Sunday, November 04, 2012

ಅಘೋಷಿತ ಸ್ತ್ರೀವಾದಿ ಲೇಖಕಿ - ಇಸ್ಮತ್ ಚುಗ್ತಾಯ್‌

ಈ ದಿನದ (04-11-12) `ಪ್ರಜಾವಾಣಿ'ಯ ಸಾಹಿತ್ಯ ಪುರವಣಿಯಲ್ಲಿನ ನನ್ನ ಲೇಖನ/ಪುಸ್ತಕ ಪರಿಚಯ:

http://prajavani.net/include/story.php?news=11377&section=178&menuid=13


ಅಘೋಷಿತ ಸ್ತ್ರೀವಾದಿ ಲೇಖಕಿ
ಪ್ರಖ್ಯಾತ ಉರ್ದು ಸಾಹಿತಿ ಇಸ್ಮತ್ ಚುಗ್ತಾಯ್ರನ್ನು (1919-1991) ಇಪ್ಪತ್ತನೇ ಶತಮಾನದ ದಿಟ್ಟ ಹಾಗೂ ವಿವಾದಾಸ್ಪದ ಉರ್ದು ಲೇಖಕಿ ಎಂದೇ ಗುರುತಿಸಲಾಗುತ್ತದೆ. ಅವರ ಆತ್ಮಕತೆ ` ಲೈಫ್ ಇನ್ ವರ್ಡ್ಸ್: ಮೆಮ್ವೋರ್ಸ್ಬೈ ಇಸ್ಮತ್ ಚುಗ್ತಾಯ್ಕೃತಿಯನ್ನು ಪೆಂಗ್ವಿನ್ ಇಂಡಿಯಾ ಇತ್ತೀಚೆಗೆ ಪ್ರಕಟಿಸಿದೆ. ಅವರ ಹಲವಾರು ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಎಂ.ಅಸಾಉದ್ದೀನ್ ಇದನ್ನೂ ಸಹ ಅನುವಾದಿಸಿದ್ದಾರೆ. ಇಸ್ಮತ್ರವರ ಉರ್ದು ಮೂಲ ಕೃತಿ `ಕಾಗಜ್ ಹೈ ಪೈರಹನ್ಅವರ ಆತ್ಮಕತೆ ಎನ್ನುವುದಕ್ಕಿಂತ  ಅವರ ಬದುಕಿನ ತುಣುಕುಗಳನ್ನು ಓದುಗರೆದುರಿಗಿಡುತ್ತದೆ. ಏಕೆಂದರೆ ಇದರಲ್ಲಿನ ಲೇಖನಗಳು ಅನುಕ್ರಮದಲ್ಲಿಲ್ಲ. ಇವು1979ರಿಂದ 1980ರವರೆಗೆ ಉರ್ದು ಪತ್ರಿಕೆಯಾದ `ಆಜ್ ಕಲ್`ನಲ್ಲಿ ಪ್ರಕಟವಾದುವು ಹಾಗೂ ಅವು  ಅವರು ತೀರಿಕೊಂಡ ಮೂರುವರ್ಷಗಳ ನಂತರ 1994ರಲ್ಲಿ `ಕಾಗಜ್ ಹೈ ಪೈರಹನ್` ಹೆಸರಿನಲ್ಲಿ ಪ್ರಕಟವಾಯಿತು.   ಬಾಲ್ಯದಿಂದ  ವೃದ್ಧಾಪ್ಯದವರೆಗಿನ ಸಂಗತಿಗಳನ್ನು ಪ್ರಾಮಾಣಿಕವಾಗಿ ಬರಹಗಳಲ್ಲಿ ಅವರು ತೆರೆದಿಟ್ಟಿದ್ದಾರೆ.

ಮತ್ತೊಬ್ಬ ಉರ್ದು ಸಾಹಿತಿ ಸಾದತ್ ಹಸನ್ ಮಂಟೋನ ಸಮಕಾಲೀನರಾದ ಇಸ್ಮತ್ ಮಂಟೋನ ಆತ್ಮೀಯ ಗೆಳತಿಯಾಗಿದ್ದರು. ಮಂಟೊ, ಕ್ರಿಷನ್ ಚಂದರ್ ಮತ್ತು ರಾಜಿಂದರ್ ಸಿಂಗ್ ಬೇಡಿಯ ಜೊತೆಗೆ ಇಸ್ಮತ್ ಉರ್ದು ಸಣ್ಣ ಕಥಾ ಸಾಹಿತ್ಯದ ನಾಲ್ಕನೇ ಆಧಾರ ಸ್ತಂಭವಾಗಿದ್ದರು. ಮಹಿಳೆಯರು, ಅದರಲ್ಲೂ ಮುಸಲ್ಮಾನ ಮಹಿಳೆಯರು ಮನೆಯಿಂದಲೇ ಹೊರಗೆ ಬರಬಾರದು ಎಂದಿದ್ದ ಸಮಯದಲ್ಲಿ ಎಲ್ಲವನ್ನೂ ಧಿಕ್ಕರಿಸಿ ಬರಹಗಾರಳಾಗಲು ಹೊರಟಂಥ ಬಂಡಾಯಗಾರ್ತಿ ಆಕೆ. ಇಸ್ಮತ್ ಚುಗ್ತಾಯ್ ಚಿಕ್ಕ ಹುಡುಗಿಯಾಗಿದ್ದಾಗಲೇ ಆಕೆಯ ಅಣ್ಣ ಮಿರ್ಜಾ ಅಜೀಮ್ ಬೇಗ್ ಚುಗ್ತಾಯ್ ಖ್ಯಾತ ಲೇಖಕನಾಗಿದ್ದ. ಆತನೇ ಅವರ ಮೊದಲು ಗುರು ಮತ್ತು ಮಾರ್ಗದರ್ಶಿ. ಥಾಮಸ್ ಹಾರ್ಡಿಯ ಕೃತಿಗಳ ಜೊತೆಗೆ ಹಿಜಾಬ್ ಇಮ್ತಿಯಾಜ್ ಅಲಿ, ಮಜ್ನೂನ್ ಗೋರಖ್ಪುರಿ ಮತ್ತು ನಿಯಾಜ್ ಫತೇಪುರಿಯವರ ಕೃತಿಗಳನ್ನು ಓದಿದ್ದರು ಅವರು. ಅದಕ್ಕೂ ಮೊದಲು ಯಾರಿಗೂ ತಿಳಿಯದಂತೆ ಗೋಪ್ಯವಾಗಿ ಪ್ರೇಮದ ಕತೆಗಳನ್ನು ಅವರು ಬರೆಯುತ್ತಿದ್ದರು. ಹೆಣ್ಣಾಗಿ ಬರೆಯುವಂಥ `ಅಪರಾಧ` ಮಾಡುತ್ತಿದ್ದುದರಿಂದ ಸಿಕ್ಕಿಹಾಕಿಕೊಂಡರೆ ಶಿಕ್ಷಿಸುವರೆಂಬ ಭಯವಿತ್ತು. ದಾಸ್ತೋವ್ಸ್ಕಿ, ಡಿಕನ್ಸ್, ಟಾಲ್ಸ್ಟಾಯ್, ಸೋಮರ್ಸೆಟ್ ಮಾಮ್, ಚೆಕೋವ್, ಹೆನ್ರಿ ಮುಂತಾದ ಲೇಖಕರು ಅವರ ಮೆಚ್ಚಿನ ಲೇಖಕರಾಗಿದ್ದರು. ` ಹೆನ್ರಿಯಿಂದಲೇ ಕತೆ ಬರೆಯುವುದನ್ನು ಕಲಿತೆ` ಎಂದು ಅವರೇ ಹೇಳಿಕೊಂಡಿದ್ದಾರೆ. ಮುನ್ಷಿ ಪ್ರೇಮ್ಚಂದ್ ಉರ್ದು -ಹಿಂದಿ ಲೇಖಕರಲ್ಲಿ ಆಕೆಗೆ ಪ್ರಿಯವಾದವರು. ನಂತರ ಅವರು ಗಾಂಧಿಯ ಕೃತಿಗಳನ್ನೂ ಮೆಚ್ಚುಗೆಯಿಂದ ಓದತೊಡಗಿದರು. ಕಾಲೇಜಿನಲ್ಲಿ ಗ್ರೀಕ್ ನಾಟಕಗಳನ್ನು, ಶೇಕ್ಸ್ಪಿಯರ್ ನಾಟಕಗಳನ್ನು, ಇಬ್ಸೆನ್ ಮತ್ತು ಬರ್ನಾಡ್ ಶಾರವರ ನಾಟಕಗಳನ್ನು ಅತ್ಯಂತ ಆಸಕ್ತಿಯಿಂದ ಓದಿದರು.
                ಶಾಲೆಗೆ ಹೋಗಿ ಓದಬೇಕೆಂಬ ಬಯಕೆ ಅವರಿಗೆ ಎಷ್ಟಿತ್ತೆಂದರೆ, ಅವರಿಗೆ ಹದಿನೈದು ವರ್ಷವಾಗಿ ಒಂಭತ್ತನೇ ತರಗತಿಯಲ್ಲಿದ್ದಾಗ ಆಕೆಗೆ ಮದುವೆಮಾಡಬೇಕೆನ್ನುವ ಸಿದ್ಧತೆಯನ್ನು ತಂದೆತಾಯಿಗಳು ಮಾಡುತ್ತಿದ್ದರು. ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಚಿನಿವಾರರು ಮತ್ತು ದರ್ಜಿಗಳು ಬೀಡುಬಿಟ್ಟಿದ್ದರು. ಆಕೆಯೊಂದಿಗೆ ಅಂತಹ ವಿಷಯಗಳನ್ನು ಮಾತನಾಡುವಂತಹ ಅವಿವಾಹಿತ ಅಕ್ಕ ತಂಗಿಯರೂ ಇರಲಿಲ್ಲ. ಕೊನೆಗೆ ವಿಷಯ ತಿಳಿದ  ಅವರು ಮದುವೆಯಾದಲ್ಲಿ ತನ್ನ ಓದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲವೆಂದು ತನಗೆ ಮದುವೆಯೇ ಬೇಡವೆಂದು ಹಠ ಹಿಡಿದರು. `ನಿನಗೆ ಹುಚ್ಚು ಹಿಡಿದಿದೆ` ಎಂದು ತಾಯಿ ಬೈದರು. `ನೀನು ಗಂಡನ ಮನೆಗೆ ಹೋದಮೇಲೆ ಓದಬಹುದಲ್ಲಾ?` ಎಂದರು ತಂದೆ. `ಗಂಡನ ಮನೆಯಲ್ಲಿ ಓದಿದ ಹಾಗೆ! ಗಂಡನೂ ನನ್ನ ತಂದೆಯಂಥವನೇ ಆದಲ್ಲಿ ಪ್ರತಿ ವರ್ಷ ಒಂದು ಮಗುವನ್ನು ಹೆತ್ತುಕೊಡಲೆ? ಅಥವಾ ಪರೀಕ್ಷೆಗಳನ್ನು ಬರೆಯಲೆ?` ಎಂದು ಮನಸ್ಸಿನಲ್ಲೇ ಗೊಣಗಿ ಮದುವೆ ನಿಲ್ಲಿಸಲು ಉಪಾಯವೊಂದನ್ನು ಹುಡುಕಿದರು. ಅವರ ಮಾವನ ಮಗನೊಬ್ಬ ಬಾಂಬೆಯಲ್ಲಿ ವೈದ್ಯ ಪದವಿ ಓದುತ್ತಿದ್ದ. ಇಸ್ಮತ್ ಅವನಿಗೊಂದು ಪತ್ರ ಬರೆದು `ನನ್ನನ್ನು ಈಗ ನೀನೇ ಪಾರು ಮಾಡಬೇಕು. ಅದಕ್ಕಾಗಿ ನೀನು ಏನೂ ಮಾಡಬೇಕಾಗಿಲ್ಲ. ನೀನು ನಿಮ್ಮ ತಂದೆಗೆ ನನ್ನನ್ನು ಕಂಡರೆ ಇಷ್ಟ ಹಾಗೂ ನನ್ನನ್ನು ಮದುವೆಯಾಗುತ್ತೇನೆ ಎಂದು ಪತ್ರ ಬರೆದುಬಿಡು. ಇದು ಮಾತ್ರ ನನ್ನ ಮದುವೆಯನ್ನು ನಿಲ್ಲಿಸಬಲ್ಲದು. ಆಮೇಲೆ ನೀನು ಹೆದರಿಕೊಳ್ಳುವ ಅವಶ್ಯಕತೆಯೇನೂ ಇಲ್ಲ. ನಾನು  ಪ್ರಮಾಣಮಾಡಿ ಹೇಳುತ್ತೇನೆ ನಿನ್ನನ್ನು ಮದುವೆಯಾಗುವುದಿಲ್ಲವೆಂದು. ದಯವಿಟ್ಟು ಮದುವೆಯನ್ನು ನಿಲ್ಲಿಸಿಬಿಡು` ಎಂದು ಕೋರಿದ್ದರು. ಆತ ಅದೇ ರೀತಿ ಮಾಡಿದ. ಕೆಲದಿನಗಳ ನಂತರ ಅವಳ ಮಾವ ಓಡಿಬಂದು, `ನೋಡಿಲ್ಲಿ, ನಮ್ಮ ಶೌಕತ್ಗೆ ಇಸ್ಮತ್ ಕಂಡರೆ ಇಷ್ಟವಂತೆ. ನೀನು ಅವಳನ್ನು ಹೊರಗಿನವನಿಗೆ ಮದುವೆ ಮಾಡಿಕೊಡುವುದು ಬೇಡ. ಬೇಕಾದರೆ ಪತ್ರ ನೋಡು` ಎಂದು ತೋರಿಸಿದ. ಇಸ್ಮತ್ ಅಮ್ಮನ ಮುಖವೂ ಸಂತೋಷದಿಂದ ಊರಗಲವಾಯಿತು. ದರ್ಜಿಗಳು, ಚಿನಿವಾರರು ಕತ್ತರಿಸಿದ ಬಟ್ಟೆ ಹಾಗೂ ಕರಗಿಸಿದ ಚಿನ್ನ ಬಿಟ್ಟು ಹೊರಟರು. ಮದುವೆ  ಅನಿರ್ದಿಷ್ಟಕಾಲ ಮುಂದೆ ಹೋಗಿತ್ತು.
ಇಪ್ಪತ್ತ ಮೂರು ವರ್ಷಗಳಾದಾಗ ತಾನೂ ಬರೆಯಬಲ್ಲೆ ಎಂದು ಅವರಿಗೆ ಆತ್ಮವಿಶ್ವಾಸ ಬಂದಾಗ ತಮ್ಮ ಮೊಟ್ಟಮೊದಲ ಕತೆ `ಫಾಸದಿ` ಬರೆದರು. ಅದು ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ `ಸಾಖಿ`ಯಲ್ಲಿ ಪ್ರಕಟವಾಯಿತು. ಅದನ್ನು ಓದಿದವರು ಅಜೀಮ್ ಬೇಗ ಚುಗ್ತಾಯ್ (ಆಕೆಯ ಸಾಹಿತಿ ಅಣ್ಣ) ಯಾವಾಗ ತನ್ನ ಹೆಸರು ಬದಲಿಸಿಕೊಂಡು ಬರೆಯಲು ಶುರುಮಾಡಿದ ಎಂದು ಅಚ್ಚರಿಗೊಂಡರಂತೆ! 1936ರಲ್ಲಿ  ಪದವಿ ಶಿಕ್ಷಣಕ್ಕೆ ಓದುತ್ತಿರುವಾಗಲೇ  ಅವರು ಲಕ್ನೋದಲ್ಲಿನ  ಪ್ರಗತಿಪರ ಬರಹಗಾರರ ಸಂಘದ ಸಭೆಗೆ ಹಾಜರಾದರು. ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿದ್ದ ಸಂಘ ಭಾರತಕ್ಕೂ ಬಂದಿತ್ತು ಹಾಗೂ ಅದು ಫಯಾಜ್ ಅಹ್ಮದ್ ಫಯಾಜ್, ಸಜ್ಜದ್ ಜಹೀರ್, ಕೈಫಿ ಆಜ್ಮಿಯಂಥವರನ್ನು ಆಕರ್ಷಿಸಿತ್ತು. ಇವರೆಲ್ಲಾ ಉರ್ದು ಸಾಹಿತ್ಯ ಹೊಸ ದಿಕ್ಕಿನೆಡೆ ಸಾಗಲು ಸಂಪೂರ್ಣ ಹೊಸ ಮೌಲ್ಯಗಳನ್ನು ಹುಟ್ಟುಹಾಕುತ್ತಿದ್ದರು. ಅಲ್ಲಿ ಭೇಟಿಯಾದ ರಶೀದ್ ಜಾನ್ ಎಂಬ ವೈದ್ಯೆ ಮತ್ತು ಲೇಖಕಿ ಇಸ್ಮತ್ ಮೇಲೆ ಬೀರಿದ ಪ್ರಭಾವ  ಅಗಾಧವಾದುದು.
ಪದವಿ ಶಿಕ್ಷಣದ ನಂತರ ಶಿಕ್ಷಣ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದರು. ಎರಡೂ ಪದವಿಗಳನ್ನು ಪಡೆದ ಮೊಟ್ಟ ಮೊದಲ ಭಾರತದ ಮುಸಲ್ಮಾನ ಮಹಿಳೆ ಅವರು. ನಂತರ ಬಾಂಬೆಯಲ್ಲಿನ ಮಹಿಳಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಶಾಲೆಗಳ ನಿರೀಕ್ಷಕರೂ ಆಗಿದ್ದರು. ಕೆಲವು ಸಮಯ ಆಲಿಘರ್ನಲ್ಲಿ ಕೆಲಸ ಮಾಡಿದರು. ಅಲ್ಲಿ ಮಾಸ್ಟರ್ಸ್ಪದವಿ ಮಾಡುತ್ತಿದ್ದ ಶಾಹೀದ್ ಲತೀಫ್ನನ್ನು ಭೇಟಿಯಾದರು. ಗೆಳೆತನ ಪ್ರೇಮವಾಗಿ ಅವರಿಬ್ಬರೂ 1942ರಲ್ಲಿ ಮದುವೆಯಾದರು. ಅವರೇ  ಬರೆದುಕೊಂಡಿರುವಂತೆ ಶಾಹೀದ್ನನ್ನು ಮದುವೆಯಾಗುವ ಮುನ್ನ, `ಮತ್ತೊಮ್ಮೆ ಸರಿಯಾಗಿ ಆಲೋಚಿಸು, ನಾನು ಸ್ವತಂತ್ರ ಆಲೋಚನೆಯುಳ್ಳವಳು, ನಾನು ನಿನಗೆ ಸರಿಹೊಂದುತ್ತೇನೆಯೋ ಇಲ್ಲವೋ` ಎಂದೂ ಹೇಳಿದ್ದರು. ತಮ್ಮ ಮದುವೆಯ ಬಗ್ಗೆ ಹೇಳುತ್ತ ಅವರು `ಗಂಡು ಹೆಣ್ಣನ್ನು ದೇವತೆ ಎನ್ನುವಂತೆ ಪೂಜಿಸುತ್ತಾನೆ, ಪ್ರೀತಿಸುತ್ತಾನೆ, ಗೌರವಿಸುತ್ತಾನೆ ಆದರೆ ಆಕೆಯನ್ನು ತನ್ನ ಸಮಾನಳು ಎಂದು ಸ್ವೀಕರಿಸಲು ಮಾತ್ರ ಸಿದ್ಧವಿರುವುದಿಲ್ಲ. ಒಬ್ಬ ಅನಕ್ಷರಸ್ಥ ಹೆಣ್ಣಿನೊಂದಿಗೆ ಆತ ಹೇಗೆ ಗೆಳೆಯನಾಗಿರಲು ಸಾಧ್ಯ? ಆದರೆ ಗೆಳೆತನಕ್ಕೆ ಬೇಕಾಗಿರುವುದು ಪ್ರೀತಿ ಪ್ರೇಮಗಳು, ಶಿಕ್ಷಣವಲ್ಲ. ಶಾಹೀದ್ ನನ್ನನ್ನು ತನ್ನ ಸರಿಸಮಳೆಂದು ಪರಿಗಣಿಸಿದ. ಅದಕ್ಕಾಗಿಯೇ ನಮ್ಮ ದಾಂಪತ್ಯ ಜೀವನ ಸುಖಕರವಾಗಿತ್ತು` ಎಂದಿದ್ದಾರೆ. ಮದುವೆಗೆ ಎರಡು ತಿಂಗಳಿದ್ದಾಗಲೇ  ಅವರ ಕತೆ `ಲಿಹಾಫ್  (ಕೌದಿ) ಪ್ರಕಟವಾಯಿತು ಹಾಗೂ ಅದು ವಿವಾದವನ್ನೂ ಹುಟ್ಟುಹಾಕಿತು. ಇಂದಿಗೂ ಉಪಖಂಡದಲ್ಲಿ ಹೆಣ್ಣೊಬ್ಬಳು ಬರೆದ ಅತ್ಯಂತ ವಿವಾದಾಸ್ಪದ ವಿಷಯದ ಕತೆಯೆಂದು ಇದು ಪರಿಗಣಿಸಲ್ಪಟ್ಟಿದೆ.  ನವಾಬನ ಪತ್ನಿಯೊಬ್ಬಳು ತನ್ನ ಗಂಡ ತನಗಾಗಿ ಸಮಯವನ್ನೇ ಕೊಡದಿದ್ದಾಗ ತನ್ನ ಸಹಜ ಲೈಂಗಿಕ ತೃಷೆಯ ತೃಪ್ತಿಯನ್ನು ಹಾಗೂ ಭಾವನಾತ್ಮಕ ಸಾಂತ್ವನವನ್ನು ತನ್ನ ಸೇವಕಿಯಲ್ಲಿ  ಕಂಡುಕೊಳ್ಳುತ್ತಾಳೆ. ವಯಸ್ಕ ಹೆಣ್ಣು ನಿರೂಪಕಿ ವಹಿಸಬೇಕಾದ ಎಚ್ಚರಿಕೆ ಮತ್ತು ನಿಗ್ರಹವನ್ನು ತೊಡಗಿಸಲು ಕತೆಯ ನಿರೂಪಣೆಯನ್ನು ಒಂಭತ್ತು ವರ್ಷದ ಹುಡುಗಿಯ ದೃಷ್ಟಿಯಿಂದ ಮಾಡಲಾಗಿದೆ.
ಇಸ್ಮತ್ 1941ರಲ್ಲಿ `ಲಿಹಾಫ್ಕತೆಯನ್ನು ಪ್ರಕಟಣೆಗೆ ಕಳುಹಿಸಿದಾಗ ಪತ್ರಿಕೆಯ ಸಂಪಾದಕ ಅಂತಹ ಕತೆಯನ್ನು ಹೆಣ್ಣೊಬ್ಬಳು ಬರೆಯಲು ಸಾಧ್ಯವೇ ಇಲ್ಲ, ಯಾರೋ ಗಂಡಸರು ಹೆಣ್ಣಿನ ಹೆಸರಿನಲ್ಲಿ ಬರೆದಿದ್ದಾರೆ ಎಂದೇ ನಂಬಿದ್ದ. ಕತೆ ಪ್ರಕಟವಾದ ನಂತರ ಓದುಗರು ಮತ್ತು ವಿಮರ್ಶಕರು ಕೃತಿ ಮತ್ತು ಕೃತಿಕಾರಳನ್ನು ಖಂಡಿಸಿದರು. ಕತೆ ಅಶ್ಲೀಲವೆಂದು ನ್ಯಾಯಾಲಯದಲ್ಲಿ  ದಾವೆ ಹೂಡಲಾಯಿತು. ಲಾಹೋರಿನ ನ್ಯಾಯಾಲಯದಲ್ಲಿ ನಾಲ್ಕು ವರ್ಷ ವಿಚಾರಣೆ ನಡೆಯಿತು ಆದರೆ ಕೃತಿಯಲ್ಲಿ ಅಶ್ಲೀಲದ `ನಾಲ್ಕಕ್ಷರಸಿಗದಿದ್ದುದರಿಂದ ದಾವೆ ವಜಾ ಆಯಿತು. ಅದೇ ಸಮಯದಲ್ಲಿ ಸಾದತ್ ಹಸನ್ ಮಂಟೋನ ಕತೆಗಳ ಮೇಲೂ  ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಎಷ್ಟೋ ಸಾರಿ ಇಬ್ಬರೂ ಜೊತೆಯಲ್ಲಿಯೇ ಲಾಹೋರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಲಾಹೋರಿನ ನ್ಯಾಯಾಲಯದಲ್ಲಿ  ನಡೆದ ವಿಚಾರಣೆಯ ಸನ್ನಿವೇಶಗಳನ್ನು ಇಸ್ಮತ್ ದಾಖಲಿಸಿದ್ದಾರೆ. ಕತೆ ಅಶ್ಲೀಲವೆಂದು ಒಪ್ಪಿಕೊಂಡು ಕ್ಷಮಾಪಣೆ ಕೇಳಿಕೊಂಡುಬಿಡಿ, ಜುಲ್ಮಾನೆ ಹಣ ತಾವೇ ಕಟ್ಟುತ್ತೇವೆಂದು ಆಕೆಯ ಹಲವಾರು `ಹಿತೈಷಿ` ಗಳು ಆಕೆಗೆ ಸಲಹೆ ಕೊಟ್ಟಿದ್ದರು. ತನ್ನ ಕತೆ ಅಶ್ಲೀಲವೆಂದು ರುಜುವಾತಾದಲ್ಲಿ  ತಾನು ಶಿಕ್ಷೆ ಅನುಭವಿಸುತ್ತೇನೆಯೇ ಹೊರತು ಕ್ಷಮಾಪಣೆ ಕೇಳುವುದಿಲ್ಲವೆಂದಿದ್ದರು ಇಸ್ಮತ್. ಕತೆಯಲ್ಲಿನ `ಪ್ರೇಮಿಗಳುಮತ್ತು `ಸೆಳೆದುಕೊಳ್ಳುವುದುಎನ್ನುವ ಪದಗಳು ಅಶ್ಲೀಲವೆಂದು ದಾವೆ ಹೂಡಿದ್ದಾತ ಅದನ್ನು ಸಮರ್ಥಿಸಿಕೊಳ್ಳಲಾಗದೆ ಕೇಸು ಸೋತ. ವಿಚಾರಣೆ ಮುಗಿದ ನಂತರ ನ್ಯಾಯಾಧೀಶರು ಆಕೆಯನ್ನು ತಮ್ಮ ಕೋಣೆಗೆ ಕರೆಸಿಕೊಂಡು, `ನಿಮ್ಮ ಬಹುಪಾಲು ಎಲ್ಲಾ ಕತೆಗಳನ್ನು ಓದಿದ್ದೇನೆ. ಅವೇನೂ ಅಶ್ಲೀಲವಲ್ಲ. ಲಿಹಾಫ್ ಸಹ ಅಶ್ಲೀಲವಲ್ಲ` ಎಂದಿದ್ದರು.
`ಕಲಿಯಾಂಮತ್ತು `ಕೋಟೇನ್ಅವರ ಆರಂಭದ ಕಥಾ ಸಂಕಲನಗಳು. ಅದಾದನಂತರ ಹಲವಾರು ಸಂಕಲನಗಳು ಪ್ರಕಟವಾದವು- `ಏಕ್ ಬಾತ್` , `ಚುಯ್ ಮುಯ್` , `ದೋ ಹಾತ್` , `ಖರೀದ್ ಲೋ` , `ಏಕ್ ಕತ್ರಾಯೆ ಖೂನ್ಮತ್ತು `ಥೋಡಿ ಸಿ ಪಾಗಲ್` . `ತೇರ್ಹಿ ಲಖೀರ್ಮತ್ತು `ಸೌದಾಯೆಎಂಬ ಕಾದಂಬರಿಗಳು ಮತ್ತು `ಜಿದ್ದಿ` , `ದಿಲ್ ಕಿ ದುನಿಯಾಹಾಗೂ `ಮಾಸೂಮಾಎಂಬ ಕಿರುಕಾದಂಬರಿಗಳೂ ಪ್ರಕಟವಾದವು. ಇದರ ಜೊತೆಗೆ  ಹಲವಾರು ಪ್ರಬಂಧಗಳು ಮತ್ತು ಲೇಖನಗಳೂ ಪ್ರಕಟವಾದವು. ತನ್ನ ಪತಿಯೊಂದಿಗೆ ಹನ್ನೆರಡು ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಬರೆದರು ಮತ್ತು ಸ್ವತಂತ್ರವಾಗಿ ಐದು ಚಲನಚಿತ್ರಗಳನ್ನು ಸಹ ನಿರ್ಮಿಸಿದರು. ಶಶಿಕಪೂರ್ `ಜುನೂನ್` ಸಿನೆಮಾದಲ್ಲಿ ಒಂದು ಪಾತ್ರವನ್ನು ಸಹ ನಿರ್ವಹಿಸಿದ್ದರು.
ಇಸ್ಮತ್ ಪ್ರಜ್ಞಾಪೂರ್ವಕವಲ್ಲದ ಮತ್ತು ಅಘೋಷಿತ ಸ್ತ್ರೀವಾದಿ. ಭಾರತೀಯ ಮುಸಲ್ಮಾನ ಮಹಿಳೆಯರಿಗೆ ಆಗ ಓದಲು ಸಿಗುತ್ತಿದ್ದ ಪುಸ್ತಕವೆಂದರೆ 1905ರಲ್ಲಿ ಪ್ರಕಟವಾಗಿದ್ದ ಮುಸಲ್ಮಾನ ಸಂಸ್ಕೃತಿಯ ಬಗ್ಗೆ, ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ವಿವರಗಳಿದ್ದ ಎರಡು ಸಂಪುಟಗಳ `ಗೂದರ್ ಲಾಲ್ಎಂಬ ಕಾದಂಬರಿ. ಅದರ ಕರ್ತೃ ವಲೀದಾ ಅಫ್ಜಲ್ ಅಲಿ, ಅಂದರೆ `ಅಫ್ಜಲ್ ಅಲಿಯ ತಾಯಿಎಂದರ್ಥ. ಆಗ ಹೆಣ್ಣೊಬ್ಬಳು ಕೃತಿಕಾರಳಾಗಿದ್ದರೂ ಆಕೆ ತನ್ನ ಹೆಸರನ್ನು ಹಾಕಿಕೊಳ್ಳುವಂತಿರಲಿಲ್ಲ!
ಇಸ್ಮತ್ಗೆ ಇಬ್ಬರು ಪುತ್ರಿಯರಿದ್ದು ಪತಿಯ ಮರಣಾನಂತರ ಬಾಂಬೆಯಲ್ಲೇ ವಾಸಿಸುತ್ತಿದ್ದರು. ಇಸ್ಮತ್ ಚುಗ್ತಾಯ್ 1991 ಅಕ್ಟೋಬರ್ 24ರಂದು ಕೊನೆಯುಸಿರೆಳೆದರು.
3 comments:

Sowmya said...

Thanks for sharing! Itz good article indeed!

Anonymous said...

good article

Anonymous said...


ಒಳ್ಳೆಯ ಪರಿಚಯ...ಒಳ್ಳೆಯ ಲೇಖನ...ನಿಮಗೂ ಇದನ್ನ ಫೇಸ್ ಬುಕ್ ಲ್ಲಿ ಶೇರ್ ಮಾಡಿ ಓದುವುದಕ್ಕೆ ಸಾಧ್ಯವಾಗಿಸಿದ ಶ್ರೀದೇವಿ ಕಳಸದ ಇಬ್ಬರಿಗೂ ಧನ್ಯವಾದಗಳು- ಶ್ವೇತಾ ಹೊಸಬಾಳೆ