ಬುಧವಾರ, ನವೆಂಬರ್ 04, 2009

ಕತೆ: ಧರ್ಮೋ ರಕ್ಷತಿ ರಕ್ಷಿತಃ

ನವೆಂಬರ್ ತಿಂಗಳ 'ಸಂವಾದ'ದಲ್ಲಿ ಪ್ರಕಟವಾದ ನನ್ನ ಕತೆ:

ಟ್ರೈನು ಚಲಿಸುತ್ತಲೇ ಇತ್ತು. ಸಂಜಯನಿಗೆ ನಿದ್ರೆಯೇ ಬರುತ್ತಿರಲಿಲ್ಲ. ಮಗ್ಗಲು ಹೊರಳಿಸಿ ಸಾಕಾಗಿತ್ತು, ಮೈ ಕೈಯೆಲ್ಲಾ ನೋಯುತ್ತಿತ್ತು. ರೊಂಯ್‌ಗುಟ್ಟುವ ಟ್ರೈನಿನ ಫ್ಯಾನುಗಳ ಸದ್ದು. ನಿದ್ದೆ ಹೋಗುವ ಮನಸ್ಥಿತಿಯಲ್ಲಿ ಅವನಿರಲೇ ಇಲ್ಲ. ಎದುರಿನ ಬರ್ತ್‌ನಲ್ಲಿ ಮಲಗಿದ್ದ ಮಗ ಗೌತಮನೆಡೆಗೆ ನೋಡಿದ. ಕಣ್ಣು ಮುಚ್ಚಿದ್ದ. ನಿದ್ರೆ ಮಾಡುತ್ತಿದ್ದನೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಹೊಟ್ಟೆಯಲ್ಲಿ ಕಿವುಚಿದಂತೆ ವಿಪರೀತ ಸಂಕಟವಾಗತೊಡಗಿತು. ಬೆಳಿಗ್ಗೆ ಮಗನನ್ನು ಭೇಟಿಯಾದಾಗಲಿಂದಲೂ ಹಾಗೆಯೇ ಆಗುತ್ತಿದೆ. ನೋಡ ನೋಡುತ್ತಲೇ ಎಷ್ಟೊಂದು ಬೆಳೆದುಬಿಟ್ಟಿದ್ದಾನೆ! ಸಮಯ ಎಷ್ಟು ಬೇಗ ಹೋಗುತ್ತದೆ. ನಿನ್ನೆ ಮೊನ್ನೆಯವರೆಗೆ ಅವನನ್ನು ಎತ್ತಿ ಆಡಿಸುತ್ತಿದ್ದೆ! ಈಗ ಅವನು ಸ್ವತಂತ್ರ, ಅವನದೇ ಆಲೋಚನೆಗಳು! ಅವನನ್ನು ಬೆಳೆಸುವಲ್ಲಿ ಎಲ್ಲಿ ತಪ್ಪು ಮಾಡಿದೆವು? ಹೆಂಡತಿ ಸುಶೀಲಾಳ ನೆನಪಾಯಿತು. ಈಗ ಅವಳು ಏನು ಮಾಡುತ್ತಿರಬಹುದು? ತನ್ನ ಮಗ ಮಾಡಹೊರಟಿರುವ ಕಾರ್ಯದ ಬಗ್ಗೆ ಅವಳಿಗೆ ಸ್ವಲ್ಪವೂ ತಿಳಿದಿರಲಿಕ್ಕಿಲ್ಲ. ಅವನ ಆಲೋಚನೆಗಳು ಏನೇ ಇರಬಹುದು, ಆದರೆ ಅವನಲ್ಲಿನ ಮುಗ್ಧತೆ ಇನ್ನೂ ಮಾಸಿಲ್ಲ. ಆ ಮುಗ್ಧತೆಯೇ ಅವನಿಗೆ ಮುಳುವಾಗಿದೆಯೆ? ಅವನ ತಲೆ ಕೆಡಿಸಿದವರು ಯಾರು? ನನ್ನ ಆದರ್ಶಗಳೇನಾಗಿತ್ತು, ಈಗ ಅವನ ವಿಚಾರಗಳು ಯಾವ ದಿಕ್ಕಿನಲ್ಲಿ ಹೋಗುತ್ತಿವೆ? ಅವರು ನಿಯಂತ್ರಿಸಲಾಗದಂತೆ ಕಣ್ಣೀರ ಕೋಡಿ ಹರಿಯುತ್ತಿತ್ತು.
ಎರಡು ದಿನಗಳ ಹಿಂದೆ ಆಫೀಸಿನಲ್ಲಿ ಕೂತಿದ್ದಾಗ ಮಗ ಗೌತಮ ಫೋನ್ ಮಾಡಿದ್ದ, `ಅಪ್ಪ, ನಿಮ್ಮ ಜೊತೆಯಲ್ಲಿ ಮಾತನಾಡಬೇಕು. ದಯವಿಟ್ಟು ಇಲ್ಲಿಗೆ ಬನ್ನಿ. ಆದರೆ ಅಮ್ಮನಿಗೆ ಏನೂ ಹೇಳಬೇಡಿ. ಸುಮ್ಮನೆ ನನ್ನನ್ನು ನೋಡಿ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಬನ್ನಿ. ಇದು ತುರ್ತಾದ ವಿಷಯ. ಇಂದು ರಾತ್ರಿಯೇ ಹೊರಟು ಬನ್ನಿ'. ಸಂಜಯನಿಗೆ ಅಚ್ಚರಿಯಾಗಿತ್ತು ಹಾಗೇ ಗಾಭರಿಯೂ ಆಗಿತ್ತು. ಮಗ ಹಾಸ್ಟೆಲಿಗೆ ಸೇರಿ ಇನ್ನೇನು ನಾಲ್ಕು ವರ್ಷಗಳಾಗುತ್ತವೆ. ಇನ್ನು ಕೆಲವೇ ತಿಂಗಳಲ್ಲಿ ಅವನ ಬಿ.ಇ. ಸಹ ಮುಗಿಯುತ್ತದೆ. ಇಷ್ಟೂ ವರ್ಷಗಳಲ್ಲಿ ಅವನು ಹೀಗೆಂದೂ ಫೋನ್ ಮಾಡಿದವನಲ್ಲ. `ಅಲ್ಲ, ಏನಾದರೂ ಗಲಾಟೆ, ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿಲ್ಲ ತಾನೆ?' ಕೊಂಚ ಗಾಭರಿಯಿಂದಲೇ ಕೇಳಿದ್ದರು. `ಇಲ್ಲ, ಅಂಥದ್ದೇನೂ ಆಗಿಲ್ಲ. ನೀವು ಸುಮ್ಮನೆ ಬನ್ನಿ. ನಿಮ್ಮ ಜೊತೆ ಒಂದರ್ಧ ಗಂಟೆ ಮಾತನಾಡಬೇಕು' ಎಂದಿದ್ದ. `ನೀನೇ ಬಂದಿದ್ದರೆ, ಇಲ್ಲೇ ಮಾತನಾಡಬಹುದಿತ್ತು. ನಿನ್ನ ಅಮ್ಮ ಸಹ ನಿನ್ನನ್ನು ನೋಡಿ ಬಹಳ ದಿನಗಳಾಯಿತು ಎನ್ನುತ್ತಿದ್ದಳು...' ಅವರು ಮಾತು ಮುಗಿಸುವ ಮುನ್ನವೇ ಗೌತಮ, `ಇಲ್ಲ ಇಲ್ಲ. ಅದು ಅಮ್ಮನ ಎದುರು ಮಾತನಾಡುವ ವಿಷಯವಲ್ಲ. ಅದಕ್ಕೇ ಇಲ್ಲಿಗೆ ನಿಮ್ಮನ್ನು ಬರಲು ಹೇಳಿದ್ದು' ಎಂದ. `ಅಲ್ಲಪ್ಪ, ಯಾರನ್ನಾದರೂ ಹುಡುಗಿಯನ್ನು ಲವ್ ಗಿವ್ ಮಾಡುತ್ತಿದ್ದೀಯೇನು...?' ಮತ್ತೆ ಮಾತು ತುಂಡರಿಸಿ, `ಇಲ್ಲಪ್ಪ, ಅಂಥದ್ದೇನೂ ಇಲ್ಲ. ಅದಕ್ಕಿಂತ ಮುಖ್ಯ ವಿಚಾರ, ನಮ್ಮ ದೇಶದ ವಿಚಾರ, ನಮ್ಮ ಧರ್ಮದ ವಿಚಾರ. ನೀವು ಬನ್ನಿ. ಇಲ್ಲಿಗೆ ಬಂದಾಗ ಎಲ್ಲಾ ಹೇಳುತ್ತೇನೆ' ಮಾತು ಮುಂದುವರಿಸದೆ ಗೌತಮ ಫೋನ್ ಇಟ್ಟು ಬಿಟ್ಟಿದ್ದ. ಸಂಜಯನಿಗೆ ಕುತೂಹಲ ಇನ್ನೂ ಹೆಚ್ಚಾಗಿತ್ತು. `ಇನ್ನೂ ಚಿಕ್ಕ ಹುಡುಗ. ಆಗಲೇ ದೇಶ-ಧರ್ಮದ ವಿಚಾರ ಎನ್ನುತ್ತಾನೆ. ಇಲ್ಲಿಗೇ ಬನ್ನಿ ಮಾತನಾಡೋಣ ಎನ್ನುತ್ತಾನೆ. ವಿಷಯ ಏನಿರಬಹುದು?' ಎಂದು ಯೋಚಿಸುತ್ತ ಸುಶೀಲಾಳಿಗೆ ಹೇಳಿ ಅಂದು ರಾತ್ರಿಯೇ ಬಸ್ಸು ಹಿಡಿದು ಹೊರಟಿದ್ದರು.
ಹುಬ್ಬಳ್ಳಿ ತಲುಪಿದಾಗ ಆಗಷ್ಟೇ ಬೆಳಕು ಮೂಡಿತ್ತು. ಆಟೋ ಹಿಡಿದು ಗೌತಮನ ಹಾಸ್ಟೆಲು ತಲುಪಿದರು. ಹೊರಗಡೆ ಗೇಟಲ್ಲೇ ನಿಂತು ಫೋನ್ ಮಾಡಿದರು. ಒಂದೆರಡು ನಿಮಿಷದಲ್ಲೇ ಗೌತಮ ಹೊರಬಂದು ಅವರನ್ನು ಗೆಸ್ಟ್ ರೂಮಿಗೆ ಕರೆದೊಯ್ದ. ಆಗ ತಾನೇ ಸ್ನಾನ ಮಾಡಿ ಬಿಳಿಯ ಶುಭ್ರ ಕುರ್ತಾ ಪೈಜಾಮ ಧರಿಸಿದ್ದ ಮಗನನ್ನು ನೋಡಿ ಸಂಜಯನಿಗೆ ಅಚ್ಚರಿಯಾಯ್ತು. ಅವನೆಂದೂ ಆ ಧಿರಿಸು ತೊಟ್ಟವನಲ್ಲ. ಅದಕ್ಕಿಂತ ಹೆಚ್ಚು ಅಚ್ಚರಿ ಹಾಗೂ ಆಘಾತವಾಗಿದ್ದು ಅವನ ಹಣೆಯಲ್ಲಿನ ಕುಂಕುಮ ಕಂಡು. ಸಂಜಯ ಏನೂ ಹೇಳಲಿಲ್ಲ. ಅವನಿಗೆ ಎಲ್ಲ ವಿಚಿತ್ರವೆನ್ನಿಸುತ್ತಿತ್ತು. ಅವನಿಗರಿವಾಗದಂತೆ ಕೊಂಚ ಹೆದರಿಕೆಯೂ ಆಗತೊಡಗಿತು. ಗೆಸ್ಟ್ ರೂಮಿನಲ್ಲಿ ಸಂಜಯ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ ಮಗನ ಎದುರಿಗೆ ಕೂತ.
`ಏನಿದೆಲ್ಲಾ ನಿನ್ನ ವಿಚಿತ್ರ ವೇಷ, ಹಣೆಯಲ್ಲಿ ಕುಂಕುಮ? ಇದ್ದಕ್ಕಿದ್ದಂತೆ ದೈವ ಭಕ್ತಿ ಹೆಚ್ಚಾದಂತಿದೆ?' ಮಗನನ್ನು ಕೇಳಿದರು. ಅಪ್ಪ ಹಿಡಿದು ತಂದಿದ್ದ ನ್ಯೂಸ್ ಪೇಪರನ್ನು ತಿರುವಿಹಾಕುತ್ತಿದ್ದ ಗೌತಮ ನಗುತ್ತ, `ಏನಿಲ್ಲ. ನಮ್ಮ ಮೂಲ ಗುರುತನ್ನು ಹುಡುಕಿಕೊಳ್ಳುವ ಪ್ರಯತ್ನವಷ್ಟೆ' ಎಂದ. ಸಂಜಯನಿಗೆ ಅವನ ಮಾತಿನ ಅರ್ಥ ತಿಳಿಯಲಿಲ್ಲ. `ಇಲ್ಲ ನಿನ್ನ ಮಾತು ನನಗರ್ಥವಾಗುತ್ತಿಲ್ಲ. ಸ್ವಲ್ಪ ವಿವರಿಸಿ ಹೇಳು' ಕೇಳಿದರು. ಅವನು ಉತ್ತರ ಹೇಳಲಿಲ್ಲ. ತಲೆಬಗ್ಗಿಸಿ ನ್ಯೂಸ್ ಪೇಪರ್ ನೋಡುತ್ತಲೇ ಇದ್ದ.
`ಇಲ್ಲಿ ನೋಡಿ, ಮತ್ತೆ ಸೂರತ್‌ನಲ್ಲಿ ಎಷ್ಟೊಂದು ಬಾಂಬ್‌ಗಳನಿಟ್ಟಿದ್ದಾರೆ! ದುಷ್ಟರು! ದೇವರ ದಯದಿಂದ ಯಾವುದೂ ಸಿಡಿದಿಲ್ಲ' ಗೌತಮ ಸಿಟ್ಟಿನಿಂದ ಹೇಳಿದ. ಅವನ ಮುಖ ಕೆಂಪಾಗಿತ್ತು. ಸಂಜಯನಿಗೆ ಮಗನ ನಡತೆ ಮಾತುಗಳಿಂದ ಒಂದು ರೀತಿಯ ಗಾಭರಿ, ಹೆದರಿಕೆಯಾಗಿತ್ತು.
`ಹೌದು, ಬಾಂಬುಗಳನ್ನು ಇಡುವವರೆಲ್ಲಾ ದುಷ್ಟರು, ಕ್ರೂರಿಗಳು. ಅದರಲ್ಲಿ ಎರಡು ಮಾತಿಲ್ಲ' ಎಂದಷ್ಟೇ ಹೇಳಿ ಮಗನನ್ನೇ ನೋಡುತ್ತಿದ್ದರು. ಅವನು ತಲೆ ಬಗ್ಗಿಸಿಯೇ ಇದ್ದ. ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಕೊನೆಗೆ ತಲೆ ಎತ್ತಿ,
`ಅಪ್ಪ, ನಿಮಗೊಂದು ವಿಷಯ ಹೇಳಬೇಕು. ಅದನ್ನು ಯಾರಿಗೂ ಹೇಳುವುದಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳಿ' ಎಂದು ಹೇಳಿದ. ಅವನು ತಲೆ ಎತ್ತಿ ಹೇಳುತ್ತಿದ್ದರೂ ಅವನಿಗೆ ಅಪ್ಪನ ಕಣ್ಣುಗಳನ್ನು ನೇರ ನೋಡಲಾಗುತ್ತಿರಲಿಲ್ಲ.
`ನಿನಗೇ ಗೊತ್ತಲ್ಲ. ನನಗೆ ಎಲ್ಲರ ಕಲ್ಪನೆಯ ದೇವರ ಬಗ್ಗೆ ನಂಬಿಕೆ ಇಲ್ಲವೆಂದು?' ಎಂದರು.
`ಇಲ್ಲ, ನೀವು ಪ್ರಮಾಣ ಮಾಡಲೇಬೇಕು' ಎಂದು ಹೇಳಿ ಅಪ್ಪನ ಕೈ ಹಿಡಿದ.
`ನನ್ನ ಪ್ರಮಾಣದ ಸ್ಥಿರತೆ ನೀನು ಹೇಳುವ ವಿಷಯವನ್ನು ಅವಲಂಬಿಸಿರುತ್ತದೆ. ನಾನು ನನ್ನ ಪ್ರಮಾಣವನ್ನೂ ಮುರಿಯಬಹುದು...'
`ಇಲ್ಲ. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ನೀವು ನನಗೆ ಚಿಕ್ಕಂದಿನಿಂದಲೂ ನನಗೆ ಹೇಳುತ್ತಿದ್ದಿರಿ. ನಾನು ಏನೇ ಮಾಡಿದರೂ ನಿಮಗೆ ತಿಳಿಸಿ ಹೇಳಿಯೇ ಮಾಡಬೇಕೆಂದು. ನಾನು ನಿಮಗೆ ತಿಳಿಸಿ ಹೇಳದೆ ಏನನ್ನೂ ಮಾಡಿಲ್ಲ. ನನ್ನ ವಿಚಾರಗಳನ್ನು ತಿಳಿದ ನಂತರ ನೀವೂ ಸಹ ನನ್ನ ಕಾರ್ಯಕ್ಕೆ ಸಮ್ಮತಿಸುತ್ತೀರಿ. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ದಯವಿಟ್ಟು ಪ್ರಮಾಣ ಮಾಡಿ'. ಗೌತಮ ಹಿಡಿದ ಕೈ ಬಿಡಲಿಲ್ಲ. ಸಂಜಯ ತನ್ನ ಕೈ ಹಿಡಿದಿದ್ದ ಮಗನ ಕೈಯೆಡೆಗೆ ನೋಡಿದ. ಮಗನ ಕೈ ಎಷ್ಟು ಬೆಳೆದು ಬಿಟ್ಟಿದೆ. ಇದೇ ಕೈಗಳಲ್ಲವೆ ಅವನು ಹಸುಗೂಸಾಗಿದ್ದಾಗ ತನ್ನ ಒಂದು ಬೆರಳನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದುದು.
ಸಂಜಯ ಏನೊಂದೂ ಹೇಳಲಿಲ್ಲ. ಸುಮ್ಮನಿದ್ದ. ಗೌತಮ ಮತ್ತೆ, `ಅಪ್ಪ, ಪ್ಲೀಸ್...' ಎಂದ.
`ಅಪ್ಪ, ಪ್ಲೀಸ್ ಚಾಕೊಲೇಟ್ ಕೊಡಿಸು' ಎನ್ನುವಂತಿತ್ತು ಅವನ ಧ್ವನಿ.
`ನನ್ನ ಮೇಲೆ ನಂಬಿಕೆಯಿದ್ದರೆ ಹೇಳು. ಇಲ್ಲದಿದ್ದರೆ ಬೇಡ. ನಾನು ಯಾವುದೇ ಪ್ರಮಾಣ ಮಾಡುವುದಿಲ್ಲ. ನನಗೆ ಅವುಗಳಲ್ಲೆಲ್ಲಾ ನಂಬಿಕೆಯಿಲ್ಲ' ಮಗನ ಕೈಯಿಂದ ಕೈ ಬಿಡಿಸಿಕೊಂಡರು.
`ಆಯ್ತು ಹೇಳುತ್ತೇನೆ. ಆದರೆ ದಯವಿಟ್ಟು ಯಾರಲ್ಲಿಯೂ ಹೇಳಬೇಡಿ. ಕಳೆದ ಒಂದು ತಿಂಗಳಿಂದ ನಡೆದ ಘಟನೆಗಳನ್ನು ನೋಡುತ್ತಿದ್ದೀರಲ್ಲ. ಬೆಂಗಳೂರಲ್ಲಿ, ಅಹ್ಮದಾಬಾದ್‌ನಲ್ಲಿ ಬಾಂಬ್‌ಗಳ ಸ್ಫೋಟ. ಇದನ್ನೆಲ್ಲಾ ಮಾಡುತ್ತಿರುವವರು ಯಾರು?' ಗೌತಮನ ಪ್ರಶ್ನೆಗೆ ಏನು ಹೇಳಬೇಕೆಂದು ಸಂಜಯನಿಗೆ ತೋಚಲಿಲ್ಲ. ಈ ಪ್ರಶ್ನೆಗಳನ್ನು ಕೇಳುತ್ತಿರುವವನು ತಮ್ಮ ಮಗನೇ? ಎಂದು ಅಚ್ಚರಿಯಾಗತೊಡಗಿತ್ತು ಅವನಿಗೆ.
ಮತ್ತೆ ಗೌತಮ ಮುಂದುವರಿಸಿದ, `ಇದೆಲ್ಲಾ ಆ ಮುಸಲ್ಮಾನರದೇ ಕೆಲಸ'. ಅವನ ಮಾತಿನಿಂದ ತನ್ನ ನೆತ್ತಿಯ ಮೇಲೆ ಬರಸಿಡಿಲು ಬಡಿದಂತಾಯ್ತು ಸಂಜಯನಿಗೆ. ಕೈಕಾಲು ನಡುಗತೊಡಗಿತು, ಬಾಯಿ ಒಣಗತೊಡಗಿತು. ಅಲ್ಲಿಯೇ ಇದ್ದ ಜಗ್‌ನಿಂದ ಗ್ಲಾಸಿಗೆ ನೀರು ಬಗ್ಗಿಸಿಕೊಂಡರು. ಅವರ ಕೈ ನಡುಕದಿಂದ ಒಂದಷ್ಟು ನೀರು ಚೆಲ್ಲಿತು. ಮುಂದಕ್ಕೆ ಬಾಗಿದ ಗೌತಮ ಅವರ ಗ್ಲಾಸಿಗೆ ನೀರು ಸರಿಯಾಗಿ ಬಗ್ಗಿಸಿ ಅವರಿಗೆ ನೀಡಿದ. ನೀರು ಕುಡಿದ ಸಂಜಯ ಕುರ್ಚಿಯಿಂದೆದ್ದು ಹಾಸಿಗೆಯ ಮೇಲೆ ಕೂತು ಗೋಡೆಗೊರಗಿ ಕಣ್ಣು ಮುಚ್ಚಿದ. ಎದೆಯ ಬಡಿತ ತೀವ್ರವಾಗಿತ್ತು. ಎದೆಯ ಮೇಲೆ ಎಡಗೈ ಇಟ್ಟುಕೊಂಡ. ಕೂಡಲೇ ಎದ್ದ ಗೌತಮ, `ಅಪ್ಪ, ಏನಾಯಿತು?' ಎಂದ.
`ಇಲ್ಲ, ಏನಾಗಿಲ್ಲ. ನೀನು ಹೇಳುವುದು ಮುಂದುವರಿಸು...' ಎಂದರು ಕಣ್ಣು ತೆರೆಯದೆ.
ಗೌತಮ ಮುಂದುವರಿಸಿದ. `ಮುಸಲ್ಮಾನರು ಹದ್ದುಮೀರಿ ಹೋಗಿದ್ದಾರೆ. ಭಾರತ ಮಾತ್ರವಲ್ಲ, ಇಡೀ ಜಗತ್ತನ್ನೇ ಹಾಳುಮಾಡುತ್ತಿದ್ದಾರೆ. ಭಾರತದ ಮೂಲ ನಿವಾಸಿಗಳು ನಾವು ಹಿಂದೂಗಳು. ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹಿಂದೂಗಳನ್ನು ಕೊಚ್ಚಿ ಕೊಲ್ಲುತ್ತಿದ್ದಾರೆ...'
ಸಂಜಯನ ಮನಸ್ಸು ಸುಮಾರು ಹನ್ನೆರಡು-ಹದಿಮೂರು ವರ್ಷಗಳ ಹಿಂದಕ್ಕೆ ಹೋಯಿತು. ಆಗ ಗೌತಮನಿಗೆ ಎಂಟು ವರ್ಷ. ಬಹುಶಃ ಆಗ ಅವನು ಮೂರನೇ ಕ್ಲಾಸಿನಲ್ಲಿ ಇದ್ದ ಎನ್ನಿಸುತ್ತದೆ. ಒಂದು ದಿನ ಶಾಲೆಯಿಂದ ಬಂದವನೆ, `ಅಪ್ಪ, ನಾವು ಹಿಂದೂಗಳಾ, ಮುಸಲ್ಮಾನರಾ?' ಎಂದು ಕೇಳಿದ. ಸಂಜಯ ಸುಶೀಲಾ ಇಬ್ಬರೂ ಆ ಪ್ರಶ್ನೆಯಿಂದ ಗಾಭರಿಗೊಂಡರು, ಇಬ್ಬರೂ ಮುಖ ಮುಖ ನೋಡಿಕೊಂಡರು. ಅವನಿಗೇನಾದರೂ ವಿಷಯ ತಿಳಿದುಹೋಗಿದೆಯಾ? ಯಾರಾದರೂ ಅವನಿಗೆ ವಿಷಯ ತಿಳಿಸಿಬಿಟ್ಟರಾ? `ಯಾಕೀಗ ಆ ಪ್ರಶ್ನೆ?' ಕೊಂಚ ಗಡುಸಾಗಿಯೇ ಸಂಜಯ ಕೇಳಿದ್ದ. ಧ್ವನಿಯಲ್ಲಿನ ಗಡಸುತನದಿಂದಾಗಿ ಬಾಲಕ ಗೌತಮನೂ ಬೆದರಿದ್ದ. `ಯಾಕಿಲ್ಲಾ, ನಮ್ಮ ಟೀಚರ್ ಕೇಳಿದರು' ಎಂದ. ಸಂಜಯನಿಗೆ ನೆನಪಾಯಿತು; ಶಾಲೆಯ ಅರ್ಜಿಯಲ್ಲಿ `ಧರ್ಮ/ಜಾತಿ' ಎಂದಿರುವೆಡೆ `ಭಾರತೀಯರು' ಎಂದು ಮಾತ್ರ ಬರೆದಿದ್ದ. ಆದ್ದರಿಂದಲೇ ಟೀಚರ್ ಆ ಪ್ರಶ್ನೆ ಕೇಳಿರಬಹುದು ಎಂದುಕೊಂಡ. ಈಗ ಬೆಳೆದು ನಿಂತ ಗೌತಮ, `ನಾವು ಹಿಂದೂಗಳು' ಎನ್ನುತ್ತಿದ್ದಾನೆ.
`ಅಪ್ಪ, ನಾವಿದನ್ನೆಲ್ಲಾ ಕೊನೆಗಾಣಿಸಬೇಕು. ಭರತ ರಾಷ್ಟ್ರ ನಮ್ಮದು. ಭಾರತದಲ್ಲಿರುವ ಪರಕೀಯರು ಯಾರೇ ಆದರೂ ಅವರು ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು. ಇಲ್ಲದಿದ್ದಲ್ಲಿ ಅವರು ಪಾಕಿಸ್ತಾನಕ್ಕೋ, ಮತ್ತೊಂದು ದೇಶಕ್ಕೋ ತೊಲಗಲಿ. ನಾವಿವರನ್ನು ಹಾಗೆಯೇ ಬಿಟ್ಟಲ್ಲಿ ಅವರೇ ನಮ್ಮನ್ನು ಆಳಲು ಪ್ರಾರಂಭಿಸುತ್ತಾರೆ. ಇಡೀ ಹಿಂದೂ ಧರ್ಮವನ್ನೇ ನಾಶಮಾಡಿಬಿಡುತ್ತಾರೆ...' ಗೌತಮ ಹೇಳುತ್ತಲೇ ಇದ್ದ.
ಸಂಜಯ ಮೊಣಕಾಲುಗಳನ್ನು ಎದೆಗಾನಿಸಿ ಅದಕ್ಕೆ ತಲೆ ಆನಿಸಿ ಎರಡೂ ಕೈಗಳನ್ನು ಮಡಚಿ ಮುಚ್ಚಿಕೊಂಡಿದ್ದ. ಅವನ ಕಣ್ಣಿಂದ ನೀರು ಸುರಿಯುತ್ತಿದ್ದುದು ಮಗ ಗೌತಮನಿಗೆ ತಿಳಿಯಲಿಲ್ಲ.
`ಅಪ್ಪ, ನಾನೀಗ ನಿಮ್ಮೊಂದಿಗೆ ಮಾತನಾಡಲು ಕರೆದಿದ್ದು ಒಂದು ಮುಖ್ಯ ವಿಷಯ ತಿಳಿಸಲು. ನಮ್ಮದೊಂದು ಭೂಗತ ಸಂಘಟನೆಯೊಂದಿದೆ. ನಾವು ದೇಶದಾದ್ಯಂತ ಸಂಚರಿಸಿ ನಮ್ಮ ಶಾಖೆಗಳೊಂದಿಗೆ ನಮ್ಮ ಇಡೀ ಜಾಲವನ್ನು ದೇಶವೆಲ್ಲಾ ಪ್ರಸರಿಸಬೇಕೆಂಬ ಸಂಕಲ್ಪ ತೊಟ್ಟಿದ್ದೇವೆ. ನಮ್ಮ ಭಾರತಮಾತೆಯನ್ನು ಉಳಿಸಿಕೊಳ್ಳಬೇಕಿದೆ. ಈಗ ಆ ಕೆಲಸ ಮಾಡದಿದ್ದಲ್ಲಿ ತುಂಬಾ ತಡವಾಗಿಬಿಡುತ್ತದೆ. ಅವಶ್ಯಕವಿದ್ದಲ್ಲಿ ನಾವೂ ಬಾಂಬುಗಳನ್ನು ಇಡುತ್ತೇವೆ. ನಾವೂ ಒಂದು ಆತ್ಮಹತ್ಯಾ ದಳವೊಂದನ್ನು ಸಿದ್ಧಪಡಿಸುತ್ತಿದ್ದೇವೆ, ಅವರನ್ನು ಕೊಚ್ಚಿ ಕೊಂದುಹಾಕುತ್ತೇವೆ. ತಾಯಿಯ ರಕ್ಷಣೆಗಾಗಿ ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ನಾನು ಹೊರಡುತ್ತಿದ್ದೇನೆ. ಮತ್ತೆಂದು ವಾಪಸ್ಸು ಬರುತ್ತೇನೋ ಗೊತ್ತಿಲ್ಲ. ದೇಶವೇ ಹಾಳಾಗುತ್ತಿರುವಾಗ ಶಿಕ್ಷಣ ಏಕೆ ಬೇಕು? ನಾನು ಕಾಲೇಜು ಬಿಟ್ಟು ಹೊರಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಆಶೀರ್ವದಿಸಿ'
ಗೌತಮ ಎದ್ದು ಬಂದು ಅಪ್ಪನ ಕೈ ಹಿಡಿದ. ತಲೆಬಗ್ಗಿಸಿದ್ದ ಸಂಜಯ ತಲೆ ಎತ್ತಲಿಲ್ಲ. ಅವನು ಅಳುವುದು ಇನ್ನೂ ಬಾಕಿ ಇತ್ತು. ಗೌತಮ ಅಪ್ಪನ ತಲೆ ಬಲವಂತವಾಗಿ ಮೇಲೆತ್ತಿದ. ಸಂಜಯ ಅಳುತ್ತಿದುದನ್ನು ನೋಡಿ, `ಅಪ್ಪ, ನಾನು ಹೋಗುತ್ತೇನೆಂದು ನಿಮಗೆ ದುಃಖವೆ? ಅಳಬೇಡಿ. ನನ್ನ ಘನ ಕಾರ್ಯದ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ' ಎಂದ ಅಪ್ಪನನ್ನು ತಬ್ಬಿಕೊಂಡು.
ಸ್ವಲ್ಪ ಹೊತ್ತಾದ ಮೇಲೆ ಏನೋ ನಿರ್ಧರಿಸಿದವನಂತೆ ಸಂಜಯ ಎದ್ದುನಿಂತ. ಬಾತ್‌ರೂಮಿಗೆ ಹೋಗಿ ಮುಖತೊಳೆದುಕೊಂಡು ಬಂದ. ಮತ್ತೆ ಗೌತಮನ ಎದುರಿಗೆ ಕೂತು, ಗೌತಮ, ನಿನ್ನ ಮಾತುಗಳನ್ನೆಲ್ಲ ಕೇಳಿದೆ. ನಿನ್ನ ಮಾತಿನಲ್ಲಿ ಸತ್ಯಾಂಶವಿದೆ ಎನ್ನಿಸುತ್ತಿದೆ. ನನಗೂ ಭಾರತದಲ್ಲಿ, ಈ ಜಗತ್ತಿನಲ್ಲಿ ನಡೆಯುತ್ತಿರುವುದನ್ನೆಲ್ಲ ಕಂಡು ಮನಸ್ಸು ರೋಸಿಹೋಗಿತ್ತು. ನಿನಗಿಂತ ದೊಡ್ಡವನಾದ ನನಗೆ ನಿನ್ನ ಆಲೋಚನೆಗಳು ಮೊದಲೇಕೆ ಬರಲಿಲ್ಲ? ಇರಲಿ, ನಿನ್ನ ಮನಸ್ಸಿಗೆ ಈ ವಿಚಾರಗಳನ್ನು ತುಂಬಿದವರು ಪುಣ್ಯಾತ್ಮರು. ಅವರನ್ನು ನಾನು ಅಭಿನಂದಿಸಲೇಬೇಕು.' ಅಪ್ಪನ ಮಾತುಗಳನ್ನು ಕೇಳಿ ಗೌತಮನಿಗೆ ಅಚ್ಚರಿಯಾಯಿತು. ಅಪ್ಪ ನಿಜವಾಗಿ ಹೇಳುತ್ತಿದ್ದಾರೋ ಅಥವಾ ನಾಟಕವಾಡುತ್ತಿದ್ದಾರೊ?
`ನನಗನ್ನಿಸುತ್ತಿದೆ, ನಾನೂ ಸಹ ನಿನ್ನ ಕಾರ್ಯದಲ್ಲಿ ಭಾಗಿಯಾಗಬೇಕೆಂದು. ನಾನು ಜೀವನದಲ್ಲಿ ಅತ್ಯಂತ ಘೋರವಾದ ತಪ್ಪು ಮಾಡಿಬಿಟ್ಟಿದ್ದೇನೆ. ಆ ತಪ್ಪಿನಿಂದಾಗಿ ನಿನಗೂ ನಾನು ಮಹಾಪರಾಧ ಮಾಡಿದ್ದೇನೆ. ಆ ತಪ್ಪನ್ನು ಸರಿಪಡಿಸಲು ನಿನ್ನ ಸಹಕಾರ ನನಗೆ ಬೇಕೇ ಬೇಕು. ನೀನು ಹೇಳಿದ್ದು ನಿಜ. ಅವಶ್ಯಕವಿದ್ದಲ್ಲಿ ಅವರನ್ನು ಕೊಚ್ಚಿ ಕೊಲ್ಲಬೇಕೆಂದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಈ ಕೊಚ್ಚಿ ಕೊಲ್ಲುವ ಕೆಲಸ ನಾವಿಬ್ಬರೂ ಪ್ರಾರಂಭಿಸೋಣ. ಅದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕಿದೆ' ಸಂಜಯನ ಮಾತುಗಳಿಂದ ಗೌತಮ ಗಾಭರಿಗೊಂಡ.
`ಅಪ್ಪ, ಅದೇನು ನೀವು ಮಾಡಿರುವ ಅಂಥಾ ತಪ್ಪು', ಕುತೂಹಲ ತಡೆಯಲಾರದೆ ಗೌತಮ ಕೇಳಿದ.
`ಈಗ ಇಲ್ಲಿ ಅದನ್ನು ಹೇಳುವುದು ಬೇಡ. ಇದೇ ದಿನ ಮನೆಗೆ ಹೋಗೋಣ. ಅಲ್ಲಿಂದ ನೀನು ಸ್ವತಂತ್ರ. ನೀನು ಬೇಕಾದ್ದು ಮಾಡು. ನಿನ್ನ ಎಲ್ಲ ಕೆಲಸಕ್ಕೂ ನನ್ನ ಆಶೀರ್ವಾದವಿದೆ. ನನ್ನ ಮಗ ಧರ್ಮರಕ್ಷಕನೆಂಬ ಹೆಮ್ಮೆ ನನಗೂ ಇದೆ'. ಸಂಜಯ ಮಗನನ್ನು ಅಪ್ಪಿಕೊಂಡು ಬೆನ್ನು ತಟ್ಟಿದ. ಅಪ್ಪನ ಈ ಬದಲಾವಣೆಗಳನ್ನು ಕಂಡು ಗೌತಮ ಚಕಿತಗೊಂಡಿದ್ದ.
`ಆದರೆ, ಊರಿಗೆ ಈ ದಿನವೇ ಹೊರಡಬೇಕೇ...?' ಎಂದ.
`ಹೌದು, ಈ ದಿನವೇ ಹೊರಟರೆ ಮಾತ್ರ ನನ್ನ ತಪ್ಪನ್ನು ಸರಿಪಡಿಸಬಹುದು. ಈ ವಿಷಯ ನಾನು ಯಾರಲ್ಲಿಯೂ ಹೇಳುವುದಿಲ್ಲ. ನೀನೂ ಸಹ ಹೇಳಬೇಡ, ನಿನ್ನ ಸಂಘಟನೆಯವರಿಗೂ ಸಹ. ನಾನು ಈಗಲೇ ಹೊರಟು ಟ್ರೈನ್ ಟಿಕೆಟ್ ಬುಕ್ ಮಾಡಿಸಿ ಬರುತ್ತೇನೆ. ಬಸ್ ಪ್ರಯಾಣ ತುಂಬಾ ಆಯಾಸವಾಗುತ್ತದೆ. ಹಾಗೆಯೇ ನನ್ನ ಗೆಳೆಯರ ಮನೆಗೆ ಹೋಗಿ ಸಂಜೆ ನೇರವಾಗಿ ರೈಲ್ವೇ ಸ್ಟೇಶನ್‌ಗೆ ಬಂದುಬಿಡುತ್ತೇನೆ. ನೀನು ಅಲ್ಲಿಗೇ ಬಂದುಬಿಡು' ಎಂದು ಹೇಳಿ ತಂದಿದ್ದ ಕೈ ಚೀಲ ಹಿಡಿದು ನಿಂತ ಸಂಜಯ.
`ಅಪ್ಪ, ತಿಂಡಿ ತಿಂದು ಹೋಗೋಣ..' ಎಂದು ಗೌತಮ.
`ಬೇಡ, ಈಗ ಅದಕ್ಕೆಲ್ಲಾ ಸಮಯವಿಲ್ಲ. ನಾನು ಅಲ್ಲೇ ಎಲ್ಲಾದರೂ ತಿನ್ನುತ್ತೇನೆ. ಸಂಜೆ ಫೋನ್ ಮಾಡುತ್ತೇನೆ. ರೈಲ್ವೇ ಸ್ಟೇಶನ್‌ಗೆ ಬಂದುಬಿಡು' ಎನ್ನುತ್ತಾ ಹೊರಹೊರಟ. ತಕ್ಷಣ ಏನೋ ನೆನಪುಮಾಡಿಕೊಂಡು, `ಹ್ಹಾಂ ಮರೆತಿದ್ದೆ, ನಿನ್ನ ಅಮ್ಮ ನಿನಗೆ ಇಷ್ಟವಾದ ಕೊಬ್ಬರಿ ಮಿಠಾಯಿ ಕಳುಹಿಸಿದ್ದಾಳೆ. ತಗೋ' ಎಂದು ತಾವು ತಂದಿದ್ದ ಕೈಚೀಲದಿಂದ ಪೊಟ್ಟಣವೊಂದನ್ನು ತೆಗೆದುಕೊಟ್ಟರು. ಗೌತಮ ಅದನ್ನು ಅಲ್ಲೇ ಬಿಡಿಸಿ ಕೊಬ್ಬರಿ ಮಿಠಾಯಿಯ ಒಂದು ತುಂಡನ್ನು ಬಾಯಿಗೆ ಹಾಕಿಕೊಂಡ. ಅದನ್ನು ನೋಡುತ್ತಿದ್ದ ಸಂಜಯ, `ಆ ಸಿಹಿತಿಂಡಿಯಲ್ಲಿ ಯಾವುದಾದರೂ ಧರ್ಮದ ವಾಸನೆ ಬರುತ್ತಿದೆಯೆ?' ಎಂದು ಕೇಳಿದ. ಆ ಮಾತಿನ ಸೂಚ್ಯ ಅರ್ಥವಾಗದ ಗೌತಮ ನಗುತ್ತಾ, `ನನ್ನ ಅಮ್ಮನ ವಾಸನೆ ಬರುತ್ತಿದೆ' ಎಂದ.
ನೇರ ರೈಲ್ವೇ ಸ್ಟೇಶನ್‌ಗೆ ಹೋಗಿ ಟಿಕೆಟ್ ಬುಕ್ ಮಾಡಿಸಿ ಸಂಜಯ ಅಲ್ಲೇ ಇದ್ದ ಬೆಂಚಿನ ಮೇಲೆ ಕೂತ. ತನ್ನ ಮಗನಲ್ಲಿ ಆಗಿರುವ ಬದಲಾವಣೆಗಳು ಕಂಡು ಅವನಿಗೆ ತೀವ್ರ ಆಘಾತವಾಗಿತ್ತು. ತಾನು ಇಷ್ಟು ವರ್ಷ ಯಾವುದನ್ನು ಬಲವಾಗಿ ನಂಬಿ, ಆಚರಿಸಿ ಬದುಕುತ್ತಿದ್ದೆನೋ ಅದಕ್ಕೆಲ್ಲಾ ವಿರುದ್ಧವಾಗಿ ಮಗ ಬೆಳೆದಿದ್ದ. ಅವರಿಗೆ ಹೊರಗೆ ಎಲ್ಲಿಗೂ ಹೋಗುವುದು ಇಷ್ಟವಾಗಲಿಲ್ಲ. ಅಲ್ಲೇ ರೈಲ್ವೇ ಸ್ಟೇಶನ್ನಿನಲ್ಲೇ ಕೂತು ಹೋಗಿಬರುವವರನ್ನು ನೋಡುತ್ತಿದ್ದ. ಟ್ರೈನುಗಳು ಬರುತ್ತಿದ್ದವು, ಹೋಗುತ್ತಿದ್ದವು. ಒಂದು ಬೋಗಿಯೊಳಗೆ ಎಲ್ಲ ಧರ್ಮದವರೂ ಹತ್ತುತ್ತಾರೆ. ತಮ್ಮ ತಮ್ಮ ಸ್ಟೇಶನ್ ಬಂದಂತೆ ಇಳಿದುಹೋಗುತ್ತಾರೆ. ಇಷ್ಟವೋ ಕಷ್ಟವೋ ಅಡ್ಜಸ್ಟ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಬದುಕೆಂಬ ಟ್ರೈನಿನಲ್ಲಿ ಅದೇಕೆ ಸಾಧ್ಯವಾಗುವುದಿಲ್ಲ.
ಮನೆಗೆ ಸುಶೀಲಾಳಿಗೆ ಫೋನ್ ಮಾಡಿದರು. ನಡೆದದ್ದೆಲ್ಲಾ ನಿಧಾನವಾಗಿ ವಿವರಿಸಿ ಹೇಳಿದರು. ಅತ್ತ ಸುಶೀಲಾ ಅಳುತ್ತಿದ್ದಳು. ಸಂಜಯ ಧೈರ್ಯಹೇಳಿದ. ತಾವಿಬ್ಬರೂ ಬೆಳಿಗ್ಗೆ ಬೆಂಗಳೂರು ತಲುಪುವುದಾಗಿ ತಿಳಿಸಿದರು. ಆಕೆಯ ಆ ವಿಶೇಷ ಧಿರಿಸನ್ನು ಧರಿಸಿರಲು ಹೇಳಿದರು. ಆಕೆ ತನ್ನಲ್ಲಿ ಅದು ಇಲ್ಲವೆಂದು ತಿಳಿಸಿದಳು. ಇಲ್ಲದಿದ್ದಲ್ಲಿ ಕೊಂಡುತರಲು ಹೇಳಿದರು.
ಬೆಂಗಳೂರು ತಲುಪಿದಾಗ ಬೆಳಿಗ್ಗೆ ಆರು ಗಂಟೆಯಾಗಿತ್ತು. ಅತ್ತಿದ್ದರಿಂದಲೋ ಅಥವಾ ನಿದ್ರೆ ಇಲ್ಲದ್ದರಿಂದಲೋ ಏನೋ ಸಂಜಯನ ಕಣ್ಣುಗಳು ಕೆಂಪಗಾಗಿದ್ದವು. ಆಟೋ ಹಿಡಿದು ಮನೆ ತಲುಪಿದರು. ದಾರಿಯಲ್ಲಿ ತಂದೆ ಮಗ ಇಬ್ಬರೂ ಏನೂ ಮಾತನಾಡಿರಲಿಲ್ಲ. ಗೌತಮನೇ ಮೊದಲು ಇಳಿದು ಮನೆಯೊಳಕ್ಕೆ ಹೊರಟ. ಸಂಜಯ ಹಿಂಬಾಲಿಸಿದ. ಮನೆಯ ಮುಂದಿನ ಬಾಗಿಲು ತೆಗೆದೇ ಇತ್ತು. ಒಳಕ್ಕೆ ಕಾಲಿಡುತ್ತಲೇ ಗೌತಮ, `ಅಮ್ಮಾ' ಎಂದು ಕರೆದ. ಹಾಲಿನ ಸೋಫಾದ ಮೇಲೆ ಕೂತ ಸಂಜಯ ಅಮ್ಮನಿದ್ದ ಕೋಣೆಗೆ ಹೋಗಲು ಯತ್ನಿಸಿದ ಗೌತಮನನ್ನು ತಡೆದು ಅಲ್ಲೇ ಪಕ್ಕದಲ್ಲೇ ಗೌತಮನನ್ನು ಕೂರುವಂತೆ ಹೇಳಿದ. ಗೌತಮನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡಿತು.
`ನಿನ್ನ ಅಮ್ಮನನ್ನು ನಾನೇ ಕರೆಯುತ್ತೇನೆ. ಇಲ್ಲೇ ಕೂರು' ಎಂದ ಸಂಜಯ `ಶಕೀಲಾ' ಎಂದು ಕರೆದ. ಗೌತಮನಿಗೆ ಅಚ್ಚರಿಯಾಯಿತು. `ಶಕೀಲಾ?.. ಯಾರಿದು ಶಕೀಲಾ?' ಎಂದ ಗೊಂದಲದಿಂದ.
`ಶಕೀಲಾ ಎಂದರೂ ಒಂದೇ, ಸುಶೀಲಾ ಎಂದರೂ ಒಂದೆ. ಏನೆಂದು ಕರೆದರೂ ಅದು ನಿನ್ನ ಅಮ್ಮನೇ' ಎಂದ ಸಂಜಯ.
ರೂಮಿನಿಂದ ಸುಶೀಲಾ ಉರುಫ್ ಶಕೀಲಾ ಹೊರಬಂದಳು. ಬುರ್ಖಾ ತೊಟ್ಟಿದ್ದಳು. ಮುಖ ಕಾಣಿಸುತ್ತಿತ್ತು. ತುಂಬಾ ಅತ್ತಿದ್ದರಿಂದ ಆಕೆಯ ಕಣ್ಣೂ ಸಹ ಕೆಂಪಗಾಗಿತ್ತು. ಆಕೆಯೂ ನಿದ್ರೆ ಮಾಡಿಲ್ಲವೆಂಬುದು ತಿಳಿಯುತ್ತಿತ್ತು.
ಗೌತಮ ಸಿಟ್ಟಿನಿಂದ, `ಏನಿದೆಲ್ಲಾ ತಮಾಷೆ? ಅಮ್ಮಾ ಏನಿದು ಹುಡುಗಾಟಿಕೆ? ಯಾಕ್ಹೀಗೆ ಹುಚ್ಚರಂಗೆ ಆಡ್ತಾ ಇದೀರ?' ಎಂದು ಎದ್ದು ನಿಂತು ಅಮ್ಮನ ಬುರ್ಖಾ ಕಿತ್ತು ಹಾಕಲು ಹೊರಟ. ಶಕೀಲಾ ಅಲ್ಲೇ ಕುಸಿದು ಕೂತಳು. ಗೌತಮನೂ ಕೂತ. ಅವನನ್ನು ತಬ್ಬಿ ಶಕೀಲಾ ಅಳತೊಡಗಿದಳು.
`ಗೌತಮ, ನಿನ್ನ ತಾಯಿ ಒಬ್ಬ ಮುಸಲ್ಮಾನಳು. ಅವಳ ಹೊಟ್ಟೆಯ ಕುಡಿ ನೀನು. ಅವಳ ಎದೆಹಾಲು ಕುಡಿದು ದೊಡ್ಡವನಾದವನು ನೀನು. ಶಕೀಲಾ ಆಗಿದ್ದ ಅವಳು ಸಮಾಜದ ಕಣ್ಣಿಗೆ ಸುಶೀಲಾ ಆಗಬೇಕಾಯಿತು' ಹೇಳಿದ ಸಂಜಯ.
ತಬ್ಬಿಬ್ಬಾದ ಗೌತಮನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅಮ್ಮ ಅಪ್ಪ ಇಬ್ಬರನ್ನೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. `ಅಂದರೆ ಅಮ್ಮ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ?' ಕೊನೆಗೆ ಸಾವರಿಸಿಕೊಂಡು ಕೇಳಿದ.
ಸಂಜಯ ಜೋರಾಗಿ ನಕ್ಕ. `ಮತಾಂತರ?.. ಯಾವುದೇ ಮತದಲ್ಲಿ ನಂಬಿಕೆ ಇಲ್ಲದ ನಮಗೆ ಮತಾಂತರ ಏಕೆ ಬೇಕು? ಮಾನವ ಧರ್ಮದಲ್ಲಿ ಮಾತ್ರ ನಂಬಿಕೆ ಉಳ್ಳವರು ನಾವು. ನಿನಗೆಂದಾದರೂ ನಾವು ಇಂಥದೇ ಧರ್ಮಕ್ಕೆ ಸೇರಿದವರೆಂದು ಹೇಳಿದ್ದೇವೆಯೆ? ನಮ್ಮ ಮನೆಯಲ್ಲಿ ಯಾವುದಾದರೂ ಧರ್ಮದ ಆಚರಣೆಯನ್ನು ಕಂಡಿರುವೆಯಾ ನೀನು? ನೀನೂ ಸಹ ಎಲ್ಲ ಧರ್ಮಗಳನ್ನೂ ಮೀರಿ ಬೆಳೆದು ಉತ್ತಮ ಮನುಷ್ಯನಾಗಬಹುದೆಂದು ನಾವು ಕನಸು ಕಂಡಿದ್ದೆವು. ನಿನ್ನನ್ನು ಅದೇ ರೀತಿ ಬೆಳೆಸಿದ್ದೆವು. ಆದರೆ ಈಗ ನೀನು ದೊಡ್ಡವನಾಗಿದ್ದೀಯ. ನಿನಗೆ ನಿನ್ನದೇ ಆಲೋಚನೆ, ವಿಚಾರಗಳನ್ನು ಹೊಂದುವ ಸ್ವಾತಂತ್ರ್ಯ ಇದೆ. ನಾವು ಯಾವುದಕ್ಕೂ ಅಡ್ಡಿ ಬರುವುದಿಲ್ಲ' ಎಂದು ಹೇಳಿ ಸುಮ್ಮನಾದ.
ಗೌತಮನಿಗೆ ಏನು ಹೇಳಲೂ ತೋಚಲಿಲ್ಲ. ಅತ್ತ, ಅಮ್ಮ ಅಳುತ್ತಲೇ ಇದ್ದಳು. `ನನಗೇಕೆ ಇಷ್ಟೂ ದಿನ ಏನೂ ಹೇಳಿರಲಿಲ್ಲ?' ಕೊನೆಗೆ ಗೌತಮ ಕೇಳಿದ. ಅಪ್ಪ, ಅಮ್ಮ ಇಬ್ಬರೂ ಉತ್ತರಿಸಲಿಲ್ಲ.
ನಂತರ ಸಂಜಯ ಹೇಳಿದ, `ಯಾರದೋ ಮಾತು ಕೇಳಿ ಮತಾಂಧನಾಗಿರುವ ನಿನಗೆ ಇವೆಲ್ಲಾ ಅರ್ಥವಾಗುವುದಿಲ್ಲ ಬಿಡು. ನಾನು ನಿನಗೆ ಅಲ್ಲಿ ಹೇಳಿದ್ದೆನಲ್ಲವೆ, ನಾನೊಂದು ಘೋರ ಅಪರಾಧ ಮಾಡಿದ್ದೆನೆಂದು. ನಾನು ಈ ಮುಸಲ್ಮಾನಳನ್ನು ಮದುವೆಯಾಗಿದ್ದು ನಿನ್ನ ದೃಷ್ಟಿಯಲ್ಲಿ ಘೋರಪರಾಧವಲ್ಲದೆ ಮತ್ತೇನು? ನಿನ್ನ ಕೊಚ್ಚಿ ಕೊಲ್ಲುವ ಕಾರ್ಯಕ್ಕೆ ನಾನೂ ಸಹ ಸಹಾಯ ಮಾಡುತ್ತೇನೆ, ಅದನ್ನು ನಮ್ಮ ಮನೆಯಿಂದಲೇ ಪ್ರಾರಂಭಿಸೋಣವೆಂದು ಹೇಳಿದ್ದೆನಲ್ಲವೆ?' ಎದ್ದು ನಿಂತ ಸಂಜಯ ಅಡುಗೆ ಮನೆಗೆ ಹೋಗಿ ಚಾಕುವೊಂದನ್ನು ತಂದ.
`ತಗೋ ಈ ಚಾಕು. ಮುಸಲ್ಮಾನರನ್ನು ಕಂಡರೆ ನಿನಗೆ ದ್ವೇಷವಲ್ಲವೆ? ಅವರು ಪರಕೀಯರಲ್ಲವೆ? ಮುಸಲ್ಮಾನಳಾದ ನಿನ್ನ ಪರಕೀಯ ಅಮ್ಮನನ್ನು ಕೊಂದುಬಿಡು. ನಿನ್ನ ಧರ್ಮರಕ್ಷಕ ಕಾರ್ಯ ಇಲ್ಲಿಂದಲೇ ಪ್ರಾರಂಭವಾಗಲಿ' ಎಂದು ಹೇಳಿ ಚಾಕುವನ್ನು ಗೌತಮನ ಕೈಗೆ ತುರುಕಿ ಸಂಜಯ ರೂಮಿನೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ರಾತ್ರಿಯೆಲ್ಲಾ ನಿದ್ರೆ ಇಲ್ಲದ್ದರಿಂದ, ಅತ್ಯಂತ ಆಯಾಸವಾಗಿದ್ದುದರಿಂದ ಹಾಸಿಗೆಯ ಮೇಲುರುಳಿಕೊಂಡ ಸಂಜಯ ಅವನಿಗರಿವಿಲ್ಲದೆ ಗಾಢ ನಿದ್ರೆಗೆ ಶರಣಾಗಿದ್ದ.
ಕಿಟಾರನೆ ಕಿರುಚಿಕೊಂಡ ಶಕೀಲಾಳ ಕೂಗು ಅವನಿಗೆ ಕೇಳಿಸಲೇ ಇಲ್ಲ.
ಡಾ.ಜೆ.ಬಾಲಕೃಷ್ಣ