ಗುರುವಾರ, ಜನವರಿ 01, 2009

ಕತೆ- ಬಿ.ಡಿ.ಎ. ಲೇ‌ಔಟು ಮತ್ತು ಚಿಕ್ಕತಾಯಮ್ಮನ ಜಮೀನು

ಜನವರಿ 2009ರ 'ಸಂವಾದ' ಪತ್ರಿಕೆಯಲ್ಲಿ ನನ್ನ ಕತೆ 'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

'ಬಿ.ಡಿ.. ಲೇಔಟು ಮತ್ತು ಚಿಕ್ಕತಾಯಮ್ಮನ ಜಮೀನು'
 


ಒಗೆದ ಬಟ್ಟೆಗಳನ್ನು ಹಿಂಡಿ, ಗಾಳಿಗೆ ಒದರಿ ಹಗ್ಗದ ಮೇಲೆ ಒಣಗಲು ಹಾಕಿ ತಮ್ಮಯ್ಯ ಅಲ್ಲೇ ಮನೆಯ ಮುಂದಿದ್ದ ಕಲ್ಲಿನ ಜಗುಲಿಯ ಮೇಲೆ ಉಸ್ಸೆಂದು ಕೂತ. ಮೈಯೆಲ್ಲಾ ಬೆವೆತಿದ್ದುದರಿಂದ ಗಾಳಿ ಬೀಸಿದಾಗ ತಂಪಾಗುತ್ತಿತ್ತು. ಎಲ್ಲೆಲ್ಲೂ ಬೆಳದಿಂಗಳು ಹಾಲಿನಂತೆ ಚೆಲ್ಲಿತ್ತು. ದೂರದ ಹೊಲಗದ್ದೆಗಳೂ ಕಾಣುತ್ತಿದ್ದವು. `ಇನ್ನೆಷ್ಟು ದಿನ ಈ ಹೊಲಗದ್ದೆಗಳು...... ಎಲ್ಲವೂ ಸೈಟುಗಳಾಗಿಬಿಡುತ್ತವೆ. ಯಾರ್‍ಯಾರೋ ಪರದೇಶದವರು ಇಲ್ಲಿ ಬಂದು ಮನೆಗಳನ್ನು ಕಟ್ಟಿಕೊಂಡುಬಿಡುತ್ತಾರೆ. ನಾವು ಉತ್ತು, ಬಿತ್ತ ಜಮೀನು ಚೂರುಚೂರಾಗಿ ಯಾರ್‍ಯಾರದೋ ಆಗಿಬಿಡುತ್ತವೆ' ಎಂದು ಯೋಚಿಸಿದ. ಒಳಗಿನಿಂದ ಚಿಕ್ಕತಾಯಮ್ಮ ಕರೆದಂತಾಯಿತು. ಲೈಟ್ ಹಾಕಲಿಲ್ಲ, ಹಾಗೆಯೇ ಒಳಗೆ ಹೋಗಿ `ಏನು, ಊಟ ತಿನ್ನಿಸಲೆ?' ಎಂದ. `ಬೇಡ' ಎಂದಳು. ಇತ್ತೀಚಿಗೆ ತಮ್ಮಯ್ಯನೂ ಆಕೆಗೆ ಊಟಕ್ಕೆ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದ. `ನೀರು ಕೊಡಲೆ?' ಎಂದ. ಸುಮ್ಮನಿದ್ದಳು. ಅಲ್ಲೇ ಚೊಂಬಿನಲ್ಲಿದ್ದ ನೀರನ್ನು ಗ್ಲಾಸಿಗೆ ಬಗಿಸಿ ಕೆಳಗೆ ಕೂತು ಚಿಕ್ಕತಾಯಮ್ಮಳ ಬೆನ್ನಿಗೆ ಕೈ ಹಾಕಿ ಸ್ವಲ್ಪ ಮೇಲಕ್ಕೆತ್ತಿ ಗ್ಲಾಸು ಬಾಯಿಗಿಟ್ಟ. ಎರಡು ಗುಟುಕು ಕುಡಿದು ಸಾಕು ಎನ್ನುವಂತೆ ಕೈ ಮಾಡಿದಳು. ಸ್ವಲ್ಪ ಹೊತ್ತು ಹಾಗೆಯೇ ಇದ್ದು ನಂತರ ಆಕೆಯನ್ನು ಹಾಗೆಯೇ ಹಿಂದಕ್ಕೆ ಮಲಗಿಸಿದ. `ಆ ಗಡಿಯಾರ ಆಚಿಗಿಟ್ಟುಬಿಡು. ಅದರ ಟಿಕ್ ಟಿಕ್ ಶಬ್ದದಲ್ಲಿ ನಿದ್ದೆಯೇ ಬರೋದಿಲ್ಲ' ಎಂದಳು. ಗಡಿಯಾರದ ಟಿಕ್ ಟಿಕ್ ಶಬ್ದ ನಿದ್ದೆಮಾಡಲು ಬಿಡದಷ್ಟಿರುತ್ತದೆಯೇ ಎಂದು ತಮ್ಮಯ್ಯನಿಗೆ ಅಚ್ಚರಿಯಾಯಿತು. ಸ್ವಲ್ಪ ಹೊತ್ತು ಹಾಗೆಯೇ ಇದ್ದ. ರಾತ್ರಿಯ ನಿಶ್ಶಬ್ದದಲ್ಲಿ ಗಡಿಯಾರದ ಶಬ್ದ ಸ್ಫುಟವಾಗಿ ಕೇಳಿಸತೊಡಗಿತು. ಕೇಳುತ್ತ ಕೇಳುತ್ತ ಅದರ ಶಬ್ದ ಹೆಚ್ಚಾಗುತ್ತಿರುವಂತೆ ತೋರತೊಡಗಿತು. `ಚಿಕ್ಕತಾಯಿಗೆ ಗಡಿಯಾರದ ಶಬ್ದದಿಂದ ಹೆದರಿಕೆಯಾಗತೊಡಗಿದೆಯೆ? ಸಮಯ ಕಳೆದಂತೆಲ್ಲ ಸಾವು ಹತ್ತಿರ ಹತ್ತಿರ ಬರುತ್ತಿದೆಯೆಂಬ ಭಯ ಆಕೆಗೆ ಹೆಚ್ಚಾಗುತ್ತಿರಬೇಕು' ಎಂದುಕೊಂಡ. ಆತನಿಗೇ ಹೆದರಿಕೆಯಾಗುವಂತೆ ಗಡಿಯಾರದ ಶಬ್ದ ಕರ್ಕಶವಾಗುತ್ತಿದೆಯೆನ್ನಿಸಿತು. ಗಡಿಯಾರವನ್ನು ತೆಗೆದುಕೊಂಡು ಹೊರಬಂದು ಮತ್ತೆ ಜಗುಲಿಯ ಮೇಲೆ ಕೂತ. ಬೆಳದಿಂಗಳ ಬೆಳಕಲ್ಲಿ ಸಮಯ ನೋಡಿದ. ರಾತ್ರಿ ಹನ್ನೊಂದಾಗುವುದರಲ್ಲಿತ್ತು.

ಅವರ ಮನೆಯಲ್ಲಿ ಗಡಿಯಾರವೇ ಇರಲಿಲ್ಲ. ಎಂದೂ ಅವರಿಗೆ ಅದರ ಅವಶ್ಯಕತೆ ಕಂಡೇ ಇರಲಿಲ್ಲ. ಚಿಕ್ಕತಾಯಿಗೆ ಕಾಯಿಲೆಯಾಗಿ ಸಮಯ ಸಮಯಕ್ಕೆ ಔಷಧ ಕೊಡಬೇಕೆಂದು ಡಾಕ್ಟರು ಹೇಳಿದಾಗ ಮಗನಿಗೆ ಹೇಳಿ ಆ ಗಡಿಯಾರ ತರಿಸಿಕೊಂಡಿದ್ದರು. ಆ ಗಡಿಯಾರ ಮನೆಗೆ ಬಂದಾಗಿನಿಂದ ಚಿಕ್ಕತಾಯಿಗೆ ಸಮಯ ಹೋಗುತ್ತಿರುವುದರ ಅರಿವಾಗಿರಬೇಕು; ಇನ್ನೇನು ಸಾವು ಹತ್ತಿರ ಹತ್ತಿರ ಬರುತ್ತಿದೆಯೆನ್ನಿಸಿ ಹೆದರಿಕೆಯೂ ಆಗಿರಬೇಕು.

ಒಣಗಿಸಿದ ಬಟ್ಟೆಗಳು ಗಾಳಿಗೆ ಪಟ ಪಟ ಎನ್ನುತ್ತಿದ್ದವು. ಚಿಕ್ಕತಾಯಮ್ಮಳ ರಕ್ತಸಿಕ್ತ ಬಟ್ಟೆಗಳ ಒಗೆಯುವುದನ್ನು ಯಾರೂ ನೋಡದಿರಲಿ ಎಂದು ತಮ್ಮಯ್ಯ ಆಕೆಯ ಬಟ್ಟೆಗಳನ್ನು ರಾತ್ರಿಯೇ ಒಗೆಯುತ್ತಿದ್ದ. ದಿನದಿನಕ್ಕೆ ರಕ್ತದಲ್ಲಿ ತೋಯುತ್ತಿದ್ದ ಆಕೆಯ ಬಟ್ಟೆಗಳ ರಾಶಿ ಹೆಚ್ಚುತ್ತಲೇ ಇತ್ತು. ಆಕೆಯ ಮೈಯಲ್ಲಿ ಅಷ್ಟೊಂದು ರಕ್ತವಿದೆಯೇ ಎಂದು ಆತನಿಗೇ ಅಚ್ಚರಿಯಾಗಿತ್ತು. ಇನ್ನೆಷ್ಟು ದಿನ ಅವಳು ಬದುಕಬಹುದು ಎಂದು ಆಲೋಚಿಸಿದ. ಅವನಿಗರಿವಿಲ್ಲದೆ ಅವನ ಕಣ್ಣಂಚಿನಲ್ಲಿ ನೀರು ಹನಿಯಿತು. ದೂರದಲ್ಲೆಲ್ಲೋ ಆಟೋ ಬರುತ್ತಿರುವ ಸದ್ದಾಯಿತು. ಮಗ ವೆಂಕಟೇಶ ಮನೆಗೆ ಬರುತ್ತಿರಬಹುದು ಎಂದುಕೊಂಡ. ಅವನು ಈಗಿರುವ ಆಟೋ ಮಾರಿ ಟ್ಯಾಕ್ಸಿ ಕೊಳ್ಳಬೇಕೆಂದು ಕನಸು ಕಾಣುತ್ತಿದ್ದಾನೆ. ಇರುವ ಈ ಎರಡು ಎಕರೆ ಜಮೀನು ಬಿ.ಡಿ.ಎ.ನವರು ಕಿತ್ತುಕೊಳ್ಳುತ್ತಿರುವುದರಿಂದ ಸಂತೋಷಗೊಂಡಿರುವವನು ಅವನೊಬ್ಬನೇ ಇರಬಹುದು.

ಚಿಕ್ಕತಾಯಮ್ಮಳಿಗೆ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. `ಅದೆಂಗೆ ಕಿತ್ಕೋತಾರೆ?' ಎಂದು ಪದೇ ಪದೇ ಕೇಳುತ್ತಿದ್ದಳು. `ಬಿ.ಡಿ.ಎ.ನವರ ವಂಶ ಎಕ್ಕುಟ್ಟೋಗಲಿ' ಎಂದು ಶಾಪಹಾಕುತ್ತಿದ್ದಳು. `ಇದು ನಮ್ಮಪ್ಪ ನಂಗೆ ಕೊಟ್ಟ ಜಮೀನು. ನಾನು ಹುಟ್ಟಿದ್ದಿಲ್ಲೇ, ಬೆಳೆದಿದ್ದಿಲ್ಲೇ. ಗೇಯ್ದಿರೋದೂ ಇದೇ ಜಮೀನಲ್ಲಿ. ಯಾರ್‍ಯಾರೋ ಮಾರ್‍ತೀಯಾ ಅಂದಾಗ್ಲೂ ಈ ಭೂಮಿ ನನ್ನ ಪ್ರಾಣಹೋದರೂ ಮಾರಲ್ಲ ಅಂದಿದ್ದೆ. ಈಗ ಅದೆಂಗೆ ಬಿ.ಡಿ.ಎ.ನೋರು ಈ ಜಮೀನು ತಗಂತೀವಿ, ಸೈಟ್ ಮಾಡಿ ಎಲ್ರಗೂ ಹಂಚ್ತೀವಿ ಅಂತಾರೆ. ನಂ ಭೂಮಿ ಕಿತ್ಕಂಡು ಸೈಟು ಮಾಡಿ ಕಂಡೋರಿಗೆ ಹಂಚೋಕೆ ಅವರ್‍ಯಾರು? ಅವರಪ್ಪಂದಾ ಜಮೀನಿದು?' ಎಂದು ಕೇಳಿದ್ದಳು. ತಮ್ಮಯ್ಯನಿಗೂ ಈ ವಿಷಯ ಅರ್ಥ‌ಆಗಿರಲಿಲ್ಲ. ಆದರೆ ಸರ್ಕಾರದೋರು ಯಾವ ಜಮೀನು ಬೇಕಾದರೂ ಕಿತ್ಕೋಬಹುದು, ಅವರಿಗೆ ಆ ಅಧಿಕಾರ ಇದೆ ಎಂದಾಗ ಸುಮ್ಮನಾಗಿದ್ದ. ಅದನ್ನೇ ಚಿಕ್ಕತಾಯಿಗೆ ಹೇಳಿದಾಗ ಆಕೆ ಕಿರುಚಾಡಿ ರಂಪಾಟ ಮಾಡಿದ್ದಳು. `ಆ ಅಧಿಕಾರ ಅವರಿಗೆ ನಂ ತಾತ ಕೊಟ್ಟಿದ್ನಾ? ಈ ಆಸ್ತಿ ನಂ ತಾತ್ನಿಂದ ನಂ ಅಪ್ಪನಿಗೆ ಬಂದಿದ್ದು. ಅವರಿಂದ ನನಗೆ ಬಂದಿದೆ. ಇದು ನಂ ತಾತನ ಆಸ್ತಿ. ನಮ್ಮ ತಾತ ಏನಾದ್ರೂ ಅವರಿಗೆ ಬರಕೊಟ್ಟಿದ್ದನಾ?' ಎಂದು ಕೇಳಿದ್ದಳು. `ಅದೆಂಗೆ ಬತ್ತಾರೆ, ಬರ್‍ಲಿ. ನಾನು ನನ್ನ ಜಮೀನು ಕೊಡೋಳಲ್ಲ' ಎಂದಿದ್ದಳು.

ಬಿ.ಡಿ.ಎ. ನೋಟಿಫಿಕೇಶನ್ ಸುದ್ದಿ ಮೊದಲಿಗೆ ತಂದವನೇ ವೆಂಕಟೇಶ. ಆ ದಿನ ಪೇಪರ್ ಹಿಡಿದುಕೊಂಡು ಓಡಿಬಂದು, `ಈ ಹಳ್ಳಿಯ ಜಮೀನುಗಳನ್ನೆಲ್ಲಾ ಬಿ.ಡಿ.ಎ.ನವರು ನೋಟಿಫೈ ಮಾಡಿದ್ದಾರೆ. ಎಕರೇಗೆ ಆರು ಲಕ್ಷ ಕೊಡ್ತಾರಂತೆ. ಈ ಡಬ್ಬ ಆಟೋ ಬಿಸಾಕಿ, ಟ್ಯಾಕ್ಸಿ ತಗೋತೀನಿ' ಎಂದು ಕುಣಿದಾಡಿದ್ದ. ಅದಕ್ಕೆ ಮೊದಲು ಅವನು ಅವರಮ್ಮನನ್ನು ಟ್ಯಾಕ್ಸಿ ಕೊಡಿಸುವಂತೆ ಪೀಡಿಸುತ್ತಿದ್ದ. ದುಡ್ಡಿಲ್ಲ ಎಂದಾಗ ಒಂದರ್ಧ ಎಕರೆ ಜಮೀನಾದರೂ ಮಾರಿ ಕೊಡಿಸುವಂತೆ ದುಂಬಾಲು ಬಿದ್ದಿದ್ದ. `ಸಾಧ್ಯವೇ ಇಲ್ಲ' ಎಂದಿದ್ದಳು ಚಿಕ್ಕತಾಯಮ್ಮ.

ಅದೇ ಸಮಯದಲ್ಲಿ ತಮ್ಮಯ್ಯನಿಗೆ ಮತ್ತೊಂದು ಆಲೋಚನೆ ಬಂದಿತ್ತು. ಆದರೆ ಅದನ್ನು ಚಿಕ್ಕತಾಯಮ್ಮಳ ಹತ್ತಿರ ಹೇಳಲು ಹೋಗಿರಲಿಲ್ಲ. ಮೂರ್‍ನಾಲ್ಕು ವರ್ಷಗಳಿಂದ ಹೊಟ್ಟೆನೋವು ಹಾಗೂ ರಕ್ತಸ್ರಾವದಿಂದ ನರಳುತ್ತಿದ್ದ ಚಿಕ್ಕತಾಯಮ್ಮನಿಗೆ ಏನೇನು ಔಷಧ ಕೊಟ್ಟರೂ ವಾಸಿಯಾಗಿರಲಿಲ್ಲ. ಕೊನೆಗೊಬ್ಬರು ಡಾಕ್ಟರು ಕಿದ್ವಾಯಿ ಆಸ್ಪತ್ರೆಗೆ ಹೋಗಿ ಅಂದಾಗ ತಮ್ಮಯ್ಯನಿಗೆ ಒಂದು ರೀತಿಯ ಆತಂಕ ಉಂಟಾಗಿತ್ತು. ಕಿದ್ವಾಯಿ ಆಸ್ಪತ್ರೆ ಕ್ಯಾನ್ಸರ್ ಆಸ್ಪತ್ರೆ ಎಂಬುದು ಆತನಿಗೆ ತಿಳಿದಿತ್ತು. ಅಲ್ಲಿ ಆತನ ಸಂಶಯ ನಿಜವಾಗಿತ್ತು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಎಂದಿದ್ದರು ಅಲ್ಲಿನ ಡಾಕ್ಟರು. `ಕರೆಂಟ್' ಚಿಕಿತ್ಸೆ ಹಾಗೂ ರಾಶಿಗಟ್ಟಲೆ ಔಷಧಗಳ ಸೇವನೆಯಿಂದ ಗುಣಮುಖಳಾಗಲಿಲ್ಲ. ಬದಲಿಗೆ ಆಕೆಯ ತಲೆಯಮೇಲಿನ ಕೂದಲಿನಂತೆ ಇದ್ದಬದ್ದ ಹಣವೆಲ್ಲಾ ಖಾಲಿಯಾಯಿತು. ಹರಿಯುವ ರಕ್ತದ ಕೋಡಿ ನಿಲ್ಲಲಿಲ್ಲ. ಡಾಕ್ಟರೊಂದು ದಿನ ತಮ್ಮಯ್ಯನನ್ನು ತಮ್ಮ ಕೋಣೆಗೆ ಕರೆದು ಇದ್ದ ವಿಷಯ ತಿಳಿಸಿದರು: `ಬೇರೇನೂ ದಾರಿಯಿಲ್ಲ. ಊರಿಗೆ ಕರೆದುಕೊಂಡು ಹೋಗಿ ಇರುವವರೆಗೂ ಚೆನ್ನಾಗಿ ನೋಡಿಕೊ. ನಾವು ಮಾಡುವುದು ಇನ್ನೇನೂ ಉಳಿದಿಲ್ಲ' ಎಂದರು. ಬಿ.ಡಿ.ಎ.ನವರು ಜಮೀನು ತೆಗೆದುಕೊಂಡು ಮಗ ವೆಂಕಟೇಶ ಹೇಳಿದಂತೆ ಎಕರೆಗೆ ಆರು ಲಕ್ಷ ಕೊಟ್ಟರೆ ಅವಳಿಗೆ ಬೇರೆಲ್ಲಾದರೂ ಚಿಕಿತ್ಸೆ ಕೊಡಿಸಿ ಹೆಂಡತಿಯನ್ನು ಉಳಿಸಿಕೊಳ್ಳಬಹುದೇನೋ ಎಂಬ ಆಸೆ ಮೊಳಕೆಯೊಡೆಯಿತು. `ಆಸ್ತಿ ಹೋದ್ರೂ ಹೋಗ್ಲಿ, ಚಿಕ್ಕತಾಯಿ ಉಳ್ದರೆ ಸಾಕು' ಎಂದುಕೊಂಡ.

ಚಿಕ್ಕತಾಯಮ್ಮ ತನ್ನ ತಂದೆತಾಯಿಯವರಿಗೆ ಒಬ್ಬಳೇ ಮಗಳು. ಹಾಗಾಗಿ ಅವರ ತಂದೆ ತಾಯಿಯವರು ಆಕೆಯನ್ನು ಬೇರೆ ಊರಿಗೆ ಮದುವೆ ಮಾಡಿಕೊಡದೆ ನೆಂಟರಿಷ್ಟರಲ್ಲಿ ದಿಕ್ಕಿಲ್ಲದಿದ್ದ ತಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಮನೆ‌ಅಳಿಯನನ್ನಾಗಿ ಮಾಡಿಕೊಂಡಿದ್ದರು. ತಮ್ಮಯ್ಯನೂ ಒಳ್ಳೆ ವ್ಯವಸಾಯ ಮಾಡುವವನಾಗಿದ್ದು ಇದ್ದ ಜಮೀನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಆಗ ಅಮೃತಹಳ್ಳಿ ಬೆಂಗಳೂರಿನಿಂದ ತುಂಬಾ ದೂರವಿರುವಂತೆ ತೋರುತ್ತಿತ್ತು. ತರಕಾರಿ ಅದೂ ಇದೂ ಮಾರಲು ಕೆ.ಆರ್. ಮಾರುಕಟ್ಟೆಗೆ ಗಾಡಿ ಹೊಡೆದುಕೊಂಡು ಹೋಗುತ್ತಿದ್ದುದು ತಮ್ಮಯ್ಯನಿಗೆ ಇನ್ನೂ ಚೆನ್ನಾಗಿ ನೆನಪಿದೆ. ನೋಡನೋಡುತ್ತಿದ್ದಂತೆಯೇ ಬೆಂಗಳೂರು ಬೆಳೆದುಬಿಟ್ಟಿತು. ಮಗ ವೆಂಕಟೇಶನಿಗೆ ನಗರದ ಗೀಳು ಬಿದ್ದು ಇತ್ತ ಬೇಸಾಯ ಮಾಡುವ ರೈತನೂ ಆಗಲಿಲ್ಲ, ಅತ್ತ ಶಾಲೆಗೆ ಹೋಗಿ ಓದಿ ವಿದ್ಯಾವಂತನೂ ಆಗಲಿಲ್ಲ. ಅವರಿವರು ಪೋಕರಿ ಹುಡುಗರ ಜೊತೆ ಸೇರಿ ಸಿನಿಮಾ ಅಂತ ಅಲೆದಾಡುವುದು, ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರುವುದು, ಬೀಡಿ ಸಿಗರೇಟು ಸೇದುವುದು ಮಾಡುತ್ತಾ ತಮ್ಮಯ್ಯ, ಚಿಕ್ಕತಾಯಮ್ಮನವರ ಕಣ್ಣೆದುರಿನಲ್ಲಿಯೇ ಬೆಳೆದು ಬಿಟ್ಟಿದ್ದ. `ಹೊಲ್ದಾಗಾದ್ರೂ ಗೇಯಿ ಅಥ್ವಾ ಏನಾದ್ರೂ ಬದುಕು ಮಾಡಿ ಊಟಕ್ಕೊಂದು ದಾರಿ ಮಾಡ್ಕೋ' ಎಂದು ಅಪ್ಪ ಅಮ್ಮ ಇಬ್ಬರೂ ಬಯ್ಯತೊಡಗಿದಾಗ ಯಾರದೋ ಆಟೋ ಬಾಡಿಗೆಗೆ ಓಡಿಸತೊಡಗಿದ. `ಏನೋ ಈ ಎರಡೆಕ್ರೆ ಜಮೀನಿದೆ. ಇರೋಬ್ಬ ಮಗನಿಗೆ ಮುಂದೇ ಇದೇ ದಿಕ್ಕು' ಎಂದು ಸಾಂತ್ವನಮಾಡಿಕೊಳ್ಳುತ್ತಿದ್ದಳು ಚಿಕ್ಕತಾಯಮ್ಮ.

ಆ ಜಮೀನಿನ ಮೂಲೆಯ ತೋಡುಬಾವಿಯ ಪಕ್ಕದಲ್ಲೇ ಆಕೆಯ ಅಮ್ಮ ಅಪ್ಪನ ಸಮಾಧಿಗಳಿದ್ದವು. ಒಂದು ದಿನ ಮಗ ವೆಂಕಟೇಶನನ್ನು ಕರೆದು ಹೇಳಿದ್ದಳು, `ನೋಡೋ, ನಾವು ಸತ್ತಮೇಲೆ ನನ್ನೂ, ನಿಮ್ಮಪ್ಪನನ್ನೂ ಇಲ್ಲೇ ಹೂಳ್ಬೇಕು. ಜಾಗ ಗುರ್ತಿಟ್ಕೊ' ಎಂದು ಹೇಳಿದ್ದಳು. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಆಗಿ ಸಾವಿನ ಬಾಗಿಲಲ್ಲಿದ್ದ ಚಿಕ್ಕತಾಯಮ್ಮನಿಗೆ ಈಗ ಸಮಸ್ಯೆಯಾಗಿದ್ದುದು ಬಿ.ಡಿ.ಎ.ನವರು ಜಮೀನನ್ನು ಸೈಟುಗಳಾಗಿ ಮಾಡಿದರೆ ಈ ಸಮಾಧಿಗಳ ಗತಿ ಏನಾಗುತ್ತದೆ ಎಂಬುದು. ಮತ್ತೊಂದು ಆತಂಕವಿದ್ದುದು ಬಿ.ಡಿ.ಎ.ನವರು ಆ ಜಮೀನನ್ನು ಕಿತ್ತುಕೊಂಡರೆ ಆಕೆ ಸತ್ತ ಮೇಲೆ ಆಕೆಯನ್ನು ಹೂಳುವುದು ಎಲ್ಲಿ ಎಂಬುದು. ಗಂಡ ತಮ್ಮಯ್ಯನ ಬಳಿ ಈ ವಿಷಯ ಹೇಳಿಕೊಂಡು ಗೋಳಾಡಿದ್ದಳು. ತಮ್ಮಯ್ಯನಿಗೂ ಏನೂ ಹೇಳಲು ತೋಚಿರಲಿಲ್ಲ. ಅವರಿವರನ್ನು ವಿಚಾರಿಸಿದ್ದ. ಬಿ.ಡಿ.ಎ.ನವರು ಜಮೀನುಗಳನ್ನು ಅವರ ಪ್ಲ್ಯಾನ್ ಪ್ರಕಾರ ಲೆವೆಲ್ ಮಾಡಿ ಲೇ‌ಔಟು ಮಾಡುತ್ತಾರೆ. ಜಮೀನುಗಳಲ್ಲಿಯ ಸಮಾಧಿಗಳನ್ನು ಅವರು ಕೇರ್ ಮಾಡುವುದಿಲ್ಲ. ಊರಿನ ಸ್ಮಶಾನಗಳಿದ್ದಲ್ಲಿ ಅವುಗಳನ್ನು ಏನೂ ಮಾಡುವುದಿಲ್ಲ ಎನ್ನುವುದನ್ನು ತಿಳಿದು ಆಕೆಗೆ ಅತ್ಯಂತ ದುಗುಡದಿಂದ ವಿಷಯ ತಿಳಿಸಿದ್ದ. ಆ ವಿಷಯ ತಿಳಿದು ಆಕೆ ಎರಡು ದಿನ ಊಟಮಾಡಿರಲಿಲ್ಲ. ತಮ್ಮಯ್ಯನಿಗೆ ಈ ವಿಷಯದಲ್ಲಿ ಯಾವ ರೀತಿ ಸಂತೈಸಬೇಕೆಂಬುದೂ ತಿಳಿದಿರಲಿಲ್ಲ.

ಆಟೋ ಸದ್ದು ಇನ್ನೂ ಹತ್ತಿರವಾಯಿತು. ತಮ್ಮಯ್ಯನಿಗೆ ಹಸಿವಾಗುತ್ತಿದ್ದರೂ ತಿನ್ನುವ ಮನಸ್ಸಾಗಲಿಲ್ಲ.

ಚಿಕ್ಕತಾಯಮ್ಮ ಆಸ್ಪತ್ರೆಯಿಂದ ಹಿಂದಿರುಗಿದ ಮೇಲೆ ತಮ್ಮಯ್ಯ ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆತನೇ ಒಂದಷ್ಟು ಅನ್ನ, ಗಂಜಿ ಮಾಡಿ ಆಕೆಗೆ ತಿನ್ನಿಸುತ್ತಿದ್ದ, ಆಕೆಯನ್ನು ಬಚ್ಚಲು ಮನೆಗೆ ಕರೆದೊಯ್ಯುತ್ತಿದ್ದ. ಮಗ ವೆಂಕಟೇಶ ಮನೆಗೆ ಬಂದರೆ ಬಂದ ಇಲ್ಲದಿದ್ದರೆ ಇಲ್ಲ. ಅವನೂ ಮನೆಗೆ ಏನೂ ದುಡ್ಡು ಕೊಡುತ್ತಿರಲಿಲ್ಲ, ಇವರೂ ಕೇಳುತ್ತಿರಲಿಲ್ಲ. ಅಮ್ಮನಿಗೆ ಅಷ್ಟು ಕಾಯಿಲೆಯಾಗಿದ್ದರೂ ಒಂದು ದಿನವಾದರೂ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮಯ್ಯ ಹಾಗೂ ಚಿಕ್ಕತಾಯಮ್ಮ ಎಷ್ಟೋ ಸಾರಿ ಅವನ ಬಗ್ಗೆ ಮಾತನಾಡಿಕೊಂಡಿದ್ದರು. ಅವನು ನಗರಕ್ಕೆ ಸೇರಿ ಇಷ್ಟೊಂದು ಕಠೋರನಾದನೆ? ಸಂಪೂರ್ಣ ಹಳ್ಳಿಯ ಹುಡುಗನೇ ಆಗಿ ರೈತನಾಗಿದ್ದಿದ್ದರೆ ಅಮ್ಮನ ಸೆರಗು ಬಿಡದ ಕೂಸಾಗಿ ಅಪ್ಪ ಅಮ್ಮನನ್ನು ಪ್ರೀತಿಸುವ ಮುದ್ದಿನ ಮಗನಾಗುತ್ತಿದ್ದನೆ?

ಹತ್ತಿರ ಹತ್ತಿರವಾದಂತೆ ಆಟೋದ ಬೆಳಕು ಕಂಡಿತು. ವೆಂಕಟೇಶ ಆಟೋವನ್ನು ಶೆಡ್‌ನಲ್ಲಿ ನಿಲ್ಲಿಸಿದ. ಅದೇ ಶೆಡ್ ಅಲ್ಲವೆ ಮೊದಲು ಎತ್ತುಗಳ ಕೊಟ್ಟಿಗೆಯಾಗಿದ್ದಿದು! ಎಂಥ ಜೋಡಿ ಎತ್ತುಗಳವು! ಅವುಗಳನ್ನು ಕೊಳ್ಳಲು ತಮ್ಮಯ್ಯ ಮತ್ತು ಚಿಕ್ಕತಾಯಮ್ಮ ಇಬ್ಬರೂ ಮಾಗಡಿ ದನಗಳ ಪರಿಷೆಗೆ ಹೋಗಿದ್ದರು. ನೀನು ಬರುವುದು ಬೇಡವೆಂದರೂ ಕೇಳದೆ ಬರುತ್ತೇನೆಂದು ಚಿಕ್ಕತಾಯಮ್ಮ ಹುರುಪಿನಿಂದ ಚಿಕ್ಕಹುಡುಗಿಯಂತೆ ಬಂದಿದ್ದಳು. ಆ ಕಾಲದಲ್ಲಿ ಎರಡು ಸಾವಿರದ ಎತ್ತುಗಳೆಂದರೆ ಕಡಿಮೆಯೇನಲ್ಲ. ತಂದ ಮರುದಿನ ಊರವರೆಲ್ಲಾ ನೋಡಲು ಬಂದಿದ್ದರು. ಸಂಕ್ರಾಂತಿಯ ದಿನ ಅವುಗಳಿಗೆ ಸಿಂಗಾರ ಮಾಡಿ ಮೆರವಣಿಗೆ ಮಾಡಿಸುವುದು ಅವರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿತ್ತು. ಈಗ ಊರಿನಲ್ಲಿ ಮೊದಲಿನ ಹಾಗೆ ಸಂಕ್ರಾಂತಿ ಮಾಡುವುದೇ ನಿಂತುಹೋಗಿದೆ. ಯಾರಲ್ಲಿಯೂ ದನಗಳಿಲ್ಲ. ಎಲ್ಲರೂ ಸೈಟುಗಳ ಬಿಸಿನೆಸ್‌ನಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿತು ತಮ್ಮಯ್ಯನಿಗೆ.

ಆಟೋ ನಿಲ್ಲಿಸಿದ ವೆಂಕಟೇಶ ನೇರ ಅಡಿಗೆಮನೆಗೆ ಹೋಗಿ ಊಟಬಡಿಸಿಕೊಳ್ಳತೊಡಗಿದ. ಚಿಕ್ಕತಾಯಮ್ಮ ಏನೋ ಹೇಳಿದಳು. ವೆಂಕಟೇಶನೂ ಉತ್ತರಿಸಲಿಲ್ಲ, ಇತ್ತ ತಮ್ಮಯ್ಯನೂ ಏನೂ ಹೇಳಲಿಲ್ಲ.

ಕೆಲದಿನಗಳ ಹಿಂದೆ ಹೀಗೆಯೇ ರಾತ್ರಿ ಹೊರಗೆ ಜಗುಲಿಯ ಮೇಲೆ ತಮ್ಮಯ್ಯ ಹಾಸಿಕೊಂಡು ಮಲಗಿದ್ದ. ನಿದ್ರೆ ಬರುತ್ತಿರಲಿಲ್ಲ. ಬೀಡಿ ಸೇದುತ್ತಾ ಬಿಡುವ ಹೊಗೆ ಕತ್ತಲಲ್ಲಿ ಚಿತ್ತಾರಗಳನ್ನು ಬಿಡಿಸುತ್ತಿದ್ದುದನ್ನು ನೋಡುತ್ತಿದ್ದ. ಸಮಯ ಒಂದು ಗಂಟೆಯೋ ಎರಡು ಗಂಟೆಯೋ ಆಗಿದ್ದಿರಬಹುದು. ಚಿಕ್ಕತಾಯಮ್ಮ ಕರೆದಳು. ಅವಳನ್ನು ಬಚ್ಚಲಿಗೆ ಕರೆದೊಯ್ಯಬೇಕೇನೋ ಎಂದು ಕೊನೆಯ ದಮ್ಮು ಎಳೆದು ಬೀಡಿ ತುಂಡು ಬಿಸಾಕಿ, ಕ್ಯಾಕರಿಸಿ ಉಗಿದು ಒಳಗೆ ನಡೆದ. ಲೈಟ್ ಹಾಕಿದ. `ಬೇಡ, ಆಫ್ ಮಾಡು' ಎಂದಳು ಕೈಯನ್ನು ಕಣ್ಣಿಗೆ ಮರೆಮಾಡುತ್ತಾ. ಆಫ್ ಮಾಡಿ ಆಕೆಯ ಬೆನ್ನಿಗೆ ಕೈಹಾಕಿ ಮೇಲೆತ್ತಲು ಹೋದ. `ಬೇಡ, ಇಲ್ಲೇ ಕೂತ್ಕೋ' ಎಂದಳು. ಅಲ್ಲೇ ಅವಳ ಪಕ್ಕ ಗೋಡೆಗೆ ಒರಗಿ ಕೂತ. ಗೊಳೋ ಎಂದು ಅಳಲು ಪ್ರಾರಂಭಿಸಿದಳು. ತಮ್ಮಯ್ಯನಿಗೆ ಏನು ಹೇಳಲೂ ತೋಚಲಿಲ್ಲ. `ಹೊಟ್ನೋವು ಜಾಸ್ತಿ ಆಗದೇನು? ಮಾತ್ರೆ ಕೊಡ್ಲಾ?' ಎಂದು ಕೇಳಿದ. ಬೇಡವೆಂಬಂತೆ ತಲೆಯಾಡಿಸಿದಳು. ಇತ್ತೀಚಿಗೆ ಅವಳ ಯಾತನೆ ಹೆಚ್ಚಾಗಿತ್ತು. ಕಿದ್ವಾಯಿಯ ಡಾಕ್ಟರು ಇನ್ನು ಒಂದೆರಡು ತಿಂಗಳಷ್ಟೇ ಎಂದು ಹೇಳಿದ್ದರು. ಆದರೆ ನಾಲ್ಕೈದು ತಿಂಗಳಾಯಿತು. ಅವಳ ಯಾತನೆಯನ್ನು ನೋಡಲಾಗದ ತಮ್ಮಯ್ಯ ಅವಳಿಗೆ ಸಾವಾದರೂ ಬೇಗ ಬರಬಾರದೇ ಎಂದುಕೊಳ್ಳುತ್ತಿದ್ದ. ಒಂದೈದು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಕೊನೆಗೆ ಚಿಕ್ಕತಾಯಮ್ಮ ಹೇಳಿದಳು, `ನಾಳೆ ಹೊತ್ತಾರೆ ಒಂದ್ಕೆಲಸ ಮಾಡು. ನಂ ಜಮೀನು ನಂಗೆ ಉಳಿಯಾಂಗಿಲ್ಲ. ಹೆಬ್ಬಾಳದ ಮಶಾಣಕ್ಕೆ ಹೋಗಿ ನಾ ಸತ್ ಮೇಲೆ ಹೂಳೋಕೆ ಜಾಗ ಐತಾ ನೋಡ್ಕಂಡು ಬಾ' ಎಂದಳು. `ಹೇ, ಆ ಮಾತ್ಯಾಕೆ? ನಿಂಗೇನೂ ಆಗಲ್ಲ, ಔಷಧಿ ತಗೊಳ್ತಾ ಇದೀಯ. ಎಲ್ಲಾ ಸರಿಹೋಗ್ತದೆ' ಎಂದ. ಆ ಮಾತು ಸುಳ್ಳು ಎಂಬುದು ಇಬ್ಬರಿಗೂ ತಿಳಿದಿತ್ತು. ಇಬ್ಬರೂ ಮಾತನಾಡಲಿಲ್ಲ. ಆ ಸರಿ ರಾತ್ರಿಯ ನೀರವದಲ್ಲಿ ಗಡಿಯಾರದ ಟಿಕ್ ಟಿಕ್ ಶಬ್ದ ಬಿಟ್ಟರೆ ಬೇರೆ ಶಬ್ದವಿರಲಿಲ್ಲ. ತಮ್ಮಯ್ಯನಿಗೆ ಆ ಶಬ್ದ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವಂತೆ ಅನ್ನಿಸಿತು. ಅದು ತಡೆದುಕೊಳ್ಳುವುದು ಅಸಾಧ್ಯವೆನ್ನಿಸಿ ಎದ್ದು ಅಲ್ಲೇ ಗೋಡೆಯ ಗೂಡಲ್ಲಿದ್ದ ಆ ಗಡಿಯಾರವನ್ನೆತ್ತಿಕೊಂಡು ಹೊರನಡೆದು ಜಗುಲಿಯ ಮೇಲೆ ಕೂತ. ಗಡಿಯಾರದ ಮುಳ್ಳುಗಳನ್ನು ನೋಡುತ್ತಾ ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದ.

ಮರುದಿನ ಬೆಳಿಗ್ಗೆ ಚಿಕ್ಕತಾಯಮ್ಮನಿಗೆ ಗಂಜಿ ಮಾಡಿ ತಿನ್ನಿಸಿ ಅವಳಿಗೆ ಏನೂ ಹೇಳದೆ ಹೆಬ್ಬಾಳದ ಸ್ಮಶಾನದ ಕಡೆಗೆ ಹೊರಟ. ತಮ್ಮಯ್ಯನಿಗೆ ಮದುವೆಯಾದ ಹೊಸತರಲ್ಲಿ ಆ ಸ್ಮಶಾನದ ಕಡೆಗೆ ರಾತ್ರಿಯ ಹೊತ್ತು ಓಡಾಡಲೇ ಹೆದರಿಕೆಯಾಗುತ್ತಿತ್ತು. ಮಾರುಕಟ್ಟೆಯಿಂದ ಗಾಡಿಯಲ್ಲಿ ಹಿಂದಿರುಗುವಾಗ ಕೆಲವೊಮ್ಮೆ ಕತ್ತಲಾಗುತ್ತಿರುತ್ತಿತ್ತು. ರಸ್ತೆಯ ಬದಿಗೇ ಇದ್ದ ಸ್ಮಶಾನದ ಕಡೆಗೆ ನೋಡದೆ ಗಾಡಿ ಓಡಿಸಿಕೊಂಡು ಬರುತ್ತಿದ್ದ. ಊರಿನ ಜನ ಆ ಸ್ಥಳದ ಬಗ್ಗೆ ಹೆದರಿಕೆಯ ಕತೆಗಳನ್ನು ಹೇಳುತ್ತಿದ್ದರು. ಚಿಕ್ಕತಾಯಿಯ ಅಮ್ಮ ಚಿಕ್ಕವಳಿದ್ದಾಗ ಆ ಸ್ಮಶಾನದ ಪಕ್ಕದಲ್ಲಿನ ತೋಡುಬಾವಿಯಲ್ಲಿ ಆಗಾಗ ಬಟ್ಟೆ‌ಒಗೆಯುವ ಸದ್ದು ಕೇಳಿಸುತ್ತಿತ್ತೆಂದೂ, ಯಾರೋ ಅಗಸರವಳು ಆ ಬಾವಿಯಲ್ಲಿ ಬಟ್ಟೆ ಒಗೆಯಲು ಹೋಗಿ ಸತ್ತುಹೋಗಿದ್ದು ಅವಳ ದೆವ್ವವೇ ಆ ರೀತಿ ಶಬ್ದಮಾಡುತ್ತಿತ್ತೆಂದು ಹೇಳುತ್ತಿದ್ದರು. ಇಂದು ಆ ಬಾವಿಯು ಮುಚ್ಚಿಹೋಗಿ ಅದರ ಮೇಲೇ ಒಂದು ಶಾಪಿಂಗ್ ಮಾಲ್ ಬಂದಿತ್ತು. ತಮ್ಮಯ್ಯ ನೋಡನೋಡುತ್ತಿದ್ದಂತೆಯೇ ಬಸ್ಸು, ಒಂದು ಎತ್ತಿನಗಾಡಿ ಹೋಗಬಹುದಾದಷ್ಟಿದ್ದ ರಸ್ತೆ ಊರಗಲವಾಗಿತ್ತು. ಸ್ಮಶಾನದ ಸುತ್ತಮುತ್ತಲಿನ ಅಳಿದುಳಿದ ಭೂಮಿಯನ್ನೆಲ್ಲಾ ಒತ್ತುವರಿ ಮಾಡಿಕೊಂಡುಬಿಟ್ಟಿದ್ದರು. ಅದನ್ನೆಲ್ಲ ನೋಡುತ್ತ ಬಂದ ತಮ್ಮಯ್ಯ `ಈಗಿನ ಜನಗಳಿಗೆ ದೆವ್ವಗಳ ದಿಗಿಲೇ ಇಲ್ಲ' ಎಂದುಕೊಂಡ. ಸ್ಮಶಾನದಲ್ಲಿ ಈಗ ಎಲೆಕ್ಟ್ರಿಕ್ ಕ್ರಿಮೆಟೋರಿಯಂ ಒಂದು ಸ್ಥಾಪಿಸಿದ್ದರು. ಅಳುಕು, ಅಂಜಿಕೆಯ ಮನಸ್ಸಿನಿಂದಲೇ ಸ್ಮಶಾನದೊಳಗೆ ಕಾಲಿರಿಸಿದ. ಕಾಲಿಡಲೂ ಸ್ಥಳವಿಲ್ಲದಂತ್ತಿತ್ತು; ಹತ್ತಿರ ಹತ್ತಿರದಲ್ಲೇ ಸತ್ತವರನ್ನು ಹೂತಿದ್ದರು. ಚಿಕ್ಕತಾಯಮ್ಮನಿಗೆ ಬೇಕಾಗುವಷ್ಟು ಜಾಗ ಎಲ್ಲೂ ಕಾಣಲಿಲ್ಲ. ಅಲ್ಲೇ ಸಮಾಧಿಯೊಂದರ ಮೇಲೆ ಮಲಗಿದ್ದ ಒಬ್ಬಾತ ತಮ್ಮಯ್ಯನನ್ನೇ ನೋಡುತ್ತಿದ್ದು `ಏನು ಬೇಕು?' ಎಂದು ಕೇಳಿದ. ತಮ್ಮಯ್ಯ ಆತನನ್ನು ಗಮನಿಸಿರಲೇ ಇಲ್ಲ. ಆತನ ದನಿಗೆ ಬೆಚ್ಚಿಬಿದ್ದು, ಸಾವರಿಸಿಕೊಂಡು `ಏನಿಲ್ಲಾ' ಎಂದ. `ಮತ್ಯಾಕೆ ಇಲ್ಲಿ ಓಡಾಡ್ತಿದೀಯ? ನೀನೇನು ಮೂಳೆಗೀಳೆ ಕದಿಯೋವೋನು ಅಲ್ಲ ತಾನೆ?' ಮತ್ತೆ ಆ ವ್ಯಕ್ತಿ ಗಡಸು ದನಿಯಲ್ಲಿ ಕೇಳಿದ. ತಮ್ಮಯ್ಯನಿಗೆ ಆಶ್ಚರ್ಯವೂ ಭಯವೂ ಒಟ್ಟಿಗೇ ಆಯಿತು. `ಮೂಳೇನೂ ಕದೀತಾರ?' ಕುತೂಹಲದಿಂದ ಕೇಳಿದ. `ಯಾಕೆ ಹರಿಶ್ಚಂದ್ರ ಘಾಟ್‌ನಲ್ಲಿ ತಲೆಬುರುಡೆ, ಮೂಳೆಗಳನ್ನು ಕದ್ದು ಮೆಡಿಕಲ್ ಸ್ಟೂಡೆಂಟ್ಸ್‌ಗೆ ಮಾರೋದು ಪೇಪರ್‍ನಲ್ಲಿ ಬಂದಿತ್ತಲ್ಲಾ, ನಿನಗೆ ಗೊತ್ತಿಲ್ವಾ?' ಎಂದು ಹೇಳುತ್ತಾ ಆ ವ್ಯಕ್ತಿ ಎದ್ದು ಕೂತ. ತಮ್ಮಯ್ಯನಿಗೆ ಅಲ್ಲಿ ನಿಲ್ಲಲು ಎಂಥದೋ ಭಯವಾಗಿ ಹೊರನಡೆದ.

ಅಲ್ಲಿಂದ ಪಕ್ಕದಲ್ಲಿದ್ದ ಕ್ರಿಮೆಟೋರಿಯಂನೆಡೆಗೆ ನಡೆದ. ಅಲ್ಲಿ ಬಹಳಷ್ಟು ಜನ ನೆರೆದಿದ್ದರು. `ಯಾರೋ ಸತ್ತೋಗವ್ರೆ' ಎಂದುಕೊಂಡ. `ಕರೆಂಟ್'ನಲ್ಲಿ ಸುಡುವುದನ್ನು ತಮ್ಮಯ್ಯ ಎಂದೂ ನೋಡಿರಲಿಲ್ಲ, ಕೇಳಿದ್ದ ಅಷ್ಟೆ. ಅಷ್ಟೊಂದು ಜನ ಅಲ್ಲಿ ನೆರೆದಿದ್ದರೂ ಎಂಥದೋ ಅಘೋಷಿತ ಮೌನವಿತ್ತು. ಜನ ಪಿಸುಪಿಸು ಮಾತನಾಡುತ್ತಿದ್ದರು. ಅವರ ನಡುವೆಯೇ ತಮ್ಮಯ್ಯ ಮುನ್ನಡೆದ. ಅಲ್ಲಿ ಒಂದು ಶವವನ್ನು ಬಿಳಿಬಟ್ಟೆಯಲ್ಲಿ ಹೊದಿಸಿ ಮಲಗಿಸಿದ್ದರು. ಅದರ ಪಕ್ಕದಲ್ಲಿ ಹೆಂಗಸರು ಅಳುತ್ತಿದ್ದರು. ಜನ ಒಬ್ಬೊಬ್ಬರಾಗಿ ಸಾಂಬ್ರಾಣಿ ಹೊಗೆ ಹಾಕಿ ಕೈಮುಗಿದು ಪಕ್ಕಕ್ಕೆ ಸರಿದು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುತ್ತಿದ್ದರು. ಏನೂ ಮಾಡಲು ತೋಚದೆ ತಮ್ಮಯ್ಯ ಅಲ್ಲೆ ಕಟ್ಟೆಯ ಮೇಲೆ ಕೂತು ಎಲ್ಲ ನೋಡತೊಡಗಿದ. ಸ್ವಲ್ಪಹೊತ್ತಾದ ಮೇಲೆ ಯಾರೋ ಏರು ದನಿಯಲ್ಲಿ `ಎಲ್ಲರೂ ಸಾಂಬ್ರಾಣಿ ಹಾಕಿದ್ದು ಆಯಿತಾ?' ಎಂದು ಕೂಗಿದರು. `ಆಯ್ತು ಆಯ್ತು. ಟೈಂ ಆಯ್ತು ಬೇಗ ತಗೊಂಡು ನಡೀರಿ' ಎಂದರು. ಒಂದಷ್ಟು ಜನ ಶವವನ್ನು ಒಯ್ಯಲು ಮುಂದೆ ಬಂದರು. ಶವವನ್ನು ಮೇಲೆತ್ತಲು ತೊಡಗಿದಂತೆ ಪಕ್ಕದಲ್ಲಿದ್ದ ಹೆಂಗಸರ ಗೋಳಾಟ ಜೋರಾಯಿತು. ಒಬ್ಬಾಕೆ ಆ ಶವದ ಮೇಲೆಯೇ ಮುನ್ನುಗ್ಗಿದಳು. ಪಕ್ಕದಲ್ಲಿದ್ದ ಹೆಂಗಸರು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡರು. ತಮ್ಮಯ್ಯ ಆ ಜನರ ಜೊತೆಯೇ ಒಳಗೆ ಪ್ರವೇಶಿಸಿದ. ಒಳಗೆ ಮತ್ತೊಂದು ಕೋಣೆಯಿತ್ತು. ಶವವನ್ನು ಹೊರಗಡೆ ಕೋಣೆಯಲ್ಲಿಯೇ ಇರಿಸಿದರು. ಅಲ್ಲಿಯೂ ಎಂಥದೋ ಶಾಸ್ತ್ರಗಳನ್ನು ಮಾಡಿದರು. ಕೆಲವೊಬ್ಬರು ಒಳಗಡೆಯ ಕೋಣೆಯೊಳಕ್ಕೆ ಹೋಗುತ್ತಿದ್ದರು. ತಮ್ಮಯ್ಯನೂ ಅಲ್ಲಿಗೆ ಹೊರಟ. ಆ ಕೋಣೆ ಬಿಸಿಬಿಸಿಯಾಗಿತ್ತು; ಎಂಥದೋ ಕಮಟು ವಾಸನೆ. ಅದಕ್ಕೇ ಇದನ್ನು `ಕಮಟೋರಿಯಾ' ಎನ್ತಾರೇನೋ ಎಂದುಕೊಂಡ. ಮಧ್ಯೆ ಒಂದು ಗೂಡಿನಂತಿದ್ದು ಅದರ ಮುಂದುಗಡೆ ರೈಲ್ವೇ ಹಳಿಯಂತಿತ್ತು. ಆ ಗೂಡಿನ ಮಧ್ಯಭಾಗದಲ್ಲಿ ಕಿರಿದಾದ ಬಾಗಿಲೊಂದಿದ್ದು ಅದನ್ನು ಕಬ್ಬಿಣದ ಬಾಗಿಲಿನಿಂದ ಮುಚ್ಚಿತ್ತು. ಶವವನ್ನು ಒಳಕ್ಕೆ ತಂದರು. ಅಲ್ಲಿ ನಿಂತಿದ್ದ ಒಬ್ಬಾತ `ಇಲ್ಲಿಡಿ' ಎಂದು ತೋರಿಸಿದ. ಶವವನ್ನು ಕಬ್ಬಿಣದ ಸ್ಟ್ರೆಚರ್‌ನಂತಿದ್ದ ಹಲಗೆಯ ಮೇಲೆ ಮಲಗಿಸಿದರು. ಆಸ್ಪತ್ರೆಯಲ್ಲಿ ಚಿಕ್ಕತಾಯಮ್ಮನನ್ನು ಅಂಥದೇ ಸ್ಟ್ರೆಚರ್ ಮೇಲೆ ಸಾಗಿಸಿದ್ದುದು ತಮ್ಮಯ್ಯನಿಗೆ ನೆನಪಾಯಿತು. ಕೋಣೆಯಲ್ಲಿ ನೂಕುನುಗ್ಗಲಾಟ ಹೆಚ್ಚಾಯಿತು. ಶವವನ್ನು `ಇಲ್ಲಿಡಿ' ಎಂದು ತೋರಿಸಿದಾತ ಯಾವುದೋ ಕಂಬಿಯನ್ನು ಜೋರಾಗಿ ಎಳೆದ. ಗೂಡಿನ ಕಬ್ಬಿಣದ ಬಾಗಿಲು ತೆರೆದುಕೊಂಡಿತು. ಒಳಗಡೆ ಬೆಂಕಿ ಧಗಧಗ ಉರಿಯುತ್ತಿತ್ತು. `ಜಾಗಬಿಡಿ, ಜಾಗಬಿಡಿ' ಎಂದು ಶವದ ಒಂದು ಕೊನೆಗೆ ಬಂದು ಕಬ್ಬಿಣದ `ಸ್ಟ್ರೆಚರ್' ಅನ್ನು ಜೋರಾಗಿ ತಳ್ಳಲು ಮುಂದಾದ. ನೆರೆದಿದ್ದ ಜನ ಎಲ್ಲಾ `ಗೋವಿಂದಾ, ಗೋವಿಂದಾ' ಎಂದು ಕೂಗಿದರು. ಶವ ಒಳಗೆ, ಬೆಂಕಿಯ ಜ್ವಾಲೆಗಳೊಳಗೆ ಹೋಯಿತು. ಕ್ಷಣದಲ್ಲೇ ಶವಕ್ಕೆ ಹೊದಿಸಿದ್ದ ಬಟ್ಟೆ, ಹೂಗಳೆಲ್ಲಾ ಉರಿಯತೊಡಗಿದವು. ಜನರ `ಗೋವಿಂದಾ, ಗೋವಿಂದಾ' ತಾರಕಕ್ಕೇರಿತು. ಆ ವ್ಯಕ್ತಿ ಮತ್ತೆ ಆ ಕಂಬಿಯನ್ನು ಎಳೆದ, ಗೂಡಿನ ಬಾಗಿಲು ಮುಚ್ಚಿಕೊಂಡಿತು. ಜನ ಒಬ್ಬೊಬ್ಬರಾಗಿ ಕೈಮುಗಿದು ಹೊರನಡೆಯತೊಡಗಿದರು. ಆ ಕಂಬಿ ಎಳೆದಾತ ಸಂಜೆಬಂದು ಅಸ್ಥಿ ತೆಗೆದುಕೊಳ್ಳಿ ಎನ್ನುತ್ತಿದ್ದ. ಸೆಖೆ, ಕಮಟು ವಾಸನೆ ತಡೆಯದಂತಾಗಿ ತಮ್ಮಯ್ಯ ಹೊರಬಂದ. ಟವೆಲ್ಲಿನಲ್ಲಿ ಮುಖ ಒರೆಸಿಕೊಂಡ. ಅವನಿಗರಿವಿಲ್ಲದಂತೆ ಆತನ ಎದೆಬಡಿತ ಜೋರಾಗಿತ್ತು, ಮೈಯೆಲ್ಲಾ ಬೆವೆತಿತ್ತು. ಮನೆಯ ಕಡೆಗೆ ದಾಪುಗಾಲು ಹಾಕಿದ.

ಸ್ನಾನಮಾಡಿ ಸಂಜೆ ಹೊರಗೆ ಕೂತಿದ್ದಾಗ ಎಲ್ಲವನ್ನೂ ಚಿಕ್ಕತಾಯಮ್ಮನಿಗೆ ಹೇಳಬೇಕೆನ್ನಿಸಿತು. ಆಕೆಯೂ ತಮ್ಮಯ್ಯ ಹಿಂದಿರುಗಿದಾಗಿನಿಂದ ಏನೂ ಮಾತನಾಡಿರಲಿಲ್ಲ. ಹೊರಗಡೆ ಬಂದು ಒಂದು ಬೀಡಿ ಸೇದಿ ತುಂಡನ್ನು ಎಸೆದು ಒಳಹೊರಟ. ಇವನ ಹೆಜ್ಜೆ ಸದ್ದು ಕೇಳಿ ಚಿಕ್ಕತಾಯಮ್ಮ ಕಣ್ಣುತೆರೆದಳು. ಅಲ್ಲೇ ಪಕ್ಕದಲ್ಲೇ ತಮ್ಮಯ್ಯ ಕೂತ. ಇಬ್ಬರೂ ಏನೂ ಮಾತನಾಡಲಿಲ್ಲ.

`ಜಾಗ ನೋಡ್ಕಂಬಂದ್ಯಾ?' ಚಿಕ್ಕತಾಯಮ್ಮ ಕೇಳಿದಳು.
ತಮ್ಮಯ್ಯ ಏನೂ ಹೇಳಲಿಲ್ಲ. ಮುಖ ಪಕ್ಕಕ್ಕೆ ತಿರುಗಿಸಿದ. ಆತನಿಗೆ ಏನೊಂದೂ ಹೇಳಲು ತೋಚಲಿಲ್ಲ.
`ನೀನ್ಯಾಕೆ ಅಷ್ಟೊಂದು ಯೋಚ್ನೆ ಮಾಡ್ತೀಯ? ಏನೂ ಆಗಲ್ಲ ಸುಮ್ಕಿರು' ಎಂದ ಆಕೆಯ ಕಡೆಗೆ ನೋಡದೆ.
`ಮತ್ತೇ ಅದೇ ರಾಗ ಎಳೀತಾ ಇದೀಯಾ. ನಾ ಕೇಳಿದ್ದಕ್ಕೆ ಸುಮ್ನೆ ಉತ್ರ ಹೇಳು. ಸಾಯೋವೋಳ್ ನಾನಿದೀನಿ. ನಿನಗೇನ್ ಕಷ್ಟ' ಕೊಂಚ ಗಡುಸಾಗಿಯೇ ಕೇಳಿದಳು ಚಿಕ್ಕತಾಯಮ್ಮ.
ತಮ್ಮಯ್ಯ ಏನೂ ಹೇಳಲಿಲ್ಲ. ಮೇಲೇಳಲು ಹೊರಟ. ಚಿಕ್ಕತಾಯಮ್ಮ ಕೈಚಾಚಿ ಆತನ ಕಾಲುಹಿಡಕೊಂಡಳು.
`ಕೂತ್ಕೋ. ಎಲ್ಲಿಗೆ ಎದ್ದೋಗ್ತೀಯ? ಏನಾಯ್ತು ಹೇಳು' ಮತ್ತೆ ಪ್ರಶ್ನಿಸಿದಳು.
ತಮ್ಮಯ್ಯ ಕೂತು ಮತ್ತೆ ಗೋಡೆಗೆ ಒರಗಿದ.

`ಇಲ್ಲ ಬಿಡು, ಆ ಮಶಾಣದಲ್ಲಿ ಜಾಗ ಇಲ್ಲ. ಈಗ ಅಲ್ಲಿ ಯಾರ್‍ನೂ ಹೂಳ್ತಾ ಇಲ್ಲ. ಅಲ್ಲೇ ಕರೆಂಟ್‌ನಲ್ಲಿ ಸುಡತಾರಂತೆ'. ಇಷ್ಟು ಹೇಳುವಷ್ಟರಲ್ಲಿ ತಮ್ಮಯ್ಯನ ಗಂಟಲಲ್ಲಿ ಮಾತು ಹೂತುಹೋಗುವಂತಾಯಿತು. ಟವೆಲ್ಲಿನಿಂದ ಮುಖ ಒರೆಸಿಕೊಂಡ. ಚಿಕ್ಕತಾಯಮ್ಮನ ಮುಖ ನೋಡಲು ಧೈರ್ಯವೇ ಬರಲಿಲ್ಲ.

ಮಬ್ಬುಗತ್ತಲಲ್ಲಿ ಚಿಕ್ಕತಾಯಮ್ಮ ಅಳುತ್ತಿರುವುದು ಕೇಳಿಸಿತು. ಆಕೆಯೆಡೆಗೆ ನೋಡಿ ಆಕೆಯ ತಲೆಯ ಮೇಲೆ ಕೈ ಆಡಿಸಿದ. ಆ ಕೈ ಹಿಡಿದುಕೊಂಡು ಆಕೆ ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದಳು.

`ನಮ್ ಜಾತಿ ಎಲ್ಲಾ ನಾಶ ಆಗೋಯ್ತು. ನಾವೇನ್ ಬ್ರಾಂಬರಾ ಸತ್ ಮೇಲೆ ಸುಡಿಸಿಕೊಳ್ಳೋಕೆ? ನಾವೇನ್ ಜಾತಿ ಕೆಟ್ಟಿದ್ದೀವಾ ಸುಟ್ಟು ಬೂದಿ ಆಗೋಕೆ?' ಚಿಕ್ಕತಾಯಮ್ಮ ಅಳುತ್ತಲೇ ಇದ್ದಳು.

ಆಕೆ ಚಿಕ್ಕವಳಾಗಿದ್ದಾಗ ಆಕೆಯ ತಾಯಿ ಹೇಳುತ್ತಿದ್ದುದು ನೆನಪಾಯಿತು. ಆಗ ಊರಿಗೆಲ್ಲಾ ಪ್ಲೇಗ್ ಬಂದಾಗ ಸತ್ತವರನ್ನೆಲ್ಲ ಜಾತಿಗೀತಿ ನೋಡದೆ ಗುಡ್ಡೆ ಹಾಕಿ ಸುಡುತ್ತಿದ್ದರಂತೆ. `ನಾನೇನ್ ರೋಗಿಷ್ಟೇನಾ ಸುಡೋಕೆ.........' ಎನ್ನಲು ಹೊರಟವಳಿಗೆ ಆಕೆಯೂ ರೋಗಿಷ್ಟೆ ಎನ್ನುವುದು ನೆನಪಾಗಿ ಸುಮ್ಮನಾದಳು. ತಮ್ಮಯ್ಯ ಕೈಬಿಡಿಸಿಕೊಂಡು ಎದ್ದು ಹೊರಬಂದು ಜಗುಲಿಯ ಮೇಲೆ ಕೂತು ಬೀಡಿ ಹಚ್ಚಿದ.

ಅಡಿಗೆ ಮನೆ ಮತ್ತು ರೂಮಿನಲ್ಲಿ ಲೈಟ್‌ಗಳು ಆಫ್ ಆದವು. ವೆಂಕಟೇಶನ ಊಟವಾಗಿರಬಹುದೆಂದುಕೊಂಡ ತಮ್ಮಯ್ಯ. `ನಾನ್ ಕಣ್ಣು ಮುಚ್ಚೋ ಮೊದಲು ಒಂದ್ ಮದ್ವೆ ಆಗಿ ಸೊಸೇನ್ ಮನೇಗ್ ಕರ್‍ಕೊಂಡು ಬಾ' ಎಂದು ಆಗಾಗ ಗೋಗರೆಯುತ್ತಿದ್ದಳು ಚಿಕ್ಕತಾಯಮ್ಮ. `ನಾನು ಟ್ಯಾಕ್ಸಿ ತಗೊಳ್ಳೋವರ್‍ಗೂ ಮದ್ವೆ ಆಗಲ್ಲ' ಎನ್ನುತ್ತಿದ್ದ ವೆಂಕಟೇಶ. ಅವನು ಮದುವೆ ಮುಂದೂಡಲು ಅದೊಂದೇ ಕಾರಣ ಅಲ್ಲ ಅಂತ ತಮ್ಮಯ್ಯನಿಗೆ ಗೊತ್ತಿತ್ತು. `ಮದ್ವೇ ಆಗಿ ಹೆಂಡ್ತೀ ಮನೇಗ್ ಬಂದ್ರೆ ಅವಳು ಅಮ್ಮನ ರಕ್ತದ ಬಟ್ಟೆಗಳು ಒಗೆಯೋದರ ಜೊತೆಗೆ ಅವಳ ಗಲೀಜು ಬಟ್ಟೆಗಳನ್ನೂ ಒಗೀಬೇಕಾಗ್ತದೆ ಅಂತ ಅವನಿಗೆ ಗೊತ್ತಿದೆ' ಎಂದು ತಮ್ಮಯ್ಯ ಯೋಚಿಸುತ್ತಿದ್ದ. ಹಾಗೇ ಯೋಚನೆಯಲ್ಲಿ ಯಾವಾಗ ಕಣ್ಣು ಮುಚ್ಚಿತೋ ಗೊತ್ತಿಲ್ಲ, ಕಣ್ಣುಬಿಟ್ಟಾಗ ಬೆಳಕಾಗಿತ್ತು. ಎದ್ದು ಹೆಂಡತಿಯ ಬಳಿ ಹೋದ. ಅವಳನ್ನು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ, ಮೈ ತೊಳೆದು ಬಟ್ಟೆ ಬದಲಿಸಬೇಕು. ಇಬ್ಬರೂ ಮಾತನಾಡಲಿಲ್ಲ. ಬೇರೆ ಬಟ್ಟೆ ತೊಡಿಸುತ್ತಿದ್ದಾಗ ಚಿಕ್ಕತಾಯಮ್ಮ ಹೇಳಿದಳು,

`ನನ್ನ ಅಮ್ಮ ಅಮ್ಮ ಅಪ್ಪನ ಸಮಾಧಿ ಹತ್ರ ಕರೆದುಕೊಂಡು ಹೋಗು'. ಕರೆದುಕೊಂಡು ಹೋಗೋದೆಲ್ಲಿ, ಎತ್ತಿಕೊಂಡು ಹೋಗಬೇಕು. ಹೇಗೆ ಅಂತ ತಮ್ಮಯ್ಯ ಯೋಚಿಸುವಷ್ಟರಲ್ಲಿ ಆಕೆಯೇ ಹೇಳಿದಳು, `ವೆಂಕಟೇಶನ್ನ ಎಬ್ಬಿಸು. ಅವನ ಆಟೋ ಅಲ್ಲೀವರ್‍ಗೆ ಹೋಗ್ತದೆ' ಎಂದಳು.

ತಮ್ಮಯ್ಯ ಆಕೆಯನ್ನು ಹೊತ್ತು ತಂದು ಜಗುಲಿಯ ಮೇಲೆ ದಿಂಬಿಟ್ಟು ಒರಗಿಸಿ ಕಂಬಳಿ ಹೊದೆಸಿ ಮಗನನ್ನು ಎಬ್ಬಿಸಿ ಕರೆತಂದರು. ವೆಂಕಟೇಶನಿಗೂ ಬೆಳಬೆಳಿಗ್ಗೆ ಆಕೆಯ ಆಸೆ ಅರ್ಥವಾಗಲಿಲ್ಲ. ಹಳ್ಳಿಯ ಕಲ್ಲುಮಣ್ಣಿನ ರಸ್ತೆ ಚಿಕ್ಕತಾಯಮ್ಮನ ಮೈಯನ್ನು ಅಲುಗಾಡಿಸಿಹಾಕಿತು. ಆಕೆಯ ಹೊಟ್ಟೆಯೊಳಗೆ ಕಲ್ಲಿನಿಂದ ಜಜ್ಜಿದಂತೆ ನೋವಾಗುತ್ತಿತ್ತು. ತುಟಿಕಚ್ಚಿ ನೋವು ತಡೆದಳು. ಆಕೆಯ ಅಮ್ಮ ಅಪ್ಪನ ಸಮಾಧಿಯ ಪಕ್ಕದಲ್ಲಿನ ಜಗುಲಿಯ ಮೇಲೆ ತಂದಿದ್ದ ದಿಂಬನ್ನು ಇಟ್ಟು ಆಕೆಯನ್ನು ಒರಗಿಸಿ ತಮ್ಮಯ್ಯ ಬೀಡಿ ಸೇದಲು ಒಂದಷ್ಟು ದೂರದಲ್ಲಿ ಕೂತ. ವೆಂಕಟೇಶ ಆಟೋ ನಿಲ್ಲಿಸಿ ಪೊದೆಗಳ ಹಿಂದೆ ಹೋದ.

ಬೆಳಗಿನ ಮಂಜು ಸಂಪೂರ್ಣವಾಗಿ ಹೋಗಿರಲಿಲ್ಲ. ದೂರದ ಎಲ್ಲವೂ ಮಸಕು ಮಸಕು. ಚಿಕ್ಕತಾಯಮ್ಮನಿಗೆ ಆ ಜಮೀನಿನಲ್ಲಿ ಸಾವಿರಾರು ಬಾರಿ ಓಡಾಡಿದ್ದರೂ ಆಕೆಗೆ ಆ ದಿನ ಎಲ್ಲ ಹೊಸದಾಗಿ ಕಾಣಿಸುತ್ತಿತ್ತು. ಕಾಯಿಲೆ ಬಿದ್ದು ಹಾಸಿಗೆ ಹಿಡಿದಾಗಿನಿಂದ ಆಕೆ ಇಲ್ಲಿಗೆ ಬಂದಿರಲಿಲ್ಲ. ಸುತ್ತಮುತ್ತಲೂ ಹೊಲಗದ್ದೆಗಳಿದ್ದರೂ ಎಲ್ಲವೂ ಬೀಳುಬಿದ್ದಿದ್ದವು. ಕೆಲವರ್ಷಗಳ ಹಿಂದೆಯಷ್ಟೇ ಎಲ್ಲವೂ ಹಚ್ಚ ಹಸುರಾಗಿದ್ದ ಹೊಲಗದ್ದೆಗಳು ಇಂದು ಲೇ‌ಔಟು, ಸೈಟುಗಳಾಗುತ್ತಿವೆ. ಭೂಮಿಯೊಳಗಿನ ಫಲವತ್ತಾದ ಮಣ್ಣನ್ನೆಲ್ಲ ಹೊಟ್ಟೆಯೊಳಗಿನ ಕರುಳು ಬಗೆದಂತೆ ಹೊರಹಾಕಿ ರಸ್ತೆ, ಚರಂಡಿ ಮಾಡಿದ್ದಾರೆ. ಆ ರಸ್ತೆ ಚರಂಡಿಗಳಲ್ಲಿ ಆಕೆಯ ಮನೆ, ಅಪ್ಪ ಅಮ್ಮನ ಸಮಾಧಿಗಳೆಲ್ಲವೂ ಮುಳುಗಿಹೋಗುತ್ತವೆನ್ನಿಸಿತು. ಬೀಸುವ ತಣ್ಣನೆ ಗಾಳಿ ಮಂಜಿನಿಂದಾಗಿ ಕೊಂಚ ಚಳಿಯೇ ಎನ್ನಿಸಿತು. ಹೊದೆದುಕೊಂಡಿದ್ದ ಕಂಬಳಿಯನ್ನು ಇನ್ನಷ್ಟು ಬಿಗಿಗೊಳಿಸಿಕೊಂಡು ಗುಬ್ಬಚ್ಚಿಯಂತಾದಳು. ಲೇ‌ಔಟುಗಳಾಗುತ್ತಿದ್ದ ಹೊಲಗದ್ದೆಗಳೆಲ್ಲವೂ ಚಿಕ್ಕತಾಯಮ್ಮನಿಗೆ ಒಂದು ದೊಡ್ಡ ಸ್ಮಶಾನದಂತೆ ಕಾಣಿಸತೊಡಗಿತು, ಸೈಟುಗಳನ್ನು ಗುರುತಿಸಲು ಹಾಕಿರುವ ಕಲ್ಲುಗಳು ಸಮಾಧಿಯ ತಲೆಕಲ್ಲುಗಳ ಹಾಗೆ..............