ಬುಧವಾರ, ಡಿಸೆಂಬರ್ 09, 2015

ಮುಲ್ಲಾ ನಸ್ರುದ್ದೀನ್ ಕತೆಗಳು – ಡಿಸೆಂಬರ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 45ನೇ ಕಂತು.




ದೇವರ ಪಾಲು
ಊರಿನ ರಾಜಕಾರಣಿ, ಇಮಾಂ ಮತ್ತು ಮುಲ್ಲಾ ನಸ್ರುದ್ದೀನ್ ಊರಿನಲ್ಲೆಲ್ಲಾ ಸುತ್ತಾಡಿ ಸ್ವಚ್ಛ ಭಾರತ್ ಸೆಸ್ ಎಂದು ಬಹಳಷ್ಟು ಹಣ ಸಂಗ್ರಹಿಸಿದ್ದರು. ದಿನ ಸಂಜೆ ಮೂವರೂ ಹಣವನ್ನು ಏನು ಮಾಡಬೇಕು ಎಂದು ಚರ್ಚಿಸಲು ಕೂತರು.
ರಾಜಕಾರಣಿ ಹೇಳಿದ, `ನೆಲದ ಮೇಲೆ ಒಂದು ವೃತ್ತ ಎಳೆದು ಸಂಗ್ರಹಿಸಿದ ಹಣವನ್ನು ಮೇಲೆ ಎಸೆಯೋಣ. ವೃತ್ತದೊಳಕ್ಕೆ ಬೀಳುವುದನ್ನು ದೇವರಿಗೆ ಕೊಟ್ಟು, ವೃತ್ತದ ಹೊರಗೆ ಬೀಳುವುದನ್ನು ನಾವು ಹಂಚಿಕೊಳ್ಳೋಣ.’
ಇಮಾಂ ಹೇಳಿದ, `ನನಗೊಂದು ವಿಚಾರ ಹೊಳೆದಿದೆ. ನೆಲದ ಮೇಲೆ ಒಂದು ವೃತ್ತ ಎಳೆದು ಸಂಗ್ರಹಿಸಿದ ಹಣವನ್ನು ಮೇಲೆ ಎಸೆಯೋಣ. ವೃತ್ತದ ಹೊರಗೆ ಬೀಳುವುದನ್ನು ದೇವರಿಗೆ ಕೊಟ್ಟು, ವೃತ್ತದೊಳಕ್ಕೆ ಬೀಳುವುದನ್ನು ನಾವು ಹಂಚಿಕೊಳ್ಳೋಣ.’
ಇಬ್ಬರ ಮಾತನ್ನು ಕೇಳಿದ ನಸ್ರುದ್ದೀನ್, `ನನಗೆ ಇನ್ನೂ ಒಳ್ಳೆಯ ವಿಚಾರ ಹೊಳೆದಿದೆ. ನೆಲದ ಮೇಲೆ ಒಂದು ವೃತ್ತ ಎಳೆದು ಸಂಗ್ರಹಿಸಿದ ಹಣವನ್ನು ಮೇಲೆ ಎಸೆಯೋಣ. ದೇವರು ಹೇಗಿದ್ದರೂ ಮೇಲೆ ಇರುವನಲ್ಲವೆ. ಆತನಿಗೆ ಎಷ್ಟು ಬೇಕೊ ಅಷ್ಟು ಹಣವನ್ನು ಆತನೇ ತೆಗೆದುಕೊಳ್ಳುತ್ತಾನೆ. ಕೆಳಗೆ ಬೀಳುವುದೆಲ್ಲವನ್ನೂ ನಾವು ಹಂಚಿಕೊಳ್ಳೋಣಎಂದ.

ತಾಳ್ಮೆಗೂ ಮಿತಿ!
ಅಜ್ಜ ನಸ್ರುದ್ದೀನ್ ಮತ್ತು ಆತನ ಪತ್ನಿ ಅಜ್ಜಿ ಫಾತಿಮಾ ವಕೀಲರ ಕಚೇರಿಗೆ ಬಿರುಗಾಳಿಯಂತೆ ನುಗ್ಗಿದರು.
`ನನಗೆ ಕೂಡಲೇ ವಿವಾಹ ವಿಚ್ಛೇದನ ಬೇಕು!’ ನಸ್ರುದ್ದೀನ್ ಹೇಳಿದ.
`ವಿಚ್ಛೇದನಾ?’ ವಕೀಲನಿಗೆ ಅಚ್ಛರಿಯಾಯಿತು. `ನಿಮ್ಮ ವಯಸ್ಸೆಷ್ಟು?’ ವಕೀಲ ಕೇಳಿದ.
`ತೊಂಭತ್ತೆರಡು, ಹೇಳಿದ ನಸ್ರುದ್ದೀನ್. `ತೊಂಭತ್ತುಹೇಳಿದಳು ಫಾತಿಮಾ.
`ನನಗೆ ಇವಳೊಂದಿಗೆ ಇನ್ನು ಬದುಕುವುದು ಸಾಧ್ಯವಿಲ್ಲ. ನನಗೆ ವಿಚ್ಛೇದನ ಬೇಕುಮತ್ತೊಮ್ಮೆ ಹೇಳಿದ ನಸ್ರುದ್ದೀನ್.
`ನಿಮ್ಮ ಮದುವೆಯಾಗಿ ಎಷ್ಟು ವರ್ಷಗಳಾಯಿತು?’ ಕೇಳಿದ ವಕೀಲ.
`ಎಪ್ಪತ್ತು ವರ್ಷಗಳುಹೇಳಿದ ನಸ್ರುದ್ದೀನ್.
`ಎಪ್ಪತ್ತು ವರ್ಷಗಳು! ಹಾಗಿರುವಾಗ ಈಗೇಕೆ ವಿವಾಹ ವಿಚ್ಛೇದನಾ?’ ಕೇಳಿದ ವಕೀಲ.
`ತಾಳ್ಮೆಗೂ ಒಂದು ಮಿತಿಯಿದೆ!’ ಹೇಳಿದ ನಸ್ರುದ್ದೀನ್.

ಅಂಗಿಯಲ್ಲಿ ನಾನು
ಮುಲ್ಲಾ ನಸ್ರುದ್ದೀನನಿಗೆ ಮದುವೆಯಾದ ಹೊಸತರಲ್ಲಿ ತನ್ನ ಪತ್ನಿ ಬಟ್ಟೆ ಹೇಗೆ ಒಗೆಯುವಳೆಂದು ನೋಡಲು ಹಿತ್ತಿಲಿಗೆ ಹೋದ. ಅಲ್ಲಿ ಆಕೆ ನಸ್ರುದ್ದೀನನ ಅಂಗಿಯನ್ನು ನೀರಿನಲ್ಲಿ ನೆನೆಸಿ, ಕಲ್ಲು ಬಂಡೆಯ ಮೇಲೆ ಹಾಕಿ ದೊಡ್ಡ ಬಡಿಗೆಯಿಂದ ರಪ ರಪ ಬಡಿದಳು, ಬಟ್ಟೆಯನ್ನು ಕೈಯಿಂದ ಎತ್ತಿ ಎತ್ತಿ ಬಂಡೆಯ ಮೇಲೆ ಒಗೆದಳು. ನಂತರ ಅದನ್ನು ಎರಡೂ ಕೈಗಳಿಂದ ಚೆನ್ನಾಗಿ ಹಿಂಡಿ ಜಾಡಿಸಿ ಒಣಗಿ ಹಾಕಿದಳು. ಅದನ್ನು ನೋಡುತ್ತಿದ್ದ ನಸ್ರುದ್ದೀನ್,
`ಒಗೆಯಲು ಅಂಗಿಯನ್ನು ಮಾತ್ರ ಕೊಟ್ಟೆ, ಅದರೊಳಗೆ ನಾನಿರಲಿಲ್ಲಎಂದುಕೊಂಡು ದೇವರಿಗೆ ಧನ್ಯವಾದ ತಿಳಿಸಿದ.

ರಜಾ ದಿನ
ನಸ್ರುದ್ದೀನ್ ಪ್ರಖ್ಯಾತ ಜ್ಯೋತಿಷಿಯಾಗಿದ್ದ. ಊರಿನ ಪ್ರಖ್ಯಾತ ರಾಜಕಾರಣಿಗೆ ಆರೋಗ್ಯ ಸರಿಯಿರಲಿಲ್ಲ. ಆತನಿಗೆ ಆತನ ಸಾವಿನ ಹೆದರಿಕೆ ಕಾಡತೊಡಗಿತ್ತು. ತಾನು ಯಾವ ದಿನ ಸಾಯಬಹುದೆಂಬುದನ್ನು ತಿಳಿದುಕೊಳ್ಳಲು ಜ್ಯೋತಿಷಿ ನಸ್ರುದ್ದೀನನನಿಗೆ ಹೇಳಿ ಕಳುಹಿಸಿದ.
ಅಲ್ಲಿಗೆ ಬಂದ ನಸ್ರುದ್ದೀನ್ ಅವರ ಕೈ, ನಾಡಿ ಹಿಡಿದು ಪರೀಕ್ಷಿಸಿದ. ಅಂಗೈಯಲ್ಲಿನ ಗೆರೆಗಳನ್ನು ಎಣಿಸಿ,
`ನಿಮಗೆ ಸಾವು ಒಂದು ರಜಾದಿನದಂದು ಬರಲಿದೆಎಂದು ಹೇಳಿದ.
ರಾಜಕಾರಣಿಗೆ ಕುತೂಹಲ ಹೆಚ್ಚಾಯಿತು. `ಯಾವ ರಜಾ ದಿನ?’ ಕೇಳಿದ.
`ನೀವು ಎಂದು ಸಾಯುತ್ತೀರೋ ಅಂದು ರಜಾ ಘೋಷಿಸುತ್ತಾರೆಹೇಳಿದ ನಸ್ರುದ್ದೀನ್.

ಪ್ರಾಮಾಣಿಕ ಕಳ್ಳ
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ಊರಿನ ಮಸೀದಿಯ ಇಮಾಂನ ಗಡಿಯಾರ ಕದ್ದುಬಿಟ್ಟ. ಆದರೆ ಅವನನ್ನು ಪಾಪಪ್ರಜ್ಞೆ ಕಾಡುತ್ತಿತ್ತು. ಅವನಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ಇಮಾಂನ ಬಳಿ ಹೋದ.
`ನಾನೊಂದು ಗಡಿಯಾರ ಕದ್ದುಬಿಟ್ಟಿದ್ದೇನೆಎಂದ ತಲೆತಗ್ಗಿಸಿ ಬಾಲಕ ನಸ್ರುದ್ದೀನ್.
`ನಸ್ರುದ್ದೀನ್ ಕಳ್ಳತನ ಕೆಟ್ಟದ್ದು! ಕೂಡಲೇ ಅದನ್ನು ಹಿಂದಿರುಗಿಸಬೇಕುಹೇಳಿದ ಇಮಾಂ.
`ಈಗ ನಾನೇನು ಮಾಡಲಿ?’ ಕೇಳಿದ ನಸ್ರುದ್ದೀನ್.
`ಅದನ್ನು ಅದರ ಮಾಲೀಕರಿಗೆ ಹಿಂದಿರುಗಿಸುಹೇಳಿದ ಇಮಾಂ.
` ಗಡಿಯಾರ ನಿಮಗೆ ಕೊಡಲೆ?’ ಕೇಳಿದ ನಸ್ರುದ್ದೀನ್.
`ನನಗೆ ಬೇಡ. ನಾನು ಹೇಳಿದ್ದು ಅದನ್ನು ಅದರ ಮಾಲೀಕರಿಗೆ ಹಿಂದಿರುಗಿಸು ಎಂದುಹೇಳಿದ ಇಮಾಂ.
`ಅದರ ಮಾಲೀಕರಿಗೆ ಅದು ಬೇಡವಂತೆಹೇಳಿದ ನಸ್ರುದ್ದೀನ್.
`ಹಾಗಿದ್ದಲ್ಲಿ ಅದನ್ನು ನೀನೇ ಇಟ್ಟುಕೋಹೇಳಿದ ಇಮಾಂ.
ಪಾಪಪ್ರಜ್ಞೆಯಿಂದ ಮುಕ್ತನಾದ ನಸ್ರುದ್ದೀನ್ ಅಲ್ಲಿಂದ ಸಂತೋಷವಾಗಿ ಹೊರಟ.

ನ್ಯಾಯಾಧೀಶನಾಗುತ್ತಿದ್ದ
ನ್ಯಾಯಾಧೀಶ ನಸ್ರುದ್ದೀನ್ ಮತ್ತು ಆತನ ಪತ್ನಿ ಫಾತಿಮಾ ಒಂದು ದಿನ ಸಂಜೆ ವಾಯುವಿಹಾರಕ್ಕೆಂದು ನಡೆಯುತ್ತಾ ಹೊರಟರು. ಹಾದಿಯಲ್ಲಿ ಒಂದು ಹೊಸ ಮನೆ ಕಟ್ಟುತ್ತಿದ್ದರು ಹಾಗೂ ಅಲ್ಲಿನ ಒಬ್ಬ ಗಾರೆ ಕೆಲಸದವ ಫಾತಿಮಾಳನ್ನು ಕಂಡು ಮಾತನಾಡಿಸಲು ಬಂದ. ಅವರಿಬ್ಬರೂ ಆತ್ಮೀಯರಂತೆ ಸ್ವಲ್ಪ ಹೊತ್ತು ಮಾತನಾಡಿದರು ಹಾಗೂ ಪರಸ್ಪರ ವಿದಾಯ ಹೇಳಿ ಹೊರಟರು.
`ಆತ ನನ್ನ ಬಾಲ್ಯದ ಗೆಳೆಯ. ನಿನಗೆ ಗೊತ್ತೇನು, ಒಂದು ಹಂತದಲ್ಲಿ ನಾನು ಅವನನ್ನು ಮದುವೆಯಾಗುವವಳಿದ್ದೆಎಂದಳು ಫಾತಿಮಾ ತನ್ನ ಗಂಡ ನ್ಯಾಯಾಧೀಶ ನಸ್ರುದ್ದೀನನಿಗೆ.
`ಅವನನ್ನು ನೀನು ಮದುವೆಯಾಗದಿದ್ದದು ಒಳ್ಳೆಯದಾಯಿತು. ಇಲ್ಲವಾದಲ್ಲಿ ನೀನಿಂದು ನ್ಯಾಯಾಧೀಶನ ಪತ್ನಿಯಾಗಿರುತ್ತಿರಲಿಲ್ಲ ಬದಲಿಗೆ ಗಾರೆ ಕೆಲಸದವನ ಪತ್ನಿಯಾಗಿರುತ್ತಿದ್ದೆಎಂದ ನಸ್ರುದ್ದೀನ್.
`ಹಾಗೇನಿಲ್ಲ, ನನ್ನನ್ನು ಮದುವೆ ಮಾಡಿಕೊಂಡ ಮೇಲೆ ನೀನು ನ್ಯಾಯಾಧೀಶನಾದಂತೆ, ಆತ ಸಹ ನ್ಯಾಯಾಧೀಶನಾಗಿರುತ್ತಿದ್ದಎಂದಳು ಫಾತಿಮಾ.

ಲೋಕಾಯುಕ್ತ
ಊರಿನ ಗಡಂಗಿನಲ್ಲಿ ಕಾವಲಿಗೆಂದು ಒಬ್ಬ ಧಡಿಯನನ್ನು ನೇಮಿಸಿಕೊಂಡಿದ್ದರು. ಅವನಷ್ಟು ಶಕ್ತಿಶಾಲಿ ಯಾರೂ ಇಲ್ಲವೆಂಬ ಪ್ರತೀತಿಯಿತ್ತು. ಅವನು ನಿಂಬೆಹಣ್ಣನ್ನು ಹಿಂಡಿ ರಸ ತೆಗೆದನಂತರ ಯಾರಾದರೂ ಅದೇ ಹಣ್ಣಿನಿಂದ ಒಂದು ತೊಟ್ಟು ರಸ ತೆಗೆದರೂ ಅವರಿಗೆ ಒಂದು ಸಾವಿರ ರೂಪಾಯಿ ಕೊಡುವುದಾಗಿ ಬಾಜಿ ಕಟ್ಟಿದ್ದ. ಎಷ್ಟೋ ಜನ ಪ್ರಯತ್ನಿಸಿ ಪಂದ್ಯದಲ್ಲಿ ಸೋತಿದ್ದರು. ಅದನ್ನು ಗಮನಿಸುತ್ತಿದ್ದ ಊರಿಗೆ ಹೊಸದಾಗಿ ಬಂದಿದ್ದ ಹಾಗೂ ದಿನ ಗಡಂಗಿಗೆ ಬಂದಿದ್ದ ನಸ್ರುದ್ದೀನ್ ತಾನು ಹಣ್ಣಿನಿಂದ ರಸ ತೆಗೆಯುವುದಾಗಿ ಪಂದ್ಯ ಕಟ್ಟಿದ. ಜನ ಎಲ್ಲಾ ಕುತೂಹಲದಿಂದ ಸುತ್ತುವರಿದು ನಿಂತರು. ಧಡಿಯ ನಿಂಬೆಹಣ್ಣನ್ನು ಹಿಂಡಿ ಅದರಲ್ಲಿನ ಎಲ್ಲಾ ರಸವನ್ನು ತೆಗೆದ. ಜನ ತಪ್ಪಾಳೆ ತಟ್ಟಿದರು. ನಸ್ರುದ್ದೀನ್ ತನ್ನ ಅಂಗಿ ತೋಳಿನವರೆಗೂ ಮಡಚಿ ಹಣ್ಣನ್ನು ತೆಗೆದುಕೊಂಡು ರಸವನ್ನು ಹಿಂಡಿ ತೆಗೆಯಲು ಮುಂದಾದ. ಇದುವರೆಗೆ ಪ್ರಯತ್ನಿಸಿರುವ ಎಲ್ಲರಂತೆ ಅವನೂ ಪಂದ್ಯದಲ್ಲಿ ಸೋಲುತ್ತಾನೆ ಎಂದು ಜನ ನಿರೀಕ್ಷಿಸಿದ್ದರು. ಆದರೆ ನಸ್ರುದ್ದೀನ್ ಹಿಂಡಿ ಹಿಪ್ಪೆಯಾಗಿದ್ದ ನಿಂಬೆ ಹಣ್ಣನ್ನು ಹಿಂಡಿ ಒಂದೇನು, ಐದಾರು ತೊಟ್ಟು ರಸ ಬರುವಂತೆ ಮಾಡಿದ. ಜನ ಎಲ್ಲಾ ತಪ್ಪಾಳೆ ತಟ್ಟಿದರು ಹಾಗೂ ಆತ ಯಾವ ಊರಿನವನು ಮತ್ತು ಏನು ಕೆಲಸ ಮಾಡುತ್ತಾನೆಂದು ಕೇಳಿದರು.
`ನಾನು ಊರಿಗೆ ಹೊಸಬ ಹಾಗೂ ನಾನು ಕೆಲಸ ಮಾಡುವುದು ಕರ್ನಾಟಕ ಲೋಕಾಯುಕ್ತದಲ್ಲಿಎಂದು ಹೇಳಿದ.

ಜೋಕ್
ದಿನ ಸಂಜೆ ಜನ ಎಲ್ಲಾ ಊಟವಾದ ನಂತರ ಒಟ್ಟಿಗೆ ಕೂತು ಹರಟೆ ಹೊಡೆಯುತ್ತಿದ್ದರು. ಕೆಲವರು ನಸ್ರುದ್ದೀನನಿಗೆ ಯಾವುದಾದರೂ ಜೋಕ್ ಹೇಳುವಂತೆ ಕೇಳಿದರು.
ನಸ್ರುದ್ದೀನ್, `ಒಂದು ದಿನ ಇಬ್ಬರು ಮುಸಲ್ಮಾನ ಮುದುಕರು...’ ಎಂದು ಪ್ರಾರಂಭಿಸಿದ. ಅಷ್ಟರಲ್ಲಿ ಒಬ್ಬಾತ,
`ಅದೇನು ನಸ್ರುದ್ದೀನ್, ನೀನು ಯಾವಾಗಲೂ ಮುಸಲ್ಮಾನರ ಬಗ್ಗೆ ಜೋಕ್ ಮಾಡ್ತೀಯಾ?’ ಎಂದು ಕೇಳಿದ.
`ಹೋ, ತಪ್ಪಾಯಿತು ಕ್ಷಮಿಸಿ. ಜೋಕನ್ನು ಪುನಃ ಹೇಳುತ್ತೇನೆಎಂದು ಹೇಳಿ, `ಒಂದು ದಿನ ಇಬ್ಬರು ಚೀನೀ ಮುದುಕರು ನಮಾಜಿಗೆಂದು ಮಸೀದಿಗೆ ಹೊರಟರು...’ ಎಂದು ಪ್ರಾರಂಭಿಸಿದ.

ಬಡ್ಡಿ ವಸೂಲಿ
ಕೆಲವು ಪ್ರಯಾಣಿಕರಿದ್ದ ಹಡಗೊಂದು ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ಚೂರುಚೂರಾಯಿತು. ಪ್ರಯಾಣಿಕರು ಹಾಗೂ ಹಡಗಿನ ಕಪ್ತಾನ ಎಲ್ಲಾ ದ್ವೀಪವೊಂದು ಸೇರಿಕೊಂಡರು. ಎಲ್ಲರನ್ನೂ ಸೇರಿಸಿದ ಕಪ್ತಾನ,
`ನಾವೇನೋ ಬದುಕಿ ದ್ವೀಪ ಸೇರಿಕೊಂಡಿದ್ದೀವಿ. ಆದರೆ ದ್ವೀಪವಿರುವುದು ಜಗತ್ತಿಗೆ ತಿಳಿದೇ ಇಲ್ಲ. ಹಾಗಾಗಿ ನಮ್ಮನ್ನು ಯಾರೂ ಹುಡುಕಿಕೊಂಡು ಬರುವುದಿಲ್ಲ ಹಾಗೂ ನಾವು ಇಲ್ಲಿಂದ ಹೊರಹೋಗಲು ಹಡಗೂ ಇಲ್ಲ. ಬಹುಶಃ ನಾವೆಲ್ಲಾ ಸಾಯುವವರೆಗೆ ಇಲ್ಲೇ ದ್ವೀಪದಲ್ಲೇ ಇರಬೇಕಾಗುತ್ತದೆಎಂದ.
ಅಷ್ಟರಲ್ಲಿ ಗುಂಪಿನಲ್ಲಿದ್ದ ಗಂಡ-ಹೆಂಡತಿ ಮಾತನಾಡಿಕೊಳ್ಳತೊಡಗಿದರು.
`ನಾವು ಮುಲ್ಲಾ ನಸ್ರುದ್ದೀನನ ಬಳಿ ಸಾಲ ತೆಗೆದುಕೊಂಡಿದ್ದೀವಲ್ಲ. ನೀನು ಅದರ ತಿಂಗಳ ಬಡ್ಡಿಯನ್ನು ಅವನಿಗೆ ಕೊಟ್ಟಿದ್ದೀಯಾ?’ ಎಂದು ಗಂಡ ತನ್ನ ಹೆಂಡತಿಯನ್ನು ಕೇಳಿದ.
`ಛೇ! ಎಂಥಾ ಕೆಲಸವಾಯ್ತು. ಮರೆತೇ ಬಿಟ್ಟೆ. ತಿಂಗಳ ಬಡ್ಡಿಯನ್ನು ಅವನಿಗೆ ಕೊಟ್ಟಿಲ್ಲಎಂದಳು ಪತ್ನಿ.
`ಎಂಥಾ ಒಳ್ಳೆಯ ಕೆಲಸ ಮಾಡಿದ್ದೀಯಾ! ನೀನು ನಮ್ಮನ್ನು ಬದುಕಿಸಿದೆ. ನಾವು ಅವನಿಗೆ ಬಡ್ಡಿ ಕೊಟ್ಟಿಲ್ಲ ಎಂದರೆ, ನಾವು ಎಲ್ಲಿದ್ದರೂ ಅವನು ನಮ್ಮನ್ನು ಹುಡುಕದೇ ಬಿಡುವುದಿಲ್ಲ!’ ಎಂದ ಗಂಡ ಸಂತೋಷದಿಂದ.

ಬಂಧೀಖಾನೆ
ನಸ್ರುದ್ದೀನ್ ಬಂಧೀಖಾನೆ ಸಚಿವರಾಗಿದ್ದರು. ಒಂದು ದಿನ ತಮ್ಮ ರಾಜ್ಯದ ಬಂಧೀಖಾನೆ ಹೇಗಿದೆಯೆಂದು ಪ್ರತ್ಯಕ್ಷ ವೀಕ್ಷಿಸಿ ತಿಳಿದುಕೊಳ್ಳೋಣವೆಂದು ಹೊರಟರು. ಬಂಧೀಖಾನೆಗೆ ಭೇಟಿ ನೀಡಿ ಕೈದಿಗಳನ್ನೆಲ್ಲಾ ಮಾತನಾಡಿಸಿದರು. ಅದರಲ್ಲಿದ್ದ ಅರ್ಧದಷ್ಟು ಕೈದಿಗಳು ತಾವು ತಪ್ಪು ಮಾಡಿಲ್ಲವೆಂದೂ, ವಿನಾಕಾರಣ ತಮ್ಮನ್ನು ಇತರ ತಪ್ಪು ಮಾಡಿದ ಕೈದಿಗಳಂತೆ ಬಂಧಿಸಿಟ್ಟಿದ್ದಾರೆಂದು ತಿಳಿಸಿದರು.
`ಛೆ! ಛೇ! ಇದು ಅನ್ಯಾಯಎಂದು ಹೇಳಿದ ಬಂಧೀಖಾನೆ ಸಚಿವರಾದ ನಸ್ರುದ್ದೀನ್ರವರು ತಮ್ಮೊಡನೆ ಬಂದಿದ್ದ ಅಧಿಕಾರಿಗಳಿಗೆ, `ನೋಡಿ, ಮತ್ತೊಂದು ಬಂಧೀಖಾನೆ ಕಟ್ಟಿಸಿ ಒಂದರಲ್ಲಿ ತಪ್ಪು ಮಾಡಿದ ಕೈದಿಗಳನ್ನು ಹಾಗೂ ಮತ್ತೊಂದರಲ್ಲಿ ಪ್ರತ್ಯೇಕವಾಗಿ ತಪ್ಪು ಮಾಡದ ಕೈದಿಗಳನ್ನು ಬಂಧಿಸಿಡಿಎಂದು ಅಜ್ಞಾಪಿಸಿದರು.

ಡೈಲಾಗ್ ಇರುವ ಪಾತ್ರ
ನಸ್ರುದ್ದೀನನ ಮಗ ದಿನ ಸಂಜೆ ಶಾಲೆಯಿಂದ ಬಂದವನೇ,
`ಅಪ್ಪಾ, ನನಗೆ ಶಾಲೆಯಲ್ಲಿ ನಡೆಯುವ ನಾಟಕದಲ್ಲಿ ನಟಿಸಲು ಅವಕಾಶ ಸಿಕ್ಕಿದೆಎಂದು ಹೇಳಿದ.
`ಹೌದೆ? ಯಾವ ಪಾತ್ರ?’ ಕೇಳಿದ ನಸ್ರುದ್ದೀನ್.
`ಒಬ್ಬ ಗಯ್ಯಾಳಿ ಹೆಂಡತಿಯ ಗಂಡನ ಪಾತ್ರಹೇಳಿದ ನಸ್ರುದ್ದೀನನ ಮಗ.
` ಪಾತ್ರ ಬೇಡವೆಂದು ನಿನ್ನ ಅಧ್ಯಾಪಕರಿಗೆ ಹೇಳು. ಯಾವುದಾದರೂ ಡೈಲಾಗ್ ಇರುವ ಪಾತ್ರ ಬೇಕೆಂದು ಕೇಳುಸಲಹೆ ನೀಡಿದ ನಸ್ರುದ್ದೀನ್.

ಮಂಡಿನೋವು ವಾಪಸ್
ವೈದ್ಯರು: ನಸ್ರುದ್ದೀನ್, ನನ್ನ ಚಿಕಿತ್ಸೆಗೆ ಶುಲ್ಕವೆಂದು ನೀನು ನೀಡಿದ್ದ ಚೆಕ್ ನಿನ್ನ ಖಾತೆಯಲ್ಲಿ ಹಣವಿಲ್ಲವೆಂದು ವಾಪಸ್ ಬಂದಿದೆ.
ನಸ್ರುದ್ದೀನ್: ಹೌದು. ನೀವು ವಾಸಿ ಮಾಡಿದ್ದ ನನ್ನ ಮಂಡಿ ನೋವು ಸಹ ವಾಪಸ್ ಬಂದಿದೆ.

ಮೂರ್ಖ
ಮುಲ್ಲಾ ನಸ್ರುದ್ದೀನನ ಬಳಿ ಒಬ್ಬ ಯುವಕ ಬಂದು, `ಮುಲ್ಲಾ, ನನಗೆ ತಿಳಿದಿದೆ ನಾನೊಬ್ಬ ಮೂರ್ಖ ಎಂದು, ಆದರೆ ಅದರ ಬಗ್ಗೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲಎಂದು ಹೇಳಿದ.
`ಮಗನೇ, ನೀನೊಬ್ಬ ಮೂರ್ಖ ಎನ್ನುವುದು ನಿನಗೆ ತಿಳಿದಿದ್ದರೆ, ನೀನು ಖಂಡಿತಾ ಮೂರ್ಖನಲ್ಲಎಂದ ಮುಲ್ಲಾ ನಸ್ರುದ್ದೀನ್.
`ಹಾಗಿದ್ದರೆ, ಎಲ್ಲರೂ ನನ್ನನ್ನು ನಾನೊಬ್ಬ ಮೂರ್ಖ ಎಂದು ಏಕೆ ಹೇಳುತ್ತಾರೆ?’ ಕೇಳಿದ ಪಟ್ಟುಬಿಡದ ಯುವಕ.

`ನೀನು ಏಕೆ ಮೂರ್ಖ ಎನ್ನುವುದು ನಿನಗೇ ತಿಳಿದಿಲ್ಲದಿದ್ದಲ್ಲಿ ಹಾಗೂ ನೀನು ಯಾರು ಎನ್ನುವುದರ ಕುರಿತು ಇತರರ ಮಾತು ಕೇಳಿ ನೀನು ಅದನ್ನು ನಂಬುವುದಾದಲ್ಲಿ, ನೀನು ಖಂಡಿತಾವಾಗಿಯೂ ಮೂರ್ಖ, ಹೇಳಿದ ನಸ್ರುದ್ದೀನ್.

j.balakrishna@gmail.com

ಸೋಮವಾರ, ನವೆಂಬರ್ 09, 2015

ಮುಲ್ಲಾ ನಸ್ರುದ್ದೀನ್ ಕತೆಗಳ 44ನೇ ಕಂತು

ನವೆಂಬರ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 44ನೇ ಕಂತು 

ನೀವು ನಸ್ರುದ್ದೀನ್‍ರವರೆ?
ಮಸೀದಿಯಲ್ಲಿ ನಮಾಜಿಗೆಂದು ಹೋಗುವವರು ತಮ್ಮ ಕೋಟುಗಳನ್ನು ತೆಗೆದು ಒಂದು ಗೂಟಕ್ಕೆ ತಗುಲಿಸಿ ಒಳಕ್ಕೆ ಹೋಗುತ್ತಿದ್ದರು. ಬರುವಾಗ ಅದನ್ನು ಧರಿಸಿ ವಾಪಸ್ಸು ಹೋಗುತ್ತಿದ್ದರು. ಒಂದು ದಿನ ನಸ್ರುದ್ದೀನ್ ನಮಾಜು ಮುಗಿಸಿ ಬಂದು ಕೋಟ್ ಧರಿಸುತ್ತಿದ್ದ ಒಬ್ಬಾತನನ್ನು,
`ನೀವು ಮುಲ್ಲಾ ನಸ್ರುದ್ದೀನ್‍ರವರೆ?’ ಎಂದು ಕೇಳಿದ. 
`ಇಲ್ಲ’ ಎಂದ ಆ ವ್ಯಕ್ತಿ ಸಿಡುಕಿನಿಂದ.
`ಕ್ಷಮಿಸಿ, ನೀವು ಧರಿಸುತ್ತಿರುವ ಕೋಟು ಮುಲ್ಲಾ ನಸ್ರುದ್ದೀನನದು’ ಎಂದ ನಸ್ರುದ್ದೀನ್.

ಸತ್ಯವನ್ನೇ ನುಡಿಯುತ್ತೇನೆ
ಅಬ್ದುಲ್ಲಾ: ನಾನು ನನ್ನ ಹೆಂಡತಿಗೆ ನಡೆದುದೆಲ್ಲವನ್ನೂ ಹೇಳಿಬಿಡುತ್ತೇನೆ.
ನಸ್ರುದ್ದೀನ್: ಹೋ, ನಾನು ಹಾಗೇನಿಲ್ಲ. ನಾನು ಅವಳಿಗೆ ಹೇಳುವ ಎಷ್ಟೋ ವಿಷಯಗಳು ನಡೆದಿರುವುದೇ ಇಲ್ಲ.

ಇಂಕ್ ರಾಜಕಾರಣ
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ತನ್ನ ಅಪ್ಪನ ಬಳಿ ಬಂದು, `ಅಪ್ಪಾ ಇಂಕ್ ದುಬಾರಿಯಾದುದೇ?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನನ ತಂದೆ, `ಇಲ್ಲವಲ್ಲಾ, ಏಕೆ ಯಾರಾದರೂ ನಿನ್ನನ್ನು ವಿರೋಧಿಸುವವರ ಮುಖಕ್ಕೆ ಹಚ್ಚಬೇಕೆ?’ ಎಂದು ಕೇಳಿದ.
`ಇಲ್ಲ. ಮನೆಯ ರತ್ನಗಂಬಳಿಯ ಮೇಲೆ ಸ್ವಲ್ಪವೇ ಇಂಕ್ ಚೆಲ್ಲಿದ್ದಕ್ಕಾಗಿ ಅಮ್ಮ ಸಿಕ್ಕಾ ಬಟ್ಟೆ ಬಯ್ಯುತ್ತಿದ್ದಾರೆ. ಅದಕ್ಕೇ ಕೇಳಿದೆ’ ಎಂದ ನಸ್ರುದ್ದೀನ್.

ಪಾಪ ಮುದುಕ!
ಬಾಲಕ ನಸ್ರುದ್ದೀನ್ ತನ್ನ ತಾಯಿಯ ಬಳಿ ಬಂದು,
`ಅಮ್ಮಾ, ಪಾಪ ಯಾರೋ ಮುದುಕ ರಸ್ತೆಯಲ್ಲಿ ಅರಚುತ್ತಿದ್ದಾನೆ. ಆತನಿಗೆ ಕೊಡಲು ಹತ್ತು ರೂಪಾಯಿ ಕೊಡು’ ಎಂದು ಕೇಳಿದ.
ಅವನ ತಾಯಿ, `ಹೌದೆ? ಪಾಪ. ಏನೆಂದು ಅರಚುತ್ತಿದ್ದಾನೆ?’ ಎಂದು ಕೇಳಿದರು.
`ಐಸ್ ಕ್ಯಾಂಡಿ! ಹತ್ತು ರೂಪಾಯಿಗೆರಡು! ಎಂದು ಅರಚುತ್ತಿದ್ದಾನೆ’ ಎಂದ ನಸ್ರುದ್ದೀನ್.

ಅದು ನಿನ್ನೆಯದು
ಅಧ್ಯಾಪಕರು: ನಸ್ರುದ್ದೀನ್ ನೀನು ಶಾಲೆಗೆ ಬರುವಾಗ ಚೆನ್ನಾಗಿ ಮುಖ ತೊಳೆದು, ಸ್ನಾನ ಮಾಡಿ ಬರಬೇಕು. ಈಗ ನಿನ್ನ ಮುಖ ನೋಡಿದರೆ ನೀನು ಬೆಳಿಗ್ಗೆ ಉಪಾಹಾರಕ್ಕೆ ಏನು ತಿಂದಿರುವೆಯೆಂದು ಹೇಳಬಹುದು.
ನಸ್ರುದ್ದೀನ್: ಹೌದೆ? ಈ ದಿನ ನಾನು ಏನು ತಿಂದಿರುವೆ ಹೇಳಿ.
ಅಧ್ಯಾಪಕರು: ನಿನ್ನ ಮುಸುಡಿಗೆ ಮೆತ್ತಿಕೊಂಡಿದೆ ನೋಡು. ನೀನು ಉಪ್ಪಿಟ್ಟು ತಿಂದು ಬಂದಿರುವೆ.
ನಸ್ರುದ್ದೀನ್: ತಪ್ಪು ಟೀಚರ್. ಅದು ನಿನ್ನೆ ತಿಂದದ್ದು.

ಕೊಡುಗೆ
ಫಾತಿಮಾ: ನಿಮ್ಮ ಹುಟ್ಟಿದ ಹಬ್ಬಕ್ಕೆ ನಿಮಗೆ ಅಚ್ಚರಿ ನೀಡೋಣವೆಂದು ಒಂದು ಸುಂದರ ವಸ್ತ್ರದುಡುಗೆ ತಂದಿದ್ದೇನೆ.
ನಸ್ರುದ್ದೀನ್: ಹೌದೆ? ಎಲ್ಲಿ ನೋಡೋಣ
ಫಾತಿಮಾ: ಒಂದು ನಿಮಿಷ, ಅದನ್ನು ಧರಿಸಿ ಬಂದುಬಿಡುತ್ತೇನೆ.
ದೊಡ್ಡ ಕೆಲಸ
ನಸ್ರುದ್ದೀನ್ ಮೃಗಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ. ಮೊದಲ ದಿನ ಅವನಿಗೆ ನಾಯಿ ನರಿಗಳಿಗೆ ಸ್ನಾನ ಮಾಡಿಸುವ ಕೆಲಸ ನೀಡಲಾಯಿತು. ಸಿಡುಕಿನಿಂದ ನಸ್ರುದ್ದೀನ್,
`ನನಗೆ ಇಂಥ ಸಣ್ಣ ಪುಟ್ಟ ಕೆಲಸ ಬೇಡ. ನಾನು ದೊಡ್ಡ ಕೆಲಸದ ನಿರೀಕ್ಷೆಯಿಂದ ಇಲ್ಲಿ ಕೆಲಸಕ್ಕೆ ಸೇರಿಕೊಂಡೆ’ ಎಂದ.
`ಹೌದೆ? ಹಾಗಾದರೆ ಆನೆ, ಜಿರಾಫೆಗಳಿಗೆ ಸ್ನಾನ ಮಾಡಿಸು’ ಎಂದರು ಮೃಗಾಲಯದ ಮೇಲ್ವಿಚಾರಕರು.

ಪ್ರೀತಿ
ಫಾತಿಮಾ: ನನ್ನ ಗಂಡ ನಸ್ರುದ್ದೀನನನಿಗೆ ನನ್ನ ಮೇಲೆ ಎಷ್ಟೊಂದು ಪ್ರೀತಿಯಿದೆ ಗೊತ್ತಾ? ರಾತ್ರಿ ನಿದ್ರೆಯಲ್ಲೆಲ್ಲಾ ಕನವರಿಸುತ್ತಾ ಪ್ರೀತಿಯ ಮಾತುಗಳನ್ನಾಡುತ್ತಿರುತ್ತಾನೆ.
ರುಕ್ಸಾನಾ: ಹೌದಾ? ನೀನೇ ಅದೃಷ್ಟವಂತೆ ಕಣೇ!
ಫಾತಿಮಾ: ಆದರೆ ನಸ್ರುದ್ದೀನನಿಗೆ ಮರೆವು ಹೆಚ್ಚು ನಿನಗೆ ಗೊತ್ತಲ್ಲಾ, ನನ್ನ ಹೆಸರಿನ ಬದಲು ಬೇರೆ ಯಾರದೋ ಹೆಸರು ಹೇಳುತ್ತಿರುತ್ತಾನೆ.

ಹಣ ಮಾತನಾಡುತ್ತದೆ
ಫಾತಿಮಾ: ಹಣ ಮಾತನಾಡುತ್ತದಂತೆ ಹೌದೆ?
ನಸ್ರುದ್ದೀನ್: ಇರಬಹುದು. ಜನ ಹಾಗೆಂದು ಹೇಳುತ್ತಾರೆ.
ಫಾತಿಮಾ: ನೀವು ಹೊರಗೆ ಹೋದ ನಂತರ ಮನೆಯಲ್ಲಿ ನಾನೊಬ್ಬಳೇ, ಮಾತನಾಡಲು ಯಾರೂ ಇರುವುದಿಲ್ಲ ಬೇಸರವಾಗುತ್ತದೆ. ಮಾತನಾಡಲು ಒಂದಷ್ಟು ಹಣ ಇಟ್ಟು ಹೋಗಿ.

ಗುಡಗು-ಸಿಡಿಲು
ನಸ್ರುದ್ದೀನ್ ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ರಾತ್ರಿ ಜೋರಾಗಿ ಮಳೆ ಸುರಿದಿರುವುದನ್ನು ಕಂಡ. ಫಾತಿಮಾಳಿಗೆ,
`ರಾತ್ರಿ ಜೋರಾಗಿ ಮಳೆ ಬಿತ್ತೆ?’ ಎಂದು ಕೇಳಿದ.
`ಎಂಥ ಮಳೆ ಸುರಿಯಿತು! ಅದಕ್ಕಿಂತ ಜೋರಾಗಿತ್ತು ಗುಡಗು-ಸಿಡಿಲಿನ ಅಬ್ಬರ!’ ಎಂದಳು ಫಾತಿಮಾ.
`ಛೇ! ಎಂಥ ಕೆಲಸ ಮಾಡಿದೆ! ನನ್ನನ್ನೇಕೆ ಎಬ್ಬಿಸಲಿಲ್ಲ? ನಿನಗೆ ಗೊತ್ತಲ್ಲ, ನನಗೆ ಗುಡಗು-ಸಿಡಿಲಿದ್ದರೆ ನಿದ್ದೆ ಬರುವುದಿಲ್ಲವೆಂದು?’ ಹೇಳಿದ ನಸ್ರುದ್ದೀನ್.

ತೂಗುಹಾಕಿದ್ದಾರೆ
ನಸ್ರುದ್ದೀನ್ ಕಲಾ ಮ್ಯೂಸಿಯಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಭೇಟಿ ನೀಡಿದ ಒಬ್ಬಾತ,
`ಅಂಥ ಕೆಟ್ಟ ಕಲಾಕೃತಿಯನ್ನು ಏಕೆ ಇಲ್ಲಿ ತೂಗು ಹಾಕಿದ್ದಾರೆ?’ ಎಂದು ನಸ್ರುದ್ದೀನನನ್ನು ಕೇಳಿದ.
`ಬಹುಶಃ ಅವರ ಕೈಗೆ ಅದರ ಕಲಾವಿದ ಸಿಕ್ಕಿರಲಿಲ್ಲವೆನ್ನಿಸುತ್ತದೆ’ ಹೇಳಿದ ನಸ್ರುದ್ದೀನ್.

ಭರಿಸುವುದು ಸಾಧ್ಯವಿಲ್ಲ
ವೃದ್ಧ ನಸ್ರುದ್ದೀನ್ ಆರೋಗ್ಯವಾಗಿದ್ದ. ಪತ್ರಿಕೆಯವರೊಬ್ಬರು ಸಂದರ್ಶನ ನಡೆಸುವಾಗ,
`ನಿಮಗಿಷ್ಟು ವಯಸ್ಸಾಗಿದ್ದರೂ ನೀವು ಆರೋಗ್ಯವಾಗಿದ್ದೀರ. ಏನು ಅದರ ರಹಸ್ಯ?’ ಎಂದು ಕೇಳಿದರು.
`ಅದರಲ್ಲಿ ರಹಸ್ಯವೇನೂ ಇಲ್ಲ. ಇಂದಿನ ಆಸ್ಪತ್ರೆಗಳು, ಚಿಕಿತ್ಸೆಗಳು ಎಷ್ಟು ದುಬಾರಿಯೆಂದು ನಿಮಗೆ ತಿಳಿದೇ ಇದೆ. ನನ್ನ ಬಡತನದಲ್ಲಿ ನಾನು ಕಾಯಿಲೆ ಬೀಳುವಂಥ ಸವಲತ್ತುಗಳು ನನಗಿಲ್ಲ’ ಎಂದ ಅಜ್ಜ ನಸ್ರುದ್ದೀನ್.

ಮದುವೆಯಾದವರು
ನಸ್ರುದ್ದೀನ್ ಹೊಸದಾಗಿ ಅಂಗಡಿ ತೆರೆದ ಹಾಗೂ ಅಲ್ಲಿ ಕೆಲಸ ಮಾಡಲು ಮದುವೆಯಾದ ಗಂಡಸರೇ ಬೇಕು ಎಂಬ ಫಲಕ ಹಾಕಿದ್ದ. ಅದನ್ನು ಕಂಡ ಒಬ್ಬಾತ ಕುತೂಹಲದಿಂದ
`ಅದ್ಯಾಕೆ ಮದುವೆಯಾದ ಗಂಡಸರೇ ಬೇಕು?’ ಎಂದು ಕೇಳಿದ.
`ಏಕೆಂದರೆ, ನಾನೆಷ್ಟು ಬೈದರೂ ತಾಳ್ಮೆಯಿಂದ ಸಹಿಸಿಕೊಳ್ಳುವ ಅನುಭವವಿರುವವರು ನನ್ನ ಕೆಲಸಕ್ಕೆ ಬೇಕು’ ಎಂದ ನಸ್ರುದ್ದೀನ್.

ಕಿವುಡು
ನಸ್ರುದ್ದೀನನ ಬಳಿ ಕೆಲಸಕ್ಕೆ ಸೇರಿಕೊಂಡ ಒಬ್ಬಾತ ಕೆಲದಿನಗಳಲ್ಲೇ ನಸ್ರುದ್ದೀನನ ಬಳಿ ಬಂದು,
`ನನಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಕೆಲಸ ಮಾಡಲು ತೊಂದರೆಯಾಗುತ್ತದೆ. ನಾನು ಕೆಲಸ ಬಿಡುತ್ತೇನೆ’ ಎಂದ.
`ಹೇ, ಅಷ್ಟಕ್ಕೆಲ್ಲಾ ಕೆಲಸ ಬಿಡುವ ಅವಶ್ಯಕತೆಯಿಲ್ಲ. ಇನ್ನು ಮೇಲೆ ನೀನು ದೂರುಗಳ ವಿಭಾಗದಲ್ಲಿ ಕೆಲಸ ಮಾಡು’ ಎಂದ ನಸ್ರುದ್ದೀನ್.

ರಾತ್ರಿ ಬರಬೇಡ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಸ್ವರ್ಗ ನರಕಗಳ ಬಗ್ಗೆ ಮಾತನಾಡುತ್ತಿದ್ದರು. ಅಬ್ದುಲ್ಲಾ, `ನಸ್ರುದ್ದೀನ್ ನಾನೇನಾದರೂ ಮೊದಲು ಸತ್ತರೆ ವಾಪಸ್ಸು ಬಂದು ನಿನಗೆ ಸ್ವರ್ಗ-ನರಕಗಳು ಹೇಗಿವೆಯೆಂದು ಹೇಳುತ್ತೇನೆ. ನೀನು ಮೊದಲು ಸತ್ತರೆ ವಾಪಸ್ಸು ಬಂದು ನನಗೆ ಅದನ್ನೇ ಹೇಳಬೇಕು’ ಎಂದ.
`ಅದು ಒಳ್ಳೇ ವಿಚಾರ. ನೀನು ಮೊದಲು ಸತ್ತು ವಾಪಸ್ಸು ಬರುವುದಾದರೆ ಹಗಲು ಹೊತ್ತೇ ಬಾ, ರಾತ್ರಿ ಬಂದು ನನ್ನನ್ನು ಹೆದರಿಸಬೇಡ’, ಹೇಳಿದ ನಸ್ರುದ್ದೀನ್.

ಸೂಕ್ತ ಕಾರಣ
ನಸ್ರುದ್ದೀನ್ ಸೈನ್ಯದಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದ. ಅವನ ಮೇಲಧಿಕಾರಿ ತುಂಬಾ ಕಟ್ಟುನಿಟ್ಟಿನವನಾಗಿದ್ದು ಯಾರಿಗೂ ಯಾವ ಕಾರಣಕ್ಕೂ ರಜೆ ಕೊಡುತ್ತಿರಲಿಲ್ಲ. ಯಾರಾದರೂ ಹೋಗಿ, `ನನ್ನ ತಂದೆಗೆ ಗಂಭೀರ ಕಾಯಿಲೆ. ರಜೆ ಬೇಕು’ ಎಂದರೆ, `ನನ್ನ ತಂದೆಗೂ ಗಂಭೀರ ಕಾಯಿಲೆಯಾಗಿತ್ತು. ನಾನೇನು ರಜೆ ತೆಗೆದುಕೊಳ್ಳಲಿಲ್ಲವಲ್ಲ’ ಎನ್ನುತ್ತಿದ್ದ. ಮತ್ತಾರಾದರೂ, `ನನ್ನ ತಂಗಿಗೆ ಮದುವೆ, ರಜೆ ಬೇಕು’ ಎಂದರೆ, `ನನ್ನ ತಂಗಿಗೂ ಮದುವೆಯಾಯ್ತು, ನಾನೇನು ರಜೆ ತೆಗೆದುಕೊಳ್ಳಲಿಲ್ಲವಲ್ಲಾ’ ಎನ್ನುತ್ತಿದ್ದ. ನಸ್ರುದ್ದೀನನಿಗೆ ತುರ್ತಾಗಿ ಊರಿಗೆ ಹೋಗಬೇಕಾಗಿತ್ತು. ಅವನೂ ಹೋಗಿ ಒಂದು ಕಾರಣ ಹೇಳಿ ರಜೆ ಕೇಳಿದ. ಅವನಿಗೆ ಕೂಡಲೇ ರಜೆ ಮಂಜೂರಾಯಿತು. ಇತರ ಸಿಪಾಯಿಗಳಿಗೆಲ್ಲಾ ಮಹದಚ್ಚರಿಯಾಯ್ತು. ಎಲ್ಲರೂ ಮುಗಿಬಿದ್ದು ಯಾವ ಕಾರಣ ಹೇಳಿದ್ದಕ್ಕೆ ರಜೆ ಮಂಜೂರಾಯಿತೆಂದು ಕೇಳಿದರು.
`ನನ್ನ ಹೆಂಡತಿ ಯಾವೊನೊಟ್ಟಿಗೋ ಓಡಿ ಹೋಗಿದ್ದಾಳೆ, ಊರಿಗೆ ತುರ್ತಾಗಿ ಹೋಗಬೇಕು, ರಜೆ ಬೇಕು ಎಂದು ಕೇಳಿದೆ’ ಎಂದ ನಸ್ರುದ್ದೀನ್.

j.balakrishna@gmail.com