ಸೋಮವಾರ, ಏಪ್ರಿಲ್ 18, 2022

ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯ

ಮಾರ್ಚ್‌ ಮತ್ತು ಏಪ್ರಿಲ್‌ 2022ರ ಹೊಸತು ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ




ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯ

ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ್‍ರವರು ಕೆಲ ತಿಂಗಳುಗಳ ಹಿಂದೆ (ನವೆಂಬರ್ 14) ಮೌರ್ಯ ಸಾಮ್ರಾಜ್ಯವನ್ನು ಕ್ರಿ.ಪೂ. 4ನೇ ಶತಮಾನದಲ್ಲಿ ಸಂಸ್ಥಾಪನೆ ಮಾಡಿದ ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರ್‍ನನ್ನು ಯುದ್ಧದಲ್ಲಿ ಸೋಲಿಸಿದ್ದ, ಆದರೂ ಚರಿತ್ರಕಾರರು ಅಲೆಕ್ಸಾಂಡರ್‍ನಿಗೆ `ಗ್ರೇಟ್' ಎಂಬ (ಅಲೆಕ್ಸಾಂಡರ್ ದ ಗ್ರೇಟ್) `ಬಿರುದುನೀಡಿ ಚಂದ್ರಗುಪ್ತ ಮೌರ್ಯನಿಗೆ ಮೋಸ ಮಾಡಿದ್ದಾರೆ... ಭಾರತೀಯರಿಗೆ ಸತ್ಯ ತಿಳಿದಾಗ ಭಾರತ ಬದಲಾಗುತ್ತದೆ ಎಂದು ಹೇಳಿದರು.

ಚಂದ್ರಗುಪ್ತ ಮೌರ್ಯ ನಿಜವಾಗಿಯೂ ಅಲೆಕ್ಸಾಂಡರ್‍ನನ್ನು ಸೋಲಿಸಿದ್ದನೆ? ಹೋಗಲಿ, ಅವರಿಬ್ಬರೂ ಮುಖಾಮುಖಿ ಭೇಟಿಯಾಗಿದ್ದರೆ? ನಿಜವಾದ ಚರಿತ್ರೆ ಏನು ಹೇಳುತ್ತದೆ?

ಚರಿತ್ರಕಾರರು ಅಲೆಕ್ಸಾಂಡರ್‍ನನ್ನು ಗ್ರೇಟ್ ಎಂದು ಕರೆದದ್ದು ಆತ ಜಗತ್ತನ್ನೇ ಗೆಲ್ಲಲು ಹೊರಟಿದ್ದರಿಂದ, ಯುದ್ಧದಲ್ಲಿ ಎಲ್ಲೂ ಸೋಲನ್ನು ಕಾಣದ್ದರಿಂದ ಹಾಗೂ ಗ್ರೀಸ್‍ನಿಂದ ಏಷಿಯಾದ ಭಾರತದ ವಾಯುವ್ಯ ಪ್ರದೇಶದವರೆಗೂ ಹಲವಾರು ಸಾಮ್ರಾಜ್ಯಗಳನ್ನು ಗೆದ್ದು ತನ್ನದಾಗಿಸಿಕೊಂಡಿದ್ದರಿಂದ. ಅಷ್ಟೂ ಸಾಧನೆಯನ್ನು ಆತ ತಾನು ಮುವ್ವತ್ತು ವರ್ಷ ವಯಸ್ಸಾಗುವ ಮೊದಲೇ ಸಾಧಿಸಿದ್ದ ಹಾಗೂ ಆ ಕಾಲದಲ್ಲಿ ಅμÉ್ಟೂಂದು ದೊಡ್ಡ ಸಾಮ್ರಾಜ್ಯವನ್ನು ಯಾರೂ ಗೆದ್ದಿರಲಿಲ್ಲ. ಆ ನಂತರ ಘೆಂಘಿಸ್ ಖಾನ್ ಏಷಿಯಾದಿಂದ ಯೂರೋಪ್‍ವರೆಗೂ ದಂಡೆತ್ತಿ ಹೋಗಿದ್ದ. ಅದೇ ರೀತಿ ತೈಮರ್‍ಲೇನ್, ಅಟಿಲ್ಲಾ ದ ಹನ್, ಅಶೋಕ, ಅಕ್ಬರ್ ಮತ್ತು ಔರಂಗಜೇಬ್ ಮುಂತಾದವರು ದೊಡ್ಡ ಸಾಮ್ರಾಜ್ಯಗಳ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು. ದಕ್ಷಿಣ ಭಾರತದಲ್ಲಿ ಚೋಳ ದೊರೆಗಳಾದ ಮೊದಲನೇ ರಾಜರಾಜ (985-1014) ಅತ್ಯದ್ಭುತ ಸಾಗರ ಸೈನ್ಯ ನಿರ್ಮಾಣ ಮಾಡಿ ಅವು ಮಾಲ್ಡೀವ್ಸ್ ಗೆದ್ದು ಶ್ರೀಲಂಕಾ ಹಾಗೂ ಬಂಗಳ ಕೊಲ್ಲಿಯಲ್ಲಿನ ಹಲವಾರು ರಾಷ್ಟ್ರಗಳನ್ನು ತಲುಪಿದ್ದವು.

ಅಲೆಕ್ಸಾಂಡರ್ ದ ಗ್ರೇಟ್ ಪುತ್ಥಳಿ

ಚಂದ್ರಗುಪ್ತ ಮೌರ್ಯನ ಸಾಧನೆಗಳು ಸಹ ಗಮನಾರ್ಹ ಮತ್ತು ಪ್ರಮುಖವಾದವು. ಆತನ ಸಾಮ್ರಾಜ್ಯ ಪೂರ್ವ ಮತ್ತು ಪಶ್ಚಿಮ ಸಾಗರಗಳವರೆಗೂ ತಲುಪಿತ್ತು ಹಾಗೂ ಇಂಡಸ್ ಮತ್ತು ಗಂಗಾ ನದಿಯ ಬಯಲು ಪ್ರದೇಶಗಳೆಲ್ಲಾ ಹಬ್ಬಿತ್ತು. ಮೌರ್ಯ ಸಾಮ್ರಾಜ್ಯದ ಕೇಂದ್ರ ಪಾಟಲಿಪುತ್ರ ಆಗಿತ್ತು ಹಾಗೂ ಮೊಟ್ಟಮೊದಲ ಬಾರಿಗೆ ದಕ್ಷಿಣ ಏಷಿಯಾವನ್ನು ಒಗ್ಗೂಡಿಸಿತ್ತು. ಚಂದ್ರಗುಪ್ತ ಒಂದು ವಿಸ್ತೃತ ಹಾಗೂ ಸಕ್ಷಮ ತೆರಿಗೆ ಸಂಗ್ರಹ ವ್ಯವಸ್ಥೆ ಹಾಗೂ ಕೇಂದ್ರಾಡಳಿತ ಕ್ರಮವನ್ನು ರೂಪಿಸಿದ. ಅವೇ ಆತನ ಸಾಮ್ರಾಜ್ಯದ ಉತ್ತಮ ಆಡಳಿತೆಯ ತಳಹದಿಯಾಗಿತ್ತು. ಉತ್ತಮ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ತೂಕ ಮತ್ತು ಮಾನಕಗಳನ್ನು ನಿಗದಿಪಡಿಸುವುದರ ಮೂಲಕ ವ್ಯಾಪಾರ ಮತ್ತು ಕೃಷಿಯ ಸುಧಾರಣೆ ಮತ್ತು ನಿಯಂತ್ರಣ ಮಾಡಿದ ಹಾಗೂ ಅತಿ ದೊಡ್ಡ ಸೈನ್ಯವನ್ನು ಸಹ ಹೊಂದಿದ್ದ. ಚಂದ್ರಗುಪ್ತನ ಪ್ರಮುಖ ಮಾರ್ಗದರ್ಶಿ ಹಾಗೂ ಸಲಹೆಗಾರನಾಗಿದ್ದುದು ಚಾಣಕ್ಯ.

ಟರ್ಕಿಯ ಅಂತಾಲ್ಯ ನಗರದಲ್ಲಿನ ಮ್ಯೂಸಿಯಂನಲ್ಲಿರುವ ಹತ್ತಿರದ ಪರ್ಜ್ ಎನ್ನುವಲ್ಲಿ ದೊರೆತಿರುವ ಅಲೆಕ್ಸಾಂಡರ್‍ನ ಪುತ್ಥಳಿ (ಚಿತ್ರ: ಜೆ.ಬಾಲಕೃಷ್ಣ). ಪರ್ಜ್ ಸಹ ಅಲೆಕ್ಸಾಂಡರ್‍ನ ದಂಡಯಾತ್ರೆಯಲ್ಲಿ ಅವನ ವಶವಾಗಿತ್ತು.

ಅಲೆಕ್ಸಾಂಡರ್ ಮತ್ತು ಭಾರತ

ಅಲೆಕ್ಸಾಂಡರ್ ಜನಿಸಿದ್ದು ಕ್ರಿ.ಪೂ. 356ರಲ್ಲಿ ಪ್ರಾಚೀನ ಗ್ರೀಸ್‍ನ ಮ್ಯಾಸಿಡೋನಿಯಾದ ಪೆಲ್ಲಾ ಎಂಬಲ್ಲಿ. ಆತನ ತಂದೆ ಎರಡನೇ ಫಿಲಿಪ್. ಆತನ ತಾಯಿ ಒಲಿಂಪಿಯಾಸ್ ಹಾಗೂ ಫಿಲಿಪ್‍ನ ಹಲವಾರು ಪತ್ನಿಯರಲ್ಲಿ ಒಬ್ಬಳು. ಒಲಿಂಪಿಯಾಸ್ ಹಲವಾರು ದೈವಾಚರಣೆಗಳಲ್ಲಿ, ಹಾವಿನ ಆರಾಧನೆಯಲ್ಲಿ ನಂಬಿಕೆಯುಳ್ಳವಳು ಹಾಗೂ ಫಿಲಿಪ್‍ನೊಂದಿಗೆ ಆಕೆ ಗರ್ಭ ಧರಿಸಿದ ದಿನ ಸಿಡಿಲೊಂದು ಬಡಿದು ದೇವಾಧಿದೇವನಾದ ಜ್ಯೂಸ್‍ನೇ ತಾನು ಗರ್ಭವತಿಯಾಗಲು ಕಾರಣ ಎಂದು ನಂಬಿರುತ್ತಾಳೆ. ಆ ಮಗುವೇ ಅಲೆಕ್ಸಾಂಡರ್. ಫಿಲಿಪ್ ತಾನು ಹೆರಾಕ್ಲೆಸ್‍ನ (ಹಕ್ರ್ಯುಲಿಸ್) ವಂಶದವನೆಂದು ಹೇಳಿಕೊಂಡರೆ, ಒಲಿಂಪಿಯಾಸ್ ತಾನು ಪ್ರಖ್ಯಾತ ಅಖಿಲಿಸ್‍ನ ವಂಶದವನೆಂದು ಹೇಳಿಕೊಂಡಿರುತ್ತಾಳೆ. ಅಲೆಕ್ಸಾಂಡರ್ ಬಾಲಕನಾಗಿದ್ದಾಗ ಅವನಿಗೆ ಶಿಕ್ಷಣ ಕೊಡುವ ಜವಾಬ್ದಾರಿಯನ್ನು ಪ್ರಖ್ಯಾತ ಜ್ಞಾನಿ, ತತ್ವಶಾಸ್ತ್ರ ಪರಿಣಿತ ಅರಿಸ್ಟಾಟಲ್‍ಗೆ ವಹಿಸಲಾಗುತ್ತದೆ ಅರಿಸ್ಟಾಟಲ್ ಅಲೆಕ್ಸಾಂಡರನಿಗೆ ವೈದ್ಯಶಾಸ್ತ್ರ, ತತ್ವಶಾಸ್ತ್ರ, ನೀತಿಶಾಸ್ತ್ರ, ಧಾರ್ಮಿಕಶಾಸ್ತ್ರ, ತರ್ಕಶಾಸ್ತ್ರ ಮತ್ತು ಕಲೆಯನ್ನು ಬೋಧಿಸುತ್ತಾನೆ. ಅಲ್ಲದೆ ಅಲೆಕ್ಸಾಂಡರನಿಗೆ ಹೋಮರ್‍ನ `ಇಲಿಯಡ್ಮತ್ತು `ಒಡಿಸ್ಸಿಪುರಾಣಗಳ ಕತೆಗಳನ್ನು ಪರಿಚಯಿಸುತ್ತಾನೆ. ಅಲೆಕ್ಸಾಂಡರ್ ಇಲಿಯಡ್ ಮತ್ತು ಅದರಲ್ಲಿನ ಪಾತ್ರವಾದ ಶೌರ್ಯವಂತ ಅಖಿಲಿಸ್‍ನಿಂದ ಎಷ್ಟು ಪ್ರಭಾವಿತನಾಗುತ್ತಾನೆಂದರೆ ಆತನೇ ತನ್ನ ಆದರ್ಶವೆಂದುಕೊಳ್ಳುತ್ತಾನೆ. ಮುಂದೊಂದು ದಿನ ಅಖಿಲಿಸ್‍ನ ಸಮಾಧಿಗೆ ಹೋಗಿ ಆರಾಧನೆ ಮಾಡಿ ಬಲಿಯನ್ನು ಸಹ ಕೊಟ್ಟು ಬರುತ್ತಾನೆ. ಅರಿಸ್ಟಾಟಲ್ ಆತನಿಗೆ `ಇಲಿಯಡ್ನ ಪುಸ್ತಕದ ಒಂದು ಪ್ರತಿಯೊಂದನ್ನು ನೀಡಿದ್ದು ಅದನ್ನು ಅಲೆಕ್ಸಾಂಡರ್ ಮುಂದೆ ತನ್ನ ದಂಡಯಾತ್ರೆಗಳಲ್ಲಿ ಅದನ್ನು ಸದಾ ತನ್ನೊಂದಿಗೆ ಕೊಂಡೊಯ್ಯುತ್ತಿದ್ದನಂತೆ. ಅರಿಸ್ಟಾಟಲ್ ಬಳಿಯ ತನ್ನ ವ್ಯಾಸಂಗದ ಸಮಯದಲ್ಲಿ ಅಲೆಕ್ಸಾಂಡರನಿಗೆ ಸಹಪಾಠಿಗಳಾಗಿದ್ದವರು ಟೊಲೆಮಿ, ಹೆಫಾಸ್ಟಿಯಾನ್ ಮತ್ತು ಕೆಸಾಂಡರ್. ಟೊಲೆಮಿ ಮುಂದೆ ಅಲೆಕ್ಸಾಂಡರ್ ಸತ್ತ ನಂತರ ಅಲೆಕ್ಸಾಂಡರ್‍ನ ಶವ ಅಪಹರಿಸಿ ಈಜಿಪ್ಟ್‍ನ ದೊರೆಯಾಗುತ್ತಾನೆ. ಇವರು ಅಲೆಕ್ಸಾಂಡರ್‍ನ ಅತ್ಯಂತ ಆಪ್ತ ಗೆಳೆಯರಾಗಿದ್ದು ಮುಂದೆ ಅವನ ಸೈನ್ಯದಲ್ಲಿ ಸೇನಾನಾಯಕರಾಗುತ್ತಾರೆ.

ಅಲೆಕ್ಸಾಂಡರ್ ಮತ್ತು ಅವನ ಅತ್ಯಂತ ಆಪ್ತ ಗೆಳೆಯ ಹೆಫಾಸ್ಟಿಯಾನ್.

ಇವರಲ್ಲಿ ಹೆಫಾಸ್ಟಿಯಾನ್ ಅಲೆಕ್ಸಾಂಡರ್‍ನ ಅತ್ಯಂತ ಆಪ್ತ ಗೆಳೆಯನಾಗಿದ್ದು ಅವರು ಸಲಿಂಗಕಾಮಿಗಳಾಗಿರಬಹುದೆಂದು ಫಿಲಿಪ್ ಮತ್ತು ಒಲಿಂಪಿಯಾಸ್ ಆತಂಕಗೊಂಡಿರುತ್ತಾರೆ. ಈ ಗೆಳೆತನಕ್ಕೆ ಸ್ಫೂರ್ತಿ ಇಲಿಯಡ್ ಪುರಾಣಕತೆಯಲ್ಲಿನ ಅಖಿಲಿಸ್ ಮತ್ತು ಅವನ ಆಪ್ತ ಗೆಳೆಯ ಪೆಟ್ರೋಕ್ಲಸ್‍ನ ಸಂಬಂಧವೇ ಕಾರಣವೆಂದು ನಂಬಲಾಗಿದೆ.

ಅಲೆಕ್ಸಾಂಡರ್ ಮಹಾನ್ ಚತುರ. ತನ್ನ ಹದಿಹರೆಯದ ದಿನಗಳಲ್ಲಿ ತನ್ನ ತಂದೆಯ ಜೊತೆ ಹೋಗುತ್ತಿರುವಾಗ ಬುಸೆಫಾಲಸ್ ಎಂಬ ಕುದುರೆಯನ್ನು ಯಾರೂ ಹಿಡಿದು ಸವಾರಿ ಮಾಡಲು ಸಾಧ್ಯವಾಗದಿರುವಾಗ ಅದರ ಮಾಲೀಕ ಅದರ ಸವಾರಿ ಮಾಡಿದವರಿಗೆ ಅದನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸುತ್ತಾನೆ. ಎಲ್ಲರೂ ಸೋಲುತ್ತಿರುತ್ತಾರೆ. ಆ ಕುದುರೆಯನ್ನು ಗಮನಿಸಿದ ಅಲೆಕ್ಸಾಂಡರ್ ಅದು ಬಿಸಿಲಿನಲ್ಲಿ ತನ್ನ ನೆರಳಿಗೇ ಬೆದರುತ್ತಿರುವುದಾಗಿ ಗಮನಿಸುತ್ತಾನೆ. ಆ ಕುದುರೆಯನ್ನು ತಾನು ಪಳಗಿಸಿ ಸವಾರಿ ಮಾಡುವುದಾಗಿ ಹೋದ ಅಲೆಕ್ಸಾಂಡರ್ ಅದರ ನೆರಳು ಅದು ನೋಡಲು ಸಾಧ್ಯವಾಗದಿರುವ ದಿಕ್ಕಿಗೆ ಅದನ್ನು ತಿರುಗಿಸಿ, ಮೆಲು ಮಾತನಾಡಿ ಕುದುರೆಯನ್ನು ಓಲೈಸಿ ಅದರ ಸವಾರಿ ಮಾಡುತ್ತಾನೆ ಹಾಗೂ ಆ ಕುದುರೆ ಅವನ ಅತ್ಯಂತ ಪ್ರೀತಿಪಾತ್ರವಾದ ಕುದುರೆಯಾಗುತ್ತದೆ. ಬುಸೆಫಾಲಸ್ ಕೊನೆಯವರೆಗೂ ಅವನ ದಂಡಯಾತ್ರೆಗಳಲ್ಲಿ ಜೊತೆಯಾಗುತ್ತದೆ. ಭಾರತ ಉಪಖಂಡದ ಈಗಿನ ಪಾಕಿಸ್ತಾನದ ಜೇಲಂ ನದಿಯ ದಡದಲ್ಲಿ ನಡೆಯುವ ಅಲೆಕ್ಸಾಂಡರ್‍ನ ಕೊನೆಯ ಹೈಡಾಸ್ಪೆಸ್ (ಜೇಲಂ) ಯುದ್ಧದಲ್ಲಿ ಬುಸೆಫಾಲಸ್ ಸತ್ತುಹೋಗುತ್ತದೆ. ಅತ್ಯಂತ ದುಃಖತಪ್ತನಾಗುವ ಅಲೆಕ್ಸಾಂಡರ್ ಅದನ್ನು ಈಗಿನ ಪಾಕಿಸ್ತಾನದ ಜೇಲಂ ನದಿಯ ದಡದಲ್ಲಿನ ಜಲಾಲ್‍ಪುರ್ ಶರೀಫ್ ಊರಿನಲ್ಲಿ ಸಮಾಧಿ ಮಾಡಿದ್ದಾನೆನ್ನಲಾಗುತ್ತದೆ. ತನ್ನ ಕುದುರೆಯ ಹೆಸರಿನಲ್ಲಿ ಒಂದು ನಗರವನ್ನೂ ಸಹ ಸ್ಥಾಪಿಸುತ್ತಾನೆ.

ಬಾಲಕ ಅಲೆಕ್ಸಾಂಡರ್ ಕುದುರೆ ಬುಸೆಫಾಲಸ್‍ನನ್ನು ಮಣಿಸುತ್ತಿರುವುದು ಕಲಾವಿದನೊಬ್ಬನ ಕಲ್ಪನೆ.

ಎರಡನೇ ಫಿಲಿಪ್‍ನ ನಂತರ ಅಲೆಕ್ಸಾಂಡರ್‍ನನ್ನು ರಾಜನನ್ನಾಗಿ ಮಾಡಲು ತಾಯಿ ಒಲಿಂಪಿಯಾಸ್ ಹಲವಾರು ತಂತ್ರಗಳನ್ನು ಹೂಡುತ್ತಾಳೆ. ಎರಡನೇ ಫಿಲಿಪ್ ಮ್ಯಾಸಿಡೋನಿಯಾದ ಮತ್ತೊಬ್ಬ ಹೆಣ್ಣನ್ನು ಮದುವೆಯಾಗುತ್ತಾನೆ. ಆಕೆ ಮ್ಯಾಸಿಡೋನಿಯಾದವಳೇ ಆಗಿದ್ದು (ಒಲಿಂಪಿಯಾಸ್ ಪಕ್ಕದ ಎಪಿರಸ್‍ನವಳು) ಆಕೆಗೆ ಗಂಡು ಮಗು ಹುಟ್ಟಿದರೆ ಹಾಗೂ ಆ ಮಗು ದೊಡ್ಡವನಾಗುವವರೆಗೂ ಫಿಲಿಪ್ ಬದುಕಿದ್ದರೆ ಅಲೆಕ್ಸಾಂಡರ್ ರಾಜನಾಗುವುದು ಕಷ್ಟವಾಗುತ್ತದೆ ಎಂದು ಭಾವಿಸುತ್ತಾಳೆ. ಆದರೆ ಎರಡನೇ ಫಿಲಿಪ್ ತನ್ನ ಅಂಗರಕ್ಷಕನೊಬ್ಬನಿಂದ ಕೊಲೆಯಾಗುತ್ತಾನೆ. ಕೊಲೆಗಾರನನ್ನು ತಕ್ಷಣವೇ ಓಡಿಸಿಕೊಂಡು ಹೋಗಿ ಅಲೆಕ್ಸಾಂಡರ್‍ನ ಕಡೆಯವರು ಸಾಯಿಸಿಬಿಡುತ್ತಾರೆ. ಹಾಗಾಗಿ ಕೊಲೆ ಮಾಡಿಸಿದವರು ಯಾರೆಂಬುದು ತಿಳಿಯುವುದಿಲ್ಲ. ಫಿಲಿಪ್‍ನ ಕೊಲೆಯಲ್ಲಿ ಒಲಿಂಪಿಯಾಸ್‍ಳ ಕೈವಾಡವಿದೆಯೆಂದು ನಂಬುವವರಿದ್ದಾರೆ. ಎರಡನೇ ಫಿಲಿಪ್‍ನÀ ಮರಣಾನಂತರ ಅಲೆಕ್ಸಾಂಡರ್ ತನ್ನ 20ನೇ ವಯಸ್ಸಿಗೇ ರಾಜನಾಗುತ್ತಾನೆ. ಮುಂದಿನ 10 ವರ್ಷಗಳು, ಅಲೆಕ್ಸಾಂಡರ್ ಪಶ್ಚಿಮ ಏಷಿಯಾ ಮತ್ತು ಉತ್ತರ ಆಫ್ರಿಕಾಗಳ ವಿಸ್ತೃತ ಪ್ರದೇಶಗಳ ಮೇಲೆ ದಂಡೆತ್ತಿ ಹೋಗಿ ಜಯಶೀಲನಾದ. ಕ್ರಿ.ಪೂ. 330ರಲ್ಲಿ ಗೌಗಮೇಲಾದ ನಿರ್ಣಾಯಕ ಯುದ್ಧದಲ್ಲಿ ಮೂರನೇ ಡೇರಿಯಸ್‍ನನ್ನು ಸೋಲಿಸಿದ, ನಂತರ ಇಂದಿನ ಅಫ್ಘಾನಿಸ್ತಾನದ ಉತ್ತರದಲ್ಲಿನ ಅಮು ದರ್ಯಾ ಪ್ರದೇಶದ ಬ್ಯಾಕ್ಟ್ರಿಯಾದ ಮೇಲೆ ದಂಡೆತ್ತಿ ಬಂದು ಹಿಂದೂಕುಶ್ ಪರ್ವತಗಳನ್ನು ದಾಟಿ ಕಾಬೂಲ್ ಕಣಿವೆ ಪ್ರವೇಶಿಸಿದ. ಕ್ರಿ.ಪೂ. 327ರಲ್ಲಿ ಅಲೆಕ್ಸಾಂಡರ್ ಪರ್ಷಿಯನ್ ಸಾಮ್ರಾಜ್ಯದ ಗಡಿಯಾದ ಇಂಡಸ್ ನದಿ ದಾಟಿ ಭಾರತ ಉಪಖಂಡ ಪ್ರವೇಶಿಸಿದ ಹಾಗೂ ಅವನ ಆಕ್ರಮಣದ ಯುದ್ಧ ಸುಮಾರು ಎರಡು ವರ್ಷಗಳಷ್ಟು ಕಾಲ ನಡೆಯಿತು. ಪರ್ಷಿಯಾ ಗೆದ್ದ ಅಲೆಕ್ಸಾಂಡರ್ ಭಾರತ ಉಪಖಂಡಕ್ಕೆ ದಂಡೆತ್ತಿ ಬರಲು ಹಲವಾರು ಕಾರಣಗಳಿದ್ದವು. ಜಗತ್ತನ್ನೇ ಗೆಲ್ಲಬೇಕೆಂಬ ಮಹದೇಚ್ಛೆ ಒಂದು ಕಾರಣವಾದರೆ, ಅರಿಸ್ಟಾಟಲ್ ಅದೇ ಜಗತ್ತಿನ ಕೊನೆಯ ಗಡಿ ಎಂದು ಹೇಳಿದ್ದಿದ್ದುದರಿಂದ ಅದನ್ನೂ ಕಂಡುಬಿಡಬೇಕೆಂಬ ಇಚ್ಛೆ ಮತ್ತೊಂದು ಕಾರಣವಾಗಿತ್ತು ಅಲ್ಲದೆ, ಗ್ರೀಕ್ ದೇವತೆಗಳಾದ ಹಕ್ರ್ಯುಲಿಸ್ ಮತ್ತು ಡಯೊನೇಸಿಯಸ್‍ರವರು ಆ ಪ್ರದೇಶಗಳಿಗೆ ಭೇಟಿ ನೀಡಿಲ್ಲದಿದ್ದುದರಿಂದ ಗ್ರೀಕ್ ದೇವತೆಗಳೂ ಕಾಲಿಡದ ನಾಡಿಗೆ ಪ್ರವೇಶ ಮಾಡಲೇಬೇಕೆಂದು ಬಯಸಿದ್ದ.

ಎರಡು ಸಾವಿರ ವರ್ಷಗಳ ಹಿಂದೆ ವೆಸುವಿಯಸ್ ಅಗ್ನಿಪರ್ವತ ಸಿಡಿದಾಗ ನಾಮಾವಶೇಷವಾಗಿದ್ದ ಪಟ್ಟಣ ಪಾಂಪೆಯ ಮನೆಯೊಂದರಲ್ಲಿ ದೊರೆತ ಮೊಸಾಯಿಕ್‍ನಲ್ಲಿನ ಅಲೆಕ್ಸಾಂಡರ್ ಮತ್ತು ಆತನ ಕುದುರೆ ಬುಸೆಫಾಲಸ್.

ತಕ್ಷಶಿಲಾದ ರಾಜ ಅಲೆಕ್ಸಾಂಡರ್‍ನಿಗೆ ಶರಣಾದ ಹಾಗೂ ಜೇಲಮ್ ನದಿಯ ಮತ್ತೊಂದು ಬದಿಗಿದ್ದ ಮಹಾನ್ ಶೌರ್ಯವಂತನಾದ ರಾಜ ಪುರೂರವ (ಗ್ರೀಕ್ ಮೂಲಗಳು ಆತನನ್ನು ಪೆÇೀರಸ್ ಎಂದು ಕರೆದಿವೆ) ಅಲೆಕ್ಸಾಂಡರ್‍ನಿಗೆ ತಡೆಯೊಡ್ಡುತ್ತಾನೆ. ನಂತರ ನಡೆಯುವ ಹೈಡಾಸ್ಪಿಸ್ (ಜೇಲಮ್ ನದಿ) ಯುದ್ಧದಲ್ಲಿ ಕೊನೆಗೆ ಅಲೆಕ್ಸಾಂಡರ್ ಗೆಲ್ಲುತ್ತಾನೆ. ನಂತರ ಸೆರೆಸಿಕ್ಕ ಪುರೂರವನೊಂದಿಗೆ ನಡೆಯುವ ಮಾತುಕತೆಯಲ್ಲಿ ಪುರೂರವನ ಸ್ವಾಭಿಮಾನ, ಕೆಚ್ಚು, ಶೌರ್ಯ ಹಾಗೂ ತಾನು ಸೆರೆ ಸಿಕ್ಕಿದ್ದರೂ ತನ್ನನ್ನು ರಾಜನಂತೆ ಉಪಚರಿಸಬೇಕೆಂಬ ಮಾತುಗಳನ್ನು ಕೇಳಿ ಅಲೆಕ್ಸಾಂಡರ್ ಮೆಚ್ಚಿ ಪುರೂರವನಿಗೆ ಅವನ ರಾಜ್ಯವನ್ನು ಹಿಂದಿರುಗಿಸುತ್ತಾನೆ ಎಂಬುದನ್ನು ನಾವು ಚರಿತ್ರೆಯ ಪಾಠಗಳಲ್ಲಿ ಓದಿದ್ದೇವೆ.

ಆನೆಯ ಮೇಲೆ ಕೂತ ಪುರೂರವನ ಮೇಲೆ ದಾಳಿ ಮಾಡುತ್ತಿರುವ ಕುದುರೆಯ ಮೇಲೆ ಕೂತ ಅಲೆಕ್ಸಾಂಡರ್ - ನಾಣ್ಯವೊಂದರಲ್ಲಿ.

ಅಲೆಕ್ಸಾಂಡರ್ ಹಿಂದಿರುಗಿದ್ದು

ಪುರೂರವ ಸೋತ ನಂತರ ಅಲೆಕ್ಸಾಂಡರ್ ಭಾರತದೊಳಕ್ಕೆ ಗಂಗಾ ನದಿಯ ಪ್ರದೇಶಗಳಿಗೆ ದಂಡೆತ್ತಿ ಹೋಗಲು ಬಯಸುತ್ತಾನೆ ಹಾಗೂ ಪಂಜಾಬ್‍ನ ಬಿಯಾಸ್ ನದಿಯವರೆಗೂ ತಲುಪುತ್ತಾನೆ. ಆದರೆ ಅವನ ಸೈನ್ಯ ಅಲ್ಲಿಂದ ಮುಂದೆ ಹೋಗಲು ನಿರಾಕರಿಸುತ್ತದೆ. ಅವರು ಸತತ ಯುದ್ಧದಿಂದ ಬಹಳಷ್ಟು ಬಳಲಿರುತ್ತಾರೆ. ಅಲೆಕ್ಸಾಂಡರ್ ಎಷ್ಟೂ ಓಲೈಸಿ, ಆಮಿಷ ಒಡ್ಡಿದರೂ ಅವನ ಸೇನಾನಾಯಕರು ಮತ್ತು ಸೈನಿಕರು ಅಲ್ಲಿಂದ ಮುನ್ನಡೆಯಲು ಒಪ್ಪುವುದಿಲ್ಲ. ಬೇರೆ ದಾರಿ ಕಾಣದೆ ಅಲೆಕ್ಸಾಂಡರ್ ಹಿಂದಿರುಗಬೇಕಾಗುತ್ತದೆ. ಆತ ಇಂಡಸ್ ನದಿಯಗುಂಟಾ ಸಾಗಿ ತನ್ನ ಸ್ವಲ್ಪ ಸೈನ್ಯವನ್ನು ಹಡಗುಗಳ ಮೂಲಕ ಮೆಸೊಪೆÇಟೇಮಿಯಾಗೆ ಕಳುಹಿಸುತ್ತಾನೆ ಹಾಗೂ ತಾನು ಉಳಿದ ಸೈನ್ಯದ ಮೂಲಕ ಮಕ್ರಾನ್ ಕರಾವಳಿಯುದ್ದಕ್ಕೂ ತನ್ನ ವಾಪಸ್ ಪ್ರಯಾಣ ಬೆಳೆಸುತ್ತಾನೆ. ಕ್ರಿ.ಪೂ. 324ರ ಹೊತ್ತಿಗೆ ಪರ್ಷಿಯಾದ ಸೂಸಾ ತಲುಪುತ್ತಾನೆ ಹಾಗೂ ಮರುವರ್ಷ ಕ್ರಿ.ಪೂ. 323ರಲ್ಲಿ ಇಂದಿನ ಇರಾಖ್‍ನಲ್ಲಿನ ಬಾಗ್ದಾದ್‍ನ ಪ್ರಾಚೀನ ನಗರ ಬ್ಯಾಬಿಲೋನ್‍ನಲ್ಲಿ ತನ್ನ 32ನೇ ವಯಸ್ಸಿನಲ್ಲಿ ಪ್ರಾಣ ಬಿಡುತ್ತಾನೆ.

ಅಲೆಕ್ಸಾಂಡರ್ ಹುಟ್ಟಿದಾಗ ಇಡೀ ಜಗತ್ತನ್ನೇ ಗೆಲ್ಲುತ್ತಾನೆಂದು ಭವಿಷ್ಯ ನುಡಿದಿದ್ದರಂತೆ. ಭಾರತದ ಮೇಲೆ ದಂಡೆತ್ತಿ ಬರದೆ ಹಿಂದಿರುಗಿದ್ದರೂ ಸಹ ಆತ ಯಾವುದೇ ತನ್ನ ಯುದ್ಧದಲ್ಲಿ ಸೋತಿರಲಿಲ್ಲ. ಅಲೆಕ್ಸಾಂಡರ್‍ನ ಸೈನ್ಯ ಜೇಲಮ್ ನದಿಯಿಂದ ಮುಂದಕ್ಕೆ ಭಾರತದೊಳಕ್ಕೆ ಪ್ರವೇಶಿಸಲು ನಿರಾಕರಿಸಿ ಹಿಂದಿರುಗಲು ಅವರು ಬಳಲಿದ್ದುದು ಹಾಗೂ ಹಲವಾರು ವರ್ಷಗಳು ಮನೆಯಿಂದ, ಕುಟುಂಬದವರಿಂದ ದೂರವಿದ್ದುದೂ ಕಾರಣವಿರಬಹುದು ಹಾಗೂ ಭಾರತದಲ್ಲಿನ ನಿರಂತರ ಮಳೆ, ವಿಪರಿತ ಸೊಳ್ಳೆಯ ಕಾಟವೂ ಅವರನ್ನು ಹಿಮ್ಮೆಟ್ಟಿಸಿರಬಹುದು. ಅದರ ಜೊತೆಗೆ ಬಹುಶಃ ಅವರು ಭಾರತದ ನಂದಾ ಹಾಗೂ ಮಗಧ ಸಾಮ್ರಾಜ್ಯಗಳ ಸೈನ್ಯದಲ್ಲಿನ ಸಾವಿರಾರು ಆನೆಗಳ, ಮಹಾನ್ ಸೈನ್ಯದ, ಅವರ ಶೌರ್ಯದ ಕತೆಗಳೂ ಅವರನ್ನು ಹಿಂದೇಟು ಹಾಕುವಂತೆ ಮಾಡಿರಬಹುದು. ಅಲ್ಲದೆ ಅವನ ಸೈನ್ಯ ಮತ್ತು ಸೇನಾನಾಯಕರು ಅವನ ನಡತೆಯಿಂದ ಸಹ ಬೇಸತ್ತಿರುತ್ತಾರೆ. ಪರ್ಷಿಯಾ ಮುಂತಾದೆಡೆ ಹಲವಾರು ಮದುವೆಗಳನ್ನಾಗುತ್ತಾನೆ ಹಾಗೂ ಅವೆಲ್ಲವನ್ನೂ ಅತ್ಯಂತ ವೈಭವವಾಗಿ ನಡೆಸುತ್ತಾನೆ. ಪರ್ಷಿಯನ್ ನಡತೆಯ ಹಾಗೆ ಎಲ್ಲರೂ ತನಗೆ ಸಂಪೂರ್ಣ ಅಡ್ಡಬಿದ್ದು ಗೌರವ ನೀಡಬೇಕೆಂದು ಆದೇಶಿಸುತ್ತಾನೆ. ಇದೆಲ್ಲದ್ದರಿಂದ ಬೇಸತ್ತ ಸೈನ್ಯ ಮುಂದೆ ಹೋಗಲು ನಿರಾಕರಿಸುತ್ತದೆ.

ಅಲೆಕ್ಸಾಂಡರ್ ಅಷ್ಟೊತ್ತಿಗಾಗಲೇ ಮ್ಯಾಸಿಡೋನಿಯಾದಿಂದ ಸಾವಿರಾರು ಮೈಲುಗಳಷ್ಟು ದೂರ ಬಂದಿದ್ದ, ಏಳು ರಾಷ್ಟ್ರಗಳನ್ನು ಹಾಗೂ ಎರಡು ಸಾವಿರಕ್ಕಿಂತಲೂ ಹೆಚ್ಚು ನಗರಗಳನ್ನು ಗೆದ್ದಿದ್ದ. ಆತನ ದಂಡಯಾತ್ರೆಯಲ್ಲವೂ ನೆಲದ ಮೇಲಿನ ನಡಿಗೆಯಿಂದಾಗಿದ್ದು ಆತ ಸಾಗರದ ಮೂಲಕವೂ ಪ್ರಯಾಣಿಸಿ ಮತ್ತಷ್ಟು ಹೊಸ ನಾಡನ್ನು ಗೆಲ್ಲುವ ಬಯಕೆ ಹೊಂದಿದ್ದ.

ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯ

ಚರಿತ್ರಕಾರರ ಪ್ರಕಾರ ಚಂದ್ರಗುಪ್ತ ಮೌರ್ಯನ ಆಡಳಿತದ ಕಾಲ ಕ್ರಿ.ಪೂ. 324ರಿಂದ 313ರವರೆಗಿತ್ತು, ಆದರೂ ಆತ ಕ್ರಿ.ಪೂ. 321ರಲ್ಲಿ ಸಿಂಹಾಸನ ಏರಿದ ಎಂಬ ದಾಖಲೆಗಳಿವೆ. ಆತ ಕ್ರಿ.ಪೂ. 324ರಲ್ಲೇ ಸಿಂಹಾಸನ ಏರಿದ್ದು ಎಂದಾದರೂ ಅದು ಅಲೆಕ್ಸಾಂಡರ್ ಭಾರತ ಬಿಟ್ಟು ಹಿಂದಿರುಗಿದ ಸಮಯದ ನಂತರದ ಹಾಗೂ ಗ್ರೀಕ್ ದೊರೆ ಬ್ಯಾಬಿಲೋನ್‍ನಲ್ಲಿ ಪ್ರಾಣ ಬಿಟ್ಟ ಸಮಯದ ಮೊದಲಿನ ಸಮಯವಾಗಿದೆ.

ಆದರೂ ಅಲೆಕ್ಸಾಂಡರ್ ಭಾರತದ ವಾಯುವ್ಯ ಪ್ರದೇಶದ ಮೇಲೆ ದಂಡೆತ್ತಿ ಬಂದಿದ್ದಾಗ ಚಂದ್ರಗುಪ್ತ ಅಲೆಕ್ಸಾಂಡರ್‍ನೊಂದಿಗೆ ಸಂಪರ್ಕದಲ್ಲಿದ್ದ ಎಂದು ಗ್ರೀಕ್ ಮೂಲಗಳು ತಿಳಿಸುತ್ತವೆ. ಭಾರತದ ಚರಿತ್ರೆಯ ತಜ್ಞರಾದ ಎ.ಎಲ್.ಭಾಷಂರವರ ಪ್ರಖ್ಯಾತ ಪುಸ್ತಕ `ದ ವಂಡರ್ ದಟ್ ವಾಸ್ ಇಂಡಿಯಾ'ದಲ್ಲಿ, `ಭಾರತೀಯ ಮೂಲಗಳಲ್ಲಿ ಗುರುತಿಸಿರುವ ಚಂದ್ರಗುಪ್ತ ಮೌರ್ಯ ಹೆಸರಿನಂತೆ ತೋರುವ ಸ್ಯಾಂಡ್ರೊಕೋಟಸ್ ಎಂಬ ಯುವ ಭಾರತೀಯನ ಕುರಿತ ಉಲ್ಲೇಖಗಳಿವೆ.' ಆ ಸಮಯದಲ್ಲಿ ಚಂದ್ರಗುಪ್ತ ಮೌರ್ಯ ತನ್ನ ಗುರು ಚಾಣಕ್ಯನ ಬಳಿ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸ ಕಲಿಯುತ್ತಿದ್ದು ಅವರು ತಮ್ಮ ಶತ್ರುಗಳಾದ ನಂದಾರವರ ಮೇಲೆ ಕತ್ತಿ ಮಸೆಯುತ್ತಿರುತ್ತಾರೆ. ಸ್ಯಾಂಡ್ರೊಕೋಟಸ್ ಅಲೆಕ್ಸಾಂಡರ್‍ನಿಗೆ ಪತ್ರ ಬರೆದು ಬಿಯಾಸ್ ನದಿಯನ್ನು ದಾಟಿ ನಂದಾ ಸಾಮ್ರಾಟನ ಮೇಲೆ ಯುದ್ಧ ಮಾಡುವಂತೆ ಸಲಹೆ ನೀಡಿದ್ದಾನೆ ಹಾಗೂ ನಂದಾ ದೊರೆ ಜನರಿಗೆ ಎಷ್ಟು ಹಿಂಸೆ ನೀಡಿದ್ದಾನೆಂದರೆ ಅವನ ಪ್ರಜೆಗಳೇ ಅಲೆಕ್ಸಾಂಡರ್‍ನಿಗೆ ಸಹಾಯ ಮಾಡುತ್ತಾರೆಂದು ತಿಳಿಸಿದ್ದಾನೆ ಎಂದು ಪ್ಲುಟಾರ್ಕ್ ದಾಖಲಿಸಿದ್ದಾನೆ. ಅಲೆಕ್ಸಾಂಡರ್‍ನಿಗೆ ಸ್ಯಾಂಡ್ರೊಕೋಟಸ್‍ನ ಶೌರ್ಯದ ಮಾತುಗಳಿಂದ ಸಿಟ್ಟು ಬಂದಿತು ಎಂದು ಲ್ಯಾಟಿನ್ ಚರಿತ್ರಕಾರ ಜಸ್ಟಿನ್ ಹೇಳಿದ್ದಾನೆ.

ಈ ಉಲ್ಲೇಖಗಳಿಂದ ಅಲೆಕ್ಸಾಂಡರ್ ದಾಳಿಯ ನಂತರ ಅಧಿಕಾರಕ್ಕೇರಿದ ಸಾಮ್ರಾಟ ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರ್ ಬಗ್ಗೆ ಕೇಳಿದ್ದ ಮತ್ತು ಆತನ ಆಕ್ರಮಣಕಾರಿ ದಾಳಿಗಳಿಂದ ತಾನೂ ಪ್ರೇರೇಪಣೆ ಪಡೆದಿರಬಹುದು ಎಂದು ಬಾಷಂ ಹೇಳಿದ್ದಾರೆ. ನಂದಾ ಆಡಳಿತದ ಕೊನೆಯ ದೊರೆಯಾದ ಹಾಗೂ ಜನರಿಗೆ ಅಪ್ರಿಯನಾಗಿದ್ದ ಧನ ನಂದಾನನ್ನು ಚಂದ್ರಗುಪ್ತ ಸೋಲಿಸಿ ರಾಜಧಾನಿ ಪಾಟಲೀಪುತ್ರವನ್ನು ವಶಕ್ಕೆ ಪಡೆದ ಎಂಬುದನ್ನು ಗ್ರೀಕ್ ಮತ್ತು ಭಾರತದ ಮೂಲಗಳೆರಡೂ ತಿಳಿಸುತ್ತವೆ. ನಂದಾ ರಾಜನಿಂದ ಅಪಮಾನಕ್ಕೊಳಗಾದ ಬ್ರಾಹ್ಮಣ ಕೌಟಿಲ್ಯ ಅಥವಾ ಚಾಣಕ್ಯ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಚಂದ್ರಗುಪ್ತನಿಗೆ ಬೆಂಬಲಿಸುತ್ತಾನೆ.

ಬೌದ್ಧ ಮೂಲಗಳ ಪ್ರಕಾರ ಚಂದ್ರಗುಪ್ತ ಮೌರ್ಯ ಕ್ಷತ್ರಿಯಾ ಮೋರಿಯಾದ ಶಾಕ್ಯ ಕುಲಕ್ಕೆ ಸೇರಿದವನು. ಆದರೆ ಬ್ರಾಹ್ಮಣ ಪಠ್ಯಗಳು ಆತನನ್ನು ಶೂದ್ರ ಮತ್ತು ಸಂಪ್ರದಾಯ ವಿರೋಧಿ ಎಂದು ಗುರುತಿಸಿವೆ. ಚಾಣಕ್ಯನ ಕುಶಲ ಕಾರ್ಯತಂತ್ರಗಳಿಂದ ಹಾಗೂ ಮಹಾನ್ ಸೈನ್ಯದ ಬಲದಿಂದ ಚಂದ್ರಗುಪ್ತ ಸಾಮ್ರಾಟನಾಗುತ್ತಾನೆ. ಗಂಗಾ ನದಿಯ ಬಯಲು ಪ್ರದೇಶಗಳನ್ನೆಲ್ಲಾ ಗೆದ್ದ ನಂತರ ಅಲೆಕ್ಸಾಂಡರ್‍ನ ಸೈನ್ಯ ಬಿಟ್ಟು ಹೋಗಿರುವ ಭಾರತದ ವಾಯುವ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹೊರಡುತ್ತಾನೆ. ಆತ ಇಂಡಸ್ ತಲುಪುವವರೆಗೂ ಸುಲಭವಾಗಿ ಎಲ್ಲವನ್ನೂ ಗೆಲ್ಲುತ್ತಾನೆ. ಅಲ್ಲಿ ಅಲೆಕ್ಸಾಂಡರ್‍ನ ಪ್ರತಿನಿಧಿ ಗ್ರೀಸ್‍ನ ಸೆಲ್ಯೂಕಸ್ ನಿಕಟರ್ ಆ ಪ್ರದೇಶವನ್ನು ರಕ್ಷಿಸುತ್ತಿರುತ್ತಾನೆ. ಆಗ ಹಿಂದಿರುಗಿದ ಚಂದ್ರಗುಪ್ತ ಪುನಃ ಕ್ರಿ.ಪೂ. 305ರಲ್ಲಿ ಅಲ್ಲಿಗೆ ದಂಡೆತ್ತಿ ಹೋಗಿ ಸೆಲ್ಯೂಕಸ್‍ನನ್ನು ಸೋಲಿಸುತ್ತಾನೆ.

1-2ನೇ ಶತಮಾನದ ಇಂಡೋ-ಗ್ರೀಕ್ ಶಿಲ್ಪಿಗಳ ಗಾಂಧಾರ ಬುದ್ಧ.

ಆಗ ನಡೆಯುವ ಶಾಂತಿ ಒಪ್ಪಂದಗಳಲ್ಲಿ ಸೆಲ್ಯೂಕಸ್‍ನ ವಶದಲ್ಲಿದ್ದ ಈಗಿನ ಪೂರ್ವ ಅಫ್ಘಾನಿಸ್ತಾನ, ಬಲೂಚಿಸ್ತಾನ ಮತ್ತು ಮಕ್ರಾನ್ ಪ್ರದೇಶಗಳು ಮೌರ್ಯ ಸಾಮ್ರಾಜ್ಯಕ್ಕೆ ಸೇರಿಕೊಳ್ಳುತ್ತವೆಂದು ರೊಮಿಳಾ ಥಾಪರ್ ತಮ್ಮ `ದ ಪೆಂಗ್ವಿನ್ ಹಿಸ್ಟರಿ ಆಫ್ ಇಂಡಿಯಾ'ದಲ್ಲಿ ತಿಳಿಸಿದ್ದಾರೆ. ರಾಜ ಕುಟುಂಬಗಳ ನಡುವೆ ಕೊಡು ಕೊಳ್ಳುವಿಕೆಯ ಮೂಲಕ ಮದುವೆಗಳೂ ನಡೆಯುತ್ತವೆ ಹಾಗೂ ನಂತರ ಮೌರ್ಯನ್ನರ ಮತ್ತು ಗ್ರೀಕರ ನಡುವೆ ಬಹಳಷ್ಟು ಸಾಂಸ್ಕøತಿಕ ವಿನಿಮಯವೂ ನಡೆಯುತ್ತದೆ. ಈ ಸಾಂಸ್ಕøತಿಕ ವಿನಿಮಯದ ಪಳೆಯುಳಿಕೆಗಳು ಈಗಲೂ ನಮ್ಮ ಸಮಾಜದಲ್ಲಿ ಉಳಿದಿವೆ.

ಪ್ರಾಚೀನ ನಿರಂಕುಶಾಧಿಕಾರಿಯೊಬ್ಬ ಜಾಗತಿಕ ನಾಯಕನಾದ ಕತೆ

ಮ್ಯಾಸಿಡೋನಿಯಾದ ಅಲೆಕ್ಸಾಂಡರ್ ತನ್ನ 32 ವಯಸ್ಸಿನಲ್ಲಿ ಸತ್ತಾಗ, ಒಬ್ಬ ಬಹುಸಂಸ್ಕೃತಿಯ ನಾಯಕನ ರೂಪದಲ್ಲಿ ರೂಪಾಂತರಗೊಳ್ಳುವುದು ಆಗಷ್ಟೇ ಪ್ರಾರಂಭವಾಯಿತೆನ್ನಬಹುದು. ಕ್ರಿ.ಪೂ. 321ರಲ್ಲಿ ಬ್ಯಾಬಿಲೋನ್‍ನಿಂದ ಒಂದು ವಿಚಿತ್ರ ಮೆರವಣಿಗೆ ಹೊರಟಿತು. ಸಾಮ್ರಾಟ ಅಲೆಕ್ಸಾಂಡರ್ ಆ ಮೆರವಣಿಗೆಯಲ್ಲಿ ಹೊರಟಿದ್ದ. ಆದರೆ ಅಲೆಕ್ಸಾಂಡರ್ ತನ್ನ 32ನೇ ವಯಸ್ಸಿನಲ್ಲಿ ಕ್ರಿ.ಪೂ. 323ರಲ್ಲೇ ಸತ್ತು ಆ ಹೊತ್ತಿಗೆ 2 ವರ್ಷಗಳಾಗಿದ್ದವು ಹಾಗೂ ಆ ಮೆರವಣಿಗೆಯಲ್ಲಿ ಸಾಗುತ್ತಿದ್ದುದು ಅವನ ಶವವಾಗಿತ್ತು. ಕೆಲವೇ ವರ್ಷಗಳಲ್ಲಿ ಈ ದಿಗ್ಭ್ರಮೆಗೊಳಿಸುವ ಸೈನಿಕ ಹಾಗೂ ರಾಜ್ಯನೀತಿಜ್ಞ ಆಗಿನ ಪ್ರಾಚೀನ ಜಗತ್ತಿನ ಗಡಿಗಳ ವ್ಯಾಖ್ಯಾನವನ್ನೇ ಬದಲಿಸಿಬಿಟ್ಟಿದ್ದ. ಆತ ತನ್ನ ಸೈನ್ಯವನ್ನು ಏಷಿಯಾ ಮೈನರ್ ಮೂಲಕ ಮ್ಯಾಸಿಡಾನ್‍ನಿಂದ ಈಜಿಪ್ಟ್‍ವರೆಗೆ ಹಾಗೂ ಭಾರತದ ಉಪಖಂಡದವರೆಗೂ ಮುನ್ನಡೆಸಿದ್ದ; ಪರ್ಷಿಯಾದ ಮಹಾನ್ ದೊರೆ ಮೂರನೇ ಡೇರಿಯಸ್‍ನನ್ನು ಅವನ ಸೈನ್ಯಕ್ಕಿಂತ ತನ್ನ ಸೈನ್ಯದ ಸಂಖ್ಯೆ ಕಡಿಮೆಯಿದ್ದರೂ ತನ್ನ ಯುದ್ಧ ಚಾಣಾಕ್ಷತನದಿಂದ ಎರಡು ಸುದೀರ್ಘ ರಕ್ತಸಿಕ್ತ ಯುದ್ಧಗಳಲ್ಲಿ ಸೋಲಿಸಿದ್ದ. ಪರ್ಷಿಯನ್ ಸಾಮ್ರಾಜ್ಯದ ಬ್ಯಾಬಿಲೋನ್, ಸೂಸಾ ಮತ್ತು ಪರ್ಸೆಪೆÇೀಲಿಸ್ ನಗರಗಳು ಆತನೆದುರು ಮಂಡಿಯೂರಿದ್ದವು. ಸುಮಾರು 25ರ ವಯಸ್ಸಿಗೆ ಅಲೆಕ್ಸಾಂಡರ್ ಯೂರೋಪಿಯನ್ ಚರಿತ್ರೆಯಲ್ಲಿ ಯಾರೂ ಕಂಡರಿಯದಷ್ಟು ಸಿರಿಸಂಪತ್ತು ಮತ್ತು ಅಧಿಕಾರವನ್ನು ಗಳಿಸಿದ್ದ. ಆದರೆ ಆತನಿಗೆ ಅಷ್ಟು ಸಾಕಾಗಿರಲಿಲ್ಲ. ಅಲೆಕ್ಸಾಂಡರ್ ತನ್ನ ಸೈನ್ಯವನ್ನು ಮತ್ತಷ್ಟು ಪೂರ್ವಕ್ಕೆ, ಏಷಿಯಾದ ಮೂಲಕ, ಅಫ್ಘಾನಿಸ್ತಾನದ ಪರ್ವತಗಳ ಮೂಲಕ ಹಾಗೂ ಗ್ರೀಸ್‍ನ ದೇವತೆಗಳೂ ಇನ್ನೂ ಹೆಜ್ಜೆ ಇಡದ ನಾಡಿಗೆ ಮುನ್ನಡೆಸಿದ. ಆತನೆಂದೂ ಯಾವುದೇ ಯುದ್ಧದಲ್ಲಿ ಸೋತವನಲ್ಲ, ಆದರೆ ಹಲವಾರು ಸುದೀರ್ಘ ವರ್ಷಗಳ ಸತತ ಯುದ್ಧದಿಂದ ಬಳಲಿದ್ದ ಆತನ ಸೇನಾನಾಯಕರು, ಸೈನಿಕರು ಭಾರತದ ಜೇಲಂ ನದಿಯ ತಟದೆದುರು ತಮ್ಮ ಶಸ್ತ್ರಾಸ್ತ್ರ ಇರಿಸಿ ಇನ್ನು ತಮ್ಮಿಂದ ಯುದ್ಧ ಮಾಡುವುದು ಸಾಧ್ಯವಿಲ್ಲವೆಂದು ಕೈ ಚೆಲ್ಲಿದರು. ಅಲೆಕ್ಸಾಂಡರ್ ಒಲ್ಲದ ಮನಸ್ಸಿನಿಂದ ತನ್ನ ಸೈನ್ಯದೊಂದಿಗೆ ಬ್ಯಾಬಿಲೋನ್‍ಗೆ ಹಿಂದಿರುಗಿದ ಹಾಗೂ ಅಲ್ಲಿ ಪ್ರಾಣ ಬಿಟ್ಟ. ಅವನ ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. ಕೆಲವರು ವಿಷಪ್ರಾಶನದಿಂದ ಎಂದರೆ, ಇನ್ನು ಕೆಲವರು ಅತಿಯಾದ ಕುಡಿತದಿಂದ ಎನ್ನುತ್ತಾರೆ. ಒಟ್ಯಾಗೊ ವಿಶ್ವವಿದ್ಯಾಲಯದ ಡಾ. ಕ್ಯಾಥರೀನ್ ಹಾಲ್‍ರವರ ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ ಅಲೆಕ್ಸಾಂಡರ್ ಗಿಲೆನ್-ಬ್ಯಾರೆ ಸಿಂಡ್ರೋಮ್ ಎಂಬ ನರರೋಗದಿಂದ ನರಳುತ್ತಿದ್ದ. ಆ ಕಾಯಿಲೆಗೆ ಕ್ಯಾಂಪೈಲೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾ ಉಂಟುಮಾಡುವ ಸೋಂಕು. ಆ ಕಾಯಿಲೆಯಿಂದ ಇಡೀ ದೇಹ ಕ್ರಮೇಣ ಪಾಶ್ರ್ವವಾಯುಗೊಳಗಾದಂತೆ ನಿಶ್ಚೇಷ್ಟವಾಗುತ್ತದೆ, ಮಾತು ಹೊರಡುವುದಿಲ್ಲ, ದೇಹ ಶವದಂತೆ ಬಿದ್ದಿರುತ್ತದೆ ಆದರೆ ಮಿದುಳು ಕೆಲಸಮಾಡುತ್ತಿರುತ್ತದೆ. ಆ ಕಾರಣದಿಂದಲೇ ಎಲ್ಲರೂ ಅಲೆಕ್ಸಾಂಡರ್ ಸತ್ತಿದ್ದಾನೆ ಎಂದು ನಿರ್ಧರಿಸಿದ ಮೇಲೂ ಆರು ದಿನಗಳು ಆತನ ದೇಹ ಕೊಳೆಯಲಿಲ್ಲ. ವಾಸ್ತವವಾಗಿ ಆ ಆರು ದಿನಗಳು ಆತ ಸತ್ತೇ ಇರಲಿಲ್ಲ ಎನ್ನುತ್ತಾರೆ ಡಾ.ಹಾಲ್.

ಪ್ರಾಚೀನ ಚರಿತ್ರೆಯಲ್ಲಿನ ಒಂದು ನಿಬ್ಬೆರಗಾಗಿಸುವ ಹಾಗೂ ಮಹಾನ್ ಅಧ್ಯಾಯವೊಂದು ಕೊನೆಗೊಂಡಿತು. ಅವನ ಸಾಹಸ, ಆಕ್ರಮಣ, ನಿರಂಕುಶ ಆಡಳಿತ, ಸಾಮ್ರಾಜ್ಯ ವಿಸ್ತರಣೆಯಲ್ಲಿನ ಜನಸಾಮಾನ್ಯರು, ಮಹಿಳೆಯರು, ಮಕ್ಕಳೆನ್ನದೆ ನಡೆಸಿದ ಕ್ರೌರ್ಯ ಎಲ್ಲವೂ ಆತನ ಸಾವಿನಿಂದ ಕೊನೆಗೊಂಡಿರಬಹುದು, ಆದರೆ ಅಲೆಕ್ಸಾಂಡರ್‍ನ ಸಾಹಸಗಾಥೆಗಳ ನಿರೂಪಣೆ, ಅವನಿಗೆ ದೊರಕುವ ಖ್ಯಾತಿ ಹಾಗೂ ಅವು ಆತ ತನ್ನ ಬದುಕಿನಲ್ಲಿ ಎಂದೂ ಸಾಧಿಸಿರದಂತಹ ವ್ಯಕ್ತಿತ್ವ ರೂಪಾಂತರ ಎಲ್ಲವೂ ಅಂದಿನಿಂದ ಪ್ರಾರಂಭವಾಯಿತು.

ಅಲೆಕ್ಸಾಂಡರ್‍ನ ಸಾವಿನಿಂದ ಅವನ ಉತ್ತರಾಧಿಕಾರಿಗಳ ಕುರಿತು ಯಾವುದೇ ಖಚಿತತೆ ಇಲ್ಲದಿದ್ದುದರಿಂದ ಅಧಿಕಾರಕ್ಕಾಗಿ ತೀವ್ರ ಹೊಡೆದಾಟ ಪ್ರಾರಂಭವಾಯಿತು. ಅವನ ಜನರಲ್‍ಗಳಲ್ಲಿ ಒಬ್ಬನಾದ ಪೆರ್ಡಿಕಾಸ್‍ನಿಗೆ ಸಾವಿನ ದವಡೆಯಲ್ಲಿದ್ದ ಅಲೆಕ್ಸಾಂಡರ್ ತನ್ನ ರಾಜಲಾಂಛನದ ಉಂಗುರ ಕೊಡುತ್ತಾನೆ. ಅದರಿಂದಾಗಿ ಆತನನ್ನು ಸಾಮ್ರಾಜ್ಯದ ಮೇಲುಸ್ತುವಾರಿ ನೋಡಿಕೊಳ್ಳಲು ಹೆಸರಿಸಲಾದರೂ ಪ್ರತಿಯೊಬ್ಬ ಸೈನ್ಯಾಧಿಕಾರಿಯೂ ಎಷ್ಟು ಸಾಧ್ಯವೋ ಅಷ್ಟು ಸಂಪತ್ತು ಮತ್ತು ಅಧಿಕಾರ ದೋಚಿಕೊಳ್ಳಲು ಪ್ರಯತ್ನಿಸಿದರು.

ಈ ಕಿತ್ತಾಟದಲ್ಲಿ ಎಲ್ಲರೂ ಅಲೆಕ್ಸಾಂಡರ್‍ನನ್ನೇ ಮರೆತುಬಿಟ್ಟರು. ಅವನ ದೇಹವನ್ನು ಕೆಡದಂತಿರಲು ಜೇನಿನ ದೊಡ್ಡ ಜಾಡಿಯ ಶವಪೆಟ್ಟಿಗೆಯಲ್ಲಿ ಇರಿಸಿ ಸಂರಕ್ಷಿಸಿದ್ದರು. ಎರಡು ವರ್ಷಗಳು ಕಳೆದುಹೋದವು. ಕೊನೆಗೆ ಅವನ ಪೂರ್ವಜರೊಂದಿಗೆ ಹೂತು ಬಿಡಲು ಅಲೆಕ್ಸಾಂಡರ್‍ನ ಶವವನ್ನು ಮ್ಯಾಸಿಡಾನ್‍ಗೆ ಕೊಂಡೊಯ್ಯುವ ಅಂತಿಮ ಯಾತ್ರೆ ಪ್ರಾರಂಭವಾಯಿತು. ಆದರೆ ಶವ ಮ್ಯಾಸಿಡಾನ್ ತಲುಪಲೇ ಇಲ್ಲ. ಅಲೆಕ್ಸಾಂಡರ್‍ನ ಶವ ಹೊತ್ತ ವಾಹನ ಒಂದು ದೊಡ್ಡ ಚಿನ್ನದ ಮಂದಿರದ ಹಾಗೆ ಇತ್ತು - ಕಿಲೋಗಟ್ಟಲೆ ಚಿನ್ನದಿಂದ ಸಿಂಗರಿಸಲಾಗಿತ್ತು. ಅಲೆಕ್ಸಾಂಡರ್‍ನ ಹಿಂದಿನ ಒಬ್ಬ ಗೆಳೆಯ ಈಜಿಪ್ಟ್‍ನ ರಾಜ್ಯಪಾಲನಾಗಿದ್ದ ಟೊಲೆಮಿ ಶವಯಾತ್ರೆಯನ್ನು ತಡೆದ. ಅಲೆಕ್ಸಾಂಡರ್‍ನ ಶವವನ್ನು ಟೊಲೆಮಿ ಈಜಿಪ್ಟ್‍ಗೆ ಕೊಂಡೊಯ್ಯಲು ಬಯಸಿದ, ಏಕೆಂದರೆ ಅವನ ಬಳಿ ಅಲೆಕ್ಸಾಂಡರ್‍ನ ಶವ ಇದ್ದರೆ ಅವನ ಹೆಸರು ಮತ್ತು ವರ್ಚಸ್ಸಿನ ಆಧಾರದ ಮೇಲೆ ಅಲ್ಲಿ ಅಧಿಕಾರ ಪಡೆಯುವುದು ಸುಲಭವಾಗಿತ್ತು.

ಆದರೆ ಆತ ಶವವನ್ನು ತನ್ನೊಂದಿಗೆ ಕದ್ದೊಯ್ಯುತ್ತಿರುವುದು ಪೆರ್ಡಿಕಾಸ್‍ಗೆ ತಿಳಿದರೆ ಅವನನ್ನು ಜೀವಂತ ಬಿಡುವುದಿಲ್ಲವೆಂಬುದು ಟೊಲೆಮಿಗೆ ತಿಳಿದಿತ್ತು. ಅದಕ್ಕಾಗಿ ಟೊಲೆಮಿ ಒಂದು ಚಾಣಾಕ್ಷ ಉಪಾಯ ಹೂಡಿದ. ರೋಮ್‍ನ ಚರಿತ್ರಕಾರ ಏಲಿಯಾನ್ ದಾಖಲಿಸಿರುವಂತೆ ಟೊಲೆಮಿ ಅಲೆಕ್ಸಾಂಡರ್‍ನ ಶವದ ಗೊಂಬೆಯೊಂದನ್ನು ಸಿದ್ಧಗೊಳಿಸಿ ಎಲ್ಲರಿಗೂ ಅದು ನಿಜವಾದ ಶವವೆಂದು ನಂಬಿಸಿ ಅದನ್ನು ಚಿನ್ನ, ಬೆಳ್ಳಿ, ಆನೆದಂತ, ವಸ್ತ್ರಗಳಿಂದ ಸಿಂಗರಿಸಿ ಅದನ್ನು ಮ್ಯಾಸಿಡೋನ್‍ಗೆ ಕಳುಹಿಸಿದ. ಇತ್ತ, ಅಲೆಕ್ಸಾಂಡರ್‍ನ ನಿಜವಾದ ಶವವನ್ನು ಕದ್ದು ಮುಚ್ಚಿ, ಯಾರೂ ಓಡಾಡದ ರಸ್ತೆ, ಕಾಡು ಹಾದಿಗಳ ಮೂಲಕ ಈಜಿಪ್ಟ್‍ಗೆ ಕೊಂಡೊಯ್ದ. ಪೆರ್ಡಿಕಾಸ್ ಅಲೆಕ್ಸಾಂಡರ್‍ನ ಶವದ ಬೊಂಬೆಯಿದ್ದ ರಥವನ್ನು ತಡೆದು ನಿಲ್ಲಿಸಿದ. ನಿಜವಾದ ಶವ ತನಗೇ ದಕ್ಕಿದೆಯೆಂದು ನಂಬಿ ತನ್ನ ಅಧಿಕಾರ ಗಟ್ಟಿಗೊಳಿಸುವ ಯೋಜನೆ ಮಾಡಿದ. ಆದರೆ ಕೊನೆಗೂ ಅವನ ಬಳಿ ಇರುವುದು ಶವದ ಬೊಂಬೆ ಎಂಬುದು ತಿಳಿಯಿತು, ಆದರೆ ಅಷ್ಟೊತ್ತಿಗೆ ತೀರಾ ತಡವಾಗಿತ್ತು.

ಟೊಲೆಮಿಯ ಯೋಜನೆ ಫಲಿಸಿತ್ತು. ಅಲೆಕ್ಸಾಂಡರ್‍ನ ಸೈನಿಕರು ಟೊಲೆಮಿಯ ಬೆಂಬಲಕ್ಕೆ ನಿಂತರು. ಅವನ ಅಧಿಕಾರ ಹೆಚ್ಚು ಪ್ರಬಲವಾಗತೊಡಗಿತು. ಒಬ್ಬ ಸಾಧಾರಣ ಮ್ಯಾಸಿಡೋನಿಯನ್ ನಾಗರಿಕನಾಗಿದ್ದ ಟೊಲೆಮಿ ತಾನು ಸತ್ತಾಗ ಒಬ್ಬ ಈಜಿಪ್ಟ್‍ನ ಫೆರೊ ಆಗಿದ್ದ, ಅಂದರೆ ದೇವ ಮಾನವ. ಈಜಿಪ್ಟ್‍ನಲ್ಲಿ ಅಲೆಕ್ಸಾಂಡರ್‍ನ ಶವದ ಬೆಂಬಲದಿಂದ ಅವನು ಸ್ಥಾಪಿಸಿದ ಫೆರೋ ಸಾಮ್ರಾಜ್ಯ ಏಳನೇ ಕ್ಲಿಯೋಪಾತ್ರಳಿಂದ 275 ವರ್ಷಗಳ ನಂತರ ಕೊನೆಗೊಂಡಿತು.

ಆದರೆ ಅಲೆಕ್ಸಾಂಡರ್‍ನನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿದವರಲ್ಲಿ ಟೊಲೆಮಿ ಮೊದಲನೆಯವನು ಹಾಗೂ ಕೊನೆಯವನೂ ಅಲ್ಲ. ಟೊಲೆಮಿ ಅಲೆಕ್ಸಾಂಡರ್‍ನ ದೇಹವನ್ನು ತನ್ನ ಅಧಿಕಾರಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರೆ, ಇತರ ಬಹಳಷ್ಟು ಜನ ಆತನ ಹೆಸರನ್ನು, ಕತೆಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. 2000 ವರ್ಷಗಳಿಂದಲೂ ಗ್ರೀಕರು, ರೋಮನ್ ಚರಿತ್ರಕಾರರು, ಈಜಿಪ್ಟಿನ ಕತೆಗಾರರು, ಪರ್ಷಿಯನ್ ಕವಿಗಳು, ಎಥಿಯೋಪಿಯಾದ ಸಂನ್ಯಾಸಿಗಳು, ಯೆಹೂದಿ ವಿದ್ವಾಂಸರು, ಐಸ್ಲೆಂಡ್‍ನ ಹಾಡುಗಾರರು ಹಾಗೂ ಇನ್ನೂ ಇತರರು ಅಲೆಕ್ಸಾಂಡರ್‍ನನ್ನು ತಮ್ಮವನೆಂದು ಕೊಂಡಾಡಿದ್ದಾರೆ, ದಾಖಲಿಸಿದ್ದಾರೆ. ಅಲೆಕ್ಸಾಂಡರ್ ಪರ್ಷಿಯಾದ ರಾಜನಾಗಿದ್ದಾನೆ, ಇಸ್ಲಾಮಿಕ್ ಪವಿತ್ರ ವ್ಯಕ್ತಿಯಾಗಿದ್ದಾನೆ, ಕ್ರೈಸ್ತ ಸಂನ್ಯಾಸಿಯಾಗಿದ್ದಾನೆ ಹಾಗೂ ಕೊನೆಗೆ ಜಗತ್ತಿನ ಮೊಟ್ಟಮೊದಲ ಬಹುಸಂಸ್ಕೃತಿಯ ನಾಯಕನಾಗಿದ್ದಾನೆ.

ಸಾಮ್ರಾಟ ಅಲೆಕ್ಸಾಂಡರ್‍ನ ರೂಪಗಳು (ಎಡದಿಂದ ಬಲಕ್ಕೆ): ರೋಮನ್ ಭಿತ್ತಿ ಚಿತ್ರದಲ್ಲಿ; ಅಲೆಕ್ಸಾಂಡರ್ ಕುದುರೆಯ ಮೇಲೆ- ಕ್ರಿ.ಶ. 1445ರ ಅಲೆಕ್ಸಾಂಡರ್ `ರೊಮ್ಯಾನ್ಸ್' ಸಾಹಿತ್ಯದ ಚಿತ್ರಣ; ಕ್ರಿ.ಪೂ. ನಾಲ್ಕನೇ ಶತಮಾನದ ಈಜಿಪ್ಟಿನ ಕೆತ್ತನೆಯಲ್ಲಿ ಫೆರೋನಂತೆ; 14-ನೇ ಶತಮಾನದ ಹಸ್ತಪ್ರತಿಯಲ್ಲಿ ಬೈಜಾಂಟಿನ್ ಸಾಮ್ರಾಟನಂತೆ; ಮತ್ತು ಪರ್ಷಿಯನ್ ಮಹಾಕಾವ್ಯ `ಶಾನಾಮೆ'ಯಲ್ಲಿ  ಡ್ರ್ಯಾಗನ್ ರಕ್ಕಸನೊಂದಿಗೆ ಸೆಣಸುತ್ತಿರುವ ಸಿಕಂದರ್ (ಚಿತ್ರ ಕೃಪೆ: ಬಿ.ಬಿ.ಸಿ. ಹಿಸ್ಟರಿ)

ಈ ಎಲ್ಲ ಕತೆಗಳು ಅಲೆಕ್ಸಾಂಡರ್‍ನ ಸಾವಿನ ನಂತರ ಕ್ಷಿಪ್ರವಾಗಿ ಒಂದೊಂದೆ ಹುಟ್ಟಿಕೊಳ್ಳತೊಡಗಿದವು. ಜಗತ್ತಿನ ಅತ್ಯುತ್ತಮ ಪ್ರಾಚೀನ ಕತೆಗಳ ರೀತಿಯೇ ಅವು ಈಜಿಪ್ಟ್‍ನಲ್ಲಿ ಪ್ರಾರಂಭವಾದವು. "ಬಹಳಷ್ಟು ಜನರು ಮ್ಯಾಸಿಡೋನ್‍ನ ರಾಜ ಫಿಲಿಪ್‍ನ ಮಗ ಅಲೆಕ್ಸಾಂಡರ್ ಎಂದು ನಂಬಿದ್ದಾರೆ, ಆದರೆ ಅದು ತಪ್ಪು. ಈಜಿಪ್ಟ್‍ನ ಮೇಧಾವಿಗಳಿಗೆ ತಿಳಿದಿದೆ, ಆತ ನೆಕ್ಟಾನೆಬೋನ ಮಗ, ಫಿಲಿಪ್‍ನ ಮಗ ಅಲ್ಲ ಎಂದು" ಎಂದು ಒಬ್ಬಾತ ದಾಖಲಿಸಿದ್ದಾನೆ. ಈಜಿಪ್ಟ್‍ನ ಫೆರೊ ಆಗಿದ್ದ ಮೊದಲನೇ ನೆಕ್ಟಾನೆಬೊ ತನ್ನ ದೇಶ ಪರ್ಷಿಯನ್ ಸೈನ್ಯದ ಆಕ್ರಮಣಕ್ಕೊಳಗಾದಾಗ ಅಲ್ಲಿಂದ ಓಡಿ ಹೋಗುತ್ತಾನೆ ಎನ್ನುತ್ತದೆ ಆ ಕತೆ. ಆತ ಮ್ಯಾಸಿಡೋನ್‍ನಲ್ಲಿ ಅವಿತುಕೊಳ್ಳುತ್ತಾನೆ ಹಾಗೂ ಅಲ್ಲಿ ಈಜಿಪ್ಟ್‍ನ ದೇವರಾದ ಅಮುನ್ ರೂಪ ಧರಿಸಿ ಅಲೆಕ್ಸಾಂಡರ್‍ನ ತಾಯಿಯ ಜೊತೆ ಮಲಗುತ್ತಾನೆ. ಹಾಗಾಗಿ ಅಲ್ಲಿ ಹುಟ್ಟಿದ ಅಲೆಕ್ಸಾಂಡರ್ ಈಜಿಪ್ಟ್‍ನವನು. ಇದೊಂದು ಅತಿರೇಕದ ವಿಚಾರವೂ ಹೌದು. ಆದರೆ, ತನ್ನ ಜೀವಿತಾವಧಿಯಲ್ಲಿ ಅಲೆಕ್ಸಾಂಡರ್ ತನ್ನ ಕುರಿತ ಅಂತಹ ಹಾಗೂ ಇನ್ನೂ ಹೆಚ್ಚು ಅತಿರೇಕದ ವಿಚಾರಗಳಿಗೆ ಬೆಂಬಲ ತೋರಿಸುತ್ತಿದ್ದ. ಈಜಿಪ್ಟ್‍ನ ಪಶ್ಚಿಮ ಮರುಭೂಮಿಯಲ್ಲಿ ರಹಸ್ಯವಾಗಿದ್ದ ಅಮುನ್ ದೇವತೆಯ ಪುರೋಹಿತರನ್ನು ಭೇಟಿ ಮಾಡಿದ ನಂತರ ಅಲೆಕ್ಸಾಂಡರ್ ಅಮುನ್ ದೇವರೇ ತನ್ನನ್ನು ಆತನ ಮಗನನ್ನಾಗಿ ಗುರುತಿಸಿದ್ದಾನೆ ಎಂಬ ಗಾಳಿಸುದ್ದಿಯನ್ನು ಹರಡಿಸಿದ. ಕೆತ್ತನೆಯಲ್ಲಿರುವ ಈಜಿಪ್ಟ್‍ನ ಲಿಪಿ ಅಥವಾ ಹೀರೊಗ್ಲೈಫಿಕ್‍ನಲ್ಲಿ ಆತನನ್ನು "ಅಮುನ್‍ನ ಮಗ" ಮತ್ತು "ರಾನ ಮಗ" (ರಾ ಸಹ ಈಜಿಪ್ಟ್‍ನ ಆಕಾಶ ಮತ್ತು ಭೂಮಿಯ ದೇವರು) ಎಂದು ಕೆತ್ತಲಾಗಿದೆ. ಆತ ಸತ್ತ ನಂತರ ಠಂಕಿಸಿದ ನಾಣ್ಯಗಳಲ್ಲಿ ಆತನ ಅಮುನ್‍ದೇವತೆಯ ಕೊಂಬುಗಳನ್ನು ಧರಿಸಿರುವ ಚಿತ್ರಗಳಿವೆ.

ಸಮಯ ಕಳೆದಂತೆ ಅಲೆಕ್ಸಾಂಡರ್‍ನ ಕುರಿತ ಈಜಿಪ್ಟ್‍ನ ದಂತಕತೆ ಮತ್ತಷ್ಟು "ಅದ್ಭುತ" ಕತೆಗಳು ಹುಟ್ಟಿಕೊಂಡು ಹರಡಲು ಕಾರಣವಾಯಿತು. ಅವು "ಅಲೆಕ್ಸಾಂಡರ್ ರೊಮ್ಯಾನ್ಸಸ್" ಎಂದು ಪ್ರಖ್ಯಾತವಾದವು. ಈ ರೊಮ್ಯಾನ್ಸ್ ಕತೆಗಳು ಅಲೆಕ್ಸಾಂಡರ್ ಪ್ರಯಾಣಿಸಿದ್ದಕ್ಕಿಂತ ಹೆಚ್ಚು ದೂರ ಪಯಣಿಸಿದವು. ಅಲೆಕ್ಸಾಂಡರ್ ಕುರಿತಂತೆ ಐಸ್ಲೆಂಡ್ ಸಾಹಸಗಾಥೆಯಿದೆ ಹಾಗೂ ಅದೇ ರೀತಿ ಅರ್ಮೇನಿಯಾದಲ್ಲೂ ಅವನ ಕತೆಗಳಿವೆ. ಈ ಸಾಹಸಗಳಲ್ಲಿ ಅಲೆಕ್ಸಾಂಡರ್ ದೈತ್ಯ ರಕ್ಕಸ ಪ್ರಾಣಿಗಳನ್ನು ಸೆಣಸುತ್ತಾನೆ, ಹದ್ದಿನ ತಲೆ, ಸಿಂಹದ ಕಾಲು, ಬಾಲ ರೆಕ್ಕೆಗಳನ್ನು ಹೊಂದಿರುವ ಪ್ರಾಣಿಗಳು ಅಲೆಕ್ಸಾಂಡರ್‍ನನ್ನು ಪಂಜರದಲ್ಲಿ ಬಂಧಿಸಿ ನಕ್ಷತ್ರಗಳಿಗೆ ಕೊಂಡೊಯ್ಯುತ್ತವೆ, ಅವನು ಸಾಗರದ ಆಳಗಳಿಗೂ ಪಯಣಿಸುತ್ತಾನೆ. ಆತ ಇದುವರೆಗೆ ಯಾರೂ ಹೋಗಿರದ, ನೋಡಿರದ ವಿಚಿತ್ರ ಸ್ಥಳಗಳಿಗೆ ಹೋಗಿ ಬರುತ್ತಾನೆ. ಈ ಅಲೆಕ್ಸಾಂಡರ್ ರೊಮ್ಯಾನ್ಸ್ ಕತೆಗಳು ಚರಿತ್ರೆಯ ಅತ್ಯಂತ ಅದ್ಭುತ ಕತೆಗಳಾಗಿವೆ, ಕನಸು ಮತ್ತು ವಾಸ್ತವತೆಯ ನಡುವಿನಲ್ಲಿ ತೂಗಾಡುತ್ತವೆ, ಕಲಾತ್ಮಕವಾಗಿ, ಅಲೆಕ್ಸಾಂಡರ್‍ನ ವ್ಯಕ್ತಿತ್ವದಂತೆಯೇ ರಂಜಿಸುತ್ತವೆ.

ಅಂತಹ ಒಂದು ಮಧ್ಯಕಾಲೀನ ಕತೆಯಲ್ಲಿ ವಲಸೆ ಹೋದ ಯೆಹೂದಿ ಬರೆಹಗಾರರು ಅಲೆಕ್ಸಾಂಡರ್ ಜೆರೂಸಲೆಂಗೆ ಭೇಟಿ ನೀಡಿದ್ದ ಎಂದು ಬರೆದಿದ್ದಾರೆ. ಆ ಕತೆಯಲ್ಲಿ ಅಲೆಕ್ಸಾಂಡರ್ ಯುದ್ಧಕ್ಕೆ ಸಿದ್ಧನಾಗಿ ಅಲ್ಲಿಗೆ ಹೋಗುತ್ತಾನೆ. ಜೆರೂಸಲೆಂನ ಪ್ರಧಾನ ಪುರೋಹಿತ ಮತ್ತು ಜನರು ಆತನನ್ನು ಭೇಟಿಯಾಗಲು ಹೋದಾಗ ಒಂದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಪ್ರಧಾನ ಪುರೋಹಿತನನ್ನು ನೋಡಿದ ತಕ್ಷಣ ಅಲೆಕ್ಸಾಂಡರ್ ಆತನಿಗೆ ಅಡ್ಡಬಿದ್ದು ನಮಸ್ಕರಿಸಿ ಆತನನ್ನು ಮ್ಯಾಸಿಡೋನಿಯಾದಲ್ಲಿ ತನ್ನ ಕನಸಲ್ಲಿ ಕಂಡಿರುವುದಾಗಿ ತನ್ನ ಸೈನ್ಯಕ್ಕೆ ತಿಳಿಸುತ್ತಾನೆ. ಆ ಪುರೋಹಿತ ಅಲೆಕ್ಸಾಂಡರ್‍ನ ಕನಸಲ್ಲಿ ಬಂದು, "ತಡ ಮಾಡಬೇಡ, ಸಾಗರವನ್ನು ದಾಟಿ ಬಾ, ನಾನು ನಿನ್ನ ಸೈನ್ಯ ಮುನ್ನಡೆಸುತ್ತೇನೆ ಹಾಗೂ ಪರ್ಷಿಯನ್ನರ ಮೇಲೆ ನೀನು ಜಯಶಾಲಿಯನ್ನಾಗಿ ಮಾಡುತ್ತೇನೆ" ಎಂದು ಹೇಳಿರುತ್ತಾನೆ. ಅಲೆಕ್ಸಾಂಡರ್ ಜೆರೂಸಲೆಂನ ಜನರನ್ನು ಆಧರಿಸಿ, ಗೌರವಿಸಿ ಮಂದಿರದಲ್ಲಿ ದೇವರಿಗೆ ಬಲಿಕೊಟ್ಟು ಆರಾಧಿಸಿದನಂತೆ. ವಾಸ್ತವವೆಂದರೆ ಅಲೆಕ್ಸಾಂಡರ್ ಎಂದೂ ಜೆರೂಸಲೆಂಗೆ ಕಾಲಿಟ್ಟವನಲ್ಲ. ಇದೊಂದು ಕಟ್ಟು ಕತೆ. ಆದರೆ ಯೆಹೂದಿ ಓದುಗರಿಗೆ, ಕೇಳುಗರಿಗೆ ಈ ಕಟ್ಟುಕತೆ ಅವಶ್ಯಕವಾಗಿತ್ತು. ರೋಮನ್ ಸೈನಿಕರು ಜೆರೂಸಲೆಂ ಕೊಳ್ಳೆ ಹೊಡೆದ ನಂತರ ಅಲೆಕ್ಸಾಂಡರ್‍ನ ದಂಡಯಾತ್ರೆಯ ಎಷ್ಟೊ ಶತಮಾನಗಳ ನಂತರ ಈ ಕತೆ ಹುಟ್ಟಿಕೊಂಡಿತು. ಎಲ್ಲೆಲ್ಲೋ ಚದುರಿಹೋಗಿದ್ದ, ಗಡಿಪಾರಾಗಿದ್ದ ಮತ್ತು ನಿರಂತರ ದಬ್ಬಾಳಿಕೆಗೆ ಒಳಗಾಗಿದ್ದ ಯೆಹೂದಿ ಸಮುದಾಯಕ್ಕೆ ಅಲೆಕ್ಸಾಂಡರ್‍ನ ಕತೆ ಅವಶ್ಯಕವಾಗಿತ್ತು, ಜಗತ್ತನ್ನೇ ಗೆದ್ದ ಮಹಾನ್ ಸಾಮ್ರಾಟ ಅವರ ಧಾರ್ಮಿಕ ಶ್ರದ್ಧೆಯನ್ನು ಗೌರವಿಸಿದ್ದ ಎಂದು ಅವರು ದಾಖಲಿಸಬೇಕಾಗಿತ್ತು.

ಮಧ್ಯಕಾಲೀನ ಕ್ರೈಸ್ತ ಲೇಖಕರು ಸಹ ತಮ್ಮದೇ ಆದ ಅಲೆಕ್ಸಾಂಡರ್‍ನ ಕತೆ ಹೊಂದಿದ್ದರು: ಅವನೊಬ್ಬ ಪವಿತ್ರಾತ್ಮ, ದೇವರೊಂದಿಗೆ ಖುದ್ದಾಗಿ ಮಾತನಾಡಿದವನು ಹಾಗೂ ದೇವರು ಆತನನ್ನು ನಿರಂತರವಾಗಿ ಗಮನಿಸುತ್ತಿದ್ದ. ಆತ ಜಗತ್ತಿನ ಅಂಚಿಗೆ ಪಯಣಿಸಿದವನು ಮತ್ತು ಜಗತ್ತನ್ನು ರಕ್ಷಿಸಲು ಜಗತ್ತಿನ ಗಡಿಗಳಲ್ಲಿ ಬೃಹತ್ ಬಾಗಿಲುಗಳನ್ನು ನಿರ್ಮಿಸಿದವನು. "ಅಲೆಕ್ಸಾಂಡರ್ ಕ್ಯಾಸ್ಪಿಯನ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿನ 22 ರಾಜರನ್ನು ಮತ್ತು ರಾಷ್ಟ್ರಗಳನ್ನು ಆ ಬಾಗಿಲುಗಳ ಹಿಂದೆ ಪ್ರತಿಬಂಧಿಸಿದ. ಆ ರಾಜರುಗಳ ಜೊತೆಯಲ್ಲಿ ಹಳೆಯ ಒಡಂಬಡಿಕೆಯಲ್ಲಿ ಬರುವ ಇಬ್ಬರು ಶತ್ರುಗಳನ್ನು - ಗಾಗ್ ಮತ್ತು ಮೆಗಾಗ್‍ರವರನ್ನು ಸಹ ಬಂಧಿಸಿದ್ದ ಎಂದು ಆ ಕತೆ ಹೇಳುತ್ತಿತ್ತು. ಎಥಿಯೋಪಿಯಾದ ಅವೃತ್ತಿಯ ಕತೆಯಲ್ಲಿ ಅಲೆಕ್ಸಾಂಡರ್ ಮರುಭೂಮಿಯಲ್ಲಿ ಎಲ್ಲರೂ ತೊರೆದು ಹೋಗಿರುವ ಅಡಮಂಟ್ ನಗರದ ಕೋಟೆಗೆ ಬರುತ್ತಾನೆ. ಅಲ್ಲಿ ಆತ ಮತ್ತು ಆತನ ಸೈನಿಕರು ರಹಸ್ಯ ಬಲೆಗಳ, ಕುಳಿಗಳ ಹಾಗೂ ನರ್ತಿಸುವ ಯಂತ್ರಗಳ ವಿರುದ್ಧ ಸೆಣಸಬೇಕಾಗುತ್ತದೆ. ಇನ್ನೇನು ಅಲೆಕ್ಸಾಂಡರ್ ಸೋಲುತ್ತಾನೆ ಎನ್ನುವಾಗ ದೇವರು ಆತನೊಂದಿಗೆ ಮಾತನಾಡಿ ಆ ನಗರದ ಮರೆತ ಭಾಷೆಯನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ನೀಡಿ ಅಲ್ಲಿನ ಎಲ್ಲ ರಹಸ್ಯಗಳನ್ನು ಕಂಡುಕೊಳ್ಳುವಂತೆ ಮಾಡುತ್ತಾನೆ.

ಆದರೆ, ಬಹಳ ಕಾಲದವರೆಗೂ ಅಲೆಕ್ಸಾಂಡರ್‍ನ ಕತೆ ಪರ್ಷಿಯಾದಲ್ಲಿ ಹೊಸ ರೂಪ ಪಡೆದಿರಲಿಲ್ಲ. ಅಲೆಕ್ಸಾಂಡರ್‍ನ ವಿಜಯಗಳು ಸೋತ ರಾಷ್ಟ್ರ, ರಾಜ್ಯಗಳಿಗೆ ನೋವು ನೀಡುವಂಥವು ಹಾಗೂ ಅವಮಾನ ಉಂಟುಮಾಡುವಂಥವಾಗಿದ್ದವು. ಆದರೆ, ಸುಮಾರು ಕ್ರಿ.ಶ. 1000ರಲ್ಲಿ ಪರ್ಷಿಯನ್ ಕವಿ ಫಿರ್ದೌಸಿ "ಶಾನಾಮೆ" ಅಥವಾ "ರಾಜರ ಪುಸ್ತಕ" ರಚಿಸಿದ. ಅದರಲ್ಲಿ ಅಲೆಕ್ಸಾಂಡರ್ ಸಿಕಂದರ್ ಆದ. ಇಂದಿಗೂ ಸಿಕಂದರ್ ಹೆಸರು ಜಗತ್ತಿನೆಲ್ಲೆಡೆ ಬಳಕೆಯಲ್ಲಿದೆ. ಅಲೆಕ್ಸಾಂಡರ್‍ನ ರೊಮ್ಯಾನ್ಸ್ ಕತೆಗಳಿಂದ ಸ್ಫೂರ್ತಿ ಪಡೆದು ಫಿರ್ದೌಸಿ ಹೊಸಗಾಥೆಯನ್ನು ರಚಿಸಿದ. ಶಾನಾಮೆಯಲ್ಲಿ ಅಲೆಕ್ಸಾಂಡರ್ ಮ್ಯಾಸಿಡೋನ್‍ನ ಫಿಲಿಪ್‍ನ ಮಗನಲ್ಲ, ಬದಲಿಗೆ ಪರ್ಷಿಯಾದ ರಾಜ ದರಾಬ್‍ನ ರಹಸ್ಯ ಪುತ್ರ ಹಾಗೂ ಡೇರಿಯಸ್‍ಗೂ ಮೊದಲು ಹುಟ್ಟಿದವ. ಅಂದರೆ, ಅಲೆಕ್ಸಾಂಡರ್ ಡೇರಿಯಸ್‍ನ ಅಣ್ಣ ಹಾಗೂ ಪರ್ಷಿಯಾದ ಸಿಂಹಾಸನಕ್ಕೆ ನ್ಯಾಯಸಮ್ಮತ ಹಕ್ಕುದಾರನಾಗಿದ್ದ. ಹಾಗಾಗಿ ಅಲೆಕ್ಸಾಂಡರ್ ಮೊದಲಿನಿಂದಲೂ ಮೂಲ ಪರ್ಷಿಯಾದವನೇ. ಈ ಸಾಹಸಗಾಥೆಯಲ್ಲಿ ಪ್ರಾಚೀನ ಚರಿತ್ರಕಾರರು ಚಿತ್ರಿಸಿರುವ ರಕ್ತಸಿಕ್ತ, ಕ್ರೌರ್ಯದ ಅಲೆಕ್ಸಾಂಡರ್‍ಗಿಂತ ಮಧ್ಯಕಾಲೀನ ಅಲೆಕ್ಸಾಂಡರ್ ವಿಭಿನ್ನವಾಗಿದ್ದವನು. ಆತ ಅರಿಸ್ಟಾಟಲ್‍ನ ಶಿಷ್ಯ. ಆತನ ಮೂಲಕ ವಿಜ್ಞಾನ, ತತ್ವಶಾಸ್ತ್ರಗಳನ್ನು ಕಲಿತವನು. ಅಲೆಕ್ಸಾಂಡರ್ ಜಗತ್ತನ್ನು ಗೆಲ್ಲುವುದರ ಜೊತೆಗೆ ಅದನ್ನು ಅರ್ಥಮಾಡಿಕೊಳ್ಳಲು ಬಯಸಿದ್ದವನು. ಆತ ಕಲಿಯಲು ಸಾಧ್ಯವಿರುವುದೆಲ್ಲವನ್ನೂ ಕಲಿಯಲು ಹಾಗೂ ನೋಡಲು ಸಾಧ್ಯವಿರುವುದೆಲ್ಲವನ್ನೂ ನೋಡಲು ಬಯಸಿದ್ದವನು. ಆತ ಯೋಧ ಮಾತ್ರವಲ್ಲ, ಆತನೊಬ್ಬ ಸಂನ್ಯಾಸಿ, ತತ್ವಜ್ಞಾನಿ ಹಾಗೂ ತಾನು ದೇವರು ಆಡಿಸಿದಂತೆ ಆಡುವವನು ಎಂದು ನಂಬಿದ್ದವನು. ಆದರೆ ಆತ ತಪ್ಪು ಮಾಡದವನೇನಲ್ಲ. ವಾಸ್ತವವಾಗಿ ಅಲೆಕ್ಸಾಂಡರ್ ತೀವ್ರವಾಗಿ ಮಾನವೀಯ ಅಂಶಗಳನ್ನು ಹೊಂದಿದವನು. ಚರಿತ್ರಕಾರರು ಚಿತ್ರಿಸಿರುವುದಕ್ಕಿಂತ ಹೆಚ್ಚು ಅವನೂ ನೋವು ಅನುಭವಿಸುತ್ತಾನೆ, ಪೆಟ್ಟಾದರೆ ರಕ್ತ ಸುರಿಸುತ್ತಾನೆ, ತಪ್ಪುಗಳನ್ನು ಮಾಡುತ್ತಾನೆ ಹಾಗೂ ದಾರಿ ತಪ್ಪುತ್ತಾನೆ.

12ನೇ ಶತಮಾನದ ಪರ್ಷಿಯನ್ ಕತೆಯಾದ ದರಾಬ್ ನಾಮಾದಲ್ಲಿ ಆತ ಪರ್ಷಿಯಾದ ರಾಜಕುಮಾರಿ ಬುರಾನ್ ದೋಖ್ತ್‍ಳನ್ನು ಪ್ರೇಮಿಸತೊಡಗುತ್ತಾನೆ. ಆದರೆ ಬುರಾನ್ ದೋಖ್ತ್ ತನ್ನನ್ನು ಮದುವೆಯಾಗುವಂತೆ ಕೇಳಲು ಅಲೆಕ್ಸಾಂಡರ್‍ನಿಗೆ ಅದೆಷ್ಟು ಧೈರ್ಯವಿರಬೇಕು ಎಂದು ಭಾವಿಸುತ್ತಾಳೆ. "ನಾನು ರಾಜರ ಏಳು ತಲೆಮಾರಿನಿಂದ ಬಂದವಳು, ತಿಳಿದಿದೆಯೇನು?" ಎಂದು ಅವನಿಗೆ ಸವಾಲು ಹಾಕುತ್ತಾಳೆ. "ತಂದೆಯಿಲ್ಲದ ಅನಾಗರಿಕನೊಬ್ಬನನ್ನು ಏಕೆ ಮದುವೆಯಾಗಬೇಕು?" ಎನ್ನುತ್ತಾಳೆ. ಆಕೆ ಮತ್ತು ಅಲೆಕ್ಸಾಂಡರ್ ಯುದ್ಧದಲ್ಲಿ ಮುಖಾಮುಖಿಯಾಗುತ್ತಾರೆ. ಅಲೆಕ್ಸಾಂಡರ್‍ನನ್ನು ಸೋಲಿಸಿದ ನಂತರವೇ ಆಕೆ ಶಾಂತಿಗೆ ಒಪ್ಪುತ್ತಾಳೆ. ಈ ಕತೆಯಲ್ಲಿ ಅಲೆಕ್ಸಾಂಡರ್ ತೊಡರುತ್ತಾನೆ, ಸೋಲುತ್ತಾನೆ. ಅವನು ಈಡನ್ ಉದ್ಯಾನವನದ ಬಾಗಿಲಿಗೆ ಹೋದಾಗ ಅವನಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅವನು ಜೀವದ ಜಲದ ಅನ್ವೇಷಣೆಯಲ್ಲಿ ಹೊರಡುತ್ತಾನೆ ಆದರೆ ಅವನ ಬದಲು ಅವನ ಅಡುಗೆಯವನು ಅದನ್ನು ಕಂಡುಕೊಳ್ಳುತ್ತಾನೆ. ಯಕ್ಷಣಿಯರು ಅವನನ್ನು ಅಪಹರಿಸುತ್ತಾರೆ, ದೈತ್ಯ ಏಡಿಗಳು ಆತನನ್ನು ಓಡಿಸಿಕೊಂಡು ಬರುತ್ತವೆ ಹಾಗೂ ನಿರಂತರ ಓಟ, ಸೋಲಿನಿಂದ ಇನ್ನೇನು ಸರ್ವಸ್ವವನ್ನೂ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾನೆ. ಅಲೆಕ್ಸಾಂಡರ್ ಅಮರನಾಗಲು ಬಯಸುತ್ತಾನೆ ಆದರೆ ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲ. ಕತೆಯ ಅಂತ್ಯದಲ್ಲಿ ಇನ್ನೇನು ತಾನು ಪ್ರಾಣ ಬಿಡುತ್ತೇನೆ ಎನ್ನುವಾಗ ಅವನ ನಶ್ವರತೆಯ ಬಗ್ಗೆ ಅವನಿಗೆ ಅರಿವಾಗುತ್ತದೆ. "ಶಸ್ತ್ರಗಳು ಹಾಗೂ ಸೈನ್ಯವು ಸಾವನ್ನು ದೂರ ಇಡಬಲ್ಲವಾದರೆ, ಜಗತ್ತಿನ ಎಲ್ಲ ಸೈನ್ಯಗಳೂ ನನ್ನಲ್ಲಿವೆ," ದುಃಖದಿಂದ ಹೇಳುತ್ತಾನೆ. "ಜಗತ್ತಿನ ಎಲ್ಲ ಪ್ರಾರ್ಥನೆಗಳೂ, ಜಪಮಣಿಗಳೂ ಸಾವನ್ನು ದೂರವಿಡಬಲ್ಲವಾದರೆ, ಜಗತ್ತಿನ ಎಲ್ಲ ಪುರೋಹಿತರೂ ಮತ್ತು ಪವಿತ್ರ ಸಂನ್ಯಾಸಿಗಳು ನನ್ನ ಬಳಿ ಇದ್ದಾರೆ. ಎಲ್ಲ ಸಿರಿಸಂಪತ್ತು ಮತ್ತು ಧನಕನಕಗಳು ಸಾವನ್ನು ಕೊಳ್ಳಲು ಸಾಧ್ಯವಾಗುವುದಾದರೆ, ಜಗತ್ತಿನ ಎಲ್ಲ ಸಿರಿಸಂಪತ್ತು ನನ್ನಲ್ಲಿದೆ." ತನ್ನಲ್ಲಿ ಎಲ್ಲ ಸಿರಿಸಂಪತ್ತು, ಅಧಿಕಾರವಿದ್ದರೂ ಅಲೆಕ್ಸಾಂಡರ್‍ನಿಗೆ ತಿಳಿದಿದೆ ಅವನ ಸಾವು ತಡೆಯುವುದು ಸಾಧ್ಯವಿಲ್ಲವೆಂದು.

ಅಲೆಕ್ಸಾಂಡರ್ ಕುರಾನ್‍ನಲ್ಲಿಯೂ ಕಾಣಿಸಿಕೊಳ್ಳುತ್ತಾನಂತೆ. ಅಲ್ಲಿ ಧು ಅಲ್-ಖರ್ನೈನ್ ಅಥವಾ "ಎರಡು ಕೊಂಬುಗಳ ಜೀವಿ"ಯ ದಂತಕತೆಯಲ್ಲಿ ಕಂಡುಬರುತ್ತಾನೆ, ಆತ ಭೂಮಿಯ ಅಂಚಿಗೆ ಹೋಗಿ ಜಗತ್ತನ್ನು ರಕ್ಷಿಸಲು ಗೋಡೆಯೊಂದನ್ನು ನಿರ್ಮಿಸುತ್ತಾನೆ. ಆ ಗೋಡೆಯ ಹಿಂದಿರುವ ಶತ್ರುಗಳು ಕ್ರೈಸ್ತ ಕತೆಯಲ್ಲಿ ಬರುವ ಅಲೆಕ್ಸಾಂಡರ್‍ನ ಮಾಂತ್ರಿಕ ಬಾಗಿಲುಗಳ ಹಿಂದೆ ಇರುವ ಗಾಗ್ ಮತ್ತು ಮೆಗಾಗ್‍ರವರೇ ಆಗಿರುತ್ತಾರೆ -. ಈ ಕತೆಯಲ್ಲಿ ಬರುವ ಧು ಅಲ್-ಖರ್ನೈನ್ ಅಥವಾ "ಎರಡು ಕೊಂಬುಗಳ ಜೀವಿಯು ಈಜಿಪ್ಟ್‍ನ ದೇವತೆ ಅಮುನ್‍ನ ಠಗರಿನ ಕೊಂಬುಗಳನ್ನು ನೆನಪಿಸುತ್ತವೆ. ಅಲೆಕ್ಸಾಂಡರ್ ಕತೆಗಳು ಜಗತ್ತಿನ ಸಂಸ್ಕೃತಿ ಮತ್ತು ಧರ್ಮಗಳನ್ನು ಒಂದೇ ಬೇರು ವ್ಯವಸ್ಥೆಯ ಮೂಲಕ ಬೆಸೆಯುತ್ತವೆ.

ಪ್ರತಿಯೊಬ್ಬರೂ ಅಲೆಕ್ಸಾಂಡರ್‍ನ ತಮ್ಮದೇ ಕತೆಗಳನ್ನು ಹೇಳುತ್ತಾರೆ ಹಾಗೂ ಎಲ್ಲರ ಕತೆಗಳೂ ವಿಭಿನ್ನವಾಗಿವೆ. ಮಧ್ಯಕಾಲೀನ ಅವಧಿಯಲ್ಲಿ ದಿಟವಾಗಿದ್ದ ಹಾಗೆ ಅದು ಈಗಲೂ ಹಾಗೂ ಅಲೆಕ್ಸಾಂಡರ್‍ನ ಸಮಯದಲ್ಲಿಯೂ ದಿಟವಾಗಿದೆ. ಅಲೆಕ್ಸಾಂಡರ್‍ನ ಕತೆಗಳನ್ನು ಹೇಳಬಲ್ಲವರಲ್ಲಿ ಮೊದಲಿಗ ಹಾಗೂ ಅತ್ಯತ್ತಮನಾಗಿದ್ದವನು ಅಲೆಕ್ಸಾಂಡರ್‍ನೇ ಆಗಿದ್ದ. ಆತ ಎಂದಿಗೂ ತನ್ನ ಕುರಿತು ಒಂದೇ ಕತೆಯನ್ನು ಹೇಳಿಲ್ಲ. ಗ್ರೀಕರಿಗೆ ಆತ ಟ್ರಾಯ್‍ನ ಅಖಿಲೀಸ್ ಸಮಾಧಿಯ ಬಳಿ ಬಲಿಕೊಡುವ ಒಬ್ಬ ಹೋಮರ್ ನಾಯಕನಾಗಿದ್ದ. ಈಜಿಪ್ಟ್‍ನವರಿಗೆ ರಾ ದೇವತೆಯ ಮತ್ತು ಅಮುನ್ ದೇವತೆಯ ಮಗನಾಗಿದ್ದ. ಪರ್ಷಿಯನ್ನರಿಗೆ ಆತ ರಾಜರ ರಾಜನಾಗಿದ್ದ, ಪರ್ಷಿಯನ್ ದೊರೆಯಂತೆ ವಸ್ತ್ರ ಧರಿಸಿ ಪರ್ಷಿಯಾದ ರಾಜಕುಮಾರಿಯನ್ನು ಮದುವೆಯಾಗುವವನಾಗಿದ್ದ.

ಅಲೆಕ್ಸಾಂಡರ್ ಇಡೀ ಜಗತ್ತನ್ನೇ ಒಂದು ಮನುಕುಲದ ಅಡಿಯಲ್ಲಿ ವಿಶ್ವಮಾನವರನ್ನಾಗಿ ಮಾಡುವ ಕನಸನ್ನೇನಾದರೂ ಹೊಂದಿದ್ದನೇ ಎಂದು ಕೆಲವು ವಿದ್ವಾಂಸರು ಸಂಶಯ ಪಡುತ್ತಾರೆ. ಇಲ್ಲ, ಅವನಲ್ಲಿ ಎಂದಿಗೂ ಆ ಭಾವನೆ ಇರಲಿಲ್ಲ. ಅಲೆಕ್ಸಾಂಡರ್ ಒಬ್ಬ ಕ್ರೂರಿ ಸಾಮ್ರಾಟನಾಗಿದ್ದ. ಯಾವುದಾದರೂ ನಗರ ಅವನಿಗೆ ಶರಣಾಗಲು ಒಪ್ಪದಿದ್ದಲ್ಲಿ ಆ ಇಡೀ ನಗರದ ಗಂಡಸರನ್ನು ಕೊಂದು ಹೆಂಗಸರು ಮತ್ತು ಮಕ್ಕಳನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುತ್ತಿದ್ದ ಹಾಗೂ ಆ ನಗರವನ್ನೇ ನಾಮಾವಶೇಷ ಮಾಡುತ್ತಿದ್ದ. ಆದರೆ ಅವನು ಒಬ್ಬ ವ್ಯಾವಹಾರಿಕ ಸಾಮ್ರಾಟನೂ ಆಗಿದ್ದ. ಅವನಿಗೆ ತಿಳಿದಿತ್ತು, ಕೇವಲ ಹೆದರಿಕೆಯಿಂದಲೇ ತನ್ನ ಸಾಮ್ರಾಜ್ಯವನ್ನು ಒಂದುಗೂಡಿಸಲು ಸಾಧ್ಯವಿಲ್ಲವೆಂದು. ಹಾಗಾಗಿ ಅವನು ಹಲವಾರು ಮುಖವಾಡಗಳನ್ನು ಧರಿಸಿದ, ಹಲವಾರು ಕತೆಗಳನ್ನು ಹೇಳಿದ. ತಾನು ಸ್ವತಃ ತನ್ನನ್ನೇ ಒಬ್ಬ ಬಹುಸಂಸ್ಕೃತಿಯ ನಾಯಕನನ್ನಾಗಿ ರೂಪಿಸಿಕೊಂಡ. ತಾವು ಜಯಿಸಿದ ನಾಡಿನ ರೀತಿ ರಿವಾಜುಗಳನ್ನು ಅನುಸರಿಸಿದ, ಅವರ ವಸ್ತ್ರಗಳನ್ನು ಧರಿಸಿದ, ಅವರ ದೇವರುಗಳನ್ನೇ ಪೂಜಿಸಿದ.

ಅಲೆಕ್ಸಾಂಡರ್‍ನ ಸಾವಿನ ನಂತರ ಅವನ ದಂಡಯಾತ್ರೆಗಳ ನಾಶ ವಿನಾಶಗಳು ಚರಿತ್ರೆಯಲ್ಲಿ ಮಸುಕಾದವು ಆದರೆ ಅವನ ಕತೆಗಳು ಉಳಿದುಕೊಂಡವು. ಈಜಿಪ್ಟ್‍ನಲ್ಲಿ ಟೊಲೆಮಿ ಮತ್ತು ಅವನ ನಂತರದವರು ಗ್ರೀಕ್ - ಈಜಿಪ್ಟ್ ಸಂಯುಕ್ತ ರಾಜಾಡಳಿತದ ರಾಜಧಾನಿಯಾದ ಅಲೆಕ್ಸಾಂಡ್ರಿಯಾದಿಂದ ರಾಜ್ಯವಾಳಿದರು. ಪರ್ಷಿಯಾದಲ್ಲಿ ಗ್ರೀಕರು ಪರ್ಷಿಯಾದ ಆಡಳಿತದ ರೀತಿ ರಿವಾಜುಗಳನ್ನು ಕಲಿತರು. ಭಾರತದ ರಾಜರು ಅಲೆಕ್ಸಾಂಡರನ ಮೂಲಕ ಪ್ರವೇಶಿಸಿದ ಗ್ರೀಕ್ ತತ್ವಶಾಸ್ತ್ರದ ಕುರಿತು ಚರ್ಚೆ ಮಾಡತೊಡಗಿದರು. ಅಲೆಕ್ಸಾಂಡರ್ ಹಿಂದಿರುಗಿದ ನಂತರ ಭಾರತ ಉಪಖಂಡದ ವಾಯುವ್ಯ ಭಾಗದಲ್ಲಿ ಇಂಡೋ-ಗ್ರೀಕರು ನೆಲೆಸಿದರು. ಅಷ್ಟೊತ್ತಿಗಾಗಲೇ ಆ ಪ್ರದೇಶಗಳು ಶ್ರಮಣ ಪರಂಪರೆಯ ತಾಣಗಳಾಗಿದ್ದವು. ಬೌದ್ಧ ಮತ್ತು ಜೈನ ಧರ್ಮಗಳ ಸಂನ್ಯಾಸಿಗಳು ನೆಲೆಸಿದ್ದ ಸ್ಥಳಗಳಾಗಿದ್ದವು. ಮೊದಲನೇ ಡೆಮೆಟ್ರಿಯಸ್ ಬ್ಯಾಕ್ಟ್ರಿಯಾವನ್ನು (ಉತ್ತರ ಅಫ್ಘಾನಿಸ್ತಾನ) ಕ್ರಿ.ಪೂ. 200ರಿಂದ 180ರವರೆಗೆ ಆಳಿದನು. ಅವನ ನಂತರ ಬಂದ ಮೊದಲನೇ ಮೆನಾಂಡರ್ ಬೌದ್ಧ ಧರ್ಮದಿಂದ ಪ್ರಭಾವಿತನಾಗಿ ಬೌದ್ಧಧರ್ಮಕ್ಕೆ ಮತಾಂತರ ಹೊಂದುತ್ತಾನೆ. ಆ ನಂತರ ಅಲ್ಲಿಗೆ ಬಂದವರೇ ಕುಶಾನರು. ಕ್ರಿ.ಶ. ಮೊದಲನೇ ಶತಮಾನದಲ್ಲಿ ಬ್ಯಾಕ್ಟ್ರಿಯಾ ಜಯಿಸಿದ ಅವರೂ ಸಹ ಬೌದ್ಧಧರ್ಮದಿಂದ ಪ್ರಭಾವಿತರಾಗುತ್ತಾರೆ. ಬುದ್ಧ ಕಾಲವಾದ ಆರು ಶತಮಾನಗಳವರೆಗೂ ಬುದ್ಧನ ಮುಖವಿರುವ ಯಾವುದೇ ವಿಗ್ರಹ ಯಾವ ಬೌದ್ಧ ಅನುಯಾಯಿಯೂ ಕೆತ್ತಿರುವುದಿಲ್ಲ. ಕುಶಾನರ ಸಮಯದಲ್ಲಿ ವಿಗ್ರಹಗಳನ್ನು ಕೆತ್ತುವುದರಲ್ಲಿ ಪರಿಣಿತರಾದ ಗ್ರೀಕ್ ಮೂಲದ ಶಿಲ್ಪಿಗಳು ಮೊದಲಿಗೆ ಗ್ರೀಕ್ ಆಕೃತಿಗಳ ಹಾಗೆ ಗಾಂಧಾರದಲ್ಲಿ ಬುದ್ಧನ ವಿಗ್ರಹಗಳನ್ನು ಕೆತ್ತುತ್ತಾರೆ. ಅಫ್ಘಾನಿಸ್ತಾನದಲ್ಲಿ ನೆಲೆಸಿದ ಇಂಡೋ-ಗ್ರೀಕರು ಮಂದಿರಗಳನ್ನು ಮತ್ತು ಸಭಾಂಗಣಗಳನ್ನು ನಿರ್ಮಿಸಿದರು, ಅತ್ಯದ್ಭುತ ಕಲೆಯನ್ನು ರಚಿಸಿದರು ಹಾಗೂ ಬೌದ್ಧಧರ್ಮದ ಹಿನ್ನೆಲೆಯ ಗಾಂಧಾರ ಶಿಲ್ಪಗಳನ್ನು ರಚಿಸಿದರು. ಅಲೆಕ್ಸಾಂಡರ್ ಸಹ ಬುದ್ಧನ ಬೋಧನೆಗಳ ಪ್ರಭಾವಕ್ಕೊಳಗಾಗಿದ್ದನಂತೆ. ತನ್ನ ತಾಯಿ ಕಾಯಿಲೆಯಿಂದಾಗಿ ಆಕೆಯ ಸ್ಥಿತಿ ಗಂಭೀರವಾಗಿದ್ದಾಗ ಆಕೆಗೆ ಬರೆದ ಪತ್ರದಲ್ಲಿ ಬುದ್ಧ ಸಾವಿಲ್ಲದ ಮನೆಯಿಂದ ಸಾಸುವೆ ತರಲು ಹೇಳುವ ಪ್ರಸಂಗವನ್ನು ಉಲ್ಲೇಖಿಸಿರುತ್ತಾನಂತೆ.

ನಿಧಾನವಾಗಿ ಜಗತ್ತು ಸಹ ಇಂದು ರೂಪಾಂತರಗೊಂಡಿದೆ. ಆದರೆ ಇದೆಲ್ಲವೂ ಅಚ್ಚರಿ ತರಿಸುವಂಥದೇ? ಇಂದು ನಾವು ಸಂಸ್ಕೃತಿಗಳ ನಡುವೆ ಚೌಕಟ್ಟುಗಳನ್ನು ಎಳೆದು ಪ್ರತ್ಯೇಕಿಸುತ್ತಿರುವುದು ಬಹುಶಃ ಒಂದು ಆಧುನಿಕ ಕಲ್ಪನೆ ಎನ್ನಿಸುತ್ತದೆ. ಅಲೆಕ್ಸಾಂಡರ್ ಈಜಿಪ್ಟ್‍ಗೆ ಹೋಗುವ ಮೊದಲೇ ಗ್ರೀಕರು ಅಲ್ಲಿ ಹೋಗಿ ನೆಲೆಸಿದ್ದರು, ಜೀವಿಸುತ್ತಿದ್ದರು ಹಾಗೂ ಕಾಯಕ ಮಾಡುತ್ತಿದ್ದರು.  ಅಲೆಕ್ಸಾಂಡರ್ ಜಗತ್ತಿನ ಎಲ್ಲೆಡೆಯಿಂದ ಕೊಳ್ಳೆ ಹೊಡೆದ ಸಿರಿಸಂಪತ್ತು ಮ್ಯಾಸಿಡೋನ್ ತಲುಪುವ ಮೊದಲೇ ಜ್ಞಾನ ಮತ್ತು ವಿಚಾರಗಳು ಏಷಿಯಾ ಮತ್ತಿತೆರೆಡೆಯಿಂದ ಅಲ್ಲಿ ತಲುಪಿ ಗ್ರೀಕ್ ಚಿಂತನೆಯನ್ನು ರೂಪಿಸುತ್ತಿತ್ತು. ಜಗತ್ತು ಹಿಂದಿನಿಂದಲೂ ಪರಸ್ಪರ ಸಂಪರ್ಕ ಹೊಂದಿದೆ - ವಿಚಾರಗಳ ಮೂಲಕ, ನಾಯಕರ ಮೂಲಕ ಮತ್ತು ಕತೆ ಮತ್ತು ಸಂಸ್ಕøತಿಗಳ ಮೂಲಕ. ಇಂದು ನಾವು ಅವುಗಳನ್ನೆಲ್ಲ ಒಡೆದು ಪ್ರತ್ಯೇಕಿಸುತ್ತಿದ್ದೇವೆ, ಎಲ್ಲ ಧರ್ಮ ಮತ್ತು ಸಂಸ್ಕøತಿಗಳು ಪರಸ್ಪರ ಪ್ರತ್ಯೇಕವಾದುವು ಎಂದು ಅವುಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದೇವೆ.

 ಡಾ. ಜೆ.ಬಾಲಕೃಷ್ಣ

j.balakrishna@gmail.com