ಸೃಜನಶೀಲ ಬರವಣಿಗೆ ಬಗೆಗಿನ ವಿರೋಧ ಹಾಗೂ ಕೃತಿ ನಿಷೇಧ ಕುರಿತಂತೆ ನಡೆಯುತ್ತಿರುವ `ಪ್ರಜಾವಾಣಿ'ಯ ಚರ್ಚೆಯಲ್ಲಿ 2-10-13ರಂದು ಪ್ರಕಟವಾದ ನನ್ನ ಅಭಿಪ್ರಾಯ:
ಸೃಜನಶೀಲ ಬರವಣಿಗೆ ಬಗೆಗಿನ ವಿರೋಧ ಹಾಗೂ ಕೃತಿ ನಿಷೇಧದ ಈಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನಗೆ ನೆನಪಾದದ್ದು ಫ್ರಾಂಕ್ಸ್ವಾ ಟ್ರಫೋನ 1966ರ ಸಿನೆಮಾ `ಫ್ಯಾರೆನ್ ಹೈಟ್ 451'. ಆ
ಸಿನೆಮಾ 1953ರ ರೇ ಬ್ರಾಡ್ಬರಿಯ ಅದೇ ಹೆಸರಿನ ಪ್ರಖ್ಯಾತ ಕಾದಂಬರಿ ಆಧಾರಿತವಾದದ್ದು. ಫ್ಯೂಚರಿಸ್ಟಿಕ್ ಸಿನೆಮಾ ಆದ ಅದರಲ್ಲಿ ಸರ್ವಾಧಿಕಾರದ ಆಡಳಿತದಲ್ಲಿರುವ ದೇಶವೊಂದರಲ್ಲಿ ಎಲ್ಲ ಪುಸ್ತಕಗಳನ್ನು ನಿಷೇಧಿಸಲಾಗಿರುತ್ತದೆ.
ಪುಸ್ತಕಗಳನ್ನು ಓದುವುದು ಹಾಗೂ ಅವುಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಷ್ಟೇ ಅಲ್ಲ ಪುಸ್ತಕಗಳನ್ನು ತಮ್ಮ ಮನೆಗಳಲ್ಲಿ ಅಡಗಿಸಿಕೊಂಡಿರುವವರನ್ನು ಹುಡುಕಿ ಅವರನ್ನು ಬಂಧಿಸಿ ಆ ಪುಸ್ತಕಗಳನ್ನು ಸುಟ್ಟುಹಾಕಲು `ಫೈರ್ ಮೆನ್' ದಂಡೇ ಇರುತ್ತದೆ. ಅಂತಹ ದಂಡಿನಲ್ಲಿ ಕೆಲಸ ಮಾಡುವ ಸಿನೆಮಾದ ನಾಯಕ ಮೊಂಟ್ಯಾಗ್ ತನ್ನ ಮನೆಗೆ ಹಿಂದಿರುಗುವಾಗ ಒಬ್ಬ ಹುಡುಗಿ ಭೇಟಿಯಾಗುತ್ತಾಳೆ ಹಾಗೂ ಆತ ಒಬ್ಬ ಫೈರ್ ಮೆನ್ ಎಂದು ತಿಳಿದು, `ಫೈರ್ ಮೆನ್ ಬೆಂಕಿ ಆರಿಸುವವರಲ್ಲವೇ? ನೀವೇಕೆ ಬೆಂಕಿ ಇಡುತ್ತೀರಿ? ಪುಸ್ತಕಗಳನ್ನು ಸುಡುತ್ತೀರಿ?' ಎಂದಾಗ ಆತ, `ಎಂಥ ವಿಚಿತ್ರ ವಿಚಾರ! ಬೆಂಕಿ ಆರಿಸುವುದೆ? ಇಲ್ಲ ನಾವು ಬೆಂಕಿ ಇಡುವವರು. ಪುಸ್ತಕಗಳು ನಿಷೇಧಿತವಾದುವು, ಅಪಾಯಕಾರಿಯಾದುವು ಹಾಗೂ ಮನುಷ್ಯರ ಮನಸ್ಸನ್ನು ಹಾಳುಮಾಡುವಂಥವು. ಪುಸ್ತಕ ಓದುವವರು ಸಮಾಜಘಾತುಕರು. ಅಂಥವರನ್ನು ಬಂಧಿಸಿ ಅವರಿಗೆ `ಮರುಶಿಕ್ಷಣ' ನೀಡಬೇಕು ಹಾಗೂ ಪುಸ್ತಕಗಳನ್ನು ಸುಡಲೇಬೇಕು' ಎನ್ನುತ್ತಾನೆ.
ಆದರೆ ಮೊಂಟ್ಯಾಗ್ ನಲ್ಲಿ ಕ್ರಮೇಣ ಪುಸ್ತಕಗಳ ಬಗೆಗೆ ಆಸಕ್ತಿ, ಒಲವು ಮೂಡಿ ಪ್ರತಿ ಸಾರಿ ಪುಸ್ತಕಗಳನ್ನು ಸುಡುವಾಗ ತನ್ನ ಸಹೋದ್ಯೋಗಿಗಳಿಗೆ ತಿಳಿಯದಂತೆ ಪುಸ್ತಕಗಳನ್ನು ಕದ್ದು ಮನೆಗೆ ತಂದು ತನ್ನ ಹೆಂಡತಿಗೂ ತಿಳಿಯದಂತೆ ಓದಿ ಅಡಗಿಸಿಡುತ್ತಿರುತ್ತಾನೆ. ಅವನಂಥ `ಸಮಾಜಘಾತುಕ'ನನ್ನು ಅವನ ಪತ್ನಿಯೇ ಪೆÇೀಲೀಸಿನವರಿಗೆ ಹಿಡಿದುಕೊಡುತ್ತಾಳೆ. ಇಲ್ಲಿ ಜಾರ್ಜ್ ಆರ್ವೆಲ್ಲನ `1984' ಕಾದಂಬರಿಯ `ಥಾಟ್ ಪೆÇಲೀಸ್' ಸಹ ನೆನಪು ಮಾಡಿಕೊಳ್ಳಬಹುದು. ಫ್ಯಾರೆನ್ ಹೈಟ್ 451 ಎಂದರೆ ಕಾಗದಕ್ಕೆ ಬೆಂಕಿ ಹೊತ್ತಿಕೊಳ್ಳುವ ಉಷ್ಣತೆ.
ಬಹುಪಾಲು ಜಗತ್ತಿನ ಎಲ್ಲಾ ಸರ್ವಾಧಿಕಾರಿಗಳ ಆಡಳಿತದಲ್ಲೂ ಈ ರೀತಿಯ ವಿಚಾರಗಳ ದಮನಗಳ ಉದಾಹರಣೆಯಿದೆ. ಆತಂಕದ ಸಂಗತಿಯೆಂದರೆ ಇಡೀ ಜಗತ್ತೇ ಕ್ರಮೇಣ ಸರ್ವಾಧಿಕಾರದ ಬಲೆಗೆ ಜಾರುತ್ತಿದೆ. ಆದರೆ ಈ ಸರ್ವಾಧಿಕಾರ ಯಾವುದೇ ತತ್ವ ಅಥವಾ ಸಿದ್ಧಾಂತಗಳ ಆಧಾರಿತವಾದುದಲ್ಲ; ದುರಂತವೆಂದರೆ ಅದು ಧರ್ಮಾಧಾರಿತವಾದದ್ದು. ಈ ರೀತಿಯ ಧರ್ಮಾಧಾರಿತ ಸರ್ವಾಧಿಕಾರ ಕಂಡುಕಾಣದಂತೆ ಎಲ್ಲರ ಬದುಕಿನ ಎಲ್ಲ ಆಚಾರ ವಿಚಾರಗಳನ್ನು ನಿಯಂತ್ರಿಸುವತ್ತ ಸಾಗುತ್ತಿದೆ, ಹಿಂದೆಂದೂ ಇಲ್ಲದಷ್ಟು ಪ್ರಬಲವಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನಗಳು ಮುಂದುವರಿದಂತೆ, ಈ ವಿಶ್ವದ ರಹಸ್ಯಗಳನ್ನು ನಾವು ಅರಿತಂತೆ ಬಹುಶಃ ಧಾರ್ಮಿಕ ವಿಚಾರಗಳು ಕಡಿಮೆಯಾಗಬಹುದೆಂದುಕೊಂಡಿದ್ದರೆ ಅದು ಸುಳ್ಳು. ಯಾವ ಭೌತಿಕ ನಿಯಮಗಳು ದೇವರು ಧರ್ಮದ ಅಡಿಪಾಯವನ್ನೇ ಅಲುಗಾಡಿಸುತ್ತವೆಯೋ ಆ ಭೌತಿಕ ನಿಯಮಗಳನುಸಾರ ಉಡಾಯಿಸಲಾಗುವ ಉಪಗ್ರಹವೊಂದನ್ನು ಉಡಾಯಿಸುವ ಮುನ್ನ ತಿರುಪತಿಗೆ ಹೋಗಿ ಪೂಜೆ ಮಾಡಿಸಿ ಬರುವಂತಹ ವಿಜ್ಞಾನಿಗಳು ಇರುವವರೆಗೂ ವಿಜ್ಞಾನ ಸಹ ಧರ್ಮದ ಬಲೆಯಲ್ಲೇ ಸಿಕ್ಕಿಹಾಕಿಕೊಂಡಿರುತ್ತದೆ. ಹದಿನಾರನೇ ಶತಮಾನದಲ್ಲಿಯೇ ಕೋಪರ್ನಿಕಸ್ ನ ಸಮಯದಲ್ಲಿ ಧರ್ಮದ ಬಿಗಿಮುಷ್ಠಿಯಿಂದ ವಿಜ್ಞಾನಕ್ಕೆ ಬಿಡುಗಡೆ ಸಿಕ್ಕರೂ ಇಂದಿಗೂ ನಮ್ಮ ವಿಜ್ಞಾನಿಗಳು ಧರ್ಮದ ಸಡಿಲ ಉಸುಬಿನಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಕೋಪರ್ನಿಕಸ್, ಗೆಲಿಲಿಯೋರ ಹೊಸ ವಿಚಾರಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಆಗಿನ ಧಾರ್ಮಿಕ ಮನಸ್ಥಿತಿ ಡಾರ್ವಿನ್ನನ ಹೊಸ ವೈಜ್ಞಾನಿಕ ವಿಚಾರವಾದ ವಿಕಾಸವಾದಕ್ಕೂ ಸಹ ತನ್ನ ಅಸಹನೆ ತೋರಿತು. `ತೋರಿತು’ ಎಂದು ಭೂತಕಾಲದಲ್ಲಿ ಹೇಳಿ ಮರೆತುಬಿಡುವಂಥದಲ್ಲ, ಏಕೆಂದರೆ ಇಂದು ನಾವು ಅತ್ಯಂತ ವೈಜ್ಞಾನಿಕವಾಗಿ ಮುಂದುವರಿದ ದೇಶ ಎಂದು ಹೇಳಿಕೊಳ್ಳುವ ಉತ್ತರ ಅಮೆರಿಕಾದಲ್ಲಿ ಇಂದಿಗೂ `ಸೃಷ್ಟಿವಾದ’ವನ್ನೇ ಬೆಂಬಲಿಸುವ ಹಾಗೂ ಶಾಲೆಗಳಲ್ಲಿ ಡಾರ್ವಿನ್ನನ ವಿಕಾಸವಾದವನ್ನು ಬೋಧಿಸಬಾರದೆಂದು ಹೇಳುವ ದೊಡ್ಡ ಜನಸಮೂಹವೇ ಇದೆ; ಅದನ್ನು ಬೆಂಬಲಿಸಲು ಜಾನ್ ಕೆರ್ರಿಯವರನ್ನೊಳಗೊಂಡಂತೆ ಇತರ ಪ್ರಬಲ ರಾಜಕಾರಣಿಗಳೂ ಇದ್ದಾರೆ.
ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರ ಇದ್ದಾಗ ಹಾಗೂ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಇದ್ದಾಗ ಎಷ್ಟು ವ್ಯವಸ್ಥಿತವಾಗಿ ಶಿಕ್ಷಣದಲ್ಲಿ ಹಾಗೂ ಪಠ್ಯವಿಷಯಗಳಲ್ಲಿ ಬದಲಾವಣೆ ತರಲು ಹಾಗೂ ಶಾಲೆಯ ಗ್ರಂಥಾಲಯಗಳಿಗೆ ಎಂಥ ಪುಸ್ತಕಗಳನ್ನು ತುಂಬಲು ಪ್ರಯತ್ನಿಸಲಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲೆಂಡಿನಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಕೆಡುಕೆನ್ನಿಸುತ್ತದೆ ಎನ್ನುವ ಉದ್ದೇಶದಿಂದ ಹಲವಾರು ಶಾಲೆಗಳ ಪುಸ್ತಕಗಳಲ್ಲಿ `ತ್ರೀ ಲಿಟ್ಲ್ ಪಿಗ್ಸ್' ಪಾಠವನ್ನೇ ತೆಗೆದಿದ್ದಾರಂತೆ. ನಾವು ಕಾಣುತ್ತಿರುವಂತೆ ಈ ಹಿಂದೆ ಮನೆಗಳಲ್ಲಿ ಆಚರಿಸುತ್ತಿದ್ದ ಹಬ್ಬ ಹರಿದಿನಗಳು ಇಂದು ಸಾರ್ವಜನಿಕ ಕಾರ್ಯಕ್ರಮಗಳಾಗಿಬಿಡುತ್ತಿವೆ. ನಾವು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ತೋರಿಸಿಕೊಳ್ಳಲೋ ಎಂಬಂತೆ ತಾವು ಧರಿಸುವ ಬಟ್ಟೆಗಳ ಮೂಲಕವೋ ಅಥವಾ ಬಹಿರಂಗವಾಗಿ ಕಾಣುವ ಚಿಹ್ನೆಗಳ ಮೂಲಕವೋ ಪ್ರದರ್ಶಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರ ಜೊತೆಗೇ ಇತರ ವಿಚಾರಗಳ ಬಗೆಗಿನ ಅವರ ಅಸಹನೆಯೂ ಹೆಚ್ಚುತ್ತಿದೆ. ಇಂದು ಇತರ ಧರ್ಮ ಆಚರಣೆ ಹಾಗೂ ಅವುಗಳ ವಿಚಾರಗಳ ಬಗೆಗೆ ಇರುವಷ್ಟು ಅಸಹನೆ ಹಿಂದೆಂದೂ ಇರಲಿಲ್ಲ. ಹಲವಾರು ಸಂದರ್ಭಗಳಲ್ಲಿ ಆ ರೀತಿಯ ಅಸಹನೆ ಹೆಮ್ಮೆಯ ಸಂಕೇತವಾಗುತ್ತಿದೆ. ಈ ಹೆಮ್ಮೆ ಅಹಂಕಾರಗಳೇ ಇಂದು ಜಗತ್ತಿನೆಲ್ಲೆಡೆಯ ಧರ್ಮಾಧಾರಿತ ಹಿಂಸೆಗೆ ಕಾರಣವಾಗುತ್ತಿದೆ. ಆದುದರಿಂದ `ದಯೆಯೇ ಧರ್ಮದ ಮೂಲವಯ್ಯಾ’ ಎಂಬುದನ್ನು `ಹಿಂಸೆಯೇ ಧರ್ಮದ ಮೂಲವಯ್ಯಾ!’ ಎಂದು ಬದಲಿಸಿಕೊಳ್ಳಬೇಕಾಗಿದೆ.
ಯೋಗೇಶ್ ಮಾಸ್ಟರ್ರವರ `ಡುಂಢಿ'ಯಲ್ಲಿನ ಗಣೇಶನ ಚಿತ್ರಣ ಬಹಳಷ್ಟು ಜನರ ಮನಸ್ಸನ್ನು `ನೋಯಿಸಿದ್ದಲ್ಲಿ' ಪ್ರತಿ ವರ್ಷ ಗಣೇಶನ ಹಬ್ಬದ ಸಮಯಕ್ಕೆ ನೂರಾರು ಗಣೇಶನ ವ್ಯಂಗ್ಯ ಚಿತ್ರ ಬರೆಯುವ ವ್ಯಂಗ್ಯ ಚಿತ್ರಕಾರರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ ಹಾಗೂ ಅದೇ ರೀತಿ ಗಣೇಶನ ಮೂರ್ತಿಗಳನ್ನು ತಯಾರಿಸುವವರು ಸಹ. ಕೆ.ವೈ.ನಾರಾಯಣಸ್ವಾಮಿಯವರ `ಚಕ್ರರತ್ನ'ದಲ್ಲಿನ ತ್ಯಾಗರೂಪಿ ಬಾಹುಬಲಿ `ಜಗದ ಗಾಯಗಳ ಹೊಲೆಯುವ' ಚಮ್ಮಾರನಾಗಿರುವ ರೂಪಕದಲ್ಲಿ `ಕೀಳುತನ'ವನ್ನು ಕಾಣುವ ಜನರ ಮನಸ್ಥಿತಿ ಎಂಥದಿರಬಹುದು? ಸಾದತ್ ಹಸನ್ ಮಂಟೋನ `ಬ್ಲ್ಯಾಕ್ ಮಾರ್ಜಿನೇಲಿಯಾ'ದಿಂದ ಆಯ್ದ ಕತೆಯೊಂದು ಇಲ್ಲಿದೆ:
`ಮೊಹಲ್ಲಾ ಒಂದರ ಮೇಲೆ ದಾಳಿ ನಡೆಸಲಾಯಿತು ಹಾಗೂ ಕೆಲ ಅಲ್ಪಸಂಖ್ಯಾತರನ್ನು ಚಾಕುವಿನಿಂದ ತಿವಿದು ಸಾಯಿಸಲಾಯಿತು. ಇತರರು ಜೀವಭಯದಿಂದ ಅಲ್ಲಿಂದ ಓಡಿಹೋದರು. ಇದನ್ನೆಲ್ಲಾ ಕಂಡ ದಂಪತಿಗಳಿಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವಿತುಕೊಂಡರು. ಅವರಿಬ್ಬರೂ ಎರಡು ಹಗಲು ಮತ್ತು ಎರಡು ರಾತ್ರಿ ಕೊಲೆಗಡುಕರ ಹೆದರಿಕೆಯಿಂದ ಅಲ್ಲೇ ಅವಿತುಕೊಂಡಿದ್ದರು. ಆದರೆ ಯಾರೂ ಬರಲಿಲ್ಲ. ಮತ್ತೆರಡು ದಿನಗಳು ಕಳೆದವು. ಅವರಲ್ಲಿನ ಹೆದರಿಕೆ ಕಡಿಮೆಯಾಯಿತು. ಆದರೆ ಹಸಿವು, ನೀರಡಿಕೆ ತೀವ್ರವಾಗಿ ಕಾಡತೊಡಗಿತು. ಇನ್ನೂ ನಾಲ್ಕು ದಿನಗಳು ಕಳೆದವು. ಈಗ ಅವರನ್ನು ಸಾವಿನ ಹೆದರಿಕೆ ಕಾಡುತ್ತಿರಲಿಲ್ಲ. ಅವರಿಗೆ ಬದುಕು ಅರ್ಥಹೀನ ಎನ್ನಿಸತೊಡಗಿತ್ತು. ಅವಿತುಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದರು. ಮೊಹಲ್ಲಾದ ಜನರಿಗೆ ತಮ್ಮನ್ನು ಒಪ್ಪಿಸಿಕೊಂಡ ಗಂಡ, ಕ್ಷೀಣ ದನಿಯಲ್ಲಿ ಹೇಳಿದ, `ನಮ್ಮನ್ನು ನಿಮಗೊಪ್ಪಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ.'
ಈ ಮಾತುಗಳನ್ನು ಆ ಮೊಹಲ್ಲಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರು ಜೈನರಾಗಿದ್ದರು. `ನಮ್ಮ ಧರ್ಮದಲ್ಲಿ ಕೊಲ್ಲುವುದು ಅಪರಾಧ' ಎಂದರು. ಅವರೆಲ್ಲಾ ಸೇರಿ ಆ ಗಂಡಹೆಂಡಿರನ್ನು ಹಿಡಿದು ಮತ್ತೊಂದು ಮೊಹಲ್ಲಾದ ಬೇರೊಂದು ಕೋಮಿನ ಜನರಿಗೆ ಸೂಕ್ತವಾಗಿ ವಿಲೇವಾರಿ ಮಾಡಲು ಒಪ್ಪಿಸಿದರು.
`ಪ್ರಜಾವಾಣಿ’ 02/10/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ