ಭಾನುವಾರ, ಅಕ್ಟೋಬರ್ 10, 2021

ನೋಬೆಲ್ ಪ್ರಶಸ್ತಿ ವಿಜೇತ ಅಬ್ದುಲ್‌ರಜಾಕ್ ಗುರ್ನಾರವರ Cages ಕತೆಯ ಅನುವಾದ- ಪಂಜರಗಳು



 ಈ ದಿನದ ( 10-10-21) ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ನನ್ನ ಅನುವಾದದ ಕತೆ. 2021ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಅಬ್ದುಲ್‌ರಜಾಕ್ ಗುರ್ನಾರವರ 1992ರ `ಕೇಜಸ್' (Cages) ಕತೆಯ ಅನುವಾದ
ಪಂಜರಗಳು
ಮೂಲ: ಅಬ್ದುಲ್‌ರಜಾಕ್ ಗುರ್ನಾ
ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ



ಹಮೀದನಿಗೆ ಬಹಳಷ್ಟು ಸಾರಿ ಅನ್ನಿಸುತ್ತಿತ್ತು ಅವನು ಆ ಅಂಗಡಿಯಲ್ಲಿ ತನ್ನ ಬದುಕಿನ ಪ್ರಾರಂಭದಿAದಲೂ ಇದ್ದಾನೆ ಹಾಗೂ ಅವನ ಬದುಕು ಅಲ್ಲಿಯೇ ಕೊನೆಗೊಳ್ಳುವುದು ಎಂದು. ಅವನಿಗೆ ಈಗೀಗ ಏನೂ ತೊಂದರೆ ಅನ್ನಿಸುತ್ತಿಲ್ಲ ಅಥವಾ ತೀರಾ ತಡವಾಗಿರುವಾಗ ಕಗ್ಗತ್ತಲ ರಾತ್ರಿಗಳಲ್ಲಿ ಕೇಳಿಬರುತ್ತಿದ್ದ ಹಾಗೂ ಅವನನ್ನು ತೀರಾ ಹೆದರಿಸುತ್ತಿದ್ದ ರಹಸ್ಯ ಗೊಣಗಾಟಗಳೂ ಈಗ ಏನೂ ಅನ್ನಿಸುವುದಿಲ್ಲ. ಅವನಿಗೆ ತಿಳಿದಿತ್ತು ಆ ಶಬ್ದಗಳು ಕೇಳಿಬರುವುದು ಈ ಪಟ್ಟಣ ಮತ್ತು ಆ ಭಾಗದ ನಗರವನ್ನು ಪ್ರತ್ಯೇಕಿಸುವ ಜೌಗು ನಾಲೆಯಿಂದ ಎಂದು. ಆ ಬದಿಯ ನಗರ ಸದಾ ಗಿಜಿಗಿಜಿಗುಟ್ಟುವ ಜೀವಂತ ನಗರವೆನ್ನಿಸುತ್ತಿತ್ತು ಹಮೀದನಿಗೆ. ಇವನ ಅಂಗಡಿ ನಗರದ ಹೊರವಲಯದಲ್ಲಿನ ಪ್ರಮುಖ ಕೂಡುರಸ್ತೆಗಳ ಬಳಿ ಒಳ್ಳೆಯ ಸ್ಥಳದಲ್ಲೇ ಇತ್ತು. ಸೂರ್ಯ ಹುಟ್ಟುವ ಮೊದಲೇ ನಸುಕಿನಲ್ಲಿ ಬೇಗ ಹೊರಡುವ ಕೆಲಸಗಾರರು ಮನೆ ಬಿಡುವ ಹೊತ್ತಿಗೇ ಅಂಗಡಿ ತೆರೆಯುತ್ತಿದ್ದ ಹಾಗೂ ರಾತ್ರಿ ತಡವಾಗಿ ಮನೆ ತಲುಪುವ ಕೆಲಸಗಾರರು ಹಾದುಹೋಗುವವರೆಗೂ ತೆರೆದಿರುತ್ತಿದ್ದ. ಅವನ ಅಂಗಡಿಯ ಮುಂದೆಯೇ ಎಲ್ಲ ಬದುಕನ್ನೂ ಕಾಣಬಲ್ಲೆ ಎಂದು ಹೇಳಿಕೊಳ್ಳಲು ಅವನಿಗೆ ಸಂತೋಷವಾಗುತ್ತಿತ್ತು. ವ್ಯಾಪಾರ ಹೆಚ್ಚು ಇರುವ ಸಮಯಗಳಲ್ಲಿ ಸದಾ ಗ್ರಾಹಕರೊಂದಿಗೆ ಜಗ್ಗಾಡುತ್ತಾ, ಚಕಚಕನೆ ಅವರಿಗೆ ಬೇಕಾದ ವಸ್ತುಗಳನ್ನು ಸರಬರಾಜು ಮಾಡುವ ಅವನ ಕೌಶಲ್ಯತೆಗೆ ಅವನೇ ಮೆಚ್ಚಿಕೊಳ್ಳುತ್ತ ಅವನು ತುದಿಗಾಲಮೇಲೆ ನಿಂತಿರಬೇಕಾಗಿರುತ್ತಿತ್ತು. ಕೊನೆಗೆ ಅವನ ಅಂಗಡಿಯಲ್ಲಿ ಕೂಡಲು ಇದ್ದ ಒಂದೇ ಒಂದು ಪೆಟ್ಟಿಗೆಯ ಮೇಲೆ ಉಸ್ಸಪ್ಪ ಎಂದು ಕೂತು ದಣಿವಾರಿಸಿಕೊಳ್ಳುತ್ತಿದ್ದ.


ಒಂದು ದಿನ ತಡ ರಾತ್ರಿ ಇನ್ನೇನು ಅವನು ಅಂಗಡಿ ಮುಚ್ಚಬೇಕೆಂದು ಅವನು ಆಲೋಚಿಸುತ್ತಿರುವಾಗಲೇ ಆ ಹುಡುಗಿ ಅಂಗಡಿಗೆ ಬಂದಿದ್ದಳು. ಅವನಿಗರಿವಿಲ್ಲದೆ ಆಕೆಯೆಡೆಗೆ ಅವನು ಎರಡು ಸಾರಿ ತಲೆಯಾಡಿಸಿದ್ದ, ಅದು ಅಂತಹ ಹತಾಶೆಯ ಸಮಯಗಳಲ್ಲಿ ಅಪಾಯಕಾರಿ ನಡತೆಯಾಗಿತ್ತು. ಎರಡನೇ ಸಾರಿ ಆಕೆ ಅಂಗಡಿಗೆ ಬಂದಾಗ ಯಾವುದೋ ಆಲೋಚನೆಯಲ್ಲಿದ್ದ ಅವನ ಕುತ್ತಿಗೆಯನ್ನು ಬಲಿಷ್ಠ ಕೈಯೊಂದು ಹಿಡಿದು ಮೇಲೆತ್ತಿದಂತೆ ಭಾಸವಾಗಿತ್ತು. ಆಕೆ ಎದುರಿಗೆ ನಿಂತಿದ್ದಳು, ಆಕೆಯ ಮುಖದಲ್ಲಿ ಒಂದು ರೀತಿಯ ಅಸಹನೆ, ಅಸಡ್ಡೆಯಿತ್ತು.


"ತುಪ್ಪ", ಎಂದಳಾಕೆ ಸುದೀರ್ಘವೆನ್ನಿಸಿದ ಮೌನದ ನಂತರ. "ಒಂದು ಶಿಲ್ಲಿಂಗ್." ಆಕೆ ಹೇಳುತ್ತ ಅರ್ಧ ಪಕ್ಕಕ್ಕೆ ತಿರುಗಿದಳು, ಅವನನ್ನು ನೋಡುವುದೇ ಆಕೆಗೆ ಕಿರಿಕಿರಿಯಾಗುವಂತೆ. ಆಕೆಯ ದೇಹದ ಸುತ್ತ ಬಟ್ಟೆಯೊಂದನ್ನು ಸುತ್ತಿಕೊಂಡು ಕಂಕುಳ ಕೆಳಗೆ ಸಿಕ್ಕಿಸಿಕೊಂಡಿದ್ದಳು. ಆ ಸುತ್ತಿಕೊಂಡ ಹತ್ತಿಯ ಬಟ್ಟೆ ಮೃದುವಾಗಿತ್ತು, ಆಕೆಯ ಸುಂದರ ದೇಹದ ಚಹರೆ ಅದರಲ್ಲಿ ಎದ್ದು ಕಾಣುತ್ತಿತ್ತು. ಆಕೆಯ ಭುಜಗಳು ಬೆತ್ತಲಾಗಿದ್ದು ಮಬ್ಬು ಬೆಳಕಲ್ಲಿ ಹೊಳೆಯುತ್ತಿದ್ದವು. ಆಕೆಯ ಕೈಯಿಂದ ಬಟ್ಟಲು ಪಡೆದ ಹಮೀದ್ ಬಾಗಿ ತುಪ್ಪದ ಡಬ್ಬದಿಂದ ಒಂದು ಸೌಟು ತುಪ್ಪ ತೆಗೆದು ತುಂಬಿದ. ಅವನಿಗೆ ಇದ್ದಕ್ಕಿದ್ದಂತೆ ತಾನು ಒಬ್ಬಂಟಿಯೆನ್ನಿಸಿತು ಹಾಗೂ ಅರಿವಿಲ್ಲದ ವೇದನೆ ಕಾಡತೊಡಗಿತು. ಆಕೆಗೆ ಬಟ್ಟಲು ಹಿಂದಿರುಗಿಸಿದಾಗ ಆಕೆ ಅವನೆಡೆಗೆ ಎಲ್ಲೋ ನೋಡುವಂತೆ ನೋಡಿದಳು, ಆಕೆಯ ನೋಟ ದೂರ ನೆಟ್ಟಂತಿತ್ತು ಮತ್ತು ಬಳಲಿದಂತಿತ್ತು. ಆಕೆ ಹದಿಹರೆಯದವಳೆಂದು ಅವನಿಗನ್ನಿಸಿತು- ದುಂಡನೆ ಸಣ್ಣ ಮುಖ ಮತ್ತು ತೆಳ್ಳನೆ ಕುತ್ತಿಗೆ. ಮರುಮಾತಿಲ್ಲದೆ ಆಕೆ ಹಿಂದಿರುಗಿ ಬಿರಬಿರನೆ ಹೆಜ್ಜೆ ಹಾಕುತ್ತಾ ರಸ್ತೆಯ ಆ ಬದಿಗಿದ್ದ ದೊಡ್ಡ ಕಾಂಕ್ರೀಟ್ ಕೊರಕಲು ದಾಟಿ ಕತ್ತಲಲ್ಲಿ ಮರೆಯಾದಳು. ಅವಳು ಹೋಗುವುದನ್ನೇ ನೋಡುತ್ತಿದ್ದ ಹಮೀದ್ ಆ ಕತ್ತಲಲ್ಲಿ ಎಚ್ಚರಿಕೆಯಿಂದಿರುವAತೆ ಆಕೆಗೆ ಕೂಗಿ ಹೇಳಬೇಕೆನ್ನಿಸಿತು. ಆ ಕತ್ತಲಲ್ಲಿ ಏನೂ ಅವಿತಿಲ್ಲವೆಂದು ಆಕೆಗೆ ಅಷ್ಟು ಖಾತರಿಯೇ? ಜೋರಾಗಿ ಕೂಗಿ ಆಕೆಗೆ ಎಚ್ಚರಿಕೆ ಕೊಡಬೇಕೆಂದು ಅವನಿಗರಿವಿಲ್ಲದೆ ಕೂಗಿದ, ಆದರೆ ಅವನ ಗಂಟಲಿನಿAದ ಕ್ಷೀಣ ಗೊಗ್ಗರು ಧ್ವನಿ ಹೊರ ಬಂದಿಷ್ಟೇ. ಆಕೆಯೂ ಏನಾದರೂ ಆ ಕಡೆಯಿಂದ ಕಿರುಚಬಹುದೇ ಎಂದು ಕಾಯುತ್ತಿದ್ದ, ಆದರೆ ಆಕೆ ಕತ್ತಲಲ್ಲಿ ಮರೆಯಾದಂತೆ ಆಕೆಯ ಚಪ್ಪಲಿಗಳ ಪಟ ಪಟ ಸದ್ದು ಮಾತ್ರ ಕೇಳಿಸಿತಷ್ಟೆ ಅವನಿಗೆ.


ಆಕೆ ಆಕರ್ಷಕ ಹುಡುಗಿಯಾಗಿದ್ದಳು ಹಾಗೂ ಅವನಿಗರಿವಿಲ್ಲದ ಕಾರಣದಿಂದಾಗಿ ಆಕೆಯ ಬಗ್ಗೆಯೇ ಯೋಚಿಸುತ್ತಿದ್ದ ಹಾಗೂ ಆಕೆ ಕತ್ತಲಲ್ಲಿ ಮರೆಯಾದ ದಿಕ್ಕಿನೆಡೆಗೆ ನೋಡುತ್ತಲೇ ಇದ್ದ... ಅದೇಕೋ ಅವನಿಗೆ ಅವನ ಬಗ್ಗೆಯೇ ಅಸಹ್ಯವೆನ್ನಿಸತೊಡಗಿತು. ಅವನನ್ನು ಆಕೆ ತಿರಸ್ಕಾರದಿಂದ ನೋಡುವ ಎಲ್ಲ ಹಕ್ಕೂ ಆಕೆಗಿತ್ತು. ಅವನ ದೇಹ ಬಳಲಿದಂತೆ ಅನ್ನಿಸಿ ಬಾಯಿ ಒಣಗತೊಡಗಿತು. ಅವನಿಗೆ ದಿನ ಬಿಟ್ಟು ದಿನ ಸ್ನಾನ ಮಾಡುವ ಕಾರಣವೂ ಇರಲಿಲ್ಲ. ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದೆದ್ದು ಅಂಗಡಿಗೆ ತಲುಪಲು ಅವನಿಗೆ ಒಂದು ನಿಮಿಷ ಸಮಯ ಸಾಕಾಗಿತ್ತು ಹಾಗೂ ಅವನು ಎಂದು ಹೊರಗೆ ಓಡಾಡಲು ಹೊರಟವನೇ ಅಲ್ಲ. ಹಾಗಿರುವಾಗ ಸ್ನಾನ ಮಾಡಿ ಶುಚಿಗೊಳಿಸಿಕೊಳ್ಳುವುದಾದರೂ ಏನಿತ್ತು? ಯಾವುದೇ ವ್ಯಾಯಾಮವಿಲ್ಲದೆ ಅವನ ಕಾಲುಗಳು ಆಕಾರ ಕಳೆದುಕೊಂಡಿದ್ದವು. ಅವನು ಗುಲಾಮಗಿರಿಯ ಒಂದು ದಿನ ಕಳೆದಿದ್ದ, ತಿಂಗಳುಗಳು ಹಾಗೂ ವರ್ಷಗಳು ಹಾಗೆಯೇ ಉರುಳಿದ್ದವು, ತನ್ನ ಇಡೀ ಬದುಕು ಪಂಜರದೊಳಗೆ ಸಿಕ್ಕಿಬಿದ್ದ ಮೂರ್ಖನ ಹಾಗೆ. ಬಳಲಿದವನಂತೆ ಅಂಗಡಿಯನ್ನು ಮುಚ್ಚಿದ, ಅವನಿಗೆ ತಿಳಿದಿತ್ತು ಇಡೀ ರಾತ್ರಿ ತನ್ನ ಹೀನಾಯಸ್ಥಿತಿಯಲ್ಲಿಯೇ ಕಳೆಯಬೇಕೆಂದು.


ಮರುದಿನ ಸಂಜೆ ಆ ಹುಡುಗಿ ಮತ್ತೊಮ್ಮೆ ಅಂಗಡಿಗೆ ಬಂದಳು. ಹಮೀದ್ ಆಗ ತನಗಿಂತ ಹಿರಿಯನಾದ ತನ್ನ ನಿಯತ ಗ್ರಾಹಕನೊಬ್ಬನ ಜೊತೆ ಮಾತನಾಡುತ್ತಿದ್ದ. ಆತನ ಹೆಸರು ಮನ್ಸೂರ್ ಮತ್ತು ಅಲ್ಲೇ ಹತ್ತಿರದಲ್ಲಿ ವಾಸಿಸುತ್ತಿದ್ದ ಆತ ಸಂಜೆಯ ಹೊತ್ತು ಹಮೀದ್‌ನೊಂದಿಗೆ ಮಾತನಾಡಲು ಆಗಾಗ ಬರುತ್ತಿದ್ದ. ಮನ್ಸೂರ್ ತನ್ನ ಕಣ್ಣಿನಲ್ಲಿನ ಪೊರೆಯಿಂದಾಗಿ ಅರೆಕುರುಡನಾಗಿದ್ದ ಹಾಗೂ ಅದರಿಂದಾಗಿ ಜನ ಅವನನ್ನು ಆಣಕಿಸುತ್ತಿದ್ದರು ಅವನ ಕುರುಡುತನದ ಲೇವಡಿ ಮಾಡುತ್ತಿದ್ದರು. ಇನ್ನು ಕೆಲವರು ಮನ್ಸೂರನ ಕಣ್ಣುಗಳಲ್ಲಿ ಬರೇ ಕಸ ತುಂಬಿರುವುದರಿAದ ಅವನು ಕುರುಡಾಗಿದ್ದಾನೆ ಎನ್ನುತ್ತಿದ್ದರು. ಅಷ್ಟಲ್ಲದೆ ಅವನು ಹುಡುಗರ ಹಿಂದೆ ಬಿದ್ದಿರುತ್ತಾನೆ ಸಹ ಎನ್ನುತ್ತಿದ್ದರು. ಕೆಲವೊಮ್ಮೆ ಹಮೀದ್‌ನಿಗೆ ಈ ಮನ್ಸೂರ್ ಅಂಗಡಿಗೆ ಬರುವುದು ತನಗಾಗಿಯೇ ಇರಬಹುದೆ ಎನ್ನಿಸುತ್ತಿತ್ತು. ಬಹುಶಃ ಅದು ಗಾಳಿಮಾತು ಹಾಗೂ ಅವನ ಬಗೆಗಿನ ದ್ವೇಷದಿಂದಲೂ ಇರಬಹುದು. ಆ ಹುಡುಗಿ ಹತ್ತಿರ ಬಂದAತೆ ಮನ್ಸೂರ್ ಮಾತನಾಡುವುದು ನಿಲ್ಲಿಸಿದ ಹಾಗೂ ಮಬ್ಬು ಬೆಳಕಿನಲ್ಲಿ ಆಕೆಯನ್ನು ಕಷ್ಟಪಟ್ಟು ತನ್ನ ಕಣ್ಣು ಕಿರಿದುಗೊಳಿಸಿ ನೋಡಿದ.


"ಬೂಟು ಪಾಲಿಶ್ ಇದೆಯೆ? ಕಪ್ಪುಬಣ್ಣದ್ದು?" ಕೇಳಿದಳು ಆ ಹುಡುಗಿ.


"ಹೌದು", ಹೇಳಿದ ಹಮೀದ್. ಎಲ್ಲೋ ಆಳದಲ್ಲಿ ಅವನ ಧ್ವನಿ ಹುದುಗಿಹೋದಂತೆ ಅನ್ನಿಸಿ ತನ್ನ ಗಂಟಲು ಸರಿಪಡಿಸಿಕೊಂಡು ಮತ್ತುಮ್ಮೆ ಹೌದು ಎಂದ. ಆ ಹುಡುಗಿ ಮುಗುಳ್ನಕ್ಕಳು.


"ಸುಸ್ವಾಗತ, ಪ್ರಿಯೆ, ಹೇಗಿದ್ದೀಯ ಇಂದು?" ಮನ್ಸೂರ್ ಆ ಹುಡುಗಿಯನ್ನು ಕೇಳಿದ. ಅವನ ಧ್ವನಿ ಸ್ಪಷ್ಟ ಮತ್ತು ಗಡುಸಾಗಿತ್ತು, ಆತ ಏನಾದರೂ ವ್ಯಂಗ್ಯವಾಡುತ್ತಿದ್ದಾನೆಯೆ ಎನ್ನಿಸಿತು ಹಮೀದನಿಗೆ. "ವಾಹ್! ಎಂಥ ಸುಮಧುರ ಸುವಾಸನೆ ನಿನ್ನದು, ಅದ್ಭುತ ಸುಗಂಧದ್ರವ್ಯ! ಸುಕೋಮಲ ಧ್ವನಿ, ಜಿಂಕೆಯAತಹ ಬಳುಕುವ ಮೈ. ಹೇಳು, ಹುಡುಗಿ, ಈ ದಿನ ರಾತ್ರಿ ನಿನಗೆ ಎಷ್ಟು ಹೊತ್ತಿಗೆ ಬಿಢುವು ದೊರೆಯುತ್ತದೆ? ನನ್ನ ಬೆನ್ನು ಮಸಾಜು ಮಾಡುವವರೊಬ್ಬರು ಬೇಕು."


ಆ ಹುಡುಗಿ ಅವನ ಮಾತುಗಳು ಕಿವಿಗೇ ಬೀಳದಂತೆ ನಟಿಸಿದಳು. ಹಮೀದ್ ಅವರಿಗೆ ಬೆನ್ನು ಮಾಡಿ ಬೂಟು ಪಾಲೀಶು ಹುಡುಕುತ್ತಿರುವಾಗ ಮನ್ಸೂರ್ ಅವಳೊಂದಿಗೆ ತನ್ನ ಮಾತು ಮುಂದುವರಿಸಿದ್ದ, ಹಾಡುತ್ತಿದ್ದ, ಅವಳನ್ನು ಹೊಗಳುತ್ತಿದ್ದ, ಪದೇ ಪದೇ ರಾತ್ರಿ ಎಷ್ಟು ಹೊತ್ತಿಗೆ ಸಿಗುತ್ತೀಯಾ ಎನ್ನುತ್ತಿದ್ದ. ಈ ಗೊಂದಲದಲ್ಲಿ ಹಮೀದನಿಗೆ ಪಾಲೀಶ್ ಸಿಗಲಿಲ್ಲ. ಕೊನೆಗೂ ಹುಡುಕಿ ಅದನ್ನು ಅವಳಿಗೆ ಕೊಟ್ಟಾಗ ಆಕೆ ಅವನನ್ನೇ ಗಮನಿಸುತ್ತಿದ್ದಾಳೆ ಹಾಗೂ ಅವನು ಗೊಂದಲದಲ್ಲಿರುವುದನ್ನು ನೋಡಿ ಮೋಜು ತೆಗೆದುಕೊಳ್ಳುತ್ತಿದ್ದಾಳೆ ಎಂದುಕೊAಡ. ಅವನು ಮುಗುಳ್ನಕ್ಕ, ಆದರೆ ಅವಳು ಸಿಡುಕಿದಳು ನಂತರ ಹಣ ಪಾವತಿಸಿದಳು. ಮನ್ಸೂರ್ ಅವಳೊಂದಿಗೆ ತನ್ನ ಮಾತು ಮುಂದುವರಿಸಿದ್ದ, ತನ್ನ ಅಂಗಿಯ ಕಿಸೆಯಲ್ಲಿನ ನಾಣ್ಯಗಳ ಶಬ್ದ ಮಾಡುತ್ತಿದ್ದ, ಆದರೆ ಅವಳು ಒಂದೂ ಮಾತಾಡದೆ ಅಲ್ಲಿಂದ ಹೊರಟಳು.


"ನೋಡವಳನ್ನು, ಅವಳ ಮೇಲೆ ಬೆಳಕು ಚೆಲ್ಲಲು ಸೂರ್ಯನಿಗೂ ಅಂಜಿಕೆಯಾಗುವಂತಿದೆ. ಅಷ್ಟೊಂದು ಅಹಂಕಾರ! ಆದರೆ ಸತ್ಯ ಏನು ಗೊತ್ತೆ? ಅವಳು ಸುಲಭವಾಗಿ ಬಲೆಗೆ ಬೀಳುತ್ತಾಳೆ," ಹೇಳಿದ ಮನ್ಸೂರ್, ಅದುಮಿಟ್ಟ ನಗುವಿನಿಂದ ಅವನ ದೇಹ ಕುಲುಕಿತು. "ಹೇಗಾದರೂ ಆದಷ್ಟು ಬೇಗ ಅವಳನ್ನು ಬಲೆಗೆ ಹಾಕಿಕೊಳ್ಳುತ್ತೇನೆ. ಅವಳು ಎಷ್ಟು ಹಣ ಕೇಳಬಹುದು? ಈ ಹೆಂಗಸರು ಎಲ್ಲರೂ ಅಷ್ಟೆ, ಮೊದಲಿಗೆ ಅಹಂಕಾರ, ತಿರಸ್ಕಾರದ ನೋಟ.... ಆಮೇಲೆ ನೋಡು, ಒಮ್ಮೆ ಅವರನ್ನು ಹಾಸಿಗೆಗೆ ಕೆಡವಿಕೊಂಡು ಒಳಹೊಕ್ಕರೆ, ಅವರಿಗೆ ತಿಳಿಯುತ್ತದೆ ಯಾರು ಯಜಮಾನನೆಂದು."


ಹಮೀದನಿಗೆ ಜೋರಾಗಿ ನಗುಬಂತು. ಆದರೆ ಆ ಹುಡುಗಿ ಸುಲಭವಾಗಿ ಖರೀದಿಗೆ ಸಿಗುವಂಥವಳಲ್ಲ ಎಂದುಕೊAಡ. ಅವಳನ್ನು ನೋಡಿದಾಗ ಅವಳಲ್ಲಿ ಕಾಣುವ, ನಡತೆಯಲ್ಲಿರುವ ದೃಢತೆ, ಮಾತುಗಳಿಂದ ಅವಳು ಮನ್ಸೂರನ ಚಾಲಾಕಿತನಕ್ಕೆ ಸುಲಭವಾಗಿ ಬಲಿಬೀಳುವಳಲ್ಲ ಎಂದುಕೊAಡ. ಪದೇ ಪದೇ ಅವನ ಮನಸ್ಸಿನಲ್ಲಿ ಆ ಹುಡುಗಿ ನೆನಪಾಗತೊಡಗಿದಳು, ಅಷ್ಟೇ ಅಲ್ಲ ಅವಳೊಂದಿಗೆ ತೀರಾ ಸಲಿಗೆಯಿಂದ ಒಬ್ಬರಿಗೊಬ್ಬರು ಹತ್ತಿರವಾಗುವಂತೆ ಊಹಿಸಿಕೊಳ್ಳತೊಡಗಿದ.  ಪ್ರತಿ ರಾತ್ರಿ ಅಂಗಡಿ ಮುಚ್ಚಿನ ನಂತರ ಆ ಅಂಗಡಿಯ ಮಾಲೀಕನಾದ ಹಾಗೂ ಆ ಅಂಗಡಿಯ ಹಿಂದೆಯೇ ವಾಸಿಸುತ್ತಿದ್ದ ಮುದುಕ ಫಜೀರ್ ಬಳಿ ಕೆಲಕಾಲ ಕುಳಿತುಕೊಳ್ಳಲು ಹೋಗುತ್ತಿದ್ದ. ಆ ಮುದುಕ ಈಗ ಓಡಾಡದಷ್ಟು ನಿತ್ರಾಣನಾಗಿದ್ದು ತನ್ನ ಹಾಸಿಗೆ ಬಿಟ್ಟು ಏಳುತ್ತಲೇ ಇರಲಿಲ್ಲ. ಹತ್ತಿರದಲ್ಲೇ ಇದ್ದ ಹೆಂಗಸೊಬ್ಬಳು ಮನೆಗೆ ಹಗಲಲ್ಲಿ ಬಂದು ಅದೂ ಇದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಳು ಹಾಗೂ ಅದಕ್ಕೆ ಪಾವತಿಯಾಗಿ ಅಂಗಡಿಯಿAದ ಉಚಿತವಾಗಿ ದಿನಸಿ ಕೊಂಡೊಯ್ಯುತ್ತಿದ್ದಳು. ಆದರೆ ಹಮೀದ್ ರಾತ್ರಿಯ ಹೊತ್ತು ಮುದುಕ ಫಜೀರ್ ಬಳಿ ಸ್ವಲ್ಪ ಕಾಲವಾದರೂ ಇರಬೇಕಿತ್ತು. ಅವರು ಮಾತನಾಡುತ್ತಿರುವಂತೆ ಸಾವಿನ ದವಡೆಯಲ್ಲಿರುವ ಮುದುಕನ ವಾಸನೆ ಇಡೀ ಕೋಣೆಯಲ್ಲಿ ಹರಡಿಕೊಂಡಿತ್ತು. ಅವರಿಗೆ ಮಾತನಾಡುವಂಥದು ಹೆಚ್ಚಿಗೆ ಏನೂ ಇರುತ್ತಿರಲಿಲ್ಲ. ಅಂಗಡಿಯ ವ್ಯಾಪಾರದ ಬಗ್ಗೆ ಹಾಗೂ ಆ ಮುದುಕನ ಆರೋಗ್ಯ ಮರುಕಳಿಸಲೆಂದು ಪ್ರಾರ್ಥಿಸುವ ಬಗ್ಗೆ ಮಾತನಾಡುತ್ತಿದ್ದರು. ಕೆಲವೊಮ್ಮೆ ಮುದುಕ ಖಿನ್ನನಾಗಿರುವಾಗ ಕಣ್ಣಲ್ಲಿ ನೀರುತಂದುಕೊAಡು ತನ್ನ ಸಾವಿನ ಬಗ್ಗೆ ಹಾಗೂ ಸಾವಿನ ನಂತರ ಮೇಲೆ ಇರಬಹುದಾದ ಬದುಕಿನ ಬಗ್ಗೆ ಹೇಳುತ್ತಿದ್ದ. ಆನಂತರ ಹಮೀದ್ ಮುದುಕನನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದ, ಎಲ್ಲಾ ಶುಚಿಗೊಳಿಸಿ ತಂದು ಮಲಗಿಸಿ ತಾನು ಹೊರಡುತ್ತಿದ್ದ. ರಾತ್ರಿಯೆಲ್ಲಾ ಮುದುಕ ಫಜೀರ್ ತನ್ನಂತಾನೇ ಮಾತನಾಡಿಕೊಳ್ಳುತ್ತಿದ್ದ, ಕೆಲವೊಮ್ಮೆ ತನ್ನ ಧ್ವನಿ ಏರಿಸಿ ಹಮೀದನ ಹೆಸರನ್ನು ಕರೆಯುತ್ತಿದ್ದ.


ಹಮೀದ್ ಅಲ್ಲೇ ಹೊರಗೆ ಒಳಗಿನ ಮತ್ತೊಂದು ಪ್ರಾಂಗಣದಲ್ಲಿ ಮಲಗುತ್ತಿದ್ದ. ಮಳೆಯಾಗುವ ದಿನಗಳಲ್ಲಿ ಒಳಗೆ ಇದ್ದ ಮತ್ತೊಂದು ಸಾಮಾನು ಸರಂಜಾಮು ಇಡುವ ಸಣ್ಣ ಕೋಣೆಯಲ್ಲಿ ಸಾಮಾನು ಅತ್ತಿತ್ತ ಸರಿಸಿ ಮಲಗುತ್ತಿದ್ದ. ಇಡೀ ರಾತ್ರಿ ಒಬ್ಬನೇ ಮಲಗಿ ಅಭ್ಯಾಸವಾಗಿತ್ತು, ಎಂದೂ ಹೊರಗೆ ಹೋಗುತ್ತಿರಲಿಲ್ಲ. ಅವನು ಅಂಗಡಿಬಿಟ್ಟು ಹೋಗಿ ಒಂದು ವರ್ಷದ ಮೇಲಾಗಿತ್ತು. ಅದಕ್ಕೂ ಮೊದಲು ಹೊರಗೆ ಹೋಗಿದ್ದೆಂದರೆ ಫಜೀರ್ ಹಾಸಿಗೆ ಹಿಡಿಯುವ ಮುನ್ನ ಆತನ ಜೊತೆಗೆ ಹೋಗಿದ್ದದ್ದಷ್ಟೆ. ಆಗ ಫಜೀರ್ ಆತನನ್ನು ಪ್ರತಿ ಶುಕ್ರವಾರ ಮಸೀದಿಗೆ ಕರೆದೊಯ್ಯುತ್ತಿದ್ದ. ಅಲ್ಲಿನ ಜನಜಂಗುಳಿ, ಬಿರುಕುಬಿಟ್ಟ ರಸ್ತೆ ಮಳೆಯಲ್ಲಿ ಹೊಗೆಯಾಡುತ್ತಿದ್ದುದನ್ನು ಹಮೀದ್ ನೆನಪಿಸಿಕೊಂಡ. ಮಸೀದಿಯಿಂದ ಹಿಂದಿರುಗುವಾಗ ಅವರು ಮಾರುಕಟ್ಟೆಗೆ ಹೋಗುತ್ತಿದ್ದರು ಹಾಗೂ ರುಚಿಕರ ಹಣ್ಣು, ಬಣ್ಣಬಣ್ಣದ ತರಕಾರಿಗಳ ಹೆಸರುಗಳನ್ನು ಹೇಳಿ ಅವುಗಳನ್ನು ಮುಟ್ಟಿ ತಡವಿ, ವಾಸನೆ ನೋಡುತ್ತಿದ್ದ ಫಜೀರ್. ತನ್ನ ಹದಿಹರೆಯದ ದಿನಗಳಲ್ಲಿ ಆ ಪಟ್ಟಣಕ್ಕೆ ಬಂದ ಹಮೀದ್ ಆಗಲಿಂದಲೂ ಮುದುಕ ಫಜೀರ್ ಜೊತೆಗೇ ಕೆಲಸ ಮಾಡುತ್ತಿದ್ದ. ಫಜೀರ್ ಅವನಿಗೆ ಉಳಿದುಕೊಳ್ಳಲು ಸ್ಥಳ ನೀಡಿ ತನ್ನ ಅಂಗಡಿಯಲ್ಲಿ ಕೆಲಸ ನೀಡಿದ್ದ. ಪ್ರತಿ ದಿನ ರಾತ್ರಿ ಒಬ್ಬಂಟಿಯಾಗಿ ಮಲಗುವಾಗ ಅವನು ತನ್ನ ಹುಟ್ಟಿದ ಊರಿನ ಹಾಗೂ ತಂದೆ ತಾಯಿಯ ನೆನಪಾಗುತ್ತಿತ್ತು. ಈಗ ಅವನು ಪುಟ್ಟ ಬಾಲಕನಲ್ಲದಿದ್ದರೂ ಆ ನೆನಪುಗಳು ಅವನಲ್ಲಿ ಕಣ್ಣೀರು ತರಿಸುತ್ತಿದ್ದವು ಹಾಗೂ ಅವನನ್ನು ಬಿಡಲೊಲ್ಲದ ಹತಾಶೆಯ ಭಾವನೆಗಳು ಅವನನ್ನು ಮತ್ತಷ್ಟು ಖಿನ್ನನಾಗಿಸುತ್ತಿದ್ದವು.
ಮತ್ತೊಂದು ದಿನ ಸಂಜೆ ಆ ಹುಡುಗಿ ಹುರುಳಿಕಾಳು ಮತ್ತು ಸಕ್ಕರೆ ಕೊಳ್ಳಲು ಅಂಗಡಿಗೆ ಬಂದಳು, ಹಮೀದ್ ಅವಳಿಗೆ ಅಳತೆಯಲ್ಲಿ ಹೆಚ್ಚೇ ನೀಡಿದ. ಅವಳು ಅದನ್ನು ಗಮನಿಸಿದಳು ಹಾಗೂ ಅವನನ್ನು ನೋಡಿ ಮುಗುಳ್ನಕ್ಕಳು. ಅವಳ ಮುಗುಳ್ನಗುವಿನಲ್ಲಿ ಅಪಹಾಸ್ಯವಿದೆಯೆಂದು ತಿಳಿದಿದ್ದರೂ ಅವನು ಸಂತೋಷದಿAದ ಬೀಗಿದ. ಮುಂದಿನ ಸಾರಿ ಆಕೆ ಅಂಗಡಿಗೆ ಬಂದಾಗ ಅವನಿಗೆ ಹಾರೈಸಿದಳು ಹಾಗೂ ಕೆಲವು ಒಳ್ಳೆಯ ಮಾತನಾಡಿದಳು. ನಂತರ ಅವಳು ಆಕೆಯ ಹೆಸರು ರುಕಿಯಾ ಎಂದು ಹೇಳಿದಳು ಹಾಗೂ ಆಕೆ ಕೆಲದಿನಗಳ ಹಿಂದೆಯಷ್ಟೇ ಇಲ್ಲೇ ತನ್ನ ಸಂಬಂಧಿಕರ ಮನೆಗೆ ಬಂದಿರುವುದಾಗಿ ತಿಳಿಸಿದಳು.


"ನಿನ್ನ ಮನೆ ಎಲ್ಲಿದೆ?" ಹಮೀದ್ ಕೇಳಿದ.


"ಮ್ವೆಮೆಂಬೆಮರಿAಗೊ," ಆಕೆ ತನ್ನ ಕೈಬೀಸಿ ಅದು ದೂರ ಇದೆ ಎನ್ನುವುದನ್ನು ತೋರಿಸುತ್ತ ಹೇಳಿದಳು. "ಆದರೆ ನೀನು ಅಲ್ಲಿಗೆ ಕಾಡುದಾರಿಯಲ್ಲಿ ಬೆಟ್ಟಗಳನ್ನು ಹತ್ತಿ ಹೋಗಬೇಕು."


ಆಕೆ ಧರಿಸಿದ್ದ ನೀಲಿ ವಸ್ತ್ರಗಳನ್ನು ನೋಡಿ ಆಕೆ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಅವನಿಗೆ ತಿಳಿಯಿತು. ಆಕೆ ಎಲ್ಲಿ ಕೆಲಸ ಮಾಡುವುದು ಎಂದು ಕೇಳಿದ್ದಕ್ಕೆ, ಆಕೆ ಅದೇನೂ ಅಷ್ಟು ಮುಖ್ಯವಾದುದಲ್ಲ ಎನ್ನುವಂತೆ ಉದಾಸೀನ ಮಾಡಿದಳು. ನಂತರ ತಾನು ಒಂದು ಉತ್ತಮ ಕೆಲಸ ಹುಡುಕುತ್ತಿರುವುದಾಗಿ ತಿಳಿಸಿ ಈಗ ನಗರದ ಹೊಸ ಹೋಟೆಲೊಂದರಲ್ಲಿ ಕೆಲಸದವಳಾಗಿರುವುದಾಗಿ ತಿಳಿಸಿದಳು.


"ಅದೊಂದು ಅತ್ಯುತ್ತಮ ಹೋಟೆಲ್, ಈಕ್ವೆಟಾರ್" ಎಂದಳು. "ಆ ಹೋಟೆಲಿನಲ್ಲಿ ಈಜುಕೊಳವಿದೆ ಹಾಗೂ ಎಲ್ಲೆಲ್ಲೂ ಜಮಖಾನೆಗಳಿವೆ. ಅಲ್ಲಿ ಉಳಿಯುವ ಬಹಳಷ್ಟು ಜನ `ಝುಂಗು', ಅಂದರೆ ಯೂರೋಪಿಯನ್ನರು. ಕೆಲವರು ಭಾರತೀಯರೂ ಇರುತ್ತಾರೆ, ಆದರೆ ಇವರು ಯಾರೂ ಕಾಡು ಮೇಡುಗಳಿಂದ ಬಂದವರಲ್ಲ ಹಾಗಾಗಿ ಹಾಸಿಗೆಯ ಹೊದಿಕೆಗಳು ವಾಸನೆ ಹೊಡೆಯುವುದಿಲ್ಲ."


ಆ ದಿನ ರಾತ್ರಿ ಅಂಗಡಿ ಮುಚ್ಚಿದ ನಂತರ ತನ್ನ ಮಲಗುವ ಪ್ರಾಂಗಣದ ಬಾಗಿಲ ಬಳಿ ಸ್ವಲ್ಪ ಹೊತ್ತು ನಿಂತ. ರಸ್ತೆಗಳೆಲ್ಲಾ ಖಾಲಿಯಾಗಿದ್ದವು ಹಾಗೂ ಊರಿಗೆ ಊರೇ ಮೌನವಾಗಿತ್ತು, ಹಗಲಿನ ಅಪಾಯಕಾರಿ ಸ್ಥಳವಾಗಿ ಕಾಣುತ್ತಿರಲಿಲ್ಲ. ರುಕಿಯಾ ಬಹಳಷ್ಟು ನೆನಪಿಗೆ ಬರತೊಡಗಿದಳು ಹಾಗೂ ಕೆಲವೊಮ್ಮೆ ಅವಳ ಹೆಸರನ್ನು ಗುನುಗುನಿಸತೊಡಗಿದ. ಅವಳು ಹೆಚ್ಚು ನೆನಪಾದಂತೆ ಅವನ ಒಂಟಿತನ ಮತ್ತು ಹೀನಾವಸ್ಥೆಯ ಅರಿವು ಹೆಚ್ಚಾಗತೊಡಗಿತು. ಮೊಟ್ಟಮೊದಲ ಬಾರಿ ಅವಳು ಅವನನ್ನು ನೋಡಿದ ಹಾಗೂ ಕತ್ತಲಲ್ಲಿ ಅವಳು ಹೋದ ರೀತಿ ನೆನಪಾಯಿತು. ಅವನಿಗೆ ಅವಳನ್ನು ಒಮ್ಮೆಯಾದರೂ ಮುಟ್ಟಬೇಕೆನ್ನಿಸಿತು.... ವರ್ಷಾನುಗಟ್ಟಲೆ ಕತ್ತಲಲ್ಲೇ ಬದುಕಿದ್ದರಿಂದ ತಾನು ಹೀಗಾಗಿದ್ದೇನೆ ಎಂದು ಅವನಿಗನ್ನಿಸತೊಡಗಿತು. ಆ ವಿದೇಶಿ ನಗರದ ರಸ್ತೆಗಳನ್ನು ನೋಡಿದ ಹಾಗೂ ಒಬ್ಬ ಅಜ್ಞಾತ ಹುಡುಗಿಯ ಸ್ಪರ್ಶ ಅವನಿಗೆ ಮುಕ್ತಿ ಕೊಡಿಸಬಹುದು ಎಂದು ಅವನಿಗನ್ನಿಸಿತು.
ಒಂದು ರಾತ್ರಿ ಅವನು ಹೊರಗಡೆಯಿಂದ ಮನೆಯ ಚಿಲಕ ಹಾಕಿ ರಸ್ತೆಗಿಳಿದ. ನಿಧಾನವಾಗಿ ಹತ್ತಿರದ ಬೀದಿ ದೀಪದ ಕಂಬದ ಬಳಿಗೆ ನಡೆದ, ಹಾಗೇ ಮುಂದಿನ ಕಂಬದ ಬಳಿಗೆ, ಮತ್ತೊಂದು ಕಂಬದ ಬಳಿಗೆ.. ಆ ನಡುರಾತ್ರಿಯಲ್ಲಿ ಯಾವುದೇ ಹೆದರಿಕೆಯಾಗದಿರುವುದು ಅವನಿಗೇ ಅಚ್ಚರಿಯಾಯಿತು. ಏನೋ ಚಲಿಸಿದಂತಾಯಿತು, ಆದರೆ ಅದರೆಡೆಗೆ ನೋಡಲಿಲ್ಲ. ಅವನಿಗೆ ಹೋಗುತ್ತಿರುವುದು ಎಲ್ಲಿಗೆಂದು ತಿಳಿದಿಲ್ಲದಿದ್ದಲ್ಲಿ, ಆತ ಹೆದರಿಕೊಳ್ಳುವ ಅವಶ್ಯಕತೆಯಿಲ್ಲ ಏಕೆಂದರೆ ಏನು ಬೇಕಾದರೂ ಘಟಿಸಬಹುದು. ಆ ಭಾವನೆಯಲ್ಲಿ ಅವನಿಗೆ ಎಂಥದೋ ಸಾಂತ್ವನ ಕಂಡಿತು.


ರಸ್ತೆಯ ಮೂಲೆಯಲ್ಲಿ ಅಂಗಡಿಗಳ ಸಾಲಿದ್ದ ರಸ್ತೆಯೆಡೆಗೆ ತಿರುಗಿದ, ಒಂದೆರಡು ಅಂಗಡಿಗಳಲ್ಲಿ ಬೆಳಕು ಕಾಣಿತು, ಆ ಬೆಳಕುಗಳಿಂದ ತಪ್ಪಿಸಿಕೊಳ್ಳಲು ಮತ್ತೊಂದು ಬದಿಗೆ ತಿರುಗಿದ. ಅವನಿಗೆ ರಸ್ತೆಯಲ್ಲಿ ಯಾರೂ ಕಾಣಲಿಲ್ಲ- ಪೋಲೀಸಿನವನಾಗಲೀ, ರಾತ್ರಿಯ ವಾಚ್‌ಮನ್ ಆಗಲಿ. ಕೂಡುರಸ್ತೆಗಳ ಸರ್ಕಲ್ ಅಂಚಿನಲ್ಲಿನ ಮರದ ಬೆಂಚಿನ ಮೇಲೆ ಕೂತ, ಎಲ್ಲವೂ ಅವನಿಗೆ ತೀರಾ ಪರಿಚಯವೆನ್ನಿಸತೊಡಗಿತು. ಒಂದು ಮೂಲೆಯಲ್ಲಿ ಕ್ಲಾಕ್ ಟವರ್ ಇತ್ತು, ಮೌನದ ರಾತ್ರಿಯಲ್ಲಿ ಮೃದುವಾಗಿ ಟಿಕ್ ಟಿಕ್ ಎನ್ನುತ್ತಿತ್ತು. ಸರ್ಕಲ್ ಅಂಚಿನಲ್ಲಿನ ಕಬ್ಬಿಣದ ಬೇಲಿ ನಿರ್ಭಾವುಕವಾಗಿ ನೇರವಾಗಿ ನಿಂತಿತ್ತು. ಮತ್ತೊಂದು ಕೊನೆಯಲ್ಲಿ ಬಸ್ಸುಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು ಹಾಗೂ ಮತ್ತೊಂದು ದಿಕ್ಕಿನಲ್ಲಿ ದೂರದಲ್ಲಿ ಸಮುದ್ರದ ಅಲೆಗಳ ಸದ್ದು ಕೇಳುತ್ತಿತ್ತು.
ಆ ಶಬ್ದದೆಡೆಗೆ ಹೊರಟ ಹಾಗೂ ಸಮುದ್ರದ ತೀರ ಇಷ್ಟು ಹತ್ತಿರವೇ ಇದೆ ಎಂದು ಅಚ್ಚರಿಗೊಂಡ. ನೀರಿನ ವಾಸನೆ ಅವನಲ್ಲಿ ತಕ್ಷಣವೆ ಅವನ ತಂದೆಯ ಮನೆಯನ್ನು ನೆನಪಿಗೆ ತಂದಿತು. ಅವನ ಊರೂ ಸಹ ಸಮುದ್ರದ ಪಕ್ಕದಲ್ಲೇ ಇದ್ದದ್ದು ಹಾಗೂ ಅವನ ಊರಿನ ಸಾಗರತಟದ ಮರಳಿನಲ್ಲಿ, ನೀರಿನಲ್ಲಿ ಎಲ್ಲ ಮಕ್ಕಳಂತೆ ಆಡಿದ್ದ. ಅದೇಕೋ ಇದ್ದಕ್ಕಿದ್ದಂತೆ ಅವನಿಗೆ ಅಲ್ಲಿಗೆ ಪರಕೀಯ, ಪರದೇಶಿ ಎಂದು ಅನ್ನಿಸಲಿಲ್ಲ. ಅವನು ಅಲ್ಲೇ ನಿಂತಿದ್ದ ಕಾಂಕ್ರೀಟ್ ತಡೆಗೋಡೆಗೆ ನೀರು ಅಲೆಅಲೆಯಾಗಿ ನಿಧಾನವಾಗಿ ಅಪ್ಪಳಿಸುತ್ತಿತ್ತು. ಅಲ್ಲೇ ನಿಂತು ನೀರು ಉಂಟುಮಾಡುತ್ತಿದ್ದ ನೊರೆಯನ್ನು ನೋಡತೊಡಗಿದ. ನೀರಿನಲ್ಲಿದ್ದ ಜೆಟ್ಟಿ ದೋಣಿಯೊಂದರಲ್ಲಿ ಬೆಳಕು ಇನ್ನೂ ಜಗಜಗಿಸುತ್ತಿತ್ತು ಹಾಗೂ ಯಂತ್ರಗಳ ಚಟುವಟಿಕೆ ಕಾಣುತ್ತಿತ್ತು. ಈ ನಡುರಾತ್ರಿಯಲ್ಲಿ ಯಾರಾದರೂ ಇನ್ನೂ ಕೆಲಸ ಮಾಡುತ್ತಿರಬಹುದೆಂದು ಅವನಿಗನ್ನಿಸಲಿಲ್ಲ.


ದೂರದ ದಡದಲ್ಲಿ ಸಣ್ಣ ಸಣ್ಣ ಚುಕ್ಕೆಗಳ ಹಾಗೆ ಕತ್ತಲ ಹಿನ್ನೆಲೆಯಲ್ಲಿ ಬೆಳಕು ಕಾಣುತ್ತಿತ್ತು. ಅಲ್ಲಿ ಯಾರು ವಾಸಿಸುತ್ತಿರಬಹುದೆಂದು ಅಚ್ಚರಿಗೊಂಡ. ಇದ್ದಕ್ಕಿದ್ದಂತೆ ಅವನಲ್ಲಿ ಹೆದರಿಕೆ ಆವರಿಸಿತು. ನಗರದ ಆ ಕಪ್ಪು ಮೂಲೆಯಲ್ಲಿ ವಾಸಿಸುತ್ತಿರುವ ಜನರನ್ನು ಊಹಿಸಿಕೊಳ್ಳಲು ಯತ್ನಿಸಿದ. ಅವನ ಮನಸ್ಸಿನಲ್ಲಿ ಶಕ್ತಿಶಾಲಿ, ಕ್ರೂರ ಮುಖಗಳನ್ನುಳ್ಳ ಜನರ ಚಿತ್ರ ಮೂಡಿತು. ಅವರು ಅವನನ್ನು ನೋಡಿ ಜೋರಾಗಿ ನಗುತ್ತಿರುವಂತೆ ಭಾಸವಾಯಿತು. ಅಲ್ಲೇ ಕತ್ತಲ ಮರೆಗಳಲ್ಲಿ ಅಪರಿಚಿತರಿಗಾಗಿ ಕಾದಿರುವ ನೆರಳುಗಳು ಕಂಡವು, ನೋಡ ನೋಡುತ್ತಿದ್ದಂತೆ ದೇಹವೊಂದರ ಬಳಿ ಗಂಡಸರು ಹೆಂಗಸರು ಸುತ್ತುವರಿದರು. ಯಾವುದೋ ಪ್ರಾಚೀನ ಕ್ರಿಯಾವಿಧಿಯಂತೆ ಜೋರಾಗಿ ಹೆಜ್ಜೆಯಾಕುತ್ತ ಚೀರತೊಡಗಿದರು, ಅವರ ಶತ್ರುಗಳ ರಕ್ತ ನೆಲಕ್ಕೆ ಅವರ ಕಾಲಡಿಗೆ ಹರಿಯತೊಡಗಿತು. ಅಲ್ಲಿ ದೂರದ ಕತ್ತಲ ದಡದಲ್ಲಿದ್ದವರ ಜನರು ದೈಹಿಕ ಹಲ್ಲೆ ಮಾಡಬಹುದೆನ್ನುವುದು ಮಾತ್ರ ಅವನ ಹೆದರಿಕೆಯಾಗಿರಲಿಲ್ಲ. ಏಕೆಂದರೆ ಅವರಿಗೆ ಅವರು ಎಲ್ಲಿದ್ದಾರೆನ್ನುವುದು ತಿಳಿದಿತ್ತು, ಆದರೆ ಇವನು, ಎಲ್ಲೂ ಅಲ್ಲದ ನಾಡಿನ ಮಧ್ಯೆ ನಿಂತಿದ್ದ.


ಧೈರ್ಯದಿಂದ ಏನೋ ಮಾಡಲು ಹೊರಟವನ ಭಾವನೆಯಿಂದ ಅಂಗಡಿಯ ಕಡೆಗೆ ಹಿಂದಿರುಗಿದ.  ಅಂದಿನಿAದ ಅವನಿಗೆ ಅದೇ ಅಭ್ಯಾಸವಾಯಿತು. ಪ್ರತಿ ರಾತ್ರಿ ಅಂಗಡಿ ಮುಚ್ಚಿ ಫಜೀರ್‌ನೊಂದಿಗೆ ಮಾತನಾಡಿ ಸಾಗರತಟಕ್ಕೆ ಹೋಗಿ ನಿಲ್ಲುತ್ತಿದ್ದ. ಫಜೀರ್‌ನಿಗೆ ಅದು ಇಷ್ಟವಾಗಲಿಲ್ಲ ಹಾಗೂ ರಾತ್ರಿ ತಾನೊಬ್ಬನೇ ಇರಬೇಕೆಂದು ಗೊಣಗಿದ, ಆದರೆ ಹಮೀದ್ ಅವನ ಗೊಣಗಾಟ ಕೇಳಿಸದವನಂತೆ ಇದ್ದ. ಆಗಾಗ ಕೆಲವು ಜನ ಕಾಣುತ್ತಿದ್ದರು, ಆದರೆ ಅವರು ಅವನ ಕಡೆಗೆ ಗಮನ ಹರಿಸದೆ ಹಾದುಹೋಗುತ್ತಿದ್ದರು. ಹಗಲಿನಲ್ಲಿ ಅಂಗಡಿಯಲ್ಲಿ ಆ ಹುಡುಗಿಗಾಗಿ ಕಾಯುತ್ತಿದ್ದ, ಅವಳೀಗ ಅವನ ಮನ ತುಂಬಿದ್ದಳು. ಪ್ರತಿ ರಾತ್ರಿ ತಾವು ಅವಳೊಂದಿಗೆ ಇರುವಂತೆ ಊಹಿಸಿಕೊಳ್ಳುತ್ತಿದ್ದ. ರಾತ್ರಿ ಮೌನ ರಸ್ತೆಗಳಲ್ಲಿ ನಡೆಯುವಾಗ ಅವಳು ಅವನೊಂದಿಗೆ ಇರುವಂತೆ, ಮಾತನಾಡುತ್ತಿರುವಂತೆ, ಮುಗುಳ್ನಗುತ್ತಿರುವಂತೆ, ಅವನ ಭುಜದ ಮೇಲೆ ಕೈ ಹಾಕಿರುವಂತೆ ಊಹಿಸಿಕೊಳ್ಳುತ್ತಿದ್ದ. ಅವಳು ಅಂಗಡಿಗೆ ಬಂದಾಗಲೆಲ್ಲಾ, ಅವಳು ಕೊಳ್ಳುವ ಸಾಮಾನು ಹೆಚ್ಚಿಗೇ ಕೊಡುತ್ತಿದ್ದ ಹಾಗೂ ಅವಳ ಮುಗುಳ್ನಗುವಿಗಾಗಿ ಕಾಯುತ್ತಿದ್ದ. ಕೆಲವೊಮ್ಮೆ ಮಾತನಾಡುತ್ತಿದ್ದರು, ಹಾರೈಕೆ ಮತ್ತು ಗೆಳೆತನದ ಮಾತುಗಳು. ಕೆಲವೊಮ್ಮೆ ಅವಳು ಕೊಳ್ಳುವ ಸಾಮಾನು ಇಲ್ಲದಿದ್ದಲ್ಲಿ, ವಿಶೇಷ ಗ್ರಾಹಕರಿಗೆ ಕಾಯ್ದಿರಿಸಿಕೊಂಡಿದ್ದ ದಾಸ್ತಾನಿನಿಂದ ಅವಳಿಗೆ ತೆಗೆದು ಕೊಡುತ್ತಿದ್ದ. ಕೆಲವೊಮ್ಮೆ ಅವನಿಗೆ ಧೈರ್ಯ ಬಂದಾಗ ಅವಳ ರೂಪವನ್ನು ಹೊಗಳುತ್ತಿದ್ದ ಮತ್ತು ಅವಳು ಜೋರಾಗಿ ಮುಖವಗಲಿಸಿ ಮುಗುಳ್ನಕ್ಕಾಗ ಒಂಟಿತನ ಮತ್ತು ಗೊಂದಲಕ್ಕೊಳಗಾಗುತ್ತಿದ್ದ. ಮನ್ಸೂರ್ ಆ ಹುಡುಗಿಯ ಬಗ್ಗೆ ಕೊಚ್ಚಿಕೊಂಡದ್ದು ನೆನಪಾದಾಗಲೆಲ್ಲಾ ಹಮೀದ್‌ನಲ್ಲಿ ನಗು ಬರುತ್ತಿತ್ತು. ಅವಳು ಹಣದಿಂದ ಕೊಳ್ಳಬಲ್ಲ ಹುಡುಗಿಯಾಗಿರಲಿಲ್ಲ, ಆದರೆ ಹಾಡಿನಿಂದ, ಒಲವಿನಿಂದ ಮತ್ತು ಧೈರ್ಯದಿಂದ ಗೆಲ್ಲಬೇಕಾದ ಹುಡುಗಿಯಾಗಿದ್ದಳು. ಆದರೆ ಕಣ್ಣಿನಲ್ಲಿ ಗಲೀಜು ತುಂಬಿದ ಅರೆಕುರುಡ ಮನ್ಸೂರ್‌ನಲ್ಲಾಗಲಿ ಅಥವಾ ಹಮೀದ್‌ನಲ್ಲಾಗಲೀ ಅಂತಹ ಸಾಹಸಕ್ಕೆ ಕೈಹಾಕಬಲ್ಲ ಪದರಾಶಿಯಾಗಲೀ, ಧ್ವನಿಯಾಗಲೀ ಇರಲಿಲ್ಲ.


ಒಂದು ದಿನ ರಾತ್ರಿ ರುಕಿಯಾ ಅಂಗಡಿಗೆ ಸಕ್ಕರೆ ಕೊಳ್ಳಲು ಬಂದಳು. ಆಕೆ ಇನ್ನೂ ತನ್ನ ಕೆಲಸದ ನೀಲಿ ವಸ್ತ್ರವನ್ನೇ ಧರಿಸಿದ್ದಳು ಹಾಗೂ ಅದು ಕಂಕುಳಲ್ಲಿ ಬೆವರಿನಿಂದ ಕೂಡಿತ್ತು ಹಾಗೂ ಕಲೆಯಾಗಿತ್ತು. ಅಂಗಡಿಯಲ್ಲಿ ಯಾರೂ ಇತರ ಗ್ರಾಹಕರು ಇರಲಿಲ್ಲ ಹಾಗೂ ಆಕೆಯೂ ಸಹ ಯಾವುದೇ ಅವಸರದಲ್ಲಿರಲಿಲ್ಲ. ಆಕೆ ನಿಧಾನವಾಗಿ ಅವನೆಷ್ಟು ಕಷ್ಟ ಪಡುತ್ತಿದ್ದಾನೆಂದು ಹೇಳುತ್ತಾ ಛೇಡಿಸತೊಡಗಿದಳು.


"ಪ್ರತಿ ದಿನ ಇಷ್ಟೊಂದು ಗಂಟೆ ಕೆಲಸ ಮಾಡುತ್ತೀಯಲ್ಲಾ, ನೀನು ದೊಡ್ಡ ಸಾಹುಕಾರನೇ ಆಗಿರಬೇಕು. ಹಿತ್ತಲಲ್ಲೇನಾದರೂ ಭೂಮಿ ಅಗೆದು ಹಣ ಅಡಗಿಸಿದ್ದೀಯಾ? ಅಂಗಡಿಯವರು ರಹಸ್ಯವಾಗಿ ಹಣ ಅವಿತಿಡುತ್ತಾರೆಂಬುದು ಎಲ್ಲರಿಗೂ ತಿಳಿದಿದೆ.... ನೀನು ನಿನ್ನ ಊರಿಗೆ ಹಿಂದಿರುಗಲು ಹಣ ಕೂಡಿಡುತ್ತಿದ್ದೀಯಾ?" 


"ನನ್ನ ಬಳಿ ಏನೂ ಇಲ್ಲ," ಹೇಳಿದ ಹಮೀದ್. "ಇಲ್ಲಿರುವ ಯಾವುದೂ ನನ್ನದಲ್ಲ."


ಆಕೆ ನಂಬದವಳಂತೆ ಮುಸಿನಕ್ಕಳು. "ಆದರೂ ನೀನು ಅಷ್ಟೊಂದು ಕಷ್ಟಪಟ್ಟು ಕೆಲಸಮಾಡುತ್ತೀಯಾ," ಆಕೆ ಹೇಳಿದಳು. “ನಿನಗೆ ಬದುಕಲ್ಲಿ ಬೇರೇನೂ ಬೇಡ...ಮೋಜು ಮಸ್ತಿ." ಅವನು ಮತ್ತೊಂದಷ್ಟು ಹೆಚ್ಚಿನ ಸಕ್ಕರೆ ಹಾಕುತ್ತಿರುವಂತೆ ಆಕೆ ಮುಗುಳ್ನಕ್ಕಳು.
ಅದನ್ನು ಅವನಿಂದ ಪಡೆಯಲು ಮುಂದಕ್ಕೆ ಬಾಗಿ "ಧನ್ಯವಾದಗಳು" ಎಂದಳು. ಅವಶ್ಯಕತೆಗಿಂತ ಕೊಂಚ ಹೆಚ್ಚು ಹೊತ್ತು ಹಾಗೆಯೇ ಇದ್ದಳು; ನಂತರ ನಿಧಾನವಾಗಿ ಹಿಂದಕ್ಕೆ ಸರಿದಳು. "ನೀನು ಯಾವಾಗಲೂ ನನಗೆ ಏನಾದರೂ ಕೊಡುತ್ತಲೇ ಇರುತ್ತೀಯಾ. ನನ್ನಿಂದ ನೀನು ಮತ್ತೇನನ್ನೋ ವಾಪಸ್ ಬಯಸುತ್ತೀಯೆನ್ನುವುದು ನನಗೆ ತಿಳಿದಿದೆ. ನೀನು ಅದನ್ನು ಪಡೆದಾಗ, ನೀನು ನನಗೆ ಈ ಚಿಕ್ಕಪುಟ್ಟ ಕೊಡುಗೆಗಳಿಗಿಂತ ಮತ್ತೇನಾದರೂ ಹೆಚ್ಚಿನದನ್ನು ಕೊಡಬೇಕಾಗುತ್ತದೆ."
ಹಮೀದ್‌ನನ್ನು ಹಠಾತ್ತನೆ ನಾಚಿಕೆ, ಅವಮಾನ ಆವರಿಸಿಕೊಂಡಿತು, ಅವನೇನೂ ಉತ್ತರಿಸಲಿಲ್ಲ. ಆ ಹುಡುಗಿ ಸಣ್ಣಗೆ ನಕ್ಕಳು ಹಾಗೂ ಅಲ್ಲಿಂದ ನಡೆದಳು. ದೂರದಿಂದ ಮತ್ತೊಮ್ಮೆ ತಿರುಗಿನೋಡಿದಳು, ಕತ್ತಲಲ್ಲಿ ಮರೆಯಾಗುವ ಮುನ್ನ ಹಲ್ಲು ಕಿರಿದು ನಕ್ಕಳು.



ಕಾಮೆಂಟ್‌ಗಳಿಲ್ಲ: