ಸೋಮವಾರ, ಫೆಬ್ರವರಿ 05, 2024

ಪುಸ್ತಕ ಪರಿಚಯ: ನಡೆದಷ್ಟು ದೂರ By ಎನ್.ಆರ್.ಬಾಲಸುಬ್ರಮಣ್ಯ

  ಎನ್.ಆರ್.‌ ಬಾಲಸುಬ್ರಹ್ಮಣ್ಯ ನನಗೆ ಪರಿಚಯವಾದದ್ದು ನಾನು ಚಿತ್ರದುರ್ಗದಲ್ಲಿ 1993ರಿಂದ 1998ರವರೆಗೆ ಇಂಡಿಯನ್‌ ಬ್ಯಾಂಕ್‌ ಅಧಿಕಾರಿಯಾಗಿದ್ದಾಗ. ನನ್ನ ಬ್ಯಾಂಕ್‌ ಸಹೋದ್ಯೋಗಿ ಬಾಲಸುಬ್ರಹ್ಮಣ್ಯ ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲಿ ಆಸಕ್ತಿಯುಳ್ಳವರು, ಪುಸ್ತಕಗಳ ಕುರಿತು ಅಂದಿನಿಂದಲೂ ನನ್ನೊಂದಿಗೆ ಚರ್ಚೆ, ವಿಚಾರವಿನಿಮಯ ಮಾಡುತ್ತಾ ಬಂದಿದ್ದಾರೆ. ನಾನು ಬ್ಯಾಂಕ್‌ ಬಿಟ್ಟು 25 ವರ್ಷಗಳಾಗಿದ್ದರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂದು ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಬಾಲು ನನ್ನ ಪ್ರವಾಸ ಕಥನ "ನಡೆದಷ್ಟು ದೂರ" ಕುರಿತಂತೆ ತಮ್ಮ ಅನಿಸಿಕೆ ತಿಳಿಸಿದ್ದಾರೆ.



ಪುಸ್ತಕ ಪರಿಚಯ: ನಡೆದಷ್ಟು ದೂರ

ಲೇಖಕರು: ಡಾ. ಜೆ ಬಾಲಕೃಷ್ಣ

ಪ್ರಕಾಶಕರು: ಆಸೀಮ ಅಕ್ಷರ, ಬೆಂಗಳೂರು



             ಗೆಳೆಯ ಬಾಲಕೃಷ್ಣ ತಮ್ಮ ಪ್ರವಾಸ ಕಥನ ‘ನಡೆದಷ್ಟು ದೂರ’ ಪ್ರತಿಯನ್ನು ದೂರದಲ್ಲಿರುವ ನನಗೆ ಕಳಿಸುವ ಮೂಲಕ ಎಂದಿನ ಸರಳ ಸಜ್ಜನಿಕೆಯನ್ನು  ತೋರಿ ನನ್ನ ಓದಿನ ಪ್ರೀತಿಯನ್ನು ಪೋಷಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಗಳಿಗೆ ನಾನು ಆಭಾರಿ.

             ‘ನಡೆದಷ್ಟು ದೂರ -ಪ್ರವಾಸ ಕಥನ” ಬಾಲಕೃಷ್ಣ ಅವರು ತಾವು ಪ್ರವಾಸ ಮಾಡಿರುವ ದೇಶ ವಿದೇಶಗಳ ಬಗ್ಗೆ ಈ ಹಿಂದೆ ಬರೆದಿದ್ದ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಬಿಡಿ ಬರಹಗಳ ಪುಸ್ತಕ ರೂಪ. ಇದರಲ್ಲಿ  ದೇಶ ವಿದೇಶಗಳ ಪ್ರವಾಸಾನುಭವದ ಒಟ್ಟು ಹತ್ತೊಂಬತ್ತು ಲೇಖನಗಳಿವೆ. ಎಲ್ಲಾ ಲೇಖನಗಳು ಒಂದಕ್ಕಿಂತಲೂ ಒಂದು ವಿಭಿನ್ನವಾಗಿವೆ. ಇದಕ್ಕೆ ಕಾರಣ ಬಾಲಕೃಷ್ಣ ಅವರು ಪ್ರವಾಸ ಮಾಡಿರುವ ಬೇರೆ ಬೇರೆ ದೇಶಗಳು, ಸ್ಥಳಗಳ ಪರಿಚಯ ಮಾತ್ರವಲ್ಲದೇ ಇನ್ನೂ ಮಿಗಿಲಾಗಿ ಅವರಿಗಿರುವ ಪ್ರವಾಸ ಕುತೂಹಲ, ಹೊಸ ವಿಷಯಗಳ ಬಗ್ಗೆ ಅವರಿಗಿರುವ ಅನ್ವೇಷಣಾಸಕ್ತಿ, ಬದುಕನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಮನಸ್ಥಿತಿ ಮತ್ತು ಯಾವುದೇ ವಿಷಯವನ್ನು ಆಳವಾಗಿ ಅರಿತು ತಿಳಿಯುವ ಕೌತುಕತೆ. ಹೀಗಾಗಿ ಅವರ ಇಲ್ಲಿನ ಬರಹಗಳು ಬೇರೆ ಪ್ರವಾಸ ಕಥನಗಳಿಗಿಂತ ಭಿನ್ನವಾಗಿದ್ದು ಒಂದು ರೀತಿಯಲ್ಲಿ ಸಂಶೋಧನಾ ಲೇಖನಗಳೇ ಆಗಿವೆ.

             ಇತ್ತೀಚಿನ ದಿನಗಳಲ್ಲಿ ಜನ ಪ್ರವಾಸ ಎಂದರೆ ಕೇವಲ‌ ಮೋಜು ಮಸ್ತಿ ಮನರಂಜನೆಗಷ್ಟೇ ಸೀಮಿತಗೊಳಿಸಿಕೊಂಡು, ಬೌದ್ದಿಕ ಬೆಳವಣಿಗೆಗೆ ಸಹಕಾರಿ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಹೋದಲ್ಲೆಡೆ ಪರಿಸರ ನಾಶ ಮಾಡುತ್ತ ವಿಕ್ಷಿಪ್ತಗೊಳಿಸುತ್ತಿರುವಾಗ, ಬಾಲಕೃಷ್ಣ ಅವರ ಪ್ರವಾಸ ಕಥನ ಮನಸ್ಸಿಗೆ ಹಿತ, ಸಮಾಧಾನ ಕೊಡುತ್ತದೆ. ಒಂದೊಂದು ಲೇಖನವೂ ನಮಗೆ ಅಲ್ಲಿನ ಚರಿತ್ರೆ, ಸಮಾಜ, ಸಂಸ್ಕೃತಿಗಳನ್ನು ಪರಿಚಯಿಸುತ್ತದೆ.  ಅವರು ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬೌದ್ದಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವುದರಿಂದ ಓದುಗರಿಗೂ ಸಹ ಅದೇ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳಲು ಬಳಸಿರುವ ಭಾಷೆ, ಶೈಲಿ ಸುಲಭ ಮತ್ತು ಸರಳವಾಗಿದೆ. ಯಾವುದೇ ಅನಗತ್ಯ ವಿಷಯಗಳನ್ನು ಸೇರಿಸದೆ ಅತಿ ದೀರ್ಘವೂ ಅಲ್ಲದ, ಅತಿ ಸಂಕ್ಷಿಪ್ತವೂ ಅಲ್ಲದ ಸಮತೋಲನ ಕಾಯ್ದುಕೊಂಡ ಬರಹಗಳು, ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಸಂಗ್ರಹಿಸಿರುವ ಸಾಕಷ್ಡು ಮಾಹಿತಿಗಳು ಕುತೂಹಲಕಾರಿಯಾಗಿರುವುದರಿಂದ ಪುಸ್ತಕ ಕೆಳಗಿಡಲು ಮನಸ್ಸೇ ಬರುವುದಿಲ್ಲ.

             ನಾನು  ಗಮನಿಸಿರುವ ಅಂಶವೆಂದರೆ ದೇಶ ವಿದೇಶಗಳನ್ನು ಸುತ್ತಿದ್ದರೂ ಅವರು ನೋಡಿರುವ ಸ್ಥಳಗಳು ಸ್ಥಳಿಯವೇ ಇರಲಿ, ವಿದೇಶವೇ ಇರಲಿ, ಎಲ್ಲದರಲ್ಲೂ ಅವರ ತೋರಿರುವ ಆಸಕ್ತಿ ಮತ್ತು ನೀಡಿರುವ ಪ್ರಾಮುಖ್ಯತೆ ಸಮಾನವಾದದ್ದು . ಇಂಗ್ಲೆಂಡಿನ ವಸ್ತು ಸಂಗ್ರಹಾಲಯ ಅಥವಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಬಗ್ಗೆ ತೋರಿದ ಆಸಕ್ತಿ  ಉತ್ಸಾಹಗಳನ್ನೇ  ಅವರು ಚಿತ್ರದುರ್ಗದ ಮರಡಿಹಳ್ಳಿಯ ಪಿಲ್ಲೋ ಲಾವಾದ ಭೇಟಿಯಲ್ಲೂ ತೋರಿದ್ದಾರೆ. ತಾವು ಭೇಟಿ ನೀಡಿರುವ ವಿದೇಶಿ ಸ್ಥಳಗಳು ಪ್ರತಿಷ್ಟಿತವಾದುದೆಂದು, ಇಲ್ಲಿನ ಸ್ಥಳಗಳನ್ನು ನಿರ್ಲಕ್ಷಿಸದೆ ಅವುಗಳನ್ನೂ ಅಷ್ಟೇ ಶ್ರಧ್ದೆಯಿಂದ ದಾಖಲಿಸಿದ್ದಾರೆ.

             ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಭೇಟಿ ನೀಡುವ ಬಾಲಕೃಷ್ಣ ಅವರು ಅಲ್ಲಿ ಟಿಪ್ಪುವಿನ ಹುಲಿ ಯಂತ್ರ ಗೊಂಬೆ ನೋಡಿ ಲೇಖನದುದ್ದಕ್ಕೂ ಟಿಪ್ಪು ಮತ್ತು ಹುಲಿ ನಡುವೆ ಇದ್ದ ಸಂಬಂಧವನ್ನು ಅಲ್ಲಿ ಸಂಗ್ರಹಿಸಿರುವ ಇತರ ವಸ್ತುಗಳ ಬಗ್ಗೆ ವಿವರಿಸುತ್ತಾರೆ. ಟಿಪ್ಪುವನ್ನು ಹುಲಿಯಿಂದ ಬೇರ್ಪಡಿಸಿ ನೋಡಲಾಗದು ಎಂದು ಹೇಳಿ ಅದಕ್ಕೆ ಪೂರಕ ಐತಿಹಾಸಿಕ ಚಾರಿತ್ರಿಕ ದಾಖಲೆಗಳನ್ನು ನಮಗೆ ಒದಗಿಸುತ್ತಾರೆ. ಬ್ರಿಟೀಷರಿಗೆ ಟಿಪ್ಪು ವ್ಯಾಘ್ರಸ್ವಪ್ನನಾಗಿದ್ದ ಎಂದು ಬರೆಯುವ ಬಾಲಕೃಷ್ಣ ಅದಕ್ಕೆ ಪೂರಕ ಮಾಹಿತಿಗಳನ್ನು  ನೀಡಿದ್ದಾರೆ. ಇನ್ನೂ ವಿಶದವಾಗಿ ಬರೆದರೆ ಓದುವ ಕುತೂಹಲವಿರುವುದಿಲ್ಲ. ಹಾಗಾಗಿ ಇಲ್ಲಿಗೇ ನಿಲ್ಲಿಸುವೆ.

             ಕೋನಾರ್ಕ್ ದೇವಾಲಯದ ಶಿಲ್ಪಕಲೆಯ ಸೌಂದರ್ಯಕ್ಕೆ ಮಾರುಹೋಗುವ ಬಾಲಕೃಷ್ಣ ಅವರು ಅಲ್ಲಿ ನಾಶವಾಗಿರುವ ಶಿಲ್ಪಕಲಾ ಸಂಪತ್ತಿಗೆ ಮರುಗುತ್ತಾ, ಹಿಂದೆ ಹೇಗಿದ್ದಿರಬಹುದು ಎಂದು visualize ಮಾಡಲು ಪ್ರಯತ್ನಿಸಿ ಕೊನೆಗೆ ಹೀಗೆ ಬರೆಯುತ್ತಾರೆ. “ಉಳಿದಿರುವ ಪಾಳು ದೇಗುಲಗಳ ಸಮುಚ್ಛಯವನ್ನು ಕೌತುಕದಿಂದ ನೋಡುವಾಗ ನಮಗೆ ಕಾಲವನ್ನು ಹಿಂದೆ ಸರಿಸಲು ಸಾಧ್ಯವಾಗುವಂತಿದ್ದರೆ ಅಥವಾ ನಾವೇ ಕಾಲಯಂತ್ರದಲ್ಲಿ ಭೂತಕಾಲಕ್ಕೆ ಹೋಗಿ ಆ ಸೂರ್ಯದೇಗುಲದ ಮೊದಲಿನ ಭವ್ಯತರ ಕಣ್ಣಾರೆ ಕಾಣಲು ಸಾಧ್ಯವಾಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಅನ್ನಿಸುತ್ತದೆ.”  ಇದನ್ನು ಓದಿಯೇ ನಾವು ಹಿಂದಿನ ಭವ್ಯ ಶಿಲ್ಪಕಲೆ ಹೇಗಿದ್ದಿರಬಹುದೆಂದು ಊಹಿಸಬಹುದು. ಮುಂದುವರೆಯುತ್ತಾ  ಅಲ್ಲಿನ ಒರಿಸ್ಸಾ ವಾಸ್ತುಕಲೆ, ಕೋನಾರ್ಕ್ ನ ಮಿಥುನ ಶಿಲ್ಪಗಳು, ಭುವನೇಶ್ವರದ ಭವ್ಯ ಲಿಂಗರಾಜ ದೇವಾಲಯ ಇವೆಲ್ಲವೂ ನಮ್ಮ ಕಣ್ಮುಂದೆ ಬರುವಂತೆ ಚಿತ್ರಿಸಿದ್ದಾರೆ.

             ಇನ್ನೊಂದು ಅತ್ಯಂತ ಕುತೂಹಲ ಕೆರಳಿಸುವ ಲೇಖನ ಥಾಯ್ಲಾಂಡಿನ ಕಥೋಯ್ ಗಳು. ಆ ದೇಶದ ಪ್ರಸಿದ್ಧ ಮಾತಾದ “ನೀನು ಅತ್ಯಂತ ಸುಂದರ ಹೆಣ್ಣನ್ನು ಭೇಟಿಯಾದಲ್ಲಿ ಎಚ್ಚರದಿಂದರು ಆ ಹೆಣ್ಣು ಗಂಡಸಾಗಿರಬಹುದು” ಉಲ್ಲೇಖಿಸಿ ಬರೆಯುವ ಬಾಲಕೃಷ್ಣ ಅವರು ಥಾಯ್ ಭಾಷೆಯಲ್ಲಿ ಕಥೋಯ್ ಎಂದು ಕರೆಯುವ ಹೆಂಗಂಡಸರು ಅಥವಾ ಲೇಡಿ-ಬಾಯ್ ಗಳ ಬಗ್ಗೆ ನಮಗೆ ಒಂದು ಉತ್ತಮ ಚಿತ್ರಣ ನೀಡುತ್ತಾರೆ. ಆ ಕಥೋಯ್ ಗಳು ಯಾರು, ಅವರ ಲಕ್ಷಣಗಳು, ಅವರ ಬದುಕು, ಅಲ್ಲಿ ಅವರನ್ನು ದೇಶ ಜನ ನಡೆಸಿಕೊಳ್ಳುವ ರೀತಿ, ಅವರ ಸಾಧನೆಗಳು ಇವೆಲ್ಲವನ್ನು ಅಂಕಿ ಅಂಶಗಳ ಸಹಿತ ನಮಗೆ ಮಾಹಿತಿ ನೀಡುತ್ತಾರೆ. ಕಥೋಯ್ ಗಳಲ್ಲಿ ಒಬ್ಬರು ಬಾಕ್ಸಿಂಗ್ ಚಾಂಪಿಯನ್, ಗಗನಸಖಿಯರಿದ್ದಾರೆ, ಸೌಂದರ್ಯ ಸ್ಪರ್ಧಿಗಳಿದ್ದಾರೆ ಎಂಬ ವಿಷಯ  ನಮ್ಮ ಮುಂದಿಟ್ಟಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಂತಹ ಅಪರೂಪದ ಸಂಗತಿಗಳನ್ನು ಒದಗಿಸಿರುವ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

             ಇನ್ನೊಂದು ತುಂಬಾ ಆಸಕ್ತಿ ಕೆರಳಿಸುವ ಲೇಖನ ವ್ಯವಹಾರ ಚತುರ ಉಲುವಾಟು ಮಂಗಗಳು. ಉಲುವಾಟು ಇಂಡೋನೇಷ್ಯಾ ದೇಶದ ದಕ್ಷಿಣ ಬಾಲಿಯ ಸುಂದರ ಸ್ಥಳ. ಇಲ್ಲಿನ ಮಂಗಗಳು ತಮ್ಮ ಆಹಾರಕ್ಕಾಗಿ ಒಂದು ವಿಚಿತ್ರವಾದ ನಡವಳಿಕೆಯನ್ನು ಕಂಡುಕೊಂಡಿವೆ. ಅದೇನೆಂದರೆ ಪ್ರವಾಸಿಗಳ ಅಮೂಲ್ಯ ವಸ್ತುಗಳನ್ನು ಕದ್ದು ದೂರ ಹೋಗದೆ ಅಲ್ಲೇ ಕೂತಿದ್ದು ಅವಕ್ಕೆ ಇಷ್ಟವಾಗುವ ಗುಣಮಟ್ಟದ ಅಥವಾ ಪ್ರಮಾಣದ ಆಹಾರ ದೊರೆತರೆ ಅವು ಕದ್ದ ವಸ್ತುಗಳನ್ನು ಅಲ್ಲೇ ಜಾರಿಸಿ ಹೋಗುತ್ತವೆ. ಇದನ್ನು ಸ್ಥಳೀಯರಿಂದ ತಿಳಿದ ಲೇಖಕರು ಇನ್ನೂ ಮುಂದೆ ಹೋಗಿ ಅವುಗಳಿಗೆ  ಈ ರೀತಿಯ ನಡವಳಿಕೆ ಹೇಗೆ ಬಂದಿರಬಹುದೆಂದು ವೈಜ್ಞಾನಿಕ ಅಧ್ಯಯನ ನಡೆದಿದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವರು 2010ರಲ್ಲಿ ಬೆಲ್ಜಿಯಂ ಲೀಚ್ ವಿಶ್ವ ವಿದ್ಯಾಲಯದ ನಡವಳಿಕೆ ಜೀವಶಾಸ್ತ್ರ ವಿಭಾಗದ ಫ್ಯಾನಿ ಬ್ರಾಟ್ ಕಾರ್ನ್ ಇತರ ವಿಜ್ಞಾನಿಗಳ ಅಧ್ಯಯನದ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾದ ಅಂಶಗಳನ್ನು ಸಂಕ್ಷಿಪ್ತವಾಗಿ ನಮ್ಮ ಮುಂದಿಡುತ್ತಾರೆ.

             ಹೀಗೆ ಈ ಪುಸ್ತಕದಲ್ಲಿ ಒಟ್ಟು ಹತ್ತೊಂಬತ್ತು ಲೇಖನಗಳಿವೆ. ಒಂದೊಂದು ಲೇಖನವು ಲೇಖಕರ ಅನುಭವ, ಆಯಾ ಸ್ಥಳಗಳ ಚರಿತ್ರೆ ಮತ್ತು ಸಂಸ್ಕೃತಿಗಳನ್ನು ದಾಖಲಿಸಿದ್ದಾರೆ. ಇನ್ನೂ ವಿಶೇಷವಾದ ಅಂಶವೆಂದರೆ ಲೇಖಕರೇ ಪರಿಣಿತ ಛಾಯಾಗ್ರಾಹಕರಾಗಿರುವುದರಿಂದ ಎಲ್ಲಾ ಲೇಖನಗಳಲ್ಲೂ ಸಂದರ್ಭಕ್ಕೆ ತಕ್ಕ ಸೂಕ್ತ ಚಿತ್ರಗಳಿವೆ. ಆದರೆ ಈ ಪುಸ್ತಕದ ಕೊರತೆಯೆಂದರೆ ಬಾಲಕೃಷ್ಣ ಅವರ ಲೇಖನಗಳು ಒಂದು ನಿರ್ದಿಷ್ಟ ಸ್ಥಳಕ್ಕಷ್ಟೇ ಮೀಸಲಾಗಿರುವುದು. ಅವರ ಬಿಡಿ ಬರಹಗಳು ಸಮಗ್ರ ಬರಹಗಳಾಗಬೇಕು. ಆಗಲೇ ಓದುಗರಿಗೆ ಪೂರ್ಣ ಪ್ರಮಾಣದ ಪರಿಚಯವಾಗುವುದು. ಆದ್ದರಿಂದ ನನ್ನ ಸಲಹೆ ಏನೆಂದರೆ ತಮ್ಮ ಪ್ರವಾಸಾನುಭವವನ್ನು ಇನ್ನಷ್ಟು ವಿಸ್ತೃತವಾಗಿ ಬರೆಯಬೇಕು. ಇದರಿಂದ ಓದುಗರಿಗೆ ಇನ್ನೂ ಹೆಚ್ಚು ಮಾಹಿತಿ ದೊರೆಯುವುದು.

             ಒಟ್ಟಾರೆ ಮೊದಲೇ ಹೇಳಿದಂತೆ ಪ್ರತಿ ಲೇಖನ ಒಂದು ವಿಶಿಷ್ಟ ಅನುಭವ. ಪುಸ್ತಕವನ್ನು ಓದಿದಾಗ ಮಾತ್ರ ನಮಗೆ ಓದಿನ ಸುಖ ದೊರೆಯುತ್ತದೆ. ಇಂತಹ ಒಂದು ಹೊಚ್ಚ ಹೊಸ ಓದಿನ ಖುಷಿಯನ್ನು  ಸಮರ್ಥವಾಗಿ ನೀಡಿರುವ ಬಾಲಕೃಷ್ಣ ಅವರಿಗೆ ಅಭಿನಂದನೆಗಳು. ಅವರು ಇನ್ನೂ ಹೆಚ್ಚು ಹೆಚ್ಚು ಬರೆಯಲಿ (ಸೇವೆಯಿಂದ ನಿವೃತ್ತರಾಗಿರುವ ಅವರಿಗೀಗ ಸಮಯದ ಕೊರತೆ ಇಲ್ಲದಿರಬಹುದು). ಓದುಗರಿಗೆ ಹೆಚ್ಚು ಹೊಸ ಹೊಸ ಮಾಹಿತಿಗಳನ್ನು ನೀಡಲಿ. ಹಾಗೆ ನೀಡುವಲ್ಲಿ ಅವರು ಸಮರ್ಥರೂ ಹೌದೂ.

 

ಎನ್ ಅರ್‌ ಬಾಲಸುಬ್ರಮಣ್ಯಂ

ಮುಖ್ಯ ವ್ಯವಸ್ಥಾಪಕರು

ಇಂಡಿಯನ್ ಬ್ಯಾಂಕ್

ಕಾರೈಕುಡಿ. ಶಿವಗಂಗಾ ಜಿಲ್ಲೆ

 

 

 

 

 

 

1 ಕಾಮೆಂಟ್‌:

Srinivas ಹೇಳಿದರು...

ಚೆನ್ನಾಗಿ ಬರೆದಿದ್ದೀಯಾ Balu

ಚೆನ್ನಾಗಿ ಯಾಕೆ ಅಂದ್ರೆ ಸುಲಭವಾಗಿ ಸುಲಲಿತವಾಗಿ ಅರ್ಥ ಮಾಡಿಕೊಂಡು, ಪುಸ್ತಕ ಓದಲು ಆಸಕ್ತಿ ಹುಟ್ಟುವಂತೆ ಮಾಡಿದ್ದೀಯ👍