ಸೋಮವಾರ, ಫೆಬ್ರವರಿ 27, 2017

ಮತ್ತೆ ಹುಟ್ಟಿ ಬರಲಿದೆಯೆ ವೂಲಿ ಮ್ಯಾಮತ್?




 ಪ್ರತಿಯೊಂದು ಪ್ರಾಣಿಯೂ ತಾನು ಏನಾಗಿತ್ತು ಎಂಬುದರ ಕುರುಹು ಉಳಿಸಿಹೋಗುತ್ತದೆ; ಮಾನವ ಮಾತ್ರ ತಾನು ಏನು ರಚಿಸಿದ ಎಂಬುದರ ಕುರುಹು ಬಿಟ್ಟು ಹೋಗುತ್ತಾನೆ.
-ಜಾಕೋಬ್ ಬ್ರೊನೋವ್‍ಸ್ಕಿ

2007ರ ಮೇ ತಿಂಗಳ ಒಂದು ದಿನ ಮುಂಜಾನೆ ವಾಯವ್ಯ ಸೈಬೀರಿಯಾದ ಯಮಾಲ್ ಉಪಖಂಡದ ನೆನೆಟ್ಸ್ ಜನಾಂಗದ ಅಲೆಮಾರಿ ಹಿಮಸಾರಂಗ ಮೇಯಿಸುವ ಯುರಿ ಖುದಿ ಎನ್ನುವ ವ್ಯಕ್ತಿ ಯುರಿಬೆ ನದಿಯ ದಡದಲ್ಲಿ ನಿಂತು ತನ್ನ ಮೂವರು ಗಂಡು ಮಕ್ಕಳೊಂದಿಗೆ ಗಹನವಾಗಿ ತಾವು ಕಂಡಿದ್ದ ಪ್ರಾಣಿಯ ಶವದ ಬಗ್ಗೆ ಚರ್ಚಿಸುತ್ತಿದ್ದ. ಅವರು ಅಂತಹ ಪ್ರಾಣಿಯನ್ನು ಎಂದೂ ಕಂಡಿರಲಿಲ್ಲ ಆದರೆ ಅಲ್ಲಿನ ಜನ ಚಳಿಗಾಲದ ಕತ್ತಲ ರಾತ್ರಿಗಳಲ್ಲಿ ಆ ಪ್ರಾಣಿಗಳ ಕತೆಗಳನ್ನು ಹೇಳುವುದನ್ನು ಕೇಳಿದ್ದರು. ಭೂಮಿಯ ಕೆಳಗಿನ ಹೆಪ್ಪುಗಟ್ಟಿದ ಕತ್ತಲ ಸಾಮ್ರಾಜ್ಯದ ಪಿಶಾಚಿಗಳು ಈ ನೆನೆಟ್ಸ್‍ಗಳು ಹಿಮಸಾರಂಗಗಳನ್ನು ಹುಡುಕಾಡಿ ಮೇಯಿಸುವಂತೆ ಅಂತಹ ಪ್ರಾಣಿಗಳನ್ನು ಮೇಯಿಸುತ್ತಿದ್ದರೆಂದು ಆ ಕತೆಗಳು ಹೇಳುತ್ತಿದ್ದವು. ಆ ಪ್ರಾಣಿಗಳನ್ನು ಮಾಮೊಂಟ್‍ಗಳೆಂದು ಕರೆಯುತ್ತಿದ್ದರು. ಖುದಿ ಆ ಮಾಮೊಂಟ್‍ಗಳ ಜೇನಿನ ಬಣ್ಣದ, ಮರದ ದಪ್ಪ ರೆಂಬೆಯ ಗಾತ್ರದ ದಂತಗಳನ್ನು ಬೇಸಿಗೆಯಲ್ಲಿ ಹಿಮ ಕರಗುವ ಸಮಯಗಳಲ್ಲಿ ಕಂಡಿದ್ದ. ಆದರೆ ಅಂತಹ ಪ್ರಾಣಿಯನ್ನು ಇಡಿಯಾಗಿ ಇದಕ್ಕೆ ಮೊದಲೆಂದೂ ಕಂಡಿರಲಿಲ್ಲ. ಅವರು ಕಂಡಿದ್ದ ಶವ ಮಾಮೊಂಟ್‍ನ ಮರಿಯದಾಗಿತ್ತು. 

 

ಆಶ್ಚರ್ಯವೆಂದರೆ ಆ ಮರಿಯ ಶವ ಕೊಳೆತಿರಲಿಲ್ಲ ಹಾಗೂ ಆಗ ತಾನೇ ಮಲಗಿದ್ದು ಇನ್ನೇನು ಮೇಲಕ್ಕೆದುಬಿಡುತ್ತದೆ ಎನ್ನುವಂತಿತ್ತು. ಖುದಿಯ ಮನಸ್ಸಿನಲ್ಲಿ ಆತಂಕ ತುಂಬಿತ್ತು ಏಕೆಂದರೆ ಮಾಮೊಂಟ್‍ಗಳ ಶವ ಕಾಣುವುದೆಂದರೆ ಅಪಶಕುನದ ಸೂಚನೆ ಎನ್ನುವುದು ನೆನೆಟ್ಸ್‍ಗಳ ನಂಬಿಕೆಯಾಗಿತ್ತು. ಅವುಗಳ ಶವ ನೋಡುವ ವ್ಯಕ್ತಿಗೆ ರೋಗ ಬಂದು ಸಾಯುವುದು ಖಚಿತವೆನ್ನುವ ನಂಬಿಕೆಯೂ ಅವರಲ್ಲಿತ್ತು. ಅದಕ್ಕಾಗಿಯೇ ಆತ ಅದನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದ. ಆದರೆ ಅದು ಕಂಡಿರುವುದು ಒಂದು ಮುಖ್ಯವಾದ ವಿಷಯವೆಂಬುದು ಆತನಿಗೆ ತಿಳಿದಿತ್ತು ಹಾಗೂ ಆತ ಅದನ್ನು ಇತರರಿಗೆ ತಿಳಿಸಬೇಕೆಂದು ನಿರ್ಧರಿಸಿದ. ಹಾಗೆಯೇ ತಾನು ಅದನ್ನು ನೋಡಿರುವುದರ ಪಾಪದ ನಿವಾರಣೆಗೆ ಹಿಮಸಾರಂಗದ ಮರಿಯೊಂದನ್ನು ಬಲಿನೀಡಿ, ವೋಡ್ಕಾದ ಅಭಿಷೇಕ ಮಾಡಿ ಪಾಪ ಪರಿಹಾರಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ. 
                ಮೊದಲಿಗೆ ಯುರಿ ಖುದಿ ದಕ್ಷಿಣದಲ್ಲಿನ 150 ಮೈಲಿ ದೂರದಲ್ಲಿನ ಯಾರ್ ಸಾಲೆ ಎಂಬಲ್ಲಿದ್ದ ತನ್ನ ಹಳೆಯ ಗೆಳೆಯ ಕಿರಿಲ್ ಸೆರೊಟೆಟ್ಟೊ ಎಂಬಾತನನ್ನು ಭೇಟಿ ಮಾಡಲು ಹೊರಟ. ಆತನ ಗೆಳೆಯ ಸ್ವಲ್ಪ ಹೊರಜಗತ್ತನ್ನು ತಿಳಿದವನಾಗಿದ್ದ. ಆತನ ಕತೆಯನ್ನು ಕೇಳಿದ ಕಿರಿಲ್ ಕೂಡಲೇ ಅಲ್ಲಿನ ಸ್ಥಳೀಯ ಮ್ಯೂಸಿಯಂನ ನಿರ್ದೇಶಕರನ್ನು ಭೇಟಿ ಮಾಡಿದ. ಆತನಿಗೆ ಅದರ ಮಹತ್ವ ತಿಳಿದು ಕೂಡಲೇ ಹೆಲಿಕಾಪ್ಟರ್ ವ್ಯವಸ್ಥೆಗೊಳಿಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಖುದಿ ನೋಡಿದ್ದ ಯುರಿಬೆ ನದಿಯ ದಡಕ್ಕೆ ಪ್ರಯಾಣ ನಡೆಸಿದರು. ಆದರೆ ಖುದಿಗೆ ಆಘಾತವಾಗುವಂತೆ ಹಾಗೂ ಅವರ ದುರಾದೃಷ್ಟವೆಂಬಂತೆ ಆ ಮಾಮೊಂಟ್ ಪ್ರಾಣಿಯ ಮರಿಯ ಶವ ಅಲ್ಲಿಂದ ನಾಪತ್ತೆಯಾಗಿತ್ತು. ದಂತದ ವ್ಯಾಪಾರಿಗಳು ಆಗಾಗ ಅವರ ಹಳ್ಳಿಗಳಿಗೆ ಬರುವುದು ಖುದಿಗೆ ತಿಳಿದಿತ್ತು. ದಂತಕ್ಕೇ ದುಡ್ಡು ಕೊಡುವವರು ಇನ್ನು ಮಾಮೊಂಟ್‍ನ ಪ್ರಾಣಿಯ ಇಡೀ ದೇಹಕ್ಕೆ ಎಷ್ಟು ದೊಡ್ಡಬಹುದು! ಖುದಿಗೆ ತನ್ನದೆ ನೆಂಟನೊಬ್ಬನ ಮೇಲೆ ಸಂಶಯ ಬಂದಿತು. ಅಲ್ಲಿನ ಸ್ಥಳೀಯರೂ ಸಹ ಆ ನೆಂಟ ಆ ಕಡಲ ತಡಿಯ ದಡದಲ್ಲಿ ಓಡಾಡುತ್ತಿದ್ದುದನ್ನು ಹಾಗೂ ತನ್ನ ಹಿಮಸಾರಂಗದ ಹಿಮಗಾಡಿಯಲ್ಲಿ ಹತ್ತಿರದ ನೊವ್ವಿ ಪೋರ್ಟ್ ಪಟ್ಟಣಕ್ಕೆ ಹೋಗುತ್ತಿದ್ದುದನ್ನು ಕಂಡಿದ್ದರು.
                ಖುದಿ ಮತ್ತು ಸೆರೊಟೆಟ್ಟೊ ಕೂಡಲೇ ಸ್ನೋಮೊಬೈಲ್ ಮೇಲೆ ಆತುರಾತುರವಾಗಿ ಆ ಪಟ್ಟಣ ತಲುಪಿದರು. ಅಲ್ಲಿ ಆ ಮಾಮೊಂಟ್ ಪ್ರಾಣಿಯ ಶವವನ್ನು ಅಂಗಡಿಯೊಂದರಲ್ಲಿ ಗೋಡೆಗೆ ಒರಗಿಸಿ ನಿಲ್ಲಿಸಿದ್ದರು. ಅಂಗಡಿಯ ಯಜಮಾನ ಅದನ್ನು ಖುದಿಯ ನೆಂಟನೊಬ್ಬ ಎರಡು ಸ್ನೋಮೊಬೈಲ್ ಮತ್ತು ಇಡೀ ವರ್ಷದ ಆಹಾರದ ಸರಬರಾಜಿಗೆ ಅದನ್ನು ಮಾರಾಟಮಾಡಿ ಹೋಗಿದ್ದ.  ಅಷ್ಟೊತ್ತಿಗಾಗಲೇ ಬೀದಿನಾಯಿಗಳು ಆ ಶವದ ಬಾಲ ಮತ್ತು ಬಲಗಿವಿಯನ್ನು ಕಚ್ಚಿಹಾಕಿದ್ದವು. ಸ್ಥಳೀಯ ಪೋಲೀಸರ ಸಹಾಯದಿಂದ ಖುದಿ ಆ ಶವವನ್ನು ವಾಪಸ್ಸು ಪಡೆದು ಅದನ್ನು ಪ್ಯಾಕ್ ಮಾಡಿ ಆ ಪ್ರದೇಶದ ರಾಜಧಾನಿಯಾದ ಸಾಲೆಖರ್ಡ್‍ನಲ್ಲಿನ ಮ್ಯೂಸಿಯಂಗೆ ಹೆಲಿಕಾಪ್ಟರಿನಲ್ಲಿ ಸಾಗಿಸಿದರು. ಯುರಿ ಖುದಿಯಿಂದಾಗಿ ದೊರೆತ ಆ ಮಾಮೊಂಟ್‍ನ ಹೆಣ್ಣು ಮರಿಗೆ ಖುದಿಯ ಪತ್ನಿಯ ಲ್ಯೂಬಾ ಎನ್ನುವ ಹೆಸರನ್ನೇ ಇಟ್ಟರು. ಇಂದು ಲ್ಯೂಬಾ ಜಗತ್ವಿಖ್ಯಾತವಾಗಿದೆ.  ಅಂದಹಾಗೆ ಹಿಮದಲ್ಲಿ ಕೆಡದಂತೆ ಇದ್ದ ಆ ಲ್ಯೂಬಾದ ಶವ ಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು!
 
                ಮಾಮೋಂಟ್‍ಗಳು ಇಂದು ವೂಲಿ ಮ್ಯಾಮತ್‍ಗಳೆಂಬ (ಮ್ಯಾಮುತಸ್ ಪ್ರೈಮಿಜೀನಸ್) ಹೆಸರಿನಿಂದ ಕರೆಯಲ್ಪಡುತ್ತವೆ. ವೂಲಿ ಮ್ಯಾಮತ್‍ಗಳು ಈ ಭೂಮಿಯಿಂದ ನಶಿಸಿ ಹೋಗಿ ಸುಮಾರು ಹತ್ತು ಸಾವಿರ ವರ್ಷಗಳಾಗಿವೆ. ಅವು ಎತ್ತರದಲ್ಲಿ ಬಹುಪಾಲು ಏಷಿಯಾದ ಆನೆಯನ್ನು ಹೋಲುತ್ತಿದ್ದವು. ಅವು ಮ್ಯಾಮುತಸ್ ವರ್ಗಕ್ಕೆ ಸೇರಿದ ಪ್ರಾಣಿಗಳು ಹಾಗೂ ಅವುಗಳ ಪೂರ್ವಜರಾದ ಹಂದಿ ಅಥವಾ ಹಿಪ್ಪೊಪೊಟಾಮಸ್ ಗಾತ್ರದ `ಸೊಂಡಿಲ ಪ್ರಾಣಿಗಳು’ (Proboscideans) ಸುಮಾರು 3.5 ದಶಲಕ್ಷ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಹೊರಟು ಯುರೇಶಿಯಾದಲ್ಲೆಲ್ಲಾ ಹರಡಿಕೊಂಡವು. ಸುಮಾರು ನಾಲ್ಕು ಲಕ್ಷ ವರ್ಷಗಳಿಗೂ ಮೊದಲು ಮಧ್ಯ ಪ್ಲೀಸ್ಟೊಸೀನ್ ಅವಧಿಯಲ್ಲಿ ಆಗ್ನೇಯ ಸೈಬೀರಿಯಾದಲ್ಲಿ ಮೊಟ್ಟ ಮೊದಲಿಗೆ ವೂಲಿ ಮ್ಯಾಮತ್‍ಗಳು ಕಾಣಿಸಿಕೊಂಡವು. ಅವು ಹಿಮಯುಗದ ಪ್ರಾಣಿಗಳು. ಆಗ ಇಡೀ ಭೂಮಿ ಹಿಮದಿಂದಾವೃತವಾಗಿತ್ತು. ಆಗಿನ ಚಳಿಯನ್ನು ಎದುರಿಸಲು ಅವುಗಳ ಮೈಮೇಲೆಲ್ಲಾ ಎರಡು ಪದರ (3 ಅಡಿಯವರೆಗೂ ಉದ್ದವಿದ್ದ) ತುಪ್ಪುಳವಿದ್ದಿತು. ಅವು ಒಂದು ಇಂಚು ದಪ್ಪದ  ಚರ್ಮ ಹೊಂದಿದ್ದವು ಹಾಗೂ ಮೂರು ಇಂಚಿನ `ಕೊಬ್ಬಿನ ಕೋಟುಸಹ ಧರಿಸಿದ್ದವು. ಇವು ಏಷಿಯಾ, ಅಮೆರಿಕಾ ಮತ್ತು ಯೂರೋಪ್ ಖಂಡಗಳಲ್ಲಿ ವಾಸಿಸುತ್ತಿದ್ದವು. ಅವು ಚಳಿಯಲ್ಲಿ ತಮ್ಮ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕಾಗಿದ್ದುದರಿಂದ ಅವುಗಳ ಕಿವಿಗಳು ಇಗಿನ ಅನೆಗಳ ರೀತಿ ದೊಡ್ಡವಾಗಿರದೆ ಚಿಕ್ಕವಾಗಿದ್ದವು. ವೂಲಿ ಮ್ಯಾಮತ್‍ಗಳ ಅವಶೇಷಗಳು ಸೈಬೀರಿಯಾ ಅಲ್ಲದೆ ಬ್ರಿಟಿಷ್ ಕೊಲಂಬಿಯಾ, ಆಲ್ಬರ್ಟ್, ಸಸ್ಕಟಚೆವಾನ್, ಮನಿಟೋಬಾ, ದಕ್ಷಿಣ ಡಕೋಟಾ, ಮಿನ್ನೆಸೋಟಾ, ನ್ಯೂಯಾರ್ಕ್, ವರ್ಜಿನಿಯಾ ಮುಂತಾದ ಪ್ರದೇಶಗಳಲ್ಲಿ ದೊರೆತಿವೆ. ಅವುಗಳ ದೈತ್ಯಾಕಾರದ ದಂತಗಳು (ದೊರೆತಿರುವ ಅತಿ ಉದ್ದದ ದಂತ 16 ಅಡಿಗಳಿದ್ದು ಅದರ ತೂಕ 91 ಕಿ.ಗ್ರಾಂ) ಬಹುಶಃ ಹೊಡೆದಾಡಲು ಹಾಗೂ ಹಿಮದಡಿಯ ಆಹಾರವನ್ನು ಅಗೆದು ಅರಸಲು ಬಳಸಲಾಗುತ್ತಿದ್ದಿರಬಹುದು. ಸೈಬೀರಿಯಾ ಪ್ರದೇಶದಲ್ಲಿ ತಮ್ಮ ಜೀವಿತಾವಧಿಯಲ್ಲಿ ಸತ್ತ ಹಲವಾರು ಮ್ಯಾಮತ್‍ಗಳು ಹಿಮದಲ್ಲಿ ಹೆಪ್ಪುಗಟ್ಟಿ ಶೀತಲ ಭೂಸ್ತರದಲ್ಲಿ ಕೆಡದಂತೆ ಸಾವಿರಾರು ವರ್ಷಗಳು ಹಾಗೆಯೇ ಉಳಿದುಕೊಂಡುಬಂದಿವೆ.
                ಪಾತಾಳದಲ್ಲಿ ಈ ಮಾಮೊಂಟ್‍ಗಳ ಹಿಂಡುಹಿಂಡೇ ಇವೆ ಎಂಬ ನೆನೆಟ್‍ಗಳ ನಂಬಿಕೆ ಒಂದು ರೀತಿಯಲ್ಲಿ ನಿಜವಾದುದೂ ಹೌದು. ಸೈಬೀರಿಯಾದ ಶೀತಲ ಭೂಸ್ತರದಲ್ಲಿ ಸಾವಿರಾರು ವೂಲಿ ಮ್ಯಾಮತ್‍ಗಳ ಅವಶೇಷಗಳು ಹಾಗೂ ಸುಸ್ಥಿತಿಯಲ್ಲಿರುವ ದೇಹಗಳೂ ಇವೆ. ಪ್ರತಿ ಬೇಸಿಗೆಯಲ್ಲಿ ಮೇಲಿನ ಹಿಮ ಕರಗಿದಂತೆ, ಮೇಲಣ್ಣು ಕೊಚ್ಚಿಹೋದಂತೆ ದಂತಗಳು, ಮೂಳೆಗಳು ಹಾಗೂ ಲ್ಯೂಬಾದಂತಹ ದೇಹಗಳು ಮೇಲೆ ಕಾಣಿಸಿಕೊಳ್ಳುತ್ತವೆ.
                ಸುಮಾರು 14,000ದಿಂದ 10,000 ವರ್ಷಗಳ ಹಿಂದೆ ವೂಲಿ ಮ್ಯಾಮತ್‍ಗಳು ಬಹುಪಾಲು ನಶಿಸಿಹೋದವು. ಅವುಗಳ ಜೊತೆಗೆ ಇತರ ದೊಡ್ಡ ದೇಹದ ಸಸ್ತನಿಗಳು ಸಹ ನಶಿಸಿಹೋದವು. ಈ ವಿನಾಶ ಅದೆಷ್ಟು ಕ್ಷಿಪ್ರವಾಗಿತ್ತೆಂದರೆ, ಉಲ್ಕೆ ಅಪ್ಪಳಿಸಿದ, ತೀವ್ರ ಬರಗಾಲದ ಅಥವಾ ಯಾವುದಾದರೂ ಅಂತರ ಪ್ರಬೇಧ ರೋಗದಂತಹ ಯಾವುದಾದರೂ ಬೃಹತ್ ಪ್ರಮಾಣದ ದುರಂತ ಸಂಭವಿಸಿರಬಹುದೆಂದು ವಿಜ್ಞಾನಿಗಳು ಊಹಿಸುತ್ತಾರೆ. ಅವುಗಳ ವಿನಾಶಕ್ಕೆ ಆಗಿನ ವಾತಾವರಣದಲ್ಲಾದ ಬದಲಾವಣೆಯೇ ಪ್ರಮುಖ ಕಾರಣವೆಂಬುದು ವಿಜ್ಞಾನಿಗಳು ಅಂದಾಜು. ಏಕೆಂದರೆ ಸುಮಾರು 15,000 ವರ್ಷಗಳ ಹಿಂದೆ ಹಿಮಯುಗ ಅಂತ್ಯಗೊಳ್ಳತೊಡಗಿತು. ಹಿಮದ ವಾತಾವರಣಕ್ಕೆ ಹೊಂದಿಕೊಂಡಿದ್ದ ಮ್ಯಾಮತ್‍ಗಳು ಉಷ್ಣ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿರಬಹುದು. ಕ್ಷಿಪ್ರವಾಗಿ ಏರಿದ ಉಷ್ಣತೆಯಿಂದ ಸಸ್ಯರಾಶಿಯಲ್ಲಿ ಅಗಾಧ ಬದಲಾವಣೆ ಕಂಡುಬಂದಿತು. ಕಂಪ್ಯೂಟರ್ ವಿಶ್ಲೇಷಣೆಗಳ ಪ್ರಕಾರ ಆ ಸಮಯದಲ್ಲಿ ಮ್ಯಾಮತ್‍ಗಳ ಶೇ.90ರಷ್ಟು ವಾಸ ಪ್ರದೇಶಗಳು ನಾಶವಾಗಿದ್ದವು. ಇವುಗಳ ಜೊತೆಗೆ ಆಫ್ರಿಕಾದಲ್ಲಿ ಸುಮಾರು 195,000 ವರ್ಷಗಳ ಹಿಂದೆ ವಿಕಾಸಗೊಂಡಿದ್ದ ಆಧುನಿಕ ಮಾನವರು 40,000 ವರ್ಷಗಳ ಹಿಂದೆ ಯುರೇಷಿಯಾಕ್ಕೆ ಕಾಲಿರಿಸಿದರು. ಅವನ ಜನಸಂಖ್ಯೆ ಹೆಚ್ಚಾದಂತೆ ಅವರ ಆಹಾರಕ್ಕಾಗಿ ಅವರು ಸೈಬೀರಿಯಾ, ಅಮೆರಿಕಾಗಳಲ್ಲಿ ಅಲೆಮಾರಿಗಳಾಗಿದ್ದು ಬೇಟೆಗಳನ್ನು ಅರಸುತ್ತಿದ್ದರು. ಅವರ ಅತಿಯಾದ ಬೇಟೆಯೂ ಸಹ ಮ್ಯಾಮತ್‍ಗಳು ವಿನಾಶ ಹೊಂದಲು ಕಾರಣವಿರಬಹುದು. ಒಂದು ಮ್ಯಾಮತ್‍ನ ಬೇಟೆಯಲ್ಲಿ ಅವರು ಯಶಸ್ವಿಯಾದರೆ ಅವರಿಗೆ ಹಲವಾರು ತಿಂಗಳುಗಳ ಆಹಾರ ಒಮ್ಮೆಲೇ ಸಿಕ್ಕಂತೆಯೇ! ಆ ಪ್ರಾಚೀನ ಮಾನವರು ಮಾಂಸವನ್ನು ಲ್ಯಾಕ್ಟೋಬ್ಯಾಸಿಲಸ್ ಎಂಬ ಬ್ಯಾಕ್ಟೀರಿಯಾ ಇರುವ ಹುಳಿ ನೀರಿನ ಕೊಳಗಳಲ್ಲಿ ಪ್ರಾಣಿಗಳ ಮಾಂಸವನ್ನು ಹಲವಾರು ತಿಂಗಳುಗಳ ಕಾಲ ಕೆಡದಂತೆ ಸಂರಕ್ಷಿಸಿಡುತ್ತಿದ್ದರೆಂದು ಮಿಶಿಗನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡ್ಯಾನ್ ಫಿಶರ್ ತಮ್ಮ ಸಂಶೋಧನೆಗಳಿಂದ ತಿಳಿಸಿದ್ದಾರೆ. ಅದನ್ನು ಪರೀಕ್ಷಿಸಲು ಅವರು ಕುದುರೆಯೊಂದನ್ನು ಪ್ರಾಚೀನ ಮಾನವನಂತೆ ಕಲ್ಲಿನ ಆಯುಧಗಳಿಂದ ಕೊಂದು ಅದರ ಮಾಂಸವನ್ನು ಪ್ರಾಚೀನ ಮಾನವರಂತೆಯೇ ಸಂರಕ್ಷಿಸಿಟ್ಟು ಅದನ್ನು ತಿಂದು ಸಹ ಪರೀಕ್ಷಿಸಿದ್ದಾರೆ. 
                ಹಲವಾರು ಕಡೆ ಸಿಕ್ಕ ಮ್ಯಾಮತ್‍ಗಳ ಮೂಳೆಗಳಲ್ಲಿ ಪ್ರಾಚೀನ ಮನುಷ್ಯರು ಅವುಗಳನ್ನು ಮುರಿದಿರುವ ಚಿಹ್ನೆಗಳಿವೆ. ರಷಿಯಾದ ಮೈದಾನ ಪ್ರದೇಶದಲ್ಲಿ ಆಗಿನ ಮನುಷ್ಯರು ಮ್ಯಾಮತ್‍ಗಳ ಮೂಳೆಗಳಿಂದ ನಿರ್ಮಿಸಿಕೊಂಡಿದ್ದ ಹಿಮಯುಗದ `ಗುಡಿಸಲುಗಳು ಉತ್ಖನನದಲ್ಲಿ ದೊರಕಿವೆ. ಮ್ಯಾಮತ್‍ಗಳ ಮೂಳೆಗಳಿಂದ ತಯಾರಿಸಿದ ಸೂಜಿಗಳು, ಈಟಿ, ಭರ್ಜಿಗಳ ಚೂಪಾದ ತುದಿಗಳು, ಬೂಮರಾಂಗ್‍ಗಳು, ಸಂಗೀತ ವಾದ್ಯಗಳು, ಮಕ್ಕಳ ಆಟಿಕೆಗಳು, ಬೊಂಬೆಗಳು, ಕತ್ತಿಗೆ ಧರಿಸಿಕೊಳ್ಳುತ್ತಿದ್ದ ಮಣಿಗಳು, ಪದಕಗಳು ಹಾಗೂ ಹೆಣಿಗೆಗಳು ಸಹ ದೊರಕಿವೆ. ಮ್ಯಾಮತ್‍ನ ದಂತದಲ್ಲೇ ಕೆತ್ತಿದ ಸುಮಾರು 35,000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮ್ಯಾಮತ್‍ನ ಒಂದು ಪುಟ್ಟ ಆಕೃತಿಯೂ ದೊರಕಿದೆ. ವಿಜ್ಞಾನಿಗಳ ಪ್ರಕಾರ ಪ್ರಾಚೀನ ಮಾನವನ ದೊರಕಿರುವ ಅತ್ಯಂತ ಹಳೆಯ ಕಲಾಕೃತಿ ಅದೇ ಆಗಿದೆ. ಯೂರೋಪಿನ ಹಲವಾರು ಗುಹೆಗಳಲ್ಲಿ ಪ್ರಾಚೀನ ಮಾನವ ವೂಲಿ ಮ್ಯಾಮತ್‍ಗಳನ್ನು ಸ್ಫುಟವಾಗಿ ಬಿಡಿಸಿ ತನ್ನ ಕಲಾನೈಪುಣ್ಯತೆಯನ್ನು ತೋರಿದ್ದಾನೆ.
 

                ಅದೇ ವಿಧಾನದಲ್ಲಿಯೇ 2007ರಲ್ಲಿ ಸಿಕ್ಕಿರುವ ಮರಿ ಮ್ಯಾಮತ್ ಲ್ಯೂಬಾ ಸಹ ಸತ್ತು 40,000 ಸಾವಿರ ವರ್ಷಗಳಾಗಿದ್ದರೂ ಉತ್ತಮ ಸ್ಥಿತಿಯಲ್ಲಿ ಸಂರಕ್ಷಿಸಲ್ಪಟ್ಟಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಅದರ ದೇಹ ಎಷ್ಟು ಸುಸ್ಥಿತಿಯಲ್ಲಿತ್ತೆಂದರೆ ಅದರ ಹೊಟ್ಟೆಯಲ್ಲಿ ಆ ಮರಿ ಆಗ ತಾನೆ ಕುಡಿದಿದ್ದ ಅದರ ತಾಯಿ ಹಾಲು ಸಹ ಹಾಗೆಯೇ ಇತ್ತು. ಅದರ ಮೇಲಿನ ತುಪ್ಪಳು ಉದುರಿಹೋಗಿದ್ದರೂ ಅದರ ಕಣ್ಣುರೆಪ್ಪೆಗಳು ಸಹ ಆಗ ತಾನೆ ಆ ಮರಿ ಮ್ಯಾಮತ್ ಕಣ್ಣುಮುಚ್ಚಿ ನಿದ್ರೆಮಾಡುತ್ತಿರುವಂತೆ ಕಾಣುತ್ತಿದ್ದವು. ಅದರ ಸೊಂಡಿಲು ಹಾಗೂ ಶ್ವಾಸಕೋಶಗಳಲ್ಲಿ ಮಣ್ಣು ಕಂಡುಬಂದಿರುವುದರಿಂದ ಅದು ಕೆಸರಿನಲ್ಲಿ ಸಿಕ್ಕಿಕೊಂಡು ಹೊರಬರಲಾಗದೆ ಉಸಿರಿನಲ್ಲಿ ಮಣ್ಣು, ಕೆಸರು ಹೀರಿಕೊಂಡು ಉಸಿರುಗಟ್ಟಿ ಸತ್ತಿರಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಅದರ ಹೊಟ್ಟೆಯಲ್ಲಿ ಆನೆಯ ಸಗಣಿ ಸಹ ಕಂಡುಬಂದಿತ್ತು. ಬಹುಶಃ ಆ ಸಗಣಿ ಅದರ ತಾಯಿಯದೇ ಆಗಿರಬಹುದು. ಹಾಲುಕುಡಿಯುವ ಈಗಿನ ಆನೆ ಮರಿಗಳು ಸಹ ಹಲವಾರು ಸಸ್ಯಗಳನ್ನು ತಿಂದು ಜೀರ್ಣಮಾಡಿಕೊಳ್ಳಲು ಸಾಧ್ಯವಾಗಲು ಅವುಗಳ ಹೊಟ್ಟೆಯಲ್ಲಿ ಹಲವಾರು ಬ್ಯಾಕ್ಟೀರಿಯಾಗಳಿರಬೇಕಾಗುತ್ತದೆ. ಮೊದಲಿಗೆ ಆ ಮರಿಗಳು ಆ ಬ್ಯಾಕ್ಟೀರಿಯಾಗಳನ್ನು ಪಡೆದುಕೊಳ್ಳಲು ವಯಸ್ಕ ಆನೆಗಳ ಸಗಣಿಯನ್ನು ತಿನ್ನುತ್ತವೆ. ಮ್ಯಾಮತ್‍ಗಳ ಮರಿಗಳು ಸಹ ಅದೇ ರೀತಿ ಮಾಡುತ್ತಿದ್ದಿರಬಹುದೆನ್ನುತ್ತಾರೆ ವಿಜ್ಞಾನಿಗಳು.
                ಸಸ್ಯ ಶಾಸ್ತ್ರಜ್ಞ ಮಿಖಾಯಿಲ್ ಇವಾನೊವಿಚ್ ಆಡಮ್ಸ್ ಮೊಟ್ಟ ಮೊದಲ ಬಾರಿಗೆ 1806ರಲ್ಲಿ ವೂಲಿ ಮ್ಯಾಮತ್‍ನ ದೇಹವೊಂದನ್ನು ಕಂಡು ಅವುಗಳ ಬಗೆಗೆ ಅಧ್ಯಯನ ಪ್ರಾರಂಭಿಸಿದ. ಆದರ ಯುರಿ ಖುದಿಗೆ ಸಿಕ್ಕಿದ ಲ್ಯೂಬಾದಷ್ಟು ಸುಸ್ಥಿತಿಯಲ್ಲಿದ್ದ ವೂಲಿ ಮ್ಯಾಮತ್‍ನ ದೇಹ ಹಿಂದೆಂದೂ ದೊರಕಿರಲಿಲ್ಲ.
                ಈಗ ವಿಜ್ಞಾನಿಗಳು ನಡೆಸುತ್ತಿರುವ ಪ್ರಯತ್ನವೆಂದರೆ ಮತ್ತೊಂದು ವೂಲಿ ಮ್ಯಾಮತ್ ಅನ್ನು ಸೃಷ್ಟಿಸುವುದು. ಸ್ಕಾಟ್‍ಲ್ಯಾಂಡಿನ ಡಾ.ಇಯಾನ್ ವಿಲ್ಮಟ್ 1996ರಲ್ಲಿ ಕುರಿಯ ಒಂದು ತದ್ರೂಪಿ (ಕ್ಲೋನ್) ಡಾಲಿ ಎಂಬ ಕುರಿಯನ್ನು ಕ್ಲೋನಿಂಗ್ ಮೂಲಕ ಸೃಷ್ಟಿಸುವಲ್ಲಿ ಯಶಸ್ವಿಯಾದಾಗಿನಿಂದ ಮೊಲ, ಬೆಕ್ಕು, ನಾಯಿ, ಇಲಿ, ಮೇಕೆ, ಹೇಸರಕತ್ತೆ, ಕುದುರೆ, ಹಂದಿ, ಒಂಟೆ ಮುಂತಾದ ಪ್ರಾಣಿಗಳ ಕ್ಲೋನಿಂಗ್‍ನ ಹಲವಾರು ಯಶಸ್ವಿ ಪ್ರಯತ್ನಗಳು ನಡೆದಿವೆ. ಹಲವಾರು ಕಾಡುಪ್ರಾಣಿಗಳನ್ನು ಸಹ ಕ್ಲೋನ್ ಮಾಡಲಾಗಿದೆ. ಆದರೆ ಅವುಗಳಲ್ಲಿ ಯಾವುದೂ ಬಹುಕಾಲ ಬದುಕುಳಿದಿಲ್ಲ- ಅವು ಒಂದಲ್ಲ ಒಂದು ಕಾಯಿಲೆಗಳಿಗೆ ಅಥವಾ ಆನುವಂಶಿಕ ನ್ಯೂನತೆಗಳಿಗೆ ಬಲಿಯಾಗಿ ಸತ್ತುಹೋಗಿವೆ. ಆದರೆ ಇದುವರೆಗೆ ಯಾರೂ ಸಂಪೂರ್ಣವಾಗಿ ವಿನಾಶಹೊಂದಿರುವ ಪ್ರಾಣಿಯ ಕ್ಲೋನಿಂಗ್ ಮಾಡಿಲ್ಲ. ಡೈನೋಸಾರ್‍ಗಳ ಮರುಸೃಷ್ಟಿ ಸಿನೆಮಾಗಳಲ್ಲಿ ಮಾತ್ರವಾಗಿದೆ.
                ಜಪಾನಿ ವಿಜ್ಞಾನಿಗಳು ವೂಲಿ ಮ್ಯಾಮತ್ ಅನ್ನು ಮರುಸೃಷ್ಟಿಸಿ ಅವುಗಳದೇ ಒಂದು `ಜುರಾಸಿಕ್ ಪಾರ್ಕ್ಅನ್ನು ಸೈಬೀರಿಯಾದಲ್ಲಿ ಸ್ಥಾಪಿಸಬೇಕೆಂಬ ಆಲೋಚನೆ ಹೊಂದಿದ್ದಾರೆ. ವೂಲಿ ಮ್ಯಾಮತ್‍ಗಳು ಶೇ.99.4ರಷ್ಟು ಏಷಿಯಾದ ಆನೆಯನ್ನು ಆನುವಂಶಿಕವಾಗಿ ಹೋಲುತ್ತದೆ. ಹಾಗಾಗಿ ಜಪಾನಿ ವಿಜ್ಞಾನಿಗಳು ಯಾವುದಾದರೂ ಸುಸ್ಥಿತಿಯಲ್ಲಿರುವ ಗಂಡು ವೂಲಿಮ್ಯಾಮತ್‍ನ ದೇಹದಿಂದ ವೀರ್ಯಾಣುವನ್ನು ಪಡೆದು ಅದರಿಂದ ಏಷಿಯಾದ ಹೆಣ್ಣು ಆನೆಗೆ ಕೃತಕ ಗರ್ಭಧಾರಣೆ ಮಾಡಿ ಅದರಿಂದ ಮರಿಯನ್ನು ಪಡೆಯುವುದು. ಆದರೆ ಈ ರೀತಿ ಹುಟ್ಟುವ ಮರಿ ನೂರಕ್ಕೆ ನೂರರಷ್ಟು ವೂಲಿ ಮ್ಯಾಮತ್ ಆಗಿರುವುದಿಲ್ಲ; ಬದಲಿಗೆ ಅರ್ಧ ಮ್ಯಾಮತ್ ಅರ್ಧ ಆನೆಯಾಗಿರುತ್ತದೆ. ಆದರೆ ಕ್ರಮೇಣ ಅವುಗಳ ಆಂತರಿಕ ಹಾಗೂ ನಿರ್ದಿಷ್ಟ ಸಂತಾನೋತ್ಪತ್ತಿಯಿಂದ ಬಹುಪಾಲು ಸಂಪೂರ್ಣ ಮ್ಯಾಮತ್ ಅನ್ನು ಪಡೆಯಬಹುದು. ಈ ಆಲೋಚನೆಯನ್ನು ಹಲವಾರು ವಿಜ್ಞಾನಿಗಳು ವೈಜ್ಞಾನಿಕವಾಗಿ ಅಸಾಧ್ಯ ಹಾಗೂ ನೈತಿಕವಾಗಿ ಬೇಜವಾಬ್ದಾರಿಯಾದುದು ಎಂದು ವಿರೋಧಿಸಿದ್ದಾರೆ. ಸಾವಿರಾರು ವರ್ಷಗಳ ಹಳೆಯ ದೇಹಗಳ ಜೀವಕೋಶಗಳಲ್ಲಿನ ಹಾಗೂ ವಿರ್ಯಾಣುವಿನಲ್ಲಿನ ಡಿ.ಎನ್.ಎ. ಸಂಪೂರ್ಣ ವಿಚ್ಛಿಧ್ರವಾಗಿದ್ದು ಅದನ್ನು ಬಳಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆ ವಿಜ್ಞಾನಿಗಳು.
                ವೀರ್ಯಾಣುವಿನಿಂದ ಸಾಧ್ಯವಾಗದಿದ್ದಲ್ಲಿ ಮ್ಯಾಮತ್‍ನ ಸಂರಕ್ಷಿತ ದೇಹದ ಇತರ ಯಾವುದೇ ಭಾಗದಿಂದ ಪಡೆದ ಸುಸ್ಥಿತಿಯ ಜೀವಕೋಶದಿಂದ ಕ್ಲೋನಿಂಗ್ ಮೂಲಕ ವೂಲಿ ಮ್ಯಾಮತ್‍ನ ತದ್ರೂಪಿಯನ್ನು ಸೃಷ್ಟಿಸಬಹುದೆನ್ನುತ್ತಾರೆ ಇನ್ನು ಕೆಲವು ವಿಜ್ಞಾನಿಗಳು. ಕ್ಲೋನಿಂಗ್‍ನಲ್ಲಿ ನಡೆಸುವ ಮೂಲಭೂತ ಕ್ರಿಯೆ ಇಷ್ಟು- ಪ್ರತಿಯೊಂದು ಜೀವಕೋಶದಲ್ಲೂ ನಿರ್ದಿಷ್ಟ ಸಂಖ್ಯೆಯ ವರ್ಣತಂತುಗಳಿರುತ್ತವೆ (ಕ್ರೋಮೋಸೋಮ್ಸ್). ಆ ವರ್ಣತಂತುಗಳಲ್ಲಿ ವಂಶವಾಹಿ(ಜೀನ್ಸ್)ಗಳಿದ್ದು ಅವುಗಳಲ್ಲಿ ಆಯಾ ಜೀವಿಯ ಸಂಪೂರ್ಣ ದೇಹ ನಿರ್ಮಾಣದ ನಿರ್ದೇಶನಗಳಿರುತ್ತವೆ. ಆದರೆ ಲೈಂಗಿಕ ಜೀವಕೋಶಗಳಾದ ಗಂಡಿನ ವೀರ್ಯಾಣು ಮತ್ತು ಹೆಣ್ಣಿನ ಅಂಡಾಣುವಿನಲ್ಲಿ ಮಾತ್ರ ಅರ್ಧ ಸಂಖ್ಯೆಯ ವರ್ಣತಂತುಗಳಿರುತ್ತವೆ. ಸಾಮಾನ್ಯವಾಗಿ ನಡೆಯುವ ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಗಂಡಿನ ವೀರ್ಯಾಣು ಮತ್ತು ಹೆಣ್ಣಿನ ಅಂಡಾಣು ಸೇರಿ, ಅವುಗಳ ಅರ್ಧರ್ಧ ವರ್ಣತಂತುಗಳು ಸಂಪೂರ್ಣವಾಗಿ ಕಲೆತು ಒಂದು ಹೊಸ ಜೀವಿಯನ್ನು ರೂಪಿಸುತ್ತವೆ. ಆದರೆ  ಕ್ಲೋನಿಂಗ್‍ನಲ್ಲಿ, ಒಂದು ಜೀವಿಯ ದೇಹದ ಯಾವುದೋ ಭಾಗದ ಜೀವಕೋಶವೊಂದನ್ನು ತೆಗೆದುಕೊಂಡು ಅದರಲ್ಲಿನ ವರ್ಣತಂತುಗಳನ್ನು ಹೊರತೆಗೆದುಕೊಳ್ಳುತ್ತಾರೆ. ಅದೇ ರೀತಿ ಒಂದು ಹೆಣ್ಣಿನ ಅಂಡಾಣುವನ್ನು ತೆಗೆದುಕೊಂಡು ಅದರಲ್ಲಿನ ವರ್ಣತಂತುಗಳನ್ನು ತೆಗೆದುಹಾಕಿ ಹೊರಕವಚ ಮಾತ್ರ ತೆಗೆದುಕೊಂಡು ಅದರೊಳಗೆ ಈ ಮೊದಲೇ ಬೇರ್ಪಡಿಸಿಕೊಂಡಿರುವ ವರ್ಣತಂತುಗಳನ್ನು ಸೇರಿಸಿ ಆ ಅಂಡಾಣು ಫಲವಂತವಾಗುವಂತೆ ಮಾಡಿ ವಿಭಜನೆಗೊಂಡಾಗ ಅದನ್ನು ಅದೇ ಹೆಣ್ಣಿನ ಅಥವಾ ಮತ್ತೊಂದು ಹೆಣ್ಣಿನ ಗರ್ಭದಲ್ಲಿರಿಸಿ ಸಾಮಾನ್ಯ ಮಗು ಬೆಳೆಯುವಂತೆ ಮಾಡುತ್ತಾರೆ. ಇಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವುದು ಗಂಡು ಮತ್ತು ಹೆಣ್ಣುಗಳ ವರ್ಣತಂತುಗಳು ಸೇರಿ ಬೆಳೆಯುತ್ತಿರುವ ಮಗುವಲ್ಲ ಬದಲಿಗೆ ಒಂದೇ ಪ್ರಾಣಿಯ ಸಂಪೂರ್ಣ ದೇಹರಚನೆಯ ನಿರ್ದೇಶನಗಳುಳ್ಳ ವರ್ಣತಂತುಗಳ ಫಲ. ಅಂದರೆ, ಆ ಪ್ರಾಣಿಯ ತದ್ರೂಪಿ (ಕ್ಲೋನ್). ಡಾ.ಇಯಾನ್ ವಿಲ್ಮಟ್ ಡಾಲಿಯನ್ನು ರೂಪಿಸಿರುವುದೂ ಹೀಗೆಯೇ.
                ಈಗಾಗಲೇ ವೂಲಿ ಮ್ಯಾಮತ್‍ನ ಜೀನ್ ಮ್ಯಾಪಿಂಗ್ ಬಹುಪಾಲು ಮುಗಿದಿರುವುದರಿಂದ ಅದರ ಆನುವಂಶಿಕ `ಜಾತಕವಿಜ್ಞಾನಿಗಳಿಗೆ ತಿಳಿದಿದೆ. ಹಾಗಾಗಿ ವೂಲಿ ಮ್ಯಾಮತ್ ಆನುವಂಶಿಕವಾಗಿ ಏಷಿಯಾದ ಆನೆಗೆ ಶೇ.99.4ರಷ್ಟು ಹೋಲುತ್ತಿರುವುದರಿಂದ ಏಷಿಯಾ ಆನೆಯ ಜೀವಕೋಶದಲ್ಲಿನ ವರ್ಣತಂತುಗಳ ವಂಶವಾಹಿಗಳಲ್ಲಿ ವ್ಯತ್ಯಾಸ ಹೊಂದಿರುವ ಉಳಿದ ಶೇ.0.06ರಷ್ಟರಲ್ಲಿ ವೂಲಿ ಮ್ಯಾಮತ್‍ಗೆ ಬೇಕಾದ ಬದಲಾವಣೆಗಳನ್ನು ಮಾಡಿ ಅದನ್ನೇ ವೂಲಿ ಮ್ಯಾಮತ್‍ನ ಸೃಷ್ಟಿಗೆ ಬಳಸಬಹುದೆನ್ನುತ್ತಾರೆ ಕೆಲವು ವಿಜ್ಞಾನಿಗಳು. ಆದರೆ ಇದು ಬಾಯಿ ಮಾತಿನಲ್ಲಿ ಹೇಳುವಷ್ಟು ಸುಲಭದ ಕೆಲಸವಲ್ಲ.
                ಈಗಾಗಲೇ ಬ್ಯಾಕ್ಟೀರಿಯಾದ ವಂಶವಾಹಿ ಮಾಹಿತಿಯನ್ನು ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಿ ಅದನ್ನು ಕೃತಕವಾಗಿ ತಯಾರಿಸಿ ಪ್ರಯೋಗಾಲಯದಲ್ಲಿ `ಜೀವಸೃಷ್ಟಿಯನ್ನು ಕೆಲವು ವಿಜ್ಞಾನಿಗಳು ಯಶಸ್ವಿಯಾಗಿ ಮಾಡಿರುವುದರಿಂದ ಅದೇ ರೀತಿ ವೂಲಿ ಮ್ಯಾಮತ್‍ನ ಸಂಪೂರ್ಣ ಆನುವಂಶಿಕ ಮಾಹಿತಿಯನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸಂಶ್ಲೇಷಿಸಿ ಅದನ್ನು ಹೆಣ್ಣಾನೆಯ ಅಂಡಾಣುವಿನಲ್ಲಿ ಇರಿಸಿ ಈ ಮೇಲೆ ತಿಳಿಸಿರುವ ವಿಧಾನದಿಂದಲೇ ಮುಂದೊಂದು ದಿನ ವೂಲಿ ಮ್ಯಾಮತ್ ಅನ್ನು ಸೃಷ್ಟಿಸಲು ಸಾಧ್ಯವಾಗಬಹುದೆನ್ನುತ್ತಾರೆ ವಿಜ್ಞಾನಿಗಳು.