ಐದು ಹೊಸ ಗ್ರಹಗಳ ಪತ್ತೆ-- ಗ್ರಹಚಾರ ಹೆಚ್ಚಾಯ್ತಲ್ಲಾ! ನನ್ನ ವ್ಯಂಗ್ಯ ಚಿತ್ರ. 30/12/12ರ `ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ
Sunday, December 30, 2012
Sunday, December 23, 2012
Thursday, December 20, 2012
Monday, December 17, 2012
ನನ್ನ ಹೊಸ ಪುಸ್ತಕಗಳು
ನನ್ನ ಹೊಸ ಪುಸ್ತಕಗಳು
aseemaakshara@gmail.com
ನೀನೆಂಬ ನಾನು (ಮರುಮುದ್ರಣ)
ಸೂಫಿಸಂ ಎನ್ನುವುದು ಪ್ರೇಮದ ಅನುಭಾವದ ಹಾದಿ. ಆ ಹಾದಿಯ ಪಯಣ ಬೇರೆ ಎಲ್ಲಿಗೂ ಅಲ್ಲ, ಬದಲಿಗೆ ತನ್ನದೇ ಆತ್ಮದೆಡೆಗೆ. ಆ ಹಾದಿಯಲ್ಲಿ ಹೊರಟವನು ತನ್ನ ಹೃದಯಲ್ಲೇ ಸತ್ಯ ಅಥವಾ ದೇವರನ್ನು ಕಂಡುಕೊಳ್ಳುತ್ತಾನೆ. ಆ ಸತ್ಯ ಅಥವಾ ದೇವರು ಬೇರೆ ಯಾರೂ ಅಲ್ಲ, ಅದು ‘ನೀನೇ ಎಂಬ ನಾನು.’ ‘ನಿನ್ನ ಹೊರಗಿನದ್ಯಾವುದನ್ನೂ ನೀನು ಅರಿಯಲಾರೆ, ಏಕೆಂದರೆ ಯಾವುದನ್ನಾದರೂ ಸಂಪರ್ಣ ಅರಿಯಬೇಕಾದಲ್ಲಿ, ಅರಿಯಬೇಕಾದ ವಸ್ತು ನೀನೇ ಆಗಿರಬೇಕು. ಹಾಗಾಗಿ ನಿನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ನಿನ್ನೊಳಗಿನ ಅಸೀಮ ವಾಸ್ತವದಲ್ಲೇ ಅರಸಬೇಕು’ ಎಂಬುದು ಸೂಫಿಸಂನ ಮೂಲಭೂತ ತತ್ವ. ಸೂಫಿಗಳ ಪ್ರಕಾರ ಸತ್ಯವನ್ನು ಕಂಡುಕೊಳ್ಳಲು ಎಷ್ಟು ಮನುಷ್ಯರಿದ್ದಾರೋ ಅಷ್ಟು ಹಾದಿಗಳಿವೆ.
ಗೆಳೆಯ ಶ್ರೀಯುತ ಜೆ. ಬಾಲಕೃಷ್ಣ ಅವರು ಕನ್ನಡ ಓದುಗರಿಗೆ ತಮ್ಮ ‘ನೀನೆಂಬ ನಾನು’ ಕೃತಿಯ ಮೂಲಕವಾಗಿ ಒಂದು ಮಹತ್ ಪರಂಪರೆಯನ್ನೇ ಪರಿಚಯಿಸುವ ಉತ್ತಮವಾದ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಚರಿತ್ರೆಗೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಸೂಫಿ ಪರಂಪರೆ ಹೊಸತಲ್ಲವಾದರೂ ಕನ್ನಡದ ಓದುಗರಿಗೆ ಇವತ್ತಿಗೂ ಇಂಥ ಅಮೂಲ್ಯ ಖನಿ ಅಲಭ್ಯವೇ ಆಗಿ ಉಳಿದುಬಿಟ್ಟಿತು. ಹೆಸರಿಸಬಹುದಾದ ಒಂದೆರಡು ಕನ್ನಡ ಕೃತಿಗಳನ್ನು ಬಿಟ್ಟರೆ ಸೂಫಿ ಪರಂಪರೆಗೆ ಸಂಬಂಧಿಸಿದ ಹೆಚ್ಚು ಕೃತಿಗಳು ಕನ್ನಡದಲ್ಲಿ ಬಂದೇ ಇಲ್ಲ. ಕಥಾ ಸಾಹಿತ್ಯವಂತೂ ಅಲ್ಲಿ ಇಲ್ಲಿ ಉಲ್ಲೇಖಿತ ವಾಗಿರುವ ಮತ್ತು ಬಿಡಿ ಬಿಡಿಯಾಗಿ ಪ್ರಕಟವಾಗಿರುವ ಕೆಲವನ್ನ ಬಿಟ್ಟರೆ ಇಡಿಯಾಗಿ ಕನ್ನಡದಲ್ಲಿ ಬಂದಿರಲಿಲ್ಲ. ಈ ಕೆಲಸವನ್ನ ಗೆಳೆಯ ಬಾಲಕೃಷ್ಣ ಅವರು ತುಂಬಾ ಶ್ರದ್ಧೆಯಿಂದ ಮತ್ತು ಪ್ರೀತಿಯಿಂದ ಮಾಡಿದ್ದಾರೆ. ಕತೆಗಳನ್ನ ಅನುವಾದಿಸುವುದರ ಜೊತೆಗೆ ಸೂಫಿ ಪರಂಪರೆ ಮತ್ತು ವಿಚಾರಗಳ ಬಗ್ಗೆ ಅತ್ಯಂತ ವಿವರವಾದ ಮತ್ತು ಆಳವಾದ ಅಧ್ಯಯನ ನಡೆಸಿ ಅದರ ಫಲಿತವಾಗಿ ಉತ್ತಮವಾದ ಹಾಗೂ ಉಪಯುಕ್ತವಾದ ದೀರ್ಘಲೇಖನವನ್ನು ಕತೆಗಳಿಗೆ ಪೂರ್ವ ಪೀಠಿಕೆಯಾಗಿ ನೀಡಿದ್ದಾರೆ. ಇವರ ಈ ಲೇಖನ ಓದುಗನಿಗೆ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ (ಮುನ್ನುಡಿಯಿಂದ).
ಪುಟ್ಟ ರಾಜಕುಮಾರ (ಮಕ್ಕಳ ನಾಟಕ)
ಅನುವಾದ ಮತ್ತು ನಾಟಕ ರೂಪಾಂತರ
ಆಂತ್ವಾನ್ ದ ಸೇಂತ್-ಎಕ್ಸೂಪರಿ (೨೯.೬.೧೯೦೦ - ೩೧.೭.೧೯೪೪) ಉತ್ತಮ ಬರಹಗಾರನಾಗಿರುವಂತೆ ಅತ್ಯುತ್ತಮ ಪೈಲಟ್ ಸಹ ಆಗಿದ್ದನು. ಫ್ರಾನ್ಸ್‌ನವನಾದ ಈತ ಸಾಹಸ ಮತ್ತು ಅಪಾಂiವನ್ನು ಕವಿದೃಷ್ಟಿಯಲ್ಲಿ ಕಂಡವನು. ಆದರೆ ಆತ ಪೈಲಟ್ ಆಗಬೇಕೆಂದುಕೊಂಡಿದ್ದವನಲ್ಲ. ಮೊದಲ ವಿಶ್ವಯುದ್ಧದ ಸಮಯದಲ್ಲಿ ಯುವಕನಾಗಿದ್ದ ಈತನನ್ನು ಮಿಲಿಟರಿಗೆ ಸೇರುವಂತೆ ಆದೇಶಿಸಿ ಅಲ್ಲಿ ವಾಯುಪಡೆಗೆ ಸೇವೆ ಸಲ್ಲಿಸುವಂತೆ ಹೇಳಲಾಯಿತು. ಅಲ್ಲಿ ವಿಮಾನ ಮತ್ತು ವಿಮಾನಚಾಲನೆಯಲ್ಲಿ ಮೂಡಿದ ಆಸಕ್ತಿ ಅದನ್ನೇ ಆತನ ಬದುಕಾಗುವಂತೆ ಮಾಡಿತು.
ಮರಳುಗಾಡಿನಲ್ಲಿನ ಈ ರೀತಿಯ ಮತ್ತೊಂದು ಅನುಭವವೇ ‘ಪುಟ್ಟ ರಾಜಕುಮಾರ’ ಬರೆಯಲು ಪ್ರೇರೇಪಿಸಿತು. ವಿಶಿಷ್ಟ ಕಥಾವಸ್ತು ಹೊಂದಿರುವ ಈ ‘ಪುಟ್ಟ ರಾಜಕುಮಾರ’ ಒಂದು ಪ್ರಖ್ಯಾತ ಪುಸ್ತಕ. ಫ್ರೆಂಚ್ ಭಾಷೆಯಲ್ಲಿ (‘ಲ ಪತಿ ಪ್ರಿನ್ಸ್’) ೧೯೪೩ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕ ಈಗಾಗಲೇ ವಿಶ್ವದ ೧೨೫ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈಗಲೂ ಪ್ರತಿ ವರ್ಷ ೧೦ ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿವೆ.
ಆದರೆ ಈ ಪುಸ್ತಕ ನಿಜವಾಗಿಯೂ ಮಕ್ಕಳ ಪುಸ್ತಕವೆ? ಅಥವಾ ದೊಡ್ಡವರಿಗಾಗಿ ಬರೆದ ಮಕ್ಕಳ ಕತೆಯೆ? ಸೇಂತ್ ಎಕ್ಸೂಪರಿಯೇ ಹೇಳಿದಂತೆ, ‘ಎಲ್ಲಾ ದೊಡ್ಡವರು ಮೊದಲು ಮಕ್ಕಳಾಗಿದ್ದವರೆ. ಆದರೆ, ಅದನ್ನು ನೆನೆಪಿನಲ್ಲಿಟ್ಟುಕೊಳ್ಳುವವರು ಕೆಲವರು ಮಾತ್ರ’. ಸುಖಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದುವು ಹಾಗೂ ನಿಸ್ವಾರ್ಥತೆಯೇ ಸಿರಿಸಂಪತ್ತು ಎಂಬ ಸಂದೇಶವನ್ನು ‘ಪುಟ್ಟ ರಾಜಕುಮಾರ’ ಸಾರುತ್ತಾನೆ.
ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್
ಅನುವಾದ
ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ
ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ವ್ಯಕ್ತಿ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ.
j.balakrishna@gmail.com
Sunday, December 16, 2012
ವಿಜ್ಞಾನಿಗಳು ಹೇಳುತ್ತಿದ್ದಾರೆ ಪ್ರಳಯ ಆಗೋಲ್ಲವಂತೆ--- ನನ್ನ ವ್ಯಂಗ್ಯ ಚಿತ್ರ
ವಿಜ್ಞಾನಿಗಳು ಹೇಳುತ್ತಿದ್ದಾರೆ ಪ್ರಳಯ ಆಗೋಲ್ಲವಂತೆ--- ನನ್ನ ವ್ಯಂಗ್ಯ ಚಿತ್ರ
ಈ ದಿನದ `ವಿಜಯವಾಣಿ'ಯ ಸಮೀಕರಣ ಪುಟದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ
Saturday, December 15, 2012
ಮುಲ್ಲಾ ನಸ್ರುದ್ದೀನ್ ಕತೆಗಳು- 12ನೇ ಕಂತು
`ಸಂವಾದ' ಮಾಸಪತ್ರಿಕೆ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 12ನೇ ಕಂತು.
ಚಿತ್ರ: ಮುರಳೀಧರ ರಾಠೋಡ್
ಅಂಗಿಯಲ್ಲಿ ನಾನಿರಲಿಲ್ಲ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಪತ್ನಿಯೊಂದಿಗೆ ಹಿತ್ತಲಲ್ಲಿ ಕೂತು ಹರಟೆ ಹೊಡೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ತಂತಿಯ ಮೇಲೆ ಒಗೆದು ಒಣಗಿಹಾಕಿದ್ದ ಮುಲ್ಲಾನ ಅಂಗಿ ಜೋರಾಗಿ ಗಾಳಿ ಬೀಸಿ ದೂರದಲ್ಲಿದ್ದ ಚರಂಡಿಗೆ ಬಿದ್ದು ಎಲ್ಲಾ ಕೆಸರಾಯಿತು. ತಕ್ಷಣ ಮುಲ್ಲಾ ದೇವರಿಗೆ ಧನ್ಯವಾದಗಳನ್ನು ತಿಳಿಸಿದ. ಆತನ ನಡತೆ ವಿಚಿತ್ರವೆನ್ನಿಸಿ ಆತನ ಪತ್ನಿ, ‘ಅದ್ಯಾಕೆ, ಅಂಗಿ ಚರಂಡಿಗೆ ಬಿದ್ದು ಕೆಸರಾದರೆ ದೇವರಿಗೆ ಧನ್ಯವಾದ ಹೇಳುತ್ತೀರಿ ಎಂದಳು.
‘ಅಂಗಿ ಮಾತ್ರ ಬಿದ್ದು ಕೆಸರಾಯಿತು. ಸದ್ಯ ಆ ಅಂಗಿಯಲ್ಲಿ ನಾನಿರಲಿಲ್ಲವಲ್ಲ ಎಂದ ಮುಲ್ಲಾ ನಸ್ರುದ್ದೀನ್.
ಬೆಲೆ
ಆ ರಾಜ್ಯದ ಹೊಸ ಸಾಮ್ರಾಟ ಒಂದು ದಿನ ಮುಲ್ಲಾ ನಸ್ರುದ್ದೀನ್‌ನನ್ನು ಕೇಳಿದ, ‘ನಾನೇನಾದರೂ ಗುಲಾಮನಾಗಿದ್ದಲ್ಲಿ ನನ್ನ ಬೆಲೆ ಎಷ್ಟಿರುತ್ತಿತ್ತು?
‘ಐದು ಸಾವಿರ ರೂಪಾಯಿ ಎಂದ ನಸ್ರುದ್ದೀನ್.
‘ಏನು? ಗುಡುಗಿದ ಸಾಮ್ರಾಟ. ‘ನನ್ನ ಮೈಮೇಲಿರುವ ಬಟ್ಟೆಗಳ ಬೆಲೆಯೇ ಐದು ಸಾವಿರ ರೂಪಾಯಿಗಳಾಗುತ್ತದೆ, ತಿಳಿದಿದೆಯೇನು?
‘ತಿಳಿದಿದೆ ಸ್ವಾಮಿ. ನಾನು ಅಷ್ಟನ್ನೇ ಲೆಕ್ಕಕ್ಕೆ ತೆಗೆದುಕೊಂಡಿರುವುದು ಎಂದ ನಸ್ರುದ್ದೀನ್.
ಕೊಟ್ಟ ಬೆಲೆ
ಮುಲ್ಲಾ ನಸ್ರುದ್ದೀನ್ ಕರ್ಜೂರ ತಿನ್ನುವಾಗ ಅದರೊಂದಿಗೆ ಬೀಜಗಳನ್ನು ತಿನ್ನುತ್ತಿದ್ದುದನ್ನು ಒಬ್ಬಾತ ಗಮನಿಸಿದ.
‘ನೀವು ಕರ್ಜೂರದ ಬೀಜಗಳನ್ನೂ ಏಕೆ ತಿನ್ನುತ್ತಿದ್ದೀರಿ? ಆತ ಕೇಳಿದ.
‘ಏಕೆಂದರೆ.... ಕರ್ಜೂರ ನನಗೆ ಮಾರಿದಾತ ಬೀಜಗಳನ್ನೂ ಸೇರಿಸಿ ತೂಕಹಾಕಿ ಕೊಟ್ಟಿದ್ದ... ಅದಕ್ಕೆ ಎಂದ ನಸ್ರುದ್ದೀನ್.
ಕಣ್ಣು ನೋವು
ಮುಲ್ಲಾ ನಸ್ರುದ್ದೀನನಿಗೆ ಒಮ್ಮೆ ಕಣ್ಣು ಬೇನೆ ಬಂದು ಉರಿಯಾಗತೊಡಗಿತು. ಆತ ಕಣ್ಣಿನ ವೈದ್ಯರ ಬಳಿಗೆ ಹೋದ. ಆತನನ್ನು ನೋಡಿದ ವೈದ್ಯರು,
‘ನಿನ್ನ ಕಣ್ಣುಗಳು ಕೆಂಪಗಾಗಿವೆ ಎಂದರು.
‘ಹೌದೆ? ಅವುಗಳಿಗೆ ನೋವೂ ಆಗುತ್ತಿದೆಯೆ? ಕೇಳಿದ ನಸ್ರುದ್ದೀನ್.
ಕುಸ್ತಿಯ ಕನಸು
ಮುಲ್ಲಾ ನಸ್ರುದ್ದೀನ್ ಸ್ಥಳೀಯ ವೈದ್ಯರ ಬಳಿ ಹೋಗಿ, ‘ಕಳೆದ ಒಂದು ತಿಂಗಳಿನಿಂದ ನನಗೆ ವಿಚಿತ್ರ ಕನಸ್ಸು ಬೀಳುತ್ತಿದೆ. ಪ್ರತಿ ರಾತ್ರಿ ನಾನು ಕನಸಿನಲ್ಲಿ ಕತ್ತೆಗಳೊಂದಿಗೆ ಕುಸ್ತಿ ಮಾಡುತ್ತಿರುತ್ತೇನೆ ಎಂದ.
ವೈದ್ಯರು ನಾಡಿ ಪರೀಕ್ಷಿಸಿ ಮೂಲಿಕೆಯ ಔಷಧ ಕೊಟ್ಟು, ‘ಇದನ್ನು ಮಲಗುವಾಗ ಸೇವಿಸು, ಆ ರೀತಿಯ ಕನಸುಗಳು ಬೀಳುವುದು ನಿಂತುಹೋಗುತ್ತದೆ ಎಂದರು.
‘ಇದನ್ನು ನಾಳೆಯಿಂದ ಸೇವಿಸಲು ಪ್ರಾರಂಭಿಸಲೆ? ಕೇಳಿದ ನಸ್ರುದ್ದೀನ್.
‘ಏಕೆ? ಇವತ್ತೇ ಯಾಕಾಗಬಾರದು? ವೈದ್ಯರು ಕೇಳಿದರು.
‘ಈ ರಾತ್ರಿ ಕುಸ್ತಿಯ ಫೈನಲ್ಸ್ ಇದೆ, ಅದಕ್ಕೆ ಎಂದ ನಸ್ರುದ್ದೀನ್.
ಒಂದು ಪ್ರಶ್ನೆಗೆ ಒಂದು ಸೇಬು
ಮುಲ್ಲಾ ನಸ್ರುದ್ದೀನ್ ಊರಿನ ಚೌಕದಲ್ಲಿ ಬಂದು ಕೂತರೆ ಊರಿನ ಜನವೆಲ್ಲಾ ಅವನ ಬಳಿ ಬಂದು ಅದೂ ಇದೂ ಪ್ರಶ್ನೆಗಳನ್ನು ಕೇಳುವರು. ಅವರಿಗೆ ಉತ್ತರ ಹೇಳಿ ಹೇಳಿ ಅವನಿಗೆ ಸಾಕಾಗಿತ್ತು. ಹಾಗಾಗಿ ಒಂದು ಹೊಸ ನಿಯಮ ಮಾಡಿದ- ಪ್ರಶ್ನೆ ಕೇಳುವವರು ಒಂದು ಪ್ರಶ್ನೆಗೆ ಒಂದು ಸೇಬು ಕೊಡಬೇಕು. ಊರಿನವರೂ ಒಪ್ಪಿಕೊಂಡರು.
ಒಂದು ದಿನ ಮುಲ್ಲಾ ಚೌಕದಲ್ಲಿ ಕೂತಿದ್ದಾಗ ಒಬ್ಬಾತ ಬುಟ್ಟಿಯ ತುಂಬ ಸೇಬು ತಂದು ತನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ. ಪ್ರಶ್ನೆಗೊಂದರಂತೆ ಸೇಬು ಕೊಟ್ಟು ಆತನ ಬುಟ್ಟಿಯೂ ಖಾಲಿಯಾಗಿತ್ತು. ಆತ ಹೊರಡುವ ಮುನ್ನ, ‘ಆಯಿತು ಹೊರಡುತ್ತೇನೆ. ಹೊರಡುವ ಮುನ್ನ ಒಂದು ಕೊನೆಯ ಪ್ರಶ್ನೆ... ನೀವು ಅಷ್ಟು ಸೇಬು ಹೇಗೆ ತಿಂದಿರಿ? ಎಂದು ಕೇಳಿದ.
ಅದಕ್ಕೆ ಮುಲ್ಲಾ ‘ನಿನ್ನ ಬಳಿ ಸೇಬೆಲ್ಲಾ ಖಾಲಿಯಾಗಿರುವುದರಿಂದ ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಿಲ್ಲ ಎಂದ.
Sunday, December 02, 2012
ಸೂರ್ಯಾನೂ ಒಂದು ನಕ್ಷತ್ರ ಎಂಬುದು ಸುಳ್ಳು- ನನ್ನ ವ್ಯಂಗ್ಯ ಚಿತ್ರ
ಈ ದಿನದ (02/12/12) `ವಿಜಯವಾಣಿ'ಯ ಸಮೀಕರಣ ಪುಟದಲ್ಲಿ ಪ್ರಕಟವಾದ ನನ್ನ `ಸೈನ್ಸ್ ಆಫ್ ಹ್ಯೂಮರ್' ವ್ಯಂಗ್ಯಚಿತ್ರ.
ಈ ವ್ಯಂಗ್ಯಚಿತ್ರದ ವಿಶೇಷತೆಯೆಂದರೆ ಈ ಪ್ರಶ್ನೆಯನ್ನು ನನ್ನ ಮಗ ಏಳು ವರ್ಷದವನಿದ್ದಾಗ ನನ್ನನ್ನು ಕೇಳಿದ್ದ.
ಈ ವ್ಯಂಗ್ಯಚಿತ್ರದ ವಿಶೇಷತೆಯೆಂದರೆ ಈ ಪ್ರಶ್ನೆಯನ್ನು ನನ್ನ ಮಗ ಏಳು ವರ್ಷದವನಿದ್ದಾಗ ನನ್ನನ್ನು ಕೇಳಿದ್ದ.
Thursday, November 29, 2012
Sunday, November 18, 2012
Friday, November 09, 2012
ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು ನವೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು
ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು
ನವೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು.
ಚಿತ್ರ: ಮುರಳೀಧರ ರಾಠೋಡ್
ಚಿತ್ರ: ಮುರಳೀಧರ ರಾಠೋಡ್
ನಾವು ಆಳದಿದ್ದಾರೆ ಮತ್ತಾರು ಅಳಬೇಕು?
ದೊರೆ ತೈಮೂರ್ ಅತ್ಯಂತ ಕುರೂಪಿ, ಒಕ್ಕಣ್ಣಿನವ ಹಾಗೂ ಕುಂಟನಾಗಿದ್ದ. ಒಂದು ದಿನ ಮುಲ್ಲಾ ನಸ್ರುದ್ದೀನ್ ಆತನ ಜೊತೆಗಿದ್ದಾಗ, ತೈಮೂರನಿಗೆ ತನ್ನ ತಲೆ ತುರಿಕೆಯಾಯಿತು. ತನ್ನ ತಲೆ ತುರಿಸಿಕೊಂಡಾಗ ಕೂದಲು ವಿಪರೀತ ಉದ್ದ ಬೆಳೆದಿರುವುದು ಆತನ ಗಮನಕ್ಕೆ ಬಂದಿತು. ದೊರೆ ಕೂಡಲೇ ಅರಚಿದ, ‘ಕ್ಷೌರಿಕನನ್ನ ಕರೆತನ್ನಿ!
ಕ್ಷೌರಿಕನಿಗೆ ಕರೆಹೋಯಿತು. ಕ್ಷೌರಿಕ ಬಂದವನೆ ದೊರೆಯ ಕೂದಲನ್ನು ಕತ್ತರಿಸಿ ತನ್ನ ಮುಖ ನೋಡಿಕೊಳ್ಳಲೆಂದು ಕನ್ನಡಿಯನ್ನು ದೊರೆ ತೈಮೂರನ ಕೈಗೆ ಕನ್ನಡಿಯನ್ನು ನೀಡಿದ. ಕನ್ನಡಿಯಲ್ಲಿ ತನ್ನ ಕುರೂಪ ಮುಖ ನೋಡಿಕೊಂಡ ತಕ್ಷಣ ತೈಮೂರನಿಗೆ ಅಳುಬಂತು. ಜೋರಾಗಿ ಅಳತೊಡಗಿದ. ನಸ್ರುದ್ದೀನನಿಗೆ ದೊರೆ ಅಳುತ್ತಿರುವ ಕಾರಣ ಗೊತ್ತಿತ್ತು. ಅವನೂ ಸಹ ಆತನ ಜೊತೆಯಲ್ಲಿ ಜೋರಾಗಿ ಅಳತೊಡಗಿದ. ಇಬ್ಬರೂ ಕೆಲಕಾಲ ಅತ್ತರು. ಸುತ್ತಮುತ್ತಲ ಜನ ದೊರೆಗೆ ಸೌಂದರ್ಯ ಇರುವುದು ದೇಹದಲ್ಲಿ ಅಲ್ಲ ಹೃದಯದಲ್ಲಿ ಎಂದು ಸಾಂತ್ವನ ಹೇಳಿ ಸುಮ್ಮನಾಗಿಸಿದರು. ಆದರೆ ಮುಲ್ಲಾ ಅಳುತ್ತಲೇ ಇದ್ದ. ತೈಮೂರ್ ಆತನನ್ನು ಕುರಿತು, ‘ನೋಡು ನಾನು ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡಾಗ ನಾನು ಕುರೂಪಿಯೆಂದು ತಿಳಿಯಿತು. ನಾನೊಬ್ಬ ದೊರೆ, ಅತ್ಯಂತ ಸಿರಿವಂತ, ಬೇಕಾದಷ್ಟು ಹೆಂಡತಿಯರಿದ್ದಾರೆ, ಆದರೂ ನಾನೊಬ್ಬ ಕುರೂಪಿ. ಅದಕ್ಕೇ ದುಃಖವಾಯಿತು ಜೋರಾಗಿ ಅತ್ತೆ. ಆದರೆ ನೀನ್ಯಾಕೆ ಇನ್ನೂ ಅಳುತ್ತಿದ್ದೀಯೆ? ಎಂದು ಕೇಳಿದ. ಅದಕ್ಕೆ ಮುಲ್ಲಾ, ‘ನೀವೇನೊ ಒಂದು ಸಾರಿ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡು ತಡೆಯಲಾರದೆ ಅತ್ತುಬಿಟ್ಟಿರಿ. ಆದರೆ ನಾವು ನಿನ್ನ ಪ್ರಜೆಗಳು ಹಗಲು ರಾತ್ರಿ ಪ್ರತಿ ದಿನ ನಿಮ್ಮ ಮುಖ ನೋಡುತ್ತಲೇ ಇರಬೇಕಲ್ಲಾ? ಇನ್ನು ನಾವಲ್ಲದೆ ಮತ್ತಾರು ಅಳಬೇಕು ಹೇಳಿ? ಎಂದು ತನ್ನ ಅಳು ಮುಂದುವರಿಸಿದ.
ಹುಲಿಯನ್ನೋಡಿಸುವ ಪುಡಿ
ಒಂದು ದಿನ ನಸ್ರುದ್ದೀನ್ ತನ್ನ ಮನೆಯ ಸುತ್ತಲೂ ಎಂಥದೋ ಪುಡಿ ಚಿಮುಕಿಸುತ್ತಿದ್ದ. ಆತನ ಪಕ್ಕದ ಮನೆಯಾತ ಕುತೂಹಲದಿಂದ,
‘ಮುಲ್ಲಾ, ಏನದು? ಏನು ಚಿಮುಕಿಸುತ್ತಿದ್ದೀಯೆ? ಎಂದು ಕೇಳಿದ.
‘ನನ್ನ ಮನೆಗೆ ಹುಲಿ ಬಾರದಂತೆ ತಡೆಯಲು ಔಷಧದ ಪುಡಿ ಚಿಮುಕಿಸುತ್ತಿದ್ದೇನೆ ಎಂದ ಮುಲ್ಲಾ.
‘ಹುಲಿ! ಆದರೆ ಈ ನಗರದ ಸುತ್ತಮುತ್ತ ನೂರಾರು ಮೈಲಿಯವರೆಗೂ ಹುಲಿಗಳೇ ಇಲ್ಲವಲ್ಲ? ಎಂತ ಪಕ್ಕದ ಮನೆಯಾತ.
‘ತಿಳಿಯಿತೆ ನನ್ನ ಪುಡಿಯ ಮಹತ್ವ? ಎಂದ ಮುಲ್ಲಾ ಪುಡಿ ಚಿಮುಕಿಸುತ್ತಾ.
ಮುಳ್ಳಿನ ಗಿಡ ಮತ್ತು ಸಾಲ
ಮುಲ್ಲಾ ನಸ್ರುದ್ದೀನನಿಗೆ ಸಾಲ ನೀಡಿದ್ದಾತ ಈ ದಿನ ಹೇಗಾದರೂ ಅವನಿಂದ ಸಾಲ ವಸೂಲಿ ಮಾಡಲೇಬೇಕೆಂಬ ನಿರ್ಧಾರದಿಂದ ಬಂದು ಜೋರಾಗಿ ಬಾಗಿಲು ತಟ್ಟಿದ.
‘ನಾನು ನಿನಗೆ ನೀಡಿದ್ದ ಸಾಲದ ಹಣ ಹಿಂದಿರುಗಿಸು, ಗುಡುಗಿದ.
‘ಖಂಡಿತಾ ಹಿಂದಿರುಗಿಸುತ್ತೇನೆ. ಇಷ್ಟು ದಿನ ತಡೆದಿದ್ದೀಯೆ. ಇನ್ನು ಸ್ವಲ್ಪ ದಿನ ಸಮಯ ಕೊಡು ಎಂದ ಮುಲ್ಲಾ ಶಾಂತವಾಗಿ.
‘ಇನ್ನೆಷ್ಟು ದಿನ?
‘ನೋಡು. ಈ ದಿನ ಬೆಳಿಗ್ಗೆ ನನ್ನ ಮನೆಯ ರಸ್ತೆ ಬದಿಯ ಬೇಲಿಗೆಂದು ಮುಳ್ಳಿನ ಗಿಡದ ಬೀಜಗಳನ್ನು ಬಿತ್ತನೆ ಮಾಡಿದ್ದೇನೆ.
‘ಅದಕ್ಕೆ?
‘ಆ ಬೀಜ ಮೊಳೆತು ಕೆಲವೇ ದಿನಗಳಲ್ಲಿ ಮೈಯೆಲ್ಲಾ ಮುಳ್ಳು ತುಂಬಿಕೊಂಡ ಗಿಡಗಳಾಗುತ್ತವೆ.
‘ಆಮೇಲೆ?
‘ನಿನಗೇ ಗೊತ್ತು. ಈ ರಸ್ತೆಯಲ್ಲಿ ಪ್ರತಿ ದಿನ ಹಲವಾರು ಜನ ಕುರಿಕಾಯುವವರು ಈ ರಸ್ತೆಯಲ್ಲಿ ಕುರಿ ಮೇಯಿಸಲು ಹೊಡೆದುಕೊಂಡು ಹೋಗುತ್ತಾರೆ.
‘ಅದಕ್ಕೂ ನನ್ನ ಸಾಲಕ್ಕೂ ಏನು ಸಂಬಂಧ?
‘ಸಂಬಂಧವಿದೆ, ಹೇಳುತ್ತೇನೆ ಕೇಳು. ಆ ರೀತಿ ಕುರಿಗಳು ಹಾದುಹೋಗುವಾಗ ಅವುಗಳ ಮೈ ಮುಳ್ಳಿಗೆ ಉಜ್ಜಿ ಅವುಗಳ ಉಣ್ಣೆ ಮುಳ್ಳುಗಳಲ್ಲಿ ಸಂಗ್ರಹವಾಗುತ್ತವೆ. ನಾನು ಅವುಗಳನ್ನು ಸಂಗ್ರಹಿಸಿ ನನ್ನ ಹೆಂಡತಿಗೆ ಕೊಡುತ್ತೇನೆ. ಆಕೆ ಅದರಿಂದ ನೂಲು ತಯಾರಿಸಿಕೊಡುತ್ತಾಳೆ. ಆ ನೂಲಿನಿಂದ ನಾನು ಕಂಬಳಿ ನೇಯ್ದು ಅದನ್ನು ಮಾರಾಟ ಮಾಡಿ ನಿನ್ನ ಸಾಲ ತೀರಿಸುತ್ತೇನೆ.
ಮುಲ್ಲಾನ ಮಾತು ಕೇಳಿ ಸಾಲ ನೀಡಿದವ ಜೋರಾಗಿ ನಕ್ಕ.
‘ಗೊತ್ತಾಯಿತೆ, ನಾನ ಸಾಲ ಹಿಂದಿರುಗಿಸಿದಾಗ ನಿನಗೆ ಎಷ್ಟು ಸಂತೋಷವಾಗುವುದೆಂದು? ಈಗ ನಕ್ಕಿದ್ದು ಸಾಕು, ಹಣ ನಿನ್ನ ಕೈ ಸೇರಿದಾಗ ಉಳಿದ ಸಂತೋಷ ವ್ಯಕ್ತಪಡಿಸಿಕೊಳ್ಳುವಿಯಂತೆ. ಈಗ ಹೊರಡು ಎಂದ ಮುಲ್ಲಾ.
ಮುಲ್ಲಾ ಮತ್ತು ಅಲ್ಲಾಹ್ ನಡುವಿನ ವ್ಯವಹಾರ
ಒಂದು ದಿನ ಮುಲ್ಲಾ ನಸ್ರುದ್ದೀನ್ ಅಲ್ಲಾಹ್‌ನ ಪ್ರಾರ್ಥನೆ ಮಾಡುತ್ತಾ, ‘ಅಲ್ಲಾಹ್, ನೀನು ನನಗೆ ಸಾವಿರ ರೂಪಾಯಿಗಳ ಚೀಲದ ಕೊಡುಗೆ ನೀಡು. ಅದರಲ್ಲಿ ಒಂದು ರೂಪಾಯಿ ಕಡಿಮೆಯಿದ್ದರೂ ನಾನು ಸ್ವೀಕರಿಸುವುದಿಲ್ಲ ಎಂದನು.
ಮುಲ್ಲಾನ ಪಕ್ಕದ ಮನೆಯಲ್ಲಿ ಒಬ್ಬ ಖಂಜೂಸಿ ಸಿರಿವಂತನಿದ್ದನು. ಮನೆಯ ಹೊರಗಡೆ ನಿಂತಿದ್ದ ಆತನಿಗೆ ಮುಲ್ಲಾನ ಮಾತು ಕೇಳಿ ತಮಾಷೆ ಮಾಡೋಣವೆನ್ನಿಸಿತು. ಆತ ಖಂಜೂಸಿಯಾಗಿದ್ದರೂ ಮುಲ್ಲಾ ಹಿಂದಿರುಗಿಸುವನೆಂದು ನಂಬಿ ಒಂದು ಚೀಲದಲ್ಲಿ ೯೯೯ ರೂಪಾಯಿಗಳನ್ನು ತುಂಬಿ ಅದನ್ನು ಮುಲ್ಲಾನ ಮನೆಯ ಹೊಗೆ ಚಿಮಣಿಯಿಂದ ಒಳಕ್ಕೆ ಹಾಕಿದನು. ಪ್ರಾರ್ಥನೆ ಮಾಡುತ್ತಿದ್ದ ಮುಲ್ಲಾನಿಗೆ ಹಣದ ಚೀಲ ಬಿದ್ದ ಸದ್ದ ಕೇಳಿ ಆಶ್ಚರ್ಯವಾಯಿತು ಹಾಗೂ ದೇವರಿಗೆ ತನ್ನ ಪ್ರಾರ್ಥನೆ ತಲುಪಿತೆಂಬ ವಿನಮ್ರ ಭಾವನೆಯೂ ಬಂದಿತು. ತಕ್ಷಣ ಚೀಲ ತೆಗೆದು ಅದರಲ್ಲಿದ್ದ ಹಣ ಎಣಿಸಿ ನೋಡಿದ. ೯೯೯ ರೂಪಾಯಿಗಳಷ್ಟೇ ಇತ್ತು. ‘ಹೋ ಅಲ್ಲಾಹ್! ನಿನಗೆ ಮೊದಲೇ ಹೇಳಿದ್ದೆ ಸಾವಿರಕ್ಕೆ ಒಂದು ರೂಪಾಯಿಯೂ ಕಡಿಮೆ ಕೊಡಬೇಡವೆಂದು. ನಿನಗೆಲ್ಲೋ ಮರೆವಿರಬೇಕು. ಆಯಿತು ಇದನ್ನು ಸ್ವೀಕರಿಸುತ್ತೇನೆ. ಉಳಿದ ಒಂದು ರೂಪಾಯಿಯನ್ನು ಮರೆಯದೆ ನಾಳೆ ಕೊಟ್ಟುಬಿಡು ಎಂದು ಹೇಳಿದ.
ಮುಲ್ಲಾನ ಮಾತನ್ನೇ ಕೇಳಿಸಿಕೊಳ್ಳುತ್ತಿದ್ದ ಪಕ್ಕದ ಮನೆಯ ಖಂಜೂಸಿ, ‘ಇದೇನೋ ಎಡವಟ್ಟಾಯಿತಲ್ಲ ಎಂದುಕೊಂಡು ಆತುರಾತುರವಾಗಿ ಮುಲ್ಲಾನ ಮನೆಯ ಬಾಗಿಲು ತಟ್ಟಿ ಆತನ ಹೊಗೆ ಚಿಮಣಿಯಿಂದ ಹಣ ಹಾಕಿದ್ದು ಅಲ್ಲಾಹ್ ಅಲ್ಲ ತಾನೇ ಎಂದು ಹೇಳಿ ನಡೆದದ್ದನ್ನೆಲ್ಲಾ ವಿವರಿಸಿ ತನ್ನ ಹಣ ಹಿಂದಿರುಗಿಸುವಂತೆ ಕೇಳಿದ.
ಆದರೆ ನಸ್ರುದ್ದೀನ್ ಒಪ್ಪಬೇಕಲ್ಲ! ತನ್ನ ಪ್ರಾರ್ಥನೆಗೆ ಉತ್ತರವಾಗಿ ದೇವರೇ ಆ ಹಣ ಕೊಟ್ಟಿದ್ದಾನೆ ಎಂದು ಹೇಳಿ ಅದನ್ನು ಹಿಂತಿರುಗಿಸಲು ನಿರಾಕರಿಸಿದ. ‘ನೀನು ನನ್ನ ಹಣ ಹಿಂದಿರುಗಿಸದಿದ್ದರೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಬೆದರಿಸಿದ. ಮುಲ್ಲಾ ಜಗ್ಗಲಿಲ್ಲ. ಆ ಖಂಜೂಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ, ಹಾಗೂ ನ್ಯಾಯಾಲಯದಿಂದ ಇಬ್ಬರಿಗೂ ಕರೆ ಬಂದಿತು.
ವಿಚಾರಣೆಯ ದಿನ ನೆರೆಮನೆಯ ಖಂಜೂಸಿ ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಬಂದಾಗ ಮುಲ್ಲಾ, ‘ಇಲ್ಲ ನನಗೆ ನ್ಯಾಯಾಲಯಕ್ಕೆ ಬರಲು ಆಗುವುದಿಲ್ಲ. ಏಕೆಂದರೆ ನಾನು ಬಡವ, ನನ್ನಲ್ಲಿ ಒಳ್ಳೆಯ ಬಟ್ಟೆಗಳೇ ಇಲ್ಲ ಎಂದ. ತನ್ನ ಹಣ ವಾಪಸ್ಸು ಪಡೆಯಲು ಹೇಗಾದರೂ ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲೇ ಬೇಕಾಗಿತ್ತು. ‘ಆಯಿತು ನನ್ನ ಧಿರಿಸು ಹಾಗೂ ರುಮಾಲು ಕೊಡುತ್ತೇನೆ ನಡೆ ಎಂದ. ‘ಆದರೆ ನನ್ನ ಕತ್ತೆಗೆ ಕಾಲು ನೋವಾಗಿದೆ. ಅಷ್ಟು ದೂರ ಹೇಗೆ ನಡೆದು ಬರಲಿ? ಎಂದು ಮತ್ತೊಂದು ರಾಗ ಎಳೆದ ಮುಲ್ಲಾ. ಹಣ ಕೊಟ್ಟ ಖಂಜೂಸಿ ಸಿಕ್ಕಿಕಾಕಿಕೊಂಡುಬಿಟ್ಟಿದ್ದ. ಅವನಿಗೆ ಹೇಗಾದರೂ ಮುಲ್ಲಾನಿಂದ ಹಣ ವಾಪಸ್ಸು ಪಡೆಯಲೇಬೇಕಿತ್ತು. ‘ಆಯಿತಪ್ಪಾ ನನ್ನ ಕತ್ತೆಯನ್ನೇ ಕೊಡುತ್ತೇನೆ. ಬೇಗ ಹೊರಡು ಎಂದು ತನ್ನ ಧಿರಿಸು, ರುಮಾಲು ಹಾಗೂ ಕತ್ತೆಯನ್ನು ಕೊಟ್ಟು ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ದ.
ನ್ಯಾಯಾಲಯದಲ್ಲಿ ನ್ಯಾಯಾಧೀಶರು ಪ್ರಕರಣವನ್ನು ಕೇಳಿ ತಿಳಿದು ಮುಲ್ಲಾನಿಂದ ವಿಚಾರಣೆ ಪ್ರಾರಂಭಿಸಿದರು. ‘ಹೇಳು ನಿನ್ನ ವಾದವೇನಿದೆ? ಎಂದರು.
‘ನಾನೇನು ಹೇಳಲಿ? ನನ್ನ ಪಕ್ಕದ ಮನೆಯಾತ ನನಗೆ ಹಣ ಕೊಟ್ಟಿದ್ದಾನೆಂದು ಸುಳ್ಳು ಹೇಳುತ್ತಿದ್ದಾನೆ. ಇನ್ನೇನು ನೀವು ಆತನಿಗೆ ಮಾತನಾಡಲು ಅವಕಾಶ ಕೊಟ್ಟರೆ ನಾನು ಹಾಕಿಕೊಂಡಿರುವ ಬಟ್ಟೆ, ಸವಾರಿ ಮಾಡಿಕೊಂಡುಬಂದಿರುವ ಕತ್ತೆ ಎಲ್ಲವನ್ನೂ ತಾನೇ ನನಗೆ ಕೊಟ್ಟಿದ್ದೇನೆ ಎಂದುಬಿಡುತ್ತಾನೆ ಎಂದ ನಸ್ರುದ್ದೀನ್.
ಈ ಮಾತನ್ನು ಕೇಳಿದ ನೆರೆಮನೆಯಾತ ಖಂಜೂಸಿಗೆ ಗಂಟಲಲ್ಲಿ ಮೂಳೆ ಸಿಕ್ಕಿಹಾಕಿಕೊಂಡ ಹಾಗಾಯಿತು. ಆತ ತಕ್ಷಣ ನ್ಯಾಯಾಧೀಶರಿಗೆ, ‘ಹೌದು ಸ್ವಾಮಿ ಆತ ಹಾಕಿಕೊಂಡಿರುವ ಧಿರಿಸು, ಸವಾರಿ ಮಾಡಿಕೊಂಡು ಬಂದ ಕತ್ತೆ ಎಲ್ಲವೂ ನನ್ನದೆ. ಅಷ್ಟೇಕೆ, ಮುಲ್ಲಾ ಧರಿಸಿರುವ ರುಮಾಲು ಸಹ ನನ್ನದೇ ಎಂದ ಏದುಸಿರಿನಿಂದ.
‘ನಾನು ಹೇಳಲಿಲ್ಲವೆ ಸ್ವಾಮಿ? ಆತ ಎಷ್ಟು ಖಂಜೂಸಿಯೆಂಬುದು ಊರಿನವರಿಗೆಲ್ಲಾ ತಿಳಿದಿದೆ. ಆತ ಯಾರಿಗೂ ಎಂದಿಗೂ ಒಂದು ಚಿಕ್ಕಾಸೂ ನೀಡಿದವನಲ್ಲ. ಆದರೂ ಎಲ್ಲವೂ ತನ್ನದೇ ಎನ್ನುವವನು. ನೀವು ನನಗೆ ನ್ಯಾಯ ನೀಡಿ ಎಂದ ಮುಲ್ಲಾ ನ್ಯಾಯಾಧೀಶರಿಗೆ ಕೈ ಮುಗಿಯುತ್ತಾ. ಆನಂತರ ನೆರೆಮನೆಯಾತನ ಕಡೆ ತಿರುಗಿ ‘ಇನ್ನು ಮೇಲೆ ನನ್ನ ಮತ್ತು ಅಲ್ಲಾಹ್‌ನ ನಡುವಿನ ವ್ಯವಹಾರದಲ್ಲಿ ತಲೆಹಾಕಬೇಡ ತಿಳಿಯಿತೆ? ಎಂದ.
ಸಾಕ್ಷ್ಯಾಧಾರಗಳ ಮೇಲೆ ಮುಲ್ಲಾ ನಸ್ರುದ್ದೀನ್ ಆರೋಪದಿಂದ ಮುಕ್ತನಾದ.
ಕಿಟಕಿಯಲ್ಲಿ ತಲೆ
ಒಂದು ದಿನ ಮುಲ್ಲಾ ನಸ್ರುದ್ದೀನ್ ಒಬ್ಬ ವ್ಯಾಪಾರಿಯನ್ನು ವ್ಯಾಪಾರದ ವಿಷಯ ಮಾತನಾಡಲು ಆತನ ಮನೆಗೆ ಹೊರಟ. ಆ ವ್ಯಾಪಾರಿ ತನ್ನ ಮನೆಯ ಕಿಟಕಿಯಿಂದ ನಸ್ರುದ್ದೀನ್ ಬರುತ್ತಿದ್ದುದನ್ನು ಇಣಿಕಿ ನೋಡಿದ. ಆತನಿಗೆ ನಸ್ರುದ್ದೀನ್‌ನನ್ನು ಭೇಟಿಯಾಗುವುದು ಇಷ್ಟವಿರಲಿಲ್ಲ. ಬಾಗಿಲು ತಟ್ಟಿದಾಗ ವ್ಯಾಪಾರಿಯ ಮಗ ಬಾಗಿಲು ತೆರೆದ.
‘ನಿಮ್ಮ ತಂದೆಯನ್ನು ಭೇಟಿಯಾಗಬೇಕಿತ್ತು ಎಂದ ನಸ್ರುದ್ದೀನ್.
‘ನಮ್ಮ ತಂದೆ ಹೊರಗೆ ಹೋಗಿದ್ದಾರೆ. ಅವರು ಸಂಜೆಯವರೆಗೂ ಬರುವುದಿಲ್ಲ ಎಂದು ಸುಳ್ಳು ಹೇಳಿದ ಆತನ ಮಗ.
‘ಆಯಿತು. ಇನ್ನು ಮೇಲೆ ಹೊರಗೆ ಹೋಗುವಾಗ ನಿಮ್ಮ ತಂದೆಯವರಿಗೆ ತಲೆಯನ್ನು ಕಿಟಕಿಯಲ್ಲಿ ಇಟ್ಟುಹೋಗಬೇಡಿ ಎಂದು ಹೇಳು ಎಂದ ನಸ್ರುದ್ದೀನ್.
Sunday, November 04, 2012
ಅಘೋಷಿತ ಸ್ತ್ರೀವಾದಿ ಲೇಖಕಿ - ಇಸ್ಮತ್ ಚುಗ್ತಾಯ್
ಈ ದಿನದ (04-11-12) `ಪ್ರಜಾವಾಣಿ'ಯ ಸಾಹಿತ್ಯ ಪುರವಣಿಯಲ್ಲಿನ ನನ್ನ ಲೇಖನ/ಪುಸ್ತಕ ಪರಿಚಯ:
http://prajavani.net/include/story.php?news=11377§ion=178&menuid=13

http://prajavani.net/include/story.php?news=11377§ion=178&menuid=13

ಅಘೋಷಿತ
ಸ್ತ್ರೀವಾದಿ ಲೇಖಕಿ
ಪ್ರಖ್ಯಾತ
ಉರ್ದು ಸಾಹಿತಿ ಇಸ್ಮತ್ ಚುಗ್ತಾಯ್ರನ್ನು (1919-1991) ಇಪ್ಪತ್ತನೇ ಶತಮಾನದ ದಿಟ್ಟ ಹಾಗೂ
ವಿವಾದಾಸ್ಪದ ಉರ್ದು ಲೇಖಕಿ ಎಂದೇ
ಗುರುತಿಸಲಾಗುತ್ತದೆ. ಅವರ ಆತ್ಮಕತೆ `ಎ
ಲೈಫ್ ಇನ್ ವರ್ಡ್ಸ್: ಮೆಮ್ವೋರ್ಸ್
ಬೈ ಇಸ್ಮತ್ ಚುಗ್ತಾಯ್` ಕೃತಿಯನ್ನು ಪೆಂಗ್ವಿನ್ ಇಂಡಿಯಾ ಇತ್ತೀಚೆಗೆ ಪ್ರಕಟಿಸಿದೆ.
ಅವರ ಹಲವಾರು ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಎಂ.ಅಸಾಉದ್ದೀನ್ ಇದನ್ನೂ ಸಹ ಅನುವಾದಿಸಿದ್ದಾರೆ.
ಇಸ್ಮತ್ರವರ ಉರ್ದು ಮೂಲ
ಕೃತಿ `ಕಾಗಜ್ ಹೈ ಪೈರಹನ್` ಅವರ
ಆತ್ಮಕತೆ ಎನ್ನುವುದಕ್ಕಿಂತ ಅವರ
ಬದುಕಿನ ತುಣುಕುಗಳನ್ನು ಓದುಗರೆದುರಿಗಿಡುತ್ತದೆ. ಏಕೆಂದರೆ ಇದರಲ್ಲಿನ ಲೇಖನಗಳು
ಅನುಕ್ರಮದಲ್ಲಿಲ್ಲ. ಇವು1979ರಿಂದ 1980ರವರೆಗೆ
ಉರ್ದು ಪತ್ರಿಕೆಯಾದ `ಆಜ್ ಕಲ್`ನಲ್ಲಿ
ಪ್ರಕಟವಾದುವು ಹಾಗೂ ಅವು ಅವರು ತೀರಿಕೊಂಡ ಮೂರುವರ್ಷಗಳ
ನಂತರ 1994ರಲ್ಲಿ `ಕಾಗಜ್ ಹೈ
ಪೈರಹನ್` ಹೆಸರಿನಲ್ಲಿ ಪ್ರಕಟವಾಯಿತು. ಬಾಲ್ಯದಿಂದ ವೃದ್ಧಾಪ್ಯದವರೆಗಿನ
ಸಂಗತಿಗಳನ್ನು ಪ್ರಾಮಾಣಿಕವಾಗಿ ಈ ಬರಹಗಳಲ್ಲಿ ಅವರು
ತೆರೆದಿಟ್ಟಿದ್ದಾರೆ.
ಮತ್ತೊಬ್ಬ ಉರ್ದು ಸಾಹಿತಿ ಸಾದತ್
ಹಸನ್ ಮಂಟೋನ ಸಮಕಾಲೀನರಾದ ಇಸ್ಮತ್
ಮಂಟೋನ ಆತ್ಮೀಯ ಗೆಳತಿಯಾಗಿದ್ದರು. ಮಂಟೊ,
ಕ್ರಿಷನ್ ಚಂದರ್ ಮತ್ತು ರಾಜಿಂದರ್
ಸಿಂಗ್ ಬೇಡಿಯ ಜೊತೆಗೆ ಇಸ್ಮತ್
ಉರ್ದು ಸಣ್ಣ ಕಥಾ ಸಾಹಿತ್ಯದ
ನಾಲ್ಕನೇ ಆಧಾರ ಸ್ತಂಭವಾಗಿದ್ದರು. ಮಹಿಳೆಯರು,
ಅದರಲ್ಲೂ ಮುಸಲ್ಮಾನ ಮಹಿಳೆಯರು ಮನೆಯಿಂದಲೇ ಹೊರಗೆ ಬರಬಾರದು ಎಂದಿದ್ದ
ಸಮಯದಲ್ಲಿ ಎಲ್ಲವನ್ನೂ ಧಿಕ್ಕರಿಸಿ ಬರಹಗಾರಳಾಗಲು ಹೊರಟಂಥ ಬಂಡಾಯಗಾರ್ತಿ ಆಕೆ.
ಇಸ್ಮತ್ ಚುಗ್ತಾಯ್ ಚಿಕ್ಕ ಹುಡುಗಿಯಾಗಿದ್ದಾಗಲೇ ಆಕೆಯ
ಅಣ್ಣ ಮಿರ್ಜಾ ಅಜೀಮ್ ಬೇಗ್
ಚುಗ್ತಾಯ್ ಖ್ಯಾತ ಲೇಖಕನಾಗಿದ್ದ. ಆತನೇ
ಅವರ ಮೊದಲು ಗುರು ಮತ್ತು
ಮಾರ್ಗದರ್ಶಿ. ಥಾಮಸ್ ಹಾರ್ಡಿಯ ಕೃತಿಗಳ
ಜೊತೆಗೆ ಹಿಜಾಬ್ ಇಮ್ತಿಯಾಜ್ ಅಲಿ,
ಮಜ್ನೂನ್ ಗೋರಖ್ಪುರಿ ಮತ್ತು
ನಿಯಾಜ್ ಫತೇಪುರಿಯವರ ಕೃತಿಗಳನ್ನು ಓದಿದ್ದರು ಅವರು. ಅದಕ್ಕೂ ಮೊದಲು
ಯಾರಿಗೂ ತಿಳಿಯದಂತೆ ಗೋಪ್ಯವಾಗಿ ಪ್ರೇಮದ ಕತೆಗಳನ್ನು ಅವರು
ಬರೆಯುತ್ತಿದ್ದರು. ಹೆಣ್ಣಾಗಿ ಬರೆಯುವಂಥ `ಅಪರಾಧ` ಮಾಡುತ್ತಿದ್ದುದರಿಂದ ಸಿಕ್ಕಿಹಾಕಿಕೊಂಡರೆ
ಶಿಕ್ಷಿಸುವರೆಂಬ ಭಯವಿತ್ತು. ದಾಸ್ತೋವ್ಸ್ಕಿ, ಡಿಕನ್ಸ್, ಟಾಲ್ಸ್ಟಾಯ್, ಸೋಮರ್ಸೆಟ್
ಮಾಮ್, ಚೆಕೋವ್, ಓ ಹೆನ್ರಿ
ಮುಂತಾದ ಲೇಖಕರು ಅವರ ಮೆಚ್ಚಿನ
ಲೇಖಕರಾಗಿದ್ದರು. `ಓ ಹೆನ್ರಿಯಿಂದಲೇ ಕತೆ
ಬರೆಯುವುದನ್ನು ಕಲಿತೆ` ಎಂದು ಅವರೇ
ಹೇಳಿಕೊಂಡಿದ್ದಾರೆ. ಮುನ್ಷಿ ಪ್ರೇಮ್ಚಂದ್
ಉರ್ದು -ಹಿಂದಿ ಲೇಖಕರಲ್ಲಿ ಆಕೆಗೆ
ಪ್ರಿಯವಾದವರು. ಆ ನಂತರ ಅವರು
ಗಾಂಧಿಯ ಕೃತಿಗಳನ್ನೂ ಮೆಚ್ಚುಗೆಯಿಂದ ಓದತೊಡಗಿದರು. ಕಾಲೇಜಿನಲ್ಲಿ ಗ್ರೀಕ್ ನಾಟಕಗಳನ್ನು, ಶೇಕ್ಸ್‌ಪಿಯರ್‌ನ ನಾಟಕಗಳನ್ನು,
ಇಬ್ಸೆನ್ ಮತ್ತು ಬರ್ನಾಡ್ ಶಾರವರ
ನಾಟಕಗಳನ್ನು ಅತ್ಯಂತ ಆಸಕ್ತಿಯಿಂದ ಓದಿದರು.
ಶಾಲೆಗೆ ಹೋಗಿ ಓದಬೇಕೆಂಬ
ಬಯಕೆ ಅವರಿಗೆ ಎಷ್ಟಿತ್ತೆಂದರೆ, ಅವರಿಗೆ
ಹದಿನೈದು ವರ್ಷವಾಗಿ ಒಂಭತ್ತನೇ ತರಗತಿಯಲ್ಲಿದ್ದಾಗ ಆಕೆಗೆ ಮದುವೆಮಾಡಬೇಕೆನ್ನುವ ಸಿದ್ಧತೆಯನ್ನು
ತಂದೆತಾಯಿಗಳು ಮಾಡುತ್ತಿದ್ದರು. ಒಂದು ದಿನ ಶಾಲೆಯಿಂದ
ಮನೆಗೆ ಬಂದಾಗ ಮನೆಯಲ್ಲಿ ಚಿನಿವಾರರು
ಮತ್ತು ದರ್ಜಿಗಳು ಬೀಡುಬಿಟ್ಟಿದ್ದರು. ಆಕೆಯೊಂದಿಗೆ ಅಂತಹ ವಿಷಯಗಳನ್ನು ಮಾತನಾಡುವಂತಹ
ಅವಿವಾಹಿತ ಅಕ್ಕ ತಂಗಿಯರೂ ಇರಲಿಲ್ಲ.
ಕೊನೆಗೆ ವಿಷಯ ತಿಳಿದ ಅವರು ಮದುವೆಯಾದಲ್ಲಿ ತನ್ನ
ಓದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲವೆಂದು ತನಗೆ ಮದುವೆಯೇ ಬೇಡವೆಂದು
ಹಠ ಹಿಡಿದರು. `ನಿನಗೆ ಹುಚ್ಚು ಹಿಡಿದಿದೆ`
ಎಂದು ತಾಯಿ ಬೈದರು. `ನೀನು
ಗಂಡನ ಮನೆಗೆ ಹೋದಮೇಲೆ ಓದಬಹುದಲ್ಲಾ?`
ಎಂದರು ತಂದೆ. `ಗಂಡನ ಮನೆಯಲ್ಲಿ
ಓದಿದ ಹಾಗೆ! ಆ ಗಂಡನೂ
ನನ್ನ ತಂದೆಯಂಥವನೇ ಆದಲ್ಲಿ ಪ್ರತಿ ವರ್ಷ
ಒಂದು ಮಗುವನ್ನು ಹೆತ್ತುಕೊಡಲೆ? ಅಥವಾ ಪರೀಕ್ಷೆಗಳನ್ನು ಬರೆಯಲೆ?`
ಎಂದು ಮನಸ್ಸಿನಲ್ಲೇ ಗೊಣಗಿ ಆ ಮದುವೆ
ನಿಲ್ಲಿಸಲು ಉಪಾಯವೊಂದನ್ನು ಹುಡುಕಿದರು. ಅವರ ಮಾವನ ಮಗನೊಬ್ಬ
ಬಾಂಬೆಯಲ್ಲಿ ವೈದ್ಯ ಪದವಿ ಓದುತ್ತಿದ್ದ.
ಇಸ್ಮತ್ ಅವನಿಗೊಂದು ಪತ್ರ ಬರೆದು `ನನ್ನನ್ನು
ಈಗ ನೀನೇ ಪಾರು ಮಾಡಬೇಕು.
ಅದಕ್ಕಾಗಿ ನೀನು ಏನೂ ಮಾಡಬೇಕಾಗಿಲ್ಲ.
ನೀನು ನಿಮ್ಮ ತಂದೆಗೆ ನನ್ನನ್ನು
ಕಂಡರೆ ಇಷ್ಟ ಹಾಗೂ ನನ್ನನ್ನು
ಮದುವೆಯಾಗುತ್ತೇನೆ ಎಂದು ಪತ್ರ ಬರೆದುಬಿಡು.
ಇದು ಮಾತ್ರ ನನ್ನ ಮದುವೆಯನ್ನು
ನಿಲ್ಲಿಸಬಲ್ಲದು. ಆಮೇಲೆ ನೀನು ಹೆದರಿಕೊಳ್ಳುವ
ಅವಶ್ಯಕತೆಯೇನೂ ಇಲ್ಲ. ನಾನು ಪ್ರಮಾಣಮಾಡಿ ಹೇಳುತ್ತೇನೆ ನಿನ್ನನ್ನು ಮದುವೆಯಾಗುವುದಿಲ್ಲವೆಂದು. ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿಬಿಡು`
ಎಂದು ಕೋರಿದ್ದರು. ಆತ ಅದೇ ರೀತಿ
ಮಾಡಿದ. ಕೆಲದಿನಗಳ ನಂತರ ಅವಳ ಮಾವ
ಓಡಿಬಂದು, `ನೋಡಿಲ್ಲಿ, ನಮ್ಮ ಶೌಕತ್ಗೆ
ಇಸ್ಮತ್ ಕಂಡರೆ ಇಷ್ಟವಂತೆ. ನೀನು
ಅವಳನ್ನು ಹೊರಗಿನವನಿಗೆ ಮದುವೆ ಮಾಡಿಕೊಡುವುದು ಬೇಡ.
ಬೇಕಾದರೆ ಈ ಪತ್ರ ನೋಡು`
ಎಂದು ತೋರಿಸಿದ. ಇಸ್ಮತ್‌ಳ ಅಮ್ಮನ
ಮುಖವೂ ಸಂತೋಷದಿಂದ ಊರಗಲವಾಯಿತು. ದರ್ಜಿಗಳು, ಚಿನಿವಾರರು ಕತ್ತರಿಸಿದ ಬಟ್ಟೆ ಹಾಗೂ ಕರಗಿಸಿದ
ಚಿನ್ನ ಬಿಟ್ಟು ಹೊರಟರು. ಮದುವೆ ಅನಿರ್ದಿಷ್ಟಕಾಲ
ಮುಂದೆ ಹೋಗಿತ್ತು.
ಇಪ್ಪತ್ತ ಮೂರು ವರ್ಷಗಳಾದಾಗ
ತಾನೂ ಬರೆಯಬಲ್ಲೆ ಎಂದು ಅವರಿಗೆ ಆತ್ಮವಿಶ್ವಾಸ
ಬಂದಾಗ ತಮ್ಮ ಮೊಟ್ಟಮೊದಲ ಕತೆ
`ಫಾಸದಿ` ಬರೆದರು. ಅದು ಪ್ರತಿಷ್ಠಿತ
ಸಾಹಿತ್ಯ ಪತ್ರಿಕೆ `ಸಾಖಿ`ಯಲ್ಲಿ ಪ್ರಕಟವಾಯಿತು.
ಅದನ್ನು ಓದಿದವರು ಅಜೀಮ್ ಬೇಗ
ಚುಗ್ತಾಯ್ (ಆಕೆಯ ಸಾಹಿತಿ ಅಣ್ಣ)
ಯಾವಾಗ ತನ್ನ ಹೆಸರು ಬದಲಿಸಿಕೊಂಡು
ಬರೆಯಲು ಶುರುಮಾಡಿದ ಎಂದು ಅಚ್ಚರಿಗೊಂಡರಂತೆ! 1936ರಲ್ಲಿ ಪದವಿ
ಶಿಕ್ಷಣಕ್ಕೆ ಓದುತ್ತಿರುವಾಗಲೇ ಅವರು
ಲಕ್ನೋದಲ್ಲಿನ ಪ್ರಗತಿಪರ
ಬರಹಗಾರರ ಸಂಘದ ಸಭೆಗೆ ಹಾಜರಾದರು.
ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿದ್ದ ಆ ಸಂಘ ಭಾರತಕ್ಕೂ
ಬಂದಿತ್ತು ಹಾಗೂ ಅದು ಫಯಾಜ್
ಅಹ್ಮದ್ ಫಯಾಜ್, ಸಜ್ಜದ್ ಜಹೀರ್,
ಕೈಫಿ ಆಜ್ಮಿಯಂಥವರನ್ನು ಆಕರ್ಷಿಸಿತ್ತು. ಇವರೆಲ್ಲಾ ಉರ್ದು ಸಾಹಿತ್ಯ ಹೊಸ
ದಿಕ್ಕಿನೆಡೆ ಸಾಗಲು ಸಂಪೂರ್ಣ ಹೊಸ
ಮೌಲ್ಯಗಳನ್ನು ಹುಟ್ಟುಹಾಕುತ್ತಿದ್ದರು. ಅಲ್ಲಿ ಭೇಟಿಯಾದ ರಶೀದ್
ಜಾನ್ ಎಂಬ ವೈದ್ಯೆ ಮತ್ತು
ಲೇಖಕಿ ಇಸ್ಮತ್ ಮೇಲೆ ಬೀರಿದ
ಪ್ರಭಾವ ಅಗಾಧವಾದುದು.
ಪದವಿ ಶಿಕ್ಷಣದ ನಂತರ
ಶಿಕ್ಷಣ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದರು. ಈ
ಎರಡೂ ಪದವಿಗಳನ್ನು ಪಡೆದ ಮೊಟ್ಟ ಮೊದಲ
ಭಾರತದ ಮುಸಲ್ಮಾನ ಮಹಿಳೆ ಅವರು. ನಂತರ
ಬಾಂಬೆಯಲ್ಲಿನ ಮಹಿಳಾ ಕಾಲೇಜಿನ ಪ್ರಿನ್ಸಿಪಾಲರಾಗಿ
ನೇಮಕಗೊಂಡರು. ಶಾಲೆಗಳ ನಿರೀಕ್ಷಕರೂ ಆಗಿದ್ದರು.
ಕೆಲವು ಸಮಯ ಆಲಿಘರ್ನಲ್ಲಿ
ಕೆಲಸ ಮಾಡಿದರು. ಅಲ್ಲಿ ಮಾಸ್ಟರ್ಸ್ ಪದವಿ
ಮಾಡುತ್ತಿದ್ದ ಶಾಹೀದ್ ಲತೀಫ್ನನ್ನು
ಭೇಟಿಯಾದರು. ಈ ಗೆಳೆತನ ಪ್ರೇಮವಾಗಿ
ಅವರಿಬ್ಬರೂ 1942ರಲ್ಲಿ ಮದುವೆಯಾದರು. ಅವರೇ ಬರೆದುಕೊಂಡಿರುವಂತೆ
ಶಾಹೀದ್ನನ್ನು ಮದುವೆಯಾಗುವ ಮುನ್ನ,
`ಮತ್ತೊಮ್ಮೆ ಸರಿಯಾಗಿ ಆಲೋಚಿಸು, ನಾನು
ಸ್ವತಂತ್ರ ಆಲೋಚನೆಯುಳ್ಳವಳು, ನಾನು ನಿನಗೆ ಸರಿಹೊಂದುತ್ತೇನೆಯೋ
ಇಲ್ಲವೋ` ಎಂದೂ ಹೇಳಿದ್ದರು. ತಮ್ಮ
ಮದುವೆಯ ಬಗ್ಗೆ ಹೇಳುತ್ತ ಅವರು
`ಗಂಡು ಹೆಣ್ಣನ್ನು ದೇವತೆ ಎನ್ನುವಂತೆ ಪೂಜಿಸುತ್ತಾನೆ,
ಪ್ರೀತಿಸುತ್ತಾನೆ, ಗೌರವಿಸುತ್ತಾನೆ ಆದರೆ ಆಕೆಯನ್ನು ತನ್ನ
ಸಮಾನಳು ಎಂದು ಸ್ವೀಕರಿಸಲು ಮಾತ್ರ
ಸಿದ್ಧವಿರುವುದಿಲ್ಲ. ಒಬ್ಬ ಅನಕ್ಷರಸ್ಥ ಹೆಣ್ಣಿನೊಂದಿಗೆ
ಆತ ಹೇಗೆ ಗೆಳೆಯನಾಗಿರಲು ಸಾಧ್ಯ?
ಆದರೆ ಗೆಳೆತನಕ್ಕೆ ಬೇಕಾಗಿರುವುದು ಪ್ರೀತಿ ಪ್ರೇಮಗಳು, ಶಿಕ್ಷಣವಲ್ಲ.
ಶಾಹೀದ್ ನನ್ನನ್ನು ತನ್ನ ಸರಿಸಮಳೆಂದು ಪರಿಗಣಿಸಿದ.
ಅದಕ್ಕಾಗಿಯೇ ನಮ್ಮ ದಾಂಪತ್ಯ ಜೀವನ
ಸುಖಕರವಾಗಿತ್ತು` ಎಂದಿದ್ದಾರೆ. ಮದುವೆಗೆ ಎರಡು ತಿಂಗಳಿದ್ದಾಗಲೇ ಅವರ
ಕತೆ `ಲಿಹಾಫ್ (ಕೌದಿ)
ಪ್ರಕಟವಾಯಿತು ಹಾಗೂ ಅದು ವಿವಾದವನ್ನೂ
ಹುಟ್ಟುಹಾಕಿತು. ಇಂದಿಗೂ ಈ ಉಪಖಂಡದಲ್ಲಿ
ಹೆಣ್ಣೊಬ್ಬಳು ಬರೆದ ಅತ್ಯಂತ ವಿವಾದಾಸ್ಪದ
ವಿಷಯದ ಕತೆಯೆಂದು ಇದು ಪರಿಗಣಿಸಲ್ಪಟ್ಟಿದೆ. ನವಾಬನ
ಪತ್ನಿಯೊಬ್ಬಳು ತನ್ನ ಗಂಡ ತನಗಾಗಿ
ಸಮಯವನ್ನೇ ಕೊಡದಿದ್ದಾಗ ತನ್ನ ಸಹಜ ಲೈಂಗಿಕ
ತೃಷೆಯ ತೃಪ್ತಿಯನ್ನು ಹಾಗೂ ಭಾವನಾತ್ಮಕ ಸಾಂತ್ವನವನ್ನು
ತನ್ನ ಸೇವಕಿಯಲ್ಲಿ ಕಂಡುಕೊಳ್ಳುತ್ತಾಳೆ.
ವಯಸ್ಕ ಹೆಣ್ಣು ನಿರೂಪಕಿ ವಹಿಸಬೇಕಾದ
ಎಚ್ಚರಿಕೆ ಮತ್ತು ನಿಗ್ರಹವನ್ನು ತೊಡಗಿಸಲು
ಈ ಕತೆಯ ನಿರೂಪಣೆಯನ್ನು
ಒಂಭತ್ತು ವರ್ಷದ ಹುಡುಗಿಯ ದೃಷ್ಟಿಯಿಂದ
ಮಾಡಲಾಗಿದೆ.
ಇಸ್ಮತ್ 1941ರಲ್ಲಿ `ಲಿಹಾಫ್` ಕತೆಯನ್ನು ಪ್ರಕಟಣೆಗೆ ಕಳುಹಿಸಿದಾಗ ಪತ್ರಿಕೆಯ ಸಂಪಾದಕ ಅಂತಹ ಕತೆಯನ್ನು
ಹೆಣ್ಣೊಬ್ಬಳು ಬರೆಯಲು ಸಾಧ್ಯವೇ ಇಲ್ಲ,
ಯಾರೋ ಗಂಡಸರು ಹೆಣ್ಣಿನ ಹೆಸರಿನಲ್ಲಿ
ಬರೆದಿದ್ದಾರೆ ಎಂದೇ ನಂಬಿದ್ದ. ಕತೆ
ಪ್ರಕಟವಾದ ನಂತರ ಓದುಗರು ಮತ್ತು
ವಿಮರ್ಶಕರು ಕೃತಿ ಮತ್ತು ಕೃತಿಕಾರಳನ್ನು
ಖಂಡಿಸಿದರು. ಕತೆ ಅಶ್ಲೀಲವೆಂದು ನ್ಯಾಯಾಲಯದಲ್ಲಿ ದಾವೆ
ಹೂಡಲಾಯಿತು. ಲಾಹೋರಿನ ನ್ಯಾಯಾಲಯದಲ್ಲಿ ನಾಲ್ಕು
ವರ್ಷ ವಿಚಾರಣೆ ನಡೆಯಿತು ಆದರೆ
ಕೃತಿಯಲ್ಲಿ ಅಶ್ಲೀಲದ `ನಾಲ್ಕಕ್ಷರ` ಸಿಗದಿದ್ದುದರಿಂದ
ದಾವೆ ವಜಾ ಆಯಿತು. ಅದೇ
ಸಮಯದಲ್ಲಿ ಸಾದತ್ ಹಸನ್ ಮಂಟೋನ
ಕತೆಗಳ ಮೇಲೂ ಅಶ್ಲೀಲವೆಂದು
ದಾವೆ ಹೂಡಲಾಗಿತ್ತು. ಎಷ್ಟೋ ಸಾರಿ ಇಬ್ಬರೂ
ಜೊತೆಯಲ್ಲಿಯೇ ಲಾಹೋರಿನ ನ್ಯಾಯಾಲಯದಲ್ಲಿ ವಿಚಾರಣೆಗೆ
ಹಾಜರಾಗಿದ್ದಾರೆ. ಲಾಹೋರಿನ ನ್ಯಾಯಾಲಯದಲ್ಲಿ
ನಡೆದ ವಿಚಾರಣೆಯ ಸನ್ನಿವೇಶಗಳನ್ನು ಇಸ್ಮತ್ ದಾಖಲಿಸಿದ್ದಾರೆ. ಕತೆ
ಅಶ್ಲೀಲವೆಂದು ಒಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡುಬಿಡಿ, ಜುಲ್ಮಾನೆ ಹಣ ತಾವೇ ಕಟ್ಟುತ್ತೇವೆಂದು
ಆಕೆಯ ಹಲವಾರು `ಹಿತೈಷಿ` ಗಳು
ಆಕೆಗೆ ಸಲಹೆ ಕೊಟ್ಟಿದ್ದರು. ತನ್ನ
ಕತೆ ಅಶ್ಲೀಲವೆಂದು ರುಜುವಾತಾದಲ್ಲಿ ತಾನು
ಶಿಕ್ಷೆ ಅನುಭವಿಸುತ್ತೇನೆಯೇ ಹೊರತು ಕ್ಷಮಾಪಣೆ ಕೇಳುವುದಿಲ್ಲವೆಂದಿದ್ದರು
ಇಸ್ಮತ್. ಆ ಕತೆಯಲ್ಲಿನ `ಪ್ರೇಮಿಗಳು` ಮತ್ತು
`ಸೆಳೆದುಕೊಳ್ಳುವುದು` ಎನ್ನುವ
ಪದಗಳು ಅಶ್ಲೀಲವೆಂದು ದಾವೆ ಹೂಡಿದ್ದಾತ ಅದನ್ನು
ಸಮರ್ಥಿಸಿಕೊಳ್ಳಲಾಗದೆ ಕೇಸು ಸೋತ. ವಿಚಾರಣೆ
ಮುಗಿದ ನಂತರ ನ್ಯಾಯಾಧೀಶರು ಆಕೆಯನ್ನು
ತಮ್ಮ ಕೋಣೆಗೆ ಕರೆಸಿಕೊಂಡು, `ನಿಮ್ಮ
ಬಹುಪಾಲು ಎಲ್ಲಾ ಕತೆಗಳನ್ನು ಓದಿದ್ದೇನೆ.
ಅವೇನೂ ಅಶ್ಲೀಲವಲ್ಲ. ಲಿಹಾಫ್ ಸಹ ಅಶ್ಲೀಲವಲ್ಲ`
ಎಂದಿದ್ದರು.
`ಕಲಿಯಾಂ` ಮತ್ತು
`ಕೋಟೇನ್` ಅವರ
ಆರಂಭದ ಕಥಾ ಸಂಕಲನಗಳು. ಅದಾದನಂತರ
ಹಲವಾರು ಸಂಕಲನಗಳು ಪ್ರಕಟವಾದವು- `ಏಕ್ ಬಾತ್` , `ಚುಯ್
ಮುಯ್` , `ದೋ ಹಾತ್` , `ಖರೀದ್
ಲೋ` , `ಏಕ್ ಕತ್ರಾಯೆ ಖೂನ್` ಮತ್ತು
`ಥೋಡಿ ಸಿ ಪಾಗಲ್` . `ತೇರ‌್ಹಿ ಲಖೀರ್` ಮತ್ತು `ಸೌದಾಯೆ` ಎಂಬ ಕಾದಂಬರಿಗಳು ಮತ್ತು
`ಜಿದ್ದಿ` , `ದಿಲ್ ಕಿ ದುನಿಯಾ` ಹಾಗೂ
`ಮಾಸೂಮಾ` ಎಂಬ
ಕಿರುಕಾದಂಬರಿಗಳೂ ಪ್ರಕಟವಾದವು. ಇದರ ಜೊತೆಗೆ ಹಲವಾರು ಪ್ರಬಂಧಗಳು ಮತ್ತು
ಲೇಖನಗಳೂ ಪ್ರಕಟವಾದವು. ತನ್ನ ಪತಿಯೊಂದಿಗೆ ಹನ್ನೆರಡು
ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಬರೆದರು ಮತ್ತು ಸ್ವತಂತ್ರವಾಗಿ
ಐದು ಚಲನಚಿತ್ರಗಳನ್ನು ಸಹ ನಿರ್ಮಿಸಿದರು. ಶಶಿಕಪೂರ್‌ನ `ಜುನೂನ್` ಸಿನೆಮಾದಲ್ಲಿ
ಒಂದು ಪಾತ್ರವನ್ನು ಸಹ ನಿರ್ವಹಿಸಿದ್ದರು.
ಇಸ್ಮತ್ ಪ್ರಜ್ಞಾಪೂರ್ವಕವಲ್ಲದ ಮತ್ತು
ಅಘೋಷಿತ ಸ್ತ್ರೀವಾದಿ. ಭಾರತೀಯ ಮುಸಲ್ಮಾನ ಮಹಿಳೆಯರಿಗೆ
ಆಗ ಓದಲು ಸಿಗುತ್ತಿದ್ದ ಪುಸ್ತಕವೆಂದರೆ
1905ರಲ್ಲಿ ಪ್ರಕಟವಾಗಿದ್ದ ಮುಸಲ್ಮಾನ ಸಂಸ್ಕೃತಿಯ ಬಗ್ಗೆ, ಸಂಪ್ರದಾಯ ಮತ್ತು
ಆಚರಣೆಗಳ ಬಗ್ಗೆ ವಿವರಗಳಿದ್ದ ಎರಡು
ಸಂಪುಟಗಳ `ಗೂದರ್ ಕ ಲಾಲ್` ಎಂಬ
ಕಾದಂಬರಿ. ಅದರ ಕರ್ತೃ ವಲೀದಾ
ಅಫ್ಜಲ್ ಅಲಿ, ಅಂದರೆ `ಅಫ್ಜಲ್
ಅಲಿಯ ತಾಯಿ` ಎಂದರ್ಥ.
ಆಗ ಹೆಣ್ಣೊಬ್ಬಳು ಕೃತಿಕಾರಳಾಗಿದ್ದರೂ ಆಕೆ ತನ್ನ ಹೆಸರನ್ನು
ಹಾಕಿಕೊಳ್ಳುವಂತಿರಲಿಲ್ಲ!
ಇಸ್ಮತ್ಗೆ ಇಬ್ಬರು
ಪುತ್ರಿಯರಿದ್ದು ಪತಿಯ ಮರಣಾನಂತರ ಬಾಂಬೆಯಲ್ಲೇ
ವಾಸಿಸುತ್ತಿದ್ದರು. ಇಸ್ಮತ್ ಚುಗ್ತಾಯ್ 1991ರ
ಅಕ್ಟೋಬರ್ 24ರಂದು ಕೊನೆಯುಸಿರೆಳೆದರು.
Subscribe to:
Posts (Atom)