ಸೋಮವಾರ, ನವೆಂಬರ್ 15, 2021

ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ

 

ನೀನು ಎಂದೆಂದಿಗೂ ಮನುಷ್ಯ ಭಾವನೆಗಳ ಸಾಮಥ್ರ್ಯವನ್ನು ಕಳೆದುಕೊಂಡುಬಿಡುತ್ತೀಯೆ. ನಿನ್ನೊಳಗೆ ಯಾವುದೂ ಜೀವಂತವಾಗಿರುವುದಿಲ್ಲ. ನಿನ್ನಲ್ಲಿನ ಪ್ರೀತಿ ಪ್ರೇಮ, ಗೆಳೆತನ, ಬದುಕಿನ ಉತ್ಸಾಹ, ನಗು ಅಥವಾ ಕುತೂಹಲ ಎಲ್ಲವೂ ಇಲ್ಲವಾಗಿಬಿಡುತ್ತವೆ. ನಿನ್ನೊಳಗಿನದೆಲ್ಲವನ್ನೂ ಹಿಂಡಿ ತೆಗೆದುಬಿಡುತ್ತೇವೆ. ಒಳಗೆ ನೀನು ಬರೇ ಟೊಳ್ಳಾಗಿರುತ್ತೀಯೆ. ಆ ನಂತರ ನಿನ್ನೊಳಗೆ ನಮ್ಮನ್ನು ತುಂಬಿಸತೊಡಗುತ್ತೇವೆ.

                                                                                                     -ಜಾರ್ಜ್ ಆರ್ವೆಲ್, ತನ್ನ ಕಾದಂಬರಿ `1984’ಲ್ಲಿ

         ನಮ್ಮ ಸ್ವಾತಂತ್ರ್ಯದ ಅಂತಿಮ ಮಜಲು ಜೈವಿಕವಾದದ್ದು. ನಮ್ಮ ಹಠಮಾರಿ ಮಿದುಳು ಎಲುಬಿನ ಕವಚದಲ್ಲಿ ಸುರಕ್ಷಿತವಾಗಿದೆ. ಕಾನೂನು, ಧರ್ಮ, ನೈತಿಕತೆ ಮತ್ತು ಆತ್ಮಸಾಕ್ಷಿಗಳೆಲ್ಲವೂ ಕ್ಷಣಿಕ ಹಾಗೂ ಸಾಪೇಕ್ಷವಾದದ್ದು. ಆದರೆ ನಮ್ಮ ಮಿದುಳಿಗೆ ಪ್ರಕೃತಿ ಒದಗಿಸಿರುವ ಕವಚ ಮತ್ತೊಬ್ಬರ ಇಂಗಿತವನ್ನು ಹೇರಲು ದೃಢವಾಗಿ ಅಡ್ಡ ನಿಂತಿದೆ. ಎಲ್ಲಿಯವರೆಗೂ ಮನುಷ್ಯನ ಆಲೋಚನೆಗಳು ಅವನ ಖಾಸಗಿಯವೇ ಆಗಿರುತ್ತವೆಯೋ ಅಲ್ಲಿಯವರೆಗೂ ಮತ್ತೊಬ್ಬರ ದಬ್ಬಾಳಿಕೆ, ಬಲವಂತದ ಹೇರಿಕೆ ತಲೆಬುರುಡೆಗೇ ಕೊನೆಗೊಳ್ಳುತ್ತದೆ.

          ಮಾನವ ಪ್ರಯತ್ನಗಳ ದಾಖಲೆಯೇ ಚರಿತ್ರೆ. ಪ್ರಯತ್ನವೆಂದರೆ ಮತ್ತೊಬ್ಬರ ಮೇಲೆ ತಮ್ಮ ಇಂಗಿತವನ್ನು, ದಬ್ಬಾಳಿಕೆಯನ್ನು ಬಲವಂತವಾಗಿ ಹೇರುವ ಪ್ರಯತ್ನ. ಮನುಷ್ಯರನ್ನು ದೈಹಿಕವಾಗಿ ಹಿಂಸಿಸಿ ಅವರ ಸ್ವಾತಂತ್ರ್ಯಹರಣ ಮಾಡಬಹುದು. ಆದರೆ ದಮನ, ದಬ್ಬಾಳಿಕೆಯಿಂದ ಬಂಡಾಯ ಮನೋಭಾವ ಹುಟ್ಟಿಕೊಳ್ಳುತ್ತದೆ. ಬಂಡಾಯದಿಂದ ಕ್ರಾಂತಿಯಾಗುತ್ತದೆ. ಇದೆಲ್ಲಾ ಆಗದಂತೆ ಮನುಷ್ಯನನ್ನೇ ನೇರವಾಗಿ ನಿಯಂತ್ರಿಸಿದರೆ? ದಮನ, ದಬ್ಬಾಳಿಕೆ, ಪೋಲೀಸು, ಸೆರೆಮನೆ, ಹೆದರಿಸುವ ಕ್ರೂರ ಅಸ್ತ್ರಗಳನ್ನೆಲ್ಲಾ ಬದಿಗಿರಿಸಿ ಮನುಷ್ಯನ ಮನಸ್ಸಿನ ಕೋಟೆಯ ಒಳಹೊಕ್ಕು ಅದಕ್ಕೇ ಮೂಗುದಾರ ಹಾಕಿ ನೇರವಾಗಿ ನಿಯಂತ್ರಿಸುವ ಹಾಗಾದರೆ?

                ಮನಸ್ಸನ್ನು ನಿಯಂತ್ರಿಸುವ, ಬದಲಾಯಿಸುವ ಸಂಶೋಧನೆಗಳು ಹಲವಾರು ದಶಕಗಳಿಂದ ನಡೆಯುತ್ತಿದೆ. ನಡತೆ ಬದಲಾವಣೆಎಂಬ ಮನೋವೈಜ್ಞಾನಿಕ ಪರಿಭಾಷೆ ವಿಶ್ವವಿದ್ಯಾನಿಲಯಗಳ ಮನೋವಿಜ್ಞಾನ ವಿಭಾಗಗಳ ಪ್ರಮುಖ ಪಠ್ಯಕ್ರಮವಾಗಿದೆ; ಕಿರಿದಾದ, ಅತಿಸೂಕ್ಷ್ಮ ವಿದ್ಯುನ್ಮಾನ ಸರ್ಕ್ಯೂಟ್‌ ಗಳಿಂದ ಮಿದುಳನ್ನು ಪ್ರಚೋದಿಸುವ ಮೂಲಕ ಮನಸ್ಸಿನ ನಿಯಂತ್ರಣ ಸಾಧ್ಯವೆಂದು ಪ್ರಯೋಗಾಲಯಗಳು ತೋರಿಸುತ್ತಿವೆ; ಇಂದು ಮನುಷ್ಯನ ಭಾವನೆ ಮತ್ತು ಮನೋಸ್ಠಿತಿಯನ್ನು ನಿಯಂತ್ರಿಸಬಲ್ಲ ಔಷಗಳ ವ್ಯಾಪಾರ ಔಷೀಯ ಉದ್ಯಮದ ಲಾಭ ತರುವ ಅಂಶವಾಗಿದೆ; ಹಲವಾರು ಧಾರ್ಮಿಕ ಸಂಘಟನೆಗಳು, ಪಂಥಗಳು ಯಶಸ್ವಿಯಾಗಿ ತಮ್ಮ ಶಿಷ್ಯರು ತಮಗೆ ವಿಧೇಯರಾಗಿರುವಂತೆ ಬ್ರೈನ್‍ವಾಶ್ಮಾಡುವ ತಂತ್ರವನ್ನು ಕರಗತಗೊಳಿಸಿಕೊಂಡಿವೆ; ಕಂಪ್ಯೂಟರ್ ತಂತ್ರಜ್ಞಾನದಿಂದ ಮನುಷ್ಯರ ಬದುಕಿನ ಖಾಸಗಿ ಘಟನೆಗಳನ್ನೂ ಪರಿವೀಕ್ಷಿಸುವ ಹಾಗೂ ತನ್ಮೂಲಕ ನಿಯಂತ್ರಿಸುವುದು ಸಾಧ್ಯವಾಗಿ ಈ ತಂತ್ರಜ್ಞಾನವನ್ನು ಖಾಸಗಿ ಉದ್ದಿಮೆದಾರರು, ಜೀವವಿಮಾ ಕಂಪೆನಿಗಳು, ಸಾಲಸೌಲಭ್ಯ ಒದಗಿಸುವ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.

                ಲೋಬೋಟೊಮಿ’, ಸೈಕೋಸರ್ಜರಿ, ಮಿದುಳಿಗೆ ವಿದ್ಯುತ್ ಶಾಕ್ ಕೊಡುವುದು, ವಿದ್ಯುತ್ತಿನಿಂದ ಪ್ರಚೋದಿಸುವುದು, ಹಿಡಮಾಡುವುದು, ‘ಬ್ರೈನ್‍ವಾಶ್ಮಾಡುವುದು, ಸಮ್ಮೋಹನ, ನಡತೆ ಬದಲಾವಣೆ - ಇವೇ ಮುಂತಾದ ವಿಧಾನಗಳ ಪಟ್ಟಿಯೇ ಇದೆ.

                Mind Manipulation ಇಂದು ಸೃಜನಶೀಲ ವಿಜ್ಞಾನ ಸಾಹಿತಿಗಳ ಕಲ್ಪನಾವಿಲಾಸದಲ್ಲಿ ಹಾಗೂ ಶತ್ರುಗಳ ಮೇಲಿನ ಪ್ರಯೋಗಕ್ಕಾಗಿ ಮಾತ್ರ ಇರುವುದಲ್ಲ. ಇಂದು ನಮ್ಮೆಲ್ಲರ ಬದುಕಿನ ಮೇಲೆ ಅದರ ಕರಾಳ ಛಾಯೆ ಆವರಿಸಿದೆ.

                ಖ್ಯಾತ ಲೇಖಕ ಆಲ್ಡಸ್ ಹಕ್ಸ್‍ಲೀ ಹೇಳಿರುವಂತೆ, ‘ನಮ್ಮಲ್ಲಿ ಧಾರ್ಮಿಕ ಕ್ರಾಂತಿಗಳು ನಡೆದಿವೆ, ರಾಜಕೀಯ, ಕೈಗಾರಿಕಾ, ಆರ್ಥಿಕ ಹಾಗೂ ರಾಷ್ಟ್ರೀಯತಾ ಕ್ರಾಂತಿಗಳು ನಡೆದಿವೆ. ಆದರೆ ಅವೆಲ್ಲ ನಮ್ಮ ಮುಂದಿನ ಜನಾಂಗಕ್ಕೆ, ಅವರೆಲ್ಲಾ ಬೃಹತ್ ವೇಗದಲ್ಲಿ ಧಾವಿಸುತ್ತಿರುವ ಮಾನಸಿಕ ಕ್ರಾಂತಿಯ ಮುಂದೆ ತೀರಾ ಗೌಣವಾಗಿರುತ್ತವೆ. ಅದೇ ನಿಜವಾದ ಕ್ರಾಂತಿಯಾಗಿರುತ್ತದೆ. ಅದರ ನಂತರ ಮಾನವ ಜನಾಂಗ ಯಾವುದೇ ತೊಂದರೆ ನೀಡುವುದಿಲ್ಲ.

                ಹಕ್ಸ್‍ಲೀ ಹೇಳಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಶತಶತಮಾನಗಳಿಂದಲೂ ದೇಹದ ನಿಯಂತ್ರಣಕ್ಕಿಂತಲೂ ಮನಸ್ಸಿನ ನಿಯಂತ್ರಣವೇ ಅತಿಮುಖ್ಯವಾದದ್ದೆಂದು ಮನುಷ್ಯ ನಂಬಿದ್ದಾನೆ. ಒಂದು ಸಾಮ್ರಾಜ್ಯವನ್ನು ಅಸ್ತ್ರಶಸ್ತ್ರಗಳಿಂದ ಆಕ್ರಮಣ ಮಾಡಿ ಸ್ವಾಧೀನಪಡಿಸಿಕೊಳ್ಳಬಹುದು, ಆದರೆ ಅದನ್ನು ಉಳಿಸಿಕೊಳ್ಳಲು ನಿಷ್ಠೆಯ ಮಾನಸಿಕ ಬಂಧನವಿರಬೇಕುಎಂದು ಮ್ಯಾಕಿವೆಲ್ಲಿ ಹೇಳಿದ್ದಾನೆ. ಇತ್ತೀಚಿನವರೆಗೂ ಮೂರೇ ಮೂರು ಮನನಿಯಂತ್ರಣ ವಿಧಾನಗಳು ಲಭ್ಯವಿದ್ದವು- ಪ್ರೇರೇಪಣೆ, ಚಿತ್ರಹಿಂಸೆ ಹಾಗೂ ಭಯೋತ್ಪಾದಕತೆ. ಆದರೆ ಇವೆಲ್ಲವುಗಳಲ್ಲೂ ನ್ಯೂನತೆಗಳಿದ್ದವು. ಪ್ರೇರೇಪಣೆಗೆ ಬಹಳ ಸಮಯ ಬೇಕಾಗುತ್ತಿತ್ತು ಹಾಗೂ ಖರ್ಚು ಸಹ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಅದು ಕೆಲಸವೇ ಮಾಡುತ್ತಿರಲಿಲ್ಲ. ಚಿತ್ರಹಿಂಸೆ ಹಾಗೂ ಭಯೋತ್ಪಾದಕತೆ ಕ್ಷಿಪ್ರವಾಗಿ ಕೆಲಸ ಮಾಡುತ್ತಿತ್ತು ಆದರೆ ಬಹಳಷ್ಟು ಸಾರಿ ಕೊನೆಯಲ್ಲಿ ಅವಶ್ಯಕವಾದದ್ದೇ, ಅಂದರೆ ಬೇಕಾಗುವ ವ್ಯಕ್ತಿಯೇ ಉಳಿಯುತ್ತಿರಲಿಲ್ಲ. ಅಲ್ಲದೆ ಇವು ಒಬ್ಬರ ನಂತರ ಮತ್ತೊಬ್ಬ ವ್ಯಕ್ತಿಯ ವಿಧಾನಗಳಾಗಿದ್ದು, ಬಳಸುತ್ತಿದ್ದ ಕ್ರೌರ್ಯದಿಂದಾಗಿ ಶತ್ರುಗಳೇ ಹೆಚ್ಚಾಗುತ್ತಿದ್ದರು. ಹಾಗಾಗಿ ಭಯೋತ್ಪಾದನೆಗಿಂತ ನಿರ್ದಿಷ್ಟವಾಗಿರುವ, ಚಿತ್ರಹಿಂಸೆಗಿಂತ ಕಡಿಮೆ ಕ್ರೌರ್ಯವನ್ನೊಳಗೊಂಡ ಹಾಗೂ ಪ್ರೇರೇಪಣೆಗಿಂತ ಹೆಚ್ಚು ಪ್ರಭಾವಯುತವಾದ ವಿಧಾನಗಳ ಅವಶ್ಯಕತೆ ಕಂಡುಬಂದಿತು.

                ಆಧುನಿಕವಿಧಾನಗಳಿಗೆ ಮೊದಲು ಬಳಕೆಯಲ್ಲಿದ್ದ, ಬಹುಪಾಲು ಯಶಸ್ವಿಯಾಗಿದ್ದ ವಿಧಾನಗಳು ಕೆಲವು ಧಾರ್ಮಿಕ ಸಂಸ್ಥೆಗಳಲ್ಲಿದ್ದವು. ಬ್ರಿಟಿಷ್ ಮನಶಾಸ್ತ್ರಜ್ಞ ವಿಲಿಯಂ ಸಾರ್ಜೆಂಟ್ ಧಾರ್ಮಿಕ ಪರಿವರ್ತನಾ ಕಾರ್ಯಗಳು, ಕೊರಿಯನ್ ಯುದ್ಧ ಸಿಪಾಯಿಗಳ ಬ್ರೈನ್ ವಾಶಿಂಗ್ನ ರೀತಿಯೇ ಇರುವುದಾಗಿ ಕಂಡುದರಿಂದ ಅದರ ಬಗೆಗೆ ಹೆಚ್ಚಿನ ಅಧ್ಯಯನ ನಡೆಸಿದ. ಧಾರ್ಮಿಕ ಮುಖಂಡರು ತಮಗೆ ಬೇಕಾದ ವಿಚಾರ ಶಿಷ್ಯರಲ್ಲಿ ತುಂಬಲು ಮಿದುಳನ್ನು ಹೇಗೆ ತಯಾರಿಗೊಳಿಸಬೇಕೆಂಬುದನ್ನು ಸಹಜವಾಗಿ ಅರಿತಿದ್ದರು.

                ಅದೇರೀತಿ ಮಾಟಮಂತ್ರಗಳಂತಹ ಆದಿಮ ಸಮಾಜದ ಆಚರಣೆಗಳೂ ಸಹ ಸಮುದಾಯ ಮನನಿಯಂತ್ರಣದ ಕಾರ್ಯ ನಿರ್ವಹಿಸುತ್ತವೆ. ಮಾಟ ಮಂತ್ರಗಳಲ್ಲಿ ನಂಬಿಕೆ ಉಳ್ಳ ಸಮಾಜ ಮಾಂತ್ರಿಕನಿಗೆ, ಮಾಟಮಂತ್ರದ ಅದ್ಭುತಕಾರ್ಯಗಳಿಗೆ, ಹಾಗೂ ಅದು ಉಂಟುಮಾಡಬಹುದಾದ ತೊಂದರೆ, ಅನಾಹುತಗಳ ಬಗ್ಗೆ ಭಯಮಿಶ್ರಿತ ಗೌರವವಿರುತ್ತದೆ. ಪರಮಾಣು ಬಾಂಬು ಉಂಟುಮಾಡಬಹುದಾದ ಅನಾಹುತಗಳಿಂದಾಗಿ ಮನುಷ್ಯ ಅದನ್ನು ಹೆದರಿಕೆಯಿಂದ ಗೌರವಿಸುವ ರೀತಿ.

                ಧಾರ್ಮಿಕ ಬೋಧನೆಗಳು ಹಾಗೂ ಮಾಟಮಂತ್ರಗಳು ಈಗಿನ ಆಧುನಿಕವಿಧಾನಗಳಷ್ಟು ಪ್ರಭಾವಯುತವಾಗಿ ಜನಸಮುದಾಯದ ಮನಸ್ಸನ್ನು ನಿಯಂತ್ರಿಸುವುದಿಲ್ಲ. ಹಲವಾರು ಶತಮಾನಗಳಿಂದ ಪೌರಾತ್ಯ ದೇಶಗಳು ಮನನಿಯಂತ್ರಣದ ತಮ್ಮದೇ ವಿಧಾನಗಳನ್ನು ಹುಡುಕಿಕೊಳ್ಳುತ್ತಿವೆ. ಈ ಹೊಸ ವಿಧಾನಗಳು ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಈ ವಿಧಾನಗಳ ತಳಹದಿ ಎಂದರೆ ಮನುಷ್ಯರು ಹಾಗೂ ಅವರ ಮನಸ್ಸುಗಳು ನಿಯತಯಂತ್ರವಾಗಿರುವ ಈ ವಿಶ್ವದ ಯಾಂತ್ರಿಕ ಭಾಗಗಳು ಎನ್ನುವುದು.

                ತಮ್ಮ ಸ್ವಾತಂತ್ರ್ಯವನ್ನು ಮನುಷ್ಯರು ಜಡ-ನಿರ್ಲಿಪ್ತ ಮನಸ್ಸಿನಿಂದ ಒಪ್ಪಿಕೊಳ್ಳುವಂತೆ ಕ್ರಮೇಣ ಮಾಡಬಹುದೆನ್ನುತ್ತಾರೆ ಹಲವಾರು ಸಾಮಾಜಿಕ ಯೋಜನಾತಜ್ಞರು. ಹಾರ್ವರ್ಡ್‍ನ ಖ್ಯಾತ ಮನೋವಿಜ್ಞಾನಿ ಬಿ.ಎಫ್.ಸ್ಕಿನ್ನರ್‍ರವರು ಜನರಲ್ಲಿನ ಸ್ವಾತಂತ್ರ್ಯ ಹಾಗೂ ಆತ್ಮಾಭಿಮಾನಗಳ ಪರಿಕಲ್ಪನೆಯನ್ನು ಇಲ್ಲವಾಗಿಸಿ ಹೊಸ ಸಮಾಜ ವ್ಯವಸ್ಥೆಯನ್ನು ರೂಪಿಸಬೇಕೆನ್ನುತ್ತಾರೆ. ವಿಜ್ಞಾನಿಗಳ ಈ ರೀತಿಯ ಆಲೋಚಿತ ವ್ಯವಸ್ಥೆಗಿಂತ ಹೆಚ್ಚಾಗಿ ಈಗಿನ ಆಧುನಿಕ ಕೈಗಾರಿಕಾ ಸಮಾಜತನಗರಿವಿಲ್ಲದೆ ಯಾಂತ್ರಿಕ ಸಂಸ್ಕೃತಿಯತ್ತ ಜಾರುತ್ತಿದೆ. ಹೊಸಹೊಸ ಮನನಿಯಂತ್ರಣ ತಂತ್ರಗಳು ಇದನ್ನೇ ಪ್ರತಿಫಲಿಸುತ್ತ್ತಿವೆ. ಯಾಂತ್ರೀಕರಣ ಹಾಗೂ ಔದ್ಯೋಗೀಕರಣ ಹೆಚ್ಚಿದಂತೆಲ್ಲ ಮನುಷ್ಯರೂ ಸಹ ದಿನನಿತ್ಯದ ಬದುಕಿನಲ್ಲಿ ಯಂತ್ರಗಳನ್ನೇ ಹೋಲುವಂತಾಗಿದ್ದಾರೆ. ವಿಜ್ಞಾನ ಪರೋಕ್ಷವಾಗಿ ಮಾಡುತ್ತಿದ್ದುದನ್ನು ಇನ್ನು ಮುಂದೆ ಪ್ರತ್ಯಕ್ಷವಾಗಿ ಮಾಡಬಹುದು. ಸೈಕೋಸರ್ಜರಿ, ವಿದ್ಯುತ್ ಶಾಕ್ ಹಾಗೂ ಪ್ರಚೋದನೆ, ನಡತೆ ಬದಲಾವಣೆ, ಬ್ರೈನ್‍ವಾಶಿಂಗ್ ಹಾಗೂ ಇತರ ವಿಧಾನಗಳು ಇನ್ನುಮುಂದೆ ವ್ಯಕ್ತಿಯೊಬ್ಬನ ನಡತೆ ಹಾಗೂ ಆಲೋಚನೆಯನ್ನು ಆತನ ತಂದೆತಾಯಿಗಳಿಗೆ, ಶಾಲೆಗೆ, ಆಸ್ಪತ್ರೆಗೆ ಅಥವಾ ಸರ್ಕಾರಕ್ಕೆ ಸರಿಹೊಂದುವ ರೀತಿ ಬದಲಾಯಿಸಬಹುದು.

ಮನನಿಯಂತ್ರಣ ಬೆಳೆದು ಬಂದ ಹಾದಿ

                ಅದಿವಾಸಿ ಸಮಾಜಗಳಲ್ಲಿ ನೀತಿನಿಯಮ, ಕಾನೂನು ಕಟ್ಟಲೆಗಳು ತೀರಾ ಕಡಿಮೆ ಇದ್ದವು. ಸಾಮಾಜಿಕ ಸ್ಥಾನಮಾನ, ತಲೆತಲಾಂತರಗಳಿಂದ ಬಂದಿರುವ ಪದ್ಧತಿ, ಆಚರಣೆಗಳು ಸಮಾಜವನ್ನು ನಿಯಂತ್ರಿಸುತ್ತಿದ್ದವು. ಪ್ರತಿಯೊಬ್ಬ ವ್ಯಕ್ತಿಯ ಸಂಬಂಧ ಆತನ ಸಮಾಜದೊಂದಿಗೆ ಎಷ್ಟು ನಿಕಟವಾಗಿರುತ್ತಿತ್ತೆಂದರೆ ಆ ಸಮಾಜದಿಂದ ಆತನನ್ನು ಬಹಿಷ್ಕರಿಸಿದಲ್ಲಿ ಆ ಶಿಕ್ಷೆ ಆತನಿಗೆ ಜೈಲುವಾಸ ಅಥವಾ ಮರಣದಂಡನೆಗಿಂತ ಕಡಿಮೆ ಇರುತ್ತಿರಲಿಲ್ಲ. ನಗರೀಕರಣವಾದಂತೆ ನಾಗರಿಕತೆಬೆಳೆದುಬಂದಂತೆ ಕುಟುಂಬ ಹಾಗೂ ತನ್ಮೂಲಕ ಸಮಾಜದಲ್ಲಿನ ಪರಸ್ಪರ ಆತ್ಮೀಯತೆ, ನಂಬಿಕೆ, ವಿಶ್ವಾಸ ಕಡಿಮೆಯಾಗಿದೆ. ಪರಸ್ಪರರನ್ನು ಬಂಧಿಸಿಟ್ಟಿದ್ದ ಸಾಮಾಜಿಕ ನೆಂಟಸ್ತಿಕೆಯ ಬದಲಿಗೆ ಜನರನ್ನು ನಿಯಂತ್ರಿಸಲು ಕಾನೂನು ಕಟ್ಟಳೆಗಳು, ಸರ್ಕಾರ, ಪೋಲೀಸು ಇತ್ಯಾದಿಗಳು ಹುಟ್ಟಿಕೊಂಡಿವೆ.

                ಆಧುನಿಕ ಮನನಿಯಂತ್ರಣ ವ್ಯವಸ್ಥೆಯಾದ ಕೈಗಾರಿಕಾ ಮನೋವಿಜ್ಞಾನ ಪರಂಪರೆಯನ್ನು ಹುಟ್ಟುಹಾಕಿದವನು ಫ್ರೆಡರಿಕ್ ಟೇಲರ್. 19ನೇ ಶತಮಾನದ ಅಂತ್ಯದಲ್ಲಿ ಕೈಗಾರಿಕೆಗಳ ಮಾಲೀಕರ ಹಾಗೂ ಕೆಲಸಗಾರರ ನಡುವೆ ಅಸಮಾಧಾನವಿರುತ್ತಿತ್ತು. ಮಾಲೀಕರ ಪ್ರಕಾರ ಕೆಲಸಗಾರರು ಉತ್ಪಾದನೆಗೆ ತಮ್ಮ ಗರಿಷ್ಠ ಪ್ರಯತ್ನ ಮಾಡುತ್ತಿರಲಿಲ್ಲ ಹಾಗೂ ಕೆಲಸಗಾರರು ತಾವು ಹೆಚ್ಚು ಶ್ರಮಪಡಲು ಇಚ್ಛಿಸುತ್ತಿರಲಿಲ್ಲ. ಕೆಲಸಗಾರರಿಂದ ಹೆಚ್ಚು ಕೆಲಸ ಪಡೆಯಲು ಟೇಲರ್ ರೂಪಿಸಿದ ತಂತ್ರವೆಂದರೆ, ಅವರನ್ನು ಪರಸ್ಪರ ಬೇರ್ಪಡಿಸಿ ಅವರ ಕೆಲಸದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ಹಾಗೂ ಪ್ರತಿ ಕೆಲಸವನ್ನು ಅತಿ ಸಣ್ಣ ಘಟಕಗಳಾಗಿ ವಿಂಗಡಿಸಿ ಕೆಲಸಗಾರರು ಯಾವುದೇ ಬುದ್ಧಿ ಉಪಯೋಗಿಸದೆ ಯಾಂತ್ರಿಕವಾಗಿ ದೈಹಿಕ ಶ್ರಮ ಮಾತ್ರ ಪಡುವಂತೆ ಮಾಡುವುದು. ಕೆಲಸದ ಗತಿ ಹಾಗೂ ವಿಂಗಡಣೆಯನ್ನು ಮೇಲಕಾರಿಗಳು ನಿಯಂತ್ರಿಸುತ್ತಿರುತ್ತಾರೆ. ಟೇಲರ್‍ನ ಹೆಸರು ಮರೆಯಾಗಿದ್ದರೂ ಆತನ ತಂತ್ರ ಇಂದು ಆಧುನಿಕ ಕಾರ್ಪೊರೇಟ್ ನಿರ್ವಹಣಾ ವಿಧಾನಗಳಲ್ಲಿ ಹಾಸುಹೊಕ್ಕಾಗಿದೆ.

                ಟೇಲರ್ ಮತ್ತು ಆತನ ಅನುಯಾಯಿಗಳು ಜನರನ್ನು ಕಛೇರಿ ಸಮಯಗಳಲ್ಲಿ ಮಾತ್ರ ನಿಯಂತ್ರಿಸಲು ಯತ್ನಿಸಿದರೆ ನಂತರದ ವಿಜ್ಞಾನಿಗಳು ಮನುಷ್ಯನ ಸಂಪೂರ್ಣ ನಿಯಂತ್ರಣದ ಹಾದಿ ಹುಡುಕತೊಡಗಿದರು. ರಷ್ಯಾದ ವಿಜ್ಞಾ£ ಇವಾನ್ ಪಾವ್ಲೋವ್‍ರ ನಾಯಿ ಮತ್ತು ಗಂಟೆಯ ಪ್ರಯೋಗ ಪ್ರಖ್ಯಾತವಾಗಿದೆ. ಗಂಟೆಯ ಸದ್ದು ಕೇಳಿದಾಕ್ಷಣ ಆಹಾರ ಕೊಡುವರೆಂದು ಜೊಲ್ಲು ಸುರಿಸುವ ನಾಯಿಯಂತೆ ಮನುಷ್ಯರನ್ನೂ ಸಹ ಸರ್ಕಾರದ ಆದೇಶದ ಗಂಟೆಯ ಸದ್ದಿಗೆ ಯಾಂತ್ರಿಕವಾಗಿ ಪ್ರತಿಕ್ರಯಿಸುವಂತೆ ಮಾಡಬಹುದೆ? ಎಂದು ಆಲೋಚಿಸಿದರು. ಇದನ್ನು ಅಮೆರಿಕದ ಮನೋವಿಜ್ಞಾನಿ ಡಾ. ಜಾನ್ ವ್ಯಾಟ್ಸನ್ ಕಂಡೀಶನಿಂಗ್ಎಂದು ಕರೆದ. ಆತನ ಪ್ರಕಾರ ಇಲಿಗಳಾಗಬಹುದು, ಸಣ್ಣ ಮಕ್ಕಳಾಗಬಹುದು ಅಥವಾ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಾಗಬಹುದು- ತಮ್ಮ ನಡತೆ ಸುಖದ ಪ್ರತಿಫಲ ಕೊಡುವಂತಿದ್ದಲ್ಲಿ ಅದನ್ನೇ ಪುನರಾವರ್ತಿಸುತ್ತಾರೆ ಹಾಗೂ ಅಹಿತಕರ ಪ್ರತಿಫಲವಿದ್ದಲ್ಲಿ ಅಂತಹ ನಡತೆಯಿಂದ ದೂರವಿರುತ್ತಾರೆ. ಅಂದರೆ ಪ್ರತಿಫಲ ಮನುಷ್ಯನ ನಡತೆಯನ್ನು ರೂಪಿಸುತ್ತದೆ. ಇದನ್ನು ಆತ ಬಿಹೇವಿಯರಿಸಂಎಂದು ಕರೆದ. ಡಾ. ವ್ಯಾಟ್ಸನ್ ವ್ಯಕ್ತಿಗಳ ನಡತೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಡಾ. ಬಿ.ಎಫ್. ಸ್ಕಿನ್ನರ್ ಇಡೀ ಸಮುದಾಯದ ನಡತೆಯನ್ನೇ ನಿಯಂತ್ರಿಸುವ ಪ್ರಯೋಗಗಳನ್ನು ನಡೆಸಿದ.

                ಇಪ್ಪತ್ತರ ದಶಕದಲ್ಲಿ ಆರಂಭವಾದ ಈ ಮನನಿಯಂತ್ರಣ/ನಿರ್ವಹಣೆಯ ಪ್ರಯೋಗಗಳು ಯಾವ ಬರ್ಭರ ಹಂತ ತಲುಪಬಹುದೆನ್ನುವುದನ್ನು ಮುವ್ವತ್ತರ ದಶಕದ ಕೊನೆಯಲ್ಲಿ ಸೋವಿಯತ್ ಯೂನಿಯನ್ನಿನ ಜೋಸೆಫ್ ಸ್ಟಾಲಿನ್ ತೋರಿಸಿಕೊಟ್ಟ. ಆತ ತನ್ನ ಸಾವಿರಾರು ಜನ ಶತ್ರುಗಳನ್ನು ನಿರ್ನಾಮ ಮಾಡಿದ್ದಲ್ಲದೆ ಲಕ್ಷಾಂತರ ಜನ ಅಮಾಯಕ, ನಿರ್ದೋಷಿಗಳನ್ನು ಅವರು ಮಾಡದ ಅಪರಾಧಗಳನ್ನು ಅವರ ಮೇಲೆ ಹೊರಿಸಿ ಕೊಲ್ಲಿಸಿದ. ಇಲ್ಲಿ ಇಡೀ ಜಗತ್ತು ಅಚ್ಚರಿಯಿಂದ ತಲ್ಲಣಗೊಂಡದ್ದು ಏಕೆಂದರೆ, ಸಾವಿಗೀಡಾದ ಕ್ರಾಂತಿಕಾರಿಗಳು ತಾವು ಮಾಡದ ಅಪರಾಧಗಳನ್ನು ಅಪರಾಧಿಗಳಂತೆ ಒಪ್ಪಿಕೊಂಡದ್ದು ಹಾಗೂ ರಹಸ್ಯ ಪೆÇೀಲೀಸರ ಅನಿಸಿಕೆಯಂತೆ ತಾವು ನೀಚ ಹುಳುಗಳು, ಮನುಷ್ಯರೇ ಅಲ್ಲದವರು, ದೇಶದ್ರೋಹಿಗಳು ಹಾಗೂ ತಮ್ಮಂತಹವರು ರಷ್ಯಾದಂತಹ ದೇಶದಲ್ಲಿ ಬದುಕಿರಲೇಬಾರದು ಎಂದು ಸ್ವತಃ ಸಾಯಲು ಮುಂದಾಗಿದ್ದರಿಂದ. ಈ ಮಾಸ್ಕೊ ಶೋ ಟ್ರಯಲ್ಗಳ ಬಗೆಗೆ ಪುಸ್ತಕ ಬರೆದಿರುವ ರಾಬರ್ಟ್ ಕಾಂಕ್ವೆಸ್ಟ್, ‘ಇವರ ತಪೆÇ್ಪಪ್ಪಿಗೆ ಮಾತ್ರ ಅಚ್ಚರಿ ತರುವಂಥದ್ದಾಗಿರಲಿಲ್ಲ. ಆದರೆ ಎಲ್ಲರನ್ನೂ ಗಾಭರಿಗೊಳಿಸಿದ್ದು ಮಾಡದ ಅಪರಾಧಗಳ ಬಗೆಗಿನ ಅವರ ಪಶ್ಚಾತ್ತಾಪ ಹಾಗೂ ಹೊರಿಸಿದ ಅಪರಾಧಗಳನ್ನು ಮರುಮಾತಿಲ್ಲದೆ ಒಪ್ಪಿಕೊಂಡದ್ದುಎಂದಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಕ್ರಾಂತಿಕಾರಿಗಳ ದೇಹದ ಮೇಲೆ ಯಾವುದೇ ಚಿತ್ರಹಿಂಸೆಯ ಕುರುಹೇ ಇರಲಿಲ್ಲ. ರಷ್ಯಾದವರು ಮನನಿಯಂತ್ರಣದ ಯಾವುದಾದರೂ ಹೊಸ ತಂತ್ರವನ್ನು ಕಂಡುಹಿಡಿದಿದ್ದರೆ? ನಲವತ್ತರ ದಶಕದಲ್ಲಿ ಪ್ರಕಟವಾದ ಆರ್ಥುರ್ ಕೆಸ್ಲರ್‍ರವರ Darkness at Noonಹಾಗೂ ಜಾರ್ಜ್ ಆರ್ವೆಲ್‍ರ ‘1984’ ಪುಸ್ತಕಗಳು ಈ ಪ್ರಶ್ನೆಯನ್ನು ಉತ್ತರಿಸಲು ಯತ್ನಿಸಿವೆ. ‘1984’ ಕಾದಂಬರಿಯ ಕೊನೆಯಲ್ಲಿ ವಿನ್ಸ್‍ಟನ್ ಸ್ಮಿತ್ ಎಂಬಾತನನ್ನು ಅರೆಸ್ಟು ಮಾಡಿದ ಪೋಲೀಸರು ಹೇಳುತ್ತಾರೆ: ಮನಸ್ಸನ್ನು ಛಿದ್ರಗೊಳಿಸುವ ಮುನ್ನ ನಾವು ಮಿದುಳನ್ನು ಎಲ್ಲಾ ರೀತಿಯಿಂದಲೂ ಸರಿಯಾಗಿರುವಂತೆ ಮಾಡುತ್ತೇವೆ. ಇಲ್ಲಿಗೆ ಬರುವ ಯಾವುದೇ ವ್ಯಕ್ತಿ ಮುಂದೆಂದೂ ನಮಗೆ ಎದುರು ನಿಲ್ಲುವುದಿಲ್ಲ. ಪ್ರತಿಯೊಬ್ಬರ ಮನಸ್ಸನ್ನೂ ಶುಭ್ರಗೊಳಿಸುತ್ತೇವೆ. ಅವರ ಮನಸ್ಸಿನಲ್ಲಿ ತಮ್ಮ ಕಾರ್ಯಗಳ ಬಗೆಗಿನ ಪಶ್ಚಾತ್ತಾಪ ಹಾಗೂ ಪಾರ್ಟಿಯ ಬಗೆಗಿನ ಪ್ರೇಮದ ಹೊರತಾಗಿ ಮತ್ತೇನೂ ಉಳಿಯುವುದಿಲ್ಲ. ಪಾರ್ಟಿಯ ಬಗೆಗಿನ ಅವರ ನಿಸ್ವಾರ್ಥ ಪ್ರೇಮ ನೋಡುಗರ ಮನಕರಗಿಸುತ್ತದೆ. ತಮ್ಮ ಮನಸ್ಸುಗಳು ಶುಭ್ರವಾಗಿರುವಾಗಲೇ ತಮ್ಮನ್ನು ಕೊಂದುಬಿಡಿರೆಂದು ಅವರೆಲ್ಲ ಬೇಡಿಕೊಳ್ಳುತ್ತಾರೆ.

                ಆರ್ವೆಲ್ಲರ ‘1984’ ಪುಸ್ತಕ 1948-49ರಲ್ಲಿ ಪ್ರಕಟವಾದರೂ ಆಗಲೇ ಅದು 35-40 ವರ್ಷಗಳಷ್ಟು ಮುಂದಿತ್ತು. ಮೂರು ವರ್ಷಗಳ ನಂತರ ಬ್ರಿಟಿಷ್ ಮತ್ತು ಅಮೆರಿಕದ ಸೈನಿಕರು ಕೊರಿಯಾದಲ್ಲಿ ಸೆರೆಸಿಕ್ಕಿ ತಾವು ನಡೆಸದ ಜೈವಿಕ ಸಮರದಲ್ಲಿ ಪಾಲ್ಗೊಂಡಿದ್ದಾಗಿ ತಪ್ಪೊಪ್ಪಿಕೊಂಡರು. ಮರುವರ್ಷ ಅನೇಕ ಯುದ್ಧಕೈದಿಗಳು ಕೊರಿಯನ್ ಮತ್ತು ಚೀನಿಯರೊಂದಿಗೆ ಸೇರಿಕೊಂಡಿದ್ದಾರೆಂಬ ಅಘಾತಕರ ಸುದ್ಧಿ ಬ್ರಿಟಿಷರನ್ನು ಮತ್ತು ಅಮೆರಿಕನ್ನರನ್ನು ದಂಗುಪಡಿಸಿತು. ಆಗ ಎಡ್ವರ್ಡ್ ಹಂಟರ್ ಈ ರೀತಿಯ ತಾತ್ವಿಕ ಅಥವಾ ಸೈದ್ಧಾಂತಿಕ ಪರಿವರ್ತನೆಯನ್ನು ಬ್ರೈನ್‍ವಾಶಿಂಗ್ಎಂದು ಕರೆದ. ಇದನ್ನೇ ಆಧಾರವಾಗಿಟ್ಟುಕೊಂಡು 1961ರಲ್ಲಿ ರಿಚರ್ಡ್ ಕಾಂಡೋನ್ ದ ಮಂಚೂರಿಯನ್ ಕ್ಯಾಂಡಿಡೇಟ್ಪುಸ್ತಕ ಬರೆದ.  ನಂತರ ಇದು ಪ್ರಸಿದ್ಧ ಚಲನಚಿತ್ರವೂ ಆಯಿತು. ಈ ಕತೆ ಕಾಲ್ಪನಿಕವಾದರೂ ಆಗಿನ ಅಮೆರಿಕನ್ನರ ಭೀತಿಯನ್ನು ಇದು ವ್ಯಕ್ತಪಡಿಸುತ್ತದೆ. ಅಮೆರಿಕನ್ ಸೈನಿಕರನ್ನು ಕೊರಿಯಾ ಮತ್ತು ಚೀನಾದವರು ಸೆರೆಹಿಡಿದು ಚೀನಾದ ಮಂಚೂರಿಯಾದಲ್ಲಿ ಅವರ ಬ್ರೈನ್‍ವಾಶ್ಮಾಡುತ್ತಾರೆ. ಅದರಲ್ಲಿ ಒಬ್ಬಾತನನ್ನು ಅಮೆರಿಕಕ್ಕೆ ವಾಪಸ್ಸು ಕಳುಹಿಸಿ ಅವನ ಕೈಯಲ್ಲಿಯೇ ಅಮೆರಿಕದ ಪ್ರೆಸಿಡೆಂಟ್‍ನನ್ನು ಕೊಲ್ಲುವ ಹುನ್ನಾರ ಹೂಡುತ್ತಾರೆ. ಆದರೆ ಆತನಿಗೆ ಮಂಚೂರಿಯಾದಲ್ಲಿ ತನ್ನ ಬ್ರೈನ್‍ವಾಶ್ಆದ ಬಗೆಗೆ ನೆನಪೂ ಇರದ ಹಾಗೆ ಮಾಡಿರುತ್ತಾರೆ.

                ಕೊರಿಯಾದವರು ಬ್ರೈನ್‍ವಾಶ್ ಕಲೆಯನ್ನು ಚೀನಿಯರಿಂದ, ಚೀನಿಯರು ರಷ್ಯಾದವರಿಂದ ಕಲಿತಿದ್ದರು. ರಷ್ಯಾದವರು ಹೊಸದಾದ ತಂತ್ರವನ್ನೇನೂ ಕಂಡುಹಿಡಿಯಲಿಲ್ಲ; ಅವರು ಅದನ್ನು ತಮ್ಮ ಝಾರ್‌ ಗಳಿಂದ ಪಾರಂಪರಗತವಾಗಿ ಪಡೆದಿದ್ದರು. ಅವರೂ ಅಷ್ಟೆ, ಅದನ್ನು ಫ್ರೆಂಚರಿಂದ ಕಲಿತಿದ್ದರು; ಫ್ರೆಂಚರು ಚರ್ಚಿನವರಿಂದ............. ಚರ್ಚಿನವರು ಮಾಟಗಾತಿಯರ, ಯಹೂದಿಗಳ ಹಾಗೂ ಇತರರ ಬಾಯಿ ಬಿಡಿಸಲು, ಪ್ಪೊಪ್ಪಿಕೊಳ್ಳುವಂತೆ ಮಾಡಲು ಈ ತಂತ್ರವನ್ನು ಅವಿಷ್ಕಾರ ಮಾಡಬೇಕಾಗಿತ್ತು. ರಾಜ್ಯದ ಮೇಲೆ ಚರ್ಚ್‍ನವರ ಪ್ರಭಾವ ಕಡಿಮೆಯಾದಂತೆ ಪೋಲೀಸಿನವರಿಗೆ ಅದರಲ್ಲೂ ಗುಪ್ತದಳಗಳಿಗೆ ಈ ತಂತ್ರಗಳು ವರ್ಗಾವಣೆಯಾದವು.

                ಬ್ರೈನ್‍ವಾಶ್ಸಾಧ್ಯವೆಂದರಿತ ಮನೋವಿಜ್ಞಾನಿಗಳು ಹಾಗೂ ಜಾಹೀರಾತುದಾರರು ನಂತರ ಗ್ರಾಹಕರ ಮನಸ್ಸನ್ನು ಭೇದಿಸಿ ತಮ್ಮ ಉತ್ಪನ್ನಗಳನ್ನೇ ಕೊಳ್ಳುವಂತೆ ಬ್ರೈನ್‍ವಾಶ್ಮಾಡುವ ಪ್ರಯೋಗಗಳನ್ನು ಪ್ರಾರಂಭಿಸಿದರು. ಕೆಲವರಂತೂ ಗ್ರಾಹಕರ ಮನಸ್ಸಿನ ಜಾಗೃತ ಅಡೆತಡೆಗಳನ್ನು ಮೀರಿ ಅವರ ಮನಸ್ಸಿಗೆ ಸುಪ್ತವಾಗಿ ಸಂದೇಶ ನಾಟುವಂತಹ ವಿಧಾನಗಳನ್ನು/ಜಾಹೀರಾತುಗಳನ್ನು ರೂಪಿಸಿದ್ದೇವೆಂದು ಹೇಳಿಕೊಳ್ಳತೊಡಗಿದರು.

                ಮನಃಶಾಸ್ತ್ರಜ್ಞರು, ಸರ್ವಾಧಿಕಾರಿಗಳು ಹಾಗೂ ಜಾಹೀರಾತುದಾರರು ಮಾತ್ರ ಜನಸಮುದಾಯದ ಮನಸ್ಸನ್ನು ನಿಗ್ರಹಿಸಲು/ನಿಯಂತ್ರಿಸಲು ಹೊರಟವರಲ್ಲ. ಅತ್ತ ರಷ್ಯಾದಲ್ಲಿ ಸ್ಟಾಲಿನ್ ತನ್ನ ಶತ್ರುಗಳಿಗೆ ಪಾಠಕಲಿಸುತ್ತಿದ್ದಾಗ ಡಾ.ಎಗಾಸ್ ಮೋನಿಝ್ ಎಂಬ ಪೋರ್ಚುಗೀಸ್ ನರಶಾಸ್ತ್ರಜ್ಞ ಅತಿಯಾಗಿ ತೊಂದರೆಕೊಡುವ ತನ್ನ ರೋಗಿಗಳನ್ನು ಸುಮ್ಮನಾಗಿಸಲು ಲೋಬೋಟೊಮಿಎಂಬ ಮಿದುಳಿನ ಶಸ್ತ್ರಚಿಕಿತ್ಸಾ ವಿಧಾನ ಕಂಡುಹಿಡಿದ. ಈ ಶಸ್ತ್ರಚಿಕಿತ್ಸೆ ಎಷ್ಟು ಜನಪ್ರಿಯವಾಯಿತೆಂದರೆ ಬ್ರಿಟನ್ ಹಾಗೂ ಅಮೆರಿಕಾಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಈ ಶಸ್ತ್ರಚಿಕಿತ್ಸೆಗೊಳಗಾದರು. ಜಾನ್ ಎಫ್. ಕೆನೆಡಿಯ ತಂಗಿಗೂ ಸಹ ಈ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಇದರಿಂದ ತೊಂದರೆಕೊಡುತ್ತಿದ್ದ ರೋಗಿಗಳು ಸುಮ್ಮನಾಗುತ್ತಿದ್ದರು; ಯಾವುದೇ ಭಾವನೆ ಇಲ್ಲದ ಜೀವಚ್ಛವದಂತಾಗುತ್ತಿದ್ದರು.

                ಐವತ್ತರ ದಶಕದಿಂದೀಚೆಗೆ ಮನುಷ್ಯರ ಭಾವನೆಗಳನ್ನು ಬದಲಿಸಬಲ್ಲ ರಾಸಾಯನಗಳನ್ನೊಳಗೊಂಡ ಔಷಧಗಳ ಅವಿಷ್ಕಾರ ಪ್ರಾರಂಭವಾಯಿತು. ಔಷಧ ಕಂಪೆನಿಗಳು ಮನುಷ್ಯರನ್ನು ಸಂತೋಷವಾಗಿಸಲು ಮಾತ್ರೆ, ಸುಮ್ಮನಾಗಿಸಲು ಮಾತ್ರೆ, ಕನಸು ಕಾಣಿಸಲು ಮಾತ್ರೆ, ನಿರ್ಲಿಪ್ತವಾಗಿರಿಸಲು ಮಾತ್ರೆ.... ಹೀಗೆ ವಿಧವಿಧದ ಮಾತ್ರೆಗಳನ್ನು ತಯಾರಿಸತೊಡಗಿದವು. ಮತ್ತೊಬ್ಬರ ಮನುಷ್ಯನ ಮನಸ್ಸನ್ನು ನಿಯಂತ್ರಿಸಲು ಈ ಔಷಧಗಳು ಸುಲಭ ಸಾಧನಗಳಾದುವು. ಲೋಬೋಟೊಮಿಶಸ್ತ್ರಚಿಕಿತ್ಸೆಯಿಂದುಂಟಾಗುವ ಹಿಂಸೆ, ಅಪಸ್ಮಾರ, ಭಾವನೆಗಳನ್ನೇ ಕಳೆದುಕೊಳ್ಳುವುದು ಹಾಗೂ ಕೆಲವೊಮ್ಮೆ ಉಂಟಾಗುತ್ತಿದ್ದ ಸಾವಿನಿಂದ ಈ ಔಷಧಗಳು ಪಾರುಮಾಡಿದವು.

ಡಾ. ಜೋಸ್ ಡೆಲ್ಗಾಡೋ ಎಂಬ ವಿಜ್ಞಾನಿ ಮಿದುಳಿನಲ್ಲೇ ರೇಡಿಯೋ ಟ್ರಾನ್ಸ್‍ಮಿಟರ್-ರಿಸೀವರ್‍ಗಳನ್ನು ಇರಿಸಿ ಅವರನ್ನು ದೂರದಿಂದಲೇ ನಿಯಂತ್ರಿಸಿದರೆ ಹೇಗೆಂದು ಆಲೋಚಿಸಿದ. ಈ ರೀತಿಯ ವಿದ್ಯುನ್ಮಾನ ಉಪಕರಣಗಳನ್ನು ಅಪರಾಧಿಗಳ ಮಿದುಳಿನಲ್ಲಿ ಇರಿಸಿದಲ್ಲಿ ಅವರನ್ನು ನೇರವಾಗಿ ದೂರದಿಂದಲೇ ನಿಯಂತ್ರಿಸಬಹುದು ಎಂದು ನಂಬಲಾಗಿತ್ತು.

                ಅಮೆರಿಕದಲ್ಲಿ ಮನನಿಯಂತ್ರಣ ಹಾಗೂ ನಿರ್ವಹಣೆ ವಿಧಾನಗಳ ಅಭಿವೃದ್ಧಿ ಹಾಗೂ ಪ್ರಯೋಗಗಳಲ್ಲಿನ ಪ್ರಮುಖ ಘಟ್ಟ ಅತ್ಯಂತ ಭಯಾನಕ ಹಾಗೂ ಅಮಾನವೀಯವಾಗಿತ್ತು. ಅಮೆರಿಕದ ಚರಿತ್ರೆಯಲ್ಲಿಯೇ ಅದು ಒಂದು ಕಪ್ಪು ಅಧ್ಯಾಯ. ಅಮೆರಿಕದ ಸೇನೆ ಹಾಗೂ ಇತರ ಸರ್ಕಾರಿ ವಿಭಾಗಗಳು ಅದರಲ್ಲೂ ಸಿ.ಐ.ಎ. (CIA- Central Intelligence Agency) 1950ರಿಂದ 25 ವರ್ಷಗಳ ಕಾಲ ಅಮೆರಿಕದ ನಾಗರಿಕರ ಮೇಲೆ, ತಮ್ಮದೇ ಸಿಬ್ಬಂದಿಯ ಮೇಲೂ ಸಹ ಅವರಿಗರಿವಿಲ್ಲದೆ, ಅವರ ಖಾಸಗಿ ಬದುಕನ್ನು ಪ್ರವೇಶ ಮಾಡಿ ಅವರ ಮನನಿಯಂತ್ರಿಸುವ ಹಾಗೂ ಬದಲಾಯಿಸುವ ಪ್ರಯೋಗಗಳನ್ನು ನಡೆಸಿದೆ. ಈ ಪ್ರಯೋಗಗಳು ಅವರ ಇಚ್ಛೆಗೆ ವಿರುದ್ಧವಾಗಿ, ಕೆಲವೊಮ್ಮೆ ಬಲವಂತವಾಗಿ, ಎಲ್ಲಾ ನೈತಿಕತೆಯನ್ನು, ಮಾನವಹಕ್ಕುಗಳನ್ನು ಉಲ್ಲಂಘಿಸಿದ ಅಮಾನವೀಯ ಹಾಗೂ ಕ್ರೂರ ವಿಧಾನಗಳನ್ನು ಒಳಗೊಂಡಿದ್ದವು.

                ಮಾಸ್ಕೊ ಶೋ ಟ್ರಯಲ್ನ ನಂತರ ಹಾಗೂ ಅಮೆರಿಕ-ರಷ್ಯಾ ಶೀತಲ ಯುದ್ಧದ ಸಮಯದಲ್ಲಿ, ರಷ್ಯಾ-ಚೀನಾದಂತಹ ಕಮ್ಯೂನಿಸ್ಟ್ ರಾಷ್ಟ್ರಗಳು ಬ್ರೈನ್‍ವಾಶ್ಮಾಡುವಂತಹ ಎಂತಹುದೋ ಕಲೆಯನ್ನು ಕೈಗೂಡಿಸಿ ಕೊಂಡಿರುವರೆಂದೂ, ಅದನ್ನು ಹೇಗಾದರೂ ತಾವೂ ಕಲಿತು ತಮ್ಮ ಸೈನಿಕರು ಅವರ ಕೈಗೆ ಸಿಕ್ಕಿಬಿದ್ದರೂ ಯಾವುದೇ ರಹಸ್ಯ ಬಿಟ್ಟುಕೊಡದಂತೆ ಅಥವಾ ಅವರದೇ ಗೂಢಚಾರರಾಗುವುದನ್ನು ತಡೆಯುವಂತೆ ಮಾಡಬೇಕೆಂದು ಅಮೆರಿಕದ ಸಿ.ಐ.ಎ. ಶತಾಯಗತಾಯ ಪ್ರಯತ್ನ ನಡೆಸಿತು. ಅದಕ್ಕಾಗಿ ಕೋಟಿಗಟ್ಟಲೆ ಡಾಲರ್ ಹಣ ಖರ್ಚು ಮಾಡಿತು. ತಾವೂ ರಷ್ಯಾ ಅಥವಾ ಚೀನಾದವರನ್ನು ಸೆರೆಹಿಡಿದು ಅವರ ಬ್ರೈನ್‍ವಾಶ್ಮಾಡಿ ತಮ್ಮ ಗೂಢಚಾರರಂತೆ ಬಳಸಲು ಸಾಧ್ಯವೆ ಎಂದೂ ಸಹ ಆಲೋಚಿಸಿದರು. ಬ್ರೈನ್‍ವಾಶ್ರಹಸ್ಯವನ್ನು ತಾವು ತಿಳಿದು ಕಮ್ಯೂನಿಸ್ಟರನ್ನು ತಡೆಯದಿದ್ದಲ್ಲಿ ಅವರು ಇಡೀ ಜಗತ್ತೇ ಕಮ್ಯೂನಿಸಂ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆಂದೂ ಸಹ ಹೆದರಿದ್ದರು. ಸಿ.ಐ.ಎ. ಅದಕ್ಕಾಗಿ ಎಲ್.ಎಸ್.ಡಿ., ವಿಷಕಾರಿ ಅಣಬೆಗಳು, ಬ್ರೈನ್‍ವಾಶಿಂಗ್ ಮುಂತಾದುವನ್ನು ಬಳಸಿ ಪ್ರಯೋಗಗಳನ್ನು ನಡೆಸಿದರು. ತಮ್ಮ ಪ್ರಯೋಗಗಳಿಗೆ ವಿಶ್ವವಿದ್ಯಾನಿಲಯಗಳು, ಮಾನಸಿಕ ಆಸ್ಪತ್ರೆಗಳಿಗೆ ಧನಸಹಾಯ ನೀಡಿ ಅಲ್ಲಿನ ಪ್ರಯೋಗಗಳನ್ನು ಸಂಶೋಧನಾಕಾರರ ಅರಿವಿಗೆ ಬಾರದಂತೆ ನಿಯಂತ್ರಿಸಿದರು. ಎಲ್.ಎಸ್.ಡಿ.ಯಂತಹ ಮತ್ತು ಬರಿಸುವ ರಾಸಾಯನವು ಮನುಷ್ಯರ ನಡತೆಯ ಮೇಲೆ ಎಂತಹ ಪ್ರಭಾವವನ್ನು ಬೀರುತ್ತದೆ ಹಾಗೂ ಅವರು ಎಲ್ಲ ಗುಟ್ಟನ್ನು ಬಿಟ್ಟುಕೊಡುತ್ತಾರೆಯೇ ಎಂದು ತಿಳಿಯಲು ಕೆಲವೊಮ್ಮೆ ತಮ್ಮ ಸಹೋದ್ಯೋಗಿಗಳ ಮೇಲೆ ಅವರಿಗೆ ತಿಳಿಯದಂತೆ ಬಳಸಿದರು. ಈ ರೀತಿ ತಮ್ಮ ಸಹೋದ್ಯೋಗಿಗಳಿಂದಲೇ ಬಲಿಯಾದ ವಿಜ್ಞಾನಿ ಡಾ. ಫ್ರಾಂಕ್ ಓಲ್ಸೆನ್. 1953ರ ನವೆಂಬರ್ 19ರಂದು ಆತನಿಗೆ ಆತನ ಸಹೋದ್ಯೋಗಿಗಳು ಪಾನೀಯವೊಂದರಲ್ಲಿ ಎಲ್.ಎಸ್.ಡಿ. ಬೆರೆಸಿಕೊಟ್ಟು ಆತನ ನಡತೆಯನ್ನು ಗಮನಿಸತೊಡಗಿದರು. ಆದರೆ ತಲೆ ಕೆಟ್ಟವನಂತಾದ ಫ್ರಾಂಕ್ ಓಲ್ಸೆನ್ ಮತ್ತೆಂದೂ ಸರಿಯಾಗಲೇ ಇಲ್ಲ. ತನ್ನ ಪತ್ನಿ ಮಕ್ಕಳೊಂದಿಗೆ ಸುಖವಾಗಿದ್ದ ಓಲ್ಸೆನ್ ಬಹುಮಹಡಿ ಕಟ್ಟಡದ ಹೋಟೆಲಿನ ಕಿಟಕಿಯಿಂದ ಹೊರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಆತನ ಪತ್ನಿ ಹಾಗೂ ಮಕ್ಕಳಿಗೆ ಆತನ ಸಾವಿನ ಕಾರಣ 22 ವರ್ಷಗಳವರೆಗೂ ತಿಳಿಯಲೇ ಇಲ್ಲ.

                ಸಿ.ಐ.ಎ. ತನ್ನ ಹಲವಾರು ಅಮಾನವೀಯ ಹಾಗೂ ಕ್ರೂರ ಪ್ರಯೋಗಗಳಲ್ಲಿ ಅಮೆರಿಕದ ಕರಿಯರನ್ನು, ವೇಶ್ಯೆಯರನ್ನು ಹಾಗೂ ದಿಕ್ಕುದೆಸೆಯಿಲ್ಲದ ಬಿಕ್ಷುಕರನ್ನು, ಕೈದಿಗಳನ್ನು ಬಳಸಿಕೊಂಡಿತ್ತು.

ಧಾರ್ಮಿಕ ಬ್ರೈನ್‍ವಾಶಿಂಗ್

                ಬಲವಂತದ ಮನನಿಯಂತ್ರಣ/ನಿರ್ವಹಣೆ ವಿಧಾನಗಳಲ್ಲಿ ಈಗಲೂ ಬಳಕೆಯಲ್ಲಿರುವುದೆಂದರೆ ಬ್ರೈನ್‍ವಾಶಿಂಗ್ವಿಧಾನ. ಧಾರ್ಮಿಕ ಪಂಥಗಳು ತಮ್ಮ ಅನುಯಾಯಿಗಳು ತಮಗೆ ಹಾಗೂ ಪಂಥಕ್ಕೆ ನಿಷ್ಠರಾಗಿರುವಂತೆ ಮಾಡಲು ಈ ವಿಧಾನ ಬಳಸುತ್ತವೆ. ಈ ಅನುಯಾಯಿಗಳು ಅದೆಷ್ಟು ನಿಷ್ಠರಾಗಿರುತ್ತಾರೆಂದರೆ ಅವರು ತಂದೆತಾಯಿಗಳಿಂದ, ತಮ್ಮ ಬಂಧುಬಳಗದವರಿಂದ, ಗೆಳೆಯರಿಂದ ಹಾಗೂ ತಮ್ಮ ಇಡೀ ಸಮಾಜದಿಂದಲೇ ಪ್ರತ್ಯೇಕವಾಗಿರುತ್ತಾರೆ. ಕೆಲವೊಮ್ಮೆ ಅವರನ್ನೆಲ್ಲಾ ದ್ವೇಷಿಸುತ್ತಿರುತ್ತಾರೆ. ಅಂತಹ ಪಂಥಗಳಿಂದ ತಮ್ಮ ಮಕ್ಕಳನ್ನು ಬಿಡಿಸಿಕೊಳ್ಳಲು ತಂದೆತಾಯಿಗಳು ದೊಡ್ಡ ಹೋರಾಟವನ್ನೇ ಮಾಡಬೇಕಾಗುತ್ತದೆ. ಅಂತಹ ಮಕ್ಕಳ ಮನಸ್ಸನ್ನು ಸಹಜಸ್ಥಿತಿಗೆ ತರಲು ಡಿಪ್ರೋಗ್ರಾಮಿಂಗ್’ (Deprogramming) ಮಾಡಬೇಕಾಗುತ್ತದೆ. ಚಿಲ್ಡ್ರನ್ ಆಫ್ ಗಾಡ್’ (Children of God) ಎಂಬ ಪಂಥವೊಂದು ತನ್ನ 14 ವರ್ಷದ ಮಗನನ್ನು ತಮ್ಮ ಪಂಥಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದಾಗ ಟೆಡ್ ಪ್ಯಾಟ್ರಿಕ್ ಎಂಬಾತ ಪ್ರತಿಭಟಿಸಿ ಅದಕ್ಕೆ ಆಸ್ಪದ ಕೊಡಲಿಲ್ಲ. ಅದಾದ ನಂತರ ಆತ ಸಾವಿರಾರು ಮಕ್ಕಳನ್ನು ಅಂತಹ ಧಾರ್ಮಿಕ ಪಂಥಗಳ ಕಪಿಮುಷ್ಠಿಯಿಂದ ಬಿಡಿಸಿ Deprogramme’ ಮಾಡಿ ಸಹಜ ಬದುಕಿಗೆ ಹಿಂತಿರುಗಿಸಿದ್ದಾನೆ. Let Our Children Go!’ ಎನ್ನುವ ತನ್ನ ಪುಸ್ತಕದಲ್ಲಿ ಆತ ಧಾರ್ಮಿಕ ಪಂಥದವರು ಯಾವುದಾದರು ಮಗುವನ್ನು ತಮ್ಮ ಪಂಥಕ್ಕೆ ಸೇರಿಸಿಕೊಳ್ಳಬೇಕಾಗಿದ್ದಲ್ಲಿ ಅಂಥ ಮಗುವನ್ನು ನಿದ್ರಿಸಲು ಬಿಡುವುದಿಲ್ಲ ಹಾಗೂ ಸರಿಯಾಗಿ ಆಹಾರ ಕೊಡುವುದಿಲ್ಲ. ರಾತ್ರಿ ಹಗಲೆನ್ನದೆ ಧಾರ್ಮಿಕ ಉಪನ್ಯಾಸ, ಶಾಸ್ತ್ರಗಳು, ಚರ್ಚೆಗಳು ಹಾಗೂ ಧ್ವನಿಮುದ್ರಿತ  ಉಪನ್ಯಾಸಗಳನ್ನು ಕೇಳಿಸಿ ಕೇಳಿಸಿ ಆತನನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲಿಸಿಬಿಡುತ್ತಾರೆ. ಆ ರೀತಿ ಬಳಲಿದ ಮಗು ಕೊನೆಗೆ ಅವರು ಹೇಳಿದ್ದನ್ನೆಲ್ಲ ನಂಬುವ ಸ್ಥಿತಿ ತಲುಪಿಬಿಡುತ್ತದೆಎಂದಿದ್ದಾನೆ. ಅದನ್ನು ಸ್ವತಃ ಪರೀಕ್ಷಿಸಲು ಪ್ಯಾಟ್ರಿಕ್ ಚಿಲ್ಡ್ರನ್ ಆಫ್ ಗಾಡ್ಪಂಥ ಸೇರಿಕೊಳ್ಳಲು ಆಸಕ್ತಿ ತೋರುವವನಂತೆ ನಟಿಸಿ ಹೋದ. ಅವರು ಬೋಧನಾವಿಧಾನವನ್ನು ಅತ್ಯಂತ ಚತುರವಾಗಿ ರೂಪಿಸಿರುತ್ತಾರೆ. ಒಂದೆಡೆ ಧಾರ್ಮಿಕ ಶಾಸ್ತ್ರಗಳ ಧ್ವನಿಸುರುಳಿಗಳು ಬೋಧಿಸುತ್ತಿದ್ದರೆ ಮತ್ತೊಂದೆಡೆ ನಿಮ್ಮನ್ನು ಒಬ್ಬಾತ ಪ್ರಾರ್ಥಿಸಿ ದೇವರ ಆರಾಧನೆ ಮಾಡುವಂತೆ ಗದರುತ್ತಿರುತ್ತಾನೆ. ಮತ್ತೊಬ್ಬಾತ ನಿಮ್ಮನ್ನು ಆಲಂಗಿಸಿ ತಮ್ಮಾ, ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಿರುತ್ತಾನೆ. ಒಂದು ರೀತಿಯಲ್ಲಿ ಎಲ್ಲಾ ಗೊಂದಲಮಯವಾಗಿರುತ್ತದೆ. ಒಂದು ರೀತಿ ಮನಸ್ಸಿನ ಮೇಲೆ ಹಠಾತ್ ಧಾಳಿ ನಡೆಸುತ್ತಿರುವಂತಿರುತ್ತದೆ. ನಮ್ಮನ್ನು ಗೊಂದಲಕ್ಕೀಡು ಮಾಡಿ ಅದೆಷ್ಟು ಪೀಡಿಸುತ್ತಾರೆಂದರೆ, ಕೊನೆಕೊನೆಗೆ ನೀವೇನು ಮಾಡುತ್ತಿದ್ದೀರಿ, ಏನು ಹೇಳುತ್ತಿದ್ದೀರೆಂಬುದು ನಿಮಗೇ ತಿಳಿಯುವುದಿಲ್ಲ.ಪ್ಯಾಟ್ರಿಕ್‍ನನ್ನು ಎರಡು ದಿನಗಳಲ್ಲಿ ಕೇವಲ 3 ಗಂಟೆ ಮಾತ್ರ ನಿದ್ರಿಸಲು ಬಿಟ್ಟಿದ್ದರು. ಆತ ತನ್ನ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು. ನಾನು ಎಲ್ಲಾ ರೀತಿಯ ಮುನ್ನೆಚ್ಛರಿಕೆ ತೆಗೆದುಕೊಂಡಿದ್ದರೂ ಸಹ ಅವರ ಬೋಧನೆ ನನ್ನ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರತೊಡಗಿತ್ತು. ಅಮೆರಿಕ ಪಾಪಗಳ ಕೂಪವಾಗಿದೆ. ನೀವು ಅದರಿಂದ ಬಚಾವಾಗಬೇಕಾದರೆ ನಿನ್ನ ತಂದೆತಾಯಿ, ಆಸ್ತಿಪಾಸ್ತಿ....... ಎಲ್ಲವನ್ನೂ ನೀನು ತ್ಯಜಿಸಬೇಕು ಎಂದು ಒಬ್ಬಾತ ಹೇಳುತ್ತಿರುವುದು ನನಗೆ ಸರಿ ಎನ್ನಿಸತೊಡಗಿತ್ತು. ಇನ್ನು 24 ಗಂಟೆಗಳಲ್ಲಿ ನಾನು ಅಲ್ಲಿಂದ ಹೊರಬರದಿದ್ದಲ್ಲಿ ಇನ್ನು ಎಂದಿಗೂ ನಾನು ಅಲ್ಲಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ...... ನನ್ನ ಮನಸ್ಸು ಅವರಿಗೆ ಎಂದೆಂದಿಗೂ ಸೆರೆಸಿಕ್ಕಿಬಿಡುತ್ತದೆ ಎನ್ನಿಸಿತುಎಂದಿದ್ದಾನೆ. ಆ ಬ್ರೈನ್‍ವಾಶಿಂಗ್ ವಿಧಾನ ಎಷ್ಟು ಪ್ರಭಾವಯುತವಾಗಿರುತ್ತಿತ್ತೆಂದರೆ, ಒಬ್ಬ ವ್ಯಕ್ತಿಯ ಮನಸ್ಸನ್ನು ತಮ್ಮ ಸಮ್ಮೋಹನದಲ್ಲಿ ಸೆರೆಹಿಡಿದು ಆ ವ್ಯಕ್ತಿ ಸ್ವತಃ ಆಲೋಚಿಸಲಾಗದಂತೆ, ಸ್ವತಃ ಯಾವ ನಿರ್ಧಾರವೂ ಕೈಗೊಳ್ಳಲಾಗದಂತೆ ಹಾಗೂ ಸ್ವತಃ ಯಾವ ಕಾರ್ಯವೂ ಮಾಡಲಾಗದಂತಾಗಿ ಬಿಡುತ್ತಾನೆ.

                ಮನುಷ್ಯನ ನಡತೆಯನ್ನು ಅಥವಾ ಆಲೋಚನಾ ವಿಧಾನವನ್ನು ಆಂತರಿಕವಾಗಿ ಪ್ರಚೋದಿಸಿ ಬದಲಿಸಬಹುದೆಂಬುದನ್ನು ಮಾನವ ಅರಿತಿದ್ದಾನೆ. ಆಧುನಿಕ ನಡತೆ ಬದಲಾವಣೆ ಪರಿಕಲ್ಪನೆಯ ಪಿತಾಮಹನೆನಿಸಿರುವ ಜಾನ್ ವ್ಯಾಟ್ಸನ್, ‘ನನಗೆ ಒಂದು ಡಜûನ್ ಆರೋಗ್ಯವಂತ ಶಿಶುಗಳನ್ನು ಹಾಗೂ ಅವರನ್ನು ಬೆಳೆಸಲು ನನ್ನದೇ ಆದ ಸ್ಥಳಾವಕಾಶವನ್ನು ಕೊಡಿ. ಅವರಲ್ಲಿ ಯಾರನ್ನಾದರೂ ಒಬ್ಬನನ್ನು ಆಯ್ಕೆಮಾಡಿಕೊಂಡು, ಅವನ ವಂಶ ಯಾವುದೇ ಆಗಿರಲಿ, ಜಾಣ್ಮೆ, ಕುಶಲತೆ ಯಾವುದರಲ್ಲಿಯೇ ಇರಲಿ, ಆತನನ್ನು ಪರಿಣಿತ ಡಾಕ್ಟರ್, ಲಾಯರ್, ಕಲಾವಿದ, ವ್ಯಾಪಾರಿ ಅಥವಾ ಬಿಕ್ಷುಕ, ಕಳ್ಳನನ್ನಾಗಿಯೂ ಸಹ ಮಾಡಬಲ್ಲೆಎಂದು 1924ರಲ್ಲೇ ಹೇಳಿದ್ದಾನೆ. ಮನನಿಯಂತ್ರಣ/ನಿರ್ವಹಣೆ ಈಗಾಗಲೇ ನಮ್ಮ ಬದುಕನ್ನು ಆವರಿಸಿಬಿಟ್ಟಿದೆ. ನಮ್ಮ ಶಾಲೆಗಳಲ್ಲಿ, ಬಂದೀಖಾನೆಗಳಲ್ಲಿ, ಮಾನಸಿಕ ಆಸ್ಪತ್ರೆಗಳಲ್ಲಿ, ಕಛೇರಿ ಮುಂತಾದೆಡೆಗಳಲ್ಲಿ ಈಗಾಗಲೇ ನಮಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಬಳಕೆಯಲ್ಲಿವೆ. ಮನೆಯಲ್ಲಿ ಟಿ.ವಿ. ಹಾಕಿದ ಕೂಡಲೇ ಜಾಹೀರಾತುಗಳು ನಮ್ಮ ಮನಸ್ಸಿನ ಮೇಲೆ ದಾಳಿ ಮಾಡುತ್ತವೆ. ಅವು ಎಷ್ಟು ಆಕರ್ಷಣೀಯವಾಗಿರುತ್ತವೆಂದರೆ ಹಾಲು ಕುಡಿಯುವ ಕಂದಮ್ಮಗಳೂ ಸಹ ಹಾಲು ಕುಡಿಯುವುದು ನಿಲ್ಲಿಸಿ ಬೆರಗುಗಣ್ಣಿನಿಂದ ಅವನ್ನು ನೋಡುತ್ತವೆ. ಹೇಳಿದ್ದನ್ನೇ ಪದೇಪದೆ ಹೇಳುತ್ತಿದ್ದಲ್ಲಿ ನೀವು ಎಂತಹವರನ್ನಾದರೂ ನಂಬಿಸಿಬಿಡಬಹುದುಎನ್ನುತ್ತಾರೆ ಮನೋವಿಜ್ಞಾನಿಗಳು.

                ಈ ಶತಮಾನದ ಆರಂಭದಲ್ಲಿಯೇ ಖ್ಯಾತ ಮನಃಶಾಸ್ತ್ರಜ್ಞ ಹಾಗೂ ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಮಾನವನ ಸ್ವಕೇಂದ್ರಿತ ಅಹಮ್ಮಿಗೆ ಪೆಟ್ಟುಕೊಟ್ಟಿದ್ದ. ಮಾನವನ ವಿವೇಚನಾಪೂರ್ಣ ಆಲೋಚನೆಗಳು ಆತನ ನಡತೆಯ ಸ್ವಲ್ಪ ಭಾಗದ ಮೇಲೆ ಮಾತ್ರ ಪ್ರಭಾವ ಬೀರುತ್ತವೆ ಹಾಗೂ ವ್ಯಕ್ತಿತ್ವದ ಬಹುಪಾಲು ಸಂಪನ್ಮೂಲ ಆತನ ಸುಪ್ತಮನಸ್ಸಿನಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಝರಿಗಳಲ್ಲಿದೆ- ಆತನ ಶೈಶವಾವಸ್ಥೆಯ ಉಳಿಕೆಗಳು, ಸನ್ನಡತೆಯ ಮುಖವಾಡದ ಹಿಂದಿನ ಅನಾಗರಿಕಹಾಗೂ ಅವೈಚಾರಿಕಅಂಶಗಳು, ಇತ್ಯಾದಿ. ಮಾನವನ ಆಲೋಚನೆ ಹಾಗೂ ನಡತೆಯನ್ನು ಸ್ವಯಂ ಆತನೇ ಅರಿಯಲಾಗಲಿ, ನಿಯಂತ್ರಿಸಲಾಗಲಿ ಸಾಧ್ಯವಾಗಿಲ್ಲ. ಆತನ ಜ್ಞಾತ ಮನಸ್ಸಿಗೆ ಸ್ವಯಂ ತನ್ನನ್ನೇ ತಾನು ನಿಯಂತ್ರಿಸುವುದು ಸಾಧ್ಯವಿಲ್ಲ. ಇನ್ನು ಆತ ವಿಶ್ವದ ಭವಿಷ್ಯವನ್ನು ನಿರ್ಧರಿಸುವುಧು ಅಥವಾ ನಿಯಂತ್ರಿಸುವುದು ಹೇಗೆ?’ ಎಂದಿದ್ದಾನೆ  ಫ್ರಾಯ್ಡ್.         

j.balakrishna@gmail.com