ಬುಧವಾರ, ನವೆಂಬರ್ 29, 2017

ಮಾಂತ್ರಿಕ ಕತೆಗಾರ - ಸಾದತ್ ಹಸನ್ ಮಂಟೊ




6ನೇ ಮೇ 2012ರಂದು `ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ:

ನಿಮಗೆ ನನ್ನ ಕತೆಗಳು ಅಸಹನೀಯ ಎನ್ನಿಸಿದರೆ ಅದು ನನ್ನ ಕತೆಗಳ ತಪ್ಪಲ್ಲ, ಈಗಿನ ಸಮಯವೇ ಹಾಗಿದೆ. ನಾನು ಕತೆಗಳಲ್ಲಿ ಚಿತ್ರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಕತೆಗಳ ಮೇಲೆ ಹೊರಿಸಿರುವ ಅಪರಾಧ ವಾಸ್ತವವಾಗಿ ವ್ಯವಸ್ಥೆಯಲ್ಲಿನ ಹೊಲಸಾಗಿದೆ... ನೀವು ನನ್ನ ಸಾಹಿತ್ಯವನ್ನು ವಿರೋಧಿಸುವಿರಿ ಎಂದಾದರೆ, ಅಂತಹ ಸಾಹಿತ್ಯ ರಚನೆಗೆ ಪ್ರೇರಣೆ ನೀಡುವ ಈಗಿನ ವ್ಯವಸ್ಥೆಯನ್ನು ಮೊದಲಿಗೆ ಸರಿಪಡಿಸಿ...’ ಎಂದು ಹೇಳಿದ ಸಾದತ್ ಹಸನ್ ಮಂಟೊ (11.5.1912-18.1.1955) ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ತನ್ನ ಕತೆಗಳಲ್ಲಿ ವಿಭಜನೆಯ ದುರಂತವನ್ನಷ್ಟೇ ಚಿತ್ರಿಸಲಿಲ್ಲ; ಇಡೀ ಪ್ರಕ್ರಿಯೆಯ ವಿವೇಚನಾಶೂನ್ಯ ಅಸಂಬದ್ಧತೆಯನ್ನೂ ಲೇವಡಿ ಮಾಡಿದ್ದಾನೆ. ‘ಟೋಬಾ ಟೇಕ್ ಸಿಂಗ್ ಕತೆಯಲ್ಲಿ ಬರುವಹುಚ್ಚ ಮಾಂಟೋ ಅಲ್ಲದೆ ಮತ್ತಾರೂ ಅಲ್ಲ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, ‘ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ ಎಂದಿದ್ದಾನೆ. ಆದರೆ ಬಾಂಬೆಯೇ ಅವನನ್ನು ತಿರಸ್ಕರಿಸಿದಾಗ ಅವನು ಪಾಕಿಸ್ತಾನಕ್ಕೆ ಹೋಗಲೇಬೇಕಾಯ್ತು.
      ಕಾಶ್ಮೀರಿ ಮೂಲದವನಾದ ಮಂಟೊ ಹುಟ್ಟಿದ್ದು ಪಂಜಾಬಿನ ಲೂಧಿಯಾನಾ ಬಳಿಯ ಸಂಬ್ರಾಲಾದಲ್ಲಿ. 1912 ಮೇ 11ರಂದು ಹುಟ್ಟಿದ ಮಂಟೊ ಸತ್ತಾಗ ಆತನಿಗೆ 43 ವರ್ಷವೂ ತುಂಬಿರಲಿಲ್ಲ. ಅಷ್ಟರಲ್ಲೇ ಆತ 250ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ.
      ಬಾಲ್ಯದಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೂರು ಬಾರಿ ಫೇಲಾಗಿ ನಾಲ್ಕನೇ ಬಾರಿ ಮೂರನೇ ವರ್ಗದಲ್ಲಿ ಪಾಸುಮಾಡಿಕೊಂಡ ಮಂಟೊ ಫೇಲಾಗುತ್ತಿದ್ದುದು ಉರ್ದು ವಿಷಯದಲ್ಲಿ. ವಿಪರ್ಯಾಸವೆಂದರೆ ಆತ ಅತ್ಯದ್ಭುತ ಉರ್ದು ಸಣ್ಣಕತೆಗಾರನಾದ. ಇಂಗ್ಲಿಶ್ ಚೆನ್ನಾಗಿ ಓದುತ್ತಿದ್ದ ಮಾಂಟೋನಿಗೆ ಇಂಗ್ಲಿಶ್ ಕಾದಂಬರಿಗಳನ್ನು ಓದುವುದು ಪ್ರಿಯವಾದ ವಿಷಯವಾಗಿತ್ತು. ಅವನ ಇಂಗ್ಲಿಶ್ ಪ್ರೇಮವನ್ನು ಕಂಡ ಅವನ ಸಹಪಾಠಿಗಳು ಆತನನ್ನುಟಾಮಿ ಎಂದು ಕರೆಯುತ್ತಿದ್ದರು. ಇಂಗ್ಲಿಶ್ ಕಾದಂಬರಿಗಳನ್ನು ಕೊಳ್ಳಲು ಮನೆಯಿಂದ ಹಣ ಕದಿಯುತ್ತಿದ್ದ, ಅವರಿವರಿಂದ ಸಾಲ ಸಹ ಪಡೆಯುತ್ತಿದ್ದ. ಒಂದು ಸಾರಿ ಅಮೃತಸರ್ ರೈಲ್ವೇ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಯೊಂದರಲ್ಲಿ ಇಂಗ್ಲಿಶ್ ಪುಸ್ತಕ ಕದಿಯುವಾಗ ಸಿಕ್ಕಿಬಿದ್ದಿದ್ದ!
      ಹದಿಹರೆಯದ ದಿನಗಳಲ್ಲಿ ಅಮೃತಸರದಲ್ಲಿ ಭೇಟಿಯಾದ ಅಬ್ದುಲ್ ಬಾರಿ ಅಲಿಗ್ ಎಂಬ ಚರಿತ್ರಕಾರ ಹಾಗೂ ಪತ್ರಕರ್ತ ಮಾಂಟೋನ ವಿಚಾರಲಹರಿಯನ್ನೇ ಬದಲಿಸಿದ ಅಥವಾ ಮಂಟೋನೆ ಹೇಳಿರುವಂತೆ ಆತನ ಬದುಕನ್ನೇ ಬದಲಿಸಿದ. ಆಗ ಭಾರತದಲ್ಲಿ ಇಂಗ್ಲಿಶ್ ಮತ್ತು ಉರ್ದುಗೆ ಅನುವಾದವಾಗಿ ಲಭಿಸುತ್ತಿದ್ದ ಫ್ರೆಂಚ್ ಮತ್ತು ರಷಿಯನ್ ಸಾಹಿತ್ಯವನ್ನು ಓದಲು ಹಾಗೂ ಅನುವಾದಿಸಲು ಆತ ಮಂಟೋನಿಗೆ ಉತ್ತೇಜನ ನೀಡಿದ. ಆಗಲೇ ಮಂಟೋನಿಗೆ ವಿಕ್ಟರ್ ಹ್ಯೂಗೊ, ಲಾರ್ಡ್ ಲೇಟನ್, ಗಾರ್ಕಿ, ಚೆಕಾಫ್, ಪುಷ್ಕಿನ್, ಆಸ್ಕರ್ ವೈಲ್ಡ್, ಮೊಪಾಸಾ ಮುಂತಾದವರ ಪರಿಚಯವಾಗಿದ್ದು. ತನ್ನನ್ನು ಸಾಹಿತ್ಯ ಜಗತ್ತಿಗೆ ಪರಿಚಯಿಸಿದ ಬಾರಿ ಅಲಿಗ್ ಬಗ್ಗೆ ಮಂಟೊ, ‘ಆತನೇ ನನ್ನನ್ನು ಬರೆಯುವಂತೆ ಉತ್ತೇಜಿಸಿದಾತ. ಆತನೇನಾದರೂ ನನಗೆ ಅಮೃತಸರದಲ್ಲಿ ಪರಿಚಯವಾಗಿರದಿದ್ದಲ್ಲಿ ನಾನೊಬ್ಬ ಅಜ್ಞಾತ ವ್ಯಕ್ತಿಯಾಗಿ ಸತ್ತುಹೋಗಿರುತ್ತಿದ್ದೆ ಹಾಗೂ ನನ್ನನ್ನು ಎಲ್ಲರೂ ಮರೆತುಬಿಟ್ಟಿರುತ್ತಿದ್ದರು ಅಥವಾ ಸಶಸ್ತ್ರ ಡಕಾಯಿತಿಗಾಗಿ ನಾನು ಯಾವುದಾದರೂ ಜೈಲಿನಲ್ಲಿ ಕೊಳೆಯುತ್ತಿರುತ್ತಿದ್ದೆ ಎಂದಿದ್ದಾನೆ. ಬಾರಿ ಅಲಿಗ್ ಹ್ಯೂಗೋನ ಲಾಸ್ಟ್ ಡೇಸ್ ಆಫ್ ಕಂಡೆಮ್ಡ್ ಕೃತಿಯನ್ನು ಉರ್ದೂಗೆ ಅನುವಾದಿಸಲು ಹೇಳುತ್ತಾನೆ. ಮಂಟೊ ಅದನ್ನು ಎರಡೇ ವಾರದಲ್ಲಿ ಅನುವಾದಿಸುತ್ತಾನೆ ಹಾಗೂ ಅದನ್ನು ಲಾಹೋರಿನ ಪ್ರಕಾಶಕರಾದ ಉರ್ದು ಬುಕ್ಸ್ಟಾಲ್ನವರು ಅದನ್ನು ಪ್ರಕಟಿಸುತ್ತಾರೆ. ಆಗ ಮಂಟೋನ ವಯಸ್ಸು 24 ವರ್ಷಗಳು. ಪ್ರಕಟಣೆಯಿಂದ ಉತ್ತೇಜಿತನಾಗಿ ಮಂಟೊ ಆಸ್ಕರ್ ವೈಲ್ಡ್ ವೇರಾ ಕೃತಿಯನ್ನು ಅನುವಾದಿಸುತ್ತಾನೆ ಹಾಗೂ ಅದು 1934ರಲ್ಲಿ ಪ್ರಕಟವಾಗುತ್ತದೆ. ಆನಂತರ ರೂಸಿ ಅಫ್ಸಾನೆ ಎನ್ನುವ ಉರ್ದು ಅನುವಾದದ ರಷಿಯನ್ ಕತೆಗಳ ಸಂಗ್ರಹವನ್ನೂ ಪ್ರಕಟಿಸುತ್ತಾನೆ. ಅದಾದ ನಂತರ ಬಾರಿಯೇ ಮಂಟೋನಿಗೆ ಸ್ವಂತ ಬರವಣಿಗೆ ಮಾಡುವಂತೆ ಪ್ರೋತ್ಸಾಹಿಸುತ್ತಾನೆ. ಮಾಂಟೋನ ಮೊದಲ ಸಣ್ಣ ಕತೆ ಇಂಕ್ಲಾಬ್ ಪಸಂದ್ 1935 ಮಾರ್ಚ್ನಲ್ಲಿ ಆಲಿಘರ್ ಮ್ಯಾಗಜಿóೀನ್ನಲ್ಲಿ ಪ್ರಕಟವಾಗುತ್ತದೆ ಹಾಗೂ ಆತನ ಮೊದಲ ಉರ್ದು ಕಥಾಸಂಕಲನ ಆತಿಶ್ ಪರೆ 1936ರಲ್ಲಿ ಪ್ರಕಟವಾಗುತ್ತದೆ.
      ಮಂಟೊ ತನ್ನ ಶಿಕ್ಷಣವನ್ನು ಸಂಪೂರ್ಣಗೊಳಿಸುವುದೇ ಇಲ್ಲ. 1931ರಲ್ಲೇ ಅಮೃತಸರ್ನಲ್ಲಿ ಕಾಲೇಜಿಗೆ ಸೇರಿ ಅಲ್ಲಿ ಎರಡು ಸಾರಿ ಫೇಲಾಗುತ್ತಾನೆ. ಸ್ವಲ್ಪ ದಿನಗಳು ಆಲಿಘರ್ನಲ್ಲಿ ಓದಲು ಯತ್ನಿಸುತ್ತಾನೆ, ಆದರೆ ಅನಾರೋಗ್ಯದಿಂದ ಹಿಂದಿರುಗಬೇಕಾಗುತ್ತದೆ. ಕೊನೆಗೆ ಇನ್ನು ಶಿಕ್ಷಣದ ಗೊಡವೆಯೇ ಬೇಡವೆಂದು ಬಿಟ್ಟುಬಿಡುತ್ತಾನೆ. ತಮಾಷೆಯೆಂದರೆ ಯಾವ ಸಂಸ್ಥೆಯಲ್ಲಿ ಮಂಟೊ ತನ್ನ ಶಿಕ್ಷಣ ಸಂಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲವೋ ಸಂಸ್ಥೆಯಲ್ಲಿ ಇಂದು ಆತನ ಕೃತಿಗಳು ಬೋಧನೆಯ ಪಠ್ಯಪುಸ್ತಕಗಳಾಗಿವೆ.
      ಮಂಟೊ ಹುಟ್ಟು ಬಂಡಾಯಗಾರ. ಇತರರು ಸಹಜವೆಂದು ಸ್ವೀಕರಿಸುತ್ತಿದ್ದುದನ್ನು ಪ್ರಶ್ನಿಸುತ್ತಿದ್ದ. ಆತ ಮತ್ತು ಆತನ ಗೆಳೆಯರು ಅಮೃತಸರದಲ್ಲಿ ತಾವು ಮಾಸ್ಕೋದಲ್ಲಿದ್ದು ಕ್ರಾಂತಿ ನಡೆಸುತ್ತಿರುವ ನಟನೆಯನ್ನು ಮಾಡುತ್ತಿದ್ದರು. ಬ್ರಿಟಿಶ್ ಅಧಿಕಾರಿಯನ್ನು ಕೊಂದದ್ದಕ್ಕಾಗಿ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿದ ಪಂಜಾಬಿನ ಕ್ರಾಂತಿಕಾರಿ ಭಗತ್ ಸಿಂಗ್ ಆತನ ಮೇಲೆ ಬಹಳ ಪ್ರಭಾವ ಬೀರಿದ್ದ.
      ಮಂಟೊ ತನ್ನ ಮೊದಲ ಉದ್ಯೋಗವನ್ನು ಅರಸಿ ಲಾಹೋರಿಗೆ ಹೋಗುತ್ತಾನೆ. ಅಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಆದರೆ ಆತ ಎಲ್ಲಿಯೂ ನೆಲೆಯೂರಲಾಗುವುದಿಲ್ಲ. ಲಾಹೋರಿನಿಂದ ಕೆಲವೇ ಗಂಟೆಗಳ ರೈಲು ಪ್ರಯಾಣವಾದ ಅಮೃತಸರ್ಗೆ ಹಿಂದಿರುಗುತ್ತಿರುತ್ತಾನೆ. ಆನಂತರ ಬಾಂಬೆಗೆ ಹೋಗಿ ಚಲನಚಿತ್ರ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಸಮಯದಲ್ಲಿ ಆತ ಕಿಸಾನ್ ಕನ್ಯಾ (1936) ಮತ್ತು ಅಪ್ನಿ ನಗರಿಯಾ (1939) ಚಲನಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆಯುತ್ತಾನೆ. 1939ರಲ್ಲಿ ಸಫಿಯಾ ಎಂಬಾಕೆಯನ್ನು ಮಂಟೊ ಮದುವೆಯಾಗುತ್ತಾನೆ. ಬಾಂಬೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಯಜಮಾನನೊಂದಿಗೆ ಮನಸ್ತಾಪಹೊಂದಿ ದೆಹಲಿಗೆ ಹೋಗಿ ಆಲ್ ಇಂಡಿಯಾ ರೇಡಿಯೋನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅದು ಆಗಲೇ ಹಲವಾರು ಸಾಹಿತಿ ಕವಿಗಳಿಗೆ ಸ್ಥಳಾವಕಾಶ ನೀಡಿರುತ್ತದೆ. ಅಲ್ಲಿ ಮಂಟೊ ಹಲವಾರು ರೇಡಿಯೋ ನಾಟಕಗಳನ್ನು ರಚಿಸುತ್ತಾನೆ.
      ಆದರೆ ಅವನ ಹೃದಯವೆಲ್ಲಾ ಬಾಂಬೆಯಲ್ಲಿಯೇ ಇರುತ್ತದೆ. ಮತ್ತೆ ಬಾಂಬೆಗೆ ಹಿಂದಿರುಗುತ್ತಾನೆ. ಆನಂತರ ಆತ ಬಾಂಬೆ ಬಿಟ್ಟು ಹೊರಟಿದ್ದು ಭಾರತ-ಪಾಕಿಸ್ತಾನದ ವಿಭಜನೆಯ ನಂತರ; ಅದು ನಗರಕ್ಕೆ ಆತನ ಕೊನೆಯ ವಿದಾಯವಾಗಿರುತ್ತದೆ. ಆತ ಬಾಂಬೆ ಬಿಟ್ಟದ್ದಾದರೂ ಏಕೆ? ಮಂಟೋನ ಪತ್ನಿ ಸಫಿಯಾ 1968ರಲ್ಲಿ ಭಾರತದಲ್ಲಿನ ಮಾಂಟೋನ ಜೀವನಚರಿತ್ರಕಾರ ಬ್ರಜ್ ಪ್ರೇಮಿ ಎಂಬಾತನಿಗೆ ಬರೆದ ಪತ್ರದಲ್ಲಿ, ‘ಮಂಟೋನನ್ನು ಎಲ್ಲರೂ ಕೆಟ್ಟದಾಗಿ ನಡೆಸಿಕೊಂಡರು. ವಾಸ್ತವಾಂಶವೆಂದರೆ ಆತನಿಗೆ ಭಾರತ ಬಿಟ್ಟುಬರಲು ಇಷ್ಟವಿರಲಿಲ್ಲ. ಆದರೆ ದೇಶ ವಿಭಜನೆಯ ಕೆಲತಿಂಗಳುಗಳ ಮೊದಲು ಬಾಂಬೆಯ ಫಿಲ್ಮಿಸ್ತಾನ್ ಆತನನ್ನು ಕೆಲಸದಿಂದ ಕಿತ್ತುಹಾಕಿತ್ತು. ಇದರಿಂದ ಆತನ ಹೃದಯವೇ ಛಿದ್ರವಾಗಿತ್ತು. ಬಹಳ ಕಾಲ ಆತ ಇದನ್ನು ಯಾರಲ್ಲಿಯೂ ಹೇಳಿರಲಿಲ್ಲ, ನನ್ನಲ್ಲಿಯೂ ಸಹ. ಏಕೆಂದರೆ ಆತನಿಗೆ ಮುಖರ್ಜಿ ಮತ್ತು ಅಶೋಕ್ ಕುಮಾರ್ರವರ ಗೆಳೆತನದ ಬಗ್ಗೆ ಹೆಮ್ಮೆಯಿತ್ತು. ಸಮಯದಲ್ಲೇ ಆತ ಹೆಚ್ಚು ಹೆಚ್ಚು ಕುಡಿಯಲು ಆರಂಭಿಸಿದ್ದು. ಕುಡಿತವೇ ಕೊನೆಗೆ ಆತನ ಜೀವವನ್ನು ಕಸಿದುಕೊಂಡಿತು. ನನ್ನನ್ನು ಮೊದಲೇ ಲಾಹೋರಿಗೆ ಕಳುಹಿಸಿದ್ದ ಹಾಗೂ ಆತ 1948 ಜನವರಿಯಲ್ಲಿ ಭಾರತ ಬಿಟ್ಟುಬಂದ. ಆತನ ಇಡೀ ಬದುಕು ಚಿಂತೆಗಳ ಯಾತನೆಯಿಂದ ತುಂಬಿತ್ತು. ಆತನ ಆರೋಗ್ಯ ಹದಗೆಡುತ್ತಿತ್ತು. ಅಷ್ಟೆಲ್ಲರ ನಡುವೆಯೂ ಆತ ಒಂದು ಕೆಲಸ ಮಾತ್ರ ಮಾಡುತ್ತಿದ್ದ- ತನ್ನ ಸಾವಿನ ದಿನದವರೆಗೂ ವಿಶ್ರಾಂತಿ ಇಲ್ಲದವನಂತೆ ಕತೆಗಳನ್ನು ಬರೆಯುತ್ತಿದ್ದ. ನನಗೆ ತಿಳಿದಿರುವುದು ಅಷ್ಟೆ ಎಂದು ಬರೆದಿದ್ದಳು.
      ಅತ್ಯಂತ ಸುಂದರ ಕೈಬರಹ ಹೊಂದಿದ್ದ ಮಂಟೊ ಅಷ್ಟೇ ವೇಗವಾಗಿ ಬರೆಯುತ್ತಿದ್ದ. ಕೆಲವೊಮ್ಮೆ ಬರೆಯಲು ಕೂತನೆಂದರೆ ಕತೆಯನ್ನು ಬರೆದು ಮುಗಿಸಿದನಂತರವೇ ಮೇಲಕ್ಕೇಳುತ್ತಿದ್ದ. ಆತನ ಕೊನೆಯ ಪುಟದ ಕೈಬರಹ ಮೊದಲ ಪುಟದಷ್ಟೇ ಸುಂದರವಾಗಿರುತ್ತಿತ್ತು. ಬರೆದದ್ದನ್ನು ಪರಿಷ್ಕರಿಸುವ ಗೊಡವೆಗೇ ಹೋಗುತ್ತಿರಲಿಲ್ಲ.
      ಆಗಿನ ಉರ್ದು ಸಾಹಿತ್ಯದಲ್ಲಿ ಹಾಗೂ ಆಗಿನ ಭಾರತ-ಪಾಕಿಸ್ತಾನದ ಸಮಾಜದಲ್ಲಿ ನಿಷೇಧಿತ ಎನ್ನಲಾಗುತ್ತಿದ್ದ ಕಾಮ ಹಾಗೂ ಕಾಮದ ಮೂಲ ಪ್ರವೃತ್ತಿಯ ಬಗ್ಗೆ ಮೊಟ್ಟಮೊದಲಿಗೆ ಬರೆದವನು ಮಂಟೊ. ಆತನ ಅತ್ಯುತ್ತಮ ಎನ್ನಲಾಗುವ ಕತೆಗಳು ವಿಷಯದ ಸುತ್ತಲೇ ಹೆಣೆಯಲ್ಪಟ್ಟಿವೆ. ಆತನ ಕತೆಗಳಲ್ಲಿನ ಕಥಾನಾಯಕರು ಮೊಪಾಸಾನ ಕೃತಿಗಳಲ್ಲಿ ಬರುವಂತೆ ಸಮಾಜದ ಕೆಳಸ್ತರದಿಂದ ಬಂದವರು. ಆತನಿಗೆ ಗೃಹಿಣಿಯರಿಗಿಂತ ವೇಶ್ಯೆಯರು ಹಾಗೂ ಕಚೇರಿಯ ಅಧಿಕಾರಿಗಳಿಗಿಂತ ಕಳ್ಳರು ಹೆಚ್ಚು ಕುತೂಹಲಕಾರಿ ಪಾತ್ರಗಳು. ಆತನ ಕೃತಿಗಳು ಅಶ್ಲೀಲವೆಂದು ಆಪಾದಿಸಿದಾಗ ಆತ, ‘ವೇಶ್ಯೆಯನ್ನು ಉಲ್ಲೇಖಿಸುವುದು ಅಶ್ಲೀಲವೆನ್ನುವುದಾದರೆ, ಸಮಾಜದಲ್ಲಿ ಆಕೆ ಇರುವುದೂ ಅಶ್ಲೀಲವಾಗಬೇಕು. ಆಕೆ ಸಾಹಿತ್ಯದಲ್ಲಿ ಇರಬಾರದು ಎನ್ನುವುದಾದರೆ, ಆಕೆ ಸಮಾಜದಲ್ಲೂ ಇಲ್ಲವಾಗಬೇಕು... ವೇಶ್ಯೆಯ ಮನೆ ಎನ್ನುವುದು ಹೆಣವಿದ್ದ ಹಾಗೆ. ಸಮಾಜ ಅದನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಿದೆ. ಸಮಾಜ ಅದನ್ನು ಎಲ್ಲಾದರೂ ಹೂತುಹಾಕುವವರೆಗೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ... ಸಮಾಜವನ್ನು ನಾನೇಕೆ ಬತ್ತಲಾಗಿಸಬೇಕು, ಅದು ತಾನಾಗಿಯೇ ಬತ್ತಲಾಗಿದೆ ಎನ್ನುತ್ತಿದ್ದ.
      ಮಂಟೋನ ಕತೆಗಳು ಅಶ್ಲೀಲ ಎಂದು ಆತನ ಮೇಲೆ ನ್ಯಾಯಾಲಯದಲ್ಲಿ ಆರು ದಾವೆಗಳನ್ನು ಹೂಡಲಾಯಿತು-  ಮೂರು ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಹಾಗೂ ಮೂರು ಸ್ವಾತಂತ್ರ್ಯಾನಂತರದ ಪಾಕಿಸ್ತಾನದಲ್ಲಿ. ಭಾರತದಲ್ಲಿ ಆತನ ಕತೆಗಳಾದಕಾಲಿ ಶಾಲ್ವಾರ್, ‘ಧುವಾಂ (1941) ಮತ್ತುಬು ಕತೆಗಳ ಮೇಲೆ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 292ರಡಿ ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಇದರಿಂದಾಗಿ ಆತನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟು ಬಿದ್ದಿತು, ಏಕೆಂದರೆ ಪರಿಚ್ಛೇದದ ದಾವೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಜನನಾಂಗಗಳನ್ನು ಪ್ರದರ್ಶಿಸುವ ಪ್ರದರ್ಶನಾ ಕಾಮಿಗಳ ಮೇಲೆ ಹೂಡಲಾಗುತ್ತಿತ್ತು. ತನ್ನ ಅತ್ಯದ್ಭುತ ಕಲೆಯನ್ನು ಅದರೊಂದಿಗೆ ಹೋಲಿಸಿದ್ದು ಆತನಿಗೆ ತೀವ್ರ ಯಾತನೆಯುಂಟುಮಾಡಿತು. ಕೊನೆಗೆ ಆತನಿಗೆ ಎಲ್ಲ ದಾವೆಗಳಿಂದಲೂ ಜೈಲುವಾಸದಿಂದ ಮುಕ್ತಿ ದೊರಕಿತು, ಅದು ಬೇರೆ ಮಾತು. ಆದರೆ ಆತ ತನಗಾದ ಅಪಮಾನವನ್ನು ಕ್ಷಮಿಸಲೂ ಇಲ್ಲ ಹಾಗೂ ಮರೆಯಲೂ ಇಲ್ಲ.
      ಮಂಟೋನ ಸ್ನೇಹಿತೆಯಾಗಿದ್ದ ಖ್ಯಾತ ಉರ್ದು ಕತೆಗಾರ್ತಿ ಇಸ್ಮತ್ ಚುಗ್ತಾಯ್ ನ್ಯಾಯಾಲಯದಲ್ಲಿನ ಮಂಟೋನ ಕತೆಯ ವಿಚಾರಣೆಯ ಬಗ್ಗೆ ಬರೆದಿದ್ದಾಳೆ. ಆಕೆಯ ಪ್ರಖ್ಯಾತ ಉರ್ದು ಕತೆ ಲಿಹಾಫ್ (ಹೊದಿಕೆ) ಅನ್ನೂ ಸಹ ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಲಾಹೋರ್ ನ್ಯಾಯಾಲಯದಲ್ಲಿ ಇವರಿಬ್ಬರ ಕತೆಗಳ ಮೇಲಿನ ವಿಚಾರಣೆ ಒಂದೇ ದಿನ ಬಂದಿತ್ತು. ಆಕೆ ಅದೇ ಕೆಲಸಕ್ಕೆ ಲಾಹೋರ್ಗೆ ತನ್ನ ಪತಿಯೊಂದಿಗೆ ಹೋಗಿ ಮಂಟೋನ ಅತಿಥಿಯಾಗಿ ಉಳಿದುಕೊಂಡಿದ್ದಳು. ದಿನ ನ್ಯಾಯಾಲಯದಲ್ಲಿ ಮೊದಲಿಗೆ ಮಾಂಟೋನಬು ಕತೆ ವಿಚಾರಣೆಗೆ ಬರುತ್ತದೆ. ಮಂಟೋನ ವಕೀಲರು ಸಾಕ್ಷಿಯನ್ನು ಕತೆ ಅಶ್ಲೀಲವೆ?’ ಎಂದು ಕೇಳುತ್ತಾರೆ.
      ಸಾಕ್ಷಿದಾರ: ‘ಹೌದು ಸರ್,’
      ವಕೀಲ: ‘ಅದರಲ್ಲಿ ಅಶ್ಲೀಲ ಎನ್ನುವಂತಹ ಪದ ಯಾವುದಿದೆ?’
      ಸಾಕ್ಷಿದಾರ: ‘ಮೊಲೆ
      ವಕೀಲ: ‘ಮೈ ಲಾರ್ಡ್, ಮೊಲೆ ಎನ್ನುವ ಪದ ಅಶ್ಲೀಲವಲ್ಲ.
      ನ್ಯಾಯಾಧೀಶರು: ‘ಹೌದು, ಅದು ಅಶ್ಲೀಲವಲ್ಲ.
      ಸಾಕ್ಷಿದಾರ: ‘ಸರ್, ಆದರೆ ಲೇಖಕರು ಅದನ್ನು ಹೆಣ್ಣಿನ ಮೊಲೆಗಳ ಬಗ್ಗೆ ಬಳಸಿದ್ದಾರೆ.
      ಇದನ್ನೆಲ್ಲಾ ಕೇಳುತ್ತಿದ್ದ ಮಂಟೋನಿಗೆ ಅತೀವ ಸಿಟ್ಟುಬಂತು. ಆತ ಎದ್ದು ನಿಂತು, ‘ಹಾಗಾದರೆ ಹೆಣ್ಣಿನ ಮೊಲೆಗಳನ್ನು ಮತ್ತೇನೆಂದು ಕರೆಯಬೇಕು- ಕಡಲೇಕಾಯಿಯೆಂದೆ?’
      ಇಡೀ ನ್ಯಾಯಾಲಯದಲ್ಲಿ ನಗೆಯ ಅಲೆ ಉಕ್ಕಿತು. ವಕೀಲರು ಮಂಟೋನಿಗೆ ಸುಮ್ಮನಿರುವಂತೆ ಎಚ್ಚರಿಕೆ ನೀಡಿದರು. ಅಲ್ಲಿಯೇ ಇದ್ದ ಇಸ್ಮತ್ ಚುಗ್ತಾಯ್, ‘ಮೊಲೆ ಎನ್ನುವ ಪದ ಅಶ್ಲೀಲವೆನ್ನುವುದಾದರೆ ಮೊಣಕೈ, ಮೊಣಕಾಲು ಎನ್ನುವ ಪದಗಳೂ ಸಹ ಅಶ್ಲೀಲವಾಗಬೇಕಲ್ಲವೆ?’ ಎಂದು ಮಂಟೋನನ್ನು ಕೇಳಿದಳು.
      ಅತ್ತ ದೇಶ ವಿಭಜನೆಯ ನಂತರ ಪಾಕಿಸ್ತಾನದ ನ್ಯಾಯಾಲಯ ಮಂಟೋನಿಗೆ ಮೂರು ತಿಂಗಳ ಕಠಿಣ ಶ್ರಮದ ಸೆರೆಮನೆವಾಸ ಹಾಗೂ ಮುನ್ನೂರು ರೂಪಾಯಿಗಳ ಜುಲ್ಮಾನೆ ವಿಧಿಸುತ್ತದೆ. ಅಮೆರಿಕಕ್ಕೆ (1951ರಿಂದ 1954 ನಡುವೆ ಅಮೆರಿಕಾವನ್ನುಅಂಕಲ್ ಸ್ಯಾಮ್ [US = Uncle Sam] ಎಂದು ಕರೆದು ಕಾಲ್ಪನಿಕ ಅಂಕಲ್ಗೆ ಕೆಲವು ಲೇವಡಿಯ ಪತ್ರಗಳನ್ನು ಬರೆಯುತ್ತಾನೆ). ಬರೆದ ಪತ್ರವೊಂದರಲ್ಲಿಸತ್ಯ ಎಂದಿಗೂ ಸಾರ್ವಕಾಲಿಕವಾದದ್ದು ಹಾಗೂ ಅದನ್ನು ಸಾಹಿತ್ಯದಲ್ಲಿ ಸಹ ಪ್ರತಿಬಿಂಬಿಸಬೇಕು ಎಂದು ನ್ಯಾಯಾಧೀಶರಿಗೆ ಹೇಳಿದೆ. ಆದರೆ ಅವರು ಸತ್ಯ ಮತ್ತು ಸಾಹಿತ್ಯ ಎರಡನ್ನೂ ಪ್ರತ್ಯೇಕವಾಗಿ ಇರಿಸಬೇಕೆನ್ನುವವರು. ಮೂರು ತಿಂಗಳ ಕಠಿಣ ಸೆರೆಮನೆವಾಸ ನನಗೇನೋ ಪರವಾಗಿಲ್ಲ, ಏಕೆಂದರೆ ನನ್ನ ಬದುಕಲ್ಲಿ ಕಷ್ಟವನ್ನು ಬೇಕಾದಷ್ಟು ನೋಡಿದ್ದೇನೆ. ಆದರೆ ಮುನ್ನೂರು ರೂಪಾಯಿ ಜುಲ್ಮಾನೆ ನನಗೆ ಕಷ್ಟವಾದುದು; ಹಣವನ್ನು ನಾನು ಬದುಕಲ್ಲಿ ಹೆಚ್ಚಿಗೆ ಕಂಡೇ ಇಲ್ಲ ಎಂದು ಬರೆದಿದ್ದಾನೆ. ಕೊನೆಗೆ ಉಚ್ಛ ನ್ಯಾಯಾಲಯವು ಸೆರೆಮನೆವಾಸವನ್ನು ಹಿಂತೆಗೆದುಕೊಂಡರೂ ಜುಲ್ಮಾನೆಯನ್ನು ರದ್ದುಗೊಳಿಸಲಿಲ್ಲ.
      ಮಂಟೊ ನೀತಿಬೋಧಕನಾಗಿರಲಿಲ್ಲ; ತನ್ನ ಕತೆಗಳಲ್ಲಿನ ಯಾವ ಪಾತ್ರಗಳ ಬಗ್ಗೆಯೂ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ತೀರ್ಮಾನವನ್ನು ಓದುಗರಿಗೇ ಬಿಟ್ಟಿರುತ್ತಿದ್ದ. ಆತ ಬಡಬಗ್ಗರೊಂದಿಗೆ, ತಿರಸ್ಕøತರಾದವರೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಿದ್ದ. ಏಕೆಂದರೆ ಆತ ಸಹ ತಿರಸ್ಕøತನಾದವನೇ.
      ಗೌರವಯುತ ಎಂದೆನ್ನಿಸಿಕೊಳ್ಳುವ ಸಮಾಜದ ಹಿಪಾಕ್ರಸಿ ಮತ್ತು ದ್ವಿಮುಖ ನೀತಿಗಳನ್ನು ದ್ವೇಷಿಸುತ್ತಿದ್ದ ಹಾಗೂ ಅವುಗಳ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದ್ದ. ಎಲ್ಲ ರಾಜಕೀಯ ಮತ್ತು ಧಾರ್ಮಿಕ ಆದರ್ಶಗಳನ್ನು ಲೇವಡಿ ಮಾಡುತ್ತಿದ್ದ
      ಭಾರತ-ಪಾಕಿಸ್ತಾನದ ವಿಭಜನೆಯ ಬಗ್ಗೆ ಮಂಟೊ ಸಾಕಷ್ಟು ಬರೆದಿದ್ದಾನೆ. ವಿಭಜನೆಯ ಅಮಾನವೀಯ ಕ್ರೌರ್ಯ, ಹಿಂಸೆಯ ಬಗ್ಗೆ ಮಂಟೊ ಬರೆದಷ್ಟು ಮನೋಜ್ಞವಾಗಿ ಮತ್ತಾರೂ ಬರೆದಿಲ್ಲ. ಮಾಂಟೋನ ಮಾನವೀಯ ಮೌಲ್ಯಗಳು ಇತರ ಬರಹಗಾರರಿಂದ ಆತನನ್ನು ಪ್ರತ್ಯೇಕಿಸುತ್ತದೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಇಂದು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು.
       ಹಿಂದೂ ಮುಸಲ್ಮಾನರರಕ್ತಸಿಕ್ತ ಸೋದರರ ಯುದ್ಧ ಉತ್ತುಂಗದಲ್ಲಿದ್ದಾಗ ಮಂಟೊ ಹಾಗೂ ಆತನ ಗೆಳೆಯ ಶ್ಯಾಮ್ ಒಮ್ಮೆ ಈಗ ಪಾಕಿಸ್ತಾನದಲ್ಲಿದ್ದ ರಾವಲ್ಪಿಂಡಿಯಿಂದ ನಿರಾಶ್ರಿತರಾಗಿ ಬಂದಿದ್ದ ಒಂದು ಸಿಖ್ ಕುಟುಂಬದ ಜೊತೆಯಲ್ಲಿರುತ್ತಾರೆ. ಕುಟುಂಬ ಅಲ್ಲಿ ಮುಸಲ್ಮಾನರ ಕೈಯಲ್ಲಿ ತಾವು ಅನುಭವಿಸಿದ ಅಮಾನವೀಯ ಹಿಂಸೆಯನ್ನು ವಿವರಿಸುತ್ತಿರುತ್ತಾರೆ. ಅದನ್ನು ಕೇಳಿಸಿಕೊಂಡ ಹಿಂದೂ ಆಗಿದ್ದ ಶ್ಯಾಮ್ ಅತ್ಯಂತ ಕ್ಷೋಭೆಗೊಳಗಾಗುತ್ತಾನೆ. ಅಲ್ಲಿಂದ ಹೊರಟ ನಂತರ ಮಂಟೊ ಶ್ಯಾಮ್ನನ್ನು ಕೇಳುತ್ತಾನೆ, ‘ಶ್ಯಾಮ್, ನಾನೂ ಒಬ್ಬ ಮುಸಲ್ಮಾನ. ನಿನಗೆ ನನ್ನನ್ನು ಕೊಲ್ಲಬೇಕೆನ್ನಿಸುತ್ತಿಲ್ಲವೆ?’ ಅದಕ್ಕೆ ಶ್ಯಾಮ್ ಹೇಳುತ್ತಾನೆ, ‘ಈಗಲ್ಲ, ಆದರೆ ಆಗ, ಅವರ ಮಾತು ಕೇಳುವಾಗ, ಮುಸಲ್ಮಾನರು ನಡೆಸಿದ ಹಿಂಸೆ ಕ್ರೌರ್ಯದ ಘಟನೆಗಳನ್ನು ಕೇಳುವಾಗ ಅನ್ನಿಸುತ್ತಿತ್ತು. ಮಾತಿನಿಂದ ಮಂಟೊ ಆಘಾತಕ್ಕೊಳಗಾಗಿದ್ದಷ್ಟೇ ಅಲ್ಲಭಾರತದ ಕೋಮು ರಕ್ತಪಾತದ ಮಾನಸಿಕ ಹಿನ್ನೆಲೆ'ಯನ್ನು ಅರ್ಥಮಾಡಿಕೊಳ್ಳುವಂತೆ ಮಾಡಿತು.
      ಪಾಕಿಸ್ತಾನಕ್ಕೆ ಹೊರಟ ಮಂಟೋನಿಗೆ ಅಲ್ಲಿ ನಿರಾಸೆಯೇ ಕಾದಿತ್ತು. ಅಂದಿನ ಲಾಹೋರ್ ಸ್ವಾತಂತ್ರ್ಯಪೂರ್ವದ ಲಾಹೋರ್ನಂತಿರಲಿಲ್ಲ. ಸಾವಿರಾರು ಜನ ನಿರಾಶ್ರಿತರು ಅಲ್ಲಿ ಬಂದಿದ್ದರಿಂದ ಅಲ್ಲಿ ಆತನೂ ಸಹ ಒಂದು ರೀತಿಯ ನಿರ್ಗತಿಕನಂತಾದ. ಎಲ್ಲರೂ ಆಹಾರ ಮತ್ತು ಆಶ್ರಯಕ್ಕೆ ಹೊಡೆದಾಡುತ್ತಿದ್ದರು. ಹೊಸ ಪಾಕಿಸ್ತಾನ ಆತನ ಎಲ್ಲಾ ಭರವಸೆಗಳನ್ನು ಕುಂದಿಸಿಬಿಟ್ಟಿತು. ಆದರೂ ಆತ ಅಲ್ಲಿ ತನ್ನ ಕೆಲವು ಅತ್ಯದ್ಭುತ ಕತೆಗಳಾದ ಥಂಡಾ ಘೋಷ್ತ್, ಖೋಲ್ ದೋ, ಟೋಬಾ ಟೇಕ್ ಸಿಂಗ್, ಇಸ್ ಮಂಜ್ದಾರ್ ಮೇ, ಮೊeóÉೀಲ್, ಬಾಬು ಗೋಪಿನಾಥ್ ಮುಂತಾದ ಕತೆಗಳನ್ನು ರಚಿಸಿದ. ಆತನ ಥಂಡಾ ಘೋಷ್ತ್ ಕತೆ 1950 ಮಾರ್ಚ್ನಲ್ಲಿ ಸಾಹಿತ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಕೂಡಲೇ ಪತ್ರಿಕೆಯನ್ನು ಮುಟ್ಟುಗೋಲುಹಾಕಿಕೊಂಡು ಕತೆ ಅಶ್ಲೀಲ ಎಂದು ಆತನ ಮೇಲೆ ದಾವೆ ಹೂಡಲಾಯಿತು. ಜಿಲ್ಲಾ ನ್ಯಾಯಾಲಯ ಮಂಟೋನಿಗೆ ಮೂರುತಿಂಗಳ ಕಠಿಣ ಶಿಕ್ಷೆ ಹಾಗೂ ಮುನ್ನೂರು ರೂಪಾಯಿಗಳ ದಂಡ ವಿಧಿಸಿತು.  ಕೊನೆಗೆ ಶಿಕ್ಷೆಯನ್ನು ಮನ್ನಾ ಮಾಡಿ ದಂಡ ಪಾವತಿಸುವಂತೆ ಹೇಳಿತು.
      ಪಾಕಿಸ್ತಾನದಲ್ಲಿ ಅಶ್ಲೀಲವೆಂದು ನಿಷೇಧಕ್ಕೊಳಗಾದ ಆತನ ಮತ್ತೆರಡು ಕತೆಗಳೆಂದರೆ ಖೋಲ್ ದೊ (ವಿಭಜನೆಯ ಸಮಯದಲ್ಲಿ ಮಹಿಳೆಯರ ಮೇಲಾದ ಅಮಾನವೀಯ ಹಿಂಸಾಚಾರದ ಚಿತ್ರಣ ಹೊಂದಿರುವ ಕತೆ) ಮತ್ತು ಊಪರ್, ನೀಚೆ ಔರ್ ದರ್ಮಿಯಾಂ (1953) (ಮದುವೆಯಾದ ದಂಪತಿಗಳ ಕಾಮದ ಬಗೆಗಿನ ಮನೋಭಾವದ ಚಿತ್ರಣದ ಕತೆ). ಅವುಗಳಿಂದಾಗಿ ಆತನನ್ನು ಲೈಂಗಿಕ ಕತೆಗಳನ್ನು ಬರೆಯುವ ಲೇಖಕನೆಂದೇ ಹೇಳತೊಡಗಿದರು. ಸಾಹಿತ್ಯವಲಯದಲ್ಲಿ ಆತನನ್ನು ಹೊಗಳುವವರೂ ಇದ್ದರು, ತೆಗಳುವವರೂ ಇದ್ದರು.     
      ಆಗಿನ ಪಾಕಿಸ್ತಾನದ ಇಡೀ ಸಮಾಜವೇ ಧಾರ್ಮಿಕ ಹುಸಿ ಕನಸನ್ನು ಅರಸಿ ಹೊರಟಿತ್ತು. ಸಮಯದಲ್ಲಿ ಪಾಕಿಸ್ತಾನದಲ್ಲಿ ಆತ ಬರೆದ ಕತೆಗಳು ರೂಪಾಂತರವನ್ನೇ ಚಿತ್ರಿಸುತ್ತವೆ. ಆತನಿಗೆ ಅತ್ಯಂತ ಆಘಾತ ಕೊಟ್ಟಿದ್ದು ಲಾಹೋರ್ ಚಿತ್ರೋದ್ಯಮ ಮುಚ್ಚಿಹೋದದ್ದು. ಅಲ್ಲಿನ ಚಲನಚಿತ್ರೋದ್ಯಮದಲ್ಲಿದ್ದ ಹಲವಾರು ಹೆಸರಾಂತ ಹಿಂದೂಗಳು ಭಾರತಕ್ಕೆ ವಲಸೆ ಬಂದುಬಿಟ್ಟಿದ್ದರು. ಪಾಕಿಸ್ತಾನಕ್ಕೆ ಬರುವ ಮುನ್ನ ಲಾಹೋರಿನಲ್ಲಿನ ಚಲನಚಿತ್ರಗಳ ಉದ್ಯಮದವರು ಆತನಿಗೆ ನೀಡಿದ್ದ ಚಿತ್ರೋದ್ಯಮದ ಕರೆಗಳು ಸುಳ್ಳು ಎಂದು ತಿಳಿಯಿತು. ಇತ್ತ ಭಾರತದಲ್ಲಿ ಆತ ಚಿತ್ರಕತೆ ಸಂಭಾಷಣೆ ರಚಿಸಿದ್ದ ಆದರೆ ಇನ್ನೂ ಸಂಪೂರ್ಣವಾಗಿರದಿದ್ದಮಿರ್ಜಾ ಗಾಲಿಬ್ (1948) ಚಲನಚಿತ್ರ ಹಣಗಳಿಕೆಯಲ್ಲಿ ಅತ್ಯಂತ ಯಶಸ್ವಿಯಾಯಿತು ಹಾಗೂ ರಾಷ್ಟ್ರೀಯ ಪ್ರಶಸ್ತಿ ಸಹ ಗಳಿಸಿತು. ಸ್ವತಂತ್ರ ಭಾರತದಲ್ಲಿ ಅವಕಾಶಗಳ ಮಹಾಪೂರವೇ ಇತ್ತು. ಭಾರತದಲ್ಲಿದ್ದ ಅವನ ಹಲವಾರು ಗೆಳೆಯರು ಪಾಕಿಸ್ತಾನಕ್ಕೆ ಹೋಗಬೇಡವೆಂದರು. ಆತನ ದುರಂತವೆಂದರೆ ಆತ ಭಾರತ ಬಿಟ್ಟ ಸಮಯ ಸರಿಯಾಗಿರಲಿಲ್ಲ. ಆದರೆ ವಿಭಜನೆಯ ನಂತರದ ಭಾರತದಲ್ಲಿನ ಸ್ಥಿತಿಗತಿಗಳು ಅಷ್ಟೊಂದು ಸರಿಯಿರಲಿಲ್ಲ. ಹಲವಾರು ಮುಸಲ್ಮಾನರು ಅಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಅದೇ ಕಾರಣಕ್ಕಾಗಿಯೇ ಮಂಟೊ ತನ್ನ ಕುಟುಂಬವನ್ನಾಗಲೇ ಲಾಹೋರಿಗೆ ಕಳುಹಿಸಿಬಿಟ್ಟಿದ್ದ ಹಾಗೂ ಆತ ಅವರನ್ನು ಕೂಡಿಕೊಳ್ಳಲು ತಹತಹಿಸುತ್ತಿದ್ದ. ಅಂತಹ ತಹತಹಿಕೆಯೇ ಆತನಿಗೆ ಬದುಕಿನ ಹಲವಾರು ಅವಕಾಶಗಳಿಂದ ವಂಚಿತನನ್ನಾಗಿಸಿತ್ತು.
      ಲಾಹೋರಿನಲ್ಲಿ ಆತ ಬಾಂಬೆಯಿಂದ ಬರುವಾಗ ತಂದಿದ್ದ ಹಣವೆಲ್ಲಾ ಕೆಲದಿನಗಳಲ್ಲೇ ಖರ್ಚಾಗಿಹೋಯಿತು. ಆತನ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿಯೂ ಇತ್ತು. ಪಾಕಿಸ್ತಾನದಲ್ಲಿ ಆತನಿಗೆ ಬೇಕಾದ ಕೆಲಸ ಸಿಗುತ್ತಲೇ ಇರಲಿಲ್ಲ. ತನ್ನ ಬರೆಯುವ ಕೆಲಸವನ್ನೇ ಮುಂದುವರಿಸಿದ. ಯಾತನೆಯ ದಿನಗಳಲ್ಲೇ ತನ್ನ ಕೆಲವು ಅತ್ಯದ್ಭುತ ಕತೆಗಳನ್ನು ಬರೆದ.
      ಆತನ ಲೇಖನಗಳನ್ನು ಕೆಲಕಾಲ ನಿಯತವಾಗಿ ಪ್ರಕಟಿಸಿದ ಪತ್ರಿಕೆಡೈಲಿ ಅಫಖ್. ಅದರಲ್ಲಿ ಖ್ಯಾತ ಚಿತ್ರನಟರಾದ ಅಶೋಕ್ ಕುಮಾರ್, ಶ್ಯಾಮ್, ನರ್ಗೀಸ್, ನೂರ್ ಜಹಾಂ ಮತ್ತು ನಸೀಮ್ (ಸಾಯಿರಾ ಬಾನೊರವರ ತಾಯಿ) ಹಾಗೂ ಕೆಲವು ಸಾಹಿತಿಗಳಾದ ಮೀರಾ ಜೀ, ಹಶರ್ ಕಾಶ್ಮೀರಿ, ಇಸ್ಮತ್ ಚುಗ್ತಾಯ್ರವರ ಬಗ್ಗೆಯೂ ಬರೆದ. ಲೇಖನಗಳೆಲ್ಲಾಗಂಜೆ ಫರಿಶ್ತೇ ಹೆಸರಿನ ಪುಸ್ತಕವಾಗಿ ಪ್ರಕಟವಾಯಿತು.
      ದಿನಗಳಲ್ಲಿ ಮಂಟೊ ಹುಚ್ಚುಹಿಡಿದವನಂತೆ ಬರೆಯತೊಡಗಿದ. ತನ್ನ ಕುಡಿತವನ್ನೂ ಹೆಚ್ಚು ಮಾಡಿದ್ದ. ತನ್ನ ಕುಟುಂಬ ಸಾಗಿಸಲು ಹಾಗೂ ತನ್ನ ಕುಡಿತಕ್ಕೆ ಹಣ ಒದಗಿಸುತ್ತಿದ್ದುದು ಅವನ ಬರಹವೇ. ಹಣ ಕಡಿಮೆಯೆಂದು ಅತ್ಯಂತ ಕಡಿಮೆ ಬೆಲೆಯ ಕೆಳದರ್ಜೆಯ ಮದ್ಯ ಸೇವಿಸತೊಡಗಿದ. ‘ಡೈರೆಕ್ಟರ್ ಎಂಬ ಪತ್ರಿಕೆಗೆ ಅಂಕಣವೊಂದನ್ನು ಬರೆದ. ಅವನ ರೀತಿ ಹೇಗಿತ್ತೆಂದರೆ, ಆತ ಪತ್ರಿಕೆಯ ಕಚೇರಿಗೆ ಹೋಗಿ ಅವರದೇ ಪೆನ್ನು, ಕಾಗದ ಕೇಳಿ ಪಡೆದು ಅಲ್ಲೇ ಕೂತು ಲೇಖನ ಬರೆದುಕೊಟ್ಟು, ತಕ್ಷಣ ತನ್ನ ಲೇಖನದ ಸಂಭಾವನೆಯನ್ನು ಅಲ್ಲಿಯೇ ಪಡೆದು ಬರುತ್ತಿದ್ದ. ಕಾಲದಲ್ಲಿ ಆತ ಪಡೆಯುತ್ತಿದ್ದ ಸಂಭಾವನೆ ಸುಮಾರು ಇಪ್ಪತ್ತೈದು ರೂಪಾಯಿಗಳಾಗಿತ್ತು. ಆಗ ಅದೇನೂ ಕಡಿಮೆಯಾಗಿರಲಿಲ್ಲ.  ಆದರೆ ಹಣ ಅವನ ಕುಟುಂಬಕ್ಕೆ ಹಾಗೂ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಸಿಕ್ಕ ಸಿಕ್ಕ ಗೆಳೆಯರ ಬಳಿಯೆಲ್ಲಾ ಸಾಲ ಮಾಡುತ್ತಿದ್ದ ಹಾಗೂ ಆತನಿಗೆ ಅದನ್ನು ಹಿಂದಿರುಗಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಪರಿಸ್ಥಿತಿ ಎಲ್ಲಿಗೆ ಹೋಯಿತೆಂದರೆ, ಮಂಟೋಗಾಗಿ ಕಾಯುತ್ತಿದ್ದ ಗೆಳೆಯರು, ಅವನು ಬಂದರೆ ತಪ್ಪಿಸಿಕೊಂಡು ಹೋಗಲು ಪ್ರಾರಂಭಿಸಿದರು.
      ಆತನ ಪತ್ನಿ ಸಫಿಯಾ ಗಂಡನನ್ನು ಕುಡಿತದ ಚಟದಿಂದ ಬಿಡಿಸುವ ಹಲವಾರು ಪ್ರಯತ್ನಗಳನ್ನು ಮಾಡಿದಳು. ಆತನಿಗೆ ಕುಡಿತದ ಚಟ ಎಷ್ಟಿತ್ತೆಂದರೆ, ಆತ ತಾನು ಸಂಪಾದಿಸಿದ ಹಣವನ್ನು ಶಿಸ್ತಾಗಿ ಪತ್ನಿಗೆ ನೀಡುತ್ತಿದ್ದ ಹಾಗೂ ಆತನಿಗೆ ಹಣ ಆಕೆ ಎಲ್ಲಿ ಇಟ್ಟಿರುತ್ತಿದ್ದಳೆಂಬುದು ಆತನಿಗೆ ತಿಳಿದಿರುತ್ತಿತ್ತು. ಆಕೆ ಇಲ್ಲದಿರುವಾಗ ಹಣವನ್ನು ಕದ್ದು ಕುಡಿಯಲು ಹೋಗಿಬಿಡುತ್ತಿದ್ದ. ಆಕೆ ಯಾವಾಗಲೂ ಮನೆಯಲ್ಲಿದ್ದ ಸೇವಕರ ಮೇಲೆ ಸಂಶಯಪಟ್ಟು ಅವರನ್ನು ಬೈಯುತ್ತಿದ್ದಳು. ಆದರೆ ತನ್ನ ಗಂಡನ ಚರ್ಯೆ ತಿಳಿದ ಕ್ಷಣ ಆಕೆ ಭಯಾನಕ ವಾಸ್ತವತೆಗೆ ಬೆಚ್ಚಿಬಿದ್ದಳು, ತನ್ನ ಗಂಡನ ಮೇಲಿಟ್ಟಿದ್ದ ಎಲ್ಲ ವಿಶ್ವಾಸವನ್ನೂ ಕಳೆದುಕೊಂಡಳು. ಕೊನೆಗೊಂದು ದಿನ ಬೇರೆ ದಾರಿ ಕಾಣದೆ ಆತನ ಕುಡಿತದ ಹುಚ್ಚನ್ನು ಬಿಡಿಸಲು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದಳು. ಮಂಟೋ ದಿನ ವಿಧಿಯ ಕ್ರೌರ್ಯಕ್ಕೆ ತತ್ತರಿಸಿಹೋದ. ಆತ ಹುಚ್ಚಾಸ್ಪತ್ರೆಯಲ್ಲಿ ಕಳೆದ ದಿನಗಳೇ ಆತನಟೋಬಾ ಟೇಕ್ ಸಿಂಗ್ ಕತೆಗೆ ವಸ್ತುವಾಯಿತು. ಕತೆ ಮ್ಯಾಜಿಕಲ್ ರಿಯಾಲಿಸಂನ ಮೊದಲ ಪ್ರಯೋಗವೆಂದೆನ್ನಿಸುತ್ತದೆಯೆಂದು ಸಾಹಿತ್ಯ ವಿಮರ್ಶಕರು ಹೇಳುತ್ತಾರೆ.
      ಹುಚ್ಚಾಸ್ಪತ್ರೆಯಲ್ಲಿನ ಚಿಕಿತ್ಸೆ ಆತನಿಗೆ ಯಾವ ರೀತಿಯಲ್ಲಿಯೂ ಸಹಾಯ ಮಾಡಲಿಲ್ಲ. ಆತನ ಚಟಗಳು ಹೆಚ್ಚುತ್ತಾ ಹೋದವೇ ಹೊರತು ಕಡಿಮೆಯಾಗಿರಲಿಲ್ಲ. ತನ್ನ ಪತ್ನಿ ಹಾಗೂ ಮೂರು ಹೆಣ್ಣುಮಕ್ಕಳ ಜವಾಬ್ದಾರಿ ಆತನ ಮೇಲೆಯೇ ಇತ್ತು ಹಾಗೂ ಕೊನೆಗೆ ತನ್ನ ಅತ್ತೆ ಮಾವಂದಿರ ಆಸರೆಗೆ ಹೋಗಬೇಕಾಯಿತು. ಅಷ್ಟೊತ್ತಿಗಾಗಲೇ ಆತ ಮಾನಸಿಕವಾಗಿ ಸಂಪೂರ್ಣ ಜರ್ಜರಿತನಾಗಿದ್ದ. ತನ್ನ ಬಗ್ಗೆ ಏನೇ ಬರೆದರೂ ಅವು ಆತನ ಸಾವಿನ ಬಗ್ಗೆಯೇ ಇರುತ್ತಿತ್ತು.
      ಆತ ಸಾಹಿತ್ಯ ಸಮಾವೇಶಗಳಲ್ಲಿ ತನ್ನ ಪ್ರಬಂಧಗಳನ್ನು ಮಂಡಿಸುತ್ತಿದ್ದ, ಆದರೆ. ಕೊನೆಕೊನೆಗೆ ಮಂಟೋನ ಮನಃಸ್ಥಿತಿ ಹೇಗಿತ್ತೆಂದರೆ ತನ್ನನ್ನು ಟೀಕಿಸುವವರ ಮೇಲೆ ಕಿಡಿಕಾರುತ್ತಿದ್ದ, ಜೋರಾಗಿ ಅರಚಾಡಿ ಅವರನ್ನು ಬೈಯುತ್ತಿದ್ದ. ವೇದಿಕೆಯಿಂದ ಕೆಳಗಿಳಿಯದೆ ಆತನನ್ನು ಬಲವಂತವಾಗಿ ಕೆಳಕ್ಕೆ ತರಬೇಕಾಗುತ್ತಿತ್ತು. ಮೊದಮೊದಲು ಸಾಹಿತ್ಯ ಸಮಾವೇಶಗಳಲ್ಲಿ ಆತನಿಗಾಗಿ ಸಾಹಿತಿಗಳು, ಜನರು ಎದುರುನೋಡುತ್ತಿದ್ದರು. ಆತ ಭಾಗವಹಿಸುತ್ತಾನೆಂದರೆ ಅದು ಅವರಿಗೆ ಹೆಮ್ಮೆಯ ವಿಷಯವಾಗಿರುತ್ತಿತ್ತು. ಆದರೆ ಕ್ರಮೇಣ ಆತ ಬಂದರೆ ಎಲ್ಲರೂ ಎದ್ದು ಹೋಗತೊಡಗಿದರು.    
      ಮಂಟೊ ಲಾಹೋರ್ನಲ್ಲಿ ಏಳು ವರ್ಷಗಳು ಬದುಕಿದ್ದ.  ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಆತ ಕುಡಿಯುತ್ತಿದ್ದ ಕೆಳದರ್ಜೆಯ ಮದ್ಯ ಆತನ ಯಕೃತ್ತನ್ನು ನಾಶಮಾಡಿತು. 18 ಜನವರಿ 1955, ಲಾಹೋರಿನಲ್ಲಿ ವಿಪರೀತ ಚಳಿಯಿತ್ತು, ಬೆಳಗಿನ ಜಾವ ಮೂಗಿನಲ್ಲಿ ರಕ್ತ ಕಾರುತ್ತ ಬಿದ್ದಿದ್ದ. ಕೂಡಲೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಲಾಯಿತು.
      ಮಂಟೋನ ಸಾವಿನ ಬಗ್ಗೆ ಅನೇಕ ಕತೆಗಳು ಹುಟ್ಟಿಕೊಂಡವು. ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಎರಡು ಗುಟುಕು ಮದ್ಯ ನೀಡಿರಿ ಎಂದು ಸುತ್ತಮುತ್ತಲಿನವರನ್ನು ಕೇಳಿಕೊಂಡ ಎಂದರು ಕೆಲವರು. ಆಸ್ಪತ್ರೆಯಲ್ಲಿನ ವೈದ್ಯರು, ‘ಈತನನ್ನು ಇಲ್ಲಿಗೇಕೆ ಕರೆದುತಂದಿರಿ? ಈತನನ್ನು ನೇರ ಸ್ಮಶಾನಕ್ಕೆ ಕರೆದೊಯ್ಯಬೇಕಿತ್ತು ಎಂದು ಹೇಳಿದರು ಇನ್ನು ಕೆಲವರು. ಆತನ ಸಾವಿಗೆ ಕಾರಣವನ್ನು ಹುಡುಕುವುದು ವೈದ್ಯರಿಗೆ ಕಷ್ಟವಾಗಿರಲಿಕ್ಕಿಲ್ಲ. ದಿನಕ್ಕೊಂದು ಬಾಟಲಿ ಕಳ್ಳಭಟ್ಟಿ ಹಾಗೂ ಎರಡು ತುಣುಕು ರೊಟ್ಟಿ ತಿಂದು ಬದುಕುತ್ತಿದ್ದಾತನಿಗೆ ಯಕೃತ್ತಿನ ಸಿರ್ರೋಸಿಸ್ ಆಗಿರದೆ ಮತ್ತೇನು ಆಗಿರಲಿಕ್ಕೆ ಸಾಧ್ಯ ಎಂದರು ಎಲ್ಲರು.
      ತನ್ನ ಕೃತಿಯೊಂದರ ಹಿನ್ನುಡಿಯಾಗಿ ಓದುಗರನ್ನುದ್ದೇಶಿಸಿ ಮಾತುಗಳನ್ನು ಮಂಟೊ ಬರೆದಿದ್ದ: ‘ನೀವು ಓದುಗರು ನನ್ನನ್ನು ಸಣ್ಣಕತೆಗಾರನ್ನಾಗಿ ನೋಡುತ್ತಿದ್ದೀರಿ, ನ್ಯಾಯಾಲಯಗಳು ನನ್ನನ್ನು ಅಶ್ಲೀಲ ಬರಹಗಾರನನ್ನಾಗಿ ನೋಡುತ್ತಿವೆ. ಸರ್ಕಾರ ನನ್ನನ್ನು ಕೆಲವೊಮ್ಮೆ ಕಮ್ಯೂನಿಸ್ಟನೆಂದು ಕರೆಯುತ್ತದೆ, ಇನ್ನು ಕೆಲವೊಮ್ಮೆ ಮಹಾನ್ ಲೇಖಕನೆಂದು ಕರೆಯುತ್ತದೆ. ನನ್ನ ಬಹುಪಾಲು ಬದುಕೆಲ್ಲಾ ನನಗೆ ಜೀವನೋಪಾಯವನ್ನೇ ನೀಡಲಿಲ್ಲ. ನನ್ನನ್ನು ಸಮಾಜಕ್ಕೆ ಹೊರೆಯ ಹಾಗೆ ಕಂಡಿದೆ ಮತ್ತು ಅದೇ ರೀತಿ ನನ್ನನ್ನು ಹೊರಕ್ಕೆ ಹಾಕಿದೆ. ಕೆಲವೊಮ್ಮೆ ಸರ್ಕಾರದ ಗೌರವಾನ್ವಿತರ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಹೇಳಿದೆ. ಹಿಂದಿನಂತೆ ಇಂದಿಗೂ ನಾನು ಏನೆನ್ನುವುದು ನನಗೇ ಅರ್ಥವಾಗಿಲ್ಲ. ದೇಶದಲ್ಲಿ, ವಿಶ್ವದ ಅತಿದೊಡ್ಡ ಇಸ್ಲಾಂ ದೇಶದಲ್ಲಿ ನನ್ನ ಸ್ಥಾನ ಎಲ್ಲಿದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕಾಗಿದೆ. ಇಲ್ಲಿ ನನ್ನ ಉಪಯೋಗವೇನಿದೆ? ನೀವದನ್ನು ನನ್ನ ಕಲ್ಪನೆ ಎನ್ನಬಹುದು, ಆದರೆ ಕಹಿಯಾದ ಸತ್ಯವೇನೆಂದರೆ ಇಂದಿನವರೆಗೂ ಪಾಕಿಸ್ತಾನವೆಂದು ಕರೆಯಲ್ಪಡುವ ದೇಶದಲ್ಲಿ, ನಾನು ಪ್ರೀತಿಸುವ ದೇಶದಲ್ಲಿ ನನ್ನ ಸ್ಥಾನವನ್ನು ಕಂಡುಕೊಳ್ಳಲು ನನಗೆ ಇಂದಿಗೂ ಸಾಧ್ಯವಾಗಿಲ್ಲ. ಅದಕ್ಕಾಗಿಯೇ ನಾನು ತಹತಹಿಸುತ್ತಿದ್ದೇನೆ. ಅದಕ್ಕಾಗಿಯೇ ನೀವು ನನ್ನನ್ನು ಕೆಲವೊಮ್ಮೆ ಹುಚ್ಚಾಸ್ಪತ್ರೆಯಲ್ಲಿ ಕಾಣುತ್ತೀರಿ, ಕೆಲವೊಮ್ಮೆ ಆಸ್ಪತ್ರೆಯಲ್ಲಿ ಕಾಣುತ್ತೀರಿ. ಪಾಕಿಸ್ತಾನದಲ್ಲಿ ನನಗಾಗಿ ನನ್ನದೇ ಆದ ಒಂದು ಸಣ್ಣ ಗೂಡೊಂದನ್ನು ನಾನು ಇಂದಿಗೂ ಕಟ್ಟಿಕೊಳ್ಳಲಾಗಿಲ್ಲ.
      ಹಲವಾರು ವಿಷಯಗಳಲ್ಲಿ ಮಂಟೋ ತನ್ನನ್ನು ಹತ್ತೊಂಬತ್ತನೆಯ ಶತಮಾನದ ಕವಿ ಮಿರ್ಜಾ ಗಾಲಿಬ್ನೊಂದಿಗೆ ಗುರುತಿಸಿಕೊಳ್ಳತೊಡಗಿದ. ದೇಶದ ವಿಭಜನೆಯ ಮೊದಲು ಬಾಂಬೆಯಲ್ಲಿ ಆತ ಗಾಲಿಬ್ ಬಗೆಗಿನ ಸಿನೆಮಾದ ಕೆಲಸ ಪ್ರಾರಂಭಿಸಿದ್ದ ಹಾಗೂ ಅಷ್ಟರಲ್ಲಿ ಗಾಲಿಬ್ ಆತನನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿದ್ದ. ಆತನಂತೆಯೇ ಗಾಲಿಬ್ ಸಹ ಅತಿ ದೊಡ್ಡ ಕುಡುಕನಾಗಿದ್ದ, ಜೂಜಾಡುತ್ತಿದ್ದ ಹಾಗೂ ಹಣವನ್ನು ನೀರಿನಹಾಗೆ ಖರ್ಚುಮಾಡುತ್ತಿದ್ದ. ಅದೇ ರೀತಿಯೇ ಗಾಲಿಬ್ನಿಗೆ ಸಹ ಆತ ಬದುಕಿದ್ದಾಗ ಸಲ್ಲಬೇಕಾದ ಸಾಹಿತ್ಯ ಸನ್ಮಾನಗಳು ದಕ್ಕಲಿಲ್ಲ ಹಾಗೂ ಆತನನ್ನೂ ಸಹ ಯಾವುದೋ ಸಣ್ಣ ಅಪರಾಧಕ್ಕಾಗಿ ಜೈಲಿಗೆ ಕಳುಹಿಸಲಾಗಿತ್ತು.
      ಮಂಟೊ ಸತ್ತಾಗ ಆತನಿಗಿನ್ನೂ 43 ವರ್ಷ ತುಂಬಿರಲಿಲ್ಲ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ. ಆತನಿಗೆ ತಾನೊಬ್ಬ ಅದ್ಭುತ ಕತೆಗಾರನೆಂಬುದರ ಅರಿವಿತ್ತು. ತನ್ನ ಸಾವಿನ ಆರು ತಿಂಗಳ ಮೊದಲೇ ಮಿರ್ಜಾ ಗಾಲಿಬ್ನಂತೆಯೇ ತನ್ನ ಸಮಾಧಿಯ ತಲೆಕಲ್ಲಿನ ಬರಹವನ್ನು ಬರೆದಿಟ್ಟಿದ್ದ: ‘ಇಲ್ಲಿ ಸಾದತ್ ಹಸನ್ ಮಂಟೋ ಮಲಗಿದ್ದಾನೆ ಹಾಗೂ ಆತನೊಂದಿಗೇ ಸಣ್ಣ ಕತೆಗಳ ಬರಹದ ಎಲ್ಲಾ ರಹಸ್ಯಗಳು ಮತ್ತು ನಿಗೂಢಗಳನ್ನು ಹೂಳಲ್ಪಟ್ಟಿವೆ. ಮಣಗಟ್ಟಲೆ ಮಣ್ಣಿನ ಕೆಳಗೆ ಇವರಿಬ್ಬರಲ್ಲಿ ಅದ್ಭುತ ಸಣ್ಣ ಕತೆಗಾರ ಯಾರು ಎಂದು ಇಂದಿಗೂ ಆತ ವಿಸ್ಮಯದಿಂದ ಆಲೋಚಿಸುತ್ತಿದ್ದಾನೆ: ದೇವರೋ ಅಥವಾ ಮಂಟೋನೋ!- ಸಾದತ್ ಹಸನ್ ಮಂಟೊ, 18ನೇ ಆಗಸ್ಟ್ 1954’. ಆದರೆ ಮಂಟೋನ ವಾಕ್ಯಗಳು ಆತನ ಸಮಾಧಿಯ ಬಳಿಯಿಲ್ಲ.