ಭಾನುವಾರ, ಏಪ್ರಿಲ್ 27, 2014
ಗುರುವಾರ, ಏಪ್ರಿಲ್ 10, 2014
ಮುಲ್ಲಾ ನಸ್ರುದ್ದೀನ್ ಕತೆಗಳು- 27ನೇ ಕಂತು
ಏಪ್ರಿಲ್ 2014ರ `ಸಂವಾದ' ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 27ನೇ ಕಂತು
ಚಿತ್ರಗಳು: ಮುರಳೀಧರ ರಾಠ
ಮೌನದ ಮೌಲ್ಯ
ಒಂದು ದಿವಸ ಮುಲ್ಲಾ ನಸ್ರುದ್ದೀನ್ ಮಾರುಕಟ್ಟೆಯಲ್ಲಿ ಹೋಗುತ್ತಿರುವಾಗ ಅಲ್ಲಿ ಪಂಜರದಲ್ಲಿದ್ದ ಸಣ್ಣ ಸಣ್ಣ ಪಕ್ಷಿಗಳನ್ನು ಐನೂರು-ಸಾವಿರದಂತೆ ಮಾರಾಟ ಮಾಡುತ್ತಿದ್ದುದನ್ನು ನೋಡಿದ. `ಅರೆ! ನನ್ನ ಬಳಿ ಇವುಗಳಿಗಿಂತ ದೊಡ್ಡ ಪಕ್ಷಿಯಿದೆ. ಇಷ್ಟು ಸಣ್ಣ ಪಕ್ಷಿಗಳಿಗೇ ಜನ ಸಾವಿರ ರೂಪಾಯಿ ಕೊಡುವರಾದರೆ ನನ್ನ ದೊಡ್ಡ ಪಕ್ಷಿಗೆ ಇದರ ಹತ್ತು ಪಟ್ಟು ಹಣ ಸಿಗಬಹುದು’ ಎಂದು ಆಲೋಚಿಸಿ ಮನೆಗೆ ಹೋಗಿ ತನ್ನ ಕೋಳಿಯನ್ನು ಮಾರಲು ಮಾರುಕಟ್ಟೆಗೆ ಬಂದ.
`ನೋಡಿ ಜನರೇ, ಮೋಸ ಹೋಗಬೇಡಿ. ನನ್ನ ಪಕ್ಷಿಗಿಂತ ಸಣ್ಣ ಪಕ್ಷಿಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ. ಮೋಸಹೋಗಬೇಡಿ!!’ ಎಂದು ಕೂಗಿ ತನ್ನ ಕೋಳಿಯನ್ನು ಮಾರಾಟಕ್ಕಿಟ್ಟ.
`ಹೇ, ನಸ್ರುದ್ದೀನ್, ದಡ್ಡನಂತೆ ಮಾತನಾಡಬೇಡ. ಆ ಸಣ್ಣ ಪಕ್ಷಿಗಳು ಗಿಳಿಗಳು- ಮಾತನಾಡುವ ಗಿಳಿಗಳು. ಅವಕ್ಕೇ ಏಕೆ ಹೆಚ್ಚು ಬೆಲೆಯೆಂದರೆ ಅವು ಮಾತನಾಡುತ್ತವೆ’ ಎಂದ ಅಲ್ಲೇ ಇದ್ದ ವ್ಯಕ್ತಿಯೊಬ್ಬ.
`ದಡ್ಡ ನಾನಲ್ಲ, ನೀನು’ ಎಂದ ಮುಲ್ಲಾ ಆ ವ್ಯಕ್ತಿಗೆ, `ನೀವೆಲ್ಲಾ ಮಾತಿಗೆ ಹೆಚ್ಚು ಬೆಲೆ ಕೊಡುವವರು. ಆ ಪಕ್ಷಿಗಳು ಮಾತಾಡುತ್ತವೆ ಎಂದ ಮಾತ್ರಕ್ಕೆ ಅವುಗಳಿಗೆ ಹೆಚ್ಚು ಬೆಲೆ ಕೊಡಲು ನೀವು ಸಿದ್ಧರಿದ್ದೀರಾ. ನನ್ನ ದೊಡ್ಡ ಪಕ್ಷಿಗೆ ಉದಾತ್ತ ಚಿಂತನೆಗಳು ಇಲ್ಲ ಎಂದಲ್ಲ. ಅದಕ್ಕೂ ಮಹತ್ತರ ಚಿಂತನೆಗಳಿವೆ, ಆಲೋಚನೆಗಳಿವೆ. ಆದರೆ ನನ್ನ ಪಕ್ಷಿ ಪಟ ಪಟ ಮಾತನಾಡುತ್ತಾ ಜನರಿಗೆ ಕಿರಿಕಿರಿ ಉಂಟುಮಾಡುವುದಿಲ್ಲ’ ಎಂದ ನಸ್ರುದ್ದೀನ್.
ಅಳು ಮತ್ತು ನಗು
ಯಾರೋ ಒಬ್ಬ ವ್ಯಕ್ತಿಗೆ ಒಂದು ದಿನ ಒಂದು ವಿಚಿತ್ರವಾದ ಸಣ್ಣ ಉಪಕರಣ ಸಿಕ್ಕಿತು. ಅದು ಏನೆಂದು ಅವನಿಗೆ ತಿಳಿಯಲಿಲ್ಲ. ಸರ್ವಜ್ಞಾನಿ ಮುಲ್ಲಾ ನಸ್ರುದ್ದೀನನಿಗೆ ಅದನ್ನು ತೋರಿಸಿ ಅದೇನೆಂದು ಕೇಳೋಣವೆಂದು ಹೊರಟ. ಮುಲ್ಲಾನಿಗೆ ತೋರಿಸಿ ತನಗೆ ಅದೇನೆಂದು ತಿಳಿಯುತ್ತಿಲ್ಲ ಆದುದರಿಂದ ಆ ವಸ್ತು ಏನಿರಬಹುದು ಎಂಬುದನ್ನು ವಿವರಿಸುವಂತೆ ಕೇಳಿಕೊಂಡ. ಅದನ್ನು ನೋಡಿದ ಮುಲ್ಲಾ ಒಮ್ಮೆ ಆ ವಸ್ತುವನ್ನು ನೋಡಿ ಮತ್ತೊಮ್ಮೆ ಆ ವ್ಯಕ್ತಿಯನ್ನು ನೋಡಿ ಜೋರಾಗಿ ಅಳಲು ಪ್ರಾರಂಭಿಸಿದ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ನಗಲು ಪ್ರಾರಂಭಿಸಿದ. ಆ ವ್ಯಕ್ತಿಗೆ ಮುಲ್ಲಾ ನಡವಳಿಕೆ ವಿಚಿತ್ರವೆನ್ನಿಸಿತು.
`ಮುಲ್ಲಾ ಅದನ್ನು ನೋಡಿ ಅತ್ತದ್ದು ಏಕೆ, ನಂತರ ಜೋರಾಗಿ ನಕ್ಕಿದ್ದು ಏಕೆ?’ ಎಂದು ಆ ವ್ಯಕ್ತಿ ಕೇಳಿದ.
`ನಾನು ಮೊದಲು ಜೋರಾಗಿ ಅತ್ತದ್ದು, ಅಂತಹ ಸಣ್ಣ ಉಪಕರಣ ಏನೆಂದು ನಿನಗೆ ತಿಳಿದಿಲ್ಲವಲ್ಲ ಎಂಬ ಅನುಕಂಪದಿಂದ. ನಂತರ ಅರಿವಾಯಿತು ನನಗೂ ಅದರ ಬಗ್ಗೆ ಏನೇನೂ ತಿಳಿದಿಲ್ಲ ಎಂದು. ಅದಕ್ಕೇ ಜೋರಾಗಿ ನಕ್ಕೆ’ ಎಂದ ಮುಲ್ಲಾ ಆ ಉಪಕರಣ ಹಿಂದಿರುಗಿಸುತ್ತಾ.
ಬದಲಾವಣೆ
ಮುಲ್ಲಾ ನಸ್ರುದ್ದೀನ್ ಅಜ್ಜನಾಗಿದ್ದ. ಒಮ್ಮೆ ಗೆಳೆಯರ ಜೊತೆ ಕುಳಿತು ತನ್ನ ಗತಕಾಲವನ್ನು ಮೆಲುಕು ಹಾಕುತ್ತಾ ಕೂತಿದ್ದ.
`ನಾನು ಚಿಕ್ಕವನಾಗಿದ್ದಾಗ ನನ್ನಲ್ಲಿ ಆದಮ್ಯ ಉತ್ಸಾಹವಿತ್ತು, ಕಿಚ್ಚಿತ್ತು. ಜಗತ್ತಿನ ಪ್ರತಿಯೊಬ್ಬರನ್ನೂ ಎಚ್ಚರಿಸಬೇಕೆಂಬ ಮಹದಾಕಾಂಕ್ಷೆ ಇತ್ತು. ಹೋ ದೇವರೇ! ಇಡೀ ಜಗತ್ತನ್ನು ಬದಲಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೆ.’
`ನಾನು ಮಧ್ಯ ವಯಸ್ಕನಾಗಿದ್ದಾಗ, ನನಗೆ ಇದ್ದಕ್ಕಿದ್ದಂತೆ ಒಂದು ದಿನ ನನ್ನ ಅರ್ಧ ಆಯಸ್ಸು ಮುಗಿದುಹೋಗಿದೆ ಹಾಗೂ ನಾನು ಯಾರನ್ನೂ ಬದಲಾಯಿಸಿಲ್ಲ ಎಂಬ ಅರಿವಾಯಿತು. ಹೋ ದೇವರೇ! ನನ್ನ ಬಂಧು ಬಾಂಧವರನ್ನು, ಗೆಳೆಯರನ್ನು, ನನಗೆ ಹತ್ತಿರವಿರುವವರನ್ನಾದರೂ ಬದಲಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದೆ.’
`ಈಗ ನೋಡಿ, ನಾನೀಗ ಹಣ್ಣು ಹಣ್ಣು ಮುದುಕನಾಗಿದ್ದೇನೆ. ಹೋ ದೇವರೇ! ಈಗ ಕನಿಷ್ಠ ನನ್ನನ್ನಾದರೂ ಬದಲಿಸಿಕೊಳ್ಳುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತಿದ್ದೇನೆ’ ಎಂದ.
ಉಂಗುರ ಮತ್ತು ನೆನಪು
ಖಂಜೂಸಿ ಮುಲ್ಲಾ ನಸ್ರುದ್ದೀನನಿಂದ ಏನಾದರೂ ಪಡೆಯಲೇಬೇಕೆಂಬ ಯೋಜನೆ ಮಾಡಿದ ಆತನ ಗೆಳೆಯನೊಬ್ಬ ಒಂದು ದಿನ,
`ಮುಲ್ಲಾ, ನಾವಿಬ್ಬರೂ ಹಲವಾರು ವರ್ಷಗಳಿಂದ ಅತ್ಯಂತ ಆಪ್ತ ಗೆಳೆಯರಾಗಿದ್ದೇವೆ. ನೋಡು ನಾನೀಗ ಬೇರೆ ಊರಿಗೆ ಸಂಸಾರ ಸಮೇತ ಹೋಗಿಬಿಡುತ್ತಿದ್ದೇನೆ. ನಿನ್ನ ಸವಿ ನೆನಪಿಗೆ ನಿನ್ನ ಚಿನ್ನದ ಉಂಗುರ ಕೊಡು. ಅದನ್ನು ನೋಡಿದಾಗಲೆಲ್ಲಾ ನೀವು ನನಗೆ ನೆನಪಾಗುತ್ತೀಯೆ’ ಎಂದ.
`ಇಲ್ಲ ಉಂಗುರ ಕೊಡುವುದಿಲ್ಲ. ಆದರೆ ನೀನು ನನ್ನನ್ನು ನೆನಪಿಸಿಕೊಳ್ಳಲೇ ಬೇಕಾಗಿದ್ದಲ್ಲಿ, ನಿನ್ನ ಉಂಗುರದ ಬೆರಳನ್ನು ಆಗಾಗ ನೋಡಿಕೊ. ಆಗ ಉಂಗುರ ಇಲ್ಲದಿರುವುದು ಕಂಡಾಗಲೆಲ್ಲಾ ನಾನು ನೆನಪಾಗುತ್ತೇನೆ, ನಾನು ಉಂಗುರ ಕೊಡಲಿಲ್ಲ ಎನ್ನುವುದು ನೆನಪಾಗುತ್ತದೆ’ ಎಂದ ಮುಲ್ಲಾ.
ಸ್ನಾನದ ಭಕ್ಷೀಸು
ಒಂದು ದಿನ ಮುಲ್ಲಾ ಸ್ನಾನ ಮಾಡೋಣವೆಂದು ಸಾರ್ವಜನಿಕ ಸ್ನಾನದ ಮನೆಗೆ ಹೋದ. ಅವನ ಹರಕಲು ಬಟ್ಟೆ ನೋಡಿ ಅಲ್ಲಿನ ಪರಿಚಾರಕರು ಅವನ ಬಗ್ಗೆ ಹೆಚ್ಚಿನ ಆಸ್ಥೆ ತೋರಲಿಲ್ಲ. ಅವನಿಗೆ ಒಂದು ಹರಕಲು ಲಂಗೋಟಿ, ಚೂರು ಚೂರಾದ ಸಾಬೂನು ಹಾಗೂ ಒಂದು ಹಳೆಯ ಟವೆಲ್ ನೀಡಿದರು. ಸ್ನಾನ ಮುಗಿಸಿ ಹೊರಟ ಮುಲ್ಲಾ ಅಲ್ಲಿನ ಪರಿಚಾರಗರಿಗೆ ಒಂದೊಂದು ಚಿನ್ನದ ನಾಣ್ಯವನ್ನು ಭಕ್ಷೀಸಾಗಿ ಕೊಟ್ಟ. ಆ ಪರಿಚಾರಕರಿಗೆ ಆಶ್ಚರ್ಯವಾಯಿತು.
`ಆ ಹರಕಲು ಬಟ್ಟೆಯ ಮುದುಕನಿಗೆ ನಾವು ಇನ್ನೂ ಚೆನ್ನಾಗಿ ಉಪಚಾರ ಮಾಡಿದ್ದರೆ ಆತ ಇನ್ನೂ ಉತ್ತಮ ಭಕ್ಷೀಸೇ ಕೊಡುತ್ತಿದ್ದನೇನೋ, ಆತ ಯಾರೋ ಸಿರಿವಂತನಿರಬೇಕು, ನಮ್ಮನ್ನು ಪರೀಕ್ಷಿಸಲೆಂದೇ ಆ ರೀತಿ ಬಂದಿರಬೇಕು’ ಎಂದುಕೊಂಡರು.
ಮುಂದಿನ ವಾರ ಪುನಃ ಮುಲ್ಲಾ ಸ್ನಾನಕ್ಕೆ ಬಂದಾಗ ಅದೇ ಪರಿಚಾರಕರು ಅವನನ್ನು ರಾಜನಂತೆ ಉಪಚರಿಸಿದರು, ಸುಗಂಧ ಪರಿಮಳ ಪೂಸಿದರು, ಮಾಲೀಸು ಮಾಡಿದರು. ಸ್ನಾನ ಮುಗಿಸಿ ಹೊರಟ ಮುಲ್ಲಾ ಅವರ ಕೈಲಿ ಒಂದೊಂದು ತಾಮ್ರದ ನಾಣ್ಯವನ್ನು ಭಕ್ಷೀಸಾಗಿ ಕೊಟ್ಟ.
`ಇವತ್ತಿನ ತಾಮ್ರದ ನಾಣ್ಯದ ಭಕ್ಷೀಸು ಕಳೆದ ವಾರದ ಸ್ನಾನಕ್ಕಾಗಿ. ಕಳೆದ ವಾರ ಕೊಟ್ಟ ಚಿನ್ನದ ನಾಣ್ಯದ ಭಕ್ಷೀಸು, ಇಂದಿನ ಸ್ನಾನಕ್ಕಾಗಿ’ ಎಂದು ಹೇಳಿ ಹೊರಟ.
ದಿಕ್ಕು
ಒಂದು ದಿನ ಮುಲ್ಲಾ ನದಿಯಲ್ಲಿ ಪ್ರಾರ್ಥನಾ ಸ್ನಾನ ಮಾಡುವಾಗ ಅಲ್ಲೇ ಇದ್ದ ಮೌಲ್ವಿಯೊಬ್ಬ ಅದನ್ನು ನೋಡಿ ಮುಲ್ಲಾನನ್ನು `ಏನು! ನಿನಗೆ ಪರಿಜ್ಞಾನ ಇಲ್ಲವೆ? ನದಿಯಲ್ಲಿ ಸ್ನಾನ ಮಾಡುವಾಗ ಮೆಕ್ಕಾದ ದಿಕ್ಕಿಗೆ ತಿರುಗಿ ಸ್ನಾನ ಮಾಡಬೇಕೆಂಬುದು ತಿಳಿದಿಲ್ಲವೆ?’ ಎಂದು ಗದರಿಸಿದ.
`ಹೌದು ಸ್ವಾಮಿ, ನನಗೆ ತಿಳಿದಿದೆ. ಆದರೆ ಹೋದ ಸಾರಿ ಆ ದಿಕ್ಕಿಗೇ ತಿರುಗಿ ಇದೇ ನದಿಯಲ್ಲಿ ಸ್ನಾನ ಮಾಡುವಾಗ ಯಾರೋ ನನ್ನ ಬಟ್ಟೆ ಕದ್ದೊಯ್ದಿದ್ದರು. ಅದಕ್ಕೇ ಈ ದಿನ ನಾನು ನನ್ನ ಬಟ್ಟೆ ಇರುವ ದಿಕ್ಕಿಗೇ ತಿರುಗಿ ಸ್ನಾನ ಮಾಡುತ್ತಿದ್ದೇನೆ’ ಎಂದ.
ಕನಸು
ಮುಲ್ಲಾ ನಸ್ರುದ್ದೀನನ ಮಗ ಒಂದು ದಿನ ಬೆಳಿಗ್ಗೆ ಮುಲ್ಲಾನ ಬಳಿ ಬಂದು,
`ಅಪ್ಪಾ, ನನಗೆ ಕನಸಲ್ಲಿ ನೀವು ನನಗೆ ಸಾವಿರ ರೂಪಾಯಿ ಕೊಟ್ಟಂತೆ ಕನಸು ಬಿತ್ತು’ ಎಂದ.
`ತುಂಬಾ ಸಂತೋಷ. ನೀನು ಒಳ್ಳೆಯ ಹುಡುಗನೆಂಬುದು ನನಗೆ ಗೊತ್ತು. ನಾನು ಕನಸಲ್ಲಿ ನಿನಗೆ ಕೊಟ್ಟ ಆ ಸಾವಿರ ರೂಪಾಯಿಯನ್ನು ಹಾಗೇ ಉಳಿಸಿಕೊ, ಅದನ್ನು ನನಗೇನೂ ಹಿಂದಿರುಗಿಸಬೇಡ. ನಿನಗೆ ಏನಾದರೂ ಬೇಕಾದಾಗ ಕೊಂಡುಕೊ’ ಎಂದ ಮುಲ್ಲಾ ತನ್ನ ಮಗನ ತಲೆ ಸವರುತ್ತಾ.
ಹೌದು ಅಥವಾ ಇಲ್ಲ!
ಮುಲ್ಲಾ ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ತನ್ನ ಚಾಣಾಕ್ಷ ನ್ಯಾಯಪಾಲನೆಗಾಗಿ ಹೆಸರುವಾಗಿಯಾಗಿದ್ದ. ಆ ಊರಿನ ಒಬ್ಬಾತ ಯಾವಗಲೂ ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದ. ಕೊನೆಗೊಂದು ದಿನ ಆಕೆ ನ್ಯಾಯಾಲಯಕ್ಕೆ ದೂರು ನೀಡಿ ನ್ಯಾಯ ಒದಗಿಸುವಂತೆ ಕೇಳಿಕೊಂಡಳು. ಗಂಡನನ್ನು ನ್ಯಾಯಾಲಯಕ್ಕೆ ಕರೆಸಲಾಯಿತು. ಆ ಗಂಡ ಮುಲ್ಲಾನ ಚಾಣಾಕ್ಷತನ ತಿಳಿದಿದ್ದರಿಂದ `ನ್ಯಾಯಾಧೀಶರೇನಾದರೂ ನಿನ್ನ ಹೆಂಡತಿಯನ್ನು ಹೊಡೆದೆಯಾ? ಎಂದು ಕೇಳಿದರೆ ಇಲ್ಲ ಎನ್ನುತ್ತೇನೆ. ನಿನ್ನ ಹೆಂಡತಿಯನ್ನು ಹೊಡೆಯಲಿಲ್ಲವೆ? ಎಂದು ಕೇಳಿದರೆ ಹೌದು ಎನ್ನುತ್ತೇನೆ. ಹೌದು ಮತ್ತು ಇಲ್ಲ ಎನ್ನುವುದು ಬಿಟ್ಟರೆ ಇನ್ನೇನೂ ಹೇಳುವುದಿಲ್ಲ. ನೋಡೋಣ ನನ್ನ ಅಪರಾಧವನ್ನು ಹೇಗೆ ಕಂಡುಹಿಡಿಯುತ್ತಾರೋ’ ಎಂದು ಯೋಚಿಸಿ ನ್ಯಾಯಾಲಯಕ್ಕೆ ಹಾಜರಾದ.
ನ್ಯಾಯಾಧೀಶ ಮುಲ್ಲಾ ನಸ್ರುದ್ದೀನ್, ಗಂಡನೆಡೆಗೆ ನೋಡಿ `ಏನಪ್ಪಾ, ನಿನ್ನ ಹೆಂಡತಿಯನ್ನು ಹೊಡೆಯುವುದನ್ನು ನಿಲ್ಲಿಸಿದ್ದೀಯಾ?’ ಎಂದು ಕೇಳಿದ.
ಮೊಟ್ಟೆ ಸಮಸ್ಯೆ
ಒಂದು ದಿನ ನಸ್ರುದ್ದೀನ್ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆಯ ಜೊತೆ ಅವರ ಕೈ ಹಿಡಿದು ಶಾಲೆಗೆ ಹೋಗುತ್ತಿದ್ದ. ರಸ್ತೆಯಲ್ಲೊಂದು ಮೊಟ್ಟೆ ಬಿದ್ದಿತ್ತು. ಅದನ್ನು ನೋಡಿದ ಬಾಲ ನಸ್ರುದ್ದೀನ್,
`ಅಪ್ಪಾ, ಮೊಟ್ಟೆಯೊಳಕ್ಕೆ ಪಕ್ಷಿ ಹೇಗೆ ಹೋಗುತ್ತದೆ?’ ಎಂದು ಕೇಳಿದ.
`ಇಷ್ಟೂ ದಿನ ನಾನು ಮೊಟ್ಟೆ ಮೊದಲೋ, ಪಕ್ಷಿ ಮೊದಲೋ ಎಂದು ತಲೆ ಕೆಡಿಸಿಕೊಂಡಿದ್ದೆ. ಈಗ ತಲೆ ತಿನ್ನಲು ಮತ್ತೊಂದು ಸಮಸ್ಯೆ ಆರಂಭವಾಯಿತಲ್ಲಾ!’ ಎಂದು ಗೊಣಗಿದ ನಸ್ರುದ್ದೀನನ ತಂದೆ.
ಹಸಿವಾಗುತ್ತದೆಯೆ?
ಆ ಊರಿನ ಧಾರ್ಮಿಕ ಮುಖಂಡ ತನ್ನ ಆಪ್ತರನ್ನೆಲ್ಲಾ ಒಂದು ಔತಣ ಕೂಟಕ್ಕೆ ಆಹ್ವಾನಿಸಿದ. ಮುಲ್ಲಾ ನಸ್ರುದ್ದೀನ್ ಸಹ ಒಬ್ಬ ವಿವೇಚನಾಪೂರ್ಣ ವ್ಯಕ್ತಿಯೆಂದು ಹೆಸರಾಗಿದ್ದುದರಿಂದ ಆತನನ್ನೂ ಸಹ ಆಹ್ವಾನಿಸಿದ್ದ. ಆ ದಿನ ಮುಲ್ಲಾನಿಗೆ ಎಲ್ಲೂ ಸರಿಯಾದ ಊಟ ಸಿಕ್ಕಿರಲಿಲ್ಲ, ಆತನನ್ನು ಹಸಿವು ಕಾಡುತ್ತಿತ್ತು. ಆ ಔತಣಕೂಟದಲ್ಲಿ ಹೊಟ್ಟೆ ತುಂಬುವಂತೆ ತಿನ್ನಬಹುದೆಂದು ಆಲೋಚಿಸಿ ಸಂತೋಷದಿಂದಲೇ ಒಪ್ಪಿ ಆಗಮಿಸಿದ್ದ. ಎಲ್ಲರೂ ಸೇರಿದ ನಂತರ ಊಟಕ್ಕೆ ಮೊದಲು ನೆರೆದವರನ್ನು ಉದ್ದೇಶಿಸಿ ಆ ಧಾರ್ಮಿಕ ಮುಖಂಡ ತನ್ನ ಧರ್ಮ ಬೋಧನೆ ಆರಂಭಿಸಿದ. ಒಂದು ಗಂಟೆ, ಎರಡು ಗಂಟೆಯಾದರೂ ಆತ ತನ್ನ ಬೋಧನೆ ನಿಲ್ಲಿಸಲೇ ಇಲ್ಲ. ಮಧ್ಯದಲ್ಲಿ ಆಗಾಗ ಆತ, `ಏನಾದರೂ ಸಂಶಯವಿದೆಯೆ? ಏನಾದರೂ ಪ್ರಶ್ನೆಗಳಿವಿಯೇ? ಇದ್ದರೆ ಈಗಲೇ ಕೇಳಿ ಪರಿಹರಿಸಿಕೊಳ್ಳಿ’ ಎಂದು ಹೇಳುತ್ತಿದ್ದ. ಮುಲ್ಲಾನಿಗೆ ಹಸಿವು ತಡೆಯಲಾಗಲಿಲ್ಲ. `ಏನಾದರೂ ಪ್ರಶ್ನೆ ಕೇಳಿ’ ಎಂದು ಬೋಧಕ ಹೇಳಿದಾಗ, `ನನ್ನದೊಂದು ಪ್ರಶ್ನೆ ಇದೆ’ ಎಂದು ಮುಲ್ಲಾ ಎದ್ದು ನಿಂತು, `ನಿಮ್ಮ ಧರ್ಮ-ಪುರಾಣಗಳಲ್ಲಿನ ವ್ಯಕ್ತಿಗಳಿಗೆ ಹಸಿವಾಗುತ್ತದೆಯೆ?’ ಎಂದು ಕೇಳಿದ.
ನಿಮ್ಮ ಕೈಯಲ್ಲೇ ಇದೆ
ಆ ಊರಿನ ಇಬ್ಬರು ಪುಂಡ ಹುಡುಗರು ಮುಲ್ಲಾನನ್ನು ತಮಾಷೆ ಮಾಡೋಣವೆಂದು ಒಂದು ದಿನ ಒಂದು ಪುಟ್ಟ ಪಕ್ಷಿಯನ್ನು ಹಿಡಿದು ತಮ್ಮ ಅಂಗೈಯಲ್ಲಿ ಮುಚ್ಚಿಹಿಡಿದರು. ಅಲ್ಲೇ ಹೋಗುತ್ತಿದ್ದ ಮುಲ್ಲಾನನ್ನು ನೋಡಿ, `ಮುಲ್ಲಾ, ನಮ್ಮ ಕೈಯಲ್ಲಿರುವ ಪಕ್ಷಿ ಬದುಕಿದೆಯೋ ಅಥವಾ ಸತ್ತುಹೋಗಿದೆಯೋ?’ ಎಂದು ಕೇಳಿದರು. ಮುಲ್ಲಾ ಸತ್ತಿದೆ ಎಂದರೆ ಅದನ್ನು ಹಾಗೆಯೇ ಜೀವಂತ ತೋರಿಸುವುದು ಅಥವಾ ಆತ ಬದುಕಿದೆ ಎಂದರೆ ಅದನ್ನು ಹಾಗೇ ಹಿಸುಕಿ ಸತ್ತ ಪಕ್ಷಿಯನ್ನು ತೋರಿಸುವುದು ಆ ಪುಂಡ ಹುಡುಗರ ಯೋಜನೆಯಾಗಿತ್ತು. ಮುಲ್ಲಾ ಅವರ ಮುಷ್ಠಿ ಹಿಡಿದ ಅಂಗೈ ನೋಡಿ,
`ಆ ಪಕ್ಷಿ ಬದುಕಿದೆಯೋ ಅಥವಾ ಸತ್ತಿದೆಯೋ ಎನ್ನುವುದು ನಿಮ್ಮ ಕೈಯಲ್ಲೇ ಇದೆ!’ ಎಂದು ಹೇಳಿ ಅಲ್ಲಿಂದ ಹೊರಟ.
ಸತ್ಯ ಎದುರಾದರೆ...
ಮುಲ್ಲಾ ಒಬ್ಬ ಅನುಭಾವಿ ಗುರುವಿನ ಬಳಿ ಶಿಷ್ಯನಾಗಿ ಸೇರಿಕೊಂಡಿದ್ದ. ಆ ಗುರು ಒಂದು ದಿನ ಬೋಧನೆ ಮಾಡುತ್ತಾ, `ಮುಲ್ಲಾ ನಿನಗೆ ಎಂದಾದರೂ ಸತ್ಯ ಎದುರಾದರೆ ಹಿಡಿದು ಬಾವಿಗೆಸೆದುಬಿಡು’ ಎಂದು ಹೇಳಿದರು.
ಒಂದು ದಿನ ಮುಲ್ಲಾ ನಡೆದುಹೋಗುತ್ತಿದ್ದಾಗ, ಒಬ್ಬ ಕುರುಡ ರಸ್ತೆ ಬದಿಯ ಬಾವಿಯಿಂದ ನೀರು ಸೇದಲು ಪರದಾಡುತ್ತಿದ್ದ. ಅದನ್ನು ನೋಡಿದ ಮುಲ್ಲಾ ಆತನ ಬಳಿ ಹೋಗಿ ಬಾವಿಯಿಂದ ನೀರು ಸೇದಿ ಕುಡಿಯಲು ಕೊಟ್ಟ. ಆ ಕುರುಡ ಮುಲ್ಲಾನಿಗೆ ಧನ್ಯವಾದಗಳನ್ನು ಹೇಳಿದ. `ಪರವಾಗಿಲ್ಲ’ ಎನ್ನುತ್ತಾ ಮುಲ್ಲಾ ಆತನ ಹೆಸರೇನೆಂದು ಕೇಳಿದ.
`ನನ್ನ ಹೆಸರು ಸತ್ಯಮೂರ್ತಿ, ಎಲ್ಲರೂ ನನ್ನನ್ನು ಸತ್ಯಾ ಎನ್ನುತ್ತಾರೆ’ ಎಂದ. ಮುಲ್ಲಾ ಕೂಡಲೇ ಆತನನ್ನು ಎತ್ತಿ ಬಾವಿಗೆಸೆದು ವಿಷಯ ತಿಳಿಸಲು ತನ್ನ ಗುರುವಿನೆಡೆಗೆ ಓಡಿದ.
j.balakrishna@gmail.com
ಗುರುವಾರ, ಏಪ್ರಿಲ್ 03, 2014
ನನ್ನ ಹೊಸ ಪುಸ್ತಕ- ಮನೆಯೇ ಇಲ್ಲದ ಬಾಗಿಲು
ಮನೆಯೇ ಇಲ್ಲದ ಬಾಗಿಲು- ಮುಲ್ಲಾ ನಸ್ರುದ್ದೀನ್ ಕತೆಗಳು
ಪ್ರಕಾಶಕರು: ಲಂಕೇಶ್ ಪ್ರಕಾಶನ
ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ
ಬಸವನಗುಡಿ, ಬೆಂಗಳೂರು-560004
ದೂರವಾಣಿ: 080-26676427
lankeshprakashana@gmail.com
ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.
ಡಾ.ಜಿ.ರಾಮಕೃಷ್ಣ- ನುಡಿದಂತೆ ನಡೆವ ಭೌತವಾದಿ ಸಂತನಿಗೆ ಡಾ.ಎಲ್.ಬಸವರಾಜು ಪ್ರಶಸ್ತಿ
ಕೋಲಾರದ ನಾವು ಕೆಲವರು `ಸಮಾನ ಮನಸ್ಕ' ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ಪ್ರತಿ ವರ್ಷ ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವಂತಹ ಒಬ್ಬ ಶ್ರೇಷ್ಠ ವ್ಯಕ್ತಿಗೆ ಡಾ.ಎಲ್.ಬಿ. ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಈ ವರ್ಷದ ಪ್ರಶಸ್ತಿಯನ್ನು ಡಾ.ಜಿ.ಆರ್.ರವರಿಗೆ ನೀಡಲು ನಮಗೆ ಹೆಮ್ಮೆಯೆನ್ನಿಸುತ್ತದೆ.
ನುಡಿದಂತೆ ನಡೆವ ಭೌತವಾದಿ ಸಂತ- ಡಾ.ಜಿ.ರಾಮಕೃಷ್ಣ
ಒಂದು
ಕೋನದಿಂದ ಗಾಂಧಿಯಂತೆಯೇ ಕಾಣುವ `ಜಿ.ಆರ್.’ ಎಂದೇ ಖ್ಯಾತರಾದ ಡಾ.ಜಿ.ರಾಮಕೃಷ್ಣ ಅವರು ಕನ್ನಡದ ಅತ್ಯಪರೂಪದ
ಭೌತವಾದೀ ಸಂತ. ಶಿಷ್ಯರ ಅಪರಿಮಿತ ಪ್ರೀತಿಯ ಮೇಷ್ಟ್ರು. ಮಾರ್ಕ್ಸ್ ವಾದಿ ಚಿಂತನೆಯ ಮೂಲಕ ನಿಷ್ಠುರ
ವಾಸ್ತವಗಳಿಗಷ್ಟೇ ಬೆಳಕು ಚೆಲ್ಲುವ ಪ್ರಶ್ನಾತೀತ ಬದ್ಧತೆಯ ನಿಶಿತಮತಿ ಲೇಖಕ. ಬಹುತೇಕರಿಗೆ ಜಿ.ಆರ್.
ಮಾಸ್ತರು ಇಷ್ಟವಾಗುವುದೇಕೆಂದರೆ ರಾಜಿಗೆಡೆಯೇ ಇಲ್ಲದ ಅವರ ಸರಳ ಬದುಕಿನ ಶೈಲಿಯಿಂದಾಗಿ ಅಲ್ಲ; ಬದಲಿಗೆ
ನುಡಿದಂತೆಯೇ ನಡೆವ ಅವರ ಸಹಜ ಧೀಮಂತಿಕೆಯಿಂದಾಗಿ. ನುಡಿದಂತೆ ನಡೆವುದೆಂದರೆ ಅನುಕ್ಷಣದ ಆತ್ಮಾವಲೋಕನದ
ಎಚ್ಚರ! ಪ್ರಾಮಾಣಿಕತೆಯ ಅತ್ಯುಚ್ಛ ಅಭಿವ್ಯಕ್ತಿ! ಶ್ರೇಷ್ಠ ಚಿಂತನೆಗಳನ್ನು ಲೀಲಾಜಾಲವಾಗಿ ಹರಿದುಬಿಡುವ
ಲೇಖಕ, ಕಲಾವಿದರನೇಕರು ಆ ಚಿಂತನೆಗಳಿಗೂ ತಮ್ಮ ಬದುಕಿಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿರುವ ಘೋರ
ವಿಪರ್ಯಾಸದ ಕಾಲಘಟ್ಟದಲ್ಲಿ ನಡೆ-ನುಡಿಯ ಭೇದವಿಲ್ಲದಂತೆ ಬದುಕಬಲ್ಲ ಛಾತಿ ತೋರುತ್ತಿರುವ ಜಿ.ಆರ್.
ಎವರ್ ಗ್ರೀನ್ ಮಾದರಿ ಮಾತ್ರವಲ್ಲ; ವಿವೇಕ ಮತ್ತು ಅರ್ಥಪೂರ್ಣ ವಿಜ್ಞಾನದ ಹಾದಿಯಾಗಿ ಹಬ್ಬಿದ್ದಾರೆ.
ಬೆಟ್ಟಗುಡ್ಡಗಳೊಂದಿಗೆ ದೇಶಕೋಶ ಸುತ್ತುವ ಚಾರಣಿಗ. ವಿದ್ವತ್ತಿಗೂ ಮಿಗಿಲಾದ ಸಜ್ಜನಿಕೆಯ ನಡೆನುಡಿ.
ಕಷ್ಟಗಳನ್ನು ನುಂಗಿಕೊಂಡು ಎಲ್ಲರ ನೆಮ್ಮದಿಯ ನಾಳೆಗಳಿಗಾಗಿ ತಪಿಸುವ ಆತ್ಮವಿಶ್ವಾಸದ ಮುನ್ನೋಟದೊಂದಿಗೆ,
ಮಣ್ಣಿನ ಹುಡಿಯಿಂದ ಜ್ಞಾನದ ಶಿಖರದವರೆಗೂ ಸಮಾನವಾಗಿ ಹೊಕ್ಕಾಡಬಲ್ಲ ಈ ನಿರುದ್ವಿಗ್ನ ಜೀವ ಭೌತದ ಅತ್ಯುಚ್ಛ
ರೂಪ ಮಾನಸವೆಂಬ ಏಂಗಲ್ಸ್ ಮಾತಿಗೆ ನಮ್ಮ ನಡುವಿನ ಜೀವಂತ ನಿದರ್ಶನ.
ಶ್ರೀ
ಜಿ.ಸುಬ್ರಹ್ಮಣ್ಯಂ ಮತ್ತು ಶ್ರೀಮತಿ ನರಸಮ್ಮನವರ ಪುತ್ರನಾಗಿ ೧೯೩೯ರ ಜೂನ್ ೧೭ರಂದು ಶಿರಾ ಬಳಿಯ ಹಾಲೇನಹಳ್ಳಿಯಲ್ಲಿ
ಜನಿಸಿದ ಜಿ.ಆರ್. ಅವರ ಪೂರ್ವಿಕರ ಮೂಲಸ್ಥಾನ ಮಧುಗಿರಿಯ ಗಂಪಲಹಳ್ಳಿ. ಸಂಸ್ಕೃತದಲ್ಲಿ ಪಿಎಚ್.ಡಿ.ಯೊಂದಿಗೆ
ಇಂಗ್ಲಿಷ್ ಎಂ.ಎ. (ಪೂನಾ ಮತ್ತು ವೇಲ್ಸ್ ವಿಶ್ವವಿದ್ಯಾಲಯ) ಮುಗಿಸಿದ ಜಿ.ಆರ್. ಅಂತಿಮವಾಗಿ ನೆಲೆಗೊಂಡದ್ದು
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿ. ಮಾಸ್ಕೋ, ಫಿಲಡೆಲ್ಫಿಯಾಗಳಲ್ಲೂ ಫ್ಯಾಸಿಸಂ,
ಯೋಗ, ಇಂಗ್ಲಿಷ್ ಕಾವ್ಯ ಕುರಿತಂತೆ ಉಪನ್ಯಾಸ ನೀಡಿರುವ ಈ ಮಹಾಮಹೋಪಾಧ್ಯಾಯ ಸರ್ಕಾರದ ಪ್ರಶಸ್ತಿಗಳನ್ನು
ನಯವಾಗಿಯೇ ತಿರಸ್ಕರಿಸಿ ಲೇಖಕರ ಆತ್ಮಗೌರವ, ಘನತೆಗಳನ್ನು ಎತ್ತಿಹಿಡಿದವರು.
ಮುನ್ನೋಟ, ಆಯತನ ಹಾಗೂ
ಭಾರತೀಯ ವಿಜ್ಞಾನದ ಹಾದಿ ಎಂಬ ಮೂರು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿರುವ
ಜಿ.ಆರ್. ಆದರ್ಶ ಶಿಕ್ಷಕರೆಂಬ ಮಾನು ಪ್ರಶಸ್ತಿಗೂ ಸಹಜವಾಗಿಯೇ ಪಾತ್ರರಾದವರು. ದೇಬಿಪ್ರಸಾದ್ ಮತ್ತು
ಲೋಕಾಯತ ದರ್ಶನ, ಭಗತ್ ಸಿಂಗ್, ಚೆಗೆವಾರ, ಲೆನಿನ್ ರಂತಹ ಮಹಾಪುರುಷರ ವ್ಯಕ್ತಿಚಿತ್ರಗಳು, ಆರೆಸ್ಸೆಸ್-
ಒಂದು ವಿಷವೃಕ್ಷ, ಹಿಂದುತ್ವದ ಹಿಂದೆ-ಮುಂದೆ…. ಜಿ.ಆರ್. ಅವರ ಬರವಣಿಗೆ ಅವರ ವಿದ್ವತ್ತು ಮತ್ತು
ಅರಿವಿನ ವ್ಯಕ್ತಿತ್ವವನ್ನು ಪರಿಚಯಿಸುವಂತಿದೆ. ದೇಬಿಪ್ರಸಾದ್ ಚಟ್ಟೋಪಾಧ್ಯಾಯರೊಂದಿಗೆ ಸೇರಿ `ಆನ್
ಎನ್ ಸೈಕ್ಲೋಪೀಡಿಯ ಆಫ್ ಸೌತ್ ಇಂಡಿಯನ್ ಕಲ್ಚರ್’ ಎಂಬ ಮಹತ್ವದ ಗ್ರಂಥವನ್ನು ಸಂಪಾದಿಸಿರುವರಲ್ಲದೆ
`ಚೈನೀ ಫಿಲಾಸಫಿ’, ಸ್ಟ್ರೇಂಜ್ ಕಲ್ಚರ್ ಆಪ್ ಎಂ.ಎನ್. ಗೋಲ್ವಾಲ್ಕರ್’ `ಗೋರ್ಬಚೆವ್ – ಎ ಫೆನಾಮಿನನ್’
ಎಂಬಂತಹ ಗ್ರಂಥಗಳನ್ನು ಇಂಗ್ಲಿಷಿನಲ್ಲಿ ರಚಿಸುವ ಮೂಲಕ ತಾವು ಬಹುಶ್ರುತರು ಹಾಗೂ ಬಹುಭಾಷಾ ಕೋವಿದರು
ಎಂದು ಸಮರ್ಥವಾಗಿ ನಿರೂಪಿಸಿದ್ದಾರೆ. ಸರಳತೆ ಮತ್ತು ಆತ್ಮಗೌರವಗಳೇ ಜೀವಾಳವಾದ ಈ ಹಿರಿಯ ಜೀವಕ್ಕೆ
ಡಾ.ಎಲ್. ಬಸವರಾಜು ಪ್ರಶಸ್ತಿಯನ್ನು ನೀಡುತ್ತಿರುವುದು ಈ ಬಂಗಾರದ ನೆಲಕ್ಕೆ ಬೆವರಿನ ಪುಳಕವನ್ನು ತಂದಿತ್ತಿದೆ.
ಕಾಮರೂಪಿಯವರೊಂದಿಗೆ ನಾನು
j.balakrishna@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)