ಸೋಮವಾರ, ಡಿಸೆಂಬರ್ 14, 2009

ಥಾಯ್ಲೆಂಡಿನ ಕಥೋಯ್‌ಗಳು

ಡಿಸೆಂಬರ್ ೧೦, 2009ರ 'ಸುಧಾ'ದಲ್ಲಿ ಪ್ರಕಟವಾದ ನನ್ನ ಲೇಖನ:
ಫೋಟೋಗಳು: ಎಸ್. ರೇಣುಕಾ
ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿದೆ. ಸುಮಾರು ನಾಲ್ಕು ನೂರು ಅತ್ಯಂತ ಸುಂದರ ಸ್ತ್ರೀ ಕಲಾವಿದರನ್ನು ಹೊಂದಿರುವ ಈ ಕ್ಯಾಬರೆ ಒಂದೂ ಒಂದೂವರೆ ಗಂಟೆಗಳ ಕಾಲ ವೀಕ್ಷಕರನ್ನು ಮನಮೋಹಕ ನೃತ್ಯಗಳಿಂದ, ಅತ್ಯದ್ಭುತ ರಂಗಸಜ್ಜಿಕೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಆಲ್ಕಜಾರ್ ಕ್ಯಾಬರೆ ವಿಶ್ವದರ್ಜೆಯದಾಗಿದ್ದು ಅದನ್ನು ಪ್ಯಾರಿಸ್‌ನ ಜಗದ್ವಿಖ್ಯಾತ ಲಿಡೊ ಮತ್ತು ಮೌಲಿನ್ ರೂಗೂ ಹೋಲಿಸಲಾಗುತ್ತದೆ.
ಆಲ್ಕಜಾರ್ ನ ಹೊರಗೆ
ಸಾವಿರದ ಇನ್ನೂರು ಆಸನಗಳುಳ್ಳ ಸಭಾಂಗಣದಲ್ಲಿ ನೀವು ಕೂರುತ್ತಿದ್ದಂತೆ ನಿಮಗೆ ಕೋಲಾ ಅಥವಾ ಬಿಯರ್ ನೀಡಲಾಗುತ್ತದೆ. ಥಾಯ್ ಹಾಗೂ ಇಂಗ್ಲಿಷಿನ ಹಾಡುಗಳಿಗೆ ದಂಗುಬಡಿಸುವ ಸೌಂದರ್ಯದ, ನೀಳ ನಡುವಿನ, ತುಂಬಿದೆದೆಯ ಸುಂದರಿಯರು ನರ್ತಿಸುತ್ತಾರೆ. ಹಲವಾರು ಥಾಯ್‌ನ ಸಾಂಪ್ರದಾಯಕ ನೃತ್ಯಗಳೂ ಇರುತ್ತವೆ. ನಿಮಗೆ ಸಮಯಹೋಗುವುದೇ ತಿಳಿಯುವುದಿಲ್ಲ. ಇಷ್ಟು ಬೇಗ ಮುಗಿದುಹೋಯಿತೇ ಎನ್ನಿಸುತ್ತದೆ.


ಕಾರ್ಯಕ್ರಮ ಮುಗಿದ ನಂತರ ನೀವು ಹೊರಬರುತ್ತಿದ್ದಂತೆ ನೃತ್ಯಮಾಡಿದ ಆ ಸುರಸುಂದರಿಯರು ನಿಮಗಾಗಿಯೇ ಕಾಯುತ್ತಿರುತ್ತಾರೆ. ಹತ್ತು ಹದಿನೈದು ಬಾಟ್ (ಥಾಯ್ಲೆಂಡಿನ ಹಣ) ನೀಡಿದಲ್ಲಿ ನೀವು ಅವರನ್ನು ಅಪ್ಪಿಕೊಳ್ಳಬಹುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬಹುದು. ಆ ಸುಂದರಿಯರನ್ನು ಕ್ಯಾಮೆರಾಗಳಲ್ಲಿ ಹಾಗೂ ಮನಸ್ಸುಗಳಲ್ಲಿ ಸೆರೆಹಿಡಿದು ತಾವು ಕೊಂಡೊಯ್ಯಬಹುದು.
ಬಾ ನನ್ನೊಂದಿಗೆ ಫೋಟೋ ಬೇಡವೆ?

ಅಂದಹಾಗೆ ನೀವು ತಿಳಿದುಕೊಳ್ಳಬೇಕಾದ ಮತ್ತೊಂದು ವಿಷಯವಿದೆ. ಆ ಸುರಸುಂದರಿಯರು ಹೆಂಗಸರಲ್ಲ, ಹೆಂಗಸಿನ ರೂಪದಲ್ಲಿರುವ ಗಂಡಸರು! ಅಥವಾ 'ಹೆಂಗಂಡಸರು'.
ಹಣ ಕೊಟ್ಟಲ್ಲಿ ಫೋಟೊ

ಥಾಯ್ಲೆಂಡಿನಲ್ಲಿ ಒಂದು ಪ್ರಸಿದ್ಧ ಮಾತಿದೆ: 'ನೀನು ಅತ್ಯಂತ ಸುಂದರ ಹೆಣ್ಣನ್ನು ಭೇಟಿಯಾದಲ್ಲಿ, ಎಚ್ಚರದಿಂದಿರು, ಆ ಹೆಣ್ಣು ಗಂಡಾಗಿರಬಹುದು'. ಇಂಥ ಹೆಂಗಂಡಸರನ್ನು 'ಲೇಡಿ-ಬಾಯ್' ಎಂದು ಕರೆಯುತ್ತಾರೆ. ಥಾಯ್ ಭಾಷೆಯಲ್ಲಿ 'ಕಥೋಯ್' ಎಂದು ಕರೆಯುತ್ತಾರೆ. ಕಥೋಯ್ ಎನ್ನುವುದೊಂದು ಆಡುಭಾಷೆಯ ಪದ. ಅದರ ನಿಜವಾದ ಅರ್ಥ ಹೆಂಗಸಿನ ವೇಷ ಧರಿಸುವ ಗಂಡಸು ಎಂದು.
ನೀಳ ನಡುವಿನ ಕಥೋಯ್

63 ದಶ ಲಕ್ಷ ಜನಸಂಖ್ಯೆಯಿರುವ ಥಾಯ್ಲೆಂಡಿನಲ್ಲಿ ಸುಮಾರು 2 ಲಕ್ಷ ಲೇಡಿಬಾಯ್ಸ್ ಇದ್ದಾರೆ. ಅವರನ್ನು ಥಾಯ್ ಭಾಷೆಯಲ್ಲಿ ಕಥೋಯ್ ಎಂದು ಕರೆಯುತ್ತಾರೆ. ಅವರು ನಿಮ್ಮ ಎದುರಿಗೆ ಬಂದರೂ ಅವರು ಅದೆಷ್ಟು ಸುಂದರವಾಗಿರುತ್ತಾರೆಂದರೆ ಅವರನ್ನು ಗುರುತಿಸುವುದು ತೀರಾ ಕಷ್ಟ. ಕಥೋಯ್‌ಗಳನ್ನು ಮೂರನೇ ಲಿಂಗವೆಂದೂ ಕರೆಯುತ್ತಾರೆ. ಥಾಯ್ಲೆಂಡಿನಲ್ಲಿ ಅದೇಕೆ ಹೆಚ್ಚಿನ ಸಂಖ್ಯೆಯಲ್ಲಿ ಕಥೋಯ್‌ಗಳಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಈ ಮೂರು ಲಿಂಗಗಳ ಪರಿಕಲ್ಪನೆ ಥಾಯ್ಲೆಂಡಿನಲ್ಲಿ ಪ್ರಾಚೀನವಾದುದು. ಸೃಷ್ಟಿಯ ಕತೆಗಳು ಹೇಳುವಂತೆ ದಂಪತಿಗಳೊಬ್ಬರಿಗೆ ಮೂವರು ಮಕ್ಕಳಿದ್ದರಂತೆ: ಒಂದು ಗಂಡು, ಒಂದು ಹೆಣ್ಣು ಹಾಗೂ ಮತ್ತೊಂದು ಮೂರನೇ ಲಿಂಗ. ಈ ಮೂರನೇ ಲಿಂಗದ ಮಗುವೇ ಕಥೋಯ್ ಎಂದು ಹೇಳುತ್ತಾರೆ.
ಬಹುಪಾಲು ಈ ವಿಪರ್ಯಸ್ತ ಲಿಂಗಿಗಳು ತಮ್ಮ ಬಾಲ್ಯದಿಂದಲೇ ತಾವು ತಪ್ಪು ಲಿಂಗದಲ್ಲಿ ಜನಿಸಿದ್ದೇವೆಂದು ಭಾವಿಸಿರುತ್ತಾರೆ. ಹಾಗಾಗಿ ಅವರು ಹುಡುಗರಾಗಿ ಹುಟ್ಟಿದ್ದರೂ ಹುಡುಗಿಯರಂತೆ ಬಟ್ಟೆ ಧರಿಸಿ, ಅವರಂತೆಯೇ ಹಾವಭಾವಗಳಿಂದ ವರ್ತಿಸುತ್ತಿರುತ್ತಾರೆ. ತನ್ನಲ್ಲಿ ಗಂಡಸಿನ ಚಹರೆಗಳು ಅಭಿವೃದ್ಧಿಯಾಗದಿರಲಿ ಎಂದು ಸ್ತ್ರೀ ಹಾರ್ಮೋನ್‌ಗಳನ್ನು ಬಳಸತೊಡಗುತ್ತಾರೆ. ಕೊನೆಗೊಂದು ದಿನ ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು 'ಸಂಪೂರ್ಣ ಸ್ತ್ರೀ'ಯಾಗಲು ಪ್ರಯತ್ನಿಸುತ್ತಾರೆ. ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಆರ್ಥಿಕ ಸಾಮರ್ಥ್ಯವಿಲ್ಲದವರು ಸ್ತ್ರೀಯರಂತೆ ಬಟ್ಟೆಗಳನ್ನು ಧರಿಸಿ ಅವರಂತೆಯೇ ನಡೆದುಕೊಳ್ಳುತ್ತಿರುತ್ತಾರೆ.

ಕಥೋಯ್‌ಗಳನ್ನು ಥಾಯ್ ಸಮಾಜ ಸ್ವೀಕರಿಸಿದೆ ಹಾಗೂ ಅವರನ್ನು ಕೀಳಾಗಿ ಕಾಣುವುದಿಲ್ಲ. ಸಹಿಷ್ಣುತೆಯನ್ನು ಬೋಧಿಸುವ ಬೌದ್ಧ ಧರ್ಮ ಥಾಯ್‌ನ ಪ್ರಮುಖ ಧರ್ಮವಾಗಿರುವುದೇ ಈ ಸಹನೆಗೆ ಕಾರಣ ಎನ್ನಲಾಗಿದೆ. ಆದರೂ ಮೇಲ್ನೋಟಕ್ಕೆ ಎದ್ದುಕಾಣದಿದ್ದರೂ ಅವರನ್ನು ತಮಾಷೆಯ ವಸ್ತುಗಳಾಗಿ ಒಳಗೊಳಗೇ ಕಾಣುತ್ತಾರೆನ್ನಲಾಗಿದೆ. ಕಥೋಯ್‌ಗಳು ಹೆಣ್ಣಾಗಿರಲು ಬಯಸುವುದರಿಂದ ಅವರನ್ನು ಈ ಲೇಖನದಲ್ಲಿ ಸ್ತ್ರೀಲಿಂಗವೆಂದೇ ಪರಿಗಣಿಸಿ ಬರೆಯಲಾಗಿದೆ. ಕಥೋಯ್‌ಗಳನ್ನು ನೀವು ಎಲ್ಲೆಡೆಯೂ ಕೆಲಸಮಾಡುತ್ತಿರುವುದನ್ನು ಕಾಣಬಹುದು- ಹೋಟೆಲುಗಳಲ್ಲಿ, ಬಾರ್‌ಗಳಲ್ಲಿ, ಅಂಗಡಿಗಳಲ್ಲಿ. ಕೆಲವರು ಬೋಧಕರಾಗಿ, ವಿಮಾನ ಪರಿಚಾರಿಕೆಯರಾಗಿ, ಸಿನೆಮಾ ಕಲಾವಿದರಾಗಿ, ರೂಪದರ್ಶಿಗಳಾಗಿ, ನರ್ಸ್‌ಗಳಾಗಿಯೂ ಸಹ ಕೆಲಸಮಾಡುತ್ತಿದ್ದಾರೆ. ನೋಂಗ್ ತುಮ್ ಎಂಬಾಕೆ ಥಾಯ್ ಬಾಕ್ಸಿಂಗ್‌ನ ಛಾಂಪಿಯನ್ ಸಹ ಆಗಿದ್ದಳು. ಆದರೆ ಈ ಉದ್ಯೋಗಗಳಲ್ಲಿ ಸಲ್ಲದವರು ಬೀದಿಗಿಳಿದು ವೇಶ್ಯೆಯರಂತೆ, ಸೆಕ್ಸ್ ಶೋಗಳಲ್ಲಿ ಕೆಲಸಮಾಡಿ ಜೀವನ ಸಾಗಿಸುತ್ತಿದ್ದಾರೆ. ಥಾಯ್ಲೆಂಡಿನ ಕಥೋಯ್‌ಗಳ ಖ್ಯಾತಿ ಇರುವುದು ಅಲ್ಕಜಾರ್‌ನಂತಹ ಕ್ಯಾಬರೆಗಳಲ್ಲಿ. ಆ ಕ್ಯಾಬರೆಗಳಲ್ಲಿ ಅವಕಾಶ ಸಿಗಬೇಕಾದಲ್ಲಿ ಸೌಂದರ್ಯವೊಂದಿದ್ದರೆ ಸಾಲದು, ಅವರಿಗೆ ನಟನೆ, ನೃತ್ಯದಂತಹ ಪ್ರತಿಭೆಯಿರಬೇಕು ಹಾಗೂ ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಬೇಕು.
ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗಳಿಗೆ ಥಾಯ್ಲೆಂಡ್ ಪ್ರಸಿದ್ಧಿಯಾಗಿದೆ. ಇಲ್ಲಿನ ಹಲವಾರು ಆಸ್ಪತ್ರೆಗಳು ಪಾಶ್ಚಿಮಾತ್ಯ ದೇಶಗಳ ಆಸ್ಪತ್ರೆಗಳಷ್ಟು ದುಬಾರಿಯಲ್ಲ ಹಾಗೂ ಉತ್ತಮ ಸೌಲಭ್ಯಗಳನ್ನೂ ಸಹ ಹೊಂದಿವೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಗಂಡು ಸ್ತ್ರೀ ಜನನಾಂಗಗಳನ್ನು ಹಾಗೂ ಸ್ತನಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ಗಂಡುಮಕ್ಕಳು ವಯಸ್ಕರಾಗುವ ಮೊದಲೇ ನಡೆಸಿದಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತಾರೆ. ಶಸ್ತ್ರಚಿಕಿತ್ಸೆಗೆ ಮೊದಲು ಅಂಥವರು ಹಾರ್ಮೋನ್‌ಗಳನ್ನು ತೆಗೆದುಕೊಂಡಿರಬೇಕು.
ಕಥೋಯ್‌ಗಳನ್ನು ಥಾಯ್ಲೆಂಡಿನ ಕಾನೂನು ಅವರನ್ನು ಪ್ರತ್ಯೇಕವೆಂದು ಗುರುತಿಸುವುದಿಲ್ಲ. ಇತರರಂತೆ ಅವರಿಗೆ ಸಮಾನ ಹಕ್ಕುಗಳಿದ್ದರೂ ಸಹ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಹ ಅವರನ್ನು ಸರ್ಕಾರ ಹೆಣ್ಣೆಂದು ಪರಿಗಣಿಸುವುದಿಲ್ಲ. ಅವರ ಪಾಸ್‌ಪೋರ್ಟ್‌ಗಳಲ್ಲಿ ಪುರುಷರೆಂದೇ ಇರುತ್ತದೆ ಹಾಗೂ ಅವರೇನಾದರೂ ಅಪರಾಧ ಮಾಡಿ ಜೈಲಿಗೆ ಹೋದರೆ ಪುರುಷರ ಜೈಲುಗಳಲ್ಲೇ ಇರಬೇಕಾಗುತ್ತದೆ.
1996ರಲ್ಲಿ ಬರೇ ಕಥೋಯ್‌ಗಳೇ ಇರುವ ವಾಲಿಬಾಲ್ ತಂಡವೊಂದು ರಾಷ್ಟ್ರೀಯ ಛಾಂಪಿಯನ್ ಸಹ ಆಗಿತ್ತು. ಅವರ ಬದುಕನ್ನಾಧರಿಸಿದ ದ ಐರನ್ ಲೇಡೀಸ್ ಎಂಬ ಚಲನಚಿತ್ರವನ್ನು ಸಹ ತಯಾರಿಸಲಾಗಿತ್ತು. ಅದಾದ ನಂತರ ದೇಶದ ಹೆಸರಿಗೆ ಧಕ್ಕೆಬರಬಹುದೆನ್ನುವ ಕಾರಣದಿಂದ ಥಾಯ್ ಸರ್ಕಾರ ಕಥೋಯ್‌ಗಳನ್ನು ರಾಷ್ಟ್ರೀಯ ತಂಡಗಳಿಗೆ ಸೇರದಂತೆ ಹಾಗೂ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿತು.
ಥಾಯ್ಲೆಂಡಿನ ಮತ್ತೊಬ್ಬ ಪ್ರಖ್ಯಾತ ಕಥೋಯ್ ನೋಂಗ್ ತುಮ್ ಎಂದು ಪ್ರಸಿದ್ಧವಾಗಿರುವ ಪರಿನ್ಯ ಕಿಯಾಟ್‌ಬುಸಬ ಎಂಬಾಕೆ. 1998ರಲ್ಲಿ ಥಾಯ್ ಬಾಕ್ಸಿಂಗ್‌ನಲ್ಲಿ ಛಾಂಪಿಯನ್ ಆದ ಈಕೆ ತನ್ನ ಉದ್ದನೆಯ ಕೂದಲೊಂದಿಗೆ, ಲಿಪ್‌ಸ್ಟಿಕ್ ಹಾಗೂ ಮೇಕಪ್ ಬಳಸಿ ಆಖಾಡಕ್ಕಿಳಿಯುತ್ತಿದ್ದಳು ಹಾಗೂ ಸೋತ ಎದುರಾಳಿಗೆ ಚುಂಬನ ಸಹ ನೀಡುತ್ತಿದ್ದಳು. ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಯ ನಂತರ ಆಕೆ ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಿದಳು. ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಾಗಿ ಹಣ ಸಂಪಾದಿಸಲೆಂದೇ ಆಕೆ ಥಾಯ್ ಬಾಕ್ಸಿಂಗ್‌ಗೆ ಬಂದಳೆಂದು ಹೇಳುತ್ತಾರೆ. ಆನಂತರ ಕೋಚ್ ಆಗಿ ಕೆಲಸಮಾಡಿದಳು. ಜೊತೆಗೆ ಮಾಡೆಲಿಂಗ್ ಮತ್ತು ನಟನೆ ಸಹ ಮಾಡಿದಳು. ಆಕೆಯ ಬದುಕಿನ ಮೇಲೆ 2003ರಲ್ಲಿ ಬ್ಯೂಟಿಫುಲ್ ಬಾಕ್ಸರ್ ಎಂಬ ಚಲನಚಿತ್ರವನ್ನು ಸಹ ನಿರ್ಮಿಸಲಾಗಿದೆ. 2005ರಲ್ಲಿ ನಿರ್ಮಿಸಿದ ದ ವಾರಿಯರ್ ಕಿಂಗ್ ಎಂಬ ಥಾಯ್ ಯುದ್ಧಕಲೆಯ ಚಿತ್ರದ ಖಳನಾಯಕಿಯ ಪಾತ್ರವಾದ ಮೇಡಮ್ ರೋಸ್ ಪಾತ್ರವನ್ನು ವಿಪರ್ಯಸ್ತ ಲಿಂಗಿಯೇ ಆಗಿದ್ದ ಜಿನ್ ಕ್ಸಿಂಗ್ ಎಂಬಾಕೆ ವಹಿಸಿದ್ದಳು.
ಮಿಮಿ ಎಂಬ ಫ್ಯಾಶನ್ ಅಂಕಣಗಾರ್ತಿ ಒಂದು ಸಂಪ್ರದಾಯಸ್ಥ ಕುಟುಂಬದಿಂದಲೇ ಬಂದವಳು. ಆಕೆ ಒಂದು ಪ್ರಖ್ಯಾತ ವಿಶ್ವವಿದ್ಯಾನಿಲಯದ ಪದವೀಧರೆ ಸಹ. ಆಕೆ ಕಥೋಯ್ ಆಗಬೇಕೆಂದಾಗ ಆಕೆಯ ಮನೆಯವರು ಆಕೆಯನ್ನು ವಿರೋಧಿಸಿ ಹೊರತಳ್ಳಲಿಲ್ಲ. ಮೊದಲು ಆಕೆ ಮಹಿಳಾ ಪತ್ರಿಕೆಗೆ ಅನುವಾದಕಿಯಾಗಿ ಕೆಲಸಮಾಡಿದಳು. ಎಲ್ಲ ಕಥೋಯ್‌ಗಳಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಸಾಮಾನ್ಯವಾಗಿ ಕಥೋಯ್‌ಗಳಾಗಬೇಕೆಂದಾಗ ಮನೆಗಳಲ್ಲಿ, ವಿಶೇಷವಾಗಿ ತಂದೆ ವಿರೋಧಿಸುತ್ತಾನೆ. ಬಹುಪಾಲು ಕಥೋಯ್‌ಗಳು ಮನೆಬಿಟ್ಟು ಹೊರನಡೆಯಬೇಕಾಗುತ್ತದೆ.
ಬ್ಯಾಂಕಾಕ್‌ನಲ್ಲಿರುವ ಸುವಾನ್ ಡ್ಯುಸಿಟ್ ವಿಶ್ವವಿದ್ಯಾನಿಲಯವು ಕಥೋಯ್‌ಗಳಿಗೆ ವಿಶೇಷ ಆಮಂತ್ರಣ ನೀಡಿ ತನ್ನ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡುತ್ತದೆ. ಯಾವ ಅಂಜಿಕೆ, ಹಿಂಜರಿಕೆ ಇಲ್ಲದೆ ಈ ವಿಶ್ವವಿದ್ಯಾನಿಲಯಕ್ಕೆ ಬಂದು ಅವರು ಶಿಕ್ಷಣ ಮುಗಿಸಿ ಗೌರವಯುತ ಕೆಲಸಗಳಿಗೆ ಸೇರಿಕೊಳ್ಳಲೆಂಬುದು ಅದರ ಉದ್ದೇಶ. ಇಲ್ಲಿ ಕಥೋಯ್‌ಗಳು ಮಾತ್ರವಲ್ಲ ಇತರ ಎಲ್ಲರೂ ಇಲ್ಲಿ ಶಿಕ್ಷಣ ಪಡೆಯುತ್ತಾರೆ. ಥಾಯ್ಲೆಂಡಿನ ಸಂಸ್ಕೃತಿ ಸಚಿವಾಲಯದ ಕೆಲವು ಅಧಿಕಾರಿಗಳು ಸುವಾನ್ ಡ್ಯುಸಿಟ್‌ನ ಈ ಪ್ರಯೋಗದಿಂದಾಗಿ ಗೊಂದಲದಲ್ಲಿರುವ ಬಾಲಕರು ದಿಕ್ಕುತಪ್ಪಬಹುದೆಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು, 'ನಮ್ಮ ದೃಷ್ಟಿಯಲ್ಲಿ ಹುಡುಗರು, ಹುಡುಗಿಯರು ಹಾಗೂ ಲೇಡಿ-ಬಾಯ್‌ಗಳು ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು' ಎಂದಿದ್ದಾರೆ. ಆ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ಕಥೋಯ್‌ಗಳ ಸೌಂದರ್ಯ ಸ್ಪರ್ಧೆ ನಡೆಯುತ್ತದೆ. ಅಲ್ಲಿ ಆಯ್ಕೆಯಾದವರು ಥಾಯ್ಲೆಂಡಿನ ಜಗತ್ಪ್ರಸಿದ್ಧ ಕಥೋಯ್‌ಗಳ ಸೌಂದರ್ಯ ಸ್ಪರ್ಧೆಯಾದ ಮಿಸ್ ಟಿಫ್ಯಾನಿ ಯೂನಿವರ್ಸ್ ಸ್ಪರ್ಧೆಗೆ ಹೋಗುತ್ತಾರೆ.
2004ರಲ್ಲಿ ಚಿಯಾಂಗ್ ಮಾಯ್ ಟೆಕ್ನಾಲಜಿ ಶಾಲೆಯಲ್ಲಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಥೋಯ್ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿತು. ಆ ಶಾಲೆಯಲ್ಲಿನ 1200 ವಿದ್ಯಾರ್ಥಿಗಳಲ್ಲಿ 200 ಕಥೋಯ್ ವಿದ್ಯಾರ್ಥಿಗಳಿದ್ದರಂತೆ!


ಮಂಗಳವಾರ, ಡಿಸೆಂಬರ್ 08, 2009

ಅಂತರಗಂಗೆಯಲ್ಲಿನ ನನ್ನ ಬರಹಗಳಿಗೆ ನೇರ ಲಿಂಕ್

ಅಂತರಗಂಗೆಯಲ್ಲಿನ ನನ್ನ ಬರಹಗಳಿಗೆ ನೇರ ತಲುಪಲು ಶಾರ್ಟ್‌ಕಟ್‌ಗಳು

ಕತೆ:

1. ವಿಚಾರಣೆ

2. ಬದುಕೆಂದರೆ...

3. ಡೆತ್ ಸರ್ಟಿಫಿಕೇಟ್

4. ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

5. ಬಿ.ಡಿ.ಎ. ಲೈಔಟ್ ಮತ್ತು ಚಿಕ್ಕತಾಯಮ್ಮನ ಜಮೀನು

7. ಧರ್ಮೋ ರಕ್ಷತಿ ರಕ್ಷಿತಃ

ಕಾವ್ಯ:

1. ಎರಡು ರಷಿಯನ್ ಪದ್ಯಗಳು

2. ಪ್ರೀತಿ ಪದ್ಯಗಳು

3. ಸರ್ಕಸ್ಸಿನ ಹುಡುಗಿ

ವ್ಯಂಗ್ಯಚಿತ್ರಗಳು:

1. ವ್ಯಂಗ್ಯಚಿತ್ರಗಳು

ಪ್ರವಾಸ:

1. ಅನುಭಾವದ ಅದ್ಭುತ ನೀಲಜಗತ್ತು- ಮುತ್ತೋಡಿ

2. ಹುಲಿಯ ಜಾಡು ಅರಸಿ

3. ಹಂಪಿಗೆ ಇಪ್ಪತ್ತೊಂದು ವರ್ಷಗಳನಂತರ

4. ನನ್ನ ಚೀನಾದ ಭೇಟಿ- ಕೆಲವು ಫೋಟೋಗಳು

ಪರಿಸರ:

1. ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

2. ನಿಸರ್ಗ ಪ್ರೇಮಿ, ಕಲಾವಿದ ಡಾ.ಎಸ್.ವಿ.ನರಸಿಂಹನ್

3. ಪರಿಸರ ಸಂರಕ್ಷಣೆ ಸಂದೇಶಗಳು

ಇತರೆ:

1. ಹಿಂದೂ ದೇವರು, ಮುಸಲ್ಮಾನ ದೇವರು

2. ಅಮೆರಿಕ-ಭಾರತ ಪರಮಾಣು ಒಪ್ಪಂದ: ಚೋಮ್‌ಸ್ಕಿ ನಿಲುವು

3. ಹಾರುವ ಮನಸ್ಸುಗಳು ಮತ್ತು ಲೋಹದ ಪಕ್ಷಿಗಳು

4. ನನ್ನ ಪುಸ್ತಕಗಳ ಬಿಡುಗಡೆ

5. ಟ್ರಾನ್ಸ್‌ಲೇಷನ್ ಟೆರರಿಸಂ 

6. ಶಾಲಭಂಜಿಕೆ- ಲೇಖಕ ಓದುಗ ಸಂವಾದ

7. ನನ್ನ ಇತ್ತೀಚಿನ ಪುಸ್ತಕ- ಮಾಂಟೊ ಕತೆಗಳು

ಬುಧವಾರ, ಡಿಸೆಂಬರ್ 02, 2009

ನನ್ನ ಇತ್ತೀಚಿನ ಪುಸ್ತಕ

ನನ್ನ ಇತ್ತೀಚಿನ ಪುಸ್ತಕ:


ಸಾದತ್ ಹಸನ್ ಮಾಂಟೊ (11.5.1972-18.1.1955) ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ಭಾರತ, ಪಾಕಿಸ್ತಾನ ವಿಭಜನೆಯಾದಾಗ, ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ ಎಂದಿದ್ದಾನೆ. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ 43 ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ 250ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ. ಈ ಮಹಾನ್ ಕತೆಗಾರನ ಆಯ್ದ ಕತೆಗಳ ಅನುವಾದ:

ಮಾಂಟೊ ಕತೆಗಳು

ಅನುವಾದ: ಜೆ.ಬಾಲಕೃಷ್ಣ

ಪ್ರಕಾಶಕರು: ಲಂಕೇಶ್ ಪ್ರಕಾಶನ, ಬೆಂಗಳೂರು

ಪುಟಗಳು: 121-00

ಬೆಲೆ:ರೂ: 80-00


ಬುಧವಾರ, ನವೆಂಬರ್ 04, 2009

ಕತೆ: ಧರ್ಮೋ ರಕ್ಷತಿ ರಕ್ಷಿತಃ

ನವೆಂಬರ್ ತಿಂಗಳ 'ಸಂವಾದ'ದಲ್ಲಿ ಪ್ರಕಟವಾದ ನನ್ನ ಕತೆ:

ಟ್ರೈನು ಚಲಿಸುತ್ತಲೇ ಇತ್ತು. ಸಂಜಯನಿಗೆ ನಿದ್ರೆಯೇ ಬರುತ್ತಿರಲಿಲ್ಲ. ಮಗ್ಗಲು ಹೊರಳಿಸಿ ಸಾಕಾಗಿತ್ತು, ಮೈ ಕೈಯೆಲ್ಲಾ ನೋಯುತ್ತಿತ್ತು. ರೊಂಯ್‌ಗುಟ್ಟುವ ಟ್ರೈನಿನ ಫ್ಯಾನುಗಳ ಸದ್ದು. ನಿದ್ದೆ ಹೋಗುವ ಮನಸ್ಥಿತಿಯಲ್ಲಿ ಅವನಿರಲೇ ಇಲ್ಲ. ಎದುರಿನ ಬರ್ತ್‌ನಲ್ಲಿ ಮಲಗಿದ್ದ ಮಗ ಗೌತಮನೆಡೆಗೆ ನೋಡಿದ. ಕಣ್ಣು ಮುಚ್ಚಿದ್ದ. ನಿದ್ರೆ ಮಾಡುತ್ತಿದ್ದನೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಹೊಟ್ಟೆಯಲ್ಲಿ ಕಿವುಚಿದಂತೆ ವಿಪರೀತ ಸಂಕಟವಾಗತೊಡಗಿತು. ಬೆಳಿಗ್ಗೆ ಮಗನನ್ನು ಭೇಟಿಯಾದಾಗಲಿಂದಲೂ ಹಾಗೆಯೇ ಆಗುತ್ತಿದೆ. ನೋಡ ನೋಡುತ್ತಲೇ ಎಷ್ಟೊಂದು ಬೆಳೆದುಬಿಟ್ಟಿದ್ದಾನೆ! ಸಮಯ ಎಷ್ಟು ಬೇಗ ಹೋಗುತ್ತದೆ. ನಿನ್ನೆ ಮೊನ್ನೆಯವರೆಗೆ ಅವನನ್ನು ಎತ್ತಿ ಆಡಿಸುತ್ತಿದ್ದೆ! ಈಗ ಅವನು ಸ್ವತಂತ್ರ, ಅವನದೇ ಆಲೋಚನೆಗಳು! ಅವನನ್ನು ಬೆಳೆಸುವಲ್ಲಿ ಎಲ್ಲಿ ತಪ್ಪು ಮಾಡಿದೆವು? ಹೆಂಡತಿ ಸುಶೀಲಾಳ ನೆನಪಾಯಿತು. ಈಗ ಅವಳು ಏನು ಮಾಡುತ್ತಿರಬಹುದು? ತನ್ನ ಮಗ ಮಾಡಹೊರಟಿರುವ ಕಾರ್ಯದ ಬಗ್ಗೆ ಅವಳಿಗೆ ಸ್ವಲ್ಪವೂ ತಿಳಿದಿರಲಿಕ್ಕಿಲ್ಲ. ಅವನ ಆಲೋಚನೆಗಳು ಏನೇ ಇರಬಹುದು, ಆದರೆ ಅವನಲ್ಲಿನ ಮುಗ್ಧತೆ ಇನ್ನೂ ಮಾಸಿಲ್ಲ. ಆ ಮುಗ್ಧತೆಯೇ ಅವನಿಗೆ ಮುಳುವಾಗಿದೆಯೆ? ಅವನ ತಲೆ ಕೆಡಿಸಿದವರು ಯಾರು? ನನ್ನ ಆದರ್ಶಗಳೇನಾಗಿತ್ತು, ಈಗ ಅವನ ವಿಚಾರಗಳು ಯಾವ ದಿಕ್ಕಿನಲ್ಲಿ ಹೋಗುತ್ತಿವೆ? ಅವರು ನಿಯಂತ್ರಿಸಲಾಗದಂತೆ ಕಣ್ಣೀರ ಕೋಡಿ ಹರಿಯುತ್ತಿತ್ತು.
ಎರಡು ದಿನಗಳ ಹಿಂದೆ ಆಫೀಸಿನಲ್ಲಿ ಕೂತಿದ್ದಾಗ ಮಗ ಗೌತಮ ಫೋನ್ ಮಾಡಿದ್ದ, `ಅಪ್ಪ, ನಿಮ್ಮ ಜೊತೆಯಲ್ಲಿ ಮಾತನಾಡಬೇಕು. ದಯವಿಟ್ಟು ಇಲ್ಲಿಗೆ ಬನ್ನಿ. ಆದರೆ ಅಮ್ಮನಿಗೆ ಏನೂ ಹೇಳಬೇಡಿ. ಸುಮ್ಮನೆ ನನ್ನನ್ನು ನೋಡಿ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಬನ್ನಿ. ಇದು ತುರ್ತಾದ ವಿಷಯ. ಇಂದು ರಾತ್ರಿಯೇ ಹೊರಟು ಬನ್ನಿ'. ಸಂಜಯನಿಗೆ ಅಚ್ಚರಿಯಾಗಿತ್ತು ಹಾಗೇ ಗಾಭರಿಯೂ ಆಗಿತ್ತು. ಮಗ ಹಾಸ್ಟೆಲಿಗೆ ಸೇರಿ ಇನ್ನೇನು ನಾಲ್ಕು ವರ್ಷಗಳಾಗುತ್ತವೆ. ಇನ್ನು ಕೆಲವೇ ತಿಂಗಳಲ್ಲಿ ಅವನ ಬಿ.ಇ. ಸಹ ಮುಗಿಯುತ್ತದೆ. ಇಷ್ಟೂ ವರ್ಷಗಳಲ್ಲಿ ಅವನು ಹೀಗೆಂದೂ ಫೋನ್ ಮಾಡಿದವನಲ್ಲ. `ಅಲ್ಲ, ಏನಾದರೂ ಗಲಾಟೆ, ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿಲ್ಲ ತಾನೆ?' ಕೊಂಚ ಗಾಭರಿಯಿಂದಲೇ ಕೇಳಿದ್ದರು. `ಇಲ್ಲ, ಅಂಥದ್ದೇನೂ ಆಗಿಲ್ಲ. ನೀವು ಸುಮ್ಮನೆ ಬನ್ನಿ. ನಿಮ್ಮ ಜೊತೆ ಒಂದರ್ಧ ಗಂಟೆ ಮಾತನಾಡಬೇಕು' ಎಂದಿದ್ದ. `ನೀನೇ ಬಂದಿದ್ದರೆ, ಇಲ್ಲೇ ಮಾತನಾಡಬಹುದಿತ್ತು. ನಿನ್ನ ಅಮ್ಮ ಸಹ ನಿನ್ನನ್ನು ನೋಡಿ ಬಹಳ ದಿನಗಳಾಯಿತು ಎನ್ನುತ್ತಿದ್ದಳು...' ಅವರು ಮಾತು ಮುಗಿಸುವ ಮುನ್ನವೇ ಗೌತಮ, `ಇಲ್ಲ ಇಲ್ಲ. ಅದು ಅಮ್ಮನ ಎದುರು ಮಾತನಾಡುವ ವಿಷಯವಲ್ಲ. ಅದಕ್ಕೇ ಇಲ್ಲಿಗೆ ನಿಮ್ಮನ್ನು ಬರಲು ಹೇಳಿದ್ದು' ಎಂದ. `ಅಲ್ಲಪ್ಪ, ಯಾರನ್ನಾದರೂ ಹುಡುಗಿಯನ್ನು ಲವ್ ಗಿವ್ ಮಾಡುತ್ತಿದ್ದೀಯೇನು...?' ಮತ್ತೆ ಮಾತು ತುಂಡರಿಸಿ, `ಇಲ್ಲಪ್ಪ, ಅಂಥದ್ದೇನೂ ಇಲ್ಲ. ಅದಕ್ಕಿಂತ ಮುಖ್ಯ ವಿಚಾರ, ನಮ್ಮ ದೇಶದ ವಿಚಾರ, ನಮ್ಮ ಧರ್ಮದ ವಿಚಾರ. ನೀವು ಬನ್ನಿ. ಇಲ್ಲಿಗೆ ಬಂದಾಗ ಎಲ್ಲಾ ಹೇಳುತ್ತೇನೆ' ಮಾತು ಮುಂದುವರಿಸದೆ ಗೌತಮ ಫೋನ್ ಇಟ್ಟು ಬಿಟ್ಟಿದ್ದ. ಸಂಜಯನಿಗೆ ಕುತೂಹಲ ಇನ್ನೂ ಹೆಚ್ಚಾಗಿತ್ತು. `ಇನ್ನೂ ಚಿಕ್ಕ ಹುಡುಗ. ಆಗಲೇ ದೇಶ-ಧರ್ಮದ ವಿಚಾರ ಎನ್ನುತ್ತಾನೆ. ಇಲ್ಲಿಗೇ ಬನ್ನಿ ಮಾತನಾಡೋಣ ಎನ್ನುತ್ತಾನೆ. ವಿಷಯ ಏನಿರಬಹುದು?' ಎಂದು ಯೋಚಿಸುತ್ತ ಸುಶೀಲಾಳಿಗೆ ಹೇಳಿ ಅಂದು ರಾತ್ರಿಯೇ ಬಸ್ಸು ಹಿಡಿದು ಹೊರಟಿದ್ದರು.
ಹುಬ್ಬಳ್ಳಿ ತಲುಪಿದಾಗ ಆಗಷ್ಟೇ ಬೆಳಕು ಮೂಡಿತ್ತು. ಆಟೋ ಹಿಡಿದು ಗೌತಮನ ಹಾಸ್ಟೆಲು ತಲುಪಿದರು. ಹೊರಗಡೆ ಗೇಟಲ್ಲೇ ನಿಂತು ಫೋನ್ ಮಾಡಿದರು. ಒಂದೆರಡು ನಿಮಿಷದಲ್ಲೇ ಗೌತಮ ಹೊರಬಂದು ಅವರನ್ನು ಗೆಸ್ಟ್ ರೂಮಿಗೆ ಕರೆದೊಯ್ದ. ಆಗ ತಾನೇ ಸ್ನಾನ ಮಾಡಿ ಬಿಳಿಯ ಶುಭ್ರ ಕುರ್ತಾ ಪೈಜಾಮ ಧರಿಸಿದ್ದ ಮಗನನ್ನು ನೋಡಿ ಸಂಜಯನಿಗೆ ಅಚ್ಚರಿಯಾಯ್ತು. ಅವನೆಂದೂ ಆ ಧಿರಿಸು ತೊಟ್ಟವನಲ್ಲ. ಅದಕ್ಕಿಂತ ಹೆಚ್ಚು ಅಚ್ಚರಿ ಹಾಗೂ ಆಘಾತವಾಗಿದ್ದು ಅವನ ಹಣೆಯಲ್ಲಿನ ಕುಂಕುಮ ಕಂಡು. ಸಂಜಯ ಏನೂ ಹೇಳಲಿಲ್ಲ. ಅವನಿಗೆ ಎಲ್ಲ ವಿಚಿತ್ರವೆನ್ನಿಸುತ್ತಿತ್ತು. ಅವನಿಗರಿವಾಗದಂತೆ ಕೊಂಚ ಹೆದರಿಕೆಯೂ ಆಗತೊಡಗಿತು. ಗೆಸ್ಟ್ ರೂಮಿನಲ್ಲಿ ಸಂಜಯ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ ಮಗನ ಎದುರಿಗೆ ಕೂತ.
`ಏನಿದೆಲ್ಲಾ ನಿನ್ನ ವಿಚಿತ್ರ ವೇಷ, ಹಣೆಯಲ್ಲಿ ಕುಂಕುಮ? ಇದ್ದಕ್ಕಿದ್ದಂತೆ ದೈವ ಭಕ್ತಿ ಹೆಚ್ಚಾದಂತಿದೆ?' ಮಗನನ್ನು ಕೇಳಿದರು. ಅಪ್ಪ ಹಿಡಿದು ತಂದಿದ್ದ ನ್ಯೂಸ್ ಪೇಪರನ್ನು ತಿರುವಿಹಾಕುತ್ತಿದ್ದ ಗೌತಮ ನಗುತ್ತ, `ಏನಿಲ್ಲ. ನಮ್ಮ ಮೂಲ ಗುರುತನ್ನು ಹುಡುಕಿಕೊಳ್ಳುವ ಪ್ರಯತ್ನವಷ್ಟೆ' ಎಂದ. ಸಂಜಯನಿಗೆ ಅವನ ಮಾತಿನ ಅರ್ಥ ತಿಳಿಯಲಿಲ್ಲ. `ಇಲ್ಲ ನಿನ್ನ ಮಾತು ನನಗರ್ಥವಾಗುತ್ತಿಲ್ಲ. ಸ್ವಲ್ಪ ವಿವರಿಸಿ ಹೇಳು' ಕೇಳಿದರು. ಅವನು ಉತ್ತರ ಹೇಳಲಿಲ್ಲ. ತಲೆಬಗ್ಗಿಸಿ ನ್ಯೂಸ್ ಪೇಪರ್ ನೋಡುತ್ತಲೇ ಇದ್ದ.
`ಇಲ್ಲಿ ನೋಡಿ, ಮತ್ತೆ ಸೂರತ್‌ನಲ್ಲಿ ಎಷ್ಟೊಂದು ಬಾಂಬ್‌ಗಳನಿಟ್ಟಿದ್ದಾರೆ! ದುಷ್ಟರು! ದೇವರ ದಯದಿಂದ ಯಾವುದೂ ಸಿಡಿದಿಲ್ಲ' ಗೌತಮ ಸಿಟ್ಟಿನಿಂದ ಹೇಳಿದ. ಅವನ ಮುಖ ಕೆಂಪಾಗಿತ್ತು. ಸಂಜಯನಿಗೆ ಮಗನ ನಡತೆ ಮಾತುಗಳಿಂದ ಒಂದು ರೀತಿಯ ಗಾಭರಿ, ಹೆದರಿಕೆಯಾಗಿತ್ತು.
`ಹೌದು, ಬಾಂಬುಗಳನ್ನು ಇಡುವವರೆಲ್ಲಾ ದುಷ್ಟರು, ಕ್ರೂರಿಗಳು. ಅದರಲ್ಲಿ ಎರಡು ಮಾತಿಲ್ಲ' ಎಂದಷ್ಟೇ ಹೇಳಿ ಮಗನನ್ನೇ ನೋಡುತ್ತಿದ್ದರು. ಅವನು ತಲೆ ಬಗ್ಗಿಸಿಯೇ ಇದ್ದ. ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಕೊನೆಗೆ ತಲೆ ಎತ್ತಿ,
`ಅಪ್ಪ, ನಿಮಗೊಂದು ವಿಷಯ ಹೇಳಬೇಕು. ಅದನ್ನು ಯಾರಿಗೂ ಹೇಳುವುದಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳಿ' ಎಂದು ಹೇಳಿದ. ಅವನು ತಲೆ ಎತ್ತಿ ಹೇಳುತ್ತಿದ್ದರೂ ಅವನಿಗೆ ಅಪ್ಪನ ಕಣ್ಣುಗಳನ್ನು ನೇರ ನೋಡಲಾಗುತ್ತಿರಲಿಲ್ಲ.
`ನಿನಗೇ ಗೊತ್ತಲ್ಲ. ನನಗೆ ಎಲ್ಲರ ಕಲ್ಪನೆಯ ದೇವರ ಬಗ್ಗೆ ನಂಬಿಕೆ ಇಲ್ಲವೆಂದು?' ಎಂದರು.
`ಇಲ್ಲ, ನೀವು ಪ್ರಮಾಣ ಮಾಡಲೇಬೇಕು' ಎಂದು ಹೇಳಿ ಅಪ್ಪನ ಕೈ ಹಿಡಿದ.
`ನನ್ನ ಪ್ರಮಾಣದ ಸ್ಥಿರತೆ ನೀನು ಹೇಳುವ ವಿಷಯವನ್ನು ಅವಲಂಬಿಸಿರುತ್ತದೆ. ನಾನು ನನ್ನ ಪ್ರಮಾಣವನ್ನೂ ಮುರಿಯಬಹುದು...'
`ಇಲ್ಲ. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ನೀವು ನನಗೆ ಚಿಕ್ಕಂದಿನಿಂದಲೂ ನನಗೆ ಹೇಳುತ್ತಿದ್ದಿರಿ. ನಾನು ಏನೇ ಮಾಡಿದರೂ ನಿಮಗೆ ತಿಳಿಸಿ ಹೇಳಿಯೇ ಮಾಡಬೇಕೆಂದು. ನಾನು ನಿಮಗೆ ತಿಳಿಸಿ ಹೇಳದೆ ಏನನ್ನೂ ಮಾಡಿಲ್ಲ. ನನ್ನ ವಿಚಾರಗಳನ್ನು ತಿಳಿದ ನಂತರ ನೀವೂ ಸಹ ನನ್ನ ಕಾರ್ಯಕ್ಕೆ ಸಮ್ಮತಿಸುತ್ತೀರಿ. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ದಯವಿಟ್ಟು ಪ್ರಮಾಣ ಮಾಡಿ'. ಗೌತಮ ಹಿಡಿದ ಕೈ ಬಿಡಲಿಲ್ಲ. ಸಂಜಯ ತನ್ನ ಕೈ ಹಿಡಿದಿದ್ದ ಮಗನ ಕೈಯೆಡೆಗೆ ನೋಡಿದ. ಮಗನ ಕೈ ಎಷ್ಟು ಬೆಳೆದು ಬಿಟ್ಟಿದೆ. ಇದೇ ಕೈಗಳಲ್ಲವೆ ಅವನು ಹಸುಗೂಸಾಗಿದ್ದಾಗ ತನ್ನ ಒಂದು ಬೆರಳನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದುದು.
ಸಂಜಯ ಏನೊಂದೂ ಹೇಳಲಿಲ್ಲ. ಸುಮ್ಮನಿದ್ದ. ಗೌತಮ ಮತ್ತೆ, `ಅಪ್ಪ, ಪ್ಲೀಸ್...' ಎಂದ.
`ಅಪ್ಪ, ಪ್ಲೀಸ್ ಚಾಕೊಲೇಟ್ ಕೊಡಿಸು' ಎನ್ನುವಂತಿತ್ತು ಅವನ ಧ್ವನಿ.
`ನನ್ನ ಮೇಲೆ ನಂಬಿಕೆಯಿದ್ದರೆ ಹೇಳು. ಇಲ್ಲದಿದ್ದರೆ ಬೇಡ. ನಾನು ಯಾವುದೇ ಪ್ರಮಾಣ ಮಾಡುವುದಿಲ್ಲ. ನನಗೆ ಅವುಗಳಲ್ಲೆಲ್ಲಾ ನಂಬಿಕೆಯಿಲ್ಲ' ಮಗನ ಕೈಯಿಂದ ಕೈ ಬಿಡಿಸಿಕೊಂಡರು.
`ಆಯ್ತು ಹೇಳುತ್ತೇನೆ. ಆದರೆ ದಯವಿಟ್ಟು ಯಾರಲ್ಲಿಯೂ ಹೇಳಬೇಡಿ. ಕಳೆದ ಒಂದು ತಿಂಗಳಿಂದ ನಡೆದ ಘಟನೆಗಳನ್ನು ನೋಡುತ್ತಿದ್ದೀರಲ್ಲ. ಬೆಂಗಳೂರಲ್ಲಿ, ಅಹ್ಮದಾಬಾದ್‌ನಲ್ಲಿ ಬಾಂಬ್‌ಗಳ ಸ್ಫೋಟ. ಇದನ್ನೆಲ್ಲಾ ಮಾಡುತ್ತಿರುವವರು ಯಾರು?' ಗೌತಮನ ಪ್ರಶ್ನೆಗೆ ಏನು ಹೇಳಬೇಕೆಂದು ಸಂಜಯನಿಗೆ ತೋಚಲಿಲ್ಲ. ಈ ಪ್ರಶ್ನೆಗಳನ್ನು ಕೇಳುತ್ತಿರುವವನು ತಮ್ಮ ಮಗನೇ? ಎಂದು ಅಚ್ಚರಿಯಾಗತೊಡಗಿತ್ತು ಅವನಿಗೆ.
ಮತ್ತೆ ಗೌತಮ ಮುಂದುವರಿಸಿದ, `ಇದೆಲ್ಲಾ ಆ ಮುಸಲ್ಮಾನರದೇ ಕೆಲಸ'. ಅವನ ಮಾತಿನಿಂದ ತನ್ನ ನೆತ್ತಿಯ ಮೇಲೆ ಬರಸಿಡಿಲು ಬಡಿದಂತಾಯ್ತು ಸಂಜಯನಿಗೆ. ಕೈಕಾಲು ನಡುಗತೊಡಗಿತು, ಬಾಯಿ ಒಣಗತೊಡಗಿತು. ಅಲ್ಲಿಯೇ ಇದ್ದ ಜಗ್‌ನಿಂದ ಗ್ಲಾಸಿಗೆ ನೀರು ಬಗ್ಗಿಸಿಕೊಂಡರು. ಅವರ ಕೈ ನಡುಕದಿಂದ ಒಂದಷ್ಟು ನೀರು ಚೆಲ್ಲಿತು. ಮುಂದಕ್ಕೆ ಬಾಗಿದ ಗೌತಮ ಅವರ ಗ್ಲಾಸಿಗೆ ನೀರು ಸರಿಯಾಗಿ ಬಗ್ಗಿಸಿ ಅವರಿಗೆ ನೀಡಿದ. ನೀರು ಕುಡಿದ ಸಂಜಯ ಕುರ್ಚಿಯಿಂದೆದ್ದು ಹಾಸಿಗೆಯ ಮೇಲೆ ಕೂತು ಗೋಡೆಗೊರಗಿ ಕಣ್ಣು ಮುಚ್ಚಿದ. ಎದೆಯ ಬಡಿತ ತೀವ್ರವಾಗಿತ್ತು. ಎದೆಯ ಮೇಲೆ ಎಡಗೈ ಇಟ್ಟುಕೊಂಡ. ಕೂಡಲೇ ಎದ್ದ ಗೌತಮ, `ಅಪ್ಪ, ಏನಾಯಿತು?' ಎಂದ.
`ಇಲ್ಲ, ಏನಾಗಿಲ್ಲ. ನೀನು ಹೇಳುವುದು ಮುಂದುವರಿಸು...' ಎಂದರು ಕಣ್ಣು ತೆರೆಯದೆ.
ಗೌತಮ ಮುಂದುವರಿಸಿದ. `ಮುಸಲ್ಮಾನರು ಹದ್ದುಮೀರಿ ಹೋಗಿದ್ದಾರೆ. ಭಾರತ ಮಾತ್ರವಲ್ಲ, ಇಡೀ ಜಗತ್ತನ್ನೇ ಹಾಳುಮಾಡುತ್ತಿದ್ದಾರೆ. ಭಾರತದ ಮೂಲ ನಿವಾಸಿಗಳು ನಾವು ಹಿಂದೂಗಳು. ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹಿಂದೂಗಳನ್ನು ಕೊಚ್ಚಿ ಕೊಲ್ಲುತ್ತಿದ್ದಾರೆ...'
ಸಂಜಯನ ಮನಸ್ಸು ಸುಮಾರು ಹನ್ನೆರಡು-ಹದಿಮೂರು ವರ್ಷಗಳ ಹಿಂದಕ್ಕೆ ಹೋಯಿತು. ಆಗ ಗೌತಮನಿಗೆ ಎಂಟು ವರ್ಷ. ಬಹುಶಃ ಆಗ ಅವನು ಮೂರನೇ ಕ್ಲಾಸಿನಲ್ಲಿ ಇದ್ದ ಎನ್ನಿಸುತ್ತದೆ. ಒಂದು ದಿನ ಶಾಲೆಯಿಂದ ಬಂದವನೆ, `ಅಪ್ಪ, ನಾವು ಹಿಂದೂಗಳಾ, ಮುಸಲ್ಮಾನರಾ?' ಎಂದು ಕೇಳಿದ. ಸಂಜಯ ಸುಶೀಲಾ ಇಬ್ಬರೂ ಆ ಪ್ರಶ್ನೆಯಿಂದ ಗಾಭರಿಗೊಂಡರು, ಇಬ್ಬರೂ ಮುಖ ಮುಖ ನೋಡಿಕೊಂಡರು. ಅವನಿಗೇನಾದರೂ ವಿಷಯ ತಿಳಿದುಹೋಗಿದೆಯಾ? ಯಾರಾದರೂ ಅವನಿಗೆ ವಿಷಯ ತಿಳಿಸಿಬಿಟ್ಟರಾ? `ಯಾಕೀಗ ಆ ಪ್ರಶ್ನೆ?' ಕೊಂಚ ಗಡುಸಾಗಿಯೇ ಸಂಜಯ ಕೇಳಿದ್ದ. ಧ್ವನಿಯಲ್ಲಿನ ಗಡಸುತನದಿಂದಾಗಿ ಬಾಲಕ ಗೌತಮನೂ ಬೆದರಿದ್ದ. `ಯಾಕಿಲ್ಲಾ, ನಮ್ಮ ಟೀಚರ್ ಕೇಳಿದರು' ಎಂದ. ಸಂಜಯನಿಗೆ ನೆನಪಾಯಿತು; ಶಾಲೆಯ ಅರ್ಜಿಯಲ್ಲಿ `ಧರ್ಮ/ಜಾತಿ' ಎಂದಿರುವೆಡೆ `ಭಾರತೀಯರು' ಎಂದು ಮಾತ್ರ ಬರೆದಿದ್ದ. ಆದ್ದರಿಂದಲೇ ಟೀಚರ್ ಆ ಪ್ರಶ್ನೆ ಕೇಳಿರಬಹುದು ಎಂದುಕೊಂಡ. ಈಗ ಬೆಳೆದು ನಿಂತ ಗೌತಮ, `ನಾವು ಹಿಂದೂಗಳು' ಎನ್ನುತ್ತಿದ್ದಾನೆ.
`ಅಪ್ಪ, ನಾವಿದನ್ನೆಲ್ಲಾ ಕೊನೆಗಾಣಿಸಬೇಕು. ಭರತ ರಾಷ್ಟ್ರ ನಮ್ಮದು. ಭಾರತದಲ್ಲಿರುವ ಪರಕೀಯರು ಯಾರೇ ಆದರೂ ಅವರು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. ಇಲ್ಲದಿದ್ದಲ್ಲಿ ಅವರು ಪಾಕಿಸ್ತಾನಕ್ಕೋ, ಮತ್ತೊಂದು ದೇಶಕ್ಕೋ ತೊಲಗಲಿ. ನಾವಿವರನ್ನು ಹಾಗೆಯೇ ಬಿಟ್ಟಲ್ಲಿ ಅವರೇ ನಮ್ಮನ್ನು ಆಳಲು ಪ್ರಾರಂಭಿಸುತ್ತಾರೆ. ಇಡೀ ಹಿಂದೂ ಧರ್ಮವನ್ನೇ ನಾಶಮಾಡಿಬಿಡುತ್ತಾರೆ...' ಗೌತಮ ಹೇಳುತ್ತಲೇ ಇದ್ದ.
ಸಂಜಯ ಮೊಣಕಾಲುಗಳನ್ನು ಎದೆಗಾನಿಸಿ ಅದಕ್ಕೆ ತಲೆ ಆನಿಸಿ ಎರಡೂ ಕೈಗಳನ್ನು ಮಡಚಿ ಮುಚ್ಚಿಕೊಂಡಿದ್ದ. ಅವನ ಕಣ್ಣಿಂದ ನೀರು ಸುರಿಯುತ್ತಿದ್ದುದು ಮಗ ಗೌತಮನಿಗೆ ತಿಳಿಯಲಿಲ್ಲ.
`ಅಪ್ಪ, ನಾನೀಗ ನಿಮ್ಮೊಂದಿಗೆ ಮಾತನಾಡಲು ಕರೆದಿದ್ದು ಒಂದು ಮುಖ್ಯ ವಿಷಯ ತಿಳಿಸಲು. ನಮ್ಮದೊಂದು ಭೂಗತ ಸಂಘಟನೆಯೊಂದಿದೆ. ನಾವು ದೇಶದಾದ್ಯಂತ ಸಂಚರಿಸಿ ನಮ್ಮ ಶಾಖೆಗಳೊಂದಿಗೆ ನಮ್ಮ ಇಡೀ ಜಾಲವನ್ನು ದೇಶವೆಲ್ಲಾ ಪ್ರಸರಿಸಬೇಕೆಂಬ ಸಂಕಲ್ಪ ತೊಟ್ಟಿದ್ದೇವೆ. ನಮ್ಮ ಭಾರತಮಾತೆಯನ್ನು ಉಳಿಸಿಕೊಳ್ಳಬೇಕಿದೆ. ಈಗ ಆ ಕೆಲಸ ಮಾಡದಿದ್ದಲ್ಲಿ ತುಂಬಾ ತಡವಾಗಿಬಿಡುತ್ತದೆ. ಅವಶ್ಯಕವಿದ್ದಲ್ಲಿ ನಾವೂ ಬಾಂಬುಗಳನ್ನು ಇಡುತ್ತೇವೆ. ನಾವೂ ಒಂದು ಆತ್ಮಹತ್ಯಾ ದಳವೊಂದನ್ನು ಸಿದ್ಧಪಡಿಸುತ್ತಿದ್ದೇವೆ, ಅವರನ್ನು ಕೊಚ್ಚಿ ಕೊಂದುಹಾಕುತ್ತೇವೆ. ತಾಯಿಯ ರಕ್ಷಣೆಗಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ನಾನು ಹೊರಡುತ್ತಿದ್ದೇನೆ. ಮತ್ತೆಂದು ವಾಪಸ್ಸು ಬರುತ್ತೇನೋ ಗೊತ್ತಿಲ್ಲ. ದೇಶವೇ ಹಾಳಾಗುತ್ತಿರುವಾಗ ಶಿಕ್ಷಣ ಏಕೆ ಬೇಕು? ನಾನು ಕಾಲೇಜು ಬಿಟ್ಟು ಹೊರಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಆಶೀರ್ವದಿಸಿ'
ಗೌತಮ ಎದ್ದು ಬಂದು ಅಪ್ಪನ ಕೈ ಹಿಡಿದ. ತಲೆಬಗ್ಗಿಸಿದ್ದ ಸಂಜಯ ತಲೆ ಎತ್ತಲಿಲ್ಲ. ಅವನು ಅಳುವುದು ಇನ್ನೂ ಬಾಕಿ ಇತ್ತು. ಗೌತಮ ಅಪ್ಪನ ತಲೆ ಬಲವಂತವಾಗಿ ಮೇಲೆತ್ತಿದ. ಸಂಜಯ ಅಳುತ್ತಿದುದನ್ನು ನೋಡಿ, `ಅಪ್ಪ, ನಾನು ಹೋಗುತ್ತೇನೆಂದು ನಿಮಗೆ ದುಃಖವೆ? ಅಳಬೇಡಿ. ನನ್ನ ಘನ ಕಾರ್ಯದ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ' ಎಂದ ಅಪ್ಪನನ್ನು ತಬ್ಬಿಕೊಂಡು.
ಸ್ವಲ್ಪ ಹೊತ್ತಾದ ಮೇಲೆ ಏನೋ ನಿರ್ಧರಿಸಿದವನಂತೆ ಸಂಜಯ ಎದ್ದುನಿಂತ. ಬಾತ್‌ರೂಮಿಗೆ ಹೋಗಿ ಮುಖತೊಳೆದುಕೊಂಡು ಬಂದ. ಮತ್ತೆ ಗೌತಮನ ಎದುರಿಗೆ ಕೂತು, ಗೌತಮ, ನಿನ್ನ ಮಾತುಗಳನ್ನೆಲ್ಲ ಕೇಳಿದೆ. ನಿನ್ನ ಮಾತಿನಲ್ಲಿ ಸತ್ಯಾಂಶವಿದೆ ಎನ್ನಿಸುತ್ತಿದೆ. ನನಗೂ ಭಾರತದಲ್ಲಿ, ಈ ಜಗತ್ತಿನಲ್ಲಿ ನಡೆಯುತ್ತಿರುವುದನ್ನೆಲ್ಲ ಕಂಡು ಮನಸ್ಸು ರೋಸಿಹೋಗಿತ್ತು. ನಿನಗಿಂತ ದೊಡ್ಡವನಾದ ನನಗೆ ನಿನ್ನ ಆಲೋಚನೆಗಳು ಮೊದಲೇಕೆ ಬರಲಿಲ್ಲ? ಇರಲಿ, ನಿನ್ನ ಮನಸ್ಸಿಗೆ ಈ ವಿಚಾರಗಳನ್ನು ತುಂಬಿದವರು ಪುಣ್ಯಾತ್ಮರು. ಅವರನ್ನು ನಾನು ಅಭಿನಂದಿಸಲೇಬೇಕು.' ಅಪ್ಪನ ಮಾತುಗಳನ್ನು ಕೇಳಿ ಗೌತಮನಿಗೆ ಅಚ್ಚರಿಯಾಯಿತು. ಅಪ್ಪ ನಿಜವಾಗಿ ಹೇಳುತ್ತಿದ್ದಾರೋ ಅಥವಾ ನಾಟಕವಾಡುತ್ತಿದ್ದಾರೊ?
`ನನಗನ್ನಿಸುತ್ತಿದೆ, ನಾನೂ ಸಹ ನಿನ್ನ ಕಾರ್ಯದಲ್ಲಿ ಭಾಗಿಯಾಗಬೇಕೆಂದು. ನಾನು ಜೀವನದಲ್ಲಿ ಅತ್ಯಂತ ಘೋರವಾದ ತಪ್ಪು ಮಾಡಿಬಿಟ್ಟಿದ್ದೇನೆ. ಆ ತಪ್ಪಿನಿಂದಾಗಿ ನಿನಗೂ ನಾನು ಮಹಾಪರಾಧ ಮಾಡಿದ್ದೇನೆ. ಆ ತಪ್ಪನ್ನು ಸರಿಪಡಿಸಲು ನಿನ್ನ ಸಹಕಾರ ನನಗೆ ಬೇಕೇ ಬೇಕು. ನೀನು ಹೇಳಿದ್ದು ನಿಜ. ಅವಶ್ಯಕವಿದ್ದಲ್ಲಿ ಅವರನ್ನು ಕೊಚ್ಚಿ ಕೊಲ್ಲಬೇಕೆಂದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಈ ಕೊಚ್ಚಿ ಕೊಲ್ಲುವ ಕೆಲಸ ನಾವಿಬ್ಬರೂ ಪ್ರಾರಂಭಿಸೋಣ. ಅದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕಿದೆ' ಸಂಜಯನ ಮಾತುಗಳಿಂದ ಗೌತಮ ಗಾಭರಿಗೊಂಡ.
`ಅಪ್ಪ, ಅದೇನು ನೀವು ಮಾಡಿರುವ ಅಂಥಾ ತಪ್ಪು', ಕುತೂಹಲ ತಡೆಯಲಾರದೆ ಗೌತಮ ಕೇಳಿದ.
`ಈಗ ಇಲ್ಲಿ ಅದನ್ನು ಹೇಳುವುದು ಬೇಡ. ಇದೇ ದಿನ ಮನೆಗೆ ಹೋಗೋಣ. ಅಲ್ಲಿಂದ ನೀನು ಸ್ವತಂತ್ರ. ನೀನು ಬೇಕಾದ್ದು ಮಾಡು. ನಿನ್ನ ಎಲ್ಲ ಕೆಲಸಕ್ಕೂ ನನ್ನ ಆಶೀರ್ವಾದವಿದೆ. ನನ್ನ ಮಗ ಧರ್ಮರಕ್ಷಕನೆಂಬ ಹೆಮ್ಮೆ ನನಗೂ ಇದೆ'. ಸಂಜಯ ಮಗನನ್ನು ಅಪ್ಪಿಕೊಂಡು ಬೆನ್ನು ತಟ್ಟಿದ. ಅಪ್ಪನ ಈ ಬದಲಾವಣೆಗಳನ್ನು ಕಂಡು ಗೌತಮ ಚಕಿತಗೊಂಡಿದ್ದ.
`ಆದರೆ, ಊರಿಗೆ ಈ ದಿನವೇ ಹೊರಡಬೇಕೇ...?' ಎಂದ.
`ಹೌದು, ಈ ದಿನವೇ ಹೊರಟರೆ ಮಾತ್ರ ನನ್ನ ತಪ್ಪನ್ನು ಸರಿಪಡಿಸಬಹುದು. ಈ ವಿಷಯ ನಾನು ಯಾರಲ್ಲಿಯೂ ಹೇಳುವುದಿಲ್ಲ. ನೀನೂ ಸಹ ಹೇಳಬೇಡ, ನಿನ್ನ ಸಂಘಟನೆಯವರಿಗೂ ಸಹ. ನಾನು ಈಗಲೇ ಹೊರಟು ಟ್ರೈನ್ ಟಿಕೆಟ್ ಬುಕ್ ಮಾಡಿಸಿ ಬರುತ್ತೇನೆ. ಬಸ್ ಪ್ರಯಾಣ ತುಂಬಾ ಆಯಾಸವಾಗುತ್ತದೆ. ಹಾಗೆಯೇ ನನ್ನ ಗೆಳೆಯರ ಮನೆಗೆ ಹೋಗಿ ಸಂಜೆ ನೇರವಾಗಿ ರೈಲ್ವೇ ಸ್ಟೇಶನ್‌ಗೆ ಬಂದುಬಿಡುತ್ತೇನೆ. ನೀನು ಅಲ್ಲಿಗೇ ಬಂದುಬಿಡು' ಎಂದು ಹೇಳಿ ತಂದಿದ್ದ ಕೈ ಚೀಲ ಹಿಡಿದು ನಿಂತ ಸಂಜಯ.
`ಅಪ್ಪ, ತಿಂಡಿ ತಿಂದು ಹೋಗೋಣ..' ಎಂದು ಗೌತಮ.
`ಬೇಡ, ಈಗ ಅದಕ್ಕೆಲ್ಲಾ ಸಮಯವಿಲ್ಲ. ನಾನು ಅಲ್ಲೇ ಎಲ್ಲಾದರೂ ತಿನ್ನುತ್ತೇನೆ. ಸಂಜೆ ಫೋನ್ ಮಾಡುತ್ತೇನೆ. ರೈಲ್ವೇ ಸ್ಟೇಶನ್‌ಗೆ ಬಂದುಬಿಡು' ಎನ್ನುತ್ತಾ ಹೊರಹೊರಟ. ತಕ್ಷಣ ಏನೋ ನೆನಪುಮಾಡಿಕೊಂಡು, `ಹ್ಹಾಂ ಮರೆತಿದ್ದೆ, ನಿನ್ನ ಅಮ್ಮ ನಿನಗೆ ಇಷ್ಟವಾದ ಕೊಬ್ಬರಿ ಮಿಠಾಯಿ ಕಳುಹಿಸಿದ್ದಾಳೆ. ತಗೋ' ಎಂದು ತಾವು ತಂದಿದ್ದ ಕೈಚೀಲದಿಂದ ಪೊಟ್ಟಣವೊಂದನ್ನು ತೆಗೆದುಕೊಟ್ಟರು. ಗೌತಮ ಅದನ್ನು ಅಲ್ಲೇ ಬಿಡಿಸಿ ಕೊಬ್ಬರಿ ಮಿಠಾಯಿಯ ಒಂದು ತುಂಡನ್ನು ಬಾಯಿಗೆ ಹಾಕಿಕೊಂಡ. ಅದನ್ನು ನೋಡುತ್ತಿದ್ದ ಸಂಜಯ, `ಆ ಸಿಹಿತಿಂಡಿಯಲ್ಲಿ ಯಾವುದಾದರೂ ಧರ್ಮದ ವಾಸನೆ ಬರುತ್ತಿದೆಯೆ?' ಎಂದು ಕೇಳಿದ. ಆ ಮಾತಿನ ಸೂಚ್ಯ ಅರ್ಥವಾಗದ ಗೌತಮ ನಗುತ್ತಾ, `ನನ್ನ ಅಮ್ಮನ ವಾಸನೆ ಬರುತ್ತಿದೆ' ಎಂದ.
ನೇರ ರೈಲ್ವೇ ಸ್ಟೇಶನ್‌ಗೆ ಹೋಗಿ ಟಿಕೆಟ್ ಬುಕ್ ಮಾಡಿಸಿ ಸಂಜಯ ಅಲ್ಲೇ ಇದ್ದ ಬೆಂಚಿನ ಮೇಲೆ ಕೂತ. ತನ್ನ ಮಗನಲ್ಲಿ ಆಗಿರುವ ಬದಲಾವಣೆಗಳು ಕಂಡು ಅವನಿಗೆ ತೀವ್ರ ಆಘಾತವಾಗಿತ್ತು. ತಾನು ಇಷ್ಟು ವರ್ಷ ಯಾವುದನ್ನು ಬಲವಾಗಿ ನಂಬಿ, ಆಚರಿಸಿ ಬದುಕುತ್ತಿದ್ದೆನೋ ಅದಕ್ಕೆಲ್ಲಾ ವಿರುದ್ಧವಾಗಿ ಮಗ ಬೆಳೆದಿದ್ದ. ಅವರಿಗೆ ಹೊರಗೆ ಎಲ್ಲಿಗೂ ಹೋಗುವುದು ಇಷ್ಟವಾಗಲಿಲ್ಲ. ಅಲ್ಲೇ ರೈಲ್ವೇ ಸ್ಟೇಶನ್ನಿನಲ್ಲೇ ಕೂತು ಹೋಗಿಬರುವವರನ್ನು ನೋಡುತ್ತಿದ್ದ. ಟ್ರೈನುಗಳು ಬರುತ್ತಿದ್ದವು, ಹೋಗುತ್ತಿದ್ದವು. ಒಂದು ಬೋಗಿಯೊಳಗೆ ಎಲ್ಲ ಧರ್ಮದವರೂ ಹತ್ತುತ್ತಾರೆ. ತಮ್ಮ ತಮ್ಮ ಸ್ಟೇಶನ್ ಬಂದಂತೆ ಇಳಿದುಹೋಗುತ್ತಾರೆ. ಇಷ್ಟವೋ ಕಷ್ಟವೋ ಅಡ್ಜಸ್ಟ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಬದುಕೆಂಬ ಟ್ರೈನಿನಲ್ಲಿ ಅದೇಕೆ ಸಾಧ್ಯವಾಗುವುದಿಲ್ಲ.
ಮನೆಗೆ ಸುಶೀಲಾಳಿಗೆ ಫೋನ್ ಮಾಡಿದರು. ನಡೆದದ್ದೆಲ್ಲಾ ನಿಧಾನವಾಗಿ ವಿವರಿಸಿ ಹೇಳಿದರು. ಅತ್ತ ಸುಶೀಲಾ ಅಳುತ್ತಿದ್ದಳು. ಸಂಜಯ ಧೈರ್ಯಹೇಳಿದ. ತಾವಿಬ್ಬರೂ ಬೆಳಿಗ್ಗೆ ಬೆಂಗಳೂರು ತಲುಪುವುದಾಗಿ ತಿಳಿಸಿದರು. ಆಕೆಯ ಆ ವಿಶೇಷ ಧಿರಿಸನ್ನು ಧರಿಸಿರಲು ಹೇಳಿದರು. ಆಕೆ ತನ್ನಲ್ಲಿ ಅದು ಇಲ್ಲವೆಂದು ತಿಳಿಸಿದಳು. ಇಲ್ಲದಿದ್ದಲ್ಲಿ ಕೊಂಡುತರಲು ಹೇಳಿದರು.
ಬೆಂಗಳೂರು ತಲುಪಿದಾಗ ಬೆಳಿಗ್ಗೆ ಆರು ಗಂಟೆಯಾಗಿತ್ತು. ಅತ್ತಿದ್ದರಿಂದಲೋ ಅಥವಾ ನಿದ್ರೆ ಇಲ್ಲದ್ದರಿಂದಲೋ ಏನೋ ಸಂಜಯನ ಕಣ್ಣುಗಳು ಕೆಂಪಗಾಗಿದ್ದವು. ಆಟೋ ಹಿಡಿದು ಮನೆ ತಲುಪಿದರು. ದಾರಿಯಲ್ಲಿ ತಂದೆ ಮಗ ಇಬ್ಬರೂ ಏನೂ ಮಾತನಾಡಿರಲಿಲ್ಲ. ಗೌತಮನೇ ಮೊದಲು ಇಳಿದು ಮನೆಯೊಳಕ್ಕೆ ಹೊರಟ. ಸಂಜಯ ಹಿಂಬಾಲಿಸಿದ. ಮನೆಯ ಮುಂದಿನ ಬಾಗಿಲು ತೆಗೆದೇ ಇತ್ತು. ಒಳಕ್ಕೆ ಕಾಲಿಡುತ್ತಲೇ ಗೌತಮ, `ಅಮ್ಮಾ' ಎಂದು ಕರೆದ. ಹಾಲಿನ ಸೋಫಾದ ಮೇಲೆ ಕೂತ ಸಂಜಯ ಅಮ್ಮನಿದ್ದ ಕೋಣೆಗೆ ಹೋಗಲು ಯತ್ನಿಸಿದ ಗೌತಮನನ್ನು ತಡೆದು ಅಲ್ಲೇ ಪಕ್ಕದಲ್ಲೇ ಗೌತಮನನ್ನು ಕೂರುವಂತೆ ಹೇಳಿದ. ಗೌತಮನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡಿತು.
`ನಿನ್ನ ಅಮ್ಮನನ್ನು ನಾನೇ ಕರೆಯುತ್ತೇನೆ. ಇಲ್ಲೇ ಕೂರು' ಎಂದ ಸಂಜಯ `ಶಕೀಲಾ' ಎಂದು ಕರೆದ. ಗೌತಮನಿಗೆ ಅಚ್ಚರಿಯಾಯಿತು. `ಶಕೀಲಾ?.. ಯಾರಿದು ಶಕೀಲಾ?' ಎಂದ ಗೊಂದಲದಿಂದ.
`ಶಕೀಲಾ ಎಂದರೂ ಒಂದೇ, ಸುಶೀಲಾ ಎಂದರೂ ಒಂದೆ. ಏನೆಂದು ಕರೆದರೂ ಅದು ನಿನ್ನ ಅಮ್ಮನೇ' ಎಂದ ಸಂಜಯ.
ರೂಮಿನಿಂದ ಸುಶೀಲಾ ಉರುಫ್ ಶಕೀಲಾ ಹೊರಬಂದಳು. ಬುರ್ಖಾ ತೊಟ್ಟಿದ್ದಳು. ಮುಖ ಕಾಣಿಸುತ್ತಿತ್ತು. ತುಂಬಾ ಅತ್ತಿದ್ದರಿಂದ ಆಕೆಯ ಕಣ್ಣೂ ಸಹ ಕೆಂಪಗಾಗಿತ್ತು. ಆಕೆಯೂ ನಿದ್ರೆ ಮಾಡಿಲ್ಲವೆಂಬುದು ತಿಳಿಯುತ್ತಿತ್ತು.
ಗೌತಮ ಸಿಟ್ಟಿನಿಂದ, `ಏನಿದೆಲ್ಲಾ ತಮಾಷೆ? ಅಮ್ಮಾ ಏನಿದು ಹುಡುಗಾಟಿಕೆ? ಯಾಕ್ಹೀಗೆ ಹುಚ್ಚರಂಗೆ ಆಡ್ತಾ ಇದೀರ?' ಎಂದು ಎದ್ದು ನಿಂತು ಅಮ್ಮನ ಬುರ್ಖಾ ಕಿತ್ತು ಹಾಕಲು ಹೊರಟ. ಶಕೀಲಾ ಅಲ್ಲೇ ಕುಸಿದು ಕೂತಳು. ಗೌತಮನೂ ಕೂತ. ಅವನನ್ನು ತಬ್ಬಿ ಶಕೀಲಾ ಅಳತೊಡಗಿದಳು.
`ಗೌತಮ, ನಿನ್ನ ತಾಯಿ ಒಬ್ಬ ಮುಸಲ್ಮಾನಳು. ಅವಳ ಹೊಟ್ಟೆಯ ಕುಡಿ ನೀನು. ಅವಳ ಎದೆಹಾಲು ಕುಡಿದು ದೊಡ್ಡವನಾದವನು ನೀನು. ಶಕೀಲಾ ಆಗಿದ್ದ ಅವಳು ಸಮಾಜದ ಕಣ್ಣಿಗೆ ಸುಶೀಲಾ ಆಗಬೇಕಾಯಿತು' ಹೇಳಿದ ಸಂಜಯ.
ತಬ್ಬಿಬ್ಬಾದ ಗೌತಮನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅಮ್ಮ ಅಪ್ಪ ಇಬ್ಬರನ್ನೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. `ಅಂದರೆ ಅಮ್ಮ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ?' ಕೊನೆಗೆ ಸಾವರಿಸಿಕೊಂಡು ಕೇಳಿದ.
ಸಂಜಯ ಜೋರಾಗಿ ನಕ್ಕ. `ಮತಾಂತರ?.. ಯಾವುದೇ ಮತದಲ್ಲಿ ನಂಬಿಕೆ ಇಲ್ಲದ ನಮಗೆ ಮತಾಂತರ ಏಕೆ ಬೇಕು? ಮಾನವ ಧರ್ಮದಲ್ಲಿ ಮಾತ್ರ ನಂಬಿಕೆ ಉಳ್ಳವರು ನಾವು. ನಿನಗೆಂದಾದರೂ ನಾವು ಇಂಥದೇ ಧರ್ಮಕ್ಕೆ ಸೇರಿದವರೆಂದು ಹೇಳಿದ್ದೇವೆಯೆ? ನಮ್ಮ ಮನೆಯಲ್ಲಿ ಯಾವುದಾದರೂ ಧರ್ಮದ ಆಚರಣೆಯನ್ನು ಕಂಡಿರುವೆಯಾ ನೀನು? ನೀನೂ ಸಹ ಎಲ್ಲ ಧರ್ಮಗಳನ್ನೂ ಮೀರಿ ಬೆಳೆದು ಉತ್ತಮ ಮನುಷ್ಯನಾಗಬಹುದೆಂದು ನಾವು ಕನಸು ಕಂಡಿದ್ದೆವು. ನಿನ್ನನ್ನು ಅದೇ ರೀತಿ ಬೆಳೆಸಿದ್ದೆವು. ಆದರೆ ಈಗ ನೀನು ದೊಡ್ಡವನಾಗಿದ್ದೀಯ. ನಿನಗೆ ನಿನ್ನದೇ ಆಲೋಚನೆ, ವಿಚಾರಗಳನ್ನು ಹೊಂದುವ ಸ್ವಾತಂತ್ರ್ಯ ಇದೆ. ನಾವು ಯಾವುದಕ್ಕೂ ಅಡ್ಡಿ ಬರುವುದಿಲ್ಲ' ಎಂದು ಹೇಳಿ ಸುಮ್ಮನಾದ.
ಗೌತಮನಿಗೆ ಏನು ಹೇಳಲೂ ತೋಚಲಿಲ್ಲ. ಅತ್ತ, ಅಮ್ಮ ಅಳುತ್ತಲೇ ಇದ್ದಳು. `ನನಗೇಕೆ ಇಷ್ಟೂ ದಿನ ಏನೂ ಹೇಳಿರಲಿಲ್ಲ?' ಕೊನೆಗೆ ಗೌತಮ ಕೇಳಿದ. ಅಪ್ಪ, ಅಮ್ಮ ಇಬ್ಬರೂ ಉತ್ತರಿಸಲಿಲ್ಲ.
ನಂತರ ಸಂಜಯ ಹೇಳಿದ, `ಯಾರದೋ ಮಾತು ಕೇಳಿ ಮತಾಂಧನಾಗಿರುವ ನಿನಗೆ ಇವೆಲ್ಲಾ ಅರ್ಥವಾಗುವುದಿಲ್ಲ ಬಿಡು. ನಾನು ನಿನಗೆ ಅಲ್ಲಿ ಹೇಳಿದ್ದೆನಲ್ಲವೆ, ನಾನೊಂದು ಘೋರ ಅಪರಾಧ ಮಾಡಿದ್ದೆನೆಂದು. ನಾನು ಈ ಮುಸಲ್ಮಾನಳನ್ನು ಮದುವೆಯಾಗಿದ್ದು ನಿನ್ನ ದೃಷ್ಟಿಯಲ್ಲಿ ಘೋರಪರಾಧವಲ್ಲದೆ ಮತ್ತೇನು? ನಿನ್ನ ಕೊಚ್ಚಿ ಕೊಲ್ಲುವ ಕಾರ್ಯಕ್ಕೆ ನಾನೂ ಸಹ ಸಹಾಯ ಮಾಡುತ್ತೇನೆ, ಅದನ್ನು ನಮ್ಮ ಮನೆಯಿಂದಲೇ ಪ್ರಾರಂಭಿಸೋಣವೆಂದು ಹೇಳಿದ್ದೆನಲ್ಲವೆ?' ಎದ್ದು ನಿಂತ ಸಂಜಯ ಅಡುಗೆ ಮನೆಗೆ ಹೋಗಿ ಚಾಕುವೊಂದನ್ನು ತಂದ.
`ತಗೋ ಈ ಚಾಕು. ಮುಸಲ್ಮಾನರನ್ನು ಕಂಡರೆ ನಿನಗೆ ದ್ವೇಷವಲ್ಲವೆ? ಅವರು ಪರಕೀಯರಲ್ಲವೆ? ಮುಸಲ್ಮಾನಳಾದ ನಿನ್ನ ಪರಕೀಯ ಅಮ್ಮನನ್ನು ಕೊಂದುಬಿಡು. ನಿನ್ನ ಧರ್ಮರಕ್ಷಕ ಕಾರ್ಯ ಇಲ್ಲಿಂದಲೇ ಪ್ರಾರಂಭವಾಗಲಿ' ಎಂದು ಹೇಳಿ ಚಾಕುವನ್ನು ಗೌತಮನ ಕೈಗೆ ತುರುಕಿ ಸಂಜಯ ರೂಮಿನೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ರಾತ್ರಿಯೆಲ್ಲಾ ನಿದ್ರೆ ಇಲ್ಲದ್ದರಿಂದ, ಅತ್ಯಂತ ಆಯಾಸವಾಗಿದ್ದುದರಿಂದ ಹಾಸಿಗೆಯ ಮೇಲುರುಳಿಕೊಂಡ ಸಂಜಯ ಅವನಿಗರಿವಿಲ್ಲದೆ ಗಾಢ ನಿದ್ರೆಗೆ ಶರಣಾಗಿದ್ದ.
ಕಿಟಾರನೆ ಕಿರುಚಿಕೊಂಡ ಶಕೀಲಾಳ ಕೂಗು ಅವನಿಗೆ ಕೇಳಿಸಲೇ ಇಲ್ಲ.
ಡಾ.ಜೆ.ಬಾಲಕೃಷ್ಣ

ಭಾನುವಾರ, ಜೂನ್ 28, 2009

ಚೀನಾದ ಕೆಲವು ಫೋಟೋಗಳು

ನನ್ನ ಇತ್ತೀಚಿನ ಚೀನಾದ ಭೇಟಿಯ ಕೆಲವು ಫೋಟೋಗಳು. ಒಂದು ಫೋಟೋ ಸಾವಿರ ಮಾತು ಹೇಳಬಹುದೆಂಬುದು ನನ್ನ ನಂಬಿಕೆ. ಫೋಟೋ ನೋಡುತ್ತಾ ಅವುಗಳ ಮಾತು ಆಲಿಸಿ:

ಚೀನಾಕ್ಕೆ ಸ್ವಾಗತ

ಅನ್ಯ ಜಗತ್ತಿನ ಜೀವಿಗಳೆ? ಅಲ್ಲ ಹಂದಿ ಜ್ವರಕ್ಕೆ ಪರೀಕ್ಷೆ!

ಬೀಜಿಂಗ್- ಹೋಟೆಲಿನ ಕಿಟಿಕಿಯಿಂದ.
ಹೂವಾಡಗಿತ್ತಿ


ರೈತ ಮಹಿಳೆ.

ಬೀಜಿಂಗ್ ನ ಟ್ರಾಫಿಕ್

ಬೀಜಿಂಗ್ ಕೃಷಿ ವಿಶ್ವವಿದ್ಯಾನಿಲಯದಲ್ಲಿನ ಒಲಿಂಪಿಕ್ ಬ್ಯಾಸ್ಕೆಟ್ ಬಾಲ್ ಸ್ಟೇಡಿಯಂನ ಮುಂದೆ

ಕೃಷಿ ಪದವೀಧರರು- ಘಟಿಕೋತ್ಸವದ ಸಂಭ್ರಮದಲ್ಲಿ!

ಹಕ್ಕಿಯ ಗೂಡು- ಬೀಜಿಂಗ್ 2008ರ ಒಲಿಂಪಿಕ್ ಸ್ಟೇಡಿಯಂ


ಚೀನಾದ ಮಹಾ ಗೋಡೆ

ಚೀನಾಕ್ಕೆ ಬಂದು ಮಹಾಗೋಡೆಯನ್ನು ಹತ್ತದಿದ್ದಲ್ಲಿ ಬದುಕು ಅಪೂರ್ಣ- ಚೀನಿ ಹೇಳಿಕೆ

ಗೋಡೆಗಳನ್ನು ಧಿಕ್ಕರಿಸುವುದೆಂದರೆ- ಒಬ್ಬ ಪಾಕಿಸ್ತಾನಿ ಗೆಳೆಯನೊಂದಿಗೆ

ಶಾಂಘಾಯ್ ಆಟೊ.

ಸಿಲ್ಕ್ ರೂಟ್- ಫ್ಯಾಶನ್ ಶೋ- ಸಿಲ್ಕ್ ಕಾ

ರಸ್ತೆ ಬದಿಯಲ್ಲಿ ವರ್ಕ್ ಶಾಪ್!

ಶಾಂಘಾಯ್ ನ ಗಗನ ಚುಂಬಿಗಳು

ನನ್ನ ಫೋಟೋನೆ ಏಕೆ ಬೇಕು?


ಫ್ಯಾಶನ್ ಶೋ ಅಲ್ಲ- ರೋಡ್ ಕ್ರಾಸಿಂಗ್

ಸೈಕಲ್ ಇನ್ನೂ ಜನಪ್ರಿಯ.

ಗ್ರಾಹಕರೆಲ್ಲ ಎಲ್ಲಿ ಹೋದರು?

ಶಾಂಘಾಯ್ ನ ಬಿಸಿ ರಸ್ತೆ

ಓರಿಯೆಂಟಲ್ ಪರ್ಲ್ ಟಿ.ವಿ. ಟವರ್ ನಿಂದ ಶಾಂಘಾಯ್ ನ ಪಕ್ಷಿ ನೋಟ

ಓರಿಯೆಂಟಲ್ ಪರ್ಲ್ ಟಿ.ವಿ. ಟವರ್- ಜಗತ್ತಿನ ಮೂರನೇ ಅತಿ ಎತ್ತರದ ಟವರ್- ನನ್ನ ಮುಷ್ಠಿಯಲ್ಲಿ

ಹುವಾಂಗ್ಪು ನದಿಯಲ್ಲಿ ಕ್ರೂಸ್- ಶಾಂಘಾಯ್ ನ ಜಗಮಗ ರಾತ್ರಿ




ಗುರುವಾರ, ಜನವರಿ 01, 2009

ಕತೆ- ಬಿ.ಡಿ.ಎ. ಲೇ‌ಔಟು ಮತ್ತು ಚಿಕ್ಕತಾಯಮ್ಮನ ಜಮೀನು

ಜನವರಿ 2009ರ 'ಸಂವಾದ' ಪತ್ರಿಕೆಯಲ್ಲಿ ನನ್ನ ಕತೆ 'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು'
 


ಒಗೆದ ಬಟ್ಟೆಗಳನ್ನು ಹಿಂಡಿ, ಗಾಳಿಗೆ ಒದರಿ ಹಗ್ಗದ ಮೇಲೆ ಒಣಗಲು ಹಾಕಿ ತಮ್ಮಯ್ಯ ಅಲ್ಲೇ ಮನೆಯ ಮುಂದಿದ್ದ ಕಲ್ಲಿನ ಜಗುಲಿಯ ಮೇಲೆ ಉಸ್ಸೆಂದು ಕೂತ. ಮೈಯೆಲ್ಲಾ ಬೆವೆತಿದ್ದುದರಿಂದ ಗಾಳಿ ಬೀಸಿದಾಗ ತಂಪಾಗುತ್ತಿತ್ತು. ಎಲ್ಲೆಲ್ಲೂ ಬೆಳದಿಂಗಳು ಹಾಲಿನಂತೆ ಚೆಲ್ಲಿತ್ತು. ದೂರದ ಹೊಲಗದ್ದೆಗಳೂ ಕಾಣುತ್ತಿದ್ದವು. `ಇನ್ನೆಷ್ಟು ದಿನ ಈ ಹೊಲಗದ್ದೆಗಳು...... ಎಲ್ಲವೂ ಸೈಟುಗಳಾಗಿಬಿಡುತ್ತವೆ. ಯಾರ್‍ಯಾರೋ ಪರದೇಶದವರು ಇಲ್ಲಿ ಬಂದು ಮನೆಗಳನ್ನು ಕಟ್ಟಿಕೊಂಡುಬಿಡುತ್ತಾರೆ. ನಾವು ಉತ್ತು, ಬಿತ್ತ ಜಮೀನು ಚೂರುಚೂರಾಗಿ ಯಾರ್‍ಯಾರದೋ ಆಗಿಬಿಡುತ್ತವೆ' ಎಂದು ಯೋಚಿಸಿದ. ಒಳಗಿನಿಂದ ಚಿಕ್ಕತಾಯಮ್ಮ ಕರೆದಂತಾಯಿತು. ಲೈಟ್ ಹಾಕಲಿಲ್ಲ, ಹಾಗೆಯೇ ಒಳಗೆ ಹೋಗಿ `ಏನು, ಊಟ ತಿನ್ನಿಸಲೆ?' ಎಂದ. `ಬೇಡ' ಎಂದಳು. ಇತ್ತೀಚಿಗೆ ತಮ್ಮಯ್ಯನೂ ಆಕೆಗೆ ಊಟಕ್ಕೆ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದ. `ನೀರು ಕೊಡಲೆ?' ಎಂದ. ಸುಮ್ಮನಿದ್ದಳು. ಅಲ್ಲೇ ಚೊಂಬಿನಲ್ಲಿದ್ದ ನೀರನ್ನು ಗ್ಲಾಸಿಗೆ ಬಗಿಸಿ ಕೆಳಗೆ ಕೂತು ಚಿಕ್ಕತಾಯಮ್ಮಳ ಬೆನ್ನಿಗೆ ಕೈ ಹಾಕಿ ಸ್ವಲ್ಪ ಮೇಲಕ್ಕೆತ್ತಿ ಗ್ಲಾಸು ಬಾಯಿಗಿಟ್ಟ. ಎರಡು ಗುಟುಕು ಕುಡಿದು ಸಾಕು ಎನ್ನುವಂತೆ ಕೈ ಮಾಡಿದಳು. ಸ್ವಲ್ಪ ಹೊತ್ತು ಹಾಗೆಯೇ ಇದ್ದು ನಂತರ ಆಕೆಯನ್ನು ಹಾಗೆಯೇ ಹಿಂದಕ್ಕೆ ಮಲಗಿಸಿದ. `ಆ ಗಡಿಯಾರ ಆಚಿಗಿಟ್ಟುಬಿಡು. ಅದರ ಟಿಕ್ ಟಿಕ್ ಶಬ್ದದಲ್ಲಿ ನಿದ್ದೆಯೇ ಬರೋದಿಲ್ಲ' ಎಂದಳು. ಗಡಿಯಾರದ ಟಿಕ್ ಟಿಕ್ ಶಬ್ದ ನಿದ್ದೆಮಾಡಲು ಬಿಡದಷ್ಟಿರುತ್ತದೆಯೇ ಎಂದು ತಮ್ಮಯ್ಯನಿಗೆ ಅಚ್ಚರಿಯಾಯಿತು. ಸ್ವಲ್ಪ ಹೊತ್ತು ಹಾಗೆಯೇ ಇದ್ದ. ರಾತ್ರಿಯ ನಿಶ್ಶಬ್ದದಲ್ಲಿ ಗಡಿಯಾರದ ಶಬ್ದ ಸ್ಫುಟವಾಗಿ ಕೇಳಿಸತೊಡಗಿತು. ಕೇಳುತ್ತ ಕೇಳುತ್ತ ಅದರ ಶಬ್ದ ಹೆಚ್ಚಾಗುತ್ತಿರುವಂತೆ ತೋರತೊಡಗಿತು. `ಚಿಕ್ಕತಾಯಿಗೆ ಗಡಿಯಾರದ ಶಬ್ದದಿಂದ ಹೆದರಿಕೆಯಾಗತೊಡಗಿದೆಯೆ? ಸಮಯ ಕಳೆದಂತೆಲ್ಲ ಸಾವು ಹತ್ತಿರ ಹತ್ತಿರ ಬರುತ್ತಿದೆಯೆಂಬ ಭಯ ಆಕೆಗೆ ಹೆಚ್ಚಾಗುತ್ತಿರಬೇಕು' ಎಂದುಕೊಂಡ. ಆತನಿಗೇ ಹೆದರಿಕೆಯಾಗುವಂತೆ ಗಡಿಯಾರದ ಶಬ್ದ ಕರ್ಕಶವಾಗುತ್ತಿದೆಯೆನ್ನಿಸಿತು. ಗಡಿಯಾರವನ್ನು ತೆಗೆದುಕೊಂಡು ಹೊರಬಂದು ಮತ್ತೆ ಜಗುಲಿಯ ಮೇಲೆ ಕೂತ. ಬೆಳದಿಂಗಳ ಬೆಳಕಲ್ಲಿ ಸಮಯ ನೋಡಿದ. ರಾತ್ರಿ ಹನ್ನೊಂದಾಗುವುದರಲ್ಲಿತ್ತು.

ಅವರ ಮನೆಯಲ್ಲಿ ಗಡಿಯಾರವೇ ಇರಲಿಲ್ಲ. ಎಂದೂ ಅವರಿಗೆ ಅದರ ಅವಶ್ಯಕತೆ ಕಂಡೇ ಇರಲಿಲ್ಲ. ಚಿಕ್ಕತಾಯಿಗೆ ಕಾಯಿಲೆಯಾಗಿ ಸಮಯ ಸಮಯಕ್ಕೆ ಔಷಧ ಕೊಡಬೇಕೆಂದು ಡಾಕ್ಟರು ಹೇಳಿದಾಗ ಮಗನಿಗೆ ಹೇಳಿ ಆ ಗಡಿಯಾರ ತರಿಸಿಕೊಂಡಿದ್ದರು. ಆ ಗಡಿಯಾರ ಮನೆಗೆ ಬಂದಾಗಿನಿಂದ ಚಿಕ್ಕತಾಯಿಗೆ ಸಮಯ ಹೋಗುತ್ತಿರುವುದರ ಅರಿವಾಗಿರಬೇಕು; ಇನ್ನೇನು ಸಾವು ಹತ್ತಿರ ಹತ್ತಿರ ಬರುತ್ತಿದೆಯೆನ್ನಿಸಿ ಹೆದರಿಕೆಯೂ ಆಗಿರಬೇಕು.

ಒಣಗಿಸಿದ ಬಟ್ಟೆಗಳು ಗಾಳಿಗೆ ಪಟ ಪಟ ಎನ್ನುತ್ತಿದ್ದವು. ಚಿಕ್ಕತಾಯಮ್ಮಳ ರಕ್ತಸಿಕ್ತ ಬಟ್ಟೆಗಳ ಒಗೆಯುವುದನ್ನು ಯಾರೂ ನೋಡದಿರಲಿ ಎಂದು ತಮ್ಮಯ್ಯ ಆಕೆಯ ಬಟ್ಟೆಗಳನ್ನು ರಾತ್ರಿಯೇ ಒಗೆಯುತ್ತಿದ್ದ. ದಿನದಿನಕ್ಕೆ ರಕ್ತದಲ್ಲಿ ತೋಯುತ್ತಿದ್ದ ಆಕೆಯ ಬಟ್ಟೆಗಳ ರಾಶಿ ಹೆಚ್ಚುತ್ತಲೇ ಇತ್ತು. ಆಕೆಯ ಮೈಯಲ್ಲಿ ಅಷ್ಟೊಂದು ರಕ್ತವಿದೆಯೇ ಎಂದು ಆತನಿಗೇ ಅಚ್ಚರಿಯಾಗಿತ್ತು. ಇನ್ನೆಷ್ಟು ದಿನ ಅವಳು ಬದುಕಬಹುದು ಎಂದು ಆಲೋಚಿಸಿದ. ಅವನಿಗರಿವಿಲ್ಲದೆ ಅವನ ಕಣ್ಣಂಚಿನಲ್ಲಿ ನೀರು ಹನಿಯಿತು. ದೂರದಲ್ಲೆಲ್ಲೋ ಆಟೋ ಬರುತ್ತಿರುವ ಸದ್ದಾಯಿತು. ಮಗ ವೆಂಕಟೇಶ ಮನೆಗೆ ಬರುತ್ತಿರಬಹುದು ಎಂದುಕೊಂಡ. ಅವನು ಈಗಿರುವ ಆಟೋ ಮಾರಿ ಟ್ಯಾಕ್ಸಿ ಕೊಳ್ಳಬೇಕೆಂದು ಕನಸು ಕಾಣುತ್ತಿದ್ದಾನೆ. ಇರುವ ಈ ಎರಡು ಎಕರೆ ಜಮೀನು ಬಿ.ಡಿ.ಎ.ನವರು ಕಿತ್ತುಕೊಳ್ಳುತ್ತಿರುವುದರಿಂದ ಸಂತೋಷಗೊಂಡಿರುವವನು ಅವನೊಬ್ಬನೇ ಇರಬಹುದು.

ಚಿಕ್ಕತಾಯಮ್ಮಳಿಗೆ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. `ಅದೆಂಗೆ ಕಿತ್ಕೋತಾರೆ?' ಎಂದು ಪದೇ ಪದೇ ಕೇಳುತ್ತಿದ್ದಳು. `ಬಿ.ಡಿ.ಎ.ನವರ ವಂಶ ಎಕ್ಕುಟ್ಟೋಗಲಿ' ಎಂದು ಶಾಪಹಾಕುತ್ತಿದ್ದಳು. `ಇದು ನಮ್ಮಪ್ಪ ನಂಗೆ ಕೊಟ್ಟ ಜಮೀನು. ನಾನು ಹುಟ್ಟಿದ್ದಿಲ್ಲೇ, ಬೆಳೆದಿದ್ದಿಲ್ಲೇ. ಗೇಯ್ದಿರೋದೂ ಇದೇ ಜಮೀನಲ್ಲಿ. ಯಾರ್‍ಯಾರೋ ಮಾರ್‍ತೀಯಾ ಅಂದಾಗ್ಲೂ ಈ ಭೂಮಿ ನನ್ನ ಪ್ರಾಣಹೋದರೂ ಮಾರಲ್ಲ ಅಂದಿದ್ದೆ. ಈಗ ಅದೆಂಗೆ ಬಿ.ಡಿ.ಎ.ನೋರು ಈ ಜಮೀನು ತಗಂತೀವಿ, ಸೈಟ್ ಮಾಡಿ ಎಲ್ರಗೂ ಹಂಚ್ತೀವಿ ಅಂತಾರೆ. ನಂ ಭೂಮಿ ಕಿತ್ಕಂಡು ಸೈಟು ಮಾಡಿ ಕಂಡೋರಿಗೆ ಹಂಚೋಕೆ ಅವರ್‍ಯಾರು? ಅವರಪ್ಪಂದಾ ಜಮೀನಿದು?' ಎಂದು ಕೇಳಿದ್ದಳು. ತಮ್ಮಯ್ಯನಿಗೂ ಈ ವಿಷಯ ಅರ್ಥ‌ಆಗಿರಲಿಲ್ಲ. ಆದರೆ ಸರ್ಕಾರದೋರು ಯಾವ ಜಮೀನು ಬೇಕಾದರೂ ಕಿತ್ಕೋಬಹುದು, ಅವರಿಗೆ ಆ ಅಧಿಕಾರ ಇದೆ ಎಂದಾಗ ಸುಮ್ಮನಾಗಿದ್ದ. ಅದನ್ನೇ ಚಿಕ್ಕತಾಯಿಗೆ ಹೇಳಿದಾಗ ಆಕೆ ಕಿರುಚಾಡಿ ರಂಪಾಟ ಮಾಡಿದ್ದಳು. `ಆ ಅಧಿಕಾರ ಅವರಿಗೆ ನಂ ತಾತ ಕೊಟ್ಟಿದ್ನಾ? ಈ ಆಸ್ತಿ ನಂ ತಾತ್ನಿಂದ ನಂ ಅಪ್ಪನಿಗೆ ಬಂದಿದ್ದು. ಅವರಿಂದ ನನಗೆ ಬಂದಿದೆ. ಇದು ನಂ ತಾತನ ಆಸ್ತಿ. ನಮ್ಮ ತಾತ ಏನಾದ್ರೂ ಅವರಿಗೆ ಬರಕೊಟ್ಟಿದ್ದನಾ?' ಎಂದು ಕೇಳಿದ್ದಳು. `ಅದೆಂಗೆ ಬತ್ತಾರೆ, ಬರ್‍ಲಿ. ನಾನು ನನ್ನ ಜಮೀನು ಕೊಡೋಳಲ್ಲ' ಎಂದಿದ್ದಳು.

ಬಿ.ಡಿ.ಎ. ನೋಟಿಫಿಕೇಶನ್ ಸುದ್ದಿ ಮೊದಲಿಗೆ ತಂದವನೇ ವೆಂಕಟೇಶ. ಆ ದಿನ ಪೇಪರ್ ಹಿಡಿದುಕೊಂಡು ಓಡಿಬಂದು, `ಈ ಹಳ್ಳಿಯ ಜಮೀನುಗಳನ್ನೆಲ್ಲಾ ಬಿ.ಡಿ.ಎ.ನವರು ನೋಟಿಫೈ ಮಾಡಿದ್ದಾರೆ. ಎಕರೇಗೆ ಆರು ಲಕ್ಷ ಕೊಡ್ತಾರಂತೆ. ಈ ಡಬ್ಬ ಆಟೋ ಬಿಸಾಕಿ, ಟ್ಯಾಕ್ಸಿ ತಗೋತೀನಿ' ಎಂದು ಕುಣಿದಾಡಿದ್ದ. ಅದಕ್ಕೆ ಮೊದಲು ಅವನು ಅವರಮ್ಮನನ್ನು ಟ್ಯಾಕ್ಸಿ ಕೊಡಿಸುವಂತೆ ಪೀಡಿಸುತ್ತಿದ್ದ. ದುಡ್ಡಿಲ್ಲ ಎಂದಾಗ ಒಂದರ್ಧ ಎಕರೆ ಜಮೀನಾದರೂ ಮಾರಿ ಕೊಡಿಸುವಂತೆ ದುಂಬಾಲು ಬಿದ್ದಿದ್ದ. `ಸಾಧ್ಯವೇ ಇಲ್ಲ' ಎಂದಿದ್ದಳು ಚಿಕ್ಕತಾಯಮ್ಮ.

ಅದೇ ಸಮಯದಲ್ಲಿ ತಮ್ಮಯ್ಯನಿಗೆ ಮತ್ತೊಂದು ಆಲೋಚನೆ ಬಂದಿತ್ತು. ಆದರೆ ಅದನ್ನು ಚಿಕ್ಕತಾಯಮ್ಮಳ ಹತ್ತಿರ ಹೇಳಲು ಹೋಗಿರಲಿಲ್ಲ. ಮೂರ್‍ನಾಲ್ಕು ವರ್ಷಗಳಿಂದ ಹೊಟ್ಟೆನೋವು ಹಾಗೂ ರಕ್ತಸ್ರಾವದಿಂದ ನರಳುತ್ತಿದ್ದ ಚಿಕ್ಕತಾಯಮ್ಮನಿಗೆ ಏನೇನು ಔಷಧ ಕೊಟ್ಟರೂ ವಾಸಿಯಾಗಿರಲಿಲ್ಲ. ಕೊನೆಗೊಬ್ಬರು ಡಾಕ್ಟರು ಕಿದ್ವಾಯಿ ಆಸ್ಪತ್ರೆಗೆ ಹೋಗಿ ಅಂದಾಗ ತಮ್ಮಯ್ಯನಿಗೆ ಒಂದು ರೀತಿಯ ಆತಂಕ ಉಂಟಾಗಿತ್ತು. ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ಆಸ್ಪತ್ರೆ ಎಂಬುದು ಆತನಿಗೆ ತಿಳಿದಿತ್ತು. ಅಲ್ಲಿ ಆತನ ಸಂಶಯ ನಿಜವಾಗಿತ್ತು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಎಂದಿದ್ದರು ಅಲ್ಲಿನ ಡಾಕ್ಟರು. `ಕರೆಂಟ್' ಚಿಕಿತ್ಸೆ ಹಾಗೂ ರಾಶಿಗಟ್ಟಲೆ ಔಷಧಗಳ ಸೇವನೆಯಿಂದ ಗುಣಮುಖಳಾಗಲಿಲ್ಲ. ಬದಲಿಗೆ ಆಕೆಯ ತಲೆಯಮೇಲಿನ ಕೂದಲಿನಂತೆ ಇದ್ದಬದ್ದ ಹಣವೆಲ್ಲಾ ಖಾಲಿಯಾಯಿತು. ಹರಿಯುವ ರಕ್ತದ ಕೋಡಿ ನಿಲ್ಲಲಿಲ್ಲ. ಡಾಕ್ಟರೊಂದು ದಿನ ತಮ್ಮಯ್ಯನನ್ನು ತಮ್ಮ ಕೋಣೆಗೆ ಕರೆದು ಇದ್ದ ವಿಷಯ ತಿಳಿಸಿದರು: `ಬೇರೇನೂ ದಾರಿಯಿಲ್ಲ. ಊರಿಗೆ ಕರೆದುಕೊಂಡು ಹೋಗಿ ಇರುವವರೆಗೂ ಚೆನ್ನಾಗಿ ನೋಡಿಕೊ. ನಾವು ಮಾಡುವುದು ಇನ್ನೇನೂ ಉಳಿದಿಲ್ಲ' ಎಂದರು. ಬಿ.ಡಿ.ಎ.ನವರು ಜಮೀನು ತೆಗೆದುಕೊಂಡು ಮಗ ವೆಂಕಟೇಶ ಹೇಳಿದಂತೆ ಎಕರೆಗೆ ಆರು ಲಕ್ಷ ಕೊಟ್ಟರೆ ಅವಳಿಗೆ ಬೇರೆಲ್ಲಾದರೂ ಚಿಕಿತ್ಸೆ ಕೊಡಿಸಿ ಹೆಂಡತಿಯನ್ನು ಉಳಿಸಿಕೊಳ್ಳಬಹುದೇನೋ ಎಂಬ ಆಸೆ ಮೊಳಕೆಯೊಡೆಯಿತು. `ಆಸ್ತಿ ಹೋದ್ರೂ ಹೋಗ್ಲಿ, ಚಿಕ್ಕತಾಯಿ ಉಳ್ದರೆ ಸಾಕು' ಎಂದುಕೊಂಡ.

ಚಿಕ್ಕತಾಯಮ್ಮ ತನ್ನ ತಂದೆತಾಯಿಯವರಿಗೆ ಒಬ್ಬಳೇ ಮಗಳು. ಹಾಗಾಗಿ ಅವರ ತಂದೆ ತಾಯಿಯವರು ಆಕೆಯನ್ನು ಬೇರೆ ಊರಿಗೆ ಮದುವೆ ಮಾಡಿಕೊಡದೆ ನೆಂಟರಿಷ್ಟರಲ್ಲಿ ದಿಕ್ಕಿಲ್ಲದಿದ್ದ ತಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಮನೆ‌ಅಳಿಯನನ್ನಾಗಿ ಮಾಡಿಕೊಂಡಿದ್ದರು. ತಮ್ಮಯ್ಯನೂ ಒಳ್ಳೆ ವ್ಯವಸಾಯ ಮಾಡುವವನಾಗಿದ್ದು ಇದ್ದ ಜಮೀನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಆಗ ಅಮೃತಹಳ್ಳಿ ಬೆಂಗಳೂರಿನಿಂದ ತುಂಬಾ ದೂರವಿರುವಂತೆ ತೋರುತ್ತಿತ್ತು. ತರಕಾರಿ ಅದೂ ಇದೂ ಮಾರಲು ಕೆ.ಆರ್. ಮಾರುಕಟ್ಟೆಗೆ ಗಾಡಿ ಹೊಡೆದುಕೊಂಡು ಹೋಗುತ್ತಿದ್ದುದು ತಮ್ಮಯ್ಯನಿಗೆ ಇನ್ನೂ ಚೆನ್ನಾಗಿ ನೆನಪಿದೆ. ನೋಡನೋಡುತ್ತಿದ್ದಂತೆಯೇ ಬೆಂಗಳೂರು ಬೆಳೆದುಬಿಟ್ಟಿತು. ಮಗ ವೆಂಕಟೇಶನಿಗೆ ನಗರದ ಗೀಳು ಬಿದ್ದು ಇತ್ತ ಬೇಸಾಯ ಮಾಡುವ ರೈತನೂ ಆಗಲಿಲ್ಲ, ಅತ್ತ ಶಾಲೆಗೆ ಹೋಗಿ ಓದಿ ವಿದ್ಯಾವಂತನೂ ಆಗಲಿಲ್ಲ. ಅವರಿವರು ಪೋಕರಿ ಹುಡುಗರ ಜೊತೆ ಸೇರಿ ಸಿನಿಮಾ ಅಂತ ಅಲೆದಾಡುವುದು, ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುವುದು, ಬೀಡಿ ಸಿಗರೇಟು ಸೇದುವುದು ಮಾಡುತ್ತಾ ತಮ್ಮಯ್ಯ, ಚಿಕ್ಕತಾಯಮ್ಮನವರ ಕಣ್ಣೆದುರಿನಲ್ಲಿಯೇ ಬೆಳೆದು ಬಿಟ್ಟಿದ್ದ. `ಹೊಲ್ದಾಗಾದ್ರೂ ಗೇಯಿ ಅಥ್ವಾ ಏನಾದ್ರೂ ಬದುಕು ಮಾಡಿ ಊಟಕ್ಕೊಂದು ದಾರಿ ಮಾಡ್ಕೋ' ಎಂದು ಅಪ್ಪ ಅಮ್ಮ ಇಬ್ಬರೂ ಬಯ್ಯತೊಡಗಿದಾಗ ಯಾರದೋ ಆಟೋ ಬಾಡಿಗೆಗೆ ಓಡಿಸತೊಡಗಿದ. `ಏನೋ ಈ ಎರಡೆಕ್ರೆ ಜಮೀನಿದೆ. ಇರೋಬ್ಬ ಮಗನಿಗೆ ಮುಂದೇ ಇದೇ ದಿಕ್ಕು' ಎಂದು ಸಾಂತ್ವನಮಾಡಿಕೊಳ್ಳುತ್ತಿದ್ದಳು ಚಿಕ್ಕತಾಯಮ್ಮ.

ಆ ಜಮೀನಿನ ಮೂಲೆಯ ತೋಡುಬಾವಿಯ ಪಕ್ಕದಲ್ಲೇ ಆಕೆಯ ಅಮ್ಮ ಅಪ್ಪನ ಸಮಾಧಿಗಳಿದ್ದವು. ಒಂದು ದಿನ ಮಗ ವೆಂಕಟೇಶನನ್ನು ಕರೆದು ಹೇಳಿದ್ದಳು, `ನೋಡೋ, ನಾವು ಸತ್ತಮೇಲೆ ನನ್ನೂ, ನಿಮ್ಮಪ್ಪನನ್ನೂ ಇಲ್ಲೇ ಹೂಳ್ಬೇಕು. ಜಾಗ ಗುರ್ತಿಟ್ಕೊ' ಎಂದು ಹೇಳಿದ್ದಳು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಆಗಿ ಸಾವಿನ ಬಾಗಿಲಲ್ಲಿದ್ದ ಚಿಕ್ಕತಾಯಮ್ಮನಿಗೆ ಈಗ ಸಮಸ್ಯೆಯಾಗಿದ್ದುದು ಬಿ.ಡಿ.ಎ.ನವರು ಜಮೀನನ್ನು ಸೈಟುಗಳಾಗಿ ಮಾಡಿದರೆ ಈ ಸಮಾಧಿಗಳ ಗತಿ ಏನಾಗುತ್ತದೆ ಎಂಬುದು. ಮತ್ತೊಂದು ಆತಂಕವಿದ್ದುದು ಬಿ.ಡಿ.ಎ.ನವರು ಆ ಜಮೀನನ್ನು ಕಿತ್ತುಕೊಂಡರೆ ಆಕೆ ಸತ್ತ ಮೇಲೆ ಆಕೆಯನ್ನು ಹೂಳುವುದು ಎಲ್ಲಿ ಎಂಬುದು. ಗಂಡ ತಮ್ಮಯ್ಯನ ಬಳಿ ಈ ವಿಷಯ ಹೇಳಿಕೊಂಡು ಗೋಳಾಡಿದ್ದಳು. ತಮ್ಮಯ್ಯನಿಗೂ ಏನೂ ಹೇಳಲು ತೋಚಿರಲಿಲ್ಲ. ಅವರಿವರನ್ನು ವಿಚಾರಿಸಿದ್ದ. ಬಿ.ಡಿ.ಎ.ನವರು ಜಮೀನುಗಳನ್ನು ಅವರ ಪ್ಲ್ಯಾನ್ ಪ್ರಕಾರ ಲೆವೆಲ್ ಮಾಡಿ ಲೇ‌ಔಟು ಮಾಡುತ್ತಾರೆ. ಜಮೀನುಗಳಲ್ಲಿಯ ಸಮಾಧಿಗಳನ್ನು ಅವರು ಕೇರ್ ಮಾಡುವುದಿಲ್ಲ. ಊರಿನ ಸ್ಮಶಾನಗಳಿದ್ದಲ್ಲಿ ಅವುಗಳನ್ನು ಏನೂ ಮಾಡುವುದಿಲ್ಲ ಎನ್ನುವುದನ್ನು ತಿಳಿದು ಆಕೆಗೆ ಅತ್ಯಂತ ದುಗುಡದಿಂದ ವಿಷಯ ತಿಳಿಸಿದ್ದ. ಆ ವಿಷಯ ತಿಳಿದು ಆಕೆ ಎರಡು ದಿನ ಊಟಮಾಡಿರಲಿಲ್ಲ. ತಮ್ಮಯ್ಯನಿಗೆ ಈ ವಿಷಯದಲ್ಲಿ ಯಾವ ರೀತಿ ಸಂತೈಸಬೇಕೆಂಬುದೂ ತಿಳಿದಿರಲಿಲ್ಲ.

ಆಟೋ ಸದ್ದು ಇನ್ನೂ ಹತ್ತಿರವಾಯಿತು. ತಮ್ಮಯ್ಯನಿಗೆ ಹಸಿವಾಗುತ್ತಿದ್ದರೂ ತಿನ್ನುವ ಮನಸ್ಸಾಗಲಿಲ್ಲ.

ಚಿಕ್ಕತಾಯಮ್ಮ ಆಸ್ಪತ್ರೆಯಿಂದ ಹಿಂದಿರುಗಿದ ಮೇಲೆ ತಮ್ಮಯ್ಯ ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆತನೇ ಒಂದಷ್ಟು ಅನ್ನ, ಗಂಜಿ ಮಾಡಿ ಆಕೆಗೆ ತಿನ್ನಿಸುತ್ತಿದ್ದ, ಆಕೆಯನ್ನು ಬಚ್ಚಲು ಮನೆಗೆ ಕರೆದೊಯ್ಯುತ್ತಿದ್ದ. ಮಗ ವೆಂಕಟೇಶ ಮನೆಗೆ ಬಂದರೆ ಬಂದ ಇಲ್ಲದಿದ್ದರೆ ಇಲ್ಲ. ಅವನೂ ಮನೆಗೆ ಏನೂ ದುಡ್ಡು ಕೊಡುತ್ತಿರಲಿಲ್ಲ, ಇವರೂ ಕೇಳುತ್ತಿರಲಿಲ್ಲ. ಅಮ್ಮನಿಗೆ ಅಷ್ಟು ಕಾಯಿಲೆಯಾಗಿದ್ದರೂ ಒಂದು ದಿನವಾದರೂ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮಯ್ಯ ಹಾಗೂ ಚಿಕ್ಕತಾಯಮ್ಮ ಎಷ್ಟೋ ಸಾರಿ ಅವನ ಬಗ್ಗೆ ಮಾತನಾಡಿಕೊಂಡಿದ್ದರು. ಅವನು ನಗರಕ್ಕೆ ಸೇರಿ ಇಷ್ಟೊಂದು ಕಠೋರನಾದನೆ? ಸಂಪೂರ್ಣ ಹಳ್ಳಿಯ ಹುಡುಗನೇ ಆಗಿ ರೈತನಾಗಿದ್ದಿದ್ದರೆ ಅಮ್ಮನ ಸೆರಗು ಬಿಡದ ಕೂಸಾಗಿ ಅಪ್ಪ ಅಮ್ಮನನ್ನು ಪ್ರೀತಿಸುವ ಮುದ್ದಿನ ಮಗನಾಗುತ್ತಿದ್ದನೆ?

ಹತ್ತಿರ ಹತ್ತಿರವಾದಂತೆ ಆಟೋದ ಬೆಳಕು ಕಂಡಿತು. ವೆಂಕಟೇಶ ಆಟೋವನ್ನು ಶೆಡ್‌ನಲ್ಲಿ ನಿಲ್ಲಿಸಿದ. ಅದೇ ಶೆಡ್ ಅಲ್ಲವೆ ಮೊದಲು ಎತ್ತುಗಳ ಕೊಟ್ಟಿಗೆಯಾಗಿದ್ದಿದು! ಎಂಥ ಜೋಡಿ ಎತ್ತುಗಳವು! ಅವುಗಳನ್ನು ಕೊಳ್ಳಲು ತಮ್ಮಯ್ಯ ಮತ್ತು ಚಿಕ್ಕತಾಯಮ್ಮ ಇಬ್ಬರೂ ಮಾಗಡಿ ದನಗಳ ಪರಿಷೆಗೆ ಹೋಗಿದ್ದರು. ನೀನು ಬರುವುದು ಬೇಡವೆಂದರೂ ಕೇಳದೆ ಬರುತ್ತೇನೆಂದು ಚಿಕ್ಕತಾಯಮ್ಮ ಹುರುಪಿನಿಂದ ಚಿಕ್ಕಹುಡುಗಿಯಂತೆ ಬಂದಿದ್ದಳು. ಆ ಕಾಲದಲ್ಲಿ ಎರಡು ಸಾವಿರದ ಎತ್ತುಗಳೆಂದರೆ ಕಡಿಮೆಯೇನಲ್ಲ. ತಂದ ಮರುದಿನ ಊರವರೆಲ್ಲಾ ನೋಡಲು ಬಂದಿದ್ದರು. ಸಂಕ್ರಾಂತಿಯ ದಿನ ಅವುಗಳಿಗೆ ಸಿಂಗಾರ ಮಾಡಿ ಮೆರವಣಿಗೆ ಮಾಡಿಸುವುದು ಅವರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿತ್ತು. ಈಗ ಊರಿನಲ್ಲಿ ಮೊದಲಿನ ಹಾಗೆ ಸಂಕ್ರಾಂತಿ ಮಾಡುವುದೇ ನಿಂತುಹೋಗಿದೆ. ಯಾರಲ್ಲಿಯೂ ದನಗಳಿಲ್ಲ. ಎಲ್ಲರೂ ಸೈಟುಗಳ ಬಿಸಿನೆಸ್‌ನಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿತು ತಮ್ಮಯ್ಯನಿಗೆ.

ಆಟೋ ನಿಲ್ಲಿಸಿದ ವೆಂಕಟೇಶ ನೇರ ಅಡಿಗೆಮನೆಗೆ ಹೋಗಿ ಊಟಬಡಿಸಿಕೊಳ್ಳತೊಡಗಿದ. ಚಿಕ್ಕತಾಯಮ್ಮ ಏನೋ ಹೇಳಿದಳು. ವೆಂಕಟೇಶನೂ ಉತ್ತರಿಸಲಿಲ್ಲ, ಇತ್ತ ತಮ್ಮಯ್ಯನೂ ಏನೂ ಹೇಳಲಿಲ್ಲ.

ಕೆಲದಿನಗಳ ಹಿಂದೆ ಹೀಗೆಯೇ ರಾತ್ರಿ ಹೊರಗೆ ಜಗುಲಿಯ ಮೇಲೆ ತಮ್ಮಯ್ಯ ಹಾಸಿಕೊಂಡು ಮಲಗಿದ್ದ. ನಿದ್ರೆ ಬರುತ್ತಿರಲಿಲ್ಲ. ಬೀಡಿ ಸೇದುತ್ತಾ ಬಿಡುವ ಹೊಗೆ ಕತ್ತಲಲ್ಲಿ ಚಿತ್ತಾರಗಳನ್ನು ಬಿಡಿಸುತ್ತಿದ್ದುದನ್ನು ನೋಡುತ್ತಿದ್ದ. ಸಮಯ ಒಂದು ಗಂಟೆಯೋ ಎರಡು ಗಂಟೆಯೋ ಆಗಿದ್ದಿರಬಹುದು. ಚಿಕ್ಕತಾಯಮ್ಮ ಕರೆದಳು. ಅವಳನ್ನು ಬಚ್ಚಲಿಗೆ ಕರೆದೊಯ್ಯಬೇಕೇನೋ ಎಂದು ಕೊನೆಯ ದಮ್ಮು ಎಳೆದು ಬೀಡಿ ತುಂಡು ಬಿಸಾಕಿ, ಕ್ಯಾಕರಿಸಿ ಉಗಿದು ಒಳಗೆ ನಡೆದ. ಲೈಟ್ ಹಾಕಿದ. `ಬೇಡ, ಆಫ್ ಮಾಡು' ಎಂದಳು ಕೈಯನ್ನು ಕಣ್ಣಿಗೆ ಮರೆಮಾಡುತ್ತಾ. ಆಫ್ ಮಾಡಿ ಆಕೆಯ ಬೆನ್ನಿಗೆ ಕೈಹಾಕಿ ಮೇಲೆತ್ತಲು ಹೋದ. `ಬೇಡ, ಇಲ್ಲೇ ಕೂತ್ಕೋ' ಎಂದಳು. ಅಲ್ಲೇ ಅವಳ ಪಕ್ಕ ಗೋಡೆಗೆ ಒರಗಿ ಕೂತ. ಗೊಳೋ ಎಂದು ಅಳಲು ಪ್ರಾರಂಭಿಸಿದಳು. ತಮ್ಮಯ್ಯನಿಗೆ ಏನು ಹೇಳಲೂ ತೋಚಲಿಲ್ಲ. `ಹೊಟ್ನೋವು ಜಾಸ್ತಿ ಆಗದೇನು? ಮಾತ್ರೆ ಕೊಡ್ಲಾ?' ಎಂದು ಕೇಳಿದ. ಬೇಡವೆಂಬಂತೆ ತಲೆಯಾಡಿಸಿದಳು. ಇತ್ತೀಚಿಗೆ ಅವಳ ಯಾತನೆ ಹೆಚ್ಚಾಗಿತ್ತು. ಕಿದ್ವಾಯಿಯ ಡಾಕ್ಟರು ಇನ್ನು ಒಂದೆರಡು ತಿಂಗಳಷ್ಟೇ ಎಂದು ಹೇಳಿದ್ದರು. ಆದರೆ ನಾಲ್ಕೈದು ತಿಂಗಳಾಯಿತು. ಅವಳ ಯಾತನೆಯನ್ನು ನೋಡಲಾಗದ ತಮ್ಮಯ್ಯ ಅವಳಿಗೆ ಸಾವಾದರೂ ಬೇಗ ಬರಬಾರದೇ ಎಂದುಕೊಳ್ಳುತ್ತಿದ್ದ. ಒಂದೈದು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಕೊನೆಗೆ ಚಿಕ್ಕತಾಯಮ್ಮ ಹೇಳಿದಳು, `ನಾಳೆ ಹೊತ್ತಾರೆ ಒಂದ್ಕೆಲಸ ಮಾಡು. ನಂ ಜಮೀನು ನಂಗೆ ಉಳಿಯಾಂಗಿಲ್ಲ. ಹೆಬ್ಬಾಳದ ಮಶಾಣಕ್ಕೆ ಹೋಗಿ ನಾ ಸತ್ ಮೇಲೆ ಹೂಳೋಕೆ ಜಾಗ ಐತಾ ನೋಡ್ಕಂಡು ಬಾ' ಎಂದಳು. `ಹೇ, ಆ ಮಾತ್ಯಾಕೆ? ನಿಂಗೇನೂ ಆಗಲ್ಲ, ಔಷಧಿ ತಗೊಳ್ತಾ ಇದೀಯ. ಎಲ್ಲಾ ಸರಿಹೋಗ್ತದೆ' ಎಂದ. ಆ ಮಾತು ಸುಳ್ಳು ಎಂಬುದು ಇಬ್ಬರಿಗೂ ತಿಳಿದಿತ್ತು. ಇಬ್ಬರೂ ಮಾತನಾಡಲಿಲ್ಲ. ಆ ಸರಿ ರಾತ್ರಿಯ ನೀರವದಲ್ಲಿ ಗಡಿಯಾರದ ಟಿಕ್ ಟಿಕ್ ಶಬ್ದ ಬಿಟ್ಟರೆ ಬೇರೆ ಶಬ್ದವಿರಲಿಲ್ಲ. ತಮ್ಮಯ್ಯನಿಗೆ ಆ ಶಬ್ದ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವಂತೆ ಅನ್ನಿಸಿತು. ಅದು ತಡೆದುಕೊಳ್ಳುವುದು ಅಸಾಧ್ಯವೆನ್ನಿಸಿ ಎದ್ದು ಅಲ್ಲೇ ಗೋಡೆಯ ಗೂಡಲ್ಲಿದ್ದ ಆ ಗಡಿಯಾರವನ್ನೆತ್ತಿಕೊಂಡು ಹೊರನಡೆದು ಜಗುಲಿಯ ಮೇಲೆ ಕೂತ. ಗಡಿಯಾರದ ಮುಳ್ಳುಗಳನ್ನು ನೋಡುತ್ತಾ ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದ.

ಮರುದಿನ ಬೆಳಿಗ್ಗೆ ಚಿಕ್ಕತಾಯಮ್ಮನಿಗೆ ಗಂಜಿ ಮಾಡಿ ತಿನ್ನಿಸಿ ಅವಳಿಗೆ ಏನೂ ಹೇಳದೆ ಹೆಬ್ಬಾಳದ ಸ್ಮಶಾನದ ಕಡೆಗೆ ಹೊರಟ. ತಮ್ಮಯ್ಯನಿಗೆ ಮದುವೆಯಾದ ಹೊಸತರಲ್ಲಿ ಆ ಸ್ಮಶಾನದ ಕಡೆಗೆ ರಾತ್ರಿಯ ಹೊತ್ತು ಓಡಾಡಲೇ ಹೆದರಿಕೆಯಾಗುತ್ತಿತ್ತು. ಮಾರುಕಟ್ಟೆಯಿಂದ ಗಾಡಿಯಲ್ಲಿ ಹಿಂದಿರುಗುವಾಗ ಕೆಲವೊಮ್ಮೆ ಕತ್ತಲಾಗುತ್ತಿರುತ್ತಿತ್ತು. ರಸ್ತೆಯ ಬದಿಗೇ ಇದ್ದ ಸ್ಮಶಾನದ ಕಡೆಗೆ ನೋಡದೆ ಗಾಡಿ ಓಡಿಸಿಕೊಂಡು ಬರುತ್ತಿದ್ದ. ಊರಿನ ಜನ ಆ ಸ್ಥಳದ ಬಗ್ಗೆ ಹೆದರಿಕೆಯ ಕತೆಗಳನ್ನು ಹೇಳುತ್ತಿದ್ದರು. ಚಿಕ್ಕತಾಯಿಯ ಅಮ್ಮ ಚಿಕ್ಕವಳಿದ್ದಾಗ ಆ ಸ್ಮಶಾನದ ಪಕ್ಕದಲ್ಲಿನ ತೋಡುಬಾವಿಯಲ್ಲಿ ಆಗಾಗ ಬಟ್ಟೆ‌ಒಗೆಯುವ ಸದ್ದು ಕೇಳಿಸುತ್ತಿತ್ತೆಂದೂ, ಯಾರೋ ಅಗಸರವಳು ಆ ಬಾವಿಯಲ್ಲಿ ಬಟ್ಟೆ ಒಗೆಯಲು ಹೋಗಿ ಸತ್ತುಹೋಗಿದ್ದು ಅವಳ ದೆವ್ವವೇ ಆ ರೀತಿ ಶಬ್ದಮಾಡುತ್ತಿತ್ತೆಂದು ಹೇಳುತ್ತಿದ್ದರು. ಇಂದು ಆ ಬಾವಿಯು ಮುಚ್ಚಿಹೋಗಿ ಅದರ ಮೇಲೇ ಒಂದು ಶಾಪಿಂಗ್ ಮಾಲ್ ಬಂದಿತ್ತು. ತಮ್ಮಯ್ಯ ನೋಡನೋಡುತ್ತಿದ್ದಂತೆಯೇ ಬಸ್ಸು, ಒಂದು ಎತ್ತಿನಗಾಡಿ ಹೋಗಬಹುದಾದಷ್ಟಿದ್ದ ರಸ್ತೆ ಊರಗಲವಾಗಿತ್ತು. ಸ್ಮಶಾನದ ಸುತ್ತಮುತ್ತಲಿನ ಅಳಿದುಳಿದ ಭೂಮಿಯನ್ನೆಲ್ಲಾ ಒತ್ತುವರಿ ಮಾಡಿಕೊಂಡುಬಿಟ್ಟಿದ್ದರು. ಅದನ್ನೆಲ್ಲ ನೋಡುತ್ತ ಬಂದ ತಮ್ಮಯ್ಯ `ಈಗಿನ ಜನಗಳಿಗೆ ದೆವ್ವಗಳ ದಿಗಿಲೇ ಇಲ್ಲ' ಎಂದುಕೊಂಡ. ಸ್ಮಶಾನದಲ್ಲಿ ಈಗ ಎಲೆಕ್ಟ್ರಿಕ್ ಕ್ರಿಮೆಟೋರಿಯಂ ಒಂದು ಸ್ಥಾಪಿಸಿದ್ದರು. ಅಳುಕು, ಅಂಜಿಕೆಯ ಮನಸ್ಸಿನಿಂದಲೇ ಸ್ಮಶಾನದೊಳಗೆ ಕಾಲಿರಿಸಿದ. ಕಾಲಿಡಲೂ ಸ್ಥಳವಿಲ್ಲದಂತ್ತಿತ್ತು; ಹತ್ತಿರ ಹತ್ತಿರದಲ್ಲೇ ಸತ್ತವರನ್ನು ಹೂತಿದ್ದರು. ಚಿಕ್ಕತಾಯಮ್ಮನಿಗೆ ಬೇಕಾಗುವಷ್ಟು ಜಾಗ ಎಲ್ಲೂ ಕಾಣಲಿಲ್ಲ. ಅಲ್ಲೇ ಸಮಾಧಿಯೊಂದರ ಮೇಲೆ ಮಲಗಿದ್ದ ಒಬ್ಬಾತ ತಮ್ಮಯ್ಯನನ್ನೇ ನೋಡುತ್ತಿದ್ದು `ಏನು ಬೇಕು?' ಎಂದು ಕೇಳಿದ. ತಮ್ಮಯ್ಯ ಆತನನ್ನು ಗಮನಿಸಿರಲೇ ಇಲ್ಲ. ಆತನ ದನಿಗೆ ಬೆಚ್ಚಿಬಿದ್ದು, ಸಾವರಿಸಿಕೊಂಡು `ಏನಿಲ್ಲಾ' ಎಂದ. `ಮತ್ಯಾಕೆ ಇಲ್ಲಿ ಓಡಾಡ್ತಿದೀಯ? ನೀನೇನು ಮೂಳೆಗೀಳೆ ಕದಿಯೋವೋನು ಅಲ್ಲ ತಾನೆ?' ಮತ್ತೆ ಆ ವ್ಯಕ್ತಿ ಗಡಸು ದನಿಯಲ್ಲಿ ಕೇಳಿದ. ತಮ್ಮಯ್ಯನಿಗೆ ಆಶ್ಚರ್ಯವೂ ಭಯವೂ ಒಟ್ಟಿಗೇ ಆಯಿತು. `ಮೂಳೇನೂ ಕದೀತಾರ?' ಕುತೂಹಲದಿಂದ ಕೇಳಿದ. `ಯಾಕೆ ಹರಿಶ್ಚಂದ್ರ ಘಾಟ್‌ನಲ್ಲಿ ತಲೆಬುರುಡೆ, ಮೂಳೆಗಳನ್ನು ಕದ್ದು ಮೆಡಿಕಲ್ ಸ್ಟೂಡೆಂಟ್ಸ್‌ಗೆ ಮಾರೋದು ಪೇಪರ್‍ನಲ್ಲಿ ಬಂದಿತ್ತಲ್ಲಾ, ನಿನಗೆ ಗೊತ್ತಿಲ್ವಾ?' ಎಂದು ಹೇಳುತ್ತಾ ಆ ವ್ಯಕ್ತಿ ಎದ್ದು ಕೂತ. ತಮ್ಮಯ್ಯನಿಗೆ ಅಲ್ಲಿ ನಿಲ್ಲಲು ಎಂಥದೋ ಭಯವಾಗಿ ಹೊರನಡೆದ.

ಅಲ್ಲಿಂದ ಪಕ್ಕದಲ್ಲಿದ್ದ ಕ್ರಿಮೆಟೋರಿಯಂನೆಡೆಗೆ ನಡೆದ. ಅಲ್ಲಿ ಬಹಳಷ್ಟು ಜನ ನೆರೆದಿದ್ದರು. `ಯಾರೋ ಸತ್ತೋಗವ್ರೆ' ಎಂದುಕೊಂಡ. `ಕರೆಂಟ್'ನಲ್ಲಿ ಸುಡುವುದನ್ನು ತಮ್ಮಯ್ಯ ಎಂದೂ ನೋಡಿರಲಿಲ್ಲ, ಕೇಳಿದ್ದ ಅಷ್ಟೆ. ಅಷ್ಟೊಂದು ಜನ ಅಲ್ಲಿ ನೆರೆದಿದ್ದರೂ ಎಂಥದೋ ಅಘೋಷಿತ ಮೌನವಿತ್ತು. ಜನ ಪಿಸುಪಿಸು ಮಾತನಾಡುತ್ತಿದ್ದರು. ಅವರ ನಡುವೆಯೇ ತಮ್ಮಯ್ಯ ಮುನ್ನಡೆದ. ಅಲ್ಲಿ ಒಂದು ಶವವನ್ನು ಬಿಳಿಬಟ್ಟೆಯಲ್ಲಿ ಹೊದಿಸಿ ಮಲಗಿಸಿದ್ದರು. ಅದರ ಪಕ್ಕದಲ್ಲಿ ಹೆಂಗಸರು ಅಳುತ್ತಿದ್ದರು. ಜನ ಒಬ್ಬೊಬ್ಬರಾಗಿ ಸಾಂಬ್ರಾಣಿ ಹೊಗೆ ಹಾಕಿ ಕೈಮುಗಿದು ಪಕ್ಕಕ್ಕೆ ಸರಿದು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುತ್ತಿದ್ದರು. ಏನೂ ಮಾಡಲು ತೋಚದೆ ತಮ್ಮಯ್ಯ ಅಲ್ಲೆ ಕಟ್ಟೆಯ ಮೇಲೆ ಕೂತು ಎಲ್ಲ ನೋಡತೊಡಗಿದ. ಸ್ವಲ್ಪಹೊತ್ತಾದ ಮೇಲೆ ಯಾರೋ ಏರು ದನಿಯಲ್ಲಿ `ಎಲ್ಲರೂ ಸಾಂಬ್ರಾಣಿ ಹಾಕಿದ್ದು ಆಯಿತಾ?' ಎಂದು ಕೂಗಿದರು. `ಆಯ್ತು ಆಯ್ತು. ಟೈಂ ಆಯ್ತು ಬೇಗ ತಗೊಂಡು ನಡೀರಿ' ಎಂದರು. ಒಂದಷ್ಟು ಜನ ಶವವನ್ನು ಒಯ್ಯಲು ಮುಂದೆ ಬಂದರು. ಶವವನ್ನು ಮೇಲೆತ್ತಲು ತೊಡಗಿದಂತೆ ಪಕ್ಕದಲ್ಲಿದ್ದ ಹೆಂಗಸರ ಗೋಳಾಟ ಜೋರಾಯಿತು. ಒಬ್ಬಾಕೆ ಆ ಶವದ ಮೇಲೆಯೇ ಮುನ್ನುಗ್ಗಿದಳು. ಪಕ್ಕದಲ್ಲಿದ್ದ ಹೆಂಗಸರು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡರು. ತಮ್ಮಯ್ಯ ಆ ಜನರ ಜೊತೆಯೇ ಒಳಗೆ ಪ್ರವೇಶಿಸಿದ. ಒಳಗೆ ಮತ್ತೊಂದು ಕೋಣೆಯಿತ್ತು. ಶವವನ್ನು ಹೊರಗಡೆ ಕೋಣೆಯಲ್ಲಿಯೇ ಇರಿಸಿದರು. ಅಲ್ಲಿಯೂ ಎಂಥದೋ ಶಾಸ್ತ್ರಗಳನ್ನು ಮಾಡಿದರು. ಕೆಲವೊಬ್ಬರು ಒಳಗಡೆಯ ಕೋಣೆಯೊಳಕ್ಕೆ ಹೋಗುತ್ತಿದ್ದರು. ತಮ್ಮಯ್ಯನೂ ಅಲ್ಲಿಗೆ ಹೊರಟ. ಆ ಕೋಣೆ ಬಿಸಿಬಿಸಿಯಾಗಿತ್ತು; ಎಂಥದೋ ಕಮಟು ವಾಸನೆ. ಅದಕ್ಕೇ ಇದನ್ನು `ಕಮಟೋರಿಯಾ' ಎನ್ತಾರೇನೋ ಎಂದುಕೊಂಡ. ಮಧ್ಯೆ ಒಂದು ಗೂಡಿನಂತಿದ್ದು ಅದರ ಮುಂದುಗಡೆ ರೈಲ್ವೇ ಹಳಿಯಂತಿತ್ತು. ಆ ಗೂಡಿನ ಮಧ್ಯಭಾಗದಲ್ಲಿ ಕಿರಿದಾದ ಬಾಗಿಲೊಂದಿದ್ದು ಅದನ್ನು ಕಬ್ಬಿಣದ ಬಾಗಿಲಿನಿಂದ ಮುಚ್ಚಿತ್ತು. ಶವವನ್ನು ಒಳಕ್ಕೆ ತಂದರು. ಅಲ್ಲಿ ನಿಂತಿದ್ದ ಒಬ್ಬಾತ `ಇಲ್ಲಿಡಿ' ಎಂದು ತೋರಿಸಿದ. ಶವವನ್ನು ಕಬ್ಬಿಣದ ಸ್ಟ್ರೆಚರ್‌ನಂತಿದ್ದ ಹಲಗೆಯ ಮೇಲೆ ಮಲಗಿಸಿದರು. ಆಸ್ಪತ್ರೆಯಲ್ಲಿ ಚಿಕ್ಕತಾಯಮ್ಮನನ್ನು ಅಂಥದೇ ಸ್ಟ್ರೆಚರ್ ಮೇಲೆ ಸಾಗಿಸಿದ್ದುದು ತಮ್ಮಯ್ಯನಿಗೆ ನೆನಪಾಯಿತು. ಕೋಣೆಯಲ್ಲಿ ನೂಕುನುಗ್ಗಲಾಟ ಹೆಚ್ಚಾಯಿತು. ಶವವನ್ನು `ಇಲ್ಲಿಡಿ' ಎಂದು ತೋರಿಸಿದಾತ ಯಾವುದೋ ಕಂಬಿಯನ್ನು ಜೋರಾಗಿ ಎಳೆದ. ಗೂಡಿನ ಕಬ್ಬಿಣದ ಬಾಗಿಲು ತೆರೆದುಕೊಂಡಿತು. ಒಳಗಡೆ ಬೆಂಕಿ ಧಗಧಗ ಉರಿಯುತ್ತಿತ್ತು. `ಜಾಗಬಿಡಿ, ಜಾಗಬಿಡಿ' ಎಂದು ಶವದ ಒಂದು ಕೊನೆಗೆ ಬಂದು ಕಬ್ಬಿಣದ `ಸ್ಟ್ರೆಚರ್' ಅನ್ನು ಜೋರಾಗಿ ತಳ್ಳಲು ಮುಂದಾದ. ನೆರೆದಿದ್ದ ಜನ ಎಲ್ಲಾ `ಗೋವಿಂದಾ, ಗೋವಿಂದಾ' ಎಂದು ಕೂಗಿದರು. ಶವ ಒಳಗೆ, ಬೆಂಕಿಯ ಜ್ವಾಲೆಗಳೊಳಗೆ ಹೋಯಿತು. ಕ್ಷಣದಲ್ಲೇ ಶವಕ್ಕೆ ಹೊದಿಸಿದ್ದ ಬಟ್ಟೆ, ಹೂಗಳೆಲ್ಲಾ ಉರಿಯತೊಡಗಿದವು. ಜನರ `ಗೋವಿಂದಾ, ಗೋವಿಂದಾ' ತಾರಕಕ್ಕೇರಿತು. ಆ ವ್ಯಕ್ತಿ ಮತ್ತೆ ಆ ಕಂಬಿಯನ್ನು ಎಳೆದ, ಗೂಡಿನ ಬಾಗಿಲು ಮುಚ್ಚಿಕೊಂಡಿತು. ಜನ ಒಬ್ಬೊಬ್ಬರಾಗಿ ಕೈಮುಗಿದು ಹೊರನಡೆಯತೊಡಗಿದರು. ಆ ಕಂಬಿ ಎಳೆದಾತ ಸಂಜೆಬಂದು ಅಸ್ಥಿ ತೆಗೆದುಕೊಳ್ಳಿ ಎನ್ನುತ್ತಿದ್ದ. ಸೆಖೆ, ಕಮಟು ವಾಸನೆ ತಡೆಯದಂತಾಗಿ ತಮ್ಮಯ್ಯ ಹೊರಬಂದ. ಟವೆಲ್ಲಿನಲ್ಲಿ ಮುಖ ಒರೆಸಿಕೊಂಡ. ಅವನಿಗರಿವಿಲ್ಲದಂತೆ ಆತನ ಎದೆಬಡಿತ ಜೋರಾಗಿತ್ತು, ಮೈಯೆಲ್ಲಾ ಬೆವೆತಿತ್ತು. ಮನೆಯ ಕಡೆಗೆ ದಾಪುಗಾಲು ಹಾಕಿದ.

ಸ್ನಾನಮಾಡಿ ಸಂಜೆ ಹೊರಗೆ ಕೂತಿದ್ದಾಗ ಎಲ್ಲವನ್ನೂ ಚಿಕ್ಕತಾಯಮ್ಮನಿಗೆ ಹೇಳಬೇಕೆನ್ನಿಸಿತು. ಆಕೆಯೂ ತಮ್ಮಯ್ಯ ಹಿಂದಿರುಗಿದಾಗಿನಿಂದ ಏನೂ ಮಾತನಾಡಿರಲಿಲ್ಲ. ಹೊರಗಡೆ ಬಂದು ಒಂದು ಬೀಡಿ ಸೇದಿ ತುಂಡನ್ನು ಎಸೆದು ಒಳಹೊರಟ. ಇವನ ಹೆಜ್ಜೆ ಸದ್ದು ಕೇಳಿ ಚಿಕ್ಕತಾಯಮ್ಮ ಕಣ್ಣುತೆರೆದಳು. ಅಲ್ಲೇ ಪಕ್ಕದಲ್ಲೇ ತಮ್ಮಯ್ಯ ಕೂತ. ಇಬ್ಬರೂ ಏನೂ ಮಾತನಾಡಲಿಲ್ಲ.

`ಜಾಗ ನೋಡ್ಕಂಬಂದ್ಯಾ?' ಚಿಕ್ಕತಾಯಮ್ಮ ಕೇಳಿದಳು.
ತಮ್ಮಯ್ಯ ಏನೂ ಹೇಳಲಿಲ್ಲ. ಮುಖ ಪಕ್ಕಕ್ಕೆ ತಿರುಗಿಸಿದ. ಆತನಿಗೆ ಏನೊಂದೂ ಹೇಳಲು ತೋಚಲಿಲ್ಲ.
`ನೀನ್ಯಾಕೆ ಅಷ್ಟೊಂದು ಯೋಚ್ನೆ ಮಾಡ್ತೀಯ? ಏನೂ ಆಗಲ್ಲ ಸುಮ್ಕಿರು' ಎಂದ ಆಕೆಯ ಕಡೆಗೆ ನೋಡದೆ.
`ಮತ್ತೇ ಅದೇ ರಾಗ ಎಳೀತಾ ಇದೀಯಾ. ನಾ ಕೇಳಿದ್ದಕ್ಕೆ ಸುಮ್ನೆ ಉತ್ರ ಹೇಳು. ಸಾಯೋವೋಳ್ ನಾನಿದೀನಿ. ನಿನಗೇನ್ ಕಷ್ಟ' ಕೊಂಚ ಗಡುಸಾಗಿಯೇ ಕೇಳಿದಳು ಚಿಕ್ಕತಾಯಮ್ಮ.
ತಮ್ಮಯ್ಯ ಏನೂ ಹೇಳಲಿಲ್ಲ. ಮೇಲೇಳಲು ಹೊರಟ. ಚಿಕ್ಕತಾಯಮ್ಮ ಕೈಚಾಚಿ ಆತನ ಕಾಲುಹಿಡಕೊಂಡಳು.
`ಕೂತ್ಕೋ. ಎಲ್ಲಿಗೆ ಎದ್ದೋಗ್ತೀಯ? ಏನಾಯ್ತು ಹೇಳು' ಮತ್ತೆ ಪ್ರಶ್ನಿಸಿದಳು.
ತಮ್ಮಯ್ಯ ಕೂತು ಮತ್ತೆ ಗೋಡೆಗೆ ಒರಗಿದ.

`ಇಲ್ಲ ಬಿಡು, ಆ ಮಶಾಣದಲ್ಲಿ ಜಾಗ ಇಲ್ಲ. ಈಗ ಅಲ್ಲಿ ಯಾರ್‍ನೂ ಹೂಳ್ತಾ ಇಲ್ಲ. ಅಲ್ಲೇ ಕರೆಂಟ್‌ನಲ್ಲಿ ಸುಡತಾರಂತೆ'. ಇಷ್ಟು ಹೇಳುವಷ್ಟರಲ್ಲಿ ತಮ್ಮಯ್ಯನ ಗಂಟಲಲ್ಲಿ ಮಾತು ಹೂತುಹೋಗುವಂತಾಯಿತು. ಟವೆಲ್ಲಿನಿಂದ ಮುಖ ಒರೆಸಿಕೊಂಡ. ಚಿಕ್ಕತಾಯಮ್ಮನ ಮುಖ ನೋಡಲು ಧೈರ್ಯವೇ ಬರಲಿಲ್ಲ.

ಮಬ್ಬುಗತ್ತಲಲ್ಲಿ ಚಿಕ್ಕತಾಯಮ್ಮ ಅಳುತ್ತಿರುವುದು ಕೇಳಿಸಿತು. ಆಕೆಯೆಡೆಗೆ ನೋಡಿ ಆಕೆಯ ತಲೆಯ ಮೇಲೆ ಕೈ ಆಡಿಸಿದ. ಆ ಕೈ ಹಿಡಿದುಕೊಂಡು ಆಕೆ ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದಳು.

`ನಮ್ ಜಾತಿ ಎಲ್ಲಾ ನಾಶ ಆಗೋಯ್ತು. ನಾವೇನ್ ಬ್ರಾಂಬರಾ ಸತ್ ಮೇಲೆ ಸುಡಿಸಿಕೊಳ್ಳೋಕೆ? ನಾವೇನ್ ಜಾತಿ ಕೆಟ್ಟಿದ್ದೀವಾ ಸುಟ್ಟು ಬೂದಿ ಆಗೋಕೆ?' ಚಿಕ್ಕತಾಯಮ್ಮ ಅಳುತ್ತಲೇ ಇದ್ದಳು.

ಆಕೆ ಚಿಕ್ಕವಳಾಗಿದ್ದಾಗ ಆಕೆಯ ತಾಯಿ ಹೇಳುತ್ತಿದ್ದುದು ನೆನಪಾಯಿತು. ಆಗ ಊರಿಗೆಲ್ಲಾ ಪ್ಲೇಗ್ ಬಂದಾಗ ಸತ್ತವರನ್ನೆಲ್ಲ ಜಾತಿಗೀತಿ ನೋಡದೆ ಗುಡ್ಡೆ ಹಾಕಿ ಸುಡುತ್ತಿದ್ದರಂತೆ. `ನಾನೇನ್ ರೋಗಿಷ್ಟೇನಾ ಸುಡೋಕೆ.........' ಎನ್ನಲು ಹೊರಟವಳಿಗೆ ಆಕೆಯೂ ರೋಗಿಷ್ಟೆ ಎನ್ನುವುದು ನೆನಪಾಗಿ ಸುಮ್ಮನಾದಳು. ತಮ್ಮಯ್ಯ ಕೈಬಿಡಿಸಿಕೊಂಡು ಎದ್ದು ಹೊರಬಂದು ಜಗುಲಿಯ ಮೇಲೆ ಕೂತು ಬೀಡಿ ಹಚ್ಚಿದ.

ಅಡಿಗೆ ಮನೆ ಮತ್ತು ರೂಮಿನಲ್ಲಿ ಲೈಟ್‌ಗಳು ಆಫ್ ಆದವು. ವೆಂಕಟೇಶನ ಊಟವಾಗಿರಬಹುದೆಂದುಕೊಂಡ ತಮ್ಮಯ್ಯ. `ನಾನ್ ಕಣ್ಣು ಮುಚ್ಚೋ ಮೊದಲು ಒಂದ್ ಮದ್ವೆ ಆಗಿ ಸೊಸೇನ್ ಮನೇಗ್ ಕರ್‍ಕೊಂಡು ಬಾ' ಎಂದು ಆಗಾಗ ಗೋಗರೆಯುತ್ತಿದ್ದಳು ಚಿಕ್ಕತಾಯಮ್ಮ. `ನಾನು ಟ್ಯಾಕ್ಸಿ ತಗೊಳ್ಳೋವರ್‍ಗೂ ಮದ್ವೆ ಆಗಲ್ಲ' ಎನ್ನುತ್ತಿದ್ದ ವೆಂಕಟೇಶ. ಅವನು ಮದುವೆ ಮುಂದೂಡಲು ಅದೊಂದೇ ಕಾರಣ ಅಲ್ಲ ಅಂತ ತಮ್ಮಯ್ಯನಿಗೆ ಗೊತ್ತಿತ್ತು. `ಮದ್ವೇ ಆಗಿ ಹೆಂಡ್ತೀ ಮನೇಗ್ ಬಂದ್ರೆ ಅವಳು ಅಮ್ಮನ ರಕ್ತದ ಬಟ್ಟೆಗಳು ಒಗೆಯೋದರ ಜೊತೆಗೆ ಅವಳ ಗಲೀಜು ಬಟ್ಟೆಗಳನ್ನೂ ಒಗೀಬೇಕಾಗ್ತದೆ ಅಂತ ಅವನಿಗೆ ಗೊತ್ತಿದೆ' ಎಂದು ತಮ್ಮಯ್ಯ ಯೋಚಿಸುತ್ತಿದ್ದ. ಹಾಗೇ ಯೋಚನೆಯಲ್ಲಿ ಯಾವಾಗ ಕಣ್ಣು ಮುಚ್ಚಿತೋ ಗೊತ್ತಿಲ್ಲ, ಕಣ್ಣುಬಿಟ್ಟಾಗ ಬೆಳಕಾಗಿತ್ತು. ಎದ್ದು ಹೆಂಡತಿಯ ಬಳಿ ಹೋದ. ಅವಳನ್ನು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ, ಮೈ ತೊಳೆದು ಬಟ್ಟೆ ಬದಲಿಸಬೇಕು. ಇಬ್ಬರೂ ಮಾತನಾಡಲಿಲ್ಲ. ಬೇರೆ ಬಟ್ಟೆ ತೊಡಿಸುತ್ತಿದ್ದಾಗ ಚಿಕ್ಕತಾಯಮ್ಮ ಹೇಳಿದಳು,

`ನನ್ನ ಅಮ್ಮ ಅಮ್ಮ ಅಪ್ಪನ ಸಮಾಧಿ ಹತ್ರ ಕರೆದುಕೊಂಡು ಹೋಗು'. ಕರೆದುಕೊಂಡು ಹೋಗೋದೆಲ್ಲಿ, ಎತ್ತಿಕೊಂಡು ಹೋಗಬೇಕು. ಹೇಗೆ ಅಂತ ತಮ್ಮಯ್ಯ ಯೋಚಿಸುವಷ್ಟರಲ್ಲಿ ಆಕೆಯೇ ಹೇಳಿದಳು, `ವೆಂಕಟೇಶನ್ನ ಎಬ್ಬಿಸು. ಅವನ ಆಟೋ ಅಲ್ಲೀವರ್‍ಗೆ ಹೋಗ್ತದೆ' ಎಂದಳು.

ತಮ್ಮಯ್ಯ ಆಕೆಯನ್ನು ಹೊತ್ತು ತಂದು ಜಗುಲಿಯ ಮೇಲೆ ದಿಂಬಿಟ್ಟು ಒರಗಿಸಿ ಕಂಬಳಿ ಹೊದೆಸಿ ಮಗನನ್ನು ಎಬ್ಬಿಸಿ ಕರೆತಂದರು. ವೆಂಕಟೇಶನಿಗೂ ಬೆಳಬೆಳಿಗ್ಗೆ ಆಕೆಯ ಆಸೆ ಅರ್ಥವಾಗಲಿಲ್ಲ. ಹಳ್ಳಿಯ ಕಲ್ಲುಮಣ್ಣಿನ ರಸ್ತೆ ಚಿಕ್ಕತಾಯಮ್ಮನ ಮೈಯನ್ನು ಅಲುಗಾಡಿಸಿಹಾಕಿತು. ಆಕೆಯ ಹೊಟ್ಟೆಯೊಳಗೆ ಕಲ್ಲಿನಿಂದ ಜಜ್ಜಿದಂತೆ ನೋವಾಗುತ್ತಿತ್ತು. ತುಟಿಕಚ್ಚಿ ನೋವು ತಡೆದಳು. ಆಕೆಯ ಅಮ್ಮ ಅಪ್ಪನ ಸಮಾಧಿಯ ಪಕ್ಕದಲ್ಲಿನ ಜಗುಲಿಯ ಮೇಲೆ ತಂದಿದ್ದ ದಿಂಬನ್ನು ಇಟ್ಟು ಆಕೆಯನ್ನು ಒರಗಿಸಿ ತಮ್ಮಯ್ಯ ಬೀಡಿ ಸೇದಲು ಒಂದಷ್ಟು ದೂರದಲ್ಲಿ ಕೂತ. ವೆಂಕಟೇಶ ಆಟೋ ನಿಲ್ಲಿಸಿ ಪೊದೆಗಳ ಹಿಂದೆ ಹೋದ.

ಬೆಳಗಿನ ಮಂಜು ಸಂಪೂರ್ಣವಾಗಿ ಹೋಗಿರಲಿಲ್ಲ. ದೂರದ ಎಲ್ಲವೂ ಮಸಕು ಮಸಕು. ಚಿಕ್ಕತಾಯಮ್ಮನಿಗೆ ಆ ಜಮೀನಿನಲ್ಲಿ ಸಾವಿರಾರು ಬಾರಿ ಓಡಾಡಿದ್ದರೂ ಆಕೆಗೆ ಆ ದಿನ ಎಲ್ಲ ಹೊಸದಾಗಿ ಕಾಣಿಸುತ್ತಿತ್ತು. ಕಾಯಿಲೆ ಬಿದ್ದು ಹಾಸಿಗೆ ಹಿಡಿದಾಗಿನಿಂದ ಆಕೆ ಇಲ್ಲಿಗೆ ಬಂದಿರಲಿಲ್ಲ. ಸುತ್ತಮುತ್ತಲೂ ಹೊಲಗದ್ದೆಗಳಿದ್ದರೂ ಎಲ್ಲವೂ ಬೀಳುಬಿದ್ದಿದ್ದವು. ಕೆಲವರ್ಷಗಳ ಹಿಂದೆಯಷ್ಟೇ ಎಲ್ಲವೂ ಹಚ್ಚ ಹಸುರಾಗಿದ್ದ ಹೊಲಗದ್ದೆಗಳು ಇಂದು ಲೇ‌ಔಟು, ಸೈಟುಗಳಾಗುತ್ತಿವೆ. ಭೂಮಿಯೊಳಗಿನ ಫಲವತ್ತಾದ ಮಣ್ಣನ್ನೆಲ್ಲ ಹೊಟ್ಟೆಯೊಳಗಿನ ಕರುಳು ಬಗೆದಂತೆ ಹೊರಹಾಕಿ ರಸ್ತೆ, ಚರಂಡಿ ಮಾಡಿದ್ದಾರೆ. ಆ ರಸ್ತೆ ಚರಂಡಿಗಳಲ್ಲಿ ಆಕೆಯ ಮನೆ, ಅಪ್ಪ ಅಮ್ಮನ ಸಮಾಧಿಗಳೆಲ್ಲವೂ ಮುಳುಗಿಹೋಗುತ್ತವೆನ್ನಿಸಿತು. ಬೀಸುವ ತಣ್ಣನೆ ಗಾಳಿ ಮಂಜಿನಿಂದಾಗಿ ಕೊಂಚ ಚಳಿಯೇ ಎನ್ನಿಸಿತು. ಹೊದೆದುಕೊಂಡಿದ್ದ ಕಂಬಳಿಯನ್ನು ಇನ್ನಷ್ಟು ಬಿಗಿಗೊಳಿಸಿಕೊಂಡು ಗುಬ್ಬಚ್ಚಿಯಂತಾದಳು. ಲೇ‌ಔಟುಗಳಾಗುತ್ತಿದ್ದ ಹೊಲಗದ್ದೆಗಳೆಲ್ಲವೂ ಚಿಕ್ಕತಾಯಮ್ಮನಿಗೆ ಒಂದು ದೊಡ್ಡ ಸ್ಮಶಾನದಂತೆ ಕಾಣಿಸತೊಡಗಿತು, ಸೈಟುಗಳನ್ನು ಗುರುತಿಸಲು ಹಾಕಿರುವ ಕಲ್ಲುಗಳು ಸಮಾಧಿಯ ತಲೆಕಲ್ಲುಗಳ ಹಾಗೆ..............