ಮಂಗಳವಾರ, ಡಿಸೆಂಬರ್ 26, 2023

ಕೈಗಾ ಸುತ್ತಮುತ್ತಲಿನಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್!

 ‌18ರ ಡಿಸೆಂಬರ್‌ 2023ರ ʻಪ್ರಜಾವಾಣಿʼಯಲ್ಲಿ ಪ್ರಕಟವಾದ ವರದಿಯೊಂದು ʻಕಾರವಾರ: ಮೂರು ವರ್ಷದಲ್ಲಿ 1097 ಕ್ಯಾನ್ಸರ್‌ ಪ್ರಕರಣʼ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಲ್ಲಿ ʻಪ್ರತಿ ವರ್ಷ ಸರಾಸರಿ ಮುನ್ನೂರಕ್ಕೂ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಕಳೆದ ಐದಾರು ವರ್ಷಗಳಿಂದ ಈಚೆಗೆ ಅವುಗಳ ಸಂಖ್ಯೆಹೆಚ್ಚುತ್ತಿದೆ ಎಂದು ಹಿರಿಯ ವೈದ್ಯಾಥಿಕಾರಿಗಳು ಹೇಳುತ್ತಾರೆʼ ಎಂದಿದೆ. ಅದರಲ್ಲೆ ವೈದ್ಯರೊಬ್ಬರ ಪ್ರಕಾರ ʻಜೀವನಶೈಲಿ, ಆಹಾರ ಪದ್ಧತಿಗಳು ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಾರಣʼವೆಂದೂ ಸಹ ವರದಿ ಮಾಡಿದೆ.


ಕೈಗಾದ ಅಣುಸ್ಥಾವರಕ್ಕೂ ಈ ಕ್ಯಾನ್ಸರ್‌ ಹೆಚ್ಚಳಕ್ಕೂ ಸಂಬಂಧವಿರಬಹುದೆ? ಸಂಶೋಧನೆ ಮತ್ತು ಅಧ್ಯಯನಗಳು ನಡೆಯಬೇಕಿವೆ.

 ಈ ಸಂದರ್ಭದಲ್ಲಿ ನಾನು 37 ವರ್ಷಗಳ ಹಿಂದೆ 1986ರಲ್ಲಿ ಬರೆದಿದ್ದ ಲೇಖನ ಕೋಲಾರದ ಗೆಳೆಯರಾದ ಲಕ್ಷ್ಮೀಪತಿ ಕೋಲಾರ ಹಾಗೂ ದಿ. ಸೋಮಶೇಖರಗೌಡ ತರುತ್ತಿದ್ದ ʻಸಂಚಿಕೆ -ಮೂಡಲ ಸೀಮೆಯ ವಾರಪತ್ರಿಕೆʼಯಲ್ಲಿ ಪ್ರಕಟವಾಗಿತ್ತು. ಆ ಲೇಖನ ಅಣುಸ್ಥಾವರಗಳ ಅಪಾಯಕಾರಿ ತ್ಯಾಜ್ಯವನ್ನು ಕೋಲಾರದ ಚಿನ್ನದ ಗಣಿಗಳಲ್ಲಿ ಹೂಳಲು ಸರ್ಕಾರ ಆಲೋಚಿಸುತ್ತಿದ್ದಾಗ ಬರೆದಿದ್ದ ಲೇಖನವಾಗಿತ್ತು. ಆ ಲೇಖನ ಪ್ರಕಟವಾದ ನಂತರ ಕೋಲಾರದ ಸಂಸದರು ದೆಹಲಿಯಲ್ಲಿ ಪಾರ್ಲಿಮೆಂಟಿನಲ್ಲಿ ಸಹ ಆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಲೇಖನದಲ್ಲಿ  ʻದುರಂತಗಳಿಗೆ ಆಹ್ವಾನ ಅಣುಶಕ್ತಿʼ ಎಂಬ ಒಂದು ಬಾಕ್ಸ್‌ ಐಟಂ ಸಹ ಇತ್ತು.  ಆಗಷ್ಟೇ ಕಾರವಾರದ ಕೈಗಾದಲ್ಲಿ ಅಣುಸ್ಥಾವರ ಸ್ಥಾಪಿಸುವ ಸುದ್ದಿಯನ್ನು ಕರ್ನಾಟಕ ಸರ್ಕಾರ ಸಹ ಸ್ವಾಗತಿಸಿತ್ತು. ಆ ಲೇಖನದಲ್ಲಿ ಅಣುಸ್ಥಾವರಗಳಿಂದಾಗುವ ಅಪಾಯದ ಮುನ್ಸೂಚನೆಯನ್ನು ನಾನು ಬರೆದಿದ್ದೆ. ನನ್ನ ಮತ್ತೊಂದು ಲೇಖನ (ಈಗದು ಕಾಲೇಜುಗಳ ಪಠ್ಯವೂ ಆಗಿದೆ) ʻಅಣ್ವಸ್ತ್ರ ಯುದ್ಧ ಮನುಕುಲದ ಚರಮಗೀತೆʼಯಲ್ಲಿ ʻನಮ್ಮ ಮಡಿಲಲ್ಲಿಯೂ ಕೈಗಾ ಎಂಬ ಅಗ್ನಿಪಕ್ಷಿ ಕಾವು ಕೂತಿದೆʼ ಎಂದು ಬರೆದಿದ್ದೇನೆ. ಕೆಲದಿನಗಳ ಹಿಂದೆ ಪ್ರಜಾವಾಣಿಯ ವರದಿ ಓದಿದಾದ ಅದು ನೆನಪಾಯಿತು. ಇಲ್ಲಿ ಶೇರ್‌ ಮಾಡಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ:


ದುರಂತಗಳಿಗೆ ಆಹ್ವಾನ ಅಣು ಶಕ್ತಿ

 ಕಾರವಾರದ ಬಳಿ ಕಾಳಿ ನದಿಯ ದಂಡೆಯ ಮೇಲೆ ಅಣು ಶಕ್ತಿಯಿಂದ ಉತ್ಪಾದಿಸಬಲ್ಲ ಕುಲುಮೆಯನ್ನು ಕೈಗಾ ಎಂಬಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಸ್ವಾಗತಿಸಿದೆ. ಅಣು ಶಕ್ತಿಯ ವಿದ್ಯುತ್ತು ತುಂಬಾ ವೆಚ್ಚದ್ದೆಂದೂ ಅದರ ಉಸ್ತುವಾರಿ ತೀರಾ ಅಪಾಯಕಾರಿಯೆಂದೂ ಅಮೆರಿಕ, ಸ್ವೀಡನ್ ಮುಂತಾದ ದೇಶಗಳು ತಮ್ಮ ಅಣುಘಟಕಗಳನ್ನು ಮುಚ್ಚುತ್ತಿವೆ. ಅಣುಶಕ್ತಿ ದುರಂತಗಳಿಗೆ ಬೇಕಾದಷ್ಟು ಉದಾಹರಣೆಗಳಿವೆ.

 1957 ರಲ್ಲಿ ಇಂಗ್ಲೆಂಡ್‌ನ ವಿಂಡ್ ಸ್ಕೇಲ್' ಎಂಬಲ್ಲಿ 12 ಟನ್ ಯುರೇನಿಯಂ ಇಂಧನಕ್ಕೆ ಬೆಂಕಿ ಬಿತ್ತು. ಅಲ್ಲಿ ಅಣು ವಿಕಿರಣ 65 ಕಿಲೋಮೀಟರ್ ದೂರಕ್ಕೂ ಪಸರಿಸಿ ದನಕರುಗಳ ವಿಕಾರ ಸಂತತಿ ಸೃಷ್ಟಿಸಿದೆ. ಪಶ್ಚಿಮ ಜರ್ಮನಿಯ ಲಿಂಜೆನ್ ಎಂಬಲ್ಲಿನ ಅಣುಘಟಕದ ಸುತ್ತ ಮುತ್ತ ಮೊದಲಿಗಿಂತ ಏಳು ಪಟ್ಟು ಮಂದಿ ರಕ್ತದ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 1959ರಲ್ಲಿ ರಷ್ಯಾದ ಕಿಷ್ತಿಮ್ ಎಂಬಲ್ಲಿ ಅಣು ಭಸ್ಮವೇ ಆಸ್ಫೋಟಿಸಿ ಸಾವಿರಾರು ಕಿಲೋಮೀಟರ್ ಕ್ಷೇತ್ರದಲ್ಲಿ ಜೀವ ಜಂತುಗಳೆಲ್ಲ ನಾಶವಾಗಿವೆ. ಅಮೇರಿಕದ ಡೆಟ್ರಾಯಿಟ್ ಎಂಬಲ್ಲಿ 1966ರಲ್ಲಿ ಇಡೀ ಆಣುಘಟಕವೇ ಕರಗುವ ಸ್ಥಿತಿಗೆ ಬಂದು ನಗರವನ್ನೇ ಖಾಲಿ  ಮಾಡಿಸಬೇಕಾದ ಸಂದರ್ಭ ಬಂದಿತ್ತು. 1969ರಲ್ಲಿ ಸ್ವಿಟ್ಜರ್ಲೆಂಡಿನಲ್ಲಿ ಅಣುಸ್ಥಾವರ ಸ್ಫೋಟವಾಗಿ ಚೊಕ್ಕ ಮಾಡಲು ತಿಂಗಳು ಬೇಕಾಯಿತು. 1979ರಲ್ಲಿ ಅಮೇರಿಕದ 'ತ್ರೀ ಮೈಲ್ ಐಲೆಂಡ್" ಎಂಬಲ್ಲಿ ಆಣುಘಟಕ ಕರಗಿ ಸ್ಫೋಟಕ ಸ್ಥಿತಿಗೆ ಬಂದು ನೂರುಕೋಟಿ ಡಾಲರ್‌ಗಳಷ್ಟು ನಷ್ಟವಾಯಿತು,

          ತೀರಾ ಇತ್ತೀಚೆಗೆ ನಡೆದ ರಷ್ಯಾದ ಚೆರ್ನೋಬಿಲ್‌ ಅಣುಸ್ಥಾವರದ ದುರಂತ ಅತ್ಯಂತ ಘೋರವಾದದ್ದು, ಎಲ್ಲಾ ರಾಷ್ಟ್ರಗಳೂ ಅಣುಸ್ಥಾವರಗಳ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳಲು ಧ್ವನಿ ಕಳೆದುಕೊಂಡಿರುವಾಗ ನಮ್ಮ ʻರಾಹುಕಾಲ'ದ ರಾಜಾರಾಮಣ್ಣನಂಥ ವಿಜ್ಞಾನಿಗಳು ನಮ್ಮ ಅಣುಸ್ಥಾವರಗಳು ಅತ್ಯಂತ ಸುರಕ್ಷಿತವಾದದ್ದೆಂದೂ, ಅತಿ ಕಡಿಮೆ ವೆಚ್ಚದ್ದೆಂದೂ ಬಡಾಯಿ ಕೊಚ್ಚಿಕೊಳ್ಳುತ್ತ ಜನರ ಮೌಢ್ಯ ಅಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ರಾಹು ಕೇತುಗಳ ಹಾಗೆ ಇವರಂಥ ವಿಜ್ಞಾನಿಗಳು ಇಂಡಿಯಾದ ವಿಜ್ಞಾನ ರಂಗವನ್ನು ಹಿಡಿದಿರುವವರೆಗೂ ಜನ ನಿರಾಳವಾಗಿ ಉಸಿರಾಡುವ ಹಾಗಿಲ್ಲ.

ಇಡೀ ಲೇಖನ ಇಲ್ಲಿದೆ:

ಸಂಚಿಕೆ - ಮೂಡಲ ಸೀಮೆಯ ವಾರಪತ್ರಿಕೆ, ಸೆಪ್ಟೆಂಬರ್ 21, 1986

ಸಾವಿನ ಮನೆಯಾಗಲಿರುವ ಚಿನ್ನದ ಗಣಿಗಳು

“ಅಣು ಸ್ಥಾವರಗಳಲ್ಲಿ ವಿದ್ಯುಚ್ಛಕ್ತಿ ಉತ್ಪಾದಿಸಿದ ನಂತರ ಉಳಿಯುವ ʻಪ್ಲುಟೋನಿಯಂ' ಎಂಬ ಮೃತ್ತುಕಾರಕ 'ಕಸ'ವನ್ನು ಹೂತುಬಿಡಲು ವಿಜ್ಞಾನಿಗಳು ಕೋಲಾರದ ಚಿನ್ನದ ಗಣಿಗಳನ್ನು ಆರಿಸಿದ್ದಾರೆ. ಚಿನ್ನ ಕೊಟ್ಟ ಕೋಲಾರದ ಮಡಿಲಿಗೆ ಅಣುವಿಜ್ಞಾನಿಗಳು ವೈಜ್ಞಾನಿಕ ʻಅನೈತಿಕತೆಯ ಪಾಪದ ಪಿಂಡ'ಗಳನ್ನು ತುಂಬಿ ಚಿನ್ನದ ಗಣಿಗಳನ್ನು - ʻಸಾವಿನ ಮನೆ'ಗಳನ್ನಾಗಿ ಮಾಡಲು ಹೊರಟಿದ್ದಾರೆ.”

ಇತ್ತೀಚಿನ ಪತ್ರಿಕಾ ವರದಿಯಂತೆ ಇಂಡಿಯಾದ ಅಣು ವಿಜ್ಞಾನಿಗಳು ಅತ್ಯಂತ ಅಪಾಯ ಕಾರಿ ವಿಕಿರಣ (RADIATION ) ಸೂಸುವ ಅಣು ಸ್ಥಾವರಗಳ ಕಸದಿಂದ (RADIATION WASTE ) ಬಿಡುಗಡೆ ಹೊಂದಲು ಅದನ್ನು ಭೂಮಿಯು ಆಳದಲ್ಲಿ ಮಾತು ಬಿಡಲು ಆಲೋಚಿಸುತ್ತಿದ್ದಾರೆ. ಅದಕ್ಕೆ ಅವರು ಹುಡುಕಿಸುವ ಜಾಗ ಕೋಲಾರದ ಚಿನ್ನದ ಗಣಿಗಳು, ಅದರ ಸಾಧ್ಯತೆಗೆಳನ್ನು ಪರೀಕ್ಷಿಸಲು ಈಗ ಯಾವುದೋ ಮೂಲೆಯಲ್ಲಿ ಒಂದು ಪ್ರಾಯೋಗಿಕ ಸಂಶೋಧನಾ ಕೇಂದ್ರ ಕೆಲಸ ಮಾಡುತ್ತಿದೆ. ಚಿನ್ನ ಕೊಟ್ಟ ಕೋಲಾರದ ಮಡಿಲಿಗೆ ಅಣು ವಿಜ್ಞಾನಿಗಳು ವೈಜ್ಞಾನಿಕ ಅನೈತಿಕತೆಯ ಪಾಪದ ಪಿಂಡವನ್ನು ತುಂಬಲು ಸನ್ನಾಹ ನಡೆಸಿದ್ದಾರೆ.

 ಅಣುಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದಿಸಲು ಯುರೇನಿಯಂ ಎಂಬ ಲೋಹ ಬಳಸುತ್ತಾರೆ. ಈ ಲೋಹದಿಂದ ಸದಾ ವಿಕಿರಣ ಹೊರ ಸೂಸುತ್ತಿರುತ್ತವೆ. ಅಣುಸ್ಥಾವರದಲ್ಲಿ ಯುರೇನಿಯಂ ಸಿಡಿದ ನಂತರ ಉಳಿಯುವ ಭಸ್ಮಕ್ಕೆ ಪ್ಲುಟೋನಿಯಂ ಎನ್ನುತ್ತಾರೆ. ಇದೂ ಸಹ ವಿಕಿರಣ ಹೊರಸೂಸುತ್ತದೆ, ಈ ವಿಕಿರಣಗಳು ಅತ್ಯಂತ ಅವಾಯಕಾರಿ, ಈ 'ಕಸ'ವನ್ನು ಎಲ್ಲಿಯೂ ಬಚ್ಚಿಟ್ಟು ವಿಕಿರಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಕಿರಣಗಳು ಗಾಳಿ, ನೀರು ಮುಂತಾದವುಗಳಿಂದ ಪಸರಿಸುತ್ತವೆ. ಇದನ್ನು ಗಣಿಗಳಂತಹ ಆಳದಲ್ಲಿ ಹೂತಿಟ್ಟರೂ ಅಂತರ್ಜಲದ ಮೂಲಕ ವಿಕಿರಣ ಪಸರಿಸಬಹುದು. ದೇಹದ ಮೂಲಕ ಸುಲಭವಾಗಿ ತೂರಿ ಹೋಗಬಲ್ಲ ಈ ವಿಕಿರಣಗಳು ಮತ್ತು ಮನುಷ್ಯನ ದೇಹದ ಮೇಲೆ ಭಯಂಕರ ಪರಿಣಾಮ ಬೀರುತ್ತವೆ. ಮನುಷ್ಯನ ಅಂಗಾಗಗಳ ಮೂಲಕ ತೂರಿ ಕ್ಯಾನ್ಸರ್ ಉಂಟು ಮಾಡುತ್ತವೆ. ಗಂಡನರಲ್ಲಿ ನಪುಂಸಕ ಹೆಂಗಸರಲ್ಲಿ ಬಂಜೆತನ ಉಂಟು ಮಾಡುತ್ತವೆ, ಬಸುರಿ ಹೆಂಗಸರ ಗರ್ಭ ಭೇದಿಸಿ ಗರ್ಭಪಾತ ಉಂಟುಮಾಡಬಹುದು, ಇಲ್ಲದಿದ್ದಲ್ಲಿ ಅಂಗವಿಕಲ ಸಂತತಿಯನ್ನೇ ಸೃಷ್ಟಿಸುತ್ತವೆ. ಅಲ್ಲದೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ವಿಕಿರಣಗಳು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನೇ ಹಾಳು ಮಾಡುವುದರಿಂದ ʻಏಡ್ಸ್'ನಂಥ ಭಯಂಕರ ಖಾಯಿಲೆಗಳು ಸುಲಭವಾಗಿ ಹರಡಿಕೊಂಡು ಬಿಡುತ್ತವೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ನಡೆಸಿದ ಅಣುಬಾಂಬ್ ಪ್ರಯೋಗಗಳಿಂದ ಹೊರಹೊಮ್ಮಿದ ವಿಕಿರಣಗಳು ಆಗಿನ ಭ್ರೂಣಾವಸ್ಥೆಯಲ್ಲಿದ್ದವರ ರೋಗ ನಿರೋಧಕ ಶಕ್ತಿಯನ್ನು ಹಾಳುಮಾಡಿದ್ದರಿಂದಲೇ ಈಗ ʻಏಡ್ಸ್‌ʼ ಹುಟ್ಟಿಕೊಂಡಿರಬಹುದೆಂಬ ಗುಮಾನಿಯನ್ನು ಹಲವಾರು ವಿಜ್ಞಾನಿಗಳು ವ್ಯಕ್ತ ಪಡಿಸಿದ್ದಾರೆ.

ಅಣುಸ್ಥಾವರದಲ್ಲಿ ಕೊನೆಯಲ್ಲಿ ಉಳಿಯುವ ಪ್ಲುಟೋನಿಯಂ ಭಸ್ಮ, ಕೆಲಸಕ್ಕೆ ಬಾರದ ಉಪಕರಣಗಳು, ವಿಕಿರಣಗಳಿಂದ ರಕ್ಷಣೆ ಪಡೆಯಲು ಉಪಯೋಗಿಸುವ ಹೊದಿಕೆಗಳು (ವಿಕಿರಣ ಹೀರಿ ಹೀರಿ ಕೊನೆಗೆ ಇವೂ ಸಹ ವಿಕಿರಣ ಹೊರಸೂಸಲು ಪ್ರಾರಂಭಿಸುತ್ತವೆ) ಮುಂತಾದುವುಗಳಿಂದ ಬಿಡುಗಡೆ ಹೊಂದಲು ಪೂರ್ವ ಮತ್ತು ಪಶ್ಚಿಮ ಜರ್ಮನಿ, ಅಮೆರಿಕ ಮುಂತಾದ ದೇಶಗಳು ಹಳೆ ಗಣಿಗಳಲ್ಲಿ, ಸಮುದ್ರಗಳಲ್ಲಿ ಎಸೆದು ಬಿಡುತ್ತಿದ್ದರು. ಆದರೆ ಸಮುದ್ರಗಳಲ್ಲಿ ಜೀವರಾಶಿಗಾಗುವ ಅಪಾರ ಹಾನಿಯಿಂದಾಗಿ ಸಧ್ಯಕ್ಕೆ ಅದನ್ನು ನಿಲ್ಲಿಸಲಾಗಿದೆ.

          ಈ ವಿಕಿರಣ ಸೂಸುವ ಭಸ್ಮ ಮುಂತಾದ 'ಕಸʼವನ್ನು ಹೇಗೆ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಯಾರೂ ಸಮರ್ಪಕವಾಗಿ ಉತ್ತರ ಹುಡುಕಿಲ್ಲ.

          ಅಣುಸ್ಥಾವರಗಳ 'ಕಸ'ವನ್ನು ಮುನಿಸಿಪಾಲಿಟಿ ಕಸದ ಹಾಗೆ ಎಲ್ಲೆಂದರಲ್ಲಿ ಎಸೆಯುವುದು ಸಾಧ್ಯವಿಲ್ಲ, ಏಕೆಂದರೆ ಅವುಗಳಿಂದ ಅಪಾಯಕಾರಿ ವಿಕಿರಣಗಳು ಸುಮಾರು 1,00,000 ವರ್ಷಗಳವರೆಗೂ ಹೊರಸೂಸುತ್ತಿರುತ್ತವೆ! ಬಾಬಾ ಅಣು ಸಂಶೋಧನಾ ಕೇಂದ್ರದವರು ತಾರಾಪುರ ಅಣುಸ್ಥಾವರದ ಬಳಿ ಒಂದು ತಾತ್ಕಾಲಿಕ ಭೂಗತ ʻಅಣುಶವಾಗಾರʼವನ್ನು ನಿರ್ಮಿಸಿದ್ದಾರೆ. ದಪ್ಪ ಕಾಂಕ್ರಿಟ್ ಗೋಡೆ ಮತ್ತು ಉಕ್ಕಿನ ಹೊದಿಕೆಯಿಂದ ನಿರ್ಮಿಸಲಾಗಿರುವ 'ಶವಾಗಾರʼವನ್ನು ನಿರ್ಮಿಸಲು ಎಂಟು ವರ್ಷ ಸಮಯ ತೆಗೆದುಕೊಂಡಿದೆ ಮತ್ತು ತಗುಲಿರುವ ವೆಚ್ಚ 700 ಕೋಟಿಗಳು.  ಆ ʻಶವಾಗಾರ'ಗಳಲ್ಲಿ ಅಣುಸ್ಥಾವರಗಳ ಕಸವನ್ನು ತುಂಬಿಡಲಾಗುತ್ತದೆ. ಯಾರೂ ನರಪಿಳ್ಳೆಗಳು ಹತ್ತಿರ ಬರದಂತೆ ಹಗಲು ರಾತ್ರಿ ಕಾವಲು ಕಾಯುತ್ತಾರೆ. ಆ ಕಸ ಉಂಟುಮಾಡುವ ಶಾಖವನ್ನು ತಣ್ಣಗಾಗಿಸಲು ದಿನಕ್ಕೆರಡು ಗಂಟೆ ತಣ್ಣನೆ ಗಾಳಿ ಹಾಯಿಸುತ್ತಾರೆ. ಅಲ್ಲಿಂದ ಆ ಕಸವನ್ನು ಸಾಗಿಸಿ ಕೋಲಾರದ ಚಿನ್ನದ ಗಣಿಗಳಲ್ಲಿ ಶಾಶ್ವತವಾಗಿ ಮುಚ್ಚಿಬಿಡಬೇಕೇದು ವಿಜ್ಞಾನಿಗಳು ಅಲೋಚಿಸುತ್ತಿದ್ದಾರೆ. ಅದೇ ಸರಹದ ತಾತ್ಕಾಲಿಕ ಅಣು ಶವಾಗಾರಗಳನ್ನು ಟ್ರಾಂಬೆ, ಕಲ್ಪಕಂ ಮತ್ತು ಮದರಾಸಿನಲ್ಲಿಯೂ ಸಹ ನಿರ್ಮಿಸಲು ನಮ್ಮ ವಿಜ್ಞಾನಿಗಳು ಆಲೋಚಿಸುತ್ತಿದ್ದಾರೆ. ಕೋಲಾರದ ಚಿನ್ನದ ಗಣಿಗಳು  'ಕಸದ ತೊಟ್ಟಿʼಗಳಾಗಲಿವೆ, ಅಷ್ಟೇ ಅಲ್ಲ ʻಮೃತ್ಯುಕೂಪ'ಗಳೂ ಸಹ ಆಗಲಿವೆ.








ನನ್ನ ಮತ್ತೊಂದು ಲೇಖನ: ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ? ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ:

https://antaragange.blogspot.com/2019/02/blog-post_18.html