ಈ ದಿನ ಡಾ.ಎಂ.ಎಸ್.ತಿಮ್ಮಪ್ಪನವರು ತೀರಿಕೊಂಡರೆಂಬ ಸುದ್ದಿ ತಿಳಿಯಿತು. ಮನೋವಿಜ್ಞಾನದ ಮಹಾನ್ ಅರಿವುಳ್ಳ ಪ್ರಾಧ್ಯಾಪಕರಾಗಿದ್ದರು. ನನ್ನ 1993ರ ಕೃತಿ "ಮಿಥುನ - ಲೈಂಗಿಕ ಮನೋವಿಜ್ಞಾನದ ಬರಹಗಳು" ಕೃತಿಗೆ ಮುನ್ನುಡಿಯನ್ನು ಬರೆದಿದ್ದರು. ಆ ಮುನ್ನುಡಿ ಇಲ್ಲಿದೆ. ಅಂದಹಾಗೆ ನನ್ನ "ಮಿಥುನ" ಕೃತಿ ಉಚಿತ ಡೌನ್ ಲೋಡ್ ಗೆ ಲಭ್ಯವಿದ್ದು ಈಗಾಗಲೇ 15000ಕ್ಕೂ ಹೆಚ್ಚು ಡೌನ್ ಲೋಡ್ ಗಳಾಗಿವೆ. ನೀವೂ ಡೌನ್ ಲೋಡ್ ಮಾಡಿಕೊಳ್ಳಬಹುದು, ಲಿಂಕ್ ಇಲ್ಲಿದೆ:
https://ia801304.us.archive.org/27/items/Mithuna-KannadaBookOnSexualPsychology/Mithuna.pdf
ಮುನ್ನುಡಿ
ಕಾಮ
ಮಾನವನ ಪುರುಷಾರ್ಥ ಮೂಲಭೂತ, ಸಾರ್ವತ್ರಿಕ ಬಯಕೆಗಳಲ್ಲಿ ಒಂದು. ಇದಕ್ಕೆ ದೈಹಿಕ, ಮಾನಸಿಕ, ಸಾಮಾಜಿಕ,
ಹಾಗೂ ದೈವಿಕ ನೆಲೆ ವಿಸ್ತಾರಗಳಿವೆ. ಮನುಷ್ಯನ ಬೆಳವಣಿಗೆಗೆ ಇದೊಂದು ಅವಿಭಾಜ್ಯ ಅಂಗ, ಈ ಬಯಕೆ ಪೂರೈಕೆ
ಆಗದಿದ್ದಾಗ ನಮ್ಮ ಪೂರ್ಣ ಏಳಿಗೆಗೇ ಏಟು ಬಿದ್ದಂತೆ. ನಮ್ಮ ಆದಿ ಸಂಸ್ಕೃತಿ ಕಾಮಕ್ಕೆ ಯಥೋಚಿತ ಸ್ನಾನವನ್ನು
ಮುಕ್ತ ಹಾಗೂ ಗೌರವ ಪೂರ್ವಕವಾಗಿಯೇ ಕೊಟ್ಟಿರುತ್ತದೆ. ಧರ್ಮ, ಅರ್ಥ, ಮೋಕ್ಷಗಳಿಗಿರುವಂತೆ ಕಾಮಕ್ಕೆ
ಸುದೀರ್ಘ 'ಶಾಸ್ತ್ರ' ಗ್ರಂಥಗಳೇ ಇವೆ. ವಿಕೃತ ಕಾಮ ಹಾನಿಕರ, ಅಷ್ಟೇ ಹಾನಿಕರ ಅಕಾಮವೂ ಕೂಡ. ಆದರೂ
ಕಾಮದ ಮೇಲಿರುವಷ್ಟು ಮೌಢ್ಯತೆ, ಕಂದಾಚಾರ, ಅವಹೇಳನ, ನಿರೋಧಭಾವ ಇನ್ನಾವುದೇ ಜೀವನ ಪ್ರಾಕಾರಗಳಲ್ಲಿ
ಕಂಡು ಬರುವುದಿಲ್ಲ. ಈ ಸ್ಥಿತಿಗೆ ಒಂದು ಮುಖ್ಯ ಕಾರಣವೆಂದರೆ : ಈ ಕಾಮದ ಶಕ್ತಿ, ಹರವು ಅಪಾರ; ಇದರ
ನೇರ, ಸಡಿಲ, ಪೂರ್ಣ ಬೆಳವಣಿಗೆಯಿಂದ ಸೃಜನಶೀಲತೆಯೂ ಹೊಮ್ಮುತ್ತದೆ. ಅಂತಹ ಬದುಕು ಪಟ್ಟಭದ್ರ ಹಿತಾಸಕ್ತಿ
ಅಥವಾ ರೂಢಿಮೂಲ ಬದುಕಿನ ಸ್ತರಗಳಾದ, ಧರ್ಮ ಮತ್ತು ಸಾಮಾಜಿಕ ಸಂಸ್ಥೆಗಳ ವಿರೋಧವಾಗಿಯೂ ನಿಲ್ಲಬಹುದು.
ಅದಕ್ಕಾಗಿಯೇ ಧರ್ಮ, ಸಾಮಾಜಿಕ ಸಂಸ್ಥೆಗಳು ಕಾಮವನ್ನು ವಿರೋಧಿಸುತ್ತಲೇ ಬಂದಿವೆ : “ಮಠ” ಮೂಲವಾದ ಧರ್ಮಗಳಿಗೆ
ಎಂದಿನ ಸಮಾಜ ಬೇಕೇ ವಿನಃ ವ್ಯಕ್ತಿನಿಷ್ಟ, ವ್ಯಕ್ತಿವಿಕಾಸ, ಸೃಜನಶೀಲ ಬದುಕು ಅಲ್ಲ, ವ್ಯಕ್ತಿ ತನ್ನ
ಬದುಕು, ಸಮಾಜ ನಿರ್ಮಿಸುವಂತಾದರೆ, ಮಠಗಳ ರೂಢಿಮೂಲ ಸಾಮಾಜಿಕ ಸಂಸ್ಥೆಗಳ ಪ್ರಭುತ್ವ ಹೋದಂತೆಯೇ, ಆದರೆ
ನಿಜವಾದ ಧರ್ಮ ವ್ಯಕ್ತಿ ಮತ್ತು ಅವನ ಪ್ರಜ್ಞೆಯ ವಿಕಾಸವೇ ಮೂಲವೆಂದು ನಂಬುತ್ತದೆ. ಎಂದಿನ, ದೈನಂದಿನ
ಪ್ರಜ್ಞೆಗೆ ಹೊರತಾದ, ಹಿರಿದಾದ ಮೇಲ್ಮಟ್ಟದ ಪ್ರಜ್ಞೆಯತ್ತ ಮನುಷ್ಯನನ್ನು ಕೊಂಡೊಯ್ಯುವುದೇ ನಿಜವಾದ
ಧರ್ಮದ ಮೂಲ ಉದ್ದೇಶ, ಆದರೆ ಪಟ್ಟಭದ್ರ, ಮಠಾದಿರೂಢ ಧರ್ಮ ನಿಜವಾದ ಧರ್ಮದ ಮೂಲ ಉದ್ದೇಶವನ್ನೇ ಕೈಬಿಟ್ಟು,
ಮಾನವನ ದೈವಿಕ ಪ್ರಜ್ಞೆಯ ಬೆಳವಣಿಗೆಗೆ ಮಾರಕವಾಗುತ್ತಿದೆ.
ಕಾಮದ
ನಿಜವಾದ ಬೆಳವಣಿಗೆ ಮನುಷ್ಯನ ಆರೋಗ್ಯ ಹಾಗೂ ಸಾರ್ವಾಂಗಿಕ ಬೆಳವಣಿಗೆಗೆ ಪೂರಕ ಮಾತ್ರವಲ್ಲದೆ ಅವನನ್ನು
ದೈವಿಕ ಪ್ರಜ್ಞೆಗೂ ಏರಿಸುವ ಸುಲಭ ಸಾಧನವಾಗಬಲ್ಲದು. ಆದರೆ ಕಾಮದ ಬಗ್ಗೆ ಈಗಿರುವ ಮೌಢ್ಯತೆ , ಅನರ್ಥ,
ಕಂದಾಚಾರ, ವಿಕೃತಿಗಳಿಂದ ಆ ಏಳಿಗೆ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನತೆಗೆ ಕಾಮದ ಬಗ್ಗೆ ನಿಜ
ಸತ್ಯಾಂಶಗಳನ್ನು, ವೈಜ್ಞಾನಿಕ ಸಂಗತಿಗಳನ್ನು ಬಿತ್ತಿಸುವುದು ಎಲ್ಲರ ಏಳಿಗೆಗೆ ಅತ್ಯಗತ್ಯ. ಈ ದಿಸೆಯಲ್ಲಿ
ಜೆ. ಬಾಲಕೃಷ್ಣರ ಈ ಗ್ರಂಥ ಅಮೂಲ್ಯವಾದದ್ದು. ತಿಳಿಯಾದ ಭಾಷೆಯಲ್ಲಿ ವೈಜ್ಞಾನಿಕ ಮಾಹಿತಿಯೊಂದಿಗೆ,
ದೈನಂದಿನ ನಿದರ್ಶನಗಳೊಡನೆ ಕಾಮದ ನಿಜಸ್ವರೂಪ, ವಿಕೃತಿ ಮತ್ತು ಏಳಿಗೆಗಳ ಬಗ್ಗೆ ಸುಲಭವಾಗಿ ಓದುವಂತೆ
ಬರೆದಿದ್ದಾರೆ. ಈ ಗ್ರಂಥ ನಿಜ, ಅಪ್ಪಟ ಕಾಮದ ಪ್ರಜ್ಞೆ ಹೆಚ್ಚಿಸುವುದರ ಜೊತೆಗೆ ಬದುಕಿಗೆ ಜೀವನಕ್ಕೆ
ಮತ್ತೊಂದು ದೃಷ್ಟಿಕೋನವನ್ನು, ಹೊಸ ಅರಿವನ್ನೂ ಮೂಡಿಸ ಬಲ್ಲದು.
ಡಾ.
ಎಂ.ಎಸ್.ತಿಮ್ಮಪ್ಪ
ಪ್ರಾಧ್ಯಾಪಕರು
ಮನೋವಿಜ್ಞಾನ
ಬೆಂಗಳೂರು
ವಿಶ್ವವಿದ್ಯಾನಿಲಯ
1 ಕಾಮೆಂಟ್:
ಮುಂಬರಹ ಅದ್ಭುತ, ನಿಮ್ಮ ಪುಸ್ತಕ ಇನ್ನೂ ಅದ್ಬುತ ಇರಬಹದು
ಕಾಮೆಂಟ್ ಪೋಸ್ಟ್ ಮಾಡಿ