ಗುರುವಾರ, ಅಕ್ಟೋಬರ್ 27, 2011

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ- ತೊಮಸ್ ತ್ರಾನ್ಸ್ತ್ರೋಮರ್


ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ `ಶಬ್ದ'ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ. ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011 ಸಾಹಿತ್ಯ ನೋಬೆಲ್ ಪಾರಿತೋಷಕ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರ ನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರ ಬಹುಮಾನ ತೊಮಸ್ಗೆ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷ ಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್ಗೇ ದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರು ಕಾದಿರುತ್ತಿದ್ದರಂತೆ.

ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿ ಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ. ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತ ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆ ಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆ ಕಂಡುಕೊಳ್ಳಬೇಕು' ಎನ್ನುತ್ತಾನೆ ತೊಮಸ್.

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

(ಫ್ರಂ ಮಾರ್ಚ್ 1979 ಪದ್ಯದಿಂದ)

ತೊಮಸ್ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿ ಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ. ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿ ಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆ ಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಪ್ರತಿಮೆಗಳು ಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿ ಮಾಡಬೇಕಾದುದು ಅದನ್ನೇ.' ತೊಮಸ್ ತನ್ನ ಪದ್ಯಗಳನ್ನು `ಭೇಟಿಯ ತಾಣಗಳು' ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು, ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ, ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಕ್ಷಣವೇ ರೂಪುಗೊಳ್ಳುವ ಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ.

ಎಂಭತ್ತು ವರ್ಷದ ತೊಮಸ್ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆ ಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂ ಸಚ್ಚಿದಾನಂದನ್ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನ ಮಾಡಿದ್ದರೆಂದು ಸಚ್ಚಿದಾನಂದನ್ರವರೇ ಹೇಳಿದ್ದಾರೆ.

ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931 ಏಪ್ರಿಲ್ 15ರಂದು. ತನ್ನ ತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿ ತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತ ಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನ ಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು' ಪ್ರಕಟಿಸಿದ. 1956ರಲ್ಲಿ ಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದು ಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತ ಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನ ಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆ ಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು. ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನ ಕೃತಿಯೆಂದರೆ 2004ರಲ್ಲಿ ಪ್ರಕಟವಾದ ` ಗ್ರೇಟ್ ಎನಿಗ್ಮಾ'. ಕಾವ್ಯದ ರಚನೆಯ ಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂ ಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನ ಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. `ತನ್ನ ಸಾಂದ್ರ, ಪಾರದೀಪಕ ಆಕೃತಿಗಳ ಮೂಲಕ ವಾಸ್ತವಕ್ಕೆ ತಾಜಾ ಪ್ರವೇಶ ನೀಡುತ್ತಾನೆ' ಎಂದು ನೋಬೆಲ್ ಪ್ರಶಸ್ತಿ ಪ್ರಕಟಿಸಿದ ನೋಬೆಲ್ ಸಮಿತಿಯು ಹೇಳಿದೆ.


ತೊಮಸ್ ತ್ರಾನ್ಸ್ತ್ರೋಮರ್ರವರ ಕೆಲವು ಪದ್ಯಗಳು

ಇಂಗ್ಲಿಷಿನಿಂದ ಕನ್ನಡಕ್ಕೆ ಡಾ.ಜೆ.ಬಾಲಕೃಷ್ಣ

ಯಾರದೋ ಸಾವಿನ ನಂತರ

ಒಮ್ಮೆ ತೀವ್ರ ಆಘಾತವಾಗಿತ್ತು

ಧೂಮಕೇತು ತನ್ನ ಅಷ್ಟುದ್ದದ ಮಂಕು ಬಾಲವನ್ನು ಬಿಟ್ಟುಹೋದ ಹಾಗೆ.

ಅದರಲ್ಲಿ ನಾವಿದ್ದೇವೆ. ಅದು ಟಿ.ವಿ. ಚಿತ್ರಗಳನ್ನು ಮಸುಕಾಗಿಸುತ್ತದೆ.

ಆಂಟೆನ್ನಾಗಳ ಮೇಲೆ ಕೂತ ಶೀತಲ ಮಂಜಿನ ಹನಿಗಳಂತೆ.

ಚಳಿಗಾಲದ ಬಿಸಿಲ ಹಿಮದಲ್ಲಿ ನೀನು ಜಾರುವಾಟ ಆಡಬಹುದು

ಕಳೆದ ವರ್ಷದ ಎಲೆಗಳು ಉದುರದೇ ಅಂಟಿಕೊಂಡಿರುವ ಪೊದೆಗಳ ನಡುವೆ.

ಅವು ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳಂತೆ

ಆದರೆ ಹೆಸರುಗಳನ್ನು ಚಳಿಯು ತಿಂದುಹಾಕಿದೆ.


ನಿನ್ನ ಎದೆ ಮಿಡಿಯುವುದನ್ನು ಆಲಿಸುವುದು ಇನ್ನೂ ಸುಂದರ.

ಆದರೆ ಕೆಲವೊಮ್ಮೆ ನೆರಳೇ ದೇಹಕ್ಕಿಂತ ಹೆಚ್ಚು ವಾಸ್ತವವೆನ್ನಿಸುತ್ತದೆ.

ಸಮುರಾಯ್ ಗೌಣ ಎನ್ನಿಸುತ್ತಾನೆ

ತನ್ನ ಕಪ್ಪು ಡ್ರ್ಯಾಗನ್ ಶಲ್ಕ ರಕ್ಷಾ ಕವಚದ ಪಕ್ಕದಲ್ಲಿ.

ಮಾರ್ಚ್ 1979ರಿಂದ

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

ಒಂಟಿತನ (1)

ಫೆಬ್ರವರಿಯ ರಾತ್ರಿ, ನಾನು ಇನ್ನೇನು ಸತ್ತೇ ಹೋಗಿದ್ದೆ.

ನನ್ನ ಕಾರು ಸರಕ್ಕನೆ ನಡುಗಿ ರಸ್ತೆಬದಿಯ ಹಿಮದ ಮೇಲೆ ಜಾರಿತ್ತು,

ನೇರ ಪಕ್ಕದ ರಸ್ತೆಗೆ. ಟ್ರಾಫಿಕ್ಕಿನ ಜನ ಶಪಿಸುತ್ತಾ

ನನ್ನೆಡೆಗೆ ಬಂದರು ತಮ್ಮ ಟಾರ್ಚ್ಗಳನ್ನು ಹಿಡಿದು.

ನನ್ನ ಹೆಸರು, ನನ್ನ ಗೆಳತಿಯರು, ನನ್ನ ಉದ್ಯೋಗ, ಎಲ್ಲವೂ

ನನ್ನಿಂದ ಜಾರಿ ತೇಲುತ್ತಾ ದೂರ ದೂರ ಸಾಗಿತು, ಕಿರಿದಾಗುತ್ತ.

ನಾನು- ನಾನ್ಯಾರೂ ಆಗಿರಲಿಲ್ಲ:

ಆಟದ ಮೈದಾನದಲ್ಲಿ ಬಿದ್ದ ಬಾಲಕನಂತೆ, ಇದ್ದಕ್ಕಿದ್ದಂತೆ ಎಲ್ಲರೂ ಸುತ್ತುವರಿದಂತೆ.

ಎದುರಿನಿಂದ ಬರುವ ಕಾರುಗಳ ಹೆಡ್ಲೈಟುಗಳು

ನೇರ ನನ್ನನ್ನು ಇರಿಯುತ್ತಿದ್ದವು, ಮೊಟ್ಟೆಯ ಜಿಗುಟು ಬಿಳುಪಿನಂಥ

ಭಯದ ತತ್ತರದಿಂದ ಬಿಡಿಸಿಕೊಳ್ಳಲು ಯತ್ನಿಸಿದೆ,

ತಟಸ್ಥ ಕಾರಿನ ಸ್ಟೀರಿಂಗ್ ಅತ್ತಿತ್ತ ತಿರುಗಿಸಿದೆ.

ಒಂದೊಂದು ಕ್ಷಣವೂ ದೀರ್ಘವಾಗುತ್ತಾ ಹೋಯಿತು

- ನನಗೆ ಹೆಚ್ಚು ಹೆಚ್ಚು ಸ್ಥಳಾವಕಾಶ ನೀಡುತ್ತಾ

- ಆಸ್ಪತ್ರೆಗಳಂತೆ ವಿಸ್ತಾರವಾಗುತ್ತಾ.

ಆಘಾತಕ್ಕೆ ಮುನ್ನ

ಒಂದರೆಕ್ಷಣ ಹಾಗೆಯೇ ವಿರಮಿಸಬಹುದು

ಆಳವಾಗಿ ಉಸಿರೆಳೆದುಕೊಂಡು.

ಆಗ ಮತ್ತೇನೋ ಸಿಕ್ಕಿಕೊಂಡಿತು: ಸಹಾಯಕಾರಿ ಮರಳೋ

ಅಥವಾ ಸಮಯಕ್ಕೆ ಸರಿಯಾಗಿ ಬೀಸಿದ ಜೋರಾದ ಗಾಳಿಯೋ.

ಸರಕ್ಕನೆ ಜಾರಿದ ಕಾರು, ಓಲಾಡಿ ರಸ್ತೆಗೆ ಬಿತ್ತು.

ಕಂಬವೊಂದಕ್ಕೆ ಬಡಿದು ಕಿರುಗುಟ್ಟಿತು,

ಟಣ್ಣನೆ ಸದ್ದು ಮಾಡಿದ ಕಂಬ ಕತ್ತಲಲ್ಲಿ ಮರೆಯಾಯಿತು.

ನಂತರ ಇದ್ದಕ್ಕಿದ್ದಂತೆ ನೀರವ. ಸೀಟು ಬೆಲ್ಟಿನ ಬಂಧಿ ನಾನು

ಹಾಗೂ ಇನ್ನು ನನ್ನದೇನು ಉಳಿದಿದೆ

ಎಂದು ನೋಡಲು ಸುರಿಯುವ ಹಿಮದಲ್ಲಿ ನನ್ನೆಡೆಗೆ

ಹೆಜ್ಜೆ ಹಾಕುವವರ ನೋಡುತ್ತಾ ಒರಗಿ ಕೂತೆ.

ಒಂಟಿತನ (2)

ಹಿಮದಿಂದ ಹೆಪ್ಪುಗಟ್ಟಿದ ಪೂರ್ವ ಗೋತ್ ಲ್ಯಾಂಡಿನ

ಬಯಲುಗಳಲ್ಲಿ ಬಹಳಷ್ಟು ಓಡಾಡಿದ್ದೇನೆ.

ಅಲ್ಲಿ ಯಾರೊಬ್ಬರನ್ನೂ ಕಂಡಿಲ್ಲ.

ಜಗತ್ತಿನ ಇತರ ಭಾಗಗಳಲ್ಲಿ

ಜನ ಹುಟ್ಟುತ್ತಿರುತ್ತಾರೆ, ಬದುಕುತ್ತಾರೆ ಮತ್ತು ಸಾಯುತ್ತಾರೆ

ನಿರಂತರ ಕಾಲಚಕ್ರದ ಜನಜಂಗುಳಿಯಲ್ಲಿ.

ಸದಾಕಾಲ ಕಾಣಲು - ಬದುಕಲು

ದಿಟ್ಟಿಸುವ ಕಂಗಳ ರಾಶಿಯೆದುರು -

ನೀನು ವಿಶೇಷ ಚರ್ಯೆ ರೂಢಿಸಿಕೊಳ್ಳಬೇಕು.

ಜೇಡಿಮಣ್ಣು ಮೆತ್ತಿದ ಮುಖ.

ಅವರು ಆಕಾಶ, ನೆರಳುಗಳನ್ನು, ಮರಳ ಕಣಗಳನ್ನು

ತಮ್ಮ ತಮ್ಮ ನಡುವೆಯೇ ಹಂಚಿಕೊಳ್ಳುವಾಗ

ಅವರ ಗೊಣಗಾಟದ ದನಿಯಲ್ಲಿ ಏರುಪೇರಾಗುತ್ತಿರುತ್ತದೆ.

ನಾನು ಒಂಟಿಯಾಗಿರಬೇಕು

ಹತ್ತು ನಿಮಿಷ ಪ್ರತಿ ದಿನ ಬೆಳಿಗ್ಗೆ

ಹಾಗೂ ಹತ್ತು ನಿಮಿಷ ಸಂಜೆ.

- ಏನೊಂದೂ ಕಾರ್ಯಕ್ರಮವಿಲ್ಲದೆ.

ಪ್ರತಿಯೊಬ್ಬರೂ ಪ್ರತಿಯೊಬ್ಬರ ಬಾಗಿಲು ಎದುರು ಸಾಲುಗಟ್ಟುತ್ತಿದ್ದಾರೆ.

ಹಲವರು.

ಒಬ್ಬರು.

ಜೋಡಿ

ಅವರು ಲೈಟು ಆರಿಸಿದಂತೆ, ಅದರ ಬಿಳಿ ಗೋಳದ ಪ್ರಕಾಶ

ಕ್ಷಣಕಾಲ ಹೊಳೆದು ಕ್ರಮೇಣ ಕರಗುತ್ತದೆ, ಕತ್ತಲ

ಗ್ಲಾಸಿನೊಳಗೆ ಕರಗುವ ಮಾತ್ರೆಯಂತೆ. ಆಗ ಜಾಗೃತವಾಗುತ್ತದೆ.

ಹೋಟೆಲಿನ ಗೋಡೆಗಳು ಸ್ವರ್ಗದ ಕತ್ತಲಿನೆಡೆಗೆ ಭುಗಿಲೇಳುತ್ತವೆ.

ಅವರ ತೊನೆದಾಟ ನಿಧಾನವಾದಂತೆ, ಹಾಗೆಯೇ ನಿದ್ರಿಸುತ್ತಾರೆ,

ಆದರೆ ಅವರ ರಹಸ್ಯ ಆಲೋಚನೆಗಳು ತಮ್ಮ ಭೇಟಿ ಆರಂಭಿಸುತ್ತವೆ

ಶಾಲಾಬಾಲಕನ ವರ್ಣಚಿತ್ರದ ತೇವದ ಕಾಗದದ ಮೇಲೆ ಎರಡು ಬಣ್ಣಗಳು

ಬೆರೆತು ಜೊತೆಗೆ ಹರಿಯುವಂತೆ.

ನೀರವ ಕತ್ತಲು ಆವರಿಸಿದೆ. ನಗರ ರಾತ್ರಿಗೆ ಹತ್ತಿರ ಹತ್ತಿರವಾಗುತ್ತಿದೆ.

ಮುಚ್ಚಿದ ಕಿಟಕಿಗಳ ಮನೆಗಳು ಒಂದುಗೂಡಿವೆ.

ಒಂದರ ಪಕ್ಕ ಒಂದು ನಿಂತು ಸಾಲುಗಟ್ಟಿ

ಶೂನ್ಯ ಮುಖಗಳ ಜನಜಂಗುಳಿಯ ಬಳಿ ಕಾಯುತ್ತಿವೆ.

ಇನ್ನೂ ಒಳಗೆ

ನಗರದ ಮುಖ್ಯ ರಸ್ತೆಯಲ್ಲಿ

ಸೂರ್ಯ ಇನ್ನೇನು ಮುಳುಗಲಿರುವಾಗ

ವಾಹನ ದಟ್ಟಣೆ ಹೆಚ್ಚಾಗಿ, ತೆವಳತೊಡಗುತ್ತದೆ.

ಅದೊಂದು ಮಂದಗತಿಯ ಹೊಳೆಯುವ ರಕ್ಕಸ.

ರಕ್ಕಸನ ಒಂದು ಶಲ್ಕ ನಾನು.

ಇದ್ದಕ್ಕಿದ್ದಂತೆ ಕಡುಗೆಂಪು ಸೂರ್ಯ

ನನ್ನ ಕಾರಿನ ಗಾಜಿನ ನಟ್ಟನಡುವೆ

ಒಳನುಸುಳುತ್ತಾನೆ.

ನಾನು ಪಾರದರ್ಶಕವಾಗಿದ್ದೇನೆ

ನನ್ನ ಬರಹ ನನ್ನೊಳಗೆ ಕಾಣುತ್ತಿದೆ

ಬೆಂಕಿಗೆ ಹಿಡಿದ ಕಾಗದದಲ್ಲಿ ಕಾಣುವ

ಅದೃಶ್ಯ ಇಂಕಿನ ಪದಗಳಂತೆ!

ನನಗೆ ಗೊತ್ತಿದೆ, ನಗರದಿಂದ

ನಾನು ದೂರ ನಡೆಯಬೇಕು ಹಾಗೂ

ಈಗ ಕಾಡಿಗೆ ಹೋಗುವ ಸಮಯವಾಗಿದೆ

ಬಿಲಕರಡಿಯ ಹೆಜ್ಜೆಗುರುತನ್ನು ಅನುಸರಿಸಿ.

ಕತ್ತಲಾಗಿದೆ, ಏನೂ ಕಾಣದು.

ಅಲ್ಲೇ ಕಾಡಿನ ಸುರುಗಿನ ಮೇಲೆ ಕಲ್ಲುಗಳಿವೆ.

ಕಲ್ಲುಗಳಲ್ಲೊಂದು ಅಮೂಲ್ಯವಾದದ್ದು.

ಅದು ಎಲ್ಲವನ್ನೂ ಬದಲಿಸಬಲ್ಲದು

ಕತ್ತಲು ಹೊಳೆಯುವಂತೆ ಮಾಡಬಲ್ಲದು.

ಇಡೀ ದೇಶಕ್ಕೆ ಅದೊಂದು ಸ್ವಿಚ್ ಇದ್ದಹಾಗೆ.

ಅದನ್ನವಲಂಬಿಸಿದೆ ಎಲ್ಲವೂ.

ಒಮ್ಮೆ ನೋಡಿ ಅದನ್ನು ಒಮ್ಮೆ ಮುಟ್ಟಿ...

ಆಕಾಶ ಮತ್ತು ಮರ

ಧೋ ಎಂದು ಸುರಿಯುವ ಮಳೆಯಲ್ಲಿ ಮರವೊಂದು ನಡೆದಾಡುತ್ತಿದೆ,

ನಮ್ಮನ್ನೂ ಲೆಕ್ಕಿಸದೆ ಬಿರಬಿರನೆ ಮುಂದೆ ನಡೆದುಹೋಯಿತು.

ಅದಕ್ಕೇನೋ ತುರ್ತು ಕೆಲಸವಿರಬೇಕು. ದ್ರಾಕ್ಷಾ ತೋಟದಲ್ಲಿನ

ಕರಿಯುಲಿಗ ಪಕ್ಷಿಯಂತೆ ಮಳೆಯಿಂದ

ಜೀವರಸ ಸಂಗ್ರಹಿಸುತ್ತಿದೆ.

ಮಳೆ ನಿಂತಾಗ, ಮರವೂ ನಿಂತಿತು.

ಅಲ್ಲಿ ನೋಡಿ, ಶುಭ್ರ ರಾತ್ರಿಯಲ್ಲಿ ನಿಶ್ಶಬ್ದವಾಗಿ ಕಾಯುತ್ತಿದೆ

ಕ್ಷಣ ನಾವು ಕಾಯುತ್ತಿರುವಂತೆ

ಆಗಸದಲ್ಲಿ ಹಿಮದ ಹೂಗಳು ಅರಳಲು.

-ಮೇಲ್: j.balakrishna@gmail.com