ಮಂಗಳವಾರ, ಸೆಪ್ಟೆಂಬರ್ 21, 2010

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ. ಓದಿ ತಮ್ಮ ಅನಿಸಿಕೆ ತಿಳಿಸಿ.
ಸಾದತ್ ಹಸನ್ ಮಾಂಟೊ (೧೧.೫.೧೯೧೨-೧೮.೧.೧೯೫೫) ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, 'ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇ
ಲ್ಲ' ಎಂದಿದ್ದಾನೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು
ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (
೨೨ ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.

ಸಾದತ್ ಹಸನ್ ಮಾಂಟೋನ ಕತೆ-
ತೆಗೆದುಬಿಡು

ಮಧ್ಯಾಹ್ನ ಎರಡು ಗಂಟೆಗೆ ಅಮೃತಸರ್ ಬಿಟ್ಟ ಟ್ರೈನು ಎಂಟು ಗಂಟೆಯ ಪ್ರಯಾಣದ ನಂತರ ಲಾಹೋರಿನ ಮುಘಲ್‌ಪುರ ತಲುಪಿತ್ತು. ಅದರ ಪ್ರಯಾಣದ ಹಾದಿಯಲ್ಲಿ ಬಹಳಷ್ಟು ಜನ ಕೊಲ್ಲಲ್ಪಟ್ಟಿದ್ದರು, ಅದಕ್ಕಿಂತ ಹೆಚ್ಚು ಜನ ಗಾಯಗಳಿಂದ ನರಳುತ್ತಿದ್ದರು ಹಾಗೂ ಲೆಕ್ಕವಿಡದಷ್ಟು ಜನ ಕಣ್ಮರೆಯಾಗಿದ್ದರು.
ಸಿರಾಜುದ್ದೀನನಿಗೆ ಎಚ್ಚರವಾದಾಗ ಮರುದಿನ ಬೆಳಿಗ್ಗೆ ಹತ್ತು ಗಂಟೆಯಾಗಿತ್ತು. ಸುತ್ತಲೂ ಕಿರಿಚಾಡುತ್ತಿದ್ದ ಗಂಡಸರು, ಹೆಂಗಸರು ಮತ್ತು ಮಕ್ಕಳ ನಡುವೆ ನೆಲದ ಮೇಲೆ ಆತ ಬಿದ್ದಿದ್ದ. ಆ ಕಿರಿಚಾಟ, ಅರಚಾಟ ಅವನಿಗೇನೂ ಅನ್ನಿಸಲೇ ಇಲ್ಲ.
ಸಿರಾಜುದ್ದೀನ್ ಹಾಗೇ ಬಿದ್ದಿದ್ದ; ಧೂಳು ತುಂಬಿದ ಆಕಾಶದ ಶೂನ್ಯದೆಡೆಗೆ ಅವನ ನೋಟ ನೆಟ್ಟಿತ್ತು. ಸುತ್ತಮುತ್ತಲ ಗೊಂದಲವಾಗಲಿ, ಗಲಾಟೆಯ ಶಬ್ದವಾಗಲಿ ಅವನ ಗಮನಕ್ಕೆ ಬರುತ್ತಲೇ ಇಲ್ಲ. ಯಾರಾದರೂ ಅಪರಿಚಿತರಿಗೆ ಈ ಮುದುಕ ಗಾಢ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣುತ್ತಿದ್ದ. ಆದರೆ ವಿಷಯ ಹಾಗಿರಲಿಲ್ಲ. ಆತ ಆಘಾತ
ಕ್ಕೊಳಗಾಗಿದ್ದ, ತಳವೇ ಇಲ್ಲದ ಗುಂಡಿಯೊಳಗೆ ಅವನನ್ನು ನೇತು ಬಿಟ್ಟ ಹಾಗಿತ್ತು ಅವನ ಸ್ಥಿತಿ.
ಅವನ ಕಣ್ಣು ಚಲಿಸಿತು. ಹಾಗೆಯೇ ಪ್ರಖರ ಸೂರ್ಯನೆಡೆಗೆ ನೋಡಿದ. ಗಾಬರಿಗೊಂಡವನಂತೆ ಎಚ್ಚೆತ್ತು ಜೀವಂತ ಮನುಷ್ಯರ ಜಗತ್ತಿಗೆ ಹಿಂದಿರುಗಿದ. ಅವನ ಮನಸ್ಸಿನಲ್ಲಿ ಹಲವಾರು ಚಿತ್ರಗಳು ಸರಸರನೆ ಹಾದುಹೋದವು. ದಾಳಿ... ಬೆಂಕಿ... ತಪ್ಪಿಸಿಕೊಂಡು ಓಡಿದ್ದು... ರೈಲ್ವೇ ನಿಲ್ದಾಣ... ರಾತ್ರಿಯ ಕತ್ತಲು... ಸಕೀನಾ. ಇದ್ದಕ್ಕಿದ್ದಂತೆ ಎದ್ದು ಆ ನಿರಾಶ್ರಿತರ ಕ್ಯಾಂಪಿನ ಜನಜಂಗುಳಿಯಲ್ಲಿ ಹುಡುಕತೊಡಗಿದ.
ಅದೆಷ್ಟೋ ಗಂಟೆಗಳು ಹುಡುಕಿದ, ಜೋರಾಗಿ ತನ್ನ ಮಗಳ ಹೆಸರನ್ನು ಕರೆಯುತ್ತಲೇ ಇದ್ದ... ಸಕೀನಾ, ಸಕೀನಾ... ಆದರೆ ಅವಳೆಲ್ಲೂ ಸಿಗಲೇ ಇಲ್ಲ.
ಎಲ್ಲೆಲ್ಲೂ ಗೊಂದಲ, ಜನ ಕಳೆದುಹೋದ ತಮ್ಮ ಮಕ್ಕಳನ್ನು, ತಾಯಿಯರನ್ನು, ಹೆಂಡಂದಿರನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಸಾಕಾಗಿ ಸಿರಾಜುದ್ದೀನ್ ಜನಜಂಗುಳಿಯಿಂದ ದೂರ ಕೂತು ನಡೆದ ಘಟನೆಗಳ ಬಗೆಗೆ ಶಾಂತವಾಗಿ ಆಲೋಚಿಸತೊಡಗಿದ. ಸಕೀನಾ ಮತ್ತು ಆಕೆಯ ತಾಯಿಯನ್ನು ಕಳೆದುಕೊಂಡಿದ್ದು ಎಲ್ಲಿ
? ಮಿಂಚಿನಂತೆ ಚಿತ್ರವೊಂದು ತನ್ನ ಕಣ್ಣಮುಂದೆ ಮೂಡಿತು- ತನ್ನ ಹೆಂಡತಿಯ ಜೀವಬಿಟ್ಟಿದ್ದ ದೇಹ, ಹೊಟ್ಟೆ ಬಗೆದು ಕರಳುಗಳೆಲ್ಲ ಹೊರಗೆ ಬಂದಿತ್ತು. ಆ ಚಿತ್ರ ಕಣ್ಣಿನಿಂದ, ಮನಸ್ಸಿನಿಂದ ದೂರ ಸರಿಯಲೇ ಇಲ್ಲ.
ಸಕೀನಾಳ ತಾಯಿ ಸತ್ತು ಹೋಗಿದ್ದಳು. ಅದಂತೂ ನಿಜ. ಆಕೆ ತನ್ನ ಕಣ್ಣ ಮುಂದೆಯೇ ಪ್ರಾಣ ಬಿಟ್ಟಿದ್ದಳು. ಸಾಯುವ ಮುನ್ನ ಅವಳಾಡಿದ ಮಾತು ಇನ್ನೂ ಸಿರಾಜುದ್ದೀನನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನನ್ನನ್ನಿಲ್ಲೇ ಬಿಟ್ಟು ಹೊರಡಿ. ಹೋಗಿ, ಮಗಳನ್ನು ಕರೆದುಕೊಂಡು ಹೋಗಿಬಿಡಿ'.
ಅವರಿಬ್ಬರೂ ಅಲ್ಲಿಂದ ಓಡತೊಡಗಿದರು. ಸಕೀನಾಳ ದುಪಟ್ಟಾ
ಜಾರಿ ನೆಲದ ಮೇಲೆ ಬಿತ್ತು. ಓಡುತ್ತಿದ್ದ ಆತ ನಿಂತು ಅದನ್ನು ಎತ್ತಿಕೊಳ್ಳಲು ಬಾಗಿದ ಹಾಗೂ ಆಗ ಆಕೆ ಹೇಳಿದ್ದಳು, `ಅಪ್ಪ ಬೇಡ, ಅದನ್ನಲ್ಲೇ ಬಿಟ್ಟುಬಿಡಿ'.
ಅವನ ಜೇಬು ಉಬ್ಬಿತ್ತು. ಅದೊಂದು ಉದ್ದವಾದ ಬಟ್ಟೆ. ಹೌದು, ಆತ ಅದನ್ನು ಗುರುತಿಸಿದ. ಅದು ಸಕೀನಾಳ ದುಪಟ್ಟಾ, ಆದರೆ ಅವಳೆಲ್ಲಿ ಹೋದಳು?
ಇತರ ವಿವರಗಳೆಲ್ಲಾ ಅಸ್ಪಷ್ಟ. ಅವಳನ್ನು ರೈಲ್ವೇ ನಿಲ್ದಾಣದವರೆಗೂ ಕರೆದುತಂದಿದ್ದನೆ? ಆಕೆ ಅವನೊಂದಿಗೆ ಗಾಡಿಯನ್ನು ಹತ್ತಿದ್ದಳೆ? ದಾರಿಯಲ್ಲಿ ದೊಂಬಿ ನಡೆಸುವವರು ಟ್ರೈನನ್ನು ನಿಲ್ಲಿಸಿದಾಗ, ಅವರು ಅವ
ಳನ್ನು ಕೊಂಡೊಯ್ದರೆ?
ಎಲ್ಲವೂ ಬರೇ ಪ್ರಶ್ನೆಗಳೇ. ಉತ್ತರಗಳೇ ಇಲ್ಲ. ಅವನಿಗೆ ಅಳಬೇಕೆನ್ನಿಸಿತು, ಆದರೆ ಕಣ್ಣೀರು ಬರುತ್ತಲೇ ಇಲ್ಲ. ಅವನಿಗೆ ಸಹಾಯದ ಅಗತ್ಯವಿದೆಯೆಂದು ಆಗ ಅನ್ನಿಸಿತು.
ಕೆಲವು ದಿನಗಳ ನಂತರ ಬೆಳಕೊಂದು ಕಂಡಿತು. ಅವರು ಎಂಟು
ಜನರಿದ್ದರು, ಯುವಕರು ಹಾಗೂ ಬಂದೂಕುಗಳನ್ನು ಹೊಂದಿದ್ದರು. ಅವರ ಬಳಿ ಲಾರಿಯೊಂದು ಸಹ ಇತ್ತು. ಗಡಿಯ ಮತ್ತೊಂದು ಬದಿ ಬಿಟ್ಟುಬಂದಿದ್ದ ಹೆಂಗಸರು ಮತ್ತು ಮಕ್ಕಳನ್ನು ಕರೆದುತರುತ್ತಿರುವುದಾಗಿ ತಿಳಿಸಿದರು.
ಅವರಿಗೆ ತನ್ನ ಮಗಳ ವಿವರಗಳನ್ನು ನೀಡಿದ. 'ಆಕೆ ಅತ್ಯಂತ ಸುಂದರಿ, ಬೆಳ್ಳಗಿದ್ದಾಳೆ. ಇಲ್ಲ, ಆಕೆ ನನ್ನ ಹಾಗೆ ಇಲ್ಲ, ಆಕೆಯ ತಾಯಿಯನ್ನು ಹೋಲುತ್ತಾಳೆ. ಸುಮಾರು ಹದಿನೇಳು ವರ್ಷ. ಬಟ್ಟಲುಗಣ್ಣು, ಕಪ್ಪನೆ ಕೂದಲು, ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿದೆ. ನನ್ನ ಮಗಳನ್ನು ಹುಡುಕಿಕೊಡಿ. ದೇವರು ನಿಮಗೆ ಒಳ್ಳೆಯ
ದು ಮಾಡಲಿ'.
ಆ ಯುವಕರು ಸಿರಾಜುದ್ದೀನನಿಗೆ ಹೇಳಿದ್ದರು, 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರುತ್ತೇವೆ'.
ಅವರು ಪ್ರಯತ್ನಿಸಿದ್ದರು ಸಹ. ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಅವರು ಅಮೃತಸರದವರೆಗೂ ಹೋದರು. ಹಲವಾರು ಹೆಂಗಸರು ಮತ್ತು ಮಕ್ಕಳನ್ನು ಕ್ಯಾಂಪಿಗೆ ತಂದುಬಿಟ್ಟರು, ಆದರೆ ಅವರಿಗೆ ಎಲ್ಲೂ ಸಕೀನಾ ಕಂಡಿರಲಿಲ್ಲ.
ಆ ಯುವಕರ ಮುಂದಿನ ಪ್ರಯಾಣದಲ್ಲಿ, ರಸ್ತೆ ಬದಿ ನಡೆದುಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಕಂಡಿದ್ದರು. ಅವರನ್ನು ಕಂಡ ಆಕೆ ಹೆದರಿಕೆಯಿಂದ ಓಡತೊಡಗಿದ್ದಳು. ಅವರು ತಮ್ಮ ಲಾರಿ ನಿಲ್ಲಿಸಿ ಅ
ವಳ ಹಿಂದೆ ಓಡಿದರು. ಕೊನೆಗೆ ಹೊಲವೊಂದರಲ್ಲಿ ಆಕೆ ಸಿಕ್ಕಿಬಿದ್ದಳು. ಅವಳು ಅತ್ಯಂತ ಸುಂದರವಾಗಿದ್ದಳು ಹಾಗೂ ಆಕೆಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆಯಿತ್ತು. ಅವರಲ್ಲಿ ಒಬ್ಬಾತ ಆಕೆಗೆ ಹೇಳಿದ, 'ಹೆದರಿಕೋಬೇಡ. ನಿನ್ನ ಹೆಸರು ಸಕೀನಾ ಅಲ್ಲವೆ?' ಆಕೆ ಹೆದರಿಕೆಯಿಂದ ಬಿಳಿಚಿಕೊಂಡಿದ್ದಳು. ಅವರು ಯಾರೆಂಬುದನ್ನು ಆಕೆಗೆ ವಿವರಿಸಿ ಹೇಳಿದನಂತರ ಆಕೆ ಅಂಜಿಕೆಯಿಂದಲೇ ಒಪ್ಪಿಕೊಂಡಿದ್ದಳು, ತಾನು ಸಿರಾಜುದ್ದೀನನ ಮಗಳು ಸಕೀನಾ ಎಂಬುದನ್ನು.
ಆ ಯುವಕರು ಕರುಣಾಮಯಿಗಳು. ಆಕೆಗೆ ಆಹಾರ ನೀಡಿದರು, ಕುಡಿಯಲು ಹಾಲು ಕೊಟ್ಟರು ಹಾಗೂ ತಮ್ಮ ಲಾರಿಯಲ್ಲಿ ಕರೆದೊಯ್ದರು. ಅವರಲ್ಲಿ ಒಬ್ಬಾತ ಅವಳು ತನ್ನ ಮೈಮುಚ್ಚಿಕೊಳ್ಳಲೆಂ
ದು ತನ್ನ ಕೋಟನ್ನು ನೀಡಿದ್ದ. ಏಕೆಂದರೆ ಅವಳು ತನ್ನ ದುಪಟ್ಟಾ ಇಲ್ಲದೆ ಕಸಿವಿಸಿಗೊಂಡಿದ್ದಳು, ನಡುಗುತ್ತಾ ತನ್ನ ಎದೆಯನ್ನು ಕೈಗಳಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು.
ಹಲವಾರು ದಿನಗಳೇ ಕಳೆದುಹೋದವು ಹಾಗೂ ಸಿರಾಜುದ್ದೀನನಿಗೆ ತನ್ನ ಮಗಳ ಸುದ್ದಿಯೇನೂ ತಿಳಿದುಬರಲಿಲ್ಲ. ಒಂದು ಕ್ಯಾಂಪಿನಿಂದ ಮತ್ತೊಂದು ಕ್ಯಾಂಪಿಗೆ ಅವಳನ್ನು ಹುಡುಕುತ್ತಾ ಓಡಾಡುವುದರಲ್ಲೇ ಅವನ ಸಮಯ ಕಳೆಯುತ್ತಿತ್ತು. ಪ್ರತಿ ರಾತ್ರಿ ತನ್ನ ಮಗಳನ್ನು ಹುಡುಕುತ್ತಿದ್ದ ಆ ಯುವಕರ ಪ್ರಯತ್ನ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತಿದ್ದ. ಅವರು ಹೇಳಿದ್ದ ಮಾತು ಅವನ ಕಿವಿಯಲ್ಲಿ ಗುಂಯ್ಗುಡುತ್ತಿತ್ತು: 'ನಿನ್ನ ಮಗಳು ಬದುಕಿದ್ದಲ್ಲಿ, ಖಂಡಿತಾ ಹುಡುಕಿ ತರು
ತ್ತೇವೆ'.
ಅದೊಂದು ದಿನ ಆತ ಆ ಯುವಕರನ್ನು ಕಂಡ. ಅವರು ಇನ್ನೇನು ತಮ್ಮ ವಾಹನದಲ್ಲಿ ಹೊರಟುಬಿಡುತ್ತಿದ್ದರು. `ಮಗನೇ', ಅವರಲ್ಲೊಬ್ಬಾತನನ್ನು ಕುರಿತು ಸಿರಾಜುದ್ದೀನ್ ಕೂಗಿದ, 'ಸಕೀನಾ, ನನ್ನ ಮಗಳು ಸಿಕ್ಕಳೆ?'
'ಹುಡುಕುತ್ತಿದ್ದೇವೆ, ಖಂಡಿತಾ ಹುಡುಕುತ್ತೇವೆ' ಒಕ್ಕೊರಲಿನಿಂದ ಅವರೆಲ್ಲಾ ಕೂಗಿದರು.
ಆ ಯುವಕರಿಗಾಗಿ ಆ ಮುದುಕ ಮತ್ತೊಮ್ಮೆ ಪ್ರಾರ್ಥಿಸಿದ. ಆ ಪ್ರಾರ್ಥನೆ
ಯಿಂದ ಅವನ ಮನಸ್ಸು ಹಗುರವೆನ್ನಿಸುತ್ತಿತ್ತು.
ಆ ಸಂಜೆ ಕ್ಯಾಂಪಿನಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬಂದವು. ರೈಲ್ವೇ ಹಳಿಗಳ ಬಳಿ ಎಚ್ಚರ ತಪ್ಪಿ ಬಿದ್ದಿದ್ದ ಹುಡುಗಿಯನ್ನು ನಾಲ್ಕು ಜನ ಹೊತ್ತುಕೊಂಡು ಬಂದರು. ಅವರು ಕ್ಯಾಂಪಿನ ಆಸ್ಪತ್ರೆ ಎಲ್ಲಿದೆ ಎಂದು ವಿಚಾರಿಸುತ್ತಿದ್ದರು. ಸಿರಾಜುದ್ದೀನನಿಗೆ ತನ್ನ ಮಗಳ ನೆನಪಾಗಿ ಅವರನ್ನು ಯಾಂತ್ರಿಕವಾಗಿ ಹಿಂಬಾಲಿಸಿದ.
ಅವರು ಆ ಹುಡುಗಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೊರಟುಹೋದರು. ಆತ ಆಸ್ಪತ್ರೆಯ ಹೊರಗೇ ಸ್ವಲ್ಪ ಹೊತ್ತು ನಿಂತಿದ್ದು ನಂತರ ನಿಧಾನವಾಗಿ ಒಳಹೊಕ್ಕ.
ಮಬ್ಬುಗತ್ತಲ ಕೋಣೆ. ಕೋಣೆಯಲ್ಲಿ ಯಾರೂ ಕಾಣಲಿಲ್ಲ. ಆ ಕೋಣೆಯ ಮೂಲೆಯೊಂದರಲ್ಲಿ ಸ್ಟ್ರೆಚರ್ ಮೇಲೆ ಯಾರನ್ನೋ ಮಲಗಿಸಿದಂತಿತ್ತು. ಸಿರಾಜುದ್ದೀನ್ ನಿಧಾನವಾಗಿ ಆ ಸ್ಟ್ರೆಚರ್ ಬ
ಳಿಗೆ ಹೆಜ್ಜೆ ಹಾಕಿದ. ಇದ್ದಕ್ಕಿದ್ದಂತೆ ಕೋಣೆಯ ಲೈಟ್‌ಗಳು ಹೊತ್ತಿಕೊಂಡವು. ಸ್ಟ್ರೆಚರ್ ಮೇಲೆ ಮಲಗಿಸಿದ್ದ ಹುಡುಗಿಯ ಎಡಗೆನ್ನೆಯ ಮೇಲೆ ಕಪ್ಪನೆ ಚಿಕ್ಕ ಮಚ್ಚೆ ಕಾಣಿಸಿತು. 'ಸಕೀನಾ', ತನಗರಿವಿಲ್ಲದೆ ಸಿರಾಜುದ್ದೀನ್ ಕೂಗಿದ.
ಆಗ ತಾನೆ ಕೋಣೆಗೆ ಬಂದು ಲೈಟ್ ಹಾಕಿದ್ದ ಡಾಕ್ಟರ್ ಸಿರಾಜುದ್ದೀನನೆಡೆಗೆ ದುರುಗುಟ್ಟಿ ನೋಡಿದ.
'ನಾನು... ನಾನು ಅಕೆಯ ತಂದೆ' ಸಿರಾಜುದ್ದೀನ್ ತೊದಲಿದ.
ಅಂಗಾತ ಮಲಗಿದ್ದ ಹುಡುಗಿಯನ್ನು ನೋಡಿದ ಡಾಕ್ಟರ್ ಅವಳ ಕೈ ಹಿಡಿದು ನಾಡಿಮಿಡಿತ ಪರೀಕ್ಷಿಸಿದ. ಆ ನಂತರ ಸಿರಾಜುದ್ದೀನನೆಡೆಗೆ ನೋಡಿ ಕಿಟಕಿಯೆಡೆಗೆ ಕೈ ತೋರಿಸಿ, 'ಅದನ್ನು ತೆಗೆದುಬಿಡು' ಎಂದ.
ಸ್ಟ್ರೆಚರ್ ಮೇಲೆ ಮಲಗಿದ್ದ ಹುಡುಗಿ ಮಿಸುಕಾಡಿದಳು. ಅವಳ ಕೈ ತನ್ನ ಸಲ್ವಾರ್‌ನ ಪೈಜಾಮಾದ ಲಾಡಿಯನ್ನು ಸಡಿಲಗೊಳಿಸಿತು.
ಅತ್ಯಂತ ನೋವಿನಿಂದ ಎನ್ನುವಂತೆ ನಿಧಾನವಾಗಿ ಅದನ್ನು ಬಿಚ್ಚಿ ಕೆಳಕ್ಕೆ ಸರಿಸಿ ತೊಡೆ ಅಗಲಿಸಿದಳು.
'ಬದುಕಿದ್ದಾಳೆ, ನನ್ನ ಮಗಳು ಬದುಕಿದ್ದಾಳೆ' ಮುದುಕ ಸಿರಾಜುದ್ದೀನ್ ಸಂತೋಷದಿಂದ ಕೂಗಿದ.
ಡಾಕ್ಟರ್‌ನ ಇಡೀ ಮೈ ಕಂಪಿಸಿತು, ದೇಹವೆಲ್ಲಾ ಬೆವರಿಟ್ಟಿತು.
******

ಈ ಕತೆ `ಲಂಕೇಶ್ ಪ್ರಕಾಶನ'ದ ಮಾಂಟೋ ಕತೆಗಳು ಸಂಗ್ರಹದಲ್ಲಿಯೂ ಇದೆ:
ಪ್ರಕಾಶಕರು: ಲಂಕೇಶ್ ಪ್ರಕಾಶನ, ಇ.ಎ.ಟಿ. ರಸ್ತೆ, ಬಸವನಗುಡಿ, ಬೆಂಗಳೂರು.