ಸೋಮವಾರ, ಫೆಬ್ರವರಿ 18, 2019

ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?

ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ?
ಈ ಕ್ಷಣದಲ್ಲಿ ಬದುಕಿನ ಅತ್ಯಂತ ದುಃಖಕರ ಸಂಗತಿ ಏನೆಂದರೆ,
ಸಮಾಜ ವಿವೇಕವನ್ನು ಪಡೆದುಕೊಳ್ಳುವುದಕ್ಕಿಂತ ಹೆಚ್ಚು
ಕ್ಷಿಪ್ರವಾಗಿ ವಿಜ್ಞಾನ ಜ್ಞಾನವನ್ನು ಪಡೆದುಕೊಳ್ಳುತ್ತಿದೆ.
- ಐಸಾಕ್ ಅಸಿಮೋವ್

ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ನವಾeóï ಶರೀಫ್‍ರಿಗೆ ಅರಿವಿಲ್ಲದಂತೆ ಆಗ ಸೇನಾದಂಡನಾಯಕರಾಗಿದ್ದ ಜನರಲ್ ಪರ್ವೇeóï ಮುಶರಫ್ ಅಣ್ವಸ್ತ್ರಗಳನ್ನು ದಾಳಿಗೆ ಸಿದ್ಧಗೊಳಿಸಿದ್ದರೆಂದು ಅಮೆರಿಕದ ಗಾರ್ಡಿಯನ್ ಪತ್ರಿಕೆ ತಿಳಿಸಿದೆ. ಅಣ್ವಸ್ತ್ರ ಸಂಗ್ರಹಣೆಯಲ್ಲಿ ಭಾರತಕ್ಕೆ ಪಾಕಿಸ್ತಾನ ಸರಿಸಾಠಿಯಲ್ಲ ಎಂದು ಪ್ರಖ್ಯಾತ ‘ಜೇನ್ಸ್ ಡಿಫೆನ್ಸ್ ವೀಕ್ಲಿ’ ಪತ್ರಿಕೆ ತಿಳಿಸಿದೆ. ಭಾರತ 200ರಿಂದ 250 ಅಣ್ವಸ್ತ್ರಗಳನ್ನು ಹೊಂದಿದ್ದರೆ, ಪಾಕಿಸ್ತಾನ ಸುಮಾರು 150 ಅಣ್ವಸ್ತ್ರಗಳನ್ನು ಹೊಂದಿದೆಯೆಂದು ಅದು ತಿಳಿಸಿದೆ. ಆಗಿಂದಾಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಗಳ ಜೊತೆಗೆ ಅಣ್ವಸ್ತ್ರ ಯುದ್ಧದ ಬಗೆಗಿನ ಮಾತಿನ ಯುದ್ಧ ನಡೆಯುತ್ತಲೇ ಇರುತ್ತದೆ. 
    ಅಣ್ವಸ್ತ್ರಗಳನ್ನು ಬಳಸಿದಲ್ಲಿ ನಮಗೆ ಉಳಿಗಾಲವಿದೆಯೆ? ‘ನಮಗೆ’ ಎಂದರೆ ಭಾರತೀಯರಿಗೆ ಎಂದು ಮಾತ್ರ ಅರ್ಥವಲ್ಲ, ‘ನಾವು’ ಎಂದರೆ ಇಡೀ ಮಾನವಕುಲ, ಭೂಮಿಯ ಸಮಸ್ತ ಜೀವಜಾಲ. ನಮಗೆ ಅಣುಯುದ್ಧದಿಂದಾಗುವ ಪರಿಣಾಮಗಳ ಅರಿವಿದೆಯೆ? ಅಣುಯುದ್ಧದಿಂದಾಗುವ ಭೀಕರ ಪರಿಣಾಮಗಳು ನಮ್ಮೆಲ್ಲರ ಊಹೆಯನ್ನು ಮೀರಿದುದು. ಒಂದು ಅಂದಾಜಿನ ಪ್ರಕಾರ ಮಾನವ ಚರಿತ್ರೆಯಲ್ಲಿ ಸುಮಾರು ಮೂವತ್ತು ಸಾವಿರ ಯುದ್ಧಗಳು ನಡೆದಿವೆ. ಕೆಲವು ಯುದ್ಧಗಳು ಇಡೀ ದೇಶಗಳನ್ನೇ ನಿರ್ನಾಮ ಮಾಡಿವೆ. ಮಾನವಕುಲ ಅವುಗಳೆಲ್ಲದರಿಂದಲೂ ಬದುಕುಳಿದಿದೆ. ಆದರೆ ಅಣುಯುದ್ಧವಾದಲ್ಲಿ ಅದೇ ಮಾನವಚರಿತ್ರೆಯ ಕೊನೆಯ ಯುದ್ಧವಾಗಬಹುದು. ಅದರಿಂದ ಚೇತರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾಗರಿಕತೆಯ ಹಾಗೂ ಜೀವಸಂಕುಲದ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತದೆ.

    ಅಮೆರಿಕ ಮತ್ತು ರಷ್ಯಾಗಳ ನಡುವಿನ ಶೀತಲ ಯುದ್ಧ ತಣ್ಣಗಾದ ನಂತರ ಇಡೀ ವಿಶ್ವ ಅಣ್ವಸ್ತ್ರ ಯುದ್ಧದ ಭೀತಿಯಿಂದ ಮುಕ್ತವಾಗಿತ್ತು. ಈಗ ಇಡೀ ವಿಶ್ವದ ಆತಂಕದ ಕೇಂದ್ರಬಿಂದು ಭಾರತ-ಪಾಕಿಸ್ತಾನಗಳಾಗಿವೆ. ಈ ಎರಡೂ ದೇಶಗಳ ನಡುವೆ ಯುದ್ಧವಾಗಿ ಅಣ್ವಸ್ತ್ರ ಬಳಕೆಯಲ್ಲಿ ಪರ್ಯಾವಸಾನಗೊಂಡರೆ ಅದರಿಂದಾಗುವ ಪರಿಣಾಮ ಈ ಎರಡೇ ದೇಶಗಳಿಗೆ ಸೀಮಿತವಾಗಿರುವುದಿಲ್ಲ. ಒಂದು ಸಬ್‍ಮರೀನ್‍ನಲ್ಲಿರುವ ಅಣುಬಾಂಬ್‍ಗಳು ಇಡೀ ಒಂದು ದೇಶವನ್ನೇ ಸಂಪೂರ್ಣ ನಾಶಮಾಡಬಲ್ಲವು. ಈ ಬಾಂಬುಗಳು ಅಣು ರಿಯಾಕ್ಟರ್ ಅಥವಾ ಅಣುಇಂಧನ ಸಂಗ್ರಹಾಗಾರಗಳ ಮೇಲೆ ಹಾಕಿದಲ್ಲಿ ಬಾಂಬ್‍ನ ಪರಿಣಾಮ ಇನ್ನಷ್ಟು ಪಟ್ಟು ಹೆಚ್ಚುತ್ತದೆ. ಒಂದು ಅಣು ರಿಯಾಕ್ಟರ್‍ನ ಸೋಟಕ ಶಕ್ತಿ ಒಂದು ಮೆಗಾಟನ್ ಅಣುಬಾಂಬಿಗೆ ಸಮನಾದುದು. ಹಾಗಾಗಿ ಹೆಚ್ಚು ಅಣು ರಿಯಾಕ್ಟರ್ ಹೊಂದಿರುವ ದೇಶ ತಾನೇ ತನ್ನ ವಿನಾಶವನ್ನು ಆಹ್ವಾನಿಸಿದಂತೆ. ನಮ್ಮ ಮಡಿಲಲ್ಲಿಯೂ ಕೈಗಾ ಎಂಬ ಅಗ್ನಿಪಕ್ಷಿ ಕಾವು ಕೂತಿದೆ.

    ಅಮೆರಿಕದ ಪ್ರಖ್ಯಾತ ವಿಜ್ಞಾನಿ ದಿವಂಗತ ಕಾರ್ಲ್ ಸಾಗನ್, ‘ಯಾವುದಾದರೂ ದೇಶ ತನ್ನ ಶತ್ರು ದೇಶದ ಮೇಲೆ ಮೊದಲು ಅಣುಬಾಂಬ್ ಹಾಕಿ ತನ್ನ ವಿರುದ್ಧ ತಿರುಗೇಳದಂತೆ ಅದರ ಶಕ್ತಿಯನ್ನು ಕುಂದಿಸಲು ಯತ್ನಿಸಿದರೂ ಸಹ ಆ ಪ್ರಯತ್ನ ಆತ್ಮಹತ್ಯೆಯೇ ಸರಿ. ಏಕೆಂದರೆ ಅದರಿಂದ ವಾತಾವರಣ, ಪರಿಸರ ಹಾಗೂ ಜೀವಸಂಕುಲದ ಮೇಲಾಗುವ ಪರಿಣಾಮಗಳು ನಿರ್ನಾಮವಾದ ದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಬಾಂಬ್ ಹಾಕಿದ ದೇಶವೂ ಸೇರಿದಂತೆ ಇಡೀ ಭೂಮಿಯೇ ತತ್ತರಿಸಿಹೋಗುತ್ತದೆ. ‘ ಆದುದರಿಂದಲೇ ಇದನ್ನು ‘MAD' (Mutually Assured Destruction) ಎನ್ನುತ್ತಾರೆ. ‘ನೀನೂ ಸಾಯಿ, ನಾನೂ ಸಾಯುತ್ತೇನೆ’ ಎನ್ನುವ ಹುಚ್ಚುತನ.
    1983ರಲ್ಲಿ ರಷ್ಯಾ-ಅಮೆರಿಕಾದ ವಿಜ್ಞಾನ ವಿಚಾರಸಂಕಿರಣವೊಂದರಲ್ಲಿ ಅಮೆರಿಕದ ಸೆನೇಟರ್ ಎಡ್ವರ್ಡ್ ಕೆನೆಡಿ ಹೇಳಿದ್ದರು, ‘ಕಟುಸತ್ಯ ನಮ್ಮೆದುರಿಗೆ ಸ್ಪಷ್ಟವಾಗುತ್ತಿದೆ. ಮೂರನೇ ವಿಶ್ವಯುದ್ಧವಾದಲ್ಲಿ ಅದೇ ಕೊನೆಯ ಯುದ್ಧವಾಗುತ್ತದೆ. ಏಕೆಂದರೆ ಆ ಯುದ್ಧ ನಮ್ಮ ಭೂಮಿಯ ವಿರುದ್ಧವೇ ಆಗಿರುತ್ತದೆ. ಆ ಯುದ್ಧದ ಕೊನೆಯಲ್ಲಿ ಭೂಮಿಯ ಮೇಲೆ ಎಷ್ಟು ಜನ ಬದುಕುಳಿಯುತ್ತಾರೆ ಎನ್ನುವುದು ಮುಖ್ಯವಲ್ಲ, ಆದರೆ ಬದುಕುಳಿದಿರುವವರಿಗೆ ಸಾವು ಎಷ್ಟು ಬೇಗ ಬರುತ್ತದೆ ಎಂಬುದು’. 

    ನಮಗೆ ಇಂತಹ ಬಾಂಬ್‍ಗಳಿಂದಾಗುವ ಪರಿಣಾಮಗಳ ಅರಿವಿರುವುದು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ್ದ ಬಾಂಬ್‍ಗಳಿಂದಷ್ಟೆ. ಆದರೆ ಅವು ಪರಮಾಣು ಬಾಂಬ್‍ಗಳಾಗಿದ್ದವು. ಆದರೆ ಅಣುಬಾಂಬ್‍ಗಳು ಪರಮಾಣು ಬಾಂಬ್‍ಗಳಿಗಿಂತ ಸಾವಿರಾರು ಪಟ್ಟು ಹೆಚ್ಚು ವಿಧ್ವಂಸಕಾರಿಯಾಗಿವೆ. ಈ ಲೇಖನದಲ್ಲಿ ಬಳಸಿರುವ ಚಿತ್ರಗಳು ಹಿರೋಷಿಮಾ ಮತ್ತು ನಾಗಸಾಕಿಯ ಮೇಲಿನ ಪರಮಾಣು ಬಾಂಬ್ ದಾಳಿಯ ಚಿತ್ರಗಳು. ಇನ್ನು ಅಣುಬಾಂಬ್ ದಾಳಿ ನಡೆದಲ್ಲಿ ಅದರ ವಿಧ್ವಂಸಕಾರಿ ಪರಿಣಾಮಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯ.
    ಸಾಮಾನ್ಯವಾಗಿ ಅಣುವಿಸ್ಫೋಟವನ್ನು ಟಿ.ಎನ್.ಟಿ.ಯ (TNT-Trinitro toulene ಎಂಬ ಸೋಟಕ ವಸ್ತು) ವಿಸ್ಫೋಟದೊಂದಿಗೆ ತುಲನೆ ಮಾಡುತ್ತಾರೆ. ಒಂದು ಮೆಗಾಟನ್ ಅಣ್ವಸ್ತ್ರ 4.2 x 1015 ಜೌಲ್ ಶಕ್ತಿಯ ಇಳುವರಿಯನ್ನು ಉತ್ಪಾದಿಸುತ್ತದೆ. ಅಂದರೆ 10 ಲಕ್ಷ ಟನ್ ಟಿ.ಎನ್.ಟಿ.ಯ ವಿಸೋಟದಷ್ಟು! ಒಂದು ಅಂದಾಜಿನ ಪ್ರಕಾರ ಈಗ 15000 ಮೆಗಾಟನ್‍ಗಳಿಗಿಂತ ಹೆಚ್ಚಿನ ಅಣ್ವಸ್ತ್ರಗಳ ದಾಸ್ತಾನು ಇಂದು ವಿಶ್ವದಲ್ಲಿದೆ.

    ಮನೋವಿಜ್ಞಾನಿಗಳು ಹೇಳುವಂತೆ, ಅಣ್ವಸ್ತ್ರಯುದ್ಧದಲ್ಲಿ ಕೆಲವರು ಬದುಕುಳಿಯಬಹುದು. ಆದರೆ ಆಗ ಯಾವುದೇ ಸಾಮಾಜಿಕ ವ್ಯವಸ್ಥೆಯಾಗಲಿ, ಆರೋಗ್ಯ ವ್ಯವಸ್ಥೆಯಾಗಲಿ ಇರುವುದಿಲ್ಲ. ಸಾಯುತ್ತಿರುವವರಿಗೆ, ರೋಗಿಗಳಿಗೆ ಆರೈಕೆ ಮಾಡಲಾಗದೆ, ಸಾಂತ್ವನ ನೀಡಲಾಗದೆ ನೈತಿಕತೆ ಅಧೋಗತಿಗೆ ಇಳಿದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬದುಕುವುದೇ ಅತ್ಯಂತ ಭಯಂಕರ ಅನುಭವ. ಆ ಭೀಕರತೆಯನ್ನು ಮನುಷ್ಯನ ಮನಸ್ಸು ಸಹಿಸಿಕೊಳ್ಳಲಾರದು ಹಾಗೂ ಮನುಷ್ಯನ ಮಿದುಳು ಈಗ ಆತನಿಗೆ ಸಹಾಯಮಾಡುವಂತೆ ಎಂದೂ ಮಾಡಲಾರದು.
    ನಮ್ಮ ಭೂಮಿ ಈ ಅನಂತ ವಿಶ್ವದಲ್ಲಿ ಒಂದು ಸುಂದರ ಆಕಾಶನೌಕೆ. ಅದಕ್ಕೆ ಅಣುಯುದ್ಧದಿಂದ ಮತ್ತೆ ಚೇತರಿಸಿಕೊಳ್ಳುವ ಸಾಮಥ್ರ್ಯವೇ ಇಲ್ಲ. 1984ರಲ್ಲಿ ವಿಶ್ವದ ಎಲ್ಲಾ ವಿಜ್ಞಾನಿಗಳು ಸೇರಿ ಅಣ್ವಸ್ತ್ರಗಳನ್ನು ವಿರೋಧಿಸಿ ದಾಖಲೆಯೊಂದಕ್ಕೆ ಸಹಿಮಾಡಿ ಹೊರಡಿಸಿದರು. ಅದರಲ್ಲಿ ಹೀಗೆ ಹೇಳಿತ್ತು, ‘ಮೇಲೆ ಏಳುವ ಧೂಳು ಮತ್ತು ಹೊಗೆ ಉಷ್ಣವಲಯ ದೇಶಗಳಿಗೂ ಮತ್ತು ಬಹಳಷ್ಟು ದಕ್ಷಿಣ ಗೋಳಕ್ಕೂ ಆವರಿಸಿಕೊಳ್ಳುತ್ತದೆ. ಹಾಗಾಗಿ ಯುದ್ಧದಲ್ಲಿ ತೊಡಗದ ಭಾರತ, ಬ್ರೆಜಿûಲ್, ನೈಜೀರಿಯಾ ಮತ್ತು ಇಂಡೋನೇಷ್ಯಾ ದೇಶಗಳು ತಮ್ಮ ದೇಶಗಳಲ್ಲಿ ಒಂದು ಅಣುಬಾಂಬ್ ಸಿಡಿಯದಿದ್ದರೂ ಸಹ ದುರಂತಕ್ಕೊಳಗಾಗುತ್ತವೆ.’ ಆದರೆ ಈಗ ಅಣುಯುದ್ಧ ಭೀತಿ ಅಲ್ಲಿಲ್ಲ. ಎಲ್ಲ ದೇಶಗಳ ಕಣ್ಣೂ ಭಾರತ-ಪಾಕಿಸ್ತಾನದ ಮೇಲಿವೆ.

    ಈ ಲೇಖನ ಅಣುಯುದ್ಧದಿಂದಾಗುವ ಪರಿಸರ, ವಾತಾವರಣ ಹಾಗೂ ಮನುಕುಲವನ್ನೊಳಗೊಂಡಂತೆ ಇಡೀ ಜೀವಜಾಲದ ಮೇಲಾಗುವ ಪರಿಣಾಮಗಳನ್ನು ಪರಿಚಯಿಸುತ್ತದೆ.
ಅಣುವಿಸ್ಫೋಟಗಳಿಂದಾಗಿ ಪರ್ಯಾವರಣದಲ್ಲಿ ಹಲವಾರು ಸಂಕೀರ್ಣ ಭೌತಿಕ ಹಾಗೂ ರಾಸಾಯನಿಕ ಪ್ರಕ್ರಿಯೆಗಳಾಗಿ ಅವುಗಳಿಂದಾಗಿ ಬೃಹತ್ ಪ್ರಮಾಣದಲ್ಲಿ ಭೌಗೋಳಿಕವಾಗಿ ಹಾಗೂ ಪರಿಸರದ ಮೇಲೆ ದೀರ್ಘಾವಧಿಯ  ಪರಿಣಾಮಗಳುಂಟಾಗುತ್ತವೆ. ಈ ಪರಿಣಾಮಗಳನ್ನುಂಟುಮಾಡುವ ಕಾರಣಗಳಲ್ಲಿ ಬಹುಮುಖ್ಯ ವಾದದ್ದು ವಿಸ್ಫೋಟದ ವಿಕಿರಣ ವಸ್ತುಗಳಿಂದಾಗುವ ಪರ್ಯಾ ವರಣದ ಮಲಿನತೆ, ಏರೋಸಾಲ್ ಕಣಗಳಿಂದಾಗುವ ವಾತಾವರಣದ ಮಲಿನತೆ ಹಾಗೂ ವಿಸ್ಫೋಟ ಮತ್ತು ನಂತರದ ಬೆಂಕಿಗೆ ಉರಿಯುವ ವಸ್ತುಗಳ ಅನಿಲಗಳಿಂದಾಗುವ ಮಲಿನತೆ.
    ಅಣುವಿಸ್ಫೋಟದಿಂದ ಉದ್ಭವಿಸುವ ವಿಕಿರಣ ಮೋಡಗಳು ಸಾವಿರಾರು ಕಿಲೋಮೀಟರುಗಳಷ್ಟು ಪಸರಿಸುತ್ತವೆ. ಭೂಮಿಯ ಮೇಲ್ಮೈನಲ್ಲಿನ ವಿಸ್ಫೋಟ ಇನ್ನೂ ಹೆಚ್ಚಿನ ವಿಕಿರಣ ಮಲಿನತೆ ಉಂಟುಮಾಡುತ್ತದೆ. ಅಲ್ಲಿನ ವಿಕಿರಣತೆ 400-1000 ರೆಮ್ ಅನ್ನೂ ಮೀರುತ್ತದೆ. ದೀರ್ಘಕಾಲ ಇರುವ ಐಸೋಟೋಪುಗಳಾದ ಸ್ಟ್ರಾಂನ್ಷಿಯಂ-90 ಮತ್ತು ಸೆಸಿಯಂ-137ನ ಮಲಿನತೆ ಪ್ರತಿಚದರ ಕಿ.ಮೀ.ಗೆ 4ರಿಂದ 10ಅiಗಳಷ್ಟಿರುತ್ತದೆ ಹಾಗೂ ಇಡೀ ಭೂಮಿಯ ವಿಕಿರಣ ಮಲಿನತೆ ಪ್ರತಿ ಚದರ ಕಿ.ಮೀ.ಗೆ 2ರಿಂದ 3ಅiಗಳಷ್ಟಾಗುತ್ತದೆ. ಈ ಮಟ್ಟದ ವಿಕಿರಣ ಮಲಿನತೆ ಇಡೀ ಜೀವರಾಶಿಗೇ ಹಾನಿಕರವಾದುದು. ಪರಿಸರದ ಸಮತೋಲನದಲ್ಲಿ ಏರುಪೇರಾಗತೊಡಗುತ್ತದೆ. ಐಯೋಡಿನ್-131ರಂತಹ ಕೆಲವು ರೇಡಿಯೋ ಐಸೋಟೋಪುಗಳು ಚಲಿಸಬಲ್ಲವಾದುದರಿಂದ ಪ್ರದೇಶದಿಂದ ಪ್ರದೇಶಕ್ಕೆ ಅಂತರ್ಜಲ ಹಾಗೂ ಮೇಲ್ಮೈ ಜಲದ ಮೂಲಕ ಹರಡುತ್ತವೆ. ಟಂಗ್‍ಸ್ಟನ್, ವೈಟ್ರಿಯಂ, ಸ್ಟ್ರಾಂನ್ಷಿಯಂ ಮತ್ತು ರಥೆನಿಯಂ ಅನ್ನು ಸಸ್ಯಗಳು ಬೇರುಗಳ ಮೂಲಕ ಹೀರಿಕೊಳ್ಳುತ್ತವೆ. ಈ ಸಸ್ಯಗಳ ಮೂಲಕ ಪ್ರಾಣಿ, ಮನುಷ್ಯರಿಗೆ ಆಹಾರದ ಮೂಲಕ ತಲುಪಿ ಮತ್ತಷ್ಟು ಹಾನಿಯುಂಟಾಗುತ್ತದೆ.
ವಿಕಿರಣದಿಂದಾಗುವ ಉತ್ಪರಿವರ್ತನೆ (Mutation) ಬಹುತೇಕ ಎಲ್ಲ ಜೀವಿಗಳ ಮೇಲೂ ಆಗುತ್ತದೆ. ಹಾಗಾಗಿ ಬದುಕುಳಿಯುವ ಮನುಷ್ಯ ಬದಲಾದ ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಾಣುಜೀವಿಗಳಿಗೆ ಹೊಂದಿಕೊಳ್ಳಲೇ ಬೇಕಾಗುತ್ತದೆ, ಎಂದೂ ಕಂಡ ರಿಯದ ಹೊಸಹೊಸ ಕಾಯಿಲೆಗಳಿಗೆ ಬಲಿಯಾಗಬೇಕಾ ಗುತ್ತದೆ. ವಿಕಿರಣಕ್ಕೆ ಬಲಿಯಾದಲ್ಲಿ ಕ್ಯಾಟರಾಕ್ಟ್, ಶೀಘ್ರ ಮುದಿಯಾಗುವಿಕೆ, ರೋಗನಿರೋಧಕ ಶಕ್ತಿ ಕುಂಠಿತ ವಾಗುವುದು, ಟೆರಟೋಜೆನೆಸಿಸ್, ಮಾನಸಿಕ ಕಾಯಿಲೆಗಳು...... ಹೀಗೆ ರೋಗಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ಅಣುಯುದ್ಧದಲ್ಲಿ ಅವರಿಗರಿವಿಲ್ಲದೆ ಸತ್ತವರೇ ಅದೃಷ್ಟವಂತರು, ಬದುಕುಳಿಯುವವರ ಹಾಗೆ ನರಳಿನರಳಿ ಸಾಯಬೇಕಾಗಿರುವುದಿಲ್ಲ.

    ವಿಕಿರಣಕ್ಕೆ ಬಲಿಯಾದ ಆಹಾರ ತಿನ್ನುವವರ ಪರಿಸ್ಥಿತಿಯೂ ಸಹ ಅಷ್ಟೇ ಘೋರವಾಗಿರುತ್ತದೆ. ವಿಕಿರಣದ ತೀಕ್ಷ್ಣತೆಯನ್ನನುಸರಿಸಿ ವಿವಿಧ ತರಹದ ಕ್ಯಾನ್ಸರ್ ರೋಗಗಳುಂಟಾಗುತ್ತವೆ - ರಕ್ತದ ಕ್ಯಾನ್ಸರ್, ಪುಪ್ಪುಸದ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಮುಂತಾದುವು.
    ಏರೋಸಾಲ್ ಮತ್ತು ವಿಷಾನಿಲಗಳಿಂದ ಉಂಟಾಗುವ ವಾತಾವರಣದ ಮಲಿನತೆಗೆ ಅಣುವಿಸ್ಫೋಟ ಹಾಗೂ ನಂತರ ಅದರಿಂದಾಗಿ ಉಂಟಾಗುವ ಬೆಂಕಿಯ ದಹನಕ್ರಿಯೆ ಕಾರಣವಾಗುತ್ತದೆ. ಭೂಮಿಯ ಮೇಲ್ಮೈ ಅಣುವಿಸ್ಫೋಟದಿಂದ ಸಾವಿರಾರು ಟನ್ನು ಗಳಷ್ಟು ಮಣ್ಣಿನ ಧೂಳು ವಾತಾವರಣಕ್ಕೆ ಸಿಡಿಯಲ್ಪಡುತ್ತದೆ ಹಾಗೂ ಬಹಳಷ್ಟು ಮಣ್ಣು ಸಿಡಿತದ ಶಾಖಕ್ಕೆ ಕರಗಿ ಆವಿಯಾಗಿಬಿಡುತ್ತದೆ. ಈ ರೀತಿ ಆವಿ ಯಾಗುವ ಭಾಗ ಅತ್ಯಂತ ಸೂಕ್ಷ್ಮ ಕಣಗಳನ್ನು ಹೊಂದಿದ್ದು ಏರೋ ಸಾಲ್‍ಗಳಾಗಿ ರೂಪಾಂತರ ಹೊಂದು ತ್ತವೆ. ಏರೋಸಾಲ್ ಗಳೆಂದರೆ ಒಂದು ಮೈಕ್ರೋ ಮೀಟರ್ ಗಿಂತ  ಸಣ್ಣದಾಗಿ ಇರುವ ಅತಿ ಸಣ್ಣ ಧೂಳಿನ ಕಣಗಳು. ಸಿಡಿಯುವ ಬಹಳಷ್ಟು ಮಣ್ಣು ವಿಸ್ಫೋಟದ ಸ್ಥಳದಲ್ಲೇ ಬೀಳುತ್ತದೆ. ಆದರೆ ಏರೋಸಾಲ್ ಕಣಗಳು ವರುಷಗಟ್ಟಲೆ ವಾತಾವರಣದಲ್ಲಿರುತ್ತವೆ.
    ಅಣುವಿಸ್ಫೋಟದ ನಂತರ ನಗರಗಳು, ಕಾಡುಗಳು ಹಾಗೂ ತೈಲದ ಬಾವಿಗಳು ಬೆಂಕಿಯಿಂದ ಹತ್ತಿ ಉರಿದು ಬಹಳಷ್ಟು ಪ್ರಮಾಣದ ಇಂಗಾಲದ ಮಾನಾಕ್ಸೈಡ್, ಬೂದಿ, ಇತರ ಅನಿಲಗಳು ಹಾಗೂ ಏರೋಸಾಲ್ ಕಣಗಳು ಉತ್ಪತ್ತಿಯಾಗುತ್ತವೆ. ಇವು ಭೂಮಿಯಿಂದ 5-6 ಕಿ.ಮೀ.ಗಳವರೆಗೂ ವಾತಾವರಣದಲ್ಲಿ ಏರಿ ಸ್ಟ್ರಾಟೋಸ್ಪಿಯರ್ ಪ್ರವೇಶಿಸುತ್ತವೆ. ಇವು ಇಲ್ಲಿ ದೀರ್ಘಕಾಲ ಇರುತ್ತವೆ. ಈ ಹೊಗೆ, ಧೂಳುಕವಿದು ಸೂರ್ಯನ ಬೆಳಕು ಭೂಮಿಯನ್ನು ಪ್ರವೇಶಿಸದಂತೆ ತಡೆಯುತ್ತವೆ. ಈ ರೀತಿ ಭೂಮಿಗೆ ತಲುಪುವ ಸೂರ್ಯನ ಬೆಳಕು ಮತ್ತು ಶಾಖ ಸುಮಾರು 150 ಪಟ್ಟು ಕಡಿತಗೊಳ್ಳುತದೆಂಬುದು ಒಂದು ಅಂದಾಜು. ಇದರಿಂದಾಗಿ ‘ಅಣುಚಳಿಗಾಲ’ ಪ್ರಾರಂಭವಾಗಿ ಇಡೀ ಜೀವರಾಶಿ ಚಳಿಯಿಂದ ತತ್ತರಿಸುತ್ತದೆ. ಒಂದು ಅಂದಾಜಿನ ಪ್ರಕಾರ 3ರಿಂದ 4 ವಾರಗಳಲ್ಲಿ ವಾತಾವರಣದ ಉಷ್ಣತೆ 30º ಸೆಂಟಿಗ್ರೇಡ್‍ನಷ್ಟು ಕುಸಿದು -23º ಸೆಂಟಿಗ್ರೇಡ್‍ನಷ್ಟಾಗುತ್ತದೆ. ಈ ಚಳಿಗಾಲ ಹಾಗೂ ಅಂಧಕಾರ ವಿಸ್ಫೋಟದ ತೀಕ್ಷ್ಣತೆಯನ್ನನುಸರಿಸಿ ಒಂದು ವರ್ಷಕ್ಕೂ ಹೆಚ್ಚಿನ ಸಮಯವಿರಬಹುದು ಅಥವಾ ದಶಕಗಳೇ ಮುದುವರಿಯಬಹುದು. ಈ ಶೀತಲ ವಾತಾವರಣ ಹಾಗೂ ಅಂಧಕಾರದಿಂದ ಸಸ್ಯಜೀವರಾಶಿಯ ದ್ಯುತಿಸಂಶ್ಲೇಷಣಾ ಕ್ರಿಯೆ ನಿಂತುಹೋಗಿ ಅವು ಸಾಯತೊಡಗುತ್ತವೆ ಹಾಗೂ ಅವುಗಳ ಮೇಲೆ ಅವಲಂಬಿಸಿದ ಜೀವರಾಶಿಯೂ ಸಹ ನಿರ್ನಾಮವಾಗಿಬಿಡುತ್ತದೆ.

    ಬೂದಿ ಹಾಗೂ ಧೂಳಿನ ಕಣಗಳು ಹಿಮಗಡ್ಡೆಗಳ ಮೇಲೆ ಹಾಗೂ ಹಿಮಚ್ಛಾದಿತ ಪರ್ವತಗಳ ಮೇಲೆ ಬಿದ್ದು ಮಂಜು ಕರಗಿ ನೀರಾಗಿ ನದಿಗಳ ಪ್ರವಾಹ ಹೆಚ್ಚಾಗುತ್ತದೆ. ಪ್ರವಾಹದ ಹಾದಿಯಲ್ಲಿನ ನಗರಗಳೆಲ್ಲಾ ಕೊಚ್ಚಿಹೋಗುತ್ತವೆ, ಅರಣ್ಯಗಳು ಮುಳುಗಡೆಯಾಗುತ್ತವೆ.
    ಅಣುವಿಸ್ಫೋಟದಿಂದ ಉತ್ಪಾದಿತವಾಗುವ ಸಾರಜನಕದ ಆಕ್ಸೈಡ್ ಅಣುಗಳು ವಾತಾವರಣ ಸೇರಿ ಭೂಮಿಯನ್ನು ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಿಸುತ್ತಿರುವ ಓeóÉೂೀನ್ ಪದರದ ಶೇ.30ರಿಂದ 70ರಷ್ಟನ್ನು ನಾಶಪಡಿಸಿಬಿಡುತ್ತದೆ. ನಂತರ ಯಾವ ಅಡೆತಡೆಯಿಲ್ಲದೆ ಭೂಮಿಯನ್ನು ಪ್ರವೇಶಿಸುವ ಅಲ್ಟ್ರಾವಯಲೆಟ್ ಕಿರಣಗಳು ಸಮಸ್ತ ಜೀವರಾಶಿಯ ಮೇಲೆ ಘೋರ ಪರಿಣಾಮ ಬೀರುತ್ತವೆ ಹಾಗೂ ಅವು ಸ್ಟ್ರಾಟೋಸ್ಪಿಯರ್‍ನ ಉಷ್ಣತಾ ಸಮತೋಲನ ಏರುಪೇರುಮಾಡಿ ಭೂಮಿಯ ವಾತಾವರಣವನ್ನೇ ಬದಲಿಸಿಬಿಡುತ್ತವೆ.
    ಓಝೋನ್ ಪದರ 240ರಿಂದ 320 ನ್ಯಾನೋಮೀಟರ್ ತರಂಗಾಂತರದ ಅಲ್ಟ್ರಾವಯಲೆಟ್ ಕಿರಣಗಳನ್ನು ಭೂಮಿಗೆ ಪ್ರವೇಶಿಸದಂತೆ ತಡೆಯುತ್ತದೆ. 290ರಿಂದ 320 ನ್ಯಾನೋಮೀಟರ್‍ನ ಅಲ್ಟ್ರಾವಯಲೆಟ್ ಕಿರಣಗಳು ಜೀವಿಗಳ ಜೀವಕೋಶಗಳ ನ್ಯೂಕ್ಲಿಯಿಕ್ ಆಮ್ಲಗಳು ಹೀರಿಕೊಳ್ಳುವುದರಿಂದ ಅವುಗಳಲ್ಲಿ ಕ್ಯಾನ್ಸರ್‍ನಂತಹ ಕಾಯಿಲೆಗಳು ಉಂಟಾಗುತ್ತವೆ.
    ಇದರಿಂದ ಒಂದಂತೂ ಸ್ಪಷ್ಟ- ಅಣುಯುದ್ಧದಲ್ಲಿ ಗೆಲ್ಲುವವರೇ ಇಲ್ಲ.
    ಒಂದು ಮೆಗಾಟನ್ ವಿಸ್ಫೋಟ 500 ಚದರ ಕಿ.ಮೀ. ಅರಣ್ಯವನ್ನು ಅಥವಾ 10 ಲಕ್ಷ ಜನರಿರುವ ನಗರವೊಂದನ್ನು ಸುಟ್ಟು ಭಸ್ಮ ಮಾಡಬಲ್ಲುದು ಹಾಗೂ 20 ಕೋಟಿ ಟನ್ ಧೂಳು, ಹೊಗೆಯನ್ನು ವಾತಾವರಣಕ್ಕೆ ಸಿಡಿಸಬಲ್ಲುದು. 

ಅಣುವಿಸ್ಫೋಟದ ತಕ್ಷಣ ಏನೇನಾಗುತ್ತದೆ?
    ವಿಸ್ಫೋಟದ ಕೇಂದ್ರದಿಂದ 3 ಚದರ ಕಿಲೋಮೀಟರ್ ಒಳಗಿನ ಜನ ವಿಸ್ಫೋಟದಿಂದ ಹೊರಸೂಸುವ ಗ್ಯಾಮಾ ಕಿರಣಗಳಿಂದಲೇ ಸತ್ತುಹೋಗುತ್ತಾರೆ. ಅವರೇ ಅದೃಷ್ಟವಂತರು. ಏಕೆಂದರೆ, ಏನಾಗಿದೆಯೆಂದು ತಿಳಿಯುವ ಮುನ್ನವೇ ಅವರಿಗೆ ಸಾವು ಬಂದಿರುತ್ತದೆ- ಕ್ಷಣಾರ್ಧದಲ್ಲಿ ಅವರ ಇಡೀ ದೇಹವೇ ಆವಿಯಾಗಿಬಿಟ್ಟಿರುತ್ತದೆ. ವಿಸ್ಫೋಟದ ಪ್ರಖರ ಹಾಗೂ ಪ್ರಜ್ವಲ ಬೆಳಕು ಸೂರ್ಯನೂ ನಾಚುವಂತಿರುತ್ತದೆ. ಸುಮಾರು 25 ಚದರ ಕಿಲೋಮೀಟರ್ ಒಳಗಿನ ಮನುಷ್ಯರು, ಜಾನುವಾರು ಹಾಗೂ ಇತರ ಪ್ರಾಣಿಪಕ್ಷಿಗಳು ಆ ಪ್ರಖರತೆಗೆ ಸಂಪೂರ್ಣ ಕುರುಡರಾಗಿಬಿಡುತ್ತವೆ, ತಾವು ಕಣ್ಣು ಮುಚ್ಚಿಕೊಂಡಿದ್ದರೂ ಸಹ. ಈ ವಿಸ್ಫೋಟದ ನೋಟ 150 ಕಿ.ಮೀ. ದೂರದಿಂದ ನೋಡುವವರಿಗೆ ನಡುನೆತ್ತಿಯ ಸೂರ್ಯನಿಗಿಂತ ಹೆಚ್ಚು ಪ್ರಖರವಾಗಿ ಕಂಡು ಅವರ ಅಕ್ಷಿಪಟಲ ಸುಟ್ಟುಹೋಗುತ್ತದೆ. ಬಹುಶಃ ಅವರು ನೋಡುವ ಕೊನೆಯ ಸ್ಪಷ್ಟ ಚಿತ್ರ ಅದೇ ಆಗಿರುತ್ತದೆ.
    ವಿಸ್ಫೋಟದ ಮೊದಲ ಗ್ಯಾಮಾ ಕಿರಣಗಳ ಸಿಡಿತದ ನಂತರ ಕ್ಷಣಾರ್ಧದಲ್ಲಿ ಅತ್ಯಂತ ಬಿಸಿಯ ಅಲೆಯು ಬೀಸುತ್ತದೆ. ನಂತರ ಕೆಲ ಕ್ಷಣಗಳಲ್ಲಿ ಅತಿಯಾದ ಒತ್ತಡದ ಅಲೆಯು ಬೀಸುತ್ತದೆ. ಅಷ್ಟೊತ್ತಿಗೆ ಬದುಕುಳಿದಿರುವ ಮನುಷ್ಯರ ಹಾಗೂ ಪ್ರಾಣಿಗಳ ಎಲ್ಲ ರಂಧ್ರಗಳಲ್ಲಿ ರಕ್ತ ಸುರಿಯಲು ಆರಂಭಿಸಿರುತ್ತದೆ. ಒತ್ತಡದ ಅಲೆಯ ಹಿಂದೆಯೇ ನೂರಾರು ಕಿ.ಮೀ. ವೇಗದ ಬಿರುಗಾಳಿ ಬೀಸತೊಡಗುತ್ತದೆ. ಇದರ ಜೊತೆ ಹಾರಿಬರುವ ವಸ್ತುಗಳ ಚೂರುಗಳು ದೇಹಗಳನ್ನು ಭೇದಿಸಿ ಗಾಯಗಳನ್ನು ಮಾಡಿರುತ್ತವೆ, ನುಜ್ಜುಗುಜ್ಜು ಮಾಡಿರುತ್ತವೆ. ಅತಿಯಾದ ವಿಕಿರಣದಿಂದಾಗಿ ಮನುಷ್ಯ ಹಾಗೂ ಪ್ರಾಣಿಗಳ ದೇಹದ ಜೀವಕೋಶಗಳಲ್ಲಿನ ಅಣು ವ್ಯವಸ್ಥೆಯೇ ಛಿದ್ರವಾಗಿ ಚರ್ಮ ಸಿಪ್ಪೆಯಂತೆ ಸುಲಿಯತೊಡಗುತ್ತದೆ, ಕೂದಲು ಗುಚ್ಛಗುಚ್ಛವಾಗಿ ಕಿತ್ತು ಬರುತ್ತದೆ, ವಾಂತಿಯಾಗ ತೊಡಗುತ್ತದೆ, ತಣಿಸಲಾಗದಂತಹ ಬಾಯಾರಿಕೆ ಕಾಡತೊಡಗುತ್ತದೆ. ಗಾಯಾಳುಗಳನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸಿದರೂ ಈ ನರಳಾಟದ ಅವಸ್ಥೆ ಕಡಿಮೆಯಾಗುವುದಿಲ್ಲ. ಆದರೆ ಆಗ ಸ್ಥಳಾಂತರಿಸುವವರು ಯಾರೂ ಇರುವುದಿಲ್ಲ. ವಿಸ್ಫೋಟದ ನಂತರ ಎಲ್ಲವೂ ಹತ್ತಿ ಉರಿಯತೊಡಗುತ್ತದೆ. ನಗರಗಳಲ್ಲಿನ ವಾಹನಗಳು, ಗ್ಯಾಸ್ ಸಿಲಿಂಡರ್‍ಗಳು, ಇಂಧನದ ಗೋದಾಮುಗಳು, ಪೆಟ್ರೋಲ್‍ಬಂಕ್‍ಗಳು ಎಲ್ಲವೂ ಬಾಂಬ್‍ಗಳಾಗುತ್ತವೆ. ರಸ್ತೆಗಳ ಡಾಂಬರು ಸಹ ಕರಗಿ ಬೆಂಕಿ ಹತ್ತಿಕೊಂಡು ಉರಿಯತೊಡಗುತ್ತದೆ.
    ಜನರಿಗೆ ಸಾವು ಎಲ್ಲೆಡೆ ಕಾದಿರುತ್ತದೆ.
    ಒಂದು ಮೆಗಾಟನ್ ಅಣುವಿಸ್ಫೋಟದ ಅಣಬೆಯಾಕಾರದ ಧೂಳು, ಹೊಗೆ 25 ಕಿ.ಮೀ. ಅಗಲ ಪಸರಿಸಿ ಅಷ್ಟೇ ಎತ್ತರಕ್ಕೆ ಏರುತ್ತದೆ. ಮೊದಲನೆಯ ದಿನವೆಲ್ಲಾ ವಿಕಿರಣ ಸೂಸುವ ಚೂರುಗಳ ಮಳೆಗರೆಯುತ್ತದೆ. ಬರುಬರುತ್ತಾ ಚೂರುಗಳು ಸಣ್ಣಗಾಗುತ್ತವೆ. ಆದರೂ ವಿಕಿರಣ ಸೂಸುವ ಅತಿಸಣ್ಣ ಕಣಗಳು ಬೀಳುತ್ತಲೇ ಇರುತ್ತವೆ ಹಾಗೂ ಏರೋಸಾಲ್ ಕಣಗಳು ವಾತಾವರಣದಲ್ಲೇ ಇರುತ್ತವೆ. ಈ ಕಣಗಳು ಉಸಿರಮೂಲಕ ಆರೋಗ್ಯವಂತರ ಪುಪ್ಪುಸದ ಒಳಹೊಕ್ಕರೆ, ಅವು ಅಲ್ಲೇ ಕೂತು ವಿಕಿರಣ ಸೂಸಿ ಕ್ಯಾನ್ಸರ್ ಉಂಟು ಮಾಡುತ್ತವೆ.
    ವಾತಾವರಣದಲ್ಲಿ ಸಿಡಿಯುವ ಅಣ್ವಸ್ತ್ರ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪಲ್ಸ್ ಉಂಟುಮಾಡುತ್ತದೆ. ವಿಸ್ಫೋಟದ ನಂತರ ಇದು ಎಷ್ಟು ವಿಸ್ತಾರಕ್ಕೆ ಹರಡುತ್ತದೆಂದರೆ ಇದರ ಹರವು ಭಾರತ-ಪಾಕಿಸ್ತಾನಕ್ಕಿಂತ ಹೆಚ್ಚಿರಬಹುದು. ಈ ಪಲ್ಸ್‍ನಿಂದಾಗಿ ಎಲ್ಲಾ ವಿದ್ಯುತ್ ಹಾಗೂ ವಿದ್ಯುನ್ಮಾನ ಉಪಕರಣಗಳು ತಟಸ್ಥವಾಗುತ್ತವೆ. ವಿಮಾನಗಳು ತಮ್ಮ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳುತ್ತವೆ. ಕಂಪ್ಯೂಟರ್‍ಗಳು, ದೂರಸಂಪರ್ಕ ಉಪಕರಣಗಳು ನಿಷ್ಕ್ರಿಯವಾಗುತ್ತವೆ. ಇದೇ ಕಾರಣಕ್ಕಾಗಿಯೇ ಅಣು ಪರೀಕ್ಷೆಗಳನ್ನು ಭೂಮಿಯ ಒಳಗಡೆ ನಡೆಸುತ್ತಾರೆ.
    ಇಡೀ ಭೂಮಿಯ ವಾತಾವರಣ ಬದಲಾಗುತ್ತದೆ, ಕಾಡು, ಸಸ್ಯರಾಶಿ ಉರಿದು ಬೂದಿಯಾಗುತ್ತದೆ, ನಗರಗಳು, ಕೈಗಾರಿಕೆಗಳು ನೆಲಸಮವಾಗುತ್ತವೆ, ಮನುಷ್ಯರನ್ನೊಳಗೊಂಡಂತೆ ಇಡೀ ಜೀವಜಾಲ ನಿರ್ನಾಮವಾಗುತ್ತದೆ. ಭೂಮಿ ಗುರುತು ಸಿಗದಷ್ಟು ಛಿದ್ರವಾಗಿರುತ್ತದೆ. ಬದುಕುಳಿಯುವ ಕೆಲವರಿಗೆ ಎದುರಾಗುವುದು ಅಂಧಕಾರ, ಕೊರೆಯುವ ಚಳಿ, ಕುಡಿಯಲು ನೀರೇ ಇಲ್ಲದಿರುವಂತಹ ಪರಿಸ್ಥಿತಿ, ಆಹಾರದ ಕೊರತೆ, ಜೊತೆಗೆ ವಿಕಿರಣದಿಂದ ಹಾಗೂ ಸೋಂಕಿನಿಂದ ಉಂಟಾಗುವ ರೋಗ ಕಾಯಿಲೆಗಳು, ಮಾಲಿನ್ಯತೆ, ಅತಿಯಾದ ಮಾನಸಿಕ ಒತ್ತಡ, ಜರ್ಜರಿತ.............. ಕುಸಿದ ನಾಗರಿಕತೆಯಲ್ಲಿ ನಿಲ್ಲಲೂ ತಾವು ಸಿಕ್ಕುವುದಿಲ್ಲ. ಒಟ್ಟಾರೆ ಮನುಷ್ಯರು ಬದುಕಲು ಯಾವ ರೀತಿಯಲ್ಲಿಯೂ ಯೋಗ್ಯ ಸ್ಥಳವಾಗಿರುವುದಿಲ್ಲ. ಸತ್ತವರನ್ನು ಕಂಡು ಬದುಕಿರುವವರು ಕರುಬುವಂತಾಗುತ್ತದೆ.
    ಎರಡನೇ ಮಹಾ ಯುದ್ಧದಲ್ಲಿ ಬಳಸಿದ ಪರಮಾಣು ಬಾಂಬ್‍ಗಳಿಗಿಂತ ಈಗಿನ ಅಣುಬಾಂಬ್‍ಗಳು ಸಾವಿರಾರುಪಟ್ಟು ಹೆಚ್ಚು ವಿಧ್ವಂಸಕಾರಿಯಾಗಿವೆ. ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಹಾಕಿದ ಬಾಂಬ್‍ಗಳು ಅನುಕ್ರಮವಾಗಿ 22 ಹಾಗೂ 12 ಕಿಲೋ ಟನ್ ಶಕ್ತಿಯುತವಾಗಿದ್ದವು ಹಾಗೂ 7 ಮತ್ತು 13 ಚದರ ಕಿ.ಮೀ. ಪ್ರದೇಶವನ್ನು ನಾಶಗೊಳಿಸಿದ್ದವು ಹಾಗೂ 240000ಕ್ಕೂ ಹೆಚ್ಚಿನ ಜನ ಸತ್ತುಹೋಗಿದ್ದರು.
    65 ದಶಲಕ್ಷ ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿ ಧೂಳು ಆಕಾಶಕ್ಕೆ ಸಿಡಿದೆದ್ದು ಹಲವಾರು ವರ್ಷಗಳವರೆಗೆ ಅಂಧಕಾರವಿದ್ದುದರಿಂದಲೇ ಡೈನೋಸಾರ್‍ಗಳನ್ನೊಳಗೊಂಡಂತೆ ಮುಕ್ಕಾಲುಭಾಗ ಜೀವರಾಶಿಯೆಲ್ಲಾ ನಶಿಸಿಹೋಗಿತ್ತೆಂದು ವಿಜ್ಞಾನಿಗಳು ಹೇಳುತ್ತಾರೆ. 1815ರಲ್ಲಿನ ಇಂಡೋನೇಷಿಯಾದ ತಂಬೋರ ಅಗ್ನಿಪರ್ವತ ಸಿಡಿಯಿತು. ಅದರ ಸಿಡಿತ 150 ಘನ ಕಿ.ಮೀ.ನಷ್ಟು ಧೂಳು ಮತ್ತು ಬೂದಿಯನ್ನು ಆಗಸಕ್ಕೆ ಸಿಡಿಸಿತು. ಉತ್ತರ ಅಮೆರಿಕಾ ಹಾಗೂ ಪಶ್ಚಿಮ ಯುರೋಪಿನ ಜನ 1816ನೇ ಇಸವಿಯನ್ನು ‘ಬೇಸಿಗೆಯಿಲ್ಲದ ವರ್ಷ’ ಎಂದು ಕರೆದರು. ಆ ವರ್ಷ ನ್ಯೂ ಇಂಗ್ಲೆಂಡಿನಲ್ಲಿ ಜೂನ್‍ನಲ್ಲೇ ಹಿಮಪಾತವಾಯಿತು, ಜುಲೈ-ಆಗಸ್ಟ್‍ನಲ್ಲಿ ಕೊರೆಯುವ ಚಳಿ ಇದ್ದಿತು, ಸ್ವಿಟ್ಜರ್‍ಲೆಂಡ್ ಮತ್ತು ಫ್ರಾನ್ಸ್‍ನಲ್ಲಿ ಸೇಬು ಹಣ್ಣಾಗುವ ಕಾಲ ಬರಲೇ ಇಲ್ಲ. ಈ ರೀತಿಯ ಅಸಹಜ ಶೀತಲ ಬೇಸಿಗೆಯಿಂದ ಬೆಳೆಗಳು ನಾಶವಾದವು, ಎಲ್ಲೆಲ್ಲೂ ಬರಗಾಲ ತಾಂಡವವಾಡಿತು. ಆಗಲೇ ಬಂಗಾಳದ ಬರಗಾಲವೂ ಆರಂಭವಾಗಿದ್ದು, ಎಲ್ಲೆಲ್ಲೂ ಕಾಲರಾನಂತಹ ಸಾಂಕ್ರಾಮಿಕ ರೋಗಗಳು ರುದ್ರ ನೃತ್ಯ ಮಾಡಿದ್ದು. ನಂತರ ಬರಗಾಲ 1823ರಲ್ಲಿ ಕಾಕಸಸ್ ಹಾಗೂ ಅಲ್ಲಿಂದ 1930ರಲ್ಲಿ ಯುರೋಪ್ ಹಾಗೂ ಅಮೆರಿಕಾ ಪ್ರವೇಶಿಸಿತು.
    ಇಂಡೊನೇಷ್ಯಾದಲ್ಲಾದ ಭೂಕಂಪದಿಂದಾಗಿ ಉಷ್ಣಾಂಶದಲ್ಲಿನ ಕೇವಲ ಕೆಲವೇ ಡಿಗ್ರಿಗಳ ಕಡಿತ ಈ ರೀತಿ ವಿಶ್ವದಾದ್ಯಂತ ಪ್ರಭಾವ ಉಂಟುಮಾಡುವುದಾದಲ್ಲಿ ಅಣುವಿಸ್ಫೋಟದಿಂದಾಗುವ ಹತ್ತಾರು ಡಿಗ್ರಿಗಳ ಉಷ್ಣಾಂಶದ ಕುಸಿತ ಹಾಗೂ ತದನಂತರದ ‘ಅಣುಚಳಿಗಾಲ’ ಉಂಟುಮಾಡಬಹುದಾದ ಹಾನಿ, ದುರಂತವನ್ನು ಊಹಿಸಲಸಾಧ್ಯ.
    ಹತ್ತು ಲಕ್ಷ ಜನರಿರುವ ನಗರದ ಮೇಲೆ ಒಂದು ಮೆಗಾಟನ್ ಅಣ್ವಸ್ತ್ರ ವಿಸ್ಫೋಟಿಸಿದಲ್ಲಿ 2ರಿಂದ 3 ಲಕ್ಷ ಜನ ತಕ್ಷಣ ಸತ್ತುಹೋಗುತ್ತಾರೆ, 3.1ರಿಂದ 3.8 ಲಕ್ಷಜನ ತೀವ್ರವಾಗಿ ಗಾಯಗೊಳ್ಳುತ್ತಾರೆ ಹಾಗೂ 3.1ರಿಂದ 4.5 ಲಕ್ಷಜನ ಸಧ್ಯಕ್ಕೆ ಬದುಕುಳಿಯಬಹುದು. ಇಷ್ಟು ಜನಕ್ಕೆ ಔಷದೋಪಚಾರ ಸಾಧ್ಯವಿದೆಯೆ? ವೈದ್ಯಕೀಯ ಸಿಬ್ಬಂದಿಯೂ ಸಹ ಇತರರಂತೆ ತೊಂದರೆಗೊಳಗಾಗಿರುತ್ತಾರೆ ಹಾಗೂ ವಿಕಿರಣದ ಹಾನಿಗೊಳಗಾದವರಿಗೆ ಚಿಕಿತ್ಸೆ ನೀಡುವಾಗ ತಾವೂ ಸಹ ವಿಕಿರಣಕ್ಕೆ ಒಳಗಾಗುತ್ತಾರೆ. ಆದರೆ ಬಹಳಷ್ಟು ಗಾಯಾಳುಗಳಿಗೆ ಚಿಕಿತ್ಸೆ ಹಾಗೂ ಔಷಧಗಳು ಸಿಗುವುದೇ ಇಲ್ಲ. ವೈದ್ಯರು, ದಾದಿಯರು ಹಾಗೂ ಔಷಧಗಳು ಎಷ್ಟೇ ಸಂಖ್ಯೆ ಹಾಗೂ ಪ್ರಮಾಣದಲ್ಲಿದ್ದರೂ ಸಾಕಾಗುವುದಿಲ್ಲ, ಗಾಯಾಳುಗಳ ಹಾಗೂ ರೋಗಿಗಳ ಸಾಗಾಣಿಕೆಗೆ ವಾಹನಗಳಿರುವುದಿಲ್ಲ, ರಸ್ತೆಗಳು ಸುಸ್ಥಿತಿಯಲ್ಲಿರುವುದಿಲ್ಲ.
    ಅಣುವಿಸ್ಫೋಟದಿಂದ ಜೈವಿಕವಾಗಿ ಹಾಗೂ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.
    1. ಮಾನವ ಪರಿಸರ ಅಥವಾ ಪರ್ಯಾವರಣದ ಮೇಲಾಗುವ ಪರಿಣಾಮಗಳು.
    2. ಮನುಷ್ಯರಿಗೆ ಉಂಟಾಗುವ ಸಾವು-ನೋವು, ವಿಕಿರಣದಿಂದ ಹಾಗೂ     ವಿಕಿರಣ ವಸ್ತುಗಳಿಂದ ವಿಕಿರಣತೆಯು ಸಂಗ್ರಹವಾಗಿ ಉಂಟಾಗುವ  ಸಾವು-ನೋವು, ಕಾಯಿಲೆ ಕಸಾಲೆಗಳು ಮತ್ತು
    3. ವಿಕಿರಣಕ್ಕೆ ಒಳಗಾದ ಜೀವಿಗಳ ಸಂತತಿಯಲ್ಲಿ ಬದಲಾಗುವ ಅನುವಂಶಿಕತೆ ಅಥವಾ ಅನುವಂಶಿಕ ಪ್ರಭಾವಗಳು.
    ವಿಕಿರಣತೆ ಜೀವಿಗಳ ಸಂವರ್ಧನಾ ಶಕ್ತಿಯನ್ನೇ ಕುಂದಿಸಿಬಿಡುತ್ತದೆ ಹಾಗೂ ಉತ್ಪರಿವರ್ತನೆ(ಒuಣಚಿಣioಟಿ)ಯಿಂದಾಗಿ ಅಂಗವಿಕಲ ಸಂತತಿಯನ್ನೇ ಸೃಷ್ಟಿಸುತ್ತದೆ.
    ಕೆಲವು ವಿಜ್ಞಾನಿಗಳ ಪ್ರಕಾರ ಸಾಮಾನ್ಯ ಮಲಿನಕಾರಕಗಳಾದಂತಹ ಗಂಧಕದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್ ಹಾಗೂ ಸಾರಜನಕದ ಆಕ್ಸೈಡುಗಳು ಸಾಮಾನ್ಯ ಪರಿಸರದಲ್ಲಿರುವುದಕ್ಕಿಂತ ಕೇವಲ ಐದು ಪಟ್ಟು ಹೆಚ್ಚಾದರೂ ಸಹ ಪುಪ್ಪುಸ ರೋಗಗಳು ಹಾಗೂ ಆಸ್ತಮಾ ಕಾಯಿಲೆ ಹೆಚ್ಚಾಗುತ್ತದೆ. ಉರುವಲು ಹಾಗೂ ಇಂಧನ ಮಲಿನಕಾರಕಗಳು ಎರಡು ಪಟ್ಟು ಹೆಚ್ಚಾದರೂ ಅಲರ್ಜಿ, ನರಗಳ ದೌರ್ಬಲ್ಯ, ಚರ್ಮರೋಗಗಳು ಹಾಗೂ ಪುಪ್ಪುಸ ರೋಗಗಳು ಹೆಚ್ಚಾಗುತ್ತವೆ. ಮಲಿನಕಾರಕಗಳು ಅಂತರ್ಜಲ ಹಾಗೂ ಜಲಚಕ್ರವನ್ನು ಪ್ರವೇಶಿಸುವುದರಿಂದ ಸುರಿಯುವ ಮಳೆಯೂ ವಿಷವಾಗಿರುತ್ತದೆ ಹಾಗೂ ಕುಡಿಯಲು ಶುದ್ಧ ನೀರೂ ಸಹ ಸಿಗುವುದಿಲ್ಲ.
    ಟೈಫಾಯ್ಡ್, ಆಮಶಂಕೆ, ಕಾಲರಾ ಹಾಗೂ ಪ್ಲೇಗ್‍ನಂತಹ ಸಾಂಕ್ರಾಮಿಕ ರೋಗಗಳು ಇದುವರೆಗಿನ ಎಲ್ಲ ಯುದ್ಧಗಳ ಸಂಗಾತಿಯೇ ಆಗಿವೆ. ಆದರೆ ಅಣುಯುದ್ಧದ ನಂತರ ಬದುಕುಳಿಯುವವರಿಗೆ ಇನ್ನೂ ಹೆಚ್ಚಿನ ಘೋರ ಸಾಂಕ್ರಾಮಿಕ ರೋಗಗಳು ಬದುಕನ್ನು ದುಸ್ತರ ಮಾಡಿಬಿಡುತ್ತವೆ.
    ಅಣುಯುದ್ಧವಾದಲ್ಲಿ ಭೂಮಿಯ ಬಹುಪಾಲು ಜನಸಂಖ್ಯೆಯೇ ವಿನಾಶಹೊಂದುವುದರಿಂದ ಉಳಿಯುವ ಅಲ್ಪಸ್ವಲ್ಪ ಜನಸಮುದಾಯದಲ್ಲಿ ಮದುವೆಗೆ ಸರಿಯಾದ ಗಂಡುಹೆಣ್ಣು ಸಿಗದೆ ಅಂತರ್ ಕುಟುಂಬ ವಿವಾಹಗಳು ಹೆಚ್ಚಾಗಿ ಗಾರ್ಗಯಿಲಿಸಂ, ಕ್ಸೆರೋಡರ್ಮ ಪಿಗ್ಮೆಂಟೋಸಾ, ಥಲಸ್ಸೀಮಿಯಾದಂತಹ ಹಲವಾರು ಕಾಯಿಲೆಗಳಿಗೆ ಅವನ ಸಂತತಿ ಬಲಿಯಾಗಬೇಕಾಗುತ್ತದೆ.
    ಲಕ್ಷಾಂತರ ವರ್ಷಗಳ ಜೀವ ವಿಕಾಸ ಹಾಗೂ ಸಾಂಸ್ಕೃತಿಕ ವಿಕಾಸಗಳ ಫಲ ಇಂದಿನ ಮನುಕುಲ. ‘ಕಾಡು ಮನುಷ್ಯ’ನಾಗಿದ್ದ ಮಾನವ ಇಂದು ‘ನಾಗರಿಕ’ನಾಗಿದ್ದಾನೆ. ಕೇವಲ ಒಂದು ಶತಮಾನದ ‘ವಿಜ್ಞಾನ’ದ ಫಲವಾಗಿ ಮನುಷ್ಯ ಎಚ್ಚರ ತಪ್ಪಿದಲ್ಲಿ ‘ಕಾಡುಮನುಷ್ಯ’ನಿಗಿಂತಲೂ ಹೀನಾಯ ಪರಿಸ್ಥಿತಿಗೆ ಹಿಂದಿರುಗುತ್ತಾನೆ. ಆಗಿನ ಕಾಡುಮನುಷ್ಯನಿಗೆ ‘ವಿಜ್ಞಾನ’ದ ಪರಿಕರಗಳಿರದಿದ್ದರೂ ಅವನಿಗೆ ಬೆಂಬಲವಾಗಿ ಪ್ರಕೃತಿ ಇತ್ತು. ಅಣುಯುದ್ಧದ ನಂತರ ಮನುಷ್ಯ ಉಳಿದಲ್ಲಿ ಅವನ ಒಣಗಿದ ಬಾಯಿ ತೇವ ಮಾಡಲು ತೊಟ್ಟು ನೀರೂ ಸಿಗುವುದಿಲ್ಲ.
    ಈಗ ಮನುಷ್ಯನಿಗೆ ಬಹುಶಃ ಮೊಟ್ಟಮೊದಲಿಗೆ ತನ್ನ ಭವಿಷ್ಯವನ್ನು ನಿರ್ಧರಿಸುವ ಅವಕಾಶ ಸಿಕ್ಕಿದೆ- ಮಾನವನಾಗಿ ಮುಂದುವರಿಯುವುದು ಅಥವಾ ಅಣುಬಾಂಬಿಗೆ ಶರಣಾಗಿ ತನ್ನನ್ನು ಒಳಗೊಂಡಂತೆ ಇಡೀ ಜೀವರಾಶಿಯನ್ನು ನಾಮಾವಶೇಷ ಮಾಡುವುದು. ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಸಂಘರ್ಷಗಳ ತೀರ್ಮಾನಕ್ಕೆ ಅಣ್ವಸ್ತ್ರಕ್ಕೆ ಮೊರೆಹೋಗಬೇಕೆ ಬೇಡವೇ ಎನ್ನುವುದನ್ನು ನಿರ್ಧರಿಸಬೇಕಾಗಿದೆ.
    ಲಿಯೋ ಟಾಲ್‍ಸ್ಟಾಯ್ ತನ್ನ ಪ್ರಖ್ಯಾತ ಕೃತಿ ‘ವಾರ್ ಅಂಡ್ ಪೀಸ್’ನಲ್ಲಿ ಈ ರೀತಿ ಹೇಳಿದ್ದಾನೆ: ‘ಮಹತ್ತರ ಪರಿಣಾಮಗಳ ಎಲ್ಲಾ ವಿಚಾರಗಳೂ ಯಾವಾಗಲೂ ತುಂಬಾ ಸರಳವಾಗಿರುತ್ತವೆ. ನನ್ನ ವಿಚಾರವಿಷ್ಟೆ - ಕೆಟ್ಟ ಜನ ಒಂದುಗೂಡಿರುವವರೆಗೂ, ವಿಚಾರವಂತ ಪ್ರಾಮಾಣಿಕ ಜನರೂ ಒಗ್ಗಟ್ಟಾಗಿರಬೇಕಾಗುತ್ತದೆ. ಇದೂ ಸಹ ಅಷ್ಟೇ ಸರಳ ವಿಚಾರ!’
j.balakrishna@gmail.com


8 ಕಾಮೆಂಟ್‌ಗಳು:

Unknown ಹೇಳಿದರು...

ತುಂಬಾ ಇಷ್ಟವಾಯ್ತು ಸಾರ್.

Unknown ಹೇಳಿದರು...

But edu yalregu gothella gothagbaiku

Madhu ಹೇಳಿದರು...

One of the best article I've ever read .. very good explanation expecting more from you

ananda ಹೇಳಿದರು...

ತುಂಬಾ ತಿಳಿದುಕೊಳ್ಳುವ ಲೇಖನ ಇದು.

Girish Babu ಹೇಳಿದರು...

ವಿಜ್ಞಾನ ಮತ್ತು ಅದರ ಆವಿಶ್ಕಾರೀ ವಸ್ತುಗಳ ಸದುಪಯೋಗದ ವೇಗದಲ್ಲಿ ಬಹಳ ವ್ಯತ್ಯಾಸ ಇರುವುದರಿಂದ ವಿಜ್ಞಾನದ ಹೊಸ ಆವಿಶ್ಕಾರಗಳ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಿದೆ. ಜನರ ಮನೋವಿಕಾಸಕ್ಕೆ ಅವಕಾಶವಿಲ್ಲದಷ್ಟು ವೇಗವಾಗಿ ಹೊಸ ವಿಜ್ಞಾನ ಆವಿಶ್ಕಾರಗಳು ಮಾರಾಟಕ್ಕೆ ಬರುತ್ತಿವೆ. ಈಗ ಮೊಬೈಲು ಕೂಡಾ ಅಂತಹುದೆ. ಆದರೆ ಅದು ವೈಯುಕ್ತಿಕ. ಆದರೆ ಆಣುಬಾಂಬ್‌ ಸಾರ್ವತ್ರಿಕ. ಇಡೀ ಮನುಕುಲ, ಎಲ್ಲ ಪ್ರಾಣಿ, ಪಕ್ಷಿ ಒಮ್ಮೆಲೆ ಔಟ್.‌ ನನ್ನ ಊಹೆ ಸರಿಯಿದ್ದರೆ ಈಗಾಗಲೇ ಇರುವ ಬಾಂಬುಗಳು ಅಕಸ್ಮಾತ್‌ ಸಿಡಿಯುವ ಸಂಭವ ಇದ್ದೇ ಇದೆ. ಜೊತೆಗೆ ಬೇಕೆಂದರೂ ಅವನ್ನು ನಿಷ್ಕ್ರೀಯಗೊಳಿಸಲು ಯಾರಿಗೂ ತರಬೇತಿ ಇದ್ದಂತೆ ಕಾಣುವುದಿಲ್ಲ....

anantharamu ಹೇಳಿದರು...

ಲೇಖನ ಅನೇಕ ವಿವರಣೆಯನ್ನು ನೀಡುತ್ತದೆ .ಮಾಲಿಕ್ಯೂಲ್ಗೆ ಅಣು ಎನ್ನುತೇವೆ .ಆಟಂ ಗೆ ಪರಮಾಣು ಎನ್ನುತ್ತೇವೆ

Unknown ಹೇಳಿದರು...

ಪ್ರತಿಯೊಬ್ಬರೂ ತಿಳಿದುಕೊಳ್ಳುವ ಮಾಹಿತಿಯ ಲೇಖನ,ವಿಶೇಷವಾಗಿ ಯುದ್ಧದ ಬಗ್ಗೆ ಮಾತನಾಡುವ, ಪ್ರಚೋದಿಸುವ,ನಿರ್ಧರಿಸುವವರೆಗೆ ಕಣ್ಣು ತೆರೆಯುವ ಲೇಖನ.
ಧನ್ಯವಾದಗಳು.

ಅನಾಮಧೇಯ ಹೇಳಿದರು...

ಶಾಲಾಕಾಲೇಜುಗಳ ಕಡ್ಡಾಯಪಠ್ಯ