ಗುರುವಾರ, ಜುಲೈ 14, 2022

ಹ.ಸೋಮಶೇಖರ್ ಬರೆಹ- ಅಂಕುರ ಪತ್ರಿಕೆಯ ಲೇಖನ




ನಾಲ್ಕು ದಶಕಗಳ ಹಿಂದೆ, ೧೯೮೦ರ ದಶಕದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ನಾವು ಕನ್ನಡ ಬಳಗ ಎಂಬ ಸಂಸ್ಥೆ ರಚಿಸಿಕೊಂಡು ಅದರ ಮೂಲಕ ʻಅಂಕುರʼ ಎಂಬ ವಿದ್ಯಾರ್ಥಿ ಮಾಸಪತ್ರಿಕೆ ತರುತ್ತಿದ್ದೆವುಆ ಕನ್ನಡ ಪತ್ರಿಕೆ ವಿದ್ಯಾರ್ಥಿ-ಅಧ್ಯಾಪಕರಲ್ಲಿ ಬಹಳ ಜನಪ್ರಿಯವಾಗಿತ್ತು. ಆ ಪತ್ರಿಕೆಯನ್ನು ನಿಯತವಾಗಿ ೪ ವರ್ಷಗಳ ಕಾಲ ಸಂಪಾದಿಸಿ, ಅಚ್ಚು ಹಾಕಿಸಿ (ಯಾವುದೇ ಕಂಪ್ಯೂಟರ್‌, ಡಿ.ಟಿ.ಪಿ. ಇರಲಿಲ್ಲ), ಮಾರಾಟ ಮಾಡಿದೆವು. ಬಹಳಷ್ಟು ಸಾರಿ ನನ್ನ ಮೆಸ್‌ ಬಿಲ್‌ ಹಣ ಮುದ್ರಣಕ್ಕೆ ನೀಡಿ, ಮಾರಾಟದ ನಂತರ ನನ್ನ ಹಣವನ್ನು ವಾಪಸ್ಸು ಪಡೆಯುತ್ತಿದ್ದೆ. ಕನ್ನಡ ಬಳಗ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿತ್ತು. ಒಂದು ವಿದ್ಯಾರ್ಥಿಗಳ ಪ್ರಾತಿನಿಧಿಕ ಕವನ ಸಂಕಲನ ʻಗುಲ್ಮೊಹರ್‌ ಅಕ್ಷರಗಳಾದಾಗʼ ಹೊರತಂದೆವು. ಅಂತರ ಆವರಣ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಿದೆವು (ಆಗ ಕರ್ನಾಟಕಕ್ಕೆಲ್ಲಾ ಒಂದೆ ಕೃಷಿ ವಿಶ್ವವಿದ್ಯಾಲಯವಿತ್ತು). ʻಅಂಕುರʼ ಪತ್ರಿಕೆಯಲ್ಲಿ ಕತೆ ಮತ್ತು ಕವನ ಸ್ಪರ್ಧೆಗಳನ್ನು ಏರ್ಪಡಿಸಿದೆವು. ಯುದ್ಧ ವಿರೋಧಿ ಸಿನೆಮಾ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಿದೆವು. ವಿಶ್ವವಿದ್ಯಾನಿಲಯದ ಕುಲಪತಿಗಳ ಸಂದರ್ಶನಗಳನ್ನು ನಡೆಸಿ ಬೋಧನೆ, ಸಂಶೋಧನೆಯಲ್ಲಿನ ಕುಂದುಕೊರತೆಗಳ ಕುರಿತು ಚರ್ಚಿಸಿದೆವು. ನಾನು ಅದರ ಪ್ರಧಾನ ಸಂಪಾದಕನಾಗಿದ್ದ ನವೆಂಬರ್-ಡಿಸೆಂಬರ್‌ ೧೯೮೨ರ ಸಂಚಿಕೆಯಲ್ಲಿ ಸಮಾಜವಾದಿ-ಲೋಹಿಯಾವಾದಿಯಾಗಿದ್ದ ಹಿರಿಯ ಗೆಳೆಯ ಹ.ಸೋಮಶೇಖರ್‌ ರವರು "ಆರೆಸ್ಸೆಸ್ ಮತ್ತು ಅದರ ಜನಾಂಗವಾಹಿ ಧೋರಣೆಗಳು" ಎಂಬ ಲೇಖನ ಬರೆದರು. ಅದರ ಜೊತೆಗೇ ನಮ್ಮ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ.ಮುಮ್ತಾಜ್‌ ಅಲಿ ಖಾನ್‌ ರವರೊಂದಿಗೆ ಚರ್ಚಿಸಿ ʻಜಮಾತ್‌ -- ಇಸ್ಲಾಮಿಯʼ ಕುರಿತ ಲೇಖನವೊಂದನ್ನು ಬರೆಸಿದೆವು. ಆರ್‌ .ಎಸ್.ಎಸ್.‌ ಕುರಿತ ಸೋಮಶೇಖರ್ ರವರ ಲೇಖನಕ್ಕೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಬಹಳ ತೀಕ್ಷ್ಣವಾಗಿತ್ತು. (ಆಗ ಆವರಣದಲ್ಲಿ ಆರ್.ಎಸ್.ಎಸ್.‌ ಶಾಖೆ ನಡೆಯುತ್ತಿತ್ತು). ಸಂಪಾದಕನಾಗಿದ್ದ ನನ್ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಬಂದವರಿಗೆಲ್ಲ ಅದನ್ನು ಲಿಖಿತ ರೂಪದಲ್ಲಿ ನೀಡಲು ತಿಳಿಸಿ ನಂತರದ ಎರಡು ಸಂಚಿಕೆಗಳಲ್ಲಿ ಆ ಅನಿಸಿಕೆ/ಅಭಿಪ್ರಾಯಗಳನ್ನು ಪ್ರಕಟಿಸಿದೆವು. ಅವುಗಳಿಗೆ ಹ.ಸೋಮಶೇಖರ್‌ ಉತ್ತರ ಸಹ ನೀಡಿದರು. ಅದನ್ನೂ ಪ್ರಕಟಿಸಿದೆವು. ಆ ಲೇಖನ ಮತ್ತು ಎಲ್ಲ ಪ್ರತಿಕ್ರಿಯೆಗಳು ನಲವತ್ತು ವರ್ಷಗಳ ಹಿಂದಿನದಾದರೂ ಇಂದಿನ ದೇವನೂರು ಮಹಾದೇವನವರ "ಆರ್.ಎಸ್.ಎಸ್.‌ ಆಳ ಮತ್ತು ಅಗಲ" ಪುಸ್ತಕದ ಕುರಿತಂತೆ ನಡೆಯುತ್ತಿರುವ ಚರ್ಚೆಗೆ ಪೂರಕವಾಗಿರುವಂತಿವೆ. ಆದುದರಿಂದ ಅವುಗಳನ್ನು ನನ್ನ ಬ್ಲಾಗ್‌ ನಲ್ಲಿ ಹಂಚಿಕೊಂಡಿದ್ದೇನೆ. ಓದಿ ಪ್ರತಿಕ್ರಿಯಿಸಿ.

 ಆರೆಸ್ಸೆಸ್ ಮತ್ತು ಅದರ ಜನಾಂಗವಾಹಿ ಧೋರಣೆಗಳು

-ಹ, ಸೋಮಶೇಖರ್‌, ಅಂಕುರನವೆಂಬರ್-ಡಿಸೆಂಬರ್‌ ೧೯೮೨

ರಾಷ್ಟ್ರೀಯ ಚಳುವಳಿಯ ನಾಯಕತ್ವವನ್ನು ಹೇಗಾದರೂ ಮಾಡಿ ದಮನಮಾಡಬೇಕೆಂಬ ಹಾಗೂ ಸ್ವಾತಂತ್ರೋತ್ತರದ ಭಾರತದಲ್ಲಿ ಮೇಲ್ಮಾತಿಗಳ ಏಕ ಸ್ವಾಮ್ಯವನ್ನು ಉಳಿಸಿಕೊಳ್ಳಬೇಕೆಂಬ ಹಿಂದೂ ಕೋಮು ವಾದಿಗಳ ಚಾರಿತ್ರಿಕ ಅನಿವಾರತೆಯಾಗಿ ಆರ್. ಎಸ್. ಎಸ್. ರೂಪುಗೊಂಡಿತು

 ಗೆಳೆಯರೇ, ಆರ್.ಎಸ್.ಎಸ್. ಶುದ್ಧ ಸಾಂಸ್ಕೃತಿಕ ಸಂಘಟನೆಯೋ ಅಥವಾ ಮಹತ್ವಾಕಾಂಕ್ಷೆಯುಳ್ಳ ರಾಜಕೀಯ ಸ್ವರೂಪದ ಸಂಘಟನೆಯೋ? ಎಂಬ ಚರ್ಚೆ ಇತ್ತೀಚೆಗಂತೂ ತೀವ್ರವಾಗಿದೆ. ಆದರೆ ಆರ್.ಎಸ್.ಎಸ್. ಇಂದು ಪರಿವರ್ತನ ಹಂತದಲ್ಲಿರುವ ಒಂದು ಗತಿಶೀಲ ಸಂಘಟನೆಯೆಂದು ವಾದಿಸುವರು ಇದ್ದಾರೆ. ಆದರೆ ನನ್ನ ಪ್ರಕಾರ ಇದು ಅಂದು ರಾಷ್ಟ್ರೀಯ ವಾದಿಗಳ ಚಳುವಳಿಯ ನಾಯಕತ್ವವನ್ನು ಹೇಗಾದರೂ ಮಾಡಿ ದಮನ ಮಾಡಬೇಕೆಂಬ ಹಾಗೂ ಸ್ವಾತಂತ್ರೋತ್ತರದ ಭಾರತದಲ್ಲಿ ಮೇಲ್ಮಾತಿಗಳ ಏಕಸ್ಸಾಮ್ಯವನ್ನು ಉಳಿಸಿಕೊಳ್ಳಬೇಕೆಂಬ ಹಿಂದೂ ಕೋಮುವಾದಿಗಳ ಚಾರಿತ್ರಿಕ ಅನಿವಾರ್ಯತೆಯಾಗಿ ರೂಪುಗೊಂಡಿತು. ಅಂದರೆ 1925ರ ವಿಜಯದಶಮಿಯಂದು ಡಾ|| ಕೇಶವಬಲೀರಾಮ ಹೆಡಗೆವಾರರು ಆರ್.ಎಸ್.ಎಸ್. ನ್ನು ಸ್ಥಾಪನೆ ಮಾಡಿದರು. ನಂತರ ಆರ್.ಎಸ್.ಎಸ್.ನ ತಾತ್ವಿಕ ಚಿಂತಕರು ಎಂದೇ ಪ್ರಸಿದ್ಧರಾಗಿದ್ದ ಗೋಲ್ವಾಲ್ಕರ್ ಉರುಫ್ ಗುರೂಜಿಯವರು ಇದನ್ನು ಅತ್ಯಂತ ಜನಾಂಗಷಾಹಿ (ಫ್ಯಾಸಿಸ್ಟ್) ಸ್ವರೂಪದಲ್ಲಿ ಬೆಳೆಸಿದರು.

 ಆರ್.ಎಸ್.ಎಸ್. ಮತ್ತು ರಾಜಕಾರಣ?

 ಆರ್.ಎಸ್.ಎಸ್. ಭಾರತದ ರಾಜಕಾರಣದಲ್ಲಿ ಯಾವ ಸ್ವರೂಪದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂಬುದು ಸಂಕೀರ್ಣವಾದ ವಿಚಾರಲ್ಲದಿದ್ದರೂ ಅಸ್ಪಷ್ಟವಾಗಿದೆ ಏಕೆಂದರೆ ಸನಾತನ ವಾದಿಗಳು ಮತಾಂಧರು ಊಳಿಗಮಾನ್ಯ ಮೌಲ್ಯಗಳನ್ನು ಪುನರ್ ಪ್ರತಿಷ್ಠಾಪಿಸುವುದಕ್ಕೆ ಕಂಕಣಬದ್ಧರಾಗಿರುವ ಪ್ರತಿಕ್ರಿಯಾತ್ಮಕವಾದಿಗಳು ಇಂದು ಆರ್.ಎಸ್.ಎಸ್. ಜೊತೆ ಸದಾ ಆಂತರಿಕ ಮೈತ್ರಿ ಹೊಂದಿರುತ್ತಾರೆ ಅಂದರೆ ಕಾಂಗೈ, ಜನತಾ ಮುಂತಾದ ಪ್ರಜಾಪ್ರಭುತ್ವವಾದಿ ಮೌಲ್ಯಗಳಿಗೆ ಬದ್ಧರಾಗಿದ್ದೇವೆಂದು ಹೇಳಿ ಕೊಳ್ಳುವ ಪಕ್ಷಗಳಲ್ಲಿ ಸಹಾ ಇಂದು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿವೆ. ಆದರೆ ಕಾಂಗೈ-ಜನತಾ ಆರ್.ಎಸ್. ಎಸ್. ಮತ್ತು ಇವರ ರಾಜಕೀಯ ಮುಖವಾದ ಭಾ.ಜ.ಪ.ಗಳಿಗಿಂತ ವಿಭಿನ್ನವಾಗಿದ್ದೇವೆಂದು ಕೆಲವು ಹಂತಗಳಲ್ಲಿ ತೋರಿಸಿಕೊಂಡರೂ ಮೂಲ ಭೂತವಾಗಿ ಈ ಪಕ್ಷಗಳು ಪ್ರಜಾಪ್ರಭುತ್ವ ವಿರೋಧಿ ಪಕ್ಷಗಳಾಗಿರುವುದರಿಂದ ಇವುಗಳ ಒಳಸಂಬಂಧಗಳ ಬಗ್ಗೆ ನಾವೇನು ಆಶ್ಚರ್ಯಪಡಬೇಕಾಗಿಲ್ಲ ಹಿಂದೆ ಜನಾಂಗಷಾಹಿ ಧೋರಣೆಯನ್ನು ನೇರ ಪ್ರತಿಪಾದಿಸುತ್ತಿದ್ದ ಜನಸಂಘ ಇಂದು ಐತಿಹಾಸಿಕ ಅನಿವಾರ್ಯತೆಯಿಂದಾಗಿ 'ಗಾಂಧೀ ಪ್ರಣೀತ ಸಮಾಜವಾದದ' ಸೋಗು ಹಾಕುತ್ತಿದೆ. ಕಾಂಗೈ ರಾಜಷಾಹಿ ಸಂಸ್ಕೃತಿಯ ಪ್ರತಿಪಾದನೆಯು ಪರಾಕಾಷ್ಠೆ ಮುಟ್ಟಿದೆ. ಇಂದಿರಾ ಗಾಂಧಿ ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವವಾದಿಯೋ, ಅಷ್ಟರಮಟ್ಟಿಗೆ ಅಟಲ್ ಬಿಹಾರಿ ವಾಜಪೇಯಿಯು ಸಹಾ ಪ್ರಜಾ ಪ್ರಭುತ್ವವಾದಿಯೇ ಆದ್ದರಿಂದ ಪ್ರತಿಗಾಮಿ ಶಕ್ತಿಗಳು ಇಂದು ಆರ್.ಎಸ್.ಎಸ್.ನಲ್ಲಿ ಸನಾತನ ಮೌಲ್ಯಗಳ ಪುನರ್‌ ಪ್ರತಿಷ್ಠಾಪನೆಗೆ ಕಂಕಣಬದ್ಧರಾಗಿದ್ದರೆ. ಇದೇ ಕೆಲಸವನ್ನು ಸ್ವಲ್ಪ ನಾಜೂಕಿನ ರೂಪದಲ್ಲಿ ಕಾಂಗೈ-ಜನತಾಗಳು ನಿರ್ವಹಿಸುತ್ತಿವೆ ಅಂದರೆ ಇವು ಬೂರ್ಜ್ವಾ ಮೌಲ್ಯಗಳನ್ನು ಪ್ರತಿಷ್ಠಾಪಿಸುವುದಕ್ಕೆ ಹೆಚ್ಚು ಮಹತ್ವ ಕೊಟ್ಟಿವೆಯಷ್ಟೆ. ಆದ್ದರಿಂದ ಆರ್.ಎಸ್.ಎಸ್. ಇಂದು ಕಾಂಗೈ-ಜನತಾ ಹಾಗೂ ಅದರ ಮುಖ್ಯ ರಾಜಕೀಯ ಮುಖವಾದ ಭಾ.ಜಪ.ದ ಮೂಲಕ ಅಧಿಕಾರ ಗ್ರಹಣಕ್ಕಾಗಿ ಶತಾಯುಗತಾಯ ಪ್ರಯತ್ನಿಸುತ್ತಿದೆ. ಆದ್ದರಿಂದ ಆರ್.ಎಸ್.ಎಸ್. ನೇರವಾಗಿ ರಾಜಕಾರಣದೊಂದಿಗೆ ಸಂಪರ್ಕಹೊಂದಲು ಇಷ್ಟ ಪಡದಿದ್ದರೂ ಇದು ಒತ್ತಡ ಗುಂಪಾಗಿಕೆಲಸ ಮಾಡುತ್ತಿದೆ ಎಂದು ಖ್ಯಾತ ರಾಜಕೀಯ ಶಾಸ್ತ್ರಜ್ಞ ಪ್ರೊ. ರಾವಸಾಹೇಬ ಕಸವೆ ಹೇಳುತ್ತಾರೆ. ಇದು ನಿಜವೂ ಹೌದು.

 ಇಂದು ಆರ್.ಎಸ್.ಎಸ್.ನವರು ಯಾವುದೇ ತರಹದ ಆರೋಗ್ಯಕರ ಸಂವಾದ ನಡೆಸದೆ ಇರುವಂತಹ ಹಂತ ತಲುಪಿ ಬಿಟ್ಟಿದ್ದಾರೆ. ಏಕೆಂದರೆ, ಸಂವಾದಗಳು ಸಾಕ್ಷ್ಯಾಧಾರ ಮಂಡನೆ ಯೊಂದಿಗೆ ಅರ್ಥಪೂರ್ಣವಾಗುತ್ತವೆಂಬುದೇ ನನ್ನ ನಂಬಿಕೆ. ಆದ್ದರಿಂದಲೇ ಡಾ|| ಲೋಹಿಯಾರಂತಹ ಸಮಾಜವಾದಿ ಚಿಂತಕರು ಆನೇಕ ಬಾರಿ ಆರೋಗ್ಯಕರ ಸಂವಾದ ನಡೆಸಲು ಆಹ್ವಾನವಿತ್ತರೂ, ಅದನ್ನು ಕಂಡೂಕಾಣದ ಹಾಗೆ ತಿರಸ್ಕರಿಸಿದ್ದನ್ನು ನಾವಿನ್ನೂ ಮರೆತಿಲ್ಲ. ಇದರಿಂದಾಗಿ ಇವರ ಅಪರಾಧಿ ಪ್ರಜ್ಞೆಯನ್ನು ಗ್ರಹಿಸಬಹುದಾಗಿದೆ. ಆದ್ದರಿಂದಲೇ ಆರ್.ಎಸ್.ಎಸ್ ಬಗ್ಗೆ ಚರ್ಚಿಸುವುದು, ವಾದ ವಿವಾದಗಳಿಗಿಳಿಯುವುದು ಅತ್ಯಂತ ಮೂರ್ಖತನವಾದದ್ದೆಂಬ ನನ್ನ ಗೆಳೆಯರ ಒತ್ತಾಯದಿಂದಾಗಿ ಹಾಗೂ ನಾನು ಮೂಲಭೂತವಾಗಿ ಪ್ರಜಾಪ್ರಭುತ್ವವಾದಿಯಾಗಿ ರುವುದರಿಂದ ಎಂದು ತಿಳಿಯಪಡಿಸುತ್ತೇನೆ.

 ಆರ್.ಎಸ್.ಎಸ್.ನ ತಾತ್ವಿಕ ಪರಂಪರೆ

 ಆರೆಸ್ಸೆಸ್ ಮೂಲಭೂತವಾಗಿ ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದಿರುವ ಭಾವನಾವಾದಿ ಆಶಯಗಳು ಭಾರತದ ಪರಂಪರೆಯಲ್ಲಿ ಬೆಳೆದು ಬಂದ ಚಾರಿತ್ರಿಕ ಸಂದರ್ಭವನ್ನು ಗಮನಿಸುವುದು ಅತ್ಯವಶ್ಯಕವಾಗಿದೆ; ಬುಡಕಟ್ಟು ಸಮಾಜದಿಂದ ಆಸ್ತಿ ಸಂಧಗಳುಳ್ಳ ನಾಗರಿಕ ಸಮಾಜವಾಗಿ ಪರಿವರ್ತಿತವಾದಾಗ, ಅಂದರೆ ವರ್ಣಸಮಾಜವಾಗಿ ರೂಪುಗೊಂಡಾಗ ಎಂದರ್ಥ; ಈ ವರ್ಣ ಸಮಾಜದ ಶೋಷಣೆಯ ನೈತಿಕತೆಯನ್ನು, ನ್ಯಾಯಬದ್ಧತೆಯನ್ನು ಪ್ರತಿಪಾದಿಸುವ ತಾತ್ವಿಕ ಚಿಂತನೆಯಾಗಿ ಭಾವನಾವಾದ ರೂಪುಗೊಂಡಿತು. ಭಾವನಾವಾದದ ಅತ್ಯಂತ ಕ್ರೂರ ಸ್ವರೂಪದ ಅಭಿವ್ಯಕ್ತಿಯೆಂದರೆ ಚಾತುರ್ ವರ್ಣ ಜಾತಿ ಪದ್ಧತಿ. ಅಂದಿನ ಸಮಾಜದಲ್ಲಿ ವರ್ಣಶೋಷಣೆಯ ಸಿದ್ಧಾಂತವಾದ ಭಾವನಾ ವಾದಕ್ಕೆ ಪರ್ಯಾಯವಾದ ತಾತ್ವಿಕ ಚಳುವಳಿ ಬೆಳೆಯಲಿಲ್ಲವೆ ಎಂಬ ಪ್ರಶ್ನೆ ಸಹ ಕೇಳಬಹುದು. ಈ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡಬಹುದಾಗಿದೆ. ಭಾವನಾವಾದಕ್ಕೆ ವಿರುದ್ಧ ವಾದ ಜನಪರ ಸಂಸ್ಕೃತಿಯ ತಾತ್ವಿಕ ಚಿಂತನೆಯಾಗಿ ಭೌತಿಕ ವಾದ ಬೆಳೆದು ಬಂದಿದೆ. ಇದನ್ನು ನ್ಯಾಯ, ವೈಶೇಷಿಕ, ಸಂಖ್ಯಾ ಶಾಸ್ತ್ರ ಹಾಗೂ ಲೋಕಾಯುತ್ ದರ್ಶನಗಳನ್ನು ಗಮನಿಸಿದರೆ ಅರ್ಥವಾಗುತ್ತದೆ. ಉದಾ: ವಿಶ್ವವೆಲ್ಲಾ ಅಣುಗಳ ಒಂದಾಗವಿಕೆಯಿಂದುಂಟಾಗಿದೆ, ಎಲ್ಲಕ್ಕಿಂತ ಕನಿಷ್ಠ ಗಾತ್ರವುಳ್ಳದ್ದು ಅಣು, ಅವುಗಳ ಸಂಘಾತದಿಂದ ವಸ್ತುವೊಂದು ಹೊರಹೊಮ್ಮುತ್ತದೆ”. ಇನ್ನೊಂದು ಉದಾಹರಣೆಯನ್ನೂ ಸಹ ಗಮನಿಸಬಹುದು ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ವಿಶ್ವವೆಲ್ಲಾ ಭೌತಾಕಾರವಾಗಿ ಇರುವುದರಿಂದ, ವಿಶ್ವದ ಮೂಲಾಧಾರವೂ ಭೌತರೂಪದ್ದೆ ಇರಬೇಕು. ಇಷ್ಟೆಲ್ಲಾ ನಾನು ವಿವರಿಸಿರುವುದು ಏಕೆಂದರೆ, ಭಾವನಾವಾದ ಯಾರ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತದೆ, ಹಾಗೆ ಭಾವನಾವಾದವನ್ನು ತಮ್ಮ ತಾತ್ವಿಕ ಚಿಂತನೆಯಾಗಿ ಸ್ವೀಕರಿಸಿರುವ ಆರೆಸ್ಸೆಸ್ ಯಾರ ಹಿತಾಸಕ್ತಿಯನ್ನು ರಕ್ಷಿಸಲು ಕೆಲಸ ಮಾಡುತ್ತಿದೆ ಎಂಬುದನ್ನು ಸರಳವಾಗಿ ನಿರೂಪಿಸಲು ಇದು ಸಹಾಯಕವಾಗಬಹುದೆಂಬ ನನ್ನ ನಂಬಿಕೆಯಿಂದ.

 ಆರ್.ಎಸ್.ಎಸ್, ಗುರೂಜಿ ಹಾಗೂ ಜನಾಂಗವಾಹಿ ಧೋರಣೆ.

 " ಜಾತಿ, ಧರ್ಮ ಜನಾಂಗ, ವರ್ಣ ಪ್ರತ್ಯೇಕಗಳ ಮೇಲೆ ರಾಜ್ಯಾಡಳಿತ ಗ್ರಹಣನಡೆಸುವ ಯಾವುದೇ ಪರಿಕಲ್ಪನೆಯನ್ನು ನಾನು ಜನಾಂಗಷಾಹಿ (ಫ್ಯಾಸಿಸ್ಟ್) ಸಿದ್ಧಾಂತವೆಂದು ಕರೆಯುತ್ತೇನೆ. ಇಲ್ಲಿ ಅನ್ಯ ಧರ್ಮ, ಜಾತಿ ಹಾಗೂ ಜನಾಂಗಗಳು ಎರಡನೆಯ ದರ್ಜೆ ಪ್ರಜೆಗಳಾಗಿ ಬಾಳಬೇಕಾಗುತ್ತದೆ. ಆರೆಸ್ಸೆಸ್ನವರ ಶತ್ರುಗಳು ಯಾರಾರು ಎಂಬುದನ್ನು ಗೋಲ್ವಾಲ್ಕರ್ ರವರ “Bunch of Thoughts” (ಕನ್ನಡ ಅನುವಾದ ಪ್ರಕಟಣೆ "ಚಿಂತನ ಗಂಗಾ”) ಮುಖಾಂತರ ನೇರವಾಗಿಯೇ ಕ್ರಿಶ್ಚಿಯನ್, ಮುಸ್ಲಿಮ್ ಹಾಗೂ ಕಮ್ಯೂನಿಸ್ಟರೆಂದು ಗುರುತಿಸಿದ್ದಾರೆ ಅಂದರೆ ಭಾರತದಲ್ಲಿರುವವರೆಲ್ಲ ಹಿಂದೂಗಳ ಆಕ್ರಮಣ ಶೀಲ ಆಡಳಿತವನ್ನು ಒಪ್ಪಿಕೊಳ್ಳಬೇಕೆಂಬುದೇ ಇದರ ಒಳಾರ್ಥ. ಇದಕ್ಕೆ ಗುರೂಜಿಯವರ ಹಾಗೂ ಆರೆಸ್ಸೆಸ್ ಸಮರ್ಥನೀಯವಾಗಿ ಪೂಜ್ಯನವರ ಕೈಪಿಡಿಯಾದ “Bunch of thouths” ಅನ್ನು ಪರಿಶೀಲಿಸುವುದು ಅತ್ಯವಶ್ಯಕ, “ಸಮಾಜವಾದಿಗಳ ಶೋಷಣಮುಕ್ತ ಶಾಸನ ವಿಹೀನ ಸಮಾಜ ನಿರ್ಮಾಣದ ತತ್ವವು ತಮ್ಮ ಪರಂಪರೆಗೆ ವಿರುದ್ಧವಾದದ್ದು

 ಈ ಉಲ್ಲೇಖವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಎಂಥ ಜನವಿರೋಧಿ ಆಶಯವನ್ನೊಳಗೊಂಡಿದೆ ಎಂಬುದು ಗೋಚರಿಸುತ್ತದೆ ಭಾರತದಲ್ಲಿ ವರ್ಣವರ್ಗ ವ್ಯವಸ್ಥೆಗಳು ಜೊತೆ ಜೊತೆಯಲ್ಲೇ ಕೆಲಸ ಮಾಡುತ್ತಿವೆ. ಆದ್ದರಿಂದಲೇ ಇಲ್ಲಿ ವರ್ಣ ಶೋಷಣೆ ವರ್ಗ ಶೋಷಣೆಯೂ ಆಗಿದೆ. ಹಿಂದುಳಿದ ವರ್ಗಗಳ ವರದಿ ಒಪ್ಪಿದ ಎಲ್, ಜಿ, ಹಾವನೂರ್‌ ಇದನ್ನು ಅಂಕಿ ಅಂಶಗಳ ಸಹಿತ ಸಾಬೀತು ಪಡಿಸಿದ್ದಾರೆ ಹಾವನೂರ್‌ ವರದಿಯಂಥ ಸಮಾಜ ಶಾಸ್ತ್ರೀಯ ಸ್ವರೂಪದ ವರದಿಯನ್ನು ವರ್ಣವರ್ಗ ವಿರೋಧಿ ಹೋರಾಟದ ಅಸ್ತ್ರವನ್ನಾಗಿ ಉಪಯೋಗಿಸಿ ಕೊಂಡಿರುವುದು ಭಾರತದ ವಾಸ್ತವತೆಗೆ ಬಹು ಹತ್ತಿರವಾಗಿದೆ. ಆದ್ದರಿಂದಲೇ ವರ್ಣ-ವರ್ಗ ವಿರೋಧಿ ಹೋರಾಟದ ಅವಿಭಾಜ್ಯ ಅಂಗವಾದ ನಾನು ಹಾವನೂರ್‌ ವರದಿಯನ್ನು ಬೆಂಬಲಿಸುವುದು, ಆದರೆ ಮೇಲ್ಜಾತಿಗಳ ಹಿಂದೂ ಸನಾತನವಾದಿಗಳ ಪ್ರಾತಿನಿಧಿಕ ಸಂಸ್ಥೆಯಾದ ಆರೆಸ್ಸೆಸ್ ಹಿಂದೂ ನಾವೆಲ್ಲ ಒಂದು ಎಂಬ ಅತ್ಯಂತ ಅಪಾಯಕಾರಿ ಘೋಷಣೆಗಳನ್ನು ಹಿಂದುಳಿದ ಜಾತಿ ಹಾಗೂ ಅಸ್ಪೃಶ್ಯರಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿರುವುದರ ಮೂಲಕ ವರ್ಣ-ವರ್ಗ ಹೋರಾಟಗಳನ್ನು ನಿಷ್ಕ್ರಿಯಗೊಳಿಸಲು ಸಂಚು ನಡೆಸುತ್ತಿದ್ದಾರೆ. ಆದ್ದರಿಂದ ನಾವು ತಿಳಿಯಬೇಕಾಗಿರುವುದೇನೆಂದರೆ ಹಿಂದೂ ಅಕ್ರಮಣಶೀಲ ಆಡಳಿತ"ವೆಂದರೆ ಮೇಲ್ಜಾತಿಗಳ ಆಡಳಿತ ಎಂಬರ್ಥ. ಇಂದು ಹಿಂದುಳಿದ ಜಾತಿಗಳು ಹಾಗೂ ಅಸ್ಪೃಶ್ಯರು ತಮ್ಮ ಹಕ್ಕುಗಳ ಬಗ್ಗೆ ಎಚ್ಚೆತ್ತು ಕೊಂಡಿರುವಂತಹ ಸಂಕ್ರಮಣಾವಸ್ಥೆಯಲ್ಲಿದ್ದಾರೆ. ಆರ್.ಎಸ್.ಎಸ್.ನಂತಹ ಮೇಲ್ಮಾತಿ ಕೋಮುವಾದಿಗಳ ಎಲ್ಲ ತರಹದ ಪಿತೂರಿಗಳನ್ನು ಬಲ್ಲವರಾಗಿದ್ದಾರೆ. ಗುಜರಾತಿನಲ್ಲಿ ಹಿಂದುಳಿದ ಜಾತಿಗಳಿಗೆ ಸರಕಾರಿ ನೌಕರಿಯಲ್ಲಿ ಮೀಸಲಿಡಬೇಕೆಂಬ ಭಕ್ತಿ ವರದಿ ಶಿಫಾರಸ್ಸನ್ನು ಕಾರ್ಯಗತಗೊಳಿಸಿದಾಗ ಇದನ್ನು ಆರೆಸ್ಸೆಸ್ ಚಡ್ಡಿಗಳು ವಿರೋಧಿಸಿದರು. ಮೀಸಲಾತಿ ವಿರೋಧಿ ನಿಲುವು ಆರೆಸ್ಸೆಸ್ನವರ ಸಹಜವಾದ ನಿಲುವಾಗಿದೆ ಆದರಿಂದಲೆ ಕಾಂಗೈ ಜನತಾದಂಥ ಬಲಪಂಥೀಯ ಪಕ್ಷಗಳಿಗಿಂತ ಅತ್ಯಂತ ಕ್ರೂರವಾದ ಹಿನ್ನೆಲೆಯುಳ್ಳ ಹಿಂದುಳಿದವರ ದಲಿತರ ರಕ್ತದೊಂದಿಗೆ ಚೆಲ್ಲಾಟವಾಡಿರುವ ದಿವ್ಯ-ಭವ್ಯ ಐತಿಹಾಸಿಕ ಪರಂಪರೆಯುಳ್ಳ ಜನಾಂಗಷಾಹಿ ಧೋರಣೆಯುಳ್ಳ ಆರೆಸ್ಸೆಸ್ ಹಾಗೂ ಅದರ ರಾಜಕಿಯ ಮುಖವಾದ ಭಾ.ಜ.ಪ. ಅಪಾಯಕಾರಿ ಯಾದದ್ದು ಎಂಬುದನ್ನು ಹಿಂದುಳಿದ ಜಾತಿಯಿಂದ ಬಂದಂತ ನನ್ನಂತಹ ಪ್ರಜ್ಞಾವಂತ ಯುವಕರು ಬಲ್ಲವರಾಗಿದ್ದಾರೆ. 

 ಪ್ರತಿಗಾಮಿಗಳ ಹಲವು ಆರೋಪಗಳಿಗೆ ಉತ್ತರ, ಅಂಕುರ, ಫೆಬ್ರವರಿ ೧೯೮೩

 ನಾನು 'ಅಂಕುರ'ದಲ್ಲಿ ಬರೆದ ಲೇಖನಕ್ಕೆ ಪ್ರತಿಕ್ರಿಯೆಗನ್ನು ಓದಿದೆ, ಒಟ್ಟು ಒಂಭತ್ತು ಪ್ರತಿಕ್ರಿಯೆಗಳಲ್ಲಿ ನಾಲ್ಕು ಪ್ರತಿಕ್ರಿಯೆಗಳು ವಿಭಿನ್ನ ರೀತಿಯಲ್ಲಿ ಧ್ವನಿಸಿ ನನ್ನ ಲೇಖನಕ್ಕೆ ಅರ್ಥ ಪೂರ್ಣವಾಗಿ ಸ್ಪಂದಿಸಿವೆ. ಈ ನಾಲ್ಕು ಜನ ಓದುಗರು ನನ್ನ ಲೇಖನದ ಹಲವು ಹಂತಗಳವರೆಗೂ ಇಳಿದು, ಅಲ್ಲಿನ ಚಿಂತನೆಗಳನ್ನು ಗ್ರಹಿಸಲು ಪ್ರಯತ್ನಿಸಿದ್ದಾರೆ. ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಸ್ವಾಗತಿಸುತ್ತ, ಹಾಗೂ ಇಂತ ಪ್ರಜಾಪ್ರಭುತ್ವ ವಾದಿ ಗೆಳೆಯರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತ ಉಳಿದವುಗಳ ಬಗ್ಗೆ ನನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತೇನೆ.

 ಉಳಿದ ಐದು ಪ್ರತಿಕ್ರಿಯೆಗಳನ್ನು ಪ್ರತಿಕ್ರಿಯೆಗಳೇ ಎಂದು ಮೂಲಭೂತವಾಗಿ ಪ್ರಶ್ನಿಸಬೇಕಾಗಿದೆ. ಯಾಕೆಂದರೆ ಯಾವುದೇ ವಿಚಾರಕ್ಕೆ ಪ್ರತಿಕ್ರಿಯೆ ಎಂದರೆ; ಆ ವಿಚಾರ'ದ ಗ್ರಹಿಕೆಯ ಹೊಸ ಸಂಶ್ಲೇಷಣೆಯ ಸ್ವರೂಪದಲ್ಲಿರಬೇಕು. ಇಂತ ಸಂಶ್ಲೇಷಣೆಯ ಸ್ವರೂಪದ ಟೀಕೆಗಳು ನನ್ನಂತಹವರಿಗೆ ಅಪ್ಯಾಯಮಾನವಾಗುತ್ತವೆ. ಇಂತಹ ಟೀಕೆಗಳನ್ನು ಪುರಸ್ಕರಿಸುತ್ತೇನೆ, ಗೌರವಿಸುತ್ತೇನೆ. ಆದರೆ ಈ ಟೀಕೆಗಳು ಪೂರ್ವಗ್ರಹ ಪೀಡಿತ ಹಿಂದೂ ಮನಸ್ಸಿನ ನೈಚ್ಛ ಸ್ವರೂಪದ ಆಶಯಗಳಾಗಿವೆ. ಇಂತಹ ಕುಬುದ್ದಿಯ ಪ್ರತಿಕ್ರಿಯೆಗಳನ್ನು ನಾನೇಕೆ ಗಂಭೀರವಾಗಿ ಪರಿಗಣಿಸಬೇಕು? ಇದಕ್ಕೂ ಒಂದು ಕಾಣವಿದೆ. ನಮ್ಮ ಸಾಮಾಜಿಕ ಪರಿಸರ ಇಂತಹ ಚಿಂತನೆಗಳನ್ನು ಉಡಾಫೆಯೆಂದೂ, ಹಿಂದಿನಿಂದಲೂ ನಿರಂತರವಾಗಿ ಪರಿಭಾವಿಸುತ್ತಲೇ ಬಂದಿದೆ. ಚಾರ್ವಕ, ದೀಪಕ, ಲೋಹಿಯ, ಅಂಬೇಡ್ಕರ್, ಪೆರಿಯಾರ್ ರಂತಹ ಮುಂತಾದ ಸಮಾಜ ಚಿಂತಕರನ್ನು ಹುಚ್ಚರು, ಮೂರ್ತಿ ಭಂಜಕರು ಹಾಗೂ ವಿನಾಶಕಾರಿ 'ಚಿಂತನೆಗಳುಳ್ಳವರು ಎಂದು ಈ ದೇಶದ ಎಲ್ಲ ರಂಗಗಳಲ್ಲಿ ತಮ್ಮ ಏಕ ಸ್ವಾಮ್ಯ ಸ್ಥಾಪಿಸಿರುವ ಮೇಲ್ಜಾತಿಯರು ಚಿತ್ರೀಕರಿಸಿ ನಮ್ಮನ್ನು ಆಳವಾದ ಕಂದರಕ್ಕೆ ತಳ್ಳುತ್ತಿದ್ದಾರೆ.

 ರಚನಾತ್ಮಕ' ಹಾಗೂ 'ವಿನಾಶಾತ್ಮಕ' ಕ್ರಿಯೆಗಳು ಅನನ್ಯವಾದಂತವು, ಒಂದಕ್ಕೊಂದು ಪೂರಕವಾದಂತವು ಎಂಬುನ್ನು ಲೋಹಿಯಾವಾದಿಗಳು ನಂಬುತ್ತಾರೆ. ಏಕೆಂದರೆ ನಾವು ಈ 'ಚಿ೦ತನೆ' ಹಾಗು 'ಕ್ರಿಯೆ'ಗಳನ್ನು ಸಾಮಾಜಿಕ ತಾತ್ವಿಕ ಚಿಂತನೆಯ ಮೇಲೆ ವ್ಯಾಖ್ಯಾನಿಸುತ್ತಿರುವೆವು. ಇದನ್ನು ಇನ್ನೂ ಸರಳೀಕರಿಸಿ ಸ್ವಚ್ಛಪಡಿಸಬೇಕಾದರೆ ಆಳುವ ವರ್ಗಗಳ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳನ್ನು ನಾಶಮಾಡುವುದರ ಜೊತೆಗೆ, ಸಮಾನತೆ ಪ್ರಜಾಪ್ರಭುತ್ವ, ವಿಕೇಂದ್ರೀಕರಣ ಹಾಗೂ ಆಹಿಂಸಾತ್ಮಕ ಮೌಲ್ಯಗಳಿಂದ ಪ್ರೇರಿತವಾದ ಹೊಸ ಸಮಾಜವನ್ನು ಸೃಷ್ಟಿಸುವುದರ ಬಗ್ಗೆ ಹೊಂದಿರುವ ಸಮಗ್ರ ದೃಷ್ಟಿ ಕೋನವನ್ನು ನಾವು ಮೂರ್ತಿ ಸ್ವರೂಪದಲ್ಲಿ ಪ್ರತಿಪಾದಿಸುತ್ತೇವೆ. ಆದ್ದರಿಂದ ಸತ್ತ ಸಂಸ್ಕೃತಿಯ ಮೌಲ್ಯಗಳನ್ನು ಪುನರ್ ಪ್ರತಿಷ್ಟಾಪಿಸಬೇಕೆಂದು ಪ್ರಲಾಪಿಸುತ್ತಿರುವ ಈ ಮತಾಂಧರಿಗೆ ನನ್ನ ಚಿಂತನೆಗಳು ವಿನಾಶಾತ್ಮಕವಾಗಿ ಕಾಣುತ್ತಿರುವುದು ಸಹಜವಾಗಿದೆ.

 ಆರ್.ಎಸ್.ಎಸ್.ನವರು ಮೇಲ್ಜಾತಿಗಳ ಏಕಸ್ವಾಮ್ಯತೆಯನ್ನು ಉಳಿಸಿ ಬೆಳೆಸಿ, ಪೋಷಿಸಿಕೊಂಡು ಹೋಗುವ ಸಂಸ್ಥೆ ಎಂಬ ನನ್ನ ಆರೋಪಕ್ಕೆ, ಬಾಲಿಶವಾಗಿ ಉತ್ತರಿಸಿರುವ ಇವರು ವರ್ಣಾಶ್ರಮ ಪದ್ಧತಿಯ ಮೂಲ ನೆಲೆಯಾಗುಳ್ಳ ಆಧ್ಯಾತ್ಮವಾದ ದೇಶದ ಎಲ್ಲ ಸಮಸ್ಯೆಗಳನ್ನು ಒದಗಿಸಬಲ್ಲದು ಎಂದು ಪ್ರತಿಪಾದಿಸುತ್ತಾರೆ. ಆದರೆ ಆರ್.ಎಸ್.ಎಸ್. ದೇಶದಲ್ಲಿ ಜಾತಿವಾದವನ್ನು ಬಲಪಡಿಸುವದಕ್ಕಾಗಿ ಇರುವ ಸಂಸ್ಥೆ ಎಂದು ನಾವು ಈಗಾಗಲೇ ಗುರುತಿಸಿದ್ದೇವೆ.

 ಲೋಹಿಯಾವಾದಿಗಳ ಜೊತೆ ಆರೋಗ್ಯಕರ ಸಂವಾದ ಸಾಧ್ಯವಲ್ಲವೆಂದು ಹೇಳುತ್ತಾ (ನನ್ನ ವಿಶ್ಲೇಷಣಾತ್ಮಕ ಲೇಖನಕ್ಕೆ ಪ್ರತಿ ವಿಶ್ಲೇಷಣೆಯನ್ನು ಮಂಡಿಸದೆ) ಎಲ್ಲೆಲ್ಲೂ ತಪ್ಪು ಕಂಡು ಹಿಡಿಯುವ ಮಧುಲಿಮೆಯೇ ಬೇಕೆ? ಎಂಬ ಬೇಜವಾಬ್ದಾರಿತನದಿಂದ ಪ್ರಶ್ನಿಸಿದ್ದಾರೆ. ಆದರೆ ಭಾರತದ ರಾಜಕಾರಣದ ವಿದ್ಯಾರ್ಥಿಯಾಗಿ ನಾನು ಹೇಳುವುದಿಷ್ಟೆ. ಮಧುಲಿಮೆಯೇ ಪ್ರತಿಭಾವಂತ ಲೋಹಿಯಾವಾದಿ ಎಂದು ಹೇಳುವುದಷ್ಟೇ ಅಲ್ಲ ಸ್ವಾತಂತ್ರೋತ್ತರ ಭಾರತದ ಸಮಾಜವಾದಿ ಚಳುವಳಿಯ ಅರಾಜಕ ಚಿಂತಕರ, ಸಂಕೇತವೂ ಹೌದು. ಈ ವ್ಯಕ್ತಿಗಳಿಂದ ಪಕ್ಷರೂಪದ ರಾಜಕಾರಣವನ್ನು ಆಳುವ ವರ್ಗಗಳಿಗೆ ಒತ್ತೆಯಿಡುವ ಕ್ರಿಯೆಗಳಲ್ಲಿ ಮಗ್ನರಾಗಿರುವ ಇವರನ್ನು ಹೇಗೆ ಸಮಾಜವಾದಿ ಎಂದು ಒಪ್ಪಿಕೊಳ್ಳುವುದು? ಆದ್ದರಿಂದಲೇ ಮಧುಲಿಮೆಯೇ ಭಾರತದ ಸಮಾಜವಾದಿ ಚಳವಳಿಯ ಪ್ರಾತಿನಿಧಿಕವಲ್ಲ.

 ಕಾಗೊ:ಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಅಥವಾ ಬಂಗಾರಪ್ಪ ಇವರ ಒಟ್ಟು ರಾಜಕೀಯ ಬದುಕು; ಭಾರತದ ಸಾಮಾಜಿಕ ಶಕ್ತಿಗಳ ಸಂಘರ್ಷದ ಆಳವಾದ ಪ್ರತಿಫಲನ. ಕಾಗೋಡು, ಬಂಗಾರಪ್ಪ ಹಿಂದುಳಿದವರಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲ ಕನಸುಗಳೊಂದಿಗೆ ತಮ್ಮ ಹದಿಹರೆಯದ ದಿನಗಳಲ್ಲಿ ಸಮಾಜವಾದಿ ಚಳುವಳಿ ಮೂಲಕ ರಾಜಕಾರಣಕ್ಕೆ ಕಾಲಿಟ್ಟರು, ಆದರೆ ಅವರಿಗೆ ಕ್ರಮೇಣ ಆದ ಅನುಭವಗಳಾದರೂ ಏನು? ಇವರು ಇತ್ತೀಚೆಗೆ ಮುಟ್ಟಿದ ರಾಜಕೀಯ ಹಂತಗಳು ನಮಗೆ ಸ್ವಯಂ ವಿಶ್ಲೇಷಣೆಯಾಗಿವೆ; ಇವರು ಹಿಂದುಳಿದವರ ಆಶೋತ್ತರಳಿರಲಿ, ತಮ್ಮ ಅಸ್ತಿತ್ವವನ್ನೇ ಸಮರ್ಥಿಸಿಕೊಳ್ಳಲಾರದೆ ಹೋದರು. ಇವರಿಗೆ ತಮ್ಮ ಅಸ್ತಿತ್ವವನ್ನು ಕಾಯ್ದಿಟ್ಟುಕೊಳ್ಳುವುದೇ ಅವರ ಬದುಕಿನ ಮುಖ್ಯ ಅಂಗವಾಗಿ ಪಿತೂರಿ ರಾಜಕಾಣಕ್ಕೆ ಜೋತು ಬಿದ್ದರು. ಒಬ್ಬ ನಾಯಕನ ರಾಜಕೀಯ ಅಸ್ತಿತ್ವ ಪಿತೂರಿ ರಾಜಕಾರಣದಿಂದ ರೂಪುಗೊಳ್ಳಲಾರದು ಎಂಬುದನ್ನು ತಿಳಿಯದಷ್ಟು ಸೀಮಿತ ವ್ಯಕ್ತಿತ್ವದ ಕಾಗೋಡರು ಇಂದು ಮೇಲ್ಜಾತಿಗಳ ರಾಜಕಾರಣದಿಂದ ನಾಶವಾಗಿದ್ದಾರೆ. ಬಂಗಾರಪ್ಪನವರು ವಿನಾಶದ ಅಂಚಿಗೆ ಸಾಗುತ್ತಿದ್ದಾರೆ. ಆದರೂ ಈ ಮೇಲ್ಜಾತಿ ರಾಜಕಾರಣದ ಪಿತೂರಿಗಳನ್ನು ಅರಿಯದೆ, ಅದಕ್ಕೆ ಪ್ರತಿಕಾರ ವ್ಯೂಹ ರೂಪಿಸದೆ, ಬಾಲಿಶವಾಗಿ ವರ್ತಿಸುತ್ತಿದ್ದಾರೆ.

 ಆರ್.ಎಸ್.ಎಸ್.ನ್ನು ನಾನು ಅದರ ತಾತ್ವಿಕ ಹಾಗೂ ಅದರಿಂದ ಹೊರಹೊಮ್ಮುವ ರಾಜ್ಯ ಪರಿಕಲ್ಪನೆಗಳುಇದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನನ್ನ ನೇರ ಟೀಕೆ ಇದೆಯೇ ವಿನಹ ಅಂತ್ಯೋದಯ ಅಥವಾ ನಾನಾಜಿ ದೇಶ್‌ಮುಖ್ ರವರ ರಚನಾತ್ಮಕ ಕಾರ್ಯಗಳು (ಇವರ ಪ್ರಕಾರ) ಬಗ್ಗೆ ವಿಮರ್ಶನಾತ್ಮಕ ಅಭಿಪ್ರಾಯವಿದೆ. ಇಲ್ಲಿ ವಿನಯಶೀವಾಗಿ ನನ್ನ ಅಭಿಪ್ರಾಯಗಳನ್ನು ಮಂಡಿಸುತ್ತೇನೆ.

 ಪ್ರಸಕ್ತ ವ್ಯವಸ್ಥೆಯಲ್ಲಿ ಶ್ರಮದ ಮೇಲೆ ಬಂಡವಾಳದ ಈ ಸರ್ವಾಧಿಕಾರವಿದೆ ಎಂದು ನಂಬಿರುವವ ನಾನು. ಈ ಸರ್ವಾಧಿಕಾರ ಬಂಡವಾಳಷಾಹಿ ಹಾಗೂ ಜಾತಿವಾದಿ ಶಕ್ತಿಗಳಿಂದ ಹೊರ ಹೊಮ್ಮಿದೆ. ಆದ್ದರಿಂದಲೇ ರಾಜ್ಯಾಧಿಕಾರ ಒಂದು ವರ್ಗದ ಅಧೀನದಲ್ಲಿದೆ. ಈ ರಾಜ್ಯಾಧಿಕಾರ ರೂಪಿಸುವ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೀತಿಗಳು ಈ ವರ್ಗದ ಹಿತಾಸಕ್ತಿಯನ್ನು ಸಮರ್ಥಿಸುವ ಹಾಗೂ ಬಲಗೊಳಿಸುವ ದೃಷ್ಟಿಯಿಂ ಪ್ರೇರಿತವಾಗಿರುತ್ತವೆಯೇ ಹೊರತು, ಅವು ಈ ದೇಶದ ಕೆಳಜಾತಿ ಹಾಗೂ ಕೆಳವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿರುತ್ತವೆ. ಆದ್ದರಿಂದಲೇ ಈ ದೇಶದ ಬಂಡವಾಳಷಾಹಿಗಳು, ಕುಲಕ್: ರೈತರು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತ ನಡೆದಿರುವುದು, ಜೊತೆಗೆ ಈ ದೇಶದ ಕೆಳಜಾತಿ ಕೆಳವರ್ಗಗಳು ದರಿದ್ರೀಕರಣಗೊಳ್ಳುತ್ತಿರುವುದು. ಇಂತಹ ವಿಷಯ ಸಂದರ್ಭದಲ್ಲುಂಟಾಗಬಹುದಾದ ಆಂತರಿಕ ಕ್ಷೋಭೆ, ವರ್ಗ-ಜಾತಿ, ಸಂಘರ್ಷಗಳ ಉಗಮ ಇವೆಲ್ಲವನ್ನು ನಿಷ್ಕ್ರಿಯಗೊಳಿಸುವುದಕ್ಕೋಸ್ಕರವೆ; ಬ್ಯಾಂಕ್ ರಾಷ್ಟ್ರೀಕರಣ, ಇಪ್ಪತ್ತು ಅಂಶಗಳ ಕಾರ್ಯಕ್ರಮ ಹಾಗೂ ಅಂತ್ಯೋದಯ ಈ ದೇಶದ ಆಳುವ ವರ್ಗಗಳ ರಕ್ಷಣಾತ್ಮಕ ಅಸ್ತ್ರಗಳಾಗಿವೆ. ಆದ್ದರಿಂದ ಇಂತಹ ವರ್ಗಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸುವುದಕ್ಕೋಸ್ಕರ ಯಥಾಸ್ಥಿತವಾದ ಚಳುವಳಿಯ ಮುಖವಾಣಿಯಾದಾಗ ನಾನು ಅದನ್ನು ವಿರೋಧಿಸುತ್ತೇನೆ.

 ನನ್ನ ಜನರು ಒಂದು ಸಂಘಟಿತ ಶಕ್ತಿಯಾಗಿ ರಾಜ್ಯಾಧಿಕಾರ ಗ್ರಹಣ ನಡೆಸುವವರೆಗೂ ಅವರ ಬದುಕು ಬದಲಾಗಲಾರದು ಎಂಬುದು ನನ್ನ ಮೂಲಭೂತ ನಂಬಿಕೆ. ಇವರನ್ನು ನಿರಂತರ ಕತ್ತಲಲ್ಲಿಡುವ ಸನ್ನಹದಲ್ಲಿರುವ ಆರ್.ಎಸ್.ಎಸ್.ನವರು ಇಂತಹ ಕಾರ್ಯಕ್ರಮಗಳನ್ನು ರಚನಾತ್ಮಕಎಂಬ ಹೆಸರಿನಲ್ಲಿ ನಡೆಸುವುದು ಅವರ ಸಹಜಗುಣವಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಂದ ನಮ್ಮನ್ನು ನೀವು ಮೋಸಮಾಡಲಾರಿರಿ ಎಂದು ಹೇಳುತ್ತ, ನಾವು ನಮ್ಮ ಜನಗಳನ್ನು ಪ್ರತಿಕಾರಿ ರಾಜಕಾರಣಕ್ಕೆ ಅಣಿಗೊಳಿಸಿದಂತೆಲ್ಲ, ಈ ವರ್ಗಗಳ ಒತ್ತಡಗಳು ಮೇಲ್ಮುಕವಾಗಿ ಚಲಿಸಿಂದತೆಲ್ಲ, ಇಂದಿರಾಗಾಂಧಿಯೇ ಆಗಲಿ, ಇನ್ಯಾರೇ ಆಗಲಿ ಅಂತ್ಯೋದಯಕ್ಕಿಂತ ಅಪ್ಪನಂತ ಕಾರ್ಯ ಕ್ರಮಗಳನ್ನು ಕೊಟ್ಟೆ ಕೊಡುತ್ತಾರೆ, ಯಾಕೆಂದರೆ ಆಳುವ ವರ್ಗಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದಕ್ಕೆ. ಆದ್ದರಿಂದ ನಮ್ಮ ಮುಂದಿರುವುದು ಜನಗಳನ್ನು ಕ್ರಾಂತಿಕರಿಸುವುದೇ ಹೊರತು ದಿಕ್ಕು ತಪ್ಪಿಸುವುದಲ್ಲ.

 

-, ಸೋಮಶೇಖರ್

  ನೀವಂದಂತೆ (ಓದುಗರ ಅನಿಸಿಕೆಗಳು)

 ಅಖಂಡ ಭಾರತದುದ್ದದಷ್ಟು ಪತ್ರ!

 ಹ. ಸೋಮಶೇಖರರ ಆರೆಸ್ಸೆಸ್ ಮತ್ತು ಅದರ ಜನಾಂಗಶಾಹಿ ಧೋರಣೆಗಳುಲೇಖನಕ್ಕೆ ಶ್ರೀಮಾನ್ ರಂಗನಾಥರವರು ಆರೆಸ್ಸೆಸ್ ನವರ ಊಹೆಯ ಅಖಂಡ ಭಾರತದುದ್ದಷ್ಟು - ಬರೆದ ಪತ್ರ ಓದಿ ನಗು ಬಂತು. ಹಿಂದೂ ಧರ್ಮ, ಶಿಸ್ತು ಹಾಳು ಮೂಳು ಎಂದುಕೊಂಡು ಕೆಳವರ್ಗದ, ಹೆಚ್ಚಾಗಿ ಸ್ಪೃಶ್ಯರನ್ನು ತಮ್ಮ ಕಾಲಚಪ್ಪಲಿಗಳನ್ನು ಮಾಡಿಕೊಂಡು, ಬೇಸತ್ತ ಅಸ್ಪೃಶ್ಯರು ಚಪ್ಪಲಿ ಹೊಲೆಯುವುದು ಬಿಟ್ಟು ಸೈಕಲ್ ಶಾಪ್ ಇಡಲು ತಯಾರಾದಾಗ 'ಎಲ್ಲರೂ ನಮ್ಮವರೆ', 'ಹಿಂದೂ ನಾವೆಲ್ಲ ಒಂದು' ಎಂದು ನರಿನಗು ನಗುವ ಈ ಖದೀಮರ ಜಾಲ ನಮ್ಮ ದೇಶವನ್ನೇ ನುಂಗುವ ಸಾಧ್ಯತೆ ಇದೆ. ಇರಾನ್, ಇರಾಕ್ ಪಾಕೀಸ್ತಾನಗಳಂತೆ ಜಾತೀಯ ದೇಶಗಳಾಗಿ ನಮ್ಮ ಕಿಚ್ಚಿನಲ್ಲಿ ನಾವೇ ಬೇಯದ ಪರಿಸ್ಥಿತಿಗಾಗಿ ಇಂದಿನ ಪ್ರಜ್ಞಾವಂತರೆಲ್ಲಾ ಅಣಿಯಾಗಬೇಕಾಗಿದೆ.

 

-ನಾ, ದಸೂಡಿ (ಪ್ರಥಮ ಪಶು ವಿಜ್ಞಾನ)

  

ಲೋಹಿಯಾ ವಾದಿಗಳ ಜೊತೆಗೆ

 ಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳು ಎಂಬ ಲೇಖನ ಏನು ಚೆನ್ನಾಗಿತ್ತು? ಬರವಣಿಗೆ ಎಷ್ಟು ಸೊಗಸು? ಈ ರೀತಿಯ ಲೇಖನಗಳು ದೇಶದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ನಿಮ್ಮ ಪತ್ರಿಕೆಯಲ್ಲಿ ಕಾಣಿಸಿಕೊಳ್ಳದಿದ್ದರೆ ಹೇಗೆ? ಮೇಲ್ಜಾತಿಯವರ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಹೊರಟಂತಹ ಕುನ್ನಿ, ಚಡ್ಡಿಗಳು ಎಂಬ ಮಾತು ಈ ಲೇಖಕರಿಂದ ಬರಬೇಕಾದುದ್ದೆ !

 ಈ ಲೋಹಿಯಾವಾದಿಗಳ ಜೊತೆ ಆರೋಗ್ಯಕರ ಸಂವಾದ ನಡೆಸಬೇಕಂತೆ. ಮಾತನಾಡುವುದು ಒಂದು, ಆಚರಣೆಯಲ್ಲಿರುವುದು ಒಂದು. ಕಾಗೋಡರ ಉದಾಹರಣೆ ಬೇಕೆ? ಕೋಣಂದೂರ ಲಿಂಗಪ್ಪ ಉದಾಹರಣೆ ಬೇಕೆ? ಎಲ್ಲೆಲ್ಲ ತಪ್ಪನ್ನು ಕಂಡುಹಿಡಿಯುವ ಮಧುಲಿಮಯೆ ಬೇಕೆ? ಇವರು. ಎಂತಹವರು ಅಂತ ದೇಶಕ್ಕೆಲ್ಲ ಗೊತ್ತು. ಲೋಹಿಯಾ ಗೋಪಾಲಗೌಡರ ತತ್ವವನ್ನು ಅರೆದು ಕುಡಿದಿದ್ದಾರೆ ಜೀವನದಲ್ಲಿ!!

 ರಾಷ್ಟ್ರೀಯವಾದಿಗಳ ಚಳುವಳಿಯನ್ನು ದಮನ ಮಾಡಲು ಹೊರಟಂತಹ ಹಿಂದೂ ಕೋಮುವಾದಿಗಳು. ಆಹಾ! ನಮ್ಮ ದೇಶದಲ್ಲಿ ರಾಷ್ಟ್ರೀಯತೆಯನ್ನು ಸಾರುವ ನಾಯಕರು ಎಲ್ಲಾ ಕಡೆಗೂ ಸಿಗುತ್ತಿದ್ದಾರೆ. ಅವರ ಸಂಘಟನೆಯನ್ನು ನಾವು ದಮನ ಮಾಡಲು ಹೊರಟಿದ್ದೇವೆ. ಕಾಶ್ಮೀರದ ಉದಾಹರಣೆ ಬೇಕೆ? ಅಸ್ಸಾಂನಲ್ಲಿ ಏನಾಯಿತು? ಪಂಜಾಬ್ ನಲ್ಲಿ ಏನಾಗುತ್ತಿದೆ? ಈ ಪ್ರದೇಶದಲ್ಲಿ ರಾಷ್ಟ್ರೀಯ ಐಕ್ಯತೆ ಸಾರುವ ನಾಯಕರು ತುಂಬಿ ತುಳುಕುತ್ತಿದ್ದಾರೆ. ಆರೆಸ್ಸೆಸ್ ಅವರನ್ನು ದಮನ ಮಾಡಿ ಭಾರತವನ್ನು ವಿಭಜಿಸಲು ಹೊರಟಿದೆ ಅಲ್ಲವೇ? ಇಂತಹ ಕೆಲಸ ನಮ್ಮಂತವರು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ. ಸಮಗ್ರ ಭಾರತದ ಕಲ್ಪನೆ, ಆಸೆ ಇರುವುದು ಆರೆಸ್ಸೆಸ್‌ಗೆ ಒಂದೇ, ಮತ್ಯಾವ ನಾಯಕರಿಗೂ ಇಲ್ಲ. ಕೇವಲ ಓಟಿನ ತಂತ್ರಕ್ಕಾಗಿ ರಾಜಕಾರಣಿಗಳು ಈ ರೀತಿ ಆರೋಪಿಸಿದರು; ಈ ಲೇಖಕರು ಬರೆದರು.

 ಆರೆಸ್ಸೆಸ್ಗೆ ಹಿಂದುಳಿದವರ ಅಭ್ಯುದಯದಲ್ಲಿ ನಂಬಿಕೆ ಇಲ್ಲ. ಇನ್ಯಾರಿಗಿದೆ? ಈ ಲೇಖನ ಬರೆದ ಲೇಖಕರು ತಿಳಿಸಬಹುದೆ. ಕೆಲವು ಉದಾಹರಣೆ ಕೊಡುತ್ತಿದ್ದೇನೆ-

 ರಾಜಾಸ್ತಾನದಲ್ಲಿ ಜನತಾ ಸರಕಾರವಿದ್ದಾಗ (1977) ಜೈರಾಂಸಿಂಗ್ ಶೇಖಾವತ್ ಅದರ ಮುಖ್ಯ ಮಂತ್ರಿಗಳು. ಅವರು ತಂದ ಯೋಜನೆ 'ಅಂತ್ಯೋದಯ' ಅದನ್ನು ಹೀಗೆ ಬಣ್ಣಿಸಿದ್ದಾರೆ It is the first community development project in India to help poorest of poor. ಹಾಗಾದರೆ ಅವರು ಎಲ್ಲಿ ತಯಾರಾದರು? ಲೇಖಕರು ಉತ್ತರಿಸಬೇಕು.

 ಇನ್ನೊಂದು ನಾನಾ ದೇಶಮುಖ್ ರದ್ದು. ದೇಶದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆಯಾದ ಫೊಂಡಾ ಜಿಲ್ಲೆ(ಉತ್ತರ ಪ್ರದೇಶ)ಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯವನ್ನು ಕೇಂದ್ರ ಸರಕಾರದ ಗೂಢಚರ್ಯ ವಿಭಾಗವೇ ಹೊಗಳಿದೆ. ಲೇಖಕ ಮಹಾಶಯರು ಅದನ್ನು ಸ್ವಲ್ಪ ತಿಳಿದುಕೊಳ್ಳಬೇಕು.

 ನಮ್ಮ ರಾಜ್ಯದ ಸಾಗರ ತಾಲ್ಲೂಕಿನಲ್ಲಿ 'ಸೇವಾಸಾಗರ' ಎಂಬ ಸಂಸ್ಥೆಯಿದೆ. ಬಿಚ್ಚು ಮನಸ್ಸಿನಿಂದ ಹಿಂದುಳಿದ ವರ್ಗಗಳ ಸೇವೆ ಮಾಡುತ್ತಿದೆ. ಲೇಖಕರಿಗೆ ಸಮಯವಿದ್ದರೆ ಹೋಗಿ ನೋಡಬಹುದು. ಜೊತೆಗೆ ಲೋಹಿಯಾವಾದಿಗಳು ಅಲ್ಲಿ ತುಂಬಿ ತುಳುಕುತ್ತಿದ್ದಾರೆ. ಅವರ ಕಾರ್ಯವನ್ನೂ ನೋಡಿ, ಮಾತನಾಡಿಸಿಕೊಂಡುಬರಬಹುದು.

 ಆಂಧ್ರದ ಚಂಡಮಾರುತದ ಉದಾಹರಣೆ ಬೇಕೆ? ಹೀಗೆ ಎಷ್ಟೋ ಇವೆ, ಅದನ್ನೆಲ್ಲಾ ನಮ್ಮ ಹಿರಿಮೆ ಅಂತ ಹೇಳಿ ಕೊಳ್ಳುವುದಿಲ್ಲ. 'ಮಾತನಾಡುವುದಕ್ಕಿಂತ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದೇವೆ ಅಷ್ಟೆ. ಲೇಖಕರು ಪೆನ್ನು ಇದೆ, ನನಗೂ ಬರೆಯಲಿಕ್ಕೆ ಬರುತ್ತದೆ ಅಂತ ತೋರಿಸಿಕೊಳ್ಳಲು ಹೋಗಬಾರದು. ಯಾರು ಕಳ್ಳ ಯಾರು ಒಳ್ಳೆಯವ ಎಂಬ ವಿಚಾರವನ್ನು ಅರಿಯುವ ವಿವೇಕ ಬೇಕು. ಆದ್ದರಿಂದ ಇಂತಹ ಲೇಖನವನ್ನು ಬರೆಯುವುದಕ್ಕಿಂತ, ಆ ಸಮಯವನ್ನು ಹಿಂದುಳಿದವರ ಕ್ಷೇಮಕ್ಕಾಗಿ ಬಳಸಲಿ ಎಂದು ಆಶಿಸುವ

 

ರಂಗನಾಥ, ಪ್ರಥಮ ಸ್ನಾತಕೋತ್ತರ.

 

ಒಂದು ಕ್ರಾಂತಿಕಾರಿ ಲೇಖನ

 ಲೇಖನ ಕಳೆದ ಸಂಚಿಕೆಯಲ್ಲಿ ಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳು - ಹ. ಸೋಮಶೇಖರ್‌ರವರ ತುಂಬಾ ಅರ್ಥಪೂರ್ಣವೂ ಹಾಗೂ ಕ್ರಾಂತಿಕಾರಿ ಮನೋಭಾವನೆಯುಳ್ಳದ್ದಾಗಿದೆ.

 ಭಾರತದ ಎಲ್ಲಾ ಕಷ್ಟಗಳಿಗೂ ಪರಿಹಾರ ಹಿಂದೂ ಧರ್ಮದ ಚೌಕಟ್ಟಿನಲ್ಲಿದೆ ಎಂಬುದು ಈ ಕಾಳಸಂತೆಕೋರರ ವಾದ, ಬಂಡವಾಳಷಾಹಿಗಳು, ತೆರಿಗೆ ಕೊಡದೆ ರಾಷ್ಟ್ರದ ಸಂಪತ್ತನ್ನು ದೋಚುತ್ತಿರುವವರೂ, ಭಾರಿ ಭೂ ಮಾಲಿಕರು, ಇವರೆಲ್ಲರ ಕುಕರ್ಮಗಳನ್ನೆಲ್ಲಾ ಮರೆತು, ನಮ್ಮ ರಾಷ್ಟ್ರದ ಭಗವಾಧ್ವಜವನ್ನು ಕಂಡು ಪುಳಕಿತರಾಗಿ ಹಸಿವು, ಅನಕ್ಷರತೆ ದಾರಿದ್ರಗಳನ್ನು ಮರೆಯಬೇಕು, ಸಹಿಸಬೇಕು ಎಂಬುದು ಈ ಚಡ್ಡಿಗಳ ಭೋಧನೆ.

 ಕೋಟಿ ಕೋಟಿ ಜನರನ್ನು ಕಾಡುತ್ತಿರುವ ಬಡತನ, ಅನಕ್ಷತೆ, ಅಸ್ಪೃಶ್ಯತೆಯ ಕಳಂಕವನ್ನು ಎದುರಿಸುವ ಯಾವ ಕಾರ್ಯಕ್ರಮವೂ ಇಲ್ಲದೆ, ನಾವು ಅಸ್ಪೃಶ್ಯತೆಯನ್ನು ನಿವಾರಿಸುತ್ತೇವೆ, ಬಡತನವನ್ನು ತೊರಡೆದುಹಾಕುತ್ತೇವೆಂದು ಬರೀ ರವತ್ತಾದ ಮಾತಿನಲ್ಲೇ ಈ ಮಲ್ಲರು ಕಾಲ ಕಳೆಯುತ್ತಾರೆ. ಹಾಗೂ ತಮ್ಮ ಮೇಲ್ದಾತಿ ಕೋಮುವಾದಿ ಮೌಲ್ಯಗಳನ್ನು ಕರಗತಗೊಳಿಸುವ ಹಾದಿಯಲ್ಲಿ ಸಫಲತೆ ಕಾಣುತ್ತಿದ್ದಾರೆ. "

 ಈ ಕೋಮುವಾರು ಸಂಘ ಮತೀಯ ದುರ್ಬಾವನೆಯಿಂದ ಕೂಡಿದ್ದು, ಮತೀಯ ಗಲಭೆಗಳಿಗೆ ಮುಖ್ಯ ಕಾರಣವಾಗಿದೆ. ಏನೂ ಅರಿಯದ ಮುಗ್ಧ ಮಕ್ಕಳಲ್ಲಿ ಜಾತಿ, ಅಸ್ಪೃಶ್ಯತೆ, ಮೇಲುಕೀಳು ಹೀಗೆ ಅನೇಕ ವಿಷಬೀಜ ಬಿತ್ತುವಲ್ಲಿ ಹಾಗೂ ದೀನ ವ್ಯಕ್ತಿತ್ವ ತರುವಲ್ಲಿ ಯಶಸ್ವಿಯಾಗುತ್ತಿದೆ.

 ನಾಯಕ, ಆಜ್ಞೆ ಹಿಂದೂ ಇತ್ಯಾದಿ ಪುಂಡಾಟಿಕೆಯ ಮಾತುಗಳನ್ನು ಬಿಟ್ಟು ಧೈರ್ಯ ಸಮಾನತೆ ತತ್ವ, ಒಂದು ಸಮಾಜದ ಆಸೆ, ಆಕಾಂಕ್ಷೆಗಳು, ಅವುಗಳ ಸಾಧನೆಗಳ ಮಾತಸ್ನೇಕೆ ಇವರು ಆಡುವುದಿಲ್ಲ? ಸಮಾಜದ ನೈಜ ಸ್ವಾತಂತ್ರ್ಯಕ್ಕೆ ಹೋರಾಡಿ ಉದಾತ್ತವಾದ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ಇವರು ಪಣ ತೊಡುವುದಿಲ್ಲ? ವರ್ಗರಹಿತ, ಆರ್ಥಿಕ ಸಮಾನತೆಯಿಂದ ಕೂಡಿದ ರಾಷ್ಟ್ರವನ್ನು ಕಟ್ಟುವುದನ್ನು ಬಿಟ್ಟು, ಈ ಕೂಳರು ಕಾರ್ಮಿಕ, ರೈತ, ಹರಿಜನ, ಮುಸಲ್ಮಾನ ಅಲ್ಪ ಸಂಖ್ಯಾತರೆಲ್ಲರಿಂದ ದೂರವಿದ್ದು ಜನರಲ್ಲಿ ಕೇವಲ ದೀನ ವ್ಯಕ್ತಿತ್ವ ಬೆಳೆಸಲು ಕಾತುರರಾಗಿದ್ದಾರೆ. 'ಅಂಕುರʼ ತರಹದ ಲೇಖನಗಳನ್ನು ಪ್ರಕಟಿಸುವುದರಿಂದ ನೈಜತೆ ಬಯಲು ಮಾಡಿ ಒಂದು ಮಹೋನ್ನತ ಪತ್ರಿಕೆಯಾಗುವುದರಲ್ಲಿ ಹಾಗೂ ಈ ಯಾವ ಸಂಶಯವೂ ಇಲ್ಲ.

 ಲೇಖಕರಿಗೆ ನನ್ನ ಅಭಿನಂದನೆಗಳು,

ಆಘೋರ.

 

ಎಚ್ಚರಿಕೆ !!!

 ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಆರ್ ಎಸ್ ಎಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳುಎನ್ನುವ ಲೇಖನವು ತುಂಬಾ ಕೀಳುಮಟ್ಟದ ಹಾಗೂ ಅನವಶ್ಯಕ ಲೇಖನವಾಗಿತ್ತು. ಅದಕ್ಕೆ ಕಾರಣಗಳು

ತೀರಾ ಕೆಳಮಟ್ಟದ ಪದಗಳ ಬಳಕೆ

 ಕೇವಲ ಟೀಕೆ ಮಾಡಿದರೆ ಮಾತ್ರ ಲೇಖಕರ ಜವಾಬ್ದಾರಿ ಪೂರೈಸಿದಂತಾಯಿತು ಎಂದು ತಿಳಿದ ಲೇಖಕರು ಸಮಾಜ ಸುಧಾರಣೆಗೆ ಸರಿಯಾದ ಮಾರ್ಗವನ್ನು ಸೂಚಿಸಿಲ್ಲ. ಒಟ್ಟಿನಲ್ಲಿ ಕ್ರಿಯಾತ್ಮಕ ವಿಚಾರವಲ್ಲ. ವಿನಾಶಾತ್ಮಕ ವಿಚಾರ, ತಾನು ಪಕ್ಷಾತೀತ ಅಥವಾ ಜಾತ್ಯಾತೀತ ಎಂಬುದನ್ನು ತೋರಿಸಲು ಸಂಪಾದಕರು ಕಷ್ಟಪಟ್ಟು ಇನ್ನೊಂದು ಲೇಖನವನ್ನು ಅದರ ಜೊತೆ ಸೇರಿದ್ದಾರೆ.

 ನಮ್ಮ ವಿಶ್ವವಿದ್ಯಾಲಯದಲ್ಲಿ ಅಥವಾ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಮಾರ್ಗದರ್ಶನೀಯ ಲೇಖನ ಬರ ಬೇಕು. ಯಾವುದೇ ಪಕ್ಷವನ್ನೋ ಅಥವಾ ಸಂಘಟನೆಯನ್ನು ಟೀಕಿಸುವ ಜವಾಬ್ದಾರಿಯನ್ನೇ ಹೊತ್ತಿರುವ ಅನೇಕ ಪತ್ರಿಕೆಗಳಿವೆ. ಅದೇ ಕೆಲಸ ʻಅಂಕುರʼಕ್ಕೆ ಬೇಡ. ಪತ್ರಿಕೆ ಚೆನ್ನಾಗಿ ನಡೆಯಬೇಕೆಂಬ ವಿಚಾರವಿದ್ದಲ್ಲಿ ಸಂಪಾದಕರು ಇದರ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಪತ್ರಿಕೆಯ ಅಧಃಪತನಕ್ಕೆ ಎಡೆಯಾದೀತು. ಎಚ್ಚರಿಕೆ

 

ದತ್ತಾತ್ರಯಾ ಹೆಗಡೆ, ಅಂತಿಮ ಪಶುವೈದ್ಯಕೀಯ.

ಪೂರ್ವಗ್ರಹ ಪೀಡಿತ ಲೇಖನ

 ಬೆಂಗಳೂರಿನ ಅರಮನೆ ಮೈದಾನದಲ್ಲಿ ೧೯೮೨ರ ಜನವರಿ ೧, ೨ ಮತ್ತು ೩ ರಂದು ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ'ದ ಬೃಹತ್ ಹಿಂದೂ ತರುಣ ಶಿಬಿರದಲ್ಲಿ ನಡೆದ ಒಂದು ಘಟನೆ.. ತಮ್ಮನ್ನು ತಾವೇ ಪ್ರಜ್ಞಾವಂತ ಯುವಕನೆಂದು ಕರೆದುಕೊಂಡಿರುವ ಶ್ರೀ ಹ. ಸೋಮಶೇಖರ್ ರವರು, ಆರೆಸ್ಸೆಸ್ ಮೇಲಿನ ತಮ್ಮ ಪೂರ್ವಗ್ರಹ ಪೀಡಿತ ಹಳಸಿದ ಲೇಖನಕ್ಕೆ ಉತ್ತರ ರೂಪವಾಗಿ ಇದನ್ನು ಸ್ವೀಕರಿಸಲು ನನ್ನ ಅಭ್ಯಂತರವಿಲ್ಲ.

 ಐತಿಹಾಸಿಕವಾಗಿ ನಡೆದ ಆ ಶಿಸ್ತಿನ ಹಿಂದೂ ಸಂಗಮ"ದ ಕೊನೆಯ ದಿನ. ಏಳು ಕಿ.ಮೀ. ಉದ್ದದ, ಅರವತ್ತೈದು ನಿಮಿಷಗಳ ಅಖಂಡ ಪಥಸಂಚಲನದ ಸುವರ್ಣಕ್ಷಣ, ಆ ಸಮಯದಲ್ಲಿ ನಡೆದ ಈ ಘಟನೆ ಇಂದಿನ ಮತ್ತು ಮುಂದಿನ ಸಂಭವನೀಯ ಪರಿಸ್ಥಿ ತಿಗಳ ಸಂಕೇತ ಎನ್ನಿಸಿತು. ಮೆರವಣಿಗೆ ಬರುತ್ತಿದ್ದಂತೆಯೇ ನಾಯಿಯೊಂದು (ಕುನ್ನಿ") ಬೊಗಳಲಾರಂಭಿಸಿತು. ಚೇತೋಹಾರಿಯಾದ ಹೆದ್ದೆರೆಗಳಂತೆ ಸ್ವಯಂ ಸೇವಕರ ಪ್ರವಾಹ ಬರುತ್ತಲೇ ಇತ್ತು. ನಾಯಿ ತನ್ನ ಸ್ವರವನ್ನು ತಾರಕಕ್ಕೇರಿಸಿ ಬೊಗಳಲಾರಂಭಿಸಿತು. ಅದರ ಸರ್ವಸ್ವವೂ ಹಾಳಾಯಿತೇನೋ ಎನ್ನುವಂತೆ ರದಾಡುತ್ತಾ ಕಿರುಚುತ್ತಿತ್ತು. ಸುತ್ತಲಿನ ಜನಸಾಗರವಂತೂ ಈ ಎರಡೂ ದೃಶ್ಯಗಳನ್ನು ಆಶ್ಚರ್ಯ ಚಕಿತ ನೇತ್ರದಿಂದ ನೋಡುತ್ತಿತ್ತು. ಗಜಗಂಭೀರ ಮೆರವಣಿಗೆಯಂತೂ ಕೊನೆ ಇಲ್ಲದಂತೆ ಅಚಲವಾಗಿ ಸಾಗಿಯೇ ಇತ್ತು. ಕೊನೆ ಕೊನೆಗೆ ನಾಯಿಯ ಸ್ವರ ತಗ್ಗುತ್ತಾ ಬಂತು. ಆದರೆ, ಹಿಂದೂ ಚೇತನ ವಾಹಿನಿ ಮಾತ್ರ ಅಖಂಡವಾಗಿ ಹರಿಯುತ್ತಲೇ ಇತ್ತು. ಕೊನೆಗೆ ಕನಿಷ್ಠ ಕುಯಂಗುಟ್ಟಲೂ ಆಗದ ನಾಯಿ ಬಾಲ ಮುದುಡಿಕೊಂಡು ತಲೆಯನ್ನು ದೇಹದೊಳಕ್ಕೆ ಹುದುಗಿಸಿ ಬಿಟ್ಟಿತು. ಆಗಾಗ್ಗೆ ಕಳ್ಳದೃಷ್ಟಿಯಿಂದ ನೋಡುತ್ತಿದ್ದ ಕುನ್ನಿ ಕೊನೆಗೆ ಅದನ್ನೂ ನಿಲ್ಲಿಸಿ ಕಣ್ಣು ಮುಚ್ಚಿ ಸುಸ್ತಾಗಿ ಮಲಗಿ ಬಿಟ್ಟಿತು. ಆದರೆ ಜಾಗೃತ  ಹಿಂದೂ ಹೆದ್ದರೆ" ಮಾತ್ರ ಏಕಾಗ್ರತೆಯಿಂದ ಗುರಿಯತ್ತ ಮುನ್ನುಗ್ಗುತ್ತಲೇ ಇತ್ತು ಜನಸ್ತೋ ಮದಿಂದ ಭಾರತ ಮಾತಾಕೀ ಜೈಘೋಷಣೆ ಮುಗಿಲು ಮುಚ್ಚಿತ್ತು.

-ಮಹಾಬಲೇಶ್ವರ

 

ʻಹಿಂದೂ ನಾವೆಲ್ಲ ಒಂದುʼ - ಬರೇ ನಾಟಕ

ಇಂದು ಆರ್.ಎಸ್.ಎಸ್.ನವರು ಯಾವುದೇ ತರಹದ ಆರೋಗ್ಯಕರ ಸಂವಾದ ನಡೆಸದೆ ಇರುವಂತಹ ಹಂತ ತಲುಪಿದ್ದಾರೆ. ಏಕೆಂದರೆ ಸಂವಾದಗಳು ಸಾಕ್ಷಾಧಾರ ಮಂಡನೆಯೊಂದಿಗೆ ಅರ್ಥಪೂರ್ಣವಾಗುತ್ತವೆಂಬುದೇ ನನ್ನ ನಂಬಿಕೆ ' ಎಂದು ಲೇಖಕ ಹ. ಸೋಮಶೇಖರ್ ರವರು ಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳುಎಂಬ ಲೇಖನದಲ್ಲಿ ತಳೆದಿರುವ ಧೋರಣೆ ಸ್ಪಷ್ಟ ಮತ್ತು ಸತ್ಯ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಅರೆಸ್ಸೆಸ್ ಬಗ್ಗೆ ನನ್ನಲ್ಲಿರುವ ಕೆಲವು ಪ್ರಶ್ನೆಗಳಿಗೆ ನನ್ನ ಆರೆಸ್ಸೆಸ್ ಮಿತ್ರರಲ್ಲಿ ಸಮಂಜಸವಿರಲಿ, - ಉತ್ತರವೇ ಸಿಗುವುದಿಲ್ಲ.

ಅರೆಸ್ಸೆಸ್, ಮೇಲ್ಮಾತಿ ಹಿಂದೂಗಳು, ಅದರಲ್ಲಿ ಬ್ರಾಹ್ಮಣರ ಸಂಘಟನೆಯಾಗಿ ಉಳಿದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತೇನಲ್ಲ. ಹಿಂದೂಗಳು 'ಮತಾಂತರ' ಸಂಧರ್ಭದಲ್ಲಿ ಯಾವುದೇ ಭಯಕ್ಕೆ ಎಚ್ಚೆತ್ತು ಹಿಂದೂ ನಾವೆಲ್ಲ ಒಂದುಎಂಬ ನಾಟಕವಾಡಿ ಮತ್ತೆ ತನ್ನತನವನ್ನು ತೋರಿಸುತಿರುವುದಕ್ಕೆ ಕರ್ನಾಟಕದ ಒಂದು ಹಳ್ಳಿಯಲ್ಲಿ ಯಾವುದೋ ಉತ್ಸವದಲ್ಲಿ ಮೇಲ್ಪಾತಿ (?) ಹಿಂದೂಗಳು ಹರಿಜನರೊಡಗೂಡಿಕೊಂಡು ರಥವನ್ನೆಳೆದರು ಎಂಬುದನ್ನು, ಮತ್ತೆ ಮಾರನೇ ವರ್ಷ ಮತಾಂತರ ಸುದ್ದಿ ತಣ್ಣಗಾದಾಗ ಮೇಲ್ದಾತಿ ಹಿಂದೂಗಳು, ರಥ, ಹರಿಜನ ಕೇರಿಗೂ ಹೋಗದಹಾಗೆ ನೋಡಿಕೊಂಡರು ಎಂದು ಒಂದು ಪತ್ರಿಕೆಯಲ್ಲಿ ಓದಿದ ಸುದ್ದಿ, ನನ್ನಲ್ಲಿ ಮಾಸದೆ ಉಳಿದ ಒಂದು ಜ್ವಲಂತ ನಿದರ್ಶನ. ಆರ್.ಎಸ್.ಎಸ್. ಬಗ್ಗೆ ಚರ್ಚಿಸುವದು ವಾದ ವಿವಾದಗಳಿಗಿಳಿಯುವುದು ಅತ್ಯಂತ ಮೂರ್ಖತನ ಎಂಬ ಲೇಖಕರ ಅಭಿಪ್ರಾಯ ನನಗೂ ಸಮ್ಮತ, ಡಾ| ಮ್ತಾಜ್‌ ಅಲಿರ್ಖಾನ್‌ ರವರ ʻಜಮಾತ್ - ಎ - ಇಸ್ಲಾಮಿʼ ಬಗೆಗಿನ ಲೇಖನ, ಮುಕ್ತ ಮತ್ತು ಸಮಂಜಸ ವಿಚಾರಧಾರೆಯಿಂದ ಕೂಡಿದೆ ಎಂದೆನಿಸಿತು.

ಬೆಂ. ನಾ. ಸತ್ಯ ನಾರಾಯಣ

ಧಿಕ್ಕಾರವಿರಲಿ !!

 ಇಂಗ್ಲೀಷರ ನಾಡನ್ನು ಇಂಗ್ಲೆಂಡ್ ಎಂದೂ, ಅರಬ್ಬರ ನಾಡನ್ನು ಅರೇಬಿಯಾ ಎಂದು ಹೇಗೆ ಘೋಷಿಸಿದ್ದಾರೋ, ಹಾಗೆಯೇ ಹಿಂದೂ ನಾಡನ್ನು ಹಿಂದೂಸ್ಥಾನವೆಂದು ಘೋಷಿಸಲು ಸಹಾಯಕವಾದ ಹಿಂದೂ ಸಮಾಜ ಒಗ್ಗಟ್ಟಿಗೆ ಹಾಗೂ ವಿಶ್ವಶಾಂತಿಯನ್ನು ಬಯಸುವ ಈ ನಾಡನ್ನು ಪರಮ ವೈಭವದ ಸ್ಥಿತಿಗೆ ತರಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ, ಅದನ್ನು ಖಂಡಿಸಿದ ಬುಡವಿಲ್ಲದ, ಅರ್ಥವಾಗದ ಸಂಘದ ಮೇಲಿನ ಇಂತಹ ಲೇಖನಗಳಿಗೆ ಅಂಕುರಮಾಸಿಕದಲ್ಲಿ ಜಾಗ ಸಿಕ್ಕಿದ್ದು ವಿಷಾದನೀಯ. ಇಂತಹ ಲೇಖನಗಳಿಗೆ ಸದಾ ಧಿಕ್ಕಾರವಿರಲಿ.

 

,ಹೇ, ಶ್ರೀಪಾದರಾವ್, ತೃತೀಯ ಪಶುವೈದ್ಯಕೀಯ

 

ಆರೆಸ್ಸೆಸ್ - ಖಾಕಿ ವಿಷಸರ್ಪ

ನವಂಬರ್ - ಡಿಸೆಂಬರ್ ಅಂಕುರ ಪತ್ರಿಕೆಯಲ್ಲಿ ಪ್ರಕಟವಾʻಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳುಎಂಬ ಲೇಖನ ತುಂಬಾ ಅರ್ಥಪೂರ್ಣವಾಗಿ ಬರೆದಿರುವ .ಸೋಮಶೇಖರ್ ಹಾಗೂ ಲೇಖನವನ್ನು ಪ್ರಕಟಿಸಿರುವ ʻಅಂಕುರ' ಪತ್ರಿಕೆಯ ಸಂಪಾದಕ ಮಂಡಳಿಗೂ ನನ್ನ ವಂದನೆಗಳು.

 ಆದರೂ ಒಂದು ವಿಚಾರ ಲೇಖಕರು ಮರೆತಿರುವಂತೆ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಒಬ್ಬ ಆರೆಸ್ಸೆಸ್ ವ್ಯಕ್ತಿತ್ವವನ್ನು ಸಂಪರ್ಕಿಸಿದರೆ, ಅವರು ಹೇಳುವುದು ನಮ್ಮಲ್ಲಿ ಶಿಸ್ತು…. ಇನ್ನೂ ಏನೆಲ್ಲ ಇದೆ ಎನ್ನುತ್ತಾರೆ, ಆದರೆ ಆರೆಸ್ಸೆಸ್ ಸ್ವಯಂಸೇವಕರಿಗೆ ಗೊತ್ತಿಲ್ಲ ಎಂದು ಕಾಣುತ್ತದೆ. ಶಿಸ್ತು ಬೇಕು ನಿಜ, ಆದರೆ ಏತಕ್ಕಾಗಿ? ಮುಸಲ್ಮಾನ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವುದಕ್ಕಾಗಿಯೇ? ಹಿಟ್ಲರ್ ಸಹ ಶಿಸ್ತು ಬೆಳೆಸಿದ್ದರು, ಏತಕ್ಕಾಗಿ? ಮಾನವೀಯ ಮೌಲ್ಯಗಳನ್ನು ಹೇಳಹೆಸರಿಲ್ಲದೆ ನಾಶ ಮಾಡುವುದಕ್ಕಾಗಿಯೇ? ಆರೆಸ್ಸೆಸ್ ನಲ್ಲಿ ಶಿಸ್ತು ಇದ್ದರೂ ಅದು ಕೇವಲ ಮೂಢಾಂಧತೆಯ ಅಮಾನುಷ ಕೃತ್ಯಗಳೆನ್ನೆಸಗಲು ಹೆಮ್ಮರವಾಗಿ ಕಾದು ನಿಂತಿರುವ ಖಾಕೀ ವಿಷ ಸರ್ಪ.

 ಒಂದು ಕಾಲದಲ್ಲಿ ಗಾಂಧಿ ವಿರೋಧಿಗಳಾಗಿದ್ದ, ಈ ಚಡ್ಡಿ ವಾಲಗಳು ಇಂದು ಗಾಂಧಿ ಸಮಾಜವಾದವನ್ನು [Gandhian socialisam] ಮಾತನಾಡುತ್ತಿದ್ದಾರೆ' ಬಹುಶಃ ಇವರ ಬೇಳೆಕಾಳು ಸಮಾಜವಾದವಿಲ್ಲದೆ, ಬೇಯುವುದಿಲ್ಲ ಎಂದು ಕಾಣುತ್ತದೆ. ಇಂತಹ ಒಂದು ಮಾನವೀಯಘಾತಕ, ಮೂಡಾಂಧತೆಯ, ಸಂಘಟಿತ ಬೆಂಕಿಯ ವಿರುದ್ದ ಸಮಾಜವಾದಿ ಕ್ರಾಂತಿ ನಡೆಯಲಿ,

 

ಎಸ್. ಇ. ಶಿವಕುಮಾರ್, ತೃತೀಯ ತೋಟಗಾರಿಕೆ,

 

 ಕೋಪವೇಕೆ?

 ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳುಎಂಬ ಲೇಖನ ʻಅಂಕುರʼದಂತಹ ಇನ್ನೂ ಅಂಕುರಿಸುತ್ತಿರುವ ಪತ್ರಿಕೆಗೆ ಯೋಗ್ಯವಲ್ಲ. ಅಂಕುರ ಒಂದು ಪಕ್ಷದ ಪತ್ರಿಕೆಯಂತೆ ವರ್ತಿಸಲು ಅವಕಾಶ ಕೊಟ್ಟರೆ ಅದು ಮುರುಟುವ ಸಂಭವವನ್ನು ಸಂಪಾದಕರು ತಾವಾಗಿಯೇ ಮೈಮೇಲೆ ಎಳೆದುಕೊಂಡಂತಾಗುತ್ತದೆ.

 ಲೇಖಕರು ಟೀಕಿಸುವುದರಲ್ಲಿ ಲಂಕೇಶರಿಗಿಂತ ಒಂದು ಕೈ ಮೇಲೆಂದು ತೋರಿಸಿಕೊಟ್ಟಿದ್ದಾರೆ ಅವರು ಒಂದು ಜಾತ್ಯಾತೀತಕೀತಿ ವ್ಯಕ್ತಿಯಾಗಿದ್ದರೆ ಒಂದು ಜಾತಿಯನ್ನು (ಅವರ ಪ್ರಕಾರ) ಉಳಿಸಿ ಬೆಳೆಸಿಕೊಂಡು ಬರುವ ಒಂದು ಸಂಸ್ಥೆಯ ಬಗ್ಗೆ ಇಷ್ಟೊ೦ದು ಕೋಪತೋರಿಸುವ ಕಾರಣವಿಲ್ಲ. ೧

 ಡಾ.ಖಾನ್‌ ಬರೆದಿರುವ ಲೇಖನದಲ್ಲೂ ಕೂಡ ಅವರು ಮೊದಲು "ಜಮಾತ್--ಇಸ್ಲಾಮಿ ಹಿಂದ್"‌ ಒಂದು ರಾಷ್ಟ್ರವಿರೋಧಿ ಸಂಸ್ಥೆ ಎಂದು ಹೇಳಿ ಅನಂತರ ಅದರ ಕಾರ್ಯಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಆದುದರಿಂದ ಲೇಖನ ಸ್ಪಷ್ಟವಾಗಿಲ್ಲವೆಂದೇ ಹೇಳಬಹುದು.

 

ಡಿ. ಎನ್. ಹೆಗ್ಡೆ, ಅ೦ತಿಮ ಪಶುವೈದ್ಯಕೀಯ.

 

ಇಂತಹ ಲೇಖನಗಳು ಬೇಕು

ಹಿಂದಿನ ಸಂಚಿಕೆಯಲ್ಲಿ ಹ..ಸೋಮಶೇಖರ್ ಅವರು ಬರೆದಿರುವ ಆರೆಸ್ಸೆಸ್ ಮತ್ತು ಅದರ ಜನಾಂಗಷಾಹಿ ಧೋರಣೆಗಳುಎಂಬ ಲೇಖನವು ಬಹಳ ಅರ್ಥಪೂರ್ಣವಾಗಿದೆ. ಇಂದಿನ ಮಕ್ಕಳೇ ಮುಂದಿನ ರಾಷ್ಟ್ರದ ಲಾಂಛನವನ್ನು ಹಿಡಿಯುವ ಸತ್ಪ್ರಜೆಗಳಾಗುವ ಮುನ್ನವೇ, ಮಾನವ ಪ್ರಪಂಚವನ್ನು ಪ್ರವೇಷಿ ಸುವ ಮೊದಲೇ ಅವುಗಳಲ್ಲಿ ಜಾತಿ ಹಾಗೂ ಮತೀಯ ವಿಷಬೀಜಗಳನ್ನು ಬಿತ್ತುತ್ತಿರುವ ಹಲವಾರು ಸಂಸ್ಥೆಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಇಂದಿನಿಂದಲೇ ಮುಂದಿನ ಕೋಮುವಾದದ ಪ್ರಜೆಗಳನ್ನು ಸೃಷ್ಟಿಸುವ ಇಂತಹ ದುರಾಕ್ರಮಣದ ಹಿನ್ನೆಲೆಯನ್ನು ಸಮಾಜದಲ್ಲಿ ಬೆಳಕಿಗೆ ನೀಡುವ ಲೇಖನಗಳು ಹೆಚ್ಚಿಗೆ ಪ್ರಕಟವಾಗಲಿ ಮತ್ತು ಲೇಖಕರಿಗೆ ನನ್ನ ಅಭಿನಂದನೆಗಳು.

ನ.ಓ. ಶಿವಾನಂದಪ್ಪ, ಮೂರನೇ ಕೃಷಿ ಪದವಿ.

 ಇವುಗಳು "ಅಂಕು"ದ ಅವಿಭಾಗವೇ?

 ಸ್ತ್ರೀ ಶೋಷಣೆ ಹಾಗು ಅದಕ್ಕೆ ಸಂಬಂದ ಪಟ್ಟಂತ ಶೀರ್ಷಿಕೆಯ ಹೆಸರಿನಲ್ಲಿ ಇಲ್ಲಿಯತನಕ ಅನೇಕ ಚಿತ್ರಗಳು ಬಂದಿವೆ ಮತ್ತು ಡಾ|| ಮಮಾಜ್ ಆಲಿಖಾನ್ ರವರ "ಜಮಾತ್ - ಎ - ಇಸ್ಲಾಮಿ ಮತ್ತು ಅದರ ರಾಷ್ಟ್ರ ವಿರೋಧಿ ಚಟುವಟಿಕೆಗಳುಎಂಬುದು ಸರಿಯಾದರೂ ಈ ನಿಯಮಿತ ಪುಟಗಳನ್ನೊಳಗೊಂಡ ಈ ಅಂಕುರ"ಕ್ಕೆ ಅನಗತ್ಯ ಎಂದು ಹೇಳಲಾಗದಿದ್ದರೂ ಅವುಗಳ ಅವಶ್ಯಕತೆಯಿಲ್ಲ. ವಾಚಕರಿಂದ ವಿಮರ್ಶಾತ್ಮಕವಾದ ಈ ವಿಷಯಗಳ ಬಗ್ಗೆ ಆಗಲೇ ಮಾರ್ನುಡಿಗಳು ಬಂದಿವೆ. ನಮ್ಮ ವಿದ್ಯಾರ್ಥಿಗಳಿಗೆ ಬೇಕಾಗಿರುವುದು, 'ಅಂಕುರ' ಓದುವಷ್ಟು ಕಾಲ ಮನರಂಜಾತ್ಮಕ ವಿಷಯಗಳೇ ಹೊರತು, ವಿಮರ್ಷಾತ್ಮಕವಾದ ವಿಷಯಗಳಲ್ಲ. ಏಕೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಯೂನಿವರ್ಸಿಟಿ ಲೆವಲ್‌ನಲ್ಲಿ ವಿಮರ್ಶಾತ್ಮಕ ಬುದ್ಧಿಯನ್ನು ಹೊಂದಿರುತ್ತಾರೆ. ಆದ್ದರಿಂದ ಸಂಪಾದಕರು ಇವುಗಳೇ "ಅಂಕುರ"'ಅವಿಭಾಗ' ಎಂದು ತಿಳಿಯದೆ, ಇನ್ನು ಮುಂದೆ ಕಥೆ, ಕವನಗಳತ್ತ ಗಮನ ನೀಡಿದರೆ ಚೆನ್ನ.

 

ಆರ್. ನರಸಿಂಹರಾಜು, ತೃತೀಯ ಕೃಷಿ ಪದವಿ.

ಅಂಕುರ, ಜನವರಿ ೧೯೮೩