ಮಂಗಳವಾರ, ಜನವರಿ 28, 2014

ಮುಲ್ಲಾ ನಸ್ರುದ್ದೀನ್ ಕತೆಗಳ 24ನೇ ಕಂತು - ಸಂವಾದ, ಜನವರಿ 2014ರ ಸಂಚಿಕೆ

ಮುಲ್ಲಾ ನಸ್ರುದ್ದೀನ್ ಕತೆಗಳ 24ನೇ ಕಂತು - ಸಂವಾದ, ಜನವರಿ 201420ರ ಸಂಚಿಕೆ


1. ಸೇಡು
ಒಂದು ದಿನ ಮುಲ್ಲಾ ನಸ್ರುದ್ದೀನನ ಮಗಳು ತನ್ನ ಗಂಡನ ಮನೆಯಿಂದ ಅಳುತ್ತಾ ಬಂದಳು. ಅವಳ ಬಲಗೆನ್ನೆ ಬಾತುಕೊಂಡಿತ್ತು.
`ಏಕೆ ಏನಾಯಿತಮ್ಮಾ?’ ಕೇಳಿದ ಮುಲ್ಲಾ ತನ್ನ ಮಗಳನ್ನು. ಆಕೆ ತನ್ನ ಗಂಡನೊಂದಿಗೆ ಜಗಳವಾಡಿ, ಆತ ತನ್ನ ಕೆನ್ನೆಗೆ ಹೊಡೆದೆನೆಂದು ಅಳುತ್ತಾ ತಿಳಿಸಿದಳು. ಸಿಟ್ಟಿನಿಂದ ಕೂಡಲೇ ಮುಲ್ಲಾ ಆಕೆಯ ಎಡಗೆನ್ನೆಡೆ ಹೊಡೆದ. ಮಗಳು ಇನ್ನೂ ಜೋರಾಗಿ ಅಳುತ್ತಾ ತನಗೆ ಏಕೆ ಹೊಡೆದದ್ದೆಂದು ಕೇಳಿದಳು.
`ಏಕೆಂದರೆ? ನಿನ್ನ ಗಂಡ ನನ್ನ ಮಗಳ ಕೆನ್ನೆಗೆ ಹೊಡೆದಿದ್ದಾನೆ. ನಾನು ಸೇಡು ತೀರಿಸಿಕೊಳ್ಳಲು ಅವನ ಹೆಂಡತಿಗೆ ಹೊಡೆದಿದ್ದೇನೆಎಂದ ಮುಲ್ಲಾ.
2. ಕಡ್ಡಿಯ ಉದ್ದ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನಗಿಂತ ಉದ್ದವಾಗಿರುವ ಊರುಗೋಲೊಂದನ್ನು ಹಿಡಿದು ಮಾರುಕಟ್ಟೆಯಲ್ಲಿ ಹೋಗುತ್ತಿದ್ದ. ಅದನ್ನು ನೋಡಿದ ಗೆಳೆಯನೊಬ್ಬ,
`ಮುಲ್ಲಾ ನೀನು ಹಿಡಿದಿರುವ ಕೋಲು ನಿನಗಿಂತ ಉದ್ದವಾಗಿದೆ. ಅದರ ಬುಡವನ್ನು ಸ್ವಲ್ಪ ಏಕೆ ಕತ್ತರಿಸಬಾರದು?’ ಎಂದು ಹೇಳಿದ.
`ಅದರಿಂದ ಏನೂ ಪ್ರಯೋಜನವಾಗುವುದಿಲ್ಲಹೇಳಿದ ಮುಲ್ಲಾ, `ಏಕೆಂದರೆ, ಕೋಲು ಉದ್ದವಾಗಿರುವುದು ಬುಡದಲ್ಲಲ್ಲ ಮೇಲ್ಭಾಗದಲ್ಲಿ.
3. ಶಾಂತಿ ಪ್ರಿಯ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಕೆನ್ನೆಗೆ ಹೊಡೆದಿದ್ದಾನೆಂದು ಆತನ ಪತ್ನಿ ಅವನನ್ನು ನ್ಯಾಯಾಲಯಕ್ಕೆ ಕರೆದೊಯ್ದಳು. ನ್ಯಾಯಾಧೀಶರು ಮುಲ್ಲಾನನ್ನು ಕುರಿತು,
`ಮುಲ್ಲಾ ನೀನೊಬ್ಬ ಶಾಂತಿ ಪ್ರಿಯನೆಂದು ಕೇಳಿದ್ದೇನೆ. ಹಾಗಿರುವಾಗ ನೀನೇಕೆ ನಿನ್ನ ಪತ್ನಿಗೆ ಹೊಡೆದೆ?’ ಎಂದು ಕೇಳಿದರು.
`ಹೌದು ಸ್ವಾಮಿ, ನಾನು ನಿಜವಾಗಿಯೂ ಶಾಂತಿಯನ್ನು ಬಯಸುವವನು. ನಾನು ಆಕೆಗೆ ಕೆನ್ನೆಗೆ ಹೊಡೆದಾಗ ಆಕೆ ಒಂದರ್ಧ ಗಂಟೆ ಶಾಂತಿಯಿಂದ ಇದ್ದಳು, ಮನೆಯಲ್ಲೆಲ್ಲಾ ಶಾಂತಿಯಿತ್ತು. ನಾನು ಮತ್ತೊಮ್ಮೆ ಹೇಳುತ್ತೇನೆ ನಾನು ನಿಜವಾಗಿಯೂ ಶಾಂತಿಯನ್ನು ಬಯಸುವವನು.
4. ಅದ್ಭುತ ನಟ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಪತ್ನಿ ನಾಟಕವೊಂದಕ್ಕೆ ಹೋದರು. ನಾಟಕದಲ್ಲಿ ನಾಯಕ ನಾಯಕಿಯನ್ನು ಹೊಗಳಿ, ಗುಣಗಾನ ಮಾಡಿ ಆಕೆಯನ್ನು ತಬ್ಬಿಕೊಂಡು ತನ್ನ ಪ್ರೀತಿಯನ್ನು ತೋರಿದ. ನಾಟಕ ನೋಡುತ್ತಿದ್ದ ಮುಲ್ಲಾನ ಹೆಂಡತಿ,
`ನೋಡಿ, ನಾಯಕನಲ್ಲಿ ಎಷ್ಟೊಂದು ಪ್ರೀತಿಯಿದೆ. ನೀವು ರೀತಿ ಒಂದು ದಿನವಾದರೂ ನನ್ನನ್ನು ಹೊಗಳಿ ಪ್ರೀತಿ ತೋರಿಸಿದ್ದೀರಾ?’ ಎಂದು ಕೇಳಿದಳು.
` ರೀತಿಯ ನಟನೆಗೆ ಅವನಿಗೆ ಹಣ ಕೊಡುತ್ತಾರೆ. ನನಗೆ ಯಾರು ಹಣ ಕೊಡುತ್ತಾರೆ?’ ಕೇಳಿದ ಮುಲ್ಲಾ.
ಅವನ ಪತ್ನಿ ಅಷ್ಟಕ್ಕೇ ಬಿಡಲಿಲ್ಲ. `ಅವರು ನಟರಷ್ಟೇ ಅಲ್ಲ, ನಾಯಕ ನಾಯಕಿಯರು ನಿಜಜೀವನದಲ್ಲಿಯೂ ಗಂಡ ಹೆಂಡತಿಯರು ಗೊತ್ತಿಲ್ಲವೇನು?’ ಎಂದು ಹೇಳಿದಳು.
`ಹಾಗಾದರೆ, ನಾನು ಒಪ್ಪಿಕೊಳ್ಳಲೇಬೇಕು, ನಾಯಕ ನಿಜವಾಗಿಯೂ ಅದ್ಭುತ ನಟ!’ ಎಂದ ಮುಲ್ಲಾ.
5. ಅದ್ಭುತ ವೇಗ!
ಮುಲ್ಲಾ ನಸ್ರುದ್ದೀನ್ ಬೆಂಗಳೂರಿಗೆ ಅದೇ ಮೊದಲ ಬಾರಿಗೆ ಬಂದಿದ್ದ. ಮೆಜೆಸ್ಟಿಕ್ನಲ್ಲಿ ಬಸ್ಸು ಇಳಿದು ಆಟೋ ಹತ್ತಿ ರೈಲ್ವೇ ಸ್ಟೇಷನ್ನಿಗೆ ಹೋಗುವಂತೆ ಹೇಳಿದ. ಆಟೋ ಡ್ರೈವರ್ನಿಗೆ ಆಶ್ಚರ್ಯವೆನ್ನಿಸಿತು. ಅಲ್ಲೇ ಎದುರುಗಡೆಯೇ ರೈಲ್ವೇ ನಿಲ್ದಾಣವಿತ್ತು. ತಕ್ಷಣ,
`ಹಾ. ರೈಲ್ವೇ ನಿಲ್ದಾಣ ಬಂತು, ಅಲ್ಲೇ ಇದೆ ನೋಡಿಎಂದು ಆಟೋ ಡ್ರೈವರ್.
`ಆಯಿತು. ಆದರೆ ನೀನು ಆಟೋ ಅಷ್ಟು ವೇಗವಾಗಿ ಓಡಿಸಬೇಡಪ್ಪಾಹೇಳಿದ ಮುಲ್ಲಾ ಅವನಿಗೆ ಹಣಕೊಡುತ್ತಾ.
6. ಮುಂದಿನ ಭಾಷಣಕಾರ
ಬೊಗಳೆ ರಾಜಕಾರಣಿಯ ಭಾಷಣ ಆರಂಭವಾಯಿತು. ಸಭಿಕರು ಒಬ್ಬೊಬ್ಬರಾಗಿ ಎದ್ದುಹೋಗತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಇಡೀ ಸಭಾಂಗಣವೇ ಖಾಲಿಯಾಯಿತು. ಆದರೆ ಮುಲ್ಲಾ ಒಬ್ಬ ಮಾತ್ರ ಸಭಾಂಗಣದಲ್ಲಿ ಕೂತಿದ್ದ. ರಾಜಕಾರಣಿಗೆ ತನ್ನ ಮಾತುಗಳನ್ನು ಕೇಳುವವನು ಒಬ್ಬನಾದರೂ ಇದ್ದಾನಲ್ಲ ಎಂದು ಸಂತೋಷವಾಯಿತು.
`ನೀವು ನನ್ನ ಭಾಷಣ ಕೇಳುತ್ತಿರುವುದರಿಂದ ನನಗೆ ಸಂತೋಷವಾಗಿದೆ. ಬಹುಶಃ ನಿಮಗೆ ನನ್ನ ತತ್ವಗಳು ಹಿಡಿಸಿರಬಹುದಲ್ಲವೆ?’ ಎಂದು ರಾಜಕಾರಣಿ ಮುಲ್ಲಾನನ್ನು ಕೇಳಿದ.
`ಹಾಗೇನಿಲ್ಲ. ನಿಮ್ಮ ಭಾಷಣದ ನಂತರದ ಮುಂದಿನ ಭಾಷಣಕಾರ ನಾನೇ. ಅದಕ್ಕಾಗಿ ಕಾಯುತ್ತಿದ್ದೇನೆಹೇಳಿದ ಮುಲ್ಲಾ.
7. ಕಿಸೆಗಳೆಲ್ಲಿ?
ಮುಲ್ಲಾ ನಸ್ರುದ್ದೀನ್ ಅತ್ಯಂತ ಸಿರಿವಂತನಾಗಿದ್ದ. ತಾನು ಸತ್ತಾಗ ಸಿದ್ಧವಿರಲೆಂದು ಒಂದು ಸುಂದರ ಬೀಟೆ ಮರದ ಶವಪೆಟ್ಟಿಗೆ ಮಾಡಿಸಿದ. ಪೆಟ್ಟಿಗೆ ಸಿದ್ಧವಾಯಿತು. ತಾನು ಸತ್ತಾಗ ತನ್ನ ಶವಕ್ಕೆ ಹಾಕಲೆಂದು ಒಂದು ಸುಂದರ ಗೌನನ್ನು ಹೊಲೆದು ಕೊಡಲು ದರ್ಜಿಗೆ ಹೇಳಿದ. ಗೌನು ಸಿದ್ಧವಾಯಿತು. ದರ್ಜಿ ಅದನ್ನು ತಂದುಕೊಟ್ಟಾಗ ಅಳತೆ ಸರಿಯಾಗಿದೆಯೇ ಎಂದು ನೋಡಲು ಮುಲ್ಲಾ ಅದನ್ನು ಧರಿಸಿದ. ತಕ್ಷಣ,
`ಇದೇನಿದು ರೀತಿ ಹೊಲೆದಿದ್ದೀಯಾ? ಇದಕ್ಕೆ ಕಿಸೆಗಳೇ ಇಲ್ಲ!’ ಎಂದು ಕೇಳಿದ.
8. ಗೆಳೆಯನ ಹೆಸರೇನು?
ಮುಲ್ಲಾ ನಸ್ರುದ್ದೀನ್ ಎಂದಿನಂತೆ ರಾತ್ರಿ ತಡವಾಗಿ ಮನೆಗೆ ಬಂದ. ಅವನ ಹೆಂಡತಿ ಬಾಗಿಲು ತೆಗೆಯಲಿಲ್ಲ. ಮುಲ್ಲಾ ಹೊರಗಿನಿಂದಲೇ ಕೂಗಿದ,
`ನಾನು ತಡವಾಗಿ ಬಂದಿರುವುದರ ಕಾರಣ ಕೇಳು, ಸಿಟ್ಟಾಗಬೇಡ.
`ಆಯಿತು ಏಕೆ ತಡವಾಗಿ ಬಂದೆ?’ ಕೇಳಿದಳು ಒಳಗಿನಿಂದಲೇ ಪತ್ನಿ.
`ನನ್ನ ಅತ್ಯಂತ ಆಪ್ತ ಗೆಳೆಯನಿಗೆ ಕಾಯಿಲೆಯಾಗಿತ್ತು. ನಾನು ಅವನ ಜೊತೆಗಿದ್ದೆಹೇಳಿದ ಮುಲ್ಲಾ.
`ಹೌದೆ? ಹಾಗಾದರೆ ಗೆಳೆಯನ ಹೆಸರೇನು?’ ಕೇಳಿದಳು ಪಟ್ಟುಬಿಡದ ಪತ್ನಿ.
ತಕ್ಷಣ ಮುಲ್ಲಾನಿಗೆ ಯಾರ ಹೆಸರು ಹೇಳಬೇಕೆಂದು ತಿಳಿಯಲಿಲ್ಲ. ಅವನ ಆಪ್ತ ಗೆಳೆಯರೆಲ್ಲಾ ತನ್ನ ಹೆಂಡತಿಗೆ ತಿಳಿದಿರುವವರೇ! ಆದರೂ ಸಾವರಿಸಿಕೊಂಡು,
`ಅವನಿಗೆ ಅದೆಷ್ಟು ಖಾಯಿಲೆಯಾಗಿತ್ತೆಂದರೆ, ಅವನು ನನಗೆ ತನ್ನ ಹೆಸರನ್ನು ಹೇಳುವ ಸ್ಥಿತಿಯಲ್ಲಿಯೇ ಇರಲಿಲ್ಲಎಂದ.
9. ಇಲಿಯ ಬೋನು
ಮುಲ್ಲಾ ನಸ್ರುದ್ದೀನ್ ಬೆಳಿಗ್ಗೆ ತನ್ನ ಮನೆಯ ಮುಂದೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ,
`ನನ್ನ ಹೆಂಡತಿ ಇಲಿಯ ಬೋನು ಇದ್ದಂತೆ. ಅವಳಿಗೆ ನಾನು ಜೋರಾಗಿ ಏನು ಹೇಳಿದರೂ ಕೇಳುವುದಿಲ್ಲ. ಆದರೆ ಪಿಸುಗುಟ್ಟಿದರೂ ಸಾಕು ಅವಳಿಗೆ ಕೇಳಿಸಿಬಿಡುತ್ತದೆ...’ ಎಂದು ಹೇಳುತ್ತಿದ್ದ. ಅಷ್ಟರಲ್ಲಿ ಅವನ ಹೆಂಡತಿ ಮನೆಯೊಳಗಿನಿಂದ ಬಿರುಗಾಳಿಯಂತೆ ಬಂದವಳು,
`ಏನಂದೆ? ನಾನು ಇಲಿಬೋನೇ? ಹೌದು ನಾನು ಇಲಿ ಬೋನು... ನೀನ್ಯಾರು ಗೊತ್ತೇನು? ನೀನೊಂದು ಇಲಿ. ನಿನಗೆ ನೆನಪಿರಲಿ, ಯಾವುದೇ ಬೋನು ಇಲಿಯನ್ನು ಹುಡುಕಿಕೊಂಡು ಹೋಗುವುದಿಲ್ಲ. ಇಲಿಯೇ ಬೋನನ್ನು ಹುಡುಕಿಕೊಂಡು ಬಂದು ಸಿಕ್ಕಿಬೀಳುತ್ತದೆ. ಹಾಗಿರುವಾಗ, ನಿನ್ನ ಗೆಳೆಯನಿಗೆ ಏನೋ ಹೇಳುತ್ತಿದ್ದೀಯಾ..?’ ಎಂದು ಗುಡುಗಿದಳು.
10. ಸೈತಾನನ ಆಹ್ವಾನ
ಮುಲ್ಲಾ ನಸ್ರುದ್ದೀನ್ ಹೆಂಡದಂಗಡಿಯಿಂದ ಹೊರಬರುತ್ತಿದ್ದಾಗ ಊರಿಗೆ ಹೊಸದಾಗಿ ಬಂದಿದ್ದ ಮೌಲ್ವಿ ಎದುರಾದರು. ಆತ ಮುಲ್ಲಾನನ್ನು ನೋಡಿ, `ಇದೇನಿದು ಮುಲ್ಲಾ... ನಾನೇನು ನೋಡುತ್ತಿದ್ದೇನೆ? ನೀನು ಅತ್ಯಂತ ದೈವಭಕ್ತನೆಂದು ಕೇಳಿದ್ದೇನೆ. ಆದರೆ ನೀನು ಹೆಂಡದಂಗಡಿಯಿಂದ ಬರುತ್ತಿದ್ದೀಯಾ? ಕುಡಿತ ಎನ್ನುವುದು ಸೈತಾನನಿದ್ದಂತೆ. ಮುಂದಿನಸಾರಿ ಸೈತಾನ ನಿನ್ನನ್ನು ಆಹ್ವಾನಿಸಿದರೆ ತಿರಸ್ಕರಿಸಬೇಕು ತಿಳಿಯಿತೆ?’ ಎಂದು ಹೇಳಿದರು. ಅದಕ್ಕೆ ಮುಲ್ಲಾ,
`ನನಗೇನೋ ಸೈತಾನನ ಆಹ್ವಾನವನ್ನು ತಿರಸ್ಕರಿಸಲು ಆಸೆಯಿದೆ ನಿಜ. ಆದರೆ ನಾನು ತಿರಸ್ಕರಿಸಿದರೆ ಸೈತಾನ ಕೋಪಗೊಂಡು ಮುಂದಿನ ಸಾರಿ ಎಲ್ಲಿ ನನ್ನನ್ನು ಆಹ್ವಾನಿಸುವುದಿಲ್ಲವೋ ಎಂಬ ಭಯ ಅಷ್ಟೇ...’ ಎಂದ.
11. ಸ್ವರ್ಗದಲ್ಲಿದ್ದೀನೆಯೆ?
ಮುಲ್ಲಾ ನಸ್ರುದ್ದೀನ ಒಂದು ದಿನ ಎಚ್ಚರ ತಪ್ಪಿ ಬಿದ್ದ ಪ್ರಜ್ಞಾಶೂನ್ಯನಾದ. ತಕ್ಷಣ ಅವನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ಚಿಕಿತ್ಸೆ ನೀಡಿದ ನಂತರ ನಿಧಾನವಾಗಿ ಎಚ್ಚರವಾಯಿತು. ಇನ್ನೂ ಪೂರ್ಣಪ್ರಜ್ಞೆ ಮರಳಿರಲಿಲ್ಲ. ಸುತ್ತಮುತ್ತಲೂ ಆಸ್ಪತ್ರೆಯ ಬಿಳಿಯ ಗೋಡೆಗಳು, ಬಿಳಿಯ ಛಾವಣಿ, ಬಿಳಿಯ ಹಾಸಿಗೆಯ ಹೊದಿಕೆಯಿತ್ತು ಹಾಗೂ ಅವನಿಗೂ ಬಿಳಿಯ ವಸ್ತ್ರ ಹಾಕಿದ್ದರು. ಅರೆಮಂಪರಿನಲ್ಲಿದ್ದ ಅವನಿಗೆ ತಾನು ಸ್ವರ್ಗದಲ್ಲಿರುವಂತೆ ಭಾಸವಾಯಿತು. `ನಾನು... ನಾನು... ಸ್ವರ್ಗದಲ್ಲಿದ್ದೀನೆಯೆ?' ಮೆಲ್ಲಗೆ ಕೇಳಿದ.
`ಇಲ್ಲ... ಇನ್ನೂ ನಾನು ನಿನ್ನೊಂದಿಗೇ ಇದ್ದೀನಲ್ಲ...!' ಎಂದಳು ಪಕ್ಕದಲ್ಲಿದ್ದ ಪತ್ನಿ.
12. ಸಾಲದಿಂದ ಕೊಂಡದ್ದು
ನಸ್ರುದ್ದೀನ್ ಮೋಜಿನಿಂದ ಬದುಕು ನಡೆಸುವವನು ಹಾಗೂ ಬದುಕಿನ ಎಲ್ಲಾ ಸುಖ ವೈಭೋಗಗಳನ್ನು ಅನುಭವಿಸುವವನು. ಆದರೆ ಅವನ ಸಂಪಾದನೆ ರೀತಿಯ ಬದುಕಿಗೆ ಸಾಕಾಗುತ್ತಿರಲಿಲ್ಲ. ಗೆಳೆಯರು, ನೆಂಟರಿಷ್ಟರು ಹಾಗೂ ನೆರೆಹೊರೆಯವರ ಬಳಿಯೆಲ್ಲಾ ಸಾಲ ಮಾಡಿದ್ದ. ಸಾಲ ನೀಡಿದವರೆಲ್ಲರೂ ಅವನ ಹಿಂದೆಬಿದ್ದಿದ್ದರು. ಆದರೆ ಮನೆಗೆ ಸಾಲ ಕೇಳಲು ಬಂದವರ್ಯಾರನ್ನೂ ಅವನು ಹಾಗೆಯೇ ಹಿಂದಿರುಗಿಸುತ್ತಿರಲಿಲ್ಲ. ಅವರನ್ನು ಚೆನ್ನಾಗಿ ಮಾತನಾಡಿಸಿ ಉಪಚರಿಸಿ ಖಂಡಿತಾ ಒಂದಲ್ಲ ಒಂದು ದಿನ ಅವರ ಸಾಲ ಹಿಂದಿರುಗಿಸುವುದಾಗಿ ಹೇಳುತ್ತಿದ್ದ. ಬಹಳ ದಿನಗಳಿಂದ ಮನೆಯ ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಮುಲ್ಲಾನ ಮನೆಗೆ ಕಂದಾಯದ ವಸೂಲಿಗಾರ ಬಂದಾಗ ಆತನನ್ನೂ ಮುಲ್ಲಾ ಮನೆಯೊಳಗೆ ಕೂಡಿಸಿ ಚೆನ್ನಾಗಿ ಉಪಚರಿಸಿ ದುಬಾರಿಯ ಮದ್ಯ ನೀಡಿ ಸದ್ಯಕ್ಕೆ ತನ ಬಳಿ ಹಣವಿಲ್ಲವೆಂದು ಕಂಡಿತಾ ಮುಂದೆ ಒಂದಲ್ಲ ಒಂದು ದಿನ ತನ್ನ ಮನೆಯ ಕಂದಾಯದ ಎಲ್ಲಾ ಬಾಕಿ ತೀರಿಸುವನೆಂದು ಪ್ರಮಾಣ ಮಾಡಿದ.
`ಅಲ್ಲಾ ಮುಲ್ಲಾ, ನಿನ್ನ ಬಳಿ ಹಣವಿಲ್ಲವೆನ್ನುತ್ತೀಯ. ಆದರೆ ರೀತಿಯ ದುಬಾರಿಯ ಮದ್ಯವನ್ನು ನೀಡಿ ಉಪಚಾರಿಸುತ್ತಿದ್ದೀಯ. ಅದು ಹೇಗೆ ಸಾಧ್ಯ?' ಎಂದು ಕೇಳಿದ ಕಂದಾಯದ ವಸೂಲಿಗಾರ.
`ಅದನ್ನೂ ಸಹ ಸಾಲದಿಂದಲೇ ಕೊಂಡುತಂದಿದ್ದೇನೆ' ಹೇಳಿದ ಮುಲ್ಲಾ.
13. ಏನು ಕೊಡುತ್ತೀಯ?
ಮುಲ್ಲಾ ನಸ್ರುದ್ದೀನನಿಗೆ ಮದುವೆಯಾಯಿತು. ಮೊದಲ ದಿನ ಆತನ ಪತ್ನಿ ಅವನಿಗಾಗಿ ರುಚಿಯಾದ ಅಡುಗೆ ಮಾಡಿದಳು. ಆದರೆ ಅವಳಿಗೆ ಅಡಿಗೆ ಮಾಡಿ ಅನುಭವವಿರಲಿಲ್ಲ. ಮುಲ್ಲಾ ಮೊದಲ ದಿನವೆಂದುಕೊಂಡು, ಹೆಂಡತಿಗೆ ಬೇಸರ ಮಾಡಬಾರದೆಂದು ಅತ್ಯಂತ ಕಷ್ಟದಿಂದಲೇ ಅದನ್ನು ತಿಂದ. ಅದನ್ನು ನೋಡಿ ಸಂತೋಷಗೊಂಡ ಅವನ ಹೆಂಡತಿ, `ನಾನು ದಿನಾ ಇದೇ ರೀತಿ ಅಡಿಗೆ ಮಾಡಿದರೆ ನನಗೇನು ಸಿಗುತ್ತದೆ?'  ಎಂದು ಕೇಳಿದಳು.
`ಹೋ, ಖಂಡಿತಾ ಸಿಗುತ್ತದೆ, ನನ್ನ ಜೀವವಿಮೆಯ ಹಣಎಂದ ಮುಲ್ಲಾ.
j.balakrishna@gmail.com