ಈ ವಾರದ "ಸುಧಾ" ವಾರಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
ಚಿತ್ರ-ಲೇಖನ:
ಡಾ. ಜೆ.ಬಾಲಕೃಷ್ಣ
ಇಮೇಲ್:
j.balakrishna@gmail.com
ಈ ವರ್ಷದ ಜುಲೈನಲ್ಲಿ 33ನೇ ಒಲಿಂಪಿಯಾಡ್‍ನ ಒಲಿಂಪಿಕ್
ಕ್ರೀಡೆಗಳು ಪ್ರಾರಂಭವಾಗಲಿವೆ. ಇಂದು ಜಗತ್ತಿನಲ್ಲೇ ಒಲಿಂಪಿಕ್ ಕ್ರೀಡೆಗಳು ಅತ್ಯಂತ ಮಹತ್ವದ ಕ್ರೀಡೆಗಳಾಗಿದ್ದು
ಜಗತ್ತಿನ ಬಹುಪಾಲು ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಈ ಕ್ರೀಡೆಗಳು ದೇಶಗಳ ನಡುವಿನ
ಭ್ರಾತೃತ್ವದ ಸಂಕೇತವೂ ಹೌದು. ಒಲಿಂಪಿಕ್‍ನಲ್ಲಿ ಪದಕ ಗೆಲ್ಲುವುದು ಕ್ರೀಡಾ ಕ್ಷೇತ್ರದಲ್ಲಿಯೇ ಒಂದು
ಸರ್ವಶ್ರೇಷ್ಠ ಸಾಧನೆ ಎಂದು ಭಾವಿಸಲಾಗುತ್ತದೆ. ಅದಕ್ಕಾಗಿ ಕ್ರೀಡಾಪಟುಗಳು ನಿರಂತರ ಅಭ್ಯಾಸ ಹಾಗೂ
ಸಾಧನೆಯಲ್ಲಿ ತೊಡಗಿರುತ್ತಾರೆ. ಭಾಗವಹಿಸುವ ಪ್ರತಿಯೊಂದು ದೇಶವೂ ತಮ್ಮ ದೇಶಗಳ ಭಾವುಟ ಹಿಡಿದು ಸಂಭ್ರಮಿಸುತ್ತವೆ.
ಚಿನ್ನದ ಪದಕ ಗೆದ್ದ ಕ್ರೀಡಾಪಟುವಿನ ದೇಶದ ರಾಷ್ಟ್ರಗೀತೆಯನ್ನೂ ಸಹ ಬಿತ್ತರಿಸಲಾಗುತ್ತದೆ ಹಾಗೂ ಅದನ್ನು
ಆಯಾ ದೇಶಗಳು ಅಷ್ಟೇ ಸಂತೋಷದಿಂದ ಸಂಭ್ರಮಿಸುತ್ತವೆ. ಗೆದ್ದ ಕ್ರೀಡಾಪಟುಗಳಿಗೆ ಆಯಾ ದೇಶಗಳು ಉದ್ಯೋಗ,
ನಗದು ಬಹುಮಾನ ಇತ್ಯಾದಿಗಳನ್ನು ಕೊಟ್ಟು ಗೌರವಿಸುತ್ತವೆ.
ಆದರೆ ಈ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾದದ್ದು
ಹೇಗೆ? ಆ ಹೆಸರು ಹೇಗೆ ಬಂದಿತು? ಒಲಿಂಪಿಯಾಡ್ ಎಂದರೆ ಏನು?
ಈ ಕ್ರೀಡೆಗಳಿಗೆ
ಒಂದು ಅದ್ಭುತ ಸ್ಥಳ ಚರಿತ್ರೆಯಿದೆ.
*****
ಪ್ರಾಚೀನ ಗ್ರೀಸ್ ದೇಶವನ್ನು ಯೂರೋಪಿಯನ್ ಸಂಸ್ಕೃತಿ
ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳಿಂದಾಗಿ ಯೂರೋಪಿಯನ್ ನಾಗರಿಕತೆಯ ಮೂಲಸೆಲೆಯೆನ್ನುತ್ತಾರೆ. ಪಾಶ್ಚಿಮಾತ್ಯ
ನಾಗರಿಕತೆಯ ಆಧಾರ ತತ್ವಗಳ ಅಭಿವೃದ್ಧಿಗೆ ತತ್ವಶಾಸ್ತ್ರ, ಕಲೆ, ಸಾಹಿತ್ಯ, ಪ್ರಜಾಪ್ರಭುತ್ವ ಮತ್ತು
ವಿಜ್ಞಾನವನ್ನೊಳಗೊಂಡಂತೆ ಹಲವಾರು ಕ್ಷೇತ್ರಗಳ ಬೌದ್ಧಿಕ ಕೊಡುಗೆಯನ್ನು ನೀಡಿದೆ. ಅದೇ ರೀತಿ ಜಗತ್ತಿಗೆ
ಮಹತ್ತರ ಕ್ರೀಡಾ ಕೊಡುಗೆಯನ್ನು ಸಹ ನೀಡಿದೆ. ಇಂದು ಜಗತ್ತಿನ ಅತ್ಯಂತ ಮಹತ್ತರವಾದ ಒಲಿಂಪಿಕ್ ಕ್ರೀಡೆಗಳ
ಮೂಲ ಸಹ ಪ್ರಾಚೀನ ಗ್ರೀಸ್ ಆಗಿದೆ.
ನಾವು ಗ್ರೀಸ್‍ನಲ್ಲಿನ ಒಲಿಂಪಿಕ್ ಕ್ರೀಡೆಗಳ ಜನ್ಮಸ್ಥಳವಾದ
ಒಲಿಂಪಿಯಾಗೆ ಕಾಲಿಟ್ಟಾಗ ಅಲ್ಲಿ ಕಾಣುವುದು ಬರೇ ಕಟ್ಟಡಗಳ, ಶಿಲೆಗಳ ಅವಶೇಷಗಳ ರಾಶಿ. ಎಲ್ಲೆಲ್ಲೂ
ಮುರಿದ ಕಲ್ಲಿನ ಕಂಬಗಳು, ಹಾಗೂ ಕಟ್ಟಡಗಳ ಕಲ್ಲುಗಳು ಇತ್ಯಾದಿ. ಅಲ್ಲಿ ದೊರೆತಿರುವ ಹಲವಾರು ವಸ್ತುಗಳನ್ನು
ಅಲ್ಲಿಯೇ ಇರುವ ಮ್ಯೂಸಿಯಂನಲ್ಲಿ ಇರಿಸಿದ್ದಾರೆ ಹಾಗೂ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಮುಂತಾದ ದೇಶಗಳು
ಈ ಹಿಂದೆ ಅಲ್ಲಿ ಉತ್ಖನನದಲ್ಲಿ ತೊಡಗಿದ್ದು ಅವೂ ಸಹ ಹಲವಾರು ವಸ್ತುಗಳನ್ನು ಕೊಂಡೊಯ್ದು ತಮ್ಮ ದೇಶಗಳ
ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಟ್ಟಿವೆ. ಆ ಅವಶೇಷಗಳ ಮಧ್ಯೆ ನಿಂತಾಗ ಎರಡು ಸಾವಿರಕ್ಕೂ ಹೆಚ್ಚು
ವರ್ಷಗಳ ಹಿಂದೆ ಅಲ್ಲಿ ಸೇರುತ್ತಿದ್ದ ಸಾವಿರಾರು ಜನರ ಉತ್ಸಾಹ, ಪ್ರೋತ್ಸಾಹದ ಕೂಗಾಟ ಇಂದಿಗೂ ನಮಗೆ
ಈಗಲೂ ಕೇಳುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿ ಸುಮಾರು ಎರಡು ಸಾವಿರದ ಏಳುನೂರ ವರ್ಷಗಳ ಹಿಂದೆ ನಿರ್ಮಿಸಿದ
ಹಾಗೂ ನಲವತ್ತು ಸಾವಿರ ಜನ ಕೂಡಬಹುದಾದ ಸ್ಟೇಡಿಯಂ ಈಗಲೂ ಇದೆ (ಸ್ಟೇಡಿಯಂ ಎನ್ನುವುದು ಗ್ರೀಕ್ ಪದ
ಸ್ಟೇಡಿಯಾನ್‍ನ ಲ್ಯಾಟಿನ್ ರೂಪ. ಸ್ಟೇಡಿಯಾನ್ ಎಂದರೆ 600 ಹೆಜ್ಜೆಗಳ ದೂರ). ಅಲ್ಲಿ ಓಟದ ಸ್ಪರ್ಧಿಗಳು
ಓಡಲು ಪ್ರಾರಂಭಿಸುವ ಗೆರೆ (ಅಮೃತಶಿಲೆಯಲ್ಲಿ ಕೊರೆದಿರುವುದು) ಈಗಲೂ ಅದೇ ಸ್ಥಳದಲ್ಲಿಯೇ ಇದೆ. ಅಲ್ಲಿ
ಸುಮಾರು ಎರಡು ಸಾವಿರದ ಏಳುನೂರು ವರ್ಷಗಳ ಹಿಂದೆ ಕ್ರೀಡೆಗಳಿಗಾಗಿ ಸಾವಿರಾರು ಜನ ಉತ್ಸಾಹದಿಂದ ಸೇರಿರುತ್ತಿದ್ದರು,
ಆ ಸ್ಥಳ ಜನಜಂಗುಳಿಯಿಂದ ತುಂಬಿರುತ್ತಿತ್ತು. ಆಲೀವ್ ತೈಲ ಮೈಗೆ ಹಚ್ಚಿಕೊಂಡು ನಗ್ನವಾಗಿ ಅಭ್ಯಾಸ ಮಾಡುವ
ಕ್ರೀಡಾಪಟುಗಳು ಜಿಮ್ನೇಸಿಯಂನಲ್ಲಿ (ಅಂದ ಹಾಗೆ ಜಿಮ್ನೇಸಿಯಂ ಎನ್ನುವುದು ಸಹ ಗ್ರೀಕ್ ಮೂಲದ ಪದ. ಗ್ರೀಕ್
ಭಾಷೆಯಲ್ಲಿ ಜಿಮ್ನೊ ಎಂದರೆ ಬೆತ್ತಲೆ ಎಂದರ್ಥ. ಗ್ರೀಕ್ ಕ್ರೀಡಾಪಟುಗಳು ಬೆತ್ತಲೆಯಾಗಿ ದೈಹಿಕ ವ್ಯಾಯಾಮ
ನಡೆಸುತ್ತಿದ್ದ ಸ್ಥಳ ಜಿಮ್ನೇಸಿಯಾನ್.) ಕಂಡುಬರುತ್ತಿದ್ದರು. ಕ್ರೀಡೆಗಳನ್ನು ನೋಡಲು ರಾಜಮಹಾರಾಜರಿಂದ
ಹಿಡಿದು, ಜನಸಾಮಾನ್ಯರು, ಗುಲಾಮರು ಎಲ್ಲಾ ಬಂದಿರುತ್ತಿದ್ದರು. ಆದರೆ ಅಲ್ಲಿ ನಮ್ಮ ಕೇರಳದ ಅಯ್ಯಪ್ಪನ
ದೇವಾಲಯಕ್ಕೆ ಸಣ್ಣ ಹುಡುಗಿಯರನ್ನು ಬಿಟ್ಟು ಮೈನರೆದ ಮಹಿಳೆಯರನ್ನು ಹೇಗೆ ಬಿಡುವುದಿಲ್ಲವೋ ಹಾಗೆಯೇ
ಒಲಿಂಪಿಯಾದಲ್ಲಿ ಮಹಿಳೆಯರಿಗೆ ವೀಕ್ಷಣೆಗೆ, ಭಾಗವಹಿಸಲು ಅವಕಾಶವಿರಲಿಲ್ಲ. ಮಂದಿರದ `ಪೂಜಾರಿಣಿ'ಗೆ
ಮಾತ್ರ ಪ್ರವೇಶಾವಕಾಶವಿತ್ತು ಹಾಗೂ ಆಕೆಗೆ ಸ್ಟೇಡಿಯಂನಲ್ಲಿ ಪ್ರತ್ಯೇಕ ಆಸನವಿರುತ್ತಿತ್ತು. ಮಹಿಳೆಯರಿಗೆ
ನೋಡಲೂ ಅವಕಾಶವಿರಲಿಲ್ಲ. ಯಾರಾದರೂ ಮಹಿಳೆಯರು ವೀಕ್ಷಕರಾಗಿ ಕದ್ದು ಮುಚ್ಚಿ ಬಂದಲ್ಲಿ ಅವರಿಗೆ ಶಿಕ್ಷೆಯಾಗಿ
ಮರಣದಂಡನೆಯನ್ನೇ (ಕ್ರೋನೋಸ್ ಪರ್ವತದಿಂದ ತಳ್ಳಿ) ನೀಡುತ್ತಿದ್ದರಂತೆ. ಆದರೆ ಒಮ್ಮೆ ಹೋರ್ಡ್ಸ್ ದ್ವೀಪದ
ಫ್ರೆನೀಸ್ ಎಂಬ ಒಲಿಂಪಿಕ್ ವೀರರ ಕುಟುಂಬದಿಂದ ಬಂದಿದ್ದ ಮಹಿಳೆ (ಆಕೆಯ ತಂದೆ, ಸಹೋದರರು, ಮಕ್ಕಳು
ಒಲಿಂಪಿಕ್ ವಿಜೇತರಾಗಿದ್ದರು) ತನ್ನ ಮಗ ಪೀಸಿರ್ಹೋಡಸ್‍ನ ಓಟದ ಸ್ಪರ್ಧೆಯನ್ನು ನೋಡಲೇಬೇಕೆಂದು ಗಂಡಸರ
ವೇಷ ಧರಿಸಿ ಬಂದಿದ್ದಳಂತೆ. ತನ್ನ ಮಗ ಸ್ಪರ್ಧೆಯಲ್ಲಿ ವಿಜೇತನಾದಾಗ ಸಂತೋಷದಿಂದ ತನ್ನ ಮಾರುವೇಷವನ್ನು
ಮರೆತು ಎದ್ದು ಕುಣಿದಾಗ ಆಕೆಯ ಮಾರುವೇಷದ ವಸ್ತ್ರ ಕೆಳಕ್ಕೆ ಬಿದ್ದು ಆಕೆ ಮಹಿಳೆಯೆಂದು ತಿಳಿಯಿತು.
ಆಕೆಯನ್ನು ಬಂಧಿಸಿದರು. ಆದರೆ ಆಕೆಯ ಕುಟುಂಬದವರೆಲ್ಲ ಒಲಿಂಪಿಕ್ ವಿಜೇತರಾದುದರಿಂದ ಆಕೆಗೆ ಮರಣದಂಡನೆ
ವಿಧಿಸದೆ ಎಚ್ಚರಿಕೆ ನೀಡಿ ಬಿಟ್ಟರಂತೆ.
ಒಲಿಂಪಿಕ್ ಕ್ರೀಡೆಗಳು ನಡೆಯುವ ಸಮಯದಲ್ಲಿ ರಾಜ್ಯಗಳ,
ರಾಷ್ಟ್ರಗಳ ನಡುವಿನ ದ್ವೇಷ ಸಾಧನೆಗೂ ಅವಕಾಶವಿರಲಿಲ್ಲ. ಈಗಿನ ಗ್ರೀಸ್ ದೇಶದಂತೆ ಆಗಿನ ಗ್ರೀಸ್ ಒಂದೇ
ರಾಷ್ಟ್ರವಾಗಿರಲಿಲ್ಲ. ಒಂದೊಂದು ಪ್ರದೇಶ ಪ್ರತ್ಯೇಕ ರಾಜ್ಯಗಳಂತೆ ಅವುಗಳದೇ ರಾಜರು, ಸಾಮಂತರನ್ನು
ಹೊಂದಿತ್ತು ಹಾಗೂ ಅವರು ಪರಸ್ಪರ ಕಚ್ಚಾಡುತ್ತ, ಯುದ್ಧಗಳನ್ನು ನಡೆಸುತ್ತಿದ್ದರು. ಆದರೆ ಒಲಿಂಪಿಕ್
ಕ್ರೀಡೆಗಳ ಸಮಯವನ್ನು ಘೋಷಿಸುತ್ತಿದ್ದಂತೆ ಕ್ರೀಡೆಗಳು ಮುಗಿಯುವವರೆಗೆ ಎಲ್ಲರೂ ಯುದ್ಧ ನಿಲ್ಲಿಸಬೇಕಿತ್ತು.
ಏಕೆಂದರೆ ಎಲ್ಲ ರಾಜ್ಯ, ರಾಷ್ಟ್ರಗಳಿಂದ ಕ್ರೀಡಾಪಟುಗಳು, ಆಸಕ್ತರು, `ಕೋಚ್'ಗಳು, `ರೆಫರಿ'ಗಳು ಎಲ್ಲರೂ
ಸುರಕ್ಷಿತವಾಗಿ ಒಲಿಂಪಿಯಾ ತಲುಪಬೇಕಿತ್ತು. ಅಷ್ಟೇ ಅಲ್ಲ, ಆಯಾ ರಾಷ್ಟ್ರಗಳಲ್ಲಿ ಯಾರಿಗಾದರೂ ಅಪರಾಧಿಗಳಿಗೆ
ಮರಣದಂಡನೆ ವಿಧಿಸಿದ್ದರೆ ಅದನ್ನು ಸಹ ಕ್ರೀಡೆಗಳು ಮುಗಿಯುವವರೆಗೆ ಮುಂದೂಡಬೇಕಿತ್ತು. ಕ್ರಿ.ಪೂ.
420ರಲ್ಲಿ ಸ್ಪಾರ್ಟನ್ನರು ಕ್ರೀಡೆಗಳನ್ನು ಘೋಷಿಸಿದ್ದರೂ ಯುದ್ಧ ನಿಲ್ಲಿಸದೇ ಇದ್ದುದರಿಂದ ಅವರಿಗೆ
ಎರಡು ಲಕ್ಷ ಡ್ರಾಚ್ಮಾಗಳ ದಂಡ ವಿಧಿಸಿದ್ದರಂತೆ. ಮತ್ತೊಮ್ಮೆ ಅಲೆಕ್ಸಾಂಡರನ ತಂದೆ ಎರಡನೇ ಫಿಲಿಪ್ಪನ
ಸೈನಿಕರು ಒಲಿಂಪಿಕ್ ಕ್ರೀಡೆಗಳನ್ನು ವೀಕ್ಷಿಸಲು ಹೊರಟಿದ್ದ ಪ್ರಯಾಣಿಕರನ್ನು ದರೋಡೆ ಮಾಡಿದ್ದರಿಂದ
ಆ ಸೈನಿಕ-ಕಳ್ಳರ ರಾಜನಾದ ಎರಡನೇ ಫಿಲಿಪ್ಪನಿಗೆ ದಂಡ ವಿಧಿಸಿದ್ದರಂತೆ.
ಕ್ರಿ.ಪೂ. ಏಳನೇ ಶತಮಾನದಲ್ಲಿ ಪ್ರಾರಂಭವಾದ ಒಲಿಂಪಿಕ್
ಕ್ರೀಡೆಗಳು ಸಾವಿರಕ್ಕೂ ಹೆಚ್ಚು ವರ್ಷಗಳು (ಕ್ರಿ.ಪೂ.776ರಿಂದ ಕ್ರಿ.ಶ.393), ರೋಮನ್ನರು ನಿಲ್ಲಿಸುವವರೆಗೂ
ಒಲಿಂಪಿಯಾಡ್‍ನಂತೆ (ಗ್ರೀಕರ ಪ್ರಕಾರ ಒಲಿಂಪಿಯಾಡ್ ಎಂದರೆ ಎರಡು ಒಲಿಂಪಿಕ್ ಕ್ರೀಡೆಗಳ ನಡುವಿನ ನಾಲ್ಕು
ವರ್ಷಗಳ ಅವಧಿ) ಗ್ರೀಕ್ ನಾಗರಿಕತೆಯ, ಉತ್ಕೃಷ್ಟತೆಯ, ಸಾಮುದಾಯಿಕ ಗ್ರೀಕ್ ನಾಗರಿಕತೆಯ ಮತ್ತು ಸಂಸ್ಕೃತಿಯ
ಅಭಿವ್ಯಕ್ತಿಯಂತೆ ನಡೆದವು. ಗ್ರೀಕರು ತಾವು ರಾಜಕೀಯವಾಗಿ ಪರಸ್ಪರ ಎಷ್ಟೇ ವೈಮನಸ್ಯಗಳನ್ನು ಹೊಂದಿದ್ದರೂ
ಅವರ ಸಾಂಸ್ಕೃತಿಕ ಏಕತೆಯ ರೂಪವಾಗಿದ್ದದ್ದು ಒಲಿಂಪಿಕ್ ಕ್ರೀಡೆಗಳು. ಒಲಿಂಪಿಕ್ ಕ್ರೀಡೆಗಳ ಉಗಮ ಸ್ಥಳವಾದ
ಒಲಿಂಪಿಯಾ ಗ್ರೀಕರ ಮಹಾನ್ ಹಾಗೂ ದೇವರದೇವನಾದ ಜ್ಯೂಸ್‍ನ ಪವಿತ್ರ ಸ್ಥಳ. ಹಾಗಾಗಿ ಒಲಿಂಪಿಕ್ ಕ್ರೀಡೆಗಳು
ಪವಿತ್ರವಾದುವು. ಗ್ರೀಕರಿಗೆ ದೇವರು ಎಂಬುದು ಭಕ್ತಿ ಮತ್ತು ಶ್ರದ್ಧೆಗಿಂತ ಬದುಕಿನ ರೀತಿ ಹಾಗೂ ನಡವಳಿಕೆಗಳಾಗಿದ್ದವು.
ಪ್ರಾಚೀನ ಒಲಿಂಪಿಕ್ ಕ್ರೀಡೆಗಳಿಗೆ ಅವುಗಳದೇ ಚಾರಿತ್ರಿಕ ಹಾಗೂ ಪೌರಾಣಿಕ ಕತೆಗಳಿವೆ. ಅವುಗಳ ಹಿನ್ನೆಲೆಯನ್ನು
ಹಾಗೂ ಅದು ನಡೆದುಬಂದ ಹಾದಿಯನ್ನು ಕೊಂಚ ಗಮನಿಸೋಣ.
****
ಒಲಿಂಪಿಯಾ
ಇರುವುದು ಗ್ರೀಸ್ ದೇಶದ ದಕ್ಷಿಣದಲ್ಲಿನ ಪೆಲೊಪೊನ್ನೆಸಸ್ ಪ್ರದೇಶದ ಎರಡು ನದಿಗಳ (ಆಲ್ಫಿಯಸ್ ಮತ್ತು
ಅದರ ಉಪನದಿ ಕ್ಲಾಡಿಯಸ್) ನಡುವಿನ ಒಂದು ಫಲವತ್ತಾದ ಕಣಿವೆಯಲ್ಲಿ. ಅಲ್ಲಿಂದ ಕೆಲವೇ ಕಿಲೋಮೀಟರ್‍ಗಳ
ದೂರದಲ್ಲಿ ಅಯೋನಿಯನ್ ಸಾಗರವಿದೆ. ಆ ಕಣಿವೆಯ ಒಂದು ಬಗಲಿಗೆ ಕ್ರೋನೋಸ್ ಪರ್ವತವಿದೆ. ಗ್ರೀಕ್ ಪುರಾಣದಲ್ಲಿ
ದೇವತೆಗಳ ಅಧಿಪತಿಯಾದ ಜ್ಯೂಸ್ನ ತಂದೆಯ ಹೆಸರೂ ಕ್ರೋನೋಸ್. ಒಂದು ಐತಿಹ್ಯದಂತೆ ದೇವರುಗಳ ರಾಜ ಯಾರಾಗಬೇಕು
ಎಂದು ತೀರ್ಮಾನಿಸುವ ಮಲ್ಲಯುದ್ಧ ತಂದೆ ಕ್ರೋನೋಸ್ ಹಾಗೂ ಮಗ ಜ್ಯೂಸ್ನ ನಡುವೆ ಒಲಿಂಪಿಯಾದಲ್ಲಿ ನಡೆಯಿತು
ಹಾಗೂ ಆ ಮಲ್ಲಯುದ್ಧವೇ ಒಲಿಂಪಿಕ್ ಕ್ರೀಡೆಗಳಿಗೆ ನಾಂದಿ ಹಾಡಿತು ಎನ್ನುತ್ತಾರೆ. ಜ್ಯೂಸ್ ಮತ್ತು
ಆತನ ಸಹೋದರರ ನಡುವೆ ಓಟದ ಸ್ಪರ್ಧೆ ಸಹ ಏರ್ಪಡಿಸಲಾಯಿತಂತೆ ಹಾಗೂ ಈ ರೀತಿಯ ಸಾಂಪ್ರದಾಯಕ ಹಾಗೂ ಧಾರ್ಮಿಕ
ಸ್ಪರ್ಧೆಗಳ ತಾಣವಾಯಿತು ಒಲಿಂಪಿಯಾ.
01: ಗ್ರೀಕ್
ಪುರಾಣದಲ್ಲಿ ಎಲ್ಲ ದೇವರು ಹಾಗೂ ಮಾನವರ ಅಧಿಪತಿ ದೇವ ಜ್ಯೂಸ್ನ ಪವಿತ್ರ ಸ್ಥಳವಾದ ಒಲಿಂಪಿಯಾದಲ್ಲಿ
2500 ವರ್ಷಗಳ ಹಿಂದೆ ಇದ್ದ ದೇವಾಲಯದ ಇಂದಿನ ಅವಶೇಷಗಳು. ಒಳಚಿತ್ರಗಳು: ಕಂಪ್ಯೂಟರ್ ಕೃತಕ ಬುದ್ಧಿಮತ್ತೆ
ಬಳಸಿ ರೂಪಿಸಿರುವ ಜ್ಯೂಸ್ನ ಮಂದಿರ ಹಾಗೂ ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದ್ದ ಕಲಾವಿದನ
ಕಲ್ಪನೆಯ ಜ್ಯೂಸ್ ದೇವನ ಪ್ರತಿಮೆ.
ಮತ್ತೊಂದು ದಂತಕತೆಯ ಪ್ರಕಾರ ಪಶ್ಚಿಮ ಅರ್ಕೇಡಿಯಾದ
ರಾಜ ಎನೊಮಾಸ್ ತನ್ನ ಸುಂದರ ಮಗಳಾದ ಹಿಪ್ಪೊಡೇಮಿಯಳನ್ನು ವರಿಸಲು ಬರುವವರಿಗೆ ಕುದುರೆ ರಥದ ಸ್ಪರ್ಧೆ
ಏರ್ಪಡಿಸುತ್ತಿದ್ದನಂತೆ. ಅದರಲ್ಲಿ ತನ್ನನ್ನು ಸೋಲಿಸಿದವರಿಗೆ ಮಾತ್ರ ತನ್ನ ಮಗಳನ್ನು ಕೊಡುವುದಾಗಿ
ಹೇಳುತ್ತಿದ್ದ. ರಾಜ ಎನೊಮಾಸ್‍ನನ್ನು ರಥ ಸ್ಪರ್ಧೆಯಲ್ಲಿ ಸೋಲಿಸುವಂಥವರು ಯಾರೂ ಇರಲಿಲ್ಲ. ಸೋತವರನ್ನು
ಕೊಂದು ಅವರ ತಲೆ ಬುರುಡೆಗಳನ್ನು ತನ್ನ ಅರಮನೆಯ ಸುತ್ತ ತೂಗು ಹಾಕುತ್ತಿದ್ದನಂತೆ. ಪೆಲೋಪ್ಸ್ ಎನ್ನುವ
ಯುವಕನೊಬ್ಬ ರಥ ಸಿದ್ಧಪಡಿಸುವವರಿಗೆ ಲಂಚಕೊಟ್ಟು ರಾಜ ಎನೊಮಾಸ್‍ನ ರಥದ ಚಕ್ರಗಳಿಗೆ ಲೋಹದ ಕೀಲುಗಣಿಗಳ
ಬದಲು ಮಣ್ಣಿನ ಕೀಲುಗಣಿಗಳನ್ನು ಇರಿಸುವಂತೆ ಮಾಡಿ ಮೋಸದಿಂದ ಗೆಲ್ಲುತ್ತಾನೆ ಹಾಗೂ ರಾಜನ ರಥ ಚೂರುಚೂರಾಗಿ
ಸಾಯುತ್ತಾನೆ. ಕತೆಯ ಮತ್ತೊಂದು ಆವೃತ್ತಿಯಂತೆ ಪೆಲೊಪ್ಸ್ ಮೋಸದಿಂದ ಗೆಲ್ಲುವುದಿಲ್ಲ, ಬದಲಿಗೆ ಅವನನ್ನು
ಇಷ್ಟಪಡುವ ದೇವರಾದ ಪೊಸೈಡಾನ್ ಅವನಿಗೆ ರೆಕ್ಕೆಗಳ ಕುದುರೆಗಳನ್ನು ನೀಡಿ ಸ್ಪರ್ಧೆಯಲ್ಲಿ ಗೆಲ್ಲುವಂತೆ
ಮಾಡುತ್ತಾನೆ. ಮೊಟ್ಟಮೊದಲ ಕ್ರೀಡಾ ಸ್ಪರ್ಧೆ ಏರ್ಪಡಿಸಿದವನು ಪೆಲೋಪ್ಸ್ ಹಾಗೂ ಅದರ ನಿಯಮಗಳನ್ನು ರೂಪಿಸಿದವನು
ಹರ್ಕ್ಯೂಲಿಸ್ ಎಂದು ಆ ದಂತಕತೆ ಹೇಳುತ್ತದೆ. ಅಷ್ಟೇ ಅಲ್ಲ ಕ್ರೋನೋಸ್ ಪರ್ವತದ ತಪ್ಪಲಲ್ಲಿನ ಆ ಪವಿತ್ರ
ಸ್ಥಳವನ್ನು ಆಲ್ಟಿಸ್ ಎಂದು ಕರೆದ. ಇಂದಿಗೂ ಒಲಿಂಪಿಯಾದ ಆ ಸ್ಥಳವನ್ನು ಆಲ್ಟಿಸ್ ಎಂದೇ ಕರೆಯಲಾಗುತ್ತದೆ.
ಒಲಿಂಪಿಯಾದಲ್ಲಿದ್ದ ಜ್ಯೂಸ್ನ ದೇವಾಲಯದ ಮುಂಭಾಗದ ಮೇಲಿನ `ಪೆಡಿಮೆಂಟ್'ನಲ್ಲಿ ಇದೇ ಕತೆಯನ್ನು ನಿರೂಪಿಸುವ
ಪ್ರತಿಮೆಗಳಿದ್ದು ಅವುಗಳನ್ನು ಅಲ್ಲೇ ಇರುವ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
02: ಜ್ಯೂಸ್ನ
ಮಂದಿರಕ್ಕೂ ಹಳೆಯದಾದದ್ದು ಆತನ ಪತ್ನಿ (ಆಕೆ ಆತನ ಸಹೋದರಿಯೂ ಹೌದು) ಹೇರಾಳ ಮಂದಿರದ ಅವಶೇಷಗಳು. ಇಂದಿಗೂ
ಹೇರಾಳ ಮಂದಿರದ ಮುಂಭಾಗದಲ್ಲಿ ಪ್ರತಿ ನಾಲ್ಕುವರ್ಷಗಳಿಗೊಮ್ಮೆ ಆಧುನಿಕ ಒಲಿಂಪಿಕ್ ಕ್ರೀಡೆಗಳಿಗಾಗಿ
ಸೂರ್ಯನಕಿರಣಗಳಿಂದ `ಪ್ಯಾರಾಬೊಲಾಯ್ಡ್' ಕನ್ನಡಿ ಬಳಸಿ ಒಲಿಂಪಿಕ್ ಜ್ವಾಲೆಯನ್ನು ಹೊತ್ತಿಸಿ ಒಲಿಂಪಿಯಾದಿಂದ
ಒಲಿಂಪಿಕ್ ಕ್ರೀಡೆಗಳು ನಡೆಯುವ ಸ್ಥಳಕ್ಕೆ ಸಾಗಿಸಲಾಗುತ್ತದೆ. ಒಳಚಿತ್ರ: 2020ರ ಟೋಕಿಯೊ ಒಲಿಂಪಿಕ್‍ಗಾಗಿ
ಮಂದಿರದ ಮುಂದೆ ಒಲಿಂಪಿಕ್ ಜ್ವಾಲೆ ಹೊತ್ತಿಸುತ್ತಿರುವುದು.
ಮತ್ತೊಂದು ಕತೆಯ ಪ್ರಕಾರ ದೈವಾಂಶ ಸಂಭೂತ ಮಹಾನ್
ಶೂರ ಹರ್ಕ್ಯೂಲಿಸ್ ಅಥವಾ ಹೆರಾಕ್ಲೆಸ್ ಈ ಕ್ರೀಡೆಗಳನ್ನು ಪ್ರಾರಂಭಿಸಿದ. ತನಗೆ ವಹಿಸಿದ್ದ ಹನ್ನೆರಡು
ಕೆಲಸಗಳ ಜವಾಬ್ದಾರಿಯಲ್ಲಿ ಒಂದನ್ನು ಮುಗಿಸಿದಾಗ ಅಲ್ಲಿ ತನ್ನ ತಂದೆ ಜ್ಯೂಸ್ ದೇವರ ಗೌರವದಲ್ಲಿ ಮೊಟ್ಟ
ಮೊದಲ ಕ್ರೀಡೆಗಳನ್ನು ಆಯೋಜಿಸಿದನಂತೆ. ಹೆರಾಕ್ಲೆಸ್ ಒಂದೇ ಉಸಿರಿನಲ್ಲಿ 600 ಹೆಜ್ಜೆ ಓಡಬಲ್ಲವನಾಗಿದ್ದನಂತೆ.
ಆ 600 ಹೆಜ್ಜೆಗಳೇ ಗ್ರೀಕ್ ಭಾಷೆಯಲ್ಲಿ ಸ್ಟೇಡಿಯಾನ್ ಅಥವಾ 600 ಹೆಜ್ಜೆಗಳ ದೂರ ಎನ್ನುತ್ತಾರೆ. ಅದರಿಂದಲೇ
ಕ್ರೀಡಾಂಗಣಗಳಿಗೆ `ಸ್ಟೇಡಿಯಂ' ಎಂಬ ಹೆಸರು ಬಂದಿದೆ.
ಈ ದಂತಕತೆಗಳು ಏನೇ ಇದ್ದರೂ ಚರಿತ್ರೆ ಹೇಳುವಂತೆ
ಕ್ರಿ.ಪೂ.776ರಲ್ಲಿ ಯುದ್ಧಮಾಡುತ್ತಿದ್ದ ಎಲಿಸ್‍ನ ಹಾಗೂ ಪಕ್ಕದ ಪೀಸಾಗಳ ರಾಜರು ಸಂಧಾನದ ಮೂಲಕ ಯುದ್ಧ
ಅಂತ್ಯಗೊಳಿಸುತ್ತಾರೆ. ತಮ್ಮ ಸಂಧಾನದ ಗೌರವಕ್ಕಾಗಿ ಒಲಿಂಪಿಯಾದಲ್ಲಿ ಓಟದ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ
ಹಾಗೂ ಎಲಿಸ್‍ನ ಕ್ರೋಬಿಯಸ್ ಎನ್ನುವ ವ್ಯಕ್ತಿ ಮೊಟ್ಟಮೊದಲ ವಿಜೇತನೆನ್ನುತ್ತಾರೆ. ಅಂದಿನಿಂದಲೂ ಪ್ರತಿ
ಒಲಿಂಪಿಯಾಡ್‍ನಲ್ಲಿ ಗೆದ್ದ ಸ್ಪರ್ಧಿಗಳ ಹೆಸರುಗಳನ್ನು ದಾಖಲಿಸಿರುವುದನ್ನು ಗ್ರೀಕ್ ಚರಿತ್ರೆಯಲ್ಲಿ
ಕಾಣಬಹುದು. ಇಡೀ ಗ್ರೀಸ್‍ನಲ್ಲಿ ಹಂಚಿಹೋಗಿದ್ದ ಗ್ರೀಕ್ ರಾಜ್ಯ, ಪ್ರದೇಶಗಳು (ಸುಮಾರು ಒಂದು ಸಾವಿರವಿದ್ದುವಂತೆ!)
ವಿವಿಧ ರಾಜಮಹಾರಾಜರ ಆಡಳಿತಗಳನ್ನು ಹೊಂದಿದ್ದರೂ ಅವು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಏಕರೂಪತೆಯನ್ನು
ಹೊಂದಿದ್ದವು. ಅವು ಪರಸ್ಪರ ಕಚ್ಚಾಡುತ್ತಿದ್ದುದರಿಂದ ಅವುಗಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಈ ಕ್ರೀಡೆಗಳದಾಗಿತ್ತು
ಎನ್ನುತ್ತಾರೆ ಚರಿತ್ರಕಾರರು. ಒಲಿಂಪಿಯಾದಲ್ಲಿ ಕ್ರೀಡೆಗಳು ಪ್ರಾರಂಭವಾಗುವ ಒಂದು ಸಾವಿರ ವರ್ಷಗಳ
ಮೊದಲೇ ಮೆಡಿಟರೇನಿಯನ್ ಸಾಗರದಲ್ಲಿನ ಕ್ರೀಟ್ ದ್ವೀಪದಲ್ಲಿದ್ದ ಮಿನೋವನ್ ನಾಗರಿಕತೆಯಲ್ಲಿ `ಹೋರಿ ಕಾಳಗ',
`ಕುಸ್ತಿ' ಮುಂತಾದ ಕ್ರೀಡೆಗಳಿದ್ದವು ಹಾಗೂ ಒಲಿಂಪಿಯಾದ ಕ್ರೀಡೆಗಳು ಅವುಗಳ ಅನುಸರಣೆ ಎನ್ನುತ್ತಾರೆ.
03: ಜಿಮ್ನೇಶಿಯಂನ
ಕಟ್ಟಡದ ಸಾಲು ಕಂಬಗಳು ಹಾಗೂ ಅದಕ್ಕೆ ಹೊಂದಿಕೊಂಡಂತೆ ಕ್ರೀಡಾಪಟುಗಳು ಉಳಿದುಕೊಳ್ಳಲು ನಿರ್ಮಿಸಿದ್ದ
ಕೋಣೆಗಳು
ಒಲಿಂಪಿಯಾದಲ್ಲಿ ಜ್ಯೂಸ್ ದೇವನ ಗೌರವಾರ್ಥವಾಗಿ
ಕ್ರೀಡೆಗಳು ಪ್ರಾರಂಭವಾದನಂತರ ಕ್ರೀಡಾ ಪ್ರಿಯರಾದ ಗ್ರೀಕರು ಅದೇ ರೀತಿಯ ಕ್ರೀಡೆಗಳನ್ನು ಅಪೊಲೊ ದೇವತೆಯ
ಗೌರವಾರ್ಥ ಡೆಲ್ಫಿಯಲ್ಲಿ (ಕ್ರಿ.ಪೂ. 650ರಲ್ಲಿ), ಅಥೀನಾ ದೇವತೆಯ ಗೌರವಾರ್ಥ ಅಥೆನ್ಸ್‍ನಲ್ಲಿ (ಕ್ರಿ.ಪೂ.
566ರಲ್ಲಿ), ಜ್ಯೂಸ್ ದೇವತೆಯ ಗೌರವಾರ್ಥ ನೆಮಿಯಾದಲ್ಲಿ (ಕ್ರಿ.ಪೂ. 573ರಲ್ಲಿ) ಹಾಗೂ ಪಾಸೈಡಾನ್
ದೇವತೆಯ ಗೌರವಾರ್ಥ ಕೊರಿಂಥ್‍ಗಳಲ್ಲಿ (ಕ್ರಿ.ಪೂ. 580ರಲ್ಲಿ) ಸಹ ಕ್ರೀಡೆಗಳನ್ನು ಪ್ರಾರಂಭಿಸುತ್ತಾರೆ.
ಈ ಸ್ಥಳಗಳಲ್ಲಿಯೂ ಬೃಹತ್ ಸ್ಟೇಡಿಯಂಗಳಿವೆ. ಆದರೆ ಅವುಗಳಲ್ಲೆಲ್ಲಾ ಹೆಚ್ಚು ಜನಪ್ರಿಯ ಹಾಗೂ ಪ್ರತಿಷ್ಠಿತವಾಗಿದ್ದುದು
ಒಲಿಂಪಿಯಾದಲ್ಲಿ ನಡೆಯುತ್ತಿದ್ದ ಕ್ರೀಡಾ ಸ್ಪರ್ಧೆಗಳೇ. ಆದರೂ ಸಣ್ಣ ಪ್ರದೇಶವಾಗಿದ್ದ ಪ್ರಾಚೀನ ಗ್ರೀಸ್‍ನಲ್ಲಿ
ಈ ಬೃಹತ್ ಪ್ರಮಾಣದಲ್ಲಿ ಈ ರೀತಿಯ ಐದು ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದರೆಂದರೆ ಅವರ ಕ್ರೀಡಾ
ಮನೋಭಾವವನ್ನು ತೋರಿಸುತ್ತದೆ ಹಾಗೂ ಕ್ರೀಡೆಗಳಲ್ಲಿ ಗೆದ್ದವರಿಗೆ ಉನ್ನತ ಸಾಮಾಜಿಕ ಸ್ಥಾನಮಾನ, ಗೌರವಗಳೂ
ಸಹ ಸಿಗುತ್ತಿತ್ತು. ಕೆಲವು ಸ್ಪರ್ಧಿಗಳೂ ಈ ಎಲ್ಲ ಪಂದ್ಯಗಳಲ್ಲಿ ಗೆಲ್ಲುವ `ಗ್ರ್ಯಾಂಡ್ ಸ್ಲ್ಯಾಮ್'
ವಿಜೇತರೂ ಇರುತ್ತಿದ್ದರು. ಈ ಎಲ್ಲ ವಿಜೇತರಿಗೂ ಸಿಗುತ್ತಿದ್ದ ಪ್ರಶಸ್ತಿ ಆಲೀವ್ ಎಲೆಗಳ ಸಿಂಬೆಯ ಕಿರೀಟ!
ಆ ಎಳೆಯ ರೆಂಬೆಗಳನ್ನು ತಾಯಿತಂದೆ ಜೀವಂತವಿರುವ (ಆ ಕಾಲದಲ್ಲಿ ಅದು ಅಪರೂಪವಂತೆ!) ಬಾಲಕನೊಬ್ಬನಿಂದ
ಒಲಿಂಪಿಯಾದ ಆಲ್ಟಿಸ್‍ನಲ್ಲಿರುವ ಪವಿತ್ರ ಆಲೀವ್ ಮರದಿಂದ ಚಿನ್ನದ ಕತ್ತಿಯಲ್ಲಿ ಕತ್ತರಿಸಿ ತರಲಾಗುತ್ತಿತ್ತು.
ಗೆದ್ದ ಕ್ರೀಡಾಪಟುಗಳು ಪ್ರಖ್ಯಾತರಾಗುತ್ತಿದ್ದರು ಹಾಗೂ ಅವರ ಪ್ರತಿಮೆಗಳನ್ನು ಕೆತ್ತಿ ಅವರ ನಾಡಿನಲ್ಲಿ
ಸ್ಥಾಪಿಸಲಾಗುತ್ತಿತ್ತು. ಸ್ಪರ್ಧೆ ನಡೆಯುವ ಸಮಯದಲ್ಲಿ ಒಲಿಂಪಿಯಾಗೆ ಪ್ರತಿಮೆ ಕೆತ್ತುವ ಶಿಲ್ಪಿಗಳು
ಹಾಗೂ ಗೆದ್ದವರ ಕುರಿತು ಕಾವ್ಯ ರಚಿಸಿ ಹಾಡುವ ಕವಿಗಳು (ಹಣಕ್ಕಾಗಿ) ಸಹ ಹಾಜರಿರುತ್ತಿದ್ದರು. ಗೆದ್ದ
ಕ್ರೀಡಾಪಟುಗಳ ರಾಜ್ಯ ಅಥವಾ ಪ್ರದೇಶದವರು ವಿಜೇತರಿಗೆ ಜೀವನಪರ್ಯಂತ ಉಚಿತ ಊಟದ ವ್ಯವಸ್ಥೆ, ಚಿನ್ನ,
ಜಮೀನು, ಮನೆ ಮುಂತಾದ ಕೊಡುಗೆಗಳನ್ನು ನೀಡುತ್ತಿದ್ದರು. ಅಂಥವರನ್ನು ಊರಿಗೆ ಅತ್ಯಂತ ವಿಜೃಂಭಣೆಯಿಂದ
ಸ್ವಾಗತಿಸಿ ಸಂಭ್ರಮಿಸುತ್ತಿದ್ದರು. ಖ್ಯಾತ ತತ್ವಜ್ಞಾನಿ ಸಾಕ್ರೆಟಿಸ್‍ನಿಗೆ ಮರಣದಂಡನೆ ಶಿಕ್ಷೆ ವಿಧಿಸಿದಾಗ
ಆತನ ಕೊನೆಯ ಆಸೆ ಏನು ಎಂದು ಕೇಳಿದಾಗ, `ಬರೇ ದೇಹ ಬೆಳೆಸಿಕೊಂಡಿರುವ, ಬುದ್ಧಿ ಇಲ್ಲದ ಕ್ರೀಡಾಪಟುಗಳು
ಗೆದ್ದಾಗ ಅವರಿಗೆ ಜೀವನ ಪರ್ಯಂತ ಉಚಿತ ಊಟದ ವ್ಯವಸ್ಥೆ ಮಾಡುತ್ತೀರಾ ಆದರೆ, ನನ್ನಂತ ಬುದ್ಧಿವಂತನಿಗೆ
ಮರಣ ದಂಡನೆ ವಿಧಿಸುತ್ತಿದ್ದೀರಿ. ಅವರು ನಿಮಗೆ ಸಂತೋಷ ಕೊಡುತ್ತಿದ್ದಾರೆ ಎಂದು ಭಾವಿಸಿದ್ದೀರಿ, ಆದರೆ
ನಾನು ನಿಮಗೆ ನಿಮ್ಮ ಬದುಕಿನಲ್ಲಿ ನಿಜವಾದ ಸುಖ ಸಂತೋಷ ನೀಡುತ್ತಿದ್ದೇನೆ. ಅವರಿಗಿಂತ ಈ ಸಮಾಜಕ್ಕೆ
ನನ್ನದೇ ಕೊಡುಗೆ ಹೆಚ್ಚಿದೆ. ನನಗೂ ಸಹ ಮರಣದಂಡನೆಯ ಬದಲು ಆ ರೀತಿ ಉಚಿತ ಊಟದ ವ್ಯವಸ್ಥೆ ಮಾಡಬೇಕು'
ಎಂದನಂತೆ. ಆದರೆ ಆಗಿನ ಆಡಳಿತೆ ಅದನ್ನು ಒಪ್ಪದೆ ಸಾಕ್ರೆಟಿಸ್ ತಾನೇ ಸ್ವತಃ ಹೆಮ್ಲಾಕ್ ವಿಷ ಕುಡಿದು
ಪ್ರಾಣ ಕಳೆದುಕೊಳ್ಳಬೇಕಾದ ಶಿಕ್ಷೆ ನೀಡಿದ್ದು ಎಲ್ಲಿರಿಗೂ ತಿಳಿದೇ ಇದೆ.
04: ಸಿರಿವಂತ
ಹಾಗೂ ಗಣ್ಯ ಅತಿಥಿಗಳು ಉಳಿದುಕೊಳ್ಳಲು ಲಿಯೊನಿಡಾಸ್ ಎಂಬುವವನು ಕ್ರಿ.ಪೂ. ನಾಲ್ಕನೇ ಶತಮಾನದ ಅಂತ್ಯದಲ್ಲಿ
ಕಟ್ಟಿಸಿದ್ದ ಲಿಯೋನೈಡಾನ್ `ಹೋಟೆಲ್'ನ ಅವಶೇಷಗಳು. ಒಳಚಿತ್ರ: ಕಂಪ್ಯೂಟರ್ ಕೃತಕ ಬುದ್ಧಿಮತ್ತೆ ಬಳಸಿ
ರೂಪಿಸಿರುವ ಹೋಟೆಲ್‍ನ ಮಾದರಿ.
ಕ್ರಮೇಣ ವರುಷಗಳು ಕಳೆದಂತೆ ಕೇವಲ ಓಟದ ಸ್ಪರ್ಧೆ
ಮಾತ್ರವಿದ್ದ ಈ ಒಲಿಂಪಿಕ್ ಕ್ರೀಡೆಗಳಿಗೆ ಕುದುರೆಗಳ, ಕುದುರೆ ರಥಗಳ, ದೂರ ಜಿಗಿತ ಮತ್ತು ಡಿಸ್ಕಸ್,
ಜಾವೆಲಿನ್ ಎಸೆತ, ಕುಸ್ತಿ, ಮಲ್ಲಯುದ್ಧ ಮುಂತಾದ ಸ್ಪರ್ಧೆಗಳು ಸೇರಿಸಲ್ಪಟ್ಟವು. ಕ್ರಿ.ಪೂ. 5ನೇ ಶತಮಾನದಲ್ಲಿ
ಬಹಳಷ್ಟು ನಿಯಮಗಳು ರೂಪಿಸಲ್ಪಟ್ಟವು ಹಾಗೂ ಬಾಲಕರಿಗೆ (ಇಪ್ಪತ್ತು ವಯಸ್ಸಿಗಿಂತ ಕಿರಿಯರಿಗೆ) ಹಾಗೂ
ವಯಸ್ಕರಿಗಾಗಿ ಪ್ರತ್ಯೇಕ ಸ್ಪರ್ಧೆಗಳು ಆಯೋಜಿಸಲ್ಪಟ್ಟವು. ಯಾವುದೇ ತಂಡ ಕ್ರೀಡೆಗಳು ಇರಲಿಲ್ಲ. ಗ್ರೀಕರು
ತಮ್ಮ ಸ್ಪರ್ಧೆಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದರು- ಜಿಮ್ನಿಕ್ ಅಂದರೆ ಬೆತ್ತಲೆಯಾಗಿ ನಡೆಸುವ
ಸ್ಪರ್ಧೆಗಳು: ಓಟ, ದೂರಜಿಗಿತ, ಕುಸ್ತಿ/ಮಲ್ಲಯುದ್ಧ, ಡಿಸ್ಕಸ್ ಮತ್ತು ಜಾವೆಲಿನ್ ಎಸೆತ ಹಾಗೂ ಹಿಪ್ಪಿಕ್
ಅಂದರೆ ಕುದುರೆ ಹಾಗೂ ಕುದುರೆ ರಥದ ವೇಗ ಸ್ಪರ್ಧೆಗಳು. ಮಣ್ಣಿನಲ್ಲಿ ಹೂತುಹೋಗಿದ್ದ ಓಟದ ಸ್ಪರ್ಧೆಗಳ
ಸ್ಟೇಡಿಯಂ ಇಂದು ನಮಗೆ ಉತ್ಖನಗೊಂಡು ವೀಕ್ಷಣೆಗೆ ಲಭ್ಯವಿದೆ. ಆದರೆ ಅದರ ಪಕ್ಕದಲ್ಲೇ ಇದ್ದ ಹಾಗೂ ಇದಕ್ಕಿಂತ
ತುಂಬಾ ದೊಡ್ಡದಾಗಿದ್ದ `ಹಿಪ್ಪೋಡ್ರೋಮ್' ಅಥವಾ ಕುದುರೆಗಳ ಓಟದ ಸ್ಪರ್ಧೆಯ ಸ್ಟೇಡಿಯಂನ ಉತ್ಖನನ ಕಾರ್ಯ
ಇನ್ನೂ ನಡೆಯುತ್ತಿದೆ.
05: ಸುಮಾರು
ನಲವತ್ತು ಸಾವಿರ ಜನ ಕೂಡಬಹುದಾದ ಓಟದ ಸ್ಪರ್ಧೆಯ ಸ್ಟೇಡಿಯಂ. ಒಳಚಿತ್ರ: ಓಟದ ಸ್ಪರ್ಧಿಗಳು ಓಡಲು ಪ್ರಾರಂಭಿಸುವ
ಅಮೃತಶಿಲೆಯಲ್ಲಿ ಕೊರೆದಿರುವ ಗೆರೆ ಈಗಲೂ ಅದೇ ಸ್ಥಳದಲ್ಲಿಯೇ ಇದೆ.
ಎಲ್ಲದಕ್ಕೂ ಮೊದಲು ನಾಲ್ಕು ಕುದುರೆಗಳ ಓಟದ ಸ್ಪರ್ಧೆ
ನಡೆಯುತ್ತಿತ್ತು. ಸ್ಪರ್ಧಿಗಳು ತಮ್ಮ ರಥಗಳನ್ನು ಸ್ಟೇಡಿಯಂನ 12 ಸುತ್ತು ಹಾಕಬೇಕಿತ್ತು (ಸುಮಾರು
13 ಕಿ.ಮೀ.). ಈ ಸ್ಪರ್ಧೆ ಅಪಾಯಕಾರಿಯೂ ಆಗಿರುತ್ತಿತ್ತು, ಏಕೆಂದರೆ ಕುದುರೆಗಳು ಹಾಗೂ ರಥಗಳು ಮುಗ್ಗರಿಸುತ್ತಿದ್ದವು,
ರಥದ ಸ್ಪರ್ಧಿಗಳು ಬಿದ್ದು ಗಾಯಗಳಾಗುತ್ತಿತ್ತು ಹಾಗೂ ಎಷ್ಟೋ ಸಾರಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು.
ಕ್ರಿ.ಪೂ. 512ರ ಸ್ಪರ್ಧೆಯಲ್ಲಿ ರಥದ ಸವಾರ ಸ್ಪರ್ಧೆಯ ಪ್ರಾರಂಭದಲ್ಲೇ ಬಿದ್ದುಬಿಡುತ್ತಾನೆ, ಆದರೆ
ಚೆನ್ನಾಗಿ ತರಬೇತಿ ಪಡೆದಿದ್ದ ಕುದುರೆಗಳು ತಮ್ಮಷ್ಟಕ್ಕೆ ತಾವೇ ಓಡಿ ಸ್ಪರ್ಧೆಯಲ್ಲಿ ಗೆಲ್ಲುತ್ತವೆ.
ಆ ಕುದುರೆಗಳ ಮಾಲೀಕನಿಗೆ ಮೊದಲ ಬಹುಮಾನ ದೊರಕುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ
ಅವಕಾಶವಿಲ್ಲದಿದ್ದರೂ ರಥದ ಸ್ಪರ್ಧೆಯಲ್ಲಿ ಕುದುರೆಗಳ ಮಾಲೀಕರು ಮಹಿಳೆಯರಾಗಿದ್ದಲ್ಲಿ ಅವರ ಕುದುರೆ
ಮತ್ತು ರಥ ಭಾಗವಹಿಸಬಹುದಿತ್ತು (ಅವರು ನೋಡುವಂತಿರಲಿಲ್ಲ), ಅವರ ಸಾರಥಿ ಗೆದ್ದಾಗ ಬಹುಮಾನ ಆ ಮಹಿಳೆಗೆ
ದೊರಕುತ್ತಿತ್ತು.
06: ಅಲೆಕ್ಸಾಂಡರನ
ತಂದೆ ಎರಡನೇ ಫಿಲಿಪ್ ಕ್ರಿ.ಪೂ. 338ರಲ್ಲಿ ಖೆರೋನಿಯಾ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಒಲಿಂಪಿಯಾದಲ್ಲಿ
ನಿರ್ಮಿಸಿದ ವೃತ್ತಾಕಾರದ ಫಿಲಿಪ್ಪಿಯಾನ್ ಕಟ್ಟಡ. ಅದನ್ನು ಸ್ವತಃ ಅಲೆಕ್ಸಾಂಡರ್ ಪೂರ್ಣಗೊಳಿಸುತ್ತಾನೆ.
ನಂತರದ ಸ್ಪರ್ಧೆ `ಪೆಂಟಥ್ಲಾನ್' ಅಥವಾ ಐದುಹಂತದ
ಸ್ಪರ್ಧೆ ನಡೆಯುತ್ತಿತ್ತು (ಗ್ರೀಕ್ ಭಾಷೆಯಲ್ಲಿ ಪೆಂಟ ಎಂದರೆ ಐದು ಹಾಗೂ ಅಥ್ಲಾನ್ ಎಂದರೆ ಸ್ಪರ್ಧೆ
ಹಾಗೂ ಅದರಿಂದಲೇ `ಅಥ್ಲೀಟ್' ಪದ ವ್ಯುತ್ಪತ್ತಿಯಾಗಿದೆ). ಈ ಪೆಂಟಾಥ್ಲಾನ್‍ನಲ್ಲಿ ಡಿಸ್ಕಸ್ ಎಸೆತ,
ದೂರಜಿಗಿತ, ಓಟ ಮತ್ತು ಕುಸ್ತಿ/ಮಲ್ಲಯುದ್ಧವಿದ್ದವು. ಓಟದ ಸ್ಪರ್ಧೆಯಲ್ಲಿ ಹಲವಾರು ವಿಧಗಳಿದ್ದವು.
ಒಂದರಲ್ಲಿ ಸ್ಪರ್ಧಿಗಳು ಯುದ್ಧದ ಎಲ್ಲ ಲೋಹದ ಕವಚ, ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಬೇಕಿತ್ತು.
ಡಿಸ್ಕಸ್ ಪ್ರಾರಂಭದಲ್ಲಿ ಕಲ್ಲಿನಿಂದ ತಯಾರಿಸಲಾಗಿದ್ದು ಕ್ರಮೇಣ ಕಂಚು ಅಥವಾ ಕಬ್ಬಿಣದಿಂದ ತಯಾರಿಸುತ್ತಿದ್ದರು
ಹಾಗೂ ಅವುಗಳ ತೂಕ ಸುಮಾರು 2 ಕಿ.ಗ್ರಾಂ. ಇರುತ್ತಿತ್ತು. ದೂರ ಜಿಗಿತ ಸಾಮಾನ್ಯವಾಗಿ ಟ್ರಿಪಲ್ ಜಂಪ್
ಆಗಿರುತ್ತಿತ್ತು ಹಾಗೂ ಸ್ಪರ್ಧಿಗಳು ದೂರದಿಂದ ಓಡಿಬಂದು ನೆಗೆಯುತ್ತಿರಲಿಲ್ಲ, ಬದಲಿಗೆ ನಿಂತಲ್ಲಿಂದಲೇ
ನೆಗೆಯುತ್ತಿದ್ದರು ಹಾಗೂ ಅವರು ತಮ್ಮ ಎರಡೂ ಕೈಗಳಲ್ಲಿ ಒಂದರಿಂದ ಎರಡು ಕಿ.ಗ್ರಾಂ ತೂಕಗಳನ್ನು ದೇಹದ
ಸಮತೋಲನಕ್ಕಾಗಿ ಹಿಡಿದಿರುತ್ತಿದ್ದರು. ಜಾವೆಲಿನ್ ಮರದಿಂದ ತಯಾರಿಸಿದ್ದು ಅದಕ್ಕೆ ಲೋಹದ ಚೂಪಾದ ತುದಿ
ಇರುತ್ತಿತ್ತು. ಕುಸ್ತಿಯಲ್ಲಿ ಎದುರಾಳಿಯ ಬೆನ್ನನ್ನು ಮೂರು ಸಾರಿ ನೆಲಕ್ಕೆ ಹಾಕಿದವರು ಗೆಲ್ಲುತ್ತಿದ್ದರು.
ಪ್ಯಾಂಕ್ರೇಶನ್ ಎಂಬ ಸ್ಪರ್ಧೆಯು ಕುಸ್ತಿ ಹಾಗೂ ಬಾಕ್ಸಿಂಗ್ ಎರಡರ ಸಮ್ಮಿಳಿತವಾಗಿದ್ದು ಸ್ಪರ್ಧಿಗಳು
ಕೈಗಳಿಗೆ ಚರ್ಮದ ಪಟ್ಟಿಗಳನ್ನು ಸುತ್ತಿಕೊಂಡಿರುತ್ತಿದ್ದರು.
ಈ ಸ್ಪರ್ಧೆಗಳಲ್ಲಿ ಎದುರಾಳಿಗಳನ್ನು ಕಚ್ಚಬಾರದು ಹಾಗೂ ಅವರ ಕಣ್ಣುಗುಡ್ಡೆಗಳನ್ನು ಕೀಳುವುದು ಮಾಡಬಾರದಾಗಿತ್ತು.
ಆ ರೀತಿ ಮಾಡಿದವರಿಗೆ ಅಲ್ಲೇ ನಿಂತಿರುತ್ತಿದ್ದ ರೆಫರಿ `ಹೆಲ್ಲಾನೋಡಿಕೈ' ಚಾವಟಿಯಿಂದ ಹೊಡೆದು ಶಿಕ್ಷಿಸುತ್ತಿದ್ದ.
07: ಸ್ಟೇಡಿಯಂಗೆ
ಕ್ರೀಡಾಪಟುಗಳು ಪ್ರವೇಶಿಸುತ್ತಿದ್ದ ಪ್ರವೇಶದ್ವಾರದ ಬಳಿ ಲೇಖಕರು.
ಕ್ರೀಡಾ ಸ್ಪರ್ಧೆಗಳ `ರೆಫರಿ'ಗಳನ್ನು ಹೆಲ್ಲಾನೊಡಿಕೈ
ಎಂದು ಕರೆಯುತ್ತಿದ್ದರು. ಗ್ರೀಕರು ತಮ್ಮ ನಾಡನ್ನು ಹೆಲ್ಲಾ ಎಂದು ಕರೆಯುತ್ತಿದ್ದರು. ಹೆಲ್ಲಾನೊಡಿಕೈ
ಎಂದರೆ ಗ್ರೀಸ್ ದೇಶದ ನ್ಯಾಯಪಾಲಕರು ಎಂದರ್ಥ. ಇವರನ್ನು ಸಹ ಉತ್ತಮ ಕುಲದ, ಸಿರಿವಂತರನ್ನು ಆಯ್ಕೆಮಾಡಲಾಗುತ್ತಿತ್ತು.
ಅವರಿಗೆ ಯಾವುದೇ ಸಂಭಾವನೆ ಇರುತ್ತಿರಲಿಲ್ಲ, ಆವರೆ ತಮ್ಮ ಸ್ವಂತ ಖರ್ಚಿನಿಂದ ಬರಬೇಕಿತ್ತು. ಸ್ಪರ್ಧೆಗಳು
ನಡೆಯುವಾಗ ಕೈಯಲ್ಲಿ ಚಾವಟಿ ಅಥವಾ ಬಾರುಕೋಲು ಹಿಡಿದಿರುತ್ತಿದ್ದರು. ಪ್ರತಿಯೊಬ್ಬ ಕ್ರೀಡಾಪಟುವೂ ಜ್ಯೂಸ್
ದೇವತೆಯ ಮುಂದೆ ಸ್ಪರ್ಧೆಯಲ್ಲಿ ಯಾವುದೇ ರೀತಿಯಲ್ಲಿ ಮೋಸ ಮಾಡುವುದಿಲ್ಲ ಎಂಬ ಶಪಥ ಮಾಡಬೇಕಿತ್ತು.
ಹಾಗಿದ್ದರೂ ಕೆಲವು ಕ್ರೀಡಾಪಟುಗಳು ಮೋಸ ಮಾಡಲು ಪ್ರಯತ್ನಿಸುತ್ತಿದ್ದರು. ಅಂತ ಸಂದರ್ಭದಲ್ಲಿ ಅವರಿಗೆ
ಹೊಡೆಯಲು, ಮೋಸ ತಡೆಯಲು `ರೆಫರಿ'ಗಳು ಚಾವಟಿ ಹಿಡಿದಿರುತ್ತಿದ್ದರು. ಮೋಸ ಮಾಡಿದವರ ಹೆಸರುಗಳನ್ನು
ಪ್ರೇಕ್ಷಕರು ಒಲಿಂಪಿಯಾದಲ್ಲಿ ಅಲ್ಲಲ್ಲಿ ಕೆತ್ತುತ್ತಿದ್ದರಂತೆ.
08: ಕ್ರಿ.ಪೂ.
ಸುಮಾರು 550ರ ಗ್ರೀಕ್ ಮಣ್ಣಿನ ಜಾಡಿಯ ಮೇಲೆ ಓಟದ ಸ್ಪರ್ಧೆಯಲ್ಲಿನ ಕ್ರೀಡಾಪಟುಗಳು
ಕ್ರೀಡೆಗಳ ದಿನಾಂಕವನ್ನು ಘೋಷಿಸಿದ ಕ್ಷಣದಿಂದ ಇಡೀ
ಗ್ರೀಸ್‍ನ ಜನ ಹಬ್ಬದಂತೆ ಸಂಭ್ರಮಿಸುತ್ತಿದ್ದರು. ತೀರ್ಥಯಾತ್ರೆ ಹೊರಡುವ ಭಕ್ತಾಧಿಗಳಂತೆ ಜನ ಒಲಿಂಪಿಯಾಗೆ
ಪಯಣ ಆರಂಭಿಸುತ್ತಿದ್ದರು. ಈಜಿಪ್ಟ್, ಉತ್ತರ ಆಫ್ರಿಕಾ, ಸಿರಿಯಾ, ಏಷಿಯಾ ಮೈನರ್ ಮತ್ತು ಸಿಸಿಲಿಗಳಷ್ಟು
ದೂರ ನೆಲೆಸಿದ್ದ ಗ್ರೀಕರು ಸಹ ಭಾಗವಹಿಸಲು, ವೀಕ್ಷಿಸಲು ಬರುತ್ತಿದ್ದರು. ಬಹಳಷ್ಟು ಜನ ನಡೆಯುತ್ತಲೇ
ರಾತ್ರಿ ಬಯಲಲ್ಲೇ ಮಲಗಿ ಪ್ರಯಾಣಿಸುತ್ತಿದ್ದರೆ ಸಿರಿವಂತರು ಕುದುರೆ, ರಥಗಳಲ್ಲಿ ಬರುತ್ತಿದ್ದರು.
ಅಯೋನಿಯನ್ ಸಾಗರದ ದಡ ಹತ್ತಿರದಲ್ಲೇ ಇದ್ದುದರಿಂದ ಹೆಚ್ಚಿನವರು ಹಡಗುಗಳಲ್ಲಿ ಬರುತ್ತಿದ್ದರು. ಜನಸೇರಿ
ಜಾತ್ರೆಯ ವಾತಾವರಣ ಇರುತ್ತಿದ್ದುದರಿಂದ ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ವಸ್ತುಗಳನ್ನು ಮಾರುವವರು,
ಕ್ರೀಡಾಪಟುಗಳು ತಮ್ಮ ಶಪಥ ಹರಕೆಗೆ ಬಲಿ ಕೊಡುತ್ತಿದ್ದುದರಿಂದ ಕುರಿ, ಹಂದಿ ಸಾಕುವವರು ತಮ್ಮ ಹಿಂಡುಗಳನ್ನು
ತರುತ್ತಿದ್ದರು. ರೈತರು ತಾವು ತಯಾರಿಸಿರುವ ವೈನ್‍ನ ಜಾಡಿ, ಬುರುಡೆಗಳನ್ನು ಮಾರಾಟಕ್ಕಾಗಿ ಹೊತ್ತು
ತರುತ್ತಿದ್ದರು. ಸಿರಿವಂತ ಹಾಗೂ ಗಣ್ಯ ಅತಿಥಿಗಳು ಉಳಿದುಕೊಳ್ಳಲು ಲಿಯೊನಿಡಾಸ್ ಎಂಬ ಸಿರಿವಂತ ಕ್ರಿ.ಪೂ.
ನಾಲ್ಕನೇ ಶತಮಾನದ ಅಂತ್ಯದಲ್ಲಿ ಕಟ್ಟಿಸಿದ್ದ ಲಿಯೋನೈಡಾನ್ `ಹೋಟೆಲ್'ನ ಅವಶೇಷಗಳು ಈಗಲೂ ಇವೆ. ಕ್ರೀಡಾಪಟುಗಳು
ಉಳಿದುಕೊಳ್ಳಲು ಹಾಗೂ ಅಭ್ಯಾಸ, ಕಸರತ್ತು ಮಾಡಲು ಜಿಮ್ನಾಸಿಯಂ ಕಟ್ಟಡದ ಕೆಲವು ಸಾಲುಕಂಬಗಳ ಅವಶೇಷಗಳು
ಈಗಲೂ ನಿಂತಿವೆ.
09: ಕ್ರಿ.ಪೂ.
ಸುಮಾರು 400ರ ಗ್ರೀಕ್ ಮಣ್ಣಿನ ಜಾಡಿಯ ಮೇಲೆ ಸೆಣಸುತ್ತಿರುವ ಕುಸ್ತಿ ಪಟುಗಳ ಚಿತ್ರ. ಪಕ್ಕದಲ್ಲಿ
`ರೆಫರಿ' ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ
ಶಿಕ್ಷಿಸಲು ಬಾರುಕೋಲು ಹಿಡಿದಿರುವುದನ್ನು ಕಾಣಬಹುದು.
ಒಲಿಂಪಿಯಾ ಕ್ರೀಡಾ ಕ್ಷೇತ್ರವಾಗುವ ಮೊದಲು ದೇವರದೇವ
ಜ್ಯೂಸ್ನ ಕ್ಷೇತ್ರವಾಗಿದ್ದು ಅಲ್ಲಿ ಆತನಿಗಾಗಿ ಇಡೀ ಪೆಲೊಪೊನ್ನೇಸ್‍ನಲ್ಲಿಯೇ ದೊಡ್ಡದಾದ ಒಂದು ಬೃಹತ್
ಹಾಗೂ ವೈಭವದ ಮಂದಿರವನ್ನು ಕ್ರಿ.ಪೂ. ಐದನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಅದರಲ್ಲಿ ಜ್ಯೂಸ್ ದೇವತೆ
ಕೂತಿರುವ ಒಂದು ಸುಮಾರು ನಲವತ್ತಮೂರು ಅಡಿ ಎತ್ತರದ ವಿಗ್ರಹವಿತ್ತೆಂದು ದಾಖಲೆಗಳು ತಿಳಿಸುತ್ತವೆ ಹಾಗೂ
ಅದು ಪ್ರಾಚೀನ ಜಗತ್ತಿನ ಏಳು ಮಹಾ ಅದ್ಭುತಗಳಲ್ಲಿ ಒಂದಾಗಿತ್ತು. ಇಂದು ಆ ದೇವಾಲಯದ ಬೃಹತ್ ಕಂಬಗಳು
ಮುರಿದು ಬಿದ್ದಿರುವ ರಾಶಿ ರಾಶಿ ಅವಶೇಷಗಳು ಎಲ್ಲೆಡೆ ಹರಡಿವೆ. ಜ್ಯೂಸ್ನ ಮಂದಿರಕ್ಕೂ ಹಳೆಯದಾದದ್ದು
ಆತನ ಪತ್ನಿ (ಆಕೆ ಆತನ ಸಹೋದರಿಯೂ ಹೌದು) ಹೇರಾಳ ಮಂದಿರ. ಅದರ ಅವಶೇಷಗಳೂ ಇವೆ ಹಾಗೂ ಇಂದಿಗೂ ಹೇರಾಳ
ಮಂದಿರದ ಮುಂಭಾಗದಲ್ಲಿ ಪ್ರತಿ ನಾಲ್ಕುವರ್ಷಗಳಿಗೊಮ್ಮೆ ಆಧುನಿಕ ಒಲಿಂಪಿಕ್ ಕ್ರೀಡೆಗಳಿಗಾಗಿ ಸೂರ್ಯನಕಿರಣಗಳಿಂದ
`ಪ್ಯಾರಾಬೊಲಾಯ್ಡ್' ಕನ್ನಡಿ ಬಳಸಿ ಒಲಿಂಪಿಕ್ ಜ್ವಾಲೆಯನ್ನು ಹೊತ್ತಿಸಿ ಒಲಿಂಪಿಯಾದಿಂದ ಒಲಿಂಪಿಕ್
ಕ್ರೀಡೆಗಳು ನಡೆಯುವ ಸ್ಥಳಕ್ಕೆ ಸಾಗಿಸಲಾಗುತ್ತದೆ.
10: ಕ್ರಿ.ಪೂ.
5ನೇ ಶತಮಾನದ ಪ್ರಾರಂಭದ ಗ್ರೀಕ್ ಮಣ್ಣಿನ ಜಾಡಿಯ ಮೇಲೆ `ಪ್ಯಾಂಕ್ರೇಶನ್' ಬಾಕ್ಸಿಂಗ್ ಸ್ಪರ್ಧೆಯ ಪಟುಗಳು.
ಅವರು ಕೈಗೆ ಚರ್ಮದ ಪಟ್ಟಿಯನ್ನು ಸುತ್ತಿಕೊಂಡಿರುವುದನ್ನು ಗಮನಿಸಿ.
ಪ್ರಾಚೀನ ಒಲಿಂಪಿಕ್ ಕ್ರೀಡೆಗಳಲ್ಲಿ ಕ್ರಿ.ಪೂ.
ಎರಡನೇ ಶತಮಾನದಲ್ಲಿ ರೋಮನ್ನರು ತಮ್ಮ ಪ್ರಾಬಲ್ಯದಿಂದ ಬದಲಿಸುವವರೆಗೂ ಗ್ರೀಕರು ಮಾತ್ರ (ಗುಲಾಮರಿಗೆ
ಅವಕಾಶವಿರಲಿಲ್ಲ) ಭಾಗವಹಿಸುವಂತಿತ್ತು. `ರೆಫರಿ'ಗಳು ಪ್ರತಿಯೊಬ್ಬ ಕ್ರೀಡಾ ಪಟುವಿನ ವಂಶವೃಕ್ಷವನ್ನು
ಅತ್ಯಂತ ಎಚ್ಚರಿಕೆಯಿಂದ ಜಾಲಾಡುತ್ತಿದ್ದರು. ಸ್ಪರ್ಧಿಗಳು ಭಾಗವಹಿಸುವ ಹಿಂದಿನ ಹತ್ತು ತಿಂಗಳು ಸತತ
ಅಭ್ಯಾಸ ಮಾಡಿರಬೇಕಿತ್ತು ಹಾಗೂ ಹಾಗೆಂದು ಶಪಥ ಮಾಡಬೇಕಾಗಿತ್ತು. ಹಾಗಾಗಿ ಇದು ಉತ್ತಮ ಸ್ಥಿತಿವಂತರು,
ಮೇಲ್ವರ್ಗದವರ ಕ್ರೀಡೆಗಳಾಗಿತ್ತು ಎನ್ನುತ್ತಾರೆ. ಕ್ರಿ.ಪೂ. ಎರಡನೇ ಶತಮಾನದಲ್ಲಿ ರೋಮನ್ನರು ಗ್ರೀಸ್
ದೇಶವನ್ನು ಆಕ್ರಮಿಸಿದರು. ರೋಮನ್ ಆಡಳಿತದಲ್ಲಿ ಒಲಿಂಪಿಕ್ ಕ್ರೀಡೆಗಳಿಗೆ ಹಿನ್ನಡೆಯಾಯಿತು. ಅವರು
ಹಲವಾರು ಬದಲಾವಣೆಗಳನ್ನು ತಂದರು. ಕ್ರಿ.ಶ. 65ರಲ್ಲಿ ರೋಮನ್ ದೊರೆ ನೀರೊ ತಾನೂ ಸಹ ಕುದುರೆ ರಥದ ಸ್ಪರ್ಧೆಯಲ್ಲಿ
ಭಾಗವಹಿಸಿದ. ಸ್ಪರ್ಧೆಯಲ್ಲಿ ಬಿದ್ದು ಆತ ಸೋತರೂ ತಾನೇ ಗೆದ್ದಿರುವುದಾಗಿ ಘೋಷಿಸಿಕೊಂಡ ಹಾಗೂ ಆಲೀವ್
ಎಲೆಗಳ ಕಿರೀಟ ತನಗೇ ತೊಡಿಸಿ ಸನ್ಮಾನಿಸಬೇಕೆಂದು ಆದೇಶಿಸಿದ. ಮುಂದಿನ ವರ್ಷ ನೀರೊ ಆತ್ಮಹತ್ಯೆಯಿಂದ
ತೀರಿಕೊಂಡನಂತರ 211ನೇ ಒಲಿಂಪಿಯಾಡ್‍ನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿ ಅದರಿಂದ ನೀರೋನ ಹೆಸರನ್ನು
ತೆಗೆದುಹಾಕಿದರಂತೆ.
11: ಡಿಸ್ಕಸ್
ಎಸೆಯುತ್ತಿರುವ `ಮೈರಾನ್‍ನ ಡಿಸ್ಕೋಬೋಲಸ್' ಪ್ರತಿಮೆ ಜಗತ್ಪ್ರಸಿದ್ಧವಾದುದು. ಕ್ರಿ.ಪೂ. 5ನೇ ಶತಮಾನದಲ್ಲಿ
ಅಥೆನ್ಸಿನ ಮೈರಾನ್ ಎಂಬಾತ ಈ ಪ್ರತಿಮೆ ಕೆತ್ತಿದ್ದ. ಆದರೆ ಇಂದು ಆ ಪ್ರತಿಮೆ ಇಲ್ಲ. ರೋಮನ್ನರು ಅದರ
ಹಲವಾರು ಪ್ರತಿಗಳನ್ನು ಕಂಚು ಮತ್ತು ಅಮೃತಶಿಲೆಯಲ್ಲಿ ನಿರ್ಮಿಸಿದ್ದು ಈ ಚಿತ್ರದಲ್ಲಿರುವುದು ಕ್ರಿ.ಶ.
2ನೇ ಶತಮಾನದಲ್ಲಿ ನಿರ್ಮಿಸಿದ್ದೆನ್ನಲಾಗಿದೆ.
ಒಲಿಂಪಿಕ್ ಕ್ರೀಡೆಗಳು ಕ್ರಿ.ಶ. 393ರವರೆಗೂ ನಡೆದವು.
ಆ ವರ್ಷದಲ್ಲಿ ಕ್ರಿಶ್ಚಿಯನ್ ದೊರೆ ಮೊದಲನೇ ಥಿಯೊಡೋಸಿಯಸ್ ಒಲಿಂಪಿಕ್ ಕ್ರೀಡೆಗಳನ್ನು `ಪೇಗನ್' (ಅನಾಗರಿಕ,
ಅಧಾರ್ಮಿಕ) ಸಂಸ್ಕೃತಿಯೆಂದು ನಿಲ್ಲಿಸಿದ. ಅವನ ಮೊಮ್ಮಗ ಎರಡನೇ ಥಿಯೊಡೋಸಿಯಸ್ ಒಲಿಂಪಿಯಾ ಸ್ಥಳವನ್ನೇ
ನಾಶಮಾಡಲು ಆದೇಶಿಸಿದ. ಅದರ ಜೊತೆಗೆ ಕ್ರಿ.ಶ. 6ನೇ ಶತಮಾನದಲ್ಲಿ ನಡೆದ ಭೂಕಂಪಗಳು ಹಾಗೂ ಪ್ರವಾಹಗಳು
ಒಲಿಂಪಿಯಾವನ್ನು ನಾಶಮಾಡಿದವು ಹಾಗೂ ಆ ಸ್ಥಳ ಐದು ಮೀಟರ್ ಮೆಕ್ಕಲು ಮಣ್ಣಿನಲ್ಲಿ ಹೂತುಹೋಯಿತು ಹಾಗೂ
ಜನಮಾನಸದಿಂದ ಕಣ್ಮರೆಯಾಯಿತು. ಪುನಃ ಒಲಿಂಪಿಯಾ ಬೆಳಕಿಗೆ ಬಂದದ್ದು 1766ರಲ್ಲಿ ಬ್ರಿಟಿಷ್ ಅನ್ವೇಷಕ
ರಿಚರ್ಡ್ ಚಾಂಡ್ಲರ್‍ನ ಮೂಲಕ.
ಪ್ರಾಚೀನ ಒಲಿಂಪಿಕ್ ಕ್ರೀಡಾ ಪರಂಪರೆಗೆ ಬೆಳಕು
ದೊರೆತು ಆಧುನಿಕ ಒಲಿಂಪಿಕ್ ಕ್ರೀಡಾ ಸ್ಪರ್ಧೆಗಳು ಪ್ರಾರಂಭವಾದದ್ದು 1896ರಲ್ಲಿ, ಪ್ರಾಚೀನ ಗ್ರೀಸ್‍ನ
ಪ್ರಮುಖ ಸ್ಥಳವಾಗಿದ್ದ ಹಾಗೂ ಈಗ ಆಧುನಿಕ ನಗರವೂ ಆಗಿರುವ ಅಥೆನ್ಸ್‍ನಲ್ಲಿ. ಫ್ರೆಂಚ್ ಶ್ರೀಮಂತ ಪಿಯೆರ್ರೆ
ದ ಕೂಬರ್ಟಿನ್ ಎಂಬಾತ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸ್ಥಾಪಿಸಿ ಅದರ ಮೂಲಕ ಆಧುನಿಕ ಒಲಿಂಪಿಕ್ಸ್
ಕ್ರೀಡೆಗಳನ್ನು ಪ್ರಾರಂಭಿಸಿದ. ಆ ಕ್ರೀಡೆಗಳಲ್ಲಿ ಹದಿನಾಲ್ಕು ಯೂರೋಪಿಯನ್ ರಾಷ್ಟ್ರಗಳು ಮಾತ್ರ ಭಾಗವಹಿಸಿದ್ದವು
ಹಾಗೂ ಅದರಲ್ಲಿಯೂ ಯಾವುದೇ ಮಹಿಳಾ ಕ್ರೀಡಾಪಟುಗಳಿರಲಿಲ್ಲ. ನಂತರ 1900ರಲ್ಲಿ ಪ್ಯಾರಿಸ್‍ನಲ್ಲಿ ನಡೆದ
ಒಲಿಂಪಿಕ್ ಕ್ರೀಡೆಗಳಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲಾಯಿತು. ಆಧುನಿಕ ಒಲಿಂಪಿಕ್ಸ್‍ನದು
ಮತ್ತೊಂದು ಚರಿತ್ರೆ.