ಸೋಮವಾರ, ಮೇ 30, 2011

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು


2ನೇ ಜೂನ್ 2011ರ `ಅಗ್ನಿ' ವಾರಪತ್ರಿಕೆಯಲ್ಲಿ ಮಂಜುನಾಥ್ ಅದ್ದೆಯವರ ಅಂಕಣ `ಗಾಳಿ ಗಮಲು'ವಿನಲ್ಲಿ ಪ್ರಕಟವಾಗಿರುವ ನನ್ನ ಪುಸ್ತಕ `ಮಳೆಬಿಲ್ಲ ನೆರಳು'ವಿನ ಪರಿಚಯ:

ಗ್ರಹಿಕೆ ವಿಸ್ತರಿಸುವ ಎರಡು ಪುಸ್ತಕಗಳು
ಭಾರತದ ಮಟ್ಟಿಗೆ ದುಡಿಯುವ ಜನರ ಸಾಮುದಾಯಿಕ ಅನುಭವಗಳ ಹೊರತು ಉಳಿದದ್ದೆಲ್ಲಾ ನಡೆದದ್ದು ಮುಚ್ಚುಮರೆಯಲ್ಲಿಯೆ. ಅದರಲ್ಲೂ ಅಕ್ಷರ ಮತ್ತು ವಿಚಾರಗಳ ಲೋಕದ ವಂಚನೆಯಂತೂ ಸಾಮಾಜಿಕವಾಗಿ ನಿಷಿದ್ಧದ ಸಂಗತಿಯಂತೆ ಆಚರಣೆಯಲ್ಲಿದ್ದದ್ದು ಲೋಕಾಂತ ಸತ್ಯ. ದುಡಿಯುವ ಜನರ ಸಮುದಾಯಗಳಿಂದ ಬಹಳಷ್ಟು ಜನ ಅಕ್ಷರದ ಲೋಕಕ್ಕೆ ಇಂದು ಪ್ರವೇಶ ಪದೆದಿದ್ದರೂ ಸಂಗತಿ, ವಿಚಾರ, ಸತ್ಯಗಳ ಮುಚ್ಚುಮರೆಯಂತೂ ನಡೆದೇ ಇದೆ.
ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮದ ವಿಚಾರಗಳಂತೂ ವಂಚನೆಯ ಪರಮಾವಧಿ ತಲುಪಿ ಭಾರತದಲ್ಲಿ ವ್ಯಾಖ್ಯಾನಗೊಂಡಂತೆ, ತಪ್ಪುತಪ್ಪಾಗಿ ತಲುಪಿದಂತೆ, ತುರ್ಜುಮೆಗೊಂಡಂತೆ ವಿಶ್ವದಲ್ಲಿ ಬೇರೆಲ್ಲೂ ನಡೆದಿರಲಿಕ್ಕೆ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಅಕ್ಷರ ಲೋಕದ ಗುತ್ತಿಗೆಯನ್ನು ಶತಶತಮಾನಗಳಿಂದ ಹಿಡಿದಿದ್ದವರ ಆತ್ಮವಂಚಕ ಮನಸ್ಥಿತಿ. ಜಾಗತಿಕ ಮಟ್ಟದಲ್ಲಿ ಜ್ಞಾನದ ನವ ಶಾಖೆಗಳು ತಲೆ ಎತ್ತಿದಾಗ ಅವುಗಳನ್ನು ಹಿಡಿದು, ಪಡೆದು ತರುವ ಚಾಂಪಿಯನ್‌ಗಳಾಗಿ ಇವರು ಆವರಿಸಿಕೊಂಡದ್ದು ಕೂಡ ತಮ್ಮ ಪಾರಂಪರಿಕ ಆತ್ಮವಂಚನೆಯ ಜೊತೆಯಲ್ಲಿಯೆ.
ಈ ಕಾರಣದಿಂದ ವಿಜ್ಞಾನ, ತಂತ್ರಜ್ಞಾನ, ಹೊಸ ಕೃಷಿ ಮಾದರಿಯಂತಹ ವಿಚಾರಗಳು ಸ್ಥಳೀಯ ಜನರ ಪಾಲಿಗೆ ಬೆಸಗೊಂಡ ರೀತಿಯೇ ತೀರಾ ಅಧ್ವಾನದಿಂದ ಕೂಡಿದೆ. ನಮಗಷ್ಟೇ ಅಲ್ಲ; ಎಲ್ಲಾ ಸ್ಥಳೀಯ ಭಾಷೆಗಳಿಗೆ ಜ್ಞಾನದ ಹೊಸ ಶಾಖೆಗಳು ತಲುಪಿದ್ದು ಇದೇ ಬಗೆಯಲ್ಲಿ. ಬೇರೆ ಬೇರೆ ಕಾರಣಗಳಿಗಾಗಿ ಬಂಗಾಳಿ, ಮಲೆಯಾಳಂ, ತಮಿಳು ಭಾಷೆಗಳ ಮಟ್ಟಗೆ ಈ ವಂಚನೆ ಪೂರ್ಣವಲ್ಲದಿದ್ದರೂ ಸ್ವಲ್ಪ ಮಟ್ಟಿನ ಹೊಡೆತ ತಿಂದಿದೆ. ಈ ಮೂರೂ ಭಾಷೆಗಳ ನೆಲದಲ್ಲಿ ಒಂದೂವರೆ ಶತಮಾನಕ್ಕೂ ಮೊದಲೇ ನಡೆದ ದೊಡ್ಡ ಮಟ್ಟದ ಸಾಂಸ್ಕೃತಿಕ ತಾಕಲಾಟಗಳ ಪರಿಣಾಮ ಇದು.
ಈ ದೇಶದ ಚರಿತ್ರೆಯಲ್ಲಿ ವಿಚಾರ ಮತ್ತು ವಿಜ್ಞಾನದ ಕದನ ಬೃಹತ್ ಅಧ್ಯಾಯವೇ ಆಗಿದೆ. ವಲಸೆ ವೈದಿಕರು-ಮೂಲನಿವಾಸಿ ಶೈವರ ನಡುವೆ ನಡೆದ ಸುದೀರ್ಘ ಸಂಘರ್ಷವು ಇದೇ ಆಗಿದೆ. ಇದಾದ ನಂತರ ವೈದಿಕರು ತಮ್ಮ ವಂಚಕ ಯುದ್ಧವನ್ನು ಮುಂದುವರೆಸಿದ್ದು ಇಲ್ಲಿಯ ಬೌದ್ಧರ ಮೇಲೆ. ಇವೆರಡೂ ವಿಚಾರಧಾರೆಗಳ ವಿರುದ್ಧದ ವೈದಿಕರ ಗೆಲುವು ವಿಜ್ಞಾನ, ದೇವರು, ವಿಚಾರ ಎಲ್ಲವನ್ನೂ ತಿರುಚಿ ಹಾಕಿತ್ತು. ಇದೇ ತಿರುಚುವ ಪರಂಪರೆಯೇ ಆಧುನಿಕ ವಿಜ್ಞಾನವನ್ನೂ ನಮಗೆ ತಲುಪಿಸುವ ಕೆಲಸವನ್ನು ಮೊದಲಿಗೆ ಶುರುವಿಟ್ಟದ್ದು. ಈ ವಂಚನೆಯನ್ನು ಮೀರಿ ಇತ್ತೀಚೆಗೆ ವಿಚಾರ, ವಿಜ್ಞಾನ, ಅಧ್ಯಾತ್ಮವನ್ನು ಅವುಗಳ ನಿಜವಾದ ನೆಲೆಯಲ್ಲಿ ನೋಡುವ, ಗ್ರಹಿಸುವ, ವ್ಯಾಖ್ಯಾನಿಸುವ ಕೆಲಸವನ್ನು ವೈದಿಕೇತರರು ಆರಂಭಿಸಿದ್ದಾರಾದರೂ ಸಂಘರ್ಷ ಮಾತ್ರ ನಡೆದೇ ಇದೆ. ವಿಚಾರ, ವಿಜ್ಞಾನವನ್ನು ತಿರುಚಿ ಹೇಳುವ ಪರಿಪಾಠವೂ ಮುಂದುವರೆದಿದೆ. ವಾಸ್ತವ ಹೇಳಬೇಕೆನ್ನುವವರ ಪ್ರಯತ್ನಗಳೂ ನಡೆದಿವೆ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎರಡು ಕನ್ನಡದ ಪುಸ್ತಕಗಳು ಮಹತ್ವದವು ಆಗಿವೆ. ಅವುಗಳಲ್ಲಿ ಒಂದು ಡಾ.ಜೆ.ಬಾಲಕೃಷ್ಣರ ‘ಮಳೆಬಿಲ್ಲ ನೆರಳು ಎಂಬ ವಿಜ್ಞಾನದ ಲೇಖನಗಳ ಕೃತಿ, ಮತ್ತೊಂದು ಕೃಷ್ಣಮೂರ್ತಿ ಬಿಳಿಗೆರೆಯವರ ಕೃಷಿ ಚರಿತ್ರೆಯ ಪರಿಶೋಧದ ‘ಬೇಸಾಯವ ಮಾಡಿ ಪುಸ್ತಕ. ಒಳ ತಿರುಳಿನಲ್ಲಿ ಎರಡೂ ಭಿನ್ನವಾದ ಪುಸ್ತಕಗಳಾದರೂ ಗ್ರಹಿಕೆಯ ಗೇಯತೆಯಲ್ಲಿ ಪರಸ್ಪರ ಸಾಮ್ಯತೆ ಇರುವ ಕೃತಿಗಳು.
‘ಮಳೆಬಿಲ್ಲ ನೆರಳು ಕೃತಿಯ ಲೇಖನಗಳು ಕೇವಲ ವಿಜ್ಞಾನ ಬರಹಗಳು ಮಾತ್ರವಲ್ಲ; ಮನುಷ್ಯರ ಸಮಾಜ, ಸಂಸ್ಕೃತಿಗೆ ಸಂಬಂಧಿಸಿದ ಚಿಂತನೆಗಳೂ ಹೌದು. ಹಾಗೆಯೆ ಒಟ್ಟಾರೆ ಜೀವಿಗಳ ಜೀವಿತ ಕ್ರಮದ ಬಗೆಗಿನ ಅರಿವಿನ ವಿಸ್ತರಣೆಗೆ ಪೂರಕವಾದವುಗಳೂ ಹೌದು. ನಿಸರ್ಗ ಚೈತನ್ಯದ ಜೈವಿಕತೆಯಿಂದ ಮೊದಲ್ಗೊಂಡು ಕಾರ್ಪೊರೇಟ್ ವಲಯದ ಸಂಚಿನ ತನಕ ಬಾಲಕೃಷ್ಣ ವಿಶ್ವಮಟ್ಟದ ನಿದರ್ಶನಗಳ ಸಮೇತ ವಿವರಿಸುತ್ತಾರೆ.
ಪುಸ್ತಕದ ಉದ್ದಕ್ಕೆ ಜಗತ್ತಿನ ಜೀವಜಾಲದ ನಿಗೂಢ ಬೆಡಗುಗಳನ್ನ, ಬಣ್ಣಗಳನ್ನ ಹುಡುಕುವ ಬಗೆಯೇ ಓದುಗರ ಎದುರು ಬೇರೊಂದು ಲೋಕವನ್ನು ತೆರೆದು ಅನುಭವವನ್ನು ಹೆಚ್ಚಿಸುತ್ತದೆ. ನಿಯಾಂಡರ್ತಲ್ ಮಾನವನಿಂದ ಮೊದಲ್ಗೊಂಡು ಕನಸುಗಳ ತನಕ ವೈಜ್ಞಾನಿಕ ಮಾದರಿಗಳ ಹುಡುಕಾಟದ ವಸ್ತುಗಳು ಈ ಪುಸ್ತಕದಲ್ಲಿ ಇವೆ. ‘ಕಾಮನಬಿಲ್ಲಿನ ಅನಾವರಣ ಎಂಬ ಈ ಪುಸ್ತಕದ ಲೇಖನವನ್ನಂತೂ ಈ ನಾಡಿನ ಪ್ರತಿಯೊಬ್ಬ ಯುವಕ-ಯುವತಿಯೂ ಓದಿದರೆ ಸಿಗುವ ಲಾಭ ಹೆಚ್ಚು. ‘ಪ್ರೇಮಿಗಳ ಹಾಗೂ ಹುಚ್ಚರ ಮನಸ್ಥಿತಿ ಒಂದೇ ಆಗಿರುತ್ತದೆ. ವಿವೇಚನೆಯನ್ನೂ ಮೀರಿದ ಎಂಥ ಅದ್ಭುತ ಕಲ್ಪನೆಗಳು ಅವರವು! ಹುಚ್ಚ, ಪ್ರೇಮಿ ಹಾಗೂ ಕವಿ ಒಂದೇ ಕಲ್ಪನೆಯ ದೋಣಿಯ ಪಯಣಿಗರು ಎಂದು ಶೇಕ್ಷ್‌ಪಿಯರ್ ಹೇಳಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಕಬಿ ಶೇಕ್ಸ್‌ಪಿಯರ್‌ನ ಈ ಗ್ರಹಿಕೆಗೆ ಪೂರಕವಾದ ದೇಹದ ರಾಸಾಯನಿಕಗಳಲ್ಲಿನ ಬೆಳವಣಿಗೆ ಯಾವುದು ಎಂಬುದನ್ನು ‘ಕಾಮನಬಿಲ್ಲಿನ ಅನಾವರಣ ವೈಜ್ಞಾನಿಕವಾಗಿ ಮುಂದಿಡುತ್ತದೆ. ಕಾಮ, ಪ್ರೇಮದ ವಿಚಾರಗಳಲ್ಲಿ ಕನಿಷ್ಠ ಅಗತ್ಯದ ವಿಚಾರಗಳನ್ನು ಯುವ ಜನತೆ ಮುಕ್ತವಾಗಿ ಚರ್ಚಿಸಲಾಗದಷ್ಟು ಮುಚ್ಚಿದ ಸಮಾಜ ನಮ್ಮದು. ಮಾನವ ಜೀವಿಯ ವರ್ತನೆಗಳ ಮೇಲೆ ದೇವರು, ಅರಿಷಡ್ವರ್ಗ, ಹಣೆಯಬರಹ, ವಿಧಿವಿಲಾಸದ ಸಂಗತಿಗಳನ್ನಷ್ಟೇ ಹೇರಿ ಕುಳಿತಿರುವ, ಈ ಅಲೌಕಿಕ ಸಂಗತಿಗಳ ಕಾವಲು ಕಾಯುತ್ತಿರುವ ಧಾರ್ಮಿಕ, ಸಾಮಾಜಿಕ ಸಂಗತಿ ಬಾಲ್ಯದಿಂದ ಯೌನಕ್ಕೆ ಕಾಲಿಡುವ ಅಸಂಖ್ಯಾತ ಯುವಕ-ಯುವತಿಯರ ವ್ಯಕ್ತಿತ್ವದ ಸಹಜ, ಸಮ್ಮತ ವಿಕಾಸಕ್ಕೆ ಕೊಡಲಿ ಪೆಟ್ಟನ್ನೇ ಹಾಕಿದೆ. ಮಾನವ ಜೀವಿಯ ಪ್ರೇಮ-ಕಾಮದ ವಿಚಾರದಲ್ಲಿ ಏನೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ವಿಶ್ವಮಟ್ಟದ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಜೆ.ಬಾಲಕೃಷ್ಣ ತೀರಾ ಉಪಯುಕ್ತ ಬರವಣಿಗೆಯನ್ನು ಬರೆದಿದ್ದಾರೆ.
‘ಈಗ ಜಲ ಮಾಯಾಂಗನೆಯರಿಗೆ ತಮ್ಮ ಹಾಡಿಗಿಂತ ಹೆಚ್ಚು ಪ್ರಬಲ ಅಸ್ತ್ರವೊಂದು ದೊರಕಿತ್ತು.... ಅದೇ ಅವರ ಮೌನ.... ಯಾರಾದರೂ ಬಹುಶಃ ಅವರ ಹಾಡಿನಿಂದ ತಪ್ಪಿಸಿಕೊಂಡಿರಬಹುದು; ಆದರೆ ಅವರ ಮೌನದಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಇವು ಫ್ರಾನ್ಜ್ ಕಾಫ್ಕಾನ ಮಾತುಗಳು. ‘ಅನ್ಯಗ್ರಹ ಜೀವಿಗಳಿವೆಯೆ? ಎಂಬ ಲೇಖನ ಆರಂಭಕ್ಕೆ ಬಾಲಕೃಷ್ಣ ಇವನ್ನು ಬಳಸಿಕೊಂಡಿದ್ದಾರೆ. ನಿಸರ್ಗದ ನೆಲೆಯಲ್ಲಿ, ವಿಶ್ವದ ಅನಂತತೆಯಲ್ಲಿ ಮನುಷ್ಯನ ‘ಒಂಟಿತನದ ಹುದುಲನ್ನು ಪರಾಮರ್ಶಿಸುವ ವಿಜ್ಞಾನದ ಸಂಶೋಧನೆಗಳನ್ನು ಕುರಿತ ಲೇಖನವಿದು.
ಸೃಜನಶೀಲ ಬರವಣಿಗೆಗಳ ತೀವ್ರತರ ಸಂವೇದನೆಗಳು, ಹುಡುಕಾಟಗಳು ವಿಜ್ಞಾನದ ನೆಲೆಯಲ್ಲಿ ಸಾಕ್ಷಾತ್ಕಾರ ಕಾಣುತ್ತಿರುವ ಕಾಲವಿದು. ಇದಕ್ಕೆ ಪೂರಕವಾದ ಅನೇಕ ನಿದರ್ಶನಗಳನ್ನು ಕ್ವಾಂಟಂ ವಿಜ್ಞಾನದಲ್ಲಿ ಕಾಣುತ್ತಿದ್ದೇವೆ. ಪತ್ರಿಕೆಯಲ್ಲಿ ಅಗ್ನಿ ಶ್ರೀಧರ್‌ರವರು ಬರೆಯುತ್ತಿರುವ ‘ಕ್ವಾಂಟಂ ಜಗತ್ತು ಅಂಕಣ ಈಗಾಗಲೇ ಸಾಮಾಜಿಕ, ಸಾಂಸ್ಕೃತಿಕ, ಸೃಜನಶೀಲ ಬರಹ ಚಿಂತನೆಗಳಲ್ಲಿ ವಿಜ್ಞಾನ ಒಡನಾಡಿರುವ ನೂರಾರು ನಿದರ್ಶನಗಳನ್ನು ಹಿಡಿದುಕೊಟ್ಟಿದ್ದಾರೆ. ‘ಅನ್ಯಗ್ರಹ ಜೀವಿಗಳಿವೆಯೆ? ಲೇಖನದಲ್ಲಿ ಜೆ.ಬಾಲಕೃಷ್ಣ ಕೂಡ ಕಳೆದ ಶತಮಾನದ ಪ್ರಭಾವಿ ಬರಹಗಾರನಾದ ಕಾಫ್ಕಾನ ಸಂವೇದನೆಗಳೊಂದಿಗೆ ವಿಜ್ಞಾನದ ಪ್ರಯೋಗಗಳು ವಿಸ್ತರಣೆ ಕಂಡು ಪರಮ ಸತ್ಯದ ತಡಕಾಟ ನಡೆಸುತ್ತಿರುವುದನ್ನು ಮುಂದಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್‌ನಿಂದ ಮೊದಲ್ಗೊಂಡು ಹೆನ್ರಿಟಾ ಲ್ಯಾಕ್ಸ್‌ಳ ಅಮರ ಕಥೆಯ ತನಕ ವಿಜ್ಞಾನದ ವೇದಿಕೆ ಏರಿ ಹುಡುಕಾಡಿರುವ ಬಾಲಕೃಷ್ಣ ಜನರ ಬದುಕಿನ ವಿವೇಕದೊಂದಿಗೆ ತಮ್ಮ ಬರಹಗಳನ್ನು ಸಾದ್ಯಾಂತವಾಗಿಸಿರುವುದು ಅನನ್ಯವಾದದ್ದು.
ಕೃಷ್ಣಮೂತಿ ಬಿಳಿಗೆರೆಯ ಪುಸ್ತಕ ಇದಕ್ಕಿಂತ ಭಿನ್ನವಾದದ್ದು. ಈ ನೆಲದ ಬಹುಸಂಖ್ಯೆಯ ರೈತಾಪಿ ಕಡುಬುದಾರರ ಅನುದಿನದ ಬದುಕು, ಬವಣೆ, ಖುಷಿಗಳಿಗೆ ಸಂಬಂಧಿಸಿದ್ದು. ವಿಜ್ಞಾನ ಹೇಳುವ ಸತ್ಯಕ್ಕೆ ಒಂದು ಕಠೋರತೆ ಇರುತ್ತದೆ. ಅದು ಅನೇಕ ಬಾರಿ ತನ್ನನ್ನು ಪೋಷಿಸಿದವರ ಬಣ್ಣವನ್ನೇ ಬಯಲು ಮಾಡಿಬಿಡುತ್ತದೆ. ಬಾಲಕೃಷ್ಣರ ‘ಮನಸ್ಸಿಗೇ ಮೂಗುದಾರ - ಒಂದು ಜಾಗತಿಕ ಪಿತೂರಿ ಎಂಬ ಲೇಖನ ಅಭಿಪ್ರಾಯ ಸೃಷ್ಟಿಯನ್ನು ಅರ್ಥಾತ್ ಮೈಂಡ್ ಮ್ಯಾನಿಪ್ಯುಲೇಶನ್ ಅನ್ನು ಸಾಮೂಹಿಕವಾಗಿ ಏರ್ಪಡಿಸುವ ಅಂಶಗಳ ಕುರಿತು ವೈಜ್ಞಾನಿಕವಾಗಿ ಪ್ರಸ್ತುತಪಡಿಸಿದೆ. ಇಂಥಾ ಪ್ರಯೋಗಗಳು ಅಭಿವೃದ್ಧಿ, ಪ್ರಗತಿ ಹೆಸರಲ್ಲಿ ಪಶ್ಚಿಮದ ದೇಶಗಳಿಂದ ಹೇಗೆ ಆಚರಣೆ ಕಾಣುತ್ತವೆ ಎಂಬುದನ್ನು ನಿದರ್ಶನಗಳ ಸಮೇತ ಬಿಡಿಸಿಟ್ಟಿದ್ದಾರೆ. ಮೈಂಡ್ ಮ್ಯಾನಿಪ್ಯುಲೇಶನ್ ವಿಚಾರವಾಗಿ ಪ್ರಯೋಗಗಳಿಗೆ ಆ ದೇಶಗಳು ಖರ್ಚು ಮಾಡುತ್ತಿರುವ ಹಣದ ಬಗ್ಗೆ ಎಲ್ಲರಿಗೂ ಅರಿವಿದೆ.
ಅದೇ ಪ್ರಯೋಗಗಳು ಫಲಿತಾಂಶದಲ್ಲಿ ಅರಬ್ ಮೇಲಿನ ಯುದ್ಧವನ್ನು ‘ಪ್ರಜಾಪ್ರಭುತ್ವದ ಉಳಿವು ಎಂದು ಬಿಂಬಿಸಲು, ಗ್ಯಾಟ್ ಒಪ್ಪಂದದ ಕರಾಳತೆಯನ್ನು ‘ಅಭಿವೃದ್ಧಿ ಎಂದು ನಂಬಿಸಲು ನಡೆಸುತ್ತಿರುವ ನಿದರ್ಶನಗಳು ಚರ್ಚೆಯಾಗಿವೆ. ಇಂಥಾ ಅಭಿಪ್ರಾಯ ಸೃಷ್ಟಿಯ ಅಪಾಯ ಯಾವ ಮಟ್ಟದಲ್ಲಿ ಇನ್ನೊಂದು ಸಮುದಾಯದ, ದೇಶದ ಜನರನ್ನು ಧ್ವಂಸ ಮಾಡಬಲ್ಲದು ಎಂಬುದನ್ನು ಕೃಷ್ಣಮೂರ್ತಿಯವರ ‘ಬೇಸಾಯವ ಮಾಡಿ ಪುಸ್ತಕದಲ್ಲಿ ನೋಡಬಹುದು. ನೀತಿ ರೂಪಿಸುವ ನಮ್ಮ ಪಾರ್ಲಿಮೆಂಟ್‌ನ ಮೈಂಡ್‌ಸೆಟ್ ಹೇಗೆ ಅಮೆರಿಕಾದ ‘ಅಭಿವೃದ್ಧಿ ಅಭಿಪ್ರಾಯದ ಸೃಷ್ಟಿಗೆ ಕೊರಳು ಕೊಟ್ಟು, ಗ್ಯಾಟ್‌ಗೆ ಸಹಿಹಾಕಿತು. ಇದರಿಂದ ರೈತಾಪಿ, ಕೂಲಿಕಾರ, ಕಾರ್ಮಿಕ ಸೇರಿದಂತೆ ಭಾರತದ ಸಮಗ್ರ ದುಡಿಯುವ ಜನರ ಪಾಲಿಗೆ ‘ಗ್ಯಾಟ್ ಒಪ್ಪಂದ ಹೇಗೆ ನರಕ ಸೃಷ್ಟಿಸಿದೆ ಎಂಬುದನ್ನು ಬಿಳಿಗೆರೆ ಬಿಡಿಸಿಟ್ಟಿದ್ದಾರೆ.
ಹಳ್ಳಿಯ ಜನರ ಬದುಕನ್ನು ಅರ್ಥಹೀನಗೊಳಿಸಲು ಎಂಥೆಂಥಾ ಪ್ರಯತ್ನಗಳು ನಡೆಯುತ್ತಿವೆ; ಅವುಗಳನ್ನು ಮೀರಬೇಕಾದರೆ ಇರಿಯುವ ಅಸ್ತ್ರದ ವಿರುದ್ಧ ನಾವು ರೂಪಿಸಿಕೊಳ್ಳಬೇಕಾದ ಬೆವರ ಶಾಸ್ತ್ರ ಯಾವುದು ಎಂಬುದನ್ನು ಪುಸ್ತಕ ಹೇಳುತ್ತದೆ. ಪುಸ್ತಕದ ಮೊದಲ ಭಾಗದಲ್ಲಿ ಕೃಷಿಗೆ ಬಿದ್ದಿರುವ, ಬೀಳುತ್ತಿರುವ ಹೊಡೆತಗಳ ಚರ್ಚೆ ನಡೆದಿದೆ. ಎರಡನೆಯ ಭಾಗದಲ್ಲಿ ಹೊಲ, ತೋಟಗಳ ಮಣ್ಣು, ನೀರಿನ ಸಂಗತಿಗಳಿಂದ ಕ್ರಿಮಿಕೀಟಗಳ ತನಕ ಚರ್ಚಿಸಿ ಕೃಷಿಯ ಉಳಿವಿನ, ಲಾಭದಾಯಕತೆಯ ಹಾದಿಗಳ ಹುಡುಕಾಟವಿದು.
ರೈತರ ಆತ್ಮಹತ್ಯೆಗಳ ಸುಳಿ ಹೇಗೆ ಸುಳ್ಳು ಅಭಿಪ್ರಾಯಗಳ ಮೇಲೆ ನಿಂತಿದೆ; ಅದರಿಂದ ಹೊರಬರಬೇಕಾದರೆ ರೈತ ಏನು ಮಾಡಬೇಕು ಎಂಬ ನೆಲೆಯಲ್ಲಿ ನಡೆದಿರುವ ಈ ಪುಸ್ತಕ ರೈತರಿಗೆ ಅತ್ಯಗತ್ಯದ್ದು. ಬಹು ಜನರ ಕ್ರಿಯಾಶೀಲತೆಗೆ ಸಂಬಂಧಿಸಿದ; ಆ ಕ್ರಿಯೆಯ ಮೇಲೆ ಪರಿಣಾಮ ಮಾಡಬಲ್ಲ ಶಕ್ತಿ ಇರುವ ಕಾರಣದಿಂದಲೇ ಇವೆರಡೂ ಕೃತಿಗಳಿಗೆ ಮಹತ್ವ ಇರುವುದು. ಇಂಥಾ ಮಹತ್ವ ಓದುಗರಿಗೆ ತಲುಪಿದಾಗ ಮಾತ್ರ ಅದು ಸಾರ್ಥಕತೆ. ಈ ನಿಟ್ಟಿನಲ್ಲಿ ಎರಡೂ ಓದಲೇಬೇಕಾದ ಪುಸ್ತಕಗಳು. ‘ಬೇಸಾಯವ ಮಾಡಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ್ದರೆ, ‘ಮಳೆಬಿಲ್ಲ ನೆರಳು ಕೃತಿಯನ್ನು ಬರಹ ಪಬ್ಲಿಷಿಂಗ್ ಹೌಸ್ ಪ್ರಕಟಿಸಿದೆ.

ಶನಿವಾರ, ಮೇ 21, 2011

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

5ನೇ ಮೇ 2011ರ `ಸುಧಾ' ವಾರಪತ್ರಿಕೆಯಲ್ಲಿ ಸೀಲಾಕ್ಯಾಂತ್ ಬಗೆಗಿನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ


ಡಿಸೆಂಬರ್ ೨೨, ೧೯೩೮ರಂದು ದಕ್ಷಿಣ ಆಫ್ರಿಕಾದ ಸಣ್ಣ ಮ್ಯೂಸಿಯಂನ ಕ್ಯೂರೇಟರ್ ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್‌ಳಿಗೆ ಕ್ಯಾಪ್ಟನ್ ಹೆಂಡ್ರಿಕ್ ಗೂಸೆನ್‌ನಿಂದ ಕರೆಯೊಂದು ಬಂದಿತು. ಆತ ಮೀನು ಹಿಡಿದಾಗ ತನ್ನ ಬಲೆಯಲ್ಲಿ ಸಿಕ್ಕ ಮೀನುಗಳಲ್ಲಿ ಅಪರೂಪದ ಮೀನುಗಳಿದ್ದಲ್ಲಿ ಆಕೆಗೆ ಹೇಳಿಕಳುಹಿಸುತ್ತಿದ್ದ ಹಾಗೂ ತನ್ನ ಮ್ಯೂಸಿಯಂನ ಸಂಗ್ರಹಕ್ಕೆಂದು ಅಂಥವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು. ತಾನು ಯಾವ ಜೀವಿಯ ಬಗ್ಗೆ ಕೇಳುತ್ತೇನೆಯೋ ಅದಕ್ಕೆ ತನ್ನದೇ ಹೆಸರಿಡುತ್ತಾರೆಂದು ಆಕೆ ಊಹಿಸಿಯೂ ಇರಲಿಲ್ಲ. ಮೀನುಗಾರರಿಗೆ ಒಂದು ವಿಚಿತ್ರ ಮೀನು ಸಿಕ್ಕಿದೆಯೆಂದೂ ಆಕೆ ಕೂಡಲೇ ಬರಬೇಕೆಂದು ಕರೆ ತಿಳಿಸಿತು. ತಕ್ಷಣ ಹೊರಟ ಆಕೆಗೆ ಅಲ್ಲಿ ಒಂದೂವರೆ ಮೀಟರ್ ಉದ್ದವಿರುವ ನೀಲಿ ಬಣ್ಣದ ಹಾಗೂ ಬೆಳ್ಳಿಯ ಗುರುತುಗಳನ್ನು ಹೊಂದಿದ್ದ, ಆಕೆ ಎಂದೂ ಕಂಡಿರದ ಮೀನೊಂದು ಕಾದಿತ್ತು. ಆಕೆಗೆ ಅದನ್ನು ಗುರುತಿಸಲಾಗಲಿಲ್ಲ. ಆದರೆ ಆಕೆಯೇ ಹೇಳಿದಂತೆ ಅದು ಆಕೆ ಕಂಡ ಅತ್ಯಂತ ಸುಂದರ ಮೀನಾಗಿತ್ತು. ಅದು ಆಕೆ ಎಂದೂ ಕಂಡಿರದ ಮೀನಾಗಿದ್ದುದರಿಂದ ಅದನ್ನು ಆಕೆ ಕೂಡಲೆ ತನ್ನ ಮ್ಯೂಸಿಯಂಗೆ ಕೊಂಡೊಯ್ಯಲು ನಿರ್ಧರಿಸಿದಳು. ಐದೂವರೆ ಅಡಿ ಉದ್ದದ ಹಾಗೂ ವಾಸನೆ ಹೊಡೆಯುತ್ತಿದ್ದ ಮೀನನ್ನು ಕೊಂಡೊಯ್ಯಲು ಟ್ಯಾಕ್ಸಿಯವ ಒಪ್ಪಲಿಲ್ಲ. ಆತನನ್ನು ಪುಸಲಾಯಿಸಿ ಕೊನೆಗೂ ಅಕೆ ಅದನ್ನು ಮ್ಯೂಸಿಯಂಗೆ ಕೊಂಡೊಯ್ದಳು.

ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್ ಮತ್ತು ಆಕೆ ಪ್ರೊಫೆಸರ್ ಸ್ಮಿತ್‌ರವರಿಗೆ ಬರೆದು ಕಳುಹಿಸಿದ ಚಿತ್ರ.

ಅಲ್ಲಿ ತನ್ನಲ್ಲಿದ್ದ ಕೆಲವೇ ಆಕರ ಗ್ರಂಥಗಳನ್ನು ಪರಾಮರ್ಶಿಸಿದಾಗ ತಾನೇ ಸ್ವತಃ ನಂಬಲಾಗದ ತೀರ್ಮಾನಕ್ಕೆ ಆಕೆ ಬರಬೇಕಾಯಿತು. ಆಕೆ ತಂದಿದ್ದ ಮೀನು ಒಂದು ಪ್ರಾಗೈತಿಹಾಸಿಕ ಮೀನನ್ನು ಹೋಲುತ್ತಿತ್ತು. ಆಕೆ ಮೀನಿನ ಒಂದು ಕರಡು ಚಿತ್ರ ರಚಿಸಿ ಅದನ್ನು ದಕ್ಷಿಣ ಆಫ್ರಿಕಾದ ರೋಡ್ಸ್ ವಿಶ್ವವಿದ್ಯಾನಿಲಯದ ರಾಸಾಯನಶಾಸ್ತ್ರ ಪ್ರೊಫೆಸರ್ ಜೆ.ಎಲ್.ಬಿ.ಸ್ಮಿತ್‌ರವರಿಗೆ ಕಳುಹಿಸಿದಳು. ಪ್ರೊಫೆಸರ್ ಜೆ.ಎಲ್.ಬಿ.ಸ್ಮಿತ್ ರಾಸಾಯನಶಾಸ್ತ್ರಜ್ಞರಾದರೂ ಮೀನುಗಳ ಬಗೆಗೆ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಆತ ಕ್ರಿಸ್‌ಮಸ್ ರಜೆಯಿದ್ದುದರಿಂದ ಈಸ್ಟ್ ಲಂಡನ್‌ಗೆ ಹೋಗಿದ್ದರು.

ಜನವರಿ ೩, ೧೯೩೯ರಂದು ರಜೆಯಿಂದ ಹಿಂದಿರುಗಿದ ಸ್ಮಿತ್ ಆ ಮೀನಿನ ಚಿತ್ರವನ್ನು ನೋಡಿದರು. ಆ ಮೀನನ್ನು ಎಂದೂ ಸ್ವತಃ ನೋಡಿರದ, ಅದರ ಪಳೆಯುಳಿಕೆಗಳನ್ನು ಮಾತ್ರ ನೋಡಿದ್ದ ಪ್ರೊಫೆಸರ್ ಸ್ಮಿತ್ ಕೂಡಲೇ ಅದನ್ನು ಸೀಲಾಕ್ಯಾಂತ್ ಎಂದು ಗುರುತಿಸಿದರು. ತಕ್ಷಣವೇ ಆ ಮೀನಿನ ಅಸ್ಥಿಪಂಜರ ಹಾಗೂ ಕಿವಿರುಗಳನ್ನು ಸುರಕ್ಷಿತವಾಗಿಡುವಂತೆ ತಾರು ಕಳುಹಿಸಿದರು. ಆದರೆ ಆ ಮೀನನ್ನು ಪ್ರದರ್ಶನಕ್ಕೆ ಸಂಗ್ರಹಿಸಿಡುವ ಭರದಲ್ಲಿ ಅದರ ಒಳಾಂಗಗಳನ್ನು ತೆಗೆದೆಸೆಯಲಾಗಿತ್ತು. ತಾರು ತಲುಪಿದ ನಂತರ ಮ್ಯೂಸಿಯಂ ಮತ್ತು ನಗರದ ಕಸದ ತೊಟ್ಟಿಗಳನ್ನು ಹುಡುಕಿದರೂ ಅವು ಸಿಕ್ಕಲಿಲ್ಲ. ತೆಗೆದ ಕೆಲವು ಫೋಟೋಗಳು ಸಹ ಹಾಳಾಗಿದ್ದವು.

ನಂತರ ಪ್ರೊಫೆಸರ್ ಸ್ಮಿತ್ ಹೇಳಿದಂತೆ ಸೀಲಾಕ್ಯಾಂತ್‌ನ ಆವಿಷ್ಕಾರ ಇಡೀ ವಿಜ್ಞಾನ ಸಮುದಾಯವನ್ನೇ ಬೆಚ್ಚಿಬೀಳಿಸುವಂಥ ಸುದ್ದಿಯಾಗಿತ್ತು, ಸತ್ತ ವ್ಯಕ್ತಿ ಪ್ರೇತಾತ್ಮವಾಗಿ ಎದ್ದು ಬಂದ ಹಾಗಿತ್ತು; ಶತಮಾನದ ಅತ್ಯಂತ ಪ್ರಮುಖ ಪ್ರಾಣಿವಿಜ್ಞಾನಶಾಸ್ತ್ರದ ಆವಿಷ್ಕಾರವಾಗಿತ್ತು. ಏಕೆಂದರೆ ಆ ಮೀನು ನಶಿಸಿ ಹೋಗಿ ಐದು ಕೋಟಿ ವರ್ಷಗಳಾಗಿವೆಯೆಂದು ನಂಬಲಾಗಿತ್ತು. ಪಶ್ಚಿಮ ಜರ್ಮನಿಯಲ್ಲಿ ಸಿಕ್ಕ ಸೀಲಾಕ್ಯಾಂತ್‌ನ ಪಳೆಯುಳಿಕೆಯೊಂದು ೧೪ ಕೋಟಿ ವರ್ಷಗಳಷ್ಟು ಹಿಂದಿನದಾಗಿತ್ತು. ಸಿಕ್ಕಿರುವ ಪಳೆಯುಳಿಕೆಗಳಲ್ಲಿ ಇತ್ತೀಚಿನದೆಂದರೂ ಆರು ಕೋಟಿ ವರ್ಷಗಳಷ್ಟು ಹಿಂದಿನದು! ಅಷ್ಟೊಂದು ಪ್ರಾಚೀನ ಕಾಲದ ಜೀವಿಯೊಂದು ಇನ್ನೂ ಜೀವಂತವಾಗಿದೆಯೆನ್ನುವ ವಿಷಯ ವಿಜ್ಞಾನಿಗಳಿಗೆ ಊಹಿಸಲೂ ಸಾಧ್ಯವಾಗದಾಗಿತ್ತು. ಆ ಮೀನನ್ನು ಮೊದಲಿಗೆ ಕಂಡುಹಿಡಿದ ಲ್ಯಾಟಿಮರ್‌ಳ ಹಾಗೂ ಅದು ದೊರಕಿದ ಚಾಲುಮ್ನಾ ನದಿಯ ನೆನಪಿಗೆ ಆ ಮೀನನ್ನು ಲ್ಯಾಟಿಮೆರಿಯಾ ಚಾಲುಮ್ನೇ ಎಂದು ಕರೆದರು.

ಸ್ಥಳೀಯ ವೃತ್ತಪತ್ರಿಕೆಯೊಂದು ಅದರ ಒಂದೇ ಫೋಟೊ ತೆಗೆದು ಪ್ರಕಟಿಸಿದ ನಂತರ ಅದು ಜಗತ್ತಿನಾದ್ಯಂತ ಪ್ರಕಟವಾಯಿತು ಹಾಗೂ ಸಣ್ಣ ಮ್ಯೂಸಿಯಂನ ಕ್ಯೂರೇಟರ್ ಲ್ಯಾಟಿಮರ್ ಹಾಗೂ ಪ್ರೊಫೆಸರ್ ಜೆ.ಎಲ್.ಬಿ. ಸ್ಮಿತ್‌ರನ್ನು ವಿಶ್ವವಿಖ್ಯಾತರನ್ನಾಗಿ ಮಾಡಿತು. ಅಲ್ಲಿಯೇ ಅದರ ಪ್ರದರ್ಶನ ಏರ್ಪಡಿಸಿದಾಗ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.

ಲ್ಯಾಟಿಮರ್‌ಳಿಂದ ಸುದ್ದಿ ತಿಳಿದು ಸ್ಮಿತ್ ಅಲ್ಲಿಗೆ ಹೋಗುವಷ್ಟರಲ್ಲಿ ಸೀಲಾಕ್ಯಾಂತ್‌ನ ಮೆದು ಭಾಗಗಳೆಲ್ಲಾ ಕೊಳೆತು ಬಹಳಷ್ಟು ಹಾಳಾಗಿದ್ದುದರಿಂದ ಸ್ಮಿತ್ ಕೂಡಲೆ ಮತ್ತೊಂದು ಸೀಲಾಕ್ಯಾಂತ್ ಹುಡುಕುವ ತಯಾರಿ ನಡೆಸಿದರು. ಸೀಲಾಕ್ಯಾಂತ್ ಹಿಡಿದುಕೊಟ್ಟವರಿಗೆ ನೂರು ಪೌಂಡ್ ಹಣವನ್ನು ಬಹುಮಾನವನ್ನಾಗಿ ಕೊಡುವುದಾಗಿ ಇಂಗ್ಲಿಷ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಯಲ್ಲಿ ಸಾವಿರಾರು ಕರಪತ್ರಗಳನ್ನು ಪ್ರಕಟಿಸಿ ಅವುಗಳನ್ನು ಪಶ್ಚಿಮ ಆಫ್ರಿಕದ ಕರಾವಳಿಯ ಊರುಗಳಲ್ಲಿ ಹಾಗೂ ಸುತ್ತಮುತ್ತಲ ದ್ವೀಪಗಳಲ್ಲಿ ಹಂಚಿದರು.

ಸೀಲಾಕ್ಯಾಂತ್ ಹುಡುಕಿ ಕೊಟ್ಟವರಿಗೆ ನೂರು ಪೌಂಡ್ ಬಹುಮಾನ ನೀಡುವುದಾಗಿ ಪ್ರೊಫೆಸರ್ ಸ್ಮಿತ್ ಹೊರಡಿಸಿದ ಕರಪತ್ರ

ನಂತರ ೧೪ ವರ್ಷಗಳವರೆಗೂ ಅದರ ಸುದ್ದಿಯೇ ಇರಲಿಲ್ಲ. ಈ ಸಮಯದಲ್ಲಿಯೇ ಅದು ಸಮುದ್ರ ತಳದಲ್ಲಿ ವಾಸಿಸುವ ಮೀನು ಹಾಗೂ ಅದರಿಂದಲೇ ಯಾರಿಗೂ ಅದು ಕಂಡುಬರುತ್ತಿಲ್ಲ ಎಂದು ಪ್ರಚಾರವಾಗತೊಡಗಿತು. ಯೂರೋಪಿನ ಹಲವಾರು ದೇಶಗಳು ಸಮುದ್ರ ತಳದಲ್ಲಿ ಸೀಲಾಕ್ಯಾಂತನ್ನು ಹುಡುಕತೊಡಗಿದರು.

ಜಾಂಜಿಬಾರ್, ಮಡಗಾಸ್ಕರ್ ಮತ್ತು ಕೊಮೊರೊ ದ್ವೀಪಗಳ ನಡುವೆ ಹಡಗೊಂದನ್ನು ನಡೆಸುತ್ತಿದ್ದ ಎರಿಕ್ ಹಂಟ್ ಎಂಬ ಬ್ರಿಟಿಷ್ ಕ್ಯಾಪ್ಟನ್ ಒಮ್ಮೆ ಜಾಂಜಿಬಾರ್‌ನಲ್ಲಿ ಸ್ಮಿತ್‌ರವರ ಸೀಲಾಕ್ಯಾಂತ್ ಬಗೆಗಿನ ಉಪನ್ಯಾಸವನ್ನು ಕೇಳಿ ಆತನೂ ಸಹ ಸೀಲಾಕ್ಯಾಂತ್ ಬಗೆಗಿನ ಆಸಕ್ತಿಯಿಂದ ತನ್ನ ಯಾನದ ಸಮಯದಲ್ಲಿ ಅದಕ್ಕಾಗಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕತೊಡಗಿದ. ತಾನೇ ಸ್ವತಃ ಸ್ಮಿತ್‌ರವರ ಕರಪತ್ರಗಳನ್ನು ತಾನು ಹೋದಲ್ಲೆಲ್ಲಾ ಹಂಚತೊಡಗಿದ.

ಅದರ ಪ್ರತಿಫಲವೆಂಬಂತೆ ೧೯೫೨ರ ಡಿಸೆಂಬರ್ ೨೧ರಂದು, ಮೊದಲ ಜೀವಂತ ಸೀಲಾಕ್ಯಾಂತ್ ಕಂಡ ಹದಿನಾಲ್ಕು ವರ್ಷಗಳ ನಂತರ ಕ್ಯಾಪ್ಟನ್ ಹಂಟ್ ಕೊಮೊರೊ ದ್ವೀಪವಾದ ಅಂಜುವಾನ್‌ನ ಬಂದರಿಗೆ ಹಿಂದಿರುಗಿದಾಗ ಇಬ್ಬರು ವ್ಯಕ್ತಿಗಳು ದೊಡ್ಡ ಕಟ್ಟೊಂದನ್ನು ಹೊತ್ತು ತಂದರು. ಅವರಲ್ಲಿ ಒಬ್ಬಾತ ಅಹ್ಮದಿ ಅಬ್ದಲ್ಲಾ ಎಂಬ ಬೆಸ್ತ ಹಾಗೂ ಮತ್ತೊಬ್ಬಾತ ಅಫಾನೆ ಮೊಹಮ್ಮದ್ ಎಂಬ ಶಾಲಾ ಅಧ್ಯಾಪಕ. ಆ ಪ್ರದೇಶಗಳಲ್ಲಿ ಆಗಾಗ ಅಲ್ಲಿನ ಬೆಸ್ತರ ಬಲೆಗಳಲ್ಲಿ ಸ್ಥಳೀಯರು 'ಮಾಮೆ' ಅಥವಾ 'ಗೊಂಬೆಸ್ಸಾ' ಎಂದು ಕರೆಯುವ ಮೀನು ಸಿಕ್ಕಿಬೀಳುತ್ತಿತ್ತು. ಈ ಸಾರಿ ಆ ಮೀನನ್ನು ಕಂಡ ಶಾಲಾ ಅಧ್ಯಾಪಕನಿಗೆ ಅದು ಕ್ಯಾಪ್ಟನ್ ಹಂಟ್ ಅಂಟಿಸಿದ್ದ ಕರಪತ್ರದಲ್ಲಿನ ಸೀಲಾಕ್ಯಾಂತ್ ಎಂಬುದು ತಿಳಿದು ಅದನ್ನು ಇಬ್ಬರೂ ಕ್ಯಾಪ್ಟನ್ ಬಳಿಗೆ ಹೊತ್ತು ತಂದಿದ್ದರು.


ಕ್ಯಾಪ್ಟನ್ ಹಂಟ್ ಅದನ್ನು ಸಂರಕ್ಷಿಸಿಡಲು ಅಲ್ಲಿ ಬೇರೇ ವ್ಯವಸ್ಥೆ ಇಲ್ಲದಿದ್ದುದರಿಂದ ಉಪ್ಪಿನಲ್ಲಿ ಇಟ್ಟು ಮಯೋಟ್ಟೆ ಎಂಬ ಕೊಮೊರನ್ ದ್ವೀಪಕ್ಕೆ ಕೊಂಡೊಯ್ದು ಅಲ್ಲಿ ಆಸ್ಪತ್ರೆಯೊಂದರಿಂದ ಫಾರ್ಮಲಿನ್ ಪಡೆದು ಅದರಲ್ಲಿ ಸಂರಕ್ಷಿಸಿಟ್ಟ ಹಾಗೂ ಸ್ಮಿತ್‌ರವರಿಗೆ ತಾರು ಕಳುಹಿಸಿ ಕೂಡಲೇ ಬರಬೇಕೆಂದು ತಿಳಿಸಿದ. ಪ್ರೊಫೆಸರ್ ಸ್ಮಿತ್ ಕೊಮೊರೊ ದ್ವೀಪಗಳಿಂದ ಸುಮಾರು ೨೫೦೦ ಕಿ.ಮೀ.ಗಳ ದೂರದಲ್ಲಿದ್ದರು. ಅವರು ಕೂಡಲೇ ಹೊರಡಬೇಕಿತ್ತು. ಈಗ ಬಿಟ್ಟರೆ ಮತ್ತೊಮ್ಮೆ ಅವಕಾಶ ಸಿಗುತ್ತದೆಯೋ ಇಲ್ಲವೋ! ಅಲ್ಲಿಗೆ ವಿಮಾನ ಯಾನದ ವ್ಯವಸ್ಥೆಯೂ ಇರಲಿಲ್ಲ. ಕೂತಲ್ಲೇ ಚಡಪಡಿಸಿ ಕೈ ಕೈ ಹಿಸುಕಿಕೊಂಡರು. ಕೊನೆಗೆ ದಕ್ಷಿಣ ಆಫ್ರಿಕಾದ ಪ್ರಧಾನಮಂತ್ರಿ ಡೇನಿಯಲ್ ಮಲಾನ್‌ರ ಮೊರೆ ಹೊಕ್ಕು ಅವರಿಗೆ ಎಲ್ಲಾ ವಿವರಿಸಿ ಹೇಳಿದರು; ಕೆಲದಿನಗಳ ಕಾಲ ವಾಯುಪಡೆಯ ವಿಮಾನವನ್ನು ಕೊಡಲು ಕೇಳಿಕೊಂಡರು. ಅವರು ಸಮ್ಮತಿಸಿ ಡಿಸಿ೩ ಡಕೋಟ ವಿಮಾನದ ವ್ಯವಸ್ಥೆ ಮಾಡಿಕೊಟ್ಟರು. ಸ್ಮಿತ್ ೩೨ ಗಂಟೆಗಳೊಳಗೆ ಕೊಮೊರೊ ದ್ವೀಪ ಸಮೂಹ ತಲುಪಿದರು. ಸ್ಮಿತ್ ವಿಮಾನದಲ್ಲಿ ಹಾರಿದ್ದು, ಸೀಲಾಕ್ಯಾಂತ್ ತಂದಿದ್ದು ಪ್ರಪಂಚದ ಪತ್ರಿಕೆಗಳ ಮುಖಪುಟಗಳನ್ನಲಂಕರಿಸಿತ್ತು. ಮೀನನ್ನು ತರುವಾಗ ಸ್ಮಿತ್ ಅದನ್ನು ಒಂದರೆಕ್ಷಣವೂ ಬಿಟ್ಟಿರುತ್ತಿರಲಿಲ್ಲ. ರಾತ್ರಿ ಮಲಗುವಾಗಲೂ ಮೀನಿದ್ದ ಪೆಟ್ಟಿಗೆ ಅವರ ಪಕ್ಕದಲ್ಲೇ ಇರಬೇಕಾಗಿತ್ತು.


ಕ್ಯಾಪ್ಟನ್ ಎರಿಕ್ ಹಂಟ್ ಆ ಮೀನನ್ನು ಹಿಡಿದ ಬೆಸ್ತ ಅಹ್ಮದಿ ಅಬ್ದಲ್ಲಾ ಹಾಗೂ ಶಾಲಾ ಅಧ್ಯಾಪಕ ಅಫಾನೆ ಮೊಹಮ್ಮದ್‌ರಿಗೆ ನೂರು ಪೌಂಡ್ ಬಹುಮಾನದ ಹಣ ಕೊಡಿಸಿದ. ಅದಾದ ನಂತರ ಕ್ಯಾಪ್ಟನ್ ಎರಿಕ್ ಹಂಟ್‌ನ ಹಡಗು ಅಪಘಾತಕ್ಕೀಡಾಗಿ ಸಮುದ್ರದಲ್ಲಿ ಆತ ನಾಪತ್ತೆಯಾದ. ಆತನ ದೇಹ ಸಿಗಲೇ ಇಲ್ಲ. ಪ್ರೊಫೆಸರ್ ಸ್ಮಿತ್ ೧೯೬೮ರಲ್ಲಿ ದೀರ್ಘಕಾಲದ ಕಾಯಿಲೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್ ತಮ್ಮ ೯೭ನೇ ವಯಸ್ಸಿನಲ್ಲಿ ೧೭ರ ಮೇ ೨೦೦೪ರಂದು ತೀರಿಕೊಂಡರು. ಆಕೆ ತಮ್ಮ ಜೀವನ ಪರ್ಯಂತ ಅವಿವಾಹಿತಳಾಗಿಯೇ ಉಳಿದಿದ್ದರು.

ಸೀಲಾಕ್ಯಾಂತ್

ಸೀಲಾಕ್ಯಾಂತ್ ಒಂದು ಮೀನಿನ ಪ್ರತ್ಯೇಕ ವರ್ಗ ಹಾಗೂ ಈ ಭೂಮಿಯ ಮೇಲೆ ೪೧೦ ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡ ಅದು ನೂರಾರು ಪ್ರಭೇದಗಳನ್ನು ಒಳಗೊಂಡಿತ್ತು. ಆದರೆ ೬೫ ದಶಲಕ್ಷ ವರ್ಷಗಳ ಹಿಂದೆ ಡೈನೋಸಾರ್‌ಗಳು ನಿರ್ನಾಮವಾದ ಅವಧಿಯ ಸಮಯದಿಂದಲೇ ಅವುಗಳ ಪಳೆಯುಳಿಕೆಗಳ ದಾಖಲೆಗಳು ಕಣ್ಮರೆಯಾಗಿವೆ. ಹಾಗಾಗಿ ಸೀಲಾಕ್ಯಾಂತ್‌ಗಳ ಸಂತತಿ ಸಂಪೂರ್ಣವಾಗಿ ನಾಮಾವಶೇಷವಾಗಿದೆ ಎಂದು ನಂಬಲಾಗಿತ್ತು.



ವರ್ಗ ಸೀಲಾಕ್ಯಾಂತಸ್ ಎಂದರೆ 'ಟೊಳ್ಳು ಬೆನ್ನುಹುರಿ' ಎಂದರ್ಥ. ಇತರ ಯಾವುದೇ ಮೀನುಗಳಿಗೆ ಇಲ್ಲದಿರುವ ಈ ಲಕ್ಷಣ ಈಗ ನಿರ್ನಾಮವಾಗಿರುವ ಹಾಗೂ ಈಗ ಜೀವಂತವಿರುವ ಸೀಲಾಕ್ಯಾಂತ್‌ಗಳಲ್ಲಿಯೂ ಕಂಡುಬರುತ್ತದೆ. ತನ್ನ ಪೂರ್ವಜ ಸಂತತಿಯ ಎಲ್ಲಾ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಂಡು ತನ್ನ ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿರುವ ಜೀವಿಯ ಅತ್ಯುತ್ತಮ ಉದಾಹರಣೆ ಸೀಲಾಕ್ಯಾಂತ್ ಆಗಿದೆ. ಜೀವವಿಕಾಸದ ಹಾದಿಯಲ್ಲಿ ಎಲ್ಲ ಜೀವಿಗಳಲ್ಲೂ ಪ್ರೊಟೀನುಗಳಲ್ಲಿ ಬದಲಾವಣೆಯಾಗಿ ವಿಕಾಸ ಪ್ರಕ್ರಿಯೆ ಮುನ್ನಡೆಯುತ್ತದೆ. ಆದರೆ ಸೀಲಾಕ್ಯಾಂತ್‌ನಲ್ಲಿ ಆ ಪ್ರಕ್ರಿಯೆಯೇ ಸ್ಥಾಯಿಯಾಗಿ ನಿಂತುಬಿಟ್ಟಿದೆ ಎನ್ನಿಸುತ್ತದೆ. ಈ ರೀತಿ ದೈಹಿಕ ಚಹರೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಅಥವಾ ಅತ್ಯಂತ ನಿಧಾನವಾಗಿ ಬದಲಾವಣೆಯಾಗುತ್ತಾ ಲಕ್ಷಾಂತರ ವರ್ಷಗಳಿಂದ ಸೀಲಾಕ್ಯಾಂತ್ ತನ್ನ ಪರಿಸರಕ್ಕೆ ಹೊಂದಿಕೊಂಡು ಬಂದಿರುವುದಕ್ಕೆ ಹಲವಾರು ವಿವರಣೆಗಳನ್ನು ವಿಜ್ಞಾನಿಗಳು ನೀಡುತ್ತಾರೆ. ಅಂತಹ ಒಂದು ವಿವರಣೆ ಡಾರ್ವಿನ್‌ನ ವಿಕಾಸವಾದಕ್ಕೆ ಪೂರಕವಾಗಿಯೇ ಇದೆ. ಅದರ ಪ್ರಕಾರ ಕೆಲವೊಂದು ಪರಿಸರಗಳಲ್ಲಿ ಹಾಗೂ ಯಾವುದೇ ಸ್ಪರ್ಧೆಯಿಲ್ಲದಿದ್ದಲ್ಲಿ ವಿಕಾಸದ ಹಾದಿಯಲ್ಲಿ ಯಾವುದೇ ದೈಹಿಕ ಚಹರೆಯ ಬದಲಾವಣೆಯಾಗುವುದಿಲ್ಲ. ಸೀಲಾಕ್ಯಾಂತ್ ಸಮುದ್ರದಲ್ಲಿ ೧೦೦ರಿಂದ ೩೦೦ ಮೀಟರ್ ಆಳದಲ್ಲಿ ಕಲ್ಲ ಗುಹೆಗಳ ಆಸರೆಯಲ್ಲಿ ಬದುಕುವುದರಿಂದ ಅಲ್ಲಿ ಆಹಾರ ಮತ್ತು ಸ್ಥಳಕ್ಕಾಗಿ ಸ್ಪರ್ಧೆ ತೀರಾ ಕಡಿಮೆ ಇರುತ್ತದೆ. ಸೀಲಾಕ್ಯಾಂತ್‌ನ ವಿಷಯದಲ್ಲಿ 'ಪ್ರಾಕೃತಿಕ ಆಯ್ಕೆ' (ನ್ಯಾಚುರಲ್ ಸೆಲೆಕ್ಷನ್) ಕಾರ್ಯನಿರ್ವಹಿಸಲಿಲ್ಲ ಅಥವಾ ಅದರ ಅವಶ್ಯಕತೆಯೇ ಇರಲಿಲ್ಲ ಏಕೆಂದರೆ, ಆ ಜೀವಿಗಳು ಸಮುದ್ರ ತಳದಲ್ಲಿನ ತಾವಿದ್ದ ಪರಿಸರಕ್ಕೆ ಅತ್ಯಂತ ಯಶಸ್ವಿಯಾಗಿ ಹೊಂದಿಕೊಂಡುಬಿಟ್ಟಿದ್ದವು ಹಾಗೂ ಆ ಪರಿಸರದಲ್ಲಿ ಸಹ ಹೆಚ್ಚಿನ ಬದಲಾವಣೆಗಳಾಗುತ್ತಿರಲಿಲ್ಲ. ನೀರಿನಿಂದ ಭೂಮಿಗೆ ನಡೆದ ಅವುಗಳ 'ಸೋದರ ಸಂಬಂಧಿ'ಗಳು ಪರಿಸರಕ್ಕೆ ತಕ್ಕಂತೆ ಅತ್ಯಂತ ವೈವಿಧ್ಯಮಯವಾಗಿ ವಿಕಾಸಹೊಂದಿದವು. ೨೯೦ರಿಂದ ೨೦೮ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಅತ್ಯಂತ ಹುಲುಸಾಗಿದ್ದ ಸೀಲಾಕ್ಯಾಂತ್‌ನ ಲ್ಯಾಟಿಮೆರಿಯಾ ಪ್ರಭೇದ ಡಾರ್ವಿನ್ ವಿವರಣೆಯ ಜೀವಂತ ಪಳೆಯುಳಿಕೆಯಾಗಿದೆ.

ವಿಜ್ಞಾನಿಗಳ ಪ್ರಕಾರ ಈಗಿನ ಸೀಲಾಕ್ಯಾಂತ್ ಸುಮಾರು ಮೂರು ಕೋಟಿ ತಲೆಮಾರುಗಳನ್ನು ದಾಟಿ ಬಂದಿದೆ. ಈಗಿನ ಸೀಲಾಕ್ಯಾಂತ್‌ಗೂ ೧೪ ಕೋಟಿ ವರ್ಷಗಳಷ್ಟು ಹಿಂದಿನ ಸೀಲಾಕ್ಯಾಂತ್‌ನ ಪಳೆಯುಳಿಕೆಗೂ ಮಹತ್ತರ ವ್ಯತ್ಯಾಸವಿಲ್ಲ. ಅದಕ್ಕೇ ಅದನ್ನು ಜೀವಂತ ಪಳೆಯುಳಿಕೆ ಎನ್ನುತ್ತಾರೆ. ಅದರಿಂದಾಗಿಯೇ ಸೀಲಾಕ್ಯಾಂತ್‌ನ ಪಳೆಯುಳಿಕೆಯನ್ನು ಮಾತ್ರ ನೋಡಿದ್ದ ಸ್ಮಿತ್, ಲ್ಯಾಟಿಮರ್ ಕಳುಹಿಸಿದ ಚಿತ್ರ ನೋಡಿಯೇ ಆ ಮೀನನ್ನು ಸೀಲಾಕ್ಯಾಂತ್ ಎಂದು ಗುರುತಿಸಿದ್ದರು.

ಈ ವಸುಂಧರೆಯ ಮೇಲೆ ಸೀಲಾಕ್ಯಾಂತ್‌ಗಳು ಸುಮಾರು ೪೦ ಕೋಟಿ ವರ್ಷಗಳಷ್ಟು ಹಿಂದೆ ಕಾಣಿಸಿಕೊಂಡವು. ಬಹಳ ನಂತರ ಕಾಣಿಸಿಕೊಂಡ ದೈತ್ಯಕಾಯದ ಡೈನೊಸಾರ್‌ಗಳು ಬಹುಬೇಗ ನಶಿಸಿಹೋದವು. ಸೀಲಾಕ್ಯಾಂತ್‌ಗಳು ಹಾಗೂ ಅವುಗಳ ಹತ್ತಿರದ 'ನೆಂಟ'ರಾಗಿರುವ ಲಂಗ್ ಮೀನುಗಳ ಜೀವವಿಜ್ಞಾನದ ಅಧ್ಯಯನ ಜೀವವಿಕಾಸದ ರಹಸ್ಯವಾಗಿರುವ, ಮೊಟ್ಟಮೊದಲ ಜೀವಿ ನೀರಿನಿಂದ ಹೊರಬಂದು ಭೂಮಿಯ ತೆವಳಿದ, ನಡೆದಾಡಿದ ಕಾಲದ ಬಗ್ಗೆ ಬೆಳಕು ಚೆಲ್ಲಬಹುದು. ಸೀಲಾಕ್ಯಾಂತ್ ಇತರ ಮೀನುಗಳ ಹಾಗೆ ಮೊಟ್ಟೆ ಇಡುವುದಿಲ್ಲ, ಸಸ್ತನಿಗಳ ಹಾಗೆ ಮರಿಯನ್ನೇ ಹೆರುತ್ತದೆ.

ಹಾಗಾದರೆ ಸುಮಾರು ೭೦ರಿಂದ ೬೫ ದಶಲಕ್ಷ ವರ್ಷಗಳಿಂದೀಚೆಗೆ ಅವುಗಳ ಪಳೆಯುಳಿಕೆಗಳೇಕೆ ಕಂಡುಬಂದಿಲ್ಲ? ಅದಕ್ಕೆ ಕಾರಣಗಳು ಹಲವಾರಿವೆ. ಪಳೆಯುಳಿಕೆಗಳನ್ನು ಸಾಮಾನ್ಯವಾಗಿ ಭೂಮಿಯ ಮೇಲೆಯೇ ಹುಡುಕಲಾಗುತ್ತದೆ. ಸೀಲಾಕ್ಯಾಂತ್ ಸಾಗರದ ತಳದಲ್ಲಿ ವಾಸಿಸುವ ಜೀವಿ. ಸಾಗರ ತಳಗಳು ಸ್ಥಿರವಲ್ಲ. ಅವುಗಳ ಮೇಲೆ ಹೂಳು ಮತ್ತಿತರ ವಸ್ತುಗಳು ಸಂಗ್ರಹವಾಗುತ್ತಿರುತ್ತದೆ ಅಲ್ಲದೆ ಕೆಲವು ವಲಯಗಳಲ್ಲಿ ಭೂಮಿಯೊಳಕ್ಕೆ ಸೆಳೆದುಕೊಳ್ಳಲ್ಪಡುತ್ತಿರುತ್ತದೆ. ಹಾಗಾಗಿ ಸಾಗರಗಳ ತಳದಲ್ಲಿ ಪಳೆಯುಳಿಕೆಗಳು ಸಿಗುವುದು ಅಪರೂಪ.

೧೯೩೮ರ ನಂತರ ಆಫ್ರಿಕಾದ ಕರಾವಳಿಯಲ್ಲಿ ಸಿಕ್ಕ ಸೀಲಾಕ್ಯಾಂತ್‌ಗಳ ನಂತರ ೧೯೯೮ರಲ್ಲಿ ಇಂಡೋನೇಶ್ಯಾದ ಕರಾವಳಿಯಲ್ಲಿ ಮತ್ತೊಂದು ಸೀಲಾಕ್ಯಾಂತ್ ಸಿಕ್ಕಿತು. ಅದನ್ನು ಸೀಲಾಕ್ಯಾಂತ್‌ನ ಮತ್ತೊಂದು ಪ್ರಭೇದವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಇಂದು ವಿಜ್ಞಾನಿಗಳಿಗೆ ತಿಳಿದಿರುವ ಸೀಲಾಕ್ಯಾಂತ್‌ನ ಪ್ರಭೇದಗಳು ಎರಡು ಮಾತ್ರ ಇವೆ. ಆಫ್ರಿಕಾದ ಸೀಲಾಕ್ಯಾಂತ್ ಲ್ಯಾಟಿಮೆರಿಯಾ ಚಾಲುಮ್ನೆ ಮತ್ತು ಇಂಡೋನೇಶ್ಯಾದ ಲ್ಯಾಟಿಮೆರಿಯಾ ಮೆನಡೋನ್ಸಿಸ್. ಈ ಎರಡೂ ಸೀಲಾಕ್ಯಾಂತ್ ಪ್ರಭೇದಗಳ ಆನುವಂಶಿಕ ಅಧ್ಯಯನಗಳನ್ನು ನಡೆಸಲಾಗಿದೆ. ಮೈಟೋಕಾಂಡ್ರಿಯಾ ಪೂರಕ ಆನುವಂಶಿಕ ಅಧ್ಯಯನಗಳಿಂದ ಈ ಎರಡೂ ಪ್ರಭೇದಗಳು ಒಂದೇ ಪೂರ್ವಜನನ್ನು ಹೊಂದಿದ್ದು ಸುಮಾರು ೪೦ರಿಂದ ೩೦ ದಶಲಕ್ಷ ವರ್ಷಗಳ ಹಿಂದೆ ಪ್ರತ್ಯೇಕಗೊಂಡು ವಿಕಾಸಹೊಂದಿವೆ.

ಸೀಲಾಕ್ಯಾಂತ್ ಸಮುದ್ರದಲ್ಲಿ ಸುಮಾರು ೧೭೦ರಿಂದ ೨೦೦ ಮೀಟರ್‌ಗಳ ಆಳದಲ್ಲಿ ನೀರು ತಣ್ಣಗಿರುವ ಕಡೆ ವಾಸಿಸುತ್ತದೆ. ಅದು ಮನುಷ್ಯನ ಬಂಧನದಲ್ಲಿ ೨೦ ಗಂಟೆಗೂ ಹೆಚ್ಚು ಕಾಲ ಬದುಕಿಲ್ಲ. ಅದರ ಆಯಸ್ಸು ಸುಮಾರು ಅರವತ್ತು ವರ್ಷಗಳು ಹಾಗೂ ಅವು ಎರಡು ಮೀಟರ್ ಉದ್ದದವರೆಗೂ ಬೆಳೆಯುತ್ತವೆ. ಅವುಗಳ ಗರಿಷ್ಠ ತೂಕ ೯೦ ಕಿ.ಗ್ರಾಂಗಳು. ಅದನ್ನು ಜೀವಂತವಾಗಿ ವೀಕ್ಷಿಸುವ, ಜೀವಂತವಾಗಿರುವಂತೆ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ವಿಜ್ಞಾನಿಗಳ ಅರ್ಧಶತಮಾನದ ಆಸೆ ಮೊದಲ ಬಾರಿಗೆ ಜನವರಿ ೧೭, ೧೯೮೭ರಂದು ನೆರವೇರಿತು. ಪಶ್ಚಿಮ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನ ಹ್ಯಾನ್ಸ್ ಫ್ರಿಕ್ ತಮ್ಮ ಚಲನಚಿತ್ರ ಕ್ಯಾಮೆರಾದೊಂದಿಗೆ, ಸೀಲಾಕ್ಯಾಂತ್‌ನ ಚಿತ್ರೀಕರಣಕ್ಕೆಂದು ತಾವೇ ರೂಪಿಸಿದ ಒಂದು ಸಣ್ಣ ಸಬ್‌ಮರೀನ್‌ನಲ್ಲಿ ಕೊಮೊರೊ ದ್ವೀಪಗಳ ಬಳಿ ಸೀಲಾಕ್ಯಾಂತ್‌ನ ಅನ್ವೇಷಣೆ ನಡೆಸಿದರು. ಹಲವಾರು ದಿನಗಳ ಹುಡುಕಾಟದ ನಂತರ ಸೀಲಾಕ್ಯಾಂತ್ ಕಂಡಿತು. ಹ್ಯಾನ್ಸ್ ಫ್ರಿಕ್ ತೆಗೆದಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿದ್ದು ಆ ಅದ್ಭುತ ವೀಡಿಯೋವನ್ನು ಎಲ್ಲರೂ ನೋಡಬಹುದು: http://www.arkive.org/coelacanth/latimeria-chalumnae/video-00.html

ARKive video - Coelacanth in deep submarine canyon

ಮೀನುಗಾರರು ಸೀಲಾಕ್ಯಾಂತ್ ತಮ್ಮ ಬಲೆಯಲ್ಲಿ ಸಿಕ್ಕಾಗಲೂ ಅದರ ಮಾಂಸ ತಿನ್ನಲು ಯೋಗ್ಯವಿರುವುದಿಲ್ಲವೆಂದು ಎಸೆದುಬಿಡುತ್ತಿದ್ದರು. ಬರೀ ಎಣ್ಣೆಯಿಂದ ತುಂಬಿದಂತಿರುವ ಅದರ ಮಾಂಸವನ್ನು ಪ್ರೊಫೆಸರ್ ಸ್ಮಿತ್ ಬೇಯಿಸಿದಾಗ ಪೂರ್ತಿ 'ಕರಗಿ' ಹೋಯಿತಂತೆ!

ಹ್ಯಾನ್ಸ್ ಫ್ರಿಕ್‌ಗೆ ಸೀಲಾಕ್ಯಾಂತ್‌ಗಳು ರಾತ್ರಿಯ ಹೊತ್ತು ಮಾತ್ರ ಕಂಡವು. ಸಾಗರ ತಳದಲ್ಲಿ ತಣ್ಣನೆಯ ನೀರಿರುವ ಕಡೆ ಅವು ಅತ್ಯಂತ ನಿಧಾನವಾಗಿ ಸೋಮಾರಿಗಳ ಹಾಗೆ ಈಜಾಡುತ್ತಿದ್ದವು. ಅವನ ಎಂಟೂವರೆ ಗಂಟೆಗಳ ಕಾಲದ ವೀಕ್ಷಣೆಯಲ್ಲಿ ಅವು ಏನನ್ನೂ ತಿನ್ನಲಿಲ್ಲ. ಆದರೂ ಇನ್ನಿತರ ಸೀಲಾಕ್ಯಾಂತ್‌ಗಳ ಹೊಟ್ಟೆಯಲ್ಲಿ ಮೀನು, ಸ್ಕ್ವಿಡ್ ಮೀನುಗಳ ಅವಶೇಷಗಳು ಕಂಡುಬಂದಿವೆ. ಬಹುಶಃ ಅವು ಜೀವಿವಿಕಾಸದ ಹಾದಿಯಲ್ಲಿ ಇನ್ನಿತರ ವೇಗವಾಗಿ ಓಡಾಡುವ ಮೀನುಗಳೊಂದಿಗೆ ಸ್ಪರ್ಧಿಸಲಾಗದೆ ಸಮುದ್ರದ ಆಳಕ್ಕೆ, ಆಹಾರಕ್ಕೆ ಯಾವುದೇ ಪೈಪೋಟಿ ಇಲ್ಲದಿರುವಲ್ಲಿಗೆ ಹೋಗಿರಬಹುದು. ಅಲ್ಲದೆ ತಾನು ತಿನ್ನುವ ಮಿತ ಆಹಾರದಿಂದಾಗಿ ತನ್ನ ದೇಹದ ಚಟುವಟಿಕೆಯನ್ನು ಕಡಿಮೆಮಾಡಿಕೊಳ್ಳಲು ಹಾಗೂ ಶಕ್ತಿಯನ್ನು ಕಾಪಾಡಿಕೊಂಡು ಬರಲು ಸಾಗರದ ಆಳದ ತಣ್ಣನೆಯ, ಕತ್ತಲ ನೀರಿನ ಜಾಗವನ್ನು ಹುಡುಕಿಕೊಂಡಿರಬಹುದು. ಹ್ಯಾನ್ಸ್ ಫ್ರಿಕ್‌ನ ವೀಕ್ಷಣೆಯ ಸಮಯದಲ್ಲಿ ಅವು ಇದ್ದಕ್ಕಿದ್ದ ಹಾಗೆ ಸಮುದ್ರದ ತಳದಲ್ಲಿ 'ಶೀರ್ಷಾಸನ' ಹಾಕಿ ಸುಮಾರು ಎರಡು ನಿಮಿಷಗಳವರೆಗೂ ಅಲುಗಾಡದೆ ನಿಲ್ಲುತ್ತಿದವು. ಕೆಲವು ಮೀನುಗಳು ಆಹಾರ ತಿನ್ನುವಾಗ ಅಥವಾ ಶತ್ರುವನ್ನು ಹೆದರಿಸಬೇಕಾದಾಗ ಹೀಗೆ ನಿಲ್ಲುತ್ತವೆ. ಆದರೆ ಆ ರೀತಿಯ ವಾತಾವರಣ ಇಲ್ಲದಿದ್ದರೂ ಸೀಲಾಕ್ಯಾಂತ್ ತಲೆಕೆಳಗಾಗಿ ನಿಲ್ಲುತ್ತಿತ್ತು.

ಇನ್ನಿತರ ಮೀನುಗಳಿಗಿಲ್ಲದ ಭಿನ್ನ ರೀತಿಯ ಈಜುರೆಕ್ಕೆಗಳು ಸೀಲಾಕ್ಯಾಂತ್‌ಗಳಿಗಿವೆ. ಆ ಈಜುರೆಕ್ಕೆಗಳಿಗೆ ತಮ್ಮದೇ ಆದ ಎಲುಬುಗಳು ಹಾಗೂ ಸ್ನಾಯುಗಳಿವೆ. ಆದ್ದರಿಂದ ಆ ಈಜುರೆಕ್ಕೆಗಳನ್ನು ಸೀಲಾಕ್ಯಾಂತ್‌ಗಳು ಸಾಗರ ತಳದಲ್ಲಿ ಕಾಲುಗಳ ಹಾಗೆ ಬಳಸಿ ನಡೆದಾಡಬಹುದೆಂದು ವಿಜ್ಞಾನಿಗಳು ತಿಳಿದಿದ್ದರು. ಆದರೆ ಹ್ಯಾನ್ಸ್ ಫ್ರಿಕ್‌ನ ಸೀಲಾಕ್ಯಾಂತ್‌ನ ಜೀವಂತ ವೀಕ್ಷಣೆಯಲ್ಲಿ ಆ ರೀತಿಯ ನಡತೆ ಕಂಡುಬರಲೇ ಇಲ್ಲ.

ಹ್ಯಾನ್ಸ್ ಫ್ರಿಕ್ ಜೀವಂತ ಸೀಲಾಕ್ಯಾಂತನ್ನು ಕಂಡುಬಂದ ನಂತರ, ಜಪಾನಿನ ಟೋಬಾ ಅಕ್ವೇರಿಯಂ, ನ್ಯೂಯಾರ್ಕ್‌ನ ಅಕ್ವೇರಿಯಂನವರು ಅದನ್ನು ಜೀವಂತ ಹಿಡಿದು ಸಾಕುವ ಪ್ರಯತ್ನಕ್ಕೆ ಮುಂದಾಗಿದ್ದವು. ಅದರ ಬಗ್ಗೆ ವಿಜ್ಞಾನಿಗಳಲ್ಲಿ ಸಾಕಷ್ಟು ವಿವಾದವಿದ್ದು, ಬಹುತೇಕರು ಈ ಕ್ರಮವನ್ನು ವಿರೋಧಿಸಿದ್ದಾರೆ. ಸೀಲಾಕ್ಯಾಂತ್ ಏನಾದರೂ 'ಬಂಧನ'ದಲ್ಲಿ ಬದುಕಿಕೊಂಡಲ್ಲಿ ಅದರ ಬಗ್ಗೆ ಹೆಚ್ಚು ಸಂಶೋಧನೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅಕ್ವೇರಿಯಂನವರು. ಆದರೆ ಅಲ್ಪಸಂಖ್ಯೆಯಲ್ಲಿ ಹಾಗೂ ವಿನಾಶದ ಅಂಚಿನಲ್ಲಿರುವ ಸೀಲಾಕ್ಯಾಂತ್ ಪ್ರಕೃತಿಯಲ್ಲಿ ಕೋಟ್ಯಂತರ ವರ್ಷ ಬದುಕಿಕೊಂಡು ಬಂದಿದ್ದರೂ ಈಗ ಮನುಷ್ಯನ 'ಆಸಕ್ತಿ' ಹಾಗೂ 'ಕುತೂಹಲ'ದಿಂದ ಎಂದೆಂದಿಗೂ ಕಣ್ಮರೆಯಾಗಿಬಿಡಬಹುದು ಎನ್ನುವ ಆತಂಕ ವಿಜ್ಞಾನಿಗಳದು. ಈ ವಿವಾದಕ್ಕೆ ಹೆದರಿ ನ್ಯೂಯಾರ್ಕ್‌ನ ಅಕ್ವೇರಿಯಂ ಹಿಂದೆ ಸರಿಯಿತು. ಆದರೆ ಜಪಾನಿನ ಟೋಬಾ ಅಕ್ವೇರಿಯಂ ೧೯೮೯ರಲ್ಲಿ ಪ್ರಯತ್ನಿಸಿದರೂ ಸೀಲಾಕ್ಯಾಂತ್ ಅದಕ್ಕೆ ಸಿಗಲಿಲ್ಲ.

ಜೀವಂತ ಸೀಲಾಕ್ಯಾಂತ್ ಸಿಕ್ಕ ನಂತರ ಆ ವಿಷಯ ಮತ್ತೊಂದು ಚರ್ಚೆಗೆ ಗ್ರಾಸವಾಯಿತು. ಚಾರ್ಲ್ಸ್ ಡಾರ್ವಿನ್ ಮತ್ತು ಆಲ್‌ಫ್ರೆಡ್ ವಾಲೇಸ್ ೧೮೫೮ರಲ್ಲಿ ತಮ್ಮ ಜೀವವಿಕಾಸ ಸಿದ್ಧಾಂತವನ್ನು ಮಂಡಿಸಿದಾಗಿನಿಂದ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಅನುಯಾಯಿಗಳು ಅದನ್ನು ವಿರೋಧಿಸುತ್ತಾ ಬಂದಿದ್ದಾರೆ. ಮಾನವ ಮತ್ತು ಮಂಗ ಒಬ್ಬನೇ ಪೂರ್ವಜನನ್ನು ಹೊಂದಿದ್ದ ಎನ್ನುವುದನ್ನು ನಂಬಲು ಅವರು ಸಿದ್ಧರಿರಲಿಲ್ಲ. ಎಲ್ಲ ಜೀವಿಗಳನ್ನು, ಈ ಭೂಮಿ, ಆಕಾಶ ಹಾಗೂ ಬೆಳಕನ್ನು ದೇವರೇ ಸೃಷ್ಟಿಸಿದ ಎನ್ನುವುದು ಅವರ ನಂಬಿಕೆ. ಮಂಗನ ದೇಹಕ್ಕೆ ಡಾರ್ವಿನ್‌ನ ಮುಖವಿರುವ ಚಿತ್ರ ಬಿಡಿಸಿ ಆತನನ್ನು ಅಪಹಾಸ್ಯ ಮಾಡಿದ್ದರು. ಅತ್ಯಂತ ಮುಂದುವರಿದ ದೇಶವೆನ್ನಿಸಿಕೊಂಡಿರುವ ಅಮೆರಿಕದಲ್ಲಿ ಇಂದಿಗೂ ಶೇ. ೫೧ರಷ್ಟು ಜನ ದೇವರೇ ಮನುಷ್ಯನನ್ನು ಸೃಷ್ಟಿಸಿದ ಹಾಗೂ ಶೇ. ೩೦ರಷ್ಟು ಜನ ದೇವರ ಸಹಾಯದಿಂದ ಮನುಷ್ಯ ವಿಕಾಸಹೊಂದಿದ ಎಂಬ ನಂಬಿಕೆ ಇರಿಸಿದ್ದಾರೆ. ತಮ್ಮ ನಂಬಿಕೆಯ ಸೃಷ್ಟಿವಾದವನ್ನು ಶಿಕ್ಷಣದಲ್ಲೂ ತರಬೇಕೆಂದು ಅಂಥವರು ಒತ್ತಾಯ ತರುತ್ತಿದ್ದಾರೆ.

ಲಕ್ಷಾಂತರ ವರ್ಷಗಳಿಂದ ಬದಲಾವಣೆಗಳಿಲ್ಲದೆ ಬಂದಿರುವ 'ಜೀವಂತ ಪಳೆಯುಳಿಕೆ' ಸೀಲಾಕ್ಯಾಂತ್ ವಿಕಾಸವಾದದ ಎಲ್ಲ ನಿಯಮಗಳನ್ನೂ ಬದಿಗೆ ತಳ್ಳಿ ಸೃಷ್ಟಿವಾದಕ್ಕೆ ಪುಷ್ಟಿ ನೀಡುತ್ತದೆ ಎನ್ನುತ್ತಿದ್ದಾರೆ ಸೃಷ್ಟಿವಾದದಲ್ಲಿ ನಂಬಿಕೆ ಇರಿಸಿರುವವರು. ಆದರೆ ಈ ವಾದಗಳನ್ನು ತಿರಸ್ಕರಿಸಿರುವ ವಿಜ್ಞಾನಿಗಳು ವಿಕಾಸದ ಹಾದಿಯಲ್ಲಿ 'ಸ್ಥಾಯಿತ್ವ' ಕಂಡುಬರುವುದೂ ಸಹ ಜೀವವಿಕಾಸವಾದಕ್ಕೆ ಪೂರಕವಾಗಿಯೇ ಇದೆ. ಜೀವವಿಕಾಸವಾದದ ಬಹುಮುಖ್ಯ ಅಂಗವಾದ ಪ್ರಾಕೃತಿಕ ಆಯ್ಕೆ ಒಂದು ಸಂರಕ್ಷಿಸುವ ಶಕ್ತಿಯಾಗಿದ್ದು ಎಲ್ಲಿ ಸ್ಪರ್ಧೆ ಇರುವುದಿಲ್ಲವೋ ಹಾಗೂ ಪರಿಸರ ಎಲ್ಲಿ ಸಮರ್ಪಕವಾಗಿರುತ್ತದೆಯೋ ಅಲ್ಲಿ ಜೀವ ವಿಕಾಸ ಅತ್ಯಂತ ಮಂದಗತಿಯಲ್ಲಿ ಸಾಗುತ್ತದೆ.

ಸೀಲಾಕ್ಯಾಂತ್‌ನಲ್ಲಿ ಬದಲಾವಣೆಗಳಾಗಿವೆಯೇ ಇಲ್ಲವೆಂದಲ್ಲ. ಡಿವೋನಿಯನ್ ಅವಧಿಯಲ್ಲಿ (೪೧೦ ದಶಲಕ್ಷ ವರ್ಷಗಳ ಹಿಂದೆ) ಮೊದಲಿಗೆ ಕಂಡುಬಂದ ಸೀಲಾಕ್ಯಾಂತ್‌ಗಳ ಹಾಗೂ ಕಾರ್ಬೊನಿಫೆರಸ್ (೩೬೦ ದಶಲಕ್ಷ ವರ್ಷಗಳ ಹಿಂದೆ) ಮತ್ತು ಕ್ರಿಟೇಶಿಯಸ್‌ನ ಅವಧಿಯ (೧೩೮ ದಶಲಕ್ಷ ವರ್ಷಗಳ ಹಿಂದೆ) ಸೀಲಾಕ್ಯಾಂತ್‌ಗಳ ನಡುವೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೂ ಇಷ್ಟು ಸುದೀರ್ಘ ಅವಧಿಯಲ್ಲಿ ಅತ್ಯಂತ ಕನಿಷ್ಠ ಬದಲಾವಣೆಗಳನ್ನು ಪಡೆದಿರುವುದು ಒಂದು ಪ್ರಕೃತಿಯ ಕೌತುಕವೇ ಸರಿ. ಸೀಲಾಕ್ಯಾಂತ್ ಒಂದನ್ನೇ ತಮ್ಮ ಸಮರ್ಥನೆಗೆ ಹಿಡಿದಿಟ್ಟುಕೊಂಡಿರುವ ಸೃಷ್ಟಿವಾದಿಗಳು ಮಂಗಗಳ ಹಾಗೂ ಇತರ ಜೀವಿಗಳ ವಿಕಾಸದ ಬಗ್ಗೆ ಏಕೆ ಚರ್ಚಿಸುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಈ ಜೀವಜಗತ್ತಿನ ಅತ್ಯದ್ಭುತ ಕೌತುಕವಾದ ಸೀಲಾಕ್ಯಾಂತ್ ಒಂದು ನಿಗೂಢ ಪೆಟ್ಟಿಗೆ. ಅದು ತನ್ನ ಒಡಲೊಳಗೆ ಜೀವಜಗತ್ತಿನ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದೆ. ಕೋಟ್ಯಾಂತರ ವರ್ಷಗಳಿಂದ ಜೀವವಿಕಾಸದ ಹಾದಿಯಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣದೆ ಈ ಮೀನು ಹೇಗೆ ಉಳಿದುಬಂತು? ಬದಲಾವಣೆಗಳಿಲ್ಲದೆ ಮೂರು ಕೋಟಿ ತಲೆಮಾರುಗಳನ್ನು ಹಾದುಬರಲು ವಾತಾವರಣದ ಯಾವ್ಯಾವ ಕಾರಣಗಳು ಸಹಕಾರಿಯಾಗಿದ್ದವು? ಸೀಲಾಕ್ಯಾಂತ್ ಭೂಮಿಯ ಮೇಲಿನ ಜೀವಿಗಳಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಜೀವವಿಕಾಸದ ಹಲವಾರು 'ವಿಶಿಷ್ಟ ಸಮಸ್ಯೆ'ಗಳನ್ನು ಪರಿಹರಿಸಿಕೊಂಡಿರುವುದರಿಂದ ಅದು ಇಷ್ಟು ಕಾಲ ಬದುಕಿಕೊಂಡು ಬಂದಿದೆ ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಈಗ ಎಷ್ಟು ಸೀಲಾಕ್ಯಾಂತ್‌ಗಳು ಬದುಕಿರಬಹುದೆಂಬುದೂ ತಿಳಿದಿಲ್ಲ. ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆಯಿದ್ದು ಅವು ವಿನಾಶದ ಅಂಚಿನಲ್ಲಿವೆ ಎಂಬುದಂತೂ ಖಚಿತ. ಸ್ಪೇನ್‌ನಲ್ಲಿ ೧೯೬೫ರಲ್ಲಿ ಸಿಕ್ಕಿರುವ ಹತ್ತೊಂಭತ್ತನೇ ಶತಮಾನದ ಬೆಳ್ಳಿಯ ಧಾರ್ಮಿಕ ವಸ್ತುವೊಂದರ ಮೇಲೆ ಸೀಲಾಕ್ಯಾಂತ್‌ನ ಸ್ಫುಟ ಚಿತ್ರವೊಂದಿದೆ. ಅದನ್ನು ರೂಪಿಸಿದ ಕಲಾಕಾರನಿಗೆ ಸೀಲಾಕ್ಯಾಂತ್ ಬಗ್ಗೆ ಹೇಗೆ ಗೊತ್ತಾಯಿತು? ಏಕೆಂದರೆ ಅದುವರೆಗೂ ಪಳೆಯುಳಿಕೆಯಲ್ಲದೆ ಜೀವಂತ ಸೀಲಾಕ್ಯಾಂತ್ ಸಿಕ್ಕಿರುವ ಉಲ್ಲೇಖವೇ ಚರಿತ್ರೆಯಲ್ಲಿಲ್ಲ. ಸೀಲಾಕ್ಯಾಂತ್‌ಗೆ ಅತ್ಯಂತ ನಿಕಟ ಸಂಬಂಧಿಯಾದ ಯಾವುದಾದರೂ ಜೀವಿ ಇದೆಯೆ? ಸೀಲಾಕ್ಯಾಂತ್‌ನ ರಹಸ್ಯಗಳ ಸರಮಾಲೆ ಹೀಗೆಯೇ ಹಿಗ್ಗುತ್ತಾ ಹೋಗುತ್ತದೆ.

ಪೂರಕ ಮಾಹಿತಿ

ಪಳೆಯುಳಿಕೆಗಳು ಎಂದರೇನು?

ಪಳೆಯುಳಿಕೆಯನ್ನು ಇಂಗ್ಲಿಷಿನಲ್ಲಿ ಫಾಸಿಲ್ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಫಾಸಿಲಿಸ್ ಎಂದರೆ `ಅಗೆದಿರುವುದು' ಎಂದರ್ಥ. ಪಳೆಯುಳಿಕೆಗಳೆಂದರೆ ಸಾಮಾನ್ಯವಾಗಿ ಮರಳುಗಲ್ಲು, ಗೋಡುಕಲ್ಲು, ಜೇಡಿಪದರಗಲ್ಲು ಅಥವಾ ಸುಣ್ಣಕಲ್ಲುಗಳಂತಹ ಸಂಚಿತ ಶಿಲೆಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ಬಹಳ ಹಿಂದೆ ಸತ್ತುಹೋದ ಜೀವಿಗಳ ಉಳಿಕೆಗಳು ಅಥವಾ ಅವುಗಳ ಭೌತಿಕ ರಚನೆಯ ಅಚ್ಚುಗಳು. ಪಳೆಯುಳಿಕೆಗಳು ಬಹಳ ಹಿಂದೆ ಭೂಮಿಯ ಮೇಲೆ ಜೀವಿಸಿದ್ದ ಜೀವಿಗಳ ಸಾಕ್ಷ್ಯಾಧಾರಗಳಾಗಿವೆ. ಪಳೆಯುಳಿಕೆಗಳು ಸಸ್ಯ ಉಳಿಕೆಗಳಾದಂತಹ ಎಲೆಗಳು, ಮರ, ಹೂಗಳ ಪರಾಗ ಮತ್ತು ಸಸ್ಯಗಳ ಒಳಭಾಗಗಳು, ಚಿಪ್ಪುಗಳು ಅಥವಾ ಹವಳಗಳು, ಹುಳುಗಳು, ಬಸವನಹುಳುಗಳು ಮತ್ತು ಸಮುದ್ರ ಮುಳ್ಳುಹಂದಿಗಳಂತಹ ಅಕಶೇರುಕಗಳ ದೇಹದ ಇತರ ಭಾಗಗಳು, ಡೈನೋಸಾರ್, ಮೀನು, ಪಕ್ಷಿ ಮತ್ತು ಸ್ತನಿಗಳಂತಹ ಕಶೇರುಕಗಳ ಅಸ್ಥಿಪಂಜರಗಳನ್ನು ಒಳಗೊಂಡಿರುತ್ತವೆ. ಇದುವರೆಗೆ ಸುಮಾರು ೨,೫೦,೦೦೦ ವಿವಿಧ ಪ್ರಭೇದಗಳ ಪಳೆಯುಳಿಕೆಗಳನ್ನು ಗುರುತಿಸಲಾಗಿದೆ.

ಪಳೆಯುಳಿಕೆಗಳು ಹೇಗೆ ರೂಪುಗೊಳ್ಳುತ್ತವೆ

ಸುಮಾರು ೩೦೦೦ ದಶಲಕ್ಷ ವರ್ಷಗಳವರೆಗೆ ಜೀವಿಗಳು ಸಮುದ್ರಗಳಲ್ಲಿ ಮಾತ್ರ ಬದುಕಿದ್ದವು. ಹಾಗಾಗಿ ನಮಗೆ ದೊರೆತಿರುವ ಅತ್ಯಂತ ಹಳೆಯ ಪಳೆಯುಳಿಕೆಗಳು ಸಾಗರ ಜೀವಿಗಳದು ಮಾತ್ರ. ಸಾಗರ ಪ್ರಾಣಿಗಳು ಅಥವಾ ಸಸ್ಯಗಳು ಸತ್ತಾಗ ಅವುಗಳ ದೇಹದ ಉಳಿಕೆಗಳು ಸಾಗರ ತಳ ಸೇರಿ ಅಲ್ಲಿ ಮಣ್ಣು, ಮರಳು ಅಥವಾ ಗೋಡಿನಲ್ಲಿ ಹೂತುಹೋದವು. ಬಹಳ ದೀರ್ಘ ಕಾಲದ ನಂತರ ಈ ಸಂಚಿತ ವಸ್ತುಗಳು ಸಂಚಿತ ಶಿಲೆಯಾಗಿ ರೂಪುಗೊಂಡವು ಹಾಗೂ ಪ್ರಾಣಿ ಅಥವಾ ಸಸ್ಯಗಳ ಭಾಗಗಳು ಆ ಶಿಲೆಗಳಲ್ಲೇ ಉಳಿದುಬಿಟ್ಟವು. ಸುಮಾರು ೪೩೦ ದಶಲಕ್ಷ ವರ್ಷಗಳ ಹಿಂದೆ ಪ್ರಾಣಿಗಳು ಮತ್ತು ಸಸ್ಯಗಳು ಸಾಗರಗಳಿಂದಾಚೆ ಭೂಮಿಯ ಮೇಲೆ ವಿಕಾಸಹೊಂದಿ ಜೀವಿಸುತ್ತಿದ್ದವು. ಅವು ಸತ್ತಾಗ ಅವುಗಳ ಮೃದು ಭಾಗಗಳು ಕೊಳೆತುಹೋಗುತ್ತಿದ್ದವು ಅಥವಾ ಇತರ ಪ್ರಾಣಿ ಪಕ್ಷಿಗಳು ಅವುಗಳನ್ನು ಭಕ್ಷಿಸುತ್ತಿದ್ದವು. ಆದರೆ ಅವುಗಳ ಗಡಸು ಭಾಗಗಳು (ಮೂಳೆಗಳು, ಚಿಪ್ಪುಗಳು, ಮರ ಮುಂತಾದುವು) ನೀರು, ಮರಳು ಅಥವಾ ಅಗ್ನಿಪರ್ವತಗಳ ಬೂದಿಯಿಂದ ಮುಚ್ಚಿಹೋಗಿ ಕೆಲವೊಮ್ಮೆ ಸಂರಕ್ಷಿಸಲ್ಪಡುತ್ತಿದ್ದವು. ಹಲ್ಲುಗಳು ಪ್ರಾಣಿಯೊಂದರ ಅತ್ಯಂತ ಹೆಚ್ಚು ಗಡಸು ಭಾಗವಾಗಿದ್ದು ಅವು ಸಂರಕ್ಷಿಸಲ್ಪಡುವ ಸಾಧ್ಯತೆ ಹೆಚ್ಚು ಇರುತ್ತಿತ್ತು.

ಮೂಳೆ, ಮರ ಮತ್ತು ಚಿಪ್ಪುಗಳು ಗಡಸಾಗಿದ್ದರೂ ಅವು ಅತ್ಯಂತ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ. ಅವು ಹೂತು ಹೋದಾಗ ಕರಗಿರುವ ಖನಿಜಗಳನ್ನು ಹೊಂದಿರುವ ನೀರು ಆ ರಂಧ್ರಗಳೊಳಗೆ ಪ್ರವೇಶಿಸಿ ಅಲ್ಲಿ ಖನಿಜಗಳು ಸೇರಿಕೊಳ್ಳುವಂತೆ ಮಾಡುತ್ತದೆ. ಲಕ್ಷಾಂತರ ವರ್ಷಗಳು ಕಳೆದಂತೆ ಎಲ್ಲ ಮೂಲ ಮೂಳೆ ಅಥವಾ ಚಿಪ್ಪು ಸಂಪೂರ್ಣ ಕರಗಿಹೋಗಿ ತನ್ನನ್ನು ಆವರಿಸಿರುವ ಶಿಲೆಯ ನಡುವೆ ತನ್ನದೇ ಆಕಾರದಲ್ಲಿ ಸಂಪೂರ್ಣ ಖನಿಜಗಳನ್ನೇ ಹೊಂದಿರುತ್ತದೆ. ಆ ಮೂಳೆ ಅಥವಾ ಚಿಪ್ಪು ಸಂಪೂರ್ಣವಾಗಿ ಶಿಲೆಯಾಗಿಬಿಟ್ಟಿರುತ್ತದೆ. ಕೆಲವೊಮ್ಮೆ ಶಿಲೆಯ ನಡುವೆ ಇರುವ ಪ್ರಾಣಿ ಸಂಪೂರ್ಣವಾಗಿ ಕೊಳೆತುಹೋಗಿ ಅಲ್ಲಿ ಉಳಿಯುವ ಅದರ ಖಾಲಿ ಸ್ಥಳವನ್ನು ಸಂಚಿತ ಶಿಲೆ ಅಥವಾ ಖನಿಜಗಳು ಆವರಿಸಿಕೊಂಡು ಆ ಪ್ರಾಣಿಯಂತೆಯೇ ಇರುವ `ಅಚ್ಚು' ತಯಾರಿಸಿರುತ್ತದೆ. ಪಳೆಯುಳಿಕೆಗಳು ಶಿಲೆಗಳಲ್ಲಿ ಮಾತ್ರ ಕಂಡುಬಂದಿರುವುದಿಲ್ಲ. ಟಾರ್ ಗುಂಡಿಗಳಲ್ಲಿ ಸಿಕ್ಕಿಬಿದ್ದ ಪ್ರಾಣಿಗಳು ಹಾಗೆಯೇ ಸಂರಕ್ಷಿಸಲ್ಪಟ್ಟಿವೆ. ಹಿಮಯುಗದಲ್ಲಿದ್ದ ವೂಲಿ ಮ್ಯಾಮತ್‌ಗಳು ಹಿಮದಲ್ಲೇ ಹೂತುಹೋಗಿ ಮಾಂಸ ಹಸಿಯಾಗಿರುವಂತೆಯೇ ಸಂರಕ್ಷಿಸಲ್ಪಟ್ಟಿವೆ. ಸಂಪೂರ್ಣವಾಗಿ ನಿರ್ನಾಮವಾಗಿರುವ ಕೀಟಗಳು ಮರಗಳ ಅಂಟುಗಳಲ್ಲಿ ಸಿಕ್ಕಿಬಿದ್ದಿದ್ದು ಲಕ್ಷಾಂತರ ವರ್ಷಗಳಾದರೂ ಹಾಗೆಯೇ ಸಂರಕ್ಷಿಸಲ್ಪಟ್ಟಿರುವ ಉದಾಹರಣೆಗಳಿವೆ.

ಶಿಲೆಗಳ ಮತ್ತು ಪಳೆಯುಳಿಕೆಗಳ ವಯಸ್ಸನ್ನು ವಿಜ್ಞಾನಿಗಳು ರಿಲೆಟೀವ್ ಡೇಟಿಂಗ್ ವಿಧಾನ ಮತ್ತು ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನ ಎಂಬ ಎರಡು ವಿಧಾನಗಳಿಂದ ಪತ್ತೆ ಹಚ್ಚುತ್ತಾರೆ. ಇವುಗಳಲ್ಲಿ ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನ ಹೆಚ್ಚು ನಿಖರವಾದುದು. ರಿಲೆಟೀವ್ ಡೇಟಿಂಗ್ ವಿಧಾನದಲ್ಲಿ ಶಿಲೆಯ ಪದರಗಳ ಬಾಹ್ಯ ಅಧ್ಯಯನ ಮಾಡಲಾಗುತ್ತದೆ. ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನದಲ್ಲಿ ಪ್ರಾಚೀನ ಪಳೆಯುಳಿಕೆ, ಶಿಲೆಗಳು ಅಥವಾ ಭೂಮಿಯಲ್ಲಿನ ರೇಡಿಯೋ‌ಆಕ್ಟೀವ್ ನಶಿಸುವಿಕೆಯ ಅಧ್ಯಯನದ ಮೂಲಕ ಅವುಗಳ ವಯಸ್ಸನ್ನು ಅಂದಾಜು ಮಾಡಲಾಗುತ್ತದೆ.

-ಡಾ. ಜೆ.ಬಾಲಕೃಷ್ಣ

j.balakrishna@gmail.com




ಬುಧವಾರ, ಮೇ 04, 2011