ಗುರುವಾರ, ಆಗಸ್ಟ್ 16, 2012

ಅನುಭಾವದ ಅದ್ಭುತ ನೀಲ ಜಗತ್ತು- ಮುತ್ತೋಡಿ


ಈ ವಾರದ `ಸುಧಾ'ದಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ:


ಚಿಕ್ಕಮಗಳೂರು ದಾಟುತ್ತಿದ್ದಂತೆ ಮಳೆಯ ಜಿಟಿಜಿಟಿ ಹೆಚ್ಚಾಯಿತು. ಕತ್ತಲಾಗುವುದರೊಳಗೆ ಮುತ್ತೋಡಿ ಸೇರಬೇಕೆಂದು ಹೊರಟಿದ್ದೆವು. ಬೇಸಿಗೆ ಮತ್ತು ಮಳೆಗಾಲದ ಸಂದಿಕಾಲದ ಸಮಯ. ಒಂದೆರಡು ದಿನದ ಮಳೆ, ವಾತಾವರಣ ಹಾಗೂ ಭೂಗೋಳದ ಜೊತೆಗೆ ಮನಸ್ಸನ್ನೂ ಸಹ ಸಂಪೂರ್ಣ ಬದಲಿಸಿಬಿಟ್ಟಿತ್ತು. ಮಲ್ಲಂದೂರು ದಾಟಿ ಮುತ್ತೋಡಿಯ ಕಡೆಗೆ ನಮ್ಮ ವಾಹನ ಚಲಿಸುತ್ತಿರುವಂತೆ ಕೊರಕಲು `ಸಿಂಗಲ್ ರೋಡ್' ಎಲ್ಲರ ಎದೆಬಡಿತ ಹೆಚ್ಚಿಸಿ ಮಾತು ನಿಲ್ಲಿಸಿತ್ತು. ಕಾಣಿಸುತ್ತಿದ್ದ ಬೆಟ್ಟಗಳನ್ನು ಮಂಜಿನ ಮೋಡಗಳು ಮರೆಮಾಡಲು ಯತ್ನಿಸುತ್ತಿದ್ದವು. ಸೋನೆ ಮಳೆಗೆ ಮರಗಳೆಲ್ಲ ತೊಯ್ದು ಧ್ಯಾನಾವಸ್ಥೆಯಲ್ಲಿದ್ದಂತಿದ್ದವು. ಪಕ್ಕದ ಕಣಿವೆಯಲ್ಲಿ ಹರಿಯುವ ನೀರಿನ ಸದ್ದು, ಕಾರಿನ ಮೇಲೆ ಬೀಳುವ ಮಳೆಯ ನೀರಿನ ಟಪಟಪ ಸದ್ದು ಹಾಗೂ ಪಕ್ಷಿಗಳ ಕಲರವ ಒಂದು ನವನವೀನ ಪ್ರಕೃತಿ ರಾಗದ ಸಂಗೀತ ಗೋಷ್ಠಿ ನಡೆಸುತ್ತಿತ್ತು.
ಮುಖ್ಯ ರಸ್ತೆಯಿಂದ ಶೀಗೆಕಾನ್ ಕಡೆಗೆ ತಿರುಗಿದ ನಮ್ಮ ವಾಹನ ಉಳಿದ ಮೂರು ಕಿಲೋಮೀಟರ್ ಕ್ರಮಿಸುವುದೇ ಎಂಬ ಸಂಶಯವಾಗತೊಡಗಿತು. ಏರು ಕಾಡುಹಾದಿ, ಕೆಲಗಂಟೆಗಳ ಹಿಂದಷ್ಟೇ ಹಾಕಿರಬಹುದಾದ ಆನೆಯ ಲದ್ದಿ, ಸುತ್ತಮುತ್ತಲೂ ಒಬ್ಬ ಮನುಷ್ಯನೂ ಇಲ್ಲದ ಜಿಟಿಜಿಟಿ ಮಳೆಯ ಗವ್ವೆಂದು ಮೋಡಕವಿದಿರುವ ವಾತಾವರಣ, ಇವೆಲ್ಲದಕ್ಕೂ ಹೆದರಿ ಮರೆಯಾಗುತ್ತಿರುವಂತಿರುವ ಸೂರ್ಯ ಒಂದು ರೀತಿಯ ಆತಂಕ ಉಂಟುಮಾಡುತ್ತಿತ್ತು. ಹಾದಿಯ ಎಡೆಗಳಲ್ಲಿ ಎಂದೋ ಉರುಳಿ ಬಿದ್ದಿರುವ ಮರಗಳು, ಸಿಡಿಲಿಗೆ ಬಲಿಯಾಗಿ ಮೋಟು ಕಂಬಗಳಂತಾಗಿರುವ ದೈತ್ಯ ಮರಗಳು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು.
ಕಾರಿನಲ್ಲಿದ್ದ ಮಕ್ಕಳು, ಹೆಂಗಸರಿಗೆ ಕೊನೆಯ ಮೂರು ಕಿಲೋಮೀಟರುಗಳ ಹಾದಿ ಮೂರು ಯುಗಗಳಂತೆ ಕಂಡಿತ್ತು. ಕೊನೆಗೂ ಫಾರೆಸ್ಟ್ ಗೆಸ್ಟ್ ಹೌಸ್ ಕಂಡಾಗ ಎಲ್ಲರೂ ಸಂತೋಷದ ಉದ್ಗಾರ ಮಾಡಿದರು. ಗೆಸ್ಟ್ ಹೌಸ್ನ ಬಾಲ್ಕನಿಯಲ್ಲಿ ನಿಂತು ಕಂಡ ದೃಶ್ಯ ಬಹುಶಃ ಜೀವನದಲ್ಲಿ ನಾವೆಂದೂ ಕಂಡಿರದ ದೃಶ್ಯ. ಕಣ್ಣಿನ ದೃಷ್ಠಿ ಎತ್ತ ಹರಿಸಿದರೂ ಹಸಿರು ಹಾಸಿನಂತಿರುವ ದಟ್ಟ ಕಾಡು, ದಿಗಂತದಲ್ಲಿ ಮೋಡಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬೆಟ್ಟಗಳು. ಆತಂಕದಿಂದ ಮುದುಡಿದ್ದ ಎಲ್ಲರ ಮನಗಳು ಒಮ್ಮೆಲೇ ಗರಿಗೆದರಿ ಹಾರಾಡತೊಡಗಿದವು. ಹಕ್ಕಿಯ ಕಲರವದಂತೆಯೇ ಇತ್ತು ಅವರವರ ವಿಶಿಷ್ಟ ಉದ್ಗಾರಗಳು.
ಮಳೆಯಿಂದಾಗಿ ವಾತಾವರಣ ಮತ್ತಷ್ಟು ಸುಂದರವಾಗಿತ್ತು. ಅಲ್ಲೇ ಕುರ್ಚಿಯ ಮೇಲೆ ಕೂತು ಮಂಜುಕವಿದ ಬೆಟ್ಟಗಳನ್ನು, ಹಸಿರು ಹಾಸಿನ ಕಾಡನ್ನು, ಸುರಿಯುವ ಮಳೆಯನ್ನು ನೋಡುತ್ತಿರುವಂತೆ ಮನಸ್ಸು ಧ್ಯಾನಮಗ್ನವಾಗುತ್ತದೆ, ಅನುಭಾವದ ಅವರ್ಣನೀಯ ಅನುಭವ ನಮಗರಿವಿಲ್ಲದೆ ನಮ್ಮ ಮನಸ್ಸನ್ನು ಆವರಿಸತೊಡಗುತ್ತದೆ, ಇಷ್ಟೂ ದಿನ ಮುಚ್ಚಿದ್ದ ಮನಸ್ಸಿನ ಕಿಟಕಿಗಳು ಒಂದೊಂದೇ ತೆರೆದುಕೊಳ್ಳಲಾರಂಭಿಸುತ್ತವೆ. ಒಂದೊಂದು ಕಿಟಕಿಯಲ್ಲೂ ಕಾಣುವ ನೋಟ ವಿಶಿಷ್ಟವಾದುದು, ವಿಭಿನ್ನವಾದುದು. ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗುತ್ತೇವೆ. ಇದು ಪ್ರಕೃತಿಯ ನಿಗೂಢಗಳ ಸಂಕೀರ್ಣತೆಯೋ ಅಥವಾ ಮಹಾತ್ಮ ಗಾಂಧಿ ಹೇಳುವಂತೆ ಸರಳ ನಿರೂಪಣೆಯ, ನೇರ ಅಭಿವ್ಯಕ್ತಿಯ ಪ್ರಕೃತಿಯ ಭಾಷೆಯೋ.....ಜಗತ್ತಿನಲ್ಲಿ ಏನುಂಟು ಏನಿಲ್ಲ, ಮನಸ್ಸಿನ ಬೆಳಕಿಂಡಿ ಇರುವುದೆಲ್ಲಿ? ಮನಸ್ಸಿನ ಕತ್ತಲ ಕೋಣೆಯಲ್ಲಿರುವ ನಿಗೂಢಗಳಂತೆ ಪ್ರಕೃತಿಯಲ್ಲೂ ಎಷ್ಟೊಂದು ನಿಗೂಢಗಳಿವೆ. ಆ ಎಲ್ಲ ನಿಗೂಢಗಳನ್ನು ವಿಜ್ಞಾನದ ಭೂತಕನ್ನಡಿ ಕಾಣಬಲ್ಲುದೆ? ನೋಡಿದಲ್ಲಿ ನಾವು ಕಾಣುವುದಾದರೂ ಏನು? ಬಿಳಿಬೆಳಕನ್ನು ಛೇಧಿಸಿ ಕಾಮನಬಿಲ್ಲಿನ ಬಣ್ಣ ಪಡೆಯಬಹುದು, ಧೂಳಿನ ಕಣಗಳಿಂದ ವಿಚ್ಛಿಧ್ರವಾಗುವ ಬೆಳಕಿನ ಲಕ್ಷಣದಿಂದ ನೀಲಾಗಸವನ್ನು ವಿವರಿಸಬಹುದು. ಆದರೆ ಆ ನೀಲಾಗಸದ ಅಥವಾ ಬಿಸಿಲ್ಗುದುರೆಯ ಸೌಂದರ್ಯದ ಗ್ರಹಿಕೆಯಿಂದುಂಟಾಗುವ ಆನಂದವನ್ನು ವಿವರಿಸಲು ಸಾಧ್ಯವೆ?
ನೋಡನೋಡುತ್ತಿರುವಂತೆ ಕತ್ತಲಾಯಿತು. ಗೆಸ್ಟ್ ಹೌಸ್ನಲ್ಲಿ ಮನಸ್ಸಿನ ಸ್ಥಿಮಿತ ತಪ್ಪಿಸುವ ಟಿ.ವಿ. ಹಾಗೂ ವಿದ್ಯುತ್ ಇಲ್ಲದಿದ್ದುದು ಸಂತೋಷ ತಂದಿತು. ಇವುಗಳಿಂದುಂಟಾದ ನಿಶ್ಶಬ್ದದ ಸದ್ದು ವಾತಾವರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಊಟ ಮಾಡಿ ಮಲಗಿದ ನಮಗೆ ರಾತ್ರಿಯೆಲ್ಲಾ ಮಳೆಯ ಸದ್ದು, ಆಗಾಗ ಕೇಳಿಸುವ ಕಾಡುಪ್ರಾಣಿಯ ಶಬ್ದಗಳು ಮಾತ್ರ ಕೇಳಿಸುತ್ತಿತ್ತು. ಬೆಳಿಗ್ಗೆ ಆರು ಗಂಟೆಗೇ ಕಾಡನ್ನು ನೋಡಲು ಹೋಗೋಣವೆಂದು ಮೇಟಿ ಸಂತೋಷ್ ತಿಳಿಸಿದ.
ನಾನು ಸೂರ್ಯನಿಗಿಂತ ಮೊದಲೇ ಎದ್ದು ಅನುಭಾವದ ಬೆಟ್ಟಗುಡ್ಡಗಳ ಮೇಲೆ ಆತನ ನೆಳಲು ಬೆಳಕಿನಾಟವನ್ನು ಕಾಣಲು ಒಬ್ಬನೇ ಬಾಲ್ಕನಿಯಲ್ಲಿ ಕೂತೆ. ಸೂರ್ಯನ ಬೆಳಕು ಕೊಂಚಕೊಂಚ ಕಂಡಂತೆ ಆಗಸ ಹಾಗೂ ಬೆಟ್ಟಗಳು ವಿಚಿತ್ರ ನೀಲಿಬಣ್ಣ ಪಡೆಯಲಾರಂಭಿಸಿದವು. ವಿಚಿತ್ರ ನೀಲಿ- ನಾನೆಂದೂ ಕಂಡಿರದ ಅನುಭಾವದ ಅದ್ಭುತ ನೀಲಜಗತ್ತು! ಈ ಅನುಭಾವದ ಅನುಭವ ಆಕಸ್ಮಿಕವೆ ಅಥವಾ ಆದಮ್ಯ ಸಂತೋಷದ ಧನ್ಯತಾಭಾವಕ್ಕೆ ಶರಣಾಗತೊಡಗಿದಂತೆ ಸಾಮಾನ್ಯವೂ ಅದ್ಭುತವಾಗಿರುವಂತೆ ಕಾಣುವ ಕಣ್ಕಟ್ಟು ಮೋಡಿಯೆ? ಮನಸ್ಸಿನ ಎಲ್ಲ ಕಿಟಕಿಗಳು ತೆರೆದಾಗ ನಾವು ಅವುಗಳಿಂದ ಏನು ನೋಡುತ್ತೇವೆನ್ನುವುದು ಮುಖ್ಯವಾಗುವುದಿಲ್ಲ, ನಾವು ಹೇಗೆ ನೋಡುತ್ತೇವೆನ್ನುವುದು ಮುಖ್ಯವಾಗುತ್ತದೆ. ಈ ಗ್ರಹಿಕೆಯ ಸತ್ಯ ಸಾರ್ವ್ರತ್ರಿಕವಲ್ಲ, ಸಾಪೇಕ್ಷವಾದುದು. ಆದರೆ, ಯಾರೋ ಅಜ್ಞಾತ ಅನುಭಾವಿ ಹೇಳಿರುವಂತೆ ಸತ್ಯ ಸತ್ಯವಾಗುವುದು ಆ ಸತ್ಯವನ್ನು ನಾವು ಅನುಭವಿಸಿ ಬದುಕಿದಾಗಲೇ.
ಸಂತೋಷ್ ಬಂದು ಕರೆದಾಗ ಕಾಡಿನಲ್ಲಿ ಸುತ್ತಾಡಲು ಹೊರಟೆವು. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು. ಶೀಗೆಕಾನ್ನಿಂದ ನಾಲ್ಕು ಕಿಲೋಮೀಟರ್ ದೂರದ ಮುತ್ತೋಡಿಗೆ ಹೊರಟು ಅಲ್ಲಿಂದ ಜೀಪಿನಲ್ಲಿ ಪ್ರಯಾಣ ಬೆಳೆಸಿತು ನಮ್ಮ ತಂಡ. ಜಿಂಕೆಗಳು, ಹತ್ತಾರು ನವಿಲುಗಳು, ಕಾಡುಕೋಳಿ, ಕಾಡುಕುರಿಗಳ ಜೊತೆಗೆ ಜೀಪಿಗೆ ಎದುರಾದವು ನಾಲ್ಕು ಕಾಡೆಮ್ಮೆಗಳು. ಮುನ್ನೂರು ವರ್ಷದ ಸಾಗುವಾನಿ ಮರವನ್ನು ಇಲಾಖೆಯ ಶಿವಾನಂದ್ ತೋರಿಸಿದರು. ಶೀಗೆಕಾನ್ಗೆ ಹಿಂದಿರುಗುವಷ್ಟರಲ್ಲಿ ಎರಡು ಕಡೆ ಮರಗಳು ರಸ್ತೆಯಲ್ಲಿ ಅಡ್ಡಬಿದ್ದಿದ್ದವು. ಬೇರೊಂದೆಡೆ ಆನೆ ತಾನು ಹಾಯ್ದುಹೋಗಿರುವ ಗುರುತು ಬಿಟ್ಟಿತ್ತು.
ಮತ್ತೆ ಮಳೆ ಶುರುವಾಯಿತು. ಈ ಪಶ್ಚಿಮಘಟ್ಟಗಳು ಒಮ್ಮೊಮ್ಮೆ ಒಂದೊಂದು ರೀತಿ ಕಾಣುತ್ತವೆ. ಸಂಜೆ, ಮುಂಜಾನೆ, ಮಧ್ಯಾಹ್ನ, ಮಳೆಯಲ್ಲಿ, ಬಿಸಿಲಲ್ಲಿ- ಪ್ರತಿಯೊಂದು ಸಮಯವೂ ಒಂದೊಂದು ರೀತಿಯ ವಿಭಿನ್ನ ದೃಶ್ಯ- ಅನುಭಾವದ ಅನುಭವದಂತೆ ಪ್ರತಿಯೊಂದು ಅನುಭವವೂ ವಿಭಿನ್ನ, ಪ್ರತಿಯೊಂದು ಸತ್ಯವೂ ವಿಭಿನ್ನ. ನಮಗೆ ಈ ಅದ್ಭುತಾವಂದವನ್ನು ಸವಿಯಲು ಅವಕಾಶ ಮಾಡಿಕೊಟ್ಟ ಅರಣ್ಯ ಉಪ ಸಂರಕ್ಷಣಾಧಿಕಾರಿ ಧನಂಜಯ ಮತ್ತು ಗೆಳೆಯ ಗಂಗರಾಜ್ರವರಿಗೆ ಮೊಬೈಲ್ ಮೂಲಕ ವಂದಿಸಿ ಕಾಡಿನ ಮರಗಳನ್ನು, ಘಟ್ಟಗಳನ್ನು, ಆಗಸದಿಂದ ಭೂಮಿಗೆ ಸೇತುವೆ ನಿರ್ಮಿಸಿದ್ದ ಮೋಡಗಳನ್ನು ನೋಡುತ್ತ ವಾಪಸ್ಸು ಹೊರಡುವಾಗ ಝೆನ್ ಹೇಳಿಕೆಯೊಂದು ನೆನಪಾಯಿತು: `ಜ್ಞಾನೋದಯದ ಮೊದಲು ಮರಗಳು ಮರಗಳಾಗಿದ್ದವು ಹಾಗೂ ಪರ್ವತಗಳು ಪರ್ವತಗಳಾಗಿದ್ದವು. ಜ್ಞಾನೋದಯದ ನಂತರವೂ ಮರಗಳು ಮರಗಳಾಗೇ ಉಳಿದಿವೆ ಹಾಗೂ ಪರ್ವತಗಳು ಪರ್ವತಗಳಾಗೇ ಉಳಿದಿವೆ.' ಆದರೆ ಮನಸ್ಸು ಮಾತ್ರ ಅದ್ಭುತ ಬದಲಾವಣೆಯಿಂದ ಹಾಡುತ್ತಿತ್ತು.
ಚಿತ್ರ ಲೇಖನ: ಜೆ. ಬಾಲಕೃಷ್ಣ

ಗುರುವಾರ, ಆಗಸ್ಟ್ 02, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 8

ಆಗಸ್ಟ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 8ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಮುಠ್ಠಾಳ
ನಸ್ರುದ್ದೀನ್ ಸಂತೆಯ ದಿನ ರಸ್ತೆ ಬದಿಯಲ್ಲಿ ಬಿಕ್ಷೆ ಬೇಡಲು ನಿಲ್ಲುತ್ತಿದ್ದ. ಜನರೆಲ್ಲರೂ ಅವನನ್ನು ಮುಠ್ಠಾಳನೆಂದು ಕರೆಯುತ್ತಿದ್ದರು, ಏಕೆಂದರೆ ಅವನಿಗೆ ಬಿಕ್ಷೆ ನೀಡಲು ನಾಣ್ಯಗಳನ್ನು ಕೊಟ್ಟರೆ ಆತ ಅದರಿಂದ ಅತ್ಯಂತ ಕಡಿಮೆ ಬೆಲೆಯದೇ ಆಯ್ಕೆ ಮಾಡಿಕೊಳ್ಳುತ್ತಿದ್ದ. ಜನ ಅವನನ್ನು ತಮಾಷೆ ಮಾಡಲು ನಾಣ್ಯಗಳನ್ನು ಅವನ ಮುಂದೆ ಚಾಚುತ್ತಿದ್ದರು. ಅವುಗಳಿಂದ ಕಡಿಮೆ ಬೆಲೆಯದು ಆಯ್ಕೆಮಾಡಿಕೊಂಡಾಗ ಎಲ್ಲಾ ಅವನನ್ನು ಗೇಲಿ ಮಾಡುತ್ತಿದ್ದರು. ಆತನನ್ನು ಗಮನಿಸುತ್ತಿದ್ದ ಒಬ್ಬ ಸಹೃದಯಿ ನಸ್ರುದ್ದೀನ್‌ನ ಬಳಿ ಬಂದು, ‘ಅಲ್ಲಯ್ಯಾ, ನೀನು ನಿಜವಾಗಿಯೂ ದಡ್ಡನೇ. ಜನ ಹೆಚ್ಚಿನ ಬೆಲೆಯ ನಾಣ್ಯ ಕೊಟ್ಟರೆ ನೀನು ಏಕೆ ಕಡಿಮೆ ಬೆಲೆಯದೇ ಸಾಕೆನ್ನುತ್ತೀಯ? ನೀನು ಹೆಚ್ಚಿನ ಬೆಲೆಯದು ತೆಗೆದುಕೋ ಹಾಗೂ ನಿನಗೆ ಹೆಚ್ಚಿನ ಹಣವೂ ದೊರಕುತ್ತದೆ ಅಲ್ಲದೆ ಜನ ನಿನ್ನನ್ನು ಗೇಲಿ ಮಾಡುವುದೂ ತಪ್ಪುತ್ತದೆ’ ಎಂದ. ಅದಕ್ಕೆ ನಸ್ರುದ್ದೀನ್ ನಗುತ್ತಾ, ‘ನಿಮ್ಮ ಮಾತು ನಿಜವಿರಬಹುದು, ಆದರೆ ನಾನು ಹೆಚ್ಚಿನ ಬೆಲೆಯ ನಾಣ್ಯ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಜನ ನಾನು ಬುದ್ಧಿವಂತನಾಗಿರುವನೆಂದು ತಿಳಿದು ನನಗೆ ನಾಣ್ಯ ನೀಡುವುದನ್ನು ನಿಲ್ಲಿಸುತ್ತಾರೆ. ಜನ ನನ್ನನ್ನು ದಡ್ಡನೆಂದೇ ಪರಿಗಣಿಸಿದರೆ ನನಗೇ ಲಾಭ’ ಎಂದ ಸಂಗ್ರಹವಾಗಿದ್ದ ಚಿಲ್ಲರೆ ಕಿಸೆಗೆ ಬಿಡುತ್ತಾ.

ಭಿಕ್ಷುಕನ ಅವಶ್ಯಕತೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದಾಗ ಅಲ್ಲೇ ಬಾಗಿಲ ಬಳಿ ಭಿಕ್ಷುಕನೊಬ್ಬ ಕೈ ಚಾಚಿಕೊಂದು ಕೂತಿದ್ದ. ಅವನನ್ನು ಕಂಡ ನಸ್ರುದ್ದೀನ್, ‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಹೌದು’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಹೌದು’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ಹೌದು, ನನಗೆ ಅಂಥವೆಲ್ಲಾ ಇಷ್ಟ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ಚಿನ್ನದ ನಾಣ್ಯವೊಂದನ್ನು ನೀಡಿದ. ಸ್ವಲ್ಪ ದೂರದಲ್ಲೇ ಮತ್ತೊಬ್ಬ ಭಿಕ್ಷುಕ ಈ ಸಂಭಾಷಣೆಯನ್ನೆಲ್ಲಾ ಕೇಳಿಸಿಕೊಂಡು ಕೂತಿದ್ದ. ಅವನ ಬಳಿ ಬಂದ ನಸ್ರುದ್ದೀನ್ ಅದೇ ಪ್ರಶ್ನೆಗಳನ್ನು ಕೇಳಿದ.
‘ಏನಯ್ಯಾ ನೀನು ದುಂದುವೆಚ್ಚಗಾರನೇ?’ ಎಂದು ಕೇಳಿದ.
‘ಇಲ್ಲ ಸ್ವಾಮಿ’ ಎಂದ ಭಿಕ್ಷುಕ.
‘ನೀನು ಸೋಮಾರಿಯಂತೆ ಚಹಾ ಕುಡಿಯುತ್ತಾ ಬೀಡಿ, ಸಿಗರೇಟು ಸೇದುತ್ತೀಯಾ?’
‘ಖಂಡಿತಾ ಇಲ್ಲ ಸ್ವಾಮಿ’
‘ನೀನು ಗೆಳೆಯರ ಜೊತೆ ದಿನಾ ಸಂಜೆ ಮದ್ಯಪಾನ ಮಾಡುತ್ತೀಯಾ?’
‘ನನಗೆ ಅಂಥಾ ಕೆಟ್ಟ ಅಭ್ಯಾಸಗಳೆಲ್ಲಾ ಇಲ್ಲ. ಬದಲಿಗೆ ನಾನು ದಿನಾ ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡುತ್ತೇನೆ’ ಎಂದ ಭಿಕ್ಷುಕ ವಿನಮ್ರನಾಗಿ.
‘ಛೆ! ಛೆ!’ ಎನ್ನುತ್ತಾ ನಸ್ರುದ್ದೀನ್ ಅವನಿಗೆ ತಾಮ್ರದ ನಾಣ್ಯವೊಂದನ್ನು ನೀಡಿದ.
ತಾನೊಬ್ಬ ಉತ್ತಮ ವ್ಯಕ್ತಿ, ದೇವರ ಭಕ್ತ ಎಂದು ಹೇಳಿಕೊಂಡರೆ ಆ ಭಿಕ್ಷುಕನಿಗೆ ನೀಡಿದುದಕ್ಕಿಂತ ಹೆಚ್ಚಿನ ಭಿಕ್ಷೆ ದೊರೆಯಬಹುದೆಂದು ನಿರೀಕ್ಷಿಸಿದ್ದ ಆ ಭಿಕ್ಷುಕನಿಗೆ ನಿರಾಸೆಯಾಯಿತು. ಆತ ನಸ್ರುದ್ದೀನ್‌ನನ್ನು ಕುರಿತು, ‘ಅಲ್ಲಾ, ಕೆಟ್ಟ ಚಟಗಳಿರುವ ಅವನಿಗೆ ಚಿನ್ನದ ನಾಣ್ಯ ನೀಡಿದಿರಿ, ನನ್ನಂಥ ದೇವರ ಭಕ್ತನಿಗೆ ತಾಮ್ರದ ನಾಣ್ಯ ಕೊಟ್ಟಿರುವಿರಲ್ಲಾ? ಇದು ನ್ಯಾಯವೇ?’ ಎಂದು ಕೇಳಿದ.
ಅದಕ್ಕೆ ಮುಲ್ಲಾ ನಸ್ರುದ್ದೀನ್, ‘ಬೇಸರ ಮಾಡಿಕೊಳ್ಳಬೇಡ. ಅವನಿಗೆ ನಿನಗಿಂತ ಹೆಚ್ಚಿನ ಅವಶ್ಯಕತೆಗಳಿವೆ. ಅದಕ್ಕಾಗೇ ಅವನಿಗೆ ಚಿನ್ನದ ನಾಣ್ಯ ನೀಡಿದೆ’ ಎಂದ ಮುನ್ನಡೆಯುತ್ತಾ.

ನೀನ್ಯಾರು ನನಗೆ ತಿಳಿದಿಲ್ಲವೆ?
ಆ ಊರಿಗೆ ಹೊಸಬನಾಗಿದ್ದ ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಮನೆಯ ಬಳಿ ಇದ್ದ ಅಂಗಡಿಗೆ ಹೋಗಿ ಮಾತುಕತೆ ಆರಂಭಿಸಿದ.
‘ಹೇಗಿದೆ ವ್ಯಾಪಾರ?’ ಕೇಳಿದ ನಸ್ರುದ್ದೀನ್.
‘ಹೋ, ಚೆನ್ನಾಗಿದೆ’ ಹೇಳಿದ ಅಂಗಡಿಯಾತ.
‘ಹಾಗಾದರೆ, ನನಗೆ ನೂರು ರೂಪಾಯಿ ಸಾಲ ಕೊಡುವಿರಾ?’ ಕೇಳಿದ ನಸ್ರುದ್ದೀನ್.
‘ಇಲ್ಲ, ಸಾಧ್ಯವಿಲ್ಲ. ನೀವ್ಯಾರೋ ನನಗೆ ಪರಿಚಯವಿಲ್ಲ’ ಎಂದ ಅಂಗಡಿಯಾತ.
‘ಇದೆಂಥ ವಿಚಿತ್ರ! ನಮ್ಮೂರಿನಲ್ಲಿ ಸಾಲ ಕೇಳಿದರೆ, ನೀನ್ಯಾರೆಂದು ನಮಗೆ ಚೆನ್ನಾಗಿ ತಿಳಿದಿದೆ, ಅದಕ್ಕೇ ನಿನಗೆ ಸಾಲ ಕೊಡುವುದಿಲ್ಲ ಎನ್ನುತ್ತಾರೆ. ಈ ಊರಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಾನು ಪರಿಚಯವಿಲ್ಲ ಕೊಡುವುದಿಲ್ಲ ಎನ್ನುತ್ತೀರಲ್ಲಾ?’ ಎಂದ ನಸ್ರುದ್ದೀನ್.