ಬುಧವಾರ, ಅಕ್ಟೋಬರ್ 23, 2013

ಪುಸ್ತಕಗಳಿಗೆ ಅಳಿವುಂಟು...

24ರ ಅಕ್ಟೋಬರ್ 2013ರ `ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
ಪುಸ್ತಕಗಳಿಗೆ ಅಳಿವುಂಟು...


ಖ್ಯಾತ ವಿಜ್ಞಾನ ಕಾಲ್ಪನಿಕ ಕಥನ ಲೇಖಕ ಐಸಾಕ್ ಅಸಿಮೋವ್ ನ ಭವಿಷ್ಯದಲ್ಲಿ ಸ್ಥಿತವಾಗಿರುವ ಕತೆಯೊಂದರಲ್ಲಿ ಆಟವಾಡುತ್ತಿರುವ ಅಣ್ಣ ಮತ್ತು ತಂಗಿ ಮನೆಯ ಅಟ್ಟಕ್ಕೆ ಹೋಗುತ್ತಾರೆ. ಅಲ್ಲಿ ಹಳೆಯ ವಸ್ತುಗಳನ್ನು ಕುತೂಹಲದಿಂದ ನೋಡುತ್ತಿರುವಾಗ ಅವರಿಗೆ ಪುಸ್ತಕವೊಂದು ಸಿಗುತ್ತದೆ. ವಸ್ತು ಏನಿರಬಹುದೆಂದು ಅವರಿಬ್ಬರಿಗೂ ಅಚ್ಚರಿಯಾಗುತ್ತದೆ, ಏಕೆಂದರೆ ಅವರು ಎಂದೂ ಪುಸ್ತಕವನ್ನೇ ನೋಡಿದವರಲ್ಲ. ಅಕ್ಷರಗಳು ರೀತಿಯ ತೆಳುವಾದ ಹಾಳೆಯ ಮೇಲೆ ಕಪ್ಪು ಅಕ್ಷರಗಳಲ್ಲಿ ಮುದ್ರಿತವಾಗಿರುವುದನ್ನು ಕಂಡು ಅವರಿಗೆ ಜ್ಞಾನ ಅಥವಾ ಮಾಹಿತಿ ರೂಪದಲ್ಲೂ ಹಿಂದೆ ದೊರಕುತ್ತಿತ್ತೆಂದು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. 1899ರಲ್ಲಿ ಪ್ರಕಟವಾದ ಎಚ್.ಜಿ.ವೆಲ್ಸ್ ನ `ಟೈಮ್ ಟ್ರಾವೆಲರ್ ಕಥಾನಾಯಕ 22ನೇ ಶತಮಾನಕ್ಕೆ ಪ್ರಯಾಣಿಸಿದಾಗ ಅಲ್ಲಿ ತಾನಿರುವ ಸಮಾಜದ ಬಗೆಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಅರಸುತ್ತಾನೆ. ಆದರೆ ಅವನಿಗೆ ಎಲ್ಲಿಯೂ ಪುಸ್ತಕಗಳು ದೊರೆಯುವುದಿಲ್ಲ, ಬದಲಿಗೆ ವಿಚಿತ್ರ ಡಬಲ್ ಸಿಲಿಂಡರ್ ಗಳು ದೊರೆಯುತ್ತವೆ. ಅವನ್ನು ಉಪಕರಣವೊಂದರಲ್ಲಿ ಇರಿಸಿ ಚಾಲಿಸಿದಾಗ ಅವನಿಗೆ ಬೇಕಾದ ಮಾಹಿತಿ ನೀಡುವ, ಚಲಿಸುವ ಮತ್ತು ಮಾತನಾಡುವ ಆಕೃತಿಗಳು ಅವನ ಕಣ್ಣೆದುರಿಗೇ ಮೂಡುತ್ತವೆ. ಅಸಿಮೋವ್ ನ ಕತೆ ಸುಮಾರು 2200 ಇಸವಿಯ ಸಮಯದ್ದು. ಆದರೆ ಪುಸ್ತಕಗಳ ರೂಪದ ಅಕ್ಷರ ದಾಸೋಹ ಕಣ್ಮರೆಯಾಗಲು ಅಷ್ಟೊಂದು ಸಮಯ ಬೇಕಾಗಿಲ್ಲ... ಏಕೆಂದರೆ ಪುಸ್ತಕಗಳಿಗೆ ಅಳಿವುಂಟು!
ಈಗಿನ ಡಿಜಿಟಲ್ ಯುಗದಲ್ಲಿ ಅಕ್ಷರ ಲೋಕದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಅಮೆಜಾನ್ನ `ಕಿಂಡಲ್', ಬಾನ್ರ್ಸ್ ಅಂಡ್ ನೋಬಲ್ಸ್ ನ `ನೂಕ್', ಸೋನಿಯ -ಬುಕ್ (ಎಲೆಕ್ಟ್ರಾನಿಕ್ ಬುಕ್) ರೀಡರ್ ಗಳು ಬರುವ ಮೊದಲೇ ಕಂಪ್ಯೂಟರುಗಳಲ್ಲಿ ಪುಸ್ತಕಗಳನ್ನು ಡೌನ್ಲೋಡ್ ಮಾಡಿ, ಸ್ಕ್ಯಾನ್ ಮಾಡಿ ಓದುವ ಪ್ರಯತ್ನಗಳು ನಡೆಯುತ್ತಿದ್ದವು. ಎಲ್ಲಾ ಪ್ರಯತ್ನಗಳು ತ್ರಾಸದಾಯಕವಾಗಿದ್ದವು. ಆದರೆ ಕಿಂಡಲ್, ನೂಕ್ ಮುಂತಾದ ಎಲೆಕ್ಟ್ರಾನಿಕ್ ಬುಕ್ ರೀಡರ್ ಗಳು, ಅಂಗೈ ಅಗಲದ ಮೊಬೈಲ್ ಗಳು, ಕಾಸಿಗೊಂದು ಕೊಸರಿಗೊಂದು ಎಂದು ಸಿಗುತ್ತಿರುವ ಟ್ಯಾಬ್ಲೆಟ್ಟುಗಳು ಅಕ್ಷರ ಜಗತ್ತಿನಲ್ಲಿ ಅತಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿವೆ. ಕೆಲವರು ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಕಾಗದದ ಪುಸ್ತಕಗಳು ಸಂಪೂರ್ಣ ಕಣ್ಮರೆಯಾಗುತ್ತದೆ ಎನ್ನುತ್ತಿದ್ದರೆ ಇನ್ನು ಕೆಲವರು ಕೆಲಸ ಇನ್ನು ಹತ್ತೇ ವರ್ಷಗಳಲ್ಲಿ ಆಗುತ್ತದೆ ಎನ್ನುತ್ತಿದ್ದಾರೆ. ಕಾಗದದ ಪುಸ್ತಕ ಮುದ್ರಣ ಇನ್ನು ಕೆಲವೇ ವರ್ಷಗಳಲ್ಲಿ ಆರ್ಥಿಕವಾಗಿ ಲಾಭದಾಯಕವಲ್ಲದ ಉದ್ದಿಮೆಯಾಗುತ್ತದೆ ಎನ್ನುತ್ತಿದ್ದಾರೆ ಇನ್ನು ಕೆಲವರು.
1933ರಲ್ಲಿ ಮುದ್ರಣ ಪ್ರಾರಂಭಿಸಿದ ಅಮೆರಿಕಾದ ಪ್ರತಿಷ್ಠಿತ ವಾರಪತ್ರಿಕೆ `ನ್ಯೂಸ್ ವೀಕ್' ಸುಮಾರು ಎಂಭತ್ತು ವರ್ಷಗಳ ಸತತ ಪ್ರಕಟಣೆಯ ನಂತರ 31ನೇ ಡಿಸೆಂಬರ್ 2012ರಲ್ಲಿ ತನ್ನ ಮುದ್ರಣ ಆವೃತ್ತಿಯನ್ನು ನಿಲ್ಲಿಸಿತು. ಈಗ ಅದರ ಆನ್ಲೈನ್ ಆವೃತ್ತಿ ಮಾತ್ರ ಪ್ರಕಟವಾಗುತ್ತಿದೆ. 1768ರಲ್ಲಿ ಪುಸ್ತಕರೂಪದಲ್ಲಿ ವಿಶ್ವಕೋಶಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಪ್ರಾರಂಭಿಸಿದ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕ 2010ರಲ್ಲಿ ತನ್ನ ಮುದ್ರಣ ಆವೃತ್ತಿಯನ್ನು ನಿಲ್ಲಿಸಿತು. ಎನ್ಸೈಂಕ್ಲೊಪಿಡಿಯಾ ಬ್ರಿಟಾನಿಕ ವಿಶ್ವಕೋಶದ ಗ್ರಂಥಗಳನ್ನು ತಮ್ಮ ಕಪಾಟುಗಳಲ್ಲಿ ಹೊಂದಿರುವುದೇ ಹೆಮ್ಮೆಯ, ಬೌದ್ಧಿಕತೆಯ ಸಂಕೇತವೆಂಬ ಕಾಲವೊಂದಿತ್ತು. ಗ್ರಂಥಾಲಯಗಳಲ್ಲಿ ಅವುಗಳ ಪುಟಗಳನ್ನು ಸವರುತ್ತಾ ವರ್ಣರಂಜಿತ ಫೋಟೋಗಳನ್ನು ನೋಡುವುದೇ ನನ್ನಂಥವರಿಗೆ ತೀವ್ರ ಭಾವೋದ್ರೇಕದ ಸ್ಪರ್ಶಾನುಭವ ನೀಡುತ್ತಿತ್ತು. ಆದರೆ ಮೂರು-ನಾಲ್ಕು ವರ್ಷಗಳ ಹಿಂದೆ ನೂರು ರೂಪಾಯಿಗಳಿಗೆಲ್ಲ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕಾದ ಸಿ.ಡಿ.ಗಳು ದೊರೆಯುತ್ತಿದ್ದವು ಹಾಗೂ ಎಷ್ಟೋ ಸಾಮಗ್ರಿಗಳ ಜೊತೆ ಅವುಗಳನ್ನು ಉಚಿತವಾಗಿ ಸಹ ನೀಡುತ್ತಿದ್ದರು. ಆದರೆ ಇಂದು ಸಿ.ಡಿ., ಡಿ.ವಿ.ಡಿ.ಗಳ ಮೂಲಕ ವಿಶ್ವಕೋಶಗಳನ್ನು ಪರಾಮರ್ಶಿಸುವ ತಾಳ್ಮೆ ಅಥವಾ ಅವಶ್ಯಕತೆಯೇ ಯಾರಿಗೂ ಇಲ್ಲವೆನ್ನಿಸುತ್ತದೆ. ಏಕೆಂದರೆ ಇಂದು ಆನ್ಲೈನ್ ನಲ್ಲಿಯೇ ತಮ್ಮ ಮೊಬೈಲ್ ಅಥವಾ ಕಂಪ್ಯೂಟರುಗಳಲ್ಲಿ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ದಿನೇ ದಿನೇ ಮಾರಾಟವಾಗುತ್ತಿರುವ ವೃತ್ತಪತ್ರಿಕೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಪತ್ರಿಕೆಗಳೂ ಬಹುಪಾಲು ಉಚಿತವಾಗಿ ಅಂತರ್ಜಾಲದಲ್ಲಿ ದೊರಕುತ್ತವೆ. ಕನ್ನಡದ ಎಲ್ಲ ದಿನಪತ್ರಿಕೆಗಳೂ ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತವೆ. ಅದೇ ರೀತಿ ಎಲೆಕ್ಟ್ರಾನಿಕ್ ಪುಸ್ತಕಗಳ (-ಪುಸ್ತಕ) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಾರ್ಷಿಕ 20-23 ಬಿಲಿಯನ್ ಡಾಲರ್ ಮಾರಾಟ ವಹಿವಾಟು ಹೊಂದಿರುವ ಅಮೆಜಾನ್ ಮಾರಾಟ ಮಾಡುವ 100 ಕಾಗದ ಪುಸ್ತಕಗಳಿಗೆ 242 -ಪುಸ್ತಕಗಳನ್ನು ಮಾರಾಟ ಮಾಡುತ್ತಿದೆಯಂತೆ.
-ಪುಸ್ತಕಗಳ ಸಾಧ್ಯತೆ ಅಗಾಧವಾದುದು. ಅವುಗಳಲ್ಲಿ ಅಕ್ಷರಗಳು ಮಾತ್ರವಲ್ಲ, ದೃಶ್ಯಗಳು, ಶಬ್ದಗಳು, ಕೃತಿಕಾರನ ಸ್ವಂತ ಲಿಪಿ, ಮುಂತಾದುವು ಇರಬಹುದು. ಅಂದರೆ `ಓದುಗಕೃತಿಯೊಂದನ್ನು ಬಹು ಆಯಾಮಗಳಲ್ಲಿ ಗ್ರಹಿಸಿಕೊಳ್ಳಬಹುದು ಮತ್ತು ಅನುಭವಿಸಬಹುದು. ಇಂದು ಹೆಚ್ಚು ಜನಪ್ರಿಯವಾಗಿರುವ ಅಮೆರಿಕದ ಅಮೆಜಾನ್ ಕಂಪೆನಿಯ ಕಿಂಡಲ್ ಅತ್ಯಂತ ಹಗುರವಾದ, ಪುಸ್ತಕದ ಗಾತ್ರವೇ ಇರುವ -ಬುಕ್ ರೀಡರ್. ಹಾಳೆಯ ಮೇಲೆ ಮುದ್ರಿತ ಅಕ್ಷರಗಳಂತೆಯೇ ಕಾಣುವ ಎಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನದ ಇದನ್ನು ಓದುವಾಗ ಕಾಗದದ ಪುಸ್ತಕ ಓದುವ ಅನುಭವವೇ ಆಗುತ್ತದೆ. ಈಗ ಅದರ ಕಲರ್ ಆವೃತ್ತಿ ಕಿಂಡಲ್ ಫೈರ್ ಮತ್ತು ಕಪ್ಪು ಬಿಳುಪಿನ, ಆದರೆ ಕತ್ತಲಲ್ಲೂ ಓದಬಹುದಾದ ಕಿಂಡಲ್ ಲೈಟ್ ಮಾದರಿಗಳೂ ಬಂದಿವೆ. ಕಪ್ಪುಬಿಳುಪಿನ ಕಿಂಡಲ್ ನಲ್ಲಿ ಸುಮಾರು ಮೂರು ಸಾವಿರ ಪುಸ್ತಕಗಳನ್ನು ಶೇಖರಿಸಿಡಬಹುದು (ನನ್ನಲ್ಲಿರುವ ಕಿಂಡಲ್ ನಲ್ಲಿ ಸುಮಾರು ಸಾವಿರ ಪುಸ್ತಕಗಳಿವೆ). ಸುಮಾರು ಮುನ್ನೂರು ಗ್ರಾಂಗಳ ತೂಕವಿರುವ ಅದನ್ನು ಕೊಂಡೊಯ್ಯುತ್ತಿದ್ದರೆ ಇಡೀ ಗ್ರಂಥಾಲಯವನ್ನೇ ಕೊಂಡೊಯ್ಯುತ್ತಿರುತ್ತೇವೆ! ಒಮ್ಮೆ ಅದನ್ನು ಸಂಪೂರ್ಣ ಚಾರ್ಜ್ ಮಾಡಿದರೆ ನೀವು ದಿನಕ್ಕೆ ಒಂದು ಗಂಟೆಯಂತೆ ಓದಿದರೆ ಹದಿನೈದು ದಿನಗಳ ಕಾಲ ಅದನ್ನು ಪುನಃ ಚಾರ್ಜ್ ಮಾಡುವ ಅವಶ್ಯಕತೆಯಿಲ್ಲ ಹಾಗೂ ಅದನ್ನೆಂದೂ ನೀವು `ಆಫ್ ಮಾಡುವ ಅವಶ್ಯಕತೆಯಿಲ್ಲ. ನೀವು ಅವುಗಳಲ್ಲಿ ಎಷ್ಟೇ ಪುಸ್ತಕಗಳನ್ನು ಓದಿದರೂ, ಪುನಃ ಪುಸ್ತಕ ತೆರೆದಾಗ ನೀವು ಕಳೆದ ಸಾರಿ ಎಲ್ಲಿ ಓದಿ ನಿಲ್ಲಿಸಿರುತ್ತೀರೋ ಅಲ್ಲಿಯೇ ಪುಟ ತೆರೆದುಕೊಳ್ಳುತ್ತದೆ. ಓದುವಾಗ ಅಕ್ಷರದ ಅರ್ಥ ತಿಳಿದಿಲ್ಲದಿದ್ದಲ್ಲಿ ಅದರ ಪಕ್ಕದಲ್ಲಿ ಕರ್ಸರ್ ಇರಿಸಿದರೆ ತಳದಲ್ಲಿ ಅದರ ಅರ್ಥ ತಾನಾಗೇ ಮೂಡಿಬರುತ್ತದೆ. ನೀವು ಅಮೆಜಾನ್ನಿಂದ -ಪುಸ್ತಕಗಳನ್ನು ಖರೀದಿಸಿದರೆ ಅದು ನೇರವಾಗಿ ನಿಮ್ಮ ಕಿಂಡಲ್ ಗೆ ವೈ-ಫೈ ಮೂಲಕ ಅಥವಾ 3ಜಿ ಮೂಲಕ ತಲುಪುತ್ತದೆ. ಅಷ್ಟೇ ಅಲ್ಲ ಕಿಂಡಲ್ ಗೆ ಪೂರಕವಾಗಿ ಹಲವಾರು `ಎಕ್ಸ್ಟೆನ್ಷನ್ಗಳು ಅಂತರ್ಜಾಲದಲ್ಲಿ ಲಭಿಸುತ್ತವೆ. ನೀವು ಅಂತರ್ಜಾಲದಲ್ಲಿ ಯಾವುದಾದರೂ ಲೇಖನ ಓದುತ್ತಿದ್ದಲ್ಲಿ ಅದನ್ನು ನಂತರ ಓದಬೇಕೆಂದೆನ್ನಿಸಿದರೆ ಬ್ರೌಸರ್ ನಲ್ಲಿ ನೀವು ಅಳವಡಿಸಿಕೊಂಡಿರುವ ಸಣ್ಣ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಲೇಖನ ನೇರ ನಿಮ್ಮ ಕಿಂಡಲ್ ಗೆ ತಲುಪುತ್ತದೆ. ಕಿಂಡಲ್ ನಲ್ಲಿ ಓದಲು ಅದರದೇ ವಿಶಿಷ್ಟ ನಮೂನೆಯಾದ `ಮೋಬಿಫಾಮ್ರ್ಯಾಟ್ ಬೇಕಾಗಿರುವುದರಿಂದ ನಿಮಗೆ ಬೇಕಾದ ಬರಹಗಳನ್ನು ಮೋಬಿಗೆ ಪರಿವರ್ತಿಸಿಕೊಳ್ಳಲು ಬೇಕಾದಷ್ಟು ತಂತ್ರಾಂಶಗಳು ಉಚಿತವಾಗಿ ಲಭ್ಯವಿವೆ. ಕಿಂಡಲ್ ನಲ್ಲಿ ನಿಮಗೆ ಓದುವುದು ಬೇಸರವೆನ್ನಿಸಿದರೆ, ಹೆಡ್ ಫೋನ್ ಹಾಕಿಕೊಂಡರೆ ಅದೇ ಪುಸ್ತಕವನ್ನು ನಿಮಗೆ ಓದುತ್ತದೆ. ನಿಮಗೆ ಹೆಣ್ಣು ಧ್ವನಿ ಬೇಕೋ, ಗಂಡು ಧ್ವನಿ ಬೇಕೋ ಅದನ್ನೂ ಆಯ್ಕೆಮಾಡಿಕೊಳ್ಳಬಹುದು! ಆದರೆ ಕನ್ನಡದ ಪುಸ್ತಕಗಳು ಮೋಬಿ ನಮೂನೆಯಲ್ಲಿ ದೊರಕುತ್ತಿಲ್ಲ. ಕಿಂಡಲ್ ನಲ್ಲಿ ಪಿ.ಡಿ.ಎಫ್. (ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮಾಟ್- ಕಂಪ್ಯೂಟರುಗಳಲ್ಲಿ ಬಳಸಲಾಗುವ ಅತ್ಯಂತ ಜನಪ್ರಿಯ ನಮೂನೆ) ಸಹ ಓದಬಹುದಾದ್ದರಿಂದ ಯೂನಿಕೋಡ್ ನಲ್ಲಿರುವ ಕನ್ನಡವನ್ನು ಪಿ.ಡಿ.ಎಫ್. ಮಾಡಿ ಕಿಂಡಲ್ ನಲ್ಲಿ ಓದಬಹುದು. ಇಡೀ ಪುಸ್ತಕದ ಹಾಳೆಯನ್ನೇ ಸ್ಕ್ಯಾನ್ ಮಾಡಿ ಪಿ.ಡಿ.ಎಫ್. ಮಾಡಿ ಸಹ ಓದಬಹುದು. ಇತ್ತೀಚೆಗೆ ಯಾರೋ ಪೂರ್ಣಚಂದ್ರ ತೇಜಸ್ವಿಯವರ ಹಲವಾರು ಕತೆ, ಕಾದಂಬರಿಗಳನ್ನು ಸ್ಕ್ಯಾನ್ ಮಾಡಿ, ಪಿ.ಡಿ.ಎಫ್. ಮಾಡಿ -ಮೇಲ್ ನಲ್ಲಿ ಎಲ್ಲರಿಗೂ ಹಂಚಿದ್ದರು. ನಾನು ನನ್ನ ಎರಡು ಪುಸ್ತಕಗಳನ್ನು ಇದೇ ರೀತಿ ಮಾಡಿ ಅಂತರ್ಜಾಲದಲ್ಲಿ ತೇಲಿ ಬಿಟ್ಟಿದ್ದೇನೆ. ಇದುವರೆಗೆ ಅವು ತಲಾ 3500ಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಆಗಿವೆ, ಇನ್ನೂ ಆಗುತ್ತಿವೆ. -ಪುಸ್ತಕಗಳನ್ನು ಲೇಖಕರು ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ತಲುಪಿಸಿಬಿಡಬಹುದು.
ಆನ್ಲೈನ್ ಓದುವಿಕೆ ಅಥವಾ ಇಲೆಕ್ಟ್ರಾನಿಕ್ ಕೃತಿಗಳ `ಗಾಢಓದುವಿಕೆ ಸಾಧ್ಯವಿಲ್ಲವೆನ್ನುವವರಿದ್ದಾರೆ. ಬಹುಶಃ ರೀತಿಯ ಓದುವಿಕೆ ಈಗಿನ ತಲೆಮಾರಿನವರಲ್ಲಿ ಇಲ್ಲವೆಂದೇ ಹೇಳಬಹುದು. ಏನಿದ್ದರೂ ಅವರದು `ಮೇಲಿನಓದು. ಅವರಿಗೆ ಅಷ್ಟೊಂದು ತಾಳ್ಮೆಯಿರುವುದಿಲ್ಲ ಎಂದು ದೂರುವವರಿದ್ದಾರೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹ್ಯಾರಿಪಾಟರ್ ಪುಸ್ತಕ ಪ್ರಕಟವಾದ ಇಪ್ಪತ್ತನಾಲ್ಕು ಗಂಟೆಗಳೊಳಗೆ ಇಡೀ ಪುಸ್ತಕವನ್ನು ಡಿ.ಟಿ.ಪಿ. ಮಾಡಿ ಅಂತರ್ಜಾಲದಲ್ಲಿ ತೇಲಿಬಿಡುತ್ತಿದ್ದರು. ಆದರೆ ಡಿ.ಟಿ.ಪಿ. ಮಾಡುವ ಯುವ ಪೀಳಿಗೆ ಮಧ್ಯದಲ್ಲಿ ತಮ್ಮ ಕಲ್ಪನೆಯನ್ನೂ ಸೇರಿಸಿ ಕತೆಯನ್ನು ಒಂದಷ್ಟು ಬದಲಾಯಿಸಿಯೂ ಬಿಡುತ್ತಿದ್ದರು ಎನ್ನುತ್ತಿದ್ದಳು ಪುಸ್ತಕಗಳನ್ನು ಓದುತ್ತಿದ್ದ ನನ್ನ ಮಗಳು. ಕೆಲ ವಾರಗಳ ಹಿಂದಷ್ಟೇ ಡಿಗ್ರಿ ಓದುತ್ತಿರುವ ನನ್ನ ಮಗ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ತನ್ನ ಲ್ಯಾಪ್ ಟಾಪ್ ನಲ್ಲಿ ಇಂಟರ್ನೆಟ್ ನಿಂದ ಮಾಹಿತಿ ಪಡೆದು ಓದುತ್ತಿದ್ದ. ತನ್ನ ಕಾಲೇಜಿನ ನೋಟ್ಸ್ ಜೊತೆಗೆ ಹಲವಾರು ಪಠ್ಯ ಪುಸ್ತಕಗಳ ಪುಟಗಳನ್ನು ಫೋಟೋ ಹಿಡಿದು ಅವುಗಳನ್ನು ತನ್ನ ಟ್ಯಾಬ್ಲೆಟ್ನಲ್ಲಿ ಓದುತ್ತಿದ್ದ. ಹಲವಾರು ಪಿ.ಡಿ.ಎಫ್. ರೂಪದ ಪುಸ್ತಕಗಳನ್ನು ಸಹ ತನ್ನ ಟ್ಯಾಬ್ಲೆಟ್ ನಲ್ಲಿ ಓದುತ್ತಿದ್ದ. ತಲೆಮಾರಿನವರಿಗೆ ಪುಸ್ತಕಗಳ ಬಗೆಗೆ ಅಷ್ಟೊಂದು ನಾಸ್ಟಾಲ್ಜಿಯಾ ಇಲ್ಲ. ಮಾಹಿತಿ ಕಾಗದದ ಪುಸ್ತಕಗಳ ರೂಪದಲ್ಲೇ ಇರಬೇಕೆಂದೇನಿಲ್ಲ.
ಇಂದು ವಿದೇಶಗಳಲ್ಲಿ ಮಾಲ್ ಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ `ಎಸ್ಪ್ರೆಸ್ಸೊ ಬುಕ್ ಮೆಶೀನ್ಗಳಿವೆ, ಎಸ್ಪ್ರೆಸ್ಸೊ ಕಾಫಿ ಯಂತ್ರಗಳು ಇದ್ದ ಹಾಗೆ. ನೀವು ಬೇಕಾದ ಕೃತಿಯನ್ನು ಯಂತ್ರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು, ಪುಸ್ತಕಕ್ಕೆ ಇರುವ ಹತ್ತಿಪ್ಪತ್ತು ಮುಖಪುಟಗಳಲ್ಲಿ ನಿಮಗೆ ಇಷ್ಟವಾದುದನ್ನು ಆಯ್ಕೆಮಾಡಿಕೊಂಡು ಅದರ ಹಣವನ್ನು ನಾಣ್ಯ ಹಾಕುವುದರ ಮೂಲಕ ಅಥವಾ ಕಾರ್ಡ್ ಮೂಲಕ ಪಾವತಿಸಿದರೆ ನಿಮ್ಮ ಕಣ್ಣೆದುರಿನಲ್ಲಿಯೇ ಯಂತ್ರದ ಗಾಜಿನ ಪೆಟ್ಟಿಗೆಯೊಳಗೆ ಪುಟಗಳು ಮುದ್ರಿತವಾಗುತ್ತದೆ, ಅಂಚುಗಳು ಕತ್ತರಿಸಲ್ಪಡುತ್ತವೆ ಹಾಗೂ ಪುಸ್ತಕ ನೀಟಾಗಿ ಬೈಂಡ್ ಆಗಿ ನಿಮ್ಮ ಕೈಗೆ ಜಾರಿ ಬಂದು ಬೀಳುತ್ತದೆ- ಎಲ್ಲಾ ನಾಲ್ಕು ನಿಮಿಷಗಳಲ್ಲಿ! ಇಂದಿಗೂ ಪೆಂಗ್ವಿನ್ ಪ್ರಕಾಶನ ತನ್ನ ಎಲ್ಲ ಪುಸ್ತಕಗಳನ್ನು ದಾಸ್ತಾನು ಇಟ್ಟಿರುವುದಿಲ್ಲ. ಯಾರೇ ಇಪ್ಪತ್ತೈದಕ್ಕಿಂತ ಹೆಚ್ಚು ಪ್ರತಿಗಳಿಗೆ ಬೇಡಿಕೆ ಸಲ್ಲಿಸಿದಲ್ಲಿ `ಆನ್ ಡಿಮ್ಯಾಂಡ್ಒಂದೆರಡು ದಿನದಲ್ಲಿ ಮುದ್ರಿಸಿ ಕೊಡುತ್ತಾರೆ.
-ಪುಸ್ತಕಗಳು ಪ್ರಾರಂಭವಾಗುವ ಮೊದಲೇ ಪ್ರಾರಂಭವಾದದ್ದು `ಆಡಿಯೊಅಥವಾ ಶ್ರವಣ ಪುಸ್ತಕಗಳು. ಇಡೀ ಪುಸ್ತಕವನ್ನು ಸ್ವತಃ ಲೇಖಕ ಅಥವಾ ಉತ್ತಮ ಧ್ವನಿಯುಳ್ಳವರು ಓದಿರುತ್ತಾರೆ. ಅದರ ಕ್ಯಾಸೆಟ್ ಹಾಕಿ ಜನ ಓದುವ ಬದಲು ಪುಸ್ತಕವನ್ನು ಕೇಳಿಸಿಕೊಳ್ಳುತ್ತಿದ್ದರು. ಜಪಾನಿನಲ್ಲಿ ಇವು ಸಾಕಷ್ಟು ಜನಪ್ರಿಯವಾಗಿ ದಿನಾ ಬೆಳಿಗ್ಗೆ ಮತ್ತು ಸಂಜೆ ಕಚೇರಿಗೆ ಓಡಾಡುವ ಜನ ಟ್ರೈನು, ಬಸ್ಸುಗಳಲ್ಲಿ ಕೂತು ಕಣ್ಣುಮುಚ್ಚಿಕೊಂಡು ಸಾಕಷ್ಟು ಪುಸ್ತಕಗಳ ವಾಚನವನ್ನು ಆಲಿಸುತ್ತಿದ್ದರು. ಭಾರತದಲ್ಲಿ ಪ್ರಯತ್ನವನ್ನು `ಕರಡಿ ಟೇಲ್ಸ್ಎನ್ನುವ ಮಾಲಿಕೆಯಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದರು. ಪುಸ್ತಕದ ಜೊತೆಯಲ್ಲಿ ಕ್ಯಾಸೆಟ್ ಇರುತ್ತಿತ್ತು ಹಾಗೂ ಮಕ್ಕಳಿಗೆ ಅತ್ಯಂತ ರಂಜನೀಯವಾಗಿ, ಸಂಗೀತ, ಶಬ್ದಗಳೊಡನೆ ಕತೆಯನ್ನು ಕೇಳಿಸುತ್ತಿದ್ದರು. ಮಕ್ಕಳಿಗೆ ಕತೆಗಳನ್ನು ಹೇಳುವವರೇ ಇಲ್ಲದಿರುವಾಗ ಇದು ಒಳ್ಳೆ ಪ್ರಯತ್ನವೇ ಆದರೂ ಇದರಲ್ಲಿ `ಹ್ಹೂಂಗುಡುಎಂದು ಹೇಳುವವರು ಯಾರೂ ಇಲ್ಲ. ಇಂದು ಎಂ.ಪಿ.3 ಪ್ಲೇಯರ್, ಮೊಬೈಲ್ಗಲಳಲ್ಲೆಲ್ಲಾ ಸಾಕಷ್ಟು ಶೇಖರಿಸುವ ಹಾಗೂ ಕೇಳುವ ಸೌಲಭ್ಯವಿರುವುದರಿಂದ ಎಂ.ಪಿ.3 ರೂಪದಲ್ಲಿನ ಸಾಕಷ್ಟು ಆಡಿಯೋ ಪುಸ್ತಕಗಳು ಮಾರಾಟವಾಗುತ್ತಿವೆ ಅಥವಾ ಇಂಟರ್ನೆಟ್ ನಲ್ಲಿ ಉಚಿತವಾಗಿ ಡೌನ್ಲೋಲಡ್ ಮಾಡಿಕೊಳ್ಳಲು ಸಿಗುತ್ತವೆ.
ಹಲವಾರು ಜನ -ಪುಸ್ತಕಗಳು ಕಾಗದದ ಪುಸ್ತಕ ನೀಡುವ `ಸುಖಾನುಭವನೀಡುವುದಿಲ್ಲ ಎನ್ನುತ್ತಿದ್ದಾರೆ ಹಾಗೂ ಕಾಗದದ ಪುಸ್ತಕಗಳು ಎಂದಿಗೂ ತಮ್ಮ ಕೈ ಬಿಟ್ಟು ಹೋಗುವುದಿಲ್ಲ ಎನ್ನುವ ಆಶಾಭಾವನೆ ಹೊಂದಿದ್ದಾರೆ. ಅವು ನೀಡುವ ಅನುಭವ ನಿಜಕ್ಕೂ ಮರೆಯಲಾರದಂಥದು. ಆದರೆ ನಮಗೆ ಶಾಸನಗಳನ್ನು ಅಥವಾ ತಾಳೆಗರಿಗಳನ್ನು ಕಾಲದಲ್ಲಿ ಓದುತ್ತಿದ್ದಂಥವರ ಅನುಭವ ಪಡೆದುಕೊಳ್ಳಲು ಸಾಧ್ಯವೆ? ಗ್ರಹಿಕೆ ಮತ್ತು ಅನುಭವಗಳು ಚಲನಶೀಲವಾದುವು ಹಾಗೂ ಅವುಗಳನ್ನು ರೂಪಿಸುವುದು ಆಯಾ ಕಾಲದ ಸಂದರ್ಭಗಳಷ್ಟೆ.
ಕಾಗದದ ಪುಸ್ತಕಗಳೇ ಇರಬೇಕೆಂದು ಬಯಸುವ ನಮಗೆ ಒಂದು ಕಾಲಕ್ಕೆ ಪುಸ್ತಕಗಳನ್ನೇ ವಿರೋಧಿಸುವವರೂ ಇದ್ದರೆಂಬುದು ತಿಳಿದಿಲ್ಲ. ಪುಸ್ತಕ ಮುದ್ರಣಕ್ಕೆ 17 ಮತ್ತು 18ನೇ ಶತಮಾನಗಳಲ್ಲೇ ವಿರೋಧ ವ್ಯಕ್ತವಾಗಿತ್ತು. ಆಗ ಅತ್ಯಂತ ಕಷ್ಟಪಟ್ಟು ಕೈಯಿಂದ ಬರೆದು ಸಿದ್ಧಪಡಿಸುತ್ತಿದ್ದ ಕಲಾಕೃತಿಗಳಂತಿದ್ದ ಪುಸ್ತಕಗಳ ಎದುರು ಮುದ್ರಿತ ಪುಸ್ತಕಗಳನ್ನು ನಿಕೃಷ್ಠವಾಗಿ ಕಾಣಲಾಗುತ್ತಿತ್ತು. ಪುಸ್ತಕಗಳನ್ನು ಸ್ಥಾಪಿತ `ಪ್ರಕಾಶಕರಾಗಿದ್ದ ಕ್ರೈಸ್ತ ಮಠಗಳು (ಆಗ ಮುದ್ರಣವೆಂದರೆ ಬರೇ ಬೈಬಲ್ ಮಾತ್ರ ಎನ್ನುವಂತಿತ್ತು) ಮುದ್ರಿತ ಪುಸ್ತಕಗಳು ಸಂಸ್ಕತಿ ಮತ್ತು ನಾಗರಿಕತೆಗೇ ಮಾರಕ ಎಂದು ಕರೆದವು. ಕೆಲವು ಪ್ರಕಾಶಕರನ್ನು ಅವರು ಧರ್ಮವಿರೋಧಿ ಪುಸ್ತಕಗಳನ್ನು ಪ್ರಕಟಿಸಿವೆಯೆಂದು ಯೂರೋಪಿನಲ್ಲಿ ಕಂಬಕ್ಕೆ ಕಟ್ಟಿ ಬೆಂಕಿ ಹಾಕಿ ಸುಟ್ಟುಹಾಕಿದರು. ವಿಕ್ಟರ್ ಹ್ಯೂಗೋನ `ಹಂಚ್ ಬ್ಯಾಕ್ ಆಫ್ ನಾಟ್ರೆ ಡ್ಯಾಮ್ಕೃತಿಯಲ್ಲಿ ಫ್ರೋಲೊ ಎಂಬುವವನು `ಪುಸ್ತಕ ಚರ್ಚ್ ಅನ್ನು ಕೊಲ್ಲುತ್ತದೆ, ಅಕ್ಷರ ಆಕೃತಿಯನ್ನು ಕೊಲ್ಲುತ್ತದೆಎನ್ನುತ್ತಾನೆ. 1835ರಲ್ಲಿ ಪ್ರಕಟವಾದ ಥಿಯೋಫಿಲ್ ಗೋತಿಯೇ ತನ್ನ ಕಾದಂಬರಿ `ಮ್ಯಾಮ್ಸೆಥಲ್ ಮಾಪಿನ್ನಲ್ಲಿ `ಪುಸ್ತಕ ವಾಸ್ತುಶಿಲ್ಪವನ್ನು ಕೊಂದಂತೆ ವೃತ್ತಪತ್ರಿಕೆ ಪುಸ್ತಕವನ್ನು ಕೊಲ್ಲುತ್ತಿದೆಎಂದಿದ್ದಾನೆ.
ಹೊಸ ವಿಚಾರ ಹಳೆಯ ವಿಚಾರವನ್ನು ಕೊಲ್ಲುತ್ತದೆ ಎನ್ನುವುದು ಇತ್ತೀಚಿನ ವಿಚಾರವಲ್ಲ, ಅದು ತೀರಾ ಪ್ರಾಚೀನವಾದುದು. `ಫೇಡ್ರಸ್ನಲ್ಲಿ ಪ್ಲಾಟೊ ಹೇಳಿರುವಂತೆ ಬರವಣಿಗೆಗೇ ಮೊಟ್ಟಮೊದಲು ವಿರೋಧ ವ್ಯಕ್ತವಾಗಿತ್ತು. ಅದರಲ್ಲಿರುವಂತೆ ಥ್ಯೂಟ್ ಅಥವಾ ಹರ್ಮೀಸ್ ಬರವಣಿಗೆಯನ್ನು ಮೊದಲಿಗೆ ಕಂಡುಹಿಡಿದವನು. ಆತ ತನ್ನ ಆವಿಷ್ಕಾರವನ್ನು ದೊರೆ ಫೆರೊ ಥಮುಸ್ ಗೆ ತೋರಿಸುತ್ತಾನೆ. ಆದರೆ ಥಮುಸ್ ಅದನ್ನು ತಿರಸ್ಕರಿಸುತ್ತಾನೆ. ಬರವಣಿಗೆ ಸ್ಮರಣೆ ಸಂಸ್ಕತಿಗೆ ವಿರುದ್ಧವಾದುದು ಹಾಗೂ ಅದಕ್ಕೆ ಮಾರಕವಾದುದು ಎನ್ನುತ್ತಾನೆ.
ಆದರೆ ಜರ್ಮನಿಯ ಗುಟೆನ್ಬರ್ಗ್ ಸುಮಾರು 1439ರಲ್ಲಿ ಮುದ್ರಣಯಂತ್ರ ಕಂಡುಹಿಡಿದು ಪುಸ್ತಕ ಮುದ್ರಣ ಪ್ರಾರಂಭವಾದುದರಿಂದ ಸಮಯದಲ್ಲಿ ಸಂಸ್ಕತಿ ಮತ್ತು ನಾಗರಿಕತೆಗಳು ಹಾಳಾಗುವ ಬದಲು ಮಹಿಳೆಯರು ಮತ್ತು ಬಡಜನರು ಅಕ್ಷರಸ್ಥರಾಗಲು ಕಾರಣವಾಗಿದೆ. ಅದೇ ಸಮಯದಲ್ಲಿ ಗ್ರಂಥಾಲಯಗಳು ಪ್ರಾರಂಭವಾದಾಗ ಪ್ರಕಾಶಕರೆಲ್ಲಾ ತಾವು ನಿರ್ಗತಿಕರಾಗಿಬಿಡುತ್ತೇವೆಂದು ಬೊಬ್ಬೆಯಿಟ್ಟರು. ಅಷ್ಟು ಹಳೆಯದೇಕೆ, 1939ರಲ್ಲಿ ಪೆಂಗ್ವಿನ್ ಪೇಪರ್ ಬ್ಯಾಕ್ ಪ್ರಕಟಣೆಗಳು ಪ್ರಾರಂಭವಾದಾಗ ಅದೂ ಸಹ ಮುದ್ರಣ ಉದ್ಯಮವನ್ನು ನಾಶಮಾಡುತ್ತದೆ ಎಂದಿದ್ದರು. ಆದರೆ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿಯಿಂದಾಗಿ ಪ್ರಕಾಶಕರ ಸಂಖ್ಯೆ ಹೆಚ್ಚಾಗಿದೆ ಹಾಗೂ ಪುಸ್ತಕಗಳ ಹೆಸರಿನಲ್ಲಿ ಕೆಲಸಕ್ಕೆ ಬಾರದ ಪುಸ್ತಕಗಳ ಸಂಖ್ಯೆಯ ಪ್ರಕಾಶನ ಹೆಚ್ಚಾಗಿದೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಗ್ರಂಥಾಲಯ ಇಲಾಖೆಯನ್ನು ವಂಚಿಸುವ ಪ್ರಕಾಶಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಂದೇ ಪುಸ್ತಕಕ್ಕೆ ಎರಡು ಪ್ರತ್ಯೇಕ ರಕ್ಷಾಪುಟಗಳನ್ನು ಹಾಗೂ ಇಬ್ಬರು ಪ್ರಕಾಶಕರ ಹೆಸರುಗಳನ್ನು ಹಾಕಿ ಪ್ರಕಟಿಸಿರುವುದನ್ನು ಆಯ್ಕೆ ಸಮಿತಿಯ ಸದಸ್ಯನಾಗಿರುವ ನಾನು ಸ್ವತಃ ಕಂಡಿದ್ದೇನೆ. ಸಗಟು ಖರೀದಿಗೆಂದು ಅಂತರ್ಜಾಲದಿಂದ ಪಡೆದ ಒಂದಷ್ಟು ಚಿತ್ರಗಳನ್ನು, ಕೆಲಸಕ್ಕೆ ಬಾರದ ಮಾಹಿತಿಯನ್ನು ಪ್ರಕಟಿಸಿ ಮಕ್ಕಳ ಪುಸ್ತಕಗಳೆಂದು ಐದು ಪುಟದ ಲೇಖನವನ್ನು ಮಿತಿಮೀರಿದ ದಪ್ಪಕ್ಷರಗಳಲ್ಲಿ, ಪುಟಗಟ್ಟಲೆ ಚಿತ್ರಗಳನ್ನು ಹಾಕಿ ನೂರು ಪುಟಗಳನ್ನು ಮಾಡಿ ಸಲ್ಲಿಸುವ ಹಲವಾರು ಮೈಸೂರಿನ ಪ್ರಕಾಶಕರಿದ್ದಾರೆ. ಗ್ರಂಥಾಲಯಗಳು ಪುಸ್ತಕಗಳ ಮರುಬಳಕೆಯನ್ನು ಪ್ರೋತ್ಸಾಹಿಸುತ್ತವೆ, ಆದರೆ ವಾಣಿಜ್ಯೋದ್ಯಮ ಕಾಗದ ಪೋಲು ಮಾಡುವುದನ್ನು ತನ್ಮೂಲಕ ಲಾಭ ಮಾಡಿಕೊಳ್ಳುವುದನ್ನು ಬಯಸುತ್ತದೆ. ನಾವು ಪುಸ್ತಕ ಕೊಂಡಾಗ ಬರೇ ಪುಸ್ತಕ ಕೊಳ್ಳುವುದಿಲ್ಲ, ಪುಸ್ತಕದ ಕಾಗದಕ್ಕಾಗಿ ಕತ್ತರಿಸಿದ ಮರವನ್ನೂ ಕೊಳ್ಳುತ್ತೇವೆನ್ನುತ್ತಾರೆ ಪರಿಸರವಾದಿಗಳು.
-ಬುಕ್ ರೀಡರ್ ಗಳು ಧಾರಕಗಳಷ್ಟೆ, ಅವೇ ಅಂತಸ್ಸತ್ವವಲ್ಲ. ಆದರೆ ಎಲೆಕ್ಟ್ರಾನಿಕ್ ಪಠ್ಯಗಳು ಸಾಧನ ಅವಲಂಬಿಗಳು ಅಂದರೆ -ಬುಕ್ ರೀಡರ್ ಅಥವಾ ಅಂತಹುದೇ ಸಾಧನ ಇಲ್ಲದಿದ್ದಲ್ಲಿ ಅವುಗಳನ್ನು ಓದಲು ಸಾಧ್ಯವಿಲ್ಲ, ಅಲ್ಲದೆ ಅವುಗಳಿಗೆ ಹೊಂದಿಕೊಳ್ಳುವ ನಮೂನೆಯಲ್ಲಿಯೇ (ಫಾಮ್ರ್ಯಾಟ್) ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಓದಲು ವಿದ್ಯುತ್ ಸೌಲಭ್ಯ ಬೇಕೇ ಬೇಕು. ಅವುಗಳನ್ನು ನೀವು ಸಾಕಷ್ಟು ಚಾರ್ಜ್ ಮಾಡಿಕೊಂಡಿರಬೇಕು. ತಂತ್ರಜ್ಞಾನ ಶರವೇಗದಲ್ಲಿ ಸಾಗುತ್ತಿರುವ ದಿನಗಳಲ್ಲಿ ಇಂದು ಇರುವ ತಂತ್ರಜ್ಞಾನ ನಾಳೆ ಇರುವುದಿಲ್ಲ. ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಎಲ್ಲವೂ ಬದಲಾಗುತ್ತಿರುತ್ತವೆ. ನಿಮ್ಮ ಎಲೆಕ್ಟ್ರಾನಿಕ್ ಪುಸ್ತಕ ಸಂಗ್ರಹವನ್ನು ಹೊಸ ನಮೂನೆಗೆ ಬದಲಾಯಿಸಿಕೊಳ್ಳದಿದ್ದಲ್ಲಿ ಅವೆಲ್ಲವೂ ಉಪಯೋಗಕ್ಕೆ ಬರುವುದಿಲ್ಲ. ಆಧುನಿಕ  ವಿದ್ಯುನ್ಮಾನ ಶೇಖರಣಾ ವಿಧಾನಗಳು ಅತ್ಯಂತ ಸೀಮಿತ ಶೇಖರಣಾವಧಿಯನ್ನು ಹೊಂದಿವೆ. ವೀಡಿಯೋ ಕ್ಯಾಸೆಟ್ನಿಂದ ಸಿ.ಡಿ. ಬಂತು ಡುಂ ಡುಂ ಡುಂ., ಸಿ.ಡಿ.ಯಿಂದ ಡಿ.ವಿ.ಡಿ. ಬಂತು ಡುಂ ಡುಂ ಡುಂ., ಡಿ.ವಿ.ಡಿ.ಯಿಂದ ಬ್ಲೂ ರೇ ಬಂತು ಡುಂ ಡುಂ ಡುಂ. ಬ್ಲೂ ರೇನಿಂದ...
ಮತ್ತೊಂದು ಆತಂಕವಿದೆ. ಸೌರ ವಿಕಿರಣಸ್ಫೋಟ ತೀವ್ರ ಪ್ರಮಾಣದಲ್ಲಿ ಉಂಟಾದಲ್ಲಿ ಎಲ್ಲಾ ವಿದ್ಯುನ್ಮಾನ ಮಾಹಿತಿ ಅಳಿಸಿಹೋಗುತ್ತದೆನ್ನುವ ಹೆದರಿಕೆ ವಿಜ್ಞಾನಿಗಳಿಗಿದೆ. ರೀತಿ ಆದಲ್ಲಿ ಚಿಂದಿಯಾಗಿದ್ದರೂ ಉಳಿಯುವುದು ಹಾಗೂ ಓದಲು ಸಿಗುವುದು ಮುದ್ರಿತ ಪುಸ್ತಕಗಳೇ! ಆಗ ಯಾವುದೇ ಕಂಪ್ಯೂಟರುಗಳಾಗಲೀ, -ಬುಕ್ ರೀಡರ್ ಗಳಾಗಲೀ ಉಳಿದಿರುವುದಿಲ್ಲ. ನಿಮ್ಮ ಡಿಜಿಟಲ್ ಸಂಗ್ರಹಣೆ ಎಲ್ಲಾ ಖಾಲಿ ಖಾಲಿಯಾಗಿರುತ್ತದೆ! ಏನೇ ಆದರೂ ವಿಜ್ಞಾನ ಮತ್ತು ತಂತ್ರಜ್ಞಾನಗಳು ನಿಲ್ಲುವುದಿಲ್ಲ. ನಾವು ಯಾವುದನ್ನು ಸಂಸ್ಕತಿ ಎಂದು ಕರೆಯುತ್ತೇವೆಯೋ ಅದರ ವ್ಯಾಖ್ಯಾನವೂ ಸಹ ಸಾಪೇಕ್ಷವಾದುದು. ಇಂದಲ್ಲ ನಾಳೆ ಇಲೆಕ್ಟ್ರಾನಿಕ್ ಪುಸ್ತಕಗಳು ಕಾಗದದ ಪುಸ್ತಕಗಳನ್ನು ಇಲ್ಲವಾಗುತ್ತವೆ ಏಕೆಂದರೆ, ಕಾಗದದ ಪುಸ್ತಕ ಮುದ್ರಣ ಮತ್ತು ಮಾರಾಟ ಆರ್ಥಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಲಾಭದಾಯಕವಾಗುವುದಿಲ್ಲ. ಅಷ್ಟಲ್ಲದೆ ಮುಂದೆ ಅಕ್ಷರ ಮತ್ತಾವ ರೂಪದಲ್ಲಿ ಬರುತ್ತದೋ ಯಾರಿಗೆ ಗೊತ್ತು? ಏನೇ ಆದರೂ ಪುಸ್ತಕಕ್ಕೆ ಅಳಿವಿದ್ದರೂ ಅಕ್ಷರಕ್ಕೆ ಅಳಿವಿರುವುದಿಲ್ಲ.

j.balakrishna@gmail.com