ಗುರುವಾರ, ಮೇ 17, 2012
ಶುಕ್ರವಾರ, ಮೇ 11, 2012
ಸಾದತ್ ಹಸನ್ ಮಂಟೋ ಜನ್ಮ ಶತಮಾನೋತ್ಸವ - ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದು?
ಇಂದಿಗೆ ಸಾದತ್ ಹಸನ್ ಮಂಟೋ (11.5.1912-18.1.1955) ಹುಟ್ಟಿ ನೂರು ವರ್ಷಗಳಾದುವು. ಆತ ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, 'ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ' ಎಂದಿದ್ದಾನೆ. ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು. ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು. ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.
ನಾನು ಅನುವಾದಿಸಿರುವ 'ಮಾಂಟೊ ಕತೆಗಳು' ಲಂಕೇಶ್ ಪ್ರಕಾಶನದಲ್ಲಿ ಪ್ರಕಟವಾಗಿದೆ (ಲಂಕೇಶ್ ಪ್ರಕಾಶನ, ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು-560004. ದೂರವಾಣಿ: 080-26676427, ಪುಟಗಳು: xvi+107, ಬೆಲೆ ರೂ: 80/-). ಅದರಿಂದ ಆಯ್ದ ಕೆಲವು ಕತೆಗಳನ್ನು ಮಂಟೋ ನೆನಪಿಗೆ ಇಲ್ಲಿ ಕೊಟ್ಟಿದ್ದೇನೆ.
ಫಿಫ್ಟಿ-ಫಿಫ್ಟಿ
ಆ ವ್ಯಕ್ತಿಗೆ ಆ ದೊಡ್ಡ ಮರದ ಪೆಟ್ಟಿಗೆ ಇಷ್ಟವಾಯಿತು. ಆತ ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ. ಆ ಪೆಟ್ಟಿಗೆ ಅದೆಷ್ಟು ತೂಕವಾಗಿತ್ತೆಂದರೆ ಅದು ಒಂದಿಂಚೂ ಅಲುಗಾಡಲಿಲ್ಲ. ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದ. ಆತನಿಗೆ ಬೆಳಿಗ್ಗೆಯಿಂದ ಲೂಟಿಮಾಡಲು ಏನೂ ಸಿಕ್ಕಿರಲಿಲ್ಲ. ‘ನಿನಗೆ ಸಹಾಯ ಬೇಕೆ?’, ಕೇಳಿದ ಆತ. ಮೊದಲ ವ್ಯಕ್ತಿ ಒಪ್ಪಿಕೊಂಡ ಹಾಗೂ ಇಬ್ಬರೂ ಸೇರಿ ಅದನ್ನು ಎತ್ತಿಕೊಂಡು ಮನೆಯಿಂದ ಹೊರನಡೆದರು.
ಆ ಮರದ ಪೆಟ್ಟಿಗೆ ತೂಕವಾಗಿತ್ತು. ತನ್ನ ಬೆನ್ನ ಮೇಲೆ ಹೊತ್ತಿದ್ದ ಎರಡನೇ ವ್ಯಕ್ತಿಯ ಬೆನ್ನುಮೂಳೆಗಳು ಮುರಿಯುವಂತಾಗಿತ್ತು, ಕಾಲುಗಳು ತೂಕಕ್ಕೆ ಬಾಗುತ್ತಿದ್ದವು. ಆದರೆ ತನಗೆ ದೊರೆಯುವ ಪಾಲಿನ ದುರಾಸೆಯಿಂದ ಆತನಿಗೆ ಯಾವ ನೋವೂ ಲೆಕ್ಕಕ್ಕೆ ಬರುತ್ತಿರಲಿಲ್ಲ.
ಮನೆಯಿಂದ ಸ್ವಲ್ಪ ದೂರ ನಡೆದು ಒಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದ ಎರಡನೆಯ ವ್ಯಕ್ತಿ, ‘ಆ ಪೆಟ್ಟಿಗೆಯಲ್ಲಿರುವುದರಲ್ಲಿ ನನಗೆಷ್ಟು ಪಾಲು ಕೊಡುತ್ತೀಯೆ?’ ಎಂದು ಮೊದಲನೆಯ ವ್ಯಕ್ತಿಯನ್ನು ಕೇಳಿದ.
‘ಕಾಲು ಭಾಗ’, ಮೊದಲನೆಯ ವ್ಯಕ್ತಿ ಹೇಳಿದ.
‘ತೀರಾ ಕಡಿಮೆಯಾಯಿತು’, ಎರಡನೆಯ ವ್ಯಕ್ತಿ ಹೇಳಿದ.
‘ನಿನಗೆ ಕೊಡುವ ಕಾಲುಭಾಗವೇ ಹೆಚ್ಚು. ಏಕೆಂದರೆ ಆ ಪೆಟ್ಟಿಗೆಯನ್ನು ಮೊದಲು ನೋಡಿದವನೇ ನಾನು’.
‘ಇರಬಹುದು. ಆ ಹೆಣಭಾರವನ್ನು ಬೆನ್ನ ಮೇಲೆ ಹೊರಕ್ಕೆ ಹೊತ್ತು ತಂದವನು ನಾನಲ್ಲವೆ?’
‘ಆಯಿತು. ಇಬ್ಬರೂ ಸಮನಾಗಿ ಹಂಚಿಕೊಳ್ಳೋಣ. ಫಿಫ್ಟಿ-ಫಿಫ್ಟಿ. ಸಂತೋಷವೆ?’
‘ಒಳ್ಳೆಯದು. ಪೆಟ್ಟಿಗೆಯನ್ನು ತೆಗಿ. ಏನಿದೆಯೋ ನೋಡೋಣ’.
ಅವರಿಬ್ಬರೂ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಅದರೊಳಗಿನಿಂದ ವ್ಯಕ್ತಿಯೊಬ್ಬ ಹೊರಬಂದ. ಅವನ ಕೈಯಲ್ಲಿ ಒಂದು ಚೂಪಾದ ಕತ್ತಿಯಿತ್ತು. ಅವನು ಆ ಕತ್ತಿಯಿಂದ ಇಬ್ಬರನ್ನು ಅರ್ಧರ್ಧ ಸೀಳಿದ. ಫಿಫ್ಟಿ-ಫಿಫ್ಟಿ.
ಅಜ್ಞಾನವೇ ವರದಾನ
ಪಿಸ್ತೂಲಿನ ಕುದುರೆಯನ್ನು ಮೀಟಿದ. ಗುಂಡೊಂದು ಹಾರಿತು.
ಮನೆಯ ಕಿಟಿಕಿಯಿಂದ ಇಣುಕಿ ನೋಡುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದ.
ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಕುದುರೆಯನ್ನು ಮೀಟಲಾಯಿತು. ಮತ್ತೊಂದು ಗುಂಡು ಹಾರಿತು.
ನೀರು ಕೊಂಡೊಯ್ಯುತ್ತಿದ್ದವನ ಚರ್ಮದ ಚೀಲ ತೂತಾಯಿತು. ನೀರು ಕೊಂಡೊಯ್ಯುತ್ತಿದ್ದವನು ದೊಪ್ಪೆಂದು ರಸ್ತೆಯ ಮೇಲೆ ಬಿದ್ದ. ನೀರು ಮತ್ತು ರಕ್ತ ಬೆರೆತು ರಸ್ತೆಯ ಮೇಲೆ ಹರಿಯತೊಡಗಿತು.
ಮೂರನೆಯ ಗುಂಡು ಹಸಿಗೋಡೆಗೆ ಬಡಿಯಿತು.
ನಾಲ್ಕನೆಯ ಗುಂಡು ಮುದುಕಿಯೊಬ್ಬಳ ಬೆನ್ನಿಗೆ ಬಡಿಯಿತು. ಸತ್ತು ಕೆಳಕ್ಕೆ ಬೀಳುವ ಮುನ್ನ ಆಕೆಗೆ ಕಿರುಚಲೂ ಸಾಧ್ಯವಾಗಲಿಲ್ಲ.
ಐದು ಮತ್ತು ಆರನೆಯ ಗುಂಡುಗಳು ಮತ್ತೆ ಗುರಿತಪ್ಪಿದವು. ಯಾರೂ ಸಾಯಲಿಲ್ಲ, ಯಾರಿಗೂ ಗಾಯವಾಗಲಿಲ್ಲ.
ಗುಂಡು ಹಾರಿಸುತ್ತಿದ್ದವನಿಗೆ ಸಿಟ್ಟುಬಂತು. ಇದ್ದಕ್ಕಿದ್ದಂತೆ ರಸ್ತೆಗೆ ಸಣ್ಣಮಗುವೊಂದು ಬಂದದ್ದನ್ನು ಆತ ಕಂಡ. ತನ್ನ ಪಿಸ್ತೂಲನ್ನು ಮಗುವಿನೆಡೆಗೆ ಗುರಿ ಇಟ್ಟ.
‘ಏನು ಮಾಡುತ್ತಿದ್ದೀಯೆ?’ ಆತನ ಜೊತೆಗಿದ್ದವ ಕೂಗಿದ.
‘ಏಕೆ?’ ಪಿಸ್ತೂಲಿನ ವ್ಯಕ್ತಿ ಕೇಳಿದ.
‘ನಿನ್ನ ಪಿಸ್ತೂಲಿನಲ್ಲಿದ್ದ ಗುಂಡುಗಳೆಲ್ಲಾ ಖಾಲಿಯಾಗಿವೆ’.
‘ನೀನು ಸುಮ್ಮನಿರು. ಅದು ಮಗುವಿಗೆ ಗೊತ್ತಿಲ್ಲ’.
ಸರಿಯಾದ ಕ್ರಮ
ಮೊಹಲ್ಲಾ ಒಂದರ ಮೇಲೆ ದಾಳಿನಡೆಯಿತು ಹಾಗೂ ಕೆಲ ಅಲ್ಪಸಂಖ್ಯಾತರನ್ನು ಚಾಕುವಿನಿಂದ ತಿವಿದು ಸಾಯಿಸಲಾಯಿತು. ಇತರರು ಜೀವಭಯದಿಂದ ಅಲ್ಲಿಂದ ಓಡಿಹೋದರು. ಇದನ್ನೆಲ್ಲಾ ಕಂಡ ದಂಪತಿಗಳಿಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವಿತುಕೊಂಡರು.
ಅವರಿಬ್ಬರೂ ಎರಡು ಹಗಲು ಮತ್ತು ಎರಡು ರಾತ್ರಿ ಕೊಲೆಗಡುಕರ ಹೆದರಿಕೆಯಿಂದ ಅಲ್ಲೇ ಅವಿತುಕೊಂಡಿದ್ದರು. ಆದರೆ ಯಾರೂ ಬರಲಿಲ್ಲ.
ಮತ್ತೆರಡು ದಿನಗಳು ಕಳೆದವು. ಅವರಲ್ಲಿನ ಹೆದರಿಕೆ ಕಡಿಮೆಯಾಯಿತು. ಆದರೆ ಹಸಿವು, ನೀರಡಿಕೆ ತೀವ್ರವಾಗಿ ಕಾಡತೊಡಗಿದವು.
ಇನ್ನೂ ನಾಲ್ಕು ದಿನಗಳು ಕಳೆದವು. ಈಗ ಅವರನ್ನು ಸಾವಿನ ಹೆದರಿಕೆ ಕಾಡುತ್ತಿರಲಿಲ್ಲ. ಅವರಿಗೆ ಬದುಕು ಅರ್ಥಹೀನ ಎನ್ನಿಸತೊಡಗಿತ್ತು. ಅವಿತುಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದರು.
ಮೊಹಲ್ಲಾದ ಜನರಿಗೆ ತಮ್ಮನ್ನು ಒಪ್ಪಿಸಿಕೊಂಡ ಗಂಡ, ಕ್ಷೀಣ ದನಿಯಲ್ಲಿ ಹೇಳಿದ, ‘ನಮ್ಮನ್ನು ನಿಮಗೊಪ್ಪಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ’.
ಈ ಮಾತುಗಳು ಆ ಮೊಹಲ್ಲಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರು ಜೈನರಾಗಿದ್ದರು. ‘ನಮ್ಮ ಧರ್ಮದಲ್ಲಿ ಕೊಲ್ಲುವುದು ಅಪರಾಧ’ ಎಂದರು.
ಅವರೆಲ್ಲಾ ಸೇರಿ ಆ ಗಂಡ ಹೆಂಡಿರನ್ನು ಹಿಡಿದು ಮತ್ತೊಂದು ಮೊಹಲ್ಲಾದ ಜನರಿಗೆ ಸೂಕ್ತವಾಗಿ ವಿಲೇವಾರಿ ಮಾಡಲು ಒಪ್ಪಿಸಿದರು.
ಪವಾಡ
ಪೊಲೀಸರು ಲೂಟಿಯಾದ ವಸ್ತುಗಳನ್ನು ವಶಪಡಿಸಿಕೊಳ್ಳಲು ಮನೆಗಳ ಮೇಲೆ ದಾಳಿನಡೆಸುತ್ತಿದ್ದರು.
ಜನರು ತಾವು ಎಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತೀವೆಯೋ ಎಂದು ಹೆದರಿಕೊಂಡು ಲೂಟಿಮಾಡಿದ ವಸ್ತುಗಳನ್ನು ಕತ್ತಲಲ್ಲಿ ಹೊರಗೆ ಎಸೆಯುತ್ತಿದ್ದರು. ಅವರಲ್ಲಿ ಬುದ್ಧಿವಂತರಾದವರು ಈಗಾಗಲೇ ಅಂತಹ ವಸ್ತುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಅಡಗಿಸಿಬಿಟ್ಟಿದ್ದರು.
ಈ ರೀತಿ ಲೂಟಿಮಾಡಿದ ವ್ಯಕ್ತಿಯೊಬ್ಬ ತಾನು ಲೂಟಿಮಾಡಿದ ವಸ್ತುವನ್ನು ವಿಲೇವಾರಿಮಾಡಲು ತೋಚದೆ ಚಡಪಡಿಸುತ್ತಿದ್ದ. ಆತ ಕಿರಾಣಿ ಅಂಗಡಿಯೊಂದರಿಂದ ಎರಡು ಮೂಟೆ ಸಕ್ಕರೆ ಚೀಲಗಳನ್ನು ಕದ್ದು ತಂದಿದ್ದ. ಕೊನೆಗೆ ಬೇರೆ ದಾರಿ ತೋರದೆ ರಾತ್ರಿ ಆತ ಒಂದು ಚೀಲವನ್ನು ತನ್ನ ಮನೆಯ ಹತ್ತಿರದ ಬಾವಿಯೊಂದರೊಳಕ್ಕೆ ಎಸೆದ. ಮತ್ತೊಂದು ಚೀಲವನ್ನು ಅದೇ ರೀತಿ ಎಸೆಯಲು ಪ್ರಯತ್ನಿಸುತ್ತಿದ್ದ, ಆದರೆ ಕಾಲುಜಾರಿ ಆತ ಆ ಚೀಲದ ಸಮೇತ ಬಾವಿಯೊಳಕ್ಕೆ ಬಿದ್ದುಹೋದ.
ಆತನ ಕೂಗನ್ನು ಕೇಳಿ ಸುತ್ತಮುತ್ತಲಿನ ಜನ ಬಾವಿಯ ಬಳಿಬಂದರು. ಇಬ್ಬರು ಧೈರ್ಯವಂತರು ಹಗ್ಗದ ಸಹಾಯದಿಂದ ಬಾವಿಯೊಳಕ್ಕೆ ಇಳಿದು ಮುಳುಗುತ್ತಿದ್ದ ಆತನನ್ನು ಮೇಲಕ್ಕೆ ಎತ್ತಿತಂದರು. ಆದರೆ ಆತ ಬದುಕುಳಿಯಲಿಲ್ಲ.
ಮರುದಿನ ಎಂದಿನಂತೆ ಊರ ಜನ ಬಾವಿಯ ನೀರು ಕುಡಿದಾಗ ಅದು ಸಿಹಿಯಾಗಿತ್ತು. ಆ ದಿನ ಎಲ್ಲರೂ ಆತನ ಸಮಾಧಿಗೆ ಪೂಜೆ ಮಾಡಿ ದೀಪಗಳನ್ನು ಹೊತ್ತಿಸಿದರು.
ಜೆಲ್ಲಿ
ಬೆಳಿಗ್ಗೆ ಆರು ಗಂಟೆಯಲ್ಲಿ ಕೈಗಾಡಿಯಲ್ಲಿ ದೊಡ್ಡ ಮಂಜುಗಡ್ಡೆಯನ್ನು ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಚಾಕುತಿವಿದು ಸಾಯಿಸಿದ್ದರು. ಏಳು ಗಂಟೆಯವರೆಗೂ ಆತನ ದೇಹ ಅದೇ ರೀತಿ ರಸ್ತೆಯಲ್ಲಿ ಬಿದ್ದಿತ್ತು. ಮಂಜುಗಡ್ಡೆಯಿಂದ ಕರಗಿದ ನೀರಹನಿಗಳು ಆತನ ದೇಹದ ಮೇಲೆ ಬೀಳುತ್ತಿತ್ತು.
ಏಳೂಕಾಲಿಗೆ ಪೊಲೀಸರು ಬಂದು ಆ ಮೃತದೇಹವನ್ನು ಕೊಂಡೊಯ್ದರು. ರಕ್ತಸಿಕ್ತವಾಗಿದ್ದ ಮಂಜುಗಡ್ಡೆಯನ್ನು ಅಲ್ಲೇ ರಸ್ತೆಯ ಮೇಲೆ ಬಿಟ್ಟುಹೋಗಿದ್ದರು.
ಅದೇ ರಸ್ತೆಯಲ್ಲಿ ಟಾಂಗಾ ಒಂದು ಹಾದುಹೋಯಿತು. ಅದರಲ್ಲಿ ಮಗುವೊಂದು ತನ್ನ ತಾಯಿಯ ಜೊತೆ ಹೋಗುತ್ತಿತ್ತು. ಮಗುವಿನ ದೃಷ್ಟಿ ರಸ್ತೆಯ ಮೇಲೆ ಬಿದ್ದಿದ್ದ ಮಂಜುಗಡ್ಡೆಯ ಮೇಲಿನ ರಕ್ತಸಿಕ್ತ ಮಾಂಸದ ತುಣುಕಿನ ಮೇಲೆ ಬಿತ್ತು. ಮಗುವಿನ ಬಾಯಿಯಲ್ಲಿ ನೀರೂರತೊಡಗಿತು.
ಆ ಮಗು ಅಮ್ಮನ ತೋಳನ್ನು ಜಗ್ಗಿ, ‘ಮಮ್ಮಿ ಅಲ್ಲಿ ನೋಡು, ಜೆಲ್ಲಿ!’ ಎಂದು ಉತ್ಸಾಹದಿಂದ ಕೂಗಿತು.
ಮೋಸದ ವ್ಯಾಪಾರ
ಇಬ್ಬರು ಗೆಳೆಯರು ಇಪ್ಪತ್ತು ಹುಡುಗಿಯರಲ್ಲಿ ಒಬ್ಬಳನ್ನು ಬಹು ಎಚ್ಚರಿಕೆಯಿಂದ ಆಯ್ಕೆಮಾಡಿಕೊಂಡರು. ಅವಳನ್ನು ನಲವತ್ತೆರಡು ರೂಪಾಯಿಗೆ ವ್ಯಾಪಾರ ಮಾಡಿ ಕರೆದುತಂದರು. ಆ ರಾತ್ರಿಗೆ ಒಬ್ಬ ಆಕೆಯನ್ನು ತನ್ನ ಮನೆಗೆ ಕರೆದೊಯ್ದ.
ಅವಳೊಂದಿಗೆ ರಾತ್ರಿ ಕಳೆದ ನಂತರ ಬೆಳಿಗ್ಗೆ ಆತ ಆಕೆಯ ಹೆಸರು ಕೇಳಿದ.
ಆಕೆ ತನ್ನ ಹೆಸರು ಹೇಳಿದಳು.
ಆ ಮನುಷ್ಯನಿಗೆ ಆಘಾತವಾಯಿತು. ‘ಆದರೆ ಅವರು ನಿನ್ನ ಹೆಸರು ಬೇರೆಯೇ ಹೇಳಿ ನೀನು ಬೇರೆ ಕೋಮಿನವಳು ಎಂದು ಹೇಳಿದರಲ್ಲ’ ಎಂದ.
‘ಅವರು ನಿನಗೆ ಸುಳ್ಳು ಹೇಳಿದ್ದಾರೆ’, ಹುಡುಗಿ ಹೇಳಿದಳು.
ಆತ ತನ್ನ ಗೆಳೆಯನ ಮನೆಗೆ ಓಡಿದ. ‘ಆ ಕಳ್ಳಸೂಳೆ ಮಕ್ಕಳು ನಮಗೆ ಮೋಸಮಾಡಿದ್ದಾರೆ!’ ಎಂದು ಅರಚಿದ. ‘ನಮ್ಮದೇ ಕೋಮಿನವಳನ್ನು ನಮಗೇ ಮಾರಾಟಮಾಡಿದ್ದಾರೆ. ಬಾ, ಹೋಗಿ ಅವಳನ್ನು ಅಲ್ಲೇ ವಾಪಸ್ಸು ಎಸೆದುಬರೋಣ’.
ಮಾನವೀಯತೆ
ಅತ್ಯಂತ ದುಸ್ತರವಾಗಿ ಗಂಡ ಮತ್ತು ಹೆಂಡತಿ ಒಂದಷ್ಟು ವಸ್ತುಗಳನ್ನು ಉಳಿಸಿಕೊಂಡಿದ್ದರು. ಆದರೆ ಅವರ ಚಿಕ್ಕ ಮಗಳ ಸುಳಿವೇ ಇರಲಿಲ್ಲ. ಇನ್ನೂ ಹಸುಗೂಸಾಗಿದ್ದ ಅವರ ಮತ್ತೊಬ್ಬ ಮಗಳು ಅವರಮ್ಮನ ಎದೆಗೇ ಆತುಕೊಂಡಿದ್ದರಿಂದ ಅವಳು ಬದುಕುಳಿದುಕೊಂಡಿದ್ದಳು. ದಂಗೆಕೋರರು ಅವರ ಎಮ್ಮೆಯನ್ನು ಹೊಡೆದುಕೊಂಡುಹೋದರು, ಆದರೆ ಅಲ್ಲೇ ಇದ್ದ ಹಸು ಅವರ ಕಣ್ಣು ತಪ್ಪಿಸಿಕೊಂಡದ್ದರಿಂದ ಅದನ್ನು ಬಿಟ್ಟುಹೋದರು. ಆದರೆ ಗಲಭೆಯಲ್ಲಿ ಅದರ ಕರು ಎಲ್ಲೋ ತಪ್ಪಿಸಿಕೊಂಡುಹೋಗಿತ್ತು.
ಗಂಡ, ಹೆಂಡತಿ, ಅವರ ಹಸುಗೂಸು ಮತ್ತು ಹಸು ಯಾರ ಕಣ್ಣಿಗೂ ಬೀಳದಂತೆ ಅವಿತುಕೊಂಡರು. ಕತ್ತಲಾಗಿತ್ತು. ಮಗು ಅಳಲು ಪ್ರಾರಂಭಿಸಿತು. ಆ ಮಗುವಿನ ಅಳು ತಮಟೆ ಹೊಡೆದಂತೆ ಶತ್ರುವಿನ ಗಮನ ಸೆಳೆಯುವ ಸಾಧ್ಯತೆಯಿತ್ತು. ಮಗುವಿನ ತಾಯಿ ತನ್ನ ಕೈಯಿಂದ ಮಗುವಿನ ಬಾಯಿಮುಚ್ಚಿ ಸುಮ್ಮನಾಗಿಸಲು ಯತ್ನಿಸಿದಳು. ಇನ್ನೂ ಎಚ್ಚರ ವಹಿಸಲು ಮಗುವಿನ ತಂದೆ ಮಗುವಿನ ಮೇಲೆ ದಪ್ಪನೆ ಹೊದಿಕೆಯೊಂದನ್ನು ಹೊದಿಸಿದ.
ಸ್ವಲ್ಪ ಸಮಯದ ನಂತರ ದೂರದಲ್ಲೆಲ್ಲೋ ಕರುವೊಂದು ಕೂಗುವುದು ಕೇಳಿಸಿತು. ಹಸು ತನ್ನ ಕಿವಿಗಳನ್ನು ನಿಮಿರಿಸಿ ಜೋರಾಗಿ ಅರಚುತ್ತಾ ಚಡಪಡಿಸತೊಡಗಿತು. ಗಂಡ ಹೆಂಡತಿ ಇಬ್ಬರೂ ಹಸುವನ್ನು ಸುಮ್ಮನಾಗಿಸಲು ಪ್ರಯತ್ನಿಸಿದರು. ಆದರೆ ಹಸು ಸುಮ್ಮನಾಗಲಿಲ್ಲ.
ಶಬ್ದ ಕೇಳಿದ ಶತ್ರುಗಳು ಅಲ್ಲಿಗೆ ಬಂದರು. ಅವರ ಕೈಯಲ್ಲಿ ಉರಿಯುವ ಕೊಳ್ಳಿಗಳಿದ್ದವು.
ಹೆಂಡತಿಗೆ ಗಂಡನ ಮೇಲೆ ವಿಪರೀತ ಸಿಟ್ಟುಬಂದಿತ್ತು. ‘ಈ ದರಿದ್ರ ಪ್ರಾಣಿಯನ್ನು ನಿನ್ನೊಂದಿಗೆ ಏಕೆ ಕರೆತಂದೆ?’ ಗಂಡನ ಮೇಲೆ ಸಿಡುಕಿದಳು.
ವಿನಯಶೀಲತೆ
ಟ್ರೈನನ್ನು ಕತ್ತಲಲ್ಲಿ ನಿಲ್ಲಿಸಲಾಯಿತು.
ಒಂದು ಕೋಮಿಗೆ ಸೇರಿದ ಪ್ರಯಾಣಿಕರನ್ನು ಪ್ರತ್ಯೇಕಿಸಿದರು. ಅವರನ್ನು ಟ್ರೈನಿನಿಂದ ಹೊರಕ್ಕೆಳೆದು ಒಬ್ಬೊಬ್ಬರನ್ನಾಗಿ ಕೊಂದರು. ಕೆಲಸ ಮುಗಿದ ನಂತರ ಅವರ ಸಹ-ಧರ್ಮೀಯರಾದ ಇತರ ಪ್ರಯಾಣಿಕರು ಹಲ್ವಾ, ಹಾಲು ಮತ್ತು ಹಣ್ಣು ವಿತರಿಸಿಕೊಂಡು ಸಂತೋಷವನ್ನು ಹಂಚಿಕೊಂಡರು.
ಟ್ರೈನು ಮತ್ತೆ ಪ್ರಯಾಣ ಆರಂಭಿಸುವ ಮುನ್ನ ಕೊಲೆಗಡುಕರ ನಾಯಕ ಎದ್ದುನಿಂತು ಪ್ರಯಾಣಿಕರನ್ನುದ್ದೇಶಿಸಿ, ‘ಸೋದರ, ಸೋದರಿಯರೇ ದಯವಿಟ್ಟು ನಮ್ಮನ್ನು ಕ್ಷಮಿಸಿ. ಈ ಟ್ರೈನು ತಡವಾಗಿ ಬರುವುದೆಂದು ನಮಗೆ ಸುದ್ದಿ ತಲುಪಿತು. ಆದುದರಿಂದ ನಾವಂದುಕೊಂಡಂತೆ ನಿಮಗೆ ಇನ್ನೂ ಹೆಚ್ಚಿನ ಮನರಂಜನೆ ನೀಡಲು ಸಾಧ್ಯವಾಗಿಲ್ಲ’.
ಮೇಲುಸ್ತುವಾರಿ
ಒಬ್ಬ ವ್ಯಕ್ತಿ ಇತರ ಕೋಮಿನ ತನ್ನ ಗೆಳೆಯನನ್ನು ತನ್ನದೇ ಕೋಮಿನವನೆಂದು ಸುಳ್ಳು ಹೇಳಿ ಸುರಕ್ಷಿತ ಸ್ಥಳಕ್ಕೆ ಹೋಗಲು ಇಬ್ಬರೂ ಮಿಲಿಟರಿ ಟ್ರಕ್‌ನಲ್ಲಿ ಹತ್ತಿಕೊಂಡರು.
ತನ್ನ ಕೋಮಿನ ಬಗ್ಗೆ ಸುಳ್ಳು ಹೇಳಿದ್ದ ಆ ಗೆಳೆಯ ದಾರಿಯಲ್ಲಿ ಆ ಸ್ಥಳದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಿವೆಯೇ ಎಂದು ಜೊತೆಗಿದ್ದ ಮಿಲಿಟರಿಯವರನ್ನು ಕೇಳಿದ.
‘ಅಂಥ ವಿಶೇಷವಾದದ್ದು ಏನೂ ನಡೆದಿಲ್ಲ. ಯಾವುದೋ ಮೊಹಲ್ಲಾವೊಂದರಲ್ಲಿ ನಾಯಿಯೊಂದನ್ನು ಕೊಲ್ಲಲಾಯಿತು’.
‘ಮತ್ತೇನಾದರೂ ಸುದ್ದಿಯಿದೆಯೆ?’ ಎಂದು ಕೇಳಿದ ಆತ ಹೆದರಿಕೊಂಡು.
‘ಇಲ್ಲ, ಅಂಥ ವಿಶೇಷವಾದದ್ದೇನೂ ಇಲ್ಲ. ಹತ್ತಿರದ ಕಾಲುವೆಯಲ್ಲಿ ಮೂರು ಹೆಣ್ಣು ನಾಯಿಗಳ ದೇಹತೇಲುತ್ತಿದ್ದುದನ್ನು ಕಂಡೆವು’.
ತನ್ನ ಗೆಳೆಯನ ಹೆದರಿಕೆ, ಆತಂಕವನ್ನು ಗಮನಿಸಿ ಆತನನ್ನು ಕರೆದುತಂದ ಗೆಳೆಯ ಮಿಲಿಟರಿಯವರನ್ನು ಕೇಳಿದ, ‘ಇವುಗಳ ಬಗ್ಗೆ ಮಿಲಿಟರಿಯವರು ಏನೂ ಮಾಡುತ್ತಿಲ್ಲವೆ?’
‘ಏಕೆ ಮಾಡುತ್ತಿಲ್ಲ?’ ಮಿಲಿಟರಿಯವ ಉತ್ತರಿಸಿದ. ‘ಎಲ್ಲವನ್ನೂ ಮಿಲಿಟರಿಯ ಮೇಲುಸ್ತುವಾರಿಯಲ್ಲೇ ನಡೆಸಲಾಗುತ್ತಿದೆ’.
ಬೂಟು
ದಾಂಧಲೆ ನಡೆಸುತ್ತಿದ್ದ ಗುಂಪು ಚೌಕದ ಮಧ್ಯದಲ್ಲಿನ ಸರ್ ಗಂಗಾರಾಮ್‌ರವರ ಪುತ್ಥಳಿಯ ಮೇಲೆ ದಾಳಿಮಾಡಿತು. ಕೆಲವರು ಆ ವಿಗ್ರಹವನ್ನು ಕೋಲು, ಸರಳುಗಳಿಂದ ಹೊಡೆದರು ಮತ್ತು ಕೆಲವರು ಕಲ್ಲುಗಳನ್ನು ಎಸೆದರು. ಒಬ್ಬಾತ ವಿಗ್ರಹದ ಮುಖಕ್ಕೆ ಟಾರುಬಳಿದು ಕಪ್ಪಾಗಿಸಿದ. ಮತ್ತೊಬ್ಬಾತ ಬೂಟುಗಳ ಹಾರವೊಂದನ್ನು ವಿಗ್ರಹಕ್ಕೆ ಹಾಕಿದ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದು ಗುಂಡುಹಾರಿಸತೊಡಗಿದರು. ಬೂಟಿನ ಹಾರವನ್ನು ಕೈಯಲ್ಲಿ ಹಿಡಿದಿದ್ದ ವ್ಯಕ್ತಿಗೆ ಗುಂಡುತಗುಲಿ ಆತ ಕೆಳಕ್ಕೆ ಬಿದ್ದ. ಕೂಡಲೇ ಆತನನ್ನು ಚಿಕಿತ್ಸೆಗೆ ಸರ್ ಗಂಗಾರಾಮ್ ಆಸ್ಪತ್ರೆಗೆ ಸೇರಿಸಲಾಯಿತು.
ನಿರೀಕ್ಷೆ
ಮೊದಲ ಘಟನೆ ರಸ್ತೆಯ ಕೊನೆಯಲ್ಲಿದ್ದ ಹೋಟೆಲಿನ ಮುಂದೆ ನಡೆಯಿತು. ಕೂಡಲೇ ಪೊಲೀಸೊಬ್ಬನನ್ನು ಅಲ್ಲಿಗೆ ಡ್ಯೂಟಿಗೆ ಹಾಕಲಾಯಿತು.
ಎರಡನೇ ಘಟನೆ ಆ ದಿನ ಸಂಜೆ ಅಂಗಡಿಯೊಂದರ ಬಳಿ ನಡೆಯಿತು. ಹೋಟೆಲಿನ ಬಳಿ ಇದ್ದ ಪೊಲೀಸಿನವನನ್ನು ತೆಗೆದು ಅಂಗಡಿಯ ಬಳಿ ಡ್ಯೂಟಿಗೆ ಹಾಕಲಾಯಿತು.
ಮೂರನೇ ಘಟನೆ ಮಧ್ಯರಾತ್ರಿ ಅಗಸನ ಅಂಗಡಿಯ ಬಳಿ ನಡೆಯಿತು. ಪೊಲೀಸ್ ಇನ್‌ಸ್ಪೆಕ್ಟರ್ ಪೊಲೀಸಿನವನಿಗೆ ಅಂಗಡಿಯ ಬಳಿಯಿಂದ ಹೊಸದಾಗಿ ಘಟನೆ ನಡೆದ ಸ್ಥಳಕ್ಕೆ ಬರುವಂತೆ ಆದೇಶಿಸಿದ.
ಬುದ್ಧಿವಂತನಾದ ಪೊಲೀಸ್ ಸ್ವಲ್ಪ ಆಲೋಚಿಸಿ ಇನ್‌ಸ್ಪೆಕ್ಟರ್‌ಗೆ, ‘ಸರ್, ಮುಂದೆ ಘಟನೆ ನಡೆಯುವ ಸ್ಥಳ ಯಾವುದೋ ಅಲ್ಲಿಗೆ ಮೊದಲೇ ನನ್ನನ್ನು ಡ್ಯೂಟಿಗೆ ಹಾಕಿಬಿಡಿ’ ಎಂದ.
ಘೋರ ತಪ್ಪು
ಹೊಟ್ಟೆಯನ್ನು ಸೇರಿದ ಚಾಕು ಸೀಳಿಕೊಂಡು ಕಿಬ್ಬೊಟ್ಟೆಯವರೆಗೂ ಬಂದಿತು. ಆ ಪ್ರಕ್ರಿಯೆಯಲ್ಲಿ ಪೈಜಾಮಾದ ಲಾಡಿ ಕತ್ತರಿಸಿಕೊಂಡು ಮೃತ ವ್ಯಕ್ತಿಯ ಜನನಾಂಗ ಹೊರಬಂದಿತು.
‘ಹೋ. ಎಂಥಾ ಘೋರ ತಪ್ಪಾಯಿತು! ನಮ್ಮವನನ್ನೇ ಕೊಂದುಬಿಟ್ಟೆನಲ್ಲಾ!’ ಕೊಲೆಗಡುಕ ಏದುಸಿರುಬಿಟ್ಟ.
ಅನುಕಂಪ
‘ದಮ್ಮಯ್ಯ ಎನ್ನುತ್ತೇನೆ, ನಿಮ್ಮ ಕಾಲಿಗೆ ಬೀಳುತ್ತೇನೆ. ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣಮುಂದೆಯೇ ಕೊಲ್ಲಬೇಡಿ’.
‘ಆಯಿತು, ಆಯಿತು. ಅವನ ಮೇಲೆ ಕರುಣೇ ತೋರಿ ಅವನ ಕೋರಿಕೆಯನ್ನು ಮನ್ನಿಸೋಣ. ಆಕೆಯ ಬಟ್ಟೆ ಕಿತ್ತುಹಾಕಿ ಊರೆಲ್ಲಾ ಬೆತ್ತಲೆ ಓಡಿಸಿ’.
ಸಮಪಾಲು
ಆತ ತಾನಿದ್ದ ಊರು ಬಿಟ್ಟು ಬೇರೆ ಊರಿನಲ್ಲಿ ನೆಲೆಸೋಣವೆಂದು ನಿರ್ಧರಿಸಿದ್ದುದರಿಂದ ತನ್ನ ಮನೆಯ ವಸ್ತುಗಳನ್ನೆಲ್ಲಾ ಟ್ರಕ್ಕಿಗೆ ತುಂಬಿ ಪ್ರಯಾಣ ಬೆಳೆಸಿದ. ರಸ್ತೆಯಲ್ಲಿ ಗುಂಪೊಂದು ಟ್ರಕ್ಕಿಗೆ ಅಡ್ಡಹಾಕಿ ನಿಲ್ಲಿಸಿ ಅದರಲ್ಲಿದ್ದ ವಸ್ತುಗಳನ್ನು ದುರಾಸೆಯ ಕಂಗಳಿಂದ ನೋಡಿತು. ‘ನೋಡು, ಕಳ್ಳ ಒಬ್ಬನೇ ಎಷ್ಟೊಂದು ವಸ್ತುಗಳನ್ನು ಲೂಟಿಮಾಡಿ ತೆಗೆದುಕೊಂಡು ಹೋಗುತ್ತಿದ್ದಾನೆ’ ಅವರು ಹೇಳಿದರು.
‘ಲೂಟಿ ಮಾಡಿದುದಲ್ಲ’, ಅವುಗಳ ಯಜಮಾನ ಹೇಳಿದ. ‘ಅವೆಲ್ಲಾ ನನ್ನ ಸ್ವಂತ ವಸ್ತುಗಳು’.
‘ನಮಗೆ ಗೊತ್ತು, ನಮಗೆ ಗೊತ್ತು’, ಆ ಗುಂಪಿನ ಜನ ಮುಗುಳ್ನಗುತ್ತಾ ಹೇಳಿದರು.
ಗುಂಪಿನಲ್ಲಿದ್ದ ಒಬ್ಬ, ‘ಆ ವಸ್ತುಗಳನ್ನು ಲೂಟಿಮಾಡಿ! ಅವನೊಬ್ಬ ಸಾಹುಕಾರ. ಇತರರ ವಸ್ತುಗಳನ್ನು ಕದಿಯಲು ಅವನ ಟ್ರಕ್ ಬಳಸುತ್ತಾನೆ’ ಎಂದು ಅರಚಿದ.
ದೂರು
‘ಏನಪ್ಪಾ, ನೀನು ಹೀಗೆ ಮೋಸಮಾಡಬಹುದೆ? ಬ್ಲಾಕ್‌ಮಾರ್ಕೆಟ್ ರೇಟು ತಗೊಂಡು ನೀನು ಈ ರೀತಿ ಕಲಬೆರಕೆ ಪೆಟ್ರೋಲ್ ಕೊಟ್ಟಿದ್ದೀಯಲ್ಲಾ. ಅದರಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.
ವಿಶ್ರಾಂತಿ ಬೇಕಾಗಿದೆ
‘ನೋಡು ಅವನಿನ್ನೂ ಸತ್ತಿಲ್ಲ! ಇನ್ನೂ ಉಸಿರಾಡುತ್ತಿದ್ದಾನೆ!’
‘ಇರಲಿ ಬಿಡು ಗೆಳೆಯಾ, ನನಗೂ ವಿಶ್ರಾಂತಿ ಬೇಕಾಗಿದೆ’.
ಗುರುವಾರ, ಮೇ 10, 2012
ಮುಲ್ಲಾ ನಸ್ರುದ್ದೀನ್ ಕತೆಗಳು- 4
ಮೇ, 2012ರ 'ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ ನಾಲ್ಕನೇ ಕಂತು. ಚಿತ್ರಗಳು ರಾಠೋಡ್.
ವಿದ್ವತ್ತಿನ ಸಂಕೇತ
ಆ ಊರಿನ ಒಬ್ಬ ಅನಕ್ಷರಸ್ಥ ವ್ಯಕ್ತಿಯೊಬ್ಬನಿಗೆ ಒಮ್ಮೆ ಸರ್ಕಾರದಿಂದ ಪತ್ರವೊಂದು ಬಂದಿತ್ತು. ಆತನಿಗೆ ಓದು ಬರಹ ಗೊತ್ತಿಲ್ಲದಿದ್ದುದರಿಂದ ಆ ಊರಿನ ವಿದ್ವಾಂಸನಾದ ಮುಲ್ಲಾ ನಸ್ರುದ್ದೀನನ ಬಳಿ ಆತ ಬಂದು ಆ ಪತ್ರವನ್ನು ಓದಿ ಹೇಳುವಂತೆ ಕೇಳಿಕೊಂಡ.
ಆ ಪತ್ರವನ್ನು ತೆಗೆದುಕೊಂಡು ನೋಡಿದ ಮುಲ್ಲಾನಿಗೆ ಆ ಪತ್ರದ ಭಾಷೆ ತಿಳಿದಿರಲಿಲ್ಲ. ಅದನ್ನು ಹಿಂದೆ ಮುಂದೆ ತಿರುಗಿಸಿನೋಡಿ, ‘ಕ್ಷಮಿಸು, ನನಗೆ ಈ ಪತ್ರವನ್ನು ಓದಲು ಬರುವುದಿಲ್ಲ’ ಎಂದು ಹೇಳಿದ.
ಆ ಪತ್ರದಲ್ಲಿ ಏನೋ ಮಹತ್ತರವಾದದ್ದಿರಬಹುದೆಂದು ಕುತೂಹಲದಿಂದ ಬಂದಿದ್ದ ಆ ವ್ಯಕ್ತಿಗೆ ನಿರಾಸೆಯಾಯಿತು ಜೊತೆಗೆ ಸಿಟ್ಟೂ ಸಹ ಬಂದಿತು. ‘ನೀನೆಂಥಾ ವಿದ್ವಾಂಸ! ನಾಚಿಕೆಯಾಗಬೇಕು ನಿನಗೆ ವಿದ್ವತ್ತಿನ ಸಂಕೇತವಾದ ಆ ರುಮಾಲು ಧರಿಸಿರಲು’ ಎಂದ.
ಆ ಮಾತನ್ನು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ತಲೆಯ ಮೇಲಿದ್ದ ರುಮಾಲನ್ನು ತೆಗೆದು ಆ ವ್ಯಕ್ತಿಯ ತಲೆಯ ಮೇಲಿರಿಸಿ, ‘ತಗೋ, ಈ ರುಮಾಲು ನಿನಗೆ ಜ್ಞಾನವನ್ನು ಕೊಡುತ್ತದೆ ಎನ್ನುವುದಾದರೆ ನೀನೇ ಆ ಪತ್ರವನ್ನು ಓದಿಕೋ’ ಎಂದ.
ಕಟ್ಟಿದ ಕಲ್ಲು, ಬಿಚ್ಚಿದ ನಾಯಿ
ಮುಲ್ಲಾ ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಬೇಕಾಯಿತು. ಆತ ಆ ಊರು ತಲುಪುವಷ್ಟರಲ್ಲಿ ಕತ್ತಲಾಗಿತ್ತು ಹಾಗೂ ಹಿಮಭರಿತ ವಿಪರೀತ ಚಳಿಯಿತ್ತು. ಆತ ಛತ್ರವೊಂದನ್ನು ಅರಸುತ್ತಿರುವಾಗ ಯಾವುದೋ ನಾಯಿ ಮುಲ್ಲಾನನ್ನು ಕಂಡು ಬೊಗಳ ತೊಡಗಿತು. ಆತ ಅದನ್ನು ಉದಾಸೀನ ಮಾಡಿ ಮುಂದೆ ಹೊರಟಂತೆ ಅದು ಬೊಗಳುತ್ತಾ ಆತನನ್ನು ಹಿಂಬಾಲಿಸುತ್ತಾ ಬಂದಿತು. ‘ಈ ನಾಯಿ ನನ್ನನ್ನು ಬಿಡುವುದಿಲ್ಲ’ ಎಂದುಕೊಂಡ ಅದನ್ನು ಓಡಿಸಲು ಮುಲ್ಲಾ ಕೆಳಗೆ ಬಿದ್ದಿದ್ದ ಕಲ್ಲೊಂದನ್ನು ಎತ್ತಿಕೊಳ್ಳಲು ಹೋದ. ಆದರೆ ಆ ಕಲ್ಲು ಥಂಡಿಯ ಹಿಮದಿಂದಾಗಿ ಮಣ್ಣಿನಲ್ಲಿ ಹೂತುಹೋಗಿ ಕೀಳಲು ಬರುತ್ತಿರಲಿಲ್ಲ. ‘ಎಂಥಾ ವಿಚಿತ್ರ ಊರಿದು! ಕಲ್ಲುಗಳನ್ನು ಕಟ್ಟಿಹಾಕಿರುತ್ತಾರೆ, ನಾಯಿಗಳನ್ನು ಬಿಚ್ಚಿ ರಸ್ತೆಗೆ ಬಿಟ್ಟಿರುತ್ತಾರೆ!’ ಎಂದು ಗೊಣಗಿದ.
ದೇವರ ಗುಲಾಮ
ಮುಲ್ಲಾ ನಸ್ರುದ್ದೀನ್ ದೇವರು ಧರ್ಮದ ಬಗ್ಗೆ ಜನರಿಗೆ ಪ್ರವಚನ ನೀಡುತ್ತ ಸಿಗುವ ಅಲ್ಪಸ್ವಲ್ಪ ಹಣದಿಂದ ಬಹಜೀವನ ಸಾಗಿಸುತ್ತಿದ್ದ. ಅವನು ಸಂಪಾದಿಸುತ್ತಿದ್ದುದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಆದರೂ ತನ್ನ ಕೆಲಸದಲ್ಲಿ ಮಗ್ನನಾಗಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ. ಒಂದು ದಿನ ಹೋಟೆಲೊಂದರಲ್ಲಿ ಅತಿ ಕಡಿಮೆ ಬೆಲೆಯ ರೊಟ್ಟಿ ಹಾಗೂ ಬೇಳೆ ಸಾರು ತಿನ್ನುತ್ತ ಹೋಟೆಲಿಗೆ ಬಂದು ಹೋಗುವ ಇತರರನ್ನು ಗಮನಿಸುತ್ತಿದ್ದ. ಆತ ನೋಡುತ್ತಿದ್ದಂತೆ ವೆಲ್ವೆಟ್ ರುಮಾಲು, ಬೆಳ್ಳಿಯ ಜರಿಯ ರೇಷ್ಮೆ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಹೋಟೆಲಿಗೆ ಪ್ರವೇಶಿಸಿ ಅತಿ ಹೆಚ್ಚು ಬೆಲೆಯ ಅತ್ಯುತ್ತಮ ಆಹಾರವನ್ನು ತರಿಸಿಕೊಂಡು ತಿನ್ನತೊಡಗಿದ. ಆತನನ್ನು ಕಂಡು ನಸ್ರುದ್ದೀನ್ ಹೋಟೆಲಿನ ಮಾಲೀಕನನ್ನು ಕರೆದು ಆ ವ್ಯಕ್ತಿ ಯಾರೆಂದು ಕೇಳಿದ. ‘ಹೋ, ಆ ವ್ಯಕ್ತಿಯೇ? ಆತ ಫೆಮಿ ಪಾಶಾನ ಗುಲಾಮ’ ಎಂದ ಹೋಟೆಲಿನ ಮಾಲೀಕ.
ನಿಟ್ಟುಸಿರು ಬಿಟ್ಟ ನಸ್ರುದ್ದೀನ್ ಆಕಾಶದೆಡೆಗೆ ನೋಡುತ್ತಾ, ‘ಹೋ ದೇವರೇ! ಅಲ್ಲಿ ನೋಡು ಫೆಮಿ ಪಾಶಾನ ಗುಲಾಮ ಹೇಗಿದ್ದಾನೆ. ಇಲ್ಲಿ ನೋಡು ನಾನು ನಿನ್ನ ಗುಲಾಮ ಹೇಗಿದ್ದೇನೆ! ಇದು ನ್ಯಾಯವೇ?’ ಎಂದು ಕೇಳಿದ.
ವ್ಯಾಪಾರ
ಒಂದು ದಿನ ಮುಲ್ಲಾ ನಸ್ರುದ್ದೀನ್ ಹೊಸ ಬಟ್ಟೆ ಕೊಳ್ಳೋಣವೆಂದು ಮಾರುಕಟ್ಟೆಯಲ್ಲಿನ ಅಂಗಡಿಯೊಂದಕ್ಕೆ ಹೋದ. ಅಲ್ಲಿ ಒಂದು ಜೊತೆ ಪೈಜಾಮ ತೊಟ್ಟು ನೋಡಿದ. ಅದು ಆತನಿಗೆ ಇಷ್ಟವಾಗಲಿಲ್ಲ. ಅದನ್ನು ಅಂಗಡಿಯಾತನಿಗೆ ಹಿಂದಿರುಗಿಸಿದ. ಅದೇ ಬೆಲೆಯ ಮತ್ತೊಂದು ಶೇರ್‌ವಾನಿ ಧರಿಸಿ ನೋಡಿದ. ಚೆನ್ನಾಗಿದೆ ಎನ್ನಿಸಿತು. ಇದೇ ಇರಲಿ ಎಂದು ಅಂಗಡಿಯಾತನಿಗೆ ಹೇಳಿ ಹೊರನಡೆದು ಮನೆಗೆ ಹೋಗಲು ತನ್ನ ಕತ್ತಯನ್ನೇರಿದ.
ಅಂಗಡಿಯ ಮಾಲೀಕ ನಸ್ರುದ್ದೀನ್‌ನ ಹಿಂದೆಯೇ ಓಡಿ ಬಂದು ಅತನನ್ನು ನಿಲ್ಲಿಸಿ, ‘ನೀವು ಶೇರ್‌ವಾನಿಯ ಹಣವನ್ನೇ ಕೊಡಲಿಲ್ಲ’ ಎಂದ.
‘ಆದರೆ ಅದರ ಬದಲಿಗೆ ಅದೇ ಬೆಲೆಯ ಪೈಜಾಮ ಕೊಟ್ಟಿದ್ದೇನಲ್ಲ’ ಎಂದ ನಸ್ರುದ್ದೀನ್.
‘ಹೌದು, ಆದರೆ ನೀವು ಅದರ ಹಣವನ್ನೂ ಕೊಟ್ಟಿಲ್ಲ’ ಎಂದ ಅಂಗಡಿಯ ಮಾಲೀಕ.
‘ಅದಕ್ಕೆ ಹಣ ಏಕೆ ಕೊಡಲಿ? ಅದನ್ನು ನಾನು ಕೊಳ್ಳಲೇ ಇಲ್ಲವಲ್ಲ. ಕೊಳ್ಳದ ವಸ್ತುವಿಗೆ ಹಣ ಕೊಡಲು ನಾನೇನು ದಡ್ಡನೆ?’ ಎಂದ ನಸ್ರುದ್ದೀನ್.
ಭೂಮಿಯ ಮಧ್ಯಬಿಂದು
ಮುಲ್ಲಾ ನಸ್ರುದ್ದೀನ್ ಎಂಥ ಪ್ರಶ್ನೆಗೂ ಉತ್ತರ ಕೊಡುತ್ತಾನೆ. ಅವನಿಗೆ ಉತ್ತರ ಕೊಡಲಿಕ್ಕಾಗದ ಕಷ್ಟಕರ ಪ್ರಶ್ನೆ ಕೇಳಿ ಅವನನ್ನು ಬೇಸ್ತು ಬೀಳಿಸಬೇಕೆಂದು ಒಂದು ದಿನ ಒಬ್ಬಾತ ಆತನ ಬಳಿಗೆ ಬಂದು, ‘ನಮ್ಮ ಭೂಮಿಯ ಮಧ್ಯಬಿಂದು ಎಲ್ಲಿದೆ ಹೇಳಬಲ್ಲೆಯಾ?’ ಎಂದು ಕೇಳಿದ.
ಆ ಪ್ರಶ್ನೆ ಕೇಳಿದಾತನ ಬಗ್ಗೆ ತಿಳಿದಿದ್ದ ನಸ್ರುದ್ದೀನ್ ಅವನಿಗೆ ತಕ್ಕ ಉತ್ತರವೇ ಕೊಡಬೇಕೆಂದು ಆಲೋಚಿಸಿ, ‘ಭೂಮಿಯ ಮಧ್ಯಬಿಂದು ನನ್ನ ಕತ್ತೆಯ ಹಿಂಗಾಲಿನ ಗೊರಸಿನ ನಡುವೆ ಇದೆ’ ಎಂದ.
‘ಇರಬಹುದು. ಆದರೆ ಆ ಬಿಂದು ಅಲ್ಲಿಯೇ ಇದೆ ಎನ್ನಲು ಪುರಾವೆ ಏನಿದೆ?’ ಎಂದ ಪ್ರಶ್ನೆ ಕೇಳಿದಾತ.
‘ನನಗೆ ಸರಿಯಾಗಿ ತಿಳಿದಿದೆ, ಅದು ಅಲ್ಲಿಯೇ ಇದೆ ಎಂದು. ನಿನಗೆ ನನ್ನ ಮಾತಿನ ಬಗ್ಗೆ ಸಂಶಯವಿದ್ದರೆ ನೀನೇ ಪರೀಕ್ಷಿಸು. ನನ್ನ ಕತ್ತೆ ಅಲ್ಲಿಯೇ ನಿಂತಿದೆ ನೋಡು’ ಎಂದು ನಸ್ರುದ್ದೀನ್.
ಕಳ್ಳನದೇನೂ ತಪ್ಪಿಲ್ಲವೆ?
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಪಕ್ಕದ ಊರಿಗೆ ಹೋಗಿದ್ದವರು ತಮ್ಮ ಮನೆಗೆ ಹಿಂದಿರುಗಿದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದದ್ದು ಕಂಡು ಗಾಬರಿಯಾದರು. ಮನೆಯಲ್ಲಿದ್ದುದನ್ನೆಲ್ಲವನ್ನೂ ಕೊಂಡೊಯ್ಯಲಾಗಿತ್ತು. ಆತನ ಪತ್ನಿ ಸಿಟ್ಟಿನಿಂದ, ‘ಎಲ್ಲಾ ನಿನ್ನದೇ ತಪ್ಪು, ಮನೆಗೆ ಸರಿಯಾಗಿ ಬೀಗ ಹಾಕಿದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ’ ಎಂದು ಮುಲ್ಲಾನನ್ನು ನಿಂದಿಸಿದಳು. ಅಷ್ಟೊತ್ತಿಗಾಗಲೇ ನೆರೆಹೊರೆಯವರು ಮನೆಯ ಬಳಿ ಸೇರಿದ್ದರು. ಅವರಲ್ಲೊಬ್ಬಾತ, ‘ಬಹುಶಃ ನೀನು ಕಿಟಕಿಗಳನ್ನು ಸರಿಯಾಗಿ ಬಂದೋಬಸ್ತ್ ಮಾಡಿರಲಿಲ್ಲವೆನ್ನಿಸುತ್ತದೆ’ ಎಂದ. ಮತ್ತೊಬ್ಬಾತ, ‘ನಿನ್ನ ಮನೆಯ ಬಾಗಿಲನ್ನು ನೀನು ಗಟ್ಟಿಮುಟ್ಟಾಗಿ ಮಾಡಿಸಿರಲಿಲ್ಲವೇನೋ’ ಎಂದ.
ಎಲ್ಲರ ಮಾತನ್ನೂ ಕೇಳಿಸಿಕೊಂಡ ನಸ್ರುದ್ದೀನ್, ‘ಇದೇನಿದು? ನನ್ನ ಮನೆಯ ಕಳ್ಳತನಕ್ಕೆ ಎಲ್ಲರೂ ನನ್ನದೇ ತಪ್ಪು ಎನ್ನುತ್ತಿದ್ದೀರಾ? ಹಾಗಾದರೆ ಈ ಕಳ್ಳತನ ಮಾಡಿದ ಕಳ್ಳನದೇನೂ ತಪ್ಪಿಲ್ಲವೆ?’
ಕದಿಯಲಿ ಬಿಡು
ಮುಲ್ಲಾ ನಸ್ರುದ್ದೀನ್ ಅತ್ಯಂತ ಬಡತನದಲ್ಲಿದ್ದು ಆತನ ಬದುಕೇ ದುಸ್ತರವಾಗಿತ್ತು. ಒಂದು ದಿನ ರಾತ್ರಿ ಆತನ ಪತ್ನಿ ನಿದ್ರೆಯಲ್ಲಿದ್ದ ಮುಲ್ಲಾನನ್ನು ಎಬ್ಬಿಸಿ, ‘ಅಡುಗೆ ಮನೆಯಲ್ಲಿ ಯಾರೋ ಕಳ್ಳ ಬಂದಂತಿದೆ’ ಎಂದು ಪಿಸುಗುಟ್ಟಿದಳು.
‘ಶ್ಶ್.... ಶಬ್ದಮಾಡಬೇಡ ದಡ್ಡಿ! ಕಳ್ಳ ಬರಲಿಬಿಡು. ಬಹುಶಃ ಅವನಿಗೇನಾದರೂ ಸಿಗಬಹುದು. ಆಗ ಅವನನ್ನು ಹಿಡಿದು ಅದನ್ನು ಕಿತ್ತುಕೊಳ್ಳೋಣ!’ ಎಂದ ಮುಲ್ಲಾ ನಸ್ರುದ್ದೀನ್.
ಶುಕ್ರವಾರ, ಮೇ 04, 2012
ಮ್ಯೂಸ್ ಇಂಡಿಯಾ ಎಂಬ ಸಾಹಿತ್ಯ ಇಂಗ್ಲಿಷ್ ಇ-ಪತ್ರಿಕೆಯಲ್ಲಿ ನನ್ನ ಸಂದರ್ಶನ
ಹಲವಾರು ಲೇಖಕರು ಸೇರಿ ಪ್ರಕಟಿಸುತ್ತಿರುವ ಸಾಹಿತ್ಯ ಇಂಗ್ಲಿಷ್ ಇ-ಪತ್ರಿಕೆ ಮ್ಯೂಸ್ ಇಂಡಿಯಾ (www.museindia.com)
ಈ ಬಾರಿಯ ಮೇ-ಜೂನ್ 2012ರ ಸಂಚಿಕೆ ಸಮಕಾಲೀನ ಕನ್ನಡ ಸಾಹಿತ್ಯ http://www.museindia.com/focus.asp?id=43
ಹಾಗೂ ಉರ್ದು ಲೇಖಕ ಮಂಟೋನ ಜನ್ಮ ಶತಮಾನೋತ್ಸವ ಸ್ಮರಣೆ ಹಾಗೂ ಇತರ ಲೇಖನ, ಚರ್ಚೆಗಳನ್ನೊಳಗೊಂಡಿದೆ.http://www.museindia.com/feature.asp?id=43
ಮಂಟೋನ ನನ್ನ ಅನುವಾದದ ಕುರಿತು ನನ್ನ ಸಂದರ್ಶನ ಈ ಸಂಚಿಕೆಯಲ್ಲಿದೆ. ಸಮಯ ಸಿಕ್ಕಾಗ ಓದಿ:
Taking Manto’s writings to Kannada readers
Manto Kategalu is an anthology of 11 of the most well-known short stories of Saadat Hasan Manto by J Balakrishna. Published in 2009 by Lankesh Prakashana, Bangalore, (Price Rs 80, Pages: 107), it also contains Manto’s letters to Uncle Sam (The US). Satirical and hard-hitting, they are relevant even today, given the uneasy US-Pak relationship. Though written against the post-Partition geo-political ethos, they have a contemporary urgency and immediacy.
J Balakrishna’s translation of Manto’s immortal short stories into Kannada highlight the fact that no matter which side of the divide people found themselves in after the Partition, they were hapless victims of unmitigated human tragedy. Today, reading their translations in Kannada not only make them accessible to people in the Southern state, who were far away from the horrors of Partition, and relatively untouched by it, but it also humanises the so-called enemy. It is less easy to demonise a people when you have read about their suffering.
Though born of one of history’s most gruesome of epochs, Manto’s short stories could lead to cross-cultural conversation, and perhaps, lessen mutual mistrust and suspicion between the two divided nations – India and Pakistan.
ಮುಂದೆ ಓದಲು ಈ ಲಿಂಕ್ ಮೇಲ್ ಕ್ಲಿಕ್ ಮಾಡಿ:
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)