ಶನಿವಾರ, ನವೆಂಬರ್ 19, 2011

`ಸ್ನಾನದ ಮನೆ’ಯೆಂಬ ಪುಷ್ಪ ನಗರಿ

10ನೇ ನವೆಂಬರ್ ಸುಧಾದಲ್ಲಿ ನನ್ನ ಲೇಖನ `ಸ್ನಾನದ ಮನೆಯೆಂಬ ಪುಷ್ಪ ನಗರಿ' ಪ್ರಕಟವಾಗಿದೆ. ಅಲ್ಲಿ ಓದಿಲ್ಲದಿದ್ದಲ್ಲಿ ಆ ಚಿತ್ರ-ಲೇಖನವನ್ನು ಇಲ್ಲಿ ಓದಬಹುದು.


ಲಂಡನ್‌ನಲ್ಲಿ ಆ ದಿನ ಉಳಿದುಕೊಂಡಿದ್ದ ನಮಗೆ ಆ ದಿನದ ಪ್ರವಾಸಕ್ಕೆ ನಮ್ಮನ್ನು ಪಿಕ್‌ಅಪ್ ಮಾಡುವ ವ್ಯವಸ್ಥೆಯಿತ್ತು. ಒಂದೊಂದು ಪ್ರದೇಶದಲ್ಲಿ ಒಂದೊಂದು ಹೋಟೆಲ್‌ನಿಂದ ಆ ವ್ಯವಸ್ಥೆ ಇದ್ದುದರಿಂದ ಲಂಡನ್ನಿನ ಯೂಸ್ಟನ್‌ನಲ್ಲಿನ ಹೋಟೆಲ್ ಐಬಿಸ್‌ನಲ್ಲಿ ಉಳಿದುಕೊಂಡಿದ್ದ ನಾವು ಹತ್ತು ಹೆಜ್ಜೆ ಪಕ್ಕದಲ್ಲೇ ಇದ್ದ ಥಿಸಲ್ ಯೂಸ್ಟನ್ ಹೋಟೆಲ್‌ಗೆ ಬಂದೆವು. ಅಲ್ಲಿಂದ ಆ ದಿನದ ಟೂರ್ ಪಿಕ್‌ಅಪ್ ವಾಹನ ಬಂದು ನಮ್ಮನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದಿತು. ಈ ಪ್ರವಾಸಗಳನ್ನು ಮತ್ತು ಹೋಟೆಲ್‌ನ ರೂಮ್‌ಗಳ ಬುಕಿಂಗ್‌ಗಳನ್ನು ಬೆಂಗಳೂರಿನಲ್ಲಿ ನನ್ನ ಮನೆಯಲ್ಲೇ ಕೂತು ಮಾಡಿದ್ದೆ. ಇಂಟರ್‌ನೆಟ್ ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ಸಾಕಷ್ಟು ಸಾಲದ ಲಿಮಿಟ್ ಇದ್ದಲ್ಲಿ ಇವೆಲ್ಲಾ ಸುಲಭವೆನ್ನಿಸಿಬಿಡುತ್ತದೆ.
ನಮ್ಮನ್ನು ಹೋಟೆಲಿನಿಂದ ಕರೆದೊಯ್ದ ಬಸ್ಸಿನ ಡ್ರೈವರ್ ಭಾರತೀಯನೇ ಇರಬಹುದೆನ್ನಿಸಿತು, ಏಕೆಂದರೆ ಅವನ ಹಣೆಯಲ್ಲಿ ಕುಂಕುಮವಿತ್ತು ಹಾಗೂ ಬಸ್ ಹತ್ತುವಾಗ ಅವನು ನಮ್ಮನ್ನು ನೋಡಿ ಮುಗುಳ್ನಕ್ಕ. ಆ ಬಸ್ ಆ ಪ್ರವಾಸದ ಕಂಪೆನಿಯ ಕೇಂದ್ರ ಸ್ಥಾನಕ್ಕೆ ಕರೆದೊಯ್ದ. ಅಲ್ಲಿ ವಿವಿಧೆಡೆಗೆ ಪ್ರವಾಸ ಹೊರಡುವವರೆಲ್ಲಾ ಆಯಾ ಟೂರ್ ಸಂಖ್ಯೆಯಿದ್ದ ಬೋರ್ಡಿನ ಹಿಂದೆ ಸಾಲುಗಟ್ಟಿ ನಿಂತಿದ್ದರು. ಬ್ರಿಟನ್ ಒಳಗೊಂಡಂತೆ ಇಡೀ ಯೂರೋಪಿನಲ್ಲೆಲ್ಲಾ ಜನ ಪ್ರತಿಯೊಂದಕ್ಕೂ ಸರತಿಯ ಸಾಲು ಕಟ್ಟಿ ನಿಲ್ಲುವುದು ಅವರ ಶಿಸ್ತು ತೋರಿಸುವಂತಿತ್ತು. ನಾವು ನಮ್ಮ ಟೂರ್ ಸಂಖ್ಯೆಯ ಸಾಲಿನಲ್ಲಿ ನಿಂತೆವು. ನಮ್ಮ ಹಿಂದೆಯೂ ಕೆಲವರು ಬಂದು ನಿಂತರು. ಸ್ವಲ್ಪ ಹೊತ್ತಿನ ನಂತರ ಮುದುಕಿಯೆನ್ನಬಹುದಾದ ಹೆಂಗಸು- ಆಕೆ ನಮ್ಮ ಆ ದಿನದ ಗೈಡ್ ಆದುದರಿಂದ ಆಕೆಯನ್ನು ‘ಗೈಡಜ್ಜಿ’ ಎಂದು ಕರೆಯಬಹುದು- ಒಂದು ಹೆಸರುಗಳಿದ್ದ ಪಟ್ಟಿ ತೆಗೆದುಕೊಂಡು ಬಂದು ಯಾರ‍್ಯಾರು ಬಂದಿದ್ದಾರೆ ಎಂದು ಗುರುತು ಹಾಕಿಕೊಳ್ಳತೊಡಗಿದಳು. ಆಕೆಗೆ ಅಷ್ಟು ವಯಸ್ಸಾಗಿದ್ದುದರಿಂದ ಆಕೆ ನಮಗೇನು ಗೈಡ್ ಮಾಡಬಹುದು, ಅದೆಷ್ಟು ಓಡಾಡಬಹುದು ಎನ್ನಿಸಿತ್ತು. ಆದರೆ ಆಕೆ ನನ್ನ ಅನಿಸಿಕೆಯನ್ನೇ ತಿರುಗಾಮುರುಗಾ ಮಾಡಿದ್ದಳು. ಆಕೆಯೊಂದಿಗೆ ವಿಂಡ್ಸರ್ ಕ್ಯಾಸಲ್‌ನಲ್ಲಿ ಬಿರಬಿರನೆ ಹೆಜ್ಜೆ ಹಾಕುವುದು ನಮಗೇ ಕಷ್ಟವಾಗುವಂತಿತ್ತು. ನಾವು ಏದುಸಿರು ಬಿಡುತ್ತಿದ್ದರೆ ಆಕೆ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿಬಿಡುತ್ತಿದ್ದಳು. ಇಡೀ ದಿನ ಅಡೆ ತಡೆಯಿಲ್ಲದೆ, ಕೆಲವೊಮ್ಮೆ ಬೇಸರ ಹುಟ್ಟಿಸುವಂತೆ ಸತತವಾಗಿ ಮಾತನಾಡಿದ್ದಳು.
ಆ ದಿನದ ಮೊದಲ ಭೇಟಿ ಇದ್ದದ್ದು ವಿಂಡ್ಸರ್ ಕ್ಯಾಸಲ್‌ಗೆ. ಈಗಲೂ ಬ್ರಿಟನ್ನಿನ ರಾಣಿ ಮತ್ತು ರಾಜಕುಮಾರರು ವಾಸಿಸುವ ಅರಮನೆಯೂ ಅದಾಗಿದೆ. ಮೊದಲಿನಿಂದಲೂ ಅರಮನೆಗಳ ಬಗೆಗೆ ನನ್ನ ವಿಚಿತ್ರ ತಾತ್ಸಾರವಿದೆ. ಅರಮನೆಗಳು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿ ನಿರ್ಮಿಸಿದ್ದರೂ ಅವು ಸಾರ್ವಜನಿಕ ಬಳಕೆಗಾಗಿ ಇರಲಿಲ್ಲ. ಯಾರೋ ಕೆಲವರ ಸುಖ ಸಂತೋಷಕ್ಕಾಗಿ ನಿರ್ಮಿಸಿಕೊಂಡವು ಅವು ಎನ್ನುವುದರ ಜೊತೆಗೆ ಅವುಗಳ ನಿರ್ಮಾಣದ ಹಿಂದೆ ಕ್ರೌರ್ಯ, ಹಿಂಸೆ, ದುರಾಸೆ, ದಬ್ಬಾಳಿಕೆ ಮತ್ತು ಶೋಷಣೆಗಳ ಮಹಾಪೂರವೇ ಇರುತ್ತದೆ. ಹಾಗಾಗಿ ವಿಂಡ್ಸರ್ ಬಗೆಗೆ ಹೆಚ್ಚಿಗೆ ಹೇಳದೆ ನಮ್ಮ ಮುಂದಿನ ಭೇಟಿಯ ಸ್ಥಳವಾದ ‘ಸ್ನಾನದ ಮನೆ’ಗೆ ನೇರ ಹೋಗುತ್ತೇನೆ.

ಬಾತ್ ನಗರ

ಒಂದು ಸ್ನಾನದ ಮನೆಯ ಸುತ್ತಲೇ ಒಂದು ನಗರ ಬೆಳೆದಿದೆಯೆಂಬುದು ವಿಶೇಷ ಸಂಗತಿ. ಅದು ಅಂತಿಂಥ ಸ್ನಾನದ ಮನೆಯಲ್ಲಾ- ರೋಮನ್ನರು ನಿರ್ಮಿಸಿದ ಸ್ನಾನದ ಮನೆ! ಅದನ್ನು ನಿರ್ಮಿಸಿ ಎರಡು ಸಾವಿರ ವರ್ಷಗಳಾಗಿವೆ. ಅದರ ಸುತ್ತ ನಿರ್ಮಾಣಗೊಂಡ ನಗರದ ಹೆಸರು ಬಾತ್- ಅರ್ಥಾತ್ ಸ್ನಾನದ ಮನೆ. ಆ ನಗರವನ್ನು ಪುಷ್ಪ ನಗರಿಯೆಂದೂ ಸಹ ಕರೆಯಬಹುದು. ನೀವು ನಗರ ಪ್ರವೇಶಿಸುತ್ತಿರುವಂತೆ ಎಲ್ಲೆಲ್ಲೂ ಹೂಸಸಿಗಳು, ಹೂ ಬುಟ್ಟಿಗಳು ಕಾಣತೊಡಗುತ್ತವೆ. ಮನೆಗಳ ಮಚ್ಚಿನ ಮೇಲೆ ಹೂ ಸಸಿಗಳು, ಬುಟ್ಟಿಗಳಲ್ಲಿ ಹೂಗಳು- ಸ್ಥಳವಿದ್ದ ಕಡೆಯಲ್ಲೆಲ್ಲಾ ಹೂಗಳಿರುತ್ತವೆ. ನಮ್ಮ ಗೈಡಜ್ಜಿ ಹೇಳಿದಂತೆ ಪ್ರತಿವರ್ಷ ನಡೆಯುತ್ತಿದ್ದ ‘ಪುಷ್ಪ ನಗರ’ ಸ್ಪರ್ಧೆಯಲ್ಲಿ ಯಾವಾಗಲೂ ಬಾತ್ ನಗರವೇ ಬಹುಮಾನ ಪಡೆಯುತ್ತಿದ್ದುದರಿಂದ ಬೇರೆ ನಗರಗಳಿಗೂ ಬಹುಮಾನ ಸಿಗಲೆಂದು ಒಂದಷ್ಟು ವರ್ಷ ಬಾತ್ ನಗರಕ್ಕೆ ಸ್ಪರ್ಧೆಗೆ ಪ್ರವೇಶ ನೀಡದೆ ಹೊರಗಿರಿಸಿದ್ದರಂತೆ. ಖ್ಯಾತ ಇಂಗ್ಲಿಷ್ ಲೇಖಕಿ ಜೇನ್ ಆಸ್ಟೆನ್ ಸಹ ಆ ನಗರದಲ್ಲಿ 1801ರಿಂದ 1805ರವರೆಗೆ ವಾಸಿಸಿದ್ದಳಂತೆ. ಆ ಮನೆ ಈಗಲೂ ಇದ್ದು ಅದರ ಮೇಲೆ ಅದನ್ನು ತಿಳಿಸುವ ಫಲಕವನ್ನೂ ಹಾಕಿದೆ.
ಬಾತ್ ನಗರವು ಲಂಡನ್ನಿನ ಪಶ್ಚಿಮಕ್ಕೆ 156 ಕಿ.ಮೀ.ಗಳ ದೂರದಲ್ಲಿದೆ. ರಾಣಿ ಒಂದನೇ ಎಲಿಜಬೆತ್ 1590ರಲ್ಲೇ ಅದಕ್ಕೆ ನಗರದ ಸ್ಥಾನಮಾನ ನೀಡಿದ್ದಾಳೆ. ಬಾತ್ ನಗರವನ್ನು 1982ರಲ್ಲಿ ‘ವಿಶ್ವ ಪರಂಪರಾ ತಾಣ’ಗಳ ಪಟ್ಟಿಗೆ ಸೇರಿಸಲಾಗಿದೆ.
ರೋಮನ್ನರು ಕ್ರಿಸ್ತ ಶಕೆಯ ಆರಂಭದಲ್ಲಿ ನಿರ್ಮಿಸಿದ ಬಿಸಿ ನೀರ ಸ್ನಾನದ ಕೊಳ

ಆ ಸ್ಥಳದಲ್ಲಿ ಖನಿಜ ಬಿಸಿನೀರ ಬುಗ್ಗೆಯಿದೆ. ಆ ಬುಗ್ಗೆಯೇ ಆ ನಗರದ ನಿರ್ಮಾಣಕ್ಕೆ ಕಾರಣವಾಗಿದೆ. ಅದರ ಬಗೆಗಿನ ಐತಿಹ್ಯದ ಉಲ್ಲೇಖಗಳು ರೋಮನ್ನರು ಅಲ್ಲಿ ಕಾಲಿರಿಸುವ ಮೊದಲೇ ಇತ್ತು. ನೆನಪಿನ ಎಲ್ಲೆಗೂ ಹಿಂದಿನ ಕಂಚಿನ ಯುಗದಲ್ಲಿನ ಸೆಲ್ಟಿಕ್ ಜನಾಂಗದ ರಾಜನೊಬ್ಬನಿಗೆ ಬ್ಲಾದುದ್ ಎಂಬ ರಾಜಕುಮಾರನಿರುತ್ತಾನೆ (ಆ ರಾಜಕುಮಾರ ಆ ಬಿಸಿನೀರ ಬುಗ್ಗೆಗಳನ್ನು ಕಂಡುಹಿಡಿದ ವರ್ಷವನ್ನು ಕ್ರಿ.ಪೂ. 863 ಎಂದು ಬ್ಲಾದುದ್‌ನ ವಿಗ್ರಹದ ಕೆಳಗೆ 1690ರಲ್ಲಿ ರಚಿಸಿರುವ ಶಿಲಾಫಲಕ ತಿಳಿಸುತ್ತದೆ). ಆ ರಾಜಕುಮಾರನ ದುರದೃಷ್ಟವೆನ್ನುವಂತೆ ಅವನಿಗೆ ಕುಷ್ಠರೋಗ ಬರುತ್ತದೆ. ತಂದೆಯಾದ ರಾಜನೇ ತನ್ನ ಮಗನನ್ನು ಆ ಕಾರಣದಿಂದಾಗಿ ರಾಜ್ಯದಿಂದ ಬಹಿಷ್ಕರಿಸುತ್ತಾನೆ. ಹೊರಗೆ ಕಾಡಿನಲ್ಲಿರುವ ಕುಷ್ಠರೋಗಿ ರಾಜಕುಮಾರ ತನ್ನ ಜೀವನೋಪಾಯಕ್ಕೆ ಬೇರೆ ದಾರಿ ತೋಚದೆ ಹಂದಿಗಳನ್ನು ಮೇಯಿಸಿಕೊಂಡಿರುತ್ತಾನೆ. ಅವನಿಂದ ಆ ಹಂದಿಗಳಿಗೂ ಕುಷ್ಠರೋಗ ಹರಡುತ್ತದೆ. ಆ ಕಾಡಿನಲ್ಲಿ ಬಿಸಿ ಮತ್ತು ಹೊಗೆಯಾಡುವ ಕೆಸರಿರುವ ಸ್ಥಳವೊಂದಿರುತ್ತದೆ. ಆ ಹಂದಿಗಳಲ್ಲಿ ಕೆಲವು ಆ ಬಿಸಿ ಮತ್ತು ಹೊಗೆಯಾಡುವ ಕೆಸರಿನಲ್ಲಿ ಹೊರಳಾಡಿ ಅವುಗಳ ರೋಗ ವಾಸಿಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುವ ರಾಜಕುಮಾರ ಬ್ಲಾದುದ್ ತಾನೂ ಸಹ ಆ ಕೆಸರಿನಲ್ಲಿ ಹೊರಳಾಡುತ್ತಾನೆ. ಆಶ್ಚರ್ಯವೆಂಬಂತೆ ಅವನ ಕುಷ್ಠರೋಗ ವಾಸಿಯಾಗುತ್ತದೆ. ರಾಜ್ಯಕ್ಕೆ ಹಿಂದಿರುಗುವ ಬ್ಲಾದುದ್‌ನನ್ನು ತನ್ನ ತಂದೆ ಸ್ವಾಗತಿಸುತ್ತಾನೆ ಹಾಗೂ ಆತನ ನಂತರ ಬ್ಲಾದುದ್‌ನೇ ಆ ರಾಜ್ಯದ ರಾಜನಾಗುತ್ತಾನೆ. ತನ್ನ ರೋಗ ವಾಸಿಮಾಡಿದ ಬಿಸಿ ನೀರಿನ ಕೆಸರಿರುವ ಸ್ಥಳದಲ್ಲಿ ಶಮನ ದೇವತೆ ಸುಲಿಸ್‌ಳ ಒಂದು ದೇವಾಲಯವನ್ನು ಹಾಗೂ ಅದೇ ಸ್ಥಳದಲ್ಲಿ ಒಂದು ಗ್ರಾಮವನ್ನೂ ಸಹ ನಿರ್ಮಿಸುತ್ತಾನೆ. ಅದೇ ಮುಂದೆ ಬಾತ್ ನಗರವಾಗಿದೆಯಂತೆ. ಆ ಸ್ಥಳದಲ್ಲಿ ಪುರಾತನ ಮರದ ದೇವಾಲಯದ ಅವಶೇಷಗಳೂ ದೊರೆತಿವೆ. ಆ ನಗರದಲ್ಲಿ ಈಗಲೂ ವಿಶೇಷ ಸಂದರ್ಭಗಳಲ್ಲಿ ನಗರದ ನಿರ್ಮಾಣಕ್ಕೆ ಕಾರಣನಾದ ರಾಜಕುಮಾರ ಬ್ಲಾದುದ್‌ನ ನೆನಪಿಗಾಗಿ ಊರೆಲ್ಲಾ ಹಂದಿಗಳ ಪ್ರತಿಕೃತಿಗಳನ್ನು ಇರಿಸುತ್ತಾರೆ. ರೋಮನ್ ಬಾತ್‌ನ ಕಟ್ಟಡದಲ್ಲಿ ರಾಜ ಬ್ಲಾದುದ್‌ನ ಶಿಲ್ಪವೂ ಇದೆ.

ರೋಮನ್ ಬಾತ್‌ನಲ್ಲಿನ ಬ್ಲಾದುದ್ ರಾಜನ ಶಿಲ್ಪ.

ಬಾತ್ ನಗರವು ಏಳು ಬೆಟ್ಟಗಳಿಂದ ಆವೃತವಾಗಿದ್ದು ಆ ಬೆಟ್ಟಗಳಲ್ಲಿ ಕಂಚಿನ ಮತ್ತು ಕಬ್ಬಿಣದ ಯುಗಗಳಲ್ಲಿ ಅಲ್ಲಿ ಜನರು ವಾಸಿಸುತ್ತಿದ್ದ ಹಲವಾರು ಪುರಾವೆಗಳು ದೊರೆತಿವೆ. ಹತ್ತಿರದ ಸಾಲ್ಸ್‌ಬರಿ ಬೆಟ್ಟಗಳಲ್ಲಿ ಮತ್ತು ಬಾತಾಂಪ್ಟನ್‌ನಲ್ಲಿ ಪುರಾತನ ಕೋಟೆಗಳ ಕುರುಹುಗಳಿವೆ.
ಕ್ರಿ.ಪೂ. 55ರಲ್ಲೇ ರೋಮ್‌ನ ಜೂಲಿಯಸ್ ಸೀಸರ್ ಬ್ರಿಟಿಶ್ ದ್ವೀಪಗಳ ಮೇಲೆ ಆಕ್ರಮಣ ನಡೆಸುವ ಪ್ರಯತ್ನ ನಡೆಸಿದ್ದರೂ ಅದು ಸಾಕಾರಗೊಂಡದ್ದು ಕ್ರಿ.ಪೂ. 43ರಲ್ಲಿ ಕ್ಲಾಡಿಯಸ್‌ನ ಆಕ್ರಮಣದೊಂದಿಗೆ. ಆ ಸಮಯದಲ್ಲಿ ಈಗಿನ ಉತ್ತರ ಆಫ್ರಿಕಾ, ಯೂರೋಪ್ ಹಾಗೂ ಏಷಿಯಾದ ಹಲವಾರು ಭಾಗಗಳು ರೋಮನ್ನರ ಆಳ್ವಿಕೆಯಡಿಯಿತ್ತು.
ಬ್ರಿಟಿಶ್ ದ್ವೀಪಗಳಲ್ಲಿ ಲಂಡನ್‌ನಲ್ಲಿ ಸುವ್ಯವಸ್ಥಿತ ನದಿಯಾನ ವ್ಯವಸ್ಥೆ ಇದ್ದುದರಿಂದ ಅದನ್ನು ರೋಮನ್ನರು ಕೇಂದ್ರವಾಗಿರಿಸಿಕೊಂಡರು. ಇಂತಹ ನದಿಯಾನದ ಸಂದರ್ಭಗಳಲ್ಲಿಯೇ ಅವರು ಏವಾನ್ ನದಿಯ ತಿರುವಿನಲ್ಲಿದ್ದ ಈಗಿನ ಬಾತ್‌ನ ಈ ಬಿಸಿನೀರ ಬುಗ್ಗೆಯನ್ನು ಕಂಡುಕೊಂಡಿರಬೇಕು. ಸುಲ್ ಅಥವಾ ಸುಲಿಸ್ ದೇವತೆಯ ದೇವಾಲಯವಿದ್ದ ಆ ಸ್ಥಳವನ್ನು ಅಕ್ವೇ ಸುಲಿಸ್ ಎಂಬ ಲ್ಯಾಟಿನ್ ಹೆಸರಿನಿಂದ ಕರೆದರು. ಅಲ್ಲಿ ರೋಮನ್ನರು ಸ್ಥಾಪಿಸಿದ್ದ ಮೂಲ ಸುಲಿಸ್-ಮಿನರ್ವಾ ದೇವತೆಯ ಶಿರ ಈಗಲೂ ಮ್ಯೂಸಿಯಂನಲ್ಲಿದೆ. ಬಳಲಿದ ರೋಮನ್ ಸೈನಿಕರಿಗೆ ಆ ಬಿಸಿನೀರ ಬುಗ್ಗೆಯಲ್ಲಿನ ಸ್ನಾನ ಅತ್ಯಂತ ಸಂತೋಷ ಮತ್ತು ಆರಾಮ ಕೊಡುತ್ತಿದ್ದಿರಬಹುದು. ಅಲ್ಲದೆ ರೋಮನ್ನರು ಸ್ನಾನ ಪ್ರಿಯರು. ಅವರ ಸ್ನಾನ ಸಮುದಾಯ ಸ್ನಾನದ ಮನೆಗಳಲ್ಲಿ ನಡೆಯುತ್ತಿತ್ತು ಹಾಗೂ ಅಲ್ಲಿಯೇ ಅವರ ಕಲೆ, ಸಾಹಿತ್ಯ ಮತ್ತು ರಾಜಕೀಯ ಚರ್ಚೆಗಳೂ ನಡೆಯುತ್ತಿದ್ದವು. ಅಷ್ಟೇ ಅಲ್ಲದೆ ನಿತ್ಯದ ಗೊಡ್ಡು ಹರಟೆಗಳೂ ಅಲ್ಲಿಯೇ ನಡೆಯುತ್ತಿದ್ದವು.


ದೇವಾಲಯದಲ್ಲಿದ್ದ ಸುಲಿಸ್-ಮಿನರ್ವಾ ಶಮನ ದೇವತೆಯ ಶಿರೋಭಾಗದ ಎದುರಿನ ಮತ್ತು ಪಾರ್ಶ್ವ ನೋಟ
ರೋಮನ್ನರು ಆ ಬಿಸಿನೀರ ಬುಗ್ಗೆಯ ಸುತ್ತ ಬೃಹತ್ ದೇವಾಲಯಗಳ ಮತ್ತು ಸ್ನಾನದ ಮನೆಗಳ ಸಂಕೀರ್ಣಗಳನ್ನು ನಿರ್ಮಿಸಿದರು. ಸ್ಥಳೀಯರನ್ನು ಎದುರು ಹಾಕಿಕೊಳ್ಳದಂತೆ ಅವರ ಸೆಲ್ಟಿಕ್ ದೇವತೆಯಾದ ಸುಲಿಸ್‌ಳ ಜೊತೆಯಲ್ಲಿಯೇ ತಮ್ಮ ವಿವೇಕದ ಮತ್ತು ಶಮನದ ದೇವತೆಯಾದ ಮಿನರ್ವಾಳನ್ನೂ ಸಹ ಸ್ಥಾಪಿಸಿದರು. ಅದು ಸುಲ್-ಮಿನರ್ವಾ ದೇವಾಲಯವಾಯಿತು. ಇಂದಿಗೂ ಅವರು ನಿರ್ಮಿಸಿದ ಸ್ನಾನದ ಮನೆ, ಕಟ್ಟಡಗಳ ಅವಶೇಷಗಳು, ನಾಣ್ಯಗಳು ಮುಂತಾದವುಗಳನ್ನು ಅಲ್ಲಿನ ಮ್ಯೂಸಿಯಂನಲ್ಲಿ ಕಾಣಬಹುದು. ಆ ಸ್ನಾನದ ಕೊಳಗಳಿಗೆ ನೀರುಣಿಸುತ್ತಿದ್ದ ನೀರಿನ ಕೊಳವೆ/ಕಾಲುವೆಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.



ರೋಮನ್ನರು ನಿರ್ಮಿಸಿದ್ದ ಗಂಧಕಯುಕ್ತ ಬಿಸಿನೀರ ಬುಗ್ಗೆ ಹರಿವ ಕಾಲುವೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ.
ರೋಮನ್ನರ ‘ಸ್ನಾನದ ಮನೆ’ ಬೃಹತ್ ಸಂಕೀರ್ಣವಾಗಿದ್ದು ಅಲ್ಲಿ ದೊಡ್ಡ ಬಿಸಿನೀರ ಸ್ನಾನದ ಕೊಳದ ಜೊತೆಗೆ ದೇವಾಲಯವಿದ್ದ ಸ್ಥಳದಲ್ಲಿ ಒಂದು ಪವಿತ್ರ ಕೊಳವಿದೆ. ಬಿಸಿನೀರ ಕೊಳದ ಪಕ್ಕದಲ್ಲಿ ಬಿಸಿನೀರ ಸ್ನಾನ ಬೇಡದವರಿಗೆ ಸ್ನಾನ ಮಾಡಲು ಮತ್ತು ಈಜಲು ವರ್ತುಲಾಕಾರದ ತಣ್ಣೀರ ಕೊಳವಿದೆ. ಅದರ ಪಕ್ಕದ ಕೋಣೆಯ ನೆಲದ ಕೆಳಭಾಗ ಟೊಳ್ಳಾಗಿದ್ದು ಆ ಟೊಳ್ಳಿನಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಬಿಸಿನೀರನ್ನು ಹರಿಸುತ್ತಿದ್ದರು. ಅದರಿಂದಾಗಿ ಆ ಕೋಣೆ ಬಿಸಿ ಹಬೆಯಿಂದಾಗಿ ಬ್ರಿಟನ್ನಿನ ಚಳಿಗೆ ಸದಾ ಬೆಚ್ಚಗಿರುತ್ತಿತ್ತು.
ದೊರಕಿರುವ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯದ ಅವಶೇಷಗಳು

ದೊರಕಿರುವ ಅವಶೇಷಗಳಿಂದ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯ ಹೀಗಿತ್ತೆಂದು ತೋರಿಸುವ ಕಂಪ್ಯೂಟರ್ ಚಿತ್ರ.

ಅಲ್ಲಿ ದೊರೆತಿರುವ ನಾಣ್ಯಗಳಿಂದ ಅಲ್ಲಿನ ಸ್ನಾನದ ಮನೆಗಳನ್ನು ನೀರೋ ಚಕ್ರವರ್ತಿಯ (ಕ್ರಿ.ಶ. 56-69) ಸಮಯದಲ್ಲಿ ನಿರ್ಮಿಸಲಾಗಿದೆಯೆಂದು ನಿರ್ಧರಿಸಲಾಗಿದೆ. ರೋಮನ್ನರು ಕ್ರಿ.ಶ. ಸುಮಾರು 410ರಲ್ಲಿ ರೋಮ್‌ನ ಆಂತರಿಕ ಸಮಸ್ಯೆಗಳಿಂದಾಗಿ ಬ್ರಿಟಿಶ್ ದ್ವೀಪಗಳಿಂದ ವಾಪಸ್ಸು ಹೊರಟರು. ರೋಮನ್ನರ ಅತ್ಯಂತ ಇಷ್ಟದ ಸ್ಥಳವಾಗಿದ್ದ ಬಾತ್ ಅವನತಿಗೀಡಾಯಿತು ಹಾಗೂ ಸೆಲ್ಟರು, ಡೇನರು ಮತ್ತು ಸ್ಯಾಕ್ಸನ್ನರ ನಡುವಿನ ಹೋರಾಟಗಳಿಂದಾಗಿ ಬ್ರಿಟನ್ ‘ಅಂಧಕಾರದ ಯುಗ’ವನ್ನು ಪ್ರವೇಶಿಸಿತು. ಸುಮಾರು ಒಂದು ಸಾವಿರ ವರ್ಷಗಳ ಕಾಲ ಅಕ್ವೇ ಸುಲಿಸ್ ಜನರ ಗಮನದಿಂದ ದೂರ ಸರಿದಿತ್ತು. ಹದಿನಾಲ್ಕು ಮತ್ತು ಹದಿನೈದನೇ ಶತಮಾನದಲ್ಲಿ ಟ್ಯೂಡರ್ ಮತ್ತು ಸ್ಟುವಾರ್ಟ್ ಅವಧಿಯಲ್ಲಿ ಬಾತ್‌ನ ಅವಶೇಷಗಳ ದುರಸ್ತಿ ಕಾರ್ಯ ನಡೆದು ಪುನಃ ಅದು ಜನಪ್ರಿಯಗೊಳ್ಳತೊಡಗಿತು. ಅಲ್ಲಿ ಸ್ನಾನ ಮಾಡಿದರೆ ಕಾಯಿಲೆಗಳು ವಾಸಿಯಾಗುವವೆಂಬ ಪ್ರಾಚೀನ ನಂಬಿಕೆಯಿಂದ ರಾಜಮನೆತನದವರೂ ಅಲ್ಲಿಗೆ ಸ್ನಾನ ಮಾಡಲು ಬರತೊಡಗಿದರು. ಮೊದಲನೇ ಜೇಮ್ಸ್‌ನ ಪತ್ನಿಯಾದ ಡೆನ್‌ಮಾರ್ಕ್‌ನ ಆನ್ ತನ್ನ ಕಾಯಿಲೆಯ ಚಿಕಿತ್ಸೆಗೆಂದು 1616ರಲ್ಲಿ ಬಾತ್‌ನಲ್ಲಿ ಸ್ನಾನಕ್ಕೆಂದು ಬಂದಿದ್ದಳು. ಎರಡನೇ ಚಾರ್ಲಸ್ ನ ವೈದ್ಯರು ಬಾತ್‌ನ ನೀರನ್ನು ಕುಡಿಯುವುದರಿಂದ ಹಾಗೂ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವರು ಕಾಯಿಲೆಗಳು ವಾಸಿಯಾಗುವವೆಂದು ಹೇಳಿದ್ದರು. ಅವರ ಸಲಹೆಯ ಮೇರೆಗೆ ಎರಡನೇ ಜೇಮ್ಸ್‌ನ ಪತ್ನಿ ಮೊಡೇನಾದ ಮೇರಿ ತನಗೆ ಮಕ್ಕಳಿಲ್ಲದಿದ್ದುದರಿಂದ ಮಕ್ಕಳಾಗಬಹುದೆಂಬ ನಂಬಿಕೆಯಿಂದ 1687ರಲ್ಲಿ ಬಾತ್‌ಗೆ ಭೇಟಿ ನೀಡಿದ್ದಳು. ಆನಂತರ ಆಕೆ ಗರ್ಭ ಸಹ ಧರಿಸಿದಳಂತೆ! ಮರುವರ್ಷ ಅಲ್ಲಿಗೆ ಭೇಟಿ ನೀಡಿದ ಖ್ಯಾತ ಲೇಖಕ ಸ್ಯಾಮ್ಯುಯೆಲ್ ಪೆಪೀಸ್ ಅಲ್ಲಿನ ಬಿಸಿನೀರಿನ ಸ್ನಾನದ ಅನುಭವ ಅದ್ಭುತವಾಗಿತ್ತೆಂದು ವರ್ಣಿಸಿದ್ದರೂ ‘ಅಷ್ಟು ಜನ ಒಟ್ಟಿಗೇ ಸ್ನಾನ ಮಾಡುವ ಆ ನೀರು ಹೇಗೆ ಶುದ್ಧವಾಗಿರಲು ಸಾಧ್ಯ?’ ಎಂದು ಬರೆದಿದ್ದಾನೆ.
ಈಗ ಸಧ್ಯಕ್ಕೆ ರೋಮನ್ ಸ್ನಾನದ ಮನೆಗಳನ್ನು ನಾವು ನೋಡಬಹುದಷ್ಟೇ ಹೊರತು ಸ್ನಾನ ಮಾಡಲು ಸಾಧ್ಯವಿಲ್ಲ. ನೀರನ್ನು ಮುಟ್ಟಬೇಡಿ ಎಂಬ ಫಲಕಗಳಿವೆ. ‘ಮುಟ್ಟಿದರೆ ದಂಡ ಹಾಕುತ್ತಾರೆ’ ಎಂದು ನಮ್ಮ ಗೈಡಜ್ಜಿ ಹೇಳಿದ್ದಳು.
ಸುಮಾರು ಕ್ರಿ.ಶ. 675ರಲ್ಲಿ ಬಾತ್‌ಗೆ ಕ್ರೈಸ್ತ ಮತ ಪ್ರವೇಶಿಸಿತು. ರೋಮನ್ ಬಾತ್‌ನ ಎದುರುಗಡೆಯೇ ಅದ್ಭುತ ಸೇಂಟ್ ಪೀಟರ್ ಚರ್ಚ್ ಇದೆ. ಅದರ ನಿರ್ಮಾಣದಲ್ಲಿ ರೋಮನ್ ಬಾತ್‌ಗಳ ಅವಶೇಷಗಳ ವಸ್ತುಗಳನ್ನು ಬಳಸಲಾಗಿದೆ ಎನ್ನುತ್ತಾರೆ. 2009ರಲ್ಲಿ ಅದರ 1100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಅದೇ ಚರ್ಚ್‌ನಲ್ಲಿಯೇ ಕಿಂಗ್ ಆಲ್ಫ್ರೆಡ್ ದ ಗ್ರೇಟ್‌ನ ವಂಶಸ್ಥನಾದ ಎಡ್ಗರ್‌ನನ್ನು ಕ್ರಿ.ಶ. 973ರಲ್ಲಿ ಸಮಸ್ತ ಇಂಗ್ಲೆಂಡ್‌ನ ಮೊದಲ ದೊರೆಯೆಂದು ಪಟ್ಟಾಭಿಷೇಕ ಮಾಡಲಾಗಿದೆ.
ಬಾತ್ ನಗರದ ರೋಮನ್ ಸ್ನಾನದ ಮನೆಗಳು ಹಾಗೂ ಇಲ್ಲಿನ ಜಾರ್ಜಿಯನ್ ವಾಸ್ತುಶಿಲ್ಪದ ಕಟ್ಟಡಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಾರ್ಜಿಯನ್ ಅವಧಿಯ ಬಾತ್ ನಗರವನ್ನು ತನ್ನ ಕಾದಂಬರಿಗಳಲ್ಲಿ ಈ ನಗರದಲ್ಲಿ 1801ರಿಂದ 1806ರವರೆಗೆ ವಾಸಿಸಿದ್ದ ಖ್ಯಾತ ಲೇಖಕಿ ಜೇನ್ ಆಸ್ಟಿನ್ ವರ್ಣಿಸಿದ್ದಾಳೆ. 2010ರ ಒಲಿಂಪಿಕ್ಸ್‌ನಲ್ಲಿ ಏಕೈಕ ಚಿನ್ನದ ಪದಕ ಪಡೆದ ಬ್ರಿಟಿಶ್ ಅಥ್ಲೀಟ್ ಅಮಿ ವಿಲಿಯಮ್ಸ್ ಬಾತ್ ನಗರದವಳಾಗಿದ್ದಾಳೆ.

ಮಾಹಿತಿಗಾಗಿ:

ರೋಮನ್ನರ ಸಮುದಾಯ ಶೌಚ!

ರೋಮನ್ನರ ಸ್ನಾನವಷ್ಟೇ ಅಲ್ಲ, ಅವರ ಪಾಯಖಾನೆಗಳೂ ಸಹ ಸಮುದಾಯ ಪಾಯಖಾನೆಗಳಾಗಿರುತ್ತಿದ್ದವು! ಅಂತಹ ಪಾಯಖಾನೆಗಳು ಬಾತ್‌ನ ಅವಶೇಷಗಳಲ್ಲಿ ಸಿಕ್ಕಿರದಿದ್ದರೂ ಅವರ ಸಮುದಾಯ ಮತ್ತು ಸಾರ್ವಜನಿಕ ಪಾಯಖಾನೆಗಳು ಯೂರೋಪ್‌ನಲ್ಲಿ ಬೇಕಾದಷ್ಟು ಕಡೆ ಸಿಕ್ಕಿವೆ (ಚಿತ್ರ ನೋಡಿ).


ರೋಮ್‌ನ ಬಳಿಯ ಆಸ್ಟಿಯಾದಲ್ಲಿನ ರೋಮನ್ ಸಮುದಾಯ ಪಾಯಖಾನೆಗಳು


ರೋಮನ್ನರ ಸಮುದಾಯ ಪಾಯಖಾನೆಗಳು ಹೀಗಿದ್ದುವೆಂದು ತಿಳಿಸುವ ಕಲಾವಿದನ ಕಲ್ಪನೆಯ ಚಿತ್ರ

ಮೊದಲ ಶತಮಾನದ ರೋಮ್ ನಗರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕ ಪಾಯಖಾನೆಗಳು ಇದ್ದುವಂತೆ. ಅವು ಬೆಂಚುಗಳಂತಿದ್ದು ಮೇಲೆ ದೊಡ್ಡ ರಂಧ್ರವಿರುತ್ತದೆ ಹಾಗೂ ಮುಂಭಾಗ ತೆರೆದಿರುತ್ತದೆ. ಆ ಬೆಂಚುಗಳ ಕೆಳಗೆ ಹಾಗೂ ಮುಂಭಾಗದಲ್ಲಿ ನೀರು ಹರಿಯುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ಸಾಮಾನ್ಯವಾಗಿ ರೋಮನ್ನರು ಯಾವುದೇ ಒಳ ಉಡುಪು ಧರಿಸದೇ ಮೇಲೆ ಗೌನಿನಂತಹ ಧಿರಿಸನ್ನು ಧರಿಸುತ್ತಿದ್ದುದರಿಂದ ಹಾಗೆಯೇ ಅದನ್ನು ಮೇಲಕ್ಕೆತ್ತಿ ಕೂತು ತಮ್ಮ ಶೌಚಕಾರ್ಯ ಮುಗಿಸುತ್ತಿದ್ದರು. ಮತ್ತೊಂದು ವಿಶೇಷವೆಂದರೆ ತೊಳೆದುಕೊಳ್ಳಲು ಕೋಲಿಗೆ ಸ್ಪಂಜಿನಂತಹ ವಸ್ತು ಕಟ್ಟಿದ್ದು ಅದನ್ನು ಮುಂದೆ ಹರಿಯುತ್ತಿದ್ದ ನೀರಿನಲ್ಲಿ ಅದ್ದಿ ತಾವು ಕುಳಿತಿದ್ದ ಸ್ಥಳದಲ್ಲಿಯೇ ‘ಶುಚಿ’ಗೊಳಿಸಿಕೊಂಡು ಆ ಕೋಲನ್ನು ಮತ್ತೊಬ್ಬರ ಬಳಕೆಗಾಗಿ ಅಲ್ಲಿಯೇ ಬಿಡುತ್ತಿದ್ದರಂತೆ! ರೋಮ್‌ನಲ್ಲಿದ್ದ ಪಾಯಖಾನೆಗಳ ಹಾಸುಗಳನ್ನು ಅಮೃತಶಿಲೆಯಿಂದ ನಿರ್ಮಿಸಲಾಗುತ್ತಿತ್ತು ಹಾಗೂ ಆ ಕೋಣೆಯ ಗೋಡೆಯ ಮೇಲೆ ಗ್ರೀಕ್ ಪುರಾಣದ ಕತೆಗಳನ್ನು ಹೇಳುವ ಚಿತ್ರಗಳಿರುತ್ತಿದ್ದವು. ಆ ಎಲ್ಲಾ ಶೌಚಾಲಯಗಳಲ್ಲಿ ಅತ್ಯುತ್ತಮ ಹರಿಯುವ ನೀರಿನ ವ್ಯವಸ್ಥೆ ಇದ್ದು ಅವು ಸ್ವಚ್ಛವಾಗಿರುತ್ತಿದ್ದುವಂತೆ. ಅವರ ಒಳಚರಂಡಿ ವ್ಯವಸ್ಥೆಯನ್ನು ಕ್ರಿ.ಶ. ಮೊದಲ ಶತಮಾನದಲ್ಲಿದ್ದ ಖ್ಯಾತ ರೋಮನ್ ವಿಜ್ಞಾನಿ, ಚರಿತ್ರಕಾರ ಹಾಗೂ ಲೇಖಕ ಪ್ಲೈನಿ ಮುಕ್ತವಾಗಿ ಶ್ಲಾಘಿಸಿದ್ದಾನೆ.
ಚಿತ್ರ-ಲೇಖನ:ಡಾ.ಜೆ.ಬಾಲಕೃಷ್ಣ