ಮಂಗಳವಾರ, ಆಗಸ್ಟ್ 27, 2013

ಮುಲ್ಲಾ ನಸ್ರುದ್ದೀನ್ ಕತೆಗಳ 19ನೇ ಕಂತು

ಆಗಸ್ಟ್ ತಿಂಗಳ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 19ನೇ ಕಂತು




ಪತ್ನಿಯ ಸಲಹೆ
ಒಂದು ದಿನ ಸಂಜೆ ನಸ್ರುದ್ದೀನ್ ತನ್ನ ಮನೆಯ ವೆರಾಂಡಾದಲ್ಲಿ ಕೈ ಕೈ ಹಿಸುಕಿಕೊಳ್ಳುತ್ತಾ ಅತೀವ ಯೋಚನೆಯಿಂದ ಚಡಪಡಿಸುತ್ತ ಅತ್ತಿಂದಿತ್ತ ಓಡಾಡುತ್ತಿದ್ದ. ಅದನ್ನು ನೋಡಿದ ಅವನ ಪತ್ನಿ ಏನಾಯಿತೆಂದು ಕೇಳಿದಳು.
`ನಾನು ಪಕ್ಕದ ಮನೆಯವನ ಹತ್ತಿರ ನೂರು ದಿನಾರ್ ಸಾಲ ತೆಗೆದುಕೊಂಡಿದ್ದೆ ಹಾಗೂ ತಿಂಗಳ ಕೊನೆಯೊಳಗೆ ಹಿಂದಿರುಗಿಸುತ್ತೇನೆಂದು ಹೇಳಿದ್ದೆ. ನಾಳೆಯೇ ತಿಂಗಳ ಕೊನೆಯದಿನ. ನನ್ನ ಬಳಿ ಹಣವಿಲ್ಲ ಏನು ಮಾಡುವುದು?' ಎಂದ ನಸ್ರುದ್ದೀನ್ ಕೈ ಕೈ ಹಿಸುಕಿಕೊಳ್ಳುತ್ತಲೇ.
`ಮಾಡಲು ಏನಿದೆ? ಹೋಗಿ ಆತನಿಗೆ ಹೇಳು ಹಣ ಸದ್ಯಕ್ಕೆ ಹಿಂದಿರುಗಿಸಲು ಆಗುವುದಿಲ್ಲ' ಎಂದಳು.
`ಒಳ್ಳೆಯ ಸಲಹೆ' ಎಂದುಕೊಂಡು ನಸ್ರುದ್ದೀನ್ ಹೋಗಿ ಪಕ್ಕದಮನೆಯವನ ಮನೆಗೆ ಹೋಗಿ ಅದೇ ರೀತಿ ಹೇಳಿಬಂದ.
ಆತ ಹಿಂದಿರುಗಿದಾಗ ಆತನ ಮುಖದಲ್ಲಿನ ಚಿಂತೆ, ಆತಂಕ ಎಲ್ಲಾ ಮಾಯವಾಗಿತ್ತು. `ಆತ ಏನು ಹೇಳಿದ?' ಎಂದು ಕೇಳಿದಳು ಪತ್ನಿ.
`ಹೇಳುವುದೇನು! ಆತ ಈಗ ಕೈ ಕೈ ಹಿಸುಕಿಕೊಳ್ಳುತ್ತಾ ಅತೀವ ಯೋಚನೆಯಿಂದ ಚಡಪಡಿಸುತ್ತ ತನ್ನ ಮನೆಯ ವೆರಾಂಡಾದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾನೆ' ಎಂದ ನಸ್ರುದ್ದೀನ್.

ಮಂಚದ ಕೆಳಗಿನ ದೆವ್ವ
ಒಂದು ದಿನ ನಸ್ರುದ್ದೀನ್ ಮಾರುಕಟ್ಟೆಯಲ್ಲಿ ಹೋಗುತ್ತಿದ್ದಾಗ ಆತನ ಹಳೆಯ ಗೆಳೆಯ ಸಿಕ್ಕ. ಆತನ ಮುಖದಲ್ಲಿ ಏನೋ ಚಿಂತೆಯಿತ್ತು. ನಸ್ರುದ್ದೀನ್ ತನ್ನ ಹಳೆಯ ಗೆಳೆಯನನ್ನು ಮಾತನಾಡಿಸಿ, ಆತನನ್ನು ಕಾಡುತ್ತಿರುವ ಚಿಂತೆ ಏನೆಂದು ಕೇಳಿದ.
`ಏನೆಂದು ಹೇಳಲಿ? ನನಗೆ ದಿನಾಲೂ ದುಃಸ್ವಪ್ನವೊಂದು ಕಾಡುತ್ತಿದೆ. ರಾತ್ರಿಯೆಲ್ಲಾ ನನ್ನ ಮಂಚದ ಕೆಳಗೆ ದೆವ್ವವೊಂದು ಅಡಗಿರುವಂತೆ ಕನಸು ಬೀಳುತ್ತದೆ. ನಾನು ಎಚ್ಚರಗೊಂಡು ಮಂಚದ ಕೆಳಗೆ ಇಣುಕಿ ನೋಡುತ್ತೇನೆ, ಆದರೆ ಅಲ್ಲಿ ಏನೂ ಇರುವುದಿಲ್ಲ. ಆನಂತರ ನನಗೆ ನಿದ್ದೆಯೇ ಬರುವುದಿಲ್ಲ. ಈಗಷ್ಟೇ ವೈದ್ಯರನ್ನು ಕಂಡು ಬಂದೆ. ಅವರು ಅದನ್ನು ವಾಸಿ ಮಾಡಲು ನೂರು ದಿನಾರ್ ಕೇಳುತ್ತಿದ್ದಾರೆ. ಏನು ಮಾಡುವುದೋ ತೋಚುತ್ತಿಲ್ಲ' ಎಂದ ನಸ್ರುದ್ದೀನನ ಗೆಳೆಯ.
`ಏನು? ನೂರು ದಿನಾರ್!' ಉದ್ಗರಿಸಿದ ನಸ್ರುದ್ದಿನ್, `ನನಗೆ ಐದು ದಿನಾರ್ ಕೊಡು ನಿನ್ನ ಸಮಸ್ಯೆಗೆ ಪರಿಹಾರ ಹೇಳುತ್ತೇನೆ' ಎಂದ.
ಆತ ತಕ್ಷಣ ತನ್ನ ಕಿಸೆಯಿಂದ ಐದು ದಿನಾರ್ ಕೊಟ್ಟು ಪರಿಹಾರ ಕೂಡಲೇ ಹೇಳುವಂತೆ ಕೇಳಿಕೊಂಡ.
`ನಿನ್ನ ಸಮಸ್ಯೆಗೆ ಪರಿಹಾರ ಬಹಳ ಸುಲಭ. ನಿನ್ನ ಮಂಚದ ಕಾಲುಗಳನ್ನು ಕತ್ತರಿಸಿಬಿಡು' ಎಂದ ನಸ್ರುದ್ದೀನ್ ಐದು ದಿನಾರ್ ತನ್ನ ಕಿಸೆಯಲ್ಲಿರಿಸಿಕೊಳ್ಳುತ್ತ.

ರಾಜ
ಮುಲ್ಲಾ ನಸ್ರುದ್ದೀನ್ ಯಾವುದೋ ಗಾಢ ಆಲೋಚನೆಯಲ್ಲಿ ಮುಳುಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅರಮನೆಯ ಬಳಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ. ವ್ಯಕ್ತಿ ಸಿಟ್ಟಿನಿಂದ ಜೋರಾಗಿ ನಸ್ರುದ್ದೀನನನ್ನು ಗದರಿಕೊಂಡು,
`ನನಗೇ ಡಿಕ್ಕಿ ಹೊಡೆಯುತ್ತೀಯ! ನಾನ್ಯಾರು ಗೊತ್ತೇನು? ನಾನು ಮಹಾರಾಜರ ಸಲಹೆಗಾರ!' ಎಂದು ಅರಚಿದ.
`ಹೋ, ಒಳ್ಳೆಯದು' ಎಂದ ನಸ್ರುದ್ದೀನ್, `ನಾನ್ಯಾರು ನಿಮಗೆ ಗೊತ್ತೇನು? ನಾನು ಮಹಾರಾಜ' ಎಂದ.
`ನೀನ್ಯಾವ ಸೀಮೆಯ ರಾಜ? ಯಾವ ರಾಜ್ಯವನ್ನು ಆಳುತ್ತಿದ್ದೀಯ?' ಕೇಳಿದ ವ್ಯಕ್ತಿ ಅಣಕದಿಂದ.
`ನಾನು ನನ್ನನ್ನೇ ಆಳಿಕೊಳ್ಳುತ್ತೇನೆ. ನನ್ನ ಭಾವನೆಗಳೇ ನನ್ನ ರಾಜ್ಯ. ನಾನು ನಿನ್ನಂತೆ ಕಂಡಕಂಡವರ ಮೇಲೆಲ್ಲಾ ಸಿಟ್ಟಿನಿಂದ ಅರಚಾಡುವುದಿಲ್ಲ' ಎಂದ ಮುಲ್ಲಾ ನಸ್ರುದ್ದೀನ್.
ವ್ಯಕ್ತಿಗೆ ತಕ್ಷಣ ತನ್ನ ತಪ್ಪಿನ ಅರಿವಾಯಿತು. ಮುಲ್ಲಾನ ಕ್ಷಮೆ ಕೋರಿ ಅಲ್ಲಿಂದ ಮುಂದೆ ಹೊರಟ.

ಪತ್ನಿಯೊಂದಿಗೆ ಜಗಳ
ಒಂದು ದಿನ ಮುಲ್ಲಾ ತನ್ನ ಪತ್ನಿಯೊಂದಿಗೆ ಜಗಳವಾಡಿದ, ಜೋರಾಗಿ ಕಿರುಚಾಡಿ ಬಯ್ಯತೊಡಗಿದ. ಅವನ ಕಿರುಚಾಟ ತಡೆಯಲಾರದೆ ಆಕೆ ಪಕ್ಕದ ಮನೆಗೆ ಓಡಿಹೋದಳು. ಮುಲ್ಲಾ ಬಿಡಲಿಲ್ಲ. ಅವಳನ್ನು ಹಿಂಬಾಲಿಸಿ ಪಕ್ಕದ ಮನೆಗೆ ಹೋಗಿ ಅಲ್ಲಿಯೂ ಆಕೆಯನ್ನು ಬಯ್ಯತೊಡಗಿದ.
ಪಕ್ಕದ ಮನೆಯವರು ಇಬ್ಬರಿಗೂ ಸಾಂತ್ವನ ಹೇಳಿ ಅವರನ್ನು ಕೂಡ್ರಿಸಿ ರೀತಿ ಗಂಡ ಹೆಂಡತಿ ಜಗಳವಾಡಬಾರದೆಂದು ತಿಳಿ ಹೇಳಿ ಇಬ್ಬರಿಗೂ ಕಾಫಿ, ತಿಂಡಿತಿನಿಸು ಕೊಟ್ಟು ಕಳುಹಿಸಿದರು.
ಕೆಲದಿನಗಳ ನಂತರ ಯಾವುದೋ ವಿಷಯಕ್ಕೆ ಮತ್ತೆ ಇಬ್ಬರಿಗೂ ಜಗಳ ಶುರುವಾಯಿತು. ಎಂದಿನಂತೆ ಮುಲ್ಲಾ ಜೋರಾಗಿ ಕಿರುಚಿ ಬಯ್ಯತೊಡಗಿದ. ಬಾರಿಯೂ ಆಕೆ ಅವನ ಕಿರುಚಾಟ ತಡೆಯಲಾರದೆ ಹೊರಗೆ ಹೊರಡಲು ಬಾಗಿಲು ತೆಗೆದಳು.
` ಸಾರಿ ಎದುರುಮನೆಗೆ ಹೋಗು. ಅವನದು ಹೋಟೆಲ್ ಇದೆ. ಒಳ್ಳೆ ಬಿರಿಯಾನಿ ಮಾಡುತ್ತಾನೆ' ಎಂದ ಮುಲ್ಲಾ ನಸ್ರುದ್ದೀನ್ ಆಕೆಗೆ ಕೇಳಿಸುವಂತೆ.

ಯಜಮಾನನ ಕೊರತೆ
ಒಬ್ಬ ಕೊಬ್ಬಿದ ಸಾಹುಕಾರ ತನಗೇ ಎಂದು ಒಂದು ಅತ್ಯಂತ ದುಬಾರಿಯ ಶವಪೆಟ್ಟಿಗೆ ಸಿದ್ಧಪಡಿಸಿಕೊಂಡು ಅದನ್ನು ಕಂಡವರಿಗೆಲ್ಲಾ ತೋರಿಸಿ ತನ್ನ ಸಿರಿವಂತಿಕೆಯ ದರ್ಪವನ್ನು ಪ್ರದರ್ಶಿಸುತ್ತಿದ್ದ. ಊರವರೆಲ್ಲಾ ಅದನ್ನು ನೋಡಿ ಎಷ್ಟೊಂದು ವೈಭವವಾಗಿದೆಯೆಂದು ಬಾಯಿಯ ಮೇಲೆ ಬೆರಳಿಟ್ಟುಕೊಂಡು ಹೋಗುತ್ತಿದ್ದರು. ಊರಿನವರೆಲ್ಲಾ ಬಂದಿದ್ದರೂ ಮುಲ್ಲಾ ನಸ್ರುದ್ದೀನ್ ಅದನ್ನು ನೋಡಲು ಬಂದಿರಲೇ ಇಲ್ಲ. ಒಂದು ದಿನ ಸಾಹುಕಾರ ನಸ್ರುದ್ದೀನನಿಗೆ ಹೇಳಿ ಕಳುಹಿಸಿ ಆತ ಬಂದನಂತರ ಅದರ ವೈಭವವನ್ನು ಮುಲ್ಲಾನಿಗೆ ತೋರಿಸಿ ಅದನ್ನು ಹೊಗಳತೊಡಗಿದ.
`ಹೇಗಿದೆ ಮುಲ್ಲಾ, ನನ್ನ ಶವಪೆಟ್ಟಿಗೆಗೆ ಬಳಸಿರುವ ಮರ? ಅದರ ಕುಸುರಿ ಕೆಲಸ ನೋಡು! ಕುಸುರಿಯವರನ್ನು ನಾನು ಪರ್ಷಿಯಾದಿಂದ ಕರೆಸಿದ್ದೆ' ಎಂದ ಸಾಹುಕಾರ. ಹೌದೆಂಬಂತೆ ತಲೆಯಾಡಿಸಿದ ಮುಲ್ಲಾ.
`ಅದರೊಳಗಿನ ಮೆತ್ತೆ ನೋಡು. ಅತ್ಯಂತ ದುಬಾರಿಯ ಮೆತ್ತೆ ಹಾಕಿಸಿದ್ದೇನೆ. ನಿನಗೇನನ್ನಿಸುತ್ತದೆ? ಶವಪೆಟ್ಟಿಗೆಗೆ ಏನಾದರೂ ಕೊರತೆಯಿದೆ ಎಂದು ನಿನಗನ್ನಿಸುತ್ತದೆಯೆ? ಮುಲ್ಲಾನನ್ನು ಕೇಳಿದ ಸಾಹುಕಾರ.
`ಹೌದು. ಅದಕ್ಕೇನೋ ಕೊರತೆ ಇರುವಂತೆ ನನಗನ್ನಿಸುತ್ತಿದೆ' ಎಂದು ಹೇಳಿದ ಮುಲ್ಲಾ ಪೆಟ್ಟಿಗೆಯನ್ನು ಒಂದು ಸುತ್ತುಹಾಕಿ ನೋಡಿ, `ಹಾ.. ಈಗ ತಿಳಿಯಿತು. ಅದಕ್ಕಿರುವ ಕೊರತೆ ಏನೆಂದರೆ, ಅದರಲ್ಲಿ ಕೊನೆಯದಾಗಿ ಮಲಗಬೇಕಾದ ವ್ಯಕ್ತಿಯದು' ಎಂದ.

ಮನಸ್ಸಿನ ಓದು
ಒಂದು ಅಡ್ಡರಸ್ತೆಯ ಬಳಿ ಮುಲ್ಲಾ ನಸ್ರುದ್ದೀನ್ ಹೋಗುತ್ತಿದ್ದಾಗ ಊರಿಗೆ ಹೊಸದಾಗಿ ಬಂದ ಒಬ್ಬಾತ ಕುದುರೆಯ ಮೇಲೆ ಬಂದು,
`ಮುಲ್ಲಾ, ಅರಮನೆಗೆ ಹೋಗುವ ದಾರಿ ಯಾವುದು?' ಎಂದು ಕೇಳಿದ.
`ನಾನು ಮುಲ್ಲಾ ಎಂಬುದು ನಿಮಗೆ ಹೇಗೆ ತಿಳಿಯಿತು?' ಕುತೂಹಲದಿಂದ ಕೇಳಿದ ಮುಲ್ಲಾ.
ವ್ಯಕ್ತಿ ವಿದ್ವಾಂಸರಂತೆ ಕಾಣುವವರನ್ನು ಮುಲ್ಲಾ ಎಂದು ಕರೆಯುವ ಅಭ್ಯಾಸವಿತ್ತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, `ಹೋ. ನಾನು ಮನುಷ್ಯರ ಮನಸ್ಸನ್ನು ಓದಬಲ್ಲೆ. ಅದರಿಂದಲೇ ನನಗೆ ನೀವು ಮುಲ್ಲಾ ಎಂಬುದು ತಿಳಿಯಿತು' ಎಂದ.
`ಹೌದೆ. ನಿಮ್ಮನ್ನು ಭೇಟಿಯಾದದ್ದು ತುಂಬಾ ಸಂತೋಷ. ಅರಮನೆಗೆ ದಾರಿ ಯಾವುದು ಎಂಬುದು ನನ್ನ ಮನಸ್ಸಿನಲ್ಲಿದೆ. ಅದನ್ನು ಓದಿಕೊಂಡು ದಾರಿಕಂಡುಕೊಳ್ಳಿ' ಎಂದ ಮುಲ್ಲಾ ನಸ್ರುದ್ದೀನ್.
  
ಲೆಕ್ಕದ ಪುಸ್ತಕ
ಊರಿನ ಕಂದಾಯ ಸಂಗ್ರಹಿಸುವವನು ಭ್ರಷ್ಟನಾಗಿದ್ದ. ಸರಿಯಾಗಿ ಲೆಕ್ಕ ಬರೆದುಕೊಳ್ಳದೆ ಬಹಳಷ್ಟು ಹಣವನ್ನು ಗುಳುಂ ಮಾಡಿದ್ದ. ವಿಷಯ ತಿಳಿದ ಸುಲ್ತಾನ ಕಂದಾಯ ಸಂಗ್ರಹಿಸುವವನನ್ನು ಕರೆದು ಲೆಕ್ಕ ನೀಡುವಂತೆ ಹೇಳಿದ. ಲೆಕ್ಕಗಳನ್ನು ತಪ್ಪು ಬರೆದಿದ್ದರಿಂದ ಶಿಕ್ಷೆಯಾಗಿ ಲೆಕ್ಕದ ಪುಸ್ತಕಗಳನ್ನೆಲ್ಲಾ ಅಲ್ಲೇ ತಿನ್ನುವಂತೆ ಆದೇಶಿಸಿದ. ವಿಷಯ ಊರಿಗೆಲ್ಲಾ ಹರಡಿತು. ನಸ್ರುದ್ದೀನನಿಗೆ ಕಂದಾಯ ಸಂಗ್ರಹಿಸುವ ಕೆಲಸ ಕೊಟ್ಟರು. ಸುಲ್ತಾನ ನೀಡಿದ್ದ ಶಿಕ್ಷೆ ಅವನಿಗೂ ತಿಳಿದಿತ್ತು. ಕೆಲದಿನಗಳ ನಂತರ ಸುಲ್ತಾನ ನಸ್ರುದ್ದೀನನಿಗೆ ಬರಲು ಹೇಳಿ ಕಂದಾಯದ ಲೆಕ್ಕ ನೀಡುವಂತೆ ತಿಳಿಸಿದ. ನಸ್ರುದ್ದೀನ್ ತನ್ನ ಚೀಲದಿಂದ ಲೆಕ್ಕದ ಪುಸ್ತಕಗಳನ್ನು ತೆಗೆದು ಸುಲ್ತಾನನ ಎದುರಿಗೆ ಇಟ್ಟ. ಎಲ್ಲರೂ ಅಚ್ಚರಿಯಿಂದ ನೋಡಿದರು, ಏಕೆಂದರೆ ಆತ ತನ್ನ ಲೆಕ್ಕವನ್ನು ರೊಟ್ಟಿಗಳ ಮೇಲೆ ಬರೆದಿದ್ದ!

ತಪ್ಪು ಬದಿ
ಮುಲ್ಲಾ ನಸ್ರುದ್ದೀನ್ ಊರಿನವರಿಗೆ ಒಂದು ಪ್ರವಚನ ನೀಡುತ್ತಿದ್ದ. ಪ್ರವಚನದ ಮಧ್ಯೆ ಒಂದು ಉದಾಹರಣೆ ನೀಡುತ್ತಾ, `ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ' ಎಂದ. ಜನರೆಲ್ಲಾ ಅತ್ಯಂತ ಭಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಆದರೆ ಒಬ್ಬ ಕಿಡಿಗೇಡಿ ಹುಡುಗ ಪರಿಶೀಲಿಸೋಣವೆಂದು ತಕ್ಷಣವೇ ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆಸೆದ. ಟಪಕ್ಕನೆ ಬೆಣ್ಣೆ ಹಚ್ಚಿದ ಬದಿ ಕೆಳಕ್ಕೆ ಬಿದ್ದು ಮಣ್ಣಾಯಿತು. ಅದನ್ನು ತೆಗೆದುಕೊಂಡು ಮುಲ್ಲಾನಿಗೆ ತೋರಿಸಿ `ನೋಡಿ, ನೀವು ಹೇಳಿದ್ದು ಸುಳ್ಳು' ಎಂದ. ಮುಲ್ಲಾ ಗಡ್ಡ ನೀವಿಕೊಂಡು ಮುಗುಳ್ನಗುತ್ತಾ, `ಇಲ್ಲಾ ನಾನು ಹೇಳಿದ್ದು ಸರಿಯಿದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ' ಎಂದ.

ಅರೆ ಹುಚ್ಚ
ಹಿಟ್ಟಿನ ಗಿರಣಿಗೆ ಗೋಧಿ ತೆಗೆದುಕೊಂಡು ಹೋಗಿದ್ದ ನಸ್ರುದ್ದೀನ್ ಜನ ಕಡೆ ಕಡೆ ನೋಡುವಾಗ ಅವರಿಗರಿವಿಲ್ಲದಂತೆ ಅವರ ಚೀಲದಿಂದ ಒಂದೊಂದು ಹಿಡಿ ಗೋಧಿ ಕದ್ದು ತನ್ನ ಚೀಲಕ್ಕೆ ಹಾಕಿಕೊಳ್ಳುತ್ತಿದ್ದ. ಅದನ್ನು ನೋಡಿದ ಹಿಟ್ಟಿನ ಗಿರಣಿಯಾತ, `ಏನು ಮಾಡುತ್ತಿದ್ದೀಯೆ? ನಿನಗೆ ನಾಚಿಕೆಯಾಗುವುದಿಲ್ಲವೆ?' ಎಂದು ಕೇಳಿದ.
`ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ಅರೆಹುಚ್ಚ' ಎಂದ ನಸ್ರುದ್ದೀನ್.
`ಹೌದೆ? ಹಾಗಾದರೆ ನಿನ್ನ ಚೀಲದಿಂದ ಗೋಧಿ ತೆಗೆದು ಬೇರೆಯವರ ಚೀಲಕ್ಕೆ ಹಾಕಬೇಕೆಂದು ನಿನಗನ್ನಿಸುವುದಿಲ್ಲವೆ?' ಎಂದ ಹಿಟ್ಟಿನ ಗಿರಣಿಯಾತ.
`ನಾನು ಹೇಳಿದೆನೆಲ್ಲಾ.... ನಾನು ಅರೆಹುಚ್ಚ ಎಂದು. ನಾನು ಪೂರ್ತಿ ಹುಚ್ಚನಲ್ಲ' ಎಂದ ನಸ್ರುದ್ದೀನ್.
                                                                                                                             j.balakrishna@gmail.com