8ನೇ ನವೆಂಬರ್ 2007ರ 'ಸುಧಾ'ದಲ್ಲಿ ನನ್ನ ಕತೆ `ಬದುಕೆಂದರೆ....' ಪ್ರಕಟವಾಗಿದೆ.
ಓದಿ, ತಮ್ಮ ಅನಿಸಿಕೆ ತಿಳಿಸಿ.
ಬೆಳಿಗ್ಗೆ
ಬೆಳಕು ಮೂಡುವ ಮುನ್ನವೇ ಎಚ್ಚರವಾಗಿತ್ತು. ಎಲ್ಲ ಭಾನುವಾರಗಳೂ ಹೀಗೇ ಆಗುತ್ತವೆ. ಕತ್ತಲಲ್ಲೇ `ಮನೆ'ಯಲ್ಲಿ
ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡುತ್ತಿದ್ದರು. ಬೆಳಕು ಮೂಡಲು ಇನ್ನೂ ಎಷ್ಟು ಸಮಯ ಬೇಕಾಗಬಹುದು?
ಬೆಳಕು ಮೂಡಿದರೂ ಗಂಟೆ ಹತ್ತಾಗಬೇಕು! ಇನ್ನೂ ನಾಲ್ಕೈದು ಗಂಟೆಗಳ ಕಾಲವಾದರೂ ಕಳೆಯಬೇಕು! ಬಾತ್‌ರೂಮಿಗೆ
ಹೋಗಬೇಕೆನಿಸಿದರೂ ಬೆಲ್ ಮಾಡುವುದು ಬೇಡವೆನ್ನಿಸಿತು. ಇನ್ನೂ ಸ್ವಲ್ಪ ಹೊತ್ತು ಹೋಗಲಿ. ಹಾಗೆಯೇ ಮಲಗಿರೋಣವೆನ್ನಿಸಿತು.
ಮಲಗುವುದೇನು, ಇಡೀ ಬದುಕೆಲ್ಲ ಹೀಗೇ ಮಲಗಿರುವುದೇ ಅಲ್ಲವೆ! ಈ `ಮನೆ'ಗೆ ಬಂದು ಎಷ್ಟು ದಿನಗಳಾದುವು?
ಆರು ತಿಂಗಳಾಗಿರಬೇಕು. ಆರು ತಿಂಗಳು! ಒಂಟಿಯಾಗಿ ಬದುಕುವುದು ಎಷ್ಟು ಕಷ್ಟ! ಒಂಟಿಯೆಂದರೆ.........
ಒಂದು ರೀತಿಯಲ್ಲಿ ಒಂಟಿಯೇ. ಈ `ಮನೆ'ಯಲ್ಲಿ ಎಷ್ಟು ಜನರಿರಬಹುದು? ಅಮ್ಮ ಹೇಳುತ್ತಿದ್ದರು ಬಹಳಷ್ಟು
ಜನ ನನ್ನಂಥವರು ಇಲ್ಲಿ ಇದ್ದಾರೆಂದು. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಒಂಟಿಪ್ರಾಣಿಗಳೇ! ಇಲ್ಲಿನವರಿಗೆ
ಅವರದೇ ಜಗತ್ತು. ಎಲ್ಲರೂ ಕಣ್ಣೆದುರಿಗಿದ್ದರೂ ಯಾರಿಗೆ ಯಾರೂ ಇಲ್ಲ. ಈ `ಮನೆ'ಗೆ ಯಾರ್‍ಯಾರೋ ಬರುತ್ತಿರುತ್ತಾರೆ,
ಯಾರ್‍ಯಾರೋ ಹೋಗುತ್ತಿರುತ್ತಾರೆ. ಬಹಳಷ್ಟು ಜನ ಸತ್ತು ಹೆಣವಾಗಿ ಹೋಗುತ್ತಿರುತ್ತಾರೆ. ಯಾರೋ ಕೆಲವರು
ಹೋಗುತ್ತೇನೆಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರಿಗೆ ಅವರು ಹೋಗುವುದೇ ಅವರಿಗೆ ತಿಳಿದಿರುವುದಿಲ್ಲ.
ಅಮ್ಮ ಏಕೆ ಬೇಗ ಬರಬಾರದು? ಅದೂ ಬರುವುದು ವಾರಕ್ಕೊಂದು ದಿನ. ಆಕೆಗೆ ಬಿಡುವು ಸಿಗುವುದೂ ಅದೇ ದಿನವಲ್ಲವೇ.
ಶೇಖರ್ ಅಂಕಲ್ ಸಹ ಬರಬಹುದೆ? ಶೇಖರ್ ಅಂಕಲ್ ಬಗ್ಗೆ ನನಗೇನೂ ದ್ವೇಷವಿಲ್ಲ. ಮೊದಲು ಒಂದೆರಡು ದಿನ ಸಿಟ್ಟಾಗಿತ್ತು.
ನನ್ನ ಅಮ್ಮನನ್ನು ನನ್ನಿಂದ ಕಿತ್ತುಕೊಂಡನಲ್ಲ ಎಂದು. ಆದರೆ ನನ್ನಂತೆ ಒಂಟಿಯಾಗಿದ್ದ ಅಮ್ಮನಿಗೆ ಆಕೆಯ
ಬದುಕಿನಲ್ಲಿ ಆತ ಗೆಳೆಯನಾಗಿ ಬಂದನಲ್ಲ. ನನಗೆ ತೊಂದರೆಯಾದರೂ ಆಕೆಯ ಬದುಕಿಗೆ ಒಳ್ಳೆಯದೇ ಆಯಿತು. ಆಕೆ
ಬದುಕಲ್ಲಿ ಎಷ್ಟೊಂದು ನೋವು ತಿಂದಿದ್ದಾಳೆ! ಎಲ್ಲ ನನ್ನಿಂದಲೇ ಆದದ್ದು. ನಾನೂ ಅಪ್ಪನಂತೆ ಅದೇ ಅಪಘಾತದಲ್ಲಿ
ಸತ್ತುಹೋಗಿದ್ದಿದ್ದರೆ ಅಮ್ಮನಿಗೆ ಈ ಕಷ್ಟಗಳೆಲ್ಲ ಇರುತ್ತಲೇ ಇರಲಿಲ್ಲ. ಇಷ್ಟೊತ್ತಿಗಾಗಲೇ ಆಕೆ ಬೇರೊಂದು
ಬದುಕೇ ಬದುಕುತ್ತಿರುತ್ತಿದ್ದಳೇನೋ. ಬದುಕಲ್ಲಿ ಏನೆಲ್ಲಾ ಆಕಸ್ಮಿಕ ಬದಲಾವಣೆಗಳಾಗುತ್ತವೆ! ನನ್ನದು
ಇದು ಯಾವ ರೀತಿಯ ಬದುಕು. ಜೀವಮಾನವಿಡೀ ಹಾಸಿಗೆ, ವೀಲ್ ಚೇರ್‌ನಲ್ಲೇ ಕೊಳೆಯಬೇಕು.
ಸೂರ್ಯ ಮೇಲೆ ಬಂದು
ಕೋಣೆಯಲ್ಲೆಲ್ಲಾ ಬೆಳಕು ತುಂಬುತ್ತಿತ್ತು. ಕೈಯನ್ನು ಪ್ರಯಾಸದಿಂದ ಪಕ್ಕಕ್ಕೆ ಸರಿಸಿ ಸ್ವಿಚ್ ಅದುಮಿ
ಬೆಲ್‌ಮಾಡಿದೆ. ರಾಮಣ್ಣ ಬಂದು ಸೊಳ್ಳೆಪರದೆಯನ್ನು ಮೇಲಕ್ಕೆತ್ತಿ `ಗುಡ್ ಮಾರ್ನಿಂಗ್' ಎಂದ ಮುಗುಳ್ನಗುತ್ತಾ.
ನಾನೂ ಗುಡ್ ಮಾರ್ನಿಂಗ್ ಹೇಳಿದೆ. ಮುಂದಕ್ಕೆ ಬಾಗಿ ನನ್ನನ್ನು ಅನಾಮತ್ತಾಗಿ ಎತ್ತಿ ಬಾತ್‌ರೂಮಿಗೆ
ಹೊತ್ತು ನಡೆದ. ನಾನು `ಚೇರ್' ಎಂದರೂ, `ಇರಲಿ ಆಮೇಲೆ ತರುತ್ತೇನೆ' ಎಂದು ಹೇಳಿ ಬಾತ್‌ರೂಮಿನಲ್ಲಿ
ನನ್ನೆಲ್ಲ ಬಟ್ಟೆ ಕಳಚಿ ಕಮೋಡ್ ಮೇಲೆ ಕೂಡ್ರಿಸಿದ. ನಾನು ಪಕ್ಕದಲ್ಲಿದ್ದ ಆಸರೆಕಂಬಿಯನ್ನು ಬಿಗಿಯಾಗಿ
ಹಿಡಿದುಕೊಂಡು ಅವನೆಡೆಗೆ ನೋಡುತ್ತಾ `ಥ್ಯಾಂಕ್ಸ್' ಎಂದೆ. ಆ ರಾಮಣ್ಣ ಮುಗುಳ್ನಗುತ್ತಾ ಹೊರಹೊರಟ.
ನಾಚಿಕೆ, ಅವಮಾನ, ಕಸಿವಿಸಿಗಳನ್ನೆಲ್ಲಾ ನನ್ನಿಂದ ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಬಲವಂತವೆಂದರೆ,
ಅದು ನನ್ನ ಅಸಹಾಯಕತೆಯಿಂದಲೇ. ಏಕೆಂದರೆ ನನ್ನಿಂದ ಏನೇನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೈಮೇಲೆ ಕಚ್ಚುತ್ತಿರುವ
ಸೊಳ್ಳೆಯನ್ನೂ ಓಡಿಸಲಾಗುವುದಿಲ್ಲ.
ಹಿಂದೊಮ್ಮೆ ಹೀಗೆ ಅಮ್ಮ ನನ್ನಿಂದ ದೂರಾಗುತ್ತಾಳೆಂದು ತಿಳಿದಾಗ
ಆತ್ಮಹತ್ಯೆಗೂ ನಾನು ಪ್ರಯತ್ನಿಸಿದ್ದೆನಲ್ಲಾ. ನನ್ನ ಸಾವನ್ನು ನಾನು ತಂದುಕೊಳ್ಳಲೂ ಸಾಧ್ಯವಾಗುವುದಿಲ್ಲವೆಂದು
ನನಗೆ ಆಗಲೇ ತಿಳಿದಿದ್ದು. ಈ ರೀತಿ ಬೆಲ್ ಮಾಡಿದಾಕ್ಷಣ ರಾಮಣ್ಣ ಬಂದು `ಗುಡ್ ಮಾರ್ನಿಂಗ್' ಹೇಳಿ ಮುಗುಳ್ನಗುತ್ತಾ
ಬಾತ್‌ರೂಮಿಗೆ ಹೊತ್ತೊಯ್ಯುವಂತೆ ಬೆಲ್ ಮಾಡಿದಾಕ್ಷಣ ಯಮಧರ್ಮರಾಯನೂ ಮುಗುಳ್ನಗುತ್ತಾ ಬಂದು `ಗುಡ್
ಮಾರ್ನಿಂಗ್' ಹೇಳಿ ಹೊತ್ತೊಯ್ಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಬಹಳಷ್ಟು ಸಾರಿ ಅನ್ನಿಸಿದೆ.
ಅಮ್ಮ ಹೇಳುತ್ತಿದ್ದ ಮಹಾಭಾರತದ ಕತೆಯಲ್ಲಿನ ಇಚ್ಛಾಮರಣಿ ಭೀಷ್ಮನಂತಿದ್ದರೆ ಚೆನ್ನಾಗಿರುತ್ತಿತ್ತು.
ನನ್ನ ಹಾಸಿಗೆಯೂ ಒಂದು ರೀತಿಯ ಶರಶಯ್ಯೆಯೇ! ದಿನವಿಡೀ ಮಲಗಿದ್ದೆಡೆಯೇ ಮಲಗಿದ್ದರೆ ಮತ್ತೇನಾಗುತ್ತದೆ.
ಈಗೀಗ ಬೇಸರವಾಗುವುದೂ ನಿಂತುಹೋಗಿದೆ. ನಾನೇಕೆ ಹೀಗಾದೆ? ಎಲ್ಲರಂತೆ ಓಡಾಡಲು, ಮಾತನಾಡಲು, ಎಲ್ಲ ಕೆಲಸ
ಮಾಡಲು ಆಗದಂತಹ ಸ್ಥಿತಿ ನನಗೇಕೆ ಬಂದಿದೆ? ಅಮ್ಮ ನನ್ನೊಬ್ಬನನ್ನೇ ಬಿಟ್ಟು ಆಫೀಸಿಗೆ ಹೋದಾಗಲೆಲ್ಲಾ
ಅದೆಷ್ಟು ಅತ್ತಿದ್ದೇನೆ, ಅದೆಷ್ಟು ಸಂಕಟ ಪಟ್ಟಿದ್ದೇನೆ!
ರಾಮಣ್ಣ ಸ್ನಾನಮಾಡಿಸಿ ಹೊಸಬಟ್ಟೆ ತೊಡಿಸಿದ.
ತಲೆಬಾಚುವಾಗ `ಈ ದಿನ ಅಮ್ಮ ಬರುತ್ತಾಳಲ್ಲವೆ?' ಎಂದು ಕೇಳಿದ. ಹೌದೆಂದು ತಲೆಯಾಡಿಸಿದೆ. ನಗುನಗುತ್ತಾ
ಅದೂ ಇದೂ ಮಾತನಾಡುತ್ತಲೇ ಇದ್ದ. ರಾಮಣ್ಣ ಎಂಥ ವ್ಯಕ್ತಿ! ಯಾವಾಗಲೂ ನಗುನಗುತ್ತಲೇ ಇರುತ್ತಾನೆ. ಮತ್ತೊಬ್ಬರ
ಹೊಲಸು ತೊಳೆಯುವಾಗಲಾಗಲೀ, ಸ್ನಾನ ಮಾಡಿಸುವಾಗಲಾಗಲೀ, ಬಾತ್ ರೂಮ್ ಶುಚಿಗೊಳಿಸುವಾಗಲಾಗಲೀ ಒಂದಿಷ್ಟು
ಅಸಹ್ಯ, ಅಸಹನೆ ಆತನಲ್ಲಿ ಕಾಣುವುದೇ ಇಲ್ಲ. ಅದ್ಹೇಗೆ ಸಾಧ್ಯ ಆತನಿಂದ? ಇನ್ನೂ ಚಿಕ್ಕವನಾಗಿದ್ದಾಗ
ನಾನು ಎಷ್ಟೋ ಸಾರಿ ನನ್ನ ಬಟ್ಟೆಯಲ್ಲೇ ನಾನು ಹೊಲಸು ಮಾಡಿಕೊಂಡಾಗ ಅಸಹ್ಯದಿಂದ, ಸಿಟ್ಟಿನಿಂದ ಅಮ್ಮನ
ಮೇಲೆ ಚೀರಾಡುತ್ತಿದ್ದೆ. ಅಮ್ಮನೂ ಅಷ್ಟೆ ಒಂದು ದಿನವಾದರೂ ನನ್ನ ಮೇಲೆ ಸಿಡುಕಿದವಳಲ್ಲ, ಅಸಹನೆ ತೋರಿದವಳಲ್ಲ.
ಈಗ ಅದೆಲ್ಲಾ ನೆನಪಾದರೆ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ. ನನ್ನನ್ನು ನೋಡಿಕೊಳ್ಳುವುದರಲ್ಲೇ ತನ್ನದೂ
ಒಂದು ಬದುಕಿದೆಯೆಂಬುದನ್ನು ಮರೆತಳು. ರಾಮಣ್ಣ ಸ್ಪೂನಿನಿಂದ ತಿಂಡಿ ತಿನ್ನಿಸುತ್ತಿದ್ದಾಗ ಏನೇನೋ ಹೇಳುತ್ತಿದ್ದ,
ನನಗದೊಂದೂ ಕೇಳುತ್ತಿರಲಿಲ್ಲ; ಅಮ್ಮನ ಬಗ್ಗೆಯೇ ಆಲೋಚಿಸುತ್ತಿದ್ದೆ. ಆಗಾಗ ಕಣ್ಣು ಓರೆ ಮಾಡಿ ಗೋಡೆಯಲ್ಲಿನ
ಗಡಿಯಾರದೆಡೆಗೆ ನೋಡುತ್ತಿದ್ದೆ. ಅಮ್ಮ ಬರಲು ಇನ್ನೂ ಒಂದು ಗಂಟೆಯ ಸಮಯವಿದ್ದರೂ ರಾಮಣ್ಣ ನಾನು ಕೂತಿದ್ದ
ವೀಲ್ ಚೇರನ್ನು ವರಾಂಡಾದ ಗೋಡೆಯ ಬಳಿ ನಿಲ್ಲಿಸಿ ಒಳ ಹೊರಟ. ನನ್ನಂಥವರ ಇನ್ನೂ ಎಷ್ಟೋ ಜನರ ಆರೈಕೆಯನ್ನು
ರಾಮಣ್ಣ ಮಾಡಬೇಕು.
ವರಾಂಡಾದಲ್ಲಿ ನನ್ನಂಥವರು ಹಲವರು ಆಗಲೇ ಬಂದು ಕೂತಿದ್ದರು. ಕೆಲವರು ಪರಸ್ಪರ ಮಾತನಾಡಿಕೊಳ್ಳಲು
ಪ್ರಯತ್ನಿಸುತ್ತಿದ್ದರು. ನನಗಂತೂ ಒಬ್ಬನೇ ಇರಲು ಇಷ್ಟ. ಅಮ್ಮನ ಬಗ್ಗೆಯೇ ಯೋಚಿಸುತ್ತಿದ್ದೆ. ಒಂದು
ಗಂಟೆ ಕಾಯುವುದು ಅತ್ಯಂತ ಯಾತನೆಯ ಕೆಲಸ. ನನ್ನ ಚಡಪಡಿಕೆ ಏನಿದ್ದರೂ ಒಂದು ಮಾನಸಿಕೆ ಕ್ರಿಯೆ ಅಷ್ಟೆ.
ಕೆಲವರು ಚಡಪಡಿಸುವಾಗ ಅತ್ತಿತ್ತ ಓಡಾಡುತ್ತಿರುತ್ತಾರೆ, ಸಿಗರೇಟು ಸೇದುತ್ತಿರುತ್ತಾರೆ, ಗೊಣಗುತ್ತಿರುತ್ತಾರೆ.
ನನ್ನಿಂದ ಇವೇನನ್ನೂ ಮಾಡಲು ಸಾಧ್ಯವಿಲ್ಲ. ಗೊಣಗಿಕೊಳ್ಳಬಹುದಷ್ಟೆ. ಹಿಂದಕ್ಕೆ ತಲೆ ಆನಿಸಿದ್ದ ನನಗೇ
ನಗು ಬಂದಿತು. ಒಂದು ದಿನ ಹೀಗೇ ನಾನು ಹಾಸಿಗೆಯ ಮೇಲೆ ಗೊಣಗಿಕೊಳ್ಳುತ್ತಿದ್ದಾಗ ಪಕ್ಕದಲ್ಲಿದ್ದ ಅಮ್ಮ
`ಎಲ್ಲಾ ನೀನು ನಿಮ್ಮಪ್ಪನ ಹಾಗೆ' ಎಂದಿದ್ದರು. `ಅಪ್ಪ ಹೀಗೆಯೇ ಗೊಣಗುತ್ತಿದ್ದರಾ?' ಎಂದೆ. `ಇನ್ನೂ
ಹೆಚ್ಚು' ಎಂದ ಅಮ್ಮ ಏನೋ ಆಲೋಚಿಸುತ್ತಿರುವಂತಿತ್ತು. (ನನ್ನ ಮಾತುಗಳನ್ನು ನೀವಿಲ್ಲಿ ಓದಿ ನಾನಿಷ್ಟು
ಸರಾಗವಾಗಿ ನಿಮ್ಮಂತೆ ಮಾತನಾಡಬಲ್ಲವನೆಂದು ತಿಳಿಯಬೇಡಿ. ನಾನು ಮಾತನಾಡುವುದು ಸಹ ಅತ್ಯಂತ ಯಾತನೆಯ
ಕೆಲಸ. ಗಂಟಲಿನಿಂದ ಶಬ್ದ ಹೊರಡಿಸುವುದು ನನಗೆ ಅಷ್ಟು ಸುಲಭವಲ್ಲ. ಮಾತಾಗುವ ಆ ಶಬ್ದಗಳೂ ಸಹ ಎಲ್ಲರಿಗೂ
ಅರ್ಥವಾಗುವುದಿಲ್ಲ, ಅಮ್ಮ, ರಾಮಣ್ಣನಂಥ ಕೆಲವರಿಗೆ ಮಾತ್ರ ಅವು ಸುಲಭವಾಗಿ ಅರ್ಥವಾಗುತ್ತವೆ. ಬಹಳಷ್ಟು
ಸಾರಿ ಹೇಳಬೇಕೆಂದಿರುವುದನ್ನು ಹೇಳುವುದೇ ಸಾಧ್ಯವಾಗುವುದಿಲ್ಲ. ಒಂದು ವಾಕ್ಯಕ್ಕೆ ಎರಡು ನಿಮಿಷ ತೆಗೆದುಕೊಂಡರೆ,
ಕೇಳುವವರಿಗೆಲ್ಲಿ ತಾಳ್ಮೆ ಇರುತ್ತದೆ? ಆದರೆ ಅಮ್ಮನ ವಿಷಯ ಹಾಗಲ್ಲ. ಅಮ್ಮನಿಗೆ ನಾನು ಹೇಳುವುದೇ ಬೇಡ.
ನನ್ನ ಮನಸ್ಸಿನಲ್ಲಿರುವುದನ್ನು ಆಕೆ ನನ್ನ ಕಣ್ಣುಗಳನ್ನು ನೋಡಿಯೇ ತಿಳಿದುಕೊಂಡುಬಿಡುತ್ತಾಳೆ).
***
ಅಪ್ಪನನ್ನು ನೋಡಿದ ನೆನಪೇ ನನಗಿಲ್ಲ. ಆ ಅಪಘಾತವಾದಾಗ ನನಗೆ ಐದು ವರ್ಷವಂತೆ. ದೀಪಾವಳಿಗೆ ಪಟಾಕಿ
ಬೇಕೆಂದು ನಾನು ಹಠಹಿಡಿದಾಗ ಅದನ್ನು ಕೊಡಿಸಲು ನನ್ನನ್ನು ಸ್ಕೂಟರಿನಲ್ಲಿ ಕರೆದೊಯ್ದಿದ್ದರು. ಪಟಾಕಿ
ಕೊಂಡುಬರುವಾಗ ಹಿಂದಿನಿಂದ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿಹೊಡೆಯಿತಂತೆ. ಯಾರೋ ಆಸ್ಪತ್ರೆಗೆ ಸೇರಿಸಿದರು.
ನಾನು ಬದುಕುಳಿದಿದ್ದೆ, ಆದರೆ ಅಪ್ಪ ಉಳಿದಿರಲಿಲ್ಲ. ನಾನು ಬದುಕುಳಿದದ್ದೂ ಹೆಸರಿಗೆ ಮಾತ್ರ. ಅದೆಲ್ಲಿ
ಮಿದುಳಿಗೆ ಏಟು ಬಿತ್ತೋ, ಎಲ್ಲಿ ಬೆನ್ನು ಹುರಿಯಲ್ಲಿ ಏಟುಬಿತ್ತೋ ನನಗಂತೂ ಗೊತ್ತಿಲ್ಲ (ಅಮ್ಮ ಈ ವಿಷಯ
ಮಾತನಾಡುವಾಗ ಕೇಳಿಸಿಕೊಂಡಿದ್ದೆ), ಇಡೀ ನನ್ನ ದೇಹ ಜಡವಾಗಿತ್ತು- ನಿಲ್ಲಲಾಗುತ್ತಿರಲಿಲ್ಲ, ಕೂಡ್ರಲಾಗುತ್ತಿರಲಿಲ್ಲ,
ಕೈಕಾಲು ಆಡಿಸಲಾಗುತ್ತಿರಲಿಲ್ಲ, ಮಾತನಾಡಲೂ ಆಗುತ್ತಿರಲಿಲ್ಲ. ಅಮ್ಮ ಅದೆಷ್ಟು ಕಣ್ಣೀರು ಹಾಕಿದ್ದಳೋ
ನನಗೆ ನೆನಪಿಲ್ಲ, ಆದರೆ ನನಗೆ ನೆನಪಿರುವಾಗಿನಿಂದ ಅಮ್ಮ ಕಣ್ಣಿರು ಹಾಕಿಲ್ಲ, ಅಸಹಾಯಕತೆ ತೋರಿಸಿಕೊಂಡಿಲ್ಲ,
ನನ್ನ ಮುಂದೆ ಯಾವೊಂದು ಕಷ್ಟವನ್ನೂ ತೋರಿಸಿಕೊಂಡಿಲ್ಲ. ಅಷ್ಟೇ ಅಲ್ಲ, ನನ್ನ ಮೇಲೆ ಸಿಡುಕಿಲ್ಲ, ಅಸಹನೆ
ತೋರಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಅಮ್ಮ ನನ್ನ ದೇಹದ ಒಂದು ಭಾಗವೇ ಆಗಿಹೋಗಿದ್ದಳು, ಅಥವಾ ನಾನೇ
ಆಕೆಯ ದೇಹದ ಒಂದು ಭಾಗವೆನ್ನುವುದು ಸರಿಯಾಗುತ್ತದೆ. ಹೆಣದಂತೆ ಜಡವಾಗಿದ್ದ ನನ್ನನ್ನು ಹೊತ್ತು ಅದೆಷ್ಟು
ವೈದ್ಯರ ಬಳಿ ಹೋಗಿದ್ದಳು! ಅಮ್ಮ ಮಹಾಭಾರತದ ಕತೆ ಹೇಳುವಾಗಲೆಲ್ಲಾ ಈಕೆಯೇ ಕುಂತಿಯೇನೋ ಎನ್ನಿಸುತ್ತಿತ್ತು.
ಅರ್ಜುನನ ಪ್ರಾಣ ಭಿಕ್ಷೆಗಾಗಿ ಕರ್ಣನ ಬಳಿ ಹೋದಂತೆ ಅನ್ನಿಸುತ್ತಿತ್ತು. ಯಾವ ವೈದ್ಯ ಹಾಗೂ ಔಷಧ ಕೆಲಸ
ಮಾಡದಾದಾಗ ಆಕೆಯೇ ವೈದ್ಯಳಾದಳು, ಔಷಧವಾದಳು. ನಾನೊಮ್ಮೆ ಅಮ್ಮನನ್ನು ಕೇಳಿದ್ದೆ, `ನಾನು ಪಟಾಕಿಗಾಗಿ
ಹಠಮಾಡದೇ ಇದ್ದಿದ್ದಲ್ಲಿ ಅಪ್ಪ ಸಾಯುತ್ತಿರಲಿಲ್ಲ, ನನಗೂ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೆ?'
ಕೊಂಚ ಯೋಚಿಸಿದ ಅಮ್ಮ, `ನೀನು ಪಟಾಕಿಗಾಗಿ ಹಠ ಮಾಡದೇ ಇದ್ದಿದ್ದರೂ ಈ ರೀತಿ ಆಗುತ್ತಿರಲಿಲ್ಲ, ಅಪ್ಪ
ಸ್ಕೂಟರ್ ಬದಲು ಆಟೋದಲ್ಲಿ ಹೋಗಿದ್ದರೂ, ಆ ರಸ್ತೆಯಲ್ಲಿ ಬರದೆ ಬೇರೊಂದು ರಸ್ತೆಯಲ್ಲಿ ಬಂದಿದ್ದರೂ
ಅಥವಾ ಹೊರಡುವಾಗ ಐದ್ಹತ್ತು ನಿಮಿಷ ತಡವಾಗಿ ಹೊರಟಿದ್ದರೂ ಅಥವಾ ಲಾರಿಯವನು ಕೊಂಚ ತಡವಾಗಿ ಅಥವಾ ಬೇಗ
ಬಂದಿದ್ದರೂ ಈ ರೀತಿ ಆಗುತ್ತಿರಲಿಲ್ಲ. ಈ ರೀತಿ ಕಾರಣಗಳನ್ನು ಹುಡುಕುತ್ತಾ ಹೊರಟು ಕೊರಗುತ್ತಾ ಇರಬಹುದು.
ನಡೆದುಹೋದ ಘಟನೆಗಳ ಆರೋಪವನ್ನು ನಿನ್ನ ಮೇಲೆ ಆರೋಪಿಸಿಕೊಳ್ಳಬೇಡ. ಅದಕ್ಕೆ ನೀನಾಗಲೀ, ಅಪ್ಪನಾಗಲೀ
ಯಾರೂ ಕಾರಣರಲ್ಲ' ಎಂದಿದ್ದಳು. ಈಗ ಕಳೆದ ವರ್ಷ ನನಗೆ ಕೊಂಚ ಬುದ್ಧಿ ಬಂದಮೇಲೆ ಅಮ್ಮನನ್ನು ಇದೇ ಪ್ರಶ್ನೆಯನ್ನು
ಯಾವುದೋ ಒಂದು ಸನ್ನಿವೇಶದಲ್ಲಿ ಬೇರೊಂದು ರೀತಿ ಕೇಳಿದ್ದೆ, `ಈ ನಿನ್ನ ಬದುಕಿನ ಸ್ಥಿತಿಗೆ ನಾನೇ ಕಾರಣನಲ್ಲವೆ?'.
ಅರೆಕ್ಷಣ ವಿಚಲಿತಳಾದ ಅಮ್ಮ ಕೇಳಿದ್ದಳು, `ಏಕೆ? ಏನಾಗಿದೆ ನನ್ನ ಬದುಕಿಗೆ? ನನ್ನ ಬದುಕಲ್ಲಿ ನೀನಿದ್ದೀಯಾ.
ನನಗೆ ಮತ್ತೇನು ಬೇಕು?' `ಹೌದು, ನಿನ್ನ ಬದುಕಲ್ಲಿ ನಾನಿದ್ದೀನಿ. ಅದೇ ಆಗಿರುವುದು ತೊಂದರೆ. ನಾನು
ಈ ಸ್ಥಿತಿಯಲ್ಲಿಲ್ಲದಿದ್ದಲ್ಲಿ ಅಥವಾ ಆ ಅಪಘಾತದಲ್ಲಿ ನಾನು ಸತ್ತೇ ಹೋಗಿದ್ದಿದ್ದಲ್ಲಿ, ನೀನು ಇಷ್ಟೊತ್ತಿಗೆ
ಮತ್ತೊಂದು ಮದುವೆ ಆಗಬಹುದಿತ್ತು, ಎಲ್ಲರಂತೆ ನೀನು ಬದುಕು ನಡೆಸಬಹುದಿತ್ತು.......' ಸಿಟ್ಟಿನಿಂದ
ಅಮ್ಮ ಎದ್ದುಬಂದು ಎದುರು ನಿಂತಳು. ಆಕೆಯ ಮುಖದಲ್ಲಿ ಎಷ್ಟು ಕೋಪವಿತ್ತೆಂದರೆ, ಇನ್ನೇನು ನನ್ನನ್ನು
ಹೊಡೆದೇಬಿಡುತ್ತಾಳೆ ಎಂದುಕೊಂಡೆ. ಆಕೆ ಹೊಡೆಯಲು ಮುಂದಾದರೆ, ಅದನ್ನು ತಡೆಯಲು ಕೈ ಎತ್ತಲೂ ಆಗದಷ್ಟು
ನಾನು ಅಸಹಾಯಕ. ಆದರೆ ಅಮ್ಮ ಹೊಡೆಯಲಿಲ್ಲ, ತಕ್ಷಣ ಹೊರಹೊರಟಳು. ನನಗೆ ಗೊತ್ತಿತ್ತು, ಆಕೆ ಕೋಣೆಯಲ್ಲಿ
ಬಾಗಿಲು ಹಾಕಿಕೊಂಡು ಅಳುತ್ತಿರುತ್ತಾಳೆ ಎಂದು. ನಾನು ಎದ್ದು ಬರಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ
ಸಹ ಆಕೆ ಬಾಗಿಲು ಹಾಕಿಕೊಂಡಿರುತ್ತಾಳೆ, ಏಕೆಂದರೆ ಆಕೆ ಅಳುವುದನ್ನು ನಾನು ನೋಡಬಾರದು, ಕೇಳಬಾರದು,
ಆಕೆ ದುರ್ಬಲಳೆಂದು ನನಗೆ ತಿಳಿಯಬಾರದು. ಆಕೆ ನನ್ನೆದುರು ಎಂದಿಗೂ ಒಮ್ಮೆಯೂ ಅತ್ತಿಲ್ಲ.
***
ಅದೊಂದು
ದಿನ ನನಗೆ ಸ್ನಾನ ಮಾಡಿಸಿ ಅಮ್ಮ ಬಟ್ಟೆತೊಡಿಸುವಾಗ `ನೀನೀಗ ಸಣ್ಣಮಗುವಲ್ಲ, ಗಂಡಸಾಗುತ್ತಿದ್ದೀಯ.
ಇನ್ನು ನಿನಗೆ ಶೇವ್ ಮಾಡುವುದನ್ನೂ ನಾನು ಕಲಿಯಬೇಕು' ಎಂದು ಮುಸಿನಗುತ್ತಾ ಹೇಳಿದಳು. ನಾನದಕ್ಕೆ ಮುಗುಳ್ನಕ್ಕಿದ್ದೆ.
ಹೌದು ಅದು ನನಗೂ ಅರಿವಿಗೆ ಬರುತ್ತಿತ್ತು. ಇಷ್ಟೂ ದಿನ ನೋಡುವಂತೆ ಟಿ.ವಿ.ಯನ್ನು ನಾನು ನಿರ್ಲಿಪ್ತನಾಗಿ
ನೋಡಲೇ ಸಾಧ್ಯವಾಗುತ್ತಿಲ್ಲ. ಸುಂದರ ಹುಡುಗಿಯರು ಹಾಡಿಕುಣಿಯುವುದನ್ನು ಕಂಡಾಗ ನನ್ನಲ್ಲಿ ಅವರ್ಣನೀಯ
ಭಾವನೆಗಳುಂಟಾಗುತ್ತಿದ್ದವು. ಬಹುಶಃ ಅದನ್ನು ಅಮ್ಮನೂ ಗಮನಿಸಿದ್ದಳೆನ್ನಿಸುತ್ತದೆ. ನನ್ನಂತೆ ಇಡೀ
ಬದುಕೆಲ್ಲಾ ವೀಲ್‌ಚೇರ್ ಮೇಲೇ ಕಳೆಯುತ್ತಿರುವ ವಿಜ್ಞಾನಿ ಸ್ವೀಫನ್ ಹಾಕಿಂಗ್ ಕತೆ ಅಮ್ಮ ಹೇಳಿದ್ದರು.
ಆತನೂ ಸಹ ಮದುವೆಯಾಗಿದ್ದ, ಆತನಿಗೂ ಮಕ್ಕಳಿದ್ದವು. ನನಗೂ ಎಂದಾದರೊಂದು ದಿನ ಮದುವೆಯಾಗುತ್ತದೆಯೆ?
ನನ್ನನ್ನೂ ಯಾರಾದರೂ ಹುಡುಗಿ ಮದುವೆಯಾಗಲು ಒಪ್ಪುತ್ತಾಳೆಯೆ? ನನ್ನ ಆಲೋಚನೆಗೆ ನನಗೇ ನಗುಬಂದು ಆ ಆಲೋಚನೆಯನ್ನು
ಮನಸ್ಸಿನಿಂದ ಕಿತ್ತೊಗೆಯಲು ಪ್ರಯತ್ನಿಸಿದ್ದೆ, ಈಗಲೂ ಪ್ರಯತ್ನಿಸುತ್ತಿದ್ದೇನೆ.
ಇಂತಹ ಸಮಯದಲ್ಲಿಯೇ
ನನಗೆ ಅಮ್ಮನ ಒಂಟಿತನದ ಬಗ್ಗೆಯೂ ಆಲೋಚಿಸುವಂತಾಗಿದ್ದು. ಅದುವರೆಗೆ ನನಗೆ ಆ ಆಲೋಚನೆಯೇ ಬಂದಿರಲಿಲ್ಲ.
ಅಮ್ಮ ಇರುವುದು ನನ್ನನ್ನು ನೋಡಿಕೊಳ್ಳಲು ಮಾತ್ರ, ಆಕೆ ಬದುಕಿರುವ ಉದ್ದೇಶವೇ ನನ್ನ ಚಾಕರಿ ಮಾಡಲು
ಎನ್ನುವ ಭಾವನೆ ನನ್ನಲ್ಲಿ ಬಂದುಬಿಟ್ಟಿತ್ತು. ಎಂದಾದರೂ ನಾನು ಕರೆದಾಗ ತಕ್ಷಣ ಬರದಿದ್ದಲ್ಲಿ ಸಿಟ್ಟಾಗುತ್ತಿದ್ದೆ,
ಸಿಡುಕುತ್ತಿದ್ದೆ. ಆಫೀಸಿನಿಂದ ತಡವಾಗಿ ಬಂದಾಗ ಮುನಿಸಿಕೊಂಡು ಮಾತು ನಿಲ್ಲಿಸುತ್ತಿದ್ದೆ. ನನಗೆ ಈಗನ್ನಿಸುತ್ತದೆ,
ನಾನೆಂಥ ಸ್ವಾರ್ಥಿಯಾಗಿದ್ದೆ ಎಂದು. ಒಮ್ಮೆ ಆಕೆ ಪಕ್ಕದ ಕೋಣೆಯಲ್ಲಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಿದ್ದುದು
ನನಗೆ ಕೇಳಿಸಿತ್ತು. ಆಕೆ ಹೇಳುತ್ತಿದ್ದಳು, `ಕೆಲವೊಮ್ಮೆ ನನಗೆ ವಿಪರೀತ ಭಯವಾಗುತ್ತದೆ. ನನಗೇನಾದರೂ
ಆಗಿಹೋದರೆ ಏನು ಗತಿ. ಇವನನ್ನು ಯಾರು ನೋಡಿಕೊಳ್ಳುತ್ತಾರೆ? ಇವನಿಗೋಸ್ಕರವಾದರೂ ನಾನು ಎಷ್ಟು ವರ್ಷಸಾಧ್ಯವೋ
ಅಷ್ಟು ವರ್ಷ ಬದುಕಬೇಕು. ಬದುಕುವುದಷ್ಟೇ ಅಲ್ಲ ಇವನನ್ನು ನೋಡಿಕೊಳ್ಳಲು ನಾನು ಆರೋಗ್ಯವಂಥಳಾಗಿರಬೇಕು.
ಸಾವು ಬರುವುದಾದರೆ ಇಬ್ಬರಿಗೂ ಒಮ್ಮೆಲೇ ಬರಬೇಕು'. ಆ ದಿನ ಅದ್ಯಾಕೋ ಬದುಕು ತೀರಾ ಬೇಸರವೆನ್ನಿಸಿತ್ತು,
ನನಗರಿವಾಗದೆ ತೀವ್ರ ಪಾಪಪ್ರಜ್ಞೆ ಕಾಡತೊಡಗಿತ್ತು. ನನಗೆ ಬೇಗ ಸಾವು ಬರಲಿ ಎಂದು ಕೋರಿದ್ದೆ. ಮತ್ತೊಂದು
ದಿನ ಇದೇ ರೀತಿ ಆಕೆ ತನ್ನ ಗೆಳತಿಯ ಜೊತೆ ಮಾತನಾಡುವಾಗ ಆಕೆಯ ಗೆಳತಿ `ಶೇಖರ್ ಏನು ಹೇಳುತ್ತಾನೆ?'
ಎಂದು ಕೇಳಿದ್ದಳು. ಅಮ್ಮ ಏನೂ ಹೇಳಲಿಲ್ಲ. ಆಕೆಯ ಗೆಳತಿಯೇ ಮತ್ತೊಮ್ಮೆ ಒತ್ತಾಯ ಮಾಡಿದಾಗ `ಏನು ಹೇಳುತ್ತಾನೆ,
ನಾನೇ ಆಗೋದಿಲ್ಲವೆಂದೆ. ಕಿರಣನನ್ನು ಬಿಟ್ಟುಬರಲು ಸಾಧ್ಯವೇ ಎಂದು ಕೇಳಿದ! ನನ್ನ ಮಗನೇ ನನ್ನ ಬದುಕಾಗಿರುವಾಗ
ನಾನವನನ್ನು ಯಾವುದೋ ಆಶ್ರಮದಲ್ಲೋ, ಸ್ಪೆಶಲ್ ಹೋಂನಲ್ಲೋ ಸೇರಿಸಿ ಬದುಕುವುದಾದರೂ ಹೇಗೆ? ಇಡೀ ಬದುಕೆಲ್ಲಾ
ನಾನು ಒಂಟಿಯಾಗಿದ್ದರೂ ಸರಿ, ನನಗೆ ನನ್ನ ಮಗನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ'. ಆ ಮಾತು ಕೇಳಿ
ನನಗೆ ಅತ್ಯಂತ ಹೆದರಿಕೆಯಾಗಿತ್ತು, ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳತೊಡಗಿತ್ತು. ನನ್ನ ಅಮ್ಮ
ನನ್ನನ್ನು ಎಲ್ಲಾದರೂ ಬೇರೆಡೆಗೆ ಸೇರಿಸುತ್ತಾರೆಯೆ? ಕೆಲದಿನಗಳ ಹಿಂದೆ ಅಮ್ಮ ನನ್ನನ್ನು ಅದ್ಯಾವುದೋ
`ಮನೆ'ಗೆ ಕರೆದೊಯ್ದದ್ದು ಅದಕ್ಕೇ ಇರಬೇಕು. ಅಲ್ಲಿಗೆ ಹೋಗುವ ಮುನ್ನ ಅಮ್ಮ ನನಗೆ ಏನೂ ಹೇಳಿರಲಿಲ್ಲ.
ಅವರು ಎಷ್ಟೋ ಸಾರಿ ನನಗೆ ಹೇಳುತ್ತಿದ್ದರು, `ಪ್ರಪಂಚದಲ್ಲಿ ನಿನ್ನಂಥವರು ಬಹಳಷ್ಟು ಜನ ಇದ್ದಾರೆ.
ಬದುಕಲ್ಲಿ ಎಲ್ಲರಿಗೂ ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ತೊಂದರೆ ಇಲ್ಲದಿರುವಂತಹ ಜನರಿಲ್ಲವೇ
ಇಲ್ಲ. ನಿನಗೊಂದು ರೀತಿಯ ತೊಂದರೆಯಿದ್ದರೆ, ಮತ್ತೊಬ್ಬರಿಗೆ ಮತ್ತೊಂದು ರೀತಿಯ ತೊಂದರೆ ಇರುತ್ತದೆ.
ಆದರೆ ಅತ್ಯಂತ ಮುದ್ದು ಹಾಗೂ ಒಳ್ಳೆಯ ಮಗನಿರುವುದು ನನಗೆ ಮಾತ್ರ' ಎಂದಿದ್ದಳು ನನ್ನನ್ನು ಅಪ್ಪಿಕೊಳ್ಳುತ್ತ.
ಅಮ್ಮ ನನ್ನನ್ನು ಪ್ರತಿ ದಿನ ಸಂಜೆ ವೀಲ್‌ಚೇರ್‌ನಲ್ಲಿ ಹೊರಗೆ ಕರೆದೊಯ್ಯುತ್ತಿರುತ್ತಾಳೆ. ಆ ದಿನ
ನಿನಗೆ ಹೊಸ ಗೆಳೆಯರನ್ನು ಪರಿಚಯಿಸುತ್ತೇನೆ ಎಂದು ನನ್ನನ್ನು ಆ `ಮನೆ'ಗೆ ಕರೆದೊಯ್ದಿದ್ದಳು. ದೊಡ್ಡ
ಕಾಂಪೌಂಡ್, ಅಲ್ಲಿ ಎಷ್ಟೊಂದು ಜನರಿದ್ದರು! ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನ್ನಂಥ ಅಂಗವಿಕಲರೇ!
ನಾನು ರಾಮಣ್ಣನನ್ನು ಮೊದಲು ಕಂಡಿದ್ದು ಅಲ್ಲಿಯೇ. ನನ್ನನ್ನು ಕಂಡ ರಾಮಣ್ಣ, `ಇಲ್ಲೇ ಇರ್‍ತೀಯಾ? ನೋಡು
ನಾವೆಲ್ಲಾ ಇರ್‍ತೀವಿ, ನಿನಗೆ ಆಟ ಆಡಿಸ್ತೀವಿ, ಎಂಥಾ ಮಜಾ ಇರುತ್ತೆ ಗೊತ್ತಾ?' ನನ್ನನ್ನು ಅಲ್ಲೇ
ಬಿಟ್ಟುಹೋಗಲು ಅಮ್ಮ ಬಂದಿರುವುದು ಎಂದು ಊಹಿಸಿ ನಾನು ಜೋರಾಗಿ ಅಳಲು ಶುರುಮಾಡಿದೆ, ಕೂಡಲೇ ಅಲ್ಲಿಂದ
ಕರೆದೊಯ್ಯುವಂತೆ ಚೀರಾಡಿ ಹಠಮಾಡಿದೆ. ನನ್ನ ಚೀರಾಟ ಅಲ್ಲಿನವರೆಲ್ಲಾ ನನ್ನನ್ನು ನೋಡುವಂತೆ ಮಾಡಿತ್ತು.
`ಇಲ್ಲ, ನಿನ್ನನ್ನು ಇಲ್ಲಿ ಬಿಡುವುದಕ್ಕೆ ಕರೆದುಕೊಂಡುಬಂದಿಲ್ಲ. ಸುಮ್ಮನೆ ತೋರಿಸಲಿಕ್ಕೆ' ಎಂದು
ಹೇಳಿದರೂ ನಾನು ಹಠ ನಿಲ್ಲಿಸಲಿಲ್ಲ. ಎಲ್ಲಿ ನನ್ನನ್ನು ಅಮ್ಮನಿಂದ ದೂರಮಾಡಿಬಿಡುತ್ತಾರೋ ಎಂದು ಹೆದರಿ
ಆಕೆಗೆ ಆತುಬಿದ್ದವನು ಮನೆ ತಲುಪಿದನಂತರವೂ ಆಕೆಯನ್ನು ದೂರಬಿಡಲಿಲ್ಲ. ಅಮ್ಮ ತಬ್ಬಿ ಸಂತೈಸಿದಳು, ನನ್ನನ್ನೆಂದೂ
ದೂರ ಕಳಿಸುವುದಿಲ್ಲವೆಂದು ಪ್ರಮಾಣ ಮಾಡಿದಳು.
***
ಅಮ್ಮ ನನಗೆ ಪ್ರತಿಯೊಂದನ್ನೂ ಓದಿ ಹೇಳದಿದ್ದಲ್ಲಿ,
ನನಗೆ ಓದುವುದನ್ನು ಕಲಿಸದಿದ್ದಲ್ಲಿ ನನಗೆ ಪ್ರಪಂಚ ಜ್ಞಾನವೇ ಇರುತ್ತಿರಲಿಲ್ಲ. ನನಗಾಗಿ ಎಷ್ಟೊಂದು
ಸಮಯ ವ್ಯಯಮಾಡುತ್ತಿದ್ದಳು! ಆಕೆಯಲ್ಲಿ ಎಷ್ಟೊಂದು ತಾಳ್ಮೆಯಿತ್ತು! ಆಕೆಗೆ ನನ್ನ ಮೇಲಿದ್ದುದು ಪ್ರೀತಿಯೇ?
ನಾನು ಅಶಕ್ತನಾದುದರಿಂದ ನನ್ನ ಮೇಲಿದ್ದುದು ಕರುಣೆಯೆ? ಅಥವಾ ನಾನು ಆಕೆಯ ಮಗನಾದುದರಿಂದ ಆಕೆ ಮಾಡುತ್ತಿದ್ದುದು
ಆಕೆಯ ಕರ್ತವ್ಯವೆ? ಅದೊಂದು ದಿನ ಹೀಗೇ ಯೋಚಿಸುತ್ತಾ ಬಿದ್ದುಕೊಂಡಿದ್ದ ನಾನು ಕೇಳಿದ್ದೆ, `ನಮ್ಮಿಬ್ಬರ
ಬದುಕು ಹೇಗೆ ಕೊನೆಯಾಗಬಹುದು?' ಏನೋ ಓದುತ್ತಿದ್ದ ಅಮ್ಮ ನನ್ನೆಡೆಗೆ ತಿರುಗಿ ನೋಡಿದಳು, ಏನೂ ಹೇಳಲಿಲ್ಲ.
ನನಗೆ ಗೊತ್ತಿತ್ತು, ಆಕೆಗೂ ಉತ್ತರ ತಿಳಿದಿಲ್ಲವೆಂದು. `ಕೊನೆಯಾಗುವುದು ಸಾವಿನಲ್ಲೆಂದು ನನಗೂ ಗೊತ್ತು.
ಆದರೆ ಇಲ್ಲಿ ಮುಖ್ಯವಾಗುವುದು ಯಾರು ಮೊದಲು ಸಾಯುತ್ತಾರೆನ್ನುವುದು. ಅಲ್ಲವೆ...?' ಮತ್ತೆ ನಾನೇ ಕೇಳಿದೆ.
`ಈಗ ಸಾವಿನ ವಿಷಯ ಏಕೆ ಬೇಕು? ಈಗ ನಿನಗೆ ಅದರ ಯೋಚನೆ ಏಕೆ? ಈ ಕ್ಷಣ ಬದುಕಿದ್ದೀವೆ, ಅದೇ ಮುಖ್ಯ'
ಅಮ್ಮ ಹೇಳಿದಳು. `ಈಗ ನಾವು ಆ ವಿಷಯ ಮಾತಾಡದೇ ಮರೆಸಿದರೂ ಆ ವಿಷಯ ಮುಖ್ಯವೆಂದು ನಿನಗೂ ಗೊತ್ತು. ಅದು
ಸುಳ್ಳಲ್ಲ. ನಮ್ಮಿಬ್ಬರ ನಡುವೆ ಸಾವು ತೀರಾ ಹತ್ತಿರದಿಂದ ಪಿಸುಗುಟ್ಟುತ್ತಿದೆ. ನನಗನ್ನಿಸುತ್ತದೆ,
ನನಗೆ ಮೊದಲು ಸಾವು ಬಂದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆ. ನೀನು ಇಲ್ಲವೆಂದರೂ, ಒಪ್ಪಿಕೊಳ್ಳದಿದ್ದರೂ
ಇದು ನಿಜ. ನೀನಿದನ್ನು ಒಪ್ಪಲೇಬೇಕು' ಎಂದು ಹೇಳಿ ಅಮ್ಮನೆಡೆಗೆ ನೋಡುತ್ತಲೇ ಇದ್ದೆ. ಅಮ್ಮ ಒಪ್ಪಿಕೊಳ್ಳಲಿಲ್ಲ,
ಇಲ್ಲವೆನ್ನಲೂ ಇಲ್ಲ. ಓದುತ್ತಿದ್ದ ಪುಸ್ತಕ ಮಡಿಸಿಟ್ಟು ನನ್ನನ್ನು ತಬ್ಬಿ ಮಲಗಿದಳು.
ಇಂಥದೇ ದಿನಗಳಲ್ಲಿಯೇ
ನನಗೆ ಸಾಯಬೇಕೆಂಬ ಆಲೋಚನೆ ಬಂದಿದ್ದು. ಅಮ್ಮ ತನ್ನ ಗೆಳತಿಯ ಜೊತೆ ಆಗಾಗ ಶೇಖರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಳು.
ಒಂದು ದಿನ ಅಮ್ಮ ಕೇಳಿದಳು, `ನನಗೆ ಶೇಖರ್ ಎಂಬ ಕೊಲೀಗ್ ಇದ್ದಾರೆ. ತುಂಬಾ ಒಳ್ಳೆಯವರು. ನಿನಗೊಮ್ಮೆ
ಪರಿಚಯ ಮಾಡಿಸುತ್ತೇನೆ' ಎಂದು. ವಿಚಿತ್ರವೆಂದರೆ ಈ ಮಾತುಗಳನ್ನು ಆಡುವಾಗ ಅಮ್ಮ ನನ್ನೆಡೆಗೆ ನೋಡುತ್ತಲೇ
ಇರಲಿಲ್ಲ. ಆಕೆಯಲ್ಲಿ ಎಂಥದೋ ಅಳುಕು, ಅಂಜಿಕೆ. ನನಗರಿವಿಲ್ಲದೆ `ಬೇಡ' ಎಂಬ ಮಾತು ಹೊರಬಂತು. ಆ ಮಾತು
ತುಂಬಾ ಒರಟಾಗಿತ್ತೆಂದು ಅನಂತರ ನನಗನ್ನಿಸಿತು. ಆಗ ನನ್ನೆಡೆಗೆ ನೋಡಿದ ಅಮ್ಮ, `ಬೇಡವೆಂದರೆ ಬೇಡ ಬಿಡು'
ಎಂದು ಹೇಳಿ ಹೊರಹೊರಟರು. ಅದ್ಯಾಕೋ, ನನಗೆ ಸಾವು ಬರಬಾರದೆ ಅನ್ನಿಸಿತು. ನನ್ನಂಥ ಆಶಕ್ತ ಸಾಯುವುದು
ಹೇಗೆ? ನನ್ನ ಅಪ್ಪನಲ್ಲದ ವ್ಯಕ್ತಿಯ ಜೊತೆ ಬದುಕುವುದಾದರೂ ಹೇಗೆ? ಆತ ನನಗೆ ಸ್ನಾನ ಮಾಡಿಸುತ್ತಾನೆಯೆ?
ನನಗೆ ಬಟ್ಟೆ ತೊಡಿಸುತ್ತಾನೆಯೆ? ಆತನಿಗೆ ನನ್ನ ಬೆತ್ತಲೆ ಮೈಯನ್ನು ಹೇಗೆ ತೋರಿಸಲಿ? ಆತನಿಗೆ ನನ್ನನ್ನು
ಕಂಡರೆ ಅಸಹ್ಯವಾಗಬಹುದು. ಅಮ್ಮನಿಗೇಕೆ ಈ ಹುಚ್ಚು ಬಂತು? ಅಮ್ಮನಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಯಿತೆ?
ಮುಂದೊಂದು ದಿನ ಅಮ್ಮ ನನ್ನನ್ನು ಹೀಗೇ ಎಲ್ಲಾದರೂ ಬಿಟ್ಟು ದೂರಹೋಗಿಬಿಡಬಹುದೆ? ಅಥವಾ ಆ ವ್ಯಕ್ತಿ
ನಾನೊಂದು ಹೊರೆಯೆಂದು ಭಾವಿಸಿ ನನ್ನನ್ನು ಕೊಂದುಬಿಡಬಹುದೆ? ಇಂಥವೇ ಹತ್ತು ಹಲವಾರು ಯೋಚನೆಗಳು ನನ್ನ
ತಲೆಯನ್ನು ಹುಳು ತಿಂದಹಾಗೆ ತಿನ್ನತೊಡಗಿದವು. ಇದಕ್ಕೆಲ್ಲ ಪರಿಹಾರ ಸಾವು ಎನ್ನಿಸಿತು. ಸತ್ತುಹೋಗಬೇಕು,
ಇವರ್‍ಯಾರಿಗೂ ತೊಂದರೆ ಕೊಡಬಾರದು. ನನ್ನಂಥ ನತದೃಷ್ಟನಿಗೆ ಸಾವು ಅಷ್ಟು ಸುಲಭವಾಗಿ ಎಲ್ಲಿ ಬರುತ್ತದೆ!
ಟಿ.ವಿ.ಯ ಸಿನೆಮಾಗಳಲ್ಲಿ ನೋಡಿದ್ದಂತೆ ಕುತ್ತಿಗೆಗೆ ನೇಣು ಹಾಕಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ,
ಟ್ರೈನು, ಬಸ್ಸಿನಡಿಗೆ ಬೀಳುವುದೂ ಸಾಧ್ಯವಿಲ್ಲ. ಆದರೆ ನಾನು ಸಾಯಲೇಬೇಕು. ಅಮ್ಮನಿಗೆ ನಾನು ಬೇಡವಾಗಿದ್ದೇನೆ.
ಕೂತಿದ್ದ ವೀಲ್‌ಚೇರಿನಿಂದ ಮುಗ್ಗುರಿಸಿ ನೆಲಕ್ಕೆ ತಲೆಯನ್ನು ಬಲವಾಗಿ ಅಪ್ಪಳಿಸಿದರೆ ಸತ್ತುಹೋಗಬಹುದೆಂದು
ನಾನು ಭಾವಿಸಿದ್ದೆ. ಎಚ್ಚರವಾದಾಗ ಅಮ್ಮ ಪಕ್ಕದಲ್ಲೇ ಕೂತಿದ್ದರು. ತಲೆ ಧಿಮ್ಮೆಂದು ನೋಯುತ್ತಿತ್ತು.
ನಾನು ಸತ್ತಿರಲಿಲ್ಲ. ಅದು ಆತ್ಮಹತ್ಯೆಯ ಪ್ರಯತ್ನವೆಂದು ಅಮ್ಮನಿಗೆ ತಿಳಿಯಲೇ ಇಲ್ಲ.
***
ಗೇಟಿನ ಬಳಿ
ಅಮ್ಮನನ್ನು ಕಂಡ ತಕ್ಷಣ ಕೂತಿದ್ದೆಡೆಯಲ್ಲಿಯೇ ಚಡಪಡಿಸತೊಡಗಿದೆ. ವೀಲ್‌ಚೇರ್ ಅಲುಗಾಡತೊಡಗಿತು. ನನ್ನ
ಬಾಯಿಂದ `ಅಮ್ಮ, ಅಮ್ಮ' ಎಂಬ ಮಾತು ಹೊರಬಂದಿತು. ಅಮ್ಮ ನೇರ ನನ್ನೆಡೆಗೆ ಬಂದವಳೇ ತಬ್ಬಿ ಮುತ್ತುಕೊಟ್ಟಳು,
`ಹೇಗಿದ್ದೀಯ?' ಎಂದಳು. `ಫೈನ್' ಎಂದೆ. ಅಮ್ಮನ ಗರಿಗರಿ ಕಾಟನ್ ಸೀರೆಯಲ್ಲಿ ಮುಖವನ್ನು ಹುದುಗಿಸಬೇಕೆನ್ನಿಸಿತು.
`ಹೇಗಿದೆ ಲೈಫ್?' ಎಂದೆ. ಅಮ್ಮ ಉತ್ತರಿಸಲಿಲ್ಲ. ಬದಲಿಗೆ, `ಶೇಖರ್ ಹೇಳುತ್ತಿದ್ದಾರೆ, ನೀನೂ ಮನೆಗೆ
ಬಂದುಬಿಡು. ಎಲ್ಲರೂ ಒಟ್ಟಿಗೆ ಇರೋಣ' ಎಂದಳು. ಬರುವುದಿಲ್ಲವೆಂಬಂತೆ ನಾನು ತಲೆಯಾಡಿಸಿದೆ. `ಈ `ಮನೆ'ಯೇ
ನನ್ನ ಮನೆ. ನಾನಿಲ್ಲಿ ಆರಾಮಾಗಿದ್ದೀನಿ' ಎಂದೆ. ನಾನು ಈ `ಮನೆ'ಗೆ ಬರುವವರೆಗೂ ನಾನು ಒಂದು ದಿನವೂ
ಅಮ್ಮನ ಕಣ್ಣೀರು ಕಂಡವನಲ್ಲ. ಆದರೆ ಈಗ ಇಲ್ಲಿಗೆ ಬಂದಾಗ ಆಗಾಗ ಅವಳ ಕಣ್ಣಂಚಿನಲ್ಲಿ ನೀರು ಕಾಣುತ್ತೇನೆ.
ನನಗೆ ಗೊತ್ತು, ಅವಳನ್ನು ಎಂಥದೋ ಪಾಪಪ್ರಜ್ಞೆ ಕಾಡುತ್ತದೆ, ಅಂಗವಿಕಲ ಮಗನನ್ನು ದೂರವಿಟ್ಟಿದ್ದೇನೆ
ಎಂದು. ಆದರೆ ಅವರ ಜೊತೆಗೆ ಮನೆಗೆ ಹೋದಲ್ಲಿ ನನ್ನನ್ನು ಪಾಪಪ್ರಜ್ಞೆ ಕಾಡುತ್ತದೆ. ನಾನೀಗ ದೊಡ್ಡವನಾಗಿದ್ದೇನೆ,
ಎಲ್ಲವನ್ನೂ ಸಹಿಸಿಕೊಳ್ಳಬಲ್ಲೆ. ಆಕೆ ಈಗಾಗಲೇ ನನಗಾಗಿ ಬಹಳಷ್ಟು ಜೀವನವನ್ನು ಸವೆಸಿದ್ದಾಳೆ. ಅದೊಂದು
ದಿನ ಅಮ್ಮ ಈ `ಮನೆ'ಗೆ ಕರೆತಂದಾಗ ನಾನೇ ಹೆದರಿ ಇಲ್ಲಿಂದ ವಾಪಸ್ಸು ಹೋಗಲು ಹಠ ಮಾಡಿ ಚೀರಾಡಿದ್ದೆನಲ್ಲ.
ಮತ್ತೆ ಇಲ್ಲಿಗೆ ಬರುವ ನಿರ್ಧಾರ ನಾನೇ ತೆಗೆದುಕೊಂಡದ್ದು. ಅಮ್ಮ ಬೇಡವೆಂದರು, ಕಳುಹಿಸುವುದಿಲ್ಲವೆಂದರು.
ಮತ್ತೆ ನಾನು ಈ `ಮನೆ'ಗೆ ತಂದುಬಿಡುವಂತೆ ಹಠ ಮಾಡಬೇಕಾಯಿತು. `ಶೇಖರ್ ಅಂಕಲ್ ಬಂದಿಲ್ಲವೆ?' ಕೇಳಿದೆ.
`ಬಂದಿದ್ದಾರೆ. ಅಲ್ಲೇ ಹೊರಗೆ ನಿಂತಿದ್ದಾರೆ. ಹೋದ ಸಾರಿ ನೀನು ಸರಿಯಾಗಿ ಮಾತನಾಡಲಿಲ್ಲವಲ್ಲ. ಅವರು
ಬರುವುದು ನಿನಗಿಷ್ಟವಿಲ್ಲವೇನೋ.....' ಎಂದರು ಅಮ್ಮ ತಂದಿದ್ದ ತಿಂಡಿಯನ್ನು ನನಗೆ ತಿನ್ನಿಸುತ್ತ.
ಜೋರಾಗಿ ನಕ್ಕೆ ನಾನು. `ಬದುಕಲ್ಲಿ ನಾನು ಕಲಿಯುವುದು ಬಹಳಷ್ಟಿದೆ. ಪ್ರತಿ ದಿನ ಹೊಸಹೊಸ ವಿಷಯ ಕಲಿಯುತ್ತಲೇ
ಇದ್ದೇನೆ. ಅಂಕಲ್‌ಗೆ ಇಲ್ಲಿಗೆ ಬರಲು ಹೇಳು' ಎಂದೆ. ಅಮ್ಮ ಮೊಬೈಲಿನಿಂದ ಫೋನ್ ಮಾಡಿದರು. ಬರುಬರುತ್ತಾ
ಅಮ್ಮ ಹೆಚ್ಚು ಸುಂದರವಾಗುತ್ತಿದ್ದಾಳೆ ಎನ್ನಿಸಿತು. ಹಾಗೆಯೇ ಲವಲವಿಕೆಯೂ ಹೆಚ್ಚುತ್ತಿದೆ. ಶೇಖರ್
ಬಂದರು. ಅವರನ್ನು ಕಂಡಕೂಡಲೇ `ಹಲೋ' ಹೇಳಿದೆ. `ಹೌ ಆರ್ ಯು?' ಎಂದು ಕೇಳಿದೆ. ಶೇಖರ್ ನನ್ನ ತಲೆಯನ್ನು
ನೇವರಿಸಿ ತಮ್ಮ ಹೊಟ್ಟೆಗೆ ಆನಿಸಿಕೊಂಡರು. ಅಮ್ಮ ರಾಮಣ್ಣನೊಂದಿಗೆ ಬಹಳ ಹೊತ್ತು ಮಾತನಾಡಿದರು. `ಮನೆ'ಯ
ಕಚೇರಿಗೆ ಹೋಗಿಬಂದರು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ. ಈ ಭಾನುವಾರಗಳೇ ಹೀಗೆ. `ನೀವಿನ್ನು ಹೊರಡಿ.
ನಿಮ್ಮ ಇಡೀ ಭಾನುವಾರವನ್ನು ನಾನೇ ಕಿತ್ತುಕೊಳ್ಳಲು ನನಗಿಷ್ಟವಿಲ್ಲ. ನಿಮಗೂ ಅರ್ಧ ಭಾನುವಾರ ಉಳಿಯಲಿ'
ಎಂದೆ. `ಇಲ್ಲ, ಸಂಜೆಯವರೆಗೂ ಇರುತ್ತೇವೆ' ಎಂದರು ಅಮ್ಮ ಹಾಗೂ ಶೇಖರ್ ಅಂಕಲ್. `ಇಲ್ಲ, ಹೊರಡಿ. ನನಗೂ
ಬೇಕಾದಷ್ಟು ಕೆಲಸವಿದೆ' ಎಂದೆ ಕಣ್ಣು ಮಿಟುಕಿಸುತ್ತ. ಪಕ್ಕದಲ್ಲಿ ನಿಂತಿದ್ದ ರಾಮಣ್ಣ ಮುಗುಳ್ನಗುತ್ತಲೇ
ಇದ್ದ. ಇಬ್ಬರನ್ನೂ ಬಲವಂತವಾಗಿ ಹೊರಡಿಸಿದೆ. `ಶೇಖರ್ ಅಂಕಲ್ ಜೊತೆ ಪರ್ಸನಲ್ ಆಗಿ ಮಾತನಾಡಬೇಕು' ಎಂದೆ.
ಅಮ್ಮನಿಗೆ ಆಶ್ಚರ್ಯವಾಯಿತು. ನಾನು ಏನಾದರೂ ಹೇಳಿಬಿಡಬಹುದೆಂಬ ಆತಂಕವೂ ಆಯಿತು. ಆದರೂ ದೂರ ಹೋಗಿ ನಿಂತರು.
ಹತ್ತಿರ ಬಂದ ಶೇಖರ್‌ಗೆ, `ಮೈ ಮದರ್ ಈಸ್ ಎ ಸ್ಟ್ರಾಂಗ್ ವುಮನ್. ಆದರೆ ಆಕೆ ಬದುಕಲ್ಲಿ ಸಾಕಷ್ಟು ನೋವು
ತಿಂದಿದಾಳೆ. ಟೇಕ್ ಕೇರ್ ಆಫ್ ಹರ್' ಎಂದೆ. `ನನಗೆ ಗೊತ್ತಿದೆ. ಐ ನೋ ಹರ್ ವೆರಿ ವೆಲ್. ಡೋಂಟ್ ವರಿ'
ಎಂದರು ಶೇಖರ್. `ಆದರೆ ನನಗೆ ನನ್ನ ಅಮ್ಮ ಗೊತ್ತಿರುವಷ್ಟು ನಿಮಗೆ ಗೊತ್ತಿರಲಿಕ್ಕಿಲ್ಲ' ಎಂದೆ ಶೇಖರ್‌ರವರ
ಕಣ್ಣುಗಳನ್ನೇ ನೋಡುತ್ತಾ. ಶೇಖರ್ ಏನೂ ಹೇಳಲಿಲ್ಲ. ಮುಗುಳ್ನಕ್ಕರು ಅಷ್ಟೆ. `ಇರಲಿ, ನನ್ನ ಬಗ್ಗೆ
ಯೋಚಿಸಬೇಡಿ. ಐ ಕೆನ್ ಟೇಕ್ ಕೇರ್ ಆಫ್ ಮೈ ಸೆಲ್ಫ್' ಎಂದೆ ನಗುತ್ತಾ. `ನಾನು ಹೇಳಿದ್ದು ನನ್ನ ಅಮ್ಮನಿಗೆ
ಹೇಳಬೇಡಿ' ಎಂದೆ. ಅಮ್ಮ, ಶೇಖರ್ ಇಬ್ಬರೂ ನನ್ನೆಡೆಗೆ ಕೈ ಬೀಸುತ್ತಾ ಹೊರಹೊರಟರು. ನಾನು ಹಾಗೆಯೇ ಹಿಂದಕ್ಕೆ
ತಲೆ ವಾಲಿಸಿ ಕಣ್ಣು ಮುಚ್ಚಿದೆ. ತೋಟದಿಂದ ಬೀಸುತ್ತಿರುವ ಗಾಳಿ ತಂಪಾಗಿದೆ ಎನ್ನಿಸಿತು.