ಭಾನುವಾರ, ಡಿಸೆಂಬರ್ 30, 2012

ಐದು ಹೊಸ ಗ್ರಹಗಳ ಪತ್ತೆ-- ಗ್ರಹಚಾರ ಹೆಚ್ಚಾಯ್ತಲ್ಲಾ! ನನ್ನ ವ್ಯಂಗ್ಯ ಚಿತ್ರ

ಐದು ಹೊಸ ಗ್ರಹಗಳ ಪತ್ತೆ-- ಗ್ರಹಚಾರ ಹೆಚ್ಚಾಯ್ತಲ್ಲಾ! ನನ್ನ ವ್ಯಂಗ್ಯ ಚಿತ್ರ. 30/12/12ರ `ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ


ಭಾನುವಾರ, ಡಿಸೆಂಬರ್ 23, 2012

ಸೋಮವಾರ, ಡಿಸೆಂಬರ್ 17, 2012

ನನ್ನ ಹೊಸ ಪುಸ್ತಕಗಳು


ನನ್ನ ಹೊಸ ಪುಸ್ತಕಗಳು
ಪ್ರಕಾಶಕರು: ಅಸೀಮ ಅಕ್ಷರ, 36, 3ನೇ ಕ್ರಾಸ್, ಅಮೃತನಗರ, ಸಹಕಾರನಗರ ಅಂಚೆ, ಬೆಂಗಳೂರು-560092
aseemaakshara@gmail.com






ನೀನೆಂಬ ನಾನು (ಮರುಮುದ್ರಣ)

ಸೂಫಿಸಂ ಎನ್ನುವುದು ಪ್ರೇಮದ ಅನುಭಾವದ ಹಾದಿ. ಆ ಹಾದಿಯ ಪಯಣ ಬೇರೆ ಎಲ್ಲಿಗೂ ಅಲ್ಲ, ಬದಲಿಗೆ ತನ್ನದೇ ಆತ್ಮದೆಡೆಗೆ. ಆ ಹಾದಿಯಲ್ಲಿ ಹೊರಟವನು ತನ್ನ ಹೃದಯಲ್ಲೇ ಸತ್ಯ ಅಥವಾ ದೇವರನ್ನು ಕಂಡುಕೊಳ್ಳುತ್ತಾನೆ. ಆ ಸತ್ಯ ಅಥವಾ ದೇವರು ಬೇರೆ ಯಾರೂ ಅಲ್ಲ, ಅದು ‘ನೀನೇ ಎಂಬ ನಾನು.’ ‘ನಿನ್ನ ಹೊರಗಿನದ್ಯಾವುದನ್ನೂ ನೀನು ಅರಿಯಲಾರೆ, ಏಕೆಂದರೆ ಯಾವುದನ್ನಾದರೂ ಸಂಪರ್ಣ ಅರಿಯಬೇಕಾದಲ್ಲಿ, ಅರಿಯಬೇಕಾದ ವಸ್ತು ನೀನೇ ಆಗಿರಬೇಕು. ಹಾಗಾಗಿ ನಿನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ನಿನ್ನೊಳಗಿನ ಅಸೀಮ ವಾಸ್ತವದಲ್ಲೇ ಅರಸಬೇಕು’ ಎಂಬುದು ಸೂಫಿಸಂನ ಮೂಲಭೂತ ತತ್ವ. ಸೂಫಿಗಳ ಪ್ರಕಾರ ಸತ್ಯವನ್ನು ಕಂಡುಕೊಳ್ಳಲು ಎಷ್ಟು ಮನುಷ್ಯರಿದ್ದಾರೋ ಅಷ್ಟು ಹಾದಿಗಳಿವೆ.
ಗೆಳೆಯ ಶ್ರೀಯುತ ಜೆ. ಬಾಲಕೃಷ್ಣ ಅವರು ಕನ್ನಡ ಓದುಗರಿಗೆ ತಮ್ಮ ‘ನೀನೆಂಬ ನಾನು’ ಕೃತಿಯ ಮೂಲಕವಾಗಿ ಒಂದು ಮಹತ್ ಪರಂಪರೆಯನ್ನೇ ಪರಿಚಯಿಸುವ ಉತ್ತಮವಾದ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಚರಿತ್ರೆಗೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಸೂಫಿ ಪರಂಪರೆ ಹೊಸತಲ್ಲವಾದರೂ ಕನ್ನಡದ ಓದುಗರಿಗೆ ಇವತ್ತಿಗೂ ಇಂಥ ಅಮೂಲ್ಯ ಖನಿ ಅಲಭ್ಯವೇ ಆಗಿ ಉಳಿದುಬಿಟ್ಟಿತು. ಹೆಸರಿಸಬಹುದಾದ ಒಂದೆರಡು ಕನ್ನಡ ಕೃತಿಗಳನ್ನು ಬಿಟ್ಟರೆ ಸೂಫಿ ಪರಂಪರೆಗೆ ಸಂಬಂಧಿಸಿದ ಹೆಚ್ಚು ಕೃತಿಗಳು ಕನ್ನಡದಲ್ಲಿ ಬಂದೇ ಇಲ್ಲ. ಕಥಾ ಸಾಹಿತ್ಯವಂತೂ ಅಲ್ಲಿ ಇಲ್ಲಿ ಉಲ್ಲೇಖಿತ ವಾಗಿರುವ ಮತ್ತು ಬಿಡಿ ಬಿಡಿಯಾಗಿ ಪ್ರಕಟವಾಗಿರುವ ಕೆಲವನ್ನ ಬಿಟ್ಟರೆ ಇಡಿಯಾಗಿ ಕನ್ನಡದಲ್ಲಿ ಬಂದಿರಲಿಲ್ಲ. ಈ ಕೆಲಸವನ್ನ ಗೆಳೆಯ ಬಾಲಕೃಷ್ಣ ಅವರು ತುಂಬಾ ಶ್ರದ್ಧೆಯಿಂದ ಮತ್ತು ಪ್ರೀತಿಯಿಂದ ಮಾಡಿದ್ದಾರೆ. ಕತೆಗಳನ್ನ ಅನುವಾದಿಸುವುದರ ಜೊತೆಗೆ ಸೂಫಿ ಪರಂಪರೆ ಮತ್ತು ವಿಚಾರಗಳ ಬಗ್ಗೆ ಅತ್ಯಂತ ವಿವರವಾದ ಮತ್ತು ಆಳವಾದ ಅಧ್ಯಯನ ನಡೆಸಿ ಅದರ ಫಲಿತವಾಗಿ ಉತ್ತಮವಾದ ಹಾಗೂ ಉಪಯುಕ್ತವಾದ ದೀರ್ಘಲೇಖನವನ್ನು ಕತೆಗಳಿಗೆ ಪೂರ್ವ ಪೀಠಿಕೆಯಾಗಿ ನೀಡಿದ್ದಾರೆ. ಇವರ ಈ ಲೇಖನ ಓದುಗನಿಗೆ ಉಪಯುಕ್ತವಾಗುವುದರಲ್ಲಿ  ಸಂಶಯವಿಲ್ಲ (ಮುನ್ನುಡಿಯಿಂದ).

ಪುಟ್ಟ ರಾಜಕುಮಾರ (ಮಕ್ಕಳ ನಾಟಕ)
ಅನುವಾದ ಮತ್ತು ನಾಟಕ ರೂಪಾಂತರ

ಆಂತ್ವಾನ್ ದ ಸೇಂತ್-ಎಕ್ಸೂಪರಿ (೨೯.೬.೧೯೦೦ - ೩೧.೭.೧೯೪೪) ಉತ್ತಮ ಬರಹಗಾರನಾಗಿರುವಂತೆ ಅತ್ಯುತ್ತಮ ಪೈಲಟ್ ಸಹ ಆಗಿದ್ದನು. ಫ್ರಾನ್ಸ್‌ನವನಾದ ಈತ ಸಾಹಸ ಮತ್ತು ಅಪಾಂiವನ್ನು ಕವಿದೃಷ್ಟಿಯಲ್ಲಿ ಕಂಡವನು. ಆದರೆ ಆತ ಪೈಲಟ್ ಆಗಬೇಕೆಂದುಕೊಂಡಿದ್ದವನಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯುವಕನಾಗಿದ್ದ ಈತನನ್ನು ಮಿಲಿಟರಿಗೆ ಸೇರುವಂತೆ ಆದೇಶಿಸಿ ಅಲ್ಲಿ ವಾಯುಪಡೆಗೆ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಅಲ್ಲಿ ವಿಮಾನ ಮತ್ತು ವಿಮಾನಚಾಲನೆಯಲ್ಲಿ ಮೂಡಿದ ಆಸಕ್ತಿ ಅದನ್ನೇ ಆತನ ಬದುಕಾಗುವಂತೆ ಮಾಡಿತು.
ಮರಳುಗಾಡಿನಲ್ಲಿನ ಈ ರೀತಿಯ ಮತ್ತೊಂದು ಅನುಭವವೇ ‘ಪುಟ್ಟ ರಾಜಕುಮಾರ’ ಬರೆಯಲು ಪ್ರೇರೇಪಿಸಿತು. ವಿಶಿಷ್ಟ ಕಥಾವಸ್ತು ಹೊಂದಿರುವ ಈ ‘ಪುಟ್ಟ ರಾಜಕುಮಾರ’ ಒಂದು ಪ್ರಖ್ಯಾತ ಪುಸ್ತಕ. ಫ್ರೆಂಚ್ ಭಾಷೆಯಲ್ಲಿ (‘ಲ ಪತಿ ಪ್ರಿನ್ಸ್’) ೧೯೪೩ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕ ಈಗಾಗಲೇ ವಿಶ್ವದ ೧೨೫ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈಗಲೂ ಪ್ರತಿ ವರ್ಷ ೧೦ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿವೆ. 
ಆದರೆ ಈ ಪುಸ್ತಕ ನಿಜವಾಗಿಯೂ ಮಕ್ಕಳ ಪುಸ್ತಕವೆ? ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, ‘ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನೆಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ’. ಸುಖಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನು ‘ಪುಟ್ಟ ರಾಜಕುಮಾರ’ ಸಾರುತ್ತಾನೆ.

ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್ 
ಅನುವಾದ


ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ

ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ವ್ಯಕ್ತಿ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ.
j.balakrishna@gmail.com

ಭಾನುವಾರ, ಡಿಸೆಂಬರ್ 16, 2012

ವಿಜ್ಞಾನಿಗಳು ಹೇಳುತ್ತಿದ್ದಾರೆ ಪ್ರಳಯ ಆಗೋಲ್ಲವಂತೆ--- ನನ್ನ ವ್ಯಂಗ್ಯ ಚಿತ್ರ

ವಿಜ್ಞಾನಿಗಳು ಹೇಳುತ್ತಿದ್ದಾರೆ ಪ್ರಳಯ ಆಗೋಲ್ಲವಂತೆ--- ನನ್ನ ವ್ಯಂಗ್ಯ ಚಿತ್ರ
ಈ ದಿನದ `ವಿಜಯವಾಣಿ'ಯ ಸಮೀಕರಣ ಪುಟದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ


ಶನಿವಾರ, ಡಿಸೆಂಬರ್ 15, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 12ನೇ ಕಂತು

`ಸಂವಾದ' ಮಾಸಪತ್ರಿಕೆ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 12ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಅಂಗಿಯಲ್ಲಿ ನಾನಿರಲಿಲ್ಲ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಪತ್ನಿಯೊಂದಿಗೆ ಹಿತ್ತಲಲ್ಲಿ ಕೂತು ಹರಟೆ ಹೊಡೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ತಂತಿಯ ಮೇಲೆ ಒಗೆದು ಒಣಗಿಹಾಕಿದ್ದ ಮುಲ್ಲಾನ ಅಂಗಿ ಜೋರಾಗಿ ಗಾಳಿ ಬೀಸಿ ದೂರದಲ್ಲಿದ್ದ ಚರಂಡಿಗೆ ಬಿದ್ದು ಎಲ್ಲಾ ಕೆಸರಾಯಿತು. ತಕ್ಷಣ ಮುಲ್ಲಾ ದೇವರಿಗೆ ಧನ್ಯವಾದಗಳನ್ನು ತಿಳಿಸಿದ. ಆತನ ನಡತೆ ವಿಚಿತ್ರವೆನ್ನಿಸಿ ಆತನ ಪತ್ನಿ, ‘ಅದ್ಯಾಕೆ, ಅಂಗಿ ಚರಂಡಿಗೆ ಬಿದ್ದು ಕೆಸರಾದರೆ ದೇವರಿಗೆ ಧನ್ಯವಾದ ಹೇಳುತ್ತೀರಿ ಎಂದಳು.
‘ಅಂಗಿ ಮಾತ್ರ ಬಿದ್ದು ಕೆಸರಾಯಿತು. ಸದ್ಯ ಆ ಅಂಗಿಯಲ್ಲಿ ನಾನಿರಲಿಲ್ಲವಲ್ಲ ಎಂದ ಮುಲ್ಲಾ ನಸ್ರುದ್ದೀನ್.

ಬೆಲೆ
ಆ ರಾಜ್ಯದ ಹೊಸ ಸಾಮ್ರಾಟ ಒಂದು ದಿನ ಮುಲ್ಲಾ ನಸ್ರುದ್ದೀನ್‌ನನ್ನು ಕೇಳಿದ, ‘ನಾನೇನಾದರೂ ಗುಲಾಮನಾಗಿದ್ದಲ್ಲಿ ನನ್ನ ಬೆಲೆ ಎಷ್ಟಿರುತ್ತಿತ್ತು?
‘ಐದು ಸಾವಿರ ರೂಪಾಯಿ ಎಂದ ನಸ್ರುದ್ದೀನ್.
‘ಏನು? ಗುಡುಗಿದ ಸಾಮ್ರಾಟ. ‘ನನ್ನ ಮೈಮೇಲಿರುವ ಬಟ್ಟೆಗಳ ಬೆಲೆಯೇ ಐದು ಸಾವಿರ ರೂಪಾಯಿಗಳಾಗುತ್ತದೆ, ತಿಳಿದಿದೆಯೇನು?
‘ತಿಳಿದಿದೆ ಸ್ವಾಮಿ. ನಾನು ಅಷ್ಟನ್ನೇ ಲೆಕ್ಕಕ್ಕೆ ತೆಗೆದುಕೊಂಡಿರುವುದು ಎಂದ ನಸ್ರುದ್ದೀನ್.

ಕೊಟ್ಟ ಬೆಲೆ
ಮುಲ್ಲಾ ನಸ್ರುದ್ದೀನ್ ಕರ್ಜೂರ ತಿನ್ನುವಾಗ ಅದರೊಂದಿಗೆ ಬೀಜಗಳನ್ನು ತಿನ್ನುತ್ತಿದ್ದುದನ್ನು ಒಬ್ಬಾತ ಗಮನಿಸಿದ.
‘ನೀವು ಕರ್ಜೂರದ ಬೀಜಗಳನ್ನೂ ಏಕೆ ತಿನ್ನುತ್ತಿದ್ದೀರಿ? ಆತ ಕೇಳಿದ.
‘ಏಕೆಂದರೆ.... ಕರ್ಜೂರ ನನಗೆ ಮಾರಿದಾತ ಬೀಜಗಳನ್ನೂ ಸೇರಿಸಿ ತೂಕಹಾಕಿ ಕೊಟ್ಟಿದ್ದ... ಅದಕ್ಕೆ ಎಂದ ನಸ್ರುದ್ದೀನ್.

ಕಣ್ಣು ನೋವು
ಮುಲ್ಲಾ ನಸ್ರುದ್ದೀನನಿಗೆ ಒಮ್ಮೆ ಕಣ್ಣು ಬೇನೆ ಬಂದು ಉರಿಯಾಗತೊಡಗಿತು. ಆತ ಕಣ್ಣಿನ ವೈದ್ಯರ ಬಳಿಗೆ ಹೋದ. ಆತನನ್ನು ನೋಡಿದ ವೈದ್ಯರು,
‘ನಿನ್ನ ಕಣ್ಣುಗಳು ಕೆಂಪಗಾಗಿವೆ ಎಂದರು.
‘ಹೌದೆ? ಅವುಗಳಿಗೆ ನೋವೂ ಆಗುತ್ತಿದೆಯೆ? ಕೇಳಿದ ನಸ್ರುದ್ದೀನ್.

ಕುಸ್ತಿಯ ಕನಸು
ಮುಲ್ಲಾ ನಸ್ರುದ್ದೀನ್ ಸ್ಥಳೀಯ ವೈದ್ಯರ ಬಳಿ ಹೋಗಿ, ‘ಕಳೆದ ಒಂದು ತಿಂಗಳಿನಿಂದ ನನಗೆ ವಿಚಿತ್ರ ಕನಸ್ಸು ಬೀಳುತ್ತಿದೆ. ಪ್ರತಿ ರಾತ್ರಿ ನಾನು ಕನಸಿನಲ್ಲಿ ಕತ್ತೆಗಳೊಂದಿಗೆ ಕುಸ್ತಿ ಮಾಡುತ್ತಿರುತ್ತೇನೆ ಎಂದ.
ವೈದ್ಯರು ನಾಡಿ ಪರೀಕ್ಷಿಸಿ ಮೂಲಿಕೆಯ ಔಷಧ ಕೊಟ್ಟು, ‘ಇದನ್ನು ಮಲಗುವಾಗ ಸೇವಿಸು, ಆ ರೀತಿಯ ಕನಸುಗಳು ಬೀಳುವುದು ನಿಂತುಹೋಗುತ್ತದೆ ಎಂದರು.
‘ಇದನ್ನು ನಾಳೆಯಿಂದ ಸೇವಿಸಲು ಪ್ರಾರಂಭಿಸಲೆ? ಕೇಳಿದ ನಸ್ರುದ್ದೀನ್.
‘ಏಕೆ? ಇವತ್ತೇ ಯಾಕಾಗಬಾರದು? ವೈದ್ಯರು ಕೇಳಿದರು.
‘ಈ ರಾತ್ರಿ ಕುಸ್ತಿಯ ಫೈನಲ್ಸ್ ಇದೆ, ಅದಕ್ಕೆ ಎಂದ ನಸ್ರುದ್ದೀನ್.

ಒಂದು ಪ್ರಶ್ನೆಗೆ ಒಂದು ಸೇಬು
ಮುಲ್ಲಾ ನಸ್ರುದ್ದೀನ್ ಊರಿನ ಚೌಕದಲ್ಲಿ ಬಂದು ಕೂತರೆ ಊರಿನ ಜನವೆಲ್ಲಾ ಅವನ ಬಳಿ ಬಂದು ಅದೂ ಇದೂ ಪ್ರಶ್ನೆಗಳನ್ನು ಕೇಳುವರು. ಅವರಿಗೆ ಉತ್ತರ ಹೇಳಿ ಹೇಳಿ ಅವನಿಗೆ ಸಾಕಾಗಿತ್ತು.  ಹಾಗಾಗಿ ಒಂದು ಹೊಸ ನಿಯಮ ಮಾಡಿದ- ಪ್ರಶ್ನೆ ಕೇಳುವವರು ಒಂದು ಪ್ರಶ್ನೆಗೆ ಒಂದು ಸೇಬು ಕೊಡಬೇಕು. ಊರಿನವರೂ ಒಪ್ಪಿಕೊಂಡರು.
ಒಂದು ದಿನ ಮುಲ್ಲಾ ಚೌಕದಲ್ಲಿ ಕೂತಿದ್ದಾಗ ಒಬ್ಬಾತ ಬುಟ್ಟಿಯ ತುಂಬ ಸೇಬು ತಂದು ತನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ. ಪ್ರಶ್ನೆಗೊಂದರಂತೆ ಸೇಬು ಕೊಟ್ಟು ಆತನ ಬುಟ್ಟಿಯೂ ಖಾಲಿಯಾಗಿತ್ತು. ಆತ ಹೊರಡುವ ಮುನ್ನ, ‘ಆಯಿತು ಹೊರಡುತ್ತೇನೆ. ಹೊರಡುವ ಮುನ್ನ ಒಂದು ಕೊನೆಯ ಪ್ರಶ್ನೆ... ನೀವು ಅಷ್ಟು ಸೇಬು ಹೇಗೆ ತಿಂದಿರಿ? ಎಂದು ಕೇಳಿದ.
ಅದಕ್ಕೆ ಮುಲ್ಲಾ ‘ನಿನ್ನ ಬಳಿ ಸೇಬೆಲ್ಲಾ ಖಾಲಿಯಾಗಿರುವುದರಿಂದ ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಿಲ್ಲ ಎಂದ.

ಭಾನುವಾರ, ಡಿಸೆಂಬರ್ 02, 2012

ಸೂರ್ಯಾನೂ ಒಂದು ನಕ್ಷತ್ರ ಎಂಬುದು ಸುಳ್ಳು- ನನ್ನ ವ್ಯಂಗ್ಯ ಚಿತ್ರ

ಈ ದಿನದ (02/12/12) `ವಿಜಯವಾಣಿ'ಯ ಸಮೀಕರಣ ಪುಟದಲ್ಲಿ ಪ್ರಕಟವಾದ ನನ್ನ `ಸೈನ್ಸ್ ಆಫ್ ಹ್ಯೂಮರ್' ವ್ಯಂಗ್ಯಚಿತ್ರ.
ಈ ವ್ಯಂಗ್ಯಚಿತ್ರದ ವಿಶೇಷತೆಯೆಂದರೆ ಈ ಪ್ರಶ್ನೆಯನ್ನು ನನ್ನ ಮಗ ಏಳು ವರ್ಷದವನಿದ್ದಾಗ ನನ್ನನ್ನು ಕೇಳಿದ್ದ.