ಗುರುವಾರ, ಫೆಬ್ರವರಿ 16, 2012

ಮುಲ್ಲಾ ನಸ್ರುದ್ದೀನ್ ಕತೆಗಳು - 2

ಯಾರ ಮಾತನ್ನು ನಂಬುತ್ತೀಯೆ?
ಒಂದು ದಿನ ಪಕ್ಕದ ಮನೆಯಾತ ನಸ್ರುದ್ದೀನ್ ಬಳಿ ಬಂದು, ‘ಈ ದಿನ ಸಂತೆಯಿಂದ ಕೆಲವು ಸಾಮಾನು ತರಬೇಕಿದೆ. ನನ್ನ ಕತ್ತೆಗೆ ಕಾಯಿಲೆಯಾಗಿದೆ. ನಿನ್ನ ಕತ್ತೆಯನ್ನು ಕೊಡುವೆಯಾ?’ ಎಂದು ಕೇಳಿದ.
ಆತನಿಗೆ ತನ್ನ ಕತ್ತೆಯನ್ನು ಕೊಡಲು ಇಷ್ಟವಿಲ್ಲದ ನಸ್ರುದ್ದೀನ್, ‘ಕ್ಷಮಿಸು ಗೆಳೆಯಾ, ನನ್ನ ಕತ್ತೆಯನ್ನು ಈಗಾಗಲೇ ಬೇರೆ ಯಾರಿಗೋ ಕೊಟ್ಟಿದ್ದೇನೆ’ ಎಂದ.
ಅಷ್ಟರಲ್ಲಿ ನಸ್ರುದ್ದೀನ್‌ನ ಮನೆಯ ಹಿತ್ತಲಲ್ಲಿದ್ದ ಕತ್ತೆ ಜೋರಾಗಿ ಕೂಗಿತು.
ಅದನ್ನು ಕೇಳಿಸಿಕೊಂಡ ಪಕ್ಕದ ಮನೆಯಾತ, ‘ಸುಳ್ಳು ಹೇಳುತ್ತಿದ್ದೀಯ ಹೋಜಾ! ನೋಡು ಕತ್ತೆ ನಿನ್ನ ಮನೆಯ ಹಿತ್ತಲಲ್ಲೇ ಇದೆ!’ ಎಂದ.
‘ನಾನು ಸುಳ್ಳು ಹೇಳುತ್ತಿದ್ದೀನೆಯೆ! ನೀನು ನನ್ನ ಮಾತನ್ನು ನಂಬುತ್ತೀಯಾ ಅಥವಾ ಆ ಕತ್ತೆಯ ಮಾತನ್ನೇ?’ ಕೇಳಿದ ನಸ್ರುದ್ದೀನ್.

***
ಚಿಕ್ಕ ಮೀನು - ದೊಡ್ಡ ಮೀನು
ಪ್ರಖ್ಯಾತ ವಿದ್ವಾಂಸನೊಬ್ಬ ನಸ್ರುದ್ದೀನ್‌ನ ಹಳ್ಳಿಯಲ್ಲಿ ಹಾದು ಹೋಗುತ್ತಿದ್ದ. ಆತನಿಗೆ ಹಸಿವಾಗಿತ್ತು. ಎದುರಿಗೆ ಸಿಕ್ಕ ನಸ್ರುದ್ದೀನ್‌ನನ್ನು ಆ ಊರಿನಲ್ಲಿ ಒಳ್ಳೆಯ ಊಟ ಸಿಗುವ ಸ್ಥಳ ಯಾವುದು ಎಂದು ಕೇಳಿದ. ನಸ್ರುದ್ದೀನ್ ತನಗೆ ತಿಳಿದಿದ್ದ ಉಪಾಹಾರ ಮಂದಿರದ ವಿಳಾಸ ತಿಳಿಸಿದ. ಆ ವಿದ್ವಾಂಸನಿಗೆ ನಸ್ರುದ್ದೀನ್ ಸಹ ಒಬ್ಬ ವಿದ್ವಾಂಸನ ಹಾಗೆ ಕಂಡು ಆತನೊಂದಿಗೆ ಬಹಳಷ್ಟು ವಿಷಯ ಚರ್ಚೆ ಮಾಡಬಹುದೆಂದು ಆತನನ್ನು ಸಹ ತನ್ನ ಜೊತೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಬಹಳ ಸಂತೋಷದಿಂದ ಒಪ್ಪಿದ ನಸ್ರುದ್ದೀನ್ ಆತನನ್ನು ಉಪಾಹಾರ ಮಂದಿರಕ್ಕೆ ಕರೆದೊಯ್ದ. ಅಲ್ಲಿ ಊಟಕ್ಕೆ ತಾಜಾ ಮೀನು ಸಿಗುತ್ತದೆ ಎಂದು ತಿಳಿದು ವಿದ್ವಾಂಸ ಎರಡು ಮೀನು ಬಡಿಸಲು ಹೇಳಿದ. ಬಡಿಸುವವ ತಟ್ಟೆಯಲ್ಲಿ ಎರಡು ಮೀನು ತಂದಾಗ ಅದರಲ್ಲಿ ಒಂದು ಸ್ವಲ್ಪ ದೊಡ್ಡದು ಮತ್ತೊಂದು ಸಣ್ಣದಿತ್ತು. ನಸ್ರುದ್ದೀನ್ ಗಬಕ್ಕನೆ ದೊಡ್ಡ ಮೀನನ್ನು ಎತ್ತಿ ತನ್ನ ತಟ್ಟೆಗೆ ಹಾಕಿಕೊಂಡ. ಅದನ್ನು ನೋಡಿದ ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ಗೆ ಆತನ ನಡತೆಯ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ. ಆ ರೀತಿ ಯಾವುದೇ ವ್ಯಕ್ತಿ ಸ್ವಾರ್ಥಿಯಾಗಿರಬಾರದೆಂದೂ, ಆ ರೀತಿಯ ನಡತೆಯು ಎಲ್ಲ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವುದೆಂದೂ ಹೇಳಿದ. ಆ ವಿದ್ವಾಂಸ ಬಹಳಷ್ಟು ಹೇಳಿ ತನ್ನ ಭಾಷಣ ನಿಲ್ಲಿಸಿದ. ಅದನ್ನೇ ಕಾಯುತ್ತಿದ್ದ ನಸ್ರುದ್ದೀನ್, ‘ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ ಎಂದು ಕೇಳಿದ.
‘ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು. ಹಾಗಾಗಿ ನಾನು ಮೊದಲು ಚಿಕ್ಕ ಮೀನೇ ತೆಗೆದುಕೊಳ್ಳುತ್ತಿದ್ದೆ’ ಎಂದ ವಿದ್ವಾಂಸ.
ಅದಕ್ಕೆ ನಸ್ರುದ್ದೀನ್, ‘ಹೌದೆ. ತೆಗೆದುಕೊಳ್ಳಿ, ನಿಮ್ಮ ಚಿಕ್ಕ ಮೀನು ಇನ್ನೂ ಇಲ್ಲೇ ಇದೆ’ ಎನ್ನುತ್ತಾ ಅದನ್ನು ತೆಗೆದು ವಿದ್ವಾಂಸನ ತಟ್ಟೆಗೆ ಹಾಕಿದ.

***

ನೋಡು ಅಲ್ಲಾಡುತ್ತಿದ್ದಾನೆ!
ನಸ್ರುದ್ದೀನ್ ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದ. ಅವರ ಮಾತಿನ ವಿಷಯ ಸಾವಿನ ಕಡೆಗೆ ಹೊರಳಿತು. ಅವರಲ್ಲೊಬ್ಬ, ‘ನೀನು ಸತ್ತು ನಿನ್ನ ಹೆಣ ಶವದ ಪೆಟ್ಟಿಗೆಯಲ್ಲಿರುವಾಗ ನಿನ್ನನ್ನು ನೋಡುವ ಬಂಧು ಬಳಗದವರ ಬಾಯಿಂದ ಯಾವ ಮಾತನ್ನು ಕೇಳಲು ಬಯಸುತ್ತೀಯೆ?’ ಎಂದ.
ಅವರಲ್ಲಿ ವೈದ್ಯನಾದವನೊಬ್ಬ, ‘ಅವರು ನನ್ನನ್ನು ನೋಡುತ್ತಾ, ಆತನೊಬ್ಬ ಮಹಾನ್ ವೈದ್ಯನಾಗಿದ್ದ, ಒಳ್ಳೆಯ ವ್ಯಕ್ತಿಯಾಗಿದ್ದ’ ಎನ್ನುವುದನ್ನು ಕೇಳಲು ಬಯಸುತ್ತೇನೆ ಎಂದ.
ಮತ್ತೊಬ್ಬ ಅಧ್ಯಾಪಕನಾಗಿದ್ದವನು, ‘ಆತನೊಬ್ಬ ಒಳ್ಳೆಯ ಅಧ್ಯಾಪಕ, ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಿದಾತ, ಆತ ತನ್ನ ಹೆಂಡತಿಗೆ ಅದ್ಭುತ ಗಂಡನೂ ಆಗಿದ್ದ ಎಂದು ಕೇಳಲು ಬಯಸುತ್ತೇನೆ’ ಎಂದ.
ನಸ್ರುದ್ದೀನ್‌ನ ಸರದಿ ಬಂದಾಗ ಆತ, ‘ನನ್ನ ಬಂಧು ಬಳಗದವರು ನನ್ನ ಹೆಣವನ್ನು ನೋಡುತ್ತಾ ಆತ ಪುನಃ ಬದುಕಿದ್ದಾನೆ, ನೋಡು ಅಲ್ಲಾಡುತ್ತಿದ್ದಾನೆ ಎನ್ನುವುದನ್ನು ಕೇಳಲು ಬಯಸುತ್ತೇನೆ’ ಎಂದ.
***

ದೇವರೆಂಬ ಬದನೆಕಾಯಿ
ದರ್ವೇಶಿಗಳ ಗುರು ನಸ್ರುದ್ದೀನ್‌ನನ್ನು ಒಮ್ಮೆ ‘ದೇವರ ಸ್ವರೂಪ’ದ ಬಗ್ಗೆ ಮಾತನಾಡಲು ಮಸೀದಿಗೆ ಕರೆಸಲಾಯಿತು. ಅಲ್ಲಿ ಬಹಳ ವಿದ್ವಾಂಸರು ಸೇರಿದ್ದರು. ಅವರೆಲ್ಲಾ ದೇವರ ಸ್ವರೂಪದ ಬಗೆಗೆ ಸುದೀರ್ಘ ಭಾಷಣಗಳನ್ನು ಮಾಡಿದರು. ಅಲ್ಲಿ ನೆರೆದಿದ್ದ ಜನರೆಲ್ಲಾ ಅವರ ವಿದ್ವತ್ತಿಗೆ ತಲೆದೂಗಿದರು. ಕೊನೆಗೆ ನಸ್ರುದ್ದೀನ್‌ನ ಸರದಿ ಬಂತು. ನಸ್ರುದ್ದೀನ್ ಬಹಳ ಸಂಕೋಚದಿಂದಲೇ ಎದ್ದು ನಿಂತ.
‘ದೇವರೆಂದರೆ..........’ ನಸ್ರುದ್ದೀನ್‌ಗೆ ಏನು ಹೇಳಬೇಕೆಂದು ತೋಚಲಿಲ್ಲ. ಕೊನೆಗೆ ತನ್ನ ಜೇಬಿನಲ್ಲಿದ್ದ ಒಂದು ಬದನೆಕಾಯಿ ತೆಗೆದು, ‘ದೇವರೆಂದರೆ...ಈ ಬದನೆಕಾಯಿ’ ಎಂದ. ವಿದ್ವಾಂಸರು ಮತ್ತು ಅಲ್ಲಿ ನೆರೆದಿದ್ದ ಜನರೆಲ್ಲಾ ‘ಹೋ’ ಎಂದು ಉದ್ಗಾರ ತೆಗೆದರು. ನಸ್ರುದ್ದೀನ್ ದೈವ ನಿಂದನೆ ಮಾಡಿದ್ದಾನೆಂದು ತಮ್ಮ ತಮ್ಮಲ್ಲೇ ಮಾತನಾಡಿ ಕೊಳ್ಳತೊಡಗಿದರು. ಕೊನೆಗೆ ವಿದ್ವಾಂಸನೊಬ್ಬ ಎದ್ದು ನಿಂತು ಜನರನ್ನು ನಿಶ್ಶಬ್ದಗೊಳಿಸಿ ತನ್ನ ಮಾತಿನ ಅರ್ಥ ವಿವರಿಸುವಂತೆ ನಸ್ರುದ್ದೀನ್‌ನನ್ನು ಕೇಳಿದ.
ನಸ್ರುದ್ದೀನ್, ‘ಈ ದಿನ ಇಲ್ಲಿನ ವಿದ್ವಾಂಸರೆಲ್ಲಾ ತಾವು ಕಂಡಿರದುದ್ದನ್ನು ಹಾಗೂ ತಾವು ಅರ್ಥಮಾಡಿಕೊಂಡಿಲ್ಲದಿರುವುದರ ಬಗೆಗೆ ಮಾತನಾಡಿದ್ದಾರೆ. ದೇವರು ಈ ಭೂಮಿಯ ಎಲ್ಲಾ ವಸ್ತುಗಳಲ್ಲಿಯೂ ಇದ್ದಾನಲ್ಲವೆ? ನಾವೆಲ್ಲಾ ಬದನೆಕಾಯಿ ನೋಡಿದ್ದೇವಲ್ಲವೆ?’ ಎಂದು ಸಭಿಕರನ್ನು ಪ್ರಶ್ನಿಸಿದ.
ಜನರು ಹೌದೆಂದು ತಲೆಯಾಡಿಸಿದರು.
‘ಹಾಗಾದರೆ, ದೇವರೆಂದರೆ ಈ ಬದನೆಕಾಯಿ’ ಎಂದು ಹೇಳಿ ತನ್ನ ಸ್ಥಾನದಲ್ಲಿ ಹೋಗಿ ಕೂತ.
***

ಸತ್ತವನು ಯಾರು?
ಒಬ್ಬ ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆಂದು ಹೊತ್ತೊಯ್ಯುತ್ತಿದ್ದರು. ಆತನ ಬಂಧುಬಳಗದ ದೊಡ್ಡ ಹಿಂಡೇ ಅದನ್ನು ಹಿಂಬಾಲಿಸುತ್ತಿತ್ತು. ಆ ಊರಿಗೆ ಹೊಸದಾಗಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲೇ ಪಕ್ಕದಲ್ಲಿ ನಿಂತು ನೋಡುತ್ತಿದ್ದ ನಸ್ರುದ್ದೀನ್‌ನನ್ನು ‘ಸತ್ತಿರುವ ವ್ಯಕ್ತಿ ಯಾರು?’ ಎಂದು ಕೇಳಿದ.
ಯಾವುದೋ ಆಲೋಚನೆಯಲ್ಲಿದ್ದ ನಸ್ರುದ್ದೀನ್, ‘ಯಾರೋಪ್ಪ, ನನಗೂ ಗೊತ್ತಿಲ್ಲ. ಬಹುಶಃ ಆ ಶವಪೆಟ್ಟಿಗೆಯಲ್ಲಿರುವ ವ್ಯಕ್ತಿಯೇ ಇರಬೇಕು’ ಎಂದ.
****

ಕತ್ತೆ ಮತ್ತು ಮುಠ್ಠಾಳರು
ಮುಲ್ಲಾ ನಸ್ರುದ್ದೀನ್ ಮತ್ತು ಆತನ ಮಗ ತಮ್ಮ ಕತ್ತೆಯ ಮೇಲೆ ಕೂತು ಮಾರುಕಟ್ಟೆಗೆ ಹೋಗುತ್ತಿದ್ದರು. ಅದನ್ನು ನೋಡಿದ ಕೆಲವರು, ‘ಎಂಥಾ ಕಾಲ ಬಂತು ನೋಡಿ! ಈ ಇಬ್ಬರು ಜನ ಮೂಕ ಪ್ರಾಣಿಯ ಮೇಲೆ ಕೂತು ಹೋಗುತ್ತಿದ್ದಾರೆ. ಬಡಪಾಯಿ ಪ್ರಾಣಿ ಅವರ ತೂಕಕ್ಕೆ ಬಾಗಿಹೋಗಿದೆ!’ ಎಂದರು.
ಆ ಮಾತನ್ನು ಕೇಳಿದ ನಸ್ರುದ್ದೀನ್ ತನ್ನ ಮಗನಿಗೆ ಕತ್ತೆಯಿಂದ ಕೆಳಗಿಳಿದು ನಡೆದುಕೊಂಡು ಬರಲು ತಿಳಿಸಿದ. ಸ್ವಲ್ಪ ಮುಂದೆ ಹೋದಂತೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಲವರು, ‘ಎಂಥಾ ಕಾಲ ಬಂತು ನೋಡಿ! ಈ ಧಡಿಯ ತನ್ನ ಬಡಪಾಯಿ ಮಗನನ್ನು ನಡೆಸಿಕೊಂಡು ತಾನು ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ!’ ಎಂದರು.
ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ ತಾನು ಕತ್ತೆಯಿಂದ ಕೆಳಗಿಳಿದು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿ, ತಾನು ಅವರ ಪಕ್ಕದಲ್ಲಿ ನಡೆಯುತ್ತಾ ಹೋದ. ಒಂದಷ್ಟು ದೂರ ಹೋದ ಮೇಲೆ ಒಂದು ಜನರ ಗುಂಪು ಇವರನ್ನು ಹಾದು ಹೋಯಿತು. ಅವರಲ್ಲೊಬ್ಬ, ‘ಎಂಥಾ ಕಾಲ ಬಂತು ನೋಡಿ! ವಯಸ್ಸಿನ ಹುಡುಗ ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ, ವಯಸ್ಸಾದ ಆತನ ತಂದೆ ನಡೆದುಹೋಗುತ್ತಿದ್ದಾನೆ!’ ಎಂದ.
ಆತನ ಮಾತು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಮಗನನ್ನೂ ಕೆಳಕ್ಕಿಳಿಸಿ ಕತ್ತೆಯ ಹಗ್ಗ ಹಿಡಿದುಕೊಂಡು ಅದನ್ನು ಕರೆದೊಯ್ಯುತ್ತಾ ಇಬ್ಬರೂ ನಡೆದುಕೊಂಡು ಹೊರಟರು. ಎದುರಿಗೆ ಮತ್ತೊಂದು ಜನರ ಗುಂಪು ಬಂದಿತು. ಇವರನ್ನು ನೋಡಿದ ಅವರಲ್ಲೊಬ್ಬಾತ, ‘ಈ ಮುಠ್ಠಾಳರನ್ನು ನೋಡಿ! ಅವರ ಬಳಿ ಕತ್ತೆಯೊಂದಿದೆ, ಆದರೂ ನಡೆದು ಹೋಗುತ್ತಿದ್ದಾರೆ!’ ಎಂದ.
***
ಪ್ರವಚನ
ಮುಲ್ಲಾ ತನ್ನ ಹಳ್ಳಿಯ ಮಸೀದಿಯಲ್ಲಿ ಪ್ರತಿ ಶುಕ್ರವಾರ ಗ್ರಾಮಸ್ಥರಿಗೆ ಪ್ರವಚನ ನೀಡುತ್ತಿದ್ದ. ಒಂದು ದಿನ ಆತನಿಗೆ ಹೇಳಲು ಏನೂ ಇರಲಿಲ್ಲ. ಆದರೂ ಅದನ್ನು ತೋರಗೊಡದೆ ಆತ, ‘ಈ ದಿನ ನಾನು ಯಾವ ವಿಷಯದ ಬಗೆಗೆ ಮಾತನಾಡುತ್ತೇನೆ ಗೊತ್ತೆ?’ ಎಂದು ಕೇಳಿದ. ಅಲ್ಲಿ ನೆರೆದಿದ್ದ ಜನ ‘ಇಲ್ಲ’ ಎಂದರು. ‘ಹಾಗಾದರೆ ನಿಮ್ಮಂಥ ದಡ್ಡರಿಗೆ ಪ್ರವಚನ ಮಾಡುವುದರಿಂದ ಏನು ಲಾಭ? ಕಳೆದ ಒಂದು ವಾರದಲ್ಲಿ ಈ ಜಗತ್ತಿನಲ್ಲಿ ಏನೇನು ನಡೆದಿದೆ ಎನ್ನುವುದೂ ನಿಮಗೆ ತಿಳಿದಿಲ್ಲ!’ ಎಂದು ಮುನಿಸಿಕೊಂಡವನಂತೆ ಹೇಳಿ ಅಲ್ಲಿಂದ ಹೊರಟುಹೋದ.
ಮುಂದಿನ ಶುಕ್ರವಾರ ಮಸೀದಿಗೆ ಪ್ರವಚನಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಜನರಿಗೆ ಪುನಃ ಅದೇ ಪ್ರಶ್ನೆ ಕೇಳಿದ, ‘ಈ ದಿನ ನಾನು ಯಾವ ವಿಷಯದ ಬಗೆಗೆ ಮಾತನಾಡುತ್ತೇನೆ ಗೊತ್ತೆ?’. ಕಳೆದ ವಾರ ಮುಲ್ಲಾ ಸಿಟ್ಟು ಮಾಡಿಕೊಂಡು ಹೋದದ್ದದ್ದು ಜನರಿಗೆ ನೆನಪಿದ್ದುದರಿಂದ ಯಾರೂ ‘ಇಲ್ಲ’ ಎಂದು ಹೇಳಲಿಲ್ಲ, ಬದಲಿಗೆ ‘ನಮಗೆ ತಿಳಿದಿದೆ’ ಎಂದರು. ‘ಹೌದೆ? ನಿಮಗೆ ಈಗಾಗಲೇ ಎಲ್ಲಾ ತಿಳಿದಿರುವುದರಿಂದ ನಾನು ಏನು ಹೇಳಲಿ? ನನಗೆ ಹೇಳುವುದೇನೂ ಉಳಿದಿಲ್ಲ’ ಎಂದು ಹೇಳಿ ಮುಲ್ಲಾ ನಸ್ರುದ್ದೀನ್ ಅಲ್ಲಿಂದ ಹೊರಟುಹೋದ. ಮೂರನೇ ಶುಕ್ರವಾರ ಎಂದಿನಂತೆ ಮುಲ್ಲಾ ಮಸೀದಿಗೆ ಬಂದು ಆ ವಾರವೂ ಆತ ಅದೇ ಪ್ರಶ್ನೆಯನ್ನು ಕೇಳಿದ. ಆತನ ಪ್ರವಚನ ಕೇಳಲು ಬಂದ ಜನರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೆಲವರು ‘ಗೊತ್ತಿಲ್ಲ’ ಎಂದರು, ಇನ್ನು ಕೆಲವರು ‘ಗೊತ್ತಿದೆ’ ಎಂದರು. ಅದನ್ನು ಕೇಳಿದ ಮುಲ್ಲಾ, ‘ಒಂದು ಕೆಲಸ ಮಾಡಿ. ಗೊತ್ತಿದೆ ಎಂದವರು ಗೊತ್ತಿಲ್ಲ ಎಂದವರಿಗೆ ತಿಳಿಸಿ ಹೇಳಿಬಿಡಿ’ ಎಂದು ಹೇಳಿ ಅಲ್ಲಿಂದ ಹೊರಟುಹೋದ.

***
ಅಸಾಮಾನ್ಯ ಶಕ್ತಿ
ಮುಲ್ಲಾ ಎಷ್ಟು ವಯಸ್ಸಾಗಿದ್ದರೂ ತನ್ನ ಶಕ್ತಿ ಏನೂ ಕುಂದಿಲ್ಲವೆಂದು ತನ್ನ ಗೆಳೆಯರ ಬಳಿ ಜಂಭಕೊಚ್ಚಿಕೊಳ್ಳುತ್ತಿದ್ದ.
‘ಅದು ಹೇಗೆ ಸಾಧ್ಯ?’ ಆತನ ಗೆಳೆಯರು ಕೇಳಿದರು.
‘ನನ್ನ ಮನೆಯ ಎದುರು ಒಂದು ದೊಡ್ಡ ಕಲ್ಲಿದೆ ನೋಡಿ. ನಾನು ಯುವಕನಾಗಿದ್ದಾಗ ಆ ಕಲ್ಲು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಈಗ ವಯಸ್ಸಾದ ಮೇಲೂ ಅದನ್ನು ಎತ್ತಲು ಸಾಧ್ಯವಾಗುತ್ತಿಲ್ಲ’ ಎಂದ ನಸ್ರುದ್ದೀನ್.

***
ಸುಳ್ಳೆಂಬ ಸತ್ಯ
ಒಂದು ದಿನ ಒಬ್ಬ ದಡ್ಡ ನಸ್ರುದ್ದೀನ್‌ನನ್ನು ಕೇಳಿದ, ‘ದೇವರು ಸತ್ಯವೆ?’
‘ಈ ಜಗತ್ತಿನಲ್ಲಿರುವುದೆಲ್ಲಾ ಸತ್ಯ’ ಹೇಳಿದ ನಸ್ರುದ್ದೀನ್.
‘ಹಾಗಾದರೆ ಸುಳ್ಳುಗಳೂ ಸಹ ಸತ್ಯವೆ?’
‘ಹೌದು, ಸುಳ್ಳುಗಳೂ ಸಹ ಸತ್ಯ’
‘ಅದು ಹೇಗೆ ಸಾಧ್ಯ?’
‘ನನಗೇನು ಗೊತ್ತು. ಅವುಗಳನ್ನು ನಾನು ಮಾಡಿಲ್ಲವಲ್ಲ!’ ಹೇಳಿದ ನಸ್ರುದ್ದೀನ್.

***
ನಂಬಿಕೆ
ಒಂದು ದಿನ ನಸ್ರುದ್ದೀನ್ ಮತ್ತು ಆತನ ಗೆಳೆಯರು ಊರಿನ ಜನಗಳಿಗೆ ಒಂದು ಸುಳ್ಳು ಹೇಳಿ ತಮಾಷೆ ಮಾಡೋಣವೆಂದು ನಿರ್ಧರಿಸಿದರು. ನಸ್ರುದ್ದೀನ್ ಊರಿನ ಜನರನ್ನೆಲ್ಲಾ ಸೇರಿಸಿ ಊರಿನ ಪಕ್ಕದಲ್ಲಿರುವ ಬೆಟ್ಟದ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿಯಿದೆ ಎಂದು ಹೇಳಿದ. ಆತನ ಮಾತನ್ನು ನಂಬಿದ ಜನರೆಲ್ಲಾ ಆ ನಿಧಿಯನ್ನು ಪಡೆಯಲು ಬೆಟ್ಟದೆಡೆಗೆ ಓಡತೊಡಗಿದರು. ನಸ್ರುದ್ದೀನ್ ಸಹ ಅವರ ಜೊತೆ ಓಡತೊಡಗಿದ. ಅದನ್ನು ನೋಡಿದ ಆತನ ಗೆಳೆಯ ‘ನೀನ್ಯಾಕೆ ಅವರ ಜೊತೆ ಓಡುತ್ತಿದ್ದೀಯೆ?’ ಎಂದು ಕೇಳಿದ್ದಕ್ಕೆ, ‘ಅಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇರುವುದು ನಿಜವೇ ಇದ್ದರೂ ಇರಬಹುದೇನೋ!’ ಎಂದು ಹೇಳಿ ಓಡುವುದನ್ನು ಮುಂದುವರಿಸಿದ.
***
ಕುದುರೆ ಹಾಡಬಹುದೇನೋ!
ಒಂದು ದಿನ ನಸ್ರುದ್ದೀನ್ ತನ್ನ ರಾಜ್ಯದ ರಾಜಧಾನಿಗೆ ಹೋಗಿದ್ದ. ಅಲ್ಲಿ ಯಾರೊಂದಿಗೋ ಮಾತನಾಡುತ್ತಾ ಸುಲ್ತಾನನ ಬಗ್ಗೆ ಏನೋ ತಮಾಷೆಯ ಮಾತನಾಡಿದ. ಗೂಢಚಾರರಿಂದ ಸುಲ್ತಾನನಿಗೆ ಸುದ್ದಿ ತಲುಪಿ ಸೈನಿಕರು ನಸ್ರುದ್ದೀನ್‌ನನ್ನು ಬಂಧಿಸಿ ಸುಲ್ತಾನನ ಮುಂದೆ ತಂದು ನಿಲ್ಲಿಸಿದರು. ಸುಲ್ತಾನನಿಗೆ ತನ್ನ ಬಗ್ಗೆ ತಮಾಷೆಯ ಮಾತನಾಡಿದ್ದುದರಿಂದ ಮುಲ್ಲಾನ ಬಗ್ಗೆ ವಿಪರೀತ ಸಿಟ್ಟು ಬಂದಿತ್ತು. ನಸ್ರುದ್ದೀನ್ ಕ್ಷಮಾಪಣೆ ಕೇಳಿದರೂ ಅವನ ಸಿಟ್ಟು ಕಡಿಮೆಯಾಗಲಿಲ್ಲ. ಸಿಟ್ಟಿನಿಂದ ಮರುದಿನ ಬೆಳಿಗ್ಗೆ ನಸ್ರುದ್ದೀನ್‌ನ ತಲೆ ತೆಗೆಯುವಂತೆ ಆದೇಶ ನೀಡಿದ. ಮರುದಿನ ಸುಲ್ತಾನನ ಮುಂದೆ ನಸ್ರುದ್ದೀನ್ ಪುನಃ ಕ್ಷಮಾಪಣೆ ಕೋರಿ, ‘ಸುಲ್ತಾನ್ ನೀನು ನೂರು ಕಾಲ ಬಾಳು! ನಿಮಗೆ ಗೊತ್ತಿದೆ ನಾನೊಬ್ಬ ಮಹಾನ್ ಬೋಧಕ. ನಿಮ್ಮ ಸಾಮ್ರಾಜ್ಯದಲ್ಲೇ ನನ್ನನ್ನು ಸರಿಗಟ್ಟುವವರು ಯಾರೂ ಇಲ್ಲ. ನನ್ನ ಮರಣದಂಡನೆಯನ್ನು ಒಂದು ವರ್ಷ ಮುಂದೂಡಿ. ಆ ಒಂದು ವರ್ಷದೊಳಗೆ ನಾನು ನಿಮ್ಮ ಕುದುರೆಗೆ ಹಾಡಲು ಕಲಿಸುತ್ತೇನೆ’ ಎಂದ.
ಸುಲ್ತಾನನಿಗೆ ಮುಲ್ಲಾನ ಮಾತಿನಿಂದ ಆಶ್ಚರ್ಯವಾಯಿತು. ಒಂದು ದಿನ ಕಳೆದಿದ್ದುದರಿಂದ ಆತನ ಸಿಟ್ಟೂ ಸಹ ಕಡಿಮೆಯಾಗಿತ್ತು. ನಸ್ರುದ್ದೀನನ ದಾರ್ಷ್ಯ ರಂಜನೀಯವೂ ಎನ್ನಿಸಿತು. ಪರೀಕ್ಷಿಸಿಬಿಡೋಣವೆಂದು, ‘ಆಯಿತು. ನಿನಗೆ ಒಂದು ವರ್ಷ ಸಮಯ ಕೊಡುತ್ತೇನೆ. ವರ್ಷದ ಕೊನೆಯಲ್ಲಿ ನನ್ನ ಕುದುರೆಗೆ ನೀನು ಹಾಡಲು ಕಲಿಸಲಿಲ್ಲವೆಂದಲ್ಲಿ, ನೀನು ಒಂದು ವರ್ಷದ ಹಿಂದೆಯೇ ಸತ್ತುಹೋಗಿದ್ದಿದ್ದರೆ ಚೆನ್ನಾಗಿತ್ತು ಎನ್ನಿಸುವಂತೆ ಮಾಡಿಬಿಡುತ್ತೇನೆ. ಎಚ್ಚರವಿರಲಿ!’ ಎಂದ ಸುಲ್ತಾನ.
ಆ ದಿನ ನಸ್ರುದ್ದೀನ್‌ನನ್ನು ಆತನ ಗೆಳೆಯರು ಬಂಧಿಖಾನೆಯಲ್ಲಿ ಭೇಟಿಯಾದರು. ನಸ್ರುದ್ದೀನ್ ಅತ್ಯಂತ ಸಂತೋಷದಿಂದಿದ್ದ. ಅವನನ್ನು ಕಂಡ ಆತನ ಗೆಳೆಯರು, ‘ಅದ್ಹೇಗೆ ಅಷ್ಟೊಂದು ಸಂತೋಷವಾಗಿದ್ದೀಯೆ? ಸುಲ್ತಾನನ ಕುದುರೆಗೆ ನೀನು ನಿಜವಾಗಲೂ ಹಾಡು ಕಲಿಸಬಹುದೆಂಬ ನಂಬಿಕೆ ನಿನಗಿದೆಯೆ?’ ಎಂದು ಕೇಳಿದರು. ‘ಖಂಡಿತವಾಗಿಯೂ ಇಲ್ಲ. ಆದರೆ ಈಗ ಬದುಕಲು ನನ್ನ ಬಳಿ ಒಂದು ವರ್ಷವಿದೆ. ನಿನ್ನೆ ಅದೂ ಇರಲಿಲ್ಲ. ಈ ಒಂದು ವರ್ಷದ ಸಮಯದಲ್ಲಿ ಏನು ಬೇಕಾದರೂ ನಡೆಯಬಹುದು. ಸುಲ್ತಾನನಿಗೆ ಸಿಟ್ಟು ಸಂಪೂರ್ಣ ಇಳಿದುಹೋಗಿ ನನಗೆ ಕ್ಷಮಾಪಣೆ ನೀಡಿ ನನ್ನನ್ನು ಬಿಡುಗಡೆ ಮಾಡಬಹುದು ಅಥವಾ ಆತ ಯದ್ಧದಲ್ಲೋ ಅಥವಾ ಕಾಯಿಲೆಯಿಂದಲೋ ಸತ್ತುಹೋಗಬಹುದು. ಆ ನಂತರ ಬರುವ ಸುಲ್ತಾನರು ಸಂಪ್ರದಾಯದಂತೆ ಖೈದಿಗಳಿಗೆ ಕ್ಷಮಾದಾನ ಮಾಡಬಹುದು ಅಥವಾ ಸುಲ್ತಾನನ ವಿರುದ್ಧ ಇತರರು ದಂಗೆದ್ದು ಹೊಸಬರು ಸುಲ್ತಾನರಾಗಬಹುದು. ಅವರು ನನ್ನನ್ನು ಬಿಡುಗಡೆ ಮಾಡಬಹುದು ಅಥವಾ ಒಂದು ವರ್ಷದೊಳಗೆ ಸುಲ್ತಾನನ ಕುದುರೆಯೇ ಸತ್ತುಹೋಗಬಹುದು. ಆಗ ಸುಲ್ತಾನ ವಿಧಿಯಿಲ್ಲದೆ ನನ್ನನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದೇನೂ ಆಗುವುದಿಲ್ಲ ಎಂದಿಟ್ಟುಕೊಳ್ಳೋಣ, ಯಾರಿಗೆ ಗೊತ್ತು, ಕುದುರೆ ಹಾಡಲು ಕಲಿತೂಬಿಡಬಹುದು!’ ಎಂದ ನಸ್ರುದ್ದೀನ್.