ಮಂಗಳವಾರ, ಮೇ 31, 2022

ಪ್ರೀತಿ ಮತ್ತು ಸ್ಪರ್ಶ







ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಜೂನ್‌ 2022ರ ನ್ಯಾಶನಲ್‌ ಜಿಯಾಗ್ರಫಿಕ್‌ ಪತ್ರಿಕೆಯ ಮುಖಪುಟ ಲೇಖನ The Power of Touch ನೋಡಿದಾಗ ನಾನು 1993ರಲ್ಲಿ ಬರೆದಿದ್ದ ಲೇಖನ ʻಪ್ರೀತಿ ಮತ್ತು ಸ್ಪರ್ಶʼ ಹಾಗೂ ನನ್ನ ಮನೋವೈಜ್ಞಾನಿಕ ಲೇಖನಗಳ ಸಂಕಲನ ʻಮಿಥುನʼ ನೆನಪಾಯಿತು. ನನ್ನ ಆ ಲೇಖನ ಇಲ್ಲಿದೆ ಹಾಗೂ ʻಮಿಥುನʼ ಉಚಿತ ಡೌನ್‌ ಲೋಡ್‌ ಗೆ ಸಹ ಲಭ್ಯವಿದೆ. ಈಗಾಗಲೇ 11943 ಡೌನ್‌ ಲೋಡ್‌ ಗಳಾಗಿವೆ. ಡೌನ್‌ ಲೋಡ್‌ ಲಿಂಕ್‌ ಇಲ್ಲಿದೆ: 

https://archive.org/download/Mithuna-KannadaBookOnSexualPsychology/Mithuna.pdf

ಪ್ರೀತಿ ಮತ್ತು ಸ್ಪರ್ಶ

ಮನುಷ್ಯರ ನಡುವಿನ ದೈಹಿಕ ಸ್ಪರ್ಶದ ಅರ್ಥ ಅತ್ಯಂತ ಸಂಕೀರ್ಣವಾದುದು. ನೂರಾರು ಮಾತುಗಳ ಸಂದೇಶವನ್ನು ಕೆಲವೇ ಸೆಕೆಂಡುಗಳ ಸ್ಪರ್ಶ ಸಂವಹಿಸಿಬಿಡಬಲ್ಲದು. ದುಃಖದಲ್ಲಿರುವವರಿಗೆ ಸಾವಿರಾರು ಸಾಂತ್ವನದ ಮಾತುಗಳು ಮಾಡದ ಕೆಲಸವನ್ನು ಕೇವಲ ಒಂದೇ ಒಂದು ಆತ್ಮೀಯ ಅಪ್ಪುಗೆ ಮಾಡುತ್ತದೆ. ಒಬ್ಬರೇ ಅಳುತ್ತ ದುಃಖಶಮನ ಮಾಡಿಕೊಳ್ಳುವುದಕ್ಕಿಂತ ಆತ್ಮೀಯರೊಬ್ಬರ ಭುಜಕ್ಕೊರಗಿ ಅಳುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಮನಸ್ಸಿನಾಳದ ನೋವು ಕಡಿಮೆಯಾಗುತ್ತದೆ. ಪ್ರೇಮಿಗಳು ಒಬ್ಬರಿಗೊಬ್ಬರು ಒರಗಿಕೊಂಡು ಒಬ್ಬರ ಹೆಗಲ ಮೇಲೊಬ್ಬರು ತಲೆ ಇರಿಸಿ ಪಾರ್ಕಿನ ಯಾವುದಾದರೂ ಮೂಲೆಯಲ್ಲಿ ಗಂಟೆಗಟ್ಟಲೆ ಮೌನವಾಗಿ ʻಹರಟೆʼ ಹೊಡೆಯುತ್ತ ಪ್ರಪಂಚ ಮರೆಯಬಲ್ಲರು. ಮನಸ್ಸಿನ ಅತಿಸೂಕ್ಷ್ಮ ಮತ್ತು ಸಂಕೀರ್ಣ ಭಾವನೆಗಳಾದ ನೋವು, ನಲಿವಯ, ಆತಂಕ ಹೆದರಿಕೆ, ಸಾಂತ್ವ, ಸುರಕ್ಷಿತತೆ ಮುಂತಾದುವನ್ನು ಸ್ಪರ್ಶ ಅಷ್ಟೇ ಸೂಕ್ಷ್ಮವಾಗಿ ಸುಲಭವಾಗಿ ಸಂವಹಿಸಬಲ್ಲುದು.

 

ದೈಹಿಕ ಸ್ಪರ್ಶಕ್ಕೆ ನಮ್ಮ ಬದುಕಿನಲ್ಲಿ ಬಹು ಮುಖ್ಯ ಪ್ರಾಮುಖ್ಯತೆಯಿದೆ. ಹುಟ್ಟಿದಾಗಿನಿಂದ (ಅಥವಾ ಅದಕ್ಕೂ ಮೊದಲು ತಾಯಿಯ ಗರ್ಭದಲ್ಲಿರುವಾಗಿನಿಂದಲೇ) ಸಾಯುವವರೆಗೂ ನಮ್ಮ ಬದುಕಿನಲ್ಲಿ ದೈಹಿಕ ಸ್ಪರ್ಶ ಮಹತ್ವವಾದ ಪಾತ್ರ ವಹಿಸುತ್ತದೆ. ವ್ಯಕ್ತಿಗಳ ನಡುವಿನ ಸ್ಪರ್ಶದ ತೀವ್ರತೆ ಆಯಾ ವ್ಯಕ್ತಿಗಳ ನಡುವಿನ ನಂಬಿಕೆ, ಆತ್ಮೀಯತೆಯನ್ನು ಅವಲಂಬಿಸಿರುತ್ತದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಒಬ್ಬರ ಹೆಗಲಿಗೆ ಮತ್ತೂರು ಕೈಹಾಕಿ ಓಡಾಡಲು ಸಾಧ್ಯವಿಲ್ಲ. ಅಷ್ಟೇಕೆ ಬಸ್ಸುಗಳಲ್ಲಿ ಅಪರಿಚಿತನೊಬ್ಬ ಭುಜಕ್ಕೆ ಒರಗಿಕೊಂಡರೆ ಅವನನ್ನು ಸಂಶಯದ ದೃಷ್ಟಿಯಿಂದ ನೋಡಿ, ನಮ್ಮ ಜೇಬಿನಲ್ಲಿ ಪರ್ಸ್‌ ಭದ್ರವಾಗಿದೆಯೇ ಇಲ್ಲವೋ ಎಂದು ನೋಡಿಕೊಳ್ಳುತ್ತೇವೆ. ಹುಡುಗಿಯರಿಗೆ ಮೈ ತಾಗಿಸಿದರೆ, ಆಕೆ ಗಟ್ಟಿಗಳಾದರೆ ತಾಗಿದವನ ಹಲ್ಲುದುರಬಹುದು.

ಇಷ್ಟಾದರೂ ಮನುಷ್ಯನಿಗೆ ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ಸ್ಪರ್ಶಿಬೇಕೆನ್ನುವ, ಬೆಚ್ಚನೆಯ ಮೃದುತ್ವವನ್ನು ಅನುಭವಿಸಬೇಕೆನ್ನುವ ಒಡಹುಟ್ಟಿದ ಆಸೆ ಇದೆ. ಈ ನಾಗರಿಕ ಸಮಾಜದಲ್ಲಿ ದೈಹಿಕ ಸ್ಪರ್ಶ ಆದಷ್ಟೂ ಸೀಮಿತವಾಗಿರುವಾಗ ಕಂಡ ಕಂಡವರು. ಕಂಡಕಂಡಲ್ಲಿ ಅಪ್ಪಿಕೊಳ್ಳುವ (ಪರಿಚಿತರಾದರೂ), ಸ್ಪರ್ಶಿಸುವ ಅವಕಾಶಗಳು ತೀರಾ ಕಡಿಮೆ. ಪಟ್ಟಣ, ನಗರಗಳಲ್ಲಿ ಒಬ್ಬರೇ ವಾಸಿಸುವವರು ಸುತ್ತಮುತ್ತಲೂ ನೂರಾರು ಜನರಿದ್ದರೂ ಸಹ ಒಂಟಿಯಾಗಿರುತ್ತಾರೆ. ಸುಖದುಃಖ ಹೇಳಿಕೊಳ್ಳಲು ಆತ್ಮೀಯರಿಲ್ಲದಿದ್ದರೆ, ನೋವು ತೋಡಿಕೊಳ್ಳಲು ಒಂದು ʻಭುಜದ ಅಸರೆʼಯಿಲ್ಲದಿದ್ದರೆ ಚಡಪಡಿಸುತ್ತಾರೆ, ಅನಾಥ ಪ್ರಜ್ಞೆಯಲ್ಲಿ ಬಳಲುತ್ತಾರೆ. ಈ ಬಳಲಿಕೆ, ಚಡಪಡಿಕೆ ತೀವ್ರವಾಗಿ ಅಂಥ ಹತಾಶ ವ್ಯಕ್ತಿಗಳನ್ನು ಆತ್ಮಹತ್ಯೆಗೂ ಪ್ರಚೋದಿಸಬಹುದು. ಒಂಟಿತನದ ಹಿಂದೆ ಅಷ್ಟು ಘೋರವಾದದ್ದು.

ಆತ್ಮೀಯತೆಯ ಮೂಲ

ಮನುಷ್ಯನಲ್ಲಿನ ಈ ಆತ್ಮೀಯತೆಯ ಸ್ಪರ್ಶದ ಆಸೆಗೆ ಕಾರಣಗಳೇನು?  ಇತರ ಪ್ರಾಣಿಗಳ ಹಾಗೆ ಅತಿ ಕನಿಷ್ಠ ಸ್ಪರ್ಶದಿಂದಾಗಿ ಅಥವಾ ಸ್ಪರ್ಶಕ್ಕೆ ಮಹತ್ವ ಕೊಡದೆ ಬದುಕಲು ಸಾಧ್ಯವಿಲ್ಲವೆ? ಇತರರನ್ನು ಹೆಚ್ಚಿಗೆ ʻಸೋಕಿಸಿಕೊಳ್ಳದೆʼ ಬೇರೆಯವರೊಟ್ಟಿಗೆ ಅತಿ ಕನಿಷ್ಠ ಸ್ಪರ್ಶದಿಂದ ಬದುಕುತ್ತಿರುವವರು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರುವವರೆ? ಈ ಎಲ್ಲ ಪ್ರಶ್ನೆಗಳಿಗೂ ಸ್ವಲ್ಪ ಮಟ್ಟಿಗೆ ಉತ್ತರ ದೊರಕಿದೆಯೆಂದು ಹೇಳಬಹುದು.

ಈ ಆತ್ಮೀಯ ನಡವಳಿಕೆಯು ಮೂಲವನ್ನು ಮನುಷ್ಯನ ಶೈಶವಾವಸ್ಥೆಗೆ ಮತ್ತು ಅದಕ್ಕೂ ಹಿಂದಿನ ಅವನ ಗರ್ಭಾವಸ್ಥೆಗೆ ಗುರುತಿಸಬಹುದು. ಬೇರೆಲ್ಲ ಪ್ರಾಣಿಗಳಿಗಿಂತ ಮನುಷ್ಯನ ಶೈಶವಾವಸ್ಥೆ ಭಿನ್ನವಾದದ್ದು. ಇನ್ನಿತರ ಪ್ರಾಣಿಗಳಲ್ಲಿನ ಹಾಗೆ ಹುಟ್ಟಿದ ಕೆಲವೇ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಮನುಷ್ಯ ಬದುಕಲು ಸಾಧ್ಯವಿಲ್ಲ. ಸ್ವತಂತ್ರವಾಗಿ ಬದುಕಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಮಗು ತಾಯಿಯ ಗರ್ಭದಲ್ಲಿ ಮೃದುವಾದ ಬೆಚ್ಚನೆಯ, ಸುರಕ್ಷಿತ ವಾತಾವರಣದಲ್ಲಿರುತ್ತದೆ. ಆ ಸ್ಪರ್ಶಾನುಭವವನ್ನೂ ಪಡೆಯುತ್ತಿರುತ್ತದೆ. ಸುಮಾರು ಆರು ತಿಂಗಳಿಂದಾಚೆಗೆ ಶಬ್ದಗಳನ್ನು ಕೇಳುವ ಸಾಮರ್ಥ್ಯ ಸಹ ಪಡೆದಿರುತ್ತದೆ. ಆಗ ಅದು ಒಂದೇ ಸಮನೆ ಬಡಿಯುತ್ತಿರುವ ತಾಯಿಯ ಎದೆಬಡಿತವನ್ನೂ ಸಹ ಕೇಳುತ್ತಿರುತ್ತದೆ. ಮಗು ಕೇಳುವ/ಅನುಭವಿಸುವ ಮೊಟ್ಟಮೊದಲ ಶಬ್ದ ಅದು. ಅದು ಮಗುವಿನ ಮನಸ್ಸಲ್ಲಿ ಕೊನೆಯವರೆಗೂ ಅಚ್ಚಳಿಯದೆ ಉಳಿದಿರುತ್ತದೆ. ಮೃದುವಾದ ಬೆಚ್ಚನೆಯ ದ್ರವದಲ್ಲಿ ತೇಲುತ್ತಿರುವ ಮಗು ತಾಯಿ ಓಡಾಡುವಾಗ 'ಜೋಕಾಲಿʼಯಾಡುತ್ತಿರುತ್ತದೆ. ಇನ್ನಿತರ ಬೇರೆ ಯಾವುದೇ ಸ್ಪರ್ಶದ, ಶಬ್ದದ ಅನುಭವವಿಲ್ಲದೆ ಒಂದೇ ಸಮನೇ ಇದೇ ತರಹದ ಸುರಕ್ಷಿತತೆಯ, ಮೃದುವಾದ, ಬೆಚ್ಚನೆಯ ಅನುಭವದಲ್ಲಿ ಬಹಳಷ್ಟು ದಿನಗಳಿದ್ದರೆ ಅದೇ ಅನುಭವ ಮಗುವಿನ ಮನಸ್ಸಿನಲ್ಲಿ ಅಳಿಸಲಾರದ ಪ್ರತಿಮೆಯಾಗಿ ಉಳಿದುಬಿಡುತ್ತದೆ.

ಈ ಸುಖದ ಅನುಭವ ಹೆರಿಗೆಯ ಸಮಯದಲ್ಲಿ ಛಿದ್ರ ಛಿದ್ರವಾಗುತ್ತದೆ. ಬೆಚ್ಚನೆಯ ಗೂಡಾಗಿದ್ದ ಗರ್ಭಕೋಶ ಸಂಕುಚಿತಗೊಂಡು ಶಿಶುವನ್ನು ಹೊರ ಹಾಕಲು ಯತ್ನಿಸುತ್ತದೆ. ಮನುಷ್ಯನ ಬದುಕಿನಲ್ಲಿ ಅತ್ಯಂತ ಘೋರ ಹಿಂಸೆಯ ಅನುಭವ ಇದು. ಸುರಕ್ಷಿತತೆಯ ವಾತಾವರಣದಿಂದ ಹೊಸ ವಾತಾವರಣಕ್ಕೆ ದೂಡಲ್ಪಡುವ ಯಾತನೆಯಲ್ಲಿ ಮಗು ಕಿರುಚತೊಡಗುತ್ತದೆ. ಅದು ಕಳೆದುಕೊಂಡ ಸುಖದ ವಾತಾವರಣವನ್ನು ತಾಯಿ ಕಲ್ಪಿಸಿಕೊಡುತ್ತಾಳೆ, ಗರ್ಭಕೋಶ ಕೊಡುತ್ತಿದ್ದ ಬೆಚ್ಚನೆಯ ಹೊದಿಕೆಯನ್ನು ತಾಯಿ ತನ್ನ ತೋಳುಗಳಿಂದ ಆದಷ್ಟೂ ತನ್ನ ದೇಹಕ್ಕೆ ಹತ್ತಿರವಿಟ್ಟುಕೊಂಡು ಕೊಡುತ್ತಾಳೆ. ಮೃದುವಾದ ಬಟ್ಟೆಯ ಹೊದಿಕೆ ಹೊದಿಸುತ್ತಾಳೆ. ಗರ್ಭದಲ್ಲಿನ ಜೋಕಾಲಿಯ ಅನುಭವವನ್ನು ತನ್ನ ತೋಳುಗಳಲ್ಲಿ ತೂಗುವುದರ ಮೂಲಕ, ತೊಟ್ಟಿಲು ತೂಗುವುದರ ಮೂಲಕ ಕೊಡುತ್ತಾಳೆ. ತನ್ನ ಹೊಟ್ಟೆಯಲ್ಲಿದ್ದಾಗ ಕೇಳುತ್ತಿದ್ದ ಸಾಂತ್ವನದ ಎದೆ ಬಡಿತವನ್ನು ಅನುಕರಿಸಲು ಮಗುವಿನ ಹೊಟ್ಟೆಯ ಮೇಲೆ, ಬೆನ್ನಿನ ಮೇಲೆ ಮೃದುವಾಗಿ ತಟ್ಟುತ್ತಾಳೆ, ಬಹಳಷ್ಟು ತಾಯಿಯರಿಗೆ ಹಾಗೆ ಮಾಡುವ ಮೂಲ ಕಾರಣ ಗೊತ್ತಿರುವುದಿಲ್ಲ. ಹಾಗೆ ಮಾಡಿದರೆ ಮಕ್ಕಳು

ಸುಮ್ಮನಾಗುತ್ತಾರೆಂದು ಮಾತ್ರ ಗೊತ್ತಿರುತ್ತದೆ. ಅಷ್ಟೇ ಅಲ್ಲದೆ ಮುಕ್ಕಾಲು ಪಾಲು ತಾಯಂದಿರು ಮಕ್ಕಳನ್ನು ತಮ್ಮ ಎಡಗಡೆಗೆ ಎತ್ತಿಕೊಂಡಿರುತ್ತಾರೆ. ಅಂದರೆ ತಮ್ಮ ಹೃದಯ ಇರುವ ಕಡೆಗೆ ಎದೆಗೆ ಮಕ್ಕಳನ್ನು ಒತ್ತಿಕೊಂಡಾಗ ಮಕ್ಕಳಿಗೆ ತಾಯಿಯ ಎದೆಬಡಿತದ ಅನುಭವವಾಗಿರುತ್ತದೆ. ಇದು ತಾಯಂದಿರಿಗೆ ತಿಳಿದಿಲ್ಲದಿದ್ದರೂ ಬಲಗಡೆ ಎತ್ತಿಕೊಳ್ಳುವುದಕ್ಕಿಂತ ಎಡಗಡೆ ಎತ್ತಿಕೊಂಡರೆ ಮಕ್ಕಳು ಸುಮ್ಮನಿರುತ್ತಾರೆಂದು ಹಲವಾರು ಅನುಭವಗಳ ನಂತರ ತಿಳಿಯುತ್ತದೆ.

ಈ ರೀತಿಯ 'ತಾಯ್ತನ'ದಿಂದಾಗಿ ತಾಯಿ ಮತ್ತು ಮಗುವಿನ ನಡುವೆ ವಿಶಿಷ್ಟ ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಮೊದಮೊದಲಿಗೆ ತಾಯಿ ಯಾರೆಂದು ಗುರ್ತಿಸಲಾಗದಿದ್ದರೂ ಕ್ರಮೇಣ ಗುರ್ತಿಸತೊಡಗುತ್ತದೆ. ತಾಯಿ ತಾನು ಕೊಡುವ ಆಹಾರದಿಂದಾಗಿ ಮಗು ತನ್ನ ಬಳಿ ಬರುತ್ತದೆ ಎಂದು ತಿಳಿಯುವುದು ತಪ್ಪು. ಕೊಡುವ ಆಹಾರಕ್ಕಿಂತ ಮುಖ್ಯವಾಗಿ 'ತಾಯ್ತನʼದಿಂದಾಗಿ ಮಗು ತಾಯಿಯನ್ನು ಅವಲಂಬಿಸಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳಿಗೆ ತಂದೆಯೇ ತಾಯಿ"ಯರಾಗಿರುವ ಉದಾಹರಣೆಗಳಿವೆ.

ಮಗು ಅತ್ತಾಕ್ಷಣ ಅದಕ್ಕೆ ಹಸಿವಾಗಿದೆ ಎಂದು ತಿಳಿಯುವುದೂ ತಪ್ಪು, ಅದಕ್ಕೆ ಹಸಿವಾಗದಿದ್ದರೂ ತಾಯಿಯ ಬೆಚ್ಚನೆಯ ಮಡಿಲಿಗಾಗಿ ಅಳುತ್ತಿರಬಹುದು. ಅಂಥ ಸಂದರ್ಭಗಳಲ್ಲಿ ಮಗುವಿನ ಬಾಯಿಗೆ ಫೀಡಿಂಗ್ ಬಾಟಲ್ ತುರುಕಹೋದರೂ ಅಳು ನಿಲ್ಲುವುದಿಲ್ಲ. ಆಗಲೇ ಮಗುವಿಗೆ ಸ್ಪರ್ಶದ ಸುಖ ತಿಳಿದಿರುತ್ತದ. ಅಗ ಮಗುವನ್ನು ಎತ್ತಿಕೊಂಡರೆ ಸಾಕು ಅಳು ನಿಲ್ಲಿಸುತ್ತದೆ.

ವಿಜ್ಞಾನಿಗಳು ಮಂಗನ ಮರಿಯ ಮೇಲಿನ ಒಂದು ಪ್ರಯೋಗದಿಂದ ಇದನ್ನು ನಿರೂಪಿಸಿದ್ದಾರೆ. ಒಂದು ಮಂಗನ ಮರಿಯನ್ನು ತಾಯಿಯಿಂದ ಬೇರ್ಪಡಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದರು. ಅಲ್ಲಿ ತಾಯಿಯ ಬದಲಿಗೆ ಒಂದೇ ತರಹದ ಎರಡು ಗೊಂಬೆಗಳಿದ್ದವು. ಒಂದು ಮೃದುವಾದ ಗೊಂಬೆ, ಮತ್ತೊಂದು ಕಂಬಿಗಳಿಂದ ಮಾಡಿದ ಒರಟಾದ ಗೊಂಬೆ,

ನ್ಯಾಶನಲ್‌ ಜಿಯಾಗ್ರಫಿಕ್‌ ಪತ್ರಿಕೆಯಲ್ಲಿ ಪ್ರಕಟವಾಗಿರುವ ಚಿತ್ರ

ಆದರೆ, ಒರಟಾದ ಗೊಂಬೆಗೆ ಒಂದು ಫೀಡಿಂಗ್ ಬಾಟಲ್ ಕಟ್ಟಿದ್ದರು. ಮಂಗನ ಮರಿ ಹಸಿವಾದಾಗ ಒರಟಾದ ಗೊಂಬೆಯ ಬಳಿ ಹೋಗಿ ಹಾಲು ಕುಡಿದು ಬಂದು ಮೃದುವಾದ ಗೊಂಬೆಯನ್ನು ತಬ್ಬಿ ಮಲಗುತ್ತಿತ್ತು. ಅಷ್ಟೇ ಇಲ್ಲ. ಆ ಮರಿ ಹಾಲು ಕುಡಿಯುತ್ತಿರುವಾಗ ಏನಾದರೂ ಹೆದರಿಕೆಯಾಗುವ ಶಬ್ದ ಉಂಟಾದರೆ ತಕ್ಷಣ ಕಿರುಚುತ್ತಾ ಆ ಗೊಂಬೆಯನ್ನು ಬಿಟ್ಟು ಮೃದುವಾದ ಗೊಂಬೆಯನ್ನು ತಬ್ಬಿಕೊಳ್ಳುತ್ತಿತ್ತು. ಬಹುಶಃ ಆ ಮಂಗನ ಮರಿಗೂ ಸಹ ಹಾಲು ಕೊಡುವ ಗೊಂಬೆಗಿಂತ ಮೃದುವಾದ ಗೊಂಬೆಯೇ ಸುರಕ್ಷಿತ ಎನ್ನಿಸಿರಬಹುದು.

ಯೌವ್ವನ ಎರಡನೇ ಬಾಲ್ಯ

ಮಗು ಬೆಳೆಯುತ್ತಾ ಬಂದಂತೆ ಸ್ಪರ್ಶ ಶೈಶವಾವಸ್ಥೆಗಿಂತ ಕಡಿಮೆಯಾಗುತ್ತಾ ಬರುತ್ತದೆ. ಆದರೂ ದೈಹಿಕ ಸ್ಪರ್ಶ ಪೂರ್ತಿ ದೂರವಾಗುವುದಿಲ್ಲ. ನೋವಾದಾಗ, ಹೆದರಿಕೆಯಾದಾಗ, ಸಂತೋಷವಾದಾಗ ತಂದೆ ತಾಯಿಗಳನ್ನು ಅಪ್ಪಿಕೊಳ್ಳುವುದು, ಕತ್ತಿಗೆ, ಹೆಗಲಿಗೆ ಜೋತು ಬೀಳುವುದು ನಡೆಯುತ್ತಿರುತ್ತದೆ. ಮಗು ಬೆಳೆಯುತ್ತಾ, ಬಂದಂತೆ ಹಾಗೆ ಮಾಡುವುದು 'ಸಣ್ಣ ಮಕ್ಕಳ' ಹಾಗೆ ಅನ್ನಿಸಿ ತಂದೆ ತಾಯಿಗಳೊಟ್ಟಿಗಿನ ದೈಹಿಕ ಸ್ಪರ್ಶ ಕಡಿಮೆ ಮಾಡುತ್ತಾ ಬರುತ್ತಾರೆ. ಹದಿಹರೆಯದ ಶುರುವಿನಲ್ಲಿ ತಾವು ಸ್ವತಂತ್ರರಾಗಿರಬೇಕೆಂದು ಮಕ್ಕಳಿಗೆ ಅನ್ನಿಸುತ್ತದೆ. ತಾವು ದೊಡ್ಡವರಾಗಿಬಿಟ್ಟಿದ್ದೇವೆಂದು ತೋರಿಸಿಕೊಳ್ಳಲು ಯತ್ನಿಸುತ್ತಾರೆ. ತಂದೆ ತಾಯಿಗಳು ಚಿಕ್ಕಮಕ್ಕಳ ಹಾಗೆ ನೋಡಿಕೊಂಡರೆ ಕಸಿವಿಸಿಗೊಳ್ಳುತ್ತಾರೆ. ನಮ್ಮನ್ನು ನಮ್ಮಷ್ಟಕ್ಕೇ ಬಿಡಬಾರದೆ ಎಂದುಕೊಳ್ಳುತ್ತಾರೆ. ಶೈಶವಾವಸ್ಥೆಯಲ್ಲಿ ನನ್ನನ್ನು ಬಿಗಿದಪ್ಪು ಎನ್ನುವ ಮಕ್ಕಳು ಹದಿಹರೆಯದಲ್ಲಿ "ನನ್ನನ್ನು ಒಂಟಿಯಾಗಿ ಬಿಡಿʼ ಎನ್ನುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಆಗ ಮಕ್ಕಳು ತಮ್ಮ ಮನೆಯವರೊಂದಿಗೇ ಅಪರಿಚಿತರೊಂದಿಗಿನ ಹಾಗೆ ವಾಸಿಸತೊಡಗುತ್ತಾರೆ.

ಹದಿಹರೆಯ ಮುಗಿಯುತ್ತಾ ಯೌವನಕ್ಕೆ ಕಾಲಿಡುತ್ತಿರುವಂತೆ ಅವರ ನಡವಳಿಕೆ ಬೇರೊಂದು ತಿರುವು ಪಡೆಯುತ್ತದೆ. ಈ ತಿರುವು ಅವರ ಶೈಶವಾವಸ್ಥೆಯೆಡೆಗೇ ತಿರುಗಿರುತ್ತದೆ. ಮೊದಲಿನ ಹಾಗೇ ಸ್ಪರ್ಶಕ್ಕೆ ಬೆಚ್ಚನೆಯ ಮೃದುತ್ವದ ಅನುಭವಕ್ಕೆ ಚಡಪಡಿಸುತ್ತಾರೆ. ಈಗ ಸಹಜ ಲೈಂಗಿಕ ಆಕರ್ಷಣೆಯಿಂದಾಗಿ ಈ ಅನುಭವವನ್ನು ಮನೆಯಿಂದ ಹೊರಗೆ ಹುಡುಕತೊಡಗುತ್ತಾರೆ. ಈ ಅನ್ವೇಷಣೆಯೇ ಬಸ್ಸುಗಳಲ್ಲಿ ಮೈತಾಗಿಸುವುದು, ಗುಂಪುಗಳಲ್ಲಿ ಕೈಬಿಡುವುದು, ಕಾಲೇಜುಗಳಲ್ಲಿ ಪುಸ್ತಕ ಕೊಡುವ/ತೆಗೆದುಕೊಳ್ಳುವ ನೆಪದಲ್ಲಿ ಕೈ ತಾಗಿಸುವುದು, ಕೈ ಎಳೆಯುವುದು, ಜಡೆ ಎಳೆಯುವುದು ಮುಂತಾದವು. ಹಾಗೇ ಸ್ಪರ್ಶದಲ್ಲಿ ಮುಂದುವರೆಯಲು ಪರ್ಮನೆಂಟಾಗಿ ಗೆಳೆಯ ಗೆಳತಿಯರು ಸಿಕ್ಕರೆ ಶೈಶವಾವಸ್ಥೆಯಲ್ಲಿ ಕಳಕೊಂಡ ಸ್ಪರ್ಶ ಸುಖವನ್ನು ಮತ್ತೆ ಪಡೆಯಲು ಅನುಭವಿಸಲು ಯತ್ನಿಸುತ್ತಾರೆ. ಇನ್ನು ಕೆಲವರು ಮದುವೆಯ ನಂತರ ತಮ್ಮ ಸಂಗಾತಿಗಳೊಂದಿಗೆ ಇಂಥ ಪ್ರಯತ್ನ ಶುರು ಮಾಡುತ್ತಾರೆ. ಗೆಳೆತನ ಬೆಳೆಸಿ ಸಂಗಾತಿಗಳನ್ನು ಪಡೆಯಲು ಸಾಧ್ಯವಾಗದ ಕೆಲ ಗಂಡಸರು ದೈಹಿಕ ಸ್ಪರ್ಶದ ಕ್ಷಣಿಕ ಸುಖಕ್ಕಾಗಿ ಹಣಕೊಟ್ಟು ವೇಶ್ಯೆಯರ ಬಳಿ ಹೋಗಬಹುದು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಗಂಡಿನ ಸ್ಪರ್ಶದಿಂದ ವಂಚಿತಳಾದ ಯುವತಿಯೊಬ್ಬಳು ಗಂಡಿನ ಬೆಚ್ಚನೆ ಸುರಕ್ಷಿತ ಸ್ಪರ್ಶಸುಖಕ್ಕಾಗಿ ಗಂಡುಗಳನ್ನು ಅರಸುತ್ತಿದ್ದ ಉದಾಹರಣೆಯನ್ನು ವಿಜ್ಞಾನಿ ಡೆಸ್ಮಂಡ್‌ ಮೋರಿಸ್‌ ಉಲ್ಲೇಖಿಸಿದ್ದಾರೆ. ಕೆಲವು ವಿಜ್ಞಾನಿಗಳ ಪ್ರಕಾರ ತಾವು ಶೈಶವಾವಸ್ಥೆಯಲ್ಲಿದ್ದಾಗ ಕಳಕೊಂಡ ತಾಯಿಯ ಮೊಲೆ ಚೀಪುವ ಸುಖದ ಅನುಭವವನ್ನು ಯೌವನದಲ್ಲಿ ಪ್ರೇಯಸಿಯ ಪ್ರಿಯಕರನ ತುಟಿ, ಕೆನ್ನೆ, ಕಿವಿ, ಮೊಲೆತೊಟ್ಟು, ಮುಂತಾದ ಅಂಗಗಳನ್ನು ಚೀಪುವುದರ ಮೂಲಕ ಪುನಃ ಪಡೆಯಲು ಯತ್ನಿಸುತ್ತಾರಂತೆ. ಅಲ್ಲದೆ ಪ್ರೇಮ ʻಕ್ರಿಯೆʼಯಲ್ಲಿ ತೊಡಗಿರುವ ಪ್ರೇಮಿಗಳ ಮಾತು ಸಹ ಬಾಲಿಶವಾಗಿ, ಅಸಂಬದ್ಧವಾಗಿ ಬಿಡುತ್ತದೆ. ಮಕ್ಕಳ ಹಾಗೆ ಒಬ್ಬರ ಮಡಿಲಲ್ಲಿ ಇನ್ನೊಬ್ಬರು ಹುದುಗಿಹೋಗಲು ಯತ್ನಿಸುತ್ತಾರೆ. ಅದಕ್ಕೇ ಯೌವನವನ್ನು ʻಎರಡನೇ ಬಾಲ್ಯʼ ಎಂದೂ  ಕರೆಯುತ್ತಾರೆ.

ಆದರೆ ಕೆಲವರ ಬದುಕಿನಲ್ಲಿ ಯೌವನದ ವಸಂತ ಬರುವುದೇ ಇಲ್ಲ. ಶೈಶವಾವಸ್ಥೆಯ ಬೆಳವಣಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಅವರ ಮಾನಸಿಕ, ಲೈಂಗಿಕ ಬೆಳವಣಿಗೆಗಳು ಅದೇ ಹಂತದಲ್ಲಿ ನಿಂತುಹೋಗಿ ತಮ್ಮ ಮುಂದಿನ ಬದುಕಿನಲ್ಲಿ ಯಾರೊಂದಿಗೂ ಗೆಳೆತನ ಮಾಡಲಾಗಿದೆ, ಯಾರನ್ನೂ ಪ್ರೇಮಿಸಲಾಗದೆ ತಮ್ಮದೇ ಶೈಶವಾವಸ್ಥೆಯ ಪ್ರಪಂಚದಲ್ಲೇ ಒಂಟಿಯಾಗಿದ್ದು ಬಿಡುತ್ತಾರೆ.

ದೈಹಿಕ ಸ್ಪರ್ಶಕ್ಕೆ ಲೈಂಗಿಕತೆಯ ಸೋಂಕಿರುವುದರಿಂದ ಸಮಾಜ ಲೈಂಗಿಕತೆಗೆ ಕಡಿವಾಣ ಹಾಕಿರುವಂತೆ ದೈಹಿಕ ಸ್ಪರ್ಶಕ್ಕೂ ಕಡಿವಾಣ ಹಾಕಿದೆ. ಲೈಂಗಿಕತೆಯ ಹಾಗೆ ಆತ್ಮೀಯವಾಗಿ ಸ್ಪರ್ಶಿಸಬೇಕೆನ್ನುವ ಆಸೆ ಸಹ ಒಡಹುಟ್ಟಿದ್ದು. ಅದಕ್ಕೇ ನಾಗರಿಕ ಮನುಷ್ಯ ತನ್ನ ಒಡಲಾಳದ ಈ ಮಹತ್ವಾಕಾಂಕ್ಷೆಗೆ ತನ್ನದೇ ಆದ, ಸಮಾಜಕ್ಕೆ ಒಪ್ಪಿಗೆ ಆಗುವಂಥ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾನೆ. ಗೆಳೆಯರು ಭೇಟಿಯಾದಾಗ, ಬೀಳ್ಕೊಡುವಾಗ ಕೈಕುಲುಕುತ್ತಾರೆ. ಇನ್ನೂ ಹತ್ತಿರದವರಾದರೆ ಅಪ್ಪಿಕೊಳ್ಳುತ್ತಾರೆ. ಶಭಾಸ್‌ಗಿರಿ ಕೊಡುವಾಗ ಬೆನ್ನುತಟ್ಟುತ್ತಾರೆ. ನೋವಿನಲ್ಲಿರುವವರಿಗೆ ಸಂತೈಸಬೇಕಾದಾಗಲೂ ಸಹ ಅಪ್ಪಿಕೊಂಡು ಬೆನ್ನು ತಟ್ಟುತ್ತಾರೆ. ಕ್ರೀಡೆಗಳಲ್ಲಿ ಗೋಲು ಹೊಡೆದಾಗಲೋ ಅಥವಾ ಕ್ಯಾಚ್ ಹಿಡಿದಾಗಲೋ ಆಟಗಾರನನ್ನು ಅವನ ಜೊತೆಗಾರರು ತಬ್ಬಿ ಎತ್ತಿ ಕುಣಿದಾಡುತ್ತಾರೆ. (ಪ್ರೇಮಿಗಳು ಕೊಂಚಮಟ್ಟಿಗೆ ಬಹಿರಂಗವಾಗಿ) ಹೆಗಲಿಗೆ ಬಗಲಿಗೆ ಕೈ ಹಾಕಿ ಓಡಾಡುತ್ತಾರೆ. ಜೊತೆಗೆ ಸಂಗಾತಿ ಇಲ್ಲದವರು ಅಥವಾ ಸಿಗದವರು ಅಥವಾ ಅಪರಿಚಿತರೊಟ್ಟಿಗೆ ಸಂಗಮಾಡಲಿಚ್ಚಿಸದವರು ತಮ್ಮ ಮೃದುವಾದ ತಲೆ ದಿಂಬನ್ನೇ ಸಂಗಾತಿ ಮಾಡಿಕೊಳ್ಳಬಹುದು, ಮೃದು ಮೈಯುಳ್ಳ ನಾಯಿ ಮರಿ, ಬೆಕ್ಕಿನ ಮರಿಗಳನ್ನು ಸಾಕಬಹುದು, ಅಂಥವರು ಅವುಗಳನ್ನೆತ್ತಿಕೊಂಡು (ಮಕ್ಕಳನ್ನೆತ್ತಿಕೊಂಡ ಹಾಗೆ) ಅದರ ಮೃದು ಮೈ ನೇವರಿಸುತ್ತಿರುವುದನ್ನು ನೀವೂ ಸಹ ಕಂಡಿರಬಹುದು. ಅಲ್ಲದೆ ಅದೇ ಕೆಲಸಕ್ಕೆಂದು ಮೃದುವಾದ ಉಣ್ಣೆಯ ತರಹದ ಮೈಯುಳ್ಳ ನಾಯಿ ಮರಿಗಳ ತಳಿಯನ್ನೂ ಸಹ ಮನುಷ್ಯ ಸೃಷ್ಟಿ ಮಾಡುತ್ತಿದ್ದಾನೆ.

ಕೆಲವು ವಿಜ್ಞಾನಿಗಳ ಪ್ರಕಾರ ನಮ್ಮನ್ನು ಆಗಾಗ ಕಾಡುವ ಜ್ವರ, ನೆಗಡಿ, ಕೆಮ್ಮು ಮುಂತಾದ ಹಲವಾರು ಕಾರಣಗಳಿಗೆ ನಮ್ಮ ಭಾವೋದ್ವೇಗವೇ ಕಾರಣ. ಒಂಟಿತನ ಸೀರಿಯಸ್ಸಾಗಿ ಕಾಡುವವರಿಗೆ 'ಜ್ವರ ಬರಬಹುದು. ಪಾಪ ಜ್ವರʼ ಎನ್ನುತ್ತ ಗೆಳೆಯರು ಮುಂತಾದವರು ಹಣೆ, ಎದೆ ಮುಟ್ಟಬಹುದು ಅಥವಾ ರೋಗಿ ಡಾಕ್ಟರ್ ಬಳಿ ಹೋದಾಗ ಅವರು ನಾಡಿ ನೋಡಲು ಕೈ ಹಿಡಿಯಬಹುದು. ಎದೆ, ಹೊಟ್ಟೆ, ಬೆನ್ನು ಮುಟ್ಟಿ ಪರೀಕ್ಷಿಸಬಹುದು. ಅದಕ್ಕೇ ರೋಗಿಯನ್ನು ಮುಟ್ಟದೆ, ಅಸಹ್ಯಪಟ್ಟು ಚಿಕಿತ್ಸೆ ಕೊಡುವಂಥ ವೈದ್ಯರ 'ಕೈಗುಣ' ಚೆನ್ನಾಗಿರುವುದಿಲ್ಲ. ಅಂಥ ಖಾಯಿಲೆಗಳಲ್ಲಿ ಔಷದಿಗಿಂತ 'ಕೈಗುಣ'ವೇ ಚೆನ್ನಾಗಿ ಕೆಲಸ ಮಾಡುತ್ತದೆ.

ಸೀಮಿತ ಸ್ಪರ್ಶದಿಂದಾಗಿ ಮಾನಸಿಕ ಒತ್ತಡದಲ್ಲಿ ಬಳಲುತ್ತಿರುವ ನಾಗರಿಕ ಮನುಷ್ಯನಿಗೆ ಸಹಾಯ ಮಾಡಲು ಬ್ಯೂಟಿ ಪಾರ್ಲರ್ಗಳು, ಮಸಾಜ್‌ (ಮಾಲಿಷ್) ಕೇಂದ್ರಗಳು ಹೇರಳವಾಗಿವೆ. ದೈಹಿಕ ಸ್ಪರ್ಶದ ದೃಶ್ಯಗಳನ್ನು ಸಿನಿಮಾ, ಟಿವಿ, ವಿಡಿಯೋಗಳಲ್ಲಿ ನೋಡುವುದರ ಮೂಲಕ, ಪುಸ್ತಕಗಳಲ್ಲಿ ಓದುವುದರ ಮೂಲಕ ಆ ಪಾತ್ರಗಳಲ್ಲಿ ನಮ್ಮನ್ನೇ ಚಿತ್ರಿಸಿಕೊಂಡು ನಮ್ಮಲ್ಲಿನ ಒತ್ತಡವನ್ನು ಕಡಿಮೆಮಾಡಿಕೊಳ್ಳುತ್ತೇವೆ.

ಸಣ್ಣ ಮಗು ಅತ್ತಾಗ ಕೆಲವೊಮ್ಮೆ ಅದರ ಬಾಯಿಗೆ ರಬ್ಬರ್ ನಿಪ್ಪಲ್ ಇಟ್ಟರೆ ಸಾಕು, ಅದನ್ನೇ ಚೀಪುತ್ತಾ ಸುಮ್ಮನಾಗುತ್ತದೆ. ಅಂದರೆ ಆ ನಿಪ್ಪಲ್‌ನಿಂದ ಹಾಲು ಬರುತ್ತದೆಯೋ ಇಲ್ಲವೋ ಅದು ಮುಖ್ಯವಲ್ಲ. ಬಾಯಲ್ಲಿ ಮೃದುವಾದ ವಸ್ತು ಎದೆಯೋ ಎನ್ನುವುದು ಮುಖ್ಯ. ಸಣ್ಣ ಮಕ್ಕಳಿಗೆ ಬಾಯಿಯಲ್ಲಿ ಮೃದುವಾದ ವಸ್ತುವಿದ್ದರೆ ಅದು ಕೊಂಚ ಸಾಂತ್ವನ ಸುಖ ಕೊಡಬಹುದು. ಹಾಗಾದರೆ ಸಿಗರೇಟ್, ಬೀಡಿ, ಪೈಪು ಸೇದುವವರು, ಚೂಯಿಂಗ್ ಗಮ್ ಅಗಿಯುವವರು ಪೆನ್ನು, ಪೆನ್ಸಿಲ್ಲಿನ ತುದಿ ಚೀಪುವವರು, ಬೆರಳು ಚೀಪುವವರು ಇದೇ ತರಹದ ಬಾಲಿಶ ಸಾಂತ್ವನವನ್ನು ಅರಸುವವರೆ? "ಹೌದು' ಎನ್ನುತ್ತಾರೆ ವಿಜ್ಞಾನಿಗಳು. ಸಿಗರೇಟಿನಲ್ಲಿನ ನಿಕೋಟಿನ್‌ನಿಂದಾಗಿ ಸಿಗುವ 'ಸುಖ' ಎರಡನೆಯದು. ಮೊದಲಿಗೆ ತುಟಿಗಳ ಮಧ್ಯ ಏನಾದರೂ ಇದೆಯೇ ಎನ್ನುವುದು ಮುಖ್ಯ ಎನ್ನುತ್ತಾರೆ.

ಬಾಲ್ಯದಲ್ಲಿ ತಂದೆ ತಾಯಿಗಳೊಂದಿಗೆ ಪ್ರೀತಿ ಮತ್ತು ಸ್ಪರ್ಶದ ಆತ್ಮೀಯತೆಯ ಭಾವನಾತ್ಮಕ ಸಂಬಂಧ ಇದ್ದಲ್ಲಿ ಅಂಥ ಮಕ್ಕಳು ಮುಂದಿನ ತಮ್ಮ ಬದುಕಿನಲ್ಲಿ ತಮ್ಮ ಸಂಗಾತಿಗಳೊಂದಿಗೆ ಆರೋಗ್ಯಕರವಾದ ಭಾವನಾತ್ಮಕ ಮತ್ತು ಲೈಂಗಿಕ ಸಂಬಂಧ ಬೆಳೆಸಲು ಸಾಧ್ಯವಾಗುತ್ತದೆ. ಆ ತರಹದ ಸಂಬಂಧ ಬೆಳೆಸಿರುವ ಯುವಕರು ಹೊರ ನಾಗರಿಕ ಜಗತ್ತಿನ ಯಾಂತ್ರಿಕ, ಕ್ರೂರ ಬದುಕನ್ನು ಎದುರಿಸಲು ಶಕ್ತರಾಗಿರುತ್ತಾರೆ. ಪ್ರೀತಿ ಮತ್ತು ಸ್ಪರ್ಶ ಎಲ್ಲ ಮನುಷ್ಯರಿಗೂ ಬೇಕು, ನೀರು ಮತ್ತು ಗಾಳಿ ಬೇಕಿರುವಂತೆ. ಆಗಾಗ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತ ನಮ್ಮ ಬಾಲ್ಯಾವಸ್ಥೆಯ ಮಾಯಾಜಗತ್ತಿಗೆ ಹಿಂದಿರುಗುವಲ್ಲಿಯೇ ಎಂಥದೋ ಸುಖ ಸಾಂತ್ವನ ಸಿಗುತ್ತದೆ, ಅಲ್ಲವೆ?