ಗುರುವಾರ, ಏಪ್ರಿಲ್ 04, 2024

ನನ್ನ ಹೊಸ ಪುಸ್ತಕ : ಅನುವಾದ "ಚಿಗುರಿನ ಚೇತನ ರಾವ್ ಬಹದ್ದೂರ್ ಎಚ್.ಸಿ.ಜವರಾಯ"

 



ನನ್ನ ಹೊಸ ಪುಸ್ತಕ : ಅನುವಾದ "ಚಿಗುರಿನ ಚೇತನ ರಾವ್ ಬಹದ್ದೂರ್ ಎಚ್.ಸಿ.ಜವರಾಯ"  ಈಗಷ್ಟೇ ಪ್ರಕಟವಾಗಿದೆ. ಪ್ರಕಾಶಕರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಕಸನ ಸಂಸ್ಥೆ.

ಅನುವಾದಕರ ಮಾತಿನಿಂದ..........

ಪ್ರಕೃತಿಯ ಮಡಿಲಲ್ಲಿ ವಿಕಾಸ ಹೊಂದಿದ ಹಾಗೂ ಪ್ರಕೃತಿಯ ಭಾಗವೇ ಆಗಿರುವ ಮಾನವ ಆಧುನಿಕ ಮಾನವನಾಗಿ ತನ್ನ ಸುತ್ತಮುತ್ತಲೂ ಕಾಂಕ್ರೀಟ್ ಜಗತ್ತನ್ನು ನಿರ್ಮಿಸಿಕೊಂಡು ಅದರ ನಡುವೆ ಹಸಿರನ್ನು ಅರಸುವ, ಅದನ್ನು `ಸೃಷ್ಟಿ'ಸುವ ಅವನ ಪ್ರಯತ್ನ ಪ್ರಕೃತಿಯ ಅಣಕವೂ ಹೌದು. ಉದ್ಯಾನವನಗಳ, ಹಸಿರು ಗಿಡಮರಗಳ ಆಹ್ಲಾದ ನೀಡುವ ಅನುಭವಗಳ ಉಲ್ಲೇಖ ಮಾನವನ ಮೌಖಿಕ ಪುರಾಣಗಳ ಕಾಲದಿಂದ ಹಿಡಿದು ಪ್ರಾಚೀನ ಚರಿತ್ರೆ ಹಾಗೂ ವರ್ತಮಾನಗಳ ಸಮಯದಲ್ಲೂ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಗರ ವಿನ್ಯಾಸಗಳ ಬಹುಮುಖ್ಯ ಅಂಶ ಉದ್ಯಾನವನಗಳಿಗೆ ಮೀಸಲಿರಿಸುವುದಾಗಿದೆ (ಹಣದ ಆಸೆಗಾಗಿ ಅವುಗಳನ್ನು ಒತ್ತುವರಿ ಮಾಡುವುದು, ಗೋಪ್ಯವಾಗಿ ಮರಗಳನ್ನು ಕಡಿಯುವುದು ಸಹ ನಾಗರಿಕತೆಯ ಭಾಗವೇ ಆಗಿದೆ!).

ಕೃಷಿ ವಿಶ್ವವಿದ್ಯಾಲಯದಲ್ಲಿ ನನ್ನ ಕೃಷಿ ವಿಜ್ಞಾನದ ವ್ಯಾಸಂಗದ ಭಾಗವಾಗಿ ತೋಟಗಾರಿಕೆಯನ್ನೂ ಸಹ ನಾನು ವ್ಯಾಸಂಗ ಮಾಡಿದೆ. ನಮ್ಮ ವ್ಯಾಸಂಗದ ಭಾಗವಾಗಿ ಲಾಲ್ಬಾಗ್, ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಸ್ಥೆಗಳಿಗೂ ಸಹ ನಮ್ಮನ್ನು ಕರೆದೊಯ್ಯಲಾಗಿತ್ತು. ಆದರೆ ವಿಪರ್ಯಾಸವೆಂದರೆ ನಮಗೆ ಪಾಠ ಮಾಡಿದ ಅಧ್ಯಾಪಕರು ಯಾರೂ  ತಮ್ಮ ಬೋಧನೆಯಲ್ಲಿ ಉದ್ಯಾನವನದಲ್ಲಿ ನೆಲೆಸಿ ಸೇವೆ ಸಲ್ಲಿಸಿದ ಹಾಗೂ ಮತ್ತು ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಜವರಾಯನವರ ಹೆಸರನ್ನು ಒಮ್ಮೆಯಾದರೂ ಉಲ್ಲೇಖಿಸಿರಲಿಲ್ಲ. ಅಷ್ಟಲ್ಲದೆ ಜವರಾಯನವರ ತಮ್ಮನಾದ ಎಚ್.ಸಿ.ಗೋವಿಂದುರವರು ನನ್ನ ವ್ಯಾಸಂಗದ ಸಮಯದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಹಾಗೂ ಶಿಕ್ಷಣ ನಿರ್ದೇಶಕರೂ ಸಹ ಆಗಿದ್ದರು.

ಜವರಾಯನವರನ್ನು ನನಗೆ ಮೊದಲು ಪರಿಚಯಿಸಿದವರು ಹಿರಿಯ ತೋಟಗಾರಿಕೆ ತಜ್ಞರಾದ ಎಸ್.ನಾರಾಯಣಸ್ವಾಮಿಯವರು. ಅವರು ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಡಾ.ಎಸ್.ವಿ.ಹಿತ್ತಲಮನಿಯವರು ಜವರಾಯನವರ ಬದುಕು ಹಾಗೂ ಕೊಡುಗೆಯ ಬಗೆಗೆ ಮಾಹಿತಿ ಸಂಗ್ರಹಿಸಿ ಲಾಲ್ಬಾಗ್ ಮೈಸೂರು ತೋಟಗಾರಿಕೆ ಸಂಘದಿಂದ ಕಿರುಹೊತ್ತಿಗೆಯೊಂದನ್ನು 1996ರಲ್ಲೇ ಪ್ರಕಟಿಸಿದ್ದರು. ಅದರ ಪ್ರತಿಯೊಂದನ್ನು ಎಸ್.ನಾರಾಯಣಸ್ವಾಮಿಯವರು ನನಗೆ ನೀಡಿ ಅವರನ್ನು ನನಗೆ ಪರಿಚಯಿಸಿದರು.

ನನ್ನ ಪತ್ನಿ ರೇಣುಕಾ ಭಾರತದ ರಾಷ್ಟ್ರೀಯ ಮಹಿಳಾ ಮಂಡಳಿಯ (ನ್ಯಾಶನಲ್ ಕೌನ್ಸಿಲ್ ಫಾರ್ ವಿಮೆನ್ ಇನ್ ಇಂಡಿಯಾ) ಕರ್ನಾಟಕ ಶಾಖೆಯ ಜಂಟಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಂಡಳಿಯ ಸದಸ್ಯಳಾಗಿದ್ದು ಅದರ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಜಯಾ ಪದ್ಮನಾಭ್ರವರ ಮೂಲಕ ಅವರ ಪತಿ ಶ್ರೀ ಹರೀಶ್ ಪದ್ಮನಾಭರವರ ಪರಿಚಯವಾಯಿತು. ಒಂದು ದಿನ ಅವರು ಅವರು ತೋಟಗಾರಿಕೆ ತಜ್ಞ ಜವರಾಯನವರ ಕುರಿತ ಪುಸ್ತಕವೊಂದು ಡಾ. ಮೀರಾ ಅಯ್ಯರ್ರವರು ಬರೆದಿದ್ದು ಅದರ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಆಗ ನನಗೆ ತಿಳಿದದ್ದು ಶ್ರೀ ಹರೀಶ್ ಪದ್ಮನಾಭರವರು ಜವರಾಯನವರ ಮೊಮ್ಮಗನೆಂದು. ಅತ್ಯಂತ ಸಂತೋಷದಿಂದ ನಾನು ಕೃತಿಯ ಬಿಡುಗಡೆ ಮತ್ತು ಚರ್ಚೆಯ ಕಾರ್ಯಕ್ರಮಕ್ಕೆ ಹಾಜರಿದ್ದು ಒಂದು ಪ್ರತಿಯನ್ನು ತಂದು ಆಸಕ್ತಿಯಿಂದ ಓದಿದೆ. ಇದುವರೆಗೆ ಜವರಾಯನವರ ಬಗ್ಗೆ ಅಷ್ಟು ಸುದೀರ್ಘ ಸಂಶೋಧನೆ, ಅಧ್ಯಯನದ ಕೃತಿ ಯಾವುದೂ ಬಂದಿಲ್ಲ. ಡಾ.ಮೀರಾ ಅಯ್ಯರ್ರವರು ಜವರಾಯನವರ ಬದುಕು ಹಾಗೂ ಅವರ ತೋಟಗಾರಿಕೆ ಹಾಗೂ ಉದ್ಯಾನವನ ಕ್ಷೇತ್ರಕ್ಕೆ, ಬೆಂಗಳೂರು, ಮೈಸೂರುಗಳ ಉದ್ಯಾನವನಗಳ ಸ್ಥಾಪನೆ, ಅಭಿವೃದ್ಧಿಯ ಬಗೆಗಿನ ಅವರ ಕೊಡುಗೆಯ ಕುರಿತು ಆಳವಾದ ಅಧ್ಯಯನ ನಡೆಸಿ, ದೇಶ ವಿದೇಶಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕೃತಿ ರಚಿಸಿದ್ದಾರೆ.

ಶ್ರೀ ಹರೀಶ್ ಪದ್ಮನಾಭರವರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಕಸನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಂ.ಜಿ.ಚಂದ್ರಶೇಖರಯ್ಯನವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿಕೊಡಲು ಹೇಳಿದಾಗ ಸಂತೋಷದಿಂದ ಅನುವಾದಿಸಿದ್ದೇನೆ. ಶ್ರೀ ಜವರಾಯನವರ ಬದುಕು ಮತ್ತು ಕೊಡುಗೆಯನ್ನು ಕನ್ನಡಿಗರಿಗೆ ಪರಿಚಯಿಸುವುದು ಅಷ್ಟೇ ಹರ್ಷದಾಯಕ ಕೆಲಸವೂ ಹೌದು. ಕೃತಿ ನಿಟ್ಟಿನಲ್ಲಿ ಯಶಸ್ವಿಯಾಗುವುದೆಂಬ ಭರವಸೆ ನನಗಿದೆ.

ಡಾ. ಜೆ.ಬಾಲಕೃಷ್ಣ


 

ಕಾಮೆಂಟ್‌ಗಳಿಲ್ಲ: