ಸೋಮವಾರ, ಜನವರಿ 08, 2007

Kannada Poetry- ಸರ್ಕಸ್ಸಿನ ಹುಡುಗಿ

ಗೆಳೆಯ ಎಲ್ಪಿ ಕೆ.ಜಿ.ಎಫ್.ನಲ್ಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸುವರ್ಣ ಮಹೋತ್ಸವದ ಕವಿಗೋಷ್ಠಿಗೆಂದು ಕರೆದಾಗ ಈ ಪದ್ಯ ಬರೆದದ್ದು. ಈ ಪದ್ಯ ಚೆನ್ನಾಗಿಲ್ಲದಿದ್ದಲ್ಲಿ ನಾನಲ್ಲ ಕಾರಣ. ಎಲ್ಪಿಯೇ ಅದಕ್ಕೆ ಉತ್ತರಿಸಬೇಕು:

ಸರ್ಕಸ್ಸಿನ ಹುಡುಗಿ

ಜೀಕು ಜೋಕಾಲಿಯಲ್ಲಿ
ಅಲ್ಲಿ ಆಗಸದೆತ್ತರದಲ್ಲಿ
ತೊನೆದು ತೊಯ್ದಾಡಿ ಚಿಮ್ಮಿ
ಹಿಡಿಯಲು ಚಾಚಿದ್ದ ಎರಡು ಕೈಗಳೆಡೆಗೆ
ಬದುಕನ್ನೇ ಆತುಕೊಳ್ಳುವಂತೆ ಹಾರಿದಾಗ
ಒಂದರೆಕ್ಷಣ, ಸಾವು ಬದುಕಿನ ನಿರ್ಧಾರದ ಕ್ಷಣ
ಜಗಜಗಿಸುವ ಬೆಳಕಿನಡಿಯಲ್ಲಿ
ಎಲ್ಲವೂ ಕಣ್ಣುಕಪ್ಪಿಡುವ ಕತ್ತಲು.

ಗಾಳಿಯಲ್ಲಿ ಯಾವ ಆಸರೆಯಿಲ್ಲದೆ ಈ ದಿಕ್ಕಿನಿಂದ
ಆ ದಿಕ್ಕಿಗೆ ದಿಕ್ಕುತಪ್ಪಿದ ಬಾವಲಿಯಂತೆ
ಜೋತುಬೀಳಲು ಆಸರೆ ಅರಸುವಾಗ
ನೆನಪಾಗುತ್ತದೆ ಈಗತಾನೇ ಹಾಲೂಡಿಸಿ
ಬಂದ ಕಂದನ ಮುಖ.
ಕೈಜಾರಿದರೆ ಗಕ್ಕನೆ ಸೆಳೆದುಕೊಳ್ಳುವ
ಹೊಂಚುಹಾಕುತ್ತಿರುವ ಸಾವಿನ ಬಲೆಯೂ ನೆನಪಾಗುತ್ತದೆ.

ನೋಡುವವರ ಉಸಿರು ನಿಂತಿದೆ
ಮೈದೋರುವ ಬಿಗಿ ಉಡುಪಿನ
ನಗುಮೊಗದ ಈ ಸರ್ಕಸ್ಸಿನ ಹುಡುಗಿಯ
ಕಸರತ್ತಿನಲ್ಲಿ ತುಂಬಿದ ಗಡಿಗೆಯಿಂದ
ಹೊರಚೆಲ್ಲಬಹುದೆ ಏನಾದರೂ
ಎಂದು ನೋಡಲು ಕಾಯುತ್ತಿರುವ ಜನ.
ಹೊರಚೆಲ್ಲಬಹುದು, ಹೊರಹಾರಬಹುದು
ಅದು ಪ್ರಾಣಪಕ್ಷಿಯೇ ಆಗಿರಬಹುದು.

ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು
ಆಸರೆ ಬಿಟ್ಟು ಮತ್ತೊಂದೆಡೆಯ ಆಸರೆಗೆ
ಚಿಮ್ಮಿದ ಹುಡುಗಿಗೆ, ಬದುಕಿರುವುದು ಖಾತ್ರಿಯಾಗುವ ಮುನ್ನ,
ಕೆಳಗುರುಳಿದ ಕಣ್ಣೀರ ಹನಿ ಯಾರಿಗೂ ಕಾಣದೆ
ಮಣ್ಣುಗೂಡುವ ಮುನ್ನ
ಮನಸ್ಸಿನಲ್ಲಿ ಬದುಕಿನ ಎಲ್ಲ ಘಟನೆಗಳು
ಫ್ಲ್ಯಾಶ್‌ಬ್ಯಾಕಿನಂತೆ.
ತಾನು ಹಸುಗೂಸಾಗಿದ್ದಾಗ ತನ್ನಮ್ಮ ಇಲ್ಲೇ
ಅಲ್ಲವೆ ಸಾವು-ಬದುಕಿನಾಟ ನಡೆಸಿದ್ದು,
ಗಾಳಿಯಲ್ಲಿ ಯಾವ ಆಸರೆಯಿಲ್ಲದೆ
ಸಾವು ಬದುಕು ನಿರ್ಧಾರವಾಗುವ ಆ ಅರೆಕ್ಷಣ
ಆಕೆಗೆ ಆಕೆಯ ಕಂದನ ನೆನಪಾಗಿರಬೇಕಲ್ಲವೆ.

ಊರು ಬೇರಾಗಬಹುದು. ನೀರು ಬೇರಾಗಬಹುದು
ಉಸಿರುಗಟ್ಟಿಸುವ ಈ ಗುಡಾರದ ಮಾಸಲು
ಬಣ್ಣ ಬದಲಾಗದು, ಕುತ್ತಿಗೆಯ ಸುತ್ತಿರುವ
ಹುಲಿ ಸಿಂಹಗಳ ಒಡೆಯನ ಚಾವಟಿಯ ಬಿಗಿತ
ಸಡಿಲವಾಗದು.
ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು.

-ಜೆ.ಬಾಲಕೃಷ್ಣ