ಸೋಮವಾರ, ಫೆಬ್ರವರಿ 05, 2024

ಪುಸ್ತಕ ಪರಿಚಯ: ನಡೆದಷ್ಟು ದೂರ By ಎನ್.ಆರ್.ಬಾಲಸುಬ್ರಮಣ್ಯ

  ಎನ್.ಆರ್.‌ ಬಾಲಸುಬ್ರಹ್ಮಣ್ಯ ನನಗೆ ಪರಿಚಯವಾದದ್ದು ನಾನು ಚಿತ್ರದುರ್ಗದಲ್ಲಿ 1993ರಿಂದ 1998ರವರೆಗೆ ಇಂಡಿಯನ್‌ ಬ್ಯಾಂಕ್‌ ಅಧಿಕಾರಿಯಾಗಿದ್ದಾಗ. ನನ್ನ ಬ್ಯಾಂಕ್‌ ಸಹೋದ್ಯೋಗಿ ಬಾಲಸುಬ್ರಹ್ಮಣ್ಯ ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲಿ ಆಸಕ್ತಿಯುಳ್ಳವರು, ಪುಸ್ತಕಗಳ ಕುರಿತು ಅಂದಿನಿಂದಲೂ ನನ್ನೊಂದಿಗೆ ಚರ್ಚೆ, ವಿಚಾರವಿನಿಮಯ ಮಾಡುತ್ತಾ ಬಂದಿದ್ದಾರೆ. ನಾನು ಬ್ಯಾಂಕ್‌ ಬಿಟ್ಟು 25 ವರ್ಷಗಳಾಗಿದ್ದರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂದು ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಬಾಲು ನನ್ನ ಪ್ರವಾಸ ಕಥನ "ನಡೆದಷ್ಟು ದೂರ" ಕುರಿತಂತೆ ತಮ್ಮ ಅನಿಸಿಕೆ ತಿಳಿಸಿದ್ದಾರೆ.ಪುಸ್ತಕ ಪರಿಚಯ: ನಡೆದಷ್ಟು ದೂರ

ಲೇಖಕರು: ಡಾ. ಜೆ ಬಾಲಕೃಷ್ಣ

ಪ್ರಕಾಶಕರು: ಆಸೀಮ ಅಕ್ಷರ, ಬೆಂಗಳೂರು             ಗೆಳೆಯ ಬಾಲಕೃಷ್ಣ ತಮ್ಮ ಪ್ರವಾಸ ಕಥನ ‘ನಡೆದಷ್ಟು ದೂರ’ ಪ್ರತಿಯನ್ನು ದೂರದಲ್ಲಿರುವ ನನಗೆ ಕಳಿಸುವ ಮೂಲಕ ಎಂದಿನ ಸರಳ ಸಜ್ಜನಿಕೆಯನ್ನು  ತೋರಿ ನನ್ನ ಓದಿನ ಪ್ರೀತಿಯನ್ನು ಪೋಷಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಗಳಿಗೆ ನಾನು ಆಭಾರಿ.

             ‘ನಡೆದಷ್ಟು ದೂರ -ಪ್ರವಾಸ ಕಥನ” ಬಾಲಕೃಷ್ಣ ಅವರು ತಾವು ಪ್ರವಾಸ ಮಾಡಿರುವ ದೇಶ ವಿದೇಶಗಳ ಬಗ್ಗೆ ಈ ಹಿಂದೆ ಬರೆದಿದ್ದ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಬಿಡಿ ಬರಹಗಳ ಪುಸ್ತಕ ರೂಪ. ಇದರಲ್ಲಿ  ದೇಶ ವಿದೇಶಗಳ ಪ್ರವಾಸಾನುಭವದ ಒಟ್ಟು ಹತ್ತೊಂಬತ್ತು ಲೇಖನಗಳಿವೆ. ಎಲ್ಲಾ ಲೇಖನಗಳು ಒಂದಕ್ಕಿಂತಲೂ ಒಂದು ವಿಭಿನ್ನವಾಗಿವೆ. ಇದಕ್ಕೆ ಕಾರಣ ಬಾಲಕೃಷ್ಣ ಅವರು ಪ್ರವಾಸ ಮಾಡಿರುವ ಬೇರೆ ಬೇರೆ ದೇಶಗಳು, ಸ್ಥಳಗಳ ಪರಿಚಯ ಮಾತ್ರವಲ್ಲದೇ ಇನ್ನೂ ಮಿಗಿಲಾಗಿ ಅವರಿಗಿರುವ ಪ್ರವಾಸ ಕುತೂಹಲ, ಹೊಸ ವಿಷಯಗಳ ಬಗ್ಗೆ ಅವರಿಗಿರುವ ಅನ್ವೇಷಣಾಸಕ್ತಿ, ಬದುಕನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಮನಸ್ಥಿತಿ ಮತ್ತು ಯಾವುದೇ ವಿಷಯವನ್ನು ಆಳವಾಗಿ ಅರಿತು ತಿಳಿಯುವ ಕೌತುಕತೆ. ಹೀಗಾಗಿ ಅವರ ಇಲ್ಲಿನ ಬರಹಗಳು ಬೇರೆ ಪ್ರವಾಸ ಕಥನಗಳಿಗಿಂತ ಭಿನ್ನವಾಗಿದ್ದು ಒಂದು ರೀತಿಯಲ್ಲಿ ಸಂಶೋಧನಾ ಲೇಖನಗಳೇ ಆಗಿವೆ.

             ಇತ್ತೀಚಿನ ದಿನಗಳಲ್ಲಿ ಜನ ಪ್ರವಾಸ ಎಂದರೆ ಕೇವಲ‌ ಮೋಜು ಮಸ್ತಿ ಮನರಂಜನೆಗಷ್ಟೇ ಸೀಮಿತಗೊಳಿಸಿಕೊಂಡು, ಬೌದ್ದಿಕ ಬೆಳವಣಿಗೆಗೆ ಸಹಕಾರಿ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಹೋದಲ್ಲೆಡೆ ಪರಿಸರ ನಾಶ ಮಾಡುತ್ತ ವಿಕ್ಷಿಪ್ತಗೊಳಿಸುತ್ತಿರುವಾಗ, ಬಾಲಕೃಷ್ಣ ಅವರ ಪ್ರವಾಸ ಕಥನ ಮನಸ್ಸಿಗೆ ಹಿತ, ಸಮಾಧಾನ ಕೊಡುತ್ತದೆ. ಒಂದೊಂದು ಲೇಖನವೂ ನಮಗೆ ಅಲ್ಲಿನ ಚರಿತ್ರೆ, ಸಮಾಜ, ಸಂಸ್ಕೃತಿಗಳನ್ನು ಪರಿಚಯಿಸುತ್ತದೆ.  ಅವರು ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬೌದ್ದಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವುದರಿಂದ ಓದುಗರಿಗೂ ಸಹ ಅದೇ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳಲು ಬಳಸಿರುವ ಭಾಷೆ, ಶೈಲಿ ಸುಲಭ ಮತ್ತು ಸರಳವಾಗಿದೆ. ಯಾವುದೇ ಅನಗತ್ಯ ವಿಷಯಗಳನ್ನು ಸೇರಿಸದೆ ಅತಿ ದೀರ್ಘವೂ ಅಲ್ಲದ, ಅತಿ ಸಂಕ್ಷಿಪ್ತವೂ ಅಲ್ಲದ ಸಮತೋಲನ ಕಾಯ್ದುಕೊಂಡ ಬರಹಗಳು, ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಸಂಗ್ರಹಿಸಿರುವ ಸಾಕಷ್ಡು ಮಾಹಿತಿಗಳು ಕುತೂಹಲಕಾರಿಯಾಗಿರುವುದರಿಂದ ಪುಸ್ತಕ ಕೆಳಗಿಡಲು ಮನಸ್ಸೇ ಬರುವುದಿಲ್ಲ.

             ನಾನು  ಗಮನಿಸಿರುವ ಅಂಶವೆಂದರೆ ದೇಶ ವಿದೇಶಗಳನ್ನು ಸುತ್ತಿದ್ದರೂ ಅವರು ನೋಡಿರುವ ಸ್ಥಳಗಳು ಸ್ಥಳಿಯವೇ ಇರಲಿ, ವಿದೇಶವೇ ಇರಲಿ, ಎಲ್ಲದರಲ್ಲೂ ಅವರ ತೋರಿರುವ ಆಸಕ್ತಿ ಮತ್ತು ನೀಡಿರುವ ಪ್ರಾಮುಖ್ಯತೆ ಸಮಾನವಾದದ್ದು . ಇಂಗ್ಲೆಂಡಿನ ವಸ್ತು ಸಂಗ್ರಹಾಲಯ ಅಥವಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಬಗ್ಗೆ ತೋರಿದ ಆಸಕ್ತಿ  ಉತ್ಸಾಹಗಳನ್ನೇ  ಅವರು ಚಿತ್ರದುರ್ಗದ ಮರಡಿಹಳ್ಳಿಯ ಪಿಲ್ಲೋ ಲಾವಾದ ಭೇಟಿಯಲ್ಲೂ ತೋರಿದ್ದಾರೆ. ತಾವು ಭೇಟಿ ನೀಡಿರುವ ವಿದೇಶಿ ಸ್ಥಳಗಳು ಪ್ರತಿಷ್ಟಿತವಾದುದೆಂದು, ಇಲ್ಲಿನ ಸ್ಥಳಗಳನ್ನು ನಿರ್ಲಕ್ಷಿಸದೆ ಅವುಗಳನ್ನೂ ಅಷ್ಟೇ ಶ್ರಧ್ದೆಯಿಂದ ದಾಖಲಿಸಿದ್ದಾರೆ.

             ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಭೇಟಿ ನೀಡುವ ಬಾಲಕೃಷ್ಣ ಅವರು ಅಲ್ಲಿ ಟಿಪ್ಪುವಿನ ಹುಲಿ ಯಂತ್ರ ಗೊಂಬೆ ನೋಡಿ ಲೇಖನದುದ್ದಕ್ಕೂ ಟಿಪ್ಪು ಮತ್ತು ಹುಲಿ ನಡುವೆ ಇದ್ದ ಸಂಬಂಧವನ್ನು ಅಲ್ಲಿ ಸಂಗ್ರಹಿಸಿರುವ ಇತರ ವಸ್ತುಗಳ ಬಗ್ಗೆ ವಿವರಿಸುತ್ತಾರೆ. ಟಿಪ್ಪುವನ್ನು ಹುಲಿಯಿಂದ ಬೇರ್ಪಡಿಸಿ ನೋಡಲಾಗದು ಎಂದು ಹೇಳಿ ಅದಕ್ಕೆ ಪೂರಕ ಐತಿಹಾಸಿಕ ಚಾರಿತ್ರಿಕ ದಾಖಲೆಗಳನ್ನು ನಮಗೆ ಒದಗಿಸುತ್ತಾರೆ. ಬ್ರಿಟೀಷರಿಗೆ ಟಿಪ್ಪು ವ್ಯಾಘ್ರಸ್ವಪ್ನನಾಗಿದ್ದ ಎಂದು ಬರೆಯುವ ಬಾಲಕೃಷ್ಣ ಅದಕ್ಕೆ ಪೂರಕ ಮಾಹಿತಿಗಳನ್ನು  ನೀಡಿದ್ದಾರೆ. ಇನ್ನೂ ವಿಶದವಾಗಿ ಬರೆದರೆ ಓದುವ ಕುತೂಹಲವಿರುವುದಿಲ್ಲ. ಹಾಗಾಗಿ ಇಲ್ಲಿಗೇ ನಿಲ್ಲಿಸುವೆ.

             ಕೋನಾರ್ಕ್ ದೇವಾಲಯದ ಶಿಲ್ಪಕಲೆಯ ಸೌಂದರ್ಯಕ್ಕೆ ಮಾರುಹೋಗುವ ಬಾಲಕೃಷ್ಣ ಅವರು ಅಲ್ಲಿ ನಾಶವಾಗಿರುವ ಶಿಲ್ಪಕಲಾ ಸಂಪತ್ತಿಗೆ ಮರುಗುತ್ತಾ, ಹಿಂದೆ ಹೇಗಿದ್ದಿರಬಹುದು ಎಂದು visualize ಮಾಡಲು ಪ್ರಯತ್ನಿಸಿ ಕೊನೆಗೆ ಹೀಗೆ ಬರೆಯುತ್ತಾರೆ. “ಉಳಿದಿರುವ ಪಾಳು ದೇಗುಲಗಳ ಸಮುಚ್ಛಯವನ್ನು ಕೌತುಕದಿಂದ ನೋಡುವಾಗ ನಮಗೆ ಕಾಲವನ್ನು ಹಿಂದೆ ಸರಿಸಲು ಸಾಧ್ಯವಾಗುವಂತಿದ್ದರೆ ಅಥವಾ ನಾವೇ ಕಾಲಯಂತ್ರದಲ್ಲಿ ಭೂತಕಾಲಕ್ಕೆ ಹೋಗಿ ಆ ಸೂರ್ಯದೇಗುಲದ ಮೊದಲಿನ ಭವ್ಯತರ ಕಣ್ಣಾರೆ ಕಾಣಲು ಸಾಧ್ಯವಾಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಅನ್ನಿಸುತ್ತದೆ.”  ಇದನ್ನು ಓದಿಯೇ ನಾವು ಹಿಂದಿನ ಭವ್ಯ ಶಿಲ್ಪಕಲೆ ಹೇಗಿದ್ದಿರಬಹುದೆಂದು ಊಹಿಸಬಹುದು. ಮುಂದುವರೆಯುತ್ತಾ  ಅಲ್ಲಿನ ಒರಿಸ್ಸಾ ವಾಸ್ತುಕಲೆ, ಕೋನಾರ್ಕ್ ನ ಮಿಥುನ ಶಿಲ್ಪಗಳು, ಭುವನೇಶ್ವರದ ಭವ್ಯ ಲಿಂಗರಾಜ ದೇವಾಲಯ ಇವೆಲ್ಲವೂ ನಮ್ಮ ಕಣ್ಮುಂದೆ ಬರುವಂತೆ ಚಿತ್ರಿಸಿದ್ದಾರೆ.

             ಇನ್ನೊಂದು ಅತ್ಯಂತ ಕುತೂಹಲ ಕೆರಳಿಸುವ ಲೇಖನ ಥಾಯ್ಲಾಂಡಿನ ಕಥೋಯ್ ಗಳು. ಆ ದೇಶದ ಪ್ರಸಿದ್ಧ ಮಾತಾದ “ನೀನು ಅತ್ಯಂತ ಸುಂದರ ಹೆಣ್ಣನ್ನು ಭೇಟಿಯಾದಲ್ಲಿ ಎಚ್ಚರದಿಂದರು ಆ ಹೆಣ್ಣು ಗಂಡಸಾಗಿರಬಹುದು” ಉಲ್ಲೇಖಿಸಿ ಬರೆಯುವ ಬಾಲಕೃಷ್ಣ ಅವರು ಥಾಯ್ ಭಾಷೆಯಲ್ಲಿ ಕಥೋಯ್ ಎಂದು ಕರೆಯುವ ಹೆಂಗಂಡಸರು ಅಥವಾ ಲೇಡಿ-ಬಾಯ್ ಗಳ ಬಗ್ಗೆ ನಮಗೆ ಒಂದು ಉತ್ತಮ ಚಿತ್ರಣ ನೀಡುತ್ತಾರೆ. ಆ ಕಥೋಯ್ ಗಳು ಯಾರು, ಅವರ ಲಕ್ಷಣಗಳು, ಅವರ ಬದುಕು, ಅಲ್ಲಿ ಅವರನ್ನು ದೇಶ ಜನ ನಡೆಸಿಕೊಳ್ಳುವ ರೀತಿ, ಅವರ ಸಾಧನೆಗಳು ಇವೆಲ್ಲವನ್ನು ಅಂಕಿ ಅಂಶಗಳ ಸಹಿತ ನಮಗೆ ಮಾಹಿತಿ ನೀಡುತ್ತಾರೆ. ಕಥೋಯ್ ಗಳಲ್ಲಿ ಒಬ್ಬರು ಬಾಕ್ಸಿಂಗ್ ಚಾಂಪಿಯನ್, ಗಗನಸಖಿಯರಿದ್ದಾರೆ, ಸೌಂದರ್ಯ ಸ್ಪರ್ಧಿಗಳಿದ್ದಾರೆ ಎಂಬ ವಿಷಯ  ನಮ್ಮ ಮುಂದಿಟ್ಟಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಂತಹ ಅಪರೂಪದ ಸಂಗತಿಗಳನ್ನು ಒದಗಿಸಿರುವ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

             ಇನ್ನೊಂದು ತುಂಬಾ ಆಸಕ್ತಿ ಕೆರಳಿಸುವ ಲೇಖನ ವ್ಯವಹಾರ ಚತುರ ಉಲುವಾಟು ಮಂಗಗಳು. ಉಲುವಾಟು ಇಂಡೋನೇಷ್ಯಾ ದೇಶದ ದಕ್ಷಿಣ ಬಾಲಿಯ ಸುಂದರ ಸ್ಥಳ. ಇಲ್ಲಿನ ಮಂಗಗಳು ತಮ್ಮ ಆಹಾರಕ್ಕಾಗಿ ಒಂದು ವಿಚಿತ್ರವಾದ ನಡವಳಿಕೆಯನ್ನು ಕಂಡುಕೊಂಡಿವೆ. ಅದೇನೆಂದರೆ ಪ್ರವಾಸಿಗಳ ಅಮೂಲ್ಯ ವಸ್ತುಗಳನ್ನು ಕದ್ದು ದೂರ ಹೋಗದೆ ಅಲ್ಲೇ ಕೂತಿದ್ದು ಅವಕ್ಕೆ ಇಷ್ಟವಾಗುವ ಗುಣಮಟ್ಟದ ಅಥವಾ ಪ್ರಮಾಣದ ಆಹಾರ ದೊರೆತರೆ ಅವು ಕದ್ದ ವಸ್ತುಗಳನ್ನು ಅಲ್ಲೇ ಜಾರಿಸಿ ಹೋಗುತ್ತವೆ. ಇದನ್ನು ಸ್ಥಳೀಯರಿಂದ ತಿಳಿದ ಲೇಖಕರು ಇನ್ನೂ ಮುಂದೆ ಹೋಗಿ ಅವುಗಳಿಗೆ  ಈ ರೀತಿಯ ನಡವಳಿಕೆ ಹೇಗೆ ಬಂದಿರಬಹುದೆಂದು ವೈಜ್ಞಾನಿಕ ಅಧ್ಯಯನ ನಡೆದಿದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವರು 2010ರಲ್ಲಿ ಬೆಲ್ಜಿಯಂ ಲೀಚ್ ವಿಶ್ವ ವಿದ್ಯಾಲಯದ ನಡವಳಿಕೆ ಜೀವಶಾಸ್ತ್ರ ವಿಭಾಗದ ಫ್ಯಾನಿ ಬ್ರಾಟ್ ಕಾರ್ನ್ ಇತರ ವಿಜ್ಞಾನಿಗಳ ಅಧ್ಯಯನದ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾದ ಅಂಶಗಳನ್ನು ಸಂಕ್ಷಿಪ್ತವಾಗಿ ನಮ್ಮ ಮುಂದಿಡುತ್ತಾರೆ.

             ಹೀಗೆ ಈ ಪುಸ್ತಕದಲ್ಲಿ ಒಟ್ಟು ಹತ್ತೊಂಬತ್ತು ಲೇಖನಗಳಿವೆ. ಒಂದೊಂದು ಲೇಖನವು ಲೇಖಕರ ಅನುಭವ, ಆಯಾ ಸ್ಥಳಗಳ ಚರಿತ್ರೆ ಮತ್ತು ಸಂಸ್ಕೃತಿಗಳನ್ನು ದಾಖಲಿಸಿದ್ದಾರೆ. ಇನ್ನೂ ವಿಶೇಷವಾದ ಅಂಶವೆಂದರೆ ಲೇಖಕರೇ ಪರಿಣಿತ ಛಾಯಾಗ್ರಾಹಕರಾಗಿರುವುದರಿಂದ ಎಲ್ಲಾ ಲೇಖನಗಳಲ್ಲೂ ಸಂದರ್ಭಕ್ಕೆ ತಕ್ಕ ಸೂಕ್ತ ಚಿತ್ರಗಳಿವೆ. ಆದರೆ ಈ ಪುಸ್ತಕದ ಕೊರತೆಯೆಂದರೆ ಬಾಲಕೃಷ್ಣ ಅವರ ಲೇಖನಗಳು ಒಂದು ನಿರ್ದಿಷ್ಟ ಸ್ಥಳಕ್ಕಷ್ಟೇ ಮೀಸಲಾಗಿರುವುದು. ಅವರ ಬಿಡಿ ಬರಹಗಳು ಸಮಗ್ರ ಬರಹಗಳಾಗಬೇಕು. ಆಗಲೇ ಓದುಗರಿಗೆ ಪೂರ್ಣ ಪ್ರಮಾಣದ ಪರಿಚಯವಾಗುವುದು. ಆದ್ದರಿಂದ ನನ್ನ ಸಲಹೆ ಏನೆಂದರೆ ತಮ್ಮ ಪ್ರವಾಸಾನುಭವವನ್ನು ಇನ್ನಷ್ಟು ವಿಸ್ತೃತವಾಗಿ ಬರೆಯಬೇಕು. ಇದರಿಂದ ಓದುಗರಿಗೆ ಇನ್ನೂ ಹೆಚ್ಚು ಮಾಹಿತಿ ದೊರೆಯುವುದು.

             ಒಟ್ಟಾರೆ ಮೊದಲೇ ಹೇಳಿದಂತೆ ಪ್ರತಿ ಲೇಖನ ಒಂದು ವಿಶಿಷ್ಟ ಅನುಭವ. ಪುಸ್ತಕವನ್ನು ಓದಿದಾಗ ಮಾತ್ರ ನಮಗೆ ಓದಿನ ಸುಖ ದೊರೆಯುತ್ತದೆ. ಇಂತಹ ಒಂದು ಹೊಚ್ಚ ಹೊಸ ಓದಿನ ಖುಷಿಯನ್ನು  ಸಮರ್ಥವಾಗಿ ನೀಡಿರುವ ಬಾಲಕೃಷ್ಣ ಅವರಿಗೆ ಅಭಿನಂದನೆಗಳು. ಅವರು ಇನ್ನೂ ಹೆಚ್ಚು ಹೆಚ್ಚು ಬರೆಯಲಿ (ಸೇವೆಯಿಂದ ನಿವೃತ್ತರಾಗಿರುವ ಅವರಿಗೀಗ ಸಮಯದ ಕೊರತೆ ಇಲ್ಲದಿರಬಹುದು). ಓದುಗರಿಗೆ ಹೆಚ್ಚು ಹೊಸ ಹೊಸ ಮಾಹಿತಿಗಳನ್ನು ನೀಡಲಿ. ಹಾಗೆ ನೀಡುವಲ್ಲಿ ಅವರು ಸಮರ್ಥರೂ ಹೌದೂ.

 

ಎನ್ ಅರ್‌ ಬಾಲಸುಬ್ರಮಣ್ಯಂ

ಮುಖ್ಯ ವ್ಯವಸ್ಥಾಪಕರು

ಇಂಡಿಯನ್ ಬ್ಯಾಂಕ್

ಕಾರೈಕುಡಿ. ಶಿವಗಂಗಾ ಜಿಲ್ಲೆ

 

 

 

 

 

 

ಗುರುವಾರ, ಫೆಬ್ರವರಿ 01, 2024

ಆಂಟಿಕಿತೆರಾ ಮೆಕ್ಯಾನಿಸಂ - ಮರೆತ ವಿಜ್ಞಾನದ ಕುರುಹು

ಫೆಬ್ರವರಿ 8, 2024ರ "ಸುಧಾ" ವಾರಪತ್ರಿಕೆಯಲ್ಲಿ ನನ್ನ ಆಂಟಿಕಿತೆರಾ ಮೆಕ್ಯಾನಿಸಂ - ಮರೆತ ವಿಜ್ಞಾನದ ಕುರುಹು ಚಿತ್ರ ಲೇಖನ ಪ್ರಕಟವಾಗಿದೆ. ಪ್ರಕಟವಾದ ಲೇಖನ ಪದಗಳ ಮಿತಿಯಿಂದಾಗಿ ಸಂಕ್ಷಿಪ್ತವಾಗಿದೆ. ಇಡೀ ಲೇಖನ ಇಲ್ಲಿದೆ. ಓದಿ ತಮ್ಮ ಅಭಿಪ್ರಾಯ ಲೇಖನದ ಕೊನೆಯಲ್ಲಿ ಕಾಮೆಂಟ್‌ ಮಾಡಿ.

 


          ನನ್ನ ಗ್ರೀಸ್ ಪ್ರವಾಸದ ಸಮಯದಲ್ಲಿ ನಾನು ಅತ್ಯಂತ ಕುತೂಹಲದಿಂದ ನೋಡಬೇಕೆಂದಿದ್ದ ಒಂದು `ಉಪಕರಣ' ಗ್ರೀಸ್‌ನ ರಾಜಧಾನಿಯಾದ ಅಥೆನ್ಸ್ನಲ್ಲಿನ ರಾಷ್ಟ್ರೀಯ ಪ್ರಾಖ್ತನನ ಮ್ಯೂಸಿಯಂನಲ್ಲಿತ್ತು. ಆ ಉಪಕರಣದ ಚರಿತ್ರೆ ಕುತೂಹಲಕರವಾದುದು. ಅದು ಆಧುನಿಕ ಜಗತ್ತಿಗೆ ದೊರಕಿದ್ದು ನೂರಾ ಇಪ್ಪತ್ತಮೂರು ವರ್ಷಗಳ ಹಿಂದೆ, ಅದೂ ಆಕಸ್ಮಿಕವಾಗಿ.

          ಸುಮಾರು ಎರಡು ಸಾವಿರ ವರ್ಷಗಳ ಹಿಂದೆ (ಕ್ರಿ.ಪೂ. 65) ಒಂದು ಹಡಗು ಏಷಿಯಾ ಮೈನರ್‌ನಿಂದ ಹಾಯಿ ಏರಿಸಿ ತನ್ನ ಪ್ರಯಾಣ ಆರಂಭಿಸಿತು. ಬಹುಶಃ ಅದೊಂದು ರೋಮನ್ ಹಡಗಾಗಿದ್ದು ಗ್ರೀಕರ ದೇಶದಲ್ಲಿ ಲೂಟಿ ಮಾಡಿದ ವಸ್ತುಗಳನ್ನು ರೋಮ್‌ಗೆ ಕೊಂಡೊಯ್ಯುತ್ತಿತ್ತು. ಆ ಅವಧಿಯಲ್ಲಿ ರೋಮ್‌ನ ಸೇನಾನಾಯಕ ಪಾಂಪೆ ಏಷಿಯಾ ಮೈನರ್ ಪ್ರದೇಶದಲ್ಲಿ ಓಡಾಡುತ್ತಿದ್ದುದರಿಂದ ಬಹುಶಃ ಆ ಹಡಗು ಅವನಿಗೆ ಸೇರಿದ್ದಾಗಿರಬಹುದು. ಯಾವುದಾದರೂ ಚಂಡಮಾರುತವೋ ಅಥವಾ ಮತ್ತಾವುದಾದರೂ ದುರಂತಕ್ಕೆ ಸಿಕ್ಕಿತೋ ಏನೋ ಆ ಹಡಗು ತನ್ನಲ್ಲಿದ್ದ ಎಲ್ಲ ವಸ್ತುಗಳೊಂದಿಗೆ ಮುಳುಗಿಹೋಯಿತು ಹಾಗೂ ಜಗತ್ತು ಅದನ್ನು ಮರೆತೇ ಬಿಟ್ಟಿತು.

          1900ರಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗರದಾಳಕ್ಕೆ ಮುಳುಗಿ ಅಲ್ಲಿಂದ ಸ್ಪಾಂಜ್ ಸಂಗ್ರಹಿಸುತ್ತಿದ್ದ ಡೈವರ್‌ಗಳ ಹಡಗೊಂದು ಚಂಡಮಾರುತಕ್ಕೆ ಸಿಲುಕಿ ಅವರು ಏಜಿಯನ್ ಸಮುದ್ರದಲ್ಲಿನ ಒಂದು ಬರಡು ದ್ವೀಪವಾದ ಆಂಟಿಕಿತೆರಾದಲ್ಲಿ ಆಶ್ರಯ ಪಡೆದರು. ಚಂಡಮಾರುತ ಕಡಿಮೆಯಾದ ಮೇಲೆ ಎಂದಿನಂತೆ ಸ್ಪಾಂಜ್ ಸಂಗ್ರಹಿಸಲು ಸಮುದ್ರದಾಳಕ್ಕೆ ಡೈವ್ ಮಾಡಿದರು. ಕೆಲವರಿಗೆ ಅಲ್ಲಿ ಮಾನವರ ಅವಶೇಷಗಳು ಕಂಡಂತಾಗಿ ಹೆದರಿ ವಾಪಸ್ಸು ಬಂದರು. ವಾಸ್ತವವಾಗಿ ಅವು ಮಾನವರ ಅವಶೇಷಗಳಾಗಿರಲಿಲ್ಲ, ಅಮೃತಶಿಲೆಯ ಮಾನವರ ವಿಗ್ರಹಗಳಾಗಿದ್ದವು ಹಾಗೂ ಅವುಗಳ ಜೊತೆಯಲ್ಲಿ ರಾಶಿ ರಾಶಿ ಕಂಚಿನ ಲೋಹದ ವಸ್ತುಗಳಿದ್ದವು. ಅವರು ಕಂಡಿದ್ದು ಕ್ರಿ.ಪೂ. 65ರಲ್ಲಿ ದುರಂತಕ್ಕೊಳಗಾಗಿ ಮುಳುಗಿದ್ದ ಪ್ರಾಚೀನ ಹಡಗಿನ ಅವಶೇಷಗಳಾಗಿತ್ತು.

          ಗ್ರೀಕ್ ಸರ್ಕಾರ ಕೂಡಲೇ ಆ ಅವಶೇಷಗಳನ್ನು ಮೇಲೆ ತರಲು ವ್ಯವಸ್ಥೆ ಮಾಡಿತು. ಅದೊಂದು ಅಪಾಯಕಾರಿ ಕಾರ್ಯವಾಗಿತ್ತು ಹಾಗೂ ಸುಮಾರು ಹತ್ತು ತಿಂಗಳ ಸಮಯ ತೆಗೆದುಕೊಂಡಿತು, ಆ ಸಾಹಸದಲ್ಲಿ ಕೆಲವರು ಪ್ರಾಣ ಸಹ ಕಳೆದುಕೊಂಡರು. ಆದರೆ ಅವರು ಮೇಲೆ ತಂದ ಅವಶೇಷಗಳು ಅತ್ಯಮೂಲ್ಯವಾದವುಗಳಾಗಿದ್ದವು- ಕಂಚಿನ ಮತ್ತು ಅಮೃತಶಿಲೆಯ ಶಿಲ್ಪಗಳು, ಒಡವೆಗಳು, ಗಾಜಿನ ಪದಾರ್ಥಗಳು ಹಾಗೂ ಕುಸುರಿಕಲೆಯ ಒಂದು ಕಂಚಿನ ಸಿಂಹಾಸನವನ್ನೊಳಗೊAಡAತೆ ಹಲವಾರು ಪೀಠೋಪಕರಣಗಳಿದ್ದವು. ಅವುಗಳ ಜೊತೆಯಲ್ಲೇ ಮೇಲೆ ತಂದಿದ್ದ ತುಕ್ಕು ಹಿಡಿದಿದ್ದ ಒಂದು ನಿಘಂಟು ಗಾತ್ರದ ವಸ್ತುವೊಂದು ಸಿಕ್ಕಿದ್ದು ಅದೊಂದು ನಿರುಪಯೋಗಿ ವಸ್ತುವೆಂದು ಒಬ್ಬಾತ ವಾಪಸ್ಸು ಎಸೆಯಲು ಹೊರಟಿದ್ದು ಮತ್ತೊಬ್ಬಾತ ಬೇಡವೆಂದು ತಡೆದಿದ್ದನಂತೆ. ಅದು ಏನೆಂದು ತಿಳಿದಿಲ್ಲ, ಇರಲಿ ಬಿಡು ಎಂದು ಅದನ್ನೂ ಇತರ ವಸ್ತುಗಳೊಂದಿಗೆ ಅಥೆನ್ಸ್ನಲ್ಲಿನ ರಾಷ್ಟ್ರೀಯ ಪ್ರಾಖ್ತನನ ಮ್ಯೂಸಿಯಂಗೆ ಸಾಗಿಸಿದರು. ಸುಂದರ ಶಿಲ್ಪ ಮುಂತಾದ ವಸ್ತುಗಳನ್ನು ಮೇಲಕ್ಕೆ ತಂದ ಉತ್ಸಾಹದಲ್ಲಿದ್ದ ಎಲ್ಲರೂ ಈ ತುಕ್ಕುಹಿಡಿದ ಉಂಡೆಯಂತಹ ವಸ್ತು ಯಾರ ಗಮನವನ್ನೂ ಸೆಳೆಯದೆ ಅಲ್ಲೇ ತೆರೆದ ಪೆಟ್ಟಿಗೆಯೊಂದರಲ್ಲಿ ಮ್ಯೂಸಿಯಂನ ಮೂಲೆಯೊಂದರಲ್ಲಿ ಬಿದ್ದಿತ್ತು. ನೀರಿನಿಂದ ಹೊರಗೆ ಬಂದದ್ದಕ್ಕೋ ಅಥವಾ ಬಿಸಿಲಿಗೋ ಏನೋ ಕೆಲವು ತಿಂಗಳುಗಳ ನಂತರ ಅದು ಬಿರಿದು ಅದರೊಳಗೆ ಗಿಯರ್ ಚಕ್ರಗಳ ಕುರುಹುಗಳು, ನಿಖರವಾಗಿ ಗುರುತುಮಾಡಿದ ವೃತ್ತಾಕಾರದ ಮಾಪನದ ಕುರುಹುಗಳು ಹಾಗೂ ಪ್ರಾಚೀನ ಗ್ರೀಕ್ ಭಾಷೆಯ ಲಿಪಿಯ ಕೆತ್ತನೆಗಳು ಕಂಡುಬಂದಾಗ ಇದ್ದಕ್ಕಿದ್ದಂತೆ ವಸ್ತುಪ್ರದರ್ಶನದ ಅಧಿಕಾರಿಗಳ ಕುತೂಹಲದ ಗಮನ ಅದರ ಮೇಲೆ ಹರಿಯಿತು.


1. ಗ್ರೀಸ್ ರಾಜಧಾನಿ ಅಥೆನ್ಸ್ನಲ್ಲಿರುವ ರಾಷ್ಟ್ರೀಯ ಪ್ರಾಖ್ತನನ ಮ್ಯೂಸಿಯಂನಲ್ಲಿನ ಆಂಟಿಕಿತೆರಾ ಮೆಕ್ಯಾನಿಸಂ. ಬಲಭಾಗದ ತುಣುಕಿನಲ್ಲಿ ಮಾಪನದ ಗೆರೆಗಳನ್ನು ಕಾಣಬಹುದು. ಚಿತ್ರ: ಜೆ.ಬಾಲಕೃಷ್ಣ

        ಆ ತುಕ್ಕು ಹಿಡಿದ ವಸ್ತುವು ಯಾವುದೋ ಯಾಂತ್ರಿಕ ಚಲನೆಯ ವಸ್ತುವಂತೆ ಕಂಡುಬಂದದ್ದರಿಂದ ಹಾಗೂ ಅದು ಆಂಟಿಕಿತೆರಾ ದ್ವೀಪದ ಬಳಿ ದೊರಕಿದ್ದುದರಿಂದ ಅದನ್ನು `ಆಂಟಿಕಿತೆರಾ ಮೆಕ್ಯಾನಿಸಂ' ಎಂದು ಕರೆದರು. ಅದು ವಸ್ತುಸಂಗ್ರಹಾಲಯದ ತಜ್ಞರಲ್ಲಿ ಕುತೂಹಲ ಮತ್ತು ಅದರ ಜೊತೆಗೆ ತಲ್ಲಣವನ್ನೂ ಉಂಟುಮಾಡಿತು. ಅದುವರೆಗೂ ಜಗತ್ತಿನಲ್ಲಿ ದೊರೆತಿರುವ ಪ್ರಾಚೀನ ಕಾಲದ ವಸ್ತುಗಳಲ್ಲಿ ಎಲ್ಲಿಯೂ ಒಂದೇ ಒಂದು ಗಿಯರ್‌ಚಕ್ರ, ಗಡಿಯಾರದಂತಹ ಮುಳ್ಳು ಅಥವಾ ಮಾಪನದ ಗುರುತುಗಳುಳ್ಳ ಯಾಂತ್ರಿಕ ಸಾಧನ ದೊರಕಿರಲಿಲ್ಲ. ಅಷ್ಟಲ್ಲದೆ ಆಂಟಿಕಿತೆರಾ ಮೆಕ್ಯಾನಿಸಂ ದೊರೆತ ನಂತರ ಆ ರೀತಿಯ ಮತ್ತೊಂದು ಉಪಕರಣ ಅಥವಾ ಸಾಧನವೂ ಎಲ್ಲಿಯೂ ಇದುವರೆಗೆ ದೊರೆತಿಲ್ಲ, ಹಾಗಾಗಿ ಅದು ವಿಶಿಷ್ಟವಾದುದೂ ಹೌದು.

2. ಆಂಟಿಕಿತೆರಾ ಮೆಕ್ಯಾನಿಸಂನೊಂದಿಗೆ ಲೇಖಕರು.

          ಕೆಲವು ವಿದ್ವಾಂಸರು ಅದೊಂದು ನಕಲಿ ಉಪಕರಣವಿರಬಹುದು, ಪ್ರಾಚೀನ ಹಡಗು ಮುಳುಗಡೆಯಾದ ಸ್ಥಳದಲ್ಲಿ ಯಾವುದೋ ಆಧುನಿಕ ಹಡಗಿನಿಂದ ಅಕಸ್ಮಾತ್ ಬಿದ್ದಿರಬಹುದು ಎಂದರು. ಆ ವಸ್ತುವಿನ ಉದ್ದೇಶ ಸೂಚಿಸುವ ಪದವಿದ್ದದ್ದು ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರ ಎರಡರಲ್ಲೂ ಬಳಸುವ ರಾಶಿಚಕ್ರದ ಉಲ್ಲೇಖ - `ಪ್ಯಾಕನ್' ಎಂಬ ಪದ ಹಾಗೂ ಅದನ್ನು ಪ್ರಾಚೀನ ಗ್ರೀಕರು ಬಳಸುತ್ತಿದ್ದ ತಿಂಗಳಿನ ಒಂದು ಹೆಸರಾಗಿತ್ತು ಅದು. ಆಂಟಿಕಿತೆರಾ ಮೆಕ್ಯಾನಿಸಂ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗದಿದ್ದುದರಿಂದ ವರ್ಷಗಳು ಕಳೆದಂತೆ ಕ್ರಮೇಣ ಜನ ಹಾಗೂ ವಸ್ತುಸಂಗ್ರಹಾಲಯದವರು ಸಹ ಅದನ್ನು ಮರೆಯತೊಡಗಿದರು.

         

3. ಆಂಟಿಕಿತೆರಾ ಮೆಕ್ಯಾನಿಸಂನ ಅಂದಾಜು ಗಾತ್ರ (ಚಿತ್ರ ಕೃಪೆ: ಟೋನಿ ಫ್ರೀತ್ ಮತ್ತು ಜೆನ್ ಕ್ರಿಶ್ಚಿಯನ್‌ಸೆನ್, ಸೈಂಟಿಫಿಕ್ ಅಮೆರಿಕನ್)

ಆದರೆ, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ತಜ್ಞರು, ಸಂಶೋಧಕರು ಆ ಮೆಕ್ಯಾನಿಸಂ ಅಧ್ಯಯನಕ್ಕಾಗಿ ಶ್ರಮಿಸುತ್ತಿದ್ದಾರೆ ಹಾಗೂ ಹಲವಾರು ಹೊಸ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಅವರೆಲ್ಲರ ಶ್ರಮ ಹಾಗೂ ಎಕ್ಸ್-ರೇ ಮುಂತಾದ ತಂತ್ರಜ್ಞಾನಗಳ ಮೂಲಕ ಅದರ ರಚನೆಯನ್ನು ಭೇದಿಸಿ ಆಂಟಿಕಿತೆರಾ ಮೆಕ್ಯಾನಿಸಂ ಹೇಗೆ ಮತ್ತು ಯಾವುದಕ್ಕಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದನ್ನು ಬಹುಪಾಲು ಕಂಡುಕೊಂಡಿದ್ದಾರೆ. ಅದು ಕೈಯಿಂದ `ಕೀಲಿ' ಕೊಡುವ ಗಡಿಯಾರದಂತಹ ಸಾಧನ. ಆಗ ಭೂಕೇಂದ್ರಿತ ಸಿದ್ಧಾಂತದಲ್ಲಿ (ಭೂಮಿಯೇ ವಿಶ್ವದ ಕೇಂದ್ರ ಎಂಬ ಸಿದ್ಧಾಂತ) ನಂಬಿಕೆ ಇದ್ದುದರಿಂದ ಅದನ್ನು ಅದರ ಆಧಾರದ ಮೇಲೆಯೇ ರಚಿಸಲಾಗಿದೆ. ಆದರೆ ಅದು ಆಧುನಿಕ ಗಡಿಯಾರದಂತೆ ಗಂಟೆಗಳನ್ನು ಹಾಗೂ ನಿಮಿಷಗಳನ್ನು ತೋರಿಸುವ ಬದಲಿಗೆ ಅದು `ಆಕಾಶ ಸಮಯ'ವನ್ನು ತೋರಿಸುತ್ತಿತ್ತು, ಅಂದರೆ ಸೂರ್ಯನಿಗೆ, ಚಂದ್ರನಿಗೆ ಹಾಗೂ ಆಗ ಬರಿಗಣ್ಣಿಗೆ ಕಾಣುತ್ತಿದ್ದ ಐದು ಗ್ರಹಗಳಿಗೆ (ಬುಧ, ಶುಕ್ರ, ಮಂಗಳ, ಗುರು ಹಾಗೂ ಶನಿ) ಪ್ರತ್ಯೇಕ ಮುಳ್ಳುಗಳನ್ನು ಹೊಂದಿತ್ತು. ಆಯತಾಕಾರದ ತಿರುಗುವ ರಚನೆ ಚಂದ್ರನ ವಿವಿಧ ಹಂತಗಳನ್ನು ತೋರಿಸುತ್ತಿತ್ತು ಹಾಗೂ ಅದರ ಹಿಂಭಾಗದಲ್ಲಿದ್ದ ಪ್ರತ್ಯೇಕ ಡಯಲ್‌ಗಳು ದಿನಸೂಚಿಯಂತೆ ಚಂದ್ರನ ಹಾಗೂ ಸೂರ್ಯನ ಗ್ರಹಣಗಳ ಸಮಯವನ್ನು ಪ್ರತ್ಯೇಕವಾಗಿ ಸೂಚಿಸುತ್ತಿತ್ತು ಅಥವಾ ಮುಂದಿನ ಒಂದು ನಿರ್ದಿಷ್ಟ ದಿನದಂದು ಮಂಗಳ ಅಥವಾ ಮತ್ತಾವುದಾದರೂ ಗ್ರಹ ಯಾವ ಸ್ಥಾನದಲ್ಲಿರುತ್ತದೆಂದು ತಿಳಿಯಬಹುದಾಗಿತ್ತು. ಒಂದು ನಿರ್ದಿಷ್ಟ ದಿನಾಂಕದಂದು ನಕ್ಷತ್ರಗಳ ಉಗಮ ಹಾಗೂ ಅಸ್ತಮಾನವನ್ನು ಅದರ ಮೇಲಿನ ಲಿಪಿಯಲ್ಲಿ ಬರೆದಿತ್ತು. ಅದರಲ್ಲಿನ ಒಂದು ನಿರ್ದಿಷ್ಟ ಡಯಲ್ ಋತುಮಾನಗಳನ್ನು ಸೂಚಿಸಿ ಆಗಿನ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸುತ್ತಿತ್ತು. ಅಷ್ಟಲ್ಲದೆ ಅದು ಆಗ ಗ್ರೀಸ್‌ನಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾಗಬೇಕಾದ ಸಮಯವನ್ನು ಹಾಗೂ ಕೆಲವು ಚಾರಿತ್ರಿಕ ಘಟನೆಗಳ ಸಮಯವನ್ನೂ ಸಹ ಸೂಚಿಸುತ್ತಿತ್ತಂತೆ. ಒಟ್ಟು ಸುಮಾರು 42 ಆ ರೀತಿಯ ಸೂಚನೆಗಳನ್ನು ಆಂಟಿಕಿತೆರಾ ಮೆಕ್ಯಾನಿಸಂ ನೀಡುತ್ತಿತ್ತಂತೆ. ಅದರ ಹಿಂಭಾಗದಲ್ಲಿ ಕಂಚಿನ ಫಲಕವೊಂದರ ಮೇಲೆ ಆ ಉಪಕರಣವನ್ನು ಹೇಗೆ ಬಳಸಬೇಕೆಂಬ ಸೂಚನೆಗಳನ್ನು ಸಹ `ಕೊಯ್ನೆ ಗ್ರೀಕ್' ಲಿಪಿಯಲ್ಲಿ ನೀಡಲಾಗಿದೆ. ಆದರೆ ಆ ಉಪಕರಣವನ್ನು ಬಳಸಬಲ್ಲ ವ್ಯಕ್ತಿಗೆ ಖಗೋಳ ವಿಜ್ಞಾನದ ಹಾಗೂ ಅಂತಹ ಖಗೋಳ ವಿಜ್ಞಾನದ ಉಪಕರಣಗಳ ಅರಿವು ಬೇಕಾಗಿತ್ತೆನ್ನಿಸುತ್ತದೆ.

4. ದೊರಕಿರುವ ಆಧಾರಗಳ ಮೇಲೆ ಕಂಪ್ಯೂಟರ್ ಬಳಸಿ ಸಿದ್ಧಗೊಳಿಸಿರುವ ಆಂಟಿಕಿತೆರಾ ಮೆಕ್ಯಾನಿಸಂನ ಮುಂಭಾಗ ಹಾಗೂ ಹಿಂಭಾಗದ ಚಿತ್ರ. (ಚಿತ್ರ ಕೃಪೆ: ಟೋನಿ ಫ್ರೀತ್ ಮತ್ತು ಜೆನ್ ಕ್ರಿಶ್ಚಿಯನ್‌ಸೆನ್, ಸೈಂಟಿಫಿಕ್ ಅಮೆರಿಕನ್)

          ಅದು ಅತ್ಯಂತ ಸಂಕೀರ್ಣ ವಿನ್ಯಾಸದ ಉಪಕರಣವಾಗಿದೆ ಹಾಗೂ ಅತಿ ವಿದ್ವತ್ತಿನ ಖಗೋಳ ವೈಜ್ಞಾನಿಕ ಜ್ಞಾನದ ಹಿನ್ನೆಲೆಯಿಂದ ಅದನ್ನು ಅತ್ಯಂತ ಎಚ್ಚರ ಮತ್ತು ನಿಖರತೆಯಿಂದ ವಿನ್ಯಾಸಗೊಳಿಸಿ ತಯಾರಿಸಲಾಗಿದೆ. ಅದೂ ಸಹ ಎರಡು ಸಾವಿರದ ವರ್ಷಗಳ ಹಿಂದೆ. ಹಾಗಾದರೆ ಅದು ಯಾವ ಪ್ರದೇಶದ್ದು ಹಾಗೂ ಅದರ ನಿಖರ ಬಳಕೆಯ ಉದ್ದೇಶ ಏನಾಗಿತ್ತು? ಆಗ ಗ್ರೀಕ್ ವಿಜ್ಞಾನ ಮತ್ತು ತಂತ್ರಜ್ಞಾನ ನಿಜವಾಗಿಯೂ ಅಷ್ಟೊಂದು ಪ್ರಾವೀಣ್ಯತೆ ಸಾಧಿಸಿತ್ತೆ?

5. ಆಂಟಿಕಿತೆರಾ ಮೆಕ್ಯಾನಿಸಂನ ಒಳಗಿನ ಗಿಯರ್‌ಗಳ ರಚನೆ ಹೀಗಿದ್ದಿರಬಹುದೆ? (ಚಿತ್ರ ಕೃಪೆ: ಟೋನಿ ಫ್ರೀತ್ ಮತ್ತು ಜೆನ್ ಕ್ರಿಶ್ಚಿಯನ್‌ಸೆನ್, ಸೈಂಟಿಫಿಕ್ ಅಮೆರಿಕನ್)

          ಆಂಟಿಕಿತೆರಾ ಮೆಕ್ಯಾನಿಸಂನ ಒಗಟನ್ನು ಬಿಡಿಸಲು ಯತ್ನಿಸಿದ ಮೊದಲ ವ್ಯಕ್ತಿ ಆಲ್ಬರ್ಟ್ ರೆಹ್ಮ್ ಎಂಬ ಜರ್ಮನಿಯ ಭಾಷಾಶಾಸ್ತ್ರಜ್ಞ. ಆತ 1905ರಲ್ಲಿ ಅದೊಂದು ಗಣಕಯಂತ್ರ ಎಂದ. ಅದಾದ ಐವತ್ತು ವರ್ಷಗಳ ನಂತರ ಕೊಂಚ ಸುದೀರ್ಘ ಅಧ್ಯಯನ ನಡೆಸಿದ ವ್ಯಕ್ತಿ ಡೆರೆಕ್ ಜೆ ಡೆ ಸೊಲ್ಲಾ ಪ್ರೈಸ್ ಎಂಬ ಅಮೆರಿಕದ ಪ್ರಿನ್ಸ್ಟನ್‌ನಲ್ಲಿನ ವಿಜ್ಞಾನ ಚರಿತ್ರಕಾರ. ಆತ ತಾನು ಕಂಡುಕೊಂಡ ವಿಷಯಗಳನ್ನು `ಸೈಂಟಿಫಿಕ್ ಅಮೆರಿಕನ್' ಪತ್ರಿಕೆಯಲ್ಲಿ 1959ರಲ್ಲಿ ಪ್ರಕಟಿಸಿದ. ಪ್ರೈಸ್ ವಿವರಿಸಿದಂತೆ ಆಂಟಿಕಿತೆರಾ ಮೆಕ್ಯಾನಿಸಂನ ಬದಿಯಲ್ಲಿನ ಚಾಲಕದಂಡವೊಂದನ್ನು ತಿರುಗಿಸಿದಾಗ ಅದರ ಮೇಲ್ಭಾಗದ `ಡಯಲ್'ನಲ್ಲಿನ ಗಡಿಯಾರದಂತಹ ಮುಳ್ಳುಗಳು ಹಿಂದೆ ಅಥವಾ ಮುಂದೆ ಚಲಿಸುತ್ತವೆ. ಆ ರೀತಿ ತಿರುಗಿಸುವುದರ ಮೂಲಕ ಡಯಲ್‌ನ ಮೇಲೆ 365 ದಿನಗಳಲ್ಲಿ ಬೇಕಾದ ದಿನಾಂಕವನ್ನು ಆಯ್ದುಕೊಳ್ಳಬಹುದು. ಅದರಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಬರುವ ಅಧಿಕ ವರ್ಷದ (ಲೀಪ್ ಇಯರ್) ಹೊಂದಾಣಿಕೆಗೂ ಅವಕಾಶವಿತ್ತು. ಆ ರೀತಿ ಚಾಲಕದಂಡ ತಿರುಗಿಸಿದಾಗ ಡಯಲ್‌ನ ಹಿಂಬದಿಯಲ್ಲಿನ ಹಲವಾರು ಗಿಯರ್‌ಗಳು ಸಹ ಅದಕ್ಕೆ ತಕ್ಕಂತೆ ತಿರುಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದವು. ಮುಂಭಾಗದ ದಿನಸೂಚಿಗೆ ಸಮಕೇಂದ್ರಿತವಾಗಿದ್ದ ಮತ್ತೊಂದು ಡಯಲ್‌ನಲ್ಲಿ 360 ಡಿಗ್ರಿಗಳನ್ನು ಹಾಗೂ ನಕ್ಷತ್ರಪುಂಜದ 12 ರಾಶಿಗಳನ್ನು ಸಹ ಗುರುತುಮಾಡಲಾಗಿತ್ತು. ಈ ರಾಶಿಗಳು ಭೂಮಿಯಿಂದ ಕಾಣುವಂತೆ ಸೂರ್ಯನ ಕ್ರಾಂತಿವೃತ್ತ ಚಲನೆಗನುಗುಣವಾಗಿ ಕಾಣುವಂತೆ ಗುರುತಿಸಲಾಗಿತ್ತು. ಆ ವಿಜ್ಞಾನಿಯ ಪ್ರಕಾರ ಮೆಕ್ಯಾನಿಸಂನ ಮುಳ್ಳು ನಾವು ಸೂಚಿಸಿದ ನಿರ್ದಿಷ್ಟ ದಿನಾಂಕದಂದು ಸೂರ್ಯ ತನ್ನ ಕ್ರಾಂತಿವೃತ್ತದಲ್ಲಿ ಯಾವ ಸ್ಥಾನದಲ್ಲಿರುತ್ತಾನೆ ಎಂಬುದನ್ನು ತೋರಿಸುತ್ತಿತ್ತು. ಆತ ಆ ಮೆಕ್ಯಾನಿಸಂನಲ್ಲಿನ ಸುಮಾರು ಹನ್ನೆರಡು ಗಿಯರ್‌ಗಳನ್ನು ಹಾಗೂ ಅವುಗಳಲ್ಲಿನ ಹಲ್ಲುಗಳ ಸಂಖ್ಯೆಯನ್ನು ಸಹ ಗುರುತಿಸಿದ. 1974ರಲ್ಲಿ ಗ್ರೀಕ್ ವಿಕಿರಣತಜ್ಞ ಶರ‍್ಲಾಂಬೋಸ್ ಕರಕಾಲೋಸ್ ಆಂಟಿಕಿತೆರಾ ಮೆಕ್ಯಾನಿಸಂ ಮೇಲೆ ನಡೆಸಿದ ಮೊಟ್ಟಮೊದಲ ಕ್ಷ-ಕಿರಣ ಅಧ್ಯಯನದಿಂದ ವಿಜ್ಞಾನಿ ಸೊಲ್ಲಾ ಪ್ರೈಸ್ 27 ಗಿಯರ್‌ಗಳನ್ನು ಗುರುತಿಸಿದ. ಆ ಗಿಯರ್‌ಗಳ ಹಲ್ಲುಗಳ ಸಂಖ್ಯೆಯಿಂದ ಅವು ನಿರ್ವಹಿಸುವ ಕಾರ್ಯವನ್ನು ಗುರುತಿಸಬಹುದೆಂದ. ಆ ಗಿಯರ್‌ಗಳು ಪರಸ್ಪರ ಸಂಬಂಧ ಹೊಂದಿದ್ದು ನಿಖರ ಖಗೋಳ ಮಾಹಿತಿಯನ್ನು ನೀಡುತ್ತಿದ್ದವು. ಈ ರೀತಿಯ ಗಿಯರ್ ತಂತ್ರಜ್ಞಾನವು ಪಾಶ್ಚಿಮಾತ್ಯ ವಿಜ್ಞಾನ, ತಂತ್ರಜ್ಞಾನದಲ್ಲಿ ನಂತರದ 1500 ವರ್ಷಗಳವರೆಗೆ (13ನೇ ಶತಮಾನದವರೆಗೂ) ಕಂಡುಬರಲಿಲ್ಲ. ಆಂಟಿಕಿತೆರಾ ಮೆಕ್ಯಾನಿಸಂನಂಥ ಇತರ ಉಪಕರಣಗಳು ಸಹ ದೊರೆತಿಲ್ಲ. ಇದಕ್ಕೆ ವಿಜ್ಞಾನಿಗಳೂ ನೀಡುವ ಕಾರಣವೇನೆಂದರೆ ಅದನ್ನು ಕಂಚಿನಿಂದ ತಯಾರಿಸಲಾಗಿದ್ದು, ಕಂಚು ಆ ಸಮಯದಲ್ಲಿ ಅತ್ಯಮೂಲ್ಯ ಲೋಹವಾಗಿತ್ತು. ಆ ರೀತಿಯ ಉಪಕರಣಗಳು ಕೆಟ್ಟು ಹೋದಲ್ಲಿ ಅವುಗಳನ್ನು ಕರಗಿಸಿ ಮತ್ತೊಂದು ಅಂಥದೇ ಸಾಧನವನ್ನೋ ಅಥವಾ ಆ ಕಂಚನ್ನು ಮತ್ತಾವುದಕ್ಕಾದರೂ ಬಳಸಿಕೊಳ್ಳುತ್ತಿದ್ದರು, ಹಾಗಾಗಿ ಅದೇ ರೀತಿಯ ಹಲವಾರು ಉಪಕರಣಗಳ ಸಾಧ್ಯತೆ ಕಡಿಮೆ.

          ಹಲವಾರು ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಆಂಟಿಕಿತೆರಾ ಮೆಕ್ಯಾನಿಸಂ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಲಂಡನ್ನಿನ ವಿಜ್ಞಾನ ಮ್ಯೂಸಿಯಂನ ಕ್ಯುರೇಟರ್ ಆದ ಮೈಖೆಲ್ ರೈಟ್ ಮತ್ತು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಿ ಅಲನ್ ಬ್ರಾಮ್ಲಿಯವರು ಮೆಕ್ಯಾನಿಸಂನ ಮೊಟ್ಟಮೊದಲ 3ಡಿ ಕ್ಷ-ಕಿರಣ ಮಾಡಿದರು. ಆಂಟಿಕಿತೆರಾ ಮೆಕ್ಯಾನಿಸಂ ಮತ್ತೊಂದು ದೇಶಕ್ಕೆ ಸಾಗಿಸಲು ಸಾಧ್ಯವಿಲ್ಲದ್ದರಿಂದ ಹಾಗೂ ಆ ರೀತಿಯ ಸಾಗಣೆಯಲ್ಲಿ ಪುಡಿಪುಡಿಯಾಗುವ ಸಾಧ್ಯತೆ ಇದ್ದುದರಿಂದ ಇಂಗ್ಲೆಂಡಿನ ಎಕ್ಸ್-ಟೆಕ್ ಕಂಪೆನಿಯ ಟ್ರಕ್ ಗಾತ್ರದ ಮೆಕ್ಯಾನಿಸಂಗಾಗಿಯೇ ಮಾರ್ಪಡಿಸಿದ್ದ `ಬ್ಲೇಡ್ ರನ್ನರ್' ಸಿ.ಟಿ.ಸ್ಕ್ಯಾನ್ ಯಂತ್ರವನ್ನು ಅಥೆನ್ಸ್ ನ ಮ್ಯೂಸಿಯಂಗೇ ತಂದು ಮೆಕ್ಯಾನಿಸಂನ ಸಿ.ಟಿ. ಸ್ಕ್ಯಾನ್ ಮಾಡಲಾಯಿತು. ಸೊಲ್ಲಾ ಪ್ರೈಸ್ ಮೊದಲ ಕ್ಷ-ಕಿರಣದಲ್ಲಿ ಒಂದರ ಮೇಲೊಂದು ಕೂತಿರುವ ಗಿಯರ್‌ಗಳನ್ನು ಕಂಡರೆ ಸಿ.ಟಿ. ಸ್ಕ್ಯಾನ್ ನಲ್ಲಿ ಅವುಗಳನ್ನು ಬಿಡಿಬಿಡಿಯಾಗಿ ನಿಖರವಾಗಿ 3-ಡಿಯಲ್ಲಿ ಕಾಣಲು ಸಾಧ್ಯವಾಯಿತು. ಅಷ್ಟಲ್ಲದೆ ಅವುಗಳ ಮೇಲೆ ಬರೆದಿದ್ದ ಅಕ್ಷರಗಳನ್ನು ಸಹ ಕಾಣಲಾಯಿತು. ಅವುಗಳನ್ನು ಕ್ಯಾಲಿಫೋರ್ನಿಯಾದ ಹೆವ್ಲೆಟ್-ಪ್ಯಾಕರ್ಡ್ ಕಂಪೆನಿಯ ಅತ್ಯಾಧುನಿಕ ಛಾಯಾಚಿತ್ರ ತಂತ್ರಜ್ಞಾನ ಬಳಸಿ ಅದರ ಚಿತ್ರಗಳನ್ನು ದಾಖಲಿಸಿತು.

6. ಅಥೆನ್ಸ್ನಲ್ಲಿರುವ ರಾಷ್ಟ್ರೀಯ ಪ್ರಾಖ್ತನನ ಮ್ಯೂಸಿಯಂನಲ್ಲಿನ ಆಂಟಿಕಿತೆರಾ ಮೆಕ್ಯಾನಿಸಂನ ಮಾದರಿ ಹಾಗೂ ಅದರೊಳಗಿನ ಗಿಯರ್‌ಗಳ ಪ್ರತಿರೂಪಗಳ ಮಾದರಿ. ಚಿತ್ರ: ಜೆ.ಬಾಲಕೃಷ್ಣ


          ಇಂದಿಗೂ ಆಂಟಿಕಿತೆರಾ ಮೆಕ್ಯಾನಿಸಂ ಅನ್ನು ಎಲ್ಲಿ ತಯಾರಿಸಿರಬಹುದು, ಯಾರು ತಯಾರಿಸಿರಬಹುದು ಎಂಬುದು ತಿಳಿದಿಲ್ಲ. ಕೇವಲ ಕೆಲವು `ಸಾಕ್ಷ್ಯಾಧಾರಗಳ' ಮೂಲಕ ಊಹೆ ಮಾಡಬಹುದಾಗಿದೆ ಅಷ್ಟೆ. ದುರಂತಕ್ಕೊಳಗಾದ ಆ ಹಡಗಿನಲ್ಲಿದ್ದ ಬಹಳಷ್ಟು ವಸ್ತುಗಳು ಗ್ರೀಕ್‌ನ ಪೂರ್ವ ಭಾಗದಲ್ಲಿನ ಪರ‍್ಗಮಾನ್, ಕೋಸ್ ಮತ್ತು ರೋಡ್ಸ್ನಿಂದ ಬಂದಂಥವು. ಹಾಗಾಗಿ ಹಿಪ್ಪಾರ್ಕಸ್ ಅಥವಾ ರೋಡ್ಸ್ ನ ಮತ್ತಾರಾದರೂ ಖಗೋಳಶಾಸ್ತ್ರಜ್ಞ ಅದನ್ನು ನಿರ್ಮಿಸಿರಬಹುದೆಂದು ಊಹಿಸಬಹುದು. ಕ್ರಿ.ಪೂ. 120ರಲ್ಲಿ ಮರಣಿಸಿದ ಖ್ಯಾತ ಖಗೋಳವಿಜ್ಞಾನಿ ಹಿಪ್ಪಾರ್ಕಸ್ ರೋಡ್ಸ್ ದ್ವೀಪದವನಾಗಿದ್ದು ಅವನ ಹಲವಾರು ಸಿದ್ಧಾಂತಗಳು ಆಂಟಿಕಿತೆರಾ ಮೆಕ್ಯಾನಿಸಂನಲ್ಲಿ ಅಳವಾಡಿಸಲಾಗಿರುವುದರಿಂದ ಕೆಲವು ವಿದ್ವಾಂಸರ ಅನಿಸಿಕೆಯಂತೆ ಅದನ್ನು ರೋಡ್ಸ್ ದ್ವೀಪದಲ್ಲೇ ತಯಾರಿಸಿರಬಹುದು.

          ಅದೇ ಸಮಯದಲ್ಲಿ ಸಿಸೆರೋ ಸಹ ರೋಡ್ಸ್ ಗೆ ಭೇಟಿ ನೀಡಿದ್ದ. ಅಷ್ಟಲ್ಲದೆ, "ಆಕಾಶದ ಮಾದರಿಯ ಎರಡನೇ ಕಂಚಿನ ಮಾದರಿಯೊಂದನ್ನು ಗೆಳೆಯ ಪಾಸಿಡೋನಿಯಸ್ ನಿರ್ಮಿಸಿದ್ದಾನೆ ಹಾಗೂ ಅದು ತನ್ನ ಪ್ರತಿಯೊಂದು ಆವರ್ತನದಲ್ಲಿ ಆಕಾಶದಲ್ಲಿ ಪ್ರತಿ ಹಗಲು ಮತ್ತು ರಾತ್ರಿ ಕಾಣುವ ಸೂರ್ಯ, ಚಂದ್ರ ಮತ್ತು ಐದು ಗ್ರಹಗಳ ಚಲನೆಯನ್ನೇ ಅದು ಪ್ರದರ್ಶಿಸುತ್ತದೆ" ಎಂದು ಬರೆದಿದ್ದ. ಪಾಸಿಡೋನಿಯಸ್ ಒಬ್ಬ ತತ್ವಜ್ಞಾನಿಯಾಗಿದ್ದು ಕ್ರಿ.ಪೂ. ಮೊದಲನೇ ಶತಮಾನದಲ್ಲಿ ರೋಡ್ಸ್‌ ನಲ್ಲಿ ಶಾಲೆಯೊಂದನ್ನು ಹೊಂದಿದ್ದ ಹಾಗೂ ಆಂಟಿಕಿತೆರಾ ಹಡಗಿನ ಪ್ರಯಾಣದ ಸಮಯವೂ ಸಹ ಅದೇ ಆಗಿದೆ.

          ಸೇನಾಪತಿ ಪಾಂಪೆ ಪಾಸಿಡೋನಿಯಸ್‌ನ ಅಭಿಮಾನಿಯಾಗಿದ್ದು ಆತನನ್ನು ಅಲ್ಲಿ ಹಲವಾರು ಸಾರಿ ಭೇಟಿಯಾಗಿದ್ದ. ಬಹುಶಃ ಆಂಟಿಕಿತೆರಾ ಮೆಕ್ಯಾನಿಸಂ ಅನ್ನು ಪಾಸಿಡೋನಿಯಸ್ ಪಾಂಪೆಗೆ ಕೊಡುಗೆಯಾಗಿ ನೀಡಿದ್ದಿರಬಹುದು. ಆದರೆ ಅದರಲ್ಲಿನ ಪಠ್ಯ ಸೂಚಿಸುವ 235 ಮಾಸಿಕ ವಿಭಜನೆಗಳು ಬ್ಯಾಬಿಲೋನಿನ `ಮೆಟೋನಿಕ್ ದಿನಸೂಚಿ'ಯಾಗಿರುವುದರಿಂದ ಅದು ರೋಡ್ಸ್ ಮೂಲದ್ದೆನ್ನುವುದು ಕಷ್ಟವಾಗುತ್ತದೆ.

          ಆದರೆ, ಈ ಕತೆಯಲ್ಲಿ ತಿರುವೊಂದಿದೆ. ನ್ಯೂಯಾರ್ಕ್ ನ ಪ್ರಾಚೀನ ಜಗತ್ತಿನ ಅಧ್ಯಯನ ಸಂಸ್ಥೆಯ ಅಲೆಕ್ಸಾಂಡರ್ ಜೋನ್ಸ್ ಮತ್ತು ಯು.ಕೆ.ಯ ಡರ್‌ಹ್ಯಾಮ್ ವಿಶ್ವವಿದ್ಯಾನಿಲಯದ ಜಾನ್‌ಸ್ಟೀಲ್‌ರವರು ಆಂಟಿಕಿತೆರಾ ಮೆಕ್ಯಾನಿಸಂನ ಮೇಲಿನ ಲಿಪಿಯನ್ನು ಇನ್ನೂ ಹೆಚ್ಚು ಅರ್ಥೈಸಿಕೊಳ್ಳುವ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರ ಇತ್ತೀಚಿನ ಪ್ರಕಟಣೆಯಂತೆ ಆಂಟಿಕಿತೆರಾ ಮೆಕ್ಯಾನಿಸಂನಲ್ಲಿ ಬಳಸಲಾಗಿರುವ ತಿಂಗಳುಗಳ ಹೆಸರುಗಳು ಕೇವಲ ಪಶ್ಚಿಮ ಗ್ರೀಸ್‌ನಲ್ಲಿ ಬಳಸಲಾಗುವ ಸ್ಥಳೀಯ ದಿನಸೂಚಿ ಅಥವಾ ಕ್ಯಾಲೆಂಡರ್‌ನ ಹೆಸರುಗಳಾಗಿವೆ. ಹಾಗಾಗಿ ಅದು ಕೊರಿಂಥಿಯನ್ ಮೂಲದ್ದಿರಬಹುದು ಎನ್ನುತ್ತಾರೆ. ಅದು ಕೊರಿಂಥ್ ಮೂಲದ್ದೇ ಆದಲ್ಲಿ ಅದನ್ನು ಕ್ರಿ.ಪೂ.146ಕ್ಕೆ ಮೊದಲೇ ತಯಾರಿಸಿರಬೇಕು, ಏಕೆಂದರೆ ರೋಮನ್ನರು ಕೊರಿಂಥನ್ನು ಕ್ರಿ.ಪೂ.146ರಲ್ಲಿ ಸಂಪೂರ್ಣ ನಾಶ ಮಾಡಿದರು. ಅದೂ ಇಲ್ಲವಾದಲ್ಲಿ ಗ್ರೀಕ್ ವಲಸೆಗಾರರು ಸ್ಥಾಪಿಸಿದ ಶಕ್ತಿಶಾಲಿ ಸಾಮ್ರಾಜ್ಯದ ನಗರವಾಗಿದ್ದ ಸೈರಾಕ್ಯೂಸ್ ಆ ಕ್ಯಾಲೆಂಡರ್‌ನ ಮೂಲವಾಗಿದೆಯೆಂದು ನಂಬಲಾಗಿದ್ದು ಆ ಯಾಂತ್ರಿಕ ಸಾಧನವನ್ನು ಯಾರೋ ಅಲ್ಲಿನವರು ಅಥವಾ ಅಲ್ಲಿನವರಿಗಾಗಿ ತಯಾರಿಸಿರಬಹುದೆಂದು ಸೂಚಿಸುತ್ತದೆ. ಇದು ಅಚ್ಚರಿ ತರುವಂಥದು ಏಕೆಂದರೆ ಅವಸಾನಗೊಂಡು ಮುಳುಗುವ ಮೊದಲು ಆ ಹಡಗು ರೋಮ್‌ನ ದಾರಿಯಲ್ಲಿ ಸಿಸಿಲಿಯ ದಿಕ್ಕಿಗೆ ಹೋಗುತ್ತಿತ್ತು. ಹಾಗಿರುವಾಗ ಆ ಯಾಂತ್ರಿಕ ಸಾಧನ ಯಾರೋ ಸೈರಾಕ್ಯೂಸ್‌ನ ಸಿರಿವಂತನಿಗೆ ರೋಡ್ಸ್ ನಲ್ಲಿ ತಯಾರಿಸಿದ್ದರೂ ಇರಬಹುದು. ಆ ಸಾಧನದ ಮೇಲೆ ಕೆತ್ತಿರುವ ಲಿಪಿಗಳು ಸುಮಾರು ಕ್ರಿ.ಪೂ. 150ರಿಂದ 100ರವರೆಗಿನ ಅವಧಿಯದಾಗಿದ್ದು ಆ ಹಡಗು ಮುಳುಗುವಷ್ಟರಲ್ಲಿ ಅದನ್ನು ತಯಾರಿಸಿ ಹಲವಾರು ದಶಕಗಳೇ ಕಳೆದಿವೆ. ಅದನ್ನು ಸೈರಾಕ್ಯೂಸ್‌ನಲ್ಲಿ ಮೊದಲಿಗೆ ತಯಾರಿಸಲಾಗಿದ್ದು ನಂತರ ಅದನ್ನು ಪೂರ್ವಕ್ಕೆ ಯಾರಿಗಾದರೂ ವಿದ್ವಾಂಸರಿಗೆ ತೋರಿಸಲು ರೋಡ್ಸ್ ಗೆ ಕೊಂಡೊಯ್ದಿರಬಹುದು ಅಥವಾ ಅದರ ಮಾಲೀಕ ಅಲ್ಲಿಯೇ ನೆಲೆಸಲು ಹೋಗಿದ್ದಿರಲೂಬಹುದು. ನಂತರ, ರೋಮನ್ನರು ಅದನ್ನು ಪಶ್ಚಿಮಕ್ಕೆ ಕೊಂಡೊಯ್ಯಲು ಹಡಗಿನಲ್ಲಿ ಇರಿಸಿರಬಹುದು. ಸಿಸಿಲಿಯ ಸಾಧ್ಯತೆ ಹೆಚ್ಚೆನ್ನುತ್ತಾರೆ ಕೆಲವು ವಿಜ್ಞಾನಿಗಳು. ಏಕೆಂದರೆ ಅಲ್ಲಿನ ದ್ವೀಪ ನಗರವಾದ ಸೈರಾಕ್ಯೂಸ್ ಆ ಕಾಲದ ಮಹಾನ್ ವಿಜ್ಞಾನಿ ಆರ್ಕಿಮಿಡಿಸ್‌ನ ಊರಾಗಿತ್ತು. ಆತ ಆಂಟಿಕಿತೆರಾ ಮೆಕ್ಯಾನಿಸಂ ತಯಾರಿಸಿದ ಅವಧಿಗೆ ಒಂದು ಶತಮಾನದ ಮೊದಲು ಅಲ್ಲಿ ಜೀವಿಸಿದ್ದವನು, ಹಾಗಾಗಿ ಆತ ಆ ನಿರ್ದಿಷ್ಟ ಸಾಧನವನ್ನು ತಯಾರಿಸಿರಲಾರ. ಆದರೆ ಅದು ಸೈರಕ್ಯೂಸ್‌ನೊಂದಿಗೆ ಹೊಂದಿರುವ ಸಂಬಂಧ, ಜೊತೆಗೆ ಆರ್ಕಿಮಿಡಿಸ್‌ನ ಯಾಂತ್ರಿಕ ಸಾಧನದ ಸಿಸೆರೋನ ವರ್ಣನೆಗಳು ಈ ರೀತಿಯ ಸಾಧನದ ಮೂಲ ಆವಿಷ್ಕಾರಕ ಆರ್ಕಿಮಿಡಿಸ್ ಆಗಿದ್ದು ಈ ಆಂಟಿಕಿತೆರಾ ಮೆಕ್ಯಾನಿಸಂ ಆ ತಂತ್ರಜ್ಞಾನ ಸಂಪ್ರದಾಯದ ಮುಂದುವರಿದ ಭಾಗವಾಗಿರಬಹುದು.

          ವಿವಿಧ ಶಕ್ತಿಯ ಅನುಪಾತಗಳನ್ನು ಪಡೆಯಲು (ಉದಾಹರಣೆಗೆ ತೂಕವನ್ನು ಎತ್ತಲು) ಹೇಗೆ ಆರ್ಕಿಮಿಡಿಸ್ ಗಿಯರ್‌ಚಕ್ರಗಳ ಬಳಕೆಯಲ್ಲಿ ತಜ್ಞತೆಯನ್ನು ಸಾಧಿಸಿದ್ದ ಎಂಬುದನ್ನು ನಾವು ಪ್ರಾಚೀನ ಪಠ್ಯಗಳ ಮೂಲಕ ತಿಳಿದಿದ್ದೇವೆ. ಆತನ ತಂದೆಯೂ ಸಹ ಒಬ್ಬ ಖಗೋಳ ವಿಜ್ಞಾನಿಯಾಗಿದ್ದನೆಂಬುದಾಗಿ ದಾಖಲೆಗಳು ತಿಳಿಸುತ್ತವೆ. ಹಾಗಾಗಿ ಆಕಾಶಕಾಯಗಳ ಚಲನೆಯ ಮಾದರಿ ರೂಪಿಸಲು ಆರ್ಕಿಮಿಡಿಸ್ ಗಿಯರ್ ಚಕ್ರಗಳನ್ನು ಬಳಸಿಕೊಂಡಿದ್ದಲ್ಲಿ ಅದು ಸಂಪೂರ್ಣ ಅನಿರೀಕ್ಷಿತವಾಗಲಾರದು. ಅಷ್ಟಲ್ಲದೆ ಆತನ ಕೊನೆಯ ಪ್ರಬಂಧಗಳಲ್ಲೊಂದರ ಹೆಸರು "ಗೋಲಗಳ ತಯಾರಿಕೆ ಕುರಿತು" ಎಂದಿದೆ.

          ಆರ್ಕಿಮಿಡಿಸ್‌ನ ಜೀವನದ ಸಮಯದಲ್ಲಿ ಅಧಿಚಕ್ರದ ಸಿದ್ಧಾಂತ (ಒಂದು ದೊಡ್ಡ ವೃತ್ತದ ಪರಿಧಿಯ ಮೇಲೆ ಚಲಿಸುವ ಕೇಂದ್ರವುಳ್ಳ ಮತ್ತೊಂದು ಚಿಕ್ಕದೊಂದು ವೃತ್ತ - ಈ ಚಿಕ್ಕ ವೃತ್ತದ ಪರಿಧಿಯ ಮೇಲೆ ಗ್ರಹ ಚಲಿಸುವುದೆಂಬುದು ಸಿದ್ಧಾಂತ) ಆಗಷ್ಟೇ ಪರಿಚಯವಾಗಿರಬೇಕು ಹಾಗೂ ಆಗಿನ ಖಗೋಳ ವಿಜ್ಞಾನಿಗಳಿಗೆ ಚಂದ್ರ ಮತ್ತು ಸೂರ್ಯರ ದೀರ್ಘವೃತ್ತಾಕಾರದ ಕಕ್ಷೆಗಳ ಮಾದರಿಗಳನ್ನು ಸಿದ್ಧಪಡಿಸುವ ಸಾಧ್ಯತೆಗಳೇ ಇರಲಿಲ್ಲ. ಹಾಗಾಗಿ ಆತನ ಮೂಲ ವಿನ್ಯಾಸ ಬಹಳ ಸರಳವಾಗಿದ್ದಿರಬೇಕು- ಬಹುಶಃ ಚಂದ್ರ, ಸೂರ್ಯ ಮತ್ತು ಗ್ರಹಗಳು ವಿವಿಧ ಆದರೆ ನಿಯತ ವೇಗಗಳಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ಹಾಗಿನ ರಚನಾ ಮಾದರಿ. ಕ್ರಮೇಣ, ಇತರರು ಈ ಮಾದರಿಯ ಆಧಾರದ ಮೇಲೆ ಇನ್ನೂ ಹೆಚ್ಚು ಸಂಕೀರ್ಣ ಗಿಯರ್‌ಗಳನ್ನು ಬಳಸಿಕೊಂಡು ಪಡೆಯುತ್ತಿದ್ದ ಹೊಸ ಹೊಸ ಖಗೋಳ ವಿಜ್ಞಾನದ ಮಾಹಿತಿಯನ್ನು ಅಳವಡಿಸಿಕೊಂಡು (ವಿದ್ವಾಂಸ ಹಿಪ್ಪಾರ್ಕಸ್‌ನ ಜ್ಞಾನವನ್ನೊಳಗೊಂಡಂತೆ) ಯಾಂತ್ರಿಕ ಸಾಧನಗಳನ್ನು ಸಿದ್ಧಗೊಳಿಸಿ, ತಯಾರಿಸಿ ಗ್ರೀಕ್ ಜಗತ್ತಿಗೆಲ್ಲಾ ಕಳುಹಿಸುತ್ತಿದ್ದರು ಎನ್ನಿಸುತ್ತದೆ. ಬಹುಶಃ ಹಿಪ್ಪಾರ್ಕಸ್‌ನ ಅಧ್ಯಯನವು ಗೋಲಾಕಾರದ ಮಾದರಿಯಿಂದ ಆಂಟಿಕಿತೆರಾ ಮೆಕ್ಯಾನಿಸಂನಂತಹ ಖಗೋಳ ಘಟನೆಗಳ ನಿಖರ ಸಮಯ ತೋರಿಸುವ ಚಪ್ಪಟೆ ಉಪಕರಣಕ್ಕೆ ಪ್ರೇರಣೆಯಾಗಿರಬೇಕು.

          ಏನೇ ಆದರೂ, ಆಂಟಿಕಿತೆರಾ ಮೆಕ್ಯಾನಿಸಂನ ನಿಗೂಢಗಳು ಇನ್ನೂ ಸಂಪೂರ್ಣವಾಗಿ ಬರೆಹರಿದಿಲ್ಲ. ಅದರ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲೇ ಇವೆ. ಅದನ್ನು ಅರ್ಥೈಸಿಕೊಂಡ ಮಟ್ಟಿಗೆ ವಿವಿಧ ಮಾದರಿಗಳನ್ನು ಹಲವಾರು ವಿಶ್ವವಿದ್ಯಾಲಯಗಳು, ತಜ್ಞರು ರಚಿಸಿದ್ದಾರೆ. ಕೆಲವು ಅಥೆನ್ಸ್ನ ಮ್ಯೂಸಿಯಂನಲ್ಲಿ ಮೂಲ ಆಂಟಿಕಿತೆರಾ ಮೆಕ್ಯಾನಿಸಂನ ಬದಿಯಲ್ಲಿಯೇ ಇರಿಸಿದ್ದಾರೆ. ತಜ್ಞರನ್ನು ಗಾಢವಾಗಿ ಕಾಡುತ್ತಿರುವ ಪ್ರಶ್ನೆಯೆಂದರೆ ಈ ಅತ್ಯುನ್ನತ ತಂತ್ರಜ್ಞಾನ ತನ್ನದೇ ಅವಧಿಯಲ್ಲಿ ಹಾಗೂ ನಂತರದ ಶತಮಾನಗಳಲ್ಲಿ ಏಕೆ ಜನಪ್ರಿಯವಾಗಿಲ್ಲ ಎಂಬುದು. ತಮ್ಮ 1959ರ ಪ್ರಬಂಧದಲ್ಲಿ ಸೊಲ್ಲಾ ಪ್ರೆöÊಸ್‌ರವರು, `ಪ್ರಾಚೀನ ಗ್ರೀಕರು ತಮ್ಮ ಮಹಾನ್ ನಾಗರಿಕತೆಯ ಅವಸಾನದ ಸಮಯದ ಕೊಂಚ ಮೊದಲು ನಮ್ಮ ಈ ಆಧುನಿಕ ಸಮಯಕ್ಕೆ ಬಹಳಷ್ಟು ಹತ್ತಿರ ತಲುಪಿದ್ದರು, ಅವರ ಚಿಂತನೆಗಳಲ್ಲಿ ಮಾತ್ರವಲ್ಲ, ಅವರ ವಿಜ್ಞಾನ ಮತ್ತು  ತಂತ್ರಜ್ಞಾನದಲ್ಲೂ ಸಹ' ಎಂದು ಬರೆದಿದ್ದಾರೆ. ಎರಡು ಸಾವಿರಕ್ಕಿಂತ ಹೆಚ್ಚಿನ ವರ್ಷಗಳ ಹಿಂದೆಯೇ ತಯಾರಿಸಿರುವ ಆಂಟಿಕಿತೆರಾ ಮೆಕ್ಯಾನಿಸಂ ಪ್ರೆöÊಸ್‌ರವರು ಊಹಿಸಿರುವುದಕ್ಕಿಂತ ನಮ್ಮ ಜಗತ್ತಿಗೆ ಇನ್ನೂ ಹೆಚ್ಚಿಗೆ ಹತ್ತಿರವಾದುದು ಎಂದೆನ್ನಿಸುತ್ತದೆ.

ಪ್ರಾಚೀನ ಗ್ರೀಕ್ ವಿಜ್ಞಾನ       

          ಸರಳವಾಗಿ ಹೇಳುವುದಾದರೆ ವಿಜ್ಞಾನ ಎಂದರೆ ಪ್ರಾಕೃತಿಕ ಜಗತ್ತಿನ ಜ್ಞಾನ. ಮಾನವನ ವಿಕಾಸವಾದಾಗಿನಿಂದ ಆತ ತನ್ನ ಸುತ್ತಮುತ್ತಲ ಪರಿಸರವನ್ನು ಕುತೂಹಲದಿಂದ ಗಮನಿಸುತ್ತಾ ಬಂದಿದ್ದಾನೆ. ಅವನ ಗಮನಿಸುವಿಕೆ ಪ್ರಾರಂಭವಾದಾಗಿನಿAದಲೂ ಅವನು ಗಮನಿಸುತ್ತಿರುವುದು ತನ್ನ ಸುತ್ತಮುತ್ತಲ ಪರಿಸರ, ಪ್ರಾಣಿ, ಸಸ್ಯಗಳು, ನಿಯತ ಸೂರ್ಯ ಚಂದ್ರರ ಚಲನೆ, ಹಗಲು ರಾತ್ರಿಗಳು ಹಾಗೂ ಋತುಗಳು. ಹಾಗಾಗಿ `ವಿಜ್ಞಾನ' ಎನ್ನುವುದು ಮಾನವ ಲಿಪಿ ಬಳಸುವುದಕ್ಕೆ ಮೊದಲಿನಿಂದಲೇ ಕಂಡುಬಂದಿದೆ. ಸುಮಾರು 5000 ವರ್ಷಗಳ ಹಿಂದಿನಿಂದಲೇ ವೈಜ್ಞಾನಿಕವಾಗಿ ಪ್ರಮುಖವೆನ್ನಿಸುವ ಹಲವಾರು ಚಟುವಟಿಕೆಗಳನ್ನು ಮಾನವ ಕೈಗೊಂಡಿದ್ದಾನೆ. ಇಂಗ್ಲೆಂಡಿನಲ್ಲಿ ಸ್ಟೋನ್ ಹೆಂಜ್ ಶಿಲಾರಚನೆಗಳ ನಿರ್ಮಾಣ, ಈಜಿಪ್ಟಿನಲ್ಲಿ ಪಿರಮಿಡ್ಡುಗಳು ಮುಂತಾದುವುದಗಳ ನಿರ್ಮಾಣದಲ್ಲಿ ಗಣಿತಶಾಸ್ತ್ರ, ಖಗೋಳವಿಜ್ಞಾನದ ಬಳಕೆಯ ಸೂಚನೆಗಳು ಕಂಡುಬರುತ್ತವೆ. ಖಗೋಳ ವಿಜ್ಞಾನವೇ ಮೊದಲು ವಿಕಾಸಗೊಂಡ ವಿಜ್ಞಾನ ಎಂದು ಹೇಳಲಾಗುತ್ತದೆ. ಖಗೋಳ ವಿಜ್ಞಾನದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಬಹಳ ಪ್ರಮುಖ ಹಾಗೂ ನಿಗೂಢ ಘಟನೆಗಳಾಗಿದ್ದವು. ಚೀನಾ, ಭಾರತ, ಇಸ್ಲಾಂ ಜಗತ್ತು, ಮಧ್ಯ ಅಮೆರಿಕಾ, ಯೂರೋಪ್ ಮುಂತಾದೆಡೆ ಖಗೋಳ ವಿಜ್ಞಾನ ಮತ್ತು ಗಣಿತಶಾಸ್ತ್ರದ ಅಧ್ಯಯನಗಳು ತಮ್ಮದೇ ರೀತಿಗಳಲ್ಲಿ ವಿಕಾಸ ಹೊಂದತೊಡಗಿದವು. ಆದರೆ ಖಗೋಳ ವಿಜ್ಞಾನ ಮತ್ತು ಧರ್ಮ ಹಾಸುಹೊಕ್ಕಾಗಿತ್ತು. ಪ್ರಾಕೃತಿಕ ವಿಕೋಪ ಹಾಗೂ ಋತುಗಳ ಬದಲಾವಣೆ ಮುಂತಾದುವನ್ನು ಕ್ರಮೇಣ ದೈವಿಕಶಕ್ತಿಯಿಂದಾಗಿ ಎಂದು ನಂಬುತ್ತಿದ್ದ.

          ಜಗತ್ತಿನ ವಿಜ್ಞಾನ ಚರಿತ್ರೆಯಲ್ಲಿ ಗ್ರೀಸ್ ದೇಶದ ವಿಜ್ಞಾನ ಚರಿತ್ರೆ ಬೌದ್ಧಿಕವಾಗಿ ವಿಭಿನ್ನವಾದುದು ಹಾಗೂ ವಿಶಿಷ್ಟವಾದುದೂ ಹೌದು. ಬಡತನದ ಸಮಾಜದ ಹೆಲ್ಲೆನೀಸ್ ಜನ (ರೋಮನ್ನರು ಗ್ರೀಸ್ ಅನ್ನು ಹೆಲ್ಲಾ ಎಂದು ಕರೆಯತ್ತಿದ್ದರು), ಚೀನಾದ ಯಾಂಗ್ಟೆಜೆ, ಈಜಿಪ್ಟಿನ ನೈಲ್, ಟರ್ಕಿ, ಇರಾಕ್‌ನ ಟೈಗ್ರಿಸ್ ಮತ್ತು ಯೂಫ್ರೇಟ್ಸ್ ನಂತಹ ನದಿಗಳ ಫಲವತ್ತಾದ ಭೂಮಿಯಿಲ್ಲದ ಗ್ರೀಸರು ಬೌದ್ಧಿಕವಾಗಿ ಅಂತಹ ಔನ್ನತ್ಯ ಹೇಗೆ ಸಾಧಿಸಿದರು? ವಿದ್ವಾಂಸರು ಹೇಳುವ ಹಾಗೆ ಪ್ರಾಚೀನ ಗ್ರೀಸ್ ಮತ್ತು ಇತರ ನಾಗರಿಕತೆಗಳಿಗೆ ಇದ್ದ ಪ್ರಮುಖ ವ್ಯತ್ಯಾಸ ಅಲ್ಲಿನ ಧರ್ಮ. ಮೆಸೊಪೊಟೇಮಿಯಾ ಮತ್ತು ಈಜಿಪ್ಟ್‌ ಗಳಿಗೆ ಹೋಲಿಸಿದಲ್ಲಿ ಗ್ರೀಕ್ ಧರ್ಮದಲ್ಲಿ ಪ್ರಮುಖ ವ್ಯತ್ಯಾಸವಿತ್ತು. ನದಿ ಪಾತ್ರದ ನಾಗರಿಕತೆಗಳ ಧರ್ಮ ವಿಶ್ವದಲ್ಲಿ ಮಾನವನ ಸ್ಥಾನ ಹಾಗೂ ಗುರಿಯ ಕುರಿತಂತೆ ಬಹುಪಾಲು ಪ್ರಶ್ನೆಗಳಿಗೆ ಧರ್ಮದ ಮೂಲಕ ತನ್ನದೇ ಉತ್ತರಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಗ್ರೀಕ್ ಧರ್ಮ ಆ ಪ್ರಯತ್ನಗಳನ್ನು ಮಾಡಲಿಲ್ಲ. ಇತರ ಧರ್ಮಗಳಿಗೆ ಹೋಲಿಸಿದಲ್ಲಿ ಗ್ರೀಕ್ ಧರ್ಮ ಸರಳವಾಗಿತ್ತು, `ಬಾಲಿಶ ಮುಗ್ಧತೆ'ಯನ್ನು ಹೊಂದಿತ್ತು, ಪ್ರಶ್ನೆಗಳನ್ನು ಕೇಳುವುದಾಗಿತ್ತು. ಗ್ರೀಕ್ ಧರ್ಮ ತನ್ನ ಹಿಂದಿನ ಮೈಸೀನಿಯನ್ ನಾಗರಿಕತೆ ನಾಶಹೊಂದಿ, ಮೂರು ಶತಮಾನಗಳು ಅಂಧಕಾರದಲ್ಲಿದ್ದು ಅದರ ಸಂಸ್ಕೃತಿ ಹಾಗೂ ಧರ್ಮದ ಮುಂದುವರಿದ ಭಾಗವಾಗಿದ್ದು ಧರ್ಮದಲ್ಲಿ ಬಹಳಷ್ಟು ಜನಪದ ಹಾಗೂ ಕಟ್ಟುಕತೆಗಳೇ ಇದ್ದವು. ಅವೂ ಸಹ ಕವಿಗಳ, ಅಲೆಮಾರಿಗಳ ಬಾಯಿಂದ ಬಾಯಿಗೆ ಹರಡಿದ ಕತೆಗಳೇ ಆಗಿದ್ದವು. ಅದೇ ಸಮಯದ ಹೋಮರ್‌ನ `ಈಲಿಯಡ್' ಮತ್ತು `ಒಡಿಸ್ಸಿ'ಯಂತಹ ಪುರಾಣ ಕತೆಗಳೂ ಸಹ ಅವನ್ನೇ ಹೇಳುತ್ತವೆ. ಅವುಗಳಲ್ಲಿ ದೇವರು, ಮಾನವರು ಒಟ್ಟಿಗೇ ವ್ಯವಹರಿಸುತ್ತಾರೆ, ದೇವರುಗಳೂ ಸಹ ಮಾನವರೊಂದಿಗೆ ಲೈಂಗಿಕ ಸಂಬAಧ ಬೆಳೆಸುತ್ತಾರೆ ಹಾಗೂ ಅವರಿಗೂ ಮಾನವರ ಹಾಗೆ ದ್ವೇಷ, ಅಸೂಯೆ ಮುಂತಾದ ಮಾನವಸಹಜ ಗುಣಗಳೆಲ್ಲಾ ಇರುತ್ತವೆ. ಇದರಿಂದಾಗಿಯೇ ಗ್ರೀಕರಲ್ಲಿ ಕುತೂಹಲದಿಂದ ಪ್ರಶ್ನಿಸುವ, ಪರಿಶೋಧಿಸುವ ಮನೋಭಾವ ಬಂದಿತು ಹಾಗೂ ತನ್ಮೂಲಕ ವಿಜ್ಞಾನದ ಪೂರ್ವಜ ಜ್ಞಾನರೂಪವಾದ ತತ್ವಶಾಸ್ತ್ರ ರೂಪುಗೊಂಡಿತು ಎನ್ನಲಾಗಿದೆ. ಅದರಿಂದ ಟಿಸಿಲು ಹೊಡೆದದ್ದು ಗ್ರೀಕ್‌ ಖಗೋಳಶಾಸ್ತ್ರ, ಗಣಿತಶಾಸ್ತ್ರ ಮುಂತಾದವು. ಅವರ ಈ ಕುತೂಹಲದ ಅನ್ವೇಷಣೆಯೇ ಹಲವಾರು ಆವಿಷ್ಕಾರಗಳಿಗೆ, ವಿಜ್ಞಾನದ ಅಭಿವೃದ್ಧಿಗೆ ಪ್ರಾಚೀನ ಗ್ರೀಸ್‌ ನಲ್ಲಿ ಸಾಧ್ಯವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

          ಪ್ರಾಚೀನ ಗ್ರೀಸ್‌ ನ ಆರ್ಕಿಮಿಡೀಸ್, ಪೈಥಾಗೊರಸ್, ಅನಾಕ್ಸಿಮಿಡೀಸ್, ಹಿಪ್ಪೋಕ್ರೇಟ್ಸ್, ಅರಿಸ್ಟಾಟಲ್, ಹೆರಾಕ್ಲಿಟಸ್, ಅನಾಕ್ಸಿಮ್ಯಾಂಡರ್ ಮತ್ತು ಥೇಲೀಸ್ ಮುಂತಾದವರ ಆಗಿನ ವೈಜ್ಞಾನಿಕ ಅಧ್ಯಯನಗಳು ಮತ್ತು ಆವಿಷ್ಕಾರಗಳು ಇಂದಿನ ಹಲವಾರು ಆಧುನಿಕ ಸಿದ್ಧಾಂತಗಳಿಗೆ ಮತ್ತು ವೈಜ್ಞಾನಿಕ ಅಭಿವೃದ್ಧಿಗೆ ಕಾರಣವಾಗಿವೆ.

ಥೇಲೀಸ್ 

     ಈಗಿನ ಟರ್ಕಿಯಲ್ಲಿನ ಮಿಲೆಟಸ್‌ನಲ್ಲಿ ಕ್ರಿ.ಪೂ.620ರಲ್ಲಿ ಜನಿಸಿದ ಥೇಲೀಸ್‌ನನ್ನು `ವಿಜ್ಞಾನದ ಪಿತಾಮಹ'ನೆನ್ನುತ್ತಾರೆ. ಪ್ರಾಕೃತಿಕ ಜಗತ್ತನ್ನು ಹಾಗೂ ಅದರಲ್ಲಿ ಮಾನವನ ಸ್ಥಾನವನ್ನು ಆಗ ಇದ್ದ ದೈವಕೇಂದ್ರಿತ ಜಗತ್ತಿಗಿಂತ ವಿಭಿನ್ನವಾಗಿ ವಿವರಿಸಲು ಪ್ರಯತ್ನಿಸಿದವರಲ್ಲಿ ಥೇಲೀಸ್‌ನೇ ಮೊದಲನೆಯವನೆಂದು ಅರಿಸ್ಟಾಟಲ್ ಸಹ ಹೇಳಿದ್ದಾನೆ. ಥೇಲೀಸ್‌ಗಿಂತ ಮೊದಲಿದ್ದ ಹೀಸಿಯಾಡ್ ಜಗತ್ತನ್ನು ದೈವಾಧಾರಿತವಾಗಿ ವಿವರಿಸಲು ಯತ್ನಿಸಿದರೆ, ಥೇಲೀಸ್ ದೇವರ ಅಸ್ತಿತ್ವವನ್ನು ನಿರಾಕರಿಸದಿದ್ದರೂ ಜಗತ್ತು ಪ್ರಾಕೃತಿಕವಾಗಿ ದೇವರ ಹಸ್ತಕ್ಷೇಪವಿಲ್ಲದೆ ಸ್ವಯಂ ನಿಯಂತ್ರಿತವಾದುದೆಂಬ ಸಿದ್ಧಾಂತ ಮಂಡಿಸಿದ. ಆತನ ಅಧ್ಯಯನಗಳು ಮೂಲಭೂತ ತತ್ವಗಳ ಕುರಿತಾಗಿದ್ದು ವಸ್ತುವಿನ ಘಟಕಾಂಶಗಳ ಉಗಮವನ್ನು ಪ್ರಶ್ನಿಸಿದ. ಪ್ರಕೃತಿಯ ಹಲವಾರು ಘಟನೆಗಳಿಗೆ ವಿವರಣೆಗಳನ್ನು ನೀಡಲು ಪ್ರಯತ್ನಿಸಿದ ಹಾಗೂ ಆಕಾಶ ಮತ್ತು ಆಕಾಶಕಾಯಗಳ ಕುರಿತಾದ ಆತನ ಆಸಕ್ತಿಯಿಂದಾಗಿ ಗ್ರೀಕ್ ಖಗೋಳಶಾಸ್ತ್ರ ಪ್ರಾರಂಭವಾಯಿತು.

ಎರಟೊಸ್ತಿನೀಸ್

          ಪ್ರಾಚೀನ ಗ್ರೀಕ್ ಚರಿತ್ರೆಯಲ್ಲಿ ವಿಜ್ಞಾನವು ಪ್ರಮುಖವಾಗಿ ಗಣಿತಶಾಸ್ತ್ರ, ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರಗಳ ಆಧಾರಿತವಾಗಿದ್ದಿತು. ಅಲೆಕ್ಸಾಂಡ್ರಿಯಾದ ಎರಟೊಸ್ತಿನೀಸ್ (ಕ್ರಿ.ಪೂ. 3ನೇ ಶತಮಾನ) ಭೂಗೋಳಶಾಸ್ತ್ರ ಹಾಗೂ ಖಗೋಳಶಾಸ್ತ್ರದ ಕುರಿತ ತಜ್ಞನಾಗಿದ್ದು ಆ ಕುರಿತು ಗ್ರಂಥಗಳನ್ನು ರಚಿಸಿದ್ದಾನೆ ಹಾಗೂ ಭೂಮಿಯ ಪರಿಧಿಯನ್ನು ಕಂಡುಹಿಡಿದ ಮೊದಲ ವ್ಯಕ್ತಿ ಎರಟೊಸ್ತಿನೀಸ್ ಎನ್ನಲಾಗುತ್ತದೆ. ಅರಿಸ್ಟಾಟಲ್‌ನ ವಿದ್ಯಾರ್ಥಿಯಾಗಿದ್ದ ಥಿಯೋಫ್ರಾಸ್ಟಸ್‌ನನ್ನು (ಕ್ರಿ.ಪೂ. 371 – 287) ಸಸ್ಯಶಾಸ್ತ್ರದ ಪಿತಾಮಹನೆನ್ನುತ್ತಾರೆ. ಆತ ಸಸ್ಯಗಳ ವರ್ಗೀಕರಣ ಮಾಡಿ ಅವುಗಳಿಗೆ ಹೆಸರುಗಳನ್ನು ನೀಡಿದ. ಇಂದಿಗೂ ಆಧುನಿಕ ವೈದ್ಯರು ಹಿಪ್ಪೊಕ್ರೇಟ್ಸ್ ಹೆಸರಲ್ಲಿ ಶಪಥ ಮಾಡುತ್ತಾರೆ. 

ಹಿಪ್ಪೊಕ್ರೇಟ್ಸ್ 

ಹಿಪ್ಪೊಕ್ರೇಟ್ಸ್ (ಕ್ರಿ.ಪೂ. 460 – 370) ಗ್ರೀಸ್‌ ನ ಅಥೆನ್ಸ್ನಲ್ಲಿ ವೈದ್ಯನೆಂದು ಪ್ರಖ್ಯಾತನಾಗಿದ್ದ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿರುವಾತ. ವೈದ್ಯರು ತಮ್ಮ ವೃತ್ತಿಯಲ್ಲಿ ಅನುಸರಿಸಬೇಕಾದ ನೈತಿಕ ಪಾಲನೆಗಳನ್ನು ರಚಿಸಿ ಅವೇ ಇಂದು `ಹಿಪ್ಪೊಕ್ರೇಟಿಕ್ ಶಪಥ' ಎಂದು ಗುರುತಿಸಲ್ಪಟ್ಟಿದ್ದು ಎಲ್ಲ ಆಧುನಿಕ ವೈದ್ಯರು ತಾವು ವೈದ್ಯ ಪದವಿ ಪಡೆಯುವ ಸಮಯದಲ್ಲಿ ಈ ಶಪಥ ಮಾಡಬೇಕು.

ಪೈಥಾಗೊರಸ್

          ಪೈಥಾಗೊರಸ್ (ಕ್ರಿ.ಪೂ. 570 – 495) ತನ್ನ ಪೈಥಾಗೊರಸ್ ಪ್ರಮೇಯಕ್ಕೆ ಹೆಸರುವಾಸಿಯಾಗಿರುವ ಗ್ರೀಕ್ ಗಣಿತಶಾಸ್ತ್ರಜ್ಞ ಹಾಗೂ ಮಹಾನ್ ವಿದ್ವಾಂಸ. ತನ್ನನ್ನು ತತ್ವಜ್ಞಾನಿ ಎಂದು ಕರೆದುಕೊಂಡ ಮೊದಲ ವ್ಯಕ್ತಿ ಎನ್ನಲಾಗುತ್ತದೆ. ಆತನ ಹಲವಾರು ವಿಚಾರಗಳು ಪ್ಲೇಟೋನ ಮೇಲೂ ಸಹ ಪರಿಣಾಮ ಬೀರಿದ್ದವು. ಅಷ್ಟೇ ಅಲ್ಲ ಆತನ ವಿಚಾರಗಳನ್ನು ನಂತರದ ಕೋಪರ್ನಿಕಸ್, ಕೆಪ್ಲರ್, ನ್ಯೂಟನ್ ಮುಂತಾದವರು ಸಹ ಅಧ್ಯಯನ ಹಾಗೂ ಆಕರವಾಗಿ ಬಳಸುತ್ತಿದ್ದರು. ಇಂದಿನ ವಿದ್ಯಾರ್ಥಿಗಳ ಗಣಿತಶಾಸ್ತ್ರದ ಅಭ್ಯಾಸಗಳಲ್ಲಿ ಪೈಥಾಗೊರಸ್ ಇದ್ದೇ ಇರುತ್ತಾನೆ. ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ಪಠ್ಯಕ್ರಮ ಪರಿಷ್ಕರಣೆಯಲ್ಲಿ ಪೈಥಾಗೊರಸ್ ಪ್ರಮೇಯ ತೆಗೆದುಹಾಕುವುದಾಗಿ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಥೇಲೀಸ್ ಮತ್ತು ಪೈಥಾಗೊರಸ್‌ರನ್ನು ಹೆಲ್ಲೆನಿಕ್ ವಿಜ್ಞಾನದ ಆಧಾರ ಸ್ತಂಭಗಳೆಂದು ಹೇಳಲಾಗುತ್ತದೆ.

ಆರ್ಕಿಮಿಡೀಸ್

`ನನಗೆ ನಿಲ್ಲಲು ಸೂಕ್ತ ಸ್ಥಳ ಹಾಗೂ ಸಾಕಷ್ಟು ಉದ್ದದ ಸನ್ನೆಕೋಲನ್ನು ನೀಡಿ, ನಾನು ಈ ಭೂಮಿಯನ್ನೇ ಕದಲಿಸಬಲ್ಲೆ' 

          ಸೈರಕ್ಯೂಸ್‌ನ ಆರ್ಕಿಮಿಡೀಸ್ (ಕ್ರಿ.ಪೂ.287 –212) ಒಬ್ಬ ಮಹಾನ್ ಪ್ರತಿಭಾವಂತ ಗಣಿತಶಾಸ್ತ್ರಜ್ಞ, ಭೌತಶಾಸ್ತ್ರಜ್ಞ, ಇಂಜಿನಿಯರ್, ಖಗೋಳಶಾಸ್ತ್ರಜ್ಞ ಮತ್ತು ಆವಿಷ್ಕಾರಕ. ಆತನನ್ನು ಆ ಕಾಲದ ಮತ್ತು ಎಲ್ಲ ಕಾಲದ ಮಹಾನ್ ಗಣಿತಶಾಸ್ತ್ರಜ್ಞನೆಂದು ಪರಿಗಣಿಸಲಾಗುತ್ತದೆ. ಅಷ್ಟಲ್ಲದೆ ಮಹಾನ್ ಆವಿಷ್ಕಾರಕನೂ ಆಗಿದ್ದ ಆತ ಸ್ಕ್ರೂ ಪಂಪ್ (ಆರ್ಕಿಮಿಡೀಸ್ ಸ್ಕ್ರೂ), ಬಹುಹಂತದ ಸಂಕಿರ್ಣ ರಾಟೆಗಳನ್ನಲ್ಲದೆ ಸೈರಕ್ಯೂಸನ್ನು ದಾಳಿಯಿಂದ ರಕ್ಷಿಸಲು ಹಲವು ಯಂತ್ರಗಳನ್ನು ಕಂಡುಹಿಡಿದಿದ್ದನAತೆ. ಆಂಟಿಕಿತೆರಾ ಮೆಕ್ಯಾನಿಸಂನಲ್ಲೂ ಆತನ ವಿಚಾರಗಳ ಕೊಡುಗೆ ಇರಬಹುದೆಂದು ನಂಬಲಾಗಿದೆ. ಸನ್ನೆಕೋಲು (Lever) ಮತ್ತು ಊರೆಯ (Fulcrum) ಸಹಾಯದಿಂದ ಎಷ್ಟು ತೂಕವನ್ನು ಬೇಕಾದರೂ ಎತ್ತಬಹುದು ಎಂದ ಆತನ `ನನಗೆ ನಿಲ್ಲಲು ಸೂಕ್ತ ಸ್ಥಳ ಹಾಗೂ ಸಾಕಷ್ಟು ಉದ್ದದ ಸನ್ನೆಕೋಲನ್ನು ನೀಡಿ, ನಾನು ಈ ಭೂಮಿಯನ್ನೇ ಕದಲಿಸಬಲ್ಲೆ' ಎಂಬ ಆತನ ಮಾತು ಅತ್ಯಂತ ಜನಪ್ರಿಯವಾದುದು.

 ಸಾಕ್ರೆಟಿಸ್

          ಸಾಕ್ರೆಟಿಸ್, ಪ್ಲೇಟೊ ಮತ್ತು ಅರಿಸ್ಟಾಟಲ್‌ ರವರ ಕೊಡುಗೆಗಳನ್ನು ಉಲ್ಲೇಖಿಸದೇ ಪ್ರಾಚೀನ ಗ್ರೀಕ್ ಚರಿತ್ರೆ ಮತ್ತು ವಿಜ್ಞಾನ ಪೂರ್ಣವಾಗುವುದಿಲ್ಲ. ಸಾಕ್ರೆಟಿಸ್ (ಕ್ರಿ.ಪೂ. 470/469–399) ತನ್ನ ಬೋಧನಾ ವಿಧಾನಗಳಿಂದ ಹಾಗೂ ಚಿಂತನೆಗೆ ಹಚ್ಚುವ ಪ್ರಶ್ನೆಗಳಿಂದಾಗಿ ಜನಪ್ರಿಯನಾಗಿದ್ದ. ವಿದ್ಯಾರ್ಥಿಗಳಿಗೆ ದೀರ್ಘ ಉಪನ್ಯಾಸಗಳನ್ನು ನೀಡುವ ಬದಲಿಗೆ ಅವರ ಗ್ರಹಿಕೆ ಮತ್ತು ಕಲ್ಪನೆಗಳಿಗೆ ಸವಾಲೆಸೆಯುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದ. ಸಾಕ್ರೆಟಿಸ್ ತನ್ನ ಬದುಕು ಹಾಗೂ ಬೋಧನೆಗಳ ಬಗ್ಗೆ ಬರೆದು ದಾಖಲಿಸಲಿಲ್ಲ, ಆದರೆ ಅವೆಲ್ಲವೂ ನಮಗೆ ತಿಳಿದಿರುವುದು ಆತನ ವಿದ್ಯಾರ್ಥಿ ಪ್ಲೇಟೋ, ಚರಿತ್ರಕಾರ ಕ್ಸೆನೋಫೋನ್ ಮುಂತಾದವರ ಮೂಲಕ. ತನ್ನ ಬೋಧನೆಗಳಿಂದ ಯುವಜನರ ಮನಸ್ಸನ್ನು ಹಾಳುಮಾಡಿದ್ದಾನೆಂದು ಹಾಗೂ ಒಪ್ಪಿತ ಕಾನೂನು, ನಿಯಮ, ಧರ್ಮಗಳ ಉಲ್ಲಂಘನೆ ಮಾಡಿದ್ದಾನೆಂದು ಸಾಕ್ರೆಟಿಸ್‌ನನ್ನು ಅಥೆನ್ಸ್ ಸರ್ಕಾರ ಬಂಧಿಸುತ್ತದೆ. ಆತನಿಗೆ ತನ್ನ ಆಚಾರ ವಿಚಾರ, ನಂಬಿಕೆಗಳನ್ನು ಬದಲಿಸಿಕೊಳ್ಳುವುದಾದರೆ ಆತನನ್ನು ಬಿಡುಗಡೆ ಮಾಡುವುದಾಗಿ ಇಲ್ಲದಿದ್ದಲ್ಲಿ ಹೆಮ್ಲಾಕ್ ಸಸ್ಯದ ವಿಷ ಸೇವಿಸಿ ಪ್ರಾಣಬಿಡಬೇಕೆಂಬ ಶಿಕ್ಷೆ ವಿಧಿಸುತ್ತದೆ. ಆತ ಸೆರೆಮನೆಯಲ್ಲಿದ್ದಾಗ ಅಲ್ಲಿದ್ದ ಇತರರು ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿ ತೋರಿಸಿದರೂ ಆತ ಒಪ್ಪುವುದಿಲ್ಲ, ತನ್ನ ವಿದ್ಯಾರ್ಥಿಗಳು ಬೇಡಿಕೊಂಡರೂ ತನ್ನ ವಿಚಾರ, ನಂಬಿಕೆಗಳನ್ನು ಬದಲಿಸಿಕೊಳ್ಳುವುದಿಲ್ಲ. ಕ್ರಿ.ಪೂ.399ರಲ್ಲಿ ವಿಧಿಸಿದ ಶಿಕ್ಷೆಯಂತೆ ಹೆಮ್ಲಾಕ್ ವಿಷ ಸೇವಿಸಿ ಪ್ರಾಣ ಬಿಡುತ್ತಾನೆ.

ಪ್ಲೇಟೊ

ಅರಿಸ್ಟಾಟಲ್ 

          ಪ್ಲೇಟೊ (ಕ್ರಿ.ಪೂ. 428/427–348/347) ಮಾನವ ನಡತೆಯ ನೈತಿಕತೆ, ಒಳ್ಳೆಯತನ, ನ್ಯಾಯಪಾಲನೆ ಮುಂತಾದುವನ್ನು ಅಧ್ಯಯನ ಮಾಡುತ್ತಾನೆ. ಇಂದಿಗೂ ನಿಷ್ಕಾಮ ಪ್ರೇಮವಾದ `ಪ್ಲೆಟೋನಿಕ್ ಪ್ರೇಮ', `ಪ್ಲೆಟೋನಿಕ್ ಸಂಬಂಧ' ಮುಂತಾದುವು ಬಳಕೆಯಲ್ಲಿವೆ. ಸಾಕ್ರೆಟಿಸ್‌ನ ವಿಚಾರಗಳನ್ನು ಮುನ್ನಡೆಸುತ್ತಾನೆ ಹಾಗೂ ತನ್ನ ಶಿಷ್ಯ ಅರಿಸ್ಟಾಟಲ್‌ಗೂ (ಕ್ರಿ.ಪೂ. 384–322) ದಾರಿದೀಪವಾಗುತ್ತಾನೆ. ಅರಿಸ್ಟಾಟಲ್ ನೈತಿಕತೆಯ ಜೊತೆಗೆ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರಗಳನ್ನೂ ಅಧ್ಯಯನ ಮಾಡುತ್ತಾನೆ ಹಾಗೂ ತರ್ಕಶಾಸ್ತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಆತನಿಗಿದೆ. ಅರಿಸ್ಟಾಟಲ್ ಬಹುಪಾಲು ಜಗತ್ತನ್ನೇ ಗೆದ್ದ ಮ್ಯಾಸಿಡೋನಿಯಾದ ಸಾಮ್ರಾಟ ಅಲೆಕ್ಸಾಂಡರ್‌ನ ಬಾಲ್ಯದ ಗುರುವಾಗಿದ್ದ.

ಗಿಯರ್‌ ತಂತ್ರಜ್ಞಾನ

          ಪ್ರಾಚೀನ ಹಡಗಿನ ಅವಶೇಷದಲ್ಲಿ ದೊರಕಿದ ತುಕ್ಕು ಹಿಡಿದು ಸವೆದ ಕಂಚಿನ ನಿಘಂಟು ಗಾತ್ರದ ತುಂಡು ಆಂಟಿಕಿತೆರಾ ಮೆಕ್ಯಾನಿಸಂ ಒಂದು ನಿಬ್ಬೆರಗುಗೊಳಿಸುವ ಮುಂಬರಿದ ಖಗೋಳವಿಜ್ಞಾನದ ಗಣಕಯಂತ್ರವೆಂದು ಈಗ ಜಗತ್ತಿಗೆ ತಿಳಿದಿದೆ. ಕೆಲವು ವಿಜ್ಞಾನಿಗಳ ಪ್ರಕಾರ ಬಹುಶಃ ಅದರ ಸಂಬಂಧ ಪ್ರಖ್ಯಾತ ಗ್ರೀಕ್ ಗಣಿತಶಾಸ್ತ್ರಜ್ಞ, ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ ಹಾಗೂ ಸಂಶೋಧಕ ಆರ್ಕಿಮಿಡಿಸ್‌ಗೂ (ಕ್ರಿ.ಪೂ.287 – 212)  ಇರಬಹುದು.

          ರೋಮನ್ ಸೇನಾಧಿಪತಿ ಮಾರ್ಸೆಲ್ಲಸ್ ಮತ್ತು ಆತನ ಸೈನ್ಯ ಸಿಸಿಲಿಯಲ್ಲಿನ ಸೈರಾಕ್ಯುಸ್‌ನ ಮೇಲೆ ದಾಳಿ ಮಾಡಿ ಕೋಟೆಯನ್ನು ಪ್ರವೇಶಿಸಲು ಎರಡು ವರ್ಷದಿಂದ ಪ್ರಯತ್ನಿಸುತ್ತಿರುತ್ತಾರೆ. ಆ ಗ್ರೀಕ್ ನಗರವನ್ನು ಬಹಳ ಸುಲಭವಾಗಿ ಗೆಲ್ಲಬಹುದೆಂದು ರೋಮನ್ ಸೇನಾಧಿಪತಿ ಭಾವಿಸಿರುತ್ತಾನೆ, ಆದರೆ ಗ್ರೀಕರಿಗೆ ಆರ್ಕಿಮಿಡಿಸ್‌ನ ವಿಜ್ಞಾನ ಬೆಂಬಲಕ್ಕಿರುತ್ತದೆ. ಆರ್ಕಿಮಿಡಿಸ್ ವಿನ್ಯಾಸಗೊಳಿಸಿದ ವಿಶಿಷ್ಟ ಕೋಟೆಯ ಗೋಪುರಗಳು ಹಾಗೂ ತೂಕದ ಕಲ್ಲು ಗುಂಡುಗಳನ್ನು ಎಸೆಯುವ ಸಾಧನಗಳನ್ನು ಗ್ರೀಕರು ಬಳಸುತ್ತಿರುತ್ತಾರೆ. ಹಾಗಾಗಿ ಆ ತಂತ್ರಜ್ಞಾನಗಳನ್ನು ಎದುರಿಸಲು ರೋಮನ್ನರಿಂದ ಸಾಧ್ಯವಾಗುವುದಿಲ್ಲ.

          ಕ್ರಿ.ಪೂ. 212ರಲ್ಲಿ ಆರ್ಟೆಮಿಸ್ ದೇವತೆಯ ಹಬ್ಬದ ಸಂದರ್ಭದಲ್ಲಿ ಸೈರಕ್ಯೂಸನ್ನರು ಹಬ್ಬದ ಸಂಭ್ರಮದಲ್ಲಿ ಮೈಮರೆತಿರುವ ಸಂದರ್ಭದಲ್ಲಿ ರೋಮನ್ನರು ಕೊನೆಗೂ ಕೋಟೆಯೊಳಕ್ಕೆ ನುಗ್ಗಿ ಅದನ್ನು ವಶಪಡಿಸಿಕೊಳ್ಳುತ್ತಾರೆ. ರೋಮನ್ ಸೇನಾಧಿಪತಿಗೆ ತಮಗೆ ಅಷ್ಟೊಂದು ತಡೆಯೊಡ್ಡಿದ್ದ ವಿಜ್ಞಾನ, ತಂತ್ರಜ್ಞಾನಗಳ ಆವಿಷ್ಕಾರ ಮಾಡಿದ್ದ ಆರ್ಕಿಮಿಡಿಸ್‌ನನ್ನು ಜೀವಂತ ಸೆರೆಹಿಡಿದು ತರಲು ಆದೇಶಿಸುತ್ತಾನೆ. ಆದರೆ ಚರಿತ್ರಕಾರರ ಪ್ರಕಾರ ಯುದ್ಧದ ಗಲಭೆ ಗೊಂದಲದಲ್ಲಿ ಸೈನಿಕನೊಬ್ಬ ಅರ್ಕಿಮಿಡಿಸ್‌ನನ್ನು ಆತ ಯಾವುದೋ ಗಣಿತಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದಾಗ ಕತ್ತಿಯಲ್ಲಿ ತಿವಿದು ಕೊಂದುಬಿಡುತ್ತಾನೆ.

          ಆದರೂ ರೋಮನ್ನರಿಗೆ ಆರ್ಕಿಮಿಡಿಸ್‌ನ ಆವಿಷ್ಕಾರವೊಂದು ದೊರೆಯುತ್ತದೆ. ಆ ಆವಿಷ್ಕಾರ ಒಂದು ಕಂಚಿನ ಯಾಂತ್ರಿಕ ಗೋಲವಾಗಿದ್ದು ಅದು ಭೂಮಿಯಿಂದ ಕಾಣುವಂತೆ ಸೂರ್ಯನ, ಚಂದ್ರನ ಹಾಗೂ ಗ್ರಹಗಳ ಚಲನೆಯನ್ನು ತೋರಿಸುತ್ತಿರುತ್ತದೆ. ಸೇನಾಧಿಪತಿ ಮಾರ್ಸೆಲ್ಲಸ್ ಅದನ್ನು ತನ್ನೊಂದಿಗೆ ರೋಮ್‌ಗೆ ಕೊಂಡೊಯ್ಯುತ್ತಾನೆ ಹಾಗೂ ಅದು ಅವನ ಕುಟುಂಬದಲ್ಲಿ ಹಲವಾರು ತಲೆಮಾರುಗಳವರೆಗೆ ಜನರನ್ನು ನಿಬ್ಬೆರಗಾಗಿಸುವ ಪ್ರದರ್ಶನ ವಸ್ತುವಾಗಿ ಉಳಿದಿರುತ್ತದೆ. ಆ ಯಾಂತ್ರಿಕ ಗೋಲ ಸುಮಾರು ಎರಡು ಸಾವಿರದ ಇನ್ನೂರು ವರ್ಷಗಳ ಹಿಂದೆ (ಕ್ರಿ.ಪೂ. ಮೊದಲ ಶತಮಾನದಲ್ಲಿ) ಪ್ರಖ್ಯಾತ ರೋಮನ್ ವಿದ್ವಾಂಸ ಸಿಸೆರೋನ ಕಣ್ಣಿಗೆ ಬೀಳುತ್ತದೆ. `ಆರ್ಕಿಮಿಡಿಸ್‌ನ ಆವಿಷ್ಕಾರದ ಆ ಯಂತ್ರವನ್ನು ವಿಶೇಷವಾಗಿ ಶ್ಲಾಘಿಸಲೇಬೇಕು ಏಕೆಂದರೆ, ತಿರುಗುವ ಒಂದೇ ಗೋಲ ಯಂತ್ರದಲ್ಲಿ ವಿವಿಧ ಆಕಾಶಕಾಯಗಳ ವಿವಿಧ ಗತಿಯ ಚಲನೆಗಳನ್ನು ನಿಖರವಾಗಿ ಕಾಣುವಂತೆ ರಚಿಸಿದ್ದಾನೆ. ಆಕಾಶದಲ್ಲಿ ಸೂರ್ಯನ ಹಿಂದೆ ಎಷ್ಟು ದಿನ ಚಂದ್ರ ಇರುತ್ತಾನೋ ಅಷ್ಟೇ ದಿನಗಳು ಈ ಕಂಚಿನ ಗೋಲ ಯಂತ್ರದಲ್ಲಿಯೂ ಚಂದ್ರ ಸೂರ್ಯನ ಹಿಂದೆ ಇರುತ್ತಾನೆ' ಎಂದು ಸಿಸೆರೋ ಬರೆದಿದ್ದ.

          ಸಿಸೆರೋನ ಈ ಮಾತುಗಳು ಒಂದು ಉನ್ನತ ಯಾಂತ್ರಿಕ ಸಲಕರಣೆಯ ಬಗೆಗಿನ ವಿವರಣೆಯಾಗಿದೆ ಹಾಗೂ ಪ್ರಾಚೀನ ಗ್ರೀಕರು ಅಂಥವುಗಳನ್ನು ಆವಿಷ್ಕಾರ ಮಾಡಿದ್ದರೆನ್ನುವುದನ್ನು ಯಾರೂ ಊಹಿಸಿರಲಿಲ್ಲ ಮತ್ತು ಇತ್ತೀಚಿನವರೆಗೂ ಚರಿತ್ರಕಾರರು ಮಾರ್ಸೆಲ್ಲಸ್‌ನ ಯುದ್ಧದ ಬಗ್ಗೆ ಹಾಗೂ ಸಿಸೆರೋನ ಈ ಮಾತುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ.  ಅಷ್ಟಲ್ಲದೆ, ಸಿಸೆರೋನಿಗೆ ಯಾವುದೇ ತಾಂತ್ರಿಕ ತರಬೇತಿಯಿರಲಿಲ್ಲವಾದುದರಿಂದ ಆತ ಆ ಯಾಂತ್ರಿಕ ಉಪಕರಣ ಹೇಗೆ ಕೆಲಸ ಮಾಡುತ್ತಿತ್ತು ಎನ್ನುವುದನ್ನು ಆತ ವಿವರಿಸಿಲ್ಲ. ಆ ವಿವರಣೆ ಆತನ ಕಟ್ಟುಕತೆಯಾಗಿದ್ದರೂ ಇರಬಹುದು!

          ಈಗ, ಅದೇ ರೀತಿಯ ನಿಗೂಢ ಪ್ರಾಚೀನ ಉಪಕರಣವಾಗಿರುವ ಆಂಟಿಕಿತೆರಾ ಮೆಕ್ಯಾನಿಸಂನ ಅಧ್ಯಯನದಿಂದ ಸಿಸೆರೋ ಹೇಳಿದ್ದು ನಿಜವಿದ್ದರೂ ಇರಬಹುದು ಎನ್ನುತ್ತಾರೆ ತಜ್ಞರು. ಇದು ಸಿಸೆರೋನ ವಿವರಣೆಯ ಒಂದು ಶತಮಾನದ ನಂತರ ತಯಾರಿಸಿರುವಂಥದು. ಆ ವಿವರಣೆಯಂತಹ ಗಡಿಯಾರದ ಯಾಂತ್ರಿಕ ಚಲನೆಯ ಸಾಧನಗಳು ಪ್ರಾಚೀನ ಗ್ರೀಸ್‌ನಲ್ಲಿ ಆವಿಷ್ಕಾರ ಮಾಡಲಾಗಿತ್ತು ಹಾಗೂ ಪ್ರಾಚೀನ ಗ್ರೀಕ್ ತಂತ್ರಜ್ಞಾನ ನಾವೆಲ್ಲರೂ ಊಹಿಸಿದ್ದಕ್ಕಿಂತ ಹೆಚ್ಚು ಮುಂದುವರಿದದ್ದಾಗಿತ್ತು ಎನ್ನುವುದು ನಿಜವಾಗಿದೆ.

          ನಮ್ಮ ಆಧುನಿಕ ಜಗತ್ತಿನ ಕೀ ಕೊಡುವ ಗಡಿಯಾರಗಳ ಮೂಲ ಪ್ರಾಚೀನ ಗ್ರೀಸ್‌ನಿಂದಲೇ ಬಂದಿರಬಹುದೆ? ಈಗ ಅವೂ ಸಹ ಕಣ್ಮರೆಯಾಗಿ ಎಲ್ಲ ಗಡಿಯಾರಗಳೂ ಡಿಜಿಟಲ್ ಗಡಿಯಾರಗಳಾಗಿವೆ, ಅದು ಬೇರೇ ಮಾತು. ನಾವು ಮನೆಗಳಲ್ಲಿ ಬಳಸುತ್ತಿದ್ದ ಗಡಿಯಾರಗಳು ಅಷ್ಟೊಂದು ಸಂಕೀರ್ಣವಾಗಿರಲಿಲ್ಲ. ಆದರೆ ಅತ್ಯಂತ ಸಂಕೀರ್ಣವಾಗಿದ್ದ ಹಲವಾರು ಯಾಂತ್ರಿಕ ಚಲನೆಗಳಿದ್ದ ಬೃಹತ್ ಗಡಿಯಾರಗಳು ಜಗತ್ತಿನೆಲ್ಲೆಡೆ ಇದ್ದವು. ಸಮಯ ತೋರಿಸುವ ಸಾಧನಗಳು ಪ್ರಾಚೀನ ಬೆಬಿಲೋನ್ ಮತ್ತು ಈಜಿಪ್ಟಿನಲ್ಲಿ ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಇದ್ದವೆಂದು ಹೇಳಲಾಗುತ್ತದೆ. ಆದರೆ ಅವು ಗಿಯರ್ ಹೊಂದಿದ ಉಪಕರಣಗಳಾಗಿರಲಿಲ್ಲ. ಆಂಟಿಕಿತೆರಾ ಮೆಕ್ಯಾನಿಸಂನಂತಹ ಖಗೋಳಶಾಸ್ತ್ರದ ಗಿಯರ್‌ಗಳುಳ್ಳ ಉಪಕರಣಗಳು ಸಮಯವನ್ನೂ ತೋರಿಸುತ್ತಿದ್ದವು ಎನ್ನಲಾಗಿದೆ. ಇಂಗ್ಲೆಂಡಿನ ಬೆಡ್‌ಫೋರ್ಡ್ ಶೈರ್‌ನ ಡನ್‌ಸ್ಟೇಬಲ್ ಪ್ರಿಯಾರಿಟಿಯಲ್ಲಿ 1283ರಲ್ಲಿ ಮೊದಲ ಯಾಂತ್ರಿಕ ಗಡಿಯಾರ ಸ್ಥಾಪಿಸಲಾಯಿತೆಂದು ದಾಖಲೆಗಳು ಹೇಳುತ್ತವೆ. ರೋಮನ್ ಕ್ಯಾಥೋಲಿಕ್ ಚರ್ಚ್ ನ ಅನುಯಾಯಿಗಳ ಪ್ರಾರ್ಥನೆಯ ಸಮಯದ ನಿಖರತೆಗಾಗಿ ಗಡಿಯಾರ ತಂತ್ರಜ್ಞಾನವನ್ನು ಯೂರೋಪಿನಾದ್ಯಂತ ಪಸರಿಸಿದರು ಎನ್ನಲಾಗುತ್ತದೆ.

          ಆದರೆ ಯಾಂತ್ರಿಕ ಚಲನೆಯ ಗಡಿಯಾರ ತಂತ್ರಜ್ಞಾನ ಖಗೋಳಶಾಸ್ತ್ರದ ಉಪಕರಣಗಳಿಂದಲೇ ಟಿಸಿಲೊಡೆದಿದೆ. ಈ ತಂತ್ರಜ್ಞಾನ ಗ್ರೀಕ್ ವಿಜ್ಞಾನ ಮತ್ತು ತಂತ್ರಜ್ಞಾನದಿಂದಲೇ ನಿರಂತರ ಮುಂದುವರಿದಿದೆ ಎನ್ನಲಾಗಿದೆ. ಆಂಟಿಕಿತೆರಾ ಮೆಕ್ಯಾನಿಸಂ ಸಹ ಆ ಮುಂದುವರಿಕೆಯ ಭಾಗವಾಗಿದೆ. ಮಧ್ಯಕಾಲೀನ ಯುಗಕ್ಕೆ ಆ ತಂತ್ರಜ್ಞಾನ ಇಸ್ಲಾಂ ವಿಜ್ಞಾನದ ಮೂಲಕ ಪಸರಿಸಿರುವ ಕುರುಹೊಂದು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನ ಚರಿತ್ರೆಯ ಮ್ಯೂಸಿಯಂನಲ್ಲಿದೆ.

          ಜಗತ್ತಿನ ಇಸ್ಲಾಂ ಆಳ್ವಿಕೆಯಲ್ಲಿ ಅಬ್ಬಾಸಿದ್ ಖಲೀಫರ ಆಳ್ವಿಕೆಯನ್ನು ಇಸ್ಲಾಂ ಜಗತ್ತಿನ ವಿಜ್ಞಾನದ ದೃಷ್ಟಿಯಿಂದ ಬಹಳ ಪ್ರಮುಖವೆಂದು ಪರಿಗಣಿಸಲಾಗಿದೆ. ಅಬ್ಬಾಸಿದ್ ಖಲೀಫರ ಆಳ್ವಿಕೆಯ (ಕ್ರಿ.ಶ. 750 – 1258) ಪ್ರಾರಂಭವನ್ನು ಅರಾಬಿಕ್ ವಿಜ್ಞಾನದ ಸುವರ್ಣ ಯುಗ ಎನ್ನುತ್ತಾರೆ. ಗಣಿತಶಾಸ್ತ್ರ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಜಿನಿಯರಿಂಗ್, ರಾಸಾಯನಶಾಸ್ತ್ರದ ವಾಣಿಜ್ಯೀಕರಣ, ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿ ಮತ್ತು ತತ್ವಶಾಸ್ತ್ರ ಮುಂತಾದುವನ್ನು ಬೃಹತ್ ಪ್ರಮಾಣದಲ್ಲಿ ಅರಾಬಿಕ್‌ಗೆ ಅನುವಾದ ಮಾಡಲಾಯಿತು. ಈ ಅನುವಾದ ಆಂದೋಲನ ಸುಮಾರು ಎರಡು ಶತಮಾನಗಳ ಕಾಲ ಯಶಸ್ವಿಯಾಗಿ ನಡೆಯಿತು ಹಾಗೂ ಈ ಅವಧಿಯಲ್ಲಿ ಗ್ರೀಕರ, ಪರ್ಷಿಯನ್ನರ ಮತ್ತು ಭಾರತೀಯರ ಪ್ರಾಚೀನ ನಾಗರಿಕತೆಗಳ ಜ್ಞಾನ ಭಂಡಾರ ಅರಾಬಿಕ್‌ ಗೆ ಅನುವಾದಗೊಂಡಿತು ಹಾಗೂ ಇಸ್ಲಾಮಿಕ್ ಸಾಮ್ರಾಜ್ಯದಲ್ಲಿ ವಿದ್ವತ್ತಿನ ಸಂಸ್ಕೃತಿ ನೆಲೆಗೊಂಡಿತು.

ಆಕ್ಸ್ ಫರ್ಡ್ ವಿಜ್ಞಾನ ಚರಿತ್ರೆಯ ಮ್ಯೂಸಿಯಂನಲ್ಲಿ 13ನೇ ಶತಮಾನದ ಗಿಯರ್ ಉಳ್ಳ ದಿನಸೂಚಿ-ಗಣಕ ಉಪಕರಣ

          ಆಕ್ಸ್ ಫರ್ಡ್ ವಿಜ್ಞಾನ ಚರಿತ್ರೆಯ ಮ್ಯೂಸಿಯಂನಲ್ಲಿ 13ನೇ ಶತಮಾನದ ಗಿಯರ್ ಉಳ್ಳ ದಿನಸೂಚಿ-ಗಣಕ ಉಪಕರಣವೊಂದಿದ್ದು ಅದರಲ್ಲಿ ವಿವಿಧ ಅವಧಿಯಲ್ಲಿ ಸೂರ್ಯ ಮತ್ತು ಚಂದ್ರನ ಚಲನೆಗಳ ಸಮಯವನ್ನು ಸೂಚಿಸುತ್ತದೆ. ಇದರ ವಿನ್ಯಾಸವನ್ನು ಕ್ರಿ.ಶ. 1000ರಲ್ಲಿ ಇಸ್ಲಾಂ ಜಗತ್ತಿನ ಖಗೋಳಶಾಸ್ತ್ರಜ್ಞ ಅಲ್-ಬಿರೂನಿ ರಚಿಸಿರುವ ಹಸ್ತಪ್ರತಿಯಲ್ಲಿ ಗುರುತಿಸಬಹುದು. ಈ ಉಪಕರಣ ಆಂಟಿಕಿತೆರಾ ಮೆಕ್ಯಾನಿಸಂಗಿಂತ ಅತ್ಯಂತ ಸರಳವಾದುದಾಗಿದೆ ಆದರೆ ಅದರಲ್ಲಿ ಬಳಸಿರುವ ಹಲವಾರು ತಾಂತ್ರಿಕ ವಿನ್ಯಾಸಗಳನ್ನು ಆಂಟಿಕಿತೆರಾ ಮೆಕ್ಯಾನಿಸಂನಲ್ಲಿ ಗುರುತಿಸಬಹುದು ಹಾಗೂ ಅವೆರಡೂ ಒಂದೇ ಮೂಲದ ತಾಂತ್ರಿಕ ವಿನ್ಯಾಸಗಳಿಂದ ರೂಪುಗೊಂಡಿವೆ ಎನ್ನಬಹುದು. ಇಸ್ಲಾಂ ವಿಜ್ಞಾನ ಗ್ರೀಕ್ ವಿದ್ವತ್ತಿನಿಂದ ಬಹಳಷ್ಟು ಪಡೆದುಕೊಂಡಿದೆ. ಬಹುಶಃ ಅರಬ್ಬರಿಗೆ ಆ ತಾಂತ್ರಿಕ ಜ್ಞಾನ ಗ್ರೀಕ್ ಪಠ್ಯಗಳ ಮೂಲಕ ಅವರಿಗೆ ಮೊದಲಿಗೆ ದೊರೆತಿತ್ತು ಹಾಗೂ ಕ್ರಮೇಣ ಅದನ್ನು ಮತ್ತಷ್ಟು ಸುಧಾರಣೆಗೊಳಿಸಿ ಮಧ್ಯಕಾಲೀನ ಯೂರೋಪಿಗೆ ತಲುಪಿರಬೇಕು. ಅಲ್ಲಿಂದ ಆಧುನಿಕ ಗಡಿಯಾರ ತಂತ್ರಜ್ಞಾನ ಇಡೀ ಜಗತ್ತು ಪಸರಿಸಿತು. ಆಂಟಿಕಿತೆರಾ ಮೆಕ್ಯಾನಿಸಂ ಕೇವಲ ಆಕಸ್ಮಿಕ ತಂತ್ರಜ್ಞಾನವಲ್ಲ, ಅದು ಹೆಲ್ಲೆನಿಸ್ಟಿಕ್ ನಾಗರಿಕತೆಯಲ್ಲಿ ಬಹುಶಃ ಪ್ರಮುಖ ಪಾತ್ರ ವಹಿಸುತ್ತಿದ್ದಿರಬಹುದು. ಆದರೆ ಅದು ನಮಗೆ ದೊರಕಿರುವುದು ಮಾತ್ರ ಆಕಸ್ಮಿಕ.

j.balakrishna@gmail.com