ಶನಿವಾರ, ಫೆಬ್ರವರಿ 18, 2023

ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನ ೨೦೨೩

ಪೆಬ್ರವರಿ ೧೪ ಮತ್ತು ೧೫, ೨೦೨೩ರಂದು ಮುಳಬಾಗಿಲಿನಲ್ಲಿ ನನ್ನ ಸರ್ವಾಧ್ಯಕ್ಷತೆಯಲ್ಲಿ ನಡೆದ ೨೦ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೆಲವು ತುಣುಕುಗಳು














 

ಬುಧವಾರ, ಫೆಬ್ರವರಿ 15, 2023

ಕನ್ನಡ ಅನ್ನ ಕೊಡುವ ಭಾಷೆ ಆಗಿಲ್ಲ

 *ಕನ್ನಡ ಅನ್ನ ಕೊಡುವ ಭಾಷೆ ಆಗಿಲ್ಲ: ಡಾ.ಜೆ.ಬಾಲಕೃಷ್ಣ* 






 ಕನ್ನಡದ ಮೂಲಕ ವಿಜ್ಞಾನ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬಹುದು. ಆದರೆ, ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ ಓದಿದವರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ನೆಲೆಸಿದೆ. ಹೀಗಾಗಿ, ಕನ್ನಡ ಅನ್ನ ಕೊಡುವ ಭಾಷೆ ಆಗಿಲ್ಲ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ *ಡಾ.ಜೆ.ಬಾಲಕೃಷ್ಣ* ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದಲ್ಲಿ ಓದಿ ಶಿಕ್ಷಕರಾಗಬಹುದೇ ಹೊರತು ವಿಜ್ಞಾನಿಯಾಗಲು ಸಾಧ್ಯವಿಲ್ಲ. ಉದ್ಯೋಗಾವಕಾಶಗಳು ಕಡಿಮೆ ಆಗಿದೆ. ಹೀಗಾದಲ್ಲಿ, ಕನ್ನಡ ಮಾಧ್ಯಮಕ್ಕೆ ಯಾವ ಧೈರ್ಯದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಕಲಿಸಲ್ಲ ಎಂಬ ದೂರುಗಳಿವೆ. ಯಾವುದೇ ಭಾಷೆ ಅನ್ನದ ಭಾಷೆ ಆಗಬೇಕಾದರೆ ಅದಕ್ಕೆ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಮುಖ್ಯವಾಗುತ್ತದೆ. ಏಕೀಕರಣ ಆಗಿನಿಂದಲೇ ವಿಜ್ಞಾನವನ್ನು ಕನ್ನಡದಲ್ಲಿ ಕಲಿಯುವ ವ್ಯವಸ್ಥೆ ಹಾಗೂ ಉದ್ಯೋಗ ಕೊಡುವ ವ್ಯವಸ್ಥೆ ಆಗಬೇಕಿತ್ತು. ಈಗ ಕನ್ನಡದಲ್ಲಿ ವಿಜ್ಞಾನ, ಸಾಫ್ಟ್ ವೇರ್ ಕೋಡಿಂಗ್ ಕಲಿತರೆ ಯಾರು ಉದ್ಯೋಗ ಕೊಡುತ್ತಾರೆ? ಉದ್ಯೋಗಾವಕಾಶಗಳು ಎಲ್ಲಿವೆ? ಎಂದು ಕೇಳಿದರು. 

ಬಲವಂತ ಮಾಡಿ ಕನ್ನಡದಲ್ಲಿ ವಿಜ್ಞಾನ ಓದಿದರೆ ಇವತ್ತು ಅವರ ಬದುಕು ಹಾಳಾಗುವ ಸ್ಥಿತಿ ಇದೆ.  ಸರ್ಕಾರಗಳು ಮೊದಲು ಉದ್ಯೋಗಾವಕಾಶ ಸೃಷ್ಟಿಸಬೇಕು. ಡಿಜಿಟಲ್ ಕೇವಲ ಮನರಂಜನೆಗಾಗಿ ಅಲ್ಲ. ಬೇರೆ ಜ್ಞಾನ ಪಸರಿಸಲು ಬಳಸಬೇಕು. ಕನ್ನಡ ಪಠ್ಯದ ಭಾಷೆಯಾಗಬೇಕು. ಉದ್ಯೋಗ ಕೊಡುವ ಭಾಷೆ ಆಗಬೇಕು ಎಂದು ಸಲಹೆ ನೀಡಿದರು. 

ಕೃಷಿ ವಿ.ವಿಯಲ್ಲೂ ಕೃಷಿಯನ್ನು ಕನ್ನಡ ಮಾಧ್ಯಮ ಕಲಿಸಲು ಸಾಧ್ಯವಾಗಿಲ್ಲ. ಎಂ.ಎಸ್ಸಿ, ವಿಜ್ಞಾನ ಸಂಶೋಧನೆಯನ್ನು ಕನ್ನಡ ಮಾಧ್ಯಮದಲ್ಲಿ ಮಾಡಲು ಆಗಿಲ್ಲ ಎಂದರು.

 *ಪುಸ್ತಕೋದ್ಯಮ ಲಾಭದಾಯಕವಲ್ಲ* : ಪುಸ್ತಕೋದ್ಯಮ ಬ್ಯುಸಿನೆಸ್ ಆಗಿ ಮಾರ್ಪಟ್ಟಿದ್ದು, ಕೆಲವರು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡುವುದಕ್ಕೆ ಸೀಮಿತವಾಗಿದ್ದಾರೆ. ಬಹಳಷ್ಟು ಪ್ರಕಾಶಕರು ಈ ರೀತಿ ಮಾಡುತ್ತಿದ್ದಾರೆ. ಕನಿಷ್ಠ ಮುದ್ರಣದ ಹಣ ಬರುತ್ತದೆ. ಕೆಲವರು ಈ ವರ್ಷ ತಿರಸ್ಕೃತಗೊಂಡಿರುವ ಪುಸ್ತಕಗಳನ್ನು ಮುಂದಿನ ವರ್ಷ ಮುಖಪುಟ ಬದಲಾಯಿಸಿ ಮತ್ತೆ ಇಲಾಖೆಗೆ ನೀಡುತ್ತಾರೆ. ಕೆಲ ಪುಸ್ತಕಗಳು ಮಾರುಕಟ್ಟೆಗೇ ಬರುವುದಿಲ್ಲ. ಜೊತೆಗೆ ಗುಣಮಟ್ಟವೂ ಇರುವುದಿಲ್ಲ. ಕೆಲವರು ಅಂತರ್ಜಾಲದಲ್ಲಿ ಸಿಗುವ ವಿಷಯ ಎತ್ತಿಕೊಂಡು ಪುಸ್ತಕ ಸಿದ್ಧಪಡಿಸುತ್ತಾರೆ. 

 *ಪುಸ್ತಕ ಲಾಭದಾಯಕ ಉದ್ದಿಮೆ ಅಲ್ಲ* ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿ, ಅನುದಾನ ಬಂದಿದ್ದರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸಾಹಿತಿಗಳಾಗಲಿ, ರಾಜಕಾರಣಗಳಾಗಿ ಜನರಿಗೆ ತಿಳವಳಿಕೆಯನ್ನೂ ಮೂಡಿಸಿಲ್ಲ. ಸರ್ಕಾರದ ನಿರಾಸಕ್ತಿಯೂ ಒಂದು ಕಾರಣ. ಚಟುವಟಿಕೆಗಳು ನಡೆಯುತ್ತಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ವೇತನವೂ ಸಿಕ್ಕಿಲ್ಲ ಎಂದು ಹೇಳಿದರು. 

ಕನ್ನಡ ಪ್ರಾಚೀನ ಭಾಷೆ. ಆದರೆ. ಅದರ ಹಿರಿಮೆ ಬಹಳ ಕನ್ನಡರಿಗೆ ಗೊತ್ತಿಲ್ಲ. ಕನ್ನಡ ಎಂಬುದು ಅಂಧಶ್ರದ್ಧೆ ಆಗಿದೆ. ಇದರ ಪ್ರಚುರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಇವೆ. ಕಾರ್ಯಕ್ರಮಗಳು ಕಟ್ಟಕಡೆಯ ವ್ಯಕ್ತಿಗೆ ಸಿಲುಕುತ್ತಿಲ್ಲ ಎಂದರು. 

ಸರ್ಕಾರಕ್ಕೆ ಸಲಹೆ ಕೊಡಲು ಸಮ್ಮೇಳನವೇ ನಡೆಯಬೇಕೆಂದೇನಿಲ್ಲ. ಇದೊಂದು ಕನ್ನಡ ಉತ್ಸವ, ಉತ್ಸವ, ಜಾತ್ರೆ, ಎಲ್ಲರೂ ಒಂದುಕಡೆ ಸೇರಬಹುದು. ಭಾಷೆ ಬಗ್ಗೆ ಚರ್ಚೆ ನಡೆಯಬೇಕು. ಜನರು ಹೆಚ್ಚಾಗಿ ಬರಬೇಕು ಎಂದು ನುಡಿದರು.  

ಕೋಲಾರದಲ್ಲಿ ತೆಲುಗು-ಕನ್ನಡ ಸಹೋದರ ಭಾಷೆಗಳಾಗಿವೆ. ಯಾವತ್ತೂ ವೈರಿ ಆಗಿಲ್ಲ. ಸಾಹಿತ್ಯದ ವಿನಿಮಯ ಆಗುತ್ತಿದೆ. ಆದರೆ, ಅಂದುಕೊಂಡಷ್ಟರ ಮಟ್ಟಿಗೆ ಆಗಿಲ್ಲ ಎಂದರು. 

ಬದುಕಲ್ಲಿ ಸಾಹಿತ್ಯ ಬಹಳ ಮುಖ್ಯ. ಸಾಹಿತ್ಯ ಬದುಕಿನ ಸಂಬಂಧ ಗಟ್ಟಿಗೊಳಿಸುತ್ತದೆ. ಸಮ್ಮೇಳನದಲ್ಲಿ ಸಾಹಿತ್ಯ ನಮ್ಮ ಮಾನಸಿಕ, ಸಾಮಾಜಿಕ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಒತ್ತು ನೀಡಿ ಮಾತನಾಡಲಿದ್ದೇನೆ ಎಂದು ಹೇಳಿದರು. 

 *ಬದಲಾವಣೆ ಆಕಸ್ಮಿಕ* : ಎಸ್ಸೆಸ್ಸೆಲ್ಸಿ ಓದಿದ್ದ ಕಾರಣಕ್ಕಾಗಿ ತಂದೆ ಸರ್ಕಾರಿ ನೌಕರಿ ಹುಡುಕಿಕೊಂಡು ನಗರಕ್ಕೆ ಬಂದರು. ಇದರಿಂದ ನಮ್ಮ ಬದುಕು ಬದಲಾಯಿತು. ಒಮ್ಮೆ ಹಳ್ಳಿಗೆ ಹೋಗಿ ಬರುವಾಗ ಕೋಲಾರದಲ್ಲಿ ಕಳೆದು ಹೋಗಿದ್ದೆ. ಬಸ್ ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದೆ ಎಂದು ಮೆಲುಕು ಹಾಕಿದರು. 

ಮನೆಯಲ್ಲಿ ದಿನಪತ್ರಿಕೆ ಹಾಗೂ ಪುಸ್ತಕಗಳ ಓದಿನಿಂದ ಸಾಹಿತ್ಯ ಆಸಕ್ತಿ ಬಂತು. ಮಕ್ಕಳ ಕಥೆ ಓದುತ್ತಿದ್ದೆವು. ಪ್ರೌಢಶಾಲೆಯಲ್ಲಿ ನಿತ್ಯ ಒಂದು ಪುಸ್ತಕ ಓದುತ್ತಿದ್ದೆ. ಹಾಗೆಯೇ, ನನ್ನ ಆಸಕ್ತಿಗೆ ತಕ್ಕ ಹುದ್ದೆಯೂ ಸಿಕ್ಕಿತು. ಮಾರ್ಚ್ನಲ್ಲಿ ನಿವೃತ್ತನಾಗುತ್ತಿದ್ದೇನೆ ಎಂದರು.

ಈಗಿನ ಮಕ್ಕಳಲ್ಲಿ ಓದುವ ಆಸಕ್ತಿ ಇದ್ದರೂ ಸಾಮಾಜಿಕ ಜಾಲತಾಣಗಳಿಂದ ಬಹಳ ಅಡೆತಡೆ ಉಂಟಾಗುತ್ತಿದೆ. ನಮ್ಮ ಪೀಳಿಗೆಯ ಬಾಲ್ಯದಲ್ಲಿ ಟಿ.ವಿ, ಮೊಬೈಲ್ ಇರಲಿಲ್ಲ, ಹೆಚ್ಚು ಸಮಯ ಸಿಗುತಿತ್ತು ಎಂದು ನುಡಿದರು.

ಸಂವಾದದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಹಿರಿಯ ಪತ್ರಕರ್ತರಾದ ಕೆ.ರಂಗನಾಥ್, ಬಿ.ಸುರೇಶ್, ಎಸ್.ಸಚ್ಚಿದಾನಂದ, ಎಸ್.ಚಂದ್ರಶೇಖರ್ ಇನ್ನಿತರರು ಹಾಜರುದ್ದರು.

೨೦ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ

 



೨೦ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಿನಾಂಕ: ೧೪ ಮಂಗಳವಾರ, ೧೫ ಬುಧವಾರ, ಫೆಬ್ರವರಿ ೨೦೨೩

ಸ್ಥಳ: ನೇತಾಜಿ ಕ್ರೀಡಾಂಗಣ ಮತ್ತು ಡಿ.ವಿ.ಜಿ. ಗಡಿ ಭವನ, ಮುಳಬಾಗಿಲು


ಸಮ್ಮೇಳನಾಧ್ಯಕ್ಷರ ಭಾಷಣ


ಡಾ.ಜೆ.ಬಾಲಕೃಷ್ಣ


ವೇದಿಕೆಯ ಮೇಲೆ ಆಸೀನರಾಗಿರುವ ಗಣ್ಯರೆ ಹಾಗೂ ಆಸಕ್ತಿ ಮತ್ತು ಉತ್ಸಾಹದಿಂದ ಆಗಮಿಸಿರುವ ಎಲ್ಲ ಹಿರಿಯ ಕಿರಿಯರಿಗೆ ನಮಸ್ಕಾರಗಳು. ನನ್ನನ್ನು ಈ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯೋಜಕರು ಆಯ್ಕೆ ಮಾಡಿದ್ದಾರೆ, ಅದಕ್ಕೆ ನಾನು ಅರ್ಹನೋ ಅಲ್ಲವೋ ನನಗೆ ತಿಳಿದಿಲ್ಲ, ಆದರೆ ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವಿಗೆ, ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಇದುವರೆಗೆ ಕೈಗೊಳ್ಳುತ್ತಿದ್ದು ನಾಡು ನುಡಿಯ ಹೆಸರಿನಲ್ಲಿ ಆಯೋಜಿಸುತ್ತಿರುವ ಈ ಸಾಹಿತ್ಯದ ಹಬ್ಬದಲ್ಲಿ ನಾನು ಅಧ್ಯಕ್ಷನಾಗಿ ಪಾಲ್ಗೊಳ್ಳುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಹಾಗಾಗಿ ನನ್ನನ್ನು ವಿಶ್ವಾಸದಿಂದ ಆಯ್ಕೆ ಮಾಡಿದ ಆಯೋಜಕರಿಗೆ ನನ್ನ ಧನ್ಯವಾದಗಳು. 

೨೦ನೇ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಳಬಾಗಿಲಿನಲ್ಲಿ ಆಯೋಜಿಸಿರುವುದು ಬಹಳ ಸಂತೋಷದ ವಿಷಯ. ಮುಳಬಾಗಿಲು ನನ್ನ ಪೂರ್ವಜರ ತಾಲ್ಲೂಕು ಎನ್ನುವುದಷ್ಟೇ ಅಲ್ಲ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ನಾನು ಬಾಲ್ಯದ ದಿನಗಳನ್ನು ಕಳೆದ ಸಿದ್ಧಘಟ್ಟ ಹಾಗೂ ಮಂಡಿಕಲ್ ಗ್ರಾಮಗಳು ಬಹಳ ಮಹತ್ವದ ಪಾತ್ರ ವಹಿಸಿವೆ.

ಕೋಲಾರ ಕರ್ನಾಟಕದ ಗಡಿ ಜಿಲ್ಲೆ ಹಾಗೂ ಇಲ್ಲಿನ ಕನ್ನಡ ಭಾಷೆ ತನ್ನ ಅನನ್ಯತೆಯಲ್ಲಿ ಬಹಳ ಪ್ರಮುಖವಾದುದೆಂದು ನನ್ನ ಭಾವನೆ. ಗಡಿ ನಾಡಿನವರಾದ ನಾವು ಶಾಲೆಯಲ್ಲಿ ಓದುವ ಇಂಗ್ಲಿಷ್ ಹಾಗೂ ಹಿಂದಿ ಸೇರಿದಂತೆ ನಾಲ್ಕು ಭಾಷೆಗಳನ್ನು ಸರಾಗವಾಗಿ ಕಲಿತುಬಿಡುತ್ತೇವೆ. ಅದೇ ಅಮೆರಿಕಾ ಮುಂತಾದ ದೇಶಗಳಲ್ಲಿ ಎರಡನೇ ಭಾಷೆ ಕಲಿಯುವುದೇ ಒಂದು ಸಾಹಸವೆನ್ನಿಸಿ, ಎರಡು ಭಾಷೆ ಕಲಿತವರು ಹೆಚ್ಚು ಬುದ್ಧಿವಂತರಾಗುತ್ತಾರೆAದು ಅವರ ಮಿದುಳಿನಲ್ಲಾಗುವ ಬದಲಾವಣೆಗಳ ಕುರಿತಂತೆ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತವೆ. ಕೋಲಾರದ ಕನ್ನಡವೂ ವಿಶಿಷ್ಟ ಪ್ರಾದೇಶಿಕ ಪರಿಭಾಷೆ ಅಥವಾ ಉಪಭಾಷೆಯ ಲಕ್ಷಣಗಳನ್ನು ಹೊಂದಿದ್ದು ಅದರ ದ್ವಿಭಾಷಿಕತೆ ಅಥವಾ ಡೈಗ್ಲಾಸಿಯ ಕುರಿತು ಅಲ್ಲೊಂದು ಇಲ್ಲೊಂದು ಬಿಟ್ಟಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯದಿರುವುದು ವಿಷಾದಕರ ಸಂಗತಿಯೇ ಆಗಿದೆ. ಈ ಜಿಲ್ಲೆಯಲ್ಲಿ ತೆಲುಗು ಹಾಗೂ ಕನ್ನಡಗಳು ಸಹೋದರ ಭಾಷೆಗಳಂತೆ ಇದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಲಿಖಿತ ಸಾಹಿತ್ಯದಲ್ಲಿ ಆ ಭಾಷೆಗಳ ಕೊಡು-ಕೊಳ್ಳುವಿಕೆ ಈ ಜಿಲ್ಲೆಯಲ್ಲಿ ನಡೆದೇ ಇಲ್ಲವೆನ್ನಬಹುದು. ಇಂದಿನ ದಿನಗಳಲ್ಲಿ ರಾಜ್ಯದ ಬೇರೆಡೆ ಕನ್ನಡದಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಕನ್ನಡಕ್ಕೆ ಬಹಳಷ್ಟು ಸಾಹಿತ್ಯ ಪರಸ್ಪರ ಅನುವಾದಗೊಳ್ಳುತ್ತಿವೆ. ಆದರೆ ಆ ಕಾರ್ಯ ಕೋಲಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ನಡೆಯಬೇಕಾಗಿತ್ತು ಎಂಬುದು ನನ್ನ ಭಾವನೆ. 

ಕೋಲಾರ ಜಿಲ್ಲೆಯ ಜಾನಪದ ಸಂಪತ್ತು ನಿಜವಾಗಿಯೂ ದಿಗ್ಭçಮೆಗೊಳಿಸುವಂಥದ್ದು. ಆದರೆ ಅದು ಬಹಳಷ್ಟು ತೆಲುಗಿನಲ್ಲಿರುವುದರಿಂದ ಉದಾಸೀನಕ್ಕೊಳಗಾಗಿದೆ. ಜಾನಪದಕ್ಕೆ ಭಾಷೆ ಗಡಿಗಳ ಹಂಗಿರಬಾರದು. ಅವುಗಳನ್ನು ಸಂಗ್ರಹಿಸಿ ದಾಖಲಿಸದಿದ್ದರೆ ಮುಂದಿನ ತಲೆಮಾರಿಗೆ ಅವುಗಳ ಕುರುಹೇ ಉಳಿಯುವುದಿಲ್ಲ. ಕೆಲವು ಗೆಳೆಯರು ಎರಡು ದಶಕಗಳ ಹಿಂದೆಯೇ ಕೋಲಾರ ಜಿಲ್ಲಾ ಸಾಂಸ್ಕೃತಿಕ ಕೋಶವನ್ನು ರಚಿಸಬೇಕೆಂಬ ಮಾತುಕತೆ ನಡೆಸಿದ್ದೆವು. ಆ ಮಾತುಕತೆಗಳು ಗೆಳೆಯ ಸಿ.ಮುನಿಯಪ್ಪನವರ `ಸಂಚಿಕೆ' ಪತ್ರಿಕೆಯ ಕಚೇರಿಯಲ್ಲಿಯೇ ನಡೆದಿತ್ತು. ಆದರೆ ಅದಕ್ಕೆ ಚಾಲನೆಯೇ ದೊರಕಲಿಲ್ಲ. ಪರಸ್ಪರ ಸಾಹಿತ್ಯಿಕ ಚರ್ಚೆಗಳು ಭಾಷೆ ಹಾಗೂ ಸಾಹಿತ್ಯದ ಬೆಳವಣ ಗೆಗೆ ಪೂರಕವಾದುವು. 

ಸಾಹಿತ್ಯ ಮತ್ತು ನಾನು

ನಾನೊಬ್ಬ ವಿಜ್ಞಾನದ ವಿದ್ಯಾರ್ಥಿ. ವಿಜ್ಞಾನಕ್ಕೂ ಸಾಹಿತ್ಯಕ್ಕೂ `ಎತ್ತಣ ಕೋಗಿಲೆ, ಎತ್ತಣ ಮಾಮರ' ಸಂಬAಧ ಎಂದು ನಿಮಗನ್ನಿಸಬಹುದು. ವಿಜ್ಞಾನ ಮತ್ತು ಮಾನವಿಕಗಳ ಸಂಬAಧವು ಬಹಳ ಹಿಂದಿನಿAದಲೂ ಪರಸ್ಪರ ಸಂಘರ್ಷದಿAದಲೇ ಕೂಡಿವೆ. ಮಾನವಿಕಗಳು ಕೇವಲ ಪಠ್ಯಗಳೊಂದಿಗೆ ವ್ಯವಹರಿಸುತ್ತವೆ ಹಾಗೂ ವಿಜ್ಞಾನ ವಸ್ತು ಮತ್ತು ಸಿದ್ಧಾಂತಗಳೊAದಿಗೆ ವ್ಯವಹರಿಸುತ್ತವೆ ಎಂದು ಅವು ಒಂದುಗೂಡಲು ಸದಾ ನಿರಾಕರಿಸುತ್ತಿದ್ದವು. ಅವುಗಳೆರಡೂ ರಾಜಿಯಾಗಬೇಕು ಹಾಗೂ ಸಮ್ಮಿಳಿತಗೊಳ್ಳಬೇಕು ಎಂದು ಇತ್ತೀಚಿನ ದಶಕಗಳಲ್ಲಿ ಕೆಲವರು ವಾದಿಸುತ್ತಿದ್ದಾರೆ. ಅವೆರಡೂ ಒಂದುಗೂಡಿದಲ್ಲಿ ಜಗತ್ತನ್ನು ಅರಿತುಕೊಳ್ಳುವುದು ಸುಲಭವಾಗುತ್ತದೆ ಎನ್ನುತ್ತಾರೆ ಅವರು. ಅದೇನೇ ಆದರೂ ಜಗತ್ತನ್ನು ಅರಿಯುವ ನನ್ನ ಕುತೂಹಲವೇ ನನ್ನನ್ನು ಆ ಎರಡೂ ಕ್ಷೇತ್ರಗಳೆಡೆಗೆ ಕರೆದೊಯ್ಯಿತು.

ಕೋಲಾರದ ಹೊಸ ಸರ್ಕಾರಿ ಪ್ರೌಢಶಾಲೆಗೆ ೮ನೇ ಕ್ಲಾಸಿಗೆ ನಾನು ಸೇರಿದಾಗ ಆ ಶಾಲೆಯ ಕಾಂಪೌAಡಿನಲ್ಲೇ ಇದ್ದ ಜಿಲ್ಲಾ ಗ್ರಂಥಾಲಯ ನನಗೆ ಹೊಸ ಲೋಕವನ್ನೇ ಪರಿಚಯಿಸಿತು. ನನ್ನ ಕೆಲವು ಗೆಳೆಯರೂ ಸಹ ಹೊಸ ಪುಸ್ತಕಗಳನ್ನು ನನಗೆ ಪರಿಚಯಿಸಿದರು. ಮನೆಯವರನ್ನು ಕಾಡಿ ರೂ.೧೦ ಕೊಟ್ಟು ಗ್ರಂಥಾಲಯದ ಸದಸ್ಯನಾದ ನಾನು ದಿನಕ್ಕೊಂದರAತೆ ಪುಸ್ತಕವನ್ನು ಎರವಲು ಪಡೆದು ಶಾಲೆಯಲ್ಲಿ ಪಾಠ ಮಾಡುವಾಗ ಕೊನೆಯ ಸಾಲಿನಲ್ಲಿ ಕೂತು ಕತೆ, ಕಾದಂಬರಿ, ನಾಟಕಗಳನ್ನು ಓದುತ್ತಿದ್ದೆ. ಅದೇ ಸಮಯದಲ್ಲಿಯೇ ನಾನು ಗೋಪಾಲಕೃಷ್ಣ ಅಡಿಗರು ಅನುವಾದಿಸಿದ ಜೂಲ್ಸ್ ವರ್ನ್ನ `ಭೂಗರ್ಭ ಯಾತ್ರೆ', ಗಲಿವರ್ ದೈತ್ಯರ ನಾಡಿಗೂ ಹೋಗಿದ್ದ ಎನ್ನುವುದನ್ನು, ಟಿ.ಕೆ.ರಾಮರಾವ್, ಎನ್.ನರಸಿಂಹಯ್ಯರವರ ಪತ್ತೇದಾರಿ ಕಾದಂಬರಿಗಳನ್ನು ಹಾಗೂ ಅನಂತ ನಾರಾಯಣರವರು ಅನುವಾದಿಸಿದ್ದ ಲಾರಾ ಇಂಗಲ್ಸ್ ವೈಲ್ಡರ್‌ರವರ `ದೊಡ್ಡ ಕಾಡಿನಲ್ಲಿ ಪುಟ್ಟ ಮನೆ' ಸರಣ ಯನ್ನು ಓದಿದ್ದು. ಆ ಓದಿನ ಗೀಳು ಕೋಲಾರದಲ್ಲಿ ಪಿ.ಯು.ಸಿ. ಮುಗಿಸಿ ಬಿ.ಎಸ್ಸಿ. ಕೃಷಿ ಓದಲು ಬೆಂಗಳೂರಿಗೆ ಹೊರಟಾಗಲೂ ಮುಂದುವರಿಯಿತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗ್ರಂಥಾಲಯವು ಭಾರತದ ಎರಡನೇ ದೊಡ್ಡ ಗ್ರಂಥಾಲಯ ಎಂದು ಆಗ ಹೇಳುತ್ತಿದ್ದರು. ನನಗಂತೂ ಓದೇ ಬರವಣ ಗೆಗೆ ದಾರಿ ಮಾಡಿಕೊಟ್ಟಿದೆ ಹಾಗೂ ಉತ್ತಮ ಮತ್ತು ವಿಸ್ತಾರ ಹರವಿನ ಓದುಗ ಮಾತ್ರ ಉತ್ತಮ ಸಾಹಿತಿಯಾಗಬಲ್ಲ ಎನ್ನುವುದು ನನ್ನ ನಂಬಿಕೆ.

ನಮಗೆಲ್ಲಾ ತಿಳಿದೇ ಇದೆ, ನಮ್ಮ ಪಿ.ಯು.ಸಿ. ದಿನಗಳಿಗೇ ವಿದ್ಯಾರ್ಥಿಗಳನ್ನು ಸೈನ್ಸ್ ಮತ್ತು ಆರ್ಟ್ಸ್ – ವಿಜ್ಞಾನ ಮತ್ತು ಕಲಾ ಕಾಲೇಜುಗಳು ಎಂದು ಪ್ರತ್ಯೇಕ ಮಾಡುತ್ತಾರೆ. ಈಗ ಆ ಭಾವನೆ ಇಲ್ಲದಿರಬಹುದು, ನಾವು ವ್ಯಾಸಂಗ ಮಾಡುವ ಸಮಯದಲ್ಲಿ ಕೆಲವರು ವಿದ್ಯಾರ್ಥಿಗಳು ವಿಜ್ಞಾನ ಆಯ್ಕೆ ಮಾಡಿಕೊಂಡರೆ, ಗಣ ತ, ವಿಜ್ಞಾನ ಕಷ್ಟ ಎನ್ನುವವರು `ಆರ್ಟ್ಸ್' ಆಯ್ಕೆ ಮಾಡಿಕೊಳ್ಳುತ್ತಿದ್ದರು. ವಿಜ್ಞಾನ ಆಯ್ಕೆ ಮಾಡಿಕೊಳ್ಳುವವರ ಅಂತಿಮ ಗುರಿ ಡಾಕ್ಟರ್, ಇಂಜಿನಿಯರ್ ಆಗಬಹುದೆಂದು – ಆಗ ಸಾಫ್ಟ್ವೇರ್ ಇರಲಿಲ್ಲ, ನಾನು ವಿಜ್ಞಾನ ಆಯ್ಕೆ ಮಾಡಿಕೊಂಡದ್ದು ಜಗತ್ತನ್ನು ಅರಿಯುವ ಕುತೂಹಲದಿಂದ, ಏಕೆಂದರೆ ವಿಜ್ಞಾನಿಗಳು `ವಸ್ತುನಿಷ್ಠ ಅನ್ವೇಷಕರು' ಹಾಗೂ ಮಾನವಿಕ ಶಾಸ್ತçದ ಅಧ್ಯಯನ ಮಾಡುವವರು ಕನಸಿನ ಲೋಕದ ಭಾವನಾತ್ಮಕ ಜೀವಿಗಳು ಎನ್ನುವುದು ನನ್ನ ಅನಿಸಿಕೆಯಾಗಿತ್ತು. ನನ್ನ ಓದಿನ ಮೂಲಕ ಅದೂ ಸಹ ಸತ್ಯಾನ್ವೇಷಣೆಯೇ ಎನ್ನುವುದು ಹಾಗೂ ವಿಜ್ಞಾನಿಗಳೂ ಸಹ ಅದರ ಅನ್ವೇಷಣೆಯಲ್ಲಿಯೇ ತೊಡಗಿದ್ದಾರೆ ಎನ್ನುವುದು ನನಗೆ ಕ್ರಮೇಣ ಅರಿವಾಗತೊಡಗಿತು. ಇಬ್ಬರ ಗುರಿಯೂ ಒಂದೇ ಆದರೆ ಅವರ ವಿಧಾನಗಳು ಮಾತ್ರ ಬೇರೆ ಬೇರೆ.

ಸಾಹಿತ್ಯ-ಬದುಕು

ಇಂದು ನಾವೆಲ್ಲಾ ಸಾಹಿತ್ಯದ ಹೆಸರಿನಲ್ಲಿ ಒಂದುಗೂಡಿದ್ದೇವೆ, ಸಂಭ್ರಮಿಸುತ್ತಿದ್ದೇವೆ. ಸಾಹಿತ್ಯ ಎಂದರೇನು? ಅದು ನಮ್ಮ ಬದುಕಿಗೆ ನಿಜವಾಗಿಯೂ ಅವಶ್ಯಕವೇ? ನಾನು ಸಾಹಿತ್ಯ ಮತ್ತು ಕಲೆಯನ್ನು ಒಂದೇ ಎನ್ನುವಂತೆ ನನ್ನ ಮಾತುಗಳಲ್ಲಿ ಬಳಸುತ್ತೇನೆ. ಪ್ರಾಚೀನ ಮಾನವ ಸುಮಾರು ಮುವ್ವತ್ತು ನಲ್ವತ್ತು ಸಾವಿರ ವರ್ಷಗಳ ಹಿಂದೆ ಯಾವುದೇ ಲಿಖಿತ ಸಾಹಿತ್ಯ ರೂಪ ಇಲ್ಲದಿದ್ದಾಗ ಏಕೆ ಗುಹೆಯಲ್ಲಿ ಚಿತ್ರಗಳನ್ನು ರಚಿಸಿದ? ಸುಮ್ಮನೆ ಭೇಟೆಯಾಡಿಕೊಂಡು, ಹಣ್ಣು ಹಂಪಲು ಆಯ್ದುಕೊಂಡು, ಸಂತಾನಾಭಿವೃದ್ಧಿ ಮಾಡಿಕೊಂಡು ಇದ್ದರೆ ಸಾಕಾಗಿತ್ತಲ್ಲವೆ? ಅವನ ಬದುಕು ಆಚರಣೆಗಳೇ ಸಂಸ್ಕೃತಿಯ ರೂಪ ತಳೆದು ಅವುಗಳನ್ನು ತನ್ನ ಸಂಸ್ಕೃತಿಯ ಭಾಗವಾಗಿ ಚಿತ್ರಿಸಿದನೆ? ಆ ಚಿತ್ರಗಳಿಂದ ಅವನಿಗೆ ಹಸಿವು ನೀಗಿಸುವ ಆಹಾರ ದೊರಕದಿದ್ದರೂ ಅವುಗಳ ರಚನೆಗೆ ಏಕೆ ಸಮಯ, ಶ್ರಮ ವ್ಯಯಿಸುತ್ತಿದ್ದ? ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ವರ್ಷಗಳ ಹಿಂದೆ ಸುಮೇರಿಯಾದಲ್ಲಿ `ಗಿಲ್ಗಮೆಶ್' ಎಂಬ ಪುರಾಣ ಕತೆ ಏಕೆ ರಚಿತವಾಯಿತು? ನಮಗೆ ದೊರಕಿರುವ ಅತ್ಯಂತ ಪ್ರಾಚೀನ ಲಿಖಿತ ಪುರಾಣ ಅದಾಗಿದೆ. ಅದಕ್ಕೂ ಮೊದಲು ರಾಮಾಯಣ, ಮಹಾಭಾರತಗಳನ್ನೊಳಗೊಂಡAತೆ, ಗ್ರೀಕ್‌ನ ಹೋಮರ್ ಬರೆದ ಇಲಿಯಡ್, ಒಡೆಸ್ಸಿ ಮುಂತಾದ ಪುರಾಣಗಳು ಲಿಖಿತ ರೂಪದಲ್ಲಿ ದಾಖಲಾಗುವ ಮೊದಲೇ ಕತೆ, ಹಾಡುಗಳ ರೂಪದಲ್ಲಿ ಬಾಯಿಂದ ಬಾಯಿಗೆ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದುಹೋಗುತ್ತಿತ್ತು. ಈ ಕಲೆ, ಸಾಹಿತ್ಯ ಎಲ್ಲರಿಗೂ ಬದುಕು ನೀಡುವ, ಅನ್ನ ಆಹಾರ ನೀಡುವ ಸಾಧನಗಳಾಗುವುದಿಲ್ಲ. ಈಗಿನ ಬಹುಪಾಲು ಕನ್ನಡ ಸಾಹಿತಿಗಳಿಗೂ ಅಷ್ಟೆ ಅವು ಅನ್ನ ನೀಡುವ ಸಾಧನಗಳಾಗಿಲ್ಲ. ಆದರೆ ಅವರು ತಮ್ಮ ಬರಹವನ್ನು ಬಿಟ್ಟಿಲ್ಲ. ಹಾಗಾದರೆ ಅವುಗಳಲ್ಲಿ ನಮ್ಮ ಬದುಕಿಗೆ ಚಾಲನೆ ನೀಡಬಲ್ಲ, ಪ್ರೇರಣೆ ನೀಡಬಲ್ಲ, ಬದುಕಿನ ನಿಗೂಢಗಳನ್ನು, ಮಾನವ ಸಂಬAಧಗಳನ್ನು ಅರಿತುಕೊಳ್ಳಬಲ್ಲ, ಶಾಂತಿ ಸಹನೆ ಕಲಿಸಬಲ್ಲ ಎಂಥದೋ ಅವರ್ಣನೀಯ ಶಕ್ತಿ ಇದೆ ಎಂದಾಯಿತು. ಬಹುಶಃ ಅದೇ ಕಾರಣಕ್ಕಾಗಿ ಇಂದು ನಾವೆಲ್ಲ ಸಾಹಿತ್ಯ ಹಾಗೂ ತಾಯಿನುಡಿಯ ಹೆಸರಿನಲ್ಲಿ ಇಲ್ಲಿ ಸಂಭ್ರಮದಿAದ ಸೇರಿದ್ದೇವೆ.

ಸಾಹಿತ್ಯ - ನಾಗರಿಕತೆ

ಸಾಹಿತ್ಯ ಚರಿತ್ರಕಾರರು ಸಾಹಿತ್ಯ ಎಲ್ಲವನ್ನೂ ವಿವರಿಸಬಲ್ಲವು ಎನ್ನುತ್ತಾರೆ, ಆದರೆ ವಿಚಾರಗಳ ಪ್ರಸರಣೆಯ, ನೆನಪುಗಳನ್ನು ದಾಖಲಿಸುವ, ನಿರೂಪಣೆಗಳನ್ನು ರಚಿಸುವ, ಅಧಿಕಾರ ಚಲಾಯಿಸುವ ಮತ್ತು ಸಂಪತ್ತು ರಚಿಸುವ ಪ್ರಾಥಮಿಕ ಸಲಕರಣೆಗಳೆಂದು ಅವರು ಗುರುತಿಸುವುದಿಲ್ಲ. ಆದುದರಿಂದ ಯಾವುದೇ ಸಾಕ್ಷರ ಮಾನವ ಸಮಾಜವನ್ನು ನಾವು ಅಧ್ಯಯನ ನಡೆಸಿದಲ್ಲಿ, ನಾವು ಕೇಳಬೇಕಾದ ಪ್ರಶ್ನೆಗಳೆಂದರೆ ಅವರು ಎಂತೆAತಹ ಸಾಹಿತ್ಯ ಕೃತಿಗಳನ್ನು ರಚಿಸುತ್ತಿದ್ದಾರೆ, ಅವುಗಳನ್ನು ಎಲ್ಲಿ ವಿತರಿಸುತ್ತಿದ್ದಾರೆ, ಯಾವ್ಯಾವ ಗ್ರಂಥಾಲಯಗಳಲ್ಲಿ ಅವು ಇವೆ, ಅವುಗಳನ್ನು ಅವರು ಹೇಗೆ ಸೆನ್ಸಾರ್ ಮಾಡಿದ್ದಾರೆ ಅಥವಾ ಸೆನ್ಸಾರ್‌ನವರ ಕಣ್ತಪ್ಪಿಸಿದ್ದಾರೆ, ಎಲ್ಲಿ ಮತ್ತು ಹೇಗೆ ಅವುಗಳನ್ನು ಅನುವಾದ ಮಾಡಲಾಗಿವೆ ಹಾಗೂ ಅವುಗಳನ್ನು ಯಾರು ಓದುತ್ತಿದ್ದಾರೆ? ಎನ್ನುವುದು. ಪುಸ್ತಕಗಳನ್ನು ಹಲವು ದೃಷ್ಟಿಕೋನಗಳಲ್ಲಿ ಓದಬಹುದು, ಪುರಾಣಗಳ ಅರ್ಥೈಸಿಕೊಳ್ಳುವ ವಿವಿಧ ದೃಷ್ಟಿಕೋನಗಳಿಂದ ಚರಿತ್ರೆಯಲ್ಲಿ ಯುದ್ಧಗಳೇ ನಡೆದಿವೆ ಎಂಬುದು ನಮಗೆ ತಿಳಿದಿದೆ. ಬಹುಶಃ ಅದು ಈಗಲೂ, ಪ್ರಸ್ತುತ ಸಂದರ್ಭದಲ್ಲೂ ಮುಂದುವರಿದಿದೆ ಎನ್ನಬಹುದು.

ಇದಕ್ಕೆ ವಿರುದ್ಧವಾಗಿ ಹೇಳುವುದಾದರೆ ಸಾಹಿತ್ಯ ಕೃತಿಗಳು ಚರಿತ್ರೆಯಿಂದ ರೂಪುಗೊಳ್ಳುತ್ತವೆ: ಅಂದರೆ ಅವು ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿಗಳಿಂದ ರೂಪುಗೊಳ್ಳುತ್ತವೆ. ಅದಕ್ಕೆ ತದ್ವಿರುದ್ಧವಾಗಿ ಸಾಹಿತ್ಯ ಕೃತಿಯೂ ಚರಿತ್ರೆ ರೂಪಿಸಿರುವ ನಿದರ್ಶನಗಳಿವೆ. ವಿಮರ್ಶಕರು, ಪುಸ್ತಕ ಮಾರಾಟಗಾರರು ಹಾಗೂ ಶೈಕ್ಷಣ ಕ ಅಧಿಕಾರಿವರ್ಗ ಕೃತಿಯೊಂದನ್ನು ಅತ್ಯದ್ಭುತವಾದದ್ದೆಂದು ಘೋಷಿಸಬಲ್ಲರು ಅಥವಾ ಕಳಪೆಯೆಂದು ಮೂಲೆಗುಂಪು ಮಾಡಬಲ್ಲರು. ದುರಂತವೆAದರೆ ರಾಜಕೀಯ ಮತ್ತು ಪಟ್ಟಭದ್ರಹಿತಾಸಕ್ತಿಯ ಗುಂಪುಗಳು ಸಾಹಿತ್ಯದ ದಿಕ್ಕನ್ನೇ ಬದಲಿಸಿಬಿಡಬಲ್ಲವು. ಅದನ್ನು ಇಂದಿನ ದಿನಗಳಲ್ಲಿ ಮತ-ಧರ್ಮಗಳ, ರಾಷ್ಟಿçÃಯತೆಯ ಹೆಸರಿನಲ್ಲಿ ನಡೆಸುತ್ತಿರುವುದನ್ನು ನಾವೆಲ್ಲ ಕಣ್ಣಾರೆ ಕಾಣುತ್ತಿದ್ದೇವೆ. ಪುರಾಣಗಳು ಚರಿತ್ರೆಗಳಾಗುತ್ತಿವೆ ಹಾಗೂ ಚರಿತ್ರೆಗಳು ಕಾಲ್ಪನಿಕ ಕಥನ (ಫಿಕ್ಷನ್)ಗಳಾಗುತ್ತಿವೆ. 

ಸಾಹಿತ್ಯ ಏಕೆ ಬೇಕು?

೨೦೧೬ರ ಸೆಪ್ಟೆಂಬರ್‌ನಲ್ಲಿ ಅಮೆರಿಕಾದ ವರ್ಜೀನಿಯಾದಲ್ಲಿ ಹಿಂದೆ ಕರಿಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಅವಧಿಯಲ್ಲಿ ಕರಿಯರ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಶಿಕ್ಷಣ ನೀಡುತ್ತಿದ್ದ ಒಂದು ಪುಟ್ಟ ಶಾಲೆಯ ಕಟ್ಟಡದ ಮೇಲೆ ಯಾರೋ ಜನಾಂಗ ನಿಂದನೆಯ ವಾಕ್ಯಗಳನ್ನು, ಸ್ವಸ್ತಿಕ ಸಂಕೇತವನ್ನು, ಅಶ್ಲೀಲ ಚಿತ್ರಗಳನ್ನು ಗೀಚಿದ್ದರು. ವಿಷಯ ನ್ಯಾಯಾಲಯ ತಲುಪಿದಾಗ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಈ ಕೃತ್ಯ ಜನಾಂಗ ನಿಂದನೆಯಲ್ಲ, ಬಿಳಿಯರ ಹಿರಿತನ, ದ್ವೇಷವನ್ನು ಸಾಧಿಸುವ ಕ್ಲು ಕ್ಲುಕ್ಸ್ ಪಂಗಡಕ್ಕೆ ಸೇರಿದಂತಹವರ ಕೃತ್ಯವಲ್ಲವೆಂದು ಊಹಿಸಿದರು. ಈ ಕೃತ್ಯ ಯಾರೋ ಹದಿಹರೆಯದ ವಿದ್ಯಾರ್ಥಿಗಳೇ ಮಾಡಿರಬೇಕೆಂಬ ಆಕೆಯ ಊಹೆ ನಿಜವಾಗಿ ೧೬ರಿಂದ ೧೭ರ ವಯಸ್ಸಿನ ಐದು ಮಕ್ಕಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅವರು ಶಾಲೆಯ ಮೇಲಿನ ಯಾವುದೋ ಸಿಟ್ಟನ್ನು ಈ ರೀತಿ ವ್ಯಕ್ತಪಡಿಸಿದ್ದರು. ಆದರೂ ಅವರಿಗೆ ಜಗತ್ತಿನಲ್ಲಿ ಕರಿಯರು ಅನುಭವಿಸಿರುವ, ದೇಶದ ಇತರೆಡೆ ಉಚ್ಛ – ನೀಚ ಜನಾಂಗಗಳು ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ಅರಿವಿಲ್ಲ ಎಂಬುದು ನ್ಯಾಯಾಧೀಶರಿಗೆ ತಿಳಿಯಿತು. ಅವರದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಅವರನ್ನು ಸೆರೆಮನೆಗೋ ಅಥವಾ ಅವರ ನಡತೆ ಸರಿಪಡಿಸುವ ‘ಪುನರ್ವಸತಿ’ ಗೃಹಗಳಿಗೆ ಕಳುಹಿಸಬಹುದಾಗಿತ್ತು. 

ಆದರೆ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಒಬ್ಬ ವ್ಯಕ್ತಿಯ ನಡತೆ, ಅರಿವು, ಭಾವುಕತೆ, ಪ್ರೀತಿ, ಪ್ರೇಮಗಳ ತಿಳುವಳಿಕೆ ನೀಡುವಲ್ಲಿ ಪುಸ್ತಕಗಳ ಹಾಗೂ ಓದಿನ ಪಾತ್ರ ತಿಳಿದಿದ್ದುದರಿಂದ ಆ ಯುವಕರಿಗೆ ಒಂದು ವಿಶಿಷ್ಟ ಶಿಕ್ಷೆ ನೀಡಿದರು. ಬಹುಶಃ ಆ ರೀತಿಯ ಶಿಕ್ಷೆ ಜಗತ್ತಿನಲ್ಲಿ ಮೊಟ್ಟ ಮೊದಲನೆಯದೂ ಇರಬಹುದು. ಆ ಯುವಕರಿಗೆ ೩೫ ಆಯ್ದ ಪುಸ್ತಕಗಳನ್ನು ಓದುವ ಶಿಕ್ಷೆ ನೀಡಲಾಯಿತು. ಅವರು ತಿಂಗಳೊAದಕ್ಕೆ ಆ ಪಟ್ಟಿಯಿಂದ ಬೇಕಾದ ಒಂದು ಪುಸ್ತಕ ಆಯ್ದುಕೊಂಡು ಓದಿ, ಆ ಪುಸ್ತಕದ ಬಗೆಗೆ ಒಂದು ಪ್ರಬಂಧವನ್ನು ಬರೆಯಬೇಕು. ಹಾಗಾಗಿ ಆ ಶಿಕ್ಷೆ ೩೫ ತಿಂಗಳ ಕಾಲದ್ದು. ೩೫ ತಿಂಗಳ ನಂತರ ಬಿ.ಬಿ.ಸಿ. ಆ ಯುವಕರನ್ನು ಭೇಟಿಯಾಗಿ ಅವರಲ್ಲಿ ಏನಾದರೂ ಬದಲಾವಣೆ ಆಗಿದೆಯೇನೋ ಪರೀಕ್ಷಿಸಿತು. ಅವರಲ್ಲಿ ಮಹತ್ತರ ಬದಲಾವಣೆ ಕಂಡುಬAದಿತು. ಅವರಲ್ಲಿ ಒಬ್ಬನ ಪ್ರಬಂಧದ ಸಾರಾಂಶ ಹೀಗಿದೆ:

`ಈ ‘ಶಿಕ್ಷೆ’ಯಿಂದ ನಾನು ಮನುಷ್ಯರ ಮೇಲೆ ಓದು ಹೇಗೆ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಬಹಳಷ್ಟು ಕಲಿತೆ – ಮಾನವ ಚರಿತ್ರೆಯ ಹಲವಾರು ಆಳದ, ಕತ್ತಲ ಭಾಗಗಳ ಬಗೆಗೆ ನನಗೆ ತಿಳಿದೇ ಇರಲಿಲ್ಲ. ಶಾಲೆಗಳಲ್ಲಿ ಚರಿತ್ರೆಯನ್ನು ಒಂದೆರಡು ಗಂಟೆ ಕಲಿತು ಮುಂದಿನ ಭಾಗಗಳಿಗೆ ಹೋಗುತ್ತಿದ್ದೆವು. ನಾವು ಆ ಪಾಠಗಳ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅಥವಾ ಬಹುಶಃ ಆ ಭಯಾನಕ ದುರಂತಗಳ ಬಗೆಗೆ ನಮಗೆ ತಿಳಿಯುವ ಆಸಕ್ತಿಯೂ ಇರಲಿಲ್ಲವೇನೋ.

`ನನಗೆ ಸ್ವಸ್ತಿಕ ಕೇವಲ ಒಂದು ಸಂಕೇತವಾಗಷ್ಟೇ ಕಂಡಿತ್ತು, ಅದರ ಹಿಂದಿನ ಅರ್ಥ ನನಗೆ ತಿಳಿದಿರಲಿಲ್ಲ. ನನ್ನ ಅನಿಸಿಕೆ ತಪ್ಪಾಗಿತ್ತು. ಅದರ ಅಡಿಯಲ್ಲಿ ಹಿಂಸೆಗೊಳಗಾದವರ ನೋವು ನನಗೆ ಈಗ ಅರಿವಾಗತೊಡಗಿತು- ಕುಟುಂಬಗಳನ್ನು, ಗೆಳೆಯರನ್ನು ಕಳೆದುಕೊಂಡವರ ನೋವು, ಅವರು ಅನುಭವಿಸಿದ ಮಾನಸಿಕ – ಭೌತಿಕ ಹಿಂಸೆಗಳು. ಈ ಜಗತ್ತಿನ ಜನರಲ್ಲಿ ಇಷ್ಟೊಂದು ಕ್ರೌರ್ಯ, ಅನ್ಯಾಯದ ಮನೋಭಾವ ಇರಲು ಸಾಧ್ಯವೆ ಎನ್ನಿಸಿತು. ಸ್ವಸ್ತಿಕ ದಬ್ಬಾಳಿಕೆಯನ್ನು ನೆನಪಿಸುತ್ತದೆ. ಸ್ವಸ್ತಿಕ ಬಿಳಿಯರ ಹಿಂಸೆ ಮತ್ತು ಅವರ ಜನಾಂಗವೇ ಇತರರಿಗಿಂತ ಉತ್ತಮವಾದುದು ಎಂಬುದರ ಸಂಕೇತವಾಗಿದೆ. ಆದರೆ ಜಗತ್ತು ಆ ರೀತಿ ಇಲ್ಲ.

`ಜಗತ್ತಿನ ಎಲ್ಲ ಜನರೂ ಸಮಾನರು, ಯಾರೂ ಮೇಲು ಕೀಳಿಲ್ಲ. ಈ ಪ್ರಬಂಧ ಬರೆಯುವಾಗ ನನಗೆ ಅತೀವ ಹಿಂಸೆಯಾಗುತ್ತಿದೆ, ಏಕೆಂದರೆ ನಾನು ಇತರರನ್ನು ಅದೇ ರೀತಿಯ ನಡವಳಿಕೆಯಿಂದ ನೋಯಿಸಿದ್ದೇನೆ. ಜನರು ಯಾವುದೇ ಜನಾಂಗದವರಾಗಲಿ, ಧರ್ಮದವರಾಗಲೀ, ಲೈಂಗಿಕ ಮನೋಭಾವ ಹೊಂದಿದವರಾಗಲೀ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನಾನು ಇನ್ನು ಮುಂದೆ ಅದನ್ನೇ ಪರಿಪಾಲಿಸುತ್ತೇನೆ, ಇಷ್ಟೊಂದು ದಡ್ಡನಾಗಿ ಮುಂದೆAದೂ ಇರುವುದಿಲ್ಲ.'

ಇದನ್ನು ನ್ಯಾಯಾಲಯದಲ್ಲಿ ಓದಿದ ನ್ಯಾಯಾಧೀಶೆ ಆ ಯುವಕರಲ್ಲಿ ಆಗಿರುವ ಪರಿವರ್ತನೆ ಕಂಡು ಕಣ ್ಣÃರು ಹಾಕಿ. ‘ನನ್ನ ಶಿಕ್ಷೆ ಅದರ ಉದ್ದೇಶ ಸಾಧಿಸಿದೆ’ ಎಂದರAತೆ.

***

ಅAದರೆ ಸಾಹಿತ್ಯ ಓದುವುದರಿಂದ ನಾವು ಜಗತ್ತನ್ನು ಬದಲಿಸಬಹುದೆ? ಅಥವಾ ಜಗತ್ತು ಒಂದು ಉತ್ತಮ ಸ್ಥಳವಾಗುತ್ತದೆಯೆ? ಸಾಹಿತ್ಯ ಓದುವುದರಿಂದ ನಾವು ಜಗತ್ತಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುವುದು ಉತ್ಪೆçÃಕ್ಷೆಯ ಮಾತಾದರೂ ಅದು ಒಂದು ಉತ್ತಮ ಸಹಾನುಭೂತಿಯ, ಪರಸ್ಪರ ಅಕ್ಕರೆಯ, ಅನುಕಂಪದ ತಾಣವಾಗುವುದಂತೂ ನಿಜ ಎನ್ನುತ್ತಾರೆ ವಿಜ್ಞಾನಿಗಳು. ಕಾಲ್ಪನಿಕ ಕಥನ ಅಥವಾ ನಾವು ಫಿಕ್ಷನ್ ಎಂದು ಕರೆಯುವ ಸಾಹಿತ್ಯ - ಕತೆ, ಕಾದಂಬರಿಗಳನ್ನು ಓದುವ ಜನ ಹೆಚ್ಚು ಸಹಾನುಭೂತಿ ತೋರಿಸುತ್ತಾರೆ ಹಾಗೂ ಇತರರ ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದನ್ನು ಸಂಶೋಧನೆ ತೋರಿಸಿಕೊಟ್ಟಿದೆ. ಏಕೆಂದರೆ ಕಾಲ್ಪನಿಕ ಕಥನ ಸಾಹಿತ್ಯ ಎಂದರೆ ಮೂಲಭೂತವಾಗಿ ಮಾನವ ಅನುಭವಗಳ ಆವಿಷ್ಕಾರ ಹಾಗೂ ಅದರ ಅಭಿವ್ಯಕ್ತಿ. ಕತೆ, ಕಾದಂಬರಿಗಳನ್ನು ಓದುವುದರಿಂದ ನಾವು ಇತರರನ್ನು ಅರ್ಥಮಾಡಿಕೊಳ್ಳುವ ಹಾಗೂ ಅವರ ಮನದಲ್ಲಿ ಏನಿದೆಯೆಂದು ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಈ ಸಹಾನುಭೂತಿ ಅನ್ನುವುದು ಮನುಷ್ಯರಲ್ಲಿ ಅಂತರ್ಗತವಾಗಿರುತ್ತದೆ ಹಾಗೂ ಇದು ಮಕ್ಕಳಲ್ಲೂ ಇರುತ್ತದೆ. ಆದರೆ ಕೆಲವರು ಹೆಚ್ಚು ಸಹಾನುಭೂತಿಗಳಾಗಿರುತ್ತಾರೆ ಹಾಗೂ ಸಹಜವಾಗಿ ವಯಸ್ಸಾದಂತೆ ಇದು ಹೆಚ್ಚಾಗುತ್ತಾ ಹೋಗುತ್ತದೆ. ಸಂಶೋಧನೆಗಳು ತೋರಿಸಿರುವಂತೆ ಈ ಸಹಾನುಭೂತಿಯನ್ನು ರೂಢಿಸಿಕೊಳ್ಳಬಹುದು ಹಾಗೂ ವೃದ್ಧಿಸಿಕೊಳ್ಳಲೂಬಹುದು. ಈ ರೀತಿ ರೂಢಿಸಿಕೊಳ್ಳುವ ಹಲವಾರು ವಿಧಾನಗಳಿದ್ದು ಅವುಗಳಲ್ಲಿ ಕತೆ-ಕಾದಂಬರಿಗಳನ್ನು ಓದುವುದೂ ಸಹ ಒಂದು.

ಈ ಕಾಲ್ಪನಿಕ ಕಥನ ಸಾಹಿತ್ಯವು ಓದುಗರನ್ನು ಮತ್ತೊಂದು ಪಾತ್ರದ ಮನಸ್ಸಿಗೆ ವರ್ಗಾಯಿಸುವ ಸಾಮರ್ಥ್ಯ ಹೊಂದಿದ್ದು ಓದುಗರು ಆ ಪಾತ್ರದ ಅನುಭವಗಳನ್ನು ಅನುಭವಿಸಬಲ್ಲರು, ಆ ಪಾತ್ರದ - ಆ ಪಾತ್ರ ಯಾವುದೇ ಲಿಂಗವಾಗಿರಲಿ, ಜನಾಂಗವಾಗಿರಲಿ, ಸಂಸ್ಕೃತಿಗೆ ಸೇರಿರಲಿ, ಯಾವುದೇ ವೃತ್ತಿ ಅಥವಾ ವಯಸ್ಸಿನದಾಗಿರಲಿ - ಓದುಗರು ಆ ಪಾತ್ರದ ದೃಷ್ಟಿಯ ಮೂಲಕ ಅದರ ಬದುಕಿನ ಸುಖ ದುಃಖಗಳನ್ನು ಅನುಭವಿಸಬಲ್ಲರು ಹಾಗೂ ಜಗತ್ತನ್ನು ಕಾಣಬಲ್ಲರು. ಒಂದು ಸಾಹಿತ್ಯ ಕೃತಿಯಲ್ಲಿನ ಪುಟಗಳ ಅಕ್ಷರಗಳು ಯಾರಾದರೂ ಒಂದು ಮಗು ಕಳೆದುಕೊಂಡಿರುವ ನೋವನ್ನು, ಯುದ್ಧದಿಂದ ಉಂಟಾದ ಸಾವು ನೋವನ್ನು, ಬಡತನದ ಹಸಿವನ್ನು, ಪ್ರೇಮದ ಉತ್ಕಟತೆಯನ್ನು ಸ್ವತಃ ಓದುಗರೇ ಅನುಭವಿಸುವಂತೆ ಮಾಡಬಲ್ಲವು. ಹಾಗಾಗಿ ಕಾಲ್ಪನಿಕ ಕಥನ ಸಾಹಿತ್ಯ ನಮ್ಮ ಸಹಾನುಭೂತಿ ಕೌಶಲ್ಯಗಳ ಅಭ್ಯಾಸದ ಆಟದ ಮೈದಾನವಾಗುತ್ತದೆ.

ಆದರೆ ಇಲ್ಲಿ ಒಂದು ಎಚ್ಚರದ ಮಾತನ್ನು ಹೇಳಲೇಬೇಕು... ನಾವು ಓದುವ ಎಲ್ಲ ಕಾಲ್ಪನಿಕ ಕಥನ ಸಾಹಿತ್ಯವೂ ನಮ್ಮಲ್ಲಿ ಸಹಾನುಭೂತಿ ರೂಢಿಗೆ ಸಹಾಯಕವಾಗುತ್ತದೆಯೆ? ನಾವು ಓದುವ ಸಾಹಿತ್ಯದಲ್ಲಿನ ಅಂಶಗಳು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುವ, ನಮ್ಮ ನಂಬಿಕೆಗಳನ್ನು ಬದಲಿಸುವ ಸಾಮರ್ಥ್ಯ ಹೊಂದಿರುತ್ತವೆ. ಹಾಗಾಗಿ ನಾವು ಏನು ಓದುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಈ ಸಹಾನುಭೂತಿ, ಅನುಕಂಪ, ವಾತ್ಸಲ್ಯಗಳೇ ಸಮಾಜವನ್ನು ಒಂದುಗೂಡಿಸಿರುವುದು. ಅದಿಲ್ಲದಿದ್ದಲ್ಲಿ ಮಾನವ ಸಮಾಜ ಈ ಹಂತದವರೆಗೂ ವಿಕಾಸಗೊಳ್ಳುತ್ತಿರಲಿಲ್ಲ. ನಮ್ಮ ಪೂರ್ವಜರು ತಾವು ಬದುಕುಳಿಯಬೇಕಾಗಿದ್ದಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕಾಗಿತ್ತು, ಕಾಯಿಲೆ ಬಿದ್ದವರ ಆರೈಕೆ ಮಾಡಬೇಕಾಗಿತ್ತು ಹಾಗೂ ಕಾಡುಪ್ರಾಣ ಗಳಿಂದ ರಕ್ಷಿಸಿಕೊಳ್ಳಬೇಕಾಗಿತ್ತು. ಸಮುದಾಯಗಳ ನಡುವಿನ ಅವರ ಪರಸ್ಪರ ಸಹಾಯದ ಪ್ರವೃತ್ತಿಯೇ ನಾಗರಿಕತೆಯ ಮೊದಲ ಹಂತವಾಗಿದೆ. ನಮ್ಮ ನಾಗರಿಕತೆ ಮುಂದುವರಿಯಬೇಕಾದಲ್ಲಿ ಈ ಸಹಾನುಭೂತಿಯ ಮುಂದುವರಿಕೆ ಅತ್ಯಂತ ಅವಶ್ಯಕವಾಗಿದೆ. ಆದರೆ ವಿಜ್ಞಾನಿಗಳು ಹೇಳುವಂತೆ ನಮ್ಮ ಈಗಿನ ದಿನಗಳಲ್ಲಿ ಸಹಾನುಭೂತಿ ಕಣ್ಮರೆಯಾಗುತ್ತಿದೆ. ೧೯೭೦ರಿಂದ ೨೦೦೦ದ ಇಸವಿಯವರೆಗೆ ನಡೆಸಿದ ಅಧ್ಯಯನದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ಅನುಕಂಪ ಶೇಕಡಾ ೪೮ರಷ್ಟು ಕಡಿಮೆಯಾಗಿರುವುದು ಕಂಡುಬAದಿದೆ. ಕೌಟುಂಬಿಕ ಬದುಕಿನ ತಲೆಮಾರುಗಳ ಅಂತರ, ವೈಯಕ್ತಿಕ ಸಾಧನೆಗಳ ಕುರಿತು ಕೇಂದ್ರೀಕರಣ, ಸ್ವ-ಕೇಂದ್ರೀಕರಣದ ಅಹಂಗಳ ಜೊತೆಗೆ ಅತಿ ಹೆಚ್ಚಿನ ಸಾಮಾಜಿಕ ಮಾಧ್ಯಮಗಳ ಮೇಲಿನ ಅವಲಂಬತೆಯಿAದಾಗಿ ಅರ್ಥಪೂರ್ಣ ವೈಯಕ್ತಿಕ ಸಂಬAಧಗಳು ಕಡಿಮೆಯಾಗಿರುವುದರಿಂದ ಈ ಸಹಾನುಭೂತಿ ಕಡಿಮೆಯಾಗಿವೆ ಎನ್ನುತ್ತವೆ ಅಧ್ಯಯನಗಳು. ಇವೆಲ್ಲದಕ್ಕೂ ಕಾಲ್ಪನಿಕ ಕಥನ ಸಾಹಿತ್ಯ ಓದುವುದೇ ಪರಿಹಾರವಲ್ಲದಿದ್ದರೂ ನಾವು ಇತರರನ್ನು ಅರಿತುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

***

ಕಲೆ - ಸಾಹಿತ್ಯ ಹಾಗೂ ಡಾರ್ವಿನ್ನನ ವಿಕಾಸವಾದ

ಕಲೆ ಮತ್ತು ಸಾಹಿತ್ಯ ನಾಗರಿಕ ಸಮಾಜದ ಉತ್ತುಂಗದ ಸಂಕೇತವೇ? ಕಲೆ ಮತ್ತು ಸಾಹಿತ್ಯ ಸಂಸ್ಕೃತಿಯ ಭಾಗವಾಗಿ ಮಾನವ ವಿಕಾಸದ ಹಾದಿಯಲ್ಲಿ ಮಾನವನನ್ನು ಇತರ ಜೀವಿಗಳಿಗಿಂತ ವಿಶಿಷ್ಟ ಜೀವಿ ಎನ್ನುವಂತೆ ಮಾಡಿವೆಯೇ? ಇದನ್ನು ವಿಜ್ಞಾನದ ದೃಷ್ಟಿಕೋನದ ಮೂಲಕ, ವಿಶೇಷವಾಗಿ ಡಾರ್ವಿನ್ನನ ಜೀವ ವಿಕಾಸವಾದದ ಮೂಲಕ ನೋಡುವುದರಿಂದ ಮಾನವ ಸಂಸ್ಕೃತಿ ಹಾಗೂ ಭಾಷೆಯ ವಿಕಾಸ ಮತ್ತು ಅಭಿವೃದ್ಧಿಯ ಬಗೆಗಿನ ವಿಶಿಷ್ಟ ಒಳನೋಟವನ್ನು ಕಾಣಬಹುದು. ಡಾರ್ವಿನ್ನನ ವಿಕಾಸವಾದದ ಪ್ರಕಾರ ಜೀವಿ ಪ್ರಭೇದಗಳು ಬದುಕುಳಿಯಲು ಪ್ರಾಕೃತಿಕ ಆಯ್ಕೆಯ ಮೂಲಕ, ತಮ್ಮ ಪರಿಸರಕ್ಕೆ ಹೊಂದಿಕೊAಡು ಕಾಲಕ್ರಮೇಣ ಬದಲಾಗುತ್ತವೆ. ಅದೇ ಪ್ರಕ್ರಿಯೆಯನ್ನು ಸಾಹಿತ್ಯದ ಅಧ್ಯಯನಕ್ಕೂ ಅನ್ವಯಿಸಬಹುದು - ಅಂದರೆ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳು ತಮ್ಮ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಸಂದರ್ಭಗಳಿAದ ರೂಪಿಸಲ್ಪಡುತ್ತಾರೆ ಹಾಗೂ ತಮ್ಮ ಓದುಗರ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಅವು ವಿಕಾಸ ಹೊಂದುತ್ತವೆ.

ಕಾದAಬರಿಯ ವಿಕಾಸ ಇದಕ್ಕೆ ಉದಾಹರಣೆ. ಕಾದಂಬರಿಯು ಹದಿನೆಂಟನೇ ಶತಮಾನದಲ್ಲಿ ಕ್ಷಿಪ್ರವಾಗಿ ಬದಲಾಗುತ್ತಿರುವ ಸಮಾಜದ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡಿತು. ಸಮಾಜ ವಿಕಾಸಗೊಂಡAತೆ ಕಾದಂಬರಿ ಸಹ ಮಾನವ ಅನುಭವದ ಹೊಸ ಆಯಾಮಗಳನ್ನು ಪ್ರತಿಫಲಿಸುವಂತೆ ಹೊಂದಾಣ ಕೆ ಮಾಡಿಕೊಂಡಿತು. ಇದನ್ನು ವಿವಿಧ ಸಾಹಿತ್ಯ ಪ್ರಕಾರಗಳಾದಂತಹ ಪ್ರೇಮ ಕಾದಂಬರಿಗಳು, ಪತ್ತೇದಾರಿ ಕಾದಂಬರಿಗಳು, ವೈಜ್ಞಾನಿಕ ಕಾಲ್ಪನಿಕ ಕಥನ ಸಾಹಿತ್ಯದಂತಹ ಪ್ರಕಾರಗಳಾಗಿ ಬದಲಾಗುತ್ತಿರುವ ಸಾಂಸ್ಕೃತಿಕ ಮತ್ತು ತಂತ್ರಜ್ಞಾನದ ಸಂದರ್ಭಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡಿತು. ಇದನ್ನು ನಾವು ಕನ್ನಡ ಸಾಹಿತ್ಯದಲ್ಲಿ ಸ್ವಾತಂತ್ರö್ಯಪೂರ್ವದ ನವೋದಯ, ನಂತರದ ನವ್ಯ ಹಾಗೂ ತದನಂತರದ ದಲಿತ- ಬಂಡಾಯ ಸಾಹಿತ್ಯಗಳು ಆಯಾ ಕಾಲಘಟ್ಟದ ಸಾಂಸ್ಕೃತಿಕ, ಸಾಮಾಜಿಕ ಸಂದರ್ಭಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡಿರುವುದನ್ನು ಕಾಣಬಹುದು. ಈ ರೂಪಾಂತರ ಪ್ರಕ್ರಿಯೆ ಜೀವ ವಿಕಾಸದ ಹಾಗೆ ನಿರಂತರವಾದುದು ಹಾಗೂ ಈಗಲೂ ನಡೆಯುತ್ತಲೇ ಇದೆ. 

ಮಾನವ ಸಂಸ್ಕೃತಿಯಲ್ಲಿ ಭಾಷೆಯ ಪಾತ್ರವನ್ನು ಪರಿಶೀಲಿಸುವುದರ ಮೂಲಕ ನಡೆಸುವ ಸಾಹಿತ್ಯ ಅಧ್ಯಯನ ಡಾರ್ವಿನ್ನನ ವಿಕಾಸವಾದವನ್ನು ಅನ್ವಯಿಸುವ ಮತ್ತೊಂದು ವಿಧಾನವೆನ್ನುತ್ತಾರೆ ವಿಜ್ಞಾನಿಗಳು. ಡಾರ್ವಿನ್ನನ ಪ್ರಕಾರ ಮನುಷ್ಯರಲ್ಲಿ ಸಂವಹನ ಮತ್ತು ಅಭಿವ್ಯಕ್ತಿಗೆ ಭಾಷೆ ವಿಕಾಸಗೊಂಡಿತು ಹಾಗೂ ಅದರ ಮೂಲಕ ಸಂಕೀರ್ಣ ವಿಚಾರಗಳನ್ನು ಹಾಗೂ ಭಾವನೆಗಳನ್ನು ಸಂವಹಿಸಲು ಸಾಧ್ಯವಾಯಿತು. ಅದೇ ಪ್ರಕ್ರಿಯೆಯನ್ನು ಸಾಹಿತ್ಯದ ವಿಕಾಸದಲ್ಲೂ ಕಾಣಬಹುದು - ಬರಹಗಾರರು ಭಾಷೆಯನ್ನು ಮಾನವ ಅನುಭವಗಳನ್ನು ಆವಿಷ್ಕರಿಸಲು ಬಳಸಿ ಅದರ ಮೂಲಕ ಅವರಲ್ಲಿ ರೂಪುಗೊಳ್ಳುವ ಜಗತ್ತಿನ ಕುರಿತಾದ ಅವರ ಪರಿಕಲ್ಪನೆಯನ್ನು ಅಭಿವ್ಯಕ್ತಿಗೊಳಿಸುತ್ತಾರೆ.

ಇದರ ಜೊತೆಗೆ, ಡಾರ್ವಿನ್ನನ ವಿಕಾಸವಾದದ ಮೂಲಕ ಸಾಹಿತ್ಯ ವಿಕಾಸವನ್ನು ನೋಡುವುದು ಮಾನವ ಸಂಸ್ಕೃತಿಯ ಹಾಗೂ ಭಾಷೆಯ ವಿಕಾಸದ ಕುರಿತಾದ ವಿಶಿಷ್ಟ ಒಳನೋಟಗಳ ಕಾಣ್ಕೆ ಸಾಧ್ಯವಾಗುತ್ತದೆ. ಬದಲಾಗುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಸನ್ನಿವೇಶಗಳಿಗೆ ತಕ್ಕಂತೆ ಸಾಹಿತ್ಯವೂ ರೂಪಾಂತರಗೊಳ್ಳುವುದರ ಅಧ್ಯಯನದ ಮೂಲಕ ಮಾನವರ ನಡವಳಿಕೆ, ಸ್ವಭಾವ ಹಾಗೂ ನಂಬಿಕೆಯ ಮೌಲ್ಯಗಳು ರೂಪುಗೊಳ್ಳುವಲ್ಲಿ ಸಾಹಿತ್ಯದ ಪಾತ್ರದ ಕುರಿತು ಗಾಢ ಅರಿವು ಪಡೆಯಲು ಸಾಧ್ಯವಾಗುತ್ತದೆ. 

***

ಕನ್ನಡ ಸಾಹಿತ್ಯವು ವಿವಿಧ ಘಟ್ಟಗಳನ್ನು ದಾಟಿ ಬಂದಿದೆ. ಈ ರೂಪಾಂತರ ಪ್ರಕ್ರಿಯೆ ನಿರಂತರವಾದುದು ಹಾಗೂ ಅನಿವಾರ್ಯವಾದುದೂ ಹೌದು. 

೧೯೭೦ರ ದಶಕದಲ್ಲಿ ದೇವರಾಜು ಅರಸುರವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಕಂದಾಯ ಸಚಿವರಾಗಿದ್ದ ದಲಿತ ಬಿ.ಬಸವಲಿಂಗಪ್ಪನವರ `ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ' ಎಂಬ ಹೇಳಿಕೆ ವಿವಾದ ಉಂಟುಮಾಡಿ ಸಾಹಿತ್ಯದ ಕುರಿತಾದ ಈ ಹೇಳಿಕೆ ಹೇಗೆ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಹಾಗೂ ದಲಿತರನ್ನು ಹೇಗೆ ಹತ್ತಿಕ್ಕುವ ಪ್ರಯತ್ನಗಳು ನಡೆದುವೆಂಬುದು ನಮಗೆಲ್ಲಾ ತಿಳಿದೇ ಇದೆ. ಅದರ ಪರಿಣಾಮವಾಗಿಯೇ ೧೯೭೩ರ ಆಗಸ್ಟ್ನಲ್ಲಿ ಲಂಕೇಶ್, ತೇಜಸ್ವಿ, ರಾಮದಾಸ್, ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ, ಸಿದ್ಧಲಿಂಗಯ್ಯನವರ ಉಪಸ್ಥಿತಿಯಲ್ಲಿ ಜಾತಿವಿನಾಶ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ಬೂಸಾ ಹೇಳಿಕೆಯ ಕುರಿತಂತೆ ಕುವೆಂಪುರವರು ತಮ್ಮ `ಸಾಹಿತ್ಯ ಚರಿತ್ರಕಾರರಿಗೆ ಸಲಹೆಗಳು' ಲೇಖನದಲ್ಲಿ ೧೯೩೬ರಲ್ಲಿ ಭಾರತಕ್ಕೆ ಮಿಶನರಿಯಾಗಿ ಬಂದ ಈ.ಪಿ.ರೈಸ್‌ರವರು ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ ಅಧ್ಯಯನ ನಡೆಸಿ, `ಜಗತ್ತಿನ ಜ್ಞಾನ ಹಾಗೂ ಪ್ರೇರಣೆಗೆ ಕನ್ನಡ ಸಾಹಿತ್ಯದ ಕೊಡುಗೆ ಏನೇನೂ ಇಲ್ಲ. ಮಾನವನಿಗೆ ಆಸಕ್ತಿದಾಯಕವಾಗುವಂತಹ ಸ್ವಂತಿಕೆಯ ಹಾಗೂ ಅವಿನಾಶಿ ಅಂಶಗಳೇ ಇಲ್ಲ' ಎಂದು ಹೇಳಿದ್ದಾರೆ. ಬಸವಲಿಂಗಪ್ಪನವರ ಬೂಸಾ ಹೇಳಿಕೆಗೆ ಪ್ರತಿಭಟಿಸಿದ ಕನ್ನಡಿಗರು `.... ಈ ರೈಸ್ ಮಹಾಶಯ ಮಾಡಿದ ಈ ಟೀಕೆಗೆ ಯಾರೂ ಪ್ರತಿಭಟಿಸಲು ಚಕಾರವನ್ನೂ ಎತ್ತಲಿಲ್ಲ, ಯಾರೂ ಗಲಾಟೆ ಮಾಡಲೂ ಇಲ್ಲ ಆಗ. ಅಷ್ಟೇ ಅಲ್ಲ ಅದನ್ನ ಹಾಗೆಯೆ ಒಪ್ಪಿಕೊಂಡೂ ಬಿಟ್ಟಿದ್ದರು, ಮೌನ ಸಮ್ಮತಿಯಿಂದ' ಎಂದಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ ಮೊಟ್ಟಮೊದಲ ದಲಿತ-ಬಂಡಾಯ ಸಾಹಿತ್ಯ ಸಮ್ಮೇಳನ ನಡೆದು ನಾಲ್ಕು ದಶಕಗಳೇ ಆಗಿವೆ. ಈ ಸಾಹಿತ್ಯ ಕ್ರಾಂತಿಯಲ್ಲಿ ಕೋಲಾರ ಜಿಲ್ಲೆಯ ಕೊಡುಗೆ ಮಹತ್ತರವಾದುದು. ಪೂರ್ಣಚಂದ್ರ ತೇಜಸ್ವಿಯವರ, `ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. ಬದಲಾಗುತ್ತಿರುವ ಪರಿಸರದ ಹೊಸ ಜವಾಬ್ದಾರಿಗಳನ್ನು ಅದು ಹೊರಲಾರದುದೇಕೆಂದರೆ ಮೊದಲನೆಯದಾಗಿ ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಶೈಲಿ ತಂತ್ರಗಳು. ಕೇವಲ ಉಪಾಧ್ಯಾಯರೇ ಹೆಚ್ಚಾಗಿರುವ ಅದರ ಸಾಹಿತಿ ವರ್ಗ ಮತ್ತು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡ ಅದರ ಕ್ರಾಂತಿಕಾರತನ' ಎನ್ನುವ ಮಾತುಗಳು ಈ ಹೊಸ ಪರಂಪರೆಗೆ ಪೀಠಿಕೆಯಂತಿದೆ. 

ಇಡೀ ಕರ್ನಾಟಕದಲ್ಲಿಯೇ ದಲಿತ ಹೋರಾಟ ಮತ್ತು ಪ್ರತಿಭಟನೆಯ ಕೇಂದ್ರ ಕೋಲಾರವಾಗಿತ್ತು. ಅನುಸೂಯಮ್ಮ ಅತ್ಯಾಚಾರದ ವಿರುದ್ಧದ ಪ್ರತಿಭಟನೆಯಿಂದ ಪ್ರಾರಂಭವಾದ ಈ ಹೋರಾಟ ದಲಿತ ಸಾಹಿತ್ಯಕ್ಕೂ ನಾಂದಿಯಾಯಿತು. ಇದೇ ಸಮಯಗಳಲ್ಲಿಯೇ ಕೋಲಾರದಲ್ಲಿ ಸಿ.ಮುನಿಯಪ್ಪ, ಕೋಟಿಗಾನಹಳ್ಳಿ ರಾಮಯ್ಯ, ಎನ್.ಮುನಿಸ್ವಾಮಿ ಹಾಗೂ ಲಕ್ಷಿö್ಮÃಪತಿ ಕೋಲಾರ ಮತ್ತು ಇತರ ಅಸಂಖ್ಯಾತ ಗೆಳೆಯರು ಈ ಹೋರಾಟಗಳಲ್ಲಿ ತೊಡಗಿದ್ದರು ಮತ್ತು ಅದೇ ಸಮಯದಲ್ಲಿಯೇ `ಮರಸನಪಲ್ಲಿ ದಲಿತರ ಹೋರಾಟ'ದ ಕೃತಿ ಹಾಗೂ ಕೋಲಾರದಲ್ಲಿ ನಡೆದ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ `ಕೆಂಪು ಮಣ ್ಣನ ಒಕ್ಕಲು – ಕೋಲಾರ ಜಿಲ್ಲಾ ಪ್ರಾತಿನಿಧಿಕ ಕವನ ಸಂಕಲನ' ಹೊರತಂದಿದ್ದು ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡದವರು ಹೋರಾಟದ ಕಾವ್ಯಕ್ಕೆ ಧ್ವನಿ ನೀಡಿದ್ದು. 

ಬರಗೂರು ರಾಮಚಂದ್ರಪ್ಪನವರು ಹೇಳಿರುವಂತೆ ಆಗ ಕನ್ನಡ ಸಾಹಿತ್ಯ ಕ್ಷೇತ್ರವು ವಿವಿಧ ಸಾಮಾಜಿಕ ತಳಮಳಗಳನ್ನು ಒಳಗೊಳ್ಳುವ ಹಸಿವಿನಿಂದ ಕೂಡಿತ್ತು. ಇಲ್ಲದಿದ್ದರೆ ಅದು ಹೊಸ ಸಾಹಿತ್ಯ ಚಳುವಳಿಗೆ ಕಾರಣವಾಗುತ್ತಿರಲಿಲ್ಲ. ಬದಲಾಗಿ ಸಾಮಾಜಿಕ ಚಳವಳಿ ಮಾತ್ರ ಆಗುತ್ತಿತ್ತು. ನವ್ಯ ಸಾಹಿತ್ಯ ಸಂದರ್ಭದಲ್ಲಿ ಪ್ರಧಾನವಾಗಿದ್ದ ವೈಯಕ್ತಿಕತೆಯಿಂದ ಸಾಮಾಜಿಕತೆಯತ್ತ ಹೊರಳಿತು. ಈ ಸಂದರ್ಭದಲ್ಲಿ ದಲಿತ, ಬಂಡಾಯ ಮತ್ತು ಸಮುದಾಯ - ಪರಸ್ಪರ ಪೂರಕವಾಗಿ ಬೆಳೆದವು. ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯನ್ನು – ಅಂದರೆ ಪ್ರಜಾಸತ್ತಾತ್ಮಕ ಪರವಾದ ಪ್ರಜ್ಞೆಯನ್ನು ಬೆಸೆದವು. ದಲಿತ ಮತ್ತು ಬಂಡಾಯ ಸಾಹಿತ್ಯ ಚಳವಳಿಯು ತನಗಿಂತ ಹಿಂದಿನ ಜಗತ್ತಿನ ಇತರ ಎಲ್ಲ ಸಾಹಿತ್ಯ ಧಾರೆಗಳಿಂದಲೂ ಪ್ರಗತಿಪರ ಚಿಂತನೆಗಳನ್ನು ಪಡೆದುಕೊಂಡು ಬೆಳೆಯತೊಡಗಿತು, (ಉದಾಹರಣೆಗೆ, ಅಮೆರಿಕದ ಬ್ಲಾಕ್ ಪ್ಯಾಂಥರ್ಸ್, ಮಹಾರಾಷ್ಟçದ ದಲಿತ್ ಪ್ಯಾಂಥರ್ಸ್, ಆಂಧ್ರದ ವಿಪ್ಲವ ಸಾಹಿತ್ಯಂ ಮುಂತಾದವು); ಅಂತಹ ಚಿಂತನೆಗಳನ್ನು ಗೌರವಿಸುತ್ತಲೇ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾದ ಹೊಸ ತಾತ್ವಿಕತೆಯನ್ನು ಕಟ್ಟಿಕೊಂಡಿತು.

ಆ ಸಮಯದಲ್ಲಿ ಚರ್ಚೆಯ ಮುನ್ನೆಲೆಗೆ ಬಂದದ್ದು - ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿಯಿರಬೇಕೇ? ಎಂಬ ಪ್ರಶ್ನೆ. ಹಾಗೇ ನೋಡಿದರೆ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗಲೂ ಚರ್ಚೆಗೆ ಒಳಪಡಬೇಕಿದೆ. ಪಾಶ್ಚಿಮಾತ್ಯ ಸಾಹಿತ್ಯ ಸಂದರ್ಭದಲ್ಲಿ ಈ ಹಿಂದೆ ಇದರ ಬಗ್ಗೆ ಚರ್ಚೆ ಸಾಕಷ್ಟು ನಡೆದಿದ್ದು ಲೇಖಕನ ಉದ್ದೇಶಕ್ಕಿಂತ ಓದುಗನ ಗ್ರಹಿಕೆಯೇ ಮುಖ್ಯ ಎಂಬ ವಾದವಿದೆ. ಒಂದು ಸಾಹಿತ್ಯ ಕೃತಿಯ ಬಗ್ಗೆ ಚರ್ಚೆ ಮಾಡಬೇಕಾದಲ್ಲಿ ಅದರ ಲೇಖಕನೊಂದಿಗೆ ಅಲ್ಲ, ಬದಲಿಗೆ ಅದರ ಓದುಗರೊಂದಿಗೆ ಮಾಡಬೇಕು ಎನ್ನುತ್ತಾರೆ. ಸಾಹಿತಿಗೆ ಸಾಮಾಜಿಕ ಜವಾಬ್ದಾರಿಯಿರಬೇಕೆನ್ನುವುದು ಸೃಜನಶೀಲ ಸ್ವಾತಂತ್ರ‍್ಯಕ್ಕೆ ವಿರುದ್ಧವಾದುದೆ? ಸಾಹಿತಿಯು ಬದುಕಿಗೆ ಮಾತ್ರ ಬದ್ಧ ಎಂದು ಸಮರ್ಥನೆ ಕೊಡಲಾಯಿತು. ಆದರೆ ಈ ‘ಬದುಕು’ ಎನ್ನುವುದು ಇರುವುದು ಸಮಾಜದಲ್ಲಿ ಹಾಗೂ ಸಮಾಜದ ಭಾಗವೇ ಸಾಹಿತಿಗಳು ಆಗಿರುವುದರಿಂದ ಅವರ ಸಾಹಿತ್ಯವು ವೈಯಕ್ತಿಕ ಲೋಲುಪತೆಯಾಗದೆ ಸಾಮಾಜಿಕ ಜವಾಬ್ದಾರಿಯಿಂದ ಕೂಡಿರಬೇಕು. ಸಾಹಿತಿಗಳು ಜನರಿಗೆ ಜವಾಬ್ದಾರರಾಗಬೇಕು. ಆಗ ಸಾಮಾಜಿಕ ಬದುಕು ಮತ್ತು ಸಾಹಿತ್ಯದ ಸಂಬAಧ ಗಾಢವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ದೇಶದ ಹಾಗೂ ರಾಜ್ಯದ ರಾಜಕೀಯ ಕ್ಷೇತ್ರಗಳಲ್ಲಿ ತನ್ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಪಲ್ಲಟಗಳಾಗುತ್ತಿವೆ. ಈ ಪಲ್ಲಟಗಳು ಸಾಹಿತ್ಯ ಕ್ಷೇತ್ರದಲ್ಲಿನ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಎನ್ನುವುದನ್ನೆ ಪುನರ್ ವ್ಯಾಖ್ಯಾನಗೊಳಿಸಿ ಅದಕ್ಕೆ ರಾಷ್ಟಿçÃಯತೆಯ ಹೊದಿಕೆಯನ್ನು ಹೊದಿಸಲಾಗುತ್ತಿದೆ. ಹಾಗಾಗಿ ಸಾಹಿತ್ಯದ ಸೃಷ್ಟಿ ಹಾಗೂ ಪುನರ್ ಸೃಷ್ಟಿ ಈ ದಿಕ್ಕಿನಲ್ಲೇ ನಡೆಯುತ್ತಿದ್ದು ಅದನ್ನು ಸಾಹಿತ್ಯ, ರಂಗಭೂಮಿ ಹಾಗೂ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲೂ ನಾವು ಕಾಣತೊಡಗಿದ್ದೇವೆ. 

ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದೆ. ಇದಕ್ಕೆ ಆಧುನಿಕ ತಂತ್ರಜ್ಞಾನ ಹಾಗೂ ಸಾಹಿತ್ಯದಲ್ಲಿ ಯುವಜನರ ಆಸಕ್ತಿ ಮತ್ತು ಉತ್ಸಾಹಗಳೇ ಕಾರಣವಾಗಿವೆ. ಹಿಂದೆAದಿಗಿAತಲೂ ಇಂದು ಹೆಚ್ಚು ಹೆಚ್ಚು ಅನುವಾದಗಳನ್ನು ಸಹ ಕಾಣುತ್ತಿದ್ದೇವೆ. ಸಾಹಿತ್ಯಕ್ಕೆ ಯಾವುದೇ ಗಡಿಯ ಮಿತಿಗಳು ಇರುವುದಿಲ್ಲ. ಯಾವುದೇ ದೇಶದ ಸಾಹಿತ್ಯವಿರಲಿ ಅದು ಕನ್ನಡಕ್ಕೆ ಬಂದಲ್ಲಿ ಅದು ಕನ್ನಡದ್ದೇ ಸಾಹಿತ್ಯ. ಇಂದು ಚರಿತ್ರೆ ಹಾಗೂ ಸಂಸ್ಕೃತಿಯ ವ್ಯಾಖ್ಯಾನಗಳು ಸಹ ಬದಲಾಗುತ್ತಿವೆ. ಇರಲಿ, ಅದು ಈ ಸಮ್ಮೇಳನದ ಚರ್ಚೆಯ ವಿಷಯವಲ್ಲ.

ಕುವೆಂಪುರವರ ಅತ್ಯಂತ ಪ್ರಖ್ಯಾತ ಮಾತು, ನಾಡಿನ ಜನಸಾಮಾನ್ಯರಿಗೆ ಹೇಳಿರುವಂಥದು ಪ್ರಸ್ತುತ ಸಂದಿಗ್ಧ ಸಂದರ್ಭದಲ್ಲಿ ಬಹುಶಃ ಸಾಹಿತಿ, ಕಲಾವಿದರಿಗೆ ಹೆಚ್ಚು ಅರ್ಥಪೂರ್ಣವಾಗಿ ಅನ್ವಯಿಸುತ್ತದೇನೋ ಎನ್ನಿಸುತ್ತದೆ. ನಾವೆಲ್ಲರೂ ಅದನ್ನು ಮನದಾಳದಿಂದ ಅನುಸರಿಸಬೇಕಾಗಿದೆ:

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟ ಕೀಳಬನ್ನಿ

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸೋದರರೆ ಬೇಗ ಬನ್ನಿ 


ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕಹಿತಕೆ

ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ


ಈ ದಿನ ಮುಳಬಾಗಿಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕೇಂದ್ರ ಘಟಕ ಹಾಗೂ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ೨೦ನೇ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಆಯೋಜಕರಿಗೆ, ಮುಳಬಾಗಿಲು ಸೇರಿದಂತೆ ಜಿಲ್ಲೆಯ ಇತರ ಎಲ್ಲ ತಾಲ್ಲೂಕು ಘಟಕಗಳಿಗೆ ತಾವೆಲ್ಲಾ ಅತ್ಯಂತ ಉತ್ಸಾಹ, ಹುರುಪು ಹಾಗೂ ತಾಳ್ಮೆಯಿಂದ ಭಾಗವಹಿಸಿದ್ದು ನನ್ನ ಈ ಮಾತುಗಳನ್ನು ಆಲಿಸಿದ ತಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು.

ಸಿರಿಗನ್ನಡಂಗೆಲ್ಗೆ!