ಚಿತ್ರಗಳು: ಮುರಳೀಧರ ರಾಠೋಡ್
ಮೂಢನಂಬಿಕೆ
ಆ ರಾಜ್ಯದ ರಾಜನಂಬಿಕೆ ಮೂಢನಂಬಿಕೆಗಳಲ್ಲಿ ಅತೀವ ವಿಶ್ವಾಸವಿತ್ತು. ಒಂದು ದಿನ ಆತ ಬೆಳಿಗ್ಗೆ ಬೇಟೆಗೆಂದು ಹೊರಟ. ದಾರಿಯಲ್ಲಿ ಮುಲ್ಲಾ ನಸ್ರುದ್ದೀನ್ ಎದುರಾದ.
‘ಹೋ. ಮುಲ್ಲಾಗಳು ಅಪಶಕುನದ ಸಂಕೇತ. ಹೋದ ಕೆಲಸ ಆಗುವುದಿಲ್ಲ. ಅವನನ್ನು ಕಟ್ಟಿ ಸಂಜೆಯವರೆಗೂ ಕೋಣೆಯಲ್ಲಿ ಕೂಡಿಹಾಕಿ’ ಎಂದ. ಸೈನಿಕರು ಅದೇ ರೀತಿ ಮಾಡಿದರು. ಆದರೆ ಆ ದಿನ ರಾಜನ ಬೇಟೆ ಭರ್ಜರಿಯಾಗಿಯೇ ನಡೆಯಿತು. ರಾಜನಿಗೆ ಸಂತೋಷವೂ ಆಯಿತು. ಸಂಜೆ ಮುಲ್ಲಾನನ್ನು ಬಂಧಮುಕ್ತಗೊಳಿಸಿ ಕರೆತರಲು ಹೇಳಿದನು. ಮುಲ್ಲಾ ಬಂದಾಗ, ‘ಕ್ಷಮಿಸು ನಸ್ರುದ್ದೀನ್. ನೀನು ಎದುರಾದದ್ದು ಅಪಶಕುನವೆಂದು ನಿನ್ನನ್ನು ಕೂಡಿಹಾಕಿದ್ದೆ. ಆದರೆ ಈ ದಿನದ ನನ್ನ ಬೇಟೆ ಚೆನ್ನಾಗಿಯೇ ನಡೆಯಿತು’ ಎಂದ ರಾಜ.
‘ನಾನು ಅಪಶಕುನವೇ? ನಾನು ಎದುರಾಗಿದ್ದಕ್ಕೆ ನಿಮಗೆ ಒಳ್ಳೆಯ ಬೇಟೆಯಾಯಿತು. ನನಗೆ ನೀವು ಎದುರಾದುದಕ್ಕೆ ಇಡೀ ದಿನ ಕತ್ತಲ ಕೋಣೆಯಲ್ಲಿ ನಾನು ಬಿದ್ದಿರಬೇಕಾಯ್ತು’ ಎಂದ ನಸ್ರುದ್ದೀನ್.
ದೇವರದಯೆ
ತಮ್ಮ ಹೊಸ ರಾಜನಿಗೆ ಏನಾದರೂ ಉಡುಗೊರೆ ಕೊಡೋಣವೆಂದು ನಸ್ರುದ್ದೀನ್ ಒಂದು ಚೀಲ ತುಂಬಾ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದ. ಅದನ್ನು ನೋಡಿದ ಪಕ್ಕದ ಮನೆಯಾತ,
‘ಏನದು ನಸ್ರುದ್ದೀನ್?’ ಎಂದು ಕೇಳಿದ.
‘ನಮ್ಮ ಹೊಸ ರಾಜನಿಗೆ ಉಡುಗೊರೆಯಾಗಿ ಆಲೂಗೆಡ್ಡೆ ಕೊಂಡೊಯ್ಯುತ್ತಿದ್ದೇನೆ’ ಎಂದ ನಸ್ರುದ್ದೀನ್.
‘ಏನು? ಆಲೂಗೆಡ್ಡೆಯೆ? ಅಂತಹ ದೊರೆಗೆ ಅದು ಒಳ್ಳೆಯ ಕೊಡುಗೆ ಅಲ್ಲ. ಇನ್ನೂ ಉತ್ತಮವಾದುದು ಸ್ಟ್ರಾಬೆರ್ರಿಯಂಥದನ್ನು ಕೊಡು’ ಎಂದ ನೆರೆಮನೆಯಾತ.
ಆಯಿತೆಂದು ಒಂದು ಚೀಲ ಸ್ಟ್ರಾಬೆರ್ರಿ ತುಂಬಿಕೊಂಡು ರಾಜನ ಅರಮನೆಗೆ ಹೋಗಿ ತನ್ನ ಕೊಡುಗೆ ನೀಡಿದ. ಸ್ಟ್ರಾಬೆರ್ರಿಯಂತಹ ನಿಕೃಷ್ಟ ವಸ್ತು ಕೊಡುಗೆಯಾಗಿ ನೀಡಿದ್ದನ್ನು ಕಂಡು ಸಿಟ್ಟಾದ ರಾಜ ಅವುಗಳಿಂದಲೇ ನಸ್ರುದ್ದೀನನನಿಗೆ ಹೊಡೆಯುವಂತೆ ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ಅವರು ಅವುಗಳಿಂದ ಹೊಡೆಯುವಾಗ ನಸ್ರುದ್ದೀನ್ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಅದನ್ನು ನೋಡಿ ಅಚ್ಚರಿಗೊಂಡ ರಾಜ,
‘ನೀನು ನೀಡಿದ ಕೊಡುಗೆಯಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರಿಗೆ ಧನ್ಯವಾದ ಹೇಳುತ್ತಿದ್ದೀಯಲ್ಲಾ. ಏಕೆ ಮುಲ್ಲಾ?’ ಎಂದು ಕೇಳಿದ ರಾಜ.
‘ನಾನು ನಿಮಗೆ ಆಲೂಗೆಡ್ಡೆಯನ್ನು ಉಡುಗೊರೆಯಾಗಿ ಕೊಡಲಿಲ್ಲವಲ್ಲ, ಅದಕ್ಕೆ ದೇವರಿಗೆ ಧನ್ಯವಾದವನ್ನು ಹೇಳುತ್ತಿದ್ದೇನೆ’ ಎಂದ ನಸ್ರುದ್ದೀನ್.
ಒಂದು ಸೇರು ಹಸುವಿನ ಹಾಲು
ನಸ್ರುದ್ದೀನ್ ಹಾಲು ಮಾರುವವನ ಬಳಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಹೋಗಿ, ‘ಒಂದು ಸೇರು ಹಸುವಿನ ಹಾಲು ಕೊಡು’ ಎಂದ.
ಹಾಲಿನವ ಆ ಸಣ್ಣ ಪಾತ್ರೆ ನೋಡಿ, ‘ಅಷ್ಟು ಸಣ್ಣ ಪಾತ್ರೆಯಲ್ಲಿ ಒಂದು ಸೇರು ಹಸುವಿನ ಹಾಲು ಹಿಡಿಸುವುದಿಲ್ಲ’ ಎಂದ.
‘ಹೌದೆ, ಹಾಗಾದರೆ ಒಂದು ಸೇರು ಮೇಕೆಯ ಹಾಲೇ ಕೊಡು. ಅದಾದರೆ ಹಿಡಿಸಬಹುದೇನೋ’ ಎಂದ ನಸ್ರುದ್ದೀನ್.
ಉತ್ತಮ ಗೆಳೆಯ
ಗೆಳೆಯ: ‘ನಸ್ರುದ್ದೀನ್ ನಿನ್ನ ಅತ್ಯುತ್ತಮ ಗೆಳೆಯ ಯಾರು?’
ನಸ್ರುದ್ದೀನ್: ‘ಯಾರು ನನಗೆ ಅದ್ದೂರಿ ಭೋಜನ ಹಾಕಿಸುವರೋ ಅವನೇ ನನ್ನ ಅತ್ಯುತ್ತಮ ಗೆಳೆಯ’
ಗೆಳೆಯ: ‘ನಾನು ನಿನಗೆ ಅದ್ದೂರಿ ಭೋಜನ ಹಾಕಿಸುತ್ತೇನೆ. ಹಾಗಾದರೆ ನಾನು ನಿನ್ನ ಅತ್ಯುತ್ತಮ ಗೆಳೆಯ ತಾನೆ?’
ನಸ್ರುದ್ದೀನ್: ‘ಗೆಳೆತನ ಹಾಗೆಲ್ಲಾ ಸಾಲದ ರೂಪದಲ್ಲಿ ಕೊಡಲಾಗದು’
ಅಪರೂಪ
ಪಕ್ಕದ ರಾಜ್ಯದ ಪ್ರಧಾನ ಮಂತ್ರಿ ಆ ಊರಿಗೆ ಬಂದಿದ್ದವನು ನಸ್ರುದ್ದೀನ್ ನಡೆಸುತ್ತಿದ್ದ ಉಪಾಹಾರ ಗೃಹ ಅತ್ಯಂತ ಜನಪ್ರಿಯವೆಂದು ಕೇಳಿ ಅಲ್ಲಿಗೆ ಭೋಜನಕ್ಕೆ ಬಂದನು. ಅಲ್ಲಿ ರುಚಿಕರವಾದ ಕುರಿಯ ಮಾಂಸದ ಊಟ ಮಾಡಿ ಆ ಊಟಕ್ಕೆ ಎಷ್ಟು ಹಣ ಕೊಡಬೇಕೆಂದು ಉಪಾಹಾರ ಗೃಹದ ಮಾಲೀಕನಾದ ನಸ್ರುದ್ದೀನನನ್ನು ಕೇಳಿದನು.
‘ಐವತ್ತು ಚಿನ್ನದ ನಾಣ್ಯಗಳು’ ಎಂದ ನಸ್ರುದ್ದೀನ್.
‘ಐವತ್ತು ಚಿನ್ನದ ನಾಣ್ಯಗಳೇ? ದರ ತೀರಾ ಹೆಚ್ಚಾಯಿತಲ್ಲ? ಏಕೆ ಈ ರಾಜ್ಯದಲ್ಲಿ ಕುರಿಗಳು ಅಷ್ಟು ಅಪರೂಪವೇ?’ ಕೇಳಿದ ಪ್ರಧಾನ ಮಂತ್ರಿ.
‘ಕುರಿಗಳೇನು ಅಪರೂಪವಲ್ಲ, ಆದರೆ ಭೋಜನಕ್ಕೆ ಭೇಟಿ ನೀಡುವ ಪ್ರಧಾನ ಮಂತ್ರಿಗಳು ಅಪರೂಪ’ ಎಂದ ನಸ್ರುದ್ದೀನ್.
ಕೆಂಪನೆ ಹಣ್ಣು
ನಸ್ರುದ್ದೀನ್ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದ. ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಆತನಿಗೆ ಹಸಿವಾಗುತ್ತಿತ್ತು. ಏನಾದರೂ ತಿನ್ನಬೇಕೆಂದು ಯೋಚಿಸುತ್ತಿರುವಾಗ ಯಾರೋ ಕೆಂಪನೆ ಹಣ್ಣುಗಳನ್ನು ಮಾರುತ್ತಿದ್ದರು. ಆ ಹಣ್ಣುಗಳು ಏನೆಂದು ತಿಳಿದಿರದಿದ್ದರೂ ನೋಡಲು ಚೆನ್ನಾಗಿ ಕಾಣುತ್ತಿದ್ದುದರಿಂದ ಎರಡು ಸೇರು ಹಾಕಿಸಿಕೊಂಡು ಮರದ ಕೆಳಗೆ ಕೂತು ತಿನ್ನತೊಡಗಿದ. ಕೂಡಲೇ ಖಾರದಿಂದಾಗಿ ನಾಲಿಗೆ ಉರಿಯತೊಡಗಿತು, ಕಣ್ಣು ಕೆಂಪಾಗಿ ಕಣ್ಣಲಿ ನೀರು ಹರಿಯತೊಡಗಿತು ಹಾಗೂ ಬೆವರು ಸುರಿಯತೊಡಗಿತು.
ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬಾತನನ್ನು ತಾನು ತಿನ್ನುತ್ತಿರುವುದು ಯಾವ ಹಣ್ಣು, ಏಕೆ ಅವು ಅಷ್ಟೊಂದು ಖಾರವಾಗಿವೆ ಎಂದು ಕೇಳಿದ.
‘ಅಯ್ಯೋ, ಅವು ಹಣ್ಣಲ್ಲ. ಅವು ಮೆಣಸಿನಕಾಯಿಗಳು. ಅವುಗಳನ್ನು ಯಾರೂ ನೇರವಾಗಿ ತಿನ್ನುವುದಿಲ್ಲ, ಅವುಗಳನ್ನು ಸ್ವಲ್ಪ ಸ್ವಲ್ಪ ಆಹಾರದಲ್ಲಿ ಬಳಸುತ್ತಾರೆ’ ಎಂದ ಒಬ್ಬ ಹಾದಿಹೋಕ.
ಅದನ್ನು ಕೇಳಿದ ನಂತರವೂ ನಸ್ರುದ್ದೀನ್ ಅದನ್ನು ಕಷ್ಟದಲ್ಲಿ ತಿನ್ನತೊಡಗಿದ. ಅದನ್ನು ನೋಡಿದ ಹಾದಿಹೋಕ,
‘ಖಾರವೆಂದು ತಿಳಿದನಂತರವೂ ಏಕೆ ತಿನ್ನುತ್ತಿದ್ದೀರಿ?’ ಎಂದು ಕೇಳಿದ.
‘ಏನು ಮಾಡಲಿ? ಅದಕ್ಕೆ ಈಗಾಗಲೇ ನಾನು ಹಣವನ್ನು ಕೊಟ್ಟುಬಿಟ್ಟಿದ್ದೇನಲ್ಲ! ನಾನೀಗ ತಿನ್ನುತ್ತಿರುವುದು ಯಾವುದೇ ಹಣ್ಣನಲ್ಲ, ನನ್ನ ಹಣವನ್ನು’ ಎಂದ ನಸ್ರುದ್ದೀನ್.
ನಾನು ಯಾರು?
ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗಬೇಕಾಯ್ತು. ಅಷ್ಟು ದೊಡ್ಡ ಪಟ್ಟಣ, ಅಷ್ಟೊಂದು ಜನಜಂಗುಳಿ ಆತ ಹಿಂದೆಂದೂ ನೋಡಿರಲಿಲ್ಲ. ಆ ಜನರ ಮಧ್ಯೆ ತಾನು ಕಳೆದುಹೋಗಬಹುದು ಹಾಗೂ ತನ್ನನ್ನೇ ತಾನು ಗುರುತಿಸಲು ಸಾಧ್ಯವಾಗದಿರಬಹುದು ಎಂದನ್ನಿಸಿತು ಆತನಿಗೆ. ರಾತ್ರಿ ಛತ್ರವೊಂದರಲ್ಲಿ ಹಲವರು ಜನರ ನಡುವೆ ಮಲಗುವಾಗ ಬೆಳಿಗ್ಗೆ ಎದ್ದನಂತರ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಲೆಂದು ತಾನು ತಂದಿದ್ದ ಚೀಲವನ್ನು ತನ್ನ ಕಾಲಿಗೆ ಕಟ್ಟಿಕೊಂಡ. ಅದನ್ನು ಗಮನಿಸುತ್ತಿದ್ದ ಒಬ್ಬಾತ ತಮಾಷೆ ಮಾಡೋಣವೆಂದು ನಸ್ರುದ್ದೀನ್ ನಿದ್ರಿಸಿದ ನಂತರ ಆ ಚೀಲವನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡು ಮಲಗಿದ. ಬೆಳಗ್ಗೆ ಎದ್ದ ನಸ್ರುದ್ದೀನ್ ತನ್ನ ಚೀಲ ಮತ್ತೊಬ್ಬ ವ್ಯಕ್ತಿಯ ಕಾಲಲ್ಲಿರುವುದನ್ನು ಕಂಡು,
‘ಹೋ, ನಾನೇ ಆ ವ್ಯಕ್ತಿ’ ಎಂದುಕೊಂಡ.
ತಕ್ಷಣವೇ ಏನೋ ಹೊಳೆದಂತಾಗಿ ಗಾಬರಿಯಿಂದ ಆ ವ್ಯಕ್ತಿಯನ್ನು ಎಬ್ಬಿಸಿ,
‘ಹೇ! ನೀನು ನಾನಾದರೆ, ನಾನು ಯಾರು?’ ಎಂದು ಅರಚಿದ.
ಏಕೆ ಹೋದೆ?
ನಸ್ರುದ್ದೀನ್ ಸ್ಮಶಾನದಲ್ಲಿ ಒಂದು ಸಮಾಧಿಯ ಮುಂದೆ ಕೂತು ರೋಧಿಸುತ್ತಿದ್ದ.
‘ಅಯ್ಯೋ! ಇಷ್ಟು ಬೇಗ ನಿನಗೆ ಸಾವು ಬರಬಾರದಿತ್ತು! ನನ್ನನ್ನು ಈ ದುಃಸ್ಥಿತಿಗೆ ತಳ್ಳಿ ಏಕೆ ಬಿಟ್ಟು ಹೋದೆ?’ ಎಂದು ಅಳುತ್ತಿದ್ದ.
ಅಲ್ಲೇ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ನಸ್ರುದ್ದೀನನನ್ನು ಕಂಡು ಮರುಕ ಹುಟ್ಟಿ, ‘ಏಕಪ್ಪಾ ಅಳುತ್ತಿದ್ದೀಯ? ಯಾರ ಸಮಾಧಿಯಿದು? ನಿನ್ನ ಮಗನದೆ?’ ಎಂದು ಕೇಳಿದ.
‘ಅಲ್ಲಾ, ಈ ಸಮಾಧಿ ನನ್ನ ಪತ್ನಿಯ ಮೊದಲ ಗಂಡನದು’ ಎಂದ ನಸ್ರುದ್ದೀನ್.
ಸರಿಯಾದ ಪದ
ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ಸಂಜೆ ನದಿಯ ದಡದಲ್ಲಿ ನಡೆದು ಹೋಗುತ್ತಿದ್ದಾಗ ನದಿಯ ಪ್ರವಾಹದಲ್ಲಿ ಒಬ್ಬಾತ ಸಿಕ್ಕಿಬಿದ್ದು ಮರದ ಬೇರೊಂದನ್ನು ಹಿಡಿದು ಸಹಾಯಕ್ಕಾಗಿ ಕೂಗುತ್ತಿದ್ದ. ಅದನ್ನು ನೋಡಿದ ನಸ್ರುದ್ದೀನ್ ಕೂಡಲೇ ಆತನ ಬಳಿಗೆ ಹೋಗಿ ತನ್ನ ಕೈ ಚಾಚಿ,
‘ನಿನ್ನ ಕೈ ಕೊಡು, ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ. ಆತ ಕೈ ಕೊಡಲೇ ಇಲ್ಲ.
‘ನಿನ್ನ ಉದ್ಯೋಗ ಯಾವುದು?’ ಎಂದು ನಸ್ರುದ್ದೀನ್ ಆ ವ್ಯಕ್ತಿಯನ್ನು ಕೇಳಿದ.
‘ನಾನೊಬ್ಬ ಕಂದಾಯ ವಸೂಲಿಗಾರ’ ಎಂದ ಆ ವ್ಯಕ್ತಿ.
‘ಹೌದೆ. ಹಾಗಾದರೆ ನನ್ನ ಕೈ ತಗೋ. ಅದನ್ನು ಹಿಡಿದುಕೊ, ನಿನ್ನನ್ನು ಮೇಲಕ್ಕೆ ಎಳೆದುಕೊಳ್ಳುತ್ತೇನೆ’ ಎಂದ ನಸ್ರುದ್ದೀನ್. ಆ ವ್ಯಕ್ತಿ ನಸ್ರುದ್ದೀನ್ ಚಾಚಿದ ಕೈ ಹಿಡಿದುಕೊಂಡ. ನಸ್ರುದ್ದೀನ್ ಆತನನ್ನು ಮೇಲಕ್ಕೆಳೆದು ಆತನನ್ನು ಬದುಕಿಸಿದ. ಅಲ್ಲಿಂದ ಹೊರಟಂತೆ ನಸ್ರುದ್ದೀನ್ ತನ್ನ ಗೆಳೆಯನಿಗೆ ಹೇಳಿದ,
‘ಈ ಕಂದಾಯ ವಸೂಲಿಗಾರರಿಗೆ ಕೊಡು ಎಂದರೆ ಅರ್ಥವಾಗುವುದಿಲ್ಲ, ತಗೋ ಎಂದರೆ ಮಾತ್ರ ಅರ್ಥವಾಗುತ್ತದೆ’ ಎಂದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ