ಸೋಮವಾರ, ಮೇ 30, 2011

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು


2ನೇ ಜೂನ್ 2011ರ `ಅಗ್ನಿ' ವಾರಪತ್ರಿಕೆಯಲ್ಲಿ ಮಂಜುನಾಥ್ ಅದ್ದೆಯವರ ಅಂಕಣ `ಗಾಳಿ ಗಮಲು'ವಿನಲ್ಲಿ ಪ್ರಕಟವಾಗಿರುವ ನನ್ನ ಪುಸ್ತಕ `ಮಳೆಬಿಲ್ಲ ನೆರಳು'ವಿನ ಪರಿಚಯ:

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು
ಭಾರತದ ಮಟ್ಟಿಗೆ ದುಡಿಯುವ ಜನರ ಸಾಮುದಾಯಿಕ ಅನುಭವಗಳ ಹೊರತು ಉಳಿದದ್ದೆಲ್ಲಾ ನಡೆದದ್ದು ಮುಚ್ಚುಮರೆಯಲ್ಲಿಯೆ. ಅದರಲ್ಲೂ ಅಕ್ಷರ ಮತ್ತು ವಿಚಾರಗಳ ಲೋಕದ ವಂಚನೆಯಂತೂ ಸಾಮಾಜಿಕವಾಗಿ ನಿಷಿದ್ಧದ ಸಂಗತಿಯಂತೆ ಆಚರಣೆಯಲ್ಲಿದ್ದದ್ದು ಲೋಕಾಂತ ಸತ್ಯ. ದುಡಿಯುವ ಜನರ ಸಮುದಾಯಗಳಿಂದ ಬಹಳಷ್ಟು ಜನ ಅಕ್ಷರದ ಲೋಕಕ್ಕೆ ಇಂದು ಪ್ರವೇಶ ಪದೆದಿದ್ದರೂ ಸಂಗತಿ, ವಿಚಾರ, ಸತ್ಯಗಳ ಮುಚ್ಚುಮರೆಯಂತೂ ನಡೆದೇ ಇದೆ.
ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮದ ವಿಚಾರಗಳಂತೂ ವಂಚನೆಯ ಪರಮಾವಧಿ ತಲುಪಿ ಭಾರತದಲ್ಲಿ ವ್ಯಾಖ್ಯಾನಗೊಂಡಂತೆ, ತಪ್ಪುತಪ್ಪಾಗಿ ತಲುಪಿದಂತೆ, ತುರ್ಜುಮೆಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ನಡೆದಿರಲಿಕ್ಕೆ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಅಕ್ಷರ ಲೋಕದ ಗುತ್ತಿಗೆಯನ್ನು ಶತಶತಮಾನಗಳಿಂದ ಹಿಡಿದಿದ್ದವರ ಆತ್ಮವಂಚಕ ಮನಸ್ಥಿತಿ. ಜಾಗತಿಕ ಮಟ್ಟದಲ್ಲಿ ಜ್ಞಾನದ ನವ ಶಾಖೆಗಳು ತಲೆ ಎತ್ತಿದಾಗ ಅವುಗಳನ್ನು ಹಿಡಿದು, ಪಡೆದು ತರುವ ಚಾಂಪಿಯನ್‌ಗಳಾಗಿ ಇವರು ಆವರಿಸಿಕೊಂಡದ್ದು ಕೂಡ ತಮ್ಮ ಪಾರಂಪರಿಕ ಆತ್ಮವಂಚನೆಯ ಜೊತೆಯಲ್ಲಿಯೆ.
ಈ ಕಾರಣದಿಂದ ವಿಜ್ಞಾನ, ತಂತ್ರಜ್ಞಾನ, ಹೊಸ ಕೃಷಿ ಮಾದರಿಯಂತಹ ವಿಚಾರಗಳು ಸ್ಥಳೀಯ ಜನರ ಪಾಲಿಗೆ ಬೆಸಗೊಂಡ ರೀತಿಯೇ ತೀರಾ ಅಧ್ವಾನದಿಂದ ಕೂಡಿದೆ. ನಮಗಷ್ಟೇ ಅಲ್ಲ; ಎಲ್ಲಾ ಸ್ಥಳೀಯ ಭಾಷೆಗಳಿಗೆ ಜ್ಞಾನದ ಹೊಸ ಶಾಖೆಗಳು ತಲುಪಿದ್ದು ಇದೇ ಬಗೆಯಲ್ಲಿ. ಬೇರೆ ಬೇರೆ ಕಾರಣಗಳಿಗಾಗಿ ಬಂಗಾಳಿ, ಮಲೆಯಾಳಂ, ತಮಿಳು ಭಾಷೆಗಳ ಮಟ್ಟಗೆ ಈ ವಂಚನೆ ಪೂರ್ಣವಲ್ಲದಿದ್ದರೂ ಸ್ವಲ್ಪ ಮಟ್ಟಿನ ಹೊಡೆತ ತಿಂದಿದೆ. ಈ ಮೂರೂ ಭಾಷೆಗಳ ನೆಲದಲ್ಲಿ ಒಂದೂವರೆ ಶತಮಾನಕ್ಕೂ ಮೊದಲೇ ನಡೆದ ದೊಡ್ಡ ಮಟ್ಟದ ಸಾಂಸ್ಕೃತಿಕ ತಾಕಲಾಟಗಳ ಪರಿಣಾಮ ಇದು.
ಈ ದೇಶದ ಚರಿತ್ರೆಯಲ್ಲಿ ವಿಚಾರ ಮತ್ತು ವಿಜ್ಞಾನದ ಕದನ ಬೃಹತ್ ಅಧ್ಯಾಯವೇ ಆಗಿದೆ. ವಲಸೆ ವೈದಿಕರು-ಮೂಲನಿವಾಸಿ ಶೈವರ ನಡುವೆ ನಡೆದ ಸುದೀರ್ಘ ಸಂಘರ್ಷವು ಇದೇ ಆಗಿದೆ. ಇದಾದ ನಂತರ ವೈದಿಕರು ತಮ್ಮ ವಂಚಕ ಯುದ್ಧವನ್ನು ಮುಂದುವರೆಸಿದ್ದು ಇಲ್ಲಿಯ ಬೌದ್ಧರ ಮೇಲೆ. ಇವೆರಡೂ ವಿಚಾರಧಾರೆಗಳ ವಿರುದ್ಧದ ವೈದಿಕರ ಗೆಲುವು ವಿಜ್ಞಾನ, ದೇವರು, ವಿಚಾರ ಎಲ್ಲವನ್ನೂ ತಿರುಚಿ ಹಾಕಿತ್ತು. ಇದೇ ತಿರುಚುವ ಪರಂಪರೆಯೇ ಆಧುನಿಕ ವಿಜ್ಞಾನವನ್ನೂ ನಮಗೆ ತಲುಪಿಸುವ ಕೆಲಸವನ್ನು ಮೊದಲಿಗೆ ಶುರುವಿಟ್ಟದ್ದು. ಈ ವಂಚನೆಯನ್ನು ಮೀರಿ ಇತ್ತೀಚೆಗೆ ವಿಚಾರ, ವಿಜ್ಞಾನ, ಅಧ್ಯಾತ್ಮವನ್ನು ಅವುಗಳ ನಿಜವಾದ ನೆಲೆಯಲ್ಲಿ ನೋಡುವ, ಗ್ರಹಿಸುವ, ವ್ಯಾಖ್ಯಾನಿಸುವ ಕೆಲಸವನ್ನು ವೈದಿಕೇತರರು ಆರಂಭಿಸಿದ್ದಾರಾದರೂ ಸಂಘರ್ಷ ಮಾತ್ರ ನಡೆದೇ ಇದೆ. ವಿಚಾರ, ವಿಜ್ಞಾನವನ್ನು ತಿರುಚಿ ಹೇಳುವ ಪರಿಪಾಠವೂ ಮುಂದುವರೆದಿದೆ. ವಾಸ್ತವ ಹೇಳಬೇಕೆನ್ನುವವರ ಪ್ರಯತ್ನಗಳೂ ನಡೆದಿವೆ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎರಡು ಕನ್ನಡದ ಪುಸ್ತಕಗಳು ಮಹತ್ವದವು ಆಗಿವೆ. ಅವುಗಳಲ್ಲಿ ಒಂದು ಡಾ.ಜೆ.ಬಾಲಕೃಷ್ಣರ ‘ಮಳೆಬಿಲ್ಲ ನೆರಳು ಎಂಬ ವಿಜ್ಞಾನದ ಲೇಖನಗಳ ಕೃತಿ, ಮತ್ತೊಂದು ಕೃಷ್ಣಮೂರ್ತಿ ಬಿಳಿಗೆರೆಯವರ ಕೃಷಿ ಚರಿತ್ರೆಯ ಪರಿಶೋಧದ ‘ಬೇಸಾಯವ ಮಾಡಿ ಪುಸ್ತಕ. ಒಳ ತಿರುಳಿನಲ್ಲಿ ಎರಡೂ ಭಿನ್ನವಾದ ಪುಸ್ತಕಗಳಾದರೂ ಗ್ರಹಿಕೆಯ ಗೇಯತೆಯಲ್ಲಿ ಪರಸ್ಪರ ಸಾಮ್ಯತೆ ಇರುವ ಕೃತಿಗಳು.
‘ಮಳೆಬಿಲ್ಲ ನೆರಳು ಕೃತಿಯ ಲೇಖನಗಳು ಕೇವಲ ವಿಜ್ಞಾನ ಬರಹಗಳು ಮಾತ್ರವಲ್ಲ; ಮನುಷ್ಯರ ಸಮಾಜ, ಸಂಸ್ಕೃತಿಗೆ ಸಂಬಂಧಿಸಿದ ಚಿಂತನೆಗಳೂ ಹೌದು. ಹಾಗೆಯೆ ಒಟ್ಟಾರೆ ಜೀವಿಗಳ ಜೀವಿತ ಕ್ರಮದ ಬಗೆಗಿನ ಅರಿವಿನ ವಿಸ್ತರಣೆಗೆ ಪೂರಕವಾದವುಗಳೂ ಹೌದು. ನಿಸರ್ಗ ಚೈತನ್ಯದ ಜೈವಿಕತೆಯಿಂದ ಮೊದಲ್ಗೊಂಡು ಕಾರ್ಪೊರೇಟ್ ವಲಯದ ಸಂಚಿನ ತನಕ ಬಾಲಕೃಷ್ಣ ವಿಶ್ವಮಟ್ಟದ ನಿದರ್ಶನಗಳ ಸಮೇತ ವಿವರಿಸುತ್ತಾರೆ.
ಪುಸ್ತಕದ ಉದ್ದಕ್ಕೆ ಜಗತ್ತಿನ ಜೀವಜಾಲದ ನಿಗೂಢ ಬೆಡಗುಗಳನ್ನ, ಬಣ್ಣಗಳನ್ನ ಹುಡುಕುವ ಬಗೆಯೇ ಓದುಗರ ಎದುರು ಬೇರೊಂದು ಲೋಕವನ್ನು ತೆರೆದು ಅನುಭವವನ್ನು ಹೆಚ್ಚಿಸುತ್ತದೆ. ನಿಯಾಂಡರ್ತಲ್ ಮಾನವನಿಂದ ಮೊದಲ್ಗೊಂಡು ಕನಸುಗಳ ತನಕ ವೈಜ್ಞಾನಿಕ ಮಾದರಿಗಳ ಹುಡುಕಾಟದ ವಸ್ತುಗಳು ಈ ಪುಸ್ತಕದಲ್ಲಿ ಇವೆ. ‘ಕಾಮನಬಿಲ್ಲಿನ ಅನಾವರಣ ಎಂಬ ಈ ಪುಸ್ತಕದ ಲೇಖನವನ್ನಂತೂ ಈ ನಾಡಿನ ಪ್ರತಿಯೊಬ್ಬ ಯುವಕ-ಯುವತಿಯೂ ಓದಿದರೆ ಸಿಗುವ ಲಾಭ ಹೆಚ್ಚು. ‘ಪ್ರೇಮಿಗಳ ಹಾಗೂ ಹುಚ್ಚರ ಮನಸ್ಥಿತಿ ಒಂದೇ ಆಗಿರುತ್ತದೆ. ವಿವೇಚನೆಯನ್ನೂ ಮೀರಿದ ಎಂಥ ಅದ್ಭುತ ಕಲ್ಪನೆಗಳು ಅವರವು! ಹುಚ್ಚ, ಪ್ರೇಮಿ ಹಾಗೂ ಕವಿ ಒಂದೇ ಕಲ್ಪನೆಯ ದೋಣಿಯ ಪಯಣಿಗರು ಎಂದು ಶೇಕ್ಷ್‌ಪಿಯರ್ ಹೇಳಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಕಬಿ ಶೇಕ್ಸ್‌ಪಿಯರ್‌ನ ಈ ಗ್ರಹಿಕೆಗೆ ಪೂರಕವಾದ ದೇಹದ ರಾಸಾಯನಿಕಗಳಲ್ಲಿನ ಬೆಳವಣಿಗೆ ಯಾವುದು ಎಂಬುದನ್ನು ‘ಕಾಮನಬಿಲ್ಲಿನ ಅನಾವರಣ ವೈಜ್ಞಾನಿಕವಾಗಿ ಮುಂದಿಡುತ್ತದೆ. ಕಾಮ, ಪ್ರೇಮದ ವಿಚಾರಗಳಲ್ಲಿ ಕನಿಷ್ಠ ಅಗತ್ಯದ ವಿಚಾರಗಳನ್ನು ಯುವ ಜನತೆ ಮುಕ್ತವಾಗಿ ಚರ್ಚಿಸಲಾಗದಷ್ಟು ಮುಚ್ಚಿದ ಸಮಾಜ ನಮ್ಮದು. ಮಾನವ ಜೀವಿಯ ವರ್ತನೆಗಳ ಮೇಲೆ ದೇವರು, ಅರಿಷಡ್ವರ್ಗ, ಹಣೆಯಬರಹ, ವಿಧಿವಿಲಾಸದ ಸಂಗತಿಗಳನ್ನಷ್ಟೇ ಹೇರಿ ಕುಳಿತಿರುವ, ಈ ಅಲೌಕಿಕ ಸಂಗತಿಗಳ ಕಾವಲು ಕಾಯುತ್ತಿರುವ ಧಾರ್ಮಿಕ, ಸಾಮಾಜಿಕ ಸಂಗತಿ ಬಾಲ್ಯದಿಂದ ಯೌನಕ್ಕೆ ಕಾಲಿಡುವ ಅಸಂಖ್ಯಾತ ಯುವಕ-ಯುವತಿಯರ ವ್ಯಕ್ತಿತ್ವದ ಸಹಜ, ಸಮ್ಮತ ವಿಕಾಸಕ್ಕೆ ಕೊಡಲಿ ಪೆಟ್ಟನ್ನೇ ಹಾಕಿದೆ. ಮಾನವ ಜೀವಿಯ ಪ್ರೇಮ-ಕಾಮದ ವಿಚಾರದಲ್ಲಿ ಏನೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ವಿಶ್ವಮಟ್ಟದ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಜೆ.ಬಾಲಕೃಷ್ಣ ತೀರಾ ಉಪಯುಕ್ತ ಬರವಣಿಗೆಯನ್ನು ಬರೆದಿದ್ದಾರೆ.
‘ಈಗ ಜಲ ಮಾಯಾಂಗನೆಯರಿಗೆ ತಮ್ಮ ಹಾಡಿಗಿಂತ ಹೆಚ್ಚು ಪ್ರಬಲ ಅಸ್ತ್ರವೊಂದು ದೊರಕಿತ್ತು.... ಅದೇ ಅವರ ಮೌನ.... ಯಾರಾದರೂ ಬಹುಶಃ ಅವರ ಹಾಡಿನಿಂದ ತಪ್ಪಿಸಿಕೊಂಡಿರಬಹುದು; ಆದರೆ ಅವರ ಮೌನದಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಇವು ಫ್ರಾನ್ಜ್ ಕಾಫ್ಕಾನ ಮಾತುಗಳು. ‘ಅನ್ಯಗ್ರಹ ಜೀವಿಗಳಿವೆಯೆ? ಎಂಬ ಲೇಖನ ಆರಂಭಕ್ಕೆ ಬಾಲಕೃಷ್ಣ ಇವನ್ನು ಬಳಸಿಕೊಂಡಿದ್ದಾರೆ. ನಿಸರ್ಗದ ನೆಲೆಯಲ್ಲಿ, ವಿಶ್ವದ ಅನಂತತೆಯಲ್ಲಿ ಮನುಷ್ಯನ ‘ಒಂಟಿತನದ ಹುದುಲನ್ನು ಪರಾಮರ್ಶಿಸುವ ವಿಜ್ಞಾನದ ಸಂಶೋಧನೆಗಳನ್ನು ಕುರಿತ ಲೇಖನವಿದು.
ಸೃಜನಶೀಲ ಬರವಣಿಗೆಗಳ ತೀವ್ರತರ ಸಂವೇದನೆಗಳು, ಹುಡುಕಾಟಗಳು ವಿಜ್ಞಾನದ ನೆಲೆಯಲ್ಲಿ ಸಾಕ್ಷಾತ್ಕಾರ ಕಾಣುತ್ತಿರುವ ಕಾಲವಿದು. ಇದಕ್ಕೆ ಪೂರಕವಾದ ಅನೇಕ ನಿದರ್ಶನಗಳನ್ನು ಕ್ವಾಂಟಂ ವಿಜ್ಞಾನದಲ್ಲಿ ಕಾಣುತ್ತಿದ್ದೇವೆ. ಪತ್ರಿಕೆಯಲ್ಲಿ ಅಗ್ನಿ ಶ್ರೀಧರ್‌ರವರು ಬರೆಯುತ್ತಿರುವ ‘ಕ್ವಾಂಟಂ ಜಗತ್ತು ಅಂಕಣ ಈಗಾಗಲೇ ಸಾಮಾಜಿಕ, ಸಾಂಸ್ಕೃತಿಕ, ಸೃಜನಶೀಲ ಬರಹ ಚಿಂತನೆಗಳಲ್ಲಿ ವಿಜ್ಞಾನ ಒಡನಾಡಿರುವ ನೂರಾರು ನಿದರ್ಶನಗಳನ್ನು ಹಿಡಿದುಕೊಟ್ಟಿದ್ದಾರೆ. ‘ಅನ್ಯಗ್ರಹ ಜೀವಿಗಳಿವೆಯೆ? ಲೇಖನದಲ್ಲಿ ಜೆ.ಬಾಲಕೃಷ್ಣ ಕೂಡ ಕಳೆದ ಶತಮಾನದ ಪ್ರಭಾವಿ ಬರಹಗಾರನಾದ ಕಾಫ್ಕಾನ ಸಂವೇದನೆಗಳೊಂದಿಗೆ ವಿಜ್ಞಾನದ ಪ್ರಯೋಗಗಳು ವಿಸ್ತರಣೆ ಕಂಡು ಪರಮ ಸತ್ಯದ ತಡಕಾಟ ನಡೆಸುತ್ತಿರುವುದನ್ನು ಮುಂದಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್‌ನಿಂದ ಮೊದಲ್ಗೊಂಡು ಹೆನ್ರಿಟಾ ಲ್ಯಾಕ್ಸ್‌ಳ ಅಮರ ಕಥೆಯ ತನಕ ವಿಜ್ಞಾನದ ವೇದಿಕೆ ಏರಿ ಹುಡುಕಾಡಿರುವ ಬಾಲಕೃಷ್ಣ ಜನರ ಬದುಕಿನ ವಿವೇಕದೊಂದಿಗೆ ತಮ್ಮ ಬರಹಗಳನ್ನು ಸಾದ್ಯಾಂತವಾಗಿಸಿರುವುದು ಅನನ್ಯವಾದದ್ದು.
ಕೃಷ್ಣಮೂತಿ ಬಿಳಿಗೆರೆಯ ಪುಸ್ತಕ ಇದಕ್ಕಿಂತ ಭಿನ್ನವಾದದ್ದು. ಈ ನೆಲದ ಬಹುಸಂಖ್ಯೆಯ ರೈತಾಪಿ ಕಡುಬುದಾರರ ಅನುದಿನದ ಬದುಕು, ಬವಣೆ, ಖುಷಿಗಳಿಗೆ ಸಂಬಂಧಿಸಿದ್ದು. ವಿಜ್ಞಾನ ಹೇಳುವ ಸತ್ಯಕ್ಕೆ ಒಂದು ಕಠೋರತೆ ಇರುತ್ತದೆ. ಅದು ಅನೇಕ ಬಾರಿ ತನ್ನನ್ನು ಪೋಷಿಸಿದವರ ಬಣ್ಣವನ್ನೇ ಬಯಲು ಮಾಡಿಬಿಡುತ್ತದೆ. ಬಾಲಕೃಷ್ಣರ ‘ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ ಎಂಬ ಲೇಖನ ಅಭಿಪ್ರಾಯ ಸೃಷ್ಟಿಯನ್ನು ಅರ್ಥಾತ್ ಮೈಂಡ್ ಮ್ಯಾನಿಪ್ಯುಲೇಶನ್ ಅನ್ನು ಸಾಮೂಹಿಕವಾಗಿ ಏರ್ಪಡಿಸುವ ಅಂಶಗಳ ಕುರಿತು ವೈಜ್ಞಾನಿಕವಾಗಿ ಪ್ರಸ್ತುತಪಡಿಸಿದೆ. ಇಂಥಾ ಪ್ರಯೋಗಗಳು ಅಭಿವೃದ್ಧಿ, ಪ್ರಗತಿ ಹೆಸರಲ್ಲಿ ಪಶ್ಚಿಮದ ದೇಶಗಳಿಂದ ಹೇಗೆ ಆಚರಣೆ ಕಾಣುತ್ತವೆ ಎಂಬುದನ್ನು ನಿದರ್ಶನಗಳ ಸಮೇತ ಬಿಡಿಸಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್ ವಿಚಾರವಾಗಿ ಪ್ರಯೋಗಗಳಿಗೆ ಆ ದೇಶಗಳು ಖರ್ಚು ಮಾಡುತ್ತಿರುವ ಹಣದ ಬಗ್ಗೆ ಎಲ್ಲರಿಗೂ ಅರಿವಿದೆ.
ಅದೇ ಪ್ರಯೋಗಗಳು ಫಲಿತಾಂಶದಲ್ಲಿ ಅರಬ್ ಮೇಲಿನ ಯುದ್ಧವನ್ನು ‘ಪ್ರಜಾಪ್ರಭುತ್ವದ ಉಳಿವು ಎಂದು ಬಿಂಬಿಸಲು, ಗ್ಯಾಟ್ ಒಪ್ಪಂದದ ಕರಾಳತೆಯನ್ನು ‘ಅಭಿವೃದ್ಧಿ ಎಂದು ನಂಬಿಸಲು ನಡೆಸುತ್ತಿರುವ ನಿದರ್ಶನಗಳು ಚರ್ಚೆಯಾಗಿವೆ. ಇಂಥಾ ಅಭಿಪ್ರಾಯ ಸೃಷ್ಟಿಯ ಅಪಾಯ ಯಾವ ಮಟ್ಟದಲ್ಲಿ ಇನ್ನೊಂದು ಸಮುದಾಯದ, ದೇಶದ ಜನರನ್ನು ಧ್ವಂಸ ಮಾಡಬಲ್ಲದು ಎಂಬುದನ್ನು ಕೃಷ್ಣಮೂರ್ತಿಯವರ ‘ಬೇಸಾಯವ ಮಾಡಿ ಪುಸ್ತಕದಲ್ಲಿ ನೋಡಬಹುದು. ನೀತಿ ರೂಪಿಸುವ ನಮ್ಮ ಪಾರ್ಲಿಮೆಂಟ್‌ನ ಮೈಂಡ್‌ಸೆಟ್ ಹೇಗೆ ಅಮೆರಿಕಾದ ‘ಅಭಿವೃದ್ಧಿ ಅಭಿಪ್ರಾಯದ ಸೃಷ್ಟಿಗೆ ಕೊರಳು ಕೊಟ್ಟು, ಗ್ಯಾಟ್‌ಗೆ ಸಹಿಹಾಕಿತು. ಇದರಿಂದ ರೈತಾಪಿ, ಕೂಲಿಕಾರ, ಕಾರ್ಮಿಕ ಸೇರಿದಂತೆ ಭಾರತದ ಸಮಗ್ರ ದುಡಿಯುವ ಜನರ ಪಾಲಿಗೆ ‘ಗ್ಯಾಟ್ ಒಪ್ಪಂದ ಹೇಗೆ ನರಕ ಸೃಷ್ಟಿಸಿದೆ ಎಂಬುದನ್ನು ಬಿಳಿಗೆರೆ ಬಿಡಿಸಿಟ್ಟಿದ್ದಾರೆ.
ಹಳ್ಳಿಯ ಜನರ ಬದುಕನ್ನು ಅರ್ಥಹೀನಗೊಳಿಸಲು ಎಂಥೆಂಥಾ ಪ್ರಯತ್ನಗಳು ನಡೆಯುತ್ತಿವೆ; ಅವುಗಳನ್ನು ಮೀರಬೇಕಾದರೆ ಇರಿಯುವ ಅಸ್ತ್ರದ ವಿರುದ್ಧ ನಾವು ರೂಪಿಸಿಕೊಳ್ಳಬೇಕಾದ ಬೆವರ ಶಾಸ್ತ್ರ ಯಾವುದು ಎಂಬುದನ್ನು ಪುಸ್ತಕ ಹೇಳುತ್ತದೆ. ಪುಸ್ತಕದ ಮೊದಲ ಭಾಗದಲ್ಲಿ ಕೃಷಿಗೆ ಬಿದ್ದಿರುವ, ಬೀಳುತ್ತಿರುವ ಹೊಡೆತಗಳ ಚರ್ಚೆ ನಡೆದಿದೆ. ಎರಡನೆಯ ಭಾಗದಲ್ಲಿ ಹೊಲ, ತೋಟಗಳ ಮಣ್ಣು, ನೀರಿನ ಸಂಗತಿಗಳಿಂದ ಕ್ರಿಮಿಕೀಟಗಳ ತನಕ ಚರ್ಚಿಸಿ ಕೃಷಿಯ ಉಳಿವಿನ, ಲಾಭದಾಯಕತೆಯ ಹಾದಿಗಳ ಹುಡುಕಾಟವಿದು.
ರೈತರ ಆತ್ಮಹತ್ಯೆಗಳ ಸುಳಿ ಹೇಗೆ ಸುಳ್ಳು ಅಭಿಪ್ರಾಯಗಳ ಮೇಲೆ ನಿಂತಿದೆ; ಅದರಿಂದ ಹೊರಬರಬೇಕಾದರೆ ರೈತ ಏನು ಮಾಡಬೇಕು ಎಂಬ ನೆಲೆಯಲ್ಲಿ ನಡೆದಿರುವ ಈ ಪುಸ್ತಕ ರೈತರಿಗೆ ಅತ್ಯಗತ್ಯದ್ದು. ಬಹು ಜನರ ಕ್ರಿಯಾಶೀಲತೆಗೆ ಸಂಬಂಧಿಸಿದ; ಆ ಕ್ರಿಯೆಯ ಮೇಲೆ ಪರಿಣಾಮ ಮಾಡಬಲ್ಲ ಶಕ್ತಿ ಇರುವ ಕಾರಣದಿಂದಲೇ ಇವೆರಡೂ ಕೃತಿಗಳಿಗೆ ಮಹತ್ವ ಇರುವುದು. ಇಂಥಾ ಮಹತ್ವ ಓದುಗರಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ. ಈ ನಿಟ್ಟಿನಲ್ಲಿ ಎರಡೂ ಓದಲೇಬೇಕಾದ ಪುಸ್ತಕಗಳು. ‘ಬೇಸಾಯವ ಮಾಡಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ್ದರೆ, ‘ಮಳೆಬಿಲ್ಲ ನೆರಳು ಕೃತಿಯನ್ನು ಬರಹ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ.

ಕಾಮೆಂಟ್‌ಗಳಿಲ್ಲ: