Monday, August 12, 2013

ಮತ್ತೊಂದಿಷ್ಟು ಕಪ್ಪು ಕಾವ್ಯ

 
 ಅಸಹನೀಯ ಮೌನ

ಕಾಡುಗಳೆಲ್ಲ ಕಡಿದುಹಾಕಿದರು
ಇಲ್ಲಿದ್ದ, ನಾನು ಹುಟ್ಟಿದ್ದ ಮನೆಯನ್ನೂ ಕೆಡವಿದರು
ನನ್ನ ಬಾಲ್ಯದ ದಿನಗಳ ಭೂಮಿಯಲ್ಲಿ
ಮೊಂಡು ಪೊದೆಗಳು ಉಳಿದಿದ್ದವು.
ನನ್ನ ವಯಸ್ಸಿನ ಕೊನೆಯ ದಿನಗಳಲ್ಲಿ
ನನ್ನ ಮಗನ ಜೊತೆಗೆ ನಿಂತು
ನನ್ನ ಮನೆಯನ್ನು ಕಟ್ಟತೊಡಗಿದೆ
ಪ್ರೀತಿಯ ಶಬ್ದಗಳ ರಚಿಸಿದೆ,
ಕೈತೋಟದ ಮೌನ ಸೌಂದರ್ಯ ನೆಟ್ಟೆ
ಕಳೆದ ದಿನಗಳ ಅಂಧಕಾರದ ಕೋಣೆಯೊಳಗೆ
ಸೀಮೆಎಣ್ಣೆಯ ದೀಪ ಹೊತ್ತಿಸಿದೆ.
ನನ್ನ ಮಗನಿಗೆ ಎಂಥದೋ ಚಡಪಡಿಕೆ
ಪೊದೆಯಾವೃತ ಭೂಮಿಯ ಮೇಲಿನ
ನನ್ನ ಪುನರ್ರಚನೆ
ಗತದ ಶಬ್ದಗಳ ಚಿತ್ರ
ನನ್ನ ಕತೆ ಮುಗಿಸಿದೆ,
ಮಗನಿಗೆ ಹೇಳಿದೆ ನಾವೇಕೆ
ನನ್ನ ಅಪ್ಪ ಉತ್ತ, ಅನ್ನ ಪಡೆದ ಜಾಗ
ತೊರೆದು ಮೇಲೆ ಉತ್ತರಕ್ಕೆ
ಕೊಳಗೇರಿಗೆ ಹೋಗಬೇಕಾಯಿತೆಂದು.
ಕ್ಷಣ ಅದೇಕೋ
ನನ್ನ ಮತ್ತು ನನ್ನ ಮಗನ ನಡುವೆ
ಅಸಹನೀಯ ಮೌನ.
                                      -ಜೇಮ್ಸ್ ಸಿ. ಕಿಲ್ಗೋರ್
 

 ಧೂಳಿನ ಪಾತ್ರೆ

ಇವು ನಮ್ಮವೇ ಹೊಲಗಳು
ಅರಳುವ ಹೂಗಳೆಲ್ಲಿ ಹೋದವು!
ಪುಟಿಯುವ ಕಾಳಿನ ರಾಶಿ?
ಈಗ ಗಾಳಿಯೊಂದಿಗೆ ಭೂಮಿಯೂ ಚಲಿಸುತ್ತಿದೆ.

ಬೋಳು ಮರಗಳಲ್ಲಿ
ಹಕ್ಕಿಗಳೀಗ ಗೂಡುಕಟ್ಟುವುದಿಲ್ಲ
ಹಣ್ಣು ತೊನೆಯುವುದಿಲ್ಲ
ಬಿಸಿಲಿಗೆ ಕರಕಲಾಗಿವೆ ಹಸಿರು ರೆಂಬೆಗಳು.

ಧೂಳು ಹಾರುತ್ತದೆ, ಭಾರಕ್ಕೆ ಕುಸಿಯುತ್ತದೆ
ಒಣಗಿದ ನಮ್ಮ ಬಾಯಿಗಳ ತುಂಬುತ್ತದೆ.
ಧೂಳು ಚಲಿಸುತ್ತದೆ
ಮೇಲೆ, ಕೆಳಗೆ ಎಲ್ಲೆಂದರಲ್ಲಿ

ನಮ್ಮ ಎಚ್ಚರದಲ್ಲಿ, ಧ್ಯಾನದಲ್ಲಿ
ನಮ್ಮ ಕನಸುಗಳಲ್ಲಿ.
                                 -ರಾಬರ್ಟ್ . ಡೇವೀಸ್


ಕಪ್ಪು ಸಂಹಿತೆ

ಭರವಸೆಯೆಂಬುದು ನಲುಗಿದ ಕಾಂಡ
ಬಿಗಿ ಮುಷ್ಠಿಯಲಿ.
ಭರವಸೆಯೆಂಬುದು ಕಲ್ಲಿನ ಹೊಡೆತಕ್ಕೆ
ಕತ್ತರಿಸಿದ ಹಕ್ಕಿಯ ರೆಕ್ಕೆ.
ಭರವಸೆಯೆಂಬುದು
ವ್ಯಾಕರಣ ಛಿದ್ರತೆಯ ಪದರಾಶಿಯಲ್ಲೊಂದು ಪದವಷ್ಟೆ-
ಗಾಳಿಯೊಂದಿಗೆ ಪಿಸುಗುಟ್ಟಿದ ಪಿಸುಮಾತಷ್ಟೆ.
ನಲವತ್ತು ಎಕರೆಯ ಸ್ವಂತ ಭೂಮಿ
ಉಳಲೊಂದು ಜೊತೆ ಎತ್ತಿನ ಕನಸು
ನನ್ನದೇ ಪುಟ್ಟ ಮನೆಯೊಂದು
ದುಡಿದ ದೇಹವ ಸಂತೈಸುವ ರಜಾದಿನಗಳು ಬೇಡವೆ?
ನನ್ನ ಮಕ್ಕಳಿಗೊಂದು ಸೂರು, ಅವರಿಗೆ ಅವರದೇ ಹೆಸರು
ಮುಂದೊಂದು ದಿನ ಅಂಗಳದಲ್ಲಾಡುವ ಮೊಮ್ಮಕ್ಕಳು....
ಭರವಸೆಯೆಂಬುದು ಗದ್ಗತ ಗಂಟಲ ದನಿಯಾಡದ ಹಾಡು.
ನನಗೂ ಭರವಸೆಯ ಹಾಡೂ ನೀಡು
ಅದನ್ನು ಹಾಡಲೊಂದು ಜಗವನ್ನೂ ಸಹ
ವಿಶ್ವಾಸದ ಹಾಡೊಂದು ನೀಡು ನನಗೆ
ಜೊತೆಗೆ ಅದನ್ನು ನಂಬುವ ಜನರನ್ನೂ ಸಹ
ಕರುಣೆಯ ಹಾಡೊಂದು ನೀಡು
ಅದರಂತೆ ಬದುಕಲು ದೇಶವೊಂದನ್ನೂ ಸಹ
ಭರವಸೆಯ ಹಾಗೂ ಪ್ರೀತಿಯ ಹಾಡೊಂದು ನೀಡು
ಅದನ್ನು ಕೇಳಲು ಕಂದು ಹುಡುಗಿಯೊಬ್ಬಳ ಹೃದಯವನ್ನೂ ಸಹ.
                                                                                 -ಪೌಲಿ ಮುರ್ರೆ

ಇಪ್ಪತ್ತು ಸಂಪುಟಗಳ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

ಇತ್ತೀಚೆಗೆ,
ನಾಯಿಯನ್ನು ವಾಕ್ ಕರೆದೊಯ್ಯುವಾಗ,
ನಾನು ಬಸ್ಸಿಗೆ ಓಡುವಾಗ ಗಾಳಿ ಮಾಡುವ
ವಿಚಿತ್ರ ಸದ್ದು ಆಲಿಸುವಾಗ
ಭೂಮಿ ಧುತ್ತನೆ ಬಾಯ್ದೆರೆದು
ನನ್ನನ್ನೇ ನುಂಗುವ ಪ್ರಕ್ರಿಯೆಗೆ ಹೊಂದಿಕೊಂಡುಬಿಟ್ಟಿದ್ದೇನೆ.

ಮಾತು ಅಲ್ಲಿಗೆ ಬಂದಿದೆ.

ಈಗ ಪ್ರತಿ ರಾತ್ರಿ ತಾರೆಗಳ ಎಣಿಸುತ್ತೇನೆ,
ಪ್ರತಿ ರಾತ್ರಿ ಅದೇ ಸಂಖ್ಯೆ.
ಯಾವುದಾದರೂ ರಾತ್ರಿ ಕಾಣದಿದ್ದಲ್ಲಿ ತಾರೆಗಳು
ಎಣಿಸುತ್ತೇನೆ ಅವುಗಳಿದ್ದ ಖಾಲಿ ಜಾಗಗಳ.

ಈಗ ಯಾರೂ ಹಾಡುವುದಿಲ್ಲ.

ನಿನ್ನೆ ರಾತ್ರಿ ನನ್ನ ಮಗಳ ಕೋಣೆಯಿಂದ
ಪಿಸುಮಾತ ಆಲಿಸಿದೆ, ಯಾರೊಂದಿಗೋ ಮಾತನಾಡುತ್ತಿದ್ದಳು.
ಸದ್ದಾಗದಂತೆ ಹೋಗಿ ಕೋಣೆಯ ಬಾಗಿಲು ತೆರೆದಾಗ
ಅವಳ ಹೊರತು ಮತ್ತಾರೂ ಇರಲಿಲ್ಲ.....
ಮೊಣಕಾಲೂರಿದ ಆಕೆ ದಿಟ್ಟಿಸುತ್ತಿದ್ದಳು

ಆಕೆಯದೇ ಬಿಗಿಮುಷ್ಠಿಯ ಕೈಗಳೆಡೆಗೆ.

                                                    -ಲೆರಾಯ್ ಜೋನ್ಸ್
ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com

No comments: