16ನೇ ಮೇ 2019ರ ‘ಸುಧಾ‘ದಲ್ಲಿ ಪ್ರಕಟವಾದ ನನ್ನ ಚಿತ್ರ-ಲೇಖನ
ಜಾರ್ಜ್ ಟೌನ್ ಮಲೇಷಿಯಾದ ಪಿನಾಂಗ್ ರಾಜ್ಯದ ರಾಜಧಾನಿ ಹಾಗೂ ಅದೊಂದು ದ್ವೀಪನಗರವಾಗಿದೆ. 2008ರಲ್ಲಿ ಈ ನಗರವನ್ನು ವಿಶ್ವಸಂಸ್ಥೆಯು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಮಲಕ್ಕಾ ಕೊಲ್ಲಿಯ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳು ಕಳೆದ ಐನೂರು ವರ್ಷಗಳಿಂದ ಜಗತ್ತಿನ ಪೂರ್ವ ಮತ್ತು ಪಶ್ಚಿಮಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕøತಿಕ ವಿನಿಮಯದ ಕೇಂದ್ರಗಳಾದುದರಿಂದ ಈ ಮಾನ್ಯತೆ ಸಿಕ್ಕಿದೆ. ಅಷ್ಟಲ್ಲದೆ, ಐನೂರು ವರ್ಷಗಳಿಂದ ಬಹು ಸಂಸ್ಕøತಿಯ ಹಾಗೂ ಸಾಮರಸ್ಯೆಯ ಪರಂಪರೆಯನ್ನು ಈ ನಗರವು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಮಲಯರ ನಾಡಿಗೆ ಚೀನಿ ಮತ್ತು ಭಾರತೀಯರು ಬಂದು ನೆಲೆಸಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಭಾರತದ ಉಪಖಂಡದಿಂದ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ವ್ಯಾಪಾರಿಗಳು ಮಲೇಷಿಯಾದ ಉಪಖಂಡಕ್ಕೆ ಭೇಟಿ ನೀಡಿ ತಮ್ಮ ಧರ್ಮ, ಸಂಸ್ಕøತಿಗಳನ್ನು ಪರಿಚಯಿಸಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ. ಇಂದು ಮಲೇಷಿಯಾದ ಶೇ.61ರಷ್ಟು ಮುಸಲ್ಮಾನ ಧರ್ಮ ಆಚರಿಸುತ್ತಿದ್ದು ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಹಿಂದೂ ಧರ್ಮ, ತಾವೋ, ಸಿಖ್ ಧರ್ಮೀಯರು ಸಹ ಇದ್ದಾರೆ. ಇದರ ಜೊತೆಗೆ 1957ರವರೆಗೂ ಬ್ರಿಟಿಷ್ ವಸಾಹತಾಗಿದ್ದ ಜಾರ್ಜ್ ಟೌನ್ ಯೂರೋಪಿಯನ್ ವಿಶಿಷ್ಟ ವಾಸ್ತುಶಿಲ್ಪದ ಪಾರಂಪರಿಕ ಕಟ್ಟಡಗಳನ್ನು ಹೊಂದಿದೆ. ಯುನೆಸ್ಕೊ ಪ್ರಕಾರ ಈ ರೀತಿಯ ಬಹು ಸಂಸ್ಕøತಿಯ, ವಿಶಿಷ್ಟ ವಾಸ್ತು ವಿನ್ಯಾಸದ ನಗರಗಳಾದ ಮಲಕ್ಕಾ ಮತ್ತು ಜಾರ್ಜ್ ಟೌನ್‍ಗಳಿಗೆ ಸರಿಸಮನಾದುದು ಪೂರ್ವ ಮತ್ತು ದಕ್ಷಿಣ ಏಷಿಯಾದಲ್ಲಿ ಮತ್ತೆಲ್ಲೂ ಇಲ್ಲ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶಿಸುವುದಕ್ಕೂ ಮೊದಲೇ 1786ರಲ್ಲಿ ಪಿನಾಂಗ್ ತಲುಪಿ ಅಲ್ಲಿ 1786ರಲ್ಲಿ ಅದರ ಒಬ್ಬ ಕ್ಯಾಪ್ಟನ್ ಫ್ರಾನ್ಸಿಸ್ ಲೈಟ್ ಬ್ರಿಟಿಷ್ ವಸಾಹತು ಸ್ಥಾಪಿಸಿದ. ಅದು ಅವರ ಸರಕು ಸಾಗಾಣಿಕೆಯ ಬಂದರಾಯಿತು. ಬ್ರಿಟಿಷ್ ದೊರೆ 3ನೇ ಜಾರ್ಜ್ ನೆನಪಿನಲ್ಲಿ ಆ ನಗರಕ್ಕೆ ಜಾರ್ಜ್ ಟೌನ್ ಎಂದು ಹೆಸರಿಸಲಾಗಿದೆ. ಬ್ರಿಟಿಷರಿಂದ ಮಲೇಷಿಯಾಕ್ಕೆ 1957ರಲ್ಲಿ ಸ್ವಾತಂತ್ರ್ಯ ದೊರಕಿತು.
2008ರಲ್ಲಿ ಜಾರ್ಜ್ ಟೌನನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೊ ಗುರುತಿಸಿದ ನಂತರ 2009ರಲ್ಲಿ ಜಾರ್ಜ್ ಟೌನನ್ನು ಕಲೆಯಿಂದ ಮತ್ತಷ್ಟು ಸುಂದರಗೊಳಿಸಲು ಪಿನಾಂಗ್ ರಾಜ್ಯ ಸರ್ಕಾರವು ಹೊಸ ವಿಚಾರಗಳಿಗಾಗಿ "Marking Georgetown- An Idea Competition for a UNESCO World Heritage Site" ಎಂಬ ಒಂದು ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಏರ್ಪಡಿಸಿತು. ಅಲ್ಲಿ ದೊರಕಿದ ವಿಚಾರವೇ ಹಲವಾರು ಕಲೆ ಮತ್ತು ಸಂಸ್ಕøತಿಯ ವಿಶಿಷ್ಟತೆಗಳನ್ನು ಹೊಂದಿರುವ ಜಾರ್ಜ್ ಟೌನನ್ನು ಮತ್ತಷ್ಟು ಸುಂದರಗೊಳಿಸಲು `ಬೀದಿ ಕಲೆ' ಅಥವಾ Street Art ರಚನೆ. ಅದರಂತೆ ಐವತ್ತೆರಡು ಬೀದಿಗಳಲ್ಲಿ ಆ ಬೀದಿಯ ಕತೆ ಹೇಳುವ ಕಬ್ಬಿಣದ ಸರಳುಗಳಿಂದ ಮಾಡಿದ ವ್ಯಂಗ್ಯಚಿತ್ರಗಳನ್ನು ಸ್ಥಾಪಿಸಲಾಗಿದೆ. ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳ ಸ್ಥಾಪನೆ ಬಹುಶಃ ವಿಶ್ವದಲ್ಲಿ ಮೊಟ್ಟಮೊದಲನೆಯದಿರಬಹುದೇನೋ. `ಜನರ ಧ್ವನಿ' ಎಂಬ ಥೀಮ್‍ನೊಂದಿಗೆ ಸ್ಥಳೀಯ ವ್ಯಂಗ್ಯಚಿತ್ರಕಾರ/ಕಲಾವಿದ ಟಾಂಗ್ ಮುನ್ ಕಿಯಾರವರ ನಿರ್ದೇಶನದೊಂದಿಗೆ Sculpture at Work ಎನ್ನುವ ಸ್ಥಳೀಯ ಕಂಪೆನಿಯೊಂದು 2010ರಲ್ಲಿ ಈ ರೀತಿಯ ಕಬ್ಬಿಣದ ಸರಳುಗಳ ವ್ಯಂಗ್ಯಚಿತ್ರಗಳನ್ನು ರಚಿಸಿ ಸ್ಥಾಪಿಸಿದೆ. ಪ್ರತಿಯೊಂದು ವ್ಯಂಗ್ಯಚಿತ್ರವು ಪಿನಾಂಗ್‍ನ ಹಾಗೂ ಆಯಾ ಬೀದಿಯ ಚರಿತ್ರೆಯನ್ನು ವಿಡಂಬನಾತ್ಮಕವಾಗಿ ತಿಳಿಸುತ್ತದೆ. ಆಯಾ ಚಿತ್ರದ ಜೊತೆಗೆ ವಿವರಣೆಯೂ ಇದೆ ಹಾಗೂ ಕಬ್ಬಿಣದ ಸರಳಿನ ವ್ಯಂಗ್ಯಚಿತ್ರದಡಿಯಲ್ಲಿ ವ್ಯಂಗ್ಯಚಿತ್ರಕಾರನ ಸಹಿಯೂ ಇದೆ. ಈ ಪ್ರಾಯೋಜನೆಯಲ್ಲಿ ಟಾಂಗ್ ಮುನ್ ಕಿಯಾರವರ ಜೊತೆಗೆ ಮಲೇಷಿಯಾದ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾದ ಬಾಬಾ ಚುವಾ, ರೆಗ್ಗೀ ಲೀ ಮತ್ತು ಲೆಫ್ಟಿಯವರ ವ್ಯಂಗ್ಯಚಿತ್ರಗಳಿವೆ.
ಮಂತ್ರಿ ರಸ್ತೆಯನ್ನು ಹಿಂದೆ `ಲವ್ ಲೇನ್' ಎಂದು ಕರೆಯುತ್ತಿದ್ದರಂತೆ. ಅಲ್ಲಿರುವ ಒಂದು ವ್ಯಂಗ್ಯಚಿತ್ರದಲ್ಲಿ ಗಂಡಸೊಬ್ಬನು ಹಗ್ಗವೇರಿ ಮನೆಯೊಂದರ ಕಿಟಕಿಯೊಂದನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾನೆ. ಅದರ ಹೆಸರು `ನನ್ನ ಗಂಡ ಎಲ್ಲಿ?' ಅಥವಾ `ಮೋಸ ಮಾಡುತ್ತಿರುವ ಗಂಡ'. ಅಲ್ಲಿರುವ ಟಿಪ್ಪಣಿ, `ಸ್ಥಳೀಯ ಚೀನಿಯರ ಹೇಳಿಕೆಯಂತೆ ಮಂತ್ರಿ ರಸ್ತೆಯಲ್ಲಿನ ಸಿರಿವಂತರು ಇಲ್ಲಿ ತಮ್ಮ ತಮ್ಮ ಪ್ರೇಯಸಿ/ಉಪಪತ್ನಿಯರನ್ನು ಹೊಂದಿದ್ದರು, ಅದರಿಂದಾಗಿಯೇ ಇದನ್ನು ಪ್ರೇಮ ರಸ್ತೆ (ಲವ್ ಲೇನ್) ಎಂದೂ ಕರೆಯುತ್ತಿದ್ದರು' ಎಂದು ಹೇಳುತ್ತದೆ.
ಅರ್ಮೇನಿಯನ್ ರಸ್ತೆಯಲ್ಲಿರುವ `ಮೆರವಣಿಗೆ' ಎಂಬ ವ್ಯಂಗ್ಯಚಿತ್ರ ಇಬ್ಬರು ವ್ಯಕ್ತಿಗಳು ಹುಲಿಯೊಂದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರೆ ಪ್ರವಾಸಿಗನೊಬ್ಬನಿಗೆ ಈ ಹಿಂದೆ 1930ರ ದಶಕದಲ್ಲಿ ಹುಲಿಯನ್ನು ಕೊಂದು ಕೊಂಡೊಯ್ಯುತ್ತಿರುವುದು ನೆನಪಾಗುತ್ತಿದೆ ಹಾಗೂ ಅಲ್ಲಿನ ಟಿಪ್ಪಣಿ ಚೀನಿಯರು ಹುಲಿಯ ವರ್ಷದಲ್ಲಿ ತಮ್ಮ ದುರಾದೃಷ್ಟ ತೊಡಗಿಸಲು ಹುಲಿಯನ್ನು ಮೆರವಣಿಗೆ ಕೊಂಡೊಯ್ಯುತ್ತಾರೆ ಎಂದು ತಿಳಿಸುತ್ತದೆ.
ಸೆಕ್ ಚುವಾನ್ ರಸ್ತೆಯಲ್ಲಿರುವ ಟಿಂಗ್ ಟಿಂಗ್ ಥಾಂಗ್ ವ್ಯಂಗ್ಯಚಿತ್ರ.
ಹುಡುಗಿಯೊಬ್ಬಳಿಗೆ ಜಡೆ ಹಾಕುತ್ತಿರುವ ವ್ಯಂಗ್ಯಚಿತ್ರವೊಂದು ರೋಪ್ ವಾಕ್ ರಸ್ತೆಯಲ್ಲಿದೆ. ಈ ಹಿಂದೆ ಅಲ್ಲಿ ಹಗ್ಗಗಳನ್ನು ಹೆಣೆಯಲಾಗುತ್ತಿತ್ತು ಎಂದು ಅಲ್ಲಿನ ಟಿಪ್ಪಣಿ ಹೇಳುತ್ತದೆ.
ಮಲಯ್ ರಸ್ತೆಯಲ್ಲಿನ `ಕೌ ಅಂಡ್ ಫಿಶ್' ವ್ಯಂಗ್ಯಚಿತ್ರವು ಆ ರಸ್ತೆಯಲ್ಲಿ ಮೊದಲು ಕಸಾಯಿಖಾನೆ ಇದ್ದದ್ದನ್ನು ಹಾಗೂ ಮಾರಾಟಮಾಡಲು ಮೀನುಗಳನ್ನು ತೂಗುಹಾಕುತ್ತಿದ್ದುದನ್ನು ಹೇಳುತ್ತದೆ.
ಚೀನಿ ರಸ್ತೆಯಲ್ಲಿ ಗಾಡಿಯಲ್ಲಿ ತಿಂಡಿ ತಿನಿಸು ಮಾರುವ ಚೀನಿ ವ್ಯಾಪಾರಿಗಳು ತಾವು ಬರುತ್ತಿರುವುದನ್ನು ತಿಳಿಸಲು ಬಾಣಲೆಯನ್ನು ಸೌಟಿನಿಂದ ಬಡಿದು ಮಾಡುತ್ತಿದ್ದ ಶಬ್ದವೇ `ಟೊಕ್ ಟೊಕ್ ಮೀ' ವ್ಯಂಗ್ಯಚಿತ್ರವಾಗಿದೆ. ಈ ವ್ಯಂಗ್ಯಚಿತ್ರಗಳ ವೈಶಿಷ್ಟ್ಯತೆಯೆಂದರೆ ಕಬ್ಬಿಣದ ಸರಳುಗಳಿಂದ ಮಾಡಿರುವ ಇವುಗಳಲ್ಲಿ ವ್ಯಂಗ್ಯಚಿತ್ರ ಕಲಾವಿದನ ಕುಶಲತೆ ಹಾಳೆಯ ಮೇಲೆ ಬರೆದಷ್ಟೇ ನವಿರಾಗಿವೆ. ಅಲ್ಲದೆ ಗೋಡೆ ಹಾಗೂ ಅದರಲ್ಲಿನ ಕಿಟಕಿ ಬಾಗಿಲುಗಳನ್ನು ಹಿನ್ನೆಲೆಯಾಗಿಯೇ ಬಳಸಿಕೊಳ್ಳಲಾಗಿದೆ. ಟೊಕ್ ಟೊಕ್ ಮೀ ವ್ಯಂಗ್ಯಚಿತ್ರದಲ್ಲಿ ಮನೆಯಲ್ಲಿನ ಕಿಟಕಿಯಿಂದ ಗಾಡಿಯವನಿಂದ ಆಹಾರ ಕೊಳ್ಳಲು ಬುಟ್ಟಿಯನ್ನು ಇಳಿಬಿಟ್ಟಿರುವುದನ್ನು ಕಾಣಬಹುದು.
ಗಟ್ ಚೆಬು ಚೂಲಿಯಾ ರಸ್ತೆಯಲ್ಲಿರುವ `ಡಬಲ್ ರೋಲ್' ವ್ಯಂಗ್ಯಚಿತ್ರ 1909ರವರೆಗೂ ಅಲ್ಲಿನ ಪೋಲೀಸರೇ ಅಗ್ನಿಶಾಮಕ ದಳದವರ ಕೆಲಸ ನಿರ್ವಹಿಸುತ್ತಿದ್ದರೆಂದು ಹೇಳುತ್ತದೆಯಲ್ಲದೆ ಆ ವ್ಯಂಗ್ಯಚಿತ್ರದಲ್ಲಿನ ಪೋಲೀಸ್ ಒಬ್ಬ ಸರ್ದಾರ್‍ಜೀ ಸಹ ಆಗಿರುವುದನ್ನು ತೋರಿಸುತ್ತದೆ.
ಈ ರೀತಿಯಲ್ಲಿ ಜಾರ್ಜ್ ಟೌನ್‍ನಲ್ಲಿನ ಪ್ರತಿಯೊಂದು ವ್ಯಂಗ್ಯಚಿತ್ರವೂ ಅಲ್ಲಿನ ಕತೆ ಹೇಳುತ್ತದೆ.
ಜಾರ್ಜ್ ಟೌನ್‍ನ ಪ್ರಖ್ಯಾತ ಸೈಕಲ್ ತುಳಿಯುತ್ತಿರುವ ಮ್ಯೂರಲ್ ಜೊತೆ ಲೇಖಕರು
ವ್ಯಂಗ್ಯಚಿತ್ರಗಳಿಂದ ಪ್ರಾರಂಭವಾದ ಈ ಕಲೆಯ ಅನುಷ್ಠಾನ ನಂತರ ಮ್ಯೂರಲ್ ಕಲೆಗೆ ಹಾದಿಮಾಡಿಕೊಟ್ಟಿತು. ಲಿಥುವೇನಿಯಾದ ಕಲಾವಿದ ಅರ್ನೆಸ್ಟ್ ಜಖರೆವಿಕ್ ಜಾರ್ಜ್ ಟೌನ್‍ನಲ್ಲೆಲ್ಲಾ ಗೋಡೆಗಳ ಮೇಲೆ ಮ್ಯೂರಲ್ ಕಲೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು `ಸೈಕಲ್ ತುಳಿಯುತ್ತಿರುವ ಮಕ್ಕಳು'. ನಿಜವಾದ ಸೈಕಲ್ ಗೋಡೆಗೆ ಬಂಧಿಸಿ ಗೋಡೆಯ ಮೇಲೆ ಚಿತ್ರ ಬಿಡಿಸಿದ್ದಾನೆ ಕಲಾವಿದ ಅರ್ನೆಸ್ಟ್ ಜಖರೆವಿಕ್. ಪೀನಾಂಗ್‍ಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ಆ ಮಕ್ಕಳ ಸೈಕಲ್‍ನ ಕ್ಯಾರಿಯರ್ ಮೇಲೆ ಕೂತು ಫೋಟೋ ತೆಗೆಸಿಕೊಳ್ಳುತ್ತಾರೆ.
ಚಿತ್ರ-ಲೇಖನ: ಡಾ. ಜೆ.ಬಾಲಕೃಷ್ಣ
j.balakrishna@gmail.com