ ಎಂದು ಕರೆದ ಎಂದು ಹೇಳಿ ಸಲೀಂ ನ್ಯಾಯಾಲಯದ ಮೊರೆ ಹೊಕ್ಕ. ಇಬ್ಬರ ವಾದಗಳನ್ನು ಆಲಿಸಿದ ನ್ಯಾಯಾಧೀಶರು ನಸ್ರುದ್ದೀನನದೇ ತಪ್ಪು ಎಂದು ತೀರ್ಮಾನಿಸಿ ಸಲೀಂಗೆ ದಂಡ ನೀಡಲು ಆದೇಶಿಸಿದರು.
`ಅಂದರೆ ನಾನು ಇನ್ನು ಮೇಲೆ ಸಲೀಂನನ್ನು ಹಂದಿ ಎಂದು ಕರೆಯಬಾರದಲ್ಲವೇ?’ ನಸ್ರುದ್ದೀನ್ ನ್ಯಾಯಾಧೀಶರನ್ನು ಕೇಳಿದ.
`ಹೌದು’ ಎಂದರು ನ್ಯಾಯಾಧೀಶರು.
`ಹಾಗಾದರೆ ನಾನು ಯಾವುದಾದರೂ ಹಂದಿಯನ್ನು ಸಲೀಂ ಎಂದು ಕರೆಯಬಹುದೆ?’ ನಸ್ರುದ್ದೀನ್.
`ಕರೆಯಬಹುದು. ಅದೇನೂ ಅಪರಾಧವಲ್ಲ’ ನ್ಯಾಯಾಧೀಶರು ಹೇಳಿದರು.
ನಸ್ರುದ್ದೀನ್ ನೇರ ಸಲೀಂನೆಡೆಗೆ ಹೋಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, `ಹೋಗಿ ಬರುತ್ತೇನೆ ಸಲೀಂ’ ಎಂದು ಹೇಳಿ ಹೊರಹೊರಟ.

ಪವಾಡ
ನಸ್ರುದ್ದೀನ್ ಮೂಳೆಗಳ ಕಾಯಿಲೆಗಳನ್ನು ವಾಸಿ ಮಾಡುವ ವೈದ್ಯನೆಂದು ಖ್ಯಾತನಾಗಿದ್ದ. ಅವನ ದವಾಖಾನೆಯ ಮುಂದೆ ಚಿಕಿತ್ಸೆಗಾಗಿ ಜನ ನೆರೆದಿರುತ್ತಿದ್ದರು. ಅದನ್ನು ಕೇಳಿ ಪಕ್ಕದ ಊರಿನ ಒಬ್ಬಾಕೆ ಚಿಕಿತ್ಸೆಗೆಂದು ಬಂದಳು. ಹೊರಗಡೆ ಸಾಲಿನಲ್ಲಿ ಕಾಯುತ್ತಿದ್ದ ರೋಗಿಗಳ ಜೊತೆ ತಾನೂ ಕುಳಿತಳು. ಬೆನ್ನು ಪೂರಾ ಬಾಗಿದ ಒಬ್ಬ ಹೆಂಗಸು ಊರುಗೋಲು ಹಿಡಿದು ನಡೆಯುತ್ತಾ ಒಳಕ್ಕೆ ಹೋದಳು. ಸ್ವಲ್ಪ ಹೊತ್ತಿಗೆ ಆಕೆ ನಡೆಯುತ್ತಾ ಹೊರಬಂದಳು. ಈಗ ಆಕೆಯ ಬೆನ್ನು ಬಾಗಿರಲಿಲ್ಲ. ನೇರವಾಗಿ ನಡೆಯುತ್ತಿದ್ದಳು. ಪಕ್ಕದ ಊರಿನ ಹೆಂಗಸು ಅದನ್ನು ಕಂಡು ಇದು ಪವಾಡವೇ ಇರಬೇಕೆಂದು ಆ ಮಹಿಳೆಯನ್ನು ನಿಲ್ಲಿಸಿ,
`ನೀವು ಒಳಕ್ಕೆ ಹೋದಾಗ ನಿಮ್ಮ ಬೆನ್ನು ಪೂರಾ ಬಾಗಿತ್ತು. ಈಗ ನೇರ ನಡೆಯುತ್ತಿದ್ದೀರಿ. ಈ ವೈದ್ಯರ ಕೈ ಗುಣ ಪವಾಡವೇ ಇರಬೇಕು. ಏನು ಚಿಕಿತ್ಸೆ ನೀಡಿದರು?’ ಎಂದು ಕೇಳಿದಳು.
`ಹೇ ಏನಿಲ್ಲಾ. ಉದ್ದನೆಯ ಊರುಗೋಲು ನೀಡಿದ್ದಾರೆ ಅಷ್ಟೆ’ ಹೇಳಿದಳು ಆ ಮಹಿಳೆ.

ಮೇಧಾವಿ ದರ್ಜಿ
ದರ್ಜಿ ನಸ್ರುದ್ದೀನನ ಬಳಿ ಹೊಸದೊಂದು ಅಂಗಿ ಹೊಲೆಯಲು ಒಬ್ಬಾತ ನೀಡಿದ್ದ. ಅಂಗಿ ಕೊಂಡೊಯ್ಯಲು ಬಂದಾತ ಅದನ್ನು ತೊಟ್ಟು,
`ನಸ್ರುದ್ದೀನ್ ನೋಡು ಈ ಬಲ ತೋಳು ಉದ್ದವಾಗಿದೆ. ಎರಡು ಅಂಗುಲ ಕಡಿಮೆ ಮಾಡು’ ಎಂದು ಕೇಳಿದ.
`ಬೇಕಿಲ್ಲ. ನಿಮ್ಮ ಬಲ ಭುಜ ಸ್ವಲ್ಪ ಮೇಲಕ್ಕೆ ಎತ್ತಿಕೊಳ್ಳಿ ಅಂಗಿಯ ತೋಳು ಒಳಕ್ಕೆ ಹೋಗುತ್ತದೆ ಎಂದ’ ನಸ್ರುದ್ದೀನ್.
`ಆಯಿತು. ಆದರೆ ಈಗ ಅಂಗಿಯ ಕಾಲರ್ ಹಿಂದಕ್ಕೆ ಹೋಗಿದೆ ನೋಡು’
`ಅದೇನೂ ಸಮಸ್ಯೆಯಲ್ಲ. ಈಗ ನಿಮ್ಮ ತಲೆಯನ್ನು ಕೊಂಚ ಹಿಂದಕ್ಕೆ ಬಾಗಿಸಿಕೊಳ್ಳ್ಳಿ. ನೋಡಿ ಈಗ ಕಾಲರ್ ಸರಿಯಾಗಿ ಕೂತಿದೆ’ ಹೇಳಿದ ದರ್ಜಿ ನಸ್ರುದ್ದೀನ್.
`ಆದರೆ ಈಗ ಅಂಗಿಯ ಎಡ ತೋಳು ಕೆಳಕ್ಕೆ ಜಾರಿದೆಯೆಲ್ಲಾ’
`ತಲೆ ಕೆಡಿಸಿಕೊಳ್ಳಬೇಡಿ. ಈಗ ಎಡ ತೋಳನ್ನು ಅರ್ಧ ಮಡಚಿ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳಿ. ನೋಡಿ ಈಗ ಸರಿಯಾಯಿತು’ ಎಂದ ನಸ್ರುದ್ದೀನ್.
ಸಂತೃಪ್ತನಾದ ಆ ವ್ಯಕ್ತಿ ಹಾಗೆಯೇ ಆ ಅಂಗಿ ಧರಿಸಿ ಹೊರ ಹೊರಟ. ತನ್ನ ದೇಹದ ವಿಚಿತ್ರ ಭಂಗಿಯಿಂದ ನಡೆಯುತ್ತಿದ್ದ ಆತನನ್ನು ಕಂಡ ಕೆಲವರು,
`ಯಾರೋ ಪಾಪ ವಿಕಲಾಂಗ’ ಎಂದರು.
`ಆ ವಿಕಲಾಂಗತೆಗೆ ಸರಿಯಾಗಿ ಹೊಂದುವಂತೆ ಅಂಗಿಯನ್ನು ಹೊಲಿದುಕೊಟ್ಟಿದ್ದಾನಲ್ಲಾ, ಆ ದರ್ಜಿ ಮೇಧಾವಿಯೇ ಇರಬೇಕು’ ಎಂದರು ಇನ್ನು ಕೆಲವರು.

ಗಂಡ ಕಳೆದುಹೋಗಿದ್ದಾನೆ
ನಸ್ರುದ್ದೀನನ ಹೆಂಡತಿ ಫಾತಿಮಾ ತನ್ನ ಗಂಡ ಎಲ್ಲಿಗೋ ಹೋದವನು ವಾಪಸ್ಸು ಬಂದಿಲ್ಲ. ಅವನನ್ನು ಹುಡುಕಿಕೊಡಿ ಎಂದು ಪೋಲೀಸ್ ಠಾಣೆಗೆ ದೂರು ನೀಡಲು ಹೋದಳು. 
`ಆಯಿತು. ನಿನ್ನ ಗಂಡ ಹೇಗಿದ್ದಾನೆ ಎಂಬ ವಿವರಗಳನ್ನು ಹೇಳು ಬರೆದುಕೊಳ್ಳುತ್ತೇನೆ’ ಎಂದ ಪೋಲೀಸಿನವ.
`ಎತ್ತರ ಆರು ಅಡಿ, ಸ್ಫುರದ್ರೂಪಿ, ಅಜಾನುಬಾಹು. ಕಪ್ಪನೆ ಮಿರುಗುವ ಕೂದಲು, ನಕ್ಕರೆ ಗುಳಿ ಬೀಳುವ ಕೆನ್ನೆ...’ ಫಾತಿಮಾ ಇನ್ನೂ ಏನೇನೋ ಹೇಳುತ್ತಿದ್ದಳು, ಆದರೆ ಪೋಲೀಸಿನವ ನಿಲ್ಲಿಸಿದ. ಏಕೆಂದರೆ ಅವನಿಗೆ ನಸ್ರುದ್ದೀನನ ಪರಿಚಯವಿತ್ತು ಹಾಗೂ ನಸ್ರುದ್ದೀನ್ ಹೇಗಿದ್ದ ಎಂಬುದೂ ತಿಳಿದಿತ್ತು.
`ಅಲ್ಲಮ್ಮಾ, ನಿನ್ನ ಗಂಡನಿರುವುದು ನಾಲ್ಕೂವರೆ ಅಡಿ ಎತ್ತರ, ಬಕ್ಕ ತಲೆ, ಬೊಜ್ಜು ಹೊಟ್ಟೆ, ಸೊಣಕಲು ದೇಹ. ಆದರೆ ನೀನು ಹೇಳುತ್ತಿರುವ ವಿವರಗಳು ಬೇರೆಯೇ ಇವೆಯಲ್ಲಾ?’ ಕೇಳಿದ ಪೋಲೀಸಿನವ.
`ನನಗೆ ಗೊತ್ತು’ ಹೇಳಿದಳು ಫಾತಿಮಾ, `ಆದರೆ ಆ ಗಂಡ ಪುನಃ ಯಾರಿಗೆ ಬೇಕು?’

ಬುದ್ಧಿ ಬೇಕೆ? ಹಣ ಬೇಕೆ?
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಬೆಟ್ಟದ ಮೇಲೆ ಕೂತು ಧ್ಯಾನ ತಪ್ಪಸ್ಸು ಮಾಡುತ್ತಿದ್ದರು. ದೇವತೆಯೊಬ್ಬಳು ಪ್ರತ್ಯಕ್ಷಳಾಗಿ,
`ಏನಾದರೂ ಒಂದೇ ಒಂದು ವರ ಕೊಡಬಲ್ಲೆ. ಬುದ್ಧಿವಂತಿಕೆ ಬೇಕೆ ಅಥವಾ ಹಣ ಬೇಕೆ?’ ಎಂದು ನಸ್ರುದ್ದೀನನನ್ನು ಕೇಳಿದಳು.
ತಕ್ಷಣ ನಸ್ರುದ್ದೀನ್ `ಬುದ್ಧಿವಂತಿಕೆ’ ಎಂದ. ಆಯಿತು ಎಂದ ದೇವತೆ ನಸ್ರುದ್ದೀನನಿಗೆ ಬುದ್ಧಿವಂತಿಕೆಯ ವರ ನೀಡಿ ಮಾಯವಾದಳು.
ಸ್ವಲ್ಪ ಸಮಯದ ನಂತರ ಅಬ್ದುಲ್ಲಾ ಕೇಳಿದ,
`ಹೇಗಿದೆ ನಸ್ರುದ್ದೀನ್? ಈಗ ಬುದ್ಧಿವಂತಿಕೆ ಪಡೆದುಕೊಂಡ ಮೇಲೆ ಏನನ್ನಿಸುತ್ತಿದೆ?’ 
`ಹಣ ಕೇಳಬೇಕಾಗಿತ್ತು ಎನ್ನಿಸುತ್ತಿದೆ’ ಹೇಳಿದ ನಸ್ರುದ್ದೀನ್.

ಕುರುಡ
ನಸ್ರುದ್ದೀನ್ ಒಂದು ದಿನ ಸಂತೆಯಲ್ಲಿ ವ್ಯಾಪಾರ ಮುಗಿಸಿ ಸಂಜೆ ಮನೆಗೆ ಹಿಂದಿರುಗುವಾಗ ಗಡಂಗಿಗೆ ಹೋಗೋಣವೆನ್ನಿಸಿತು. ಆದರೆ ತನ್ನ ಕತ್ತೆಯನ್ನು ಹೊರಗೆ ಕಟ್ಟಿಹಾಕಿ ಒಳಹೋದರೆ ಯಾರಾದರೂ ಅದನ್ನು ಕದ್ದುಬಿಡಬಹುದೆಂದು ಒಂದು ಉಪಾಯ ಆಲೋಚಿಸಿದ. ನೇರ ತನ್ನ ಕತ್ತೆಯನ್ನು ಗಡಂಗಿನೊಳಕ್ಕೇ ಕರೆದೊಯ್ದ. ಗಡಂಗಿನವ,
`ಏನದು ನಿನ್ನ ಜೊತೆಯಲ್ಲಿರುವುದು? ಪ್ರಾಣಿಗಳಿಗೆ ಪ್ರವೇಶವಿಲ್ಲ ಎಂದು ತಿಳಿದಿಲ್ಲವೆ?’ ಎಂದು ಗದರಿಸಿದ.
`ನಾನು ಕುರುಡ ಸ್ವಾಮಿ. ಇದು ನನಗೆ ದಾರಿ ತೋರಿಸುವ ನಾಯಿ. ನಾನು ಎಲ್ಲಿ ಹೋದರೂ ಅದು ನನ್ನ ಜೊತೆಯಲ್ಲೇ ಇರುತ್ತದೆ’ ಎಂದ ನಸ್ರುದ್ದೀನ್.
`ನಾಯಿ? ತಮಾಷೆ ಮಾಡುತ್ತಿದ್ದೀಯಾ? ಇದು ನಾಯಿಯಲ್ಲ ಕತ್ತೆ’ ಎಂದ ಗಡಂಗಿನವ.
`ನೋಡಿ ಈ ಕುರುಡನಿಗೆ ಎಂಥಾ ಮೋಸ ಮಾಡಿದ್ದಾರೆ. ನಾಯಿಯೆಂದು ಕತ್ತೆಯನ್ನು ಕೊಟ್ಟಿದ್ದಾರೆ’ ಹೇಳಿದ ನಸ್ರುದ್ದೀನ್.

ಜೂಜು
ನಸ್ರುದ್ದೀನ್ ಕಷ್ಟ ಪಟ್ಟು ಸಂಪಾದಿಸಿದ್ದ ಹತ್ತು ಸಾವಿರ ರೂಪಾಯಿಯನ್ನು ಮಗಳ ಮದುವೆಗೆ ಉಳಿಸೋಣವೆಂದು ಬ್ಯಾಂಕಿಗೆ ಕಟ್ಟಲು ಹೋದ. ಬ್ಯಾಂಕಿನ ಗುಮಾಸ್ತನಿಗೆ ನಸ್ರುದ್ದೀನನ ಬಳಿ ಇದ್ದ ಹಣ ನೋಡಿ ಆಶ್ಚರ್ಯವಾಯಿತು.
`ಎಲ್ಲಿ ಸಂಪಾದಿಸಿದೆ ಇಷ್ಟೊಂದು ಹಣ ನಸ್ರುದ್ದೀನ್? ಎಲ್ಲಾದರೂ ಕಳ್ಳತನ ಮಾಡಿಲ್ಲ ತಾನೆ?’ ಕೇಳಿದ ಗುಮಾಸ್ತ.
`ಖಂಡಿತಾ ಇಲ್ಲ. ನಾನು ಜೂಜಾಡುವುದು ಹಾಗೂ ಪಂದ್ಯ ಕಟ್ಟುವುದರಿಂದ ಈ ಹಣ ಸಂಪಾದಿಸಿದ್ದೇನೆ’ ಎಂದ ನಸ್ರುದ್ದೀನ್ ತಮಾಷೆಗೆ.
`ಎಂಥ ಪಂದ್ಯ ಕಟ್ಟುತ್ತೀಯಾ?’ ಕುತೂಹಲದಿಂದ ಕೇಳಿದ ಗುಮಾಸ್ತ.
`ಎಲ್ಲ ರೀತಿಯದೂ. ಬೇಕಾದರೆ ನೀವೂ ಹತ್ತು ಸಾವಿರ ಪಂದ್ಯ ಕಟ್ಟಿ. ನಾನು ಹೇಳುತ್ತೇನೆ, ನಾಳೆ ಇಷ್ಟೊತ್ತಿಗೆ ನಿಮ್ಮ ಬಲ ಕುಂಡಿಯ ಮೇಲೆ ಹಚ್ಚೆ ಮೂಡಿರುತ್ತದೆ. ಮೂಡಿದ್ದರೆ ನೀವು ಹತ್ತುಸಾವಿರ ಕೊಡಬೇಕು. ಇಲ್ಲದಿದ್ದಲ್ಲಿ ನಾನು ಸೋತೆ ಎಂದು ನಿಮಗೆ ಹತ್ತು ಸಾವಿರ ಕೊಡುತ್ತೇನೆ’ ಎಂದ ನಸ್ರುದ್ದೀನ್ ಪಂದ್ಯ ಕಟ್ಟುತ್ತಾ.
ಒಂದು ದಿನದಲ್ಲಿ ತನ್ನ ಕುಂಡಿಯ ಮೇಲೆ ಹಚ್ಚೆ ಇದ್ದಕ್ಕಿದ್ದಂತೆ ಮೂಡುವುದು ಸಾಧ್ಯವೇ ಇಲ್ಲ, ಪಂದ್ಯ ಕಟ್ಟಿ ಹತ್ತು ಸಾವಿರ ಸಂಪಾದಿಸಬಹುದು ಎಂದುಕೊಂಡ ಗುಮಾಸ್ತ ಆಯಿತು ಎಂದು ಪಂದ್ಯ ಕಟ್ಟಿದ.
ಮರುದಿನ ನಸ್ರುದ್ದೀನ್ ವ್ಯಕ್ತಿಯೊಬ್ಬನ ಜೊತೆ ಬ್ಯಾಂಕಿಗೆ ಬಂದ. ಗುಮಾಸ್ತ ಹತ್ತು ಸಾವಿರ ಸಿಕ್ಕಿತು ಎನ್ನುತ್ತಾ ಖುಷಿಯಿಂದ ತನ್ನ ಪೈಜಾಮ ಬಿಚ್ಚಿ ತನ್ನ ಕುಂಡಿ ತೋರಿಸುತ್ತಾ `ನೋಡು ಹಚ್ಚೆ ಮೂಡಿಲ್ಲ’ ಎಂದ.
ನಸ್ರುದ್ದೀನನ ಜೊತೆ ಇದ್ದ ವ್ಯಕ್ತಿ ತಲೆ ಚಚ್ಚಿಕೊಳ್ಳುತ್ತಾ ನಸ್ರುದ್ದೀನನಿಗೆ ಇಪ್ಪತ್ತು ಸಾವಿರ ನೀಡುತ್ತಾ `ನಾನು ಸೋತೆ’ ಎಂದ. ಅದರಲ್ಲಿ ಹತ್ತು ಸಾವಿರ ಗುಮಾಸ್ತನಿಗೆ ನೀಡುತ್ತಾ,
`ಬ್ಯಾಂಕಿನಲ್ಲಿ ಹಾಡಹಗಲೇ ನಿನ್ನ ಪೈಜಾಮ ಬಿಚ್ಚಿಸುತ್ತೇನೆ ಎಂದು ಆತನ ಬಳಿ ಇಪ್ಪತ್ತು ಸಾವಿರ ಪಂದ್ಯ ಕಟ್ಟಿದ್ದೆ’ ಎಂದ ನಸ್ರುದ್ದೀನ್.

ಸತ್ಯದ ಅರಿವು
ನಸ್ರುದ್ದೀನನಿಗೆ ಜೀವನದಲ್ಲಿ ಸತ್ಯವನ್ನು ಕಂಡುಕೊಳ್ಳಬೇಕೆನಿಸಿತು. ತಪಸ್ಸು ಮಾಡೋಣವೆಂದು ಪರ್ವತಕ್ಕೆ ಹೊರಟ. ತಪಸ್ಸು ಮುಗಿಸಿ ಬಂದು ನಾನು ಸತ್ಯವನ್ನು ಕಂಡುಕೊಂಡೆ ಎಂದು ಘೋಷಿಸಿದ. 
`ಹೌದೆ? ಏನದು ನೀನು ಕಂಡುಕೊಂಡ ಸತ್ಯ?’ ಜನರೆಲ್ಲಾ ಒಕ್ಕೊರಲಿನಿಂದ ಕೇಳಿದರು.
`ತಪಸ್ಸು ಮಾಡುವ ಮೊದಲು ಪರ್ವತಗಳೆಲ್ಲಾ ಪರ್ವತಗಳಾಗಿದ್ದವು ಹಾಗೂ ನದಿಗಳು ನದಿಗಳಾಗಿದ್ದವು. ತಪಸ್ಸು ಮಾಡುವ ಸಮಯದಲ್ಲಿ ಪರ್ವತಗಳೆಲ್ಲಾ ಪರ್ವತಗಳಾಗಿರಲಿಲ್ಲ ಹಾಗೂ ನದಿಗಳು ನದಿಗಳಾಗಿರಲಿಲ್ಲ. ತಪಸ್ಸು ಮಾಡಿದ ನಂತರ ಸತ್ಯದ ಅರಿವಾಯಿತು ಹಾಗೂ ಪರ್ವತಗಳೆಲ್ಲಾ ಪರ್ವತಗಳಾಗಿರುವುದು ಹಾಗೂ ನದಿಗಳು ನದಿಗಳಾಗಿರುವುದು ನನಗೆ ತಿಳಿಯಿತು’ ಎಂದ ಜ್ಞಾನೋದಯ ಪಡೆದ ನಸ್ರುದ್ದೀನ್.

ಅರ್ಧ ದಾರಿ
ನಸ್ರುದ್ದೀನ್ ತೀರಾ ಬಡತನದಲ್ಲಿದ್ದ. ರೋಸಿಹೋಗಿ ಕೊನೆಗೊಂದು ದಿನ ದೇವರಲ್ಲಿ ಪ್ರಾರ್ಥಿಸಿದ,
`ಹೋ ದೇವರೇ! ನನಗೆ ಬಡತನ ಸಾಕಾಗಿದೆ. ನನಗೊಂದು ಲಾಟರಿ ಬರುವಂತೆ ಮಾಡು!’
ಎಷ್ಟೋ ದಿನಗಳು ಕಳೆದವು. ಅವನಿಗೆ ಲಾಟರಿ ಯಾವುದೂ ಸಿಗಲಿಲ್ಲ. ಬೇಸರಗೊಂಡ ಅವನು ಮತ್ತೊಮ್ಮೆ ದೇವರನ್ನು ಪ್ರಾರ್ಥಿಸಿದ.
`ಹೋ ದೇವರೇ! ನೀನೊಬ್ಬ ನಿಷ್ಕರುಣಿ. ನನ್ನ ಮೇಲೆ ದಯೆ ಇಲ್ಲವೆ. ನನಗೆ ಲಾಟರಿ ಬರುವಂತೆ ಮಾಡು!’
ಅದನ್ನು ಕೇಳಿಸಿಕೊಂಡ ಫಾತಿಮಾ ಕೋಣೆಯಿಂದ ಎದ್ದು ಬಂದು ಹೇಳಿದಳು,
`ಲಾಟರಿ ಬರಬೇಕಾದರೆ ಮೊದಲು ನೀನು ಲಾಟರಿ ಟಿಕೇಟ್ ತೆಗೆದುಕೋಬೇಕು’.
ನ್ಯಾಯ ಪಾಲನೆ
ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ತಕರಾರೊಂದು ಇತ್ಯರ್ಥಕ್ಕೆ ಆತನ ಎದುರು ಬಂದಿತ್ತು. ಇಬ್ಬರದೂ ವಾದ ವಿವಾದಗಳನ್ನು ಆಲಿಸಿ ನ್ಯಾಯ ನಿರ್ಣಯಕ್ಕೆಂದು ದಿನಾಂಕ ನಿಗದಿಪಡಿಸಿದ. ನ್ಯಾಯ ನಿರ್ಣಯದ ದಿನ ಬೆಳಿಗ್ಗೆ ಆ ಇಬ್ಬರನ್ನೂ ತನ್ನ ಕೋಣೆಗೆ ಕರೆಸಿ,
`ನೋಡಿ ನೀವಿಬ್ಬರೂ ನನಗೆ ಲಂಚ ನೀಡಿದ್ದೀರಿ. ಒಬ್ಬರು ಐವತ್ತು ಸಾವಿರ ನೀಡಿದರೆ ಮತ್ತೊಬ್ಬರು ಅರವತ್ತು ಸಾವಿರ ನೀಡಿದ್ದೀರಿ. ಇದು ನ್ಯಾಯವಲ್ಲ’ ಎಂದು ಹೇಳಿದ ನಸ್ರುದ್ದೀನ್ ಅರವತ್ತು ಸಾವಿರ ನೀಡಿದವನಿಗೆ ಹತ್ತು ಸಾವಿರ ಹಿಂದಿರುಗಿಸಿದ.
`ಈಗ ಸರಿಯಾಯಿತು. ಇನ್ನು ನಾನು ನ್ಯಾಯಬದ್ಧವಾಗಿ ತೀರ್ಪು ನೀಡುತ್ತೇನೆ’ ಎಂದು ಅವರಿಬ್ಬರನ್ನೂ ಹೊರಕ್ಕೆ ಕಳುಹಿಸಿದ.


ಕಾಮೆಂಟ್‌ಗಳಿಲ್ಲ: