ಬೆಂಗಳೂರಲ್ಲಿ ಕಾಣಿಸಿಕೊಂಡ ಹಾರುವ ತಟ್ಟೆ! - ನನ್ನ ವ್ಯಂಗ್ಯ ಚಿತ್ರ
ಭಾನುವಾರ, ಮೇ 26, 2013
ಶನಿವಾರ, ಮೇ 25, 2013
ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು
ಮೇ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 17ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್
ಅಳಲು ಸಮಯವಿರುವುದಿಲ್ಲ
ನಸ್ರುದ್ದೀನನ ಕತ್ತೆಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಜೋರಾಗಿ ಅಳುತ್ತಿದ್ದ. ಅದನ್ನು ನೋಡಿದ ಗೆಳೆಯನೊಬ್ಬ,
‘ಇನ್ನೂ ನಿನ್ನ ಕತ್ತೆ ಸತ್ತಿಲ್ಲ. ಈಗಲೇ ಏಕೆ ಅಳುತ್ತಿದ್ದೀಯ?’ ಎಂದು ಕೇಳಿದ.
‘ಅಯ್ಯೋ, ಈ ಕತ್ತೆ ಸತ್ತು ಹೋದರೆ, ಅದನ್ನು ಹೂಳಬೇಕು. ಮತ್ತೊಂದು ಹೊಸ ಕತ್ತೆ ಖರೀದಿಸಬೇಕು, ಅದಕ್ಕೆ ಹೊರೆ ಹೊರುವ, ಕೆಲಸ ಮಾಡುವ ತರಬೇತಿ ಕೊಡಬೇಕು. ಆಗ ನನಗೆ ಅಳಲು ಸಮಯವೆಲ್ಲಿ ಇರುತ್ತದೆ?’ ಎಂದ ನಸ್ರುದ್ದೀನ್ ತನ್ನ ಅಳು ಮುಂದುವರಿಸುತ್ತಾ.
ಮಳೆ ಮತ್ತು ಛತ್ರಿ
ನಸ್ರುದ್ದೀನ್ ಮತ್ತು ಆತನ ಗೆಳೆಯ ಸಂಜೆ ಅದೂ ಇದೂ ಮಾತನಾಡುತ್ತಾ ಹೊರಟಿದ್ದರು. ಇದ್ದಕ್ಕಿದ್ದಂತೆ ಮಳೆ ಸುರಿಯಲು ಆರಂಭವಾಯಿತು. ನಸ್ರುದ್ದೀನನ ಕೈಯಲ್ಲಿ ಛತ್ರಿ ಇದ್ದದ್ದನ್ನು ನೋಡಿದ ಗೆಳೆಯ,
‘ನಸ್ರುದ್ದೀನ್ ನಿನ್ನ ಬಳಿ ಛತ್ರಿ ಇದೆಯೆಲ್ಲಾ, ತೆಗೆ ಅದನ್ನು’ ಎಂದ
‘ಇಲ್ಲ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ’ ಎಂದ ನಸ್ರುದ್ದೀನ್.
‘ಏಕೆ? ಏನಾಗಿದೆ ನಿನ್ನ ಛತ್ರಿಗೆ?’ ಎಂದು ಕೇಳಿದ ಗೆಳೆಯ.
‘ಅದು ಹರಿದುಹೋಗಿದೆ’ ಎಂದ ನಸ್ರುದ್ದೀನ್.
‘ಹಾಗಾದರೆ, ಅಂತಹ ಛತ್ರಿ ಏಕೆ ತಂದೆ?’ ಎಂದು ಕೇಳಿದ ಗೆಳೆಯ.
‘ನನಗೇನು ಗೊತ್ತು ಈ ದಿನ ಮಳೆ ಬರುತ್ತದೆ ಎಂದು?’ ಕೇಳಿದ ನಸ್ರುದ್ದೀನ್.
ಜ್ಞಾಪಕ ಶಕ್ತಿ
ನಸ್ರುದ್ದೀನ್ ಮರೆವಿನ ಕಾಯಿಲೆಯಿಂದ ನರಳುತ್ತಿದ್ದ. ಚಿಕಿತ್ಸೆಗೆಂದು ವೈದ್ಯರ ಬಳಿ ಹೋದ.
‘ನನಗೇನೂ ನೆನಪಿಲ್ಲ ಎನ್ನಿಸುತ್ತಿದೆ’ ಎಂದ ನಸ್ರುದ್ದೀನ್.
‘ಹೌದೆ? ಯಾವಾಗಿನಿಂದ?’ ಎಂದು ವೈದ್ಯರು ಕೇಳಿದರು.
‘ಏನದು ಯಾವಾಗಿನಿಂದ? ಏನು ಕೇಳುತ್ತಿದ್ದೀರಿ?’ ಎಂದ ನಸ್ರುದ್ದೀನ್.
ವೈದ್ಯರು ಜ್ಞಾಪಕ ಶಕ್ತಿ ಸುಧಾರಿಸಲು ಔಷಧ ಕೊಟ್ಟರು. ಒಂದು ವಾರ ಕಳೆದ ನಂತರ ಪುನಃ ವೈದ್ಯರ ಬಳಿ ನಸ್ರುದ್ದೀನ್ ಹೋದ.
‘ಹೇಗಿದೆ ಈಗ ಜ್ಞಾಪಕ ಶಕ್ತಿ?’ ಕೇಳಿದರು ವೈದ್ಯರು.
‘ಈಗ ಪರವಾಗಿಲ್ಲ ಎನ್ನಿಸುತ್ತೆ. ಏನೋ ಮರೆತಿದ್ದೇನೆ ಎನ್ನುವ ನೆನಪಿದೆ’ ಎಂದ ನಸ್ರುದ್ದೀನ್.
ಅದ್ಭುತ ಶಕ್ತಿ
ನಸ್ರುದ್ದೀನ್ ತನಗೆ ಅದ್ಭುತ ಶಕ್ತಿ ಇದೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ. ತನಗೆ ಕತ್ತಲಲ್ಲೂ ಸಂಪೂರ್ಣವಾಗಿ ಕಾಣುತ್ತದೆ ಎಂದು ಹೇಳಿಕೊಳ್ಳುತ್ತಿದ್ದ. ಒಂದು ದಿನ ರಾತ್ರಿ ಕತ್ತಲಲ್ಲಿ ನಸ್ರುದ್ದೀನ್ ಲಾಂದ್ರ ಹಿಡಿದು ಹೋಗುತ್ತಿದ್ದಾಗ ಆತನ ಗೆಳೆಯನೊಬ್ಬ ಎದುರು ಸಿಕ್ಕಿ,
‘ಏನು ನಸ್ರುದ್ದೀನ್! ಕತ್ತಲಲ್ಲಿ ಸಹ ನಿನಗೆ ಎಲ್ಲಾ ಕಾಣುತ್ತದೆ ಎಂದು ಹೇಳುತ್ತಿದ್ದೆ. ಈಗ ನೋಡಿದರೆ ಲಾಂದ್ರ ಹಿಡಿದು ಹೊರಟಿದ್ದೀಯೆ?’ ಎಂದ ಅವನನ್ನು ತಮಾಷೆ ಮಾಡಲು.
‘ಹೌದಪ್ಪ, ನನಗೇನೋ ಕತ್ತಲಲ್ಲಿ ಕಾಣುತ್ತದೆ. ಈ ಲಾಂದ್ರ ಹಿಡಿದಿರುವುದು ನನಗೆ ದಾರಿ ಕಾಣಲು ಅಲ್ಲ. ಇದು ನಿನ್ನಂಥವರಿಗಾಗಿ. ಕತ್ತಲಲ್ಲಿ ಏನೂ ಕಾಣದೆ ನನಗೆ ಬಂದು ಡಿಕ್ಕಿ ಹೊಡೆಯಬಾರದಲ್ಲ, ಅದಕ್ಕಾಗಿ’ ಎಂದ ನಸ್ರುದ್ದೀನ್.
ಸೈನಿಕ ನಸ್ರುದ್ದೀನ್
ಯುದ್ಧದಿಂದ ಹಿಂದಿರುಗಿದ ಕೆಲವು ಸೈನಿಕರು ತಮ್ಮ ಸಾಹಸಗಳ ಬಗ್ಗೆ ಊರಿನವರ ಮುಂದೆ ಹೇಳಿಕೊಳ್ಳುತ್ತಿದ್ದರು. ಒಬ್ಬ ಸೈನಿಕ ತಾವು ಹೇಗೆ ಶತ್ರುಗಳ ರುಂಡ ಚೆಂಡಾಡಿದೆನೆಂದು ಹೇಳಿದರೆ ಮತ್ತೊಬ್ಬ ಶತ್ರು ಬಾಣಗಳನ್ನು ತಾನು ಹೇಗೆ ಕೈಯಲ್ಲೇ ಹಿಡಿದು ಅವುಗಳನ್ನು ಶತ್ರುಗಳ ಕಡೆಗೆ ಎಸೆದು ಅವರನ್ನು ಕೊಂದೆನೆಂದು ಹೇಳುತ್ತಿದ್ದ. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಸ್ರುದ್ದೀನ್ ತಾನೂ ಸಹ ಸೈನ್ಯದಲ್ಲಿದ್ದು ಒಂದು ಸಾರಿ ಯುದ್ಧದಲ್ಲಿ ಶತ್ರು ಸೈನಿಕನೊಬ್ಬನ ಕೈಯನ್ನು ಕತ್ತರಿಸಿದೆನೆಂದು ಹೇಳಿದ. ಅದನ್ನು ಕೇಳಿಸಿಕೊಂಡ ಸೈನಿಕ,
‘ನಾನಾಗಿದ್ದಿದ್ದರೆ ಶತ್ರುವಿನ ತಲೆಯನ್ನೇ ಕತ್ತರಿಸುತ್ತಿದ್ದೆ’ ಎಂದ.
‘ನನಗೆ ಅದಕ್ಕೆ ಅವಕಾಶವೇ ಇರಲಿಲ್ಲ’ ಎಂದ ನಸ್ರುದ್ದೀನ್.
‘ಅದು ಹೇಗೆ ಸಾಧ್ಯ?’ ಕೇಳಿದ ಸೈನಿಕ.
‘ಅಷ್ಟೊತ್ತಿಗೆ ಯಾರೋ ಯಾವಾಗಲೋ ತಲೆಯನ್ನು ಕತ್ತರಿಸಿಬಿಟ್ಟಿದ್ದರು’ ಎಂದ ನಸ್ರುದ್ದೀನ್.
ಧರ್ಮ ಮತ್ತು ಗಡ್ಡ
ದೇಶದ ಮಹಾನ್ ಮತ್ತು ಪ್ರಮುಖ ಧಾರ್ಮಿಕ ಮುಖಂಡರೆಲ್ಲಾ ವೇದಿಕೆಯ ಮೇಲೆ ಸೇರಿದ್ದರು. ಅವರನ್ನು ನೋಡಲು ಮತ್ತು ಅವರ ಮಾತು ಕೇಳಲು ಜನರೆಲ್ಲಾ ಸೇರಿದ್ದರು. ನಸ್ರುದ್ದೀನ್ ಸಹ ಆ ಧಾರ್ಮಿಕ ಮಹಾನ್ ಪುರುಷರನ್ನು ನೋಡಲು ಬಂದಿದ್ದ. ಅವನ ಪಕ್ಕ ಇದ್ದ ಒಬ್ಬಾತ,
‘ನೋಡು, ಎಲ್ಲಾ ಧಾರ್ಮಿಕ ಮಹಾನ್ ಪುರುಷರು ಗಡ್ಡ ಬಿಟ್ಟಿರುತ್ತಾರೆ. ಗಡ್ಡ ಅವರ ಜ್ಞಾನ ವಿದ್ವತ್ತಿನ ಸಂಕೇತ’ ಎಂದ.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ಮನೆಗೆ ಹೊರಡಲು ಎದ್ದು ನಿಂತ. ಅದನ್ನು ನೋಡಿದ ವ್ಯಕ್ತಿ,
‘ಏಕೆ? ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.
‘ನನ್ನ ಮನೆಗೆ. ನನ್ನ ಮನೆಯಲ್ಲೇ ಒಬ್ಬ ಜ್ಞಾನ-ವಿದ್ವತ್ತು ಇರುವ ಧಾರ್ಮಿಕ ವ್ಯಕ್ತಿಯೊಬ್ಬನಿದ್ದಾನೆ’ ಎಂದ ನಸ್ರುದ್ದೀನ್.
‘ಹೌದೆ? ನನಗೆ ಆ ವಿಷಯ ತಿಳಿದೇ ಇರಲಿಲ್ಲ. ಯಾರದು ಆ ಮಹಾನ್ ಪುರುಷ?’ ಎಂದು ಕೇಳಿದ ಆ ವ್ಯಕ್ತಿ.
‘ನನ್ನ ಮೇಕೆ. ನನ್ನ ಮೇಕೆಗೆ ಇಲ್ಲಿನ ಮಹಾನ್ ಧಾರ್ಮಿಕ ಪುರುಷರಿಗಿಂತ ಉದ್ದವಾದ ಗಡ್ಡವಿದೆ’ ಎಂದು ಹೇಳಿ ನಸ್ರುದ್ದೀನ್ ಮನೆಗೆ ಹೊರಟ.
ಗಡ್ಡದ ಬಣ್ಣ
ಸುಲ್ತಾನ ಒಂದು ದಿನ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾಗ ಕ್ಷೌರಿಕ,
‘ಮಹಾ ಪ್ರಭು, ತಮ್ಮ ಗಡ್ಡದ ಕೂದಲು ಬೆಳ್ಳಗಾಗುತ್ತಿದೆ’ ಎಂದ.
ಸಿಟ್ಟಿಗೆದ್ದ ಸುಲ್ತಾನ ಕ್ಷೌರಿಕನನ್ನು ಒಂದು ವರ್ಷ ಸೆರೆಮನೆಗೆ ಹಾಕಿ ಎಂದು ಆದೇಶಿಸಿದ. ತನ್ನ ಆಸ್ತಾನಕ್ಕೆ ಬಂದ ನಂತರ ತನ್ನ ಪರಿಚಾರಕನನ್ನು ಕರೆದು ತನ್ನ ಗಡ್ಡದ ಕೂದಲ ಬಣ್ಣ ಹೇಗಿದೆ ಎಂದು ಕೇಳಿದ.
‘ತಮ್ಮ ಗಡ್ಡದ ಬಣ್ಣ ಬಹುಪಾಲು ಕಪ್ಪಗೇ ಇದೆ’ ಎಂದ ಆತ.
‘ಬಹುಪಾಲು ಎಂದರೇನು?!’ ಎಂದು ಕೂಗಿದ ಸುಲ್ತಾನ ಅವನನ್ನು ಎರಡು ವರ್ಷ ಸೆರೆಮನೆಗೆ ತಳ್ಳಿ ಎಂದು ಆದೇಶಿಸಿದ. ಮತ್ತೊಬ್ಬ ಪರಿಚಾರಕನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ಆತ ಹೆದರಿಕೊಂಡಿದ್ದ.
‘ತಮ್ಮ ಗಡ್ಡದ ಕೂದಲು ಅಪ್ಪಟ ಕಪ್ಪು ಬಣ್ಣದಿಂದ ಮಿರಮಿರನೆ ಮಿಂಚುತ್ತಿದೆ’ ಎಂದ ಆತ ಅಳುಕಿನಿಂದಲೇ.
‘ಸುಳ್ಳುಗಾರ! ಅವನಿಗೆ ಛಡಿ ಏಟುಕೊಟ್ಟು ಮೂರು ವರ್ಷ ಸೆರೆಮನೆಗೆ ಹಾಕಿ’ ಎಂದು ಅರಚಿದ ಸುಲ್ತಾನ. ಇದನ್ನೆಲ್ಲಾ ನೋಡುತ್ತಿದ್ದ ತನ್ನ ಸಲಹೆಗಾರ ಮುಲ್ಲಾ ನಸ್ರುದ್ದೀನನನ್ನು ಕರೆದು ಅವನನ್ನು ಅದೇ ಪ್ರಶ್ನೆ ಕೇಳಿದ.
‘ಸ್ವಾಮಿ, ನನಗೆ ಬಣ್ಣಗುರುಡು, ಬಣ್ಣಗಳನ್ನು ನಾನು ಗುರುತಿಸಲಾರೆ’ ಎಂದ ನಸ್ರುದ್ದೀನ್.
ಮೀನುಗಾರನಲ್ಲ
ಆ ರಾಜ್ಯದ ರಾಜ ಒಂದು ನಸ್ರುದ್ದೀನನನ್ನು ಕರೆಸಿ, ‘ನಿನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನೀನು ಹೇಳಿಕೊಂಡಿದ್ದೀಯಂತೆ! ನಿನ್ನ ಅದ್ಭುತ ಶಕ್ತಿಯಿಂದ ನಮ್ಮ ರಾಜ್ಯದ ಜನರಿಗೆ ಮೀನು ಹಿಡಿದುಕೊಡು ನೋಡೋಣ’ ಎಂದು ಸವಾಲೆಸೆದ.
‘ಸ್ವಾಮಿ, ನನ್ನಲ್ಲಿ ಅದ್ಭುತ ಶಕ್ತಿಯಿದೆ ಎಂದು ನಾನು ಹೇಳಿದ್ದು ನಿಜ. ಆದರೆ ನಾನೆಂದೂ ನಾನು ಮೀನುಗಾರನೆಂದು ಹೇಳಿಕೊಂಡಿಲ್ಲವಲ್ಲ..? ಎಂದ ನಸ್ರುದ್ದೀನ್.
ಆತುರದ ಪ್ರಾರ್ಥನೆ
ಒಂದು ದಿನ ನಸ್ರುದ್ದೀನ್ ಆತುರಾತುರವಾಗಿ ಮಸೀದಿಗೆ ಹೋಗಿ ದೇವರಿಗೆ ಆತುರಾತುರವಾಗಿಯೇ ಪ್ರಾರ್ಥನೆ ಮಾಡಿ ಹೊರಟಿದ್ದ. ಅದನ್ನು ನೋಡಿದ ಇಮಾಂ ಸಿಟ್ಟಿನಿಂದ ಅವನನ್ನು ಕರೆದು,
‘ಇದೇನು ನೀನು ಮಾಡಿದ್ದು ಪ್ರಾರ್ಥನೆಯೇ? ಪ್ರಾರ್ಥನೆ ಅಷ್ಟು ಆತುರಾತುರವಾಗಿ ಮಾಡಬಾರದು. ಇನ್ನೊಮ್ಮೆ ಮೊದಲಿನಿಂದ ನಿಧಾನವಾಗಿಯೇ ಪ್ರಾರ್ಥನೆ ಮಾಡು’ ಎಂದು ಗದರಿಸಿದ.
ನಸ್ರುದ್ದೀನ್ ಅದೇ ರೀತಿ ಮಾಡಿ ಹೊರಡಲು ಎದ್ದು ನಿಂತ.
‘ಈ ನಿನ್ನ ಎರಡನೇ ಪ್ರಾರ್ಥನೆ ಮೊದಲ ಪ್ರಾರ್ಥನೆಗಿಂತ ದೇವರಿಗೆ ಇಷ್ಟವಾಗಿರುತ್ತದಲ್ಲವೆ?’ ಕೇಳಿದ ಇಮಾಂ.
‘ಖಂಡಿತಾ ಇಲ್ಲ’ ಹೇಳಿದ ನಸ್ರುದ್ದೀನ್, ‘ಮೊದಲ ಪ್ರಾರ್ಥನೆ ಆತುರಾತುರವಾಗಿ ಮಾಡಿದ್ದರೂ ಅದು ದೇವರಿಗಾಗಿ ಮಾಡಿದೆ. ಎರಡನೇ ಪ್ರಾರ್ಥನೆ ನಿಧಾನವಾದದ್ದಾದರೂ ಅದು ಮಾಡಿದ್ದು ನಿನಗಾಗಿ.’
ಸಾಲದ ವಧುದಕ್ಷಿಣೆ
ನಸ್ರುದ್ದೀನ್ ಸರ್ಕಾರಕ್ಕೆ ಹಲವಾರು ವರ್ಷಗಳ ಕಾಲ ಕಂದಾಯವನ್ನೇ ಕಟ್ಟಿರಲಿಲ್ಲ. ಸರ್ಕಾರ ಹಲವಾರು ಬಾರಿ ಅವನಿಗೆ ಎಚ್ಚರಿಕೆ ನೀಡಿತ್ತು. ನಸ್ರುದ್ದೀನ್ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೊಂದು ದಿನ ಸರ್ಕಾರ ಅವನ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿತು. ಅಷ್ಟಾದರೂ ಅವನು ಇನ್ನೂ ಸರ್ಕಾರಕ್ಕೆ ಹತ್ತು ಸಾವಿರ ರೂಪಾಯಿ ಬಾಕಿ ತೀರಿಸಬೇಕಿತ್ತು.
ರಾಜ ಅವನ್ನನು ಕರೆಸಿ ಬಾಕಿ ತೀರಿಸುವಂತೆ ಹೇಳಿದ.
‘ನನ್ನ ಮತ್ತು ನನ್ನ ಹೆಂಡತಿಯ ಹತ್ತಿರ ಕೇವಲ ಐದು ಸಾವಿರ ರೂಪಾಯಿ ಮಾತ್ರ ಉಳಿದಿದೆ. ಆದರೆ ಆ ಹಣ ನನ್ನ ಹೆಂಡತಿಯದು’ ಎಂದ ನಸ್ರುದ್ದೀನ್.
‘ಸರ್ಕಾರದ ನಿಯಮಾನುಸಾರ ಗಂಡ ಹೆಂಡತಿಯ ಆಸ್ತಿ ಇಬ್ಬರದೂ ಒಂದೆ. ಅದನ್ನೇ ಆಕೆ ಕಟ್ಟಬೇಕು’ ಎಂದ ರಾಜ.
‘ಅದೂ ಸಾಧ್ಯವಿಲ್ಲ’ ಎಂದ ನಸ್ರುದ್ದೀನ್.
‘ಏಕೆ ಸಾಧ್ಯವಿಲ್ಲ?’ ಕೇಳಿದ ರಾಜ.
‘ಏಕೆಂದರೆ ಆಕೆಯ ಬಳಿ ಇರುವ ಐದು ಸಾವಿರವೆಂದರೆ ನಾನು ಆಕೆಗೆ ಕೊಡಬೇಕಾಗಿರುವ ವಧುದಕ್ಷಿಣೆ. ಆ ವಧುದಕ್ಷಿಣೆಯನ್ನು ನಾನಿನ್ನೂ ಆಕೆಗೆ ಕೊಟ್ಟಿಲ್ಲ, ನಾನಿನ್ನೂ ಆಕೆಗೆ ಸಾಲಗಾರನಾಗಿದ್ದೇನೆ’ ಎಂದ ನಸ್ರುದ್ದೀನ್.
ಸೋಮವಾರ, ಮೇ 20, 2013
ಸೋಮವಾರ, ಮೇ 13, 2013
ಶನಿವಾರ, ಮೇ 04, 2013
ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು
ಏಪ್ರಿಲ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 16ನೇ ಕಂತು.
ಮೂಢನಂಬಿಕೆ
ಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.
‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮುಲ್ಲಾ ಬಂದಾಗ, ‘ಕ್ಷಮಿಸು ನಸ್ರುದ್ದೀನ್. ನೀನು ಎದುರಾದದ್ದು ಅಪಶಕುನವೆಂದು ನಿನ್ನನ್ನು ಕೂಡಿಹಾಕಿದ್ದೆ. ಆದರೆ ಈ ದಿನದ ನನ್ನ ಬೇಟೆ ಚೆನ್ನಾಗಿಯೇ ನಡೆಯಿತು’ ಎಂದ ರಾಜ.
‘ನಾನು ಅಪಶಕುನವೇ? ನಾನು ಎದುರಾಗಿದ್ದಕ್ಕೆ ನಿಮಗೆ ಒಳ್ಳೆಯ ಬೇಟೆಯಾಯಿತು. ನನಗೆ ನೀವು ಎದುರಾದುದಕ್ಕೆ ಇಡೀ ದಿನ ಕತ್ತಲ ಕೋಣೆಯಲ್ಲಿ ನಾನು ಬಿದ್ದಿರಬೇಕಾಯ್ತು’ ಎಂದ ನಸ್ರುದ್ದೀನ್.
ದೇವರದಯೆ
ತಮ್ಮ ಹೊಸ ರಾಜನಿಗೆ ಏನಾದರೂ ಉಡುಗೊರೆ ಕೊಡೋಣವೆಂದು ನಸ್ರುದ್ದೀನ್ ಒಂದು ಚೀಲ ತುಂಬಾ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದ. ಅದನ್ನು ನೋಡಿದ ಪಕ್ಕದ ಮನೆಯಾತ,
‘ಏನದು ನಸ್ರುದ್ದೀನ್?’ ಎಂದು ಕೇಳಿದ.
‘ನಮ್ಮ ಹೊಸ ರಾಜನಿಗೆ ಉಡುಗೊರೆಯಾಗಿ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದೇನೆ’ ಎಂದ ನಸ್ರುದ್ದೀನ್.
‘ಏನು? ಆಲೂಗೆಡ್ಡೆಯೆ? ಅಂತಹ ದೊರೆಗೆ ಅದು ಒಳ್ಳೆಯ ಕೊಡುಗೆ ಅಲ್ಲ. ಇನ್ನೂ ಉತ್ತಮವಾದುದು ಸ್ಟ್ರಾಬೆರ್ರಿಯಂಥದನ್ನು ಕೊಡು’ ಎಂದ ನೆರೆಮನೆಯಾತ.
ಆಯಿತೆಂದು ಒಂದು ಚೀಲ ಸ್ಟ್ರಾಬೆರ್ರಿ ತುಂಬಿಕೊಂಡು ರಾಜನ ಅರಮನೆಗೆ ಹೋಗಿ ತನ್ನ ಕೊಡುಗೆ ನೀಡಿದ. ಸ್ಟ್ರಾಬೆರ್ರಿಯಂತಹ ನಿಕೃಷ್ಟ ವಸ್ತು ಕೊಡುಗೆಯಾಗಿ ನೀಡಿದ್ದನ್ನು ಕಂಡು ಸಿಟ್ಟಾದ ರಾಜ ಅವುಗಳಿಂದಲೇ ನಸ್ರುದ್ದೀನನನಿಗೆ ಹೊಡೆಯುವಂತೆ ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಅವರು ಅವುಗಳಿಂದ ಹೊಡೆಯುವಾಗ ನಸ್ರುದ್ದೀನ್ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಅದನ್ನು ನೋಡಿ ಅಚ್ಚರಿಗೊಂಡ ರಾಜ,
‘ನೀನು ನೀಡಿದ ಕೊಡುಗೆಯಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರಿಗೆ ಧನ್ಯವಾದ ಹೇಳುತ್ತಿದ್ದೀಯಲ್ಲಾ. ಏಕೆ ಮುಲ್ಲಾ?’ ಎಂದು ಕೇಳಿದ ರಾಜ.
‘ನಾನು ನಿಮಗೆ ಆಲೂಗೆಡ್ಡೆಯನ್ನು ಉಡುಗೊರೆಯಾಗಿ ಕೊಡಲಿಲ್ಲವಲ್ಲ, ಅದಕ್ಕೆ ದೇವರಿಗೆ ಧನ್ಯವಾದವನ್ನು ಹೇಳುತ್ತಿದ್ದೇನೆ’ ಎಂದ ನಸ್ರುದ್ದೀನ್.
ಒಂದು ಸೇರು ಹಸುವಿನ ಹಾಲು
ನಸ್ರುದ್ದೀನ್ ಹಾಲು ಮಾರುವವನ ಬಳಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಹೋಗಿ, ‘ಒಂದು ಸೇರು ಹಸುವಿನ ಹಾಲು ಕೊಡು’ ಎಂದ.
ಹಾಲಿನವ ಆ ಸಣ್ಣ ಪಾತ್ರೆ ನೋಡಿ, ‘ಅಷ್ಟು ಸಣ್ಣ ಪಾತ್ರೆಯಲ್ಲಿ ಒಂದು ಸೇರು ಹಸುವಿನ ಹಾಲು ಹಿಡಿಸುವುದಿಲ್ಲ’ ಎಂದ.
‘ಹೌದೆ, ಹಾಗಾದರೆ ಒಂದು ಸೇರು ಮೇಕೆಯ ಹಾಲೇ ಕೊಡು. ಅದಾದರೆ ಹಿಡಿಸಬಹುದೇನೋ’ ಎಂದ ನಸ್ರುದ್ದೀನ್.
ಉತ್ತಮ ಗೆಳೆಯ
ಗೆಳೆಯ: ‘ನಸ್ರುದ್ದೀನ್ ನಿನ್ನ ಅತ್ಯುತ್ತಮ ಗೆಳೆಯ ಯಾರು?’
ನಸ್ರುದ್ದೀನ್: ‘ಯಾರು ನನಗೆ ಅದ್ದೂರಿ ಭೋಜನ ಹಾಕಿಸುವರೋ ಅವನೇ ನನ್ನ ಅತ್ಯುತ್ತಮ ಗೆಳೆಯ’
ಗೆಳೆಯ: ‘ನಾನು ನಿನಗೆ ಅದ್ದೂರಿ ಭೋಜನ ಹಾಕಿಸುತ್ತೇನೆ. ಹಾಗಾದರೆ ನಾನು ನಿನ್ನ ಅತ್ಯುತ್ತಮ ಗೆಳೆಯ ತಾನೆ?’
ನಸ್ರುದ್ದೀನ್: ‘ಗೆಳೆತನ ಹಾಗೆಲ್ಲಾ ಸಾಲದ ರೂಪದಲ್ಲಿ ಕೊಡಲಾಗದು’
ಅಪರೂಪ
ಪಕ್ಕದ ರಾಜ್ಯದ ಪ್ರಧಾನ ಮಂತ್ರಿ ಆ ಊರಿಗೆ ಬಂದಿದ್ದವನು ನಸ್ರುದ್ದೀನ್ ನಡೆಸುತ್ತಿದ್ದ ಉಪಾಹಾರ ಗೃಹ ಅತ್ಯಂತ ಜನಪ್ರಿಯವೆಂದು ಕೇಳಿ ಅಲ್ಲಿಗೆ ಭೋಜನಕ್ಕೆ ಬಂದನು. ಅಲ್ಲಿ ರುಚಿಕರವಾದ ಕುರಿಯ ಮಾಂಸದ ಊಟ ಮಾಡಿ ಆ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಉಪಾಹಾರ ಗೃಹದ ಮಾಲೀಕನಾದ ನಸ್ರುದ್ದೀನನನ್ನು ಕೇಳಿದನು.
‘ಐವತ್ತು ಚಿನ್ನದ ನಾಣ್ಯಗಳು’ ಎಂದ ನಸ್ರುದ್ದೀನ್.
‘ಐವತ್ತು ಚಿನ್ನದ ನಾಣ್ಯಗಳೇ? ದರ ತೀರಾ ಹೆಚ್ಚಾಯಿತಲ್ಲ? ಏಕೆ ಈ ರಾಜ್ಯದಲ್ಲಿ ಕುರಿಗಳು ಅಷ್ಟು ಅಪರೂಪವೇ?’ ಕೇಳಿದ ಪ್ರಧಾನ ಮಂತ್ರಿ.
‘ಕುರಿಗಳೇನು ಅಪರೂಪವಲ್ಲ, ಆದರೆ ಭೋಜನಕ್ಕೆ ಭೇಟಿ ನೀಡುವ ಪ್ರಧಾನ ಮಂತ್ರಿಗಳು ಅಪರೂಪ’ ಎಂದ ನಸ್ರುದ್ದೀನ್.
ಕೆಂಪನೆ ಹಣ್ಣು
ನಸ್ರುದ್ದೀನ್ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದ. ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಆತನಿಗೆ ಹಸಿವಾಗುತ್ತಿತ್ತು. ಏನಾದರೂ ತಿನ್ನಬೇಕೆಂದು ಯೋಚಿಸುತ್ತಿರುವಾಗ ಯಾರೋ ಕೆಂಪನೆ ಹಣ್ಣುಗಳನ್ನು ಮಾರುತ್ತಿದ್ದರು. ಆ ಹಣ್ಣುಗಳು ಏನೆಂದು ತಿಳಿದಿರದಿದ್ದರೂ ನೋಡಲು ಚೆನ್ನಾಗಿ ಕಾಣುತ್ತಿದ್ದುದರಿಂದ ಎರಡು ಸೇರು ಹಾಕಿಸಿಕೊಂಡು ಮರದ ಕೆಳಗೆ ಕೂತು ತಿನ್ನತೊಡಗಿದ. ಕೂಡಲೇ ಖಾರದಿಂದಾಗಿ ನಾಲಿಗೆ ಉರಿಯತೊಡಗಿತು, ಕಣ್ಣು ಕೆಂಪಾಗಿ ಕಣ್ಣಲಿ ನೀರು ಹರಿಯತೊಡಗಿತು ಹಾಗೂ ಬೆವರು ಸುರಿಯತೊಡಗಿತು.
ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬಾತನನ್ನು ತಾನು ತಿನ್ನುತ್ತಿರುವುದು ಯಾವ ಹಣ್ಣು, ಏಕೆ ಅವು ಅಷ್ಟೊಂದು ಖಾರವಾಗಿವೆ ಎಂದು ಕೇಳಿದ.
‘ಅಯ್ಯೋ, ಅವು ಹಣ್ಣಲ್ಲ. ಅವು ಮೆಣಸಿನಕಾಯಿಗಳು. ಅವುಗಳನ್ನು ಯಾರೂ ನೇರವಾಗಿ ತಿನ್ನುವುದಿಲ್ಲ, ಅವುಗಳನ್ನು ಸ್ವಲ್ಪ ಸ್ವಲ್ಪ ಆಹಾರದಲ್ಲಿ ಬಳಸುತ್ತಾರೆ’ ಎಂದ ಒಬ್ಬ ಹಾದಿಹೋಕ.
ಅದನ್ನು ಕೇಳಿದ ನಂತರವೂ ನಸ್ರುದ್ದೀನ್ ಅದನ್ನು ಕಷ್ಟದಲ್ಲಿ ತಿನ್ನತೊಡಗಿದ. ಅದನ್ನು ನೋಡಿದ ಹಾದಿಹೋಕ,
‘ಖಾರವೆಂದು ತಿಳಿದನಂತರವೂ ಏಕೆ ತಿನ್ನುತ್ತಿದ್ದೀರಿ?’ ಎಂದು ಕೇಳಿದ.
‘ಏನು ಮಾಡಲಿ? ಅದಕ್ಕೆ ಈಗಾಗಲೇ ನಾನು ಹಣವನ್ನು ಕೊಟ್ಟುಬಿಟ್ಟಿದ್ದೇನಲ್ಲ! ನಾನೀಗ ತಿನ್ನುತ್ತಿರುವುದು ಯಾವುದೇ ಹಣ್ಣನಲ್ಲ, ನನ್ನ ಹಣವನ್ನು’ ಎಂದ ನಸ್ರುದ್ದೀನ್.
ನಾನು ಯಾರು?
ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಬೇಕಾಯ್ತು. ಅಷ್ಟು ದೊಡ್ಡ ಪಟ್ಟಣ, ಅಷ್ಟೊಂದು ಜನಜಂಗುಳಿ ಆತ ಹಿಂದೆಂದೂ ನೋಡಿರಲಿಲ್ಲ. ಆ ಜನರ ಮಧ್ಯೆ ತಾನು ಕಳೆದುಹೋಗಬಹುದು ಹಾಗೂ ತನ್ನನ್ನೇ ತಾನು ಗುರುತಿಸಲು ಸಾಧ್ಯವಾಗದಿರಬಹುದು ಎಂದನ್ನಿಸಿತು ಆತನಿಗೆ. ರಾತ್ರಿ ಛತ್ರವೊಂದರಲ್ಲಿ ಹಲವರು ಜನರ ನಡುವೆ ಮಲಗುವಾಗ ಬೆಳಿಗ್ಗೆ ಎದ್ದನಂತರ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಲೆಂದು ತಾನು ತಂದಿದ್ದ ಚೀಲವನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅದನ್ನು ಗಮನಿಸುತ್ತಿದ್ದ ಒಬ್ಬಾತ ತಮಾಷೆ ಮಾಡೋಣವೆಂದು ನಸ್ರುದ್ದೀನ್ ನಿದ್ರಿಸಿದ ನಂತರ ಆ ಚೀಲವನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡು ಮಲಗಿದ. ಬೆಳಗ್ಗೆ ಎದ್ದ ನಸ್ರುದ್ದೀನ್ ತನ್ನ ಚೀಲ ಮತ್ತೊಬ್ಬ ವ್ಯಕ್ತಿಯ ಕಾಲಲ್ಲಿರುವುದನ್ನು ಕಂಡು,
‘ಹೋ, ನಾನೇ ಆ ವ್ಯಕ್ತಿ’ ಎಂದುಕೊಂಡ.
ತಕ್ಷಣವೇ ಏನೋ ಹೊಳೆದಂತಾಗಿ ಗಾಬರಿಯಿಂದ ಆ ವ್ಯಕ್ತಿಯನ್ನು ಎಬ್ಬಿಸಿ,
‘ಹೇ! ನೀನು ನಾನಾದರೆ, ನಾನು ಯಾರು?’ ಎಂದು ಅರಚಿದ.
ಏಕೆ ಹೋದೆ?
ನಸ್ರುದ್ದೀನ್ ಸ್ಮಶಾನದಲ್ಲಿ ಒಂದು ಸಮಾಧಿಯ ಮುಂದೆ ಕೂತು ರೋಧಿಸುತ್ತಿದ್ದ.
‘ಅಯ್ಯೋ! ಇಷ್ಟು ಬೇಗ ನಿನಗೆ ಸಾವು ಬರಬಾರದಿತ್ತು! ನನ್ನನ್ನು ಈ ದುಃಸ್ಥಿತಿಗೆ ತಳ್ಳಿ ಏಕೆ ಬಿಟ್ಟು ಹೋದೆ?’ ಎಂದು ಅಳುತ್ತಿದ್ದ.
ಅಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ನಸ್ರುದ್ದೀನನನ್ನು ಕಂಡು ಮರುಕ ಹುಟ್ಟಿ, ‘ಏಕಪ್ಪಾ ಅಳುತ್ತಿದ್ದೀಯ? ಯಾರ ಸಮಾಧಿಯಿದು? ನಿನ್ನ ಮಗನದೆ?’ ಎಂದು ಕೇಳಿದ.
‘ಅಲ್ಲಾ, ಈ ಸಮಾಧಿ ನನ್ನ ಪತ್ನಿಯ ಮೊದಲ ಗಂಡನದು’ ಎಂದ ನಸ್ರುದ್ದೀನ್.
ಸರಿಯಾದ ಪದ
ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ಸಂಜೆ ನದಿಯ ದಡದಲ್ಲಿ ನಡೆದು ಹೋಗುತ್ತಿದ್ದಾಗ ನದಿಯ ಪ್ರವಾಹದಲ್ಲಿ ಒಬ್ಬಾತ ಸಿಕ್ಕಿಬಿದ್ದು ಮರದ ಬೇರೊಂದನ್ನು ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದ. ಅದನ್ನು ನೋಡಿದ ನಸ್ರುದ್ದೀನ್ ಕೂಡಲೇ ಆತನ ಬಳಿಗೆ ಹೋಗಿ ತನ್ನ ಕೈ ಚಾಚಿ,
‘ನಿನ್ನ ಕೈ ಕೊಡು, ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ. ಆತ ಕೈ ಕೊಡಲೇ ಇಲ್ಲ.
‘ನಿನ್ನ ಉದ್ಯೋಗ ಯಾವುದು?’ ಎಂದು ನಸ್ರುದ್ದೀನ್ ಆ ವ್ಯಕ್ತಿಯನ್ನು ಕೇಳಿದ.
‘ನಾನೊಬ್ಬ ಕಂದಾಯ ವಸೂಲಿಗಾರ’ ಎಂದ ಆ ವ್ಯಕ್ತಿ.
‘ಹೌದೆ. ಹಾಗಾದರೆ ನನ್ನ ಕೈ ತಗೋ. ಅದನ್ನು ಹಿಡಿದುಕೊ, ನಿನ್ನನ್ನು ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ ನಸ್ರುದ್ದೀನ್. ಆ ವ್ಯಕ್ತಿ ನಸ್ರುದ್ದೀನ್ ಚಾಚಿದ ಕೈ ಹಿಡಿದುಕೊಂಡ. ನಸ್ರುದ್ದೀನ್ ಆತನನ್ನು ಮೇಲಕ್ಕೆಳೆದು ಆತನನ್ನು ಬದುಕಿಸಿದ. ಅಲ್ಲಿಂದ ಹೊರಟಂತೆ ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳಿದ,
‘ಈ ಕಂದಾಯ ವಸೂಲಿಗಾರರಿಗೆ ಕೊಡು ಎಂದರೆ ಅರ್ಥವಾಗುವುದಿಲ್ಲ, ತಗೋ ಎಂದರೆ ಮಾತ್ರ ಅರ್ಥವಾಗುತ್ತದೆ’ ಎಂದ.

ಬುಧವಾರ, ಮೇ 01, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)