ಬುಧವಾರ, ಸೆಪ್ಟೆಂಬರ್ 23, 2015

ಮುಲ್ಲಾ ನಸ್ರುದ್ದೀನ್ ಕತೆಗಳ 42ನೇ ಕಂತು

ಸೆಪ್ಟೆಂಬರ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 42ನೇ ಕಂತು



ದೇವರು ಎಲ್ಲಿದ್ದಾನೆ?
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಏನು ಸಿಕ್ಕರೂ ಕದ್ದುಬಿಡುತ್ತಿದ್ದ. ಅವನ ತಂದೆ ತಾಯಿಗಂತೂ ಅವನ ನಡತೆ ದೊಡ್ಡ ತಲೆನೋವಾಗಿತ್ತು. ಮನೆಯಲ್ಲಿ, ಶಾಲೆಯಲ್ಲಿ, ಎಲ್ಲಿ ಹೋದರಲ್ಲಿ ಇಟ್ಟ ವಸ್ತು ಇಟ್ಟ ಕಡೆ ಇರುತ್ತಿರಲಿಲ್ಲ. ಅವನಿಗೆ ಎಷ್ಟು ಬುದ್ದಿ ಹೇಳಿದರೂ ಅವನು ತನ್ನ ನಡತೆ ಬದಲಿಸಿಕೊಳ್ಳುತ್ತಿರಲಿಲ್ಲ. ಆ ಊರಿನ ಮಸೀದಿಗೆ ಒಬ್ಬ ಹೊಸ ಮೌಲ್ವಿ ಬಂದರು. ಅವರು ಕಟ್ಟುನಿಟ್ಟಿನ ಶಿಸ್ತಿನವರೆಂದು ಕೇಳಿದ ನಸ್ರುದ್ದೀನನ ತಾಯಿ ಅವರ ಕೈಯಲ್ಲಿ ಅವನಿಗೆ ಬುದ್ದಿ ಹೇಳಿಸಿದರೆ ಅವನು ಸರಿಹೋಗಬಹುದೆಂದು ಒಂದು ದಿನ ಅವರಲ್ಲಿಗೆ ಕರೆದೊಯ್ದು ಅವನ ನಡತೆ ತಿಳಿಸಿ ಅವನಿಗೆ ಸರಿಯಾದ ಬುದ್ದಿ ಹೇಳುವಂತೆ ಕೇಳಿಕೊಂಡರು. ಅವನನ್ನು ಅಲ್ಲೇ ಬಿಟ್ಟು ಆಕೆಯನ್ನು ಮನೆಗೆ ಹೋಗುವಂತೆ ತಿಳಿಸಿದ ಮೌಲ್ವಿ ನಸ್ರುದ್ದೀನನಲ್ಲಿ ದೇವರ ಭಯ ತರಿಸಿ ಬುದ್ದಿ ಹೇಳಲು ಪ್ರಯತ್ನಿಸಿದರು. ಅವರು ನಸ್ರುದ್ದೀನನನ್ನು,
`ದೇವರು ಎಲ್ಲಿದ್ದಾನೆ?’ ಎಂದು ಕೇಳಿದರು. ನಸ್ರುದ್ದೀನ್ ಬಾಯಿ ಬಿಡಲಿಲ್ಲ. `ದೇವರು ಎಲ್ಲಿ ಹೇಳು! ಇಲ್ಲದಿದ್ದರೆ ಚರ್ಮ ಸುಲಿಯುತ್ತೇನೆ!’ ಎಂದರು ಮೌಲ್ವಿ.
ಹೆದರಿಕೊಂಡ ಬಾಲಕ ನಸ್ರುದ್ದೀನ್, `ಇಲ್ಲ, ನಾನು ನಿಜವಾಗಿಯೂ ದೇವರನ್ನು ಕದ್ದಿಲ್ಲ. ದೇವರು ಎಲ್ಲಿದ್ದಾನೋ ನನಗೆ ಗೊತ್ತಿಲ್ಲ!’ ಎಂದ.




ನೂರು ಪರ್ಸೆಂಟ್
ನಸ್ರುದ್ದೀನ್ ಆ ಸಾರಿ ತನ್ನ ಚೊಚ್ಚಲ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿದ್ದ. ಒಂದು ಸಾರಿ ಪಕ್ಕದ ರಾಜ್ಯದ ಮಂತ್ರಿಯ ಆಹ್ವಾನದ ಮೇರೆಗೆ ಅವರ ರಾಜ್ಯಕ್ಕೆ ಹೋಗಿದ್ದ. ಪಕ್ಕದ ರಾಜ್ಯದ ಮಂತ್ರಿಯ ಶ್ರೀಮಂತಿಕೆ ನೋಡಿ ನಸ್ರುದ್ದೀನ್ ಬೆರಗಾದ. 
`ಇಷ್ಟೊಂದು ಶ್ರೀಮಂತಿಕೆ ಹೇಗೆ ಬರಲು ಸಾಧ್ಯ?’ ಕೇಳಿದ ನಸ್ರುದ್ದೀನ್. ಆ ಮಂತ್ರಿ ತನ್ನ ಬಂಗಲೆಯ ಕಿಟಕಿಯ ಹತ್ತಿರಕ್ಕೆ ಹೋಗಿ ಅಲ್ಲಿಗೆ ನಸ್ರುದ್ದೀನನನ್ನು ಕರೆದ. ಕಿಟಕಿಯಿಂದ ಹೊರಗಡೆ ತೋರಿಸುತ್ತಾ,
`ಅಲ್ಲೇನಿದೆ?’ ಕೇಳಿದ ಮಂತ್ರಿ.
`ನದಿ’ ಹೇಳಿದ ನಸ್ರುದ್ದೀನ್.
`ನದಿಯ ಮೇಲೆ ಏನಿದೆ?’ ಕೇಳಿದ ಮಂತ್ರಿ.
`ಸೇತುವೆ’ ಹೇಳಿದ ನಸ್ರುದ್ದೀನ್.
`ಅದರ ನಿರ್ಮಾಣದಲ್ಲಿ ಹತ್ತು ಪರ್ಸೆಂಟ್ ಕಮೀಶನ್‍ನಿಂದ ಈ ಸಿರಿವಂತಿಕೆ’ ಹೇಳಿದ ಮಂತ್ರಿ. 
`ಹೀಗೂ ಉಂಟೆ!’ ಎಂದುಕೊಂಡ ನಸ್ರುದ್ದೀನ್.
ಮುಂದಿನ ವರ್ಷ ನಸ್ರುದ್ದೀನ್ ಪಕ್ಕದ ರಾಜ್ಯದ ಮಂತ್ರಿಯನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದ. ಅಲ್ಲಿಗೆ ಆಗಮಿಸಿದ ಮಂತ್ರಿ ನಸ್ರುದ್ದೀನನ ಸಿರಿತನ ತನ್ನ ಸಿರಿತನಕ್ಕಿಂತ ಭವ್ಯವಾಗಿರುವುದನ್ನು ಕಂಡು ಅಚ್ಚರಿಯಾಗಿ,  `ಅಷ್ಟು ಸಂಪಾದನೆ ಹೇಗೆ ಸಾಧ್ಯವಾಯಿತು?’ ಎಂದು ಕೇಳಿದ. 
ನಸ್ರುದ್ದೀನ್ ತನ್ನ ಬಂಗಲೆಯ ಕಿಟಕಿಯ ಹತ್ತಿರಕ್ಕೆ ಹೋಗಿ ಅಲ್ಲಿಗೆ ಮಂತ್ರಿಯನ್ನು ಕರೆದು ಕಿಟಕಿಯಿಂದ ಹೊರಗಡೆ ತೋರಿಸುತ್ತಾ,
`ಅಲ್ಲೇನಿದೆ?’ ಎಂದು ಕೇಳಿದ.
`ನದಿ’ ಹೇಳಿದ ಪಕ್ಕದ ರಾಜ್ಯದ ಮಂತ್ರಿ. 
`ನದಿಯ ಮೇಲೆ ಸೇತುವೆ ಕಾಣುತ್ತಿದೆಯೆ?’ ಕೇಳಿದ ನಸ್ರುದ್ದೀನ್.
`ಇಲ್ಲ, ಸೇತುವೆ ಕಾಣುತ್ತಿಲ್ಲ’ ಹೇಳಿದ ಮಂತ್ರಿ.
`ನೂರು ಪರ್ಸೆಂಟ್ ಕಮೀಶನ್!’ ಹೇಳಿದ ನಸ್ರುದ್ದೀನ್.

ಮತ್ತೊಂದು ಬೂಟು
ನಸ್ರುದ್ದೀನ್ ತನ್ನ ಖಂಜೂಸಿಗೆ ಜಗತ್ಪ್ರಸಿದ್ಧನಾಗಿದ್ದ. ಒಂದು ದಿನ ತನ್ನ ಪುಟ್ಟ ಮಗನನ್ನು ಕರೆದುಕೊಂಡು ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ದೊಡ್ಡ ಅಲೆಯೊಂದು ಬಂದು ಪುಟ್ಟ ಮಗುವನ್ನು ಸಮುದ್ರದೊಳಕ್ಕೆ ಎಳೆದೊಯ್ಯಿತು. ಕೂಡಲೇ ನಸ್ರುದ್ದೀನ್,
`ಹೋ ದೇವರೇ! ನನ್ನ ಮಗನನ್ನು ವಾಪಸ್ಸು ಕೊಡು, ಅವನನ್ನು ಕೊಲ್ಲಬೇಡ. ನನಗಿರುವುದು ಅವನೊಬ್ಬನೇ ಮಗ! ಅವನೇ ನನ್ನ ವಂಶೋದ್ಧಾರಕ, ನನ್ನ ಕುಟುಂಬದ ಭವಿಷ್ಯ, ದಯವಿಟ್ಟು ಅವನನ್ನು ಸುರಕ್ಷಿತವಾಗಿ ಹಿಂದಿರುಗಿಸು! ಎಂದು ಜೋರಾಗಿ ಪ್ರಾರ್ಥಿಸಿದ. ಮತ್ತೊಂದು ದೊಡ್ಡ ಅಲೆ ವಾಪಸ್ಸು ಬಂತು ಹಾಗೂ ಅದರಲ್ಲಿ ನಸ್ರುದ್ದೀನನ ಮಗ ವಾಪಸ್ಸು ಬಂದ. ನಸ್ರುದ್ದೀನ್ ಧನ್ಯವಾದಗಳನ್ನು ಹೇಳುತ್ತಾ ತನ್ನ ಮಗನನ್ನು ತಬ್ಬಿಕೊಂಡ. ಆದರೆ ಮಗುವಿನ ಕಾಲಿನಲ್ಲಿ ಒಂದೇ ಬೂಟು ಇತ್ತು ಹಾಗೂ ಮತ್ತೊಂದು ಕಣ್ಮರೆಯಾಗಿತ್ತು. ಕೂಡಲೇ ನಸ್ರುದ್ದೀನ್, 
`ಹೋ ದೇವರೇ! ನೀನೆಂಥಾ ನಿರ್ದಯಿ! ಈ ಪುಟ್ಟ ಮಗುವಿನ ಬೂಟನ್ನು ಸಹ ಕಸಿದುಕೊಂಡಿದ್ದೀಯಾ!’ ಎಂದ.

ದುಬಾರಿ ಕಾಲ
ನಸ್ರುದ್ದೀನ್ ಒಂದು ದಿನ ಮಾರುಕಟ್ಟೆಗೆ ಹೋಗುತ್ತಿದ್ದಾಗ ಶಾಲೆಯ ಪಕ್ಕದಲ್ಲಿ ಹಾದುಹೋಗಬೇಕಾಗಿತ್ತು. ಅಲ್ಲಿ ಹೋಗುತ್ತಿದ್ದಾಗ ಶಾಲೆಯಲ್ಲಿ ಗಣಿತ ಹೇಳಿಕೊಡುತ್ತಿದ್ದ ಮಾಸ್ತರು ಮಕ್ಕಳಿಗೆ `ಒಂದಕ್ಕೆ ಒಂದು ಕೂಡಿದರೆ ಎಷ್ಟಾಗುತ್ತದೆ?’ ಎಂದು ಕೇಳಿದರು. ಒಬ್ಬ ವಿದ್ಯಾರ್ಥಿ ಜೋರಾಗಿ `ನಾಲ್ಕು’ ಎಂದ. ಅದನ್ನು ಕೇಳಿಸಿಕೊಂಡ ನಸ್ರುದ್ದೀನ್,
`ಛೇ ಛೆ! ಎಂಥಾ ಕಾಲ ಬಂತು! ಎಲ್ಲವೂ ದುಬಾರಿಯಾಗುತ್ತಿದೆ. ಆಹಾರ, ಬಟ್ಟೆ ಎಲ್ಲವೂ ಕೈಗೆ ನಿಲುಕದಂತಾಗಿದೆ. ನಮ್ಮ ಕಾಲದಲ್ಲಿ ಒಂದಕ್ಕೆ ಒಂದು ಕೂಡಿದರೆ ಎರಡಾಗುತ್ತಿತ್ತು. ಈಗ ಅದೂ ನಾಲ್ಕಾಗಿದೆ!’ ಎಂದುಕೊಂಡು ಮುಂದೆ ಹೊರಟ.

ಪರವಾಗಿಲ್ಲ, ಕಾಯುತ್ತೇನೆ
ನಸ್ರುದ್ದೀನ್ ಮಹಾಪರಾಧ ಮಾಡಿದ್ದುದರಿಂದ ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಅವನನ್ನು ಗಲ್ಲಿಗೇರಿಸುವ ದಿನ ಇತರ ಕೈದಿಗಳೂ ಇದ್ದರು. ಅವರನ್ನು ಗಲ್ಲಿಗೇರಿಸುವ ಮೊದಲು ಒಬ್ಬೊಬ್ಬರನ್ನಾಗಿ ಅವರು ಸಾಯುವ ಮೊದಲು ಏನಾದರೂ ಅವರಿಷ್ಟದ ತಿನಿಸು ಇದ್ದಲ್ಲಿ ಅದನ್ನು ಕೊಡಿಸುವ ವ್ಯವಸ್ಥೆ ಮಾಡುತ್ತೇವೆಂದರು ಅಧಿಕಾರಿಗಳು. ಕೈದಿಗಳು ಅವರ ಇಷ್ಟದ ತಿನಿಸು ಹೇಳಿದರು, ಬಂಧೀಖಾನೆಯ ಅಧಿಕಾರಿಗಳು ಅದನ್ನು ಕೊಡಿಸಿದರು. ಅವರು ತಿಂದ ನಂತರ ಅವರನ್ನು ಗಲ್ಲಿಗೇರಿಸುತ್ತಿದ್ದರು. ನಸ್ರುದ್ದೀನನ ಸರದಿ ಬಂತು. ನಸ್ರುದ್ದೀನ್ ಬಂಧೀಖಾನೆಯ ಆವರಣದಲ್ಲಿ ಕೆಲದಿನಗಳ ಹಿಂದೆ ನೆಟ್ಟಿದ್ದ ಮಾವಿನ ಸಸಿಯನ್ನು ತೋರಿಸುತ್ತಾ, 
`ನಾನು ಸಾಯುವ ಮೊದಲು ನನಗೆ ಆ ಮರದ ಮಾವಿನ ಹಣ್ಣು ತಿನ್ನಬೇಕೆಂದು ಆಸೆ’ ಎಂದು ಹೇಳಿದ.
`ಆದರೆ, ಆ ಸಸಿ ಮಾವಿನ ಹಣ್ಣು ಬಿಡಲು ಇನ್ನೂ ಹತ್ತು ವರ್ಷಗಳಾಗಬಹುದು’ ಹೇಳಿದ ಬಂಧೀಖಾನೆಯ ಅಧಿಕಾರಿ.
`ಪರವಾಗಿಲ್ಲ, ಕಾಯುತ್ತೇನೆ’ ಹೇಳಿದ ನಸ್ರುದ್ದೀನ್.

ಮಾಲೀಕರು ನಾವಲ್ಲವಲ್ಲ!
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಟೈಟಾನಿಕ್ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಹಿಮಗಡ್ಡೆಗೆ ಡಿಕ್ಕಿ ಹೊಡೆದ ಟೈಟಾನಿಕ್ ಹಡಗು ಮುಳುಗತೊಡಗಿತು. ಪ್ರಯಾಣಿಕರೆಲ್ಲಾ ಕಂಗಾಲಾಗಿ ಕಿರುಚಿಕೊಳ್ಳತೊಡಗಿದರು. ನಸ್ರುದ್ದೀನ್ ಕಟಕಟೆಯ ಮೇಲೆ ನಿಂತು ಹಿಮಗಡ್ಡೆಯ ಸೌಂದರ್ಯವನ್ನು ಏನೂ ಆಗಿಲ್ಲವೆಂಬಂತೆ ನೋಡುತ್ತಾ ವಿಮಗ್ನನಾಗಿದ್ದ. ಅಬ್ದುಲ್ಲಾ ಓಡಿಬಂದು,
`ನಸ್ರುದ್ದೀನ್!! ಹಡಗು ಮುಳುಗುತ್ತಿದೆ!!’ ಎಂದು ಕಿರುಚಿಕೊಂಡ.
`ಮುಳುಗಲಿ ಬಿಡು, ಅದಕ್ಕ್ಯಾಕೆ ಹಾಗೆ ಅರಚಿಕೊಳ್ಳುತ್ತೀಯಾ? ಈ ಹಡಗಿನ ಮಾಲೀಕರು ನಾವಲ್ಲವಲ್ಲ!’ ಶಾಂತನಾಗಿ ಹೇಳಿದ ನಸ್ರುದ್ದೀನ್.

ಒಳ್ಳೆಯ ಸುದ್ದಿ – ಕೆಟ್ಟ ಸುದ್ದಿ
ಮುಲ್ಲಾ ನಸ್ರುದ್ದೀನ್ ಮಕ್ಕಳಿಗಾಗಿ ತನ್ನ ಊರಿನಲ್ಲಿ ಶಾಲೆ ಇಲ್ಲದಿದ್ದುದರಿಂದ ಒಂದು ಒಳ್ಳೆಯ ಶಾಲೆ ಕಟ್ಟಿಸಬೇಕೆಂದು ಊರಿನವರಿಗೆಲ್ಲಾ ಹೇಳಿ ಚಂದಾ ವಸೂಲಿ ಶುರು ಮಾಡಿದ. ಒಂದು ದಿನ ಸಂಜೆ ಊರಿನವರನ್ನೆಲ್ಲಾ ಸಭೆ ಕರೆದು “ಈ ದಿನ ನಿಮಗೆ ಒಂದು ಒಳ್ಳೆಯ ಸುದ್ದಿ ಮತ್ತು ಕೆಟ್ಟ ಸುದ್ದಿ ತಿಳಿಸುತ್ತೇನೆ ಎಂದು ಹೇಳಿದ. ಜನ ಕುತೂಹಲದಿಂದ ಕಿವಿ ಅಗಲಿಸಿ ಕೂತರು.
`ಸಂತೋಷದ ಸುದ್ದಿಯೆಂದರೆ, ನಮ್ಮ ಮಕ್ಕಳಿಗೆ ಶಾಲೆ ಕಟ್ಟಿಸಲು ಸಾಕಾಗುವಷ್ಟು ಹಣ ನಮ್ಮಲ್ಲಿದೆ’ ಎಂದ. ಜನರೆಲ್ಲಾ ಸಂತೋಷದಿಂದ ಚಪ್ಪಾಳೆ ತಟ್ಟಿದರು.
`ಕೆಟ್ಟ ಸುದ್ದಿಯೆಂದರೆ, ಆ ಹಣ ಇನ್ನೂ ನಿಮ್ಮ ನಿಮ್ಮ ಕಿಸೆಗಳಲ್ಲೇ ಇದೆ’

ಹಾಗೆಯೇ ಹೇಳಿದ್ದರು
ಆ ಊರಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಇಮಾಂ ಆಗಿದ್ದ ನಸ್ರುದ್ದೀನ್ ಆ ಊರು ಬೇಸರವಾಗಿದ್ದರಿಂದ ಮತ್ತೊಂದು ಊರಿನ ಮಸೀದಿಗೆ ಹೋಗಲು ತೀರ್ಮಾನಿಸಿದ ಹಾಗೂ ತನ್ನ ನಿರ್ಧಾರವನ್ನು ಊರಿನವರಿಗೆಲ್ಲಾ ಘೋಷಿಸಿದ. ಅದನ್ನು ಕೇಳಿದ ಮಹಿಳೆಯೊಬ್ಬಳು,
`ಹೋ, ಇಮಾಂ! ನೀವು ಈ ಊರು ಬಿಟ್ಟು ಹೋಗಬೇಡಿ. ಈ ಊರಿನ ಜನ ನಿಮ್ಮನ್ನು ಹೋಗಲು ಬಿಡುವುದಿಲ್ಲ!’ ಎಂದು ಕಣ್ಣೀರು ಹಾಕುತ್ತಾ ಹೇಳಿದಳು.
ಆಕೆಯ ಮಾತಿಗೆ ಹೃದಯತುಂಬಿ ಬಂದ ನಸ್ರುದ್ದೀನ್, `ಹಾಗೆಲ್ಲಾ ಕಣ್ಣೀರು ಹಾಕಬೇಡಮ್ಮಾ. ನೋಡು, ಇಲ್ಲಿಗೆ ಬರುವ ಮತ್ತೊಬ್ಬ ಇಮಾಂ ನನಗಿಂತ ಉತ್ತಮನಾಗಿರಬಹುದು’ ಎಂದು ಆಕೆಯನ್ನು ಸಂತೈಸುತ್ತಾ ಹೇಳಿದ.
`ಏನಿಲ್ಲಾ,’ ತನ್ನ ಅಸಂತೃಪ್ತ ದನಿಯಲ್ಲಿ ಆಕೆ ಹೇಳಿದಳು, `ಈ ಹಿಂದೆ ನೀವು ಬರುವ ಮೊದಲು ನಮಗೆ ಇದೇ ಮಾತನ್ನು ಹೇಳಿದ್ದರು.’

ಕಳ್ಳರನ್ನು ಓಡಿಸಿದೆ!
ನಸ್ರುದ್ದೀನ್ ಮತ್ತು ಅವನ ಕೆಲವು ಗೆಳೆಯರು ಸಂಜೆ ಕೂತು ಹರಟೆ ಹೊಡೆಯುತ್ತಾ ಅವರವರ ಸಾಹಸಗಳನ್ನು ಬಣ್ಣಿಸಿ ಕೊಳ್ಳುತ್ತಿದ್ದರು. ಅವುಗಳನ್ನೆಲ್ಲಾ ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಸಾಹಸ ಘಟನೆಯನ್ನು ಸಹ ತಿಳಿಸಿದ:
`ನಾನೊಮ್ಮೆ ಕಾಡಿನಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡುವಾಗ ನನ್ನ ಮೇಲೆ ದಾಳಿ ಮಾಡಿದ ಹತ್ತು ಕಳ್ಳರನ್ನು ನಾನು ಅಲ್ಲಿಂದ ಓಡುವಂತೆ ಮಾಡಿದೆ’ ಎಂದ.
`ಹೌದೆ?! ನಿನ್ನೊಬ್ಬನಿಂದಲೇ ಅದು ಹೇಗೆ ಸಾಧ್ಯವಾಯಿತು?’ ಕೇಳಿದರು ಗೆಳೆಯರು.
`ಹೇ... ಅದೇನಿಲ್ಲ, ಬಹಳ ಸುಲಭ,’ ಹೇಳಿದ ನಸ್ರುದ್ದೀನ್, `ನಾನು ಅಲ್ಲಿಂದ ಜೋರಾಗಿ ಓಡಿದೆ ಹಾಗೂ ಅವರು ನನ್ನನ್ನು ಅಟ್ಟಿಸಿಕೊಂಡು ಅಲ್ಲಿಂದ ಓಡಿ ಹಿಂದೆ ಬಂದರು.’

ಅಂಗಡಿಯಲ್ಲಿ ಯಾರು?
ಅಂಗಡಿ ವ್ಯಾಪಾರಿ ನಸ್ರುದ್ದೀನ್ ಸಾವಿನಂಚಿನಲ್ಲಿದ್ದ. ಈಗಲೋ ಆಗಲೋ ಅವನ ಪ್ರಾಣಪಕ್ಷಿ ಹಾರುವಂತಿತ್ತು. ಇನ್ನೇನು ಅವನು ಪ್ರಾಣ ಬಿಡುತ್ತಾನೆ, ಕೊನೆ ಗಳಿಗೆಯಲ್ಲಿ ಅವನ ಬದಿಯಲ್ಲಿ ಇರೋಣವೆಂದು ಅವನ ಹೆಂಡತಿ ಮಕ್ಕಳು ಅವನ ಸುತ್ತ ನಿಂತಿದ್ದರು. ಹಾಸಿಗೆಯ ಮಲಗಿದ್ದ ಅವನು ಕಣ್ಣು ಬಿಟ್ಟ. ಅವನ ಪಕ್ಕದಲ್ಲಿ ಅವನ ಹೆಂಡತಿ ಫಾತಿಮಾ ನಿಂತಿದ್ದಳು. ನಸ್ರುದ್ದೀನ್ ಕೇಳಿದ,
`ಮುಸ್ತಫಾ (ಮೊದಲ ಮಗ) ಎಲ್ಲಿ?’
`ನಾನು ಇಲ್ಲೇ ನಿಮ್ಮ ಬಲ ಬದಿಯಲ್ಲಿ ನಿಂತಿದ್ದೇನೆ’ ಹೇಳಿದ ಮುಸ್ತಫಾ.
`ಹನೀಫ್ (ಎರಡನೇ ಮಗ) ಎಲ್ಲಿ?’
`ನಾನಿಲ್ಲೇ ನಿಮ್ಮ ಎಡಬದಿಯಲ್ಲಿ ನಿಂತಿದ್ದೇನೆ?’ ಹೇಳಿದ ಹನೀಫ್.
`ನಾಲಾಯಕ್ ನನ್ ಮಕ್ಕಳಾ! ನೀವಿಬ್ಬರೂ ಇಲ್ಲೇ ಇದ್ದರೆ ಅಂಗಡಿ ನೋಡಿಕೊಳ್ಳುವವರು ಯಾರು!?’ ಸಿಟ್ಟಿನಿಂದ ಅರಚಿದ ನಸ್ರುದ್ದೀನ್.

ಅವಶ್ಯಕತೆಯಿಲ್ಲ!
ಆ ಊರಿನ ಅಮೀರ್ ನಗರದ ಜನರನ್ನೆಲ್ಲಾ ಸಭೆ ಕರೆದು ಆ ಊರಿನ ಸ್ಮಶಾನಕ್ಕೆ ಸುತ್ತಲೂ ಗೋಡೆ ಕಟ್ಟಿಸೋಣವೆಂದು ಊರಿನ ಜನರಿಗೆ ತಿಳಿಸಿ ಚಂದಾ ವಸೂಲಿಗೆ ಮುಂದಾದ. ಆ ಗುಂಪಿನಲ್ಲಿದ್ದ ನಸ್ರುದ್ದೀನ್ ಮುಂದೆ ಬಂದು, ಸ್ಮಶಾನಕ್ಕೆ ಯಾವುದೇ ಬೇಲಿ ಅಥವಾ ಗೋಡೆ ಅವಶ್ಯಕತೆಯಿಲ್ಲವೆಂದು ತಿಳಿಸಿದ.
`ಏಕೆ ನಸ್ರುದ್ದೀನ್? ಗೋಡೆ ಇದ್ದರೆ ಒಳ್ಳೆಯದಲ್ಲವೆ?’ ಕೇಳಿದ ನಸ್ರುದ್ದೀನ್.
`ಸ್ಮಶಾನಕ್ಕೆ ಗೋಡೆ ಏಕೆ ಬೇಕು? ಅದರೊಳಗಿರುವವರ್ಯಾರು ತಪ್ಪಿಸಿಕೊಂಡು ಹೊರಕ್ಕೆ ಬರುವುದಿಲ್ಲ ಹಾಗೂ ಹೊರಗಿರುವವರಿಗೆ ಅದರೊಳಕ್ಕೆ ಹೋಗುವ ಆಸೆ ಇರುವುದಿಲ್ಲ! ಹಾಗಿರುವಾಗ ಹಣ ಏಕೆ ಖರ್ಚುಮಾಡಬೇಕು?’ ಹೇಳಿದ ನಸ್ರುದ್ದೀನ್.

ಮಜೂರಿ ಕೇಳಿದರೆ!
ನಸ್ರುದ್ದೀನ್ ಒಂದು ಚೀಲ ಅಕ್ಕಿ ಖರೀದಿಸಿ ಅದನ್ನು ಮನೆಗೆ ಕೊಂಡೊಯ್ಯಲು ಕೂಲಿಯವನೊಬ್ಬನನ್ನು ಮಾತನಾಡಿ, ಆತನಿಗೆ ಮನೆಯ ವಿಳಾಸ ನೀಡಿ ಕಳುಹಿಸಿದ. ಆದರೆ ಆ ಕೂಲಿಯವ ಆ ಚೀಲವನ್ನು ಮನೆಗೆ ತಲುಪಿಸದೆ ಕದ್ದೊಯ್ದ. ಕೆಲದಿನಗಳ ನಂತರ ನಸ್ರುದ್ದೀನ್ ಮತ್ತು ಅಬ್ದುಲ್ಲಾ ಮಾರುಕಟ್ಟೆಯಲ್ಲಿ ಹೋಗುತ್ತಿದ್ದಾಗ ಅದೇ ಕೂಲಿಯವ ಮತ್ತೊಂದು ಅಂಗಡಿಯಲ್ಲಿರುವುದನ್ನು ಕಂಡ ನಸ್ರುದ್ದೀನ್ ಕೂಡಲೇ ಓಡಿಹೋಗಿ ಮರೆಯಲ್ಲಿ ಅವಿತುಕೊಂಡ. ಅದನ್ನು ಕಂಡ ಅಬ್ದುಲ್ಲಾ,
`ನಸ್ರುದ್ದೀನ್! ನೀನ್ಯಾಕೆ ಅವಿತುಕೊಳ್ಳುತ್ತಿದ್ದೀಯಾ?’ ಎಂದ.

`ಆ ಕೂಲಿಯವ ಚೀಲ ಹೊತ್ತ ಮಜೂರಿ ಕೇಳಿದರೆ?’ ಕೇಳಿದ ನಸ್ರುದ್ದೀನ್.
j.balakrishna@gmail.com


ಮಂಗಳವಾರ, ಸೆಪ್ಟೆಂಬರ್ 22, 2015

ಸರಿಯಾದ ಕ್ರಮ - ಪ್ರಸ್ತುತ ಸಮಯಕ್ಕೊಂದು ಮಾಂಟೋ ಕತೆ


ಜೈನರ ಉತ್ಸವಕ್ಕೆ ಮಾಂಸಾಹಾರ ನಿಷೇಧ ಕುರಿತಂತೆ ದೇಶವೆಲ್ಲಾ ತೀವ್ರ `ಬಿಸಿ ಬಿಸಿ' ಚರ್ಚೆ ನಡೆಯುತ್ತಿರುವಾಗ ನನ್ನ ಅನುವಾದದ ಮಾಂಟೋನ ಈ ಕತೆ ನೆನಪಾಯಿತು (ಮಾಂಟೊ ಕತೆಗಳು):

ಸರಿಯಾದ ಕ್ರಮ
_________
ಮೊಹಲ್ಲಾ ಒಂದರ ಮೇಲೆ ದಾಳಿನಡೆಯಿತು ಹಾಗೂ ಕೆಲ ಅಲ್ಪಸಂಖ್ಯಾತರನ್ನು ಚಾಕುವಿನಿಂದ ತಿವಿದು ಸಾಯಿಸಲಾಯಿತು. ಇತರರು ಜೀವಭಯದಿಂದ ಅಲ್ಲಿಂದ ಓಡಿಹೋದರು. ಇದನ್ನೆಲ್ಲಾ ಕಂಡ ದಂಪತಿಗಳಿಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವಿತುಕೊಂಡರು.
ಅವರಿಬ್ಬರೂ ಎರಡು ಹಗಲು ಮತ್ತು ಎರಡು ರಾತ್ರಿ ಕೊಲೆಗಡುಕರ ಹೆದರಿಕೆಯಿಂದ ಅಲ್ಲೇ ಅವಿತುಕೊಂಡಿದ್ದರು. ಆದರೆ ಯಾರೂ ಬರಲಿಲ್ಲ.
ಮತ್ತೆರಡು ದಿನಗಳು ಕಳೆದವು. ಅವರಲ್ಲಿನ ಹೆದರಿಕೆ ಕಡಿಮೆಯಾಯಿತು. ಆದರೆ ಹಸಿವು, ನೀರಡಿಕೆ ತೀವ್ರವಾಗಿ ಕಾಡತೊಡಗಿದವು.
ಇನ್ನೂ ನಾಲ್ಕು ದಿನಗಳು ಕಳೆದವು. ಈಗ ಅವರನ್ನು ಸಾವಿನ ಹೆದರಿಕೆ ಕಾಡುತ್ತಿರಲಿಲ್ಲ. ಅವರಿಗೆ ಬದುಕು ಅರ್ಥಹೀನ ಎನ್ನಿಸತೊಡಗಿತ್ತು. ಅವಿತುಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದರು.
ಮೊಹಲ್ಲಾದ ಜನರಿಗೆ ತಮ್ಮನ್ನು ಒಪ್ಪಿಸಿಕೊಂಡ ಗಂಡ, ಕ್ಷೀಣ ದನಿಯಲ್ಲಿ ಹೇಳಿದ, ‘ನಮ್ಮನ್ನು ನಿಮಗೊಪ್ಪಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ’.
ಈ ಮಾತುಗಳು ಆ ಮೊಹಲ್ಲಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರು ಜೈನರಾಗಿದ್ದರು. ‘ನಮ್ಮ ಧರ್ಮದಲ್ಲಿ ಕೊಲ್ಲುವುದು ಅಪರಾಧ’ ಎಂದರು.
ಅವರೆಲ್ಲಾ ಸೇರಿ ಆ ಗಂಡ ಹೆಂಡಿರನ್ನು ಹಿಡಿದು ಮತ್ತೊಂದು ಮೊಹಲ್ಲಾದ ಜನರಿಗೆ ಸೂಕ್ತವಾಗಿ ವಿಲೇವಾರಿ ಮಾಡಲು ಒಪ್ಪಿಸಿದರು.

ನನ್ನ ಇತ್ತೀಚಿನ ವ್ಯಂಗ್ಯಚಿತ್ರ - ಪೆನ್ಸಿಲ್ ಕಳ್ಳ!