ಶನಿವಾರ, ಅಕ್ಟೋಬರ್ 23, 2021

ಇಂದಿಗೂ ಪ್ರಸ್ತುತ ವ್ಯಂಗ್ಯಚಿತ್ರ ಗಾರುಡಿಗ ಆರ್.ಕೆ.ಲಕ್ಷ್ಮಣ್



 

ನಾಡು ಕಂಡ ಮಹಾನ್ ವ್ಯಂಗ್ಯಚಿತ್ರಕಾರ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಕ್ಟೋಬರ್ 24ಕ್ಕೆ ಜನಿಸಿ ನೂರು ವರ್ಷಗಳಾಗುತ್ತವೆ. ಸಮಾಜದ ಮತ್ತು ರಾಜಕಾರಣದ ನಡವಳಿಕೆಗಳಿಗೆ ಕನ್ನಡಿಯಂತಿದ್ದ ಅವರ ವ್ಯಂಗ್ಯಚಿತ್ರಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ನೆನಪಿನಲ್ಲಿ ಅವರ ಬದುಕು-ಕೃತಿ ಪರಿಚಯಿಸುವ ಲೇಖನ 27 ಅಕ್ಟೋಬರ್ 2021ರ "ನ್ಯಾಯಪಥ" ಪತ್ರಿಕೆಯಲ್ಲಿ ಪ್ರಕಟವಾಗಿದೆ.





ಇಂದಿಗೂ ಪ್ರಸ್ತುತ ವ್ಯಂಗ್ಯಚಿತ್ರ ಗಾರುಡಿಗ ಆರ್.ಕೆ.ಲಕ್ಷ್ಮಣ್

`ನೀವು ನಿಮ್ಮ ದಿನನಿತ್ಯದ ಬದುಕಿನಲ್ಲಿ ಇವೆಲ್ಲವನ್ನು (ವ್ಯಂಗ್ಯಚಿತ್ರಗಳಲ್ಲಿನ ವಸ್ತು) ಕಾಣುತ್ತಿರುತ್ತೀರಿ, ಆದರೆ ಅವುಗಳನ್ನು ನೀವು ಗಮನಿಸುವಂತೆ ಮಾಡುವುದು ಕಲಾವಿದನ ಕಾರ್ಯವಾಗಿರುತ್ತದೆ. ಅಷ್ಟೇ ಅಲ್ಲ ಈ ಜಗತ್ತು ಹಾಗೂ ಅದರಲ್ಲಿನ ರಾಜಕಾರಣವೆಲ್ಲಾ ದರ್ಶ ರಾಜ್ಯದಲ್ಲಿರುವಂತೆ ಇದ್ದಲ್ಲಿ ವ್ಯಂಗ್ಯಚಿತ್ರಕಾರನಿಗೆ ಅದರಲ್ಲೂ ರಾಜಕೀಯ ವ್ಯಂಗ್ಯಚಿತ್ರಕಾರನಿಗೆ ಕೆಲಸವೇ ಇರುವುದಿಲ್ಲ. ಆದರೆ ಅದೃಷ್ಟವಶಾತ್ ಜಗತ್ತು ಆದರ್ಶವಾಗಿಲ್ಲ'

- ಆರ್.ಕೆ.ಲಕ್ಷ್ಮಣ್

 

ಭಾರತದ ಸಮೃದ್ಧ ವ್ಯಂಗ್ಯಚಿತ್ರ ಸಂಸ್ಕೃತಿಯು ಚಿಗುರೊಡೆದದ್ದು ಬ್ರಿಟಿಷ್ ವಸಾಹತಿನ ಸಮಯದಲ್ಲಿ. ಈ ಫಸಲಿನಲ್ಲಿ ನೂರಾರು ವ್ಯಂಗ್ಯಚಿತ್ರಕಾರರು ರೂಪುಗೊಂಡಿದ್ದು ಇಂದು ಅವರೆಲ್ಲಾ ಸಾರ್ವಜನಿಕ ನೆನಪಿನಿಂದ ಮರೆಯಾಗಿದ್ದಾರೆ. 19ನೇ ಶತಮಾನದಲ್ಲಿ ಬ್ರಿಟಿಷ್ ವ್ಯಂಗ್ಯ ಪತ್ರಿಕೆ `ಪಂಚ್ ಅಥವಾ ಲಂಡನ್ ಚಾರಿವಾರಿ'ಯ ಜನಪ್ರಿಯತೆಯಿಂದಾಗಿ ಭಾರತದಲ್ಲೆಲ್ಲಾ ಸ್ಥಳೀಯ ಭಾಷೆಯ ಪರ‍್ಸಿ ಪಂಚ್, ಔಧ್ ಪಂಚ್, ಹಿಂದು ಪಂಚ್ ಮುಂತಾದ ಬ್ರಿಟಿಷ್ ಪಂಚ್ ಅನ್ನೇ ಅನುಕರಿಸಿದ ಪತ್ರಿಕೆಗಳು ಪ್ರಕಟವಾಗತೊಡಗಿದವು. ಅವು ಸ್ಥಳೀಯ ರಾಜಕಾರಣವನ್ನು ಮತ್ತು ವ್ಯಂಗ್ಯಚಿತ್ರಗಳನ್ನು ಪ್ರಕಟಿಸತೊಡಗಿದವು.

ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್‌ರವರು ಮೈಸೂರಿನಲ್ಲಿ 1921ರ ಅಕ್ಟೋಬರ್ 24ರಂದು ಜನಿಸಿದರು. ಐದು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಲ್ಲಿ ಕೊನೆಯವರು ಲಕ್ಷ್ಮಣ್. ಅವರ ತಂದೆ ಹೈಸ್ಕೂಲ್ ಹೆಡ್ ಮಾಸ್ತರ್. ಲಕ್ಷ್ಮಣ್‌ರವರೇ ಹೇಳಿರುವಂತೆ ಅವರ ತಂದೆ ತುಂಬಾ ಶಿಸ್ತು ಬಯಸುವವರಾಗಿದ್ದರು. ಅವರ ತಾಯಿ ಗೃಹಿಣಿ. ಲಕ್ಷ್ಮಣ್‌ರವರು ತಮ್ಮ ಆತ್ಮ ಕತೆ `ದ ಟನೆಲ್ ಆಫ್ ಟೈಮ್'ನಲ್ಲಿ ಹೇಳಿರುವಂತೆ ಆಕೆ ಸದಾ ಹಸನ್ಮುಖಿಯಾಗಿದ್ದರು ಹಾಗೂ ಅದ್ಭುತವಾಗಿ ಮಕ್ಕಳಿಗೆ ಪುರಾಣಗಳ ಕತೆಗಳನ್ನು ಹೇಳುವವರಾಗಿದ್ದರು. ಆಕೆ ಟೆನ್ನಿಸ್, ಬ್ಯಾಡ್‌ಮಿಂಟನ್, ಚೆಸ್ ಹಾಗೂ ಬ್ರಿಡ್ಜ್ ಆಟಗಾರರಾಗಿದ್ದರು. ಆಕೆಯನ್ನು ಚೆಸ್‌ನಲ್ಲಿ ಸೋಲಿಸುವವರೇ ಇರಲಿಲ್ಲ. ಆಕೆ ಮಹಾರಾಣಿ ಮಹಿಳಾ ಕ್ಲಬ್‌ಗೆ ಆಗಾಗ ಹೋಗುತ್ತಿದ್ದು ಅಲ್ಲಿ ಮಹಾರಾಣಿಯವರ ಜೊತೆಯೂ ಚೆಸ್ ಆಡುತ್ತಿದ್ದರಂತೆ. ಲಕ್ಷ್ಮಣ್‌ರವರೂ ಸಹ ಮೈಸೂರಿನಲ್ಲಿ ಬಾಲ್ಯದಲ್ಲಿ ಕ್ರಿಕೆಟ್ ಆಡುತ್ತಿದ್ದು `ರಫ್ ಅಂಡ್ ಟಫ್ ಅಂಡ್ ಜಾಲಿ ಟೀಂ' ಎನ್ನುವ ಕ್ರಿಕೆಟ್ ಟೀಮ್ ಕಟ್ಟಿದ್ದರು (ಅದನ್ನೇ ಲಕ್ಷ್ಮಣ್‌ರವರ ಅಣ್ಣ ಆರ್.ಕೆ.ನಾರಾಯಣ್ ಆ ಕ್ರಿಕೆಟ್ ತಂಡದ ಬಗ್ಗೆ `ದ ರೀಗಲ್ ಕ್ರಿಕೆಟ್ ಟೀಮ್' ಎಂಬ ಕತೆ ಬರೆದದ್ದು). ಲಕ್ಷ್ಮಣ್‌ರವರು ಕ್ರಿಕೆಟ್ ಬೇಸರದ ಆಟ ಎಂದು ಕೈ ಬಿಟ್ಟರು.

ಲಕ್ಷ್ಮಣ್‌ರವರ ತಂದೆ ತಮ್ಮ ಶಾಲೆಗಾಗಿ ಹಲವಾರು ಪತ್ರಿಕೆಗಳನ್ನು ತರಿಸುತ್ತಿದ್ದರು ಹಾಗೂ ಅವು ಶಾಲೆಗೆ ತಲುಪುವ ಮುನ್ನ ಮನೆಗೆ ಮದ್ರಾಸ್, ಲಂಡನ್ ಮತ್ತು ನ್ಯೂಯರ‍್ಕ್ನಿಂದ ಬಂಡಲುಗಟ್ಟಲೆ ಬರುತ್ತಿದ್ದವು. ಅವುಗಳಲ್ಲಿ ಹಾರ್ಪರ್ಸ್, ಸ್ಟ್ರ್ಯಾಂಡ್ ಮತ್ತು ಪಂಚ್ ಪತ್ರಿಕೆಗಳಲ್ಲಿನ ವ್ಯಂಗ್ಯಚಿತ್ರಗಳು ಅವರನ್ನು ಆಗಲೇ ಆಕರ್ಷಿಸಿದ್ದವು. ಲಕ್ಷ್ಮಣ್‌ರವರಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಆದರೆ ಅವರು ವ್ಯಂಗ್ಯಚಿತ್ರಕಾರರಾಗಬೇಕೆಂಬ ಉದ್ದೇಶವೇನೂ ಹೊಂದಿರಲಿಲ್ಲ. ಅವರಿಗೆ ಶಾಲೆ ಮತ್ತು ತರಗತಿಗಳ ಬಗ್ಗೆ ಅಂತಹ ಆಸಕ್ತಿಯೇನೂ ಇರಲಿಲ್ಲ. ಅವರೇ ಹೇಳಿರುವಂತೆ ಶಾಲಾ ಕಲಿಕೆ ಕೃತಕವಾದುದು ಹಾಗೂ ಮನುಷ್ಯರಿಗೆ ಕೆಟ್ಟದ್ದು! ಅವರ ತುಂಟತನದಿಂದಾಗಿ ಶಾಲೆಯಲ್ಲಿ ಸಾಕಷ್ಟು ಏಟು ತಿನ್ನುತ್ತಿದ್ದರು. ಹತ್ತನೇ ತರಗತಿಯಲ್ಲಿ ಫೇಲ್ ಸಹ ಆದರು.

ಸುಮಾರು ಒಂಭತ್ತು ಅಥವಾ ಹತ್ತನೇ ತರಗತಿಯಲ್ಲಿ ಅವರು ಚಿತ್ರ ಕಲಾವಿದರಾಗಬೇಕೆಂದು ತೀರ್ಮಾನಿಸಿದರು. ಮೈಸೂರಿನಲ್ಲಿ ಅಲ್ಲಿ ಇಲ್ಲಿ ಸೈಕಲ್ಲಿನಲ್ಲಿ ಸುತ್ತಾಡಿ ಚಿತ್ರಗಳನ್ನು ರಚಿಸತೊಡಗಿದರು. ವಿದೇಶಿ ಪತ್ರಿಕೆಗಳನ್ನು ನೋಡಿ ಮತ್ತಷ್ಟು ಚಿತ್ರಕಲೆಯ ಬಗ್ಗೆ ಕಲಿತರು. ಹತ್ತನೇ ತರಗತಿಯಲ್ಲಿ ಫೇಲ್ ಆದಾಗ ಚಿತ್ರಕಲೆಯಲ್ಲಿಯೇ ವ್ಯಾಸಂಗ ಮುಂದುವರಿಸಲು ಬಾಂಬೆಯಲ್ಲಿನ ಜೆ.ಜೆ. ಕಲಾ ಶಾಲೆಗೆ ಅರ್ಜಿ ಸಲ್ಲಿಸಿದರು ಹಾಗೂ ತಮ್ಮ ಅರ್ಜಿಯ ಜೊತೆ ತಮ್ಮ ರಚನೆಯ ಹಲವಾರು ಚಿತ್ರಗಳನ್ನು ಸಹ ಲಗತ್ತಿಸಿದ್ದರು. ಆದರೆ ಅವರಲ್ಲಿ `ಚಿತ್ರ ರಚನಾ ಕೌಶಲ್ಯತೆ' ಇಲ್ಲವೆಂದು ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ನಂತರ ಮೈಸೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿಯೇ ಅರ್ಥಶಾಸ್ತç, ತತ್ವಶಾಸ್ತç, ರಾಜಕಾರಣಗಳಲ್ಲಿ ತಮ್ಮ ಪದವಿ ಪಡೆದರು. ತಾವು ವಿದ್ಯಾರ್ಥಿಯಾಗಿದ್ದಾಗಲೇ ವ್ಯಂಗ್ಯಚಿತ್ರಗಳನ್ನು ಸಹ ರಚಿಸಲು ಪ್ರಾರಂಭಿಸಿದರು. ಅವರ ವಿದ್ಯಾರ್ಥಿ ದಿನಗಳಲ್ಲಿಯೇ ಬೆಂಗಳೂರಿನ ರಾಶಿ ಅಥವಾ ಡಾ.ಆರ್.ಶಿವರಾಂರವರು ಪ್ರಕಟಿಸುತ್ತಿದ್ದ `ಕೊರವಂಜಿ' ಪತ್ರಿಕೆಯಲ್ಲಿ ಲಕ್ಷ್ಮಣ್‌ರವರಿಗೆ ವ್ಯಂಗ್ಯಚಿತ್ರಗಳನ್ನು ರಚಿಸುವ ಅವಕಾಶ ಸಿಕ್ಕಿತು. ಅವರ ವ್ಯಂಗ್ಯಚಿತ್ರಗಳ `ಖ್ಯಾತಿ' ಹರಡಿ ವಯಸ್ಕರ ಶಿಕ್ಷಣ ಮುಂತಾದೆಡೆ ಪೋಸ್ಟರುಗಳನ್ನು ರಚಿಸಿಕೊಡಲು ಕೇಳಲಾಯಿತು. ಅವರ ಅಣ್ಣ ಆರ್.ಕೆ.ನಾರಾಯಣ್‌ರವರ ಕತೆಗಳು `ದ ಹಿಂದು' ಪತ್ರಿಕೆಯಲ್ಲಿ ಪ್ರಕಟವಾಗತೊಡಗಿತು ಹಾಗೂ ಅವರು ಸಹ ತಮ್ಮ ಕತೆಗಳಿಗೆ ಚಿತ್ರಗಳನ್ನು ಬರೆದುಕೊಡಲು ಕೇಳಿದರು. ಅವರ ಅಣ್ಣನ ಕತೆಗಳಲ್ಲಿನ ಪಾತ್ರಗಳ ಪರಿಚಯ ಲಕ್ಷ್ಮಣ್‌ರವರಿಗೆ ಚೆನ್ನಾಗಿದ್ದುದರಿಂದ ಕತೆಗೆ ತಕ್ಕ ಹಾಗೆ ಚಿತ್ರಗಳನ್ನು ರಚಿಸಿಕೊಟ್ಟರು ಹಾಗೂ ಅವು ಪ್ರಕಟವಾದಂತೆ ಅವರು ವಿದ್ಯಾರ್ಥಿ ದಿನಗಳಲ್ಲಿಯೇ ಪಾಕೆಟ್ ಮನಿ ಸಂಪಾದಿಸತೊಡಗಿದರು. ಅವರಿಗೆ ವ್ಯಂಗ್ಯಚಿತ್ರ ರಚನೆ ಸಹಜವಾಗಿ ಬಂದಿತ್ತು. ಅವರನ್ನು ಒಮ್ಮೆ `ವ್ಯಂಗ್ಯಚಿತ್ರಕಾರರಾಗುವುದು ಹೇಗೆ?' ಎಂದು ಕೇಳಿದಾಗ, ಅದನ್ನು ಕಲಿಯಲು ಸಾಧ್ಯವಿಲ್ಲ, ಹಾಡುಗಾರಿಕೆಯಂತೆಯೇ ಅದು ಸಹಜವಾಗಿಯೇ ಬರಬೇಕು ಎಂದಿದ್ದರು. ಆದರೆ ಆ ಕಲೆಯನ್ನು ಸುಧಾರಿಸಿಕೊಳ್ಳಬಹುದು ಹಾಗೂ ವ್ಯಂಗ್ಯಚಿತ್ರಕಾರನಿಗೆ ಚಿತ್ರ ಬರೆಯುವ ಕಲೆಯ ಜೊತೆಗೆ ವ್ಯಂಗ್ಯ ಮನೋಭಾವವಿರಬೇಕು, ಸುತ್ತಲ, ಸಮಾಜದ, ರಾಜಕಾರಣದ ಆಗುಹೋಗುಗಳು ತಿಳಿದಿರಬೇಕು. ಈ ಮೂರು ನಿಮ್ಮಲ್ಲಿ ಇಲ್ಲದಿದ್ದಲ್ಲಿ ನೀವು ವ್ಯಂಗ್ಯಚಿತ್ರಕಾರರಾಗುವುದು ಸಾಧ್ಯವಿಲ್ಲ' ಎಂದಿದ್ದರು.

40ರ ದಶಕದಲ್ಲಿ ʻಕೊರವಂಜಿʼಯಲ್ಲಿ ಪ್ರಕಟವಾದ ಲಕ್ಷಣ್‌ ರವರ ವ್ಯಂಗ್ಯಚಿತ್ರ

 ಲಕ್ಷ್ಮಣ್‌ರವರು ಪಂಚ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಡೇವಿಡ್ ಲೋರವರು ರಚಿಸುತ್ತಿದ್ದ ವ್ಯಂಗ್ಯಚಿತ್ರಗಳು ಹೆಚ್ಚು ಪ್ರಭಾವ ಬೀರಿದವು. ಅವರ ವ್ಯಂಗ್ಯಚಿತ್ರಗಳು ಭಾರತದ `ದ ಹಿಂದು', `ದ ಈವನಿಂಗ್ ಸ್ಟ್ಯಾಂಡರ್ಡ್‌' ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದ್ದವು. ಡೇವಿಡ್ ಲೋರವರು ಮೂಲತಃ ನ್ಯೂಜಿಲೆಂಡ್‌ನವರಾಗಿದ್ದು ಇಂಗ್ಲೆಂಡಿನಲ್ಲಿ ನೆಲೆಸಿದ್ದರು. ಪ್ರಾರಂಭದಲ್ಲಿ ಅವರ ಚಿತ್ರಗಳನ್ನೇ ಅನುಕರಿಸುವ ಪ್ರಯತ್ನ ಮಾಡಿದರು. ಲಕ್ಷ್ಮಣ್‌ರವರ ಸಮಕಾಲೀನ ವ್ಯಂಗ್ಯಚಿತ್ರಕಾರರಾದ ಪಿ.ಕೆ.ಎಸ್.ಕುಟ್ಟಿ, ಅಬು ಅಬ್ರಹಾಂ, ಓ.ವಿ.ವಿಜಯನ್, ಸುಧೀರ್ ಧರ್ ಮುಂತಾದವರೂ ಸಹ ಸ್ವತಃ ತಮ್ಮ ಕಲಿಕೆಯಿಂದಲೇ ವ್ಯಂಗ್ಯಚಿತ್ರರಾದವರು ಹಾಗೂ ಶಂಕರ್ ಪಿಳ್ಳೆöÊ, ಅಹ್ಮದ್, ಬಾಲ್ ಥ್ಯಾಕರೆ, `ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್'ನ ಬಿ.ವಿ.ರಾಮಮೂರ್ತಿಯವರೂ ಸಹ ಸರ್. ಡೇವಿಡ್ ಲೋರವರಿಂದ ಪ್ರೇರಣೆ ಪಡೆದವರು. ಲಕ್ಷ್ಮಣ್ `ಟೈಮ್ಸ್ ಆಫ್ ಇಂಡಿಯಾ'ದಲ್ಲಿ ವ್ಯಂಗ್ಯಚಿತ್ರಕಾರರಾಗಿ ಪ್ರಖ್ಯಾತರಾದನಂತರ ಒಂದು ದಿನ ಸರ್ ಡೇವಿಡ್ ಲೋ ಲಕ್ಷ್ಮಣ್‌ರವರನ್ನು ಭೇಟಿಯಾಗಲು ಮುಂಬೈನ ಅವರ ಕಚೇರಿಗೇ ಭೇಟಿ ನೀಡಿದ್ದರು ಹಾಗೂ ಲಕ್ಷ್ಮಣ್‌ರವರನ್ನು ಲಂಡನ್ನಿಗೆ ಆಹ್ವಾನಿಸಿದರು. ಲಂಡನ್ನಿಗೆ ಭೇಟಿ ನೀಡಿದ ಲಕ್ಷ್ಮಣ್‌ರವರು ಸುಮಾರು ಆರು ತಿಂಗಳ ಕಾಲ ಅಲ್ಲಿಯೇ ಇದ್ದು ಅಲ್ಲಿನ ರಾಜಕೀಯ ಪಕ್ಷಗಳ ಸಮಾವೇಶಗಳಲ್ಲಿ ಭಾಗವಹಿಸಿದರು, ಲಂಡನ್ ಎಲ್ಲಾ ಸುತ್ತಾಡಿದರು ಹಾಗೂ ಅಲ್ಲಿ ಕ್ಲೆಮೆಂಟ್ ಅಟ್ಲೀ ಮತ್ತು ಚರ್ಚಿಲ್‌ರವರನ್ನು ಭೇಟಿಯಾದರು. ಅದರ ಜೊತೆಗೆ ಜೆ.ಬಿ.ಪ್ರೀಸ್ಟ್ಲೆ, ಟಿ.ಎಸ್.ಎಲಿಯಟ್ ಮತ್ತು ಬರ್ಟ್ರೆಂಡ್ ರಸೆಲ್ ಮುಂತಾದವರನ್ನೂ ಭೇಟಿಯಾದರು. ಲಂಡನ್ನಿನ ಟೈಮ್ಸ್ ಆಫ್ ಇಂಡಿಯಾ ಕಚೇರಿಗೆ ಭೇಟಿ ನೀಡಿ ಪ್ರತಿ ದಿನ ವ್ಯಂಗ್ಯಚಿತ್ರ ರಚಿಸಿ ಅಲ್ಲಿಂದಲೇ ಭಾರತಕ್ಕೆ ಕಳುಹಿಸಿಕೊಡುತ್ತಿದ್ದರು.

ತಮ್ಮ ಪದವಿ ಮುಗಿದ ನಂತರ ಪೂರ್ಣಾವಧಿ ವ್ಯಂಗ್ಯಚಿತ್ರಕಾರರಾಗಬೇಕೆಂದು ನಿರ್ಧರಿಸಿದ ಲಕ್ಷ್ಮಣ್‌ರವರು ದೆಹಲಿಗೆ ಉದ್ಯೋಗ ಅರಸಿ ಹೋದರು. ಆಗಿನ್ನೂ ಅವರಿಗೆ ಇನ್ನೂ ಇಪ್ಪತ್ತು ವರ್ಷ ವಯಸ್ಸಾಗಿರಲಿಲ್ಲ. `ದ ಹಿಂದೂಸ್ತಾನ್ ಟೈಮ್ಸ್'ಗೆ ವ್ಯಂಗ್ಯಚಿತ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅವರು, `ನೀನಿನ್ನೂ ಚಿಕ್ಕವನು ಹಾಗೂ ಅನುಭವವಿಲ್ಲ' ಎಂದು ಹೊರಕಳುಹಿಸಿದರು. ಅಲ್ಲಿಂದ ಬಾಂಬೆಗೆ ಹಿಂದಿರುಗಿದ ಅವರು ಕೋಣೆಯನ್ನು ಬಾಡಿಗೆಗೆ ಪಡೆದು ಕೆಲದಿನಗಳು ಅಲ್ಲೇ ವಾಸವಿದ್ದರು. ಒಂದು ದಿನ ದಲಾಲ್ ಸ್ಟಿçÃಟ್‌ನಲ್ಲಿ ಗೆಳೆಯನೊಟ್ಟಿಗೆ ನಡೆದು ಹೋಗುತ್ತಿದ್ದಾಗ `ದ ಫ್ರೀ ಪ್ರೆಸ್ ರ‍್ನಲ್' ಎಂಬ ಫಲಕ ಕಾಣಿಸಿತು. ಒಳಹೋಗಿ ಸಂಪಾದಕರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡು ಕೆಲಸ ಕೇಳಿದರು. ಲಕ್ಷ್ಮಣ್‌ರವರಿಗೆ ಅವರು ಕೂಡಲೇ ಕೆಲಸ ನೀಡಿ ಒಳಗೆ ಮತ್ತೊಬ್ಬ ವ್ಯಂಗ್ಯಚಿತ್ರಕಾರರ ಪಕ್ಕ ಕೂಡಿಸಿದರು. ಆ ಮತ್ತೊಬ್ಬ ವ್ಯಂಗ್ಯಚಿತ್ರಕಾರರು ಮತ್ತಾರೂ ಅಲ್ಲ, ಶಿವಸೇನೆಯ ಸಂಸ್ಥಾಪಕ ಬಾಳಸಾಹೆಬ್ ಠಾಕ್ರೆ. ಬಾಳ ಠಾಕ್ರೆ ಸಹ ವ್ಯಂಗ್ಯಚಿತ್ರಕಾರರು, ನಂತರ ತಮ್ಮನ್ನು ಸಂಪೂರ್ಣವಾಗಿ ರಾಜಕೀಯಕ್ಕೆ ತೊಡಗಿಸಿಕೊಂಡವರು. ಲಕ್ಷ್ಮಣ್‌ರವರು ಹೇಳಿದಂತೆ ಅವರು ವ್ಯಂಗ್ಯಚಿತ್ರ ಕಲೆಯಲ್ಲಿ ಪ್ರತಿಭಾನ್ವಿತರು, ಆದರೆ ವ್ಯಂಗ್ಯಚಿತ್ರಕಾರರು ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ವಿಚಾರಕ್ಕೆ ಕಟ್ಟುಬಿದ್ದರೆ ಅಂಥವರು ಪ್ರತಿಭೆ ಕಳೆದುಕೊಳ್ಳುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಕೆಲ ಸಮಯದವರೆಗೂ ಲಕ್ಷ್ಮಣ್ ಅಲ್ಲೇ ಕೆಲಸ ಮಾಡಿದರು. ಆದರೆ ಕ್ರಮೇಣ `ದ ಫ್ರೀ ಪ್ರೆಸ್ ರ‍್ನಲ್'ನ ಸಂಪಾದಕರು ಇವರ ಕೆಲಸದ ಮಧ್ಯೆ ಪ್ರವೇಶಿಸಿ ಯಾವುದನ್ನು ಬರೆಯಬೇಕು ಯಾವುದನ್ನು ಬರೆಯಬಾರದು ಎನ್ನುವ ಒತ್ತಡ ತರಲಾರಂಭಿಸಿದಾಗ ಲಕ್ಷ್ಮಣ್ ಅಲ್ಲಿ ಕೆಲಸಬಿಟ್ಟು ಹೊರಟರು. ಅಲ್ಲಿಂದ ಹೊರಟು `ದ ಟೈಮ್ಸ್ ಆಫ್ ಇಂಡಿಯಾ' ಕಚೇರಿಗೆ ಹೊರಟರು. ವಿಕ್ಟೋರಿಯಾ ಟರ್ಮಿನಸ್‌ನ ಎದುರೇ ಇದ್ದ `ದ ಟೈಮ್ಸ್ ಆಫ್ ಇಂಡಿಯಾ' ಕಚೇರಿಗೆ ಹೋಗಿ ಅಲ್ಲಿನ ಕಲಾ ನಿರ್ದೇಶಕ ವಾಲ್ಟರ್ ಲಾಂಗ್ಯಾಮರ್‌ರವರನ್ನು ಭೇಟಿಯಾದರು. ಆತ ಒಬ್ಬ ರ‍್ಮನ್ ಆಗಿದ್ದು ಲಕ್ಷ್ಮಣ್ ತಮ್ಮ ಪರಿಚಯ ಹೇಳಿಕೊಂಡು ವ್ಯಂಗ್ಯಚಿತ್ರಕಾರನ ಕೆಲಸ ಹುಡುಕುತ್ತಿದ್ದೇನೆ ಎಂದ ಕೂಡಲೇ, `ಹೋ ನೀನು ಫ್ರೀ ಪ್ರೆಸ್ ರ‍್ನಲ್‌ನಲ್ಲಿ ವ್ಯಂಗ್ಯಚಿತ್ರ ಬರೆಯುವನಲ್ಲವೇ, ನಿನ್ನಲ್ಲಿ ಅದ್ಭುತ ಪ್ರತಿಭೆಯಿದೆ' ಎಂದು ಅಲ್ಲೇ ಕೂತಿರಲು ಹೇಳಿ ಒಳಹೋಗಿ ಸ್ವಲ್ಪಹೊತ್ತಿನ ನಂತರ ಹೊರಬಂದು ಲಕ್ಷ್ಮಣ್‌ರವರಿಗೆ ನೇಮಕಾತಿ ಆದೇಶ ನೀಡಿದರು. ಅಲ್ಲಿ 1951ರಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಪ್ರಾರಂಭಿಸಿದ ಮೇಲೆ ಐದು ದಶಕಗಳಿಗೂ ಹೆಚ್ಚು ಕಾಲ ಹಿಂತಿರುಗಿ ನೋಡಿದ್ದೇ ಇಲ್ಲ. ಅವರೇ ಹೇಳಿದಂತೆ ಭಾರತೀಯ ಪತ್ರಕರ್ತನೊಬ್ಬನಿಗೆ ಎಲ್ಲೂ ಇಲ್ಲದ ಸ್ವಾತಂತ್ರ್ಯ ಅವರಿಗೆ ಅಲ್ಲಿತ್ತು.

ಆಗಿನ ಸಮಯದಲ್ಲಿ ಭಾರತದಲ್ಲಿ ನವೋತ್ಸಾಹ ಮೂಡಿತ್ತು. ಸ್ವಾತಂತ್ರ್ಯ ದೊರಕಿತ್ತು ಹಾಗೂ ಭಾರತ ಇಬ್ಭಾಗವಾಗಿತ್ತು. ಹೊಸ ರಾಷ್ಟçದ ಹೊಸ ಸಮಸ್ಯೆಗಳು ಹೇರಳವಾಗಿದ್ದವು ಮತ್ತು ಅವರಿಗೆ ಭಾರತದಲ್ಲಿ ಎಲ್ಲಿ ನೋಡಿದರೂ ವ್ಯಂಗ್ಯಚಿತ್ರವಾಗಬಲ್ಲ ವಸ್ತು ವಿಷಯಗಳು ಸಹ ಹೇರಳವಾಗಿದ್ದವು. ನವರಾಷ್ಟç ನಿರ‍್ಮಾಣದ ಗಂಭೀರ ವಿಷಯದ ಮತ್ತೊಂದು ಮಗ್ಗುಲಿಗೆ ಹಲವಾರು ವಿಡಂಬನೆಯ ಆಯಾಮಗಳಿರುತ್ತಿದ್ದವು. ಉದಾಹರಣೆಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆಗಳಲ್ಲಿದ್ದವರು ಇಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಅವರಲ್ಲಿ ಕೆಲವರು ಅಶಿಕ್ಷಿತ ಜನಸಮುದಾಯದ ಶಿಕ್ಷಣಕ್ಕೆಂದು ಮೀಸಲಿಟ್ಟಿದ್ದ ಸರ್ಕಾರದ ಹಣವನ್ನು ಗೋಹತ್ಯೆ ನಿಷೇಧಕ್ಕೆ ಬಳಸಬೇಕೆಂದು ಒತ್ತಾಯ ಮಾಡುತ್ತಿದ್ದರು, ಇನ್ನು ಕೆಲವರು ಸಂಪೂರ್ಣ ಮದ್ಯಪಾನ ನಿಷೇಧ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಇದು ಭಾಗಶಃ ಜಾರಿಗೆ ಬಂದ ಕೂಡಲೇ ಕಳ್ಳಬಟ್ಟಿ ದಂಧೆ, ಅದರ ಮೂಲಕ ಇತರ ಅಪರಾಧಗಳು ಹಾಗೂ ಪೋಲೀಸರಲ್ಲಿನ ಭ್ರಷ್ಟತೆ ಶುರುವಾಗತೊಡಗಿದವು. ಈ ಮದ್ಯಪಾನ ನಿಷೇಧದ ಕಾರ್ಯನೀತಿಯಿಂದಾಗಿ ಕುಡಿಯುವವರ ಸಂಖ್ಯೆ ಹೆಚ್ಚಾಯಿತು ಹಾಗೂ ಸರ್ಕಾರಕ್ಕೆ ಅಬಕಾರಿ ಆದಾಯ ಕುಂಠಿತಗೊಂಡಿತು ಎಂದು ಲಕ್ಷ್ಮಣ್‌ರವರು ತಮ್ಮದೇ ಲೇಖನವೊಂದರಲ್ಲಿ ಹೇಳಿದ್ದಾರೆ. ಇಂತಹ ಪರಿಸರದಲ್ಲಿ ಅವರು ವ್ಯಂಗ್ಯಚಿತ್ರಕಾರರಾಗಿ `ಓವರ್ ಟೈಮ್' ಕೆಲಸ ಮಾಡುತ್ತಿದ್ದರಂತೆ!

ಲಕ್ಷ್ಮಣ್‌ರವರ ಪ್ರಖ್ಯಾತ `ಯು ಸೆಡ್ ಇಟ್'`ಜನಸಾಮಾನ್ಯ'ನಿರುವ ಇಂದಿಗೂ ಪ್ರಸ್ತುತವಾಗುವ ಕೆಲವು ವ್ಯಂಗ್ಯಚಿತ್ರಗಳು

ಸಮಸ್ಯೆಯಿಲ್ಲ ಸರ್. ನೀವು ವಿಶ್ವಸಂಸ್ಥೆಯಲ್ಲಿ ಹೇಳಿರುವುದನ್ನೇ ಫ್ರಾನ್ಸ್ ನಲ್ಲಿ, ಜರ‍್ಮನಿಯಲ್ಲಿ, ಯು.ಎಸ್.ನಲ್ಲಿ, ಯು.ಕೆ.ನಲ್ಲಿ, ಟರ್ಕಿಯಲ್ಲಿ, ವಿಯೆನ್ನಾ ಮುಂತಾದೆಡೆ ಹೇಳಬಹುದು, ಯಾರೂ ಗಮನಿಸುವುದಿಲ್ಲ.

 
 ಕ್ಷಮಿಸಿ, ನಮ್ಮಲ್ಲಿ ಶಾಲೆ, ಆಸ್ಪತ್ರೆ ಮುಂತಾದವುಗಳಿಗೆ ನೀಡಲು ಹಣವಿಲ್ಲ. ಬದಲಿಗೆ ನೀವು ಬಯಸಿದಲ್ಲಿ ನಾವು ಕೆಲವು ರಸ್ತೆಗಳ, ಚೌಕಗಳ, ಕಟ್ಟಡಗಳ ಹೆಸರುಗಳನ್ನು ಬದಲಿಸಿ ಹೊಸ ಹೆಸರುಗಳನ್ನು ಇಡಬಲ್ಲೆವು.


ನೀನು ಕಾಂಗ್ರೆಸ್‌ನಿಂದ ಬಿ.ಜೆ.ಪಿ. ಸೇರಲು ಪಕ್ಷಾಂತರ ಮಾಡುತ್ತಿದ್ದೀಯಾ? ನಾನು ಸಹ ಈಗಷ್ಟೇ ಕಾಂಗ್ರೆಸ್ ಸೇರಲು ಬಿ.ಜೆ.ಪಿ. ಬಿಡುತ್ತಿದ್ದೇನೆ.

 ತಮ್ಮ ರಾಜಕೀಯ ವ್ಯಂಗ್ಯಚಿತ್ರಗಳ ಜೊತೆಗೆ ಅತ್ಯಂತ ಜನಪ್ರಿಯವಾದದ್ದು ಒಂದು ಕಾಲಮ್ಮಿನ ಪಾಕೆಟ್ ವ್ಯಂಗ್ಯಚಿತ್ರ `ಯು ಸೆಡ್ ಇಟ್'. ಅವುಗಳಲ್ಲಿ ಸದಾ ಕಾಣುವ `ಜನಸಾಮಾನ್ಯ' (Common Man). ಈ ಜನಸಾಮಾನ್ಯ ಎಲ್ಲ ಜನ ಸಾಮಾನ್ಯರ ಮನೆಗೆ, ಅಧಿಕಾರಿಗಳ ಮನೆಗೆ, ರಾಜಕಾರಣಿಗಳ ಮನೆಗೆ, ಪ್ರಯೋಗಾಲಯದಲ್ಲಿ, ರಸ್ತೆಯ ಮೇಲೆ ಎಲ್ಲೆಲ್ಲೂ ಕಾಣುತ್ತಿದ್ದ, ಎಲ್ಲರ ಮಾತೂ ಆಲಿಸುತ್ತಿದ್ದ ಆದರೆ ಎಂದು ಆ ವ್ಯಂಗ್ಯಚಿತ್ರ ಸರಣಿಯಲ್ಲಿ ಮಾತನಾಡಿದವನಲ್ಲ, ತನ್ನ ಅಭಿಪ್ರಾಯ ವ್ಯಕ್ತಪಡಿಸಿದವನಲ್ಲ. ಆತನಿಗೆ ಯಾವುದೇ ಗಡಿಯ ನಿರ್ಬಂಧವಿರಲಿಲ್ಲ, ಕಡತಗಳನ್ನು ಹಿಡಿದಿರುತ್ತಿದ್ದ, ಟಿಪ್ಪಣಿ ಮಾಡಿಕೊಳ್ಳುತ್ತಿದ್ದ, ಅಧಿಕಾರಿಗಳ ನಡುವೆ ಇಣುಕಿ ನೋಡುತ್ತಿದ್ದ. ಈ ಜನಸಾಮಾನ್ಯ ದಿನನಿತ್ಯದ ರಾಜಕಾರಣದ ಆಗುಹೋಗುಗಳಿಗೆ ಕಿವಿ ಹಾಗೂ ಕಣ್ಣಾಗಿರುತ್ತಿದ್ದ. ಲಕ್ಷ್ಮಣ್‌ರವರು ಹೇಳಿದ್ದಂತೆ ಭಾರತೀಯರಿಗೆ ರಾಜಕಾರಣವೇ ಉಸಿರಾಗಿದೆ. ಜನ ಬಸ್ ನಿಲ್ದಾಣಗಳಲ್ಲಿ, ಮನೆಗಳಲ್ಲಿ, ಮಾರುಕಟ್ಟೆಗಳಲ್ಲಿ ಎಲ್ಲೆಲ್ಲಿಯೂ ರಾಜಕಾರಣ ಮಾತನಾಡುವವರಾಗಿದ್ದಾರೆ. ಆದರೆ ಲಕ್ಷ್ಮಣ್‌ರವರ ವ್ಯಂಗ್ಯಚಿತ್ರಗಳಲ್ಲಿನ ಈ ಜನಸಾಮಾನ್ಯ ಎಂದೂ ಬಾಯಿ ಬಿಟ್ಟವನಲ್ಲ, ಅದಕ್ಕೂ ಕಾರಣವಿತ್ತು. ಲಕ್ಷ್ಮಣ್‌ರವರ ಪ್ರಕಾರ ಮಾತು ಗಮನಭಂಗ ಮಾಡುವಂಥದು ಹಾಗೂ ಶಕ್ತಿಹೀನಗೊಳಿಸುವಂಥದು: `ಮಾತಿಗಿಂತ ಮೌನ ಹೆಚ್ಚು ಪ್ರಭಾವಶಾಲಿ. ವಾಸ್ತವವೆಂದರೆ ಮೌನವಾಗಿರುವವರೇ ಹೆಚ್ಚು ಶಕ್ತಿಯುತರಾಗಿರುತ್ತಾರೆ' ಎನ್ನುತ್ತಿದ್ದರು. ಇದಕ್ಕೆ ತದ್ವಿರುದ್ಧವಾಗಿ ಆ ಜನಸಾಮಾನ್ಯನ ಹೆಂಡತಿ ಹೆಚ್ಚು ಮಾತನಾಡುವವಳಾಗಿದ್ದಳು- ರಾಜಕಾರಣಿಗಳ ನಡತೆಯನ್ನು, ಭ್ರಷ್ಟ ಅಧಿಕಾರಿಗಳನ್ನು, ಸಮಾಜದ ವ್ಯವಸ್ಥೆಯನ್ನು ನೇರವಾಗಿ ಟೀಕಿಸುವವಳಾಗಿದ್ದಳು. `ಯು ಸೆಡ್ ಇಟ್ ಪಾಕೆಟ್ ಕಾರ್ಟೂನ್' ದೈನಂದಿನ ಸಾಮಾಜಿಕ ಆರ್ಥಿ, ಸಾಮಾಜಿಕ-ರಾಜಕೀಯ ವಿಷಯಗಳನ್ನು ವ್ಯಂಗ್ಯದ ಮೊನಚು ದೃಷ್ಟಿಯಿಂದ ನೋಡುತ್ತಿತ್ತು ಹಾಗೂ ಆಯಾ ಕಾಲದ ಸಂದರ್ಭವನ್ನು ಪ್ರತಿಬಿಂಬಿಸುತ್ತಿತ್ತು. ಪ್ರತಿ ದಿನ ಪತ್ರಿಕೆ ಓದುವವರು ಮೊದಲಿಗೆ ಆ ವ್ಯಂಗ್ಯಚಿತ್ರ ನೋಡಿದ ನಂತರವೇ ಮುಂದಿನ ಸುದ್ದಿ ಓದುವವರಿದ್ದರು.

 
ನಮ್ಮಲ್ಲೊಂದು ಲೋನ್ ಸ್ಕೀಮ್ ಇದೆ, ಅದೂ ಸಹ ಅಷ್ಟೇ ಲಾಭದಾಯಕವೆಂದು ನಾನು ಭರವಸೆ ನೀಡುತ್ತೇನೆ. ನೀನು ಅದನ್ನು ಏಕೆ ಪ್ರಯತ್ನಿಸಬಾರದು?



 

ಮೊರಾರ್ಜಿ ಪ್ರಧಾನಿಯಾಗಿದ್ದಾಗ 1978ರಲ್ಲಿ ರೂ.1000, 5000 ಮತ್ತು 10000 ನೋಟುಗಳ ಅಮಾನ್ಯೀಕರಣ ಮಾಡಿ ಕಪ್ಪುಹಣ ನಿರ್ಮೂಲನ ಮಾಡಿರುವ ಪ್ರಯತ್ನ ಪ್ರಧಾನಿ ಮೋದಿಯವರ ಪ್ರಯತ್ನವನ್ನು ನೆನಪಿಸುತ್ತದೆ.

`ಜನಸಾಮಾನ್ಯ'ನಿಗೆ (Common Man) ತಮ್ಮ ವ್ಯಂಗ್ಯಚಿತ್ರಗಳಲ್ಲಿ ರೂಪವೊಂದನ್ನು ನೀಡುವ ಮೊದಲು ಲಕ್ಷ್ಮಣ್‌ರವರು ಬಹಳಷ್ಟು ಚಿಂತಿಸಿದ್ದಾರೆ. ಭಾರತ ಬಹು ಭಾಷೆಗಳ ಮತ್ತು ಬಹು ಸಂಸ್ಕೃತಿಗಳ ನಾಡು. ಈ ಜನರ ಆಚರಣೆಗಳು, ಧರಿಸುವ ವಸ್ತçಗಳು ಎಲ್ಲವೂ ವಿಭಿನ್ನವಾದವು. ಹಾಗಿರುವಾಗ ಭಾರತದ ಎಲ್ಲ ಭಾಗಗಳ, ಭಾಷೆಗಳ, ಸಂಸ್ಕೃತಿಗಳ ಜನರನ್ನೂ ಪ್ರತಿನಿಧಿಸಬಲ್ಲ ವ್ಯಕ್ತಿ ಅವರ `ಯು ಸೆಡ್ ಇಟ್' ಪಾಕೆಟ್ ಕಾರ‍್ಟೂನ್‌ನಲ್ಲಿನ `ಜನ ಸಾಮಾನ್ಯ'ನಾಗಬೇಕೆಂದು ಆತನಿಗೆ ದಪ್ಪ ಮೀಸೆ, ಬೋಳು ತಲೆ, ಸ್ವಲ್ಪ ಬಿಳಿ ಕೂದಲು, ಬುಶ್ ಕೋಟು ಮತ್ತು ಕಚ್ಚೆ ಪಂಚೆಯ ವಸ್ತç ನೀಡಿದರು. ಲಕ್ಷ್ಮಣ್‌ರವರೇ ಹೇಳಿರುವಂತೆ ನಮ್ಮ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಂದರ್ಭಗಳಿಗೆ ಸೂಕ್ತವಾಗುವಂತೆ ಆತನ ಮುಖದಲ್ಲಿ ಸದಾ ತಬ್ಬಿಬ್ಬುಗೊಂಡಿರುವ ಮುಖಭಾವ ಇರುತ್ತಿತ್ತು.

 ದಿನನಿತ್ಯದ ಬದುಕಿನ ಅಂಶಗಳನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ಚಿತ್ರಿಸುವುದಷ್ಟೇ ಅಲ್ಲ ಅವರು ಬಳಸುತ್ತಿದ್ದ ಪಠ್ಯ ಅಥವಾ ವಾಕ್ಯಗಳು ಆ ವ್ಯಂಗ್ಯಚಿತ್ರಗಳು ತಮ್ಮ ಸಂದೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ಮಾಡುತ್ತಿದ್ದವು. ಕೆಲವೊಮ್ಮೆ ಆ ಪಠ್ಯ ವ್ಯಂಗ್ಯಚಿತ್ರದಲ್ಲಿನ ಪಾತ್ರಗಳ ಮಾತುಗಳಾಗಿದ್ದರೆ ಕೆಲವೊಮ್ಮೆ ಶೀರ್ಷಿಕೆಯಾಗಿರುತ್ತಿತ್ತು. ವ್ಯಂಗ್ಯಚಿತ್ರವೊಂದು ಪರಿಣಾಮಕಾರಿಯಾಗಿರಬೇಕಾದರೆ ಅವೆರಡೂ ಅಷ್ಟೇ ಮುಖ್ಯ ಎನ್ನುವುದು ಅವರಿಗೆ ತಿಳಿದಿತ್ತು. ಅದಕ್ಕೇ ಅವರು `ವ್ಯಂಗ್ಯಚಿತ್ರಕಾರನೊಬ್ಬನಿಗೆ ಚಿತ್ರ ಬರೆಯುವ ಕಲೆಯ ಜೊತೆಗೆ ವ್ಯಂಗ್ಯ ಮನೋಭಾವ ಹಾಗೂ ಸಮಾಜದ, ರಾಜಕಾರಣದ ಆಗುಹೋಗುಗಳು ತಿಳಿದಿರಬೇಕು' ಎಂದು ಹೇಳಿದ್ದುದು. ಸಂಜೆಯ ಹೊತ್ತಿಗೆ ವ್ಯಂಗ್ಯಚಿತ್ರವೊಂದನ್ನು ಸಿದ್ಧಪಡಿಸಲು ಅವರು ಕಚೇರಿಗೆ ಬಂದಾಗಿನಿಂದ ಧ್ಯಾನಾಸಕ್ತರಂತೆ ಆದಿನದ ಪತ್ರಿಕೆಗಳನ್ನು ಓದಿ, ಮನನ ಮಾಡಿ ವ್ಯಂಗ್ಯಚಿತ್ರದ ವಸ್ತುವಿಷಯವನ್ನು ಅರಸುತ್ತಿದ್ದರು.

ಪುಟದ ಮಧ್ಯಭಾಗದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತಿದ್ದ ಲಕ್ಷ್ಮಣ್‌ರವರ ರಾಜಕೀಯ ವ್ಯಂಗ್ಯಚಿತ್ರಗಳು ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಡಳಿತವನ್ನು ನಿಖರವಾಗಿ ತನ್ನ ಮೊನಚು ವ್ಯಂಗ್ಯದಿಂದ ಚಿತ್ರಿಸುತ್ತಿತ್ತು. ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯ ಹೇರಿಕೆಯನ್ನು ತೀವ್ರವಾಗಿ ಟೀಕಿಸಿದಂತೆ ಅವರ ಹತ್ಯೆಯನ್ನು ಅಷ್ಟೇ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದರು. ಮಹಾತ್ಮ ಗಾಂಧಿಯವರನ್ನೊಳಗೊಂಡAತೆ ಜಗತ್ತಿನ ಬಹುಪಾಲು ಎಲ್ಲ ನಾಯಕರೂ ಅವರ ವ್ಯಂಗ್ಯಚಿತ್ರಗಳ ವಸ್ತುವಾಗಿದ್ದರು. ಲಕ್ಷ್ಮಣ್‌ರವರ ವ್ಯಂಗ್ಯಚಿತ್ರಗಳು ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಸಿಟ್ಟಿಗೆಬ್ಬಿಸಿದರೆ ಜನಸಾಮಾನ್ಯ ಓದುಗರ ಹೃದಯ ತಟ್ಟುತ್ತಿದ್ದವು. ಅವರ ವ್ಯಂಗ್ಯಚಿತ್ರಗಳು ದೈತ್ಯ ರಾಜಕಾರಣಿಗಳು ಸಹ ಹುಲುಮಾನವರೆ, ಎಲ್ಲ ದುರ್ಬಲತೆಗಳನ್ನು ಹೊಂದಿದವರು ಎಂಬುದನ್ನು ತೋರಿಸುವಂತೆಯೇ ಅವರು ಮಾಡುತ್ತಿರುವುದು ತಪ್ಪು ಎಂಬುದನ್ನು ವ್ಯಂಗ್ಯವಾಗಿ ತೋರಿಸುತ್ತಿದ್ದವು. ಒಮ್ಮೆ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದಾಗ ಅವರು ಕುದುರೆ ರೇಸುಗಳನ್ನು ನಿಷೇಧಗೊಳಿಸುವ ಚಿಂತನೆ ಮಾಡುತ್ತಿದ್ದಾಗ ಲಕ್ಷಣ್‌ರವರು ಬರೆದ ವ್ಯಂಗ್ಯಚಿತ್ರವೊಂದರಿAದ ಮೊರಾರ್ಜಿಯವರು ಸಿಟ್ಟಿಗೆದ್ದು ವ್ಯಂಗ್ಯಚಿತ್ರಕಾರರ `ಹಾವಳಿ' ತೊಡಗಿಸುವುದು ಹೇಗೆ ಎಂಬುದರ ಕುರಿತು ಚರ್ಚಿಸಲು ಕ್ಯಾಬಿನೆಟ್ ಸಭೆಯೊಂದನ್ನು ಕರೆದಿದ್ದರಂತೆ. 2001ರಲ್ಲಿ ಲಕ್ಷಣ್‌ರವರ ಗುಜರಾತ್ ಭೂಕಂಪವೊಂದರ ವ್ಯಂಗ್ಯಚಿತ್ರದಲ್ಲಿ ಬಿಕ್ಷÄಕನೊಬ್ಬ ಗುಜರಾತ್ ಭೂಕಂಪ ಪರಿಹಾರ ನಿಧಿಗೆ ತನ್ನ ದೇಣಿಗೆ ನೀಡುತ್ತಿರುವ ಚಿತ್ರವೊಂದನ್ನು ನೋಡಿ ಮರುಗಿದ ಸಂಸದ ಕರಣ್ ಸಿಂಗ್‌ರವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದು ಆ ವ್ಯಂಗ್ಯಚಿತ್ರ ಒಂದು `ಮಾಸ್ಟರ್‌ಪೀಸ್' ಆಗಿದೆ, ನಗುವಿನ ಬದಲು ಅದು ನನ್ನಲ್ಲಿ ಕಣ್ಣೀರು ತರಿಸಿತು ಎಂದಿದ್ದರಂತೆ. ಹಿಂದಿನ ರಾಷ್ಟçಪತಿಗಳಾದ ಅಬ್ದುಲ್ ಕಲಾಂರವರು ಸಹ ಲಕ್ಷ್ಮಣ್‌ರವರ ಕಲೆಯ ಅಭಿಮಾನಿಯಾಗಿದ್ದರು. `ಜನ ಸಾಮಾನ್ಯನ ಬದುಕೂ ಸಹ ಶ್ರೀ ಲಕ್ಷ್ಮಣ್‌ರವರ ವಿಡಂಬನೆ ಮತ್ತು ವಿವೇಕದಿಂದ ಜೀವಿಸುವಂತಾಗುತ್ತದೆ. ತಾನು ನಗುವುದು ಮತ್ತು ಇತರರನ್ನು ನಗಿಸುವುದು ಹಾಗೂ ತಾನು ಚಿಂತಿಸುವುದು ಮತ್ತು ಇತರರನ್ನು ಚಿಂತಿಸುವಂತೆ ಮಾಡುವುದು ಎಲ್ಲ ಮಹಾನ್ ವ್ಯಂಗ್ಯಚಿತ್ರಕಾರರ ಕೊಡುಗೆಯಾಗಿದೆ. ಇದರಲ್ಲಿ ಶ್ರೀ ಲಕ್ಷ್ಮಣ್‌ರವರು ಅಸೀಮರು' ಎಂದಿದ್ದಾರೆ ಕಲಾಂರವರು ತಮ್ಮ ಆತ್ಮಕತೆ `ವಿಂಗ್ಸ್ ಆಫ್ ಫೈರ್'ನಲ್ಲಿ ಹಾಗೂ ಅದರಲ್ಲಿ ಲಕ್ಷ್ಮಣ್‌ರವರು ಬರೆದಿರುವ ಅವರ ವ್ಯಂಗ್ಯಭಾವಚಿತ್ರ ಸಹ ಪ್ರಕಟಿಸಿದ್ದಾರೆ. ಆರ್.ಕೆ.ಲಕ್ಷ್ಮಣ್ ಹೇಳಿರುವಂತೆ ಅವರೊಂದಿಗೆ ತಮ್ಮ ವ್ಯಂಗ್ಯಚಿತ್ರದ ಕುರಿತು ಸಿಟ್ಟಿಗಾದವರು ಆಗಿನ ಪ್ರಧಾನ ಮೊರಾರ್ಜಿ ದೇಸಾಯಿ ಮಾತ್ರ, ಇತರರು ತಮ್ಮ ವ್ಯಂಗ್ಯಚಿತ್ರ ಏಕೆ ಬರೆದಿಲ್ಲ ಎಂದು ಕೇಳುತ್ತಿದ್ದರು. ಭಾರತದ ಮೊದಲ ಪ್ರಧಾನಿ ನೆಹರೂರವರು ವ್ಯಂಗ್ಯಚಿತ್ರಕಾರರನ್ನು ಇಷ್ಟಪಡುತ್ತಿದ್ದುದು ಎಲ್ಲರಿಗೂ ತಿಳಿದೇ ಇದೆ (ವ್ಯಂಗ್ಯಚಿತ್ರಕಾರ ಶಂಕರ್‌ಪಿಳ್ಳೆöÊರವರಿಗೆ `ನನ್ನನ್ನೂ ಬಿಡಬೇಡ ಶಂಕರ್' (Don't spare me Shankar) ಎಂದಿದ್ದರು. ಲಕ್ಷ್ಮಣ್‌ರವರು ಅವರನ್ನು ಭೇಟಿಯಾಗಲು ಸಮಯ ಕೇಳಿದಾಗ ಐದು ನಿಮಿಷ ನೀಡಿದ್ದ ನೆಹರೂ ಅವರೊಂದಿಗೆ ಮಾತನಾಡುತ್ತಾ ಅರ್ಧ ಗಂಟೆ ಕಳೆದರಂತೆ. ಕಾಂಗ್ರೆಸ್‌ನ ಆಗಿನ ಅಧ್ಯಕ್ಷರಾಗಿದ್ದ ಡಿ.ಕೆ.ಬರೂವಾರವರು `ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ' ಎಂಬ ಕುಖ್ಯಾತ ಹೇಳಿಕೆ ನೀಡಿದಾಗ ಅವರು `ಜನಸಾಮಾನ್ಯ'ನನ್ನು ಮಗುವಿನಂತೆ `ತುರ್ತುಪರಿಸ್ಥಿತಿ' ಎಂದು ಬರೆದಿರುವ ತಳ್ಳು ಗಾಡಿಯಲ್ಲಿ ಕೂಡ್ರಿಸಿ ಬರೂವಾರವರು ತಳ್ಳುತ್ತಾ, `ಇಲ್ಲ, ಇನ್ನೂ ಇಲ್ಲ. ನಿನ್ನಷ್ಟಕ್ಕೇ ನಿನ್ನನ್ನೇ ಬಿಡುವುದು ಇನ್ನೂ ಅಪಾಯ' ಎಂದು ಹೇಳುತ್ತಿರುವ ವ್ಯಂಗ್ಯಚಿತ್ರ ಬರೆದಾಗ ಇಂದಿರಾ ಗಾಂಧಿಯವರು, `ಅದು ನನ್ನನ್ನು ಅಪಮಾನ ಮಾಡುವಂತಿದೆ' ಎಂದು ದೂರಿದ್ದರು. `ಆದರೆ ವ್ಯಂಗ್ಯಚಿತ್ರವೇ ವ್ಯಂಗ್ಯ ಮತ್ತು ಲೇವಡಿ ಮಾಡುವ ಕಲೆ' ಎಂದು ಲಕ್ಷ್ಮಣ್ ಹೇಳಿದಾಗ, `ಇಲ್ಲ ಮಾಡಕೂಡದು' ಎಂದು ಬೆದರಿಸಿದ್ದರು.

ಸಾಮಾನ್ಯವಾಗಿ ಪತ್ರಿಕೆಗಳ ವ್ಯಂಗ್ಯಚಿತ್ರಕಾರರು ತಮ್ಮ ರಚನೆಗಳಲ್ಲಿ ಆಯಾ ಪತ್ರಿಕೆಯ ಸಂಪಾದಕೀಯ ಕಾರ್ಯನೀತಿಯನ್ನು ಅನುಸರಿಸಬೇಕಾಗುತ್ತದೆ. ಆದರೆ ಲಕ್ಷ್ಮಣ್‌ರವರು ತಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಕೆಲಸಮಾಡಲು ಸಿದ್ಧರಿರಲಿಲ್ಲ ಹಾಗಾಗಿ ಸಂಪಾದಕೀಯ ಕಾರ್ಯನೀತಿಯನ್ನು ತಮ್ಮ ವೃತ್ತಿಯ ಪ್ರಾರಂಭದಲ್ಲಿಯೇ ಅದನ್ನು ಉಲ್ಲಂಘಿಸಿದರು. ಆದರೂ ಸಂಪಾದಕರು ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿಲ್ಲ. ಎಷ್ಟೋ ಸಾರಿ ಪತ್ರಿಕೆಯ ಸಂಪಾದಕೀಯದ ವಿರುದ್ಧ ಚಿತ್ರಣವನ್ನು ಅವರ ವ್ಯಂಗ್ಯಚಿತ್ರಗಳು ನೀಡುತ್ತಿದ್ದವು. ಆದರೆ ಲಕ್ಷ್ಮಣ್‌ರವರು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯ ದಿನಗಳಲ್ಲಿ (1975-77) ತಮ್ಮ ಕಲೆಯ ಮೇಲಿನ ನಿರ್ಬಂಧ ಮತ್ತು ನಿಷೇಧಗಳನ್ನು ಎದುರಿಸಬೇಕಾಯಿತು. ಪತ್ರಕರ್ತರು ಮತ್ತು ರಾಜಕೀಯ ವ್ಯಂಗ್ಯಚಿತ್ರಕಾರರು ತಮ್ಮ ಸ್ವಾತಂತ್ರ್ಯವನ್ನು ರಾತ್ರೋರಾತ್ರಿ ಕಳೆದುಕೊಂಡರು. ಸಂಪಾದಕೀಯದಿಂದ ಹಿಡಿದು ಪ್ರತಿಯೊಂದು ವರದಿ ಹಾಗೂ ವ್ಯಂಗ್ಯಚಿತ್ರಗಳು ಸರ್ಕಾರ ನೇಮಿಸಿದ `ಸೆನ್ಸಾರ್'ನವರು ಅನುಮತಿಸಿದ ನಂತರವೇ ಪ್ರಕಟವಾಗಬೇಕಿತ್ತು. ಈ ಅನುಭವದ ಕುರಿತಂತೆ ಅವರು,

`ನಾನು ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದರೂ ನನ್ನನ್ನು ನವದೆಹಲಿಯ ಕೇಂದ್ರ ಸೆನ್ಸಾರ್ ಮಂಡಳಿಯವರ ಸುಪರ್ದಿಯಡಿ ತಂದರು. ಪ್ರತಿ ದಿನ ನನ್ನ ವ್ಯಂಗ್ಯಚಿತ್ರಗಳನ್ನು ದೆಹಲಿಗೆ ಸೆನ್ಸಾರ್ ಪರಿಶೀಲನೆಗೆ ಕಳುಹಿಸಬೇಕಿತ್ತು. ಆಗ ಎಲ್ಲೆಲ್ಲಿಯೂ ಪತ್ರಕರ್ತರು ಪೋಲಿಸ್ ವಾರಂಟ್‌ಗಳಿಲ್ಲದೆ ಅರೆಸ್ಟಾಗುತ್ತಿರುವ, ಪತ್ರಿಕಾ ಕಚೇರಿಗಳ ಮೇಲೆ ಪೋಲಿಸ್ ದಾಳಿಗಳಾಗುತ್ತಿರುವ ಸುದ್ದಿಗಳೇ ಕೇಳಿಬರುತ್ತಿತ್ತು. ನನ್ನ ಹಲವಾರು ಜನ ಪತ್ರಕರ್ತ ಮಿತ್ರರು ಸೆರೆಮನೆ ಸೇರಿದರು. ನನ್ನಂತಹ ರಾಜಕೀಯ ವ್ಯಂಗ್ಯಚಿತ್ರಕಾರನಿಗೆ ಇದೊಂದು ದುಸ್ವಪ್ನವೇ ಸರಿ. ನಾನು ಯಾವುದೇ ವ್ಯಂಗ್ಯಚಿತ್ರ ರಚಿಸಿದರೂ ಅದರಲ್ಲಿ ಅಧಿಕಾರದಲ್ಲಿರುವ ಯಾರಾದರೊಬ್ಬರು ವಿಡಂಬನೆಗೊಳಗಾಗಿರುತ್ತಿದ್ದರು. ಅಸಹಾಯಕನಾದ ನಾನು ಬೊಜ್ಜು ಹೊಟ್ಟೆಯವರ, ದುಂದುವೆಚ್ಚ ಮಾಡುವ ಪತ್ನಿಯರ, ಪುಕ್ಕಲು ಗಂಡಂದಿರ, ತಂದೆತಾಯಿಗಳನ್ನು ಕಾಡುವ ತರಲೆ ಮಕ್ಕಳಂತಹ ವಿಷಯಗಳನ್ನೊಳಗೊಂಡ `ಸಿಲ್ಲಿ ಜೋಕ್'ಗಳ ವ್ಯಂಗ್ಯಚಿತ್ರಗಳನ್ನು ರಚಿಸತೊಡಗಿದೆ. ಅಂತಹ ತಿಳಿಗೇಡಿ ವಿಚಾರಗಳನ್ನು ವ್ಯಂಗ್ಯಚಿತ್ರಗಳಿಗಾಗಿ ಚಿಂತಿಸುವುದು ಎಷ್ಟು ಕಷ್ಟಕರವೆಂಬುದು ನನಗೆ ಆಗಲೇ ತಿಳಿದದ್ದು. ಈ ವ್ಯಂಗ್ಯಚಿತ್ರಗಳು ಯಾವುದೇ ತಡೆಯಿಲ್ಲದೇ ಸೆನ್ಸಾರ್ ಮಂಡಳಿಯಿಂದ ಅನುಮೋದನೆ ಪಡೆದು ಬರುತ್ತಿದ್ದವು. ಅವುಗಳಲ್ಲಿಯೂ ಸಹ ಕೆಲವು ನಿಷೇಧವಾಗುತ್ತಿದ್ದವು! ನನಗೆ ಗಾಭರಿಯಾಯಿತು. ನಾನು ಪ್ರಧಾನ ಮಂತ್ರಿಯವರನ್ನೇ ವೈಯಕ್ತಿಕವಾಗಿ ಭೇಟಿಯಾಗಲು ಅನುಮತಿ ಕೇಳಿ ಈ ಸೆನ್ಸಾರ್‌ಶಿಪ್ ಹೇಗೆ ವಿಚಾರಹೀನವಾಗಿದೆಯೆಂದು ಹಾಗೂ ಇಂತಹ ಕಟ್ಟುನಿಟ್ಟಿನ ವಾತಾವರಣದಲ್ಲಿ ನನ್ನಂತಹ ವ್ಯಂಗ್ಯಚಿತ್ರಕಾರ ಬದುಕುಳಿಯುವುದೇ ಕಷ್ಟವಾಗಿದೆಯೆಂದು ಬರೆದು ನನ್ನ ವೃತ್ತಿಯೆಡೆಗೆ ಇನ್ನೂ ಉದಾರ ಭಾವ ತೋರಬೇಕೆಂದು ಕೋರಿದೆ. ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ವ್ಯಂಗ್ಯಚಿತ್ರಗಳ ಬಗೆಗೆ ಉದಾರತೆಯನ್ನು ತೋರುವುದಾಗಿ ತಿಳಿಸಿದರು, ಅಷ್ಟೇ ಅಲ್ಲದೆ ಪ್ರಜಾಪ್ರಭುತ್ವದಲ್ಲಿ ವ್ಯಂಗ್ಯಚಿತ್ರಗಳ ಮಹತ್ತರ ಪಾತ್ರವಿದೆಯೆಂದೂ ತಿಳಿಸಿದರು ಹಾಗೂ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದೂ ಸಹ ತಿಳಿಸಿದರು. ಅಂದಿನಿಂದ ನನ್ನ ವ್ಯಂಗ್ಯಚಿತ್ರಗಳು ಪುನಃ ಪತ್ರಿಕೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆವು ಆದರೂ ಅವು ವಿಡಂಬನೆಯಲ್ಲಿ ಸತ್ವಹೀನವಾಗಿದ್ದವು. ನಾನೂ ಸಹ ಸೆನ್ಸಾರ್‌ನವರ ತಾಳ್ಮೆಯನ್ನು ಪರೀಕ್ಷಿಸಬಾರದೆಂದು ಅತಿಎಚ್ಚರಿಕೆ ವಹಿಸಿದೆ.'



 ತುರ್ತುಪರಿಸ್ಥಿತಿಯಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಕೆಂಗಣ್ಣಿಗೆ ಗುರಿಯಾದ ವ್ಯಂಗ್ಯಚಿತ್ರ.

ಆದರೂ ಒಂದು ದಿನ ಪತ್ರಿಕಾ ಸೆನ್ಸಾರ್ ಉಸ್ತುವಾರಿಯ ಸಚಿವರಾದ ವಿ.ಸಿ.ಶುಕ್ಲಾರವರಿಂದ ಅವರಿಗೆ ಕರೆ ಬಂದಿತು. ಲಕ್ಷ್ಮಣ್ ಅವರೆದುರು ಹೋಗಿ ನಿಂತಾಗ ಅವರು ಧಮಕಿ ಹಾಕಿದರು, ಇದೇ ರೀತಿ ಸರ್ಕಾರದ ವಿರುದ್ಧ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರೆ ಅರೆಸ್ಟು ಮಾಡಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿದರು. ಲಕ್ಷ್ಮಣ್ ತಾವು ಪ್ರಧಾನಮಂತ್ರಿಗಳನ್ನೇ ಭೇಟಿಮಾಡಿದ್ದು ಅವರೇ ಸ್ವತಃ ನಾನು ಎಂದಿನಂತೆ ಕೆಲಸಮಾಡಬಹುದಾಗಿ ತಿಳಿಸಿದ್ದಾರೆ ಎಂದು ಹೇಳಿದೆ. ಅದರಿಂದ ಇನ್ನೂ ಕೆರಳಿದ ಆ ಸಚಿವರು ಮತ್ತಷ್ಟು ಧಮಕಿ ಹಾಕಿ, ಪ್ರಧಾನಿಯೇ ಹೇಳಿರಲಿ ಅಥವಾ ಯಾರೇ ಹೇಳಿರಲಿ ಸೆನ್ಸಾರ್ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆಯೆಂದು ಹೇಳಿ ಬೆದರಿಸಿ ಕಳುಹಿಸಿದರು. ವ್ಯಂಗ್ಯಚಿತ್ರಕಾರರಾಗಿ ಇಂಥ ಸ್ಥಿತಿಯಲ್ಲಿ ಕೆಲಸಮಾಡುವುದು ಸಾಧ್ಯವೇ ಇಲ್ಲ, ಹೇಗಿದ್ದರೂ ಮುವ್ವತ್ತು ವರ್ಷಗಳು ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಸೇವೆಸಲ್ಲಿಸಿದ್ದು ಸಾಕು, ಇನ್ನು ದೇಶ ಹಿಂದಿನ ಸಾಮಾನ್ಯ ಸ್ಥಿತಿಗೆ ಹಿಂತಿರುಗುವುದೇ ಇಲ್ಲವೇನೋ ಎಂಬ ಹತಾಶೆಗೆ ಒಳಗಾಗಿ ನಿವೃತ್ತಿ ಪಡೆಯೋಣವೇ ಎಂದು ಸಹ ಯೋಚಿಸಿದ್ದರು. ಆಗ ಮಾರಿಷಸ್‌ಗೆ ಪ್ರವಾಸ ಹೊರಟು ಹೋದರು. ಶ್ರೀಮತಿ ಗಾಂಧಿ ಕೊನೆಗೂ 1977ರಲ್ಲಿ ಚುನಾವಣೆ ಘೋಷಿಸಿದರು ಹಾಗೂ ಎಲ್ಲರೂ ಊಹಿಸಿದ್ದಂತೆ ಆಕೆಯ ಪಕ್ಷ ಚುನಾವಣೆಯಲ್ಲಿ ಸೋತಿತು. ಲಕ್ಷ್ಮಣ್ ಎಂದಿನಂತೆ ಸಂತೋಷದಿಂದ ತಮ್ಮ ವ್ಯಂಗ್ಯಚಿತ್ರ ರಚನೆ ಮುಂದುವರಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹೊಸ ಸಮ್ಮಿಶ್ರ ಸರ್ಕಾರ ಅವರಿಗೆ ಮತ್ತಷ್ಟು ವ್ಯಂಗ್ಯಚಿತ್ರ ರಚನೆಗೆ ವಸ್ತು, ವಿಚಾರಗಳನ್ನು ನೀಡಿತು. ಅಷ್ಟೇ ಅಲ್ಲ ಲಕ್ಷ್ಮಣ್‌ರವರೇ ಹೇಳಿರುವಂತೆ ಆ ಸರ್ಕಾರದ ಚುಕ್ಕಾಣಿ ಹಿಡಿದವರು ತಮ್ಮ ನಡತೆಯಿಂದ ತಾವೇ ವ್ಯಂಗ್ಯಚಿತ್ರದ ಪಾತ್ರಗಳಂತೆ ನಟಿಸತೊಡಗಿದರು. ಎರಡೇ ವರ್ಷಗಳಲ್ಲಿ ಆ ಸರ್ಕಾರ ಬಿದ್ದು ಪುನಃ ಇಂದಿರಾ ಗಾಂಧಿ ಪುನಃ ಅಧಿಕಾರಕ್ಕೆ ಬಂದರು.

ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವನ್ನು ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ʻಗುಡಿಸಿ ಗುಂಡಾಂತರʼ ಮಾಡಿರುವುದು.

ಆ ರೀತಿ ವ್ಯಂಗ್ಯಚಿತ್ರಗಳನ್ನು ಮತ್ತು ವ್ಯಂಗ್ಯಚಿತ್ರಕಾರರನ್ನು ಸೆನ್ಸಾರ್ ಮಾಡಿ ನಿರ್ಬಧಿಸುತ್ತಿದ್ದ ಅಧಿಕಾರಿಗಳ ಮನಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಪತ್ರಿಕಾ ವರದಿಗಳ ಕುರಿತು ಕಣ್ಗಾವಲಿಟ್ಟಿದ್ದ ಅಧಿಕಾರಿಯೊಬ್ಬರು ಲಕ್ಷ್ಮಣ್‌ರವರಿಗೆ ಈ ರೀತಿ ತಿಳಿಸಿದರಂತೆ: `ಈ ರೀತಿಯ ಸೆನ್ಸಾರ್ ಮಾಡಲು ಗುಮಾಸ್ತ ಸಿಬ್ಬಂದಿಯಲ್ಲಿ ಕೆಲವರನ್ನು ಆಯ್ಕೆ ಮಾಡುತ್ತಿದ್ದರು. ಅವರು ವ್ಯಂಗ್ಯಚಿತ್ರವೊಂದನ್ನು ಪರಿಶೀಲಿಸಬೇಕಾಗಿ ಬಂದಾಗ ಆ ವ್ಯಂಗ್ಯಚಿತ್ರ ಅವರಲ್ಲಿ ನಗು ತರಿಸಿದರೆ ತಕ್ಷಣ ಅದನ್ನು ತಿರಸ್ಕೃತ ಎಂಬ ಸೀಲ್ ಹಾಕುತ್ತಿದ್ದರು, ಏಕೆಂದರೆ ಜನರಲ್ಲಿ ನಗು ತರಿಸುತ್ತದೆ ಎಂದರೆ ಜನರು ಸರ್ಕಾರದ ಬಗ್ಗೆ ನಗುತ್ತಾರೆ ಹಾಗಾಗಿ ಅದನ್ನು ತಿರಸ್ಕರಿಸುತ್ತಿದ್ದರು. ವ್ಯಂಗ್ಯಚಿತ್ರವೇನಾದರೂ ಕೊಂಚ ಸಂಕೀರ್ಣವಾಗಿದ್ದು ಅದು ಅವರಿಗೆ ತಿಳಿಯದಿದ್ದರೂ ಅದಕ್ಕೆ ತಿರಸ್ಕೃತ ಸೀಲ್ ಹಾಕುತ್ತಿದ್ದರು, ಏಕೆಂದರೆ ಅವರಿಗೆ ಅದು ನಗು ತರಿಸುತ್ತಿಲ್ಲ ಎಂದಾದಲ್ಲಿ ಅದರಲ್ಲಿ ಏನೋ ಸರ್ಕಾರವನ್ನು ಟೀಕಿಸುವ ಗೂಢಾರ್ಥವಿದೆ ಹಾಗಾಗಿ ಅದು ಜನರನ್ನು ತಲುಪಬಾರದು ಎಂದು ತಿರಸ್ಕರಿಸುತ್ತಿದ್ದರು.'

`ನಿಮಗೆ ವ್ಯಂಗ್ಯಚಿತ್ರಗಳಿಗೆ ಅತ್ಯುತ್ತಮ ವಸ್ತುವಾಗಬಲ್ಲ ವಿಚಾರಗಳನ್ನು ಒದಗಿಸುತ್ತಿದ್ದ ರಾಜಕಾರಣಿ ಯಾರು?' ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ `ಪ್ರಧಾನಿಯಾಗಿದ್ದ ದೇವೇಗೌಡ' ಎಂದು ಹೇಳಿ, `ಅವರು ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ನಿದ್ರೆ ಮಾಡುತ್ತಿದ್ದುದು ನನಗೆ ವ್ಯಂಗ್ಯಚಿತ್ರ ರಚನೆಗೆ ಬಹಳಷ್ಟು ಅವಕಾಶಗಳನ್ನು ಒದಗಿಸುತ್ತಿತ್ತು. ಒಮ್ಮೆ ನನ್ನನ್ನು ಭೇಟಿಯಾಗಲು ಆಹ್ವಾನಿಸಿದ ಅವರು ಆಗಲೂ ನಿದ್ರೆ ಮಾಡಿದರು' ಎಂದು ಹೇಳಿದ್ದರು ಲಕ್ಷ್ಮಣ್.

ಯಾರು ಭಾರತದ ಅತ್ಯುತ್ತಮ ವ್ಯಂಗ್ಯಚಿತ್ರಕಾರರೆಂದು ಅವರನ್ನು ಕೇಳಿದಾಗ `ನಾನೇ' ಎನ್ನುತ್ತಿದ್ದರು ಹಾಗೂ `ಎಲ್ಲ ವ್ಯಂಗ್ಯಚಿತ್ರಕಾರರೂ ತಾವೇ ಅತ್ಯುತ್ತಮ ವ್ಯಂಗ್ಯಚಿತ್ರಕಾರರೆಂದುಕೊಳ್ಳುತ್ತಾರೆ' ಎಂದೂ ಸಹ ಸೇರಿಸುತ್ತಿದ್ದರು.


 

ಅವರು ಬಾಲ್ಯದಿಂದಲೂ ಕಾಗೆಯ ಚಿತ್ರಗಳನ್ನು ಬರೆಯುವುದು ಅವರಿಗೆ ಬಹಳ ಇಷ್ಟವಾದ ಕೆಲಸ. ಅವರು ಅವುಗಳ ನೂರಾರು ಕಾಗೆಯ ಚಿತ್ರಗಳನ್ನು ರಚಿಸಿದ್ದಾರೆ. ಅವರ ಚಿತ್ರಗಳು ವಿಶ್ವದಾದ್ಯಂತ ಸಂಗ್ರಹಕಾರರಲ್ಲಿ ಇವೆ. ಅವುಗಳ ಬಣ್ಣ, ಅವುಗಳ ಬುದ್ಧಿವಂತಿಕೆ ಅವರನ್ನು ಆಕರ್ಷಿಸಿತ್ತು. ಅವರು ಮೂರು ವರ್ಷ ವಯಸ್ಸಿನಲ್ಲಿಯೇ ಕಾಗೆಗಳ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದಾಗ ಅದನ್ನು ಗಮನಿಸಿದ ಅವರ ತಾಯಿ ಅದನ್ನು ನೋಡಿ ಪ್ರೋತ್ಸಾಹಿಸಿ, `ಅದು ಶನಿದೇವರ ವಾಹನ, ಆತ ಮಹಾನ್ ಶಕ್ತಿಶಾಲಿ ದೇವರು. ನೀವು ಕಾಗೆಯ ಚಿತ್ರ ಬರೆದರೆ ಆತ ನಿನಗೆ ಒಳ್ಳೆಯದು ಮಾಡುತ್ತಾನೆ' ಎಂದು ಹೇಳಿದ್ದರಂತೆ. ಬಾಲ್ಯದಲ್ಲಿನ ಕಾಗೆಯ ಬಗೆಗಿನ ಅವರ ವ್ಯಾಮೋಹ ಕೊನೆಯವರೆಗೂ ಅವರಲ್ಲಿ ಉಳಿದಿತ್ತು.

ಏಷಿಯನ್ ಪೇಂಟ್ಸ್ ಲಾಂಛನವಾಗಿ ಅವರು ಬರೆದ ಬ್ರಷ್ ಹಿಡಿದ ಬಾಲಕ `ಗಟ್ಟು'ವಿನ ಚಿತ್ರ ಐದು ದಶಕಗಳ ಕಾಲ ಬಳಕೆಯಲ್ಲಿತ್ತು. ಲಕ್ಷ್ಮಣ್‌ರವರ ಪತ್ನಿ ಕಮಲಾರವರು ಬರೆದ ಮಕ್ಕಳ ಕತೆಗಳ ಪುಸ್ತಕಗಳಿಗೂ ಚಿತ್ರಗಳನ್ನು ರಚಿಸಿದ್ದಾರೆ.

ಲಕ್ಷ್ಮಣ್‌ರವರ ಆರು ದಶಕಗಳ ವ್ಯಂಗ್ಯಚಿತ್ರ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಧರ್ಮಾಧಾರಿತ, ಲಿಂಗಾಧಾರಿತ ಮತ್ತು ಜಾತಿಯಾಧಾರಿತ ವ್ಯಂಗ್ಯಚಿತ್ರಗಳÀ ನಿರೂಪಣೆಯಿಂದ ವಿವಾದಕ್ಕೊಳಗಾಗಿದ್ದಾರೆ. ಆ ಕುರಿತು ಅವರೇ ಹೇಳಿರುವಂತೆ, `ನಾನೆಷ್ಟೇ ಎಚ್ಚರಿಕೆಯಿಂದಿದ್ದರೂ ನನ್ನನ್ನು ಧಾರ್ಮಿಕ ಶ್ರದ್ಧೆಯುಳ್ಳವರ ಮನನೋಯಿಸಿದ ಅಪರಾಧಿಯನ್ನಾಗಿಸಿದ್ದಾರೆ. ಇದು ನಾನು ಬೇಕೆಂದೇ ಮಾಡಿರುವುದಲ್ಲ. ಒಂದಲ್ಲ ಒಂದು ಸಾರಿ ಕ್ರೆöÊಸ್ತರು, ಮುಸಲ್ಮಾನರು, ಬೌದ್ಧರು, ಸಿಖ್ಖರು ಹಾಗೂ ಇತರ ಹಲವಾರು ಧರ್ಮಗಳ ಜನ ನನಗೆ ಪೋನ್ ಮೂಲಕ, ಪತ್ರಗಳ ಮೂಲಕ, ವೈಯಕ್ತಿಕವಾಗಿ ಭೇಟಿ ನೀಡಿ ನನಗೆ ಬೆದರಿಕೆ ಹಾಕಿದ್ದಾರೆ, ಎಚ್ಚರಿಕೆ ನೀಡಿದ್ದಾರೆ ಹಾಗೂ ನನ್ನ ವ್ಯಂಗ್ಯಚಿತ್ರಗಳು ಅವರ ಮನಸ್ಸನ್ನು ನೋಯಿಸಿದೆಯೆಂದೂ ಹಾಗೂ ಅವರ ಧರ್ಮವನ್ನು ತೀವ್ರ ಅಪಾಯಕ್ಕೊಡ್ಡಿದೆಯೆಂದು ಹೇಳಿದ್ದಾರೆ. ಆದರೆ ನನ್ನ ಅರವತ್ತು ವರ್ಷಗಳ ವೃತ್ತಿಯಲ್ಲಿ ಬೆರಳೆಣಿಕೆಯಷ್ಟು ಸಮಯ ಹೀಗೆ ನನಗರಿವಿಲ್ಲದೆ ನಡೆದಿದೆ ಹಾಗೂ ಅವು ಅಷ್ಟೊಂದು ಅಪಾಯಕಾರಿಯಲ್ಲವೆಂದು ನಾನು ಭಾವಿಸಿದ್ದೇನೆ'. ಹುಡುಗನೊಬ್ಬ ಮುಷ್ಕರದಲ್ಲಿ ಮೋಟಾರ್‌ಸೈಕಲ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ವ್ಯಂಗ್ಯಚಿತ್ರ ರಚಿಸಿದ್ದಕ್ಕಾಗಿ ಅವರನ್ನು ಅರೆಸ್ಟು ಮಾಡಿ ನಾಶಿಕ್ ಠಾಣೆಗೆ ಪೋಲೀಸರು ಕರೆದೊಯ್ದರು. ಆ ವ್ಯಂಗ್ಯಚಿತ್ರದಲ್ಲಿ ಎಲ್ಲರೂ ಬಸ್ಸು, ಟ್ರೆöÊನ್‌ಗಳಿಗೆ ಬೆಂಕಿ ಹಚ್ಚುತ್ತಿದ್ದರೆ ಆ ಹುಡುಗ ಮೋಟಾರ್‌ಸೈಕಲ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾನೆ ಹಾಗೂ ಅಲ್ಲಿರುವ ಯಾರೋ ಒಬ್ಬರು, `ಎಂಥಾ ರಾಮ ಭಕ್ತನಯ್ಯಾ ನೀನು, ನಿನ್ನಿಂದ ಮೋಟಾರ್‌ಸೈಕಲ್‌ಗೆ ಸಹ ಬೆಂಕಿ ಹಚ್ಚಲಾಗುತ್ತಿಲ್ಲ!' ಎಂದು ಕೂಗುತ್ತಿದ್ದಾನೆ. ಯಾರೋ ನಾಶಿಕ್‌ನಲ್ಲಿ ಲಕ್ಷ್ಮಣ್ ಹಿಂದೂಧರ್ಮಕ್ಕೆ ಅವಮಾನ ಮಾಡಿದ್ದಾರೆಂದು ಕೇಸು ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಹಿಯರಿಂಗ್ ಸಮಯದಲ್ಲಿಯೂ ಬಹಳಷ್ಟು ಜನ ಬಂದು ಇವರ ಹಸ್ತಾಕ್ಷರ ಪಡೆಯುತ್ತಿದ್ದರಂತೆ. ಇವರ ವಿರುದ್ಧ ವಾದ ಮಾಡುತ್ತಿದ್ದ ಮಹಿಳೆಯೊಬ್ಬಳೂ ಸಹ ಬಿಡುವಿನ ಸಮಯದಲ್ಲಿ ಬಂದು ಇವರ ಹಸ್ತಾಕ್ಷರ ಪಡೆದಳಂತೆ! 


 

ಭಗವಂತನ ಪ್ರಾರ್ಥನೆ: `ದೇಶದಲ್ಲಿ ಕೋಮು ಸೌಹರ್ದತೆ ಕಾಪಾಡಲು ಬಿ.ಜೆ.ಪಿ.ಯ ಎಲ್.ಕೆ.ಅದ್ವಾನಿಯವರಿಗೆ ಪ್ರಾರ್ಥನೆ ಮಾಡೋಣ'.

ಎಲ್ಲ ವ್ಯಂಗ್ಯಚಿತ್ರಕಾರರಂತೆ ಲಕ್ಷ್ಮಣ್‌ರವರೂ ಸಹ ಹಿಂದೂ ದೇವರುಗಳನ್ನು ತಮ್ಮ ವ್ಯಂಗ್ಯಚಿತ್ರಗಳ ವಸ್ತು ವಿಷಯವನ್ನಾಗಿಸಿದ್ದಾರೆ. ವ್ಯಂಗ್ಯಚಿತ್ರವೊಂದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಕೂತಿದ್ದು `ಬಿ.ಜೆ.ಪಿ. ಮ್ಯಾನಿಫೆಸ್ಟೊ- ಮಂದಿರ ನಿರ್ಮಾಣವಾಗಲೇಬೇಕು' ಎಂಬ ಸುದ್ದಿಯಿರುವ ಪತ್ರಿಕೆ ಓದುತ್ತಿರುವ ರಾಮ ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಬಿ.ಜೆ.ಪಿ.ಯ ಎಲ್.ಕೆ.ಅದ್ವಾನಿಯವರಿಗೆ ಪ್ರಾರ್ಥನೆ ಮಾಡೋಣವೇ ಎಂದು ಹೇಳುತ್ತಿದ್ದಾರೆ.

ವ್ಯಂಗ್ಯಚಿತ್ರ ರಚನೆ ಒಂದು ಸಾರ್ವಜನಿಕ ಹಾಗೂ ಸಾಮಾಜಿಕ ಜವಾಬ್ದಾರಿ ಎಂಬುದರ ಅರಿವು ಅವರಿಗಿತ್ತು. ಆದರೂ ಭಾರತದಂತಹ ಬಹುಧರ್ಮಗಳ, ಸಂಸ್ಕೃತಿಗಳ, ಭಾಷೆಗಳ ನಡುವೆ ಸಮಾಜವನ್ನು, ರಾಜಕಾರಣವನ್ನು ಅದರ ಹುಳುಕುಗಳ ಕುರಿತು ಲೇವಡಿ, ವ್ಯಂಗ್ಯ ಮಾಡುವಾಗ ವ್ಯಂಗ್ಯಚಿತ್ರಕಾರ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಈಗ ನಮಗೆ ತಿಳಿದಿರುವಂತೆ ಅಂತಹ ವ್ಯಂಗ್ಯಚಿತ್ರಗಳನ್ನು ರಾಜಕಾರಣದ ಕಾರಣಗಳಿಗಾಗಿ ಪ್ರತಿಭಟಿಸುವವರು ಹೆಚ್ಚಾಗಿದ್ದಾರೆ. ಅಂಥವರು ಆಗಲೂ ಇದ್ದರು, ಈಗಲೂ ಇದ್ದಾರೆ.

ಆರ್.ಕೆ.ಲಕ್ಷ್ಮಣ್‌ರವರು ವ್ಯಂಗ್ಯಚಿತ್ರಗಳಷ್ಟೇ ಅಲ್ಲ, ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ- `ದ ಹೋಟೆಲ್ ರಿವೇರಾ', `ದ ಮೆಸೆಂಜರ್' ಎನ್ನುವ ಕಾದಂಬರಿಗಳು, `ದ ಡಿಸ್ಟಾರ್ಟೆಡ್ ಮಿರರ್ - ಸ್ಟೋರೀಸ್, ಟ್ರಾವೆಲಾಗ್ಸ್, ಸ್ಕೆಚಸ್' ಎನ್ನುವ ಪ್ರಬಂಧ ಸಂಕಲನ ಹಾಗೂ `ದ ಟನೆಲ್ ಆಫ್ ಟೈಮ್' ಎನ್ನುವ ಆತ್ಮಕತೆ. ಲಕ್ಷ್ಮಣ್‌ರವರ ವ್ಯಂಗ್ಯಚಿತ್ರ ಕ್ಷೇತ್ರದ ಅಸೀಮ ಸಾಧನೆಗಾಗಿ ಪದ್ಮವಿಭೂಷಣ (1973), ಪದ್ಮಭೂಷಣ (2005), ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಶೀಲ ಸಂವಹನಾ ಕಲೆಗಳಿಗಾಗಿ ರಾಮೊನ್ ಮೆಗ್ಸೇಸೆ ಪ್ರಶಸ್ತಿ (1984), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983), ಪತ್ರಿಕೋದ್ಯಮದ ಜೀವನಾರಭ್ಯ ಸಾಧನೆಗಾಗಿ ಸಿ.ಎನ್.ಎನ್. ಐಬಿ.ಎನ್. ಟಿ.ವಿ.18 ಪ್ರಶಸ್ತಿ (2008), ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (2004) ಮುಂತಾದವು ಲಭಿಸಿವೆ. ಪುಣೆಯ ಸಿಂಬಯಾಸಿಸ್ ಅಂತರರಾಷ್ಟಿçÃಯ ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠವೊಂದನ್ನು ಸ್ಥಾಪಿಸಲಾಗಿದೆ.

ಆರ್.ಕೆ.ಲಕ್ಷ್ಮಣ್‌ರವರು 26ನೇ ಜನವರಿ 2015ರಂದು ಈ ಲೋಕದಿಂದ ಇಲ್ಲವಾದರು. ಆದರೆ ರಾಜಕಾರಣಿಗಳು ಎಲ್ಲ ಕಾಲ ಸಂದರ್ಭಗಳಲ್ಲಿಯೂ ತಮ್ಮ ಅಧಿಕಾರ ಲಾಲಸೆ, ಭ್ರಷ್ಟತೆಗಳನ್ನು ಹಾಗೇ ಉಳಿಸಿಕೊಂಡಿರುವ, ಅವರ ಅಧಿಕಾರ, ಸ್ವಾರ್ಥಗಳಡಿ ನಲುಗುತ್ತಿರುವ ಜನಸಾಮಾನ್ಯರ ನೋವು ಸಮಸ್ಯೆಗಳನ್ನು ಬಿಂಬಿಸಿದ ಎಲ್ಲಕಾಲಕ್ಕೂ ಸಲ್ಲುವ ಅವರ ವ್ಯಂಗ್ಯಚಿತ್ರಗಳು ಇಂದಿಗೂ ಆಗಾಗ ಪ್ರಕಟವಾಗಿ ಅವರ ನೆನಪು ಸದಾ ಉಳಿಯುವಂತೆ ಮಾಡುತ್ತಿವೆ.

j.balakrishna@gmail.com