ಶನಿವಾರ, ಡಿಸೆಂಬರ್ 04, 2010

ಡಾಲ್ಫಿನ್: ನೀರೊಳಗಿನ ಬೆರಗು

2ನೇ ಡಿಸೆಂಬರ್ 2010ರ `ಸುಧಾ'ದಲ್ಲಿ ನನ್ನ ಲೇಖನ ಡಾಲ್ಫಿನ್: ನೀರೊಳಗಿನ ಬೆರಗು ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ:


ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.
-ಚಾರ್ಲ್ಸ್ ಡಾರ್ವಿನ್

1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ನೀರಿಗೆ ಬಿದ್ದುಬಿಟ್ಟ. ಸಮುದ್ರದ ಅಲೆಗಳು ಜೋರಾಗಿ ಬೀಸುತ್ತಿದ್ದುದರಿಂದ ಆತನ ಸಹನಾವಿಕರಿಗೆ ಆತನನ್ನು ಹುಡುಕಲಾಗಲಿಲ್ಲ. ಆನಂತರ ಹಲವಾರು ದೋಣಿಗಳಲ್ಲಿ ಆತನನ್ನು ಹುಡುಕಲು ಪ್ರಾರಂಭಿಸಿದರು. ನೀರಿನಲ್ಲಿ ಬಿದ್ದು ಈಜುತ್ತಿದ್ದ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಕಾಣಿಸಿಕೊಂಡವು. ಅದೇ ಸಮಯದಲ್ಲಿ ಎರಡು ಡಾಲ್ಫಿನ್‌ಗಳು ಹುಡುಕುತ್ತಿದ್ದ ದೋಣಿಯ ಬಳಿ ಹೋಗಿ ದೋಣಿಯಿಂದ ದೂರಕ್ಕೆ ಹೋಗುವಂತೆ ಈಜಿದವು ಹಾಗೂ ಅದೇ ರೀತಿ ಮೂರುನಾಲ್ಕು ಸಾರಿ ಮಾಡಿದವು. ಅದರಿಂದಾಗಿ ದೋಣಿಯಲ್ಲಿದ್ದವರಿಗೆ ಆ ಎರಡು ಡಾಲ್ಫಿನ್‌ಗಳು ತಮ್ಮನ್ನು ಹಿಂಬಾಲಿಸುವಂತೆ ಹೇಳುತ್ತಿರುವಂತೆ ಅನ್ನಿಸಿತು. ಅವನ್ನು ಹಿಂಬಾಲಿಸಿದಾಗ ಅವು ಅವರ ಸಹನಾವಿಕ ಇದ್ದಲ್ಲಿಗೆ ಕರೆದುಕೊಂಡುಹೋದವು ಹಾಗೂ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಆತನಿಗೆ ಯಾವುದೇ ಶಾರ್ಕ್ ದಾಳಿಮಾಡದಂತೆ ರಕ್ಷಣೆ ನೀಡುತ್ತಿದ್ದವು.
ಪ್ರಾಚೀನ ನಾಗರಿಕತೆಗಳ ಸಮಯಗಳಿಂದಲೂ ಡಾಲ್ಫಿನ್‌ಗಳು ಮನುಷ್ಯನನ್ನು ಬೆರಗುಗೊಳಿಸುತ್ತಾ ಬಂದಿವೆ. ಸಮುದ್ರದಲ್ಲಿ ಹಡಗಿನ ಅಪಘಾತಗಳಲ್ಲಿ ಮುಳುಗುವ ಜನರನ್ನು ಅವು ಸುರಕ್ಷಿತವಾಗಿ ದಡ ತಲುಪಿಸಿರುವ ಉದಾಹರಣೆಗಳಿವೆ. ಮೆಡಿಟರೇನಿಯನ್‌ನ ಪುರಾತನ ನಬಾಟೀನ್ ಹಾಗೂ ಮಿನೋ ನಾಗರಿಕತೆಯ ಅವಶೇಷಗಳಲ್ಲಿ ಡಾಲ್ಫಿನ್‌ನ ಚಿತ್ರಗಳು ಕಂಡುಬಂದಿವೆ. 2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯಗಳಲ್ಲಿ ಡಾಲ್ಫಿನ್‌ನ ಮೇಲೆ ಕೂತು ಸವಾರಿ ಮಾಡುತ್ತಿರುವ ಒಬ್ಬ ಬಾಲಕನ ಚಿತ್ರವಿದೆ.
2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯ

ಡಾಲ್ಫಿನ್‌ಗಳಿಗೆ ಮಾನವನನ್ನು ಕಂಡರೆ ಇಷ್ಟವೇಕೆಂದು ಅರ್ಥವಾಗಿಲ್ಲ. ಮನುಷ್ಯ ಎಂದು ನೀರಿನೊಳಕ್ಕೆ ಕಾಲಿರಿಸಿದನೋ ಅಂದಿನಿಂದ ಅವು ಅವನ ಗೆಳೆಯರಾಗಲು ಬಯಸಿ ಅವನ ಬಳಿಗೆ ಬಂದಿವೆ, ಅವನಿಗೆ ಸಹಾಯ ಮಾಡಿವೆ. ನೀರಿನೊಳಗೆ ಅಪಾಯದಲ್ಲಿ ಸಿಲುಕಿಕೊಂಡ ಮನುಷ್ಯರನ್ನು ಡಾಲ್ಫಿನ್‌ಗಳು ರಕ್ಷಿಸುವ ವಿಧಾನ ಅವು ತಮ್ಮ ಮರಿಗಳನ್ನು ರಕ್ಷಿಸುವ ವಿಧಾನದಂತೆಯೇ ಇರುತ್ತದೆ. ಇತರ ಪ್ರಾಣಿಗಳಂತೆ ಡಾಲ್ಫಿನ್‌ಗಳು ಮನುಷ್ಯರ ಬಳಿ ಆಹಾರ ಅರಸಿ ಬರುವುದಿಲ್ಲ. ಅವುಗಳಲ್ಲಿ ಮನುಷ್ಯರಲ್ಲಿ ಬೆರೆಯಬೇಕೆಂಬ ತವಕ, ಕುತೂಹಲ ಹಾಗೂ ಮನೋರಂಜನಾ ಮನೋಭಾವಗಳಿವೆ. ಇವು ಸಾಕಿರುವ ಡಾಲ್ಫಿನ್‌ಗಳಲ್ಲಿ ಮಾತ್ರವಲ್ಲ ಸಾಗರದಲ್ಲಿ ಎಂದಿಗೂ ಮನುಷ್ಯನೊಟ್ಟಿಗೆ ಬೆರೆಯದ ಡಾಲ್ಫಿನ್‌ಗಳಲ್ಲೂ ಕಂಡುಬರುತ್ತದೆ. ಸಾಗರದ ಮಧ್ಯದಲ್ಲಿ ಮನುಷ್ಯನ ಸಂಗವನ್ನು ಅರಸಿಬರುವ ಒಂದೇ ಒಂದು `ಕಾಡುಪ್ರಾಣಿ'ಯೆಂದರೆ ಡಾಲ್ಫಿನ್ ಮಾತ್ರ. ಅದರ ಈ ಪ್ರಜ್ಞಾಪೂರ್ವಕ ನಡವಳಿಕೆಗೆ ನಮ್ಮಲ್ಲಿ ಯಾವುದೇ ವಿವರಣೆಯಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಡಾಲ್ಫಿನ್‌ಗಳು ಮನುಷ್ಯರಷ್ಟೇ ಅಥವಾ ಅವನಿಗಿಂತ ಹೆಚ್ಚೇ ಬುದ್ಧಿವಂತ ಪ್ರಾಣಿಗಳು. ಆದರೆ ಡಾಲ್ಫಿನ್ ಮತ್ತು ತಿಮಿಂಗಲಗಳಲ್ಲಿ ಕೈಗಳಾಗಲಿ ಅಥವಾ ಕೈ ತರಹದ ಮತ್ತಾವುದೇ ಅಂಗಗಳಿಲ್ಲದ ಕಾರಣ ಅವು ತಮ್ಮ ಬೌದ್ಧಿಕತೆಯನ್ನು ತಾಂತ್ರಿಕ ರೂಪಕ್ಕೆ ತರಲಾರದಾದವು ಹಾಗೂ ಅದರಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮ ಅನುಕೂಲಕ್ಕೆನ್ನುವಂತೆ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಅವುಗಳ ಮಾನಸಿಕ ವಿಕಾಸ ಆಂತರಿಕವಾಗಿ, ಮನುಷ್ಯನಿಗಿಂತಲೂ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಾನವನೂ ಸಹ ತಮ್ಮಷ್ಟೇ ಬುದ್ಧಿವಂತನಾಗಿರುವುದರಿಂದ ಬಹುಶಃ ಡಾಲ್ಫಿನ್‌ಗಳು ಮನುಷ್ಯನಲ್ಲಿ `ಬೌದ್ಧಿಕತೆಯ ಮಿತೃತ್ವ'ವನ್ನು ಅರಸುತ್ತಿರಬಹುದು. ಅವುಗಳಲ್ಲಿರುವ `ಎಕೋಲೊಕೇಶನ್'ನಂತಹ ಗ್ರಹಿಕೆಯ ಸಾಮರ್ಥ್ಯವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಹಾಗಾಗಿ ಅವುಗಳ ಬೌದ್ಧಿಕತೆ, ಗ್ರಹಿಕೆಯ ಸಾಮರ್ಥ್ಯ, `ಪ್ರಜ್ಞೆ' ನಮಗಿಂತಲೂ ಉತ್ತಮ ಹಾಗೂ ವಿಭಿನ್ನವಾದುದು ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಉನ್ನತ ಬೌದ್ಧಿಕತೆಯ ಮತ್ತೊಂದು ಕುರುಹೆಂದರೆ ಅವು ಮನುಷ್ಯನ ಮಾತುಗಳನ್ನು ಸುಲಭವಾಗಿ ಕಲಿಯಬಲ್ಲವು ಮತ್ತು ಹಾಗೆಯೇ ಉಚ್ಚರಿಸಬಲ್ಲವು. ಆದರೆ ಮಾನವನಿಗೆ ಅವುಗಳ `ಮಾತಿನ' ಎರಡಕ್ಷರವನ್ನೂ ಕಲಿಯಲಾಗಿಲ್ಲ. ಡಾಲ್ಫಿನ್‌ಗಳು ತಮ್ಮ ಶ್ವಾಸರಂಧ್ರಗಳಿಂದ (Spiracles) ಶಬ್ದ ಹೊರಡಿಸುತ್ತವೆ. ಆ ಕೀರಲು ಶಬ್ದಗಳಿಂದಲೇ ಮನುಷ್ಯನೊಟ್ಟಿಗೆ ಹಾಗೂ ಪರಸ್ಪರ ಮಾತನಾಡಿಕೊಳ್ಳಬಲ್ಲವು. ಅವುಗಳಿಗೆ ತಮ್ಮದೇ ಆದ ಶಬ್ದ ಭಂಡಾರವಿದೆ. ತಮ್ಮದೇ ಭಾಷೆಯಲ್ಲಿ ಹಾಡಲೂ ಬಲ್ಲವು. ಅದೇ ಹಾಡನ್ನು `ಅಕ್ಷರ' ತಪ್ಪದೆ ಪುನಃ ಪುನಃ ಹಾಡಬಲ್ಲವು.


ಡಾಲ್ಫಿನ್ ತಿಮಿಂಗಲದ ಜಾತಿಗೆ ಸೇರಿದ ಸಮುದ್ರದಲ್ಲಿ ವಾಸಿಸುವ ಸಸ್ತನಿಗಳು. ಮನುಷ್ಯನೂ ಸಹ ಸಸ್ತನಿಯೇ. ಅಂದರೆ ಮರಿಗಳಿಗೆ ಜನ್ಮನೀಡುವಂತಹ, ಮರಿಗಳಿಗೆ ಹಾಲೂಡಿಸುವಂತಹ ಹಾಗೂ ಬಿಸಿರಕ್ತದ ಪ್ರಾಣಿ. ಅವೂ ಸಹ ನಮ್ಮಂತೆಯೇ ಗಾಳಿ ಉಸಿರಾಡಿ ಬದುಕುತ್ತವೆ. ಅವು ನೀರಿನೊಳಗಿದ್ದರೂ ಅವು ಉಸಿರಾಡಲು ನೀರಿನ ಮೇಲ್ಮೈಗೆ ಬರಲೇಬೇಕು. ಈಗಿನ ತಿಮಿಂಗಲ ಮತ್ತು ಡಾಲ್ಫಿನ್‌ಗಳೆರಡೂ ಸಿಟೇಸಿ ಗುಂಪಿಗೆ ಸೇರಿದ ಪ್ರಾಣಿಗಳು. ಅವುಗಳ ಹಾಗೂ ಮಾನವನ ಅಲ್ಲದೆ ಎಲ್ಲಾ ಸಸ್ತನಿಗಳ ಪೂರ್ವಜರು ಲಕ್ಷಾಂತರ ವರ್ಷಗಳ ಹಿಂದೆ ಒಬ್ಬರೇ ಆಗಿದ್ದರು. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಡಾಲ್ಫಿನ್‌ನ ನೆಲವಾಸಿ ಪೂರ್ವಜ ಪ್ರಾಣಿ ಆಹಾರವನ್ನು ಅರಸಿ ನೀರಿಗೆ ಇಳಿದಿರಬಹುದು. ಪ್ರಾಚೀನ ಸಿಟೇಸಿಯನ್‌ಗಳು ಹಲವಾರು ಹಂತಗಳನ್ನು ಹಾದು ಈಗಿನ ಡಾಲ್ಫಿನ್ ಮತ್ತು ತಿಮಿಂಗಲಗಳಾಗಿವೆ. ಸುಮಾರು 10ರಿಂದ 15 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಡಾಲ್ಫಿನ್‌ಗಳು ರೂಪುಗೊಂಡವು. ಮಾನವನ ಪೂರ್ವಜರಾದ ನರವಾನರಗಳು ಸುಮಾರು 5 ಲಕ್ಷ ವರ್ಷಗಳ ಹಿಂದೆಯಷ್ಟೇ ವಿಕಾಸಗೊಂಡಿದ್ದಾರೆ ಹಾಗೂ ಆಧುನಿಕ ಮಾನವರಾದ ನಾವು (ಹೋಮೋ ಸೇಪಿಯೆನ್ಸ್) ಕೇವಲ ಒಂದು ಲಕ್ಷ ವರ್ಷಗಳಿಂದಷ್ಟೇ ಇಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಈ ಭೂಮಿಯ ಮೇಲೆ ಮಾನವ ಹೆಜ್ಜೆಯಿರಿಸುವುದಕ್ಕಿಂತ ಬಹಳ ಹಿಂದಿನಿಂದಲೇ ಡಾಲ್ಫಿನ್‌ಗಳು ಈ ಭೂಮಿಯ ಮೇಲೆ ಜೀವಿಸುತ್ತಿವೆ. ವಿಜ್ಞಾನಿಗಳು ಇಂದು ಡಾಲ್ಫಿನ್‌ನ 32 ಪ್ರಭೇದಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಹಾಗೂ ಸಂಶೋಧನೆ, ಅಧ್ಯಯನ, ಮನರಂಜನೆಗಾಗಿ ಅತಿ ಹೆಚ್ಚು ಸಾಕಲ್ಪಟ್ಟಿರುವುದು ಬಾಟ್ಲ್‌ನೋಸ್ ಡಾಲ್ಫಿನ್. ಡಾಲ್ಫಿನ್‌ಗಳಲ್ಲಿ ಅತಿ ದೊಡ್ಡದು ಕಿಲ್ಲರ್ ವೇಲ್ ಅಥವಾ ಓರ್ಕಾ ಡಾಲ್ಫಿನ್. ಅದು 31 ಅಡಿ ಉದ್ದದವರೆಗೂ ಬೆಳೆಯಬಲ್ಲದು ಹಾಗಾಗಿ ಅದನ್ನು ತಿಮಿಂಗಲ ಎಂದೂ ಕರೆಯುತ್ತಾರೆ. ಡಾಲ್ಫಿನ್‌ಗಳಲ್ಲಿ ನಾಲ್ಕು ಸಿಹಿನೀರ ಡಾಲ್ಫಿನ್‌ಗಳಿದ್ದು ಒಂದು ಪ್ರಭೇಧ ಭಾರತ, ನೇಪಾಳ ಮತ್ತು ಬಾಂಗ್ಲಾದ ಗಂಗಾ ನದಿಯಲ್ಲಿ ಮಾತ್ರ ಕಂಡುಬರುತ್ತದೆ. ಭಾರತದಲ್ಲಿನ ಈ ಗಂಗಾ ನದಿಯ ಡಾಲ್ಫಿನ್ ಅನ್ನು 2009ರಲ್ಲಿ ಭಾರತದ ರಾಷ್ಟ್ರೀಯ ಜಲಚರವೆಂದು ಘೋಷಿಸಲ್ಪಟ್ಟಿದೆ. ದುರಂತವೆಂದರೆ ಈ ಡಾಲ್ಫಿನ್ ವಿನಾಶದ ಅಂಚಿನಲ್ಲಿದ್ದು ಇಂದು ಭಾರತದಲ್ಲಿನ ಅವುಗಳ ಒಟ್ಟು ಸಂಖ್ಯೆ 1500ಕ್ಕೂ ಕಡಿಮೆ ಇದೆ.


ಡಾಲ್ಫಿನ್‌ಗಳು ತಮ್ಮ ಜೀವನ ಸಂಗಾತಿಗಳೊಂದಿಗೆ ನಿಷ್ಠೆಯಿಂದ ಭಾವನಾತ್ಮಕ ಸಂಬಂಧ ಹೊಂದಿರಬಲ್ಲವು. ಒಮ್ಮೆ ಒಂದು ಗಂಡು ಡಾಲ್ಫಿನ್ ದೋಣಿಯೊಂದರ ಬಳಿ ಸಹಾಯಕ್ಕಾಗಿ ಕಿರುಚುತ್ತಾ ಅದನ್ನು ಸುತ್ತುಹಾಕತೊಡಗಿತು. ಆನಂತರ ಗಾಯಗೊಂಡಿದ್ದ ತನ್ನ ಸಂಗಾತಿಯನ್ನೂ, ಅದರ ತಲೆ ನೀರಿನಿಂದ ಉಸಿರಾಡಲು ಹೊರಹಾಕಲು ಪ್ರಯತ್ನಿಸುತ್ತಾ ಕರೆತಂದಿತು. ದೋಣಿಯಲ್ಲಿನ ಜನರನ್ನು ತನ್ನ ಸಂಗಾತಿಯನ್ನು ಬದುಕಿಸಲು ಅಂಗಲಾಚುವಂತೆ ಚೀರುತ್ತಿತ್ತು. ಆದರೆ ತೀರಾ ತಡವಾಗಿದ್ದುದರಿಂದ ಆ ಡಾಲ್ಫಿನ್‌ನ ಸಂಗಾತಿಯನ್ನು ಬದುಕಿಸಲಾಗಿರಲಿಲ್ಲ. ಆ ರೀತಿ ಡಾಲ್ಫಿನ್‌ಗಳು ಮನುಷ್ಯನ ಸಹಾಯವನ್ನು ಅರಸಿ ಬಂದಿರುವ ಹಲವಾರು ಉದಾಹರಣೆಗಳಿವೆ.
ಗ್ರೋವರ್ ಎಂಬಾತ ಫ್ಲಾರಿಡಾದ ಪಾಮ್ ಬೀಚ್‌ನಲ್ಲಿ ಸ್ಕೂಬಾಗೇರ್ ಧರಿಸಿ ಈಜುತ್ತಿದ್ದಾಗ ಎರಡು ವಯಸ್ಕ ಬಾಟಲ್‌ನೋಸ್ ಡಾಲ್ಫಿನ್‌ಗಳು ಒಂದು ಮರಿ ಡಾಲ್ಫಿನ್‌ನನ್ನು ಆತನ ಬಳಿ ಕರೆತಂದವು. ಬಂದವು. ಆ ಮರಿ ಡಾಲ್ಫಿನ್‌ನ ಬಾಲದ ಹತ್ತಿರ ಒಂದು ದೊಡ್ಡದಾದ ಮೀನುಗಾರರು ಬಳಸುವ ಕೊಂಡಿಯೊಂದು ಸಿಕ್ಕಿಕೊಂಡಿತ್ತು. `ಅದು ನನ್ನ ಕಲ್ಪನೆಯೋ ಅಥವಾ ತರ್ಕವೋ ಗೊತ್ತಿಲ್ಲ, ಆದರೆ ಅವು ನನ್ನ ಸಹಾಯ ಅರಸಿ ಬಂದಿವೆ ಎಂದು ನನಗನ್ನಿಸಿತು. ಆ ಕೊಂಡಿ ಮರಿಯ ದೇಹದ ತೀರಾ ಒಳಕ್ಕೆ ಹೋಗಿದ್ದುದರಿಂದ ನಾನು ಆ ಮರಿಯನ್ನು ತಳಕ್ಕೆ ಒತ್ತಿ ಹಿಡಿದು ನನ್ನ ಡೈವಿಂಗ್ ಕತ್ತಿಯಿಂದ ನೈಲಾನ್ ತಂತಿಯನ್ನು ಕತ್ತರಿಸಿ ಕೊಂಡಿಯನ್ನು ಹೊರತೆಗೆದೆ. ನಾನು ಆ ಕೆಲಸ ಮಾಡುತ್ತಿರುವಾಗ ಆ ಎರಡೂ ಡಾಲ್ಫಿನ್‌ಗಳು ನನ್ನ ಕೆಲಸವನ್ನೇ ಗಮನಿಸುತ್ತಿದ್ದವು. ಕೊಂಡಿಯನ್ನು ತೆಗೆದನಂತರ ಅವುಗಳಲ್ಲಿ ದೊಡ್ಡದಾಗಿದ್ದ ಡಾಲ್ಫಿನ್ ನನ್ನೆದುರಿಗೆ ನನ್ನ ಕಣ್ಣಿನ ಸಮಕ್ಕೆ ಬಂದು ನನ್ನ ಮುಖವಾಡದ ಹಿಂದಿದ್ದ ಕಣ್ಣುಗಳನ್ನೇ ದಿಟ್ಟಿಸಿ ನೋಡಿತು. ಒಂದರೆಕ್ಷಣ ನಾವಿಬ್ಬರೂ ನಮ್ಮ ಪರಸ್ಪರ ಕಣ್ಣುಗಳ ಆಳವನ್ನು ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ಆನಂತರ ಆ ಡಾಲ್ಫಿನ್ ತನ್ನ ಮೂತಿಯಿಂದ ನನ್ನನ್ನು ನಿಧಾನವಾಗಿ ತಳ್ಳಿ ಅಲ್ಲಿಂದ ಹೊರಟುಹೋದವು' ಎಂದು ಸ್ವತಃ ಗ್ರೋವರ್ ದಾಖಲಿಸಿದ್ದಾನೆ.
ಡಾಲ್ಫಿನ್‌ಗಳದು ಒಂದು ಸುವ್ಯವಸ್ಥಿತ `ಸಮಾಜ'. ಡಾಲ್ಫಿನ್‌ಗಳು ತಾಯಿಯನ್ನು ಕಳೆದುಕೊಂಡ ಇತರ ಡಾಲ್ಫಿನ್ ಮರಿಗಳನ್ನು `ದತ್ತು' ಪಡೆದು ತಮ್ಮವೆಂಬಂತೆಯೇ ಸಾಕುತ್ತವೆ (Allomaternal Care). ಅವು ಪರಸ್ಪರ ಎಷ್ಟು ಪ್ರೀತಿಸುತ್ತವೆಂದರೆ, ಯಾವುದಾದರೂ ಒಂದು ಡಾಲ್ಫಿನ್ ಕಷ್ಟದಲ್ಲಿದ್ದಲ್ಲಿ ಅಥವಾ ಇರುಕಲಿನಲ್ಲಿ ಸಿಕ್ಕಿಕೊಂಡು ಹೊರಬರಲಾಗದಿದ್ದಲ್ಲಿ ಇತರ ಡಾಲ್ಫಿನ್‌ಗಳು ತಮ್ಮ ಜೀವ ಆಪತ್ತಿನಲ್ಲಿದ್ದರೂ ಕಡೆಗಣಿಸಿ ಅದರ ಸಹಾಯಕ್ಕೆ ನಿಲ್ಲುತ್ತವೆ ಹಾಗೂ ಅದನ್ನು ಬಿಟ್ಟು ಹೋಗುವುದಿಲ್ಲ. ಕಷ್ಟದಲ್ಲಿರುವ ಡಾಲ್ಫಿನ್‌ನ ಮೈ ನೇವರಿಸಿ ಸಂತೈಸುತ್ತವೆ. ಡಾಲ್ಫಿನ್‌ಗಳು ತಿಮಿಂಗಲಗಳನ್ನೂ ಸಂರಕ್ಷಿಸಿರುವ ಉದಾಹರಣೆಗಳಿವೆ. ಪರೋಪಕಾರ ಬುದ್ಧಿ ಮನುಷ್ಯನಲ್ಲಿ ಇದೆ ಎನ್ನುವುದಾದಲ್ಲೆ ಆ ರೀತಿಯ ಗುಣ ಇರುವಂಥ ಎರಡನೇ ಪ್ರಾಣಿಯೇ ಡಾಲ್ಫಿನ್ ಆಗಿದೆ.
ಡಾಲ್ಫಿನ್‌ಗಳು ಇತರ ಸಸ್ತನಿಗಳ ಹಾಗೆ ನಿರಿಚ್ಛಾ ಉಸಿರಾಟ ಹೊಂದಿಲ್ಲ, ಅಂದರೆ ಅವು ಉಸಿರನ್ನು ಕೆಲಕಾಲ ಬಿಗಿಹಿಡಿಯಬಲ್ಲವು ಹಾಗೂ ಆ ನಂತರ ಗಾಳಿಗಾಗಿ ನೀರಿನ ಮೇಲಕ್ಕೆ ಬರಲೇಬೇಕು. ತಾಯಿ ಡಾಲ್ಫಿನ್ ತನ್ನ ಮರಿ ಹುಟ್ಟಿದ ತಕ್ಷಣ ಅದು ಉಸಿರು ತೆಗೆದುಕೊಳ್ಳಲು ಸಾಧ್ಯವಾಗುವಂತೆ ನೀರಿನ ಮೇಲಕ್ಕೆ ತಳ್ಳಿಕೊಂಡುಹೋಗುತ್ತದೆ. ಅನಾರೋಗ್ಯದಿಂದ ನರಳುವ ಡಾಲ್ಫಿನ್‌ಗಳು ಗಾಳಿ ಉಸಿರಾಡಲು ಮೇಲಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಇತರ ಡಾಲ್ಫಿನ್‌ಗಳು ಅದನ್ನು ಮೇಲಕ್ಕೆ ತಳ್ಳಿ ಸಹಾಯಮಾಡುತ್ತವೆ. ಈ ರೀತಿ ನಿದ್ರಿಸುವಾಗ ಮುಳುಗಿ ಸಾಯದೇ ಇರಲು ಪ್ರಕೃತಿಯಲ್ಲಿ ಅವುಗಳ ನಿದ್ರೆಗೆ ಒಂದು ಸುವ್ಯವಸ್ಥಿತ ವ್ಯವಸ್ಥೆಯಿದೆ. ಅದರ ಮಿದುಳಿನ ಒಂದು ಭಾಗ ನಿದ್ರಿಸುವಾಗ ಮತ್ತೊಂದು ಭಾಗ ಎಚ್ಚರವಾಗಿರುತ್ತದೆ. ಆದರೂ ಕೆಲವೊಮ್ಮೆ ಗಾಢ ನಿದ್ರೆಗೆ ಹೋದಾಗ ತಕ್ಷಣ ಇತರ ಡಾಲ್ಫಿನ್‌ಗಳು ಅದನ್ನು ತಟ್ಟಿ ಎಬ್ಬಿಸುತ್ತವೆ. ಈ ನಡತೆ ಅವುಗಳಲ್ಲಿ ಅದೆಷ್ಟು ಗಾಢವಾಗಿದೆಯೆಂದರೆ ನೀರಿನಲ್ಲಿ ಮುಳುಗುವ ಮನುಷ್ಯರನ್ನು ಸಹ ಇದೇ ಕಾರಣದಿಂದಲೇ ಅವು ರಕ್ಷಿಸುತ್ತಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಡಾಲ್ಫಿನ್‌ಗಳ ಬಗೆಗೆ ಬಹಳಷ್ಟು ಸಂಶೋಧನೆ ನಡೆಸಿರುವ ಡಯಾನ ರೀಸ್ ಎಂಬ ವಿಜ್ಞಾನಿ ಅವುಗಳನ್ನು `ಮಾನವೇತರ ವ್ಯಕ್ತಿ'ಗಳೆಂದು ಪರಿಗಣಿಸಬೇಕೆಂದು ಹೇಳುತ್ತಾರೆ. ಅವುಗಳಿಗೆ ಸ್ವ-ಪ್ರಜ್ಞೆಯಿದೆ (ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಲ್ಲವು), ಭಾವನೆಗಳಿವೆ, ಅವುಗಳಿಗೆ ಅವುಗಳದೇ ಆದ ಸಾಮಾಜಿಕ ಜೀವನ ಮತ್ತು ಸಂಸ್ಕೃತಿಯಿದೆ. ಹಾಗಾಗಿ ನಾವು ಅವುಗಳನ್ನು ಬರೇ `ಪ್ರಾಣಿ'ಗಳೆಂದು ಪರಿಗಣಿಸದೆ ಅವುಗಳನ್ನು `ವ್ಯಕ್ತಿ'ಗಳೆಂದು ಪರಿಗಣಿಸಿ ಗೌರವಿಸಬೇಕೆನ್ನುತ್ತಾರೆ. ಅದಕ್ಕಾಗೇ ಅವರು ಅವುಗಳನ್ನು `ಏಲಿಯೆನ್ ಇಂಟೆಲಿಜೆನ್ಸ್' (ಅನ್ಯ ಬುದ್ಧಿವಂತ) ಜೀವಿಗಳು ಎಂದು ಕರೆಯುತ್ತಾರೆ. ನಮ್ಮಲ್ಲಿ ಬುದ್ಧಿವಂತಿಕೆ ಮತ್ತು ಭಾವನೆಗಳಿರುವುದರಿಂದ ನಾವು ನಮ್ಮಲ್ಲಿರುವ ಅಂಶಗಳನ್ನು `ಮಾನವೀಯ' ಅಂಶಗಳೆಂದು ಪರಿಗಣಿಸಿ ಈ ಭೂಮಿಯ ಮೇಲಿನ ಇತರ ಎಲ್ಲಾ ಜೀವಿಗಳನ್ನು `ಪ್ರಾಣಿ' ಹಾಗೂ ಸಸ್ಯಗಳೆಂದು ಪರಿಗಣಿಸಿದ್ದೇವೆ. ಆದರೆ ನಾವೂ ಸಹ ಈ ಭೂಮಿಯ ಮೇಲಿನ ಇತರ `ಪ್ರಾಣಿ' ವರ್ಗಕ್ಕೆ ಸೇರಿದವರೆ. ಆದರೆ ನಾವು ಈ ಭೂಮಿಯ ಮೇಲಿರುವ ಅತಿ ಬುದ್ಧಿವಂತ ಜೀವಿಗಳೆಂದು ನಮ್ಮಷ್ಟಕ್ಕೆ ನಾವೇ ಬೆನ್ನುತಟ್ಟಿಕೊಂಡು ಭ್ರಮೆಯ ಲೋಕದಲ್ಲಿದ್ದೇವೆ ಹಾಗೂ ನಮ್ಮನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿಕೊಂಡಿದ್ದೇವೆ. ಇದೇ ದೃಷ್ಟಿಯಲ್ಲಿಯೇ ನಾವು ಡಾಲ್ಫಿನ್‌ಗಳನ್ನು ಸಹ ಪ್ರತ್ಯೇಕಿಸಿ ನೋಡಬೇಕಾಗಿದೆ ಹಾಗೂ ಈ ಜಗತ್ತಿನ ಜೀವಲೋಕವನ್ನು ಅವಲೋಕಿಸುವಾಗ ನಾವು ಮಾನವಕೇಂದ್ರಿತ ಸಿದ್ಧಾಂತಗಳ ಚಿಪ್ಪಿನಿಂದ ಹೊರಬರಬೇಕಾಗಿದೆ. ಭೂಮಿ ಈ ವಿಶ್ವದ ಕೇಂದ್ರವಲ್ಲ. ಅದೇ ರೀತಿ ಮನುಷ್ಯ ಸಹ ಈ ಭೂಮಿಯ ಕೇಂದ್ರವಲ್ಲ. ಇದರ ಹಿನ್ನೆಲೆಯಲ್ಲಿ ನಾವು ಅವುಗಳನ್ನು ಹಿಡಿದು ನಮ್ಮ ಮನರಂಜನೆ ಮತ್ತು ಸ್ವಾರ್ಥಕ್ಕಾಗಿ ಬಳಸುವುದು ಅಪರಾಧವೆನ್ನುತ್ತಾರೆ.
ಆದರೆ `ಮಹಾನ್ ಬುದ್ಧಿವಂತ' ಮಾನವ ಅವುಗಳ ಬಗ್ಗೆ ಅಂತಹ ಒಲವನ್ನೇನೂ ಹೊಂದಿಲ್ಲ. ಮಾನವನ ಕ್ರಿಯೆಗಳಿಂದಾಗಿ ಇಂದು ಪ್ರತಿವರ್ಷ ಮೂರು ಲಕ್ಷಕ್ಕೂ ಹೆಚ್ಚು ಡಾಲ್ಫಿನ್‌ಗಳು, ತಿಮಿಂಗಲಗಳು ಮತ್ತು ಕಡಲಹಂದಿಗಳು (ಅದೇ ಬಳಗದ ಪಾರ್‌ಪಾಯ್ಸ್ ಎನ್ನುವ ಜಲಚರ ಸಸ್ತನಿ) ಬಲಿಯಾಗುತ್ತಿವೆ. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚು ಡಾಲ್ಫಿನ್‌ಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿರುವ ದೇಶಗಳು ಜಪಾನ್, ನಾರ್ವೆ ಮತ್ತು ಐಸ್‌ಲ್ಯಾಂಡ್. ಅಂತರರಾಷ್ಟ್ರೀಯ ವೇಲಿಂಗ್ ಕಮೀಶನ್ ೧೯೮೬ರಿಂದಲೇ ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಬೇಟೆಯಾಡಿ ಕೊಲ್ಲುವುದನ್ನು ನಿಷೇಧಿಸುತ್ತಿದ್ದರೂ ಈ ದೇಶಗಳು ಅದನ್ನು ಉಲ್ಲಂಘಿಸುತ್ತಿವೆ. ಆ ಸರ್ಕಾರಗಳೇ ಅಂತಹ ಕೃತ್ಯಗಳನ್ನು ಉತ್ತೇಜಿಸುತ್ತಿವೆ. ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಓಡಿಸಿಕೊಂಡು ಇಕ್ಕಟ್ಟಾದ ದಡಕ್ಕೆ ತಂದು ಅವುಗಳನ್ನು ಹಾರೆ, ಹಾರ್ಪೂನುಗಳಂಥ ಆಯುಧಗಳಿಂದ ಚುಚ್ಚಿ ಚುಚ್ಚಿ ಕೊಲ್ಲುವ ಭೀಕರ ದೃಶ್ಯಗಳನ್ನು ಹಲವಾರು ಜನ ಚಿತ್ರಿಸಿ ಈ ಕ್ರೌರ್ಯದೆಡೆಗೆ ಸಮಾಜದ ಗಮನವನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳು ವಿಶ್ವದಾದ್ಯಂತ ಈ ಕೃತ್ಯಗಳನ್ನು ವಿರೋಧಿಸುತ್ತಿವೆ ಹಾಗೂ ಡಾಲ್ಫಿನ್‌ಗಳಿಗೂ ಸಹ ಅವು ಸ್ವಪ್ರಜ್ಞೆಯುಳ್ಳ ಬುದ್ಧಿವಂತ ಜೀವಿಗಳಾಗಿರುವುದರಿಂದ ಹಾಗೂ ಅವು ತಮ್ಮದೇ ಸಮಾಜ, ಸಂಸ್ಕೃತಿಗಳನ್ನು ಹೊಂದಿರುವುದರಿಂದ ಅವುಗಳಿಗೂ ಸಹ ಮಾನವ ಹಕ್ಕುಗಳ ರೀತಿಯೇ ಹಕ್ಕುಗಳನ್ನು ನೀಡಿ ಗೌರವಿಸಬೇಕೆಂದು ಹಲವಾರು ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಚಿತ್ರ-ಲೇಖನ: ಡಾ.ಜೆ.ಬಾಲಕೃಷ್ಣ
j.balakrishna@gmail.com