ಶನಿವಾರ, ನವೆಂಬರ್ 14, 2015
ಸೋಮವಾರ, ನವೆಂಬರ್ 09, 2015
ಮುಲ್ಲಾ ನಸ್ರುದ್ದೀನ್ ಕತೆಗಳ 44ನೇ ಕಂತು
ನವೆಂಬರ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 44ನೇ ಕಂತು
ನೀವು ನಸ್ರುದ್ದೀನ್‍ರವರೆ?
ಮಸೀದಿಯಲ್ಲಿ ನಮಾಜಿಗೆಂದು ಹೋಗುವವರು ತಮ್ಮ ಕೋಟುಗಳನ್ನು ತೆಗೆದು ಒಂದು ಗೂಟಕ್ಕೆ ತಗುಲಿಸಿ ಒಳಕ್ಕೆ ಹೋಗುತ್ತಿದ್ದರು. ಬರುವಾಗ ಅದನ್ನು ಧರಿಸಿ ವಾಪಸ್ಸು ಹೋಗುತ್ತಿದ್ದರು. ಒಂದು ದಿನ ನಸ್ರುದ್ದೀನ್ ನಮಾಜು ಮುಗಿಸಿ ಬಂದು ಕೋಟ್ ಧರಿಸುತ್ತಿದ್ದ ಒಬ್ಬಾತನನ್ನು,
`ನೀವು ಮುಲ್ಲಾ ನಸ್ರುದ್ದೀನ್‍ರವರೆ?’ ಎಂದು ಕೇಳಿದ.
`ಇಲ್ಲ’ ಎಂದ ಆ ವ್ಯಕ್ತಿ ಸಿಡುಕಿನಿಂದ.
`ಕ್ಷಮಿಸಿ, ನೀವು ಧರಿಸುತ್ತಿರುವ ಕೋಟು ಮುಲ್ಲಾ ನಸ್ರುದ್ದೀನನದು’ ಎಂದ ನಸ್ರುದ್ದೀನ್.
ಸತ್ಯವನ್ನೇ ನುಡಿಯುತ್ತೇನೆ
ಅಬ್ದುಲ್ಲಾ: ನಾನು ನನ್ನ ಹೆಂಡತಿಗೆ ನಡೆದುದೆಲ್ಲವನ್ನೂ ಹೇಳಿಬಿಡುತ್ತೇನೆ.
ನಸ್ರುದ್ದೀನ್: ಹೋ, ನಾನು ಹಾಗೇನಿಲ್ಲ. ನಾನು ಅವಳಿಗೆ ಹೇಳುವ ಎಷ್ಟೋ ವಿಷಯಗಳು ನಡೆದಿರುವುದೇ ಇಲ್ಲ.
ಇಂಕ್ ರಾಜಕಾರಣ
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ತನ್ನ ಅಪ್ಪನ ಬಳಿ ಬಂದು, `ಅಪ್ಪಾ ಇಂಕ್ ದುಬಾರಿಯಾದುದೇ?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನನ ತಂದೆ, `ಇಲ್ಲವಲ್ಲಾ, ಏಕೆ ಯಾರಾದರೂ ನಿನ್ನನ್ನು ವಿರೋಧಿಸುವವರ ಮುಖಕ್ಕೆ ಹಚ್ಚಬೇಕೆ?’ ಎಂದು ಕೇಳಿದ.
`ಇಲ್ಲ. ಮನೆಯ ರತ್ನಗಂಬಳಿಯ ಮೇಲೆ ಸ್ವಲ್ಪವೇ ಇಂಕ್ ಚೆಲ್ಲಿದ್ದಕ್ಕಾಗಿ ಅಮ್ಮ ಸಿಕ್ಕಾ ಬಟ್ಟೆ ಬಯ್ಯುತ್ತಿದ್ದಾರೆ. ಅದಕ್ಕೇ ಕೇಳಿದೆ’ ಎಂದ ನಸ್ರುದ್ದೀನ್.
ಪಾಪ ಮುದುಕ!
ಬಾಲಕ ನಸ್ರುದ್ದೀನ್ ತನ್ನ ತಾಯಿಯ ಬಳಿ ಬಂದು,
`ಅಮ್ಮಾ, ಪಾಪ ಯಾರೋ ಮುದುಕ ರಸ್ತೆಯಲ್ಲಿ ಅರಚುತ್ತಿದ್ದಾನೆ. ಆತನಿಗೆ ಕೊಡಲು ಹತ್ತು ರೂಪಾಯಿ ಕೊಡು’ ಎಂದು ಕೇಳಿದ.
ಅವನ ತಾಯಿ, `ಹೌದೆ? ಪಾಪ. ಏನೆಂದು ಅರಚುತ್ತಿದ್ದಾನೆ?’ ಎಂದು ಕೇಳಿದರು.
`ಐಸ್ ಕ್ಯಾಂಡಿ! ಹತ್ತು ರೂಪಾಯಿಗೆರಡು! ಎಂದು ಅರಚುತ್ತಿದ್ದಾನೆ’ ಎಂದ ನಸ್ರುದ್ದೀನ್.
ಅದು ನಿನ್ನೆಯದು
ಅಧ್ಯಾಪಕರು: ನಸ್ರುದ್ದೀನ್ ನೀನು ಶಾಲೆಗೆ ಬರುವಾಗ ಚೆನ್ನಾಗಿ ಮುಖ ತೊಳೆದು, ಸ್ನಾನ ಮಾಡಿ ಬರಬೇಕು. ಈಗ ನಿನ್ನ ಮುಖ ನೋಡಿದರೆ ನೀನು ಬೆಳಿಗ್ಗೆ ಉಪಾಹಾರಕ್ಕೆ ಏನು ತಿಂದಿರುವೆಯೆಂದು ಹೇಳಬಹುದು.
ನಸ್ರುದ್ದೀನ್: ಹೌದೆ? ಈ ದಿನ ನಾನು ಏನು ತಿಂದಿರುವೆ ಹೇಳಿ.
ಅಧ್ಯಾಪಕರು: ನಿನ್ನ ಮುಸುಡಿಗೆ ಮೆತ್ತಿಕೊಂಡಿದೆ ನೋಡು. ನೀನು ಉಪ್ಪಿಟ್ಟು ತಿಂದು ಬಂದಿರುವೆ.
ನಸ್ರುದ್ದೀನ್: ತಪ್ಪು ಟೀಚರ್. ಅದು ನಿನ್ನೆ ತಿಂದದ್ದು.
ಕೊಡುಗೆ
ಫಾತಿಮಾ: ನಿಮ್ಮ ಹುಟ್ಟಿದ ಹಬ್ಬಕ್ಕೆ ನಿಮಗೆ ಅಚ್ಚರಿ ನೀಡೋಣವೆಂದು ಒಂದು ಸುಂದರ ವಸ್ತ್ರದುಡುಗೆ ತಂದಿದ್ದೇನೆ.
ನಸ್ರುದ್ದೀನ್: ಹೌದೆ? ಎಲ್ಲಿ ನೋಡೋಣ
ಫಾತಿಮಾ: ಒಂದು ನಿಮಿಷ, ಅದನ್ನು ಧರಿಸಿ ಬಂದುಬಿಡುತ್ತೇನೆ.
ದೊಡ್ಡ ಕೆಲಸ
ನಸ್ರುದ್ದೀನ್ ಮೃಗಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ. ಮೊದಲ ದಿನ ಅವನಿಗೆ ನಾಯಿ ನರಿಗಳಿಗೆ ಸ್ನಾನ ಮಾಡಿಸುವ ಕೆಲಸ ನೀಡಲಾಯಿತು. ಸಿಡುಕಿನಿಂದ ನಸ್ರುದ್ದೀನ್,
`ನನಗೆ ಇಂಥ ಸಣ್ಣ ಪುಟ್ಟ ಕೆಲಸ ಬೇಡ. ನಾನು ದೊಡ್ಡ ಕೆಲಸದ ನಿರೀಕ್ಷೆಯಿಂದ ಇಲ್ಲಿ ಕೆಲಸಕ್ಕೆ ಸೇರಿಕೊಂಡೆ’ ಎಂದ.
`ಹೌದೆ? ಹಾಗಾದರೆ ಆನೆ, ಜಿರಾಫೆಗಳಿಗೆ ಸ್ನಾನ ಮಾಡಿಸು’ ಎಂದರು ಮೃಗಾಲಯದ ಮೇಲ್ವಿಚಾರಕರು.
ಪ್ರೀತಿ
ಫಾತಿಮಾ: ನನ್ನ ಗಂಡ ನಸ್ರುದ್ದೀನನನಿಗೆ ನನ್ನ ಮೇಲೆ ಎಷ್ಟೊಂದು ಪ್ರೀತಿಯಿದೆ ಗೊತ್ತಾ? ರಾತ್ರಿ ನಿದ್ರೆಯಲ್ಲೆಲ್ಲಾ ಕನವರಿಸುತ್ತಾ ಪ್ರೀತಿಯ ಮಾತುಗಳನ್ನಾಡುತ್ತಿರುತ್ತಾನೆ.
ರುಕ್ಸಾನಾ: ಹೌದಾ? ನೀನೇ ಅದೃಷ್ಟವಂತೆ ಕಣೇ!
ಫಾತಿಮಾ: ಆದರೆ ನಸ್ರುದ್ದೀನನಿಗೆ ಮರೆವು ಹೆಚ್ಚು ನಿನಗೆ ಗೊತ್ತಲ್ಲಾ, ನನ್ನ ಹೆಸರಿನ ಬದಲು ಬೇರೆ ಯಾರದೋ ಹೆಸರು ಹೇಳುತ್ತಿರುತ್ತಾನೆ.
ಹಣ ಮಾತನಾಡುತ್ತದೆ
ಫಾತಿಮಾ: ಹಣ ಮಾತನಾಡುತ್ತದಂತೆ ಹೌದೆ?
ನಸ್ರುದ್ದೀನ್: ಇರಬಹುದು. ಜನ ಹಾಗೆಂದು ಹೇಳುತ್ತಾರೆ.
ಫಾತಿಮಾ: ನೀವು ಹೊರಗೆ ಹೋದ ನಂತರ ಮನೆಯಲ್ಲಿ ನಾನೊಬ್ಬಳೇ, ಮಾತನಾಡಲು ಯಾರೂ ಇರುವುದಿಲ್ಲ ಬೇಸರವಾಗುತ್ತದೆ. ಮಾತನಾಡಲು ಒಂದಷ್ಟು ಹಣ ಇಟ್ಟು ಹೋಗಿ.
ಗುಡಗು-ಸಿಡಿಲು
ನಸ್ರುದ್ದೀನ್ ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ರಾತ್ರಿ ಜೋರಾಗಿ ಮಳೆ ಸುರಿದಿರುವುದನ್ನು ಕಂಡ. ಫಾತಿಮಾಳಿಗೆ,
`ರಾತ್ರಿ ಜೋರಾಗಿ ಮಳೆ ಬಿತ್ತೆ?’ ಎಂದು ಕೇಳಿದ.
`ಎಂಥ ಮಳೆ ಸುರಿಯಿತು! ಅದಕ್ಕಿಂತ ಜೋರಾಗಿತ್ತು ಗುಡಗು-ಸಿಡಿಲಿನ ಅಬ್ಬರ!’ ಎಂದಳು ಫಾತಿಮಾ.
`ಛೇ! ಎಂಥ ಕೆಲಸ ಮಾಡಿದೆ! ನನ್ನನ್ನೇಕೆ ಎಬ್ಬಿಸಲಿಲ್ಲ? ನಿನಗೆ ಗೊತ್ತಲ್ಲ, ನನಗೆ ಗುಡಗು-ಸಿಡಿಲಿದ್ದರೆ ನಿದ್ದೆ ಬರುವುದಿಲ್ಲವೆಂದು?’ ಹೇಳಿದ ನಸ್ರುದ್ದೀನ್.
ತೂಗುಹಾಕಿದ್ದಾರೆ
ನಸ್ರುದ್ದೀನ್ ಕಲಾ ಮ್ಯೂಸಿಯಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಭೇಟಿ ನೀಡಿದ ಒಬ್ಬಾತ,
`ಅಂಥ ಕೆಟ್ಟ ಕಲಾಕೃತಿಯನ್ನು ಏಕೆ ಇಲ್ಲಿ ತೂಗು ಹಾಕಿದ್ದಾರೆ?’ ಎಂದು ನಸ್ರುದ್ದೀನನನ್ನು ಕೇಳಿದ.
`ಬಹುಶಃ ಅವರ ಕೈಗೆ ಅದರ ಕಲಾವಿದ ಸಿಕ್ಕಿರಲಿಲ್ಲವೆನ್ನಿಸುತ್ತದೆ’ ಹೇಳಿದ ನಸ್ರುದ್ದೀನ್.
ಭರಿಸುವುದು ಸಾಧ್ಯವಿಲ್ಲ
ವೃದ್ಧ ನಸ್ರುದ್ದೀನ್ ಆರೋಗ್ಯವಾಗಿದ್ದ. ಪತ್ರಿಕೆಯವರೊಬ್ಬರು ಸಂದರ್ಶನ ನಡೆಸುವಾಗ,
`ನಿಮಗಿಷ್ಟು ವಯಸ್ಸಾಗಿದ್ದರೂ ನೀವು ಆರೋಗ್ಯವಾಗಿದ್ದೀರ. ಏನು ಅದರ ರಹಸ್ಯ?’ ಎಂದು ಕೇಳಿದರು.
`ಅದರಲ್ಲಿ ರಹಸ್ಯವೇನೂ ಇಲ್ಲ. ಇಂದಿನ ಆಸ್ಪತ್ರೆಗಳು, ಚಿಕಿತ್ಸೆಗಳು ಎಷ್ಟು ದುಬಾರಿಯೆಂದು ನಿಮಗೆ ತಿಳಿದೇ ಇದೆ. ನನ್ನ ಬಡತನದಲ್ಲಿ ನಾನು ಕಾಯಿಲೆ ಬೀಳುವಂಥ ಸವಲತ್ತುಗಳು ನನಗಿಲ್ಲ’ ಎಂದ ಅಜ್ಜ ನಸ್ರುದ್ದೀನ್.
ಮದುವೆಯಾದವರು
ನಸ್ರುದ್ದೀನ್ ಹೊಸದಾಗಿ ಅಂಗಡಿ ತೆರೆದ ಹಾಗೂ ಅಲ್ಲಿ ಕೆಲಸ ಮಾಡಲು ಮದುವೆಯಾದ ಗಂಡಸರೇ ಬೇಕು ಎಂಬ ಫಲಕ ಹಾಕಿದ್ದ. ಅದನ್ನು ಕಂಡ ಒಬ್ಬಾತ ಕುತೂಹಲದಿಂದ
`ಅದ್ಯಾಕೆ ಮದುವೆಯಾದ ಗಂಡಸರೇ ಬೇಕು?’ ಎಂದು ಕೇಳಿದ.
`ಏಕೆಂದರೆ, ನಾನೆಷ್ಟು ಬೈದರೂ ತಾಳ್ಮೆಯಿಂದ ಸಹಿಸಿಕೊಳ್ಳುವ ಅನುಭವವಿರುವವರು ನನ್ನ ಕೆಲಸಕ್ಕೆ ಬೇಕು’ ಎಂದ ನಸ್ರುದ್ದೀನ್.
ಕಿವುಡು
ನಸ್ರುದ್ದೀನನ ಬಳಿ ಕೆಲಸಕ್ಕೆ ಸೇರಿಕೊಂಡ ಒಬ್ಬಾತ ಕೆಲದಿನಗಳಲ್ಲೇ ನಸ್ರುದ್ದೀನನ ಬಳಿ ಬಂದು,
`ನನಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಕೆಲಸ ಮಾಡಲು ತೊಂದರೆಯಾಗುತ್ತದೆ. ನಾನು ಕೆಲಸ ಬಿಡುತ್ತೇನೆ’ ಎಂದ.
`ಹೇ, ಅಷ್ಟಕ್ಕೆಲ್ಲಾ ಕೆಲಸ ಬಿಡುವ ಅವಶ್ಯಕತೆಯಿಲ್ಲ. ಇನ್ನು ಮೇಲೆ ನೀನು ದೂರುಗಳ ವಿಭಾಗದಲ್ಲಿ ಕೆಲಸ ಮಾಡು’ ಎಂದ ನಸ್ರುದ್ದೀನ್.
ರಾತ್ರಿ ಬರಬೇಡ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಸ್ವರ್ಗ ನರಕಗಳ ಬಗ್ಗೆ ಮಾತನಾಡುತ್ತಿದ್ದರು. ಅಬ್ದುಲ್ಲಾ, `ನಸ್ರುದ್ದೀನ್ ನಾನೇನಾದರೂ ಮೊದಲು ಸತ್ತರೆ ವಾಪಸ್ಸು ಬಂದು ನಿನಗೆ ಸ್ವರ್ಗ-ನರಕಗಳು ಹೇಗಿವೆಯೆಂದು ಹೇಳುತ್ತೇನೆ. ನೀನು ಮೊದಲು ಸತ್ತರೆ ವಾಪಸ್ಸು ಬಂದು ನನಗೆ ಅದನ್ನೇ ಹೇಳಬೇಕು’ ಎಂದ.
`ಅದು ಒಳ್ಳೇ ವಿಚಾರ. ನೀನು ಮೊದಲು ಸತ್ತು ವಾಪಸ್ಸು ಬರುವುದಾದರೆ ಹಗಲು ಹೊತ್ತೇ ಬಾ, ರಾತ್ರಿ ಬಂದು ನನ್ನನ್ನು ಹೆದರಿಸಬೇಡ’, ಹೇಳಿದ ನಸ್ರುದ್ದೀನ್.
ಸೂಕ್ತ ಕಾರಣ
ನಸ್ರುದ್ದೀನ್ ಸೈನ್ಯದಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದ. ಅವನ ಮೇಲಧಿಕಾರಿ ತುಂಬಾ ಕಟ್ಟುನಿಟ್ಟಿನವನಾಗಿದ್ದು ಯಾರಿಗೂ ಯಾವ ಕಾರಣಕ್ಕೂ ರಜೆ ಕೊಡುತ್ತಿರಲಿಲ್ಲ. ಯಾರಾದರೂ ಹೋಗಿ, `ನನ್ನ ತಂದೆಗೆ ಗಂಭೀರ ಕಾಯಿಲೆ. ರಜೆ ಬೇಕು’ ಎಂದರೆ, `ನನ್ನ ತಂದೆಗೂ ಗಂಭೀರ ಕಾಯಿಲೆಯಾಗಿತ್ತು. ನಾನೇನು ರಜೆ ತೆಗೆದುಕೊಳ್ಳಲಿಲ್ಲವಲ್ಲ’ ಎನ್ನುತ್ತಿದ್ದ. ಮತ್ತಾರಾದರೂ, `ನನ್ನ ತಂಗಿಗೆ ಮದುವೆ, ರಜೆ ಬೇಕು’ ಎಂದರೆ, `ನನ್ನ ತಂಗಿಗೂ ಮದುವೆಯಾಯ್ತು, ನಾನೇನು ರಜೆ ತೆಗೆದುಕೊಳ್ಳಲಿಲ್ಲವಲ್ಲಾ’ ಎನ್ನುತ್ತಿದ್ದ. ನಸ್ರುದ್ದೀನನಿಗೆ ತುರ್ತಾಗಿ ಊರಿಗೆ ಹೋಗಬೇಕಾಗಿತ್ತು. ಅವನೂ ಹೋಗಿ ಒಂದು ಕಾರಣ ಹೇಳಿ ರಜೆ ಕೇಳಿದ. ಅವನಿಗೆ ಕೂಡಲೇ ರಜೆ ಮಂಜೂರಾಯಿತು. ಇತರ ಸಿಪಾಯಿಗಳಿಗೆಲ್ಲಾ ಮಹದಚ್ಚರಿಯಾಯ್ತು. ಎಲ್ಲರೂ ಮುಗಿಬಿದ್ದು ಯಾವ ಕಾರಣ ಹೇಳಿದ್ದಕ್ಕೆ ರಜೆ ಮಂಜೂರಾಯಿತೆಂದು ಕೇಳಿದರು.
`ನನ್ನ ಹೆಂಡತಿ ಯಾವೊನೊಟ್ಟಿಗೋ ಓಡಿ ಹೋಗಿದ್ದಾಳೆ, ಊರಿಗೆ ತುರ್ತಾಗಿ ಹೋಗಬೇಕು, ರಜೆ ಬೇಕು ಎಂದು ಕೇಳಿದೆ’ ಎಂದ ನಸ್ರುದ್ದೀನ್.
j.balakrishna@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)