ಬುಧವಾರ, ಜೂನ್ 15, 2022

ಕೇಸರಿ ಪಠ್ಯಕ್ರಮ - ರೊಮಿಳಾ ಥಾಪರ್‌ ಲೇಖನ

15/06/2022ರ ʻವಾರ್ತಾಭಾರತಿʼಯಲ್ಲಿ ಪ್ರಕಟವಾಗಿರುವ ರೊಮಿಳಾ ಥಾಪರ್‌ ರವರ ಲೇಖನ Coloured Curriculum ಲೇಖನದ ನನ್ನ ಅನುವಾದ. 

 

ಕೇಸರಿ ಪಠ್ಯಕ್ರಮ

ರೊಮೀಳಾ ಥಾಪರ್

ಕನ್ನಡಕ್ಕೆ: ಡಾ. ಜೆ.ಬಾಲಕೃಷ್ಣ

ಪ್ರಾರಂಭದಲ್ಲಿಯೇ ಒಂದು ಮಾತನ್ನು ಒತ್ತಿ ಹೇಳಬೇಕಾಗಿದೆ- ಯಾರು ಗತವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅಥವಾ ಅರ್ಥಮಾಡಿಕೊಳ್ಳಲು ನಿರಾಕರಿಸುತ್ತಾರೆಯೋ, ಅವರು ವರ್ತಮಾನವನ್ನು ಅರ್ಥಮಾಡಿಕೊಳ್ಳಲಾರರು ಹಾಗೂ ಭವಿಷ್ಯದೆಡೆಗೆ ಮುನ್ನಡೆಯಲಾರರು. ಇಂದು ನಮ್ಮೆದುರಿಗೆ ಭಾರತದ ಗತವನ್ನು ಅರಿಯಲಾಗದಂಥವರು ಕೇಂದ್ರ ಸರ್ಕಾರದಲ್ಲಿ ಶೈಕ್ಷಣಿಕ ಕಾರ್ಯನೀತಿ ರೂಪಿಸುತ್ತಿರುವವರಾಗಿದ್ದಾರೆ.

ಎಲ್ಲವನ್ನೂ ವೇದಕಾಲದ್ದು ಎಂದು ಹೇಳಿ ಅದನ್ನೆಲ್ಲಾ ಒಂದು ಪೆಟ್ಟಿಗೆಯಲ್ಲಿ ತುಂಬಿ ನಮ್ಮನ್ನೆಲ್ಲಾ ನಿರಂತರವಾಗಿ ಗತಕ್ಕೆ ಕೊಂಡೊಯ್ಯುವಂತೆ ಮಾತನಾಡುತ್ತಿದ್ದಾರೆ. ಚಾರಿತ್ರಿಕ ಅಥವಾ ನಾಗರಿಕತೆಗಳ ಅಧ್ಯಯನಗಳ ಯಾವುದೇ ಪುರಾವೆಗಳಿಲ್ಲದೆ ಎಲ್ಲ ಜ್ಞಾನವೂ ವೇದಗಳಲ್ಲಿದೆ ಎಂದು ಪೆಟ್ಟಿಗೆಯನ್ನು ನಮ್ಮ ತಲೆಯ ಮೇಲೆ ಹೇರುತ್ತಿದ್ದಾರೆ ಹಾಗೂ ಪೆಟ್ಟಿಗೆಯನ್ನು ಹೊರುವುದರಿಂದಲೇ ಪರಿಪೂರ್ಣ ಶಿಕ್ಷಣ ದೊರೆಯುತ್ತದೆ ಎನ್ನುತ್ತಿದ್ದಾರೆ.

ಭಾರತದ ಚರಿತ್ರೆಯ ಗತಿಯನ್ನು ಅವಲೋಕಿಸಿದಲ್ಲಿ ವಿವಿಧ ಭಾರತೀಯ ಚಿಂತಕರು ವೇದಗಳಲ್ಲಿನ ಜ್ಞಾನದ ಬಗ್ಗೆ ಚರ್ಚೆ ನಡೆಸಿರುವುದು ಹಾಗೂ ಅವುಗಳಲ್ಲಿನ ಹಲವಾರು ವಿಷಯಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವಾಸ್ತವಾಂಶವನ್ನು ಬಹಳಷ್ಟು ಜನ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಭಾರತ ಮತ್ತು ಏಷಿಯಾದ ಇತರ ಭಾಗಗಳ ವಿದ್ವಾಂಸರಲ್ಲಿನ ಚರ್ಚಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ, ತಮ್ಮ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳನ್ನು ಮಂಡಿಸುವುದು ಪೂರ್ವಾಧುನಿಕ ಸಮಯಗಳಿಂದಲೂ ಜ್ಞಾನದ ಅಭಿವೃದ್ಧಿಯ ತಳಹದಿಯೇ ಆಗಿದೆ. ನಾವು ಇಂದು ವಿಶ್ವದ ನಾಗರಿಕತೆಗೆ ನೀಡಲಾಗಿರುವ ನಾವು ಗರ್ವ ಪಡುವ ಭಾರತೀಯ ಕೊಡುಗೆಗಳಲ್ಲಿ ಬಹುಪಾಲು ವೇದಗಳಿಂದ ಪ್ರತ್ಯೇಕವಾಗಿ, ಕೆಲವೊಮ್ಮೆ ಅವುಗಳಿಗೆ ವಿರುದ್ಧವಾಗಿ ಅಭಿವೃದ್ಧಿಪಡಿಸಿದಂತವು. ಆದರೆ ಈಗಿನ ವೇದಗಳ ಪೆಟ್ಟಿಗೆಯ ಹೊರೆಯಲ್ಲಿ ಗತದ ಹಲವಾರು ಗಮನಾರ್ಹ ಕೊಡುಗೆಗಳನ್ನು ಪಕ್ಕಕ್ಕಿರಿಸಲಾಗಿದೆ.

ನನ್ನ ಮಾತುಗಳಿಂದ ನಾನು ಹಿಂದಿನ ವೇದಗಳನ್ನು ತುಚ್ಛವಾಗಿ ಕಾಣುತ್ತಿದ್ದೇನೆ ಎಂದರ್ಥವಲ್ಲ, ಆದರೆ ಗತವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು ಹಾಗೂ ಹಿನ್ನೆಲೆಯನ್ನು ವಿಮಾರ್ಶಾತ್ಮಕವಾಗಿ ಮತ್ತು ವೈಚಾರಿಕವಾಗಿ ಕಾಣಬೇಕೆಂಬುದೇ ನನ್ನ ಉದ್ದೇಶ. ವಿಮರ್ಶಾತ್ಮಕ ಮತ್ತು ವೈಚಾರಿಕ ಪರಿಶೀಲನೆಯನ್ನು ಗತದ ಒಂದು ಆವೃತ್ತಿಯಿಂದ ಬದಲಾಯಿಸಿ ಅದನ್ನೇ ನಿಖರ ಹಾಗೂ ಪ್ರಮಾಣಪೂರಿತವೆಂದು ಈಗ ಸ್ವೀಕರಿಸಲಾಗುತ್ತಿದೆ.

ಇದನ್ನು ನಮ್ಮ ದೇಸೀ ಜ್ಞಾನದೆಡೆಗೆ ಹಿಂದಿರುಗುವಿಕೆ ಎನ್ನಲಾಗುತ್ತಿದೆ, ಆದರೆ ನಮ್ಮ ಹೊಸ ಶೈಕ್ಷಣಿಕ ಪಠ್ಯಕ್ರಮ ತನ್ನ ಸಿಂಧುತ್ವವನ್ನು 19ನೇ ಶತಮಾನದ ಭಾರತದ ವಸಾಹತು ದೃಷ್ಟಿಕೋನದಿಂದ ಮತ್ತು ಯೂರೋಪಿಯನ್ಭಾರತಶಾಸ್ತ್ರಜ್ಞರು ಬ್ರಾಹ್ಮಣ್ಯದ ಪಠ್ಯಗಳಿಗೆ ಹಾಗೂ ಜಾಗತಿಕ ದೃಷ್ಟಿಕೋನಕ್ಕೆ ನೀಡಿದ ಆದ್ಯತೆಯಿಂದ ಪಡೆದುಕೊಂಡಿದೆ. ದೇಸೀ ವ್ಯವಸ್ಥೆಗಳು ಕಲಿಕೆಯ ಭಾಷೆಯಲ್ಲಿನ ಪ್ರಮುಖ ಪಠ್ಯಗಳಿಂದ ಪಡೆದುಕೊಂಡಿರುವುದಲ್ಲದೆ ಇತರ ಹಲವಾರು ಪ್ರಾದೇಶಿಕ ಭಾಷೆಗಳಿಂದಲೂ ಪಡೆದುಕೊಂಡಿದೆ ಹಾಗೂ ಅವಶ್ಯಕವೆಂದು ಕಂಡುಬಂದಲ್ಲಿ ಮೂಲ ಪಠ್ಯಗಳನ್ನೂ ಪ್ರಶ್ನಿಸಿವೆ.

ಕಳೆದ ದಶಕಗಳಲ್ಲಿನ ಶಿಕ್ಷಣ ವಿಧಾನದಲ್ಲಿನ ಪ್ರಮುಖ ಬದಲಾವಣೆಯೆಂದರೆ ಹಲವಾರು ಪಠ್ಯವಿಷಯಗಳನ್ನು ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಿಜ್ಞಾನಗಳನ್ನು ವೃತ್ತಿಪರಗೊಳಿಸುವುದಾಗಿದೆ. ಪ್ರತಿಯೊಂದು ವಿಷಯವನ್ನೂ ಸಹ ಅದರ ರುಜುವಾತಾದ, ವಿಶ್ವಾಸಾರ್ಹ ಪುರಾವೆಗಳಿಂದ, ತರ್ಕಬದ್ಧ ವಿಶ್ಲೇಷಣೆ ಮತ್ತು ವೈಚಾರಿಕ ಪರಿಶೀಲನೆಯಿಂದ ಪಡೆದ ಜ್ಞಾನಶಿಸ್ತಿನಿಂದ ಬೋಧಿಸಬೇಕಾಗುತ್ತದೆ. ಇಂತಹ ಬೋಧಿಸಬೇಕಾದ ಆಯಾ ವಿಷಯದ ಪಠ್ಯಕ್ರಮ ರಚನೆಗೆ ಬೌದ್ಧಿಕ ಕಸರತ್ತು ಅತ್ಯಗತ್ಯವಾದುದು. ಅಂತಹ ಬೋಧನೆಯ ಫಲಿತಾಂಶದ ಫಲವಾಗಿ ಪಡೆಯುವ ತರಬೇತಿಯಿಂದ, ಉದಾಹರಣೆಗೆ ಚರಿತ್ರೆ ವಿಷಯದಲ್ಲಿ, ಅಧ್ಯಾಪಕ ಹಾಗೂ ವಿದ್ಯಾರ್ಥಿಗಳಿಬ್ಬರೂ ಪುರಾಣ ಮತ್ತು ಚರಿತ್ರೆಯ ನಡುವಿನ ಅಂತರವನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ.

ಆದರೆ ನಾವು ಈಗ ಇಂತಹ ಪ್ರಕ್ರಿಯೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಮತ್ತು ಜ್ಞಾನವನ್ನು ಪುರಾಣಗಳು ಹಿಂದಿಕ್ಕುತ್ತಿವೆ. ಪುರಾಣಗಳು ಸೃಜನಾತ್ಮಕತೆಗೆ ಹಾಗೂ ಕಲ್ಪನೆಗಳಿಗೆ ಇಂಬುಕೊಡುವಲ್ಲಿ ಪಾತ್ರ ವಹಿಸುತ್ತವೆ ಆದರೆ ಅವು ಖಂಡಿತಾ ಜ್ಞಾನಕ್ಕೆ ಬದಲಿಯಾಗಲಾರವು. ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಸಲಾಗುತ್ತಿರುವ ವಿಷಯಗಳನ್ನು ಮತ್ತಷ್ಟು ವೃತ್ತಿಪರಗೊಳಿಸುವುದರ ಬದಲಿಗೆ ಅವುಗಳನ್ನು ಶಿಕ್ಷಣ ವಿಧಾನಗಳ ಕಸರತ್ತಿನ ಯಾವುದೇ ಹಿನ್ನೆಲೆ ಇರದ ಯೋಗ ಮತ್ತು ಪ್ರಜ್ಞೆ ಅಥವಾ ಆಧ್ಯಾತ್ಮಿಕ ಸೂಚ್ಯಂಕ ಮುಂತಾದ ವಿಷಯಗಳಿಂದ ಬದಲಿಸಲಾಗುತ್ತಿದೆ. ಯೋಗ ಮತ್ತೊಂದು ಚಟುವಟಿಕೆಯಾಗಬಹುದೇ ಹೊರತು ಅವು ಜ್ಞಾನದ, ಶಿಕ್ಷಣ ವಿಧಾನಗಳ ಸದೃಢ ತಳಹದಿ ಹೊಂದಿರುವ ಪಠ್ಯ ವಿಷಯಗಳ ಬದಲಿಗೆ ಬೋಧಿಸುವ ವಿಷಯಗಳಾಗಬಾರದು.

ಭಾರತೀಯ ಸಂಸ್ಕೃತಿ ಮತ್ತು ಸಮಾಜಕ್ಕೆ ಏಕರೂಪದ ವಿವರಣೆ ನೀಡುವುದರ ಮೂಲಕ ಜ್ಞಾನದ ವಿಸ್ತಾರವನ್ನು ಸಂಕುಚಿತಗೊಳಿಸುವ ಮತ್ತು ನಮ್ಮ ಸಮಾಜ ಹಾಗೂ ರಾಷ್ಟ್ರಕ್ಕೆ ಅದೊಂದೇ ಮುಖ್ಯವಾಗಿರುವುದು ಎಂದು ಅದನ್ನು ಶಾಲೆ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳ ತಲೆಗೆ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಗತದ ಮತ್ತು ವರ್ತಮಾನದ ಭಾರತೀಯ ಅನುಭವಗಳ ಸಿದ್ಧಾಂತಕ್ಕೆ ತೀರಾ ವಿರುದ್ಧವಾದುದು.

ಭಾರತೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿ ನಿರಂತರವಾಗಿ ಕಾಡುತ್ತಿರುವ ಪ್ರಮುಖ ಪ್ರಶ್ನೆ ರಾಜ್ಯ ಸರ್ಕಾರಗಳ ಮೇಲಿನ ಕೇಂದ್ರ ಸರ್ಕಾರದ ಅಧಿಕಾರ ನಿಯಂತ್ರಣ ಹಾಗೂ ಪ್ರಾದೇಶಿಕ ಮತ್ತು ಸ್ಥಳೀಯ ಅಧಿಕಾರಗಳು ಪ್ರದರ್ಶಿಸುತ್ತಿರುವ ವಿವಿಧ ನಿಯಂತ್ರಣ ರೂಪಗಳು. ಹಿಂದಿನ ದಿನಗಳನ್ನು ಗಮನಿಸಿದಂತೆ ಸಂಬಂಧ ಹಲವಾರು ಆಡಳಿತಾತ್ಮಕ ಮತ್ತು ಆರ್ಥಿಕ ಕಾರ್ಯನೀತಿಗಳಿಗೆ ಸಂಬಂಧಿಸಿದ ಹಲವಾರು ರಚನೆಗಳನ್ನು ನಿರ್ಧರಿಸುತ್ತಿತ್ತು. ಸಂಸ್ಕೃತಿಯ ಅಭಿವ್ಯಕ್ತಿಯಲ್ಲಿಯೂ ಪ್ರಧಾನ ಸಂಸ್ಕೃತಿಯ ಹಾಗೂ ಆಯಾ ಪ್ರದೇಶದ ಸಂಸ್ಕೃತಿ ಮತ್ತು ಭಾಷೆಗಳ ನಡುವೆ ವ್ಯತ್ಯಾಸವಿರುವುದು ಸ್ಪಷ್ಟವಾಗಿದೆ.

ಎರಡರ ನಡುವಿನ ಸಂಬಂಧಗಳು ಕೆಲವೊಮ್ಮೆ ಸಾಮರಸ್ಯದಿಂದ ಕೂಡಿದ್ದರೆ ಕೆಲವೊಮ್ಮೆ ಸಂಘರ್ಷಗಳಿಂದ ಕೂಡಿರುತ್ತದೆ. ಹಿಂದೆ ಕೇಂದ್ರ ಮತ್ತು ಪ್ರದೇಶಗಳ ನಡುವಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳಿಂದಾಗಿ ಅವುಗಳ ಪರಸ್ಪರ ಸಹಕಾರಕ್ಕಾಗಿ ಹಾಗೂ ವ್ಯತ್ಯಾಸಗಳು ಏಕೆ ಉಂಟಾಗಿವೆ ಎನ್ನುವುದನ್ನು ಅರಿತುಕೊಳ್ಳಲು ಅತ್ಯಂತ ಸೂಕ್ಷ್ಮತೆಯ ಅವಶ್ಯಕತೆಯಿತ್ತು ಎನ್ನುವುದನ್ನು ನಾವಿಂದು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂದು ನಾವು ಅದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ.

ಇಲ್ಲಿರುವ ಪ್ರಶ್ನೆಯೆಂದರೆ ನಾವು ಇಂದು ಇಡೀ ದೇಶದ ಮೇಲೆ ಹೇರಲಾಗುತ್ತಿರುವ ಏಕರೂಪದ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕೆ ಅಥವಾ ವಿಸ್ತೃತ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಮತ್ತು ಹೊಸ ಜ್ಞಾನ ವ್ಯವಸ್ಥೆಗೆ ಸೂಕ್ಷ್ಮತೆ ಹೊಂದಿರುವ ಆಧುನಿಕ, ಶಿಕ್ಷಿತ ಭಾರತೀಯನನ್ನು ಶಿಕ್ಷಣ ರೂಪಿಸಬೇಕೆ ಎಂಬುದು. ರೀತಿಯ ಸೂಕ್ಷ್ಮತೆಯ ಅರಿವು ಮೂಡಿಸುವ ಶಿಕ್ಷಣ ಪಡೆಯುವವರು ಉತ್ತಮ ವರ್ತಮಾನವನ್ನು ಮತ್ತು ಗತದೊಂದಿಗಿನ ಸಂಬಂಧಗಳನ್ನು ಸರಿಯಾಗಿ ಗುರುತಿಸಬಲ್ಲವರಾಗಿರುತ್ತಾರೆ.

ಕೇಂದ್ರ ಮತ್ತು ರಾಜ್ಯಗಳು ತಮ್ಮ ನಡುವಿನ ಸೂಕ್ತ ಶಿಕ್ಷಣ ಕಾರ್ಯನೀತಿಯ ಮೂಲಕ ಕ್ಷೇತ್ರದಲ್ಲಿ ಸಹಾಯಮಾಡಬಲ್ಲವೆ? ಲಕ್ಷಾಂತರ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದಷ್ಟೇ ಶಿಕ್ಷಣದ ಗುರಿಯಲ್ಲ, ಅದು ಬದಲಾಗುತ್ತಿರುವ ಸಮಾಜಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಯುವಜನರಿಗೆ ಬೋಧಿಸುತ್ತದೆ, ಅಂದರೆ ಇಂದು ಹಿಂದೆಂದಿಗಿಂತಲೂ ಜಗತ್ತಿನ ಹೆಚ್ಚಿನ ಅರಿವು ಹೊಂದಿರಬೇಕು ಹಾಗೂ ತನ್ಮೂಲಕ ತಮ್ಮ ಬದುಕನ್ನು ಸಹ ಅವರು ಸಾರ್ಥಕಗೊಳಿಸಿಕೊಳ್ಳಬೇಕು. ಆದುದರಿಂದ, ಕಲ್ಪಿತ ಗತದ ಆದರ್ಶ ರಾಜ್ಯಗಳ ಕೇಂದ್ರಿತ ಪಠ್ಯಕ್ರಮವನ್ನು ಹೇರುವುದರಿಂದ ಮುಂದಿನ ಜನಾಂಗದ ಸಾಮರ್ಥ್ಯವನ್ನು ಕುಗ್ಗಿಸಿದಂತಾಗುತ್ತದೆ. ರೀತಿಯ ಕಲ್ಪಿತ ಗತದ ಆದರ್ಶ ರಾಜ್ಯಗಳೆಡೆಗೆ ಕೇಂದ್ರೀಕರಿಸುವುದರಿಂದ ಉತ್ತಮ ಬದುಕನ್ನು ಪಡೆಯಲು ವರ್ತಮಾನವನ್ನು ಸುಧಾರಿಸಿಕೊಳ್ಳಬೇಕಾಗುವ ಗಮನವನ್ನು ದೂರ ಸೆಳೆದಂತಾಗುತ್ತದೆ.

ಶೈಕ್ಷಣಿಕ ಕಾರ್ಯನೀತಿಯನ್ನು ರೂಪಿಸುವಲ್ಲಿ ಸಾರ್ವಜನಿಕರಿಗೆ ಉತ್ತರದಾಯಕತೆಯನ್ನು ಹಾಗೂ ಆಡಳಿತೆಯಲ್ಲಿ ಪಾರದರ್ಶಕತೆಯನ್ನು ಹೊಂದಿರಬೇಕಾದುದು ಅತ್ಯವಶ್ಯಕ. ಶೈಕ್ಷಣಿಕ ಕಾರ್ಯನೀತಿಯ ಕರಡು ತಯಾರಿಸುತ್ತಿರುವವರು ಯಾರು ಮತ್ತು ಅದರ ರಚನೆಯಲ್ಲಿ ಯಾರ್ಯಾರ ಸಲಹೆ ಪಡೆಯಲಾಗಿದೆ ಹಾಗೂ ಪಠ್ಯವಿಷಯವೊಂದನ್ನು ನಿರ್ಧರಿಸುವಲ್ಲಿ ಯಾವ್ಯಾವ ವೃತ್ತಿಪರ ಅರ್ಹ ತಜ್ಞರ ಭಾಗವಹಿಸುವಿಕೆ ಒಳಗೊಂಡಿದೆ ಎಂಬುದು ನಮಗೆ ತಿಳಿಯಬೇಕು. ಅದಕ್ಕೆ ಜವಾಬ್ದಾರಿಯುತ ಜನರ ಅವಶ್ಯಕತೆಯಿದೆ ಹಾಗೂ ತನ್ಮೂಲಕ ಅವರು ಅವರ ಕಾರ್ಯಗಳಿಗೆ ಜವಾಬ್ದಾರಿಯುತರಾಗಿತ್ತಾರೆ. ಶೈಕ್ಷಣಿಕ ಕಾರ್ಯನೀತಿ ಬಹಳ ಮುಖ್ಯ ಹಾಗೂ ಸೂಕ್ಷ್ಮವಾದುದು ಮತ್ತು ಕೇವಲ ಕೆಲವೇ ರಾಜಕಾರಣಿ ಮತ್ತು ಅಧಿಕಾರಿಗಳ ಮರ್ಜಿಗೆ ಬಿಡಲಾಗದು.

ಯಾವುದೇ ಶೈಕ್ಷಣಿಕ ಕಾರ್ಯನೀತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪರಸ್ಪರ, ಸೂಕ್ಷ್ಮ ಸಹಕಾರ ಅತ್ಯವಶ್ಯಕವಾದುದು. ಅತಿ ಹೆಚ್ಚು ಅಕ್ಷರಸ್ಥ ರಾಜ್ಯಗಳೆಂದರೆ ಕೇರಳ ಮತ್ತು ಹಿಮಾಚಲ ಪ್ರದೇಶ. ಎರಡೂ ರಾಜ್ಯಗಳು ಆರ್ಥಿಕ ಸಂಪನ್ಮೂಲಗಳಲ್ಲಿ ಮತ್ತು ಅವುಗಳ ಬಳಕೆಯಲ್ಲಿ, ಜಾತಿ ಶ್ರೇಣಿಯಲ್ಲಿ ಮತ್ತು ವರ್ಗಾವಾರು ವಿಂಗಡಣೆಯಲ್ಲಿ; ಧರ್ಮ ಮತ್ತು ಧಾರ್ಮಿಕ ಪಂಗಡಗಳಲ್ಲಿ ಹಾಗೂ ಭಾಷೆಗಳಲ್ಲಿ ವಿಭಿನ್ನವಾಗಿವೆ. ವಿಷಯಗಳೂ ಸಹ ಕ್ರಮೇಣ ಬದಲಾಗುತ್ತವೆ. ಎಲ್ಲವನ್ನೂ ಸಹ ಬದಿಗಿರಿಸಿ ಎರಡೂ ರಾಜ್ಯಗಳಲ್ಲಿನ ಮಕ್ಕಳನ್ನು ಸಂಸ್ಕೃತ, ವೇದಿಕ್ಗಣಿತಶಾಸ್ತ್ರ, ಅಸ್ಪಷ್ಟ ವಿಷಯವಾದ ಸಾಮಾಜಿಕ ವಿಜ್ಞಾನ ಮತ್ತು ಯೋಗ ಹಾಗೂ ಪ್ರಜ್ಞೆಯ ವಿಷಯಗಳನ್ನು ಕಲಿಯಿರಿ ಎಂದು ಒತ್ತಾಯಿಸೋಣವೆ?

ಎರಡೂ ಪ್ರದೇಶಗಳಲ್ಲಿ ವೇದಗಳ ಹೊರೆಯನ್ನು ಹೊರಿಸುವುದು ಶೈಕ್ಷಣಿಕವಾಗಿ ಅಡಚಣೆಯುಂಟು ಮಾಡುವಂಥದು ಹಾಗೂ ಹಲವರಿಗೆ ಶೈಕ್ಷಣಿಕವಾಗಿ ನಕಾರಾತ್ಮಕವಾದುದು ಮತ್ತು ಇಷ್ಟವಿಲ್ಲದ ವಿಷಯವೂ ಆಗಬಹುದು.

ಆದರೆ ಅವರೆಲ್ಲರೂ ಹೊಂದಿರುವ ಸಾಮಾನ್ಯ ಭಾವನೆಯೆಂದರೆ ಶಿಕ್ಷಣದ ಫಲದಿಂದ ನಿರೀಕ್ಷಿಸುವ ಮಹದಾಕಾಂಕ್ಷೆಗಳು. ಶಾಲೆ ಮತ್ತು ಬೋಧನಾ ವಿಷಯಗಳು ಸ್ಥಳೀಯ ಪರಿಸ್ಥಿತಿಗಳಿಗೆ ಮತ್ತು ಸಂದರ್ಭಗಳಿಗೆ ಸ್ಪಂದಿಸುವಂತಿರಬೇಕು ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಆಸಕ್ತಿ ಮೂಡುವಂತಾಗುತ್ತದೆ. ರಾಷ್ಟ್ರೀಯ ವಿಷಯಗಳ ಪ್ರಾಮುಖ್ಯತೆಯನ್ನು ಬದಿಗಿಡದೆ ಅಂಶವನ್ನು ಒಳಗೊಳ್ಳುವುದು ಹೇಗೆಂಬುದೇ ಎದುರಿಗಿರುವ ಪ್ರಶ್ನೆ - ಇದಕ್ಕೆ ಕೊಂಚ ಸೂಕ್ಷ್ಮತೆಯ ಅಗತ್ಯವಿದೆ. ಶೈಕ್ಷಣಿಕ ಕಾರ್ಯನೀತಿ ಹೇಗಿರಬೇಕೆಂದರೆ ಅದು ಕನಿಷ್ಠ ಪ್ರಾದೇಶಿಕ ಸಮಸ್ಯೆಗಳನ್ನು ರಾಷ್ಟ್ರೀಯ ಆಸಕ್ತಿಯ ವಿಷಯಗಳ ಭಾಗವಾಗಿಯೇ ಗುರುತಿಸಲು ಸಾಧ್ಯವಾಗಿಸುವಂತಿರಬೇಕು. ಅಂತಿಮವಾಗಿ ಇದು ಮೇಲಿಂದ ಬಲವಂತದ ಹೇರಿಕೆಯ ವಿಧಾನಕ್ಕಿಂತ ಹೆಚ್ಚು ಸೂಕ್ತ ವಿಧಾನವಾಗಿರುತ್ತದೆ.

ಬಿ.ಜೆ.ಪಿ. ಸರ್ಕಾರಗಳಿಲ್ಲದ ರಾಜ್ಯಗಳಲ್ಲಿನ ಶೈಕ್ಷಣಿಕ ಕಾರ್ಯನೀತಿಗಳು ಧರ್ಮನಿರಪೇಕ್ಷ ಶಿಕ್ಷಣವನ್ನು ಕಾಯ್ದಿಟ್ಟುಕೊಳ್ಳಲು ಮತ್ತು ಬಹು ಸಂಸ್ಕೃತಿಗಳ ನಿರಂತರತೆಯನ್ನು ಮುಂದುವರಿಸುವ ಹೆಚ್ಚಿನ ಜವಾಬ್ದಾರಿ ಹೊಂದಿವೆ. ಬಹುಸಂಸ್ಕೃತಿಗಳು ಹೆಚ್ಚು ಕಂಡುಬರುವ ರಾಜ್ಯಗಳ ಮಟ್ಟದಲ್ಲಿ ಇದು ಹೆಚ್ಚು ಸುಲಭವಾಗುತ್ತದೆ, ಆದರೆ ಶಿಕ್ಷಣ ಕುರಿತಂತೆ ಏನು ಕಲಿಸಲಾಗುತ್ತಿದೆ ಮತ್ತು ಯಾವು ಗುಂಪುಗಳು ಶಿಕ್ಷಣ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿವೆ ಎನ್ನುವುದರ ಬಗ್ಗೆ ಬಹಳಷ್ಟು ಪೂರ್ವ ಸಿದ್ಧತೆಯ ಅವಶ್ಯಕತೆಯಿದೆ. ಧರ್ಮನಿರಪೇಕ್ಷ ಶಿಕ್ಷಣ ಬೆಂಬಲಿಸುವ ಎನ್.ಡಿ.. ಸಹಾಯದೊಂದಿಗೆ ಸರ್ಕಾರ ರಚಿಸದಿರುವ ಪಕ್ಷಗಳಿಗೆ ಕಿರುಕುಳ ನೀಡುವ ಸಂಘ ಪರಿವಾರವನ್ನು ಮತ್ತು ಅಂತಹ ಪಕ್ಷಗಳ ಕೃತ್ಯಗಳನ್ನು ಸಹ ಪ್ರಶ್ನಿಸಬೇಕಾಗಿದೆ. ಸ್ವಹಿತಾಸಕ್ತಿಯ ಮತ್ತು ಸಂಶಯದ ರಾಜಕೀಯ ದುರುದ್ದೇಶಗಳಿಗಾಗಿ ಶಿಕ್ಷಣವು ಬಲಿಪಶುವಾಗಬಾರದು.

ಪ್ರಸ್ತುತ ಸಮಯದ ಸಂಕೀರ್ಣತೆ ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗುವಂತೆ ಮುಂದಿನ ತಲೆಮಾರನ್ನು ಸಿದ್ಧಗೊಳಿಸುವ ಶೈಕ್ಷಣಿಕ ಕಾರ್ಯಕ್ರಮವನ್ನು ರೂಪಿಸಬೇಕು. ಇದು ಯುವ ಭಾರತದ ಇಡೀ ಮುಂದಿನ ತಲೆಮಾರಿನ ಭವಿಷ್ಯದ ವಿಷಯವಾಗಿರುವುದರಿಂದ ಕುರಿತು ಗಂಭೀರವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಚರ್ಚಿಸಿ ಪರಾಮರ್ಶಿಸಬೇಕಾಗಿದೆ. ಆದರೆ ದುರಂತವೆಂದರೆ ಭಾರತೀಯ ಮಧ್ಯಮವರ್ಗ ತಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ ಎಂಬುವುದರ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಅವರಿಗೆ ಬೇಕಿರುವುದು ಅಂಕಗಳು, ಪರ್ಸೆಂಟೇಜ್ಮತ್ತು ರ್ಯಾಂಕ್ಗಳು.

ಹೊಸ ಕಾರ್ಯನೀತಿಯು ಸಾಮಾಜಿಕ ಅಂತರವನ್ನು ಕಡಿಮೆಗೊಳಿಸುತ್ತದೆ ಹಾಗೂ ಶಾಲೆಯಲ್ಲಿನ ಪಠ್ಯವಿಷಯಗಳನ್ನು ಬದಲಿಸುವುದರಿಂದ ಮಕ್ಕಳ ಮೇಲಿನ ಹೊರೆ ಕಡಿಮೆಯಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಏನು ಬೋಧಿಸಲಾಗುತ್ತಿದೆ ಎನ್ನುವುದನ್ನು ವೃತ್ತಿಪರಗೊಳಿಸುವುದರ ಮೂಲಕ ಸ್ವಲ್ಪಮಟ್ಟಿಗೆ ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಬಹುದು - ಅಂದರೆ ಪ್ರಮುಖಧಾರೆಯ ಪಠ್ಯವಿಷಯಗಳನ್ನು ಜ್ಞಾನ ವ್ಯವಸ್ಥೆಯಾಗಿ ಅವುಗಳಿಗೆ ನಿಗೂಢತೆಯ ಮುಸುಕು ಹೊದಿಸದೆ ಬೋಧಿಸಬೇಕಾಗುತ್ತದೆ. ಒಂದು ವಿಷಯವನ್ನು ಹೇಗೆ ಕಲಿಸಲಾಗುತ್ತದೆ ಎಂಬುದರ ಹಿಂದೆ ಒಂದು ಸಾಮಾಜಿಕ ಸಂದರ್ಭವಿರುತ್ತದೆ ಹಾಗೂ ಅದು ಸಾಮಾಜಿಕ ನ್ಯೂನತೆಗಳ ಮೇಲೆ ಪರಿಣಾಮ ಬೀರುತ್ತದೆ.

ಉದಾಹರಣೆಗೆ, ವೇದಿಕ್ಗಣಿತಶಾಸ್ತ್ರವನ್ನು ಸಂಸ್ಕೃತ ಶ್ಲೋಕಗಳನ್ನು ಉರುಹೊಡೆಯುವುದರ ಮೂಲಕ ಕಲಿಸಲಾಗುತ್ತದೆಯೇ ಅಥವಾ ಮೂಲತಃ ಲೆಕ್ಕಾಚಾರದ ವಿಧಾನವಾಗಿ ಕಲಿಸಲಾಗುತ್ತದೆಯೆ? ಮೊದಲಿನ ಸಂದರ್ಭ ನಿಸ್ಸಂದೇಹವಾಗಿ ಮೇಲು ಜಾತಿಯ ಮಕ್ಕಳಿಗೆ ಸುಲಭವಾಗುತ್ತದೆ; ಎರಡನೇ ಸಂದರ್ಭದಲ್ಲಿ ಬೋಧನೆಯ ಗುಣಮಟ್ಟ ಇತರ ಗಣಿತಶಾಸ್ತ್ರ ವಿಧಾನಗಳ ಬೋಧನೆಯೊಂದಿಗೆ ತುಲನೆಮಾಡಿ ನೋಡಬೇಕಾಗುತ್ತದೆ. ಅದು ಕೇವಲ ಘೋಷಣೆಗಿಂತ ಉತ್ತಮ ವಿಧಾನವೆಂದು ಪರಿಗಣಿಸುವುದಾದಲ್ಲಿ, ಗಣಿತಶಾಸ್ತ್ರ ಅತ್ಯವಶ್ಯಕವಿರುವ ಆಧುನಿಕ ಸಮಕಾಲೀನ ತಂತ್ರಜ್ಞಾನಗಳನ್ನು ನಿರ್ವಹಿಸಲು ಮಗುವಿನ ಕಲಿಕೆಗೆ ವೇದಿಕ್ಗಣಿತಶಾಸ್ತ್ರ ಬುನಾದಿ ಹಾಕಬಲ್ಲುದೆ?

(14ನೇ ಆಗಸ್ಟ್‌, 2001ಹಿಂದೂಸ್ತಾನ್ಟೈಮ್ಸ್ನಲ್ಲಿ ಪ್ರಕಟವಾದ ಲೇಖನದ ಅನುವಾದ)

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಸಾಂದರ್ಭಿಕ ಲೇಖನ... ಉತ್ತಮ ಅನುವಾದ