ಮಂಗಳವಾರ, ಅಕ್ಟೋಬರ್ 10, 2017

ಡಾರ್ವಿನ್ ಮತ್ತು ವ್ಯಂಗ್ಯಚಿತ್ರಗಳುಅಕ್ಟೋಬರ್ 2017ರ `ಸಂವಾದ'ದಲ್ಲಿ ಪ್ರಕಟವಾದ ನನ್ನ ಲೇಖನ
            ಚಾರ್ಲ್ಸ್ ಡಾರ್ವಿನ್ 27ನೇ ಡಿಸೆಂಬರ್ 1831ರಂದು ಇಂಗ್ಲೆಂಡಿನ ಪ್ಲೈಮೌತ್ ಬಂದರಿನಿಂದ ತನ್ನ ಯಾನ ಪ್ರಾರಂಭಿಸಿದಾಗ ಆತನಿಗೆ 22 ವರ್ಷ ವಯಸ್ಸು. 1831ರಿಂದ 1836ರರವರೆಗಿನ ತನ್ನ ಯಾನ ತನ್ನ ಬದುಕನ್ನಷ್ಟೇ ಅಲ್ಲ ಇಡೀ ಜಗತ್ತಿನ ಜನಮಾನಸದ ಚಿಂತನೆಯನ್ನೇ ಹಾಗೂ ಶತಶತಮಾನಗಳಿಂದ ಮಾನವನನ್ನು ಕಾಡುತ್ತಿದ್ದ ತನ್ನ ಮೂಲದ ಬಗೆಗಿನ ಜಿಜ್ಞಾಸೆಗೆ ಪರಿಹಾರ ಸೂಚಿಸುತ್ತೇನೆಂದು ಊಹಿಸಿರಲಿಲ್ಲ. ಡಾರ್ವಿನ್‍ನ ವಿಚಾರಗಳು ವಿಜ್ಞಾನವನ್ನು ಮತ್ತು ಜಗತ್ತನ್ನು ಮಾನವ ನೋಡುವ ದೃಷ್ಟಿಯನ್ನೇ ಶಾಶ್ವತವಾಗಿ ಬದಲಾಯಿಸಿಬಿಟ್ಟವು. ಡಾರ್ವಿನ್ನನ ಜೀವವಿಕಾಸ ಸಿದ್ಧಾಂತವನ್ನು ಸರಳವಾಗಿ ಹೇಳುವುದಾದರೆ ಇಂದು ಜಗತ್ತಿನಲ್ಲಿರುವ ಎಲ್ಲ ವೈವಿಧ್ಯಮಯ ಜೀವರಾಶಿಯೂ ಕ್ರಮೇಣ ಪೂರ್ವಜ ಜೀವಿಗಳಿಂದ ವಿಕಾಸ ಹೊಂದಿವೆ. ಈ ಪೂರ್ವಜ ಜೀವಿಗಳು ಬಹಳ ಹಿಂದೆ ಒಂದೇ ಆಗಿರುವ ಸಾಧ್ಯತೆ ಇದೆ. ಅಂದರೆ ಆಧುನಿಕ ಮಾನವ ಮತ್ತು ಚಿಂಪಾಂಜಿಗಳ ಪೂರ್ವಜ ಜೀವಿ ಒಂದೇ ಆಗಿತ್ತು. ಲಕ್ಷಾಂತರ ವರ್ಷಗಳ ಹಿಂದೆ ಅವು ಬೇರೆಯಾಗಿವೆ. ಅದೇ ರೀತಿ ನರವಾನರ ಜೀವಿಗಳೆಂದು ಕರೆಯಲ್ಪಡುವ ಗೊರಿಲ್ಲಾ, ಒರಂಗುಟಾನ್, ಬೊನೋಬೊ ಮುಂತಾದವುಗಳ ಹಾಗೂ ಮಾನವ ಮತ್ತು ಚಿಂಪಾಂಜಿಗಳ ಪೂರ್ವಜರು ಒಬ್ಬರೆ! ಹಾಗೆಯೇ ಪೂರ್ವಜರನ್ನು ಹಿಂದಕ್ಕೆ ಅರಸುತ್ತಾ ಹೋದರೆ ನಾಯಿ, ಬೆಕ್ಕುಗಳ, ಎಮ್ಮೆ ಹಸುಗಳ, ಹುಲಿ, ಸಿಂಹಗಳ ಪೂರ್ವಜರೂ ಒಬ್ಬರೇ ಆಗುತ್ತಾರೆ. ಸಸ್ಯರಾಶಿಯ ಕತೆಯೂ ಅಷ್ಟೆ. ಈ ರೀತಿಯ ಜೀವ ಪ್ರಭೇದಗಳ ವಿಕಾಸ ಮತ್ತು ಪ್ರಾಕೃತಿಕ ಆಯ್ಕೆಯಿಂದ ಇಂದು ಈ ಜಗತ್ತಿನಲ್ಲಿ ಇಷ್ಟೊಂದು ಜೀವ ವೈವಿಧ್ಯತೆ ಇದೆ. ಈಗಲೂ ಜೀವವಿಕಾಸ ಪ್ರಕ್ರಿಯೆ ನಡೆಯುತ್ತಲೇ ಇದೆ. ಮಾನವನೂ ವಿಕಾಸವಾಗುತ್ತಿದ್ದಾನೆ. ಆದರೆ ಅದು ಎಷ್ಟು ನಿಧಾನ ಪ್ರಕ್ರಿಯೆಯೆಂದರೆ ನಮ್ಮ ಅಯಸ್ಸು ಅದನ್ನು ಗ್ರಹಿಸಲು ತೀರಾ ಅಲ್ಪವಾದದ್ದು. ಡಾರ್ವಿನ್ ತನ್ನ ವಿಚಾರಗಳನ್ನು 1859ರ ತನ್ನ `ಆನ್ ದ ಆರಿಜಿನ್ ಆಫ್ ಸ್ಪೀಸಿಸ್’ (ಜೀವಪ್ರಭೇದಗಳ ಉಗಮ) ಕೃತಿಯಲ್ಲಿ ಪ್ರಕಟಿಸಿದ. 

1870ರ ಹೊತ್ತಿಗೆ ಡಾರ್ವಿನ್ ಹೆಚ್ಚು ಪ್ರಸಿದ್ಧ ವಿಜ್ಞಾನಿಯಾಗಿದ್ದ. ಯಾವುದೇ ವಿದ್ಯುನ್ಮಾನ ಮಾಧ್ಯಮಗಳಿಲ್ಲದ 1859ರಲ್ಲಿ ಪ್ರಕಟವಾದ ಡಾರ್ವಿನ್‍ನ ವಿಕಾಸವಾದ ಸಿದ್ಧಾಂತದಷ್ಟು ಕ್ಷಿಪ್ರವಾಗಿ ಮತ್ತಾವುದೇ ವೈಜ್ಞಾನಿಕ ಸಿದ್ಧಾಂತ ಅಥವಾ ವಿಚಾರ ಜಗತ್ತಿನಾದ್ಯಂತ ಅಷ್ಟು ಬೇಗ ಪ್ರಸಾರವಾಗಿರಲಿಲ್ಲ. ಲಂಡನ್ನಿನಲ್ಲಿ `ಆನ್ ದ ಆರಿಜಿನ್ ಆಫ್ ಸ್ಪೀಸೀಸ್’ ಪ್ರಕಟವಾದ ಹತ್ತು ವರ್ಷಗಳೊಳಗೆ ಇಂಗ್ಲೆಂಡ್, ಅಮೆರಿಕಾಗಳಲ್ಲಿ ವಿವಿಧ ಹದಿನಾರು ಆವೃತ್ತಿಗಳು ಹಾಗೂ ಜರ್ಮನ್, ಫ್ರೆಂಚ್, ಡಚ್, ಇಟಾಲಿಯನ್, ರಷಿಯನ್ ಮತ್ತು ಸ್ವೀಡಿಷ್ ಭಾಷೆಗಳ ಅನುವಾದಿತ ಆವೃತ್ತಿಗಳು ಪ್ರಕಟವಾದವು ಹಾಗೂ ಇನ್ನೂ ಹಲವಾರು ವಿವರಣೆ, ಟಿಪ್ಪಣಿ, ವಿಮರ್ಶೆಗಳ ಕೃತಿಗಳೂ ಸಹ ಪ್ರಕಟವಾದವು. ವಿಕಾಸವಾದದ ಕುರಿತು ವಿಜ್ಞಾನಿಗಳು ಹಾಗೂ ಬುದ್ಧಿಜೀವಿಗಳು ಮಾತ್ರವಲ್ಲದೆ ಜನಸಾಮಾನ್ಯರೂ ಸಹ ಚರ್ಚೆ ಮಾಡತೊಡಗಿದರು. ಡಾರ್ವಿನ್ನನ ವಿಕಾಸವಾದ ಅಲ್ಪಸಮಯದಲ್ಲಿಯೇ ಜಗತ್ತಿನಾದ್ಯಂತ ಕ್ಷಿಪ್ರವಾಗಿ ಪ್ರಸಾರವಾಗಿರುವ ಪ್ರಕ್ರಿಯೆಯ ಬಗೆಗೆ ಹಲವಾರು ಅಧ್ಯಯನಗಳು ನಡೆದಿವೆ. ಆದರೂ ಅವು ವೈಜ್ಞಾನಿಕ ಪತ್ರಿಕೆಗಳ ಹಾಗ ವೃತ್ತಿಪರ ಸಂಘಟನೆಗಳ ಗಡಿಯನ್ನು ದಾಟಿ ಹತ್ತೊಂಭತ್ತನೇ ಶತಮಾನದ ವೈವಿಧ್ಯಮಯ ಸಂಸ್ಕøತಿಯ ಜನಮಾನಸವನ್ನು ತಲುಪಿದ ವೈಜ್ಞಾನಿಕ ವಿಶ್ಲೇಷಣೆಯ ಪರಿಧಿಯೊಳಕ್ಕೆ ಬರದಿರುವ ಈ ಪ್ರಕ್ರಿಯೆಯ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿಲ್ಲವೆನ್ನುತ್ತಾರೆ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನ ಜಾನೆಟ್ ಬ್ರೌನ್. ಅಂತಹ ಅಧ್ಯಯನ ಡಾರ್ವಿನ್ನನ ವಿಕಾಸವಾದದಂತಹ ಕ್ಲಿಷ್ಟ ವೈಜ್ಞಾನಿಕ ಪರಿಕಲ್ಪನೆ ಹೇಗೆ ಸುಲಭವಾಗಿ ಜನಮಾನಸವನ್ನು ತಲುಪಿತು ಹಾಗೂ ಅದಕ್ಕೆ ಪೂರಕವಾಗಿ ಹೇಗೆ ಚರಿತ್ರೆಯ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ಸಂಸ್ಕೃತಿ ಮುಖಾಮುಖಿಯಾಯಿತು ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ ಎನ್ನುತ್ತಾರೆ ಅವರು. ಏಕೆಂದರೆ ಹತ್ತೊಂಭತ್ತನೇ ಶತಮಾನದ ಯೂರೋಪ್ ಮತ್ತು ಅಮೆರಿಕಾದ ಹಾಗೂ ಇತರ ದೇಶಗಳ ಜನರೂ ಸಹ ವಿಜ್ಞಾನದ ಮಾಹಿತಿ ಪಡೆದುಕೊಳ್ಳುತ್ತಿದ್ದುದು ಸಂಸ್ಕೃತಿಯ ಜನಪ್ರಿಯ ವಾಹಕಗಳಾಗಿದ್ದ ವಾರ್ತಾಪತ್ರಿಕೆಗಳು ಹಾಗೂ ಇತರ ಪತ್ರಿಕೆಗಳು ಅಥವಾ ಕೆಲವೊಮ್ಮೆ ಮ್ಯೂಸಿಯಂ ಮತ್ತು ಕಲಾಗ್ಯಾಲರಿಗಳ ಮೂಲಕ. 

ಡಾರ್ವಿನ್ನನ ವಿಕಾಸವಾದ ಸಿದ್ಧಾಂತವೂ ಇದಕ್ಕೆ ಹೊರತಾಗಿರಲಿಲ್ಲ. ಡಾರ್ವಿನ್ನನ ವಿಕಾಸವಾದ ಸಿದ್ಧಾಂತ ಪ್ರಕಟವಾದ ಕೂಡಲೇ `ಮಂಗನಿಂದಲೇ ಮಾನವ’ ವಿಕಾಸ ಹೊಂದಿದ್ದಾನೆ ಹಾಗೂ `ಮಂಗ ಮತ್ತು ಮಾನವ’ ಸಂಬಂಧಿಗಳು ಎಂದಷ್ಟೇ ಜನಸಾಮಾನ್ಯರು ಸರಳೀಕೃತವಾಗಿ ಆ ಸಿದ್ಧಾಂತವನ್ನು ಅರ್ಥಮಾಡಿಕೊಂಡರು. ಕೆಲವರು ದಂಗಾದರೆ, ಇನ್ನು ಕೆಲವರು ಮಾನವನನ್ನು ಮಂಗನಂತಹ ಪ್ರಾಣಿಯ ಹಂತಕ್ಕೆ ನಿಕೃಷ್ಟಗೊಳಿಸಿದುದರಿಂದ ಆ ಸಿದ್ಧಾಂತವನ್ನು ಕಟುವಾಗಿ ವಿರೋಧಿಸಿದರು. ಇದನ್ನು ಯಶಸ್ವಿಯಾಗಿ ಬಳಸಿಕೊಂಡವರೆಂದರೆ ವ್ಯಂಗ್ಯಚಿತ್ರಕಾರರು. ಆ ಕಾಲದಲ್ಲಿ ಡಾರ್ವಿನ್‍ನಷ್ಟು ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿಕೊಂಡ ಮತ್ತೊಬ್ಬ ವಿಜ್ಞಾನಿಯಿಲ್ಲ. ವ್ಯಂಗ್ಯಚಿತ್ರಗಳು ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ ಹಾಗೂ ಸಂಕೀರ್ಣ ವಿಚಾರಗಳನ್ನು ಸರಳವಾಗಿ ಬಿಂಬಿಸುತ್ತವೆ. ಆ ಸಮಯದಲ್ಲಾಗಲೇ ವಿಕ್ಟೋರಿಯನ್ ಇಂಗ್ಲೆಂಡಿನಲ್ಲಿ ವ್ಯಂಗ್ಯಚಿತ್ರಕಾರರು ತಮ್ಮ ವ್ಯಂಗ್ಯಚಿತ್ರಗಳು ಮತ್ತು ವ್ಯಂಗ್ಯ ಭಾವಚಿತ್ರಗಳಿಂದ ಮುಲಾಜಿಲ್ಲದೆ ರಾಜಕಾರಣಿಗಳನ್ನು, ರಾಜಮನೆತನದವರನ್ನು, ಹಾಗೂ ಇತರ ಜನಪ್ರಿಯ ವ್ಯಕ್ತಿಗಳನ್ನು ಲೇವಡಿ ಮಾಡುವ ಕಲೆಯನ್ನು ರೂಢಿಸಿಕೊಂಡಿದ್ದರು. ಅವರ ವ್ಯಂಗ್ಯದ ಮೂಲ ‘ವಿಕ್ಟೋರಿಯನ್ ನೈತಿಕತೆ’ಯನ್ನು ಎತ್ತಿಹಿಡಿಯುವುದಾಗಿತ್ತು. ಹಾಗಾಗಿ ಅವರಿಗೆ ಮಾನವ ಸಹ ಒಬ್ಬ ಪ್ರಾಣಿ ಅದರಲ್ಲೂ ಮಂಗಗಳು ಅವನ ನೆಂಟರು, ಅಷ್ಟಲ್ಲದೆ ಮಂಗಗಳ ಮತ್ತು ಮಾನವನ ಪೂರ್ವಜರು ಒಬ್ಬರೇ ಎನ್ನುವ ಡಾರ್ವಿನ್ನನ ಸಿದ್ಧಾಂತ ಬ್ರಿಟನ್ನಿನ ವ್ಯಂಗ್ಯಚಿತ್ರಕಾರರಿಗೆ ಹಬ್ಬದಂತಾಗಿತ್ತು ಅಥವಾ ಈಗ ಭಾರತದಲ್ಲಿ ನೋಟು ರದ್ದು ಭಾರತದ ವ್ಯಂಗ್ಯಚಿತ್ರಕಾರರಿಗೆ `ಅಚ್ಚೇ ದಿನ್’ ತಂದಿರುವಂತೆ ಆಗಲೂ ಆಗಿತ್ತೆನ್ನಬಹುದು. ಮನುಷ್ಯನೊಳಗೆ ಒಂದು ಪ್ರಾಣಿಯಿದೆ ಹಾಗೂ ರೂಪಾಂತರದ ಮೂಲಕ ಜೀವವಿಕಾಸ ಎನ್ನುವ ಆಗಿನ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಿಗೆ ವ್ಯಂಗ್ಯಚಿತ್ರಕಾರರು ವಿಡಂಬನೆಯ ಚಿತ್ರಣ ನೀಡತೊಡಗಿದರು.

1965ರಿಂದ 1882ರ ಅವಧಿಯಲ್ಲಿ, ಅಂದರೆ ಡಾರ್ವಿನ್ನನ ಜೀವಿತಾವಧಿಯ ಕೊನೆಯ ಸುಮಾರು ಎರಡು ದಶಕಗಳ ಅವಧಿಯಲ್ಲಿ ವಿದೇಶದಲ್ಲಿ ಪ್ರಕಟವಾಗಿರುವುದನ್ನು ಹೊರತುಪಡಿಸಿದರೆ ಬ್ರಿಟನ್ನಿನಲ್ಲಿ ಡಾರ್ವಿನ್ ಮತ್ತು ವಿಕಾಸವಾದದ ಕುರಿತಂತೆ ಸುಮಾರು ಮುವ್ವತ್ತು ವ್ಯಂಗ್ಯಚಿತ್ರಗಳು ಪ್ರಕಟವಾಗಿದ್ದವು ಹಾಗೂ ಬಹುಶಃ ಆ ಸಮಯದಲ್ಲಿ ಯಾವುದೇ ವಿಜ್ಞಾನದ ಪರಿಕಲ್ಪನೆಯ ಕುರಿತಂತೆ ಅಷ್ಟೊಂದು ವ್ಯಂಗ್ಯಚಿತ್ರಗಳು ಪ್ರಕಟವಾಗಿರಲಿಲ್ಲ. ಡಾರ್ವಿನ್ನನ ವಿಕಾಸವಾದದ ಕುರಿತಂತೆ ‘ಪಂಚ್’ ಪತ್ರಿಕೆ ವಿಶೇಷ ಆಸಕ್ತಿ ವಹಿಸಿತು. ವಿಜ್ಞಾನ ಮತ್ತು ವಿಜ್ಞಾನಿಯನ್ನು ಲೇವಡಿ ಮಾಡುತ್ತಲೇ `ಮಂಗನಿಂದ ಮಾನವ’ನೆಂಬ ಕ್ರಾಂತಿಕಾರಿ ವಿಚಾರವನ್ನು ಕ್ರಮೇಣ ಜನರೆಲ್ಲಾ ಸ್ವೀಕರಿಸುವಂತೆ ಬಹುಶಃ ‘ಪಂಚ್’ನ ವ್ಯಂಗ್ಯಚಿತ್ರಕಾರರು ಮಾಡಿದ್ದಾರೆ. ಡಾರ್ವಿನ್ನನ ವಿಕಾಸವಾದ ಸಿದ್ಧಾಂತದಿಂತ ಪ್ರೇರಣೆಗೊಂಡ `ಪಂಚ್’ ಪತ್ರಿಕೆ ತನ್ನ 1861ರ ಕ್ರಿಸ್ಮಸ್ ವಿಶೇಷಾಂಕವನ್ನು ಗೊರಿಲ್ಲಾಗೆ `ಅರ್ಪಣೆ’ ಮಾಡಿತು.
`ನಾನೊಬ್ಬ ಮನುಷ್ಯ ಹಾಗೂ ಸಹೋದರನೆ?’ 1861ರ `ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ.  
`ನಾನೊಬ್ಬ ಮನುಷ್ಯ ಹಾಗೂ ಸಹೋದರನೆ?’ ಎಂದು ಒಂದು ಗೊರಿಲ್ಲಾ ಮೇ, 1861ರ `ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಕೇಳುತ್ತಿತ್ತು. ಆಗ ಬಹುಜನರ ಪ್ರಶ್ನೆಯೂ ಅದೇ ಆಗಿತ್ತು. ಮತ್ತೊಂದರಲ್ಲಿ ಒಂದು ಗೊರಿಲ್ಲಾ ಸೂಟು ಬೂಟು ಧರಿಸಿ ಒಂದು ಮೇಲ್ದರ್ಜೆಯ ಜನರ ಪಾರ್ಟಿಯೊಂದಕ್ಕೆ ಬರುತ್ತಿರುವ ವ್ಯಂಗ್ಯಚಿತ್ರವೂ ಪ್ರಕಟವಾಯಿತು (ಪಂಚ್, 1861 ಮೇ 25). 1863ರಲ್ಲಿ ಚಾಲ್ರ್ಸ್ ಬೆನೆಟ್ ಎಂಬ ವ್ಯಂಗ್ಯಚಿತ್ರಕಾರ ಆವರ್ತನ ರೀತಿಯ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದ. ಅದರಲ್ಲಿ ನಿರ್ಜೀವ ವಸ್ತುಗಳು ಸಹ ಜೀವಂತ ವಸ್ತುಗಳಾಗಿ ರೂಪಾಂತರ (ವಿಕಾಸ?) ಹೊಂದುವುದಾಗಿ ತೋರಿಸಿತ್ತು. ವಿಕಾಸವಾದವನ್ನು ಈ ರೀತಿಯಾಗಿ ಅರ್ಥೈಸಿಕೊಂಡ ಹಲವಾರು ವ್ಯಂಗ್ಯಚಿತ್ರಗಳೂ ಪ್ರಕಟವಾದುವು. ಆದರೆ ಡಾರ್ವಿನ್ ತನ್ನ `ಆರಿಜಿನ್ ಆಫ್ ಸ್ಪೀಸಿಸ್’ನಲ್ಲಿ ಜೀವ ವಿಕಾಸ ಏಕರೂಪಾತ್ಮಕ ಅಥವಾ ಆವರ್ತನ ರೀತಿಯದ್ದಲ್ಲ ಎನ್ನುವುದನ್ನು ವಿವರಿಸಲು ಬಹಳಷ್ಟು ಪ್ರಯತ್ನಿಸಿದ್ದಾನೆ. 

ಸೂಟು ಬೂಟು ಧರಿಸಿ ಒಂದು ಮೇಲ್ದರ್ಜೆಯ ಜನರ ಪಾರ್ಟಿಯೊಂದಕ್ಕೆ ಬರುತ್ತಿರುವ ಗೊರಿಲ್ಲಾ, ಪಂಚ್, 1861ರ ಮೇ 25.

 ಬ್ರಿಟಿಷ್ ಪತ್ರಿಕೆ `ಫನ್’ ಸಹ ಡಾರ್ವಿನ್ನನ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತು. ವಿಕ್ಟೋರಿಯಾ ರಾಣಿಯ ಮಗಳು ರಾಜಕುಮಾರಿ ಲೂಯಿಸ್ 1874ರಲ್ಲಿ ಮದುವೆಯಾದಾಗ ಮದುವೆಯ ದಿಬ್ಬಣದ ಪ್ರಖ್ಯಾತ ಅತಿಥಿಗಳಲ್ಲಿ `ಡಾರ್ವಿನ್ ಮತ್ತು ನಮ್ಮ ಪ್ರತಿಷ್ಠಿತ ಪೂರ್ವಜ’ ಡಾರ್ವಿನ್ ಮಂಗವೊಂದರ ಕೈ ಹಿಡಿದು ನಡೆಸಿಕೊಂಡು ಬರುತ್ತಿರುವ ವ್ಯಂಗ್ಯಚಿತ್ರವಾಗಿತ್ತು ಅದು. 
 
ಲಂಡನ್ನಿನ ಆವೃತ್ತಿಯ 1874ರ ಫೆಬ್ರವರಿ 18ರ ಸಂಚಿಕೆಯ `ಫಿಗಾರೊ’ ಪತ್ರಿಕೆಯಲ್ಲಿ ಮಂಗನಂತೆಯೇ ಇರುವ `ಪ್ರೊಫೆಸರ್ ಡಾರ್ವಿನ್’ ಮಂಗವೊಂದಕ್ಕೆ ಕೈಗನ್ನಡಿ ನೀಡುತ್ತಾ ತನ್ನ ಭವಿಷ್ಯದ ಬಗೆಗೆ ಚಿಂತಿಸುವಂತೆ ತಿಳಿಸುತ್ತಿರುವ ವ್ಯಂಗ್ಯಚಿತ್ರ.
 
ಲಂಡನ್ನಿನ ಆವೃತ್ತಿಯ 1874ರ ಫೆಬ್ರವರಿ 18ರ ಸಂಚಿಕೆಯ `ಫಿಗಾರೊ’ ಪತ್ರಿಕೆಯಲ್ಲಿ ಮಂಗನಂತೆಯೇ ಇರುವ `ಪ್ರೊಫೆಸರ್ ಡಾರ್ವಿನ್’ ಮಂಗವೊಂದಕ್ಕೆ ಕೈಗನ್ನಡಿ ನೀಡುತ್ತಾ ತನ್ನ ಭವಿಷ್ಯದ ಬಗೆಗೆ ಚಿಂತಿಸುವಂತೆ ತಿಳಿಸುತ್ತಿರುವ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿತು. 1871ರ ನಂತರ ಸ್ವತಃ ಡಾರ್ವಿನ್ನನನ್ನು ಮಂಗನಂತೆ ತೋರಿಸುವ ವ್ಯಂಗ್ಯಚಿತ್ರಗಳು ಪ್ರಕಟವಾಗತೊಡಗಿದವು. ಇದರ ಜೊತೆಗೆ ಬೋಳುತಲೆಯ ಉದ್ದನೆ ದಾಡಿಯ ಡಾರ್ವಿನ್ನನ ಮುಖ ವ್ಯಂಗ್ಯಚಿತ್ರಕಾರರಿಗೆ ಹೇಳಿ ಮಾಡಿಸಿದಂತಿತ್ತು. ಇವುಗಳಲ್ಲಿ 1871ರ ದ ಹಾರ್ನೆಟ್ ಪತ್ರಿಕೆಯಲ್ಲಿ ಪ್ರಕಟವಾದ ಡಾರ್ವಿನ್ನನ ವ್ಯಂಗ್ಯ ಭಾವಚಿತ್ರ ಅತ್ಯಂತ ಜನಪ್ರಿಯವಾದುದು. ಈ ಎಲ್ಲ ವ್ಯಂಗ್ಯಚಿತ್ರಗಳು ಮಂಗನಿಂದಲೇ ಮಾನವ ಬಂದಿದ್ದಾನೆ ಎನ್ನುವ ವಿಚಾರವನ್ನು ಲೇವಡಿ ಮಾಡುವಂಥದ್ದಾಗಿದ್ದವು. 
 
ನಿರ್ಜೀವ ವಸ್ತುಗಳು ಸಹ ಜೀವಂತ ವಸ್ತುಗಳಾಗಿ ರೂಪಾಂತರ ಹೊಂದುವುದಾಗಿ ತೋರಿಸಿರುವ ಚಾರ್ಲ್ಸ್ ಬೆನೆಟ್ ವ್ಯಂಗ್ಯಚಿತ್ರ.
 
ಡಾರ್ವಿನ್ ತನ್ನ ಕೊನೆಯ ಪುಸ್ತಕವಾದ ಎರೆಹುಳುಗಳ ಕುರಿತಾದ `ವಮ್ರ್ಸ್’ ಪ್ರಕಟಿಸಿದ ಕೂಡಲೇ ಎಡ್ವರ್ಡ್ ಲಿನ್ಲಿ ಸ್ಯಾಂಬರ್ನ್ `ಮನುಷ್ಯ ಕೇವಲ ಹುಳು ಮಾತ್ರ’ ಎನ್ನುವ ವ್ಯಂಗ್ಯಚಿತ್ರ ಬರೆದ. ಅದು 6ನೇ ಡಿಸೆಂಬರ್ 1881ರ ‘ಪಂಚ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರಲ್ಲಿ ‘ಅಸ್ತವ್ಯಸ್ತತೆ’ಯಿಂದ (Chaos) ಎರೆಹುಳು ವಿಕಾಸವಾಗಿ ಅದು ಕ್ರಮೇಣ ಮಂಗವಾಗಿ, ನಂತರ ಆಧುನಿಕ ಮಾನವನಾಗಿ ಕೊನೆಗೆ ಡಾರ್ವಿನ್ ಆಗಿ ವಿಕಾಸಹೊಂದಿರುವುದಾಗಿ ಚಿತ್ರಿಸಲಾಗಿತ್ತು.


 
ಬೋಳುತಲೆಯ ಉದ್ದನೆ ದಾಡಿಯ ಡಾರ್ವಿನ್ನನ ಮುಖ ವ್ಯಂಗ್ಯಚಿತ್ರಕಾರರಿಗೆ ಹೇಳಿ ಮಾಡಿಸಿದಂತಿತ್ತು. ಇವುಗಳಲ್ಲಿ 1871ರ ದ ಹಾರ್ನೆಟ್ ಪತ್ರಿಕೆಯಲ್ಲಿ ಪ್ರಕಟವಾದ ಡಾರ್ವಿನ್ನನ ವ್ಯಂಗ್ಯ ಭಾವಚಿತ್ರ ಅತ್ಯಂತ ಜನಪ್ರಿಯವಾದುದು.
 
ಡಾರ್ವಿನ್ ಅತ್ಯಂತ ಸಂಕೋಚದ ವ್ಯಕ್ತಿಯಾಗಿದ್ದ. ಆದರೂ ತನ್ನನ್ನು ಹಾಗೂ ತನ್ನ ಸಿದ್ಧಾಂತವನ್ನ ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳಿಂದ ಬೇಸರಗೊಳ್ಳಲಿಲ್ಲ, ಅಸಹನೆ ತೋರಲಿಲ್ಲ. ಬದಲಿಗೆ ಆ ಪತ್ರಿಕೆಗಳನ್ನು ಡಾರ್ವಿನ್ ಸಂಗ್ರಹಿಸುತ್ತಿದ್ದ. ಒಮ್ಮೆ 1872ರಲ್ಲಿ ಗೆಳೆಯ ಭೂವಿಜ್ಞಾನಿ ಜೆಮ್ಸ್ ಹೇಗ್‍ರೊಂದಿಗೆ ಮಾತನಾಡುವಾಗ, ‘ಹೋ, ಪಂಚ್‍ನಲ್ಲಿ ಮತ್ತೊಂದು ಪ್ರಕಟವಾಗಿದೆಯೆ? ನಾಳೆ ನನಗದು ದೊರಕಬಹುದು. ನಾನು ಅವೆಲ್ಲವನ್ನೂ ಸಂಗ್ರಹಿಸುತ್ತಿದ್ದೇನೆ. ನನ್ನನ್ನು ಹಾರ್ನೆಟ್ ಪತ್ರಿಕೆಯಲ್ಲಿ ನೋಡಿದೆಯಾ?’ ಎಂದು ಡಾರ್ವಿನ್ ಕೇಳಿದ್ದರು. ಹೇಗ್ ಇಲ್ಲವೆಂದಾಗ, ಡಾರ್ವಿನ್ ಅದನ್ನು ಕೋಣೆಯಿಂದ ತರಲು ತನ್ನ ಮಗನಿಗೆ ತಿಳಿಸಿ ಅದನ್ನು ತೋರಿಸಿದರು. ಅದರಲ್ಲಿ ಡಾರ್ವಿನ್ ತಲೆ ಹೊಂದಿರುವ ಗೊರಿಲ್ಲಾದ ವ್ಯಂಗ್ಯಚಿತ್ರವೊಂದಿತ್ತು. ಡಾರ್ವಿನ್ ಅದನ್ನು ಸಂತೋಷದಿಂದಲೇ ತೋರಿಸುತ್ತಾ, `ತಲೆಯನ್ನು ಚೆನ್ನಾಗಿ ರಚಿಸಿದ್ದಾರೆ, ಆದರೆ ಗೊರಿಲ್ಲಾ ಅಷ್ಟು ಚೆನ್ನಾಗಿಲ್ಲ, ತುಂಬಾ ದೊಡ್ಡ ಎದೆ, ಗೊರಿಲ್ಲಾಗೆ ಹಾಗಿರುವುದಿಲ್ಲ’ ಎಂದರಂತೆ. ಅದೇ ‘ಹಾರ್ನೆಟ್’ ಪತ್ರಿಕೆಯ 1871ರ ಮಾರ್ಚ್ ಸಂಚಿಕೆಯಲ್ಲಿ ಡಾರ್ವಿನ್ನನನ್ನು ಒರಂಗುಟಾನ್ ರೀತಿಯಲ್ಲಿ ಚಿತ್ರಿಸಿ “Venerable Orang-Outang: A contribution to Unnatural History” ಎಂಬ ಶೀರ್ಷಿಕೆಯಡಿ ಪ್ರಕಟಿಸಿತ್ತು. ಮಂಗ ಮತ್ತು ಮರ ವಿಕಾಸವಾದವನ್ನು ಪ್ರತಿನಿಧಿಸುವ ಸಾರ್ವತ್ರಿಕ ವ್ಯಂಗ್ಯಚಿತ್ರಗಳಾದುವು. 30ನೇ ನವೆಂಬರ್ 1872ರ `ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ ಮರದ ಮೇಲಿನ ಮಂಗವೊಂದು ಡಾರ್ವಿನ್ನನ `ಆರಿಜಿನ್ ಆಫ್ ಸ್ಪೀಸಿಸ್’ ಪುಸ್ತಕ ಓದುತ್ತಿತ್ತು. ಮಂಗನಂತೆ ರೋಮಭರಿತ ಡಾರ್ವಿನ್ ಮರದ ಮೇಲೆ ಕುಳಿತಿರುವ ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾದುವು. ಇಲ್ಲಿ ವಿಶೇಷವಾದದ್ದೇನೆಂದರೆ ಜೀವವಿಕಾಸ ಸಿದ್ಧಾಂತಕ್ಕೆ ಇನ್ನೂ ಹಲವಾರು ವಿಜ್ಞಾನಿಗಳ- ಆಲ್ಫ್ರೆಡ್ ರಸೆಲ್ ವಾಲೇಸ್, ಹಕ್ಸ್ಲೀ, ಚಾರ್ಲ್ಸ್ ಲಯೆಲ್, ಹರ್ಬರ್ಟ್ ಸ್ಪೆನ್ಸರ್ ಮುಂತಾದವರ ಕೊಡುಗೆ ಇದ್ದರೂ ಸಹ ಜೀವವಿಕಾಸ ಸಿದ್ಧಾಂತ ಪ್ರತಿಪಾದನೆಯಲ್ಲಿ ಡಾರ್ವಿನ್ ಹೆಚ್ಚು ಜನಪ್ರಿಯನಾಗಿದ್ದುದರಿಂದ ಕೇವಲ ಡಾರ್ವಿನ್ನನ ಹೆಸರನ್ನು ಮಾತ್ರ ವ್ಯಂಗ್ಯಚಿತ್ರಕಾರರು ತಳಕು ಹಾಕಿದರು.

ಹತ್ತೊಂಭತ್ತನೆಯ ಶತಮಾನದ ಎರಡು ಮೂರು ದಶಕಗಳಲ್ಲಿ ವ್ಯಂಗ್ಯ ಭಾವಚಿತ್ರಗಳನ್ನು (Caricatures) ರಚಿಸುವುದು ಸಹ ಹೆಚ್ಚು ಜನಪ್ರಿಯವಾಗಿತ್ತು. ಆಗಿನ ಸಾಹಿತಿ, ಕಲಾವಿದರ, ತತ್ವಜ್ಞಾನಿಗಳ ಜೊತೆಗೆ ಡಾರ್ವಿನ್ನನ ಹಲವಾರು ವ್ಯಂಗ್ಯ ಭಾವಚಿತ್ರಗಳು ಸಹ ‘ಇಲ್ಲಸ್ಟ್ರೇಟೆಡ್ ಲಂಡನ್ ನ್ಯೂಸ್’ ಪತ್ರಿಕೆಯಲ್ಲಿ (1871), ‘ರೆಪ್ರಸೆಂಟೆಟಿವ್ ಮೆನ್ ಆಫ್ ಲಿಟರೇಚರ್, ಸೈನ್ಸ್ ಅಂಡ್ ಆರ್ಟ್’ ಪುಸ್ತಕದಲ್ಲಿ (1868), ‘ವ್ಯಾನಿಟಿ ಫೇರ್’ (1860) ಪತ್ರಿಕೆಯಲ್ಲಿ, ‘ಕಾರ್ಟೂನ್ ಪೋಟ್ರ್ರೇಟ್ಸ್ ಆಫ್ ದ ಮೆನ್ ಆಫ್ ದ ಡೇ’ ಪುಸ್ತಕ (1873) ಮುಂತಾದವುಗಳಲ್ಲಿ ಪ್ರಕಟವಾದುವು.
 


    ಪ್ರಖ್ಯಾತ ಅಮೆರಿಕನ್ ವ್ಯಂಗ್ಯಚಿತ್ರಕಾರ ಥಾಮಸ್ ನ್ಯಾಸ್ಟ್ 19ನೇ ಆಗಸ್ಟ್ 1871ರ ‘ಹಾರ್ಪರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ ವ್ಯಂಗ್ಯಚಿತ್ರವೊಂದರಲ್ಲಿ ಕಣ್ಣೀರಿಡುತ್ತಿರುವ ಒಂದು ಗೊರಿಲ್ಲಾ ಡಾರ್ವಿನ್ನನ ಕಡೆಗೆ ಕೈ ತೋರಿ, `ಆತ ನನ್ನ ಪೀಳಿಗೆಯ ಮೇಲೆ ಹಕ್ಕು ಸಾಧಿಸುತ್ತಿದ್ದಾನೆ. ಆತ ನನ್ನ ವಂಶದವನೆಂದು ಹೇಳುತ್ತಿದ್ದಾನೆ’ ಎಂದು ಗೋಳಿಡುತ್ತಿದೆ.
 
ಬ್ರಿಟನ್ನಿನ ಹೊರಗೆ ವ್ಯಂಗ್ಯಚಿತ್ರಕಾರರಾದ ಆಂಡ್ರೆ ಗಿಲ್ (ಲ ಚಾರಿವರಿ), ವಿಲ್‍ಹೆಲ್ಮ್ ಬುಶ್ (ಫ್ಲಿಜೆಂಡೆ ಬ್ಲಾಟರ್) ಮತ್ತು ಥಾಮಸ್ ನ್ಯಾಸ್ಟ್ (ಹಾರ್ಪರ್ಸ್ ವೀಕ್ಲಿ) ಡಾರ್ವಿನ್ನನ ವ್ಯಂಗ್ಯಚಿತ್ರಗಳನ್ನು ಬರೆದರು. ಅಮೆರಿಕಾದ ಪತ್ರಿಕೆಗಳು ಡಾರ್ವಿನ್ನನ ‘ದ ಡಿಸೆಂಟ್ ಆಫ್ ಮ್ಯಾನ್’ ಕೃತಿಯ ವಿಮರ್ಶೆ ಮಾಡುತ್ತಿರುವ ದಿನಗಳಲ್ಲಿ ಪ್ರಖ್ಯಾತ ಅಮೆರಿಕನ್ ವ್ಯಂಗ್ಯಚಿತ್ರಕಾರ ಥಾಮಸ್ ನ್ಯಾಸ್ಟ್ 19ನೇ ಆಗಸ್ಟ್ 1871ರ ‘ಹಾರ್ಪರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ ವ್ಯಂಗ್ಯಚಿತ್ರವೊಂದರಲ್ಲಿ ಕಣ್ಣೀರಿಡುತ್ತಿರುವ ಒಂದು ಗೊರಿಲ್ಲಾ ಡಾರ್ವಿನ್ನನ ಕಡೆಗೆ ಕೈ ತೋರಿ, `ಆತ ನನ್ನ ಪೀಳಿಗೆಯ ಮೇಲೆ ಹಕ್ಕು ಸಾಧಿಸುತ್ತಿದ್ದಾನೆ. ಆತ ನನ್ನ ವಂಶದವನೆಂದು ಹೇಳುತ್ತಿದ್ದಾನೆ’ ಎಂದು ಗೋಳಿಡುತ್ತಿರುವಂತಿದೆ. ಅದಕ್ಕೆ ಮತ್ತೊಬ್ಬ ವ್ಯಕ್ತಿ, `ಡಾರ್ವಿನ್, ನೀನು ಅದನ್ನು ಈ ರೀತಿ ಅವಮಾನಗೊಳಿಸಬಹುದೆ?’ ಎಂದು ಕೇಳುತ್ತಿದ್ದಾನೆ. ‘ಫಿಗಾರೊ’ ಪತ್ರಿಕೆಯಲ್ಲಿನ ವ್ಯಂಗ್ಯಚಿತ್ರದಲ್ಲಿ ಮಂಗನಂತಿರುವ ಡಾರ್ವಿನ್ ಮರದ ಮೇಲೆ ಕೂತು ‘ಒಂದು ಡಾರ್ವಿನ್ ಸಿದ್ಧಾಂತ’ ಪುಸ್ತಕ ಓದುತ್ತಿತ್ತು. ‘ಲ ಪತಿ ಲ್ಯೂನ್’ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ವಿಜ್ಞಾನ ಅಥವಾ ಜ್ಞಾನದ ಮರಕ್ಕೆ ಬಾಲಹೊಂದಿರುವ ಮಂಗ ಡಾರ್ವಿನ್ ಜೋತುಬಿದ್ದಿದ್ದ.
 
    ಫ್ರಾನ್ಸ್ ನ `ಲ ಪತಿ ಲ್ಯೂನ್'ನಲ್ಲಿ ಪ್ರಕಟವಾದ ವಿಜ್ಞಾನ ಅಥವಾ ಜ್ಞಾನದ ಮರಕ್ಕೆ ಮಂಗನಂತಿರುವ ಡಾರ್ವಿನ್ ಜೋತುಬಿದ್ದಿರುವ ಆಂಡ್ರೆ ಗಿಲ್ ರವರ ರಚನೆಯ ವ್ಯಂಗ್ಯಚಿತ್ರ

 


ಫ್ರೆಂಚ್ ವ್ಯಂಗ್ಯಚಿತ್ರಕಾರ ಆಂಡ್ರೆ ಗಿಲ್ ಪ್ಯಾರಿಸ್ಸಿನ ಆಗಸ್ಟ್ 1878ರ `ಲ ಪತಿ ಲ್ಯೂನ್’ ಪತ್ರಿಕೆಯಲ್ಲಿ ಪ್ರಕಟಿಸಿದ `ಅಪನಂಬಿಕೆ’ ಮತ್ತು `ಮೌಢ್ಯತೆ’ಗಳ ವೃತ್ತಗಳನ್ನು ಭೇದಿಸಿ ಹಾರುತ್ತಿರುವ ಡಾರ್ವಿನ್ ವ್ಯಂಗ್ಯಚಿತ್ರ.

ಡಾರ್ವಿನ್ನನ ಸಿದ್ಧಾಂತವನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳಿಗೆ ವಿರುದ್ಧವಾಗಿ ಫ್ರೆಂಚ್ ವ್ಯಂಗ್ಯಚಿತ್ರಕಾರ ಆಂಡ್ರೆ ಗಿಲ್ ಪ್ಯಾರಿಸ್ಸಿನ ಆಗಸ್ಟ್ 1878ರ ಅದೇ ಪತ್ರಿಕೆ `ಲ ಪತಿ ಲ್ಯೂನ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದ. ಅದರಲ್ಲಿ ಡಾರ್ವಿನ್‍ನನ್ನು ಸರ್ಕಸ್ಸಿನ ಮಂಗನಂತೆ ಚಿತ್ರಿಸಿದ್ದರೂ ಆತ `ಅಪನಂಬಿಕೆ’ ಮತ್ತು `ಮೌಢ್ಯತೆ’ಗಳ ವೃತ್ತಗಳನ್ನು ಭೇದಿಸಿ ಹಾರುತ್ತಿದ್ದ ಹಾಗೂ ಆ ವೃತ್ತಗಳನ್ನು ಆಗಿನ ಫ್ರಾನ್ಸ್‍ನ ವಿಜ್ಞಾನ ಪ್ರತಿಪಾದಕ ಎಮಿಲಿ ಲಿಟ್ರೆ ಹಿಡಿದಿದ್ದ. ಆ ವ್ಯಂಗ್ಯಚಿತ್ರದ ಸಂದೇಶ ಕ್ಯಾಥೋಲಿಕ್ ಮೌಢ್ಯತೆಯನ್ನು ಭೇದಿಸುವುದಾಗಿತ್ತು. ಆದರೆ ವಿಪರ್ಯಾಸವೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದಲ್ಲಿ ಮಹತ್ಸಾಧನೆ ಮಾಡಿರುವ ಉತ್ತರ ಅಮೆರಿಕ ಇಂದಿಗೂ ಡಾರ್ವಿನ್ನನ ವಿಕಾಸವಾದ ಮತ್ತು ಕ್ರೈಸ್ತ ಧಾರ್ಮಿಕ ಸೃಷ್ಟಿವಾದದ ನಡುವೆ ತೊಳಲಾಡುತ್ತಿದೆ. ಇಂದಿಗೂ ಶಾಲೆಗಳಲ್ಲಿ ವಿಕಾಸವಾದವನ್ನು ಬೋಧಿಸಬಾರದು ಹಾಗೂ ವಿಕಾಸವಾದ ಸುಳ್ಳು, ಬದಲಿಗೆ ಸೃಷ್ಟಿವಾದವನ್ನು ಬೋಧಿಸಬೇಕೆಂಬ ದೊಡ್ಡ ಹೋರಾಟವೇ ನಡೆಯುತ್ತಿದೆ. ಎಷ್ಟೋ ಜನ ಗಣನೀಯ ಸಾಧನೆ ಮಾಡಿರುವ ವಿಜ್ಞಾನಿಗಳು ಸಹ ಸೃಷ್ಟಿವಾದವನ್ನು ಬೆಂಬಲಿಸುತ್ತಾರೆ.

ಏನೇ ಆದರೂ ಹತ್ತೊಂಭತ್ತನೇ ಶತಮಾನದಲ್ಲಿ ಡಾರ್ವಿನ್ನನ ಜೀವವಿಕಾಸ ಸಿದ್ಧಾಂತವನ್ನು ಅತ್ಯಂತ ಜನಪ್ರಿಯಗೊಳಿಸುವಲ್ಲಿ, ಆಗಿನ ಜನಸಮುದಾಯದ ವಿಚಾರಗಳನ್ನು ರೂಪಿಸುವಲ್ಲಿ ಈ ವ್ಯಂಗ್ಯಚಿತ್ರಗಳು ಮಹತ್ತರ ಪಾತ್ರ ವಹಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಕ್ಷಿಷ್ಟ ವೈಜ್ಞಾನಿಕ ಪರಿಕಲ್ಪನೆಯಾದ ಜೀವ ವಿಕಾಸವಾದ ವಿಜ್ಞಾನದ ಪುಸ್ತಕಗಳು ಹಾಗೂ ಪತ್ರಿಕೆಗಳ ಜೊತೆಗೆ ಜನಪ್ರಿಯ ದಿನಪತ್ರಿಕೆ, ವಾರಪತ್ರಿಕೆ ಹಾಗೂ ವ್ಯಂಗ್ಯ, ವಿಡಂಬನೆಗೆಂದೇ ಮೀಸಲಾದ ಪತ್ರಿಕೆಗಳಲ್ಲಿ ಜನಸಾಮನ್ಯರೂ ಓದುತ್ತಿದ್ದ, ಓದಿ ಮನರಂಜನೆ ಪಡೆಯುತ್ತಿದ್ದಂತಹ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳ ರೂಪದಲ್ಲಿ ಪ್ರಕಟವಾಗಿ ಜನಸಮುದಾಯವನ್ನು ಸುಲಭವಾಗಿ ತಲುಪಿತು. ಇಲ್ಲದಿದ್ದಲ್ಲಿ ಅದು ವಿಜ್ಞಾನಿಗಳ, ವಿದ್ವಾಂಸರ ಚರ್ಚೆಯ ವಿಷಯವಾಗಿ ಮಾತ್ರ ಉಳಿದುಬಿಡುತ್ತಿತ್ತು. ಆ ಪರಿಕಲ್ಪನೆಗಳು ಸಾಮಾನ್ಯ ಜನರನ್ನು ತಲುಪಲು ಬಹಳಷ್ಟು ಸಮಯ ಬೇಕಾಗುತ್ತಿತ್ತು. ವೈಜ್ಞಾನಿಕ ಪತ್ರಿಕೆ ಮತ್ತು ವಿಜ್ಞಾನ ಪುಸ್ತಕಗಳು ಗ್ರಂಥಾಲಯ ಅಥವಾ ವಿಶ್ವವಿದ್ಯಾನಿಲಯಗಳಲ್ಲಿರುತ್ತಿದ್ದವು. ಆದರೆ ಪತ್ರಿಕೆಗಳು ಎಲ್ಲರ ಮನೆಗಳಲ್ಲಿ ಇರುತ್ತಿದ್ದವು. ಹಾಗಾಗಿ ಈ ವ್ಯಂಗ್ಯಚಿತ್ರಗಳು ಬರೇ ಲೇವಡಿ ಅಥವಾ ವಿಡಂಬನೆಯ ಚಿತ್ರಗಳು ಮಾತ್ರವಲ್ಲ ಅವು ಸಮಕಾಲೀನ ಚಿಂತನೆಗಳಿಗೆ ರೂಪ ಕೊಟ್ಟಂತಹ ಮಾಧ್ಯಮವಾಗಿವೆ. ಡಾರ್ವಿನ್ ಮತ್ತು ಆತನ ಜೀವ ವಿಕಾಸವಾದ ಸಿದ್ಧಾಂತ ಇಂದಿಗೂ ವ್ಯಂಗ್ಯಚಿತ್ರಕಾರರ ಮೆಚ್ಚಿನ ವಿಷಯಗಳಾಗಿವೆ. ಇಂದಿಗೂ ಆತ ಆಗೊಮ್ಮೆ ಈಗೊಮ್ಮೆ ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾನೆ.